ಜಾತಿಯ ಮಾತು : “ದಲಿತ” ಎನ್ನದೇ ಇರುವುದು ಹೇಗೆ?

ಪದಬಳಕೆಯ ರಾಜಕಾರಣ ಹೊಸತಲ್ಲ. ಕೋವಿಡ್-೧೯ ವೈರಸ್ ಫ್ರೆಂಚಿನಲ್ಲಿ ಪುಲ್ಲಿಂಗವೋ ಸ್ತ್ರೀಲಿಂಗವೋ ಎನ್ನುವುದರಿಂದ ಹಿಡಿದು, ಇತ್ತೀಚೆಗೆ ತೀರಿಹೋದ ಸರೆ ಭಾಷೆಯನ್ನಾಡುತ್ತಿದ್ದ ಕೊನೆಯ ವ್ಯಕ್ತಿ ಶ್ರೀಮತಿ ಲಿಚೋ ಪೋರ್ಟ್-ಬ್ಲೇರ್ ನಲ್ಲಿ ತೀರಿಕೊಂಡವರೆಗೂ ಭಾಷೆಯ ಪರಿಣಾಮ, ಸಾಧ್ಯತೆ, ಉಪಯೋಗಗಳು ಅನೇಕ. ಈಗ “ದಲಿತ” ಎನ್ನುವ ಪದಬಳಕೆಯನ್ನೇ ಪರೋಕ್ಷವಾಗಿ ಇಲ್ಲವಾಗಿಸುವ ಹೊಸ ಪ್ರಯತ್ನ ಶುರುವಾಗಿದೆ. ಒಕ್ಕೂಟ ಸರ್ಕಾರದ ಸುತ್ತೋಲೆಯಂತೆ ಈಗ ನಮ್ಮ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ‘ದಲಿತ’ ಪದ ಬಳಸುವಂತಿಲ್ಲ ಬದಲಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದೇ ನಮೂದಿಸಬೇಕು ಎಂದು ಆಜ್ಞೆ ಹೊರಡಿಸಿದೆ. ವ್ಯಕ್ತಿಗಳ ಅಸಂಖ್ಯ ಅಸ್ಮಿತೆಗಳು ಅಂತಿಮವಾಗಿ ನಿರೂಪಿತವಾಗುವುದೇ ಭಾಷೆಯಲ್ಲಿ. ಅಮೇರಿಕಾದ ಜಾರ್ಜ್ ಫ್ಲಾಯ್ಡ್ ನ ಕೊನೇಯ ಸಂಕಟವೂ “I can’t breathe” ಎನ್ನುವುದರ ಮೂಲಕ ಮಾತಿನಲ್ಲಿಯೇ ವ್ಯಕ್ತವಾಗಿತ್ತು. ದಲಿತ ಪದಬಳಕೆಯ ನಿಯಂತ್ರಣದ ಕಾರ್ಯೋದ್ದೇಶ ಮತ್ತು ರಾಜಕಾರಣಗಳು ಯಾವ್ಯಾವ ರೂಪದಲ್ಲಿ ಅವತರಿಸಲಿವೆ ಎಂಬ ಚರ್ಚೆಗಳ ಭಾಗವಾದ ಒಂದು ಬರಹ ಇಲ್ಲಿದೆ.

ಈಗ ಒಂದಿಷ್ಟು ಸಮಯದಿಂದ ನನ್ನನ್ನು ಅನೇಕ ಪ್ರಶ್ನೆಗಳು ಕಾಡುತ್ತಿವೆ. ಒಬ್ಬ ವ್ಯಕ್ತಿಯ ಪ್ರಾದೇಶಿಕತೆ, ಅಸ್ತಿತ್ವ ಮತ್ತು ರಾಜಕೀಯ ನಿಲುವುಗಳನ್ನು ನಿರ್ವಚಿಸಿ ವ್ಯಾಖ್ಯಾನಿಸುವ ಒಂದು ಪದವನ್ನು ಬಳಸದೇ ಇರಲು ಹೇಗೆ ಸಾಧ್ಯ ? ಸೆಪ್ಟೆಂಬರ್ ೩ ರಂದು NDTV ತನ್ನ ಪ್ರೈಮ್ ಟೈಮ್ ಶೋ “ಲೆಫ್ಟ್ ರೈಟ್ ಸೆಂಟರ್‌ನಲ್ಲಿ” ಒಂದು ಚರ್ಚಾ ಕಾರ್ಯಕ್ರಮ ಪ್ರಸಾರವಾಯಿತು. ಅದರ ಹೆಸರು ‘ಸರಕಾರದಿಂದ ಹಿಡಿದು ಮಾಧ್ಯಮಗಳಲ್ಲಿ ಕೂಡಾ – ದಲಿತ ಎಂಬ ಪದವನ್ನು ಬಳಸಬಾರದು” ಸೂಚನೆ/ಸುತ್ತೋಲೆಯ ಕುರಿತಾದ ಚರ್ಚೆ ಅದು. ಆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿ ನನ್ನ ನಿಲುವುಗಳನ್ನು ಹಂಚಿಕೊಂಡೆ. ಆ ನನ್ನ ಮಾತುಗಳಲ್ಲಿ  ನಾನು ‘ದಲಿತ’, ‘ಕರಿಯ’ ಅಥವಾ ‘ಶೂದ್ರ’ ಎಂಬಂತಹ ಪದಗಳು ಹೊಂದಿರುವ ಶಬ್ದಾರ್ಥಗಳಿಗೂ ಮೀರಿದ ಸೂಚ್ಯಾರ್ಥವನ್ನು ವಿವರಿಸಲು ಪ್ರಯತ್ನಿಸಿದೆ.‌ ಈ ಪದಗಳು ಕೇವಲ ಒಂದು ಗುರುತನ್ನು ಮಾತ್ರವೇ ಸೂಚಿಸುವುದಿಲ್ಲ ಎಂದೂ, ಆ ಪದಗಳು ಶತಮಾನಗಳ ಹೋರಾಟದ ಫಲವನ್ನೂ, ಇತಿಹಾಸವನ್ನೂ ತಮ್ಮ ಅರ್ಥಮಾತೃಕೆಯಲ್ಲಿ ಒಳಗೊಂಡಿರುತ್ತವೆ ಎಂದು ಪ್ರತಿಪಾದಿಸಿದೆ.

ಆ ಕಾರ್ಯಕ್ರಮವನ್ನು ನಿರೂಪಿಸುತ್ತುದ್ದ ಪತ್ರಕರ್ತೆ ‘ ಮಾಧ್ಯಮಗಳು ಇನ್ನು ಮುಂದೆ ಆ ಪದವನ್ನು ಬಳಸಲು ಹೇಗೆ ಸೂಕ್ಷವಾದ, ಜಾಣ್ಮೆಯ ಕ್ರಮಗಳನ್ನು ಕಂಡುಕೊಳ್ಳಬೇಕಾಗಬಹುದು ‘ ಎಂದು ಸಂಕ್ಷಿಪ್ತವಾಗಿ ತಿಳಿಸಿದಳು. ಬಹುಶಃ, ಯಾವುದೇ ವಿವಾದಗಳಿಂದ ದೂರವಿರುವ ಉದ್ದೇಶದಿಂದಲೇ ಇರಬೇಕು ನನ್ನನ್ನು “ಸಹಾಯಕ ಪ್ರಾಧ್ಯಾಪಕರು, ದಲಿತ ಮತ್ತು ಅಲ್ಪಸಂಖ್ಯಾತರ ಅಧ್ಯಯನ ಕೇಂದ್ರ” ಎಂದು ಪರಿಚಯಿಸದೇ ಕೇವಲ “ಸಹಾಯಕ ಪ್ರಾಧ್ಯಾಪಕರು, ಅಲ್ಪಸಂಖ್ಯಾತರ ಅಧ್ಯಯನ ಕೇಂದ್ರ” ಎಂದು ಪರಿಚಯಿಸಲಾಯಿತು ಅನ್ನಿಸುತ್ತದೆ‌. ಆ ಪದ ಕಾಣೆಯಾಗಿದ್ದು ನನ್ನ ಗಮನಕ್ಕೆ ಬಂದಿದ್ದು ತದನಂತರ ಆ ವಿಡಿಯೋ ನೋಡಿದಾಗಲೇ. ಹೀಗಾದಾಗ ಸಹಜವಾಗಿ ಎರಡು ಪ್ರಶ್ನೆಹ್ಗಳು ಮನಸ್ಸಿನಲ್ಲಿ ಮೂಡುತ್ತವೆ. ಒಂದೋ ಅದು ಉದ್ದೇಶಪೂರ್ವವಾಗಿರಲಿಕ್ಕಿಲ್ಲ, ಕಣ್ತಪ್ಪಿರಬಹುದೇನೋ ಎಂದು. ಆದರೆ ಆ ಚಾನೆಲ್ಲಿನ ಇತರ ಕಾರ್ಯಕ್ರಮಗಳಲ್ಲಿ ಮೊದಲು ಆರಾಮಾಗಿಯೇ ಬಳಕೆಯಾಗುತ್ತಿದ್ದ ಪದ, ಈ ಬಾರಿ ನಾಪತ್ತೆಯಾಗಿದೆ ಎಂಬ ಸರಳ ಸತ್ಯದಿಂದಲೇ ನನ್ನ ಅನುಮಾನ ಶುರುವಾಯಿತು.

ಆದರೆ ಸ್ವಲ್ಪ ಸಮಯದ ಬಳಿಕ, ನನ್ನೊಳಗೆ ಒಂದು ವಿಚಿತ್ರವಾದ ಭಾವನೆ ಉಂಟಾಯಿತು. ನಾನು ಕೆಲಸ ಮಾಡುತ್ತಿರುವ ಸಂಸ್ಥೆಯಿಂದಲೇ ನಾನು ಒಂದು ರೀತಿಯಲ್ಲಿ ದೂರವಾದ ರೀತಿಯ ಭಾವನೆ ಅದು. ನಾನು ಶ್ರಮವಹಿಸಿ ಗಳಿಸಿದ ಶಿಕ್ಷಣ, ಡಿಗ್ರಿಗಳನ್ನೆಲ್ಲ ನನ್ನಿಂದ ಕಸಿದುಕೊಂಡುಬಿಟ್ಟಂತೆ ಅನ್ನಿಸಿಬಿಟ್ಟಿತು ನನಗೆ. ಆ ಎಲ್ಲ ಪದವಿಪತ್ರಗಳ ಮೇಲೂ ಈ ಪದವನ್ನು ಅತ್ಯಂತ ಸುಂದರವಾಗಿ ಕೆತ್ತಲಾಗಿತ್ತು. ನಾನು ಬಹಳ ಇಷ್ಟಪಟ್ಟು ಆಯ್ಕೆಮಾಡಿಕೊಂಡಿದ್ದ ನನ್ನ ಅಧ್ಯಯನ ಶಿಸ್ತನ್ನೇ ಅಣಕಿಸಿ ನನ್ನಿಂದ ಕತ್ತರಿಸಿದ ಹಾಗೆ ಅನ್ನಿಸಿತು.

ನನಗೆ ಆ ಚಾನಲ್ಲಿನ ಬಗ್ಗೆ ಯಾವುದೇ ವ್ಯಯಕ್ತಿಕ ದ್ವೇಷವಿಲ್ಲ. ಬಹುಶಃ ಅವರು ಸರಕಾರದ ಆದೇಶವನ್ನು ಪ್ರಾಮಾಣಿಕವಾಗಿ  ಪಾಲಿಸುತ್ತಿರಬಹುದು ಆದರೆ ನಾನು ಆ ವಿಷಯದಲ್ಲಿ ಪರಿಣಿತಿ ಹೊಂದಿದ ಮತ್ತು ಅದೇ ವಿಷಯವನ್ನು ಕಲಿಸುವ ಮಾಸ್ತರನಾಗಿದ್ದರಿಂದ ಅದು ನನ್ನ ತಕ್ಷಣದ ಬೌದ್ಧಿಕ ಪ್ರತಿಕ್ರಿಯೆಯಾಗಿರಬಹುದು.

ಅದೇ ಕಾರ್ಯಕ್ರಮದಲ್ಲಿ ಪ್ಯಾನಲಿಸ್ಟ್ ಆಗಿದ್ದ ಕಾಂಚ ಈಳಯ್ಯ ಅವರು ‘ದಲಿತ’ ಎಂಬ ಪದದ ಪಾಲಿ ಮೂಲದ ಬಗ್ಗೆ ಹಾಗೂ ಬೌದ್ಧ ಸಾಹಿತ್ಯದಲ್ಲಿನ ಆ ಪದದ ಬಳಕೆಯ ಬಗ್ಗೆ ವಿವರಿಸಿದಾಗಲೇ ನನಗೆ ಆ ಪದದ ಮೂಲದ ಬಗ್ಗೆ ಅರಿವು ತಿಳುವಳಿಕೆಗಳು ಇನ್ನೂ ಹೆಚ್ಚಾದದ್ದು. ಆಧುನಿಕ ಕಾಲದಲ್ಲಿ ಜ್ಯೋತಿಬಾ ಫುಲೆ ಹಾಗೂ ತಮ್ಮ ಮರಾಠಿ ಭಾಷಣಗಳಲ್ಲಿ ಡಾ.‌ಅಂಬೇಡ್ಕರ್ ಆ ಪದವನ್ನು ಬಳಸಿದ್ದಾರಾದರೂ ಈ ಪದ ಚಿರಪರಿಚಿತವಾಗಿದ್ದು,  ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಎಂಬ ರಾಜಕೀಯ ಸಂಘಟನೆಯ‌ ಮೂಲಕವೇ. ಮಹಾರಾಷ್ಟ್ರದ ರಾಜಕೀಯ ಸಂಘಟನೆಯಾದ ಇದು ಬೌದ್ಧ ತಾತ್ವಿಕತೆ ವಿಚಾರಗಳನ್ನು ಮುಂದುವರೆಸಿಕೊಂಡು ಬಂದ ಸಂಘಟನೆ. ಇದಕ್ಕಿಂತ ಹಿಂದೆ ಇವರು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಹಲವಾರು ಬಣಗಳಿಂದ ಭ್ರಮನಿರಸನಗೊಂಡು ಹೊರಗೆ ಬಂದು ತಮ್ಮ ಕಾರ್ಯಕ್ಷೇತ್ರವನ್ನು ಕಟ್ಟಿದರು. ಅಮೇರಿಕಾದ ಬ್ಲ್ಯಾಕ್ ಪ್ಯಾಂಥರ್ಸ್ ನಿಂದ ಹಾಗೂ ವಿಚಾರಗಳಲ್ಲಿ ಅಂಬೇಡ್ಕರ್ ಅವರ ಮೇರು ವ್ಯಕ್ತಿತ್ವದಿಂದ ಪ್ರಭಾವಿತಗೊಂಡವರು ಇವರು. ಅಂಬೇಡ್ಕರೋತ್ತರ ಕಾಲದ ಚಿಂತನೆಯನ್ನು ಕಟ್ಟುವಲ್ಲಿ ಇವರ ಶ್ರಮ ಅಗಾಧವಾಗಿದೆ. ಮಾವೋವಾದವನ್ನು ಅಂಬೇಡ್ಕರ್ ವಾದದೊಂದಿಗೆ ಸಂಶ್ಲೇಷಿಸುವ ಪ್ರಯತ್ನವನ್ನೂ ಮಾಡಿದ್ದಾರೆ. “ದಲಿತ ಪ್ಯಾಂಥರ್ಸ್” ಅಂಬೇಡ್ಕರ್ ನಂತರದ ಕಾಲಮಾನದಲ್ಲಿನ ಪ್ರಖರ ಅಂಬೇಡ್ಕರ್ ವಾದಿಗಳಾದ್ದು,  ‘ದಲಿತ’ ಎಂಬ ಪದದ ಕುರಿತಾದ ಪ್ಯಾಂಥರ್ಸ್‌ಗಳ ವ್ಯಾಖ್ಯಾನ ಅದನ್ನು ಪುಷ್ಟೀಕರಿಸುತ್ತದೆ.

೧೯೭೨ರ ದಲಿತ್ ಪ್ಯಾಂಥರ್ಸ್ ಪ್ರಣಾಳಿಕೆ “ದಲಿತ” ಎಂಬ ಪದವನ್ನು ಈ ಮುಂದಿನಂತೆ ವಿವರಿಸುತ್ತದೆ. “ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರು, ನವ-ಬುದ್ಧಾನುಯಾಯಿಗಳು, ದುಡಿಯುವ ವರ್ಗದವರು, ಭೂರಹಿತ ಹಾಗೂ ಬಡ ರೈತರು, ಮಹಿಳೆಯರು ಮತ್ತು ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಧರ್ಮದ ಹೆಸರಿನಲ್ಲಿ ದೌರ್ಜನ್ಯಕ್ಕೊಳಗಾದ ಎಲ್ಲರೂ”’ ಎಂದು ವ್ಯಾಖ್ಯಾನಿಸುತ್ತದೆ. ಹೀಗಾಗಿ ಈ ಪದ ತುಳಿತಕ್ಕೊತಗಾದ ಜನಸಾಮಾನ್ಯರ ಬಲಿಷ್ಠ ಒಕ್ಕೂಟವೆಂದು ಕರೆಯಬಹುದು.

ವಿಪರ್ಯಾಸವೆಂದರೆ, ನಂತರದ ದಿನಗಳಲ್ಲಿ ಈ ಪದ ಕೇವಲ ಪರಿಶಿಷ್ಟ ವರ್ಗದ ಸದಸ್ಯರನ್ನು ಗುರುತಿಸಲು ಮಾತ್ರ ಬಳಕೆಯಾಗಲು ಸೀಮಿತವಾಯಿತು‌. ರೋಹಿತ್ ವೇಮುಲರ ಪ್ರಕರಣವನ್ನು ಗಮನಿಸಿದರೆ ಈ ಸಂಗತಿ ನಮಗೆ ಸ್ಪಷ್ಟವಾಗಿ ಅರಿವಾಗುತ್ತದೆ‌. ಎಷ್ಟೇ ಎಂದರೂ ನಮ್ಮ ಸಮಾಜ ಪುರುಷ ಪ್ರಧಾನ ವ್ಯವಸ್ಥೆ ನೋಡಿ, ಅದಕ್ಕೆ ಭಾರತದಲ್ಲಿ ಒಬ್ಬ ವ್ಯಕ್ತಿಯ ಜಾತಿಯನ್ನು ಆತನ ತಾಯಿಯ ಜಾತಿಯನ್ನು ಪರಿಗಣಿಸದೇ ಕೇವಲ ತಂದೆಯ ಜಾತಿಯಿಂದ ಗುರುತಿಸುವುದು. ವೆಮುಲ ಹಿಂದುಳಿದ ಜನಾಂಗದವನಾಗಿದ್ದರೂ ಪರಿಶಿಷ್ಟ ಜಾತಿಯವನಾಗಿರಲಿಲ್ಲ ಎಂದು ಆತನ ಸಾವಿನ ಬಳಿಕ ಸರಕಾರ ರಚಿಸಿದ್ದ ಸಮಿತಿ ಘೋಷಿಸಿತು. ಆದರೆ ವೇಮುಲ ಅಪ್ಪಟ ಅಂಬೇಡ್ಕರ್‌ವಾದಿಯಾಗಿದ್ದ, ಸ್ವಘೋಷಿತ ದಲಿತನಾಗಿದ್ದ.

ಪ್ರೊಫೆಸರ್. ಕಾಂಚ ಈಳಯ್ಯ

ಪ್ರೊಫೆಸರ್. ಕಾಂಚ ಈಳಯ್ಯ

ವಿಶ್ವವಿದ್ಯಾಲಯದಲ್ಲಿ ‘ದಲಿತ’ ನೆಂದರೆ:

 ಆದರೆ ನನ್ನ ಸಮಸ್ಯೆಯೇ ಬೇರೆ ಸ್ಥರದಲ್ಲಿದೆ. ದಲಿತ ಎಂಬ ಪದದ ಬಳಕೆಯ ಕುರಿತಂತೆ ಸರಕಾರ ಕೇವಲ ಮಾಧ್ಯಮಗಳಿಗೆ ಸುತ್ತೋಲೆ ಹೊರಡಿಸಿದೆ. ಆದರೆ ಇತ್ತೀಚಿಗೆ ದಿಲ್ಲಿ ಯುನಿವರ್ಸಿಟಿಯ ಶೈಕ್ಷಣಿಕ ವ್ಯವಹಾರಗಳ ಸ್ಥಾಯಿ ಸಮಿತಿ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿದ್ಯಾರ್ಥಿಗಳು ಬಳಸುತ್ತಿದ್ದ ಕಾಂಚ ಇಳಯ್ಯ ಅವರ ಮೂರು ಪುಸ್ತಕಗಳನ್ನು ಕೈಬಿಡುವಂತೆ ಸೂಚಿಸಿದೆ. ಅಷ್ಟೇ ಅಲ್ಲದೇ ಪಠ್ಯಕ್ರಮದಲ್ಲಿರುವ ದಲಿತ ಎಂಬ ಪದವನ್ನು ಪರಿಶಿಷ್ಟ ಜಾತಿ ಅಥವಾ ಅಂಬೇಡ್ಕರ್‌ವಾದಿಗಳು ಎಂದು ಬದಲಾಯಿಸುವಂತೆ ತಿಳಿಸಿದೆ. ಈ ಸುದ್ದಿ ಕೇಳಿ ನನಗೆ ಬಹಳ ಆಶ್ಚರ್ಯವಾಯಿತು. ಸಮಿತಿಯ ಸದಸ್ಯರೊಬ್ಬರು ತಾವು ಕೈಬಿಡುವಂತೆ ಸೂಚಿಸಿದ ಯಾವ ಪುಸ್ತಕವನ್ನೂ ಓದಿಲ್ಲ ಎಂದು ಮುಕ್ತವಾಗಿ ಹೇಳಿದ್ದು ನನಗೆ ಇನ್ನೂ ಕಕ್ಕಾಬಿಕ್ಕಿ ಮಾಡಿತು. ಹಾಗಿದ್ದರೆ ಇನ್ನೂ “ದಲಿತ್ ಪ್ಯಾಂಥರ್ಸ್” ‌ಗಳಂತಹ ಚಳುವಳಿಗಳ ಹೆಸರುಗಳನ್ನು ಬದಲಾಯಿಸುವುದು ಹೇಗೆ ಎಂದು ನಾನು ತಲೆಕೆಡಿಸಿಕೊಂಡಿದ್ದೇನೆ‌. ಅದು ಬಿಡಿ ಸ್ನಾತಕೋತ್ತರ ಮಟ್ಟದ ಪಠ್ಯಕ್ರಮದಲ್ಲಿ ಓದಬೇಕಾದ ಪುಸ್ತಕಗಳ ಕುರಿತಂತೆ ಹೀಗೆ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲು ಸಾಧ್ಯವೇ?

ಉದಾಹರಣೆಗೆ, ನಾನು ತುಳಿತಕ್ಕೊಳಗಾದ ಸಮುದಾಯಗಳ ಸಾಮಾಜಿಕ ಬಹಿಷ್ಕಾರದ ಬಗ್ಗೆ ಪರಿಶೋಧಿಸುವ ಒಂದು ಅಂತರಶಿಕ್ಷಣ ಸಂಶೋಧನೆ ಮತ್ತು ಬೋಧನಾ ಸಂಸ್ಥೆಯಲ್ಲಿ ಪಾಠ ಮಾಡುತ್ತೇನೆ, ನಾವು ಅಲ್ಲಿ ವಿದ್ಯಾರ್ಥಿಗಳಿಗೆ ಅಷ್ಟು ಪರಿಚಿತವಲ್ಲದ ಸಾಂಪ್ರದಾಯಿಕವಾಗಿ ಎಲ್ಲ ಕಡೆ ಕಲಿಸಲಾಗುವ ಪಠ್ಯಗಳಿಗಿಂತ ಭಿನ್ನವಾದ ಪುಸ್ತಕಗಳನ್ನು ಓದಲು ಸೂಚಿಸುತ್ತೇವೆ. ಕರಿಕುಲಂ ರೂಪಿಸುತ್ತೇವೆ. ನಾವು ಓದುವ ಎಷ್ಟೋ ಪುಸ್ತಕಗಳು ದೇಶದ ಯಾವುದೇ ಪ್ರಮುಖ ಯುನಿವರ್ಸಿಟಿಯ ಪಠ್ಯಕ್ರಮದಲ್ಲಿಲ್ಲ. ಫುಲೆಯವರ ‘ಗುಲಾಮಗಿರಿ’, ಅಂಬೇಡ್ಕರ್ ಅವರ  Annihilation of Caste, ಭ್ರಜ್  ರಂಜನ್ ಮಣಿಯವರ Debrahmanising History, G. Aloysius’s Nationalism Without a Nation in India, ನಾಮದೇವ್ ದಸಾಳರ Golpitha, ಅರ್ಜುನ್ ಡಾಂಗಳೆಯವರ Poisoned Bread, ತುಲಸಿಮ್ರನ್ ಅವರ Murdahiya, ಭಾಮಾರ Karukku, ದಯಾ ಪವಾರ್ ಅವರ Balut, ಉಮಾ ಚಕ್ರವರ್ತಿಯವರ Gendering Caste, ಗೋಪಾಲ್ ಗುರು ಅವರ Humiliation ಸೇರಿದಂತೆ ಹಲವು ಪುಸ್ತಕಗಳು ನಮ್ಮ ಪಟ್ಟಿಯಲ್ಲಿವೆ. ದಲಿತ ಪದ ಬಳಸಲೇ ಬಾರದು ಎಂದಮೇಲೆ ಹೆಸರಾಂತ ವಿದ್ವಾಂಸರಾದ ಗೇಲ್ ಓಮ್ವೇಟ್ ಅವರ ಪುಸ್ತಕಗಳ ಕತೆಯೇನು ? ಅವರ Dalits and Democratic Revolution in India ಅಥವಾ Dalit Visions ಎಂಬ ಪುಸ್ತಕಗಳು ತಮ್ಮ ಶೀರ್ಷಿಕೆಯಲ್ಲಿಯೇ ದಲಿತ ಎಂಬ ಪದವನ್ನು ಹೊಂದಿರುವ ಕಾರಣ ಕೊಟ್ಟು ಅವುಗಳನ್ನು ಸಾರಾಸಗಟಾಗಿ ಪಠ್ಯಕ್ರಮದಿಂದ ತೆಗೆದು ಬಿಡಬೇಕೆ? ಶೈಕ್ಷಣಿಕ ಕ್ಯಾಂಪಸ್ಸುಗಳಲ್ಲಿ ಸರ್ವವ್ಯಾಪ್ತಿಯಾಗಿರುವ ಜಾತಿ ಮತ್ತು ಲಿಂಗ ಆಧಾರಿತ ದೌರ್ಜನ್ಯಗಳು ಶೈಕ್ಷಣಿಕ ಚರ್ಚೆಗಳ ಭಾಗವಾಗಲು ಪ್ರಾರಂಭವಾಗಿದ್ದು, ಅತ್ಯಂತ ಕಹಿ ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆ ದೊರಕಿದ್ದು ತೀರಾ ಇತ್ತೀಚಿಗೆ ಮಾತ್ರ. ಅಷ್ಟಕ್ಕೂ ಐಲಯ್ಯ ಅವರ ಪುಸ್ತಕಗಳನ್ನು ದಿಲ್ಲಿ ಯುನಿವರ್ಸಿಟಿಯ ಪಠ್ಯ ಕ್ರಮಕ್ಕೆ ಪರಿಚಯಿಸಿದ್ದು ಯಾರು ಎಂದು ಹುಡುಕುತ್ತ ಹೊರಟರೆ ಸಿಗುವ ಹೆಸರು ಪ್ರೋ ಎನ್. ಸುಕುಮಾರ್. ದಿಲ್ಲಿ ಯುನಿವರ್ಸಿಟಿಗೆ ಐಲಯ್ಯ ಅವರ ಪುಸ್ತಕಗಳನ್ನು ಪರಿಚಯಿಸಿದ, ಕೋರ್ಸಿಗೆ ಶಿಫಾರಸು ಮಾಡಿದ ಪ್ರೋ ಎನ್. ಸುಕುಮಾರ್, ಈಗಾಗಲೇ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡು ಸುತ್ತೋಲೆಯನ್ನು ಕಳುಹಿಸಿದ್ದಾರೆ ಅಲ್ಲದೇ ಈ ಕುರಿತಂತೆ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಪ್ರೋ ಎನ್ ಸುಕುಮಾರ್ ರಾಜ್ಯ ಶಾಸ್ತ್ರ ವಿಭಾಗಕ್ಕೆ ಪ್ರಾಧ್ಯಾಪಕರಾಗಿ ನೇಮಕಗೊಂಡ ಮೊಟ್ಟ ಮೊದಲ ದಲಿತ, ಕ್ಷಮಿಸಿ ಪರಿಶಿಷ್ಟ ವರ್ಗದ ಸದಸ್ಯರೆಂಬುದು ಎಷ್ಟು ಜನರಿಗೆ ಗೊತ್ತು?‌ ಅದೂ ೨೦೦೧ರಲ್ಲಿ. ಸುಕುಮಾರ್ ತಮ್ಮ ಶಿಕ್ಷಣವನ್ನು ಪೂರೈಸಿದ್ದು ಹೈದರಾಬಾದಿನಲ್ಲಿ ಹಾಗಾದರೆ ಇಲ್ಲಿಯವರೆಗೆ ದಿಲ್ಲಿ ಯುನಿವರ್ಸಿಟಿ ಅಥವಾ ದಿಲ್ಲಿಯಲ್ಲಿರುವ ಯುನಿವರ್ಸಿಟಿಗಳು ವಿಭಾಗದಲ್ಲಿ ಪ್ರಾಧ್ಯಾಪಕನಾಗಬಲ್ಲ ಒಬ್ಬನೇ ಒಬ್ಬ ದಲಿತ ವಿದ್ವಾಂಸನನ್ನು ಯಾಕೆ ಹುಟ್ಟುಹಾಕಲಿಲ್ಲ ಎಂಬ ಪ್ರಶ್ನೆಗೆ ಇತಿಹಾಸವೇ ಉತ್ತರಿಸಬೇಕು.

ಐಲಯ್ಯ ಅವರ ಸಮರ್ಥನೆಗಾಗಿಯಲ್ಲ…

ಕಾಲೇಜು ದಿನಗಳಲ್ಲಿ ನಾವು ನಮ್ಮ‌ ಟಿಪಿಕಲ್ ಜೆಎನ್‌ಯು ಪರಿಭಾಭಾಷೆಯಲ್ಲಿ ಐಲಯ್ಯ ಅವರ ಬರಹಗಳು ಹೇಗೆ ವಿವಾದಾತ್ಮಕವಾದ ಮತ್ತು ಶಬ್ದಾಡಂಬರದಿಂದ ಕೂಡಿದ ವಿಚಾರಗಳಿಂದ ತುಂಬಿಕೊಂಡಿರುತ್ತವೆ ಎಂದು ಚರ್ಚಿಸುತ್ತಿದ್ದೆವು. ನಾನು ಅವರನ್ನು ವ್ಯಯಕ್ತಿಕವಾಗಿ ಭೇಟಿಯಾಗಿದ್ದು ನನ್ನ ಪಿಎಚ್ಡಿ ಮುಗಿಸಿದ ಬಳಿಕವೇ, ಆಗ ನಾನು ಐಲಯ್ಯ ಅವರ Post Hindu India ಪುಸ್ತಕದ ಬಗ್ಗೆ Mainstream weekly ಯಲ್ಲಿ ಕಟು ವಿಮರ್ಶೆಯೊಂದನ್ನು ಬರೆದಿದ್ದೆ. ಆ ವಿಮರ್ಶೆಯಲ್ಲಿ ಉತ್ತರ ಭಾರತದ  ಮೇಲ್ವರ್ಗದ ಶೂದ್ರರು ದನದ ಮಾಂಸ ತಿನ್ನುವದರ ಕುರಿತಾದ ಅವರ ವಿಚಾರಗಳನ್ನು ನಾನು ಒಪ್ಪಿಕೊಂಡಿರಲಿಲ್ಲ.

ಇದಾದ ಮೇಲೆ ನಾವು ಭೇಟಿಯಾದ ದಿನ ಐಲಯ್ಯ ಅವರೇ, ಹೈದರಾಬಾದಿನ ಮೌಲಾನಾ ಆಜಾದ್ ಉರ್ದು ಯುನಿವರ್ಸಿಟಿಯಿಂದ ಇಂಗ್ಲಿಷ್ ಎಂಡ್ ಫಾರೆನ್ ಲ್ಯಾಂಗ್ವೇಜ್ ಯುನಿವರ್ಸಿಟಿಯವರೆಗೆ ನನ್ನನ್ನು ತಮ್ಮ ಕಾರಿನಲ್ಲಿ ಡ್ರಾಪ್ ಮಾಡಿದರು. ಆ ಪ್ರಯಾಣದಲ್ಲಿ ನಾವಿಬ್ಬರು ಪರಸ್ಪರರ ವಿಚಾರಗಳನ್ನು ಒಪ್ಪಿಕೊಳ್ಳದಿದ್ದರೂ ಹೇಗೆ ಗೌರವದಿಂದ ಚರ್ಚಿಸಿದ್ದೇವು ಎಂಬುದನ್ನು ನಾನೀಗಲೂ ಮೆಲಕು ಹಾಕುತ್ತಿರುತ್ತೇನೆ. ನಂತರ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ‘ಮೈ ಬುಕ್ಸ್ ಮೈ ಟ್ರೂತ್ಸ್’ ಎಂಬ ಲೇಖಕನವನ್ನು ಬರೆದಿದ್ದ ಐಲಯ್ಯ ಅವರು ತಮ್ಮ ಸಂಶೋಧನೆಯ ವಿಧಾನವನ್ನು ಸ್ಪಷ್ಟಪಡಿಸಿದ್ದರು. ಅದಲ್ಲದೇ “ಯುನಿವರ್ಸಿಟಿಗಳು ಬದಲಾವಣೆಯ ಕೇಂದ್ರಸ್ಥಾನಗಳಾಗಬೇಕು. ಅಲ್ಲಿಂದ ಬರವಣಿಗೆಯ ಹೊಸ ಹೊಸ ವಿಧಾನಗಳ ಆವಿಷ್ಕಾರ ನಡೆಯಬೇಕು. ಯುನಿವರ್ಸಿಟಿಗಳು ಬದಲಾವಣೆಗೆ ಅಂಜಬಾರದು. ನನ್ನ ಪುಸ್ತಕಗಳನ್ನು ವಿರೋಧಿಸುವವರೆಲ್ಲರೂ ಅವನ್ನು ಓದಲೇಬೇಕು ತಮ್ಮ ಬರಹಗಳಲ್ಲಿ ಕಟುವಾಗಿ ವಿಮರ್ಷಿಸಬೇಕು. ಅದರಿಂದ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ” ಎಂದು ಮುಕ್ತವಾಗಿ ಘೋಷಿಸಿದ್ದರು.

ಈಗ ಇಳಯ್ಯ ಅವರ ಪುಸ್ತಕಗಳನ್ನು ಶೈಕ್ಷಣಿಕ ಪಠ್ಯದಿಂದ ಕೈಬಿಟ್ಟಿರುವಂತಹ ಸಂದರ್ಭದಲ್ಲಿ, ನಾನು ಜುಲೈ  27,1996ರ ‘Economic and political weekly” ಯಲ್ಲಿ ಪ್ರಕಟವಾದ ಇಳಯ್ಯ ಅವರ ‘Why I am not a Hindu’ ಪುಸ್ತಕದ ಕುರಿತು ಖ್ಯಾತ ಸ್ತ್ರೀವಾದಿ ಸೂಸಿ ಥಾರೂ ಬರೆದ ವಿಮರ್ಶೆಯ ಸಾಲುಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

“… ಇದನ್ನು ಓದಿದ ಬಳಿಕ ನನ್ನ ಮನಸ್ಸಿಗೆ ತತ್-ಕ್ಷಣಕ್ಕೆ ಹೊಳೆದ ಸಮಾನ ವಿಚಾರ ಹೊಂದಿದ ಪುಸ್ತಕವೆಂದರೆ ಫ್ರಾಂಜ್ ಫ್ಯಾನನ್ ನ The Wretched of the Earth. ಸಾರ್ತ್ರ್ ಆ ಪುಸ್ತಕಕ್ಕೆ ಬರೆದ ಪ್ರಸಿದ್ಧ ಮುನ್ನುಡಿಯಲ್ಲಿ “ಈ ಪುಸ್ತಕ ಬೆಚ್ಚಿಬೀಳಿಸುವಂತೆ ತೀವ್ರವಾಗಿದೆ” ಎಂದ. ಮುಂದುವರೆದು ಬರೆಯುತ್ತ “ ಇದರ ಧ್ವನಿ ಹೊಚ್ಚಹೊಸತು. ಹೀಗೆ ಮಾತನಾಡುವ ದಿಟ್ಟತೆಯನ್ನು ಯಾರು ತೋರಿಸಬಲ್ಲರು? ನಮ್ಮ ಕಣ್ಣಿನಿಂದ ಸುಲಭವಾಗಿ ತಪ್ಪಿಸಿಕೊಳ್ಳಬಲ್ಲ ದುಷ್ಟತೆಯನ್ನು ಆತ ಇಲ್ಲಿ ಹಿಡಿದಿಟ್ಟಿದ್ದಾನೆ. ಫ್ಯಾನನ್ ನಿಮಗಾಗಿ ಇಲ್ಲಿ ಏನನ್ನೂ ಕೊಡುತ್ತಿಲ್ಲ… ಆತ ಇಲ್ಲಿ ಮಾತನಾಡುತ್ತಿರುವುದು ನಿಮ್ಮ ಕುರಿತೇ ಹೊರತು, ಇನ್ಯಾವುದರ ಬಗ್ಗೆಯೋ ನಿಮ್ಮ “ಬಳಿ” ಮಾತನಾಡುತ್ತಿಲ್ಲ. ಭಾಷೆಯನ್ನು, ತನ್ನ ಹೇಳುವ ಅಗತ್ಯಕ್ಕೆ ತಕ್ಕ ಹಾಗೆ ಬಾಗಿಸಿ ಬಳಸುವ ಶಕ್ತಿಯ ಆತ, ವಸಾಹತೀಕರಣಗೊಂಡ ಜನರ ಹತ್ತಿರ ಮಾತನಾಡುತ್ತಿದ್ದಾನೆ.” ವಸಾಹತು ಮಾಡಿದ ದೊರೆಯನ್ನು ಎದುರಿಸುವುದು ಮಾತ್ರವೇ ಫ್ಯಾನನ್ ನ ದಿಟ್ಟತನವಲ್ಲ. ಅವನ ಪುಸ್ತಕದ ನಿಜವಾದ ಧೈರ್ಯವೆಂದರೆ, ವಸಾಹತಿನ ಮರ್ಯಾದೆ ಕಳೆಯುವ ಮಾತಿನ ತಾಕತ್ತು: ವಸಾಹತಿನ ನಿಯಮಗಳನ್ನು ರೂಪಿಸುವ, ಕಟ್ಟುವ, ನಿರ್ಮಿಸುವ ಎಲ್ಲ ಕ್ರಮಗಳ ವಿಮರ್ಷೆಯ ಧೈರ್ಯ. ಆ ಪುಸ್ತಕದಲ್ಲಿ ಫ್ಯಾನನ್ ಅಧಿಕಾರವನ್ನು ನಡೆಸಲು ಬೇಕಾದ ವ್ಯವಸ್ಥೆ, ಮಾತನ್ನು ವಿನಯದಿಂದಲೇ ಆಡಬೇಕಾದ ಅನಿವಾರ್ಯತೆ, ಉತ್ತರದಾಯಿಯಾಗಿ ಇರಲೇಬೇಕಾದ ಅಗತ್ಯ, ಜ್ಞಾನಶಿಸ್ತನ್ನು ಮತ್ತು ವಿಚಾರಗಳನ್ನು ಆಳುವ ಅನೇಕ ಕಲ್ಪಿತ ನಿಯಮಾವಳಿಗಳು ಎಲ್ಲವನ್ನೂ ಗಾಳಿಗೆ ತೂರುತ್ತಾನೆ. ನಿರ್ಲಕ್ಷಿಸುತ್ತಾನೆ. ಸಾಂಸ್ಕೃತಿಯ ಮೌಲ್ಯಗಳನ್ನು ನಿರ್ಧರಿಸಲು ಇವೆಲ್ಲವೂ ಆಳುವವರು ಬಳಸುವ ಉಪಕರಣಗಳು. ಆದರೆ ಫ್ಯಾನನ್ ನ ಪುಸ್ತಕ ಇದರಿಂದ ಜಿಗಿದು, ವ್ಯಕ್ತಿ ಮತ್ತು ಸಮುದಾಯಗಳು ಈ ಎಲ್ಲ ಬಂಧನಗಳನ್ನು ಕಳಚಿ ಉಲ್ಟಾ ಮಾಡುವ ಹಾದಿಯನ್ನು ಹಾಸುತ್ತದೆ. Why I Am Not a Hindu ಎಂಬ ಈ ಪುಸ್ತಕವೂ ಫ್ಯಾನನ್ ನ ಕ್ಲಾಸಿಕ್ ಗೆ ಸಂವಾದಿಯಾಗಿದೆ” ಎಂದು ಬರೆಯುತ್ತಾರೆ.   

ಈಳಯ್ಯ ಅವರ ಇದೇ ಪುಸ್ತಕವೇ ಆಗಿನ ಸಬಾಲ್ಟ್ರನ್ ಸ್ಕಾಲರ್ಸ್ ಕಲೆಕ್ಟೀವ್ ನ ಚಿಂತಕರ ಗಮನವನ್ನು ಸೆಳೆದಿತ್ತು. ಸಬಾಲ್ಟ್ರನ್ ಅಧ್ಯಯನ ಸಂಪುಟಗಳಲ್ಲಿ ತಮ್ಮ ಲೇಖನ ಪ್ರಕಟಿಸಿದ ಭಾರತದ ಏಕೈಕ ಶೂದ್ರ ವ್ಯಕ್ತಿ ಎಂದರೆ ಅದು ಕಾಂಚ ಐಲಯ್ಯ ಅವರೇ ಇರಬೇಕು. ಇದೇ ಸಮಯದ ಸುಮಾರಿಗೇ ಖ್ಯಾತ ದಲಿತ ಸ್ಕಾಲರ್ ಗೋಪಾಲ ಗುರು ಭಾರತದ ಸಮಾಜ ವಿಜ್ಞಾನ ಕ್ಷೇತ್ರದಲ್ಲಿನ ಸಮತಾವಾದವನ್ನು ಕುರಿತು ಮಾತನಾಡಲು ಆರಂಭಿಸಿದ್ದರು. ಅವರು ಸರಿಯಾಗಿಯೇ ಗುರುತಿಸಿದಂತೆ ಭಾರತದ ಸಮಾಜ ವಿಜ್ಞಾನ ಕ್ಶೇತ್ರದಲ್ಲಿ ಎಂದಿನಿಂದಲೂ ಇರುವ “ ಭೌದ್ಧಿಕತೆಯ ಬ್ರಾಹ್ಮಣರು ಮತ್ತು ಪ್ರಾಯೋಗಿಕ ಅನುಭವದ ಶೂದ್ರರು” ಎಂಬ ವಿಂಗಡಣೇಯನ್ನು ಗುರುತಿಸಿದ್ದರು. ಆದರೆ ಇತ್ತಿಚೆಗೆ ಪರಿಣಿತ ಇತಿಹಾಸಕಾರರು, ಎಮೊರಿ ಯುನಿವರ್ಸಿಟಿಯ ಪ್ರಾಧ್ಯಾಪಕರು ಅಲ್ಲದೇ Subaltern studies ನ ಸ್ಥಾಪಕರಲ್ಲೊಬ್ಬರಾದ ಜ್ಞಾನೇಂದ್ರ ಪಾಂಡೆ, “A History of Prejudice: Race, Caste and Difference in India and the United States” ಎಂಬ ಪುಸ್ತಕವನ್ನು ಬರೆದಿದ್ದಾರೆ. ಕೇಂಬ್ರಿಜ್ ಯುನಿವರ್ಸಿಟಿ ಪ್ರೆಸ್ಸಿನಿಂದ ಪ್ರಕಟಿಸಲಾದ ಪಾಂಡೆಯವರ ಪುಸ್ತಕದಲ್ಲಿ ಐಲಯ್ಯ ಅವರ ಪುಸ್ತಕಗಳ ಉಲ್ಲೇಖವಿದೆ.

ಭಾರತೀಯ ಯುನಿವರ್ಸಿಟಿಯ ಕ್ಲಾಸುರೂಮುಗಳು ತುಂಬಾ ಬದಲಾಗಿವೆ. ದೇಶದ ವೈವಿಧ್ಯತೆಯನ್ನು ಪ್ರತಿನಿಧಿಸುವಂತೆ ಭಾರತದ ಮೂಲೆ ಮೂಲೆಗಳಿಂದ ಸಮಾಜದ ವಿವಿಧ ಸ್ತರಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆ ವಿದ್ಯಾರ್ಥಿಗಳು ವಿಶೇಷವಾಗಿ ಮಾನವಿಕ ಮತ್ತು ಸಮಾಜಶಾಸ್ತ್ರ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಮಟ್ಟಕ್ಕೆ ಬರುವ ಹೊತ್ತಿಗೆ ಅವರು ತಮ್ಮ ಹಾಗೂ ಸಮಾಜದ  ಕುರಿತಾಗಿ ವರ್ಷಗಳಿಂದ ತಲೆಯಲ್ಲಿ ಓಡುತ್ತಿರುವ ಅಸಂಖ್ಯಾತ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರವನ್ನು ಹುಡುಕುತ್ತಿರುತ್ತಾರೆ. ಯುನಿವರ್ಸಿಟಿಗಳಿಗೆ ಬರುವ ಬಹುತೇಕ ದಲಿತ ಬಹುಜನ ವಿದ್ಯಾರ್ಥಿಗಳು ತಮ್ಮ ಮನೆತನದಲ್ಲೇ ಯುನಿವರ್ಸಿಟಿಯ ಮೆಟ್ಟಿಲೇರಿದ ಮೊದಲ ತಲೆಮಾರಿನವರಾಗಿರುತ್ತಾರೆ. ಅವರ ಜಾತಿ ಆಪಾದಿತ ಉದ್ಯೋಗಗಳ ಗುರುತುಗಳು ಅಥವಾ ಹೆಸರುಗಳು ಅವರಿಗೆ ಅಪಾರ ಕೀಳರಿಮೆಯನ್ನು ಹುಟ್ಟಿಸುತ್ತವೆ. ಅವರಲ್ಲಿ ಹೆಚ್ಚಿನವರಿಗೆ ಆ ಕೀಳರಿಮೆಯನ್ನು ಹೊಡೆದೊಡಿಸಲು ಬೇಕಾದ ಭಾಷಾ ಕೌಶಲ್ಯವಾಗಲಿ ಅಥವಾ ಬೆಂಬಲವಾಗಲಿ ಇರುವುದಿಲ್ಲ‌. ಕಾಂಚ ಐಲಯ್ಯ ಅವರಂತಹ ವಿದ್ವಾಂಸರು, ಹೋರಾಟಗಾರರ ಪಾಂಡಿತ್ಯಪೂರ್ಣ ಬರಹಗಳು ಅವರಿಗೆ ತಮ್ಮ ಕೀಳರಿಮೆಯನ್ನು ತೊರೆದು ಮುಕ್ತವಾಗಿ ಮಾತನಾಡಲು, ತಮ್ಮ ಅನುಭವಗಳನ್ನು ಹಂಚಿಕೊಳ್ಳಲು  ಸಹಕಾರಿಯಾಗುತ್ತಿದ್ದವು. ಆದರೀಗ ಗೋಪಾಲ್ ಗುರು ಮತ್ತು ಸುಂದರ್ ಸಾರುಕ್ಕೈ ಅವರಂತಹ ವಿದ್ವಾಂಸರ ಹಸ್ತಕ್ಷೇಪದಿಂದಾಗಿ, ಅನುಭವಗಳು “ಸಿದ್ಧಾಂತ”ಗಳನ್ನು ರೂಪಿಸಲು ಸಹಕಾರಿಯಲ್ಲ ಅಥವಾ ಅದೇ ಸಮಸ್ಯೆ ಎಂದು ತರ್ಕ ರೂಪಿಸಲಾಗುತ್ತಿದೆ.

ಈ ಎಲ್ಲ  ಪ್ರಶ್ನೆಗಳ ಮತ್ತು ವಿಷಯಗಳ ಕುರಿತು ನಾವು ಗಂಭೀರವಾಗಿ ಗಮನಹರಿಸಬೇಕಾಗಿದೆ. ವಿದ್ಯಾರ್ಥಿಗಳ ಜ್ಞಾನದ ವ್ಯಾಪ್ತಿಯನ್ನು ಕುಗ್ಗಿಸದೆ, ವಿಸ್ತರಿಸುವ ಕೆಲಸ ಮಾಡಬೇಕಾಗಿದೆ ಮತ್ತು ನಮ್ಮ ಪ್ರಜಾಪ್ರಭುತ್ವದ ವೈವಿಧ್ಯತೆ ಮತ್ತು ಬಹುತ್ವ ಅಪಾಯದಲ್ಲಿರುವಂತೆ ತೋರುತ್ತಿರುವ ಈ ಸಂದರ್ಭದಲ್ಲಿ ರಾಹುಲ್ ಇಂದೋರಿಯವರ ‘ಸಬಿ ಕಾ ಕೂನ್ ಹೈ ಶಾಮಿಲ್ ಯಹಾ ಕೀ ಮಿಟ್ಟಿ ಮೇ, ಕಿಸಿ‌ ಕಿ ಬಾಪ್ ಕಾ ಹಿಂದೂಸ್ತಾನ್ ತೋಡಿ ಹೈ’ ( ಈ ಮಣ್ಣಿನಲ್ಲಿ ಎಲ್ಲರ ರಕ್ತವೂ ಬೆರೆತಿದೆ, ಹಿಂದೂಸ್ತಾನ ಯಾರಪ್ಪನ ಆಸ್ತಿಯೇನೂ ಅಲ್ಲ) ಎಂಬ ಸಾಲುಗಳು ಪದೇ ಪದೇ ನೆನಪಾಗುತ್ತಿವೆ.

ಕೃಪೆ: The Wire

ಅನುವಾದ: ಮೇಘಾ ಎಲೆಗಾರ್


One comment to “ಜಾತಿಯ ಮಾತು : “ದಲಿತ” ಎನ್ನದೇ ಇರುವುದು ಹೇಗೆ?”
  1. very good. ವಿಚಾರ ಸೂಕ್ಷ್ಮ ಮತ್ತು ಬೋಧಪ್ರದ. ಚಿಂತನೆಗೆ ತೊಡಗಿಸುತ್ತದೆ.

ಪ್ರತಿಕ್ರಿಯಿಸಿ