ತಟ್ಟೆಯಿಂದ ನೇಗಿಲಿಗೆ: ಕೃಷಿಯಲ್ಲಿ ೧೯೯೧ರ ಕ್ಷಣಗಳು

ಇತ್ತೀಚೆಗೆ ವಿತ್ತ ಮಂತ್ರಿಗಳು ಪ್ರಕಟಿಸಿರುವ ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ನಿಲುವುಗಳ ಕುರಿತು ಬಂದ ಎರಡು ಪ್ರತಿಕ್ರಿಯೆಗಳನ್ನು ಇಲ್ಲಿ ಅನುವಾದಿಸಿ ಕೊಡುತಿದ್ದೇವೆ. ಇಬ್ಬರೂ ಲೇಖಕರು ಈ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಸಿಕೊಂಡವರು. ಆದರೆ ನಿಲುವುಗಳು ಭಿನ್ನವಾಗಿದೆ. ಮೊದಲ ಲೇಖನ ಇಲ್ಲಿದೆ

ಕೊನೆಗೂ ನರೇಂದ್ರ ಮೋದಿಯವರ ಸರ್ಕಾರ ಕೃಷಿ ಮಾರುಕಟ್ಟೆಯಲ್ಲಿ ಸುಧಾರಣೆಯನ್ನು ತಂದಿದೆ. ಅದಕ್ಕೆ ಅದನ್ನು ಅಭಿನಂದಿಸಬೇಕು. ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ರೈತರಿಗೆ ಘೋಷಿಸಿದ ಪ್ಯಾಕೇಜಿನ ಇಂಗಿತಕ್ಕೆ ಅನುಗುಣವಾಗಿಯೇ ಕಾನೂನು ಬದಲಾವಣೆಗೆಳು ಅಂತಿಮವಾಗಿ ಜಾರಿಯಾಗಬೇಕು. ಆಗ ಉದ್ದೇಶಿತ ಸುಧಾರಣೆಗಳಿಂದ ಒಂದು ಮೌಲಿಕವಾದ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ಮಿಸುವುದಕ್ಕೆ ಸಾಧ್ಯವಾಗುತ್ತದೆ. ರೈತರಿಗೆ ಒಳ್ಳೆಯ ಆದಾಯವೂ ಸಿಗುತ್ತದೆ. ರೈತರ ಹೊರೆ ಕಮ್ಮಿಯಾಗುತ್ತದೆ.

ವಿತ್ತ ಮಂತ್ರಿಗಳ ಪ್ಯಾಕೇಜಿನಲ್ಲಿ ಒಟ್ಟು ೧೧ ಪ್ರಮುಖ ಅಂಶಗಳಿವೆ. ಅವುಗಳಲ್ಲಿ ಹಲವು ವಿಭಿನ್ನ ಅಂಶಗಳು ಸೇರಿಕೊಂಡಿವೆ. ಒಂದು ಲಕ್ಷ ಕೋಟಿ ರೂಪಾಯಿಯನ್ನು ಕೃಷಿ ಮೂಲ ಸೌಕರ್ಯವನ್ನು ನಿರ್ಮಿಸುವುದಕ್ಕೆ, ೫೦೦ ಕೋಟಿ ರೂಪಾಯಿಯನ್ನು ಜೇನು ಸಾಕಣೆಗೆ, ಮತ್ತೆ ೫೦೦ ಕೋಟಿ ಟೊಮೆಟೊ, ಈರುಳ್ಳಿ, ಆಲೂಗೆಡ್ಡೆ, ಇತರ ಹಣ್ಣು ತರಕಾರಿಗಳಿಗೆ ಘೋಷಿಸಲಾಗಿದೆ. ಇವೆಲ್ಲಾ ಒಳ್ಳೆಯ ಕ್ರಮಗಳೆ. ಆದರೆ ಅವುಗಳನ್ನು ಹೇಗೆ ಜಾರಿಗೊಳಿಸಲಾಗುತ್ತವೆ ಎನ್ನುವ ವಿವರ ಲಭ್ಯವಿಲ್ಲ. ಈ ಸರ್ಕಾರದ ಹೆಚ್ಚಿನ ಯೋಜನೆಗಳು ಅರ್ಧದಷ್ಟೂ ಯಶಸ್ವಿಯಾಗಿಲ್ಲ. ೨೦೨೨ರ ವೇಳೆಗೆ ರೈತರ ವರಮಾನವನ್ನು ದುಪ್ಪಟ್ಟುಗೊಳಿಸುವ ಯೋಜನೆ, ೨೦೧೯ರ ವೇಳೆಗೆ ೯೯ ನಿರಾವರಿ ಯೋಜನೆಗಳನ್ನು ಸಂಪೂರ್ಣಗೊಳಿಸುವ ಯೋಜನೆ ಇವೆಲ್ಲಾ ಗುರಿಮಟ್ಟಲಿಲ್ಲ. ಹಾಗಾಗಿ ವಿತ್ತಮಂತ್ರಿಗಳ ಮೊದಲ ೮ ಅಂಶಗಳಿಂದ ನಾನೇನು ಪುಲಕಿತನಾಗಿಲ್ಲ.

ನನಗೆ ನಿಜವಾಗಿ ಸಂತೋಷವಾಗಿದ್ದು ಭಾಷಣದ ಕೊನೆಯ ಮೂರು ಅಂಶಗಳು. ಅವು ೧೯೫೫ರ ಅವಶ್ಯಕ ವಸ್ತುಗಳ ಕಾಯ್ದೆಯಲ್ಲಿ(ಇಸಿಎ) ತಂದಿರುವ ಮಾರ್ಪಾಡು. ಅದಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾನೂನೊಂದನ್ನು ಜಾರಿಗೆ ತರುವುದಾಗಿ ಸೂಚಿಸಿದೆ. ಅದರ ಪ್ರಕಾರ ರೈತರು ತಮ್ಮ ಉತ್ಪನ್ನಗಳನ್ನೂ ಎಪಿಎಂಸಿ ಮಂಡಿಯಾಚೆಗೆ ಯಾರಿಗೆ ಬೇಕಾದರೂ ಮಾರಬಹುದು. ರಾಜ್ಯಗಳ ನಡುವೆ ಮಾರಾಟಕ್ಕೂ ಯಾವುದೇ ಅಡ್ಡಿಯೂ ಇರುವುದಿಲ್ಲ. ಮುಕ್ತವಾಗಿ ಮಾರಾಟಮಾಡಬಹುದು.

ಒಪ್ಪಂದದ ಕೃಷಿಗೆ -ಕಾಂಟ್ರಕ್ಟ್ ಫಾರ್ಮಿಂಗಿಗೆ -ಒಂದು ಕಾನೂನು ಚೌಕಟ್ಟನ್ನು ನಿರ್ಮಿಸಲಾಗಿದೆ. ಬಿತ್ತನೆಯ ಸಮಯದಲ್ಲೇ ಗ್ರಾಹಕ ರೈತನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾನೆ. ಇದರಿಂದ ರೈತರಿಗೆ ಬೆಲೆಗೆ ಸಂಬಂಧಿಸಿದಂತೆ ಒಂದು ಗ್ಯಾರಂಟಿ ಇರುತ್ತದೆ. ಈ ಎಲ್ಲಾ ಅಂಶಗಳನ್ನೂ ಒಂದೊಂದಾಗಿ ವಿವರಿಸುತ್ತೇನೆ. ಇದು ಒಟ್ಟಾರೆ ಕೃಷಿ ವಾತಾವರಣದಲ್ಲೇ ಒಂದು ಬದಲಾವಣೆಯನ್ನು ತರಬಹುದು ಎಂದು ನನಗೆ ಏಕೆ ತೋರುತ್ತದೆ ಎಂಬುದನ್ನೂ ವಿವರಿಸುತ್ತೇನೆ.

ಮೊದಲು ೧೯೫೫ರ (ಎಸೆನ್ಸಿಯಲ್ ಕಮಾಡಿಟಿ ಆಕ್ಟ್) ಇಸಿಎ ಕಾಯ್ದೆಯ ಮೂಲ ಇರುವುದು ೧೯೪೩ರ ಇಂಡಿಯಾದ ರಕ್ಷಣೆಗೆ ನಿಯಮಗಳಲ್ಲಿ. ಭಾರತ ಆಗ ಕ್ಷಾಮದಿಂದ ಕಂಗಾಲಾಗಿತ್ತು. ಜೊತೆಗೆ ಎರಡನೇ ಮಹಾಯುದ್ದದ ಪರಿಣಾಮಗಳು ಬೇರೆ ಕಾಡುತ್ತಿತ್ತು. ಅದು ಕೊರತೆಯಿದ್ದ ಕಾಲದ ಕಾನೂನು. ೧೯೬೦ ಮಧ್ಯದ ವೇಳೆಗೆ ನಿರಂತರವಾದ ಕ್ಷಾಮದ ಸಂಕಷ್ಟ ದೇಶವನ್ನು ಬಾಧಿಸುತ್ತಿತ್ತು. ಭಾರತ ಗೋಧಿಯನ್ನು ಪಿಎಲ್೪೮೦ಯಲ್ಲಿ ಆಮದು ಮಾಡಿಕೊಳ್ಳಬೇಕಾಯಿತು. ಆಗ ನಮ್ಮ ಆರ್ಥಿಕತೆಯನ್ನು ಆಮದು ಮಾಡಿಕೊಂಡು ತಿನ್ನೋ (ಷಿಪ್ ಟು ಮೌತ್) ಆರ್ಥಿಕತೆ ಅಂತ ಕರೆಯುತ್ತಿದ್ದರು. ಆದರೆ ಇಂದು ಭಾರತ ಜಗತ್ತಿನಲ್ಲೇ ಅಕ್ಕಿಯನ್ನು ರಫ್ತುಮಾಡುವ ಅತಿ ದೊಡ್ಡ ದೇಶ. ಚೀನಾ ಬಿಟ್ಟರೆ ನಮ್ಮದೇ ಅತಿ ಹೆಚ್ಚು ಅಕ್ಕಿ ಹಾಗೂ ಗೋಧಿ ಬೆಳೆಯುವ ದೇಶ. ನಮ್ಮ ಗೋದಾಮುಗಳು ತುಂಬಿ ತುಳಕುತ್ತಿವೆ. ಆದರೆ ಇನ್ನೂ ನಾವು ೧೯೫೦ರ ಕಾನೂನು ಚೌಕಟ್ಟನ್ನೇ ಉಳಿಸಿಕೊಂಡಿದ್ದೇವೆ. ಕೃಷಿ ಉತ್ಪನ್ನಗಳನ್ನು ಸಂಗ್ರಹಣೆಗೆ ಸಂಬಂಧಿಸಿದಂತೆ ಖಾಸಗಿ ವಲಯದಿಂದ ಹೂಡಿಕೆಗೆ ಪ್ರೋತ್ಸಾಹವಿಲ್ಲ. ಅವಶ್ಯಕ ವಸ್ತುಗಳ ಕಾಯ್ದೆಯನ್ನು ಬಳಸಿಕೊಂಡು ವ್ಯಾಪಾರಿಗಳು, ಸಂಸ್ಕರಣೆ ಮಾಡುವವರು ಅಥವಾ ರಫ್ತು ಮಾಡುವವರು ಸಂಗ್ರಹಿಸಿಡುವ ಪ್ರಮಾಣದ ಮೇಲೆ ದಿಢೀರನೆ ಮಿತಿಯನ್ನು ಹೇರಿಬಿಡುವ ಸಾಧ್ಯತೆ ಇದೆ. ಹಾಗಾಗಿ ಸಂಗ್ರಹಿಸಿಡುವುದಕ್ಕೆ ಬೇಕಾದಷ್ಟು ಸೌಲಭ್ಯ ಕಲ್ಪಿಸಿಕೊಳ್ಳುವ ಪ್ತಯತ್ನ ನಡೆದಿಲ್ಲ. ಎಷ್ಟೋ ಸಲ ರೈತರು ತಾವು ಬೆಳೆದ ಉತ್ಪನ್ನವನ್ನು ಮಾರುಕಟ್ಟೆಗೆ ತಂದಾಗ ಅಲ್ಲಿ ದಾಸ್ತಾನುವಿನ ಮಿತಿಮೀರಿದ ರಾಶಿಯೇ ಇರುತ್ತಿತ್ತು. ಸ್ವಾಭಾವಿಕವಾಗಿಯೇ ಅವುಗಳ ಬೆಲೆ ಕುಸಿಯುತ್ತದೆ. ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಉಳಿದ ಸಮಯದಲ್ಲಿ ಬೆಲೆಗಳು ಗಗನಕ್ಕೆ ಏರುತ್ತವೆ. ಆಗ ಬಳಕೆದಾರರಿಗೆ ಕಷ್ಟವಾಗುತ್ತದೆ. ಅದರಿಂದ ಸಂಗ್ರಹಣೆಯ ಸೌಲಭ್ಯವಿಲ್ಲದೆ ಇಬ್ಬರೂ ಕಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಇತ್ತೀಚೆಗೆ ಘೋಷಿಸಿರುವ ತಿದ್ದುಪಡಿಗಳು ನಿಜವಾದ ಅರ್ಥದಲ್ಲಿ ಜಾರಿಗೆ ಬಂದರೆ ಈ ಸಮಸ್ಯೆಗೆ ಪರಿಹಾರ ಸಾಧ್ಯವಾಗುತ್ತದೆ. ಬೆಲೆಗಳು ಸಾಪೇಕ್ಷವಾಗಿ ಸ್ಥಿರವಾದ ಮಟ್ಟದಲ್ಲಿ ಉಳಿದುಕೊಳ್ಳುತ್ತವೆ. ರೈತರು ಮತ್ತು ಗ್ರಾಹಕರು ಇಬ್ಬರಿಗೂ ಅನುಕೂಲವಾಗುತ್ತದೆ. ಸಂಗ್ರಹಣೆಯ ವ್ಯವಸ್ಥೆ ಕೊರತೆಯಿಂದ ಕೃಷಿ ಉತ್ಪನ್ನಗಳಿಗೆ ಆಗುತ್ತಿರುವ ಹಾನಿ ತಪ್ಪುತ್ತದೆ. ಎರಡನೆಯದಾಗಿ ಕೇಂದ್ರದ ಕಾನೂನು ಜಾರಿಗೆ ಬಂದರೆ ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿಯ ಆಚೆ, ಯಾರಿಗೆ ಬೇಕಾದರೂ ಮಾರಬಹುದು. ಕೊಳ್ಳುವವರ ನಡುವೆ ಸ್ಪರ್ಧೆ ಹೆಚ್ಚುತ್ತದೆ. ಮಂಡಿ ಶುಲ್ಕ, ಏಜೆಂಟುಗಳ ಕಮಿಷನ್ ಕಮ್ಮಿಯಾಗುತ್ತದೆ. ಹಲವು ರಾಜ್ಯ ಸರ್ಕಾರಗಳು ಎಪಿಎಂಸಿ ಮಾರುಕಟ್ಟೆಯ ಮೇಲೆ ವಿಧಿಸುತ್ತಿರುವ ಇತರ ಸೆಸ್‌ಗಳೂ ಕಡಿಮೆಯಾಗುತ್ತವೆ.

ನಮ್ಮ ರೈತರು ಉತ್ಪಾದನೆಯ ಪ್ರಕ್ರಿಯೆಯಲ್ಲಿ ಕಳೆದುಕೊಳ್ಳುವುದಕ್ಕಿಂತ, ತಮ್ಮ ಉತ್ಪನ್ನಗಳನ್ನು ಮಾರುವಾಗ ನಷ್ಟ ಅನುಭವಿಸುವುದೇ ಹೆಚ್ಚು. ಎಪಿಎಂಸಿ ಮಾರುಕಟ್ಟೆ ಅನ್ನುವುದು ಒಬ್ಬರೆ ಗ್ರಾಹಕರಿರುವ ವ್ಯವಸ್ಥೆ ಆಗಿಬಿಟ್ಟಿದೆ. ಅದರಿಂದಾಗಿ ಮಧ್ಯವರ್ತಿಯ ಖರ್ಚು ವಿಪರೀತವಾಗಿದೆ. ಉದ್ದೇಶಿತ ಕಾನೂನಿನಿಂದ ರೈತರಿಗೆ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳುತ್ತವೆ. ಒಳ್ಳೆಯ ಬೆಲೆಯೂ ಸಿಗುತ್ತದೆ. ಅವರ ಅದಾಯವೂ ಹೆಚ್ಚುತ್ತದೆ. ರಾಜ್ಯಗಳ ನಡುವೆ ವ್ಯಾಪಾರಕ್ಕೆ ಅಡಚಣೆಗಳು ಇರುವುದಿಲ್ಲ. ಕೃಷಿ ಉತ್ಪನ್ನಗಳ ಚಲನೆ ಸಲೀಸಾಗುತ್ತದೆ. ರಾಜ್ಯಗಳ ನಡುವೆ ಕೃಷಿ ಉತ್ಪನ್ನಗಳ ಬೆಲೆಗಳಲ್ಲಿ ಅಂತಹ ವ್ಯತ್ಯಾಸವಿರುವುದಿಲ್ಲ. ಒಂದು ರಾಜ್ಯದಲ್ಲಿ ಹೆಚ್ಚುವರಿ ಉತ್ಪಾದನೆಯಾಗಿ ಬೆಲೆಗಳು ಕುಸಿದರೆ, ಕೊರತೆ ಇರುವ ಬೇರೆ ಪ್ರಾಂತ್ಯಗಳಲ್ಲಿ ಮಾರಬಹುದು. ಅಲ್ಲಿ ಗ್ರಾಹಕರು ಸಿಗುತ್ತಾರೆ. ಒಳ್ಳೆಯ ಬೆಲೆಯೂ ಸಿಗುತ್ತದೆ. ಅಂತಿಮವಾಗಿ ಕೃಷಿ ಉತ್ಪನ್ನಗಳಿಗೆ ಭಾರತದಲ್ಲಿ ಒಂದು ಮಾರುಕಟ್ಟೆ ಸಾಧ್ಯವಾಗುತ್ತದೆ. ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ತಮ್ಮ ರಾಜ್ಯದಿಂದ ಒಡಿಶಾಗೆ ಆಲೂಗೆಡ್ಡೆ ಹೋಗುವುದನ್ನು ತಡೆಯುವುದಕ್ಕೆ ಆಗುವುದಿಲ್ಲ. ಅವರು ಹಾಗೆ ಮಾಡಿದ್ದರು. ಮೂರನೆಯದು ಒಪ್ಪಂದದ ಕೃಷಿಯನ್ನು ಕಾನೂನು ಚೌಕಟ್ಟಿನೊಳಗೆ ತರಲಾಗುತ್ತದೆ. ಇದರಿಂದ ರೈತರಿಗೆ ಬಿತ್ತನೆಯ ಸಮಯದಲ್ಲೇ ಮುಂದೆ ತಮ್ಮ ಉತ್ಪನ್ನಗಳಿಗೆ ಸಿಗುವ ಬೆಲೆಯ ಬಗ್ಗೆ ತಿಳಿದಿರುತ್ತದೆ. ಅದಕ್ಕೆ ತಕ್ಕಂತೆ ರೈತರು ತಾವು ಬೆಳೆಯುವ ಬೆಳೆಯನ್ನು ಕುರಿತು ನಿರ್ಧಾರವನ್ನು ತೆಗೆದುಕೊಳ್ಳಬಹುದು. ಸಾಮಾನ್ಯವಾಗಿ ನಮ್ಮ ರೈತರು ಹಿಂದಿನ ವರ್ಷದ ಬೆಲೆಗಳನ್ನು ನೋಡಿಕೊಂಡು ಮುಂದೆ ಏನು ಬೆಳೆಯಬೇಕೆಂದು ನಿರ್ಧರಿಸುತ್ತಾರೆ. ಕರಾರು ಕೃಷಿ ನೀತಿ ಜಾರಿಗೆ ಬಂದರೆ ಮಾರುಕಟ್ಟೆಯ ಅನಿಶ್ಚಿತತೆ ಕಮ್ಮಿಯಾಗುತ್ತದೆ.

ಆದರೆ ಈ ತಿದ್ದುಪಡಿಗಳಿಂದ ಗರಿಷ್ಠ ಫಲ ಸಿಗಬೇಕಾದರೆ ಕೆಲವು ಪೂರಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಂಸ್ಕರಣೆ ಮಾಡುವವರು, ರಫ್ತು ಮಾಡುವವರು ಮತ್ತು ಸಂಘಟಿತ ಮರುಮಾರಾಟ ಮಾಡುವವರು ಇತ್ಯಾದಿ ದೊಡ್ಡ ಗ್ರಾಹಕರು ನೇರವಾಗಿ ರೈತರ ಬಳಿ ಹೋಗುವುದು ಒಳ್ಳೆಯ ಸಲಹೆಯೇನಲ್ಲ. ಅದಕ್ಕೊಂದು ಅಳತೆಗೋಲು ಬೇಕು. ಅದಕ್ಕೆ ರೈತರು ಹಾಗೂ ಉತ್ಪಾದಕರು ಇರುವಂತಹ ಒಂದು ಸಂಘಟನೆಯನ್ನು ಸಂಘಟಿಸಬೇಕು. ಸ್ಥಳೀಯ ಉತ್ಪನ್ನಗಳ ಆಸಕ್ತಿಯನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಅದನ್ನು ರೂಪಿಸಬೇಕು. ಅದು ಅವಶ್ಯಕವಾಗಿ ಆಗಬೇಕು. ಇದರಿಂದ ಉತ್ಪನ್ನಗಳ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದು. ನಿರ್ಮಹಣೆಯ ಖರ್ಚು ಕಡಿಮೆಯಾಗುತ್ತದೆ. ರೈತರಿದೆ ಚೌಕಾಸಿ ಮಾಡುವುದಕ್ಕೆ ಹೆಚ್ಚಿನ ಬಲ ಬರುತ್ತದೆ. ನಬಾರ್ಡ ಇದಕ್ಕೆ ಬೇಕಾದ ಬಂಡವಾಳವನ್ನು ಶೇಕಡ ೭ರಷ್ಟು ಬಡ್ಡಿದರದಲ್ಲಿ ರೈತರಿಗೆ ಸಿಗುವಂತೆ ಮಾಡಬೇಕು. ಅದು ರೈತರು ಬೆಲೆ ಸಾಲಕ್ಕೆ ಕೊಡುತ್ತಿರುವ ಬಡ್ಡಿದರ. ಈಗ ಎಲ್ಲರೂ ಹಣಕ್ಕೆ ಕಿರು ಹಣಕಾಸು ಸಂಸ್ಥೆಗಳನ್ನು ಆಶ್ರಯಿಸಿದ್ದಾರೆ. ಶೇಕಡ ೧೮ರಿಂದ ೨೨ವರೆಗೆ ಬಡ್ಡಿಕೊಡುತ್ತಾರೆ. ಇದರಿಂದ ಒಟ್ಟಾರೆ ವ್ಯಾಪಾರದ ಖರ್ಚು ವಿಪರೀತವಾಗಿ ಹೆಚ್ಚಿದೆ.

ಕಾನೂನಿನ ರೂಪರೇಷೆಗಳನ್ನು ಗಮನಿಸುವಾಗ ನಾವು ಇನ್ನೊಂದು ಅಂಶವನ್ನು ಗಮನಿಸಬೇಕು. ಬೇಗನೆ ಕೆಡುವ ಪದಾರ್ಥಗಳ ಬೆಲೆ ಶೇಕಡ ನೂರರಷ್ಟು ಮತ್ತು ಕೆಲಕಾಲ ಬಾಳಿಕೆ ಬರುವ ಉತ್ಪನ್ನಗಳ ಬೆಲೆ ಶೇಕಡ ೫೦ರಷ್ಟು ಹೆಚ್ಚಿದರೆ ಸಂಗ್ರಹಣೆಯ ಮಿತಿಯನ್ನು ಮತ್ತೆ ಹೇರುವುದಕ್ಕೆ ಈ ಕಾಯ್ದೆಯಲ್ಲಿ ಅವಕಾಶವಿದೆ ಎಂಬ ಸುದ್ದಿ ಇದೆ. ಈರುಳ್ಳಿ ಬೆಲೆ ಸಧ್ಯಕ್ಕೆ ಕೆಜಿಗೆ ೨೨ ರೂಪಾಯಿ ಇದೆ. ಅದು ಮುಂದಿನ ತಿಂಗಳು ಕೆಜಿಗೆ ೪೪ರೂಪಾಯಿ ಆದರೆ ಸರ್ಕಾರ ಸಂಗ್ರಹಣೆಯ ಪ್ರಮಾಣದ ಮೇಲೆ ಮಿತಿಯನ್ನು ಹೇರುತ್ತದಾ? ಹಾಗೆ ಮಾಡಬಾರದು. ಹಾಗೆ ಮಾಡಿಬಿಟ್ಟರೆ ಈ ಸುಧಾರಣೆಗಳಿಗೆ ಅರ್ಥವೇ ಇರುವುದಿಲ್ಲ. ಬೆಲೆ ಏರಿಕೆಯಿಂದ ಕುಟುಂಬಗಳ ಆಹಾರಕ್ಕೆ ಸಂಬಂಧಿಸಿದ ಖರ್ಚಿನ ಮೇಲೆ ಆಗುವ ಹೆಚ್ಚುವರಿ ಹೊರೆಯ ಪ್ರಮಾಣ ಎಷ್ಟು ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಸರ್ಕಾರ ಸರಿಯಾದ ದಾರಿಯಲ್ಲಿ ನಡೆಯಲು ಆಸಕ್ತಿ ತೋರಿಸಿದೆ. ಅದು ಒಳ್ಳೆಯ ನಡೆ. ಅದಕ್ಕಾಗಿ ಸರ್ಕಾರವನ್ನು ಶ್ಲಾಘಿಸಬೇಕು. ಕೃಷಿ ಮಾರುಕಟ್ಟೆಗೆ ಸಂಬಂಧಿಸಿದಂತೆ ಸರ್ಕಾರ ಘೋಷಿಸಿರುವ ಬದಲಾವಣೆ ಕೃಷಿ ಕ್ಷೇತ್ರದಲ್ಲಿ ಆಗಬಹುದಾದ ಒಂದು ದೊಡ್ಡ ಬದಲಾವಣೆಯ ಮುನ್ಸೂಚಿಯಾಗಬಹುದು. ಕೃಷಿಯಲ್ಲಿ ೧೯೯೧ರಲ್ಲಿ ನಾವು ಕಂಡ ಆರ್ಥಿಕ ಸುಧಾರಣೆಯ ಕ್ಷಣಗಳನ್ನು ಮತ್ತೆ ಸಂಭವಿಸಬಹುದು. ಆದರೆ ಹಾಗೆ ಸಂಭ್ರಮಿಸುವ ಮೊದಲು ವಿವರಗಳಿಗಾಗಿ ಕಾಯೋಣ.

ಕೃಪೆ : indianexpress

ಅನುವಾದ: ಟಿ. ಎಸ್. ವೇಣುಗೋಪಾಲ್

ಪ್ರತಿಕ್ರಿಯಿಸಿ