ಪದ್ಮಭೂಷಣ, ಗಾಂಧೀವಾದಿ ಡಾ. ಎಚ್.ಎನ್. ನರಸಿಂಹಯ್ಯ ನವರ ಬಗ್ಗೆ ಅವರ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಶ್ರೀ ರಾಘವನ್ ಚಕ್ರವರ್ತಿಯವರು ಬರೆದಿದ್ದಾರೆ. ಬೆಂಗಳೂರಿನ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ, ನಾಡೋಜ ಪುರಸ್ಕೃತರಾಗಿದ್ದ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದ ಅವರು ಬದುಕಿದ್ದಿದ್ದರೆ ಈಗ ೧೦೦ ವರ್ಷ ತುಂಬುತ್ತಿತ್ತು. ಶ್ರೀ ನರಸಿಂಹಯ್ಯನವರ ವ್ಯಕ್ತಿತ್ವವನ್ನು ರಾಘವನ್ ಪ್ರೀತಿ, ಅನೇಕ ಹತ್ತಿರದ ನೆನಪುಗಳು ಇತ್ಯಾದಿಗಳೊಂದಿಗೆ ಲವಲವಿಕೆಯಿಂದ ಚಿತ್ರಿಸಿದ್ದಾರೆ.
ಪ್ರಸನ್ನ, ಚಂದ್ರಶೇಖರ್, ಕುಂಬ್ಳೆ ರಂತಹ ಕ್ರಿಕೆಟ್ ಕಲಿಗಳನ್ನು ನೀಡಿದ ನಮ್ಮ ನ್ಯಾಷನಲ್ ಕಾಲೇಜನ್ನೇ ಕರ್ಮಭೂಮಿಯಾಗಿಸಿಕೊಂಡಿದ್ದ ಎಚ್.ಎನ್. ಬದುಕಿದ್ದರೆ, ಜೂನ್ ಆರಕ್ಕೆ 100 ಪೂರೈಸುತ್ತಿದ್ದರು. ಹಾಗಾಗಲಿಲ್ಲ. ಕ್ರಿಕೆಟ್ ಎಂದರೆ ಅವರಿಗೆ ಅಷ್ಟಕ್ಕಷ್ಟೇ. ’ಅದೇನ್ ಲಕ್ಷಣದ್ ಆಟಾ ಕಣ್ರಪ್ಪಾ…ಸುಮ್ನೆ ಬೆಳಗಿಂದ ಸಂಜೆವರೆಗೂ ಬಿಸಿಲಲ್ಲಿ ಒಣ್ಗೋದು…’ ಎಂದು ಚಿಂತಾಕ್ರಾಂತರಾಗುತ್ತಿದ್ದರು. ಟೀವಿ, ಮೊಬೈಲ್ ಇಲ್ಲದ ಆ ದಿನಗಳಲ್ಲಿ, ಪಾಕೆಟ್ ಟ್ರಾನ್ಸಿಸ್ಟರ್ ಗಳನ್ನು ಕಿವಿಗೆ ಅಂಟಿಸಿಕೊಂಡು ಕಾಮೆಂಟರಿ ಕೇಳುತ್ತಾ ಅವರ ಮುಂದೆಯೇ ತೂರಾಡುತ್ತಿದ್ದ ಹಲವು ವಿದ್ಯಾರ್ಥಿ/ನಿ ಯರಿಗೆ ಅವರು ಭೂತ ಬಿಡಿಸಿದ್ದಿದೆ. ವಿಷ್ಣು-ಸಿ.ಆರ್.ಸಿಂಹ-ಶ್ರೀನಾಥ್ ಇನ್ನೂ ಹಲವು ನೂರುಜನರು ಓದಿದ್ದು ಇದೇ ಸಂಸ್ಥೆಯಲ್ಲಿಯೇ. ಆದರೆ ಎಚ್.ಎನ್ ಗೆ ಸಿನಿಮಾ ಅಂದರೂ ಆಗದು. ೧೯೮೩-೮೪ ರಲ್ಲಿರಬೇಕು..’ನಾನು ಸಿನಿಮಾ ನೋಡಿಯೇ ೪೦ ವರ್ಷ ಆಯ್ತು ಕಣಪ್ಪಾ’ ಎಂದಿದ್ದರು. ಸಿನಿಮಾವನ್ನು ಅದರಲ್ಲೂ ತೆಲುಗು ಸಿನಿಮಾವನ್ನೇ ಉಸುರುವ ಹೊಸೂರಿನ ಹಲವು ಮಂದಿಗೆ ಎಚ್ಚೆನ್ ಒಂದು ’ಪ್ರಶ್ನಾರ್ಥಕ’ ಚಿಹ್ನೆಯಾಗಿ ಕಂಡಿದ್ದರು.
ಎಚ್ಚೆನ್ ಹುಟ್ಟಿದೂರಿನಲ್ಲಿಯೇ (ಹೊಸೂರು, ಈಗಿನ ಚಿಕ್ಕಬಳ್ಳಾಪುರ ಜಿಲ್ಲೆ), ಅವರು ಓದಿದ ಸರ್ಕಾರಿ ಪ್ರಾಥಮಿಕ-ಮಾಧ್ಯಮಿಕ ಶಾಲೆಗಳಲ್ಲಿಯೇ ಓದಿದ ಹೆಮ್ಮೆ ನನ್ನದು. ಎಚ್ಚೆನ್ ನಮಗೆಲ್ಲಾ ದಶಕಗಳಷ್ಟು ಸೀನಿಯರ್. ಹೊಸೂರಿನ ನ್ಯಾಷನಲ್ ಹೈಸ್ಕೂಲ್ ನಲ್ಲೇ ೧೦ನೆ ಯ ತರಗತಿಯವರೆಗೂ ಕಲಿತಿದ್ದು ನನ್ನ ಜೀವನದ ಅಮೂಲ್ಯ ಕಾಲಘಟ್ಟ. ಹೊಸೂರಿನ ಆ ಪ್ರೌಢಶಾಲೆಗೆ ನಂತರ ಎಚ್ಚೆನ್ ರ ಹೆಸರನ್ನೇ ಇಡಲಾಯಿತು. ೧೯೮೪ ರಲ್ಲಿ ಅವರು ಪದ್ಮಭೂಷಣರಾದ ಸಂದರ್ಭ. ಆಕಾಶವಾಣಿಗೆ ಅವರ ಶಿಷ್ಯರಲ್ಲೊಬ್ಬರಾದ ಎಚ್.ಆರ್.ರಾಮಕೃಷ್ಣರಾವ್ ಅವರನ್ನು ಸಂದರ್ಶಿಸಿದರು. ರಾತ್ರಿ ೯ ಗಂಟೆಗೆ ಪ್ರಸಾರವಾದ ಆ ಕಾರ್ಯಕ್ರಮ ಕೇಳಲು ಹೈಸ್ಕೂಲಿನ ಭೋಜಕುಮಾರ್ ರಂಗಮಂದಿರದ ಮುಂದೆ ನೆರೆದಿದ್ದ ಊರಜನರಿಗೆಲ್ಲಾ ಅನುಕೂಲವಾಗುವಂತೆ ರೇಡಿಯೋ ಮುಂದೆ ಮೈಕ್ ಅಳವಡಿಸಲಾಗಿತ್ತು. ಇಡೀ ಹೊಸೂರು ಸಂಭ್ರಮಿಸಿತ್ತು.
ಎಚ್ಚೆನ್ ಹೊಸೂರಿಗೆ ಆಗಾಗ ಬರುತ್ತಿದ್ದರು. ವಿದ್ಯಾರ್ಥಿಗಳನ್ನು ಭೇಟಿಯಾಗುವುದು ಅವರ ಇಷ್ಟದ ಕೆಲಸ. ಬಹಳ ಆಪ್ತವಾಗಿ ಮಾತನಾಡಿಸುತ್ತಾ ಯಾವ ವಿಷಯ ಕಷ್ಟ, ಎಷ್ಟು ದೂರದಿಂದ ಬರುತ್ತೀರಿ ಮುಂತಾಗಿ ವಿಚಾರಿಸುತ್ತಿದ್ದರು. ಹೊಸೂರು ಸುತ್ತಮುತ್ತಲಿನ ಬಸ್ ಸೌಕರ್ಯವಿಲ್ಲದ ಹಳ್ಳಿಗಳಿಂದ ನಡೆದೋ, ಸೈಕಲ್ ನಲ್ಲೋ ಬರುತ್ತಿದ್ದ ವಿದ್ಯಾರ್ಥಿಗಳನ್ನು ಕಂಡಾಗ ’ಎಷ್ಟ್ ಕಷ್ಟಾ ಕಣಪ್ಪಾ ಇವರಿಗೆಲ್ಲಾ’ ಎಂದು ಆರ್ದ್ರರಾಗಿಬಿಡುತ್ತಿದ್ದರು. ನಂತರದ ದಿನಗಳಲ್ಲಿ ಅಕ್ಕಪಕ್ಕದ ಊರುಗಳಿಗೂ ಬಸ್ ಸಂಪರ್ಕ ಸಾಧ್ಯವಾಯಿತು.
’ಫಿಸಿಕ್ಸ್’ ನ ಹುಚ್ಚು ಬೆಳೆಯಲು ನ್ಯಾಷನಲ್ ಹೈಸ್ಕೂಲ್-ಕಾಲೇಜುಗಳಲ್ಲಿ ವಾತಾವರಣವೂ ಪೂರಕವಾಗಿತ್ತು. ಆಗಿನ ಕಾಲದಲ್ಲೇ ಹೊಸೂರು ಶಾಲೆಯ ಗ್ರಂಥಾಲಯದಲ್ಲಿ ಸಾಹಿತ್ಯ-ವಿಜ್ಞಾನಗಳ ಪ್ರಸಿದ್ಧ ಕೃತಿಗಳು ಸಂಗ್ರಹವಾಗಿತ್ತು. ಎಚ್ಚೆನ್, ಓಹಿಯೋ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ಪ್ರಬಂಧದ ಪ್ರತಿಯನ್ನು ಹೊಸೂರು ಶಾಲೆಯ ಗ್ರಂಥಾಲಯದಲ್ಲಿ ಜತನದಿಂದ ಇರಿಸಲಾಗಿತ್ತು. ತೂಲಿಯಮ್ ಮತ್ತು ಹಾಫ್ನಿಯಂ ಎಂಬ ಐಸೋಟೋಪುಗಳ ವಿಕಿರಣಶೀಲ ಗುಣಗಳ (Radio active) ವಿವರವಾದ ಅಧ್ಯಯನವಿದ್ದ ಆ ಪ್ರಬಂಧ ಸ್ವಲ್ಪ ಮಾತ್ರ ಅರ್ಥವಾಗಿತ್ತು. ೧೯೮೨ ರಲ್ಲಿ ಹೊಸೂರಿನ ಶಾಲೆಯಲ್ಲಿ ’ವಿಜ್ಞಾನೋತ್ಸವ’ ನಡೆಯುತ್ತಿತ್ತು. ನ್ಯೂಟ್ರಾನ್ ಗಳನ್ನು ಬಳಸಿ ಯುರೇನಿಯಮ್ ಮೇಲೆ ನಡೆಸುವ ’ನ್ಯೂಕ್ಲಿಯರ್ ಫ಼ಿಶನ್’ (ಯುರೇನಿಯಮ್ ಅಣುವನ್ನು ಒಡೆಯುವುದು, ಇದೇ ಮುಂದೆ ಒಂದು ಸರಪಳಿಕ್ರಿಯೆಯಾಗಿ(Chain Reaction)ಮುಂದುವರೆದು, ಅಣುಶಕ್ತಿಯ ಉತ್ಪಾದನೆಗೆ ಸಹಕಾರಿಯಾಗುತ್ತದೆ) ನ ’ಮಾಡೆಲ್’ ಒಂದನ್ನು ವಿವರಿಸುವ ಸುಯೋಗ ದೊರಕಿತ್ತು. ಎಚ್ಚೆನ್ ಕೂಡಾ ’ಮಾಡೆಲ್’ ನೋಡಿದರು. ಆ ಸಂದರ್ಭ ಉಪಯೋಗಿಸಿಕೊಂಡು ಅವರ ಪ್ರಬಂಧದ ಬಗ್ಗೆ ಪ್ರಸ್ತಾಪಿಸಿದೆ. ಅವರಿಗೆ ಅಚ್ಚರಿ-ಸಂತೋಷಗಳಾಗಿತ್ತು. ’ಎಲ್ ಸಿಕ್ತಪ್ಪಾ ನಿಂಗೆ’ ಎಂದರು. ಲೈಬ್ರರಿಯಲ್ಲಿ ಕಂಡದ್ದನ್ನು ಹೇಳಿದೆ. ತಮ್ಮ ’ಮೇಷ್ಟ್ರ’ ಕೆಲಸ ಆರಂಭಿಸಿಯೇ ಬಿಟ್ಟರು. ತಮ್ಮ ಸಂಶೋಧನೆಯಲ್ಲಿ ಬಂದ ಆ ಎರಡು ಐಸೋಟೋಪ್ಸ್ ನಿಂದ ಆರಂಭಿಸಿ, ನ್ಯೂಕ್ಲಿಯರ್ ಫಿಸಿಕ್ಸ್, ಕ್ವಾಂಟಂ ಮೆಕಾನಿಕ್ಸ್ ಗಳನ್ನೆಲ್ಲಾ ಒಂದು ಸುತ್ತು ಹೊಡೆಸಿದರು. ’ಫಿಸಿಕ್ಸ್ ಅಂದ್ರೆ ಮಾಡರ್ನ್ ಫಿಸಿಕ್ಸ್ ಕಣಪ್ಪಾ..ಅದರಲ್ಲೂ ನ್ಯೂಕ್ಲಿಯರ್ ಫಿಸಿಕ್ಸ್…ವಿಪರೀತ ಇದೆ ಕಣಪ್ಪಾ ಓದೋದು..’ ಎನ್ನುತ್ತಾ ಜಾರ್ಜ್ ಗಾಮೋ ಬರೆದ ಪ್ರಸಿದ್ಧ ಕೃತಿ ’Thirty years that shook Physics’ ಯ ಬಗ್ಗೆ ಹೇಳಿದರು. ಕಲಿಯುವ ವಿಷಯದ ಬಗ್ಗೆ ಆಸಕ್ತಿ ತರಿಸುವ, ಅದರ ಆಳ-ಅಗಲಗಳನ್ನು ಅರಸುತ್ತಾ ಚಕಿತಗೊಳಿಸುವ, ವಿಷಯವನ್ನು ಮತ್ತಷ್ಟು ವಿಶಾಲ ಆಯಾಮದಲ್ಲಿ ಅರ್ಥೈಸಿಕೊಳ್ಳುವ ಕಾಣ್ಕೆಯನ್ನು ಉದ್ದೀಪನಗೊಳಿಸುವ ಇಂತಹ ’ಪಾಠಗಾರಿಕೆ’ ಇಂದು ಬಹಳ ಅಪರೂಪ. ಎಚ್ಚೆನ್ ನಂತರ ಫಿಸಿಕ್ಸ್ ವಿಷಯವನ್ನು ಹೀಗೆ ಬೋಧಿಸಿದವರಲ್ಲಿ ಜಿ.ವೆಂಕಟೇಶ್ (ಗೌರೀಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿದ್ದರು. ನಂತರ ಬೆಂಗಳೂರಿನಲ್ಲಿ ನೆಲೆಸಿದರು), ಕೆ.ಎಸ್.ನಟರಾಜ್ (ಜಯನಗರದ ನ್ಯಾಷನಲ್ ಕಾಲೇಜ್) ನೆನಪಾಗುತ್ತಿರುತ್ತಾರೆ.
೧೯೮೫ರಲ್ಲಿ ಜಯನಗರದ ನ್ಯಾಷನಲ್ ಕಾಲೇಜ್ ಸೇರಿದೆ. ಎಚ್ಚೆನ್ ಕಲಾಕ್ಷೇತ್ರದ ಕಟ್ಟಡ ತಲೆಯೆತ್ತುತ್ತಿತ್ತು. ಇನ್ನೂ ಪೂರ್ಣವಾಗಿರಲಿಲ್ಲ. ಎಚ್ಚೆನ್ ಆಗಾಗ ಬಂದು ಕೆಲಸಗಳನ್ನು ಪರಿಶೀಲಿಸುತ್ತಿದ್ದರು. ’ಬಸವನಗುಡಿಗೆ ಬರಬಹುದಾಗಿತ್ತಲ್ಲಪ್ಪಾ’ ಎಂದಿದ್ದರು. ನಾವಿದ್ದದ್ದು ಯಲಚೇನಹಳ್ಳಿಯಲ್ಲಿ. ಜಯನಗರ ಹತ್ತಿರವಾಗಿತ್ತು. ಹೇಳಿದೆ. ’ಪರ್ವಾಗಿಲ್ಲಪ್ಪಾ’ ಎಂದರು. ಕಟ್ಟಡದ ಕೆಲಸಗಳೆಲ್ಲಾ ಮುಗಿದಿದ್ದವು. ಅದುವರೆಗೂ ಕಾಲೇಜಿನ ವಾರ್ಷಿಕ ದಿನಾಚರಣೆಗಳು ಜಯನಗರದ ಎಂಟನೇ ಬ್ಲಾಕ್ ನಲ್ಲಿದ್ದ ಬೆಳಗೋಡು ಕಲಾಮಂಟಪದಲ್ಲಿ ನಡೆಯುತ್ತಿತ್ತು. ೮೬ರಿಂದ ಎಚ್ಚೆನ್ ಕಲಾಕ್ಷೇತ್ರದಲ್ಲೇ ನಡೆಯಲಾರಂಭಿಸಿತು.
ಎಚ್ಚೆನ್ ಕಲಾಕ್ಷೇತ್ರದಲ್ಲಿ ನಡೆದ ಒಂದು ಸಮಾರಂಭ. ಅಂದು ಸ್ವತಃ ಎಚ್ಚೆನ್ ಬರಲಾಗಲಿಲ್ಲ. ರಾಮಕೃಷ್ಣ ಹೆಗಡೆ ಸಬೂಬು ಹೇಳಿ ತಪ್ಪಿಸಿಕೊಂಡರು. ಬದಲಿಗೆ ಸಚಿವರಾಗಿದ್ದ ರಘುಪತಿ ಬಂದರು. ಅದೂ ಸುಮಾರು ತಡವಾಗಿ. ಕತ್ತಲಾಗುತ್ತಿತ್ತು. ’ಹೆಗಡೆ ಬರಲ್ವಂತೆ…ರಘುಪತಿನಂತೆ’ ಎಂಬ ಗುಸುಗುಸು ಹರಡಲಾರಂಭಿಸಿತು. ರಘುಪತಿ ಗೇಟ್ ನ ಬಳಿ ಕಾರಿನಿಂದ ಇಳಿಯುವುದನ್ನು ಕಂಡ ವಿದ್ಯಾರ್ಥಿಯೊಬ್ಬ ’ಹೆಗಡೆ ಅನಿವಾರ್ಯ ಕಾರಣದಿಂದ ಬರಲಾಗಲಿಲ್ಲ. ಅದಕ್ಕೇ ನಾನೇ ಬಂದೆ’ ಅಂತ ಈ ವಯ್ಯ ಹೇಳ್ತಾನ್ ನೊಡಿ ಇವಾಗ’ ಎಂದ. ಎದುರು ಸಿಕ್ಕವರಿಗೆಲ್ಲಾ ಕೈಮುಗಿಯುತ್ತಾ ರಘುಪತಿ ವೇದಿಕೆಯೇರಿದರು. ಒಂದೊಂದು ಮೆಟ್ಟಿಲು ಹತ್ತುವಾಗಲು ಅವರು ಹಿಂದಿರುಗಿ ಕೈ ಮುಗಿಯುತ್ತಾ ’ಮುಗುಳ್ನಗು’ತ್ತಿದ್ದು ಒಂದು ಕಾಮಿಡಿ ದೃಶ್ಯದಂತಿತ್ತು. ಸ್ವಾಗತ ಭಾಷಣದ ಶಾಸ್ತ್ರವಾದ ಮೇಲೆ, ಮಾತನಾಡಲು ನಿಂತ ರಘುಪತಿ ’ಹೆಗಡೆ ಅನಿವಾರ್ಯ ಕಾರಣದಿಂದ ಬರಲಾಗಲಿಲ್ಲ. ಅದಕ್ಕೇ ನಾನೇ ಬಂದೆ’ ಎಂದು ಹೇಳಿದಾಗ ಮುಂದಿನ ಹಲವು ಸಾಲಿನವರು ಘೊಳ್ಳನೆ ನಕ್ಕರು. ರಘುಪತಿ ಗುರಾಯಿಸಿದರು. ಸಭೆ ತಣ್ಣಗೇನೋ ಆಯಿತು. ಅದು ತಾತ್ಕಾಲಿಕವಾಗಷ್ಟೇ..ಆ ದಿನಗಳಲ್ಲಿ ವಿದ್ಯಾರ್ಥಿಗಳ ಬಳಿ ಟೂ-ವೀಲರ್ ಗಳಿರುತ್ತಿರಲಿಲ್ಲ. ವಿದ್ಯಾರ್ಥಿನಿಯರು ಸಾಮಾನ್ಯವಾಗಿ ಅವರ ಪೋಷಕರ ಜೊತೆಯೇ ಸಮಾರಂಭಗಳಿಗೆ ಬರಬೇಕಿತ್ತು. ರಾತ್ರಿ ೯-೯:೩೦ ರ ಬಸ್ ಹಿಡಿದು ಅವರ ಮನೆ ತಲುಪಬೇಕಿತ್ತು. ಮತ್ತೆ ಹಲವರು ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್ ವರೆಗೂ ನಡೆದು ಬಸ್ ಹತ್ತಬೇಕಿತ್ತು. ಕತ್ತಲು ಸಂಪೂರ್ಣ ಆವರಿಸಿತ್ತು. ಒಂದುರೀತಿಯ ಆತಂಕ ಹೆಡೆಯಾಡಲಾರಂಭಿಸಿತ್ತು. ಪುಣ್ಯಾತ್ಮ ರಘುಪತಿ ತಮ್ಮ ರಸರಹಿತ ಮಾತುಗಳಿಂದ ಬೋರ್ ಹೊಡೆಸಲಾರಂಭಿಸಿದರು. ಒಂದು ಹಂತದಲ್ಲಿ ಅವರು ಏನು ಹೇಳುತ್ತಿದ್ದಾರೆಂದು ಕೇಳಿಸದಾದಾಗ ಕೆರಳಿದ ರಘುಪತಿ ವೇದಿಕೆಯಿಂದ ಇಳಿದೇ ಬಿಟ್ಟರು. ’ನನಗೆ ನೀವು ಮಾಡಿದ ಅವಮಾನ…ಎಚ್ಚೆನ್ ಹೇಳಿದ್ರಲ್ಲಾ ಅಂತ ಬಂದೆ’ ಎಂದು ಕೂಗಾಡಿದರು. ದರದರನೇ ಕಾಲು ದೂಡುತ್ತಾ ಹೊರಟೇ ಬಿಟ್ಟರು. ’ಶಾಂತಮ್ ಚೇಸ್ಕೋಅಂಡಿ ಸಾರ್’ ಎಂದು ವಿದ್ಯಾರ್ಥಿಯೊಬ್ಬನ ಅಶರೀರ ವಾಣಿಯೊಂದು ಕೇಳಿದಾಗ, ರಘುಪತಿ ಮತ್ತಷ್ಟು ಕ್ರುದ್ಧರಾದರು. ಅವರನ್ನು ಸಮಾಧಾನಪಡಿಸಿ ಕಳಿಸಲಾಯಿತು. ಮಾರನೆಯ ದಿನ ’ಇಂಡಿಯನ್ ಎಕ್ಸ್ ಪ್ರೆಸ್’ ನ ಬೆಂಗಳೂರು ಆವೃತ್ತಿಯಲ್ಲಿ ’Minister Raghupati’s patience put to test by College folks’ ಎಂಬ ವರದಿ ನೋಡಿದ ಪ್ರಾಂಶುಪಾಲ ಎಚ್ಚೆಸೆಮ್ (ಎಚ್.ಎಸ್.ಮೂರ್ತಿ) ಹೌಹಾರಿದರು. ’ಮಿನಿಸ್ಟರ್ ಗಳಿಗೆ ಸಮಯ ಪ್ರಜ್ಞೆ ಬೇಡವಾ ಸರ್’ ಎಂಬ ನಮ್ಮಗಳ ಪ್ರಶ್ನೆಯನ್ನು ಅವರು ಅನುಮೋದಿಸಲೇ ಇಲ್ಲ. ಎಚ್.ಎಸ್.ಎಂ. ವಿದ್ಯಾರ್ಥಿ/ನಿ ಯರ ಮೇಲೆ ತಮ್ಮ ತೀವ್ರ ಅಸಮಾಧಾನ ಹೊರಹಾಕಿದರು.
ಅದಾದ ಎರಡು ದಿನಗಳಿಗೆ, ನಾನು, ಸಹಪಾಠಿಗಳಾದ ಸೋಮಶೇಖರ್, ವೆಂಕಟಕೃಷ್ಣ, ಪ್ರಭುಸ್ವಾಮಿ ಬಸವನಗುಡಿಯಲ್ಲಿ ’ಬೆಂಗಳೂರು ಸೈನ್ಸ್ ಫೋರಮ್’ ನ ಉಪನ್ಯಾಸವೊಂದಕ್ಕೆ ಹೋದೆವು. ಉಪನ್ಯಾಸ ಆರಂಭವಾಗಲು ಇನ್ನೂ ಸಮಯವಿತ್ತು. ಕಾಲೇಜಿನ ಹಾಸ್ಟೆಲ್ ನಲ್ಲಿ ಎಚ್ಚೆನ್ ಕಾಣಲು ಹೋದೆವು. ’ರಘುಪತಿ ವೃತ್ತಾಂತ’ ಮುಗಿದ ಕಥೆ ಎಂದು ಭಾವಿಸಿದ್ದೆವು. ಅದೇ ನಾವು ಮಾಡಿದ ತಪ್ಪು.
’ಏನ್ರಪ್ಪಾ..ಎಲ್ಲಾ ಕಡೆ ಹುಡುಗೀರ್ನ ಚುಡಾಯಿಸಿದರು ಅಂತ ಕೇಳ್ತೀವಿ…ನೀವು ಮಿನಿಸ್ಟರ್ಗಳನ್ನೇ ಚುಡಾಯಿಸಿಬಿಡ್ತಿರಲ್ಲಪ್ಪಾ’ ಎಂದರು. ತಮಾಶೆಯ ಮಾತಿರಬಹುದು ಎಂದೆಣೆಸಿ ನಕ್ಕೆವು.
’ಥೂ…ನಗ್ತೀರಲ್ರಪ್ಪಾ’ ಎಂದು ರೇಗಿದರು.
ಸ್ವಲ್ಪ ತಿಳಿಯಾದ ಮೇಲೆ ವಿವರಿಸಿದೆವು. ಬಹಳ ತಡವಾಗುತ್ತಿತ್ತು. ಮಂತ್ರಿ ಮಹೋದಯರು ಸ್ವಲ್ಪ ಬೇಗ ಮುಗಿಸಬಹುದಿತ್ತು ಎಂದು ಪರಿಸ್ಥಿತಿಯನ್ನು ಮನದಟ್ಟುಮಾಡಲು ಪ್ರಯತ್ನಿಸಿದೆವು. ಶಾಂತವಾದರು.
’ಈ ಮಿನಿಸ್ಟ್ರಗಳತ್ರಾ ಇದೊಂದು ಪ್ರಾಬ್ಲಂ ಕಣ್ರಪ್ಪಾ’ ಎಂದು ಗೊಣಗಿದರು. ಉಪನ್ಯಾಸ ಆರಂಭಗೊಳ್ಳುತ್ತಿತ್ತು. ಅವರೊಟ್ಟಿಗೆ ಸೈನ್ಸ್ ಫೋರಮ್ ನ ಮಹಡಿ ಹತ್ತಿದೆವು.
ನಂತರ ಕೆಲಸಕ್ಕಾಗಿ ಬೆಂಗಳೂರು ಬಿಟ್ಟೆ. ಬೆಂಗಳೂರಿಗೆ ಬಂದಾಗ ಸಮಯಮಾಡಿಕೊಂಡು ಬಸವನಗುಡಿ ಕಡೆ ಹೋಗುತ್ತಿದ್ದೆ. ಒಮ್ಮೆಮ್ಮೆ ಸಿಗುತ್ತಿದ್ದರು. ಅದೇ ಪ್ರೀತಿ, ಅದೇ ವಾತ್ಸಲ್ಯ. ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಇರುತ್ತಿರಲಿಲ್ಲ. ಶಸ್ತ್ರಚಿಕಿತ್ಸೆಗೊಳಗಾಗಿ ಒಮ್ಮೆ ಚಾಮರಾಜಪೇಟೆಯ ’ಜುಬಿಲೀ ನರ್ಸಿಂಗ್ ಹೋಮ್’ ಸೇರಿದ್ದರು. ಅವರನ್ನು ವಿಚಾರಿಸಲು ಒಂದಷ್ಟು ಮೇಷ್ಟ್ರುಗಳು ಬೆಳಗ್ಗೆಯೇ ಹೋದಾಗ ’ಕ್ಲಾಸ್ ಇಲ್ವಾಪ್ಪಾ…ಎಲ್ಲಾ ಹೀಗೆ ಬಂದ್ಬಿಟ್ಟಿದ್ದೀರಲ್ಲಾ..’ ಎಂದು ತಮ್ಮ ಕಳಕಳಿ ತೋರಿಸಿದ್ದರು. ’ಈ ಅವರ್ ನಮಗ್ಯಾರಿಗೂ ಕ್ಲಾಸ್ ಇರಲಿಲ್ಲ ಸರ್’ ಎಂದು ಮೇಷ್ಟ್ರುಗಳು ಖಚಿತಪಡಿಸಿದ ಮೇಲೆ ಎಚ್ಚೆನ್ ಸಮಾಧಾನಗೊಂಡರು. ’ಮತ್ತೆ ಯಾರೂ ಬರೋದ್ ಬೇಡ ಕಣ್ರಪ್ಪಾ…ಇನ್ನೊಂದೆರೆಡ್ ದಿನ…ನಾನೇ ಡಿಸ್ಚಾರ್ಜ್ ಆಗಿ ಬಂದು ಬಿಡುತ್ತೇನೆ. ನೀವು ಬಂದಿದ್ದು ಸಂತೋಷಾನೆ.’ ಎಂದು ಮೇಷ್ಟ್ರುಗಳನ್ನು ಬೀಳ್ಕೊಟ್ಟರು.
೨೦೦೨ ರ ಆಗಸ್ಟ್ ನಲ್ಲಿ ಎಮ್.ಎಸ್. ಮುಗಿಸಿದೆ. ಆವರನ್ನು ನೋಡಲು ಹೋದೆ. ಆರೋಗ್ಯ ಕ್ಷೀಣಿಸುತ್ತಿತ್ತು. ಎಮ್.ಎಸ್ ಮುಗಿಸಿದ್ದಕ್ಕೆ ಬಹಳ ಸಂತೋಷ ಪಟ್ಟರು. ’ಹೊಸೂರು ಸ್ಕೂಲ್ನಲ್ಲಿ, ಕನ್ನಡ ಮೀಡಿಯಮ್ ನಲ್ಲಿ ಓದದಿದ್ದರೆ ಎಷ್ಟೋ ವಿಚಾರ ಗೊತ್ತಾಗ್ತಾನೇ ಇರಲಿಲ್ಲ ಸರ್’ ಎಂದೆ. ’ಹೌದಪ್ಪಾ..ಮಾತೃಭಾಷೆ ಅಂತ ಅದಕ್ಕೆ ಹೇಳೋದು…ಹಳ್ಳಿ ಕಲಿಸೋ ಜೀವನ ಯಾವ ಪಟ್ಟಣಾನೂ ಕಲಿಸಲ್ಲ’ ಎಂಬ ಕಹಿಸತ್ಯ ಅರುಹಿದರು. ’ಓದಿದ್ದೆಲ್ಲಾ ಮುಗೀತಲ್ಲಾ…ಮದುವೆ ಮಾಡ್ಕೋಳ್ಳಪ್ಪಾ…ರಘುಪತಿ ತರ ನಿಧಾನ ಮಾಡಬೇಡ’ ಎಂದು ನಕ್ಕರು. ’ಅವರಿರ್ಲಿ..ನೀವು ಮದುವೇನೇ ಆಗಲಿಲ್ಲವಲ್ಲ ಸರ್..’ ಎಂದೆ. ’ನಮ್ಮ ಬಗ್ಗೆ ನಾವೇ ಹೇಳ್ಕೊಬಾರ್ದಪ್ಪ’ ಎನ್ನುತ್ತಲೇ ’ಮದುವೆ ಆಗೋದು ಮರೆತೇ ಹೋಯಿತು…ಮದುವೆ ಆಗಬೇಕು ಅಂತ ಅನಿಸಲೇ ಇಲ್ಲ’ ಎಂದು ನಿರ್ಭಾವುಕರಾಗಿ ನುಡಿದರು. ಅದು ಅವರ ವೈಯಕ್ತಿಕ ವಿಚಾರ..ಹೆಚ್ಚು ಕೇಳುವುದು ಬೇಡ ಎಂದು ಸುಮ್ಮನಾದೆ. ’I am a confirmed bachelor, with a master degree’ ಎಂದು ಅವರೊಮ್ಮೆ ಹೇಳಿದ್ದರು.
ಹೊಸೂರಿನಲ್ಲಿ ಪ್ರೌಢಶಾಲೆಯಿಲ್ಲದ ೩೦ರ ದಶಕದಲ್ಲಿ ಬೆಂಗಳೂರಿನವರೆಗೂ ೬೦ ಮೈಲಿ ನಡೆದೇ ಹೋದ ಎಚ್ಚೆನ್, ನ್ಯಾಷನಲ್ ಶಾಲೆ ಸೇರಿದರು. ಅದೇ ಅವರ ಯೋಗಭೂಮಿ-ಕರ್ಮಭೂಮಿಯಾಯಿತು. ಅಂದಿನ ದಿನಗಳಲ್ಲಿ ಕಲಿಕೆಗಾಗಿ ಅವರು ತೋರಿದ ಇಚ್ಛಾಶಕ್ತಿ ಮೂಕವಾಗಿಸುತ್ತದೆ. ಗಾಂಧಿವಾದಿಯಾಗಿ, ವಿಚಾರವಾದಿಯಾಗಿಯೇ ಉಳಿದರು. ಅಲ್ಲಿಯೇ ಹೈಸ್ಕೂಲ್, ಕಾಲೇಜ್ ಮುಗಿಸಿದ ಎಚ್ಚೆನ್, ಸೆಂಟ್ರಲ್ ಕಾಲೇಜಿನಲ್ಲಿ ಎಮ್.ಎಸ್.ಸಿ ಮುಗಿಸಿದರು. ತಾವುಕಲಿತ ಕಾಲೇಜಿನಲ್ಲೇ ಅಧ್ಯಾಪಕರಾಗಿ, ಹತ್ತು ವರ್ಷದ ನಂತರ ಅಮೆರಿಕದಲ್ಲಿ ಪಿ.ಎಚ್.ಡಿ ಪಡೆದು ವಾಪಸಾದರು. ಕಾಲೇಜಿನ ಪ್ರಾಂಶುಪಾಲರಾದರು. ಬೆಂಗಳೂರು ವಿ.ವಿ ನಿಲಯದ ಉಪಕುಲಪತಿಯೂ ಆದರು. ಮೂಢನಂಬಿಕೆ, ಪವಾಡ, ಕಂದಾಚಾರಗಳನ್ನು ಬಯಲಿಗೆಳೆಯುವ ’ಸತ್ಯಶೋಧನ ಸಮಿತಿ’ಯನ್ನು ಹುಟ್ಟುಹಾಕಿದರು. ’ಸತ್ಯ’ಸಾಯಿಬಾಬ, ಪಾಂಡವಪುರದ ಸಾಯಿಕೃಷ್ಣ ತರದವರಿಗೆ ಸಿಂಹಸ್ವಪ್ನವಾದರು. ಸಾಯಿಬಾಬ ಈ ಸಮಿತಿಯವರನ್ನು ಭೇಟಿಯಾಗಲು ಒಪ್ಪಲೇ ಇಲ್ಲ. ಬೆಂಗಳೂರು ವಿ.ವಿಯಲ್ಲೇ ಇದ್ದ ಕೆಲವು ಕಂದಾಚಾರಗಳ ವಿರುದ್ಧ ಸೊಲ್ಲೆತ್ತಿದರು. ಆದರೆ ಹೆಚ್ಚೇನೂ ಮಾಡಲಾಗಲಿಲ್ಲ. ೧೯೭೭ರಲ್ಲಿ ಎಚ್ಚೆನ್ ಉಪಕುಲಪತಿ ಹುದ್ದೆಯಿಂದ ಹೊರನಡೆಯಬೇಕಾಯಿತು.
’ಮಳೆ ತರಿಸುತ್ತೇನೆ’ ಎಂದ ಶಿವಬಾಲಯೋಗಿ ಸ್ವಾಮಿಯ ವಿರುದ್ಧದ ಎಚ್ಚೆನ್ ಹೋರಾಟ ರಂಜಕವೂ, ರೋಚಕವೂ ಆಗಿದೆ. ಕೊನೆಗೂ ತಿಪ್ಪಗೊಂಡನಹಳ್ಳಿಯಲ್ಲಿ ಮಳೆಯಾಗಲೇ ಇಲ್ಲ. ಕೆರೆಯೂ ತುಂಬಲಿಲ್ಲ.
’ಪ್ರಶ್ನಿಸದೇ ಒಪ್ಪಬೇಡಿ’ ಎಂಬ ಧ್ಯೇಯವಾಕ್ಯ ಬೋಧಿಸಿದ ಎಚ್ಚೆನ್ ಕೂಡಾ ಪ್ರಶ್ನಾತೀತರೇನಲ್ಲ. ವಿಚಾರವಾದ, ಸಾಮಾಜಿಕ ಹೋರಾಟಕ್ಕೆ ಎಚ್ಚೆನ್ ಮತ್ತಷ್ಟು ವಿಶಾಲವಾದ ಆಯಾಮ ಒದಗಿಸಬಹುದಾಗಿತ್ತು. ’ಬೆಕ್ಕು ಅಡ್ಡಬಂದರೆ ಅಪಶಕುನ’, ಅಥವಾ ’ಮದುವೆಯ ಸಂದರ್ಭದಲ್ಲಿ ಹೆಣ್ಣು-ಗಂಡು ನಡುವೆ ಇಳಿಬಿಡುವ ಅಂತರ್ಪಟ’ದಂತಹ ಸಂಪ್ರದಾಯಗಳನ್ನು ಕುಟುಕುವತ್ತಲೇ ಎಚ್ಚೆನ್ ಮಗ್ನರಾಗಿಬಿಡುತ್ತಿದ್ದರು. ಚರ್ವಿತ-ಚರ್ವಣ ಎಂಬಂತೆ ಮಾತನಾಡುತ್ತಿದ್ದರು. ಎಚ್ಚೆನ್ ಪ್ರಶ್ನಿಸುವುದು ಇನ್ನೂ ಬಹಳಿತ್ತು. ಅವರ ಪಾಲ್ಗೊಳ್ಳಬೇಕಾಗಿದ್ದ/ಬಹುದಾಗಿದ್ದ ಹಲವು ಹೋರಾಟಗಳಿದ್ದವು. ಎಚ್ಚೆನ್ ಮೇಲೆ ಗೌರವಿರಿಸಿಯೇ ಕೆಲವು ಮಾತುಗಳನ್ನು ಹೇಳಬೇಕಾಗುತ್ತದೆ. ಅವರದೇ ಸಂಸ್ಥೆಯ ಹಲವರ ಬಗ್ಗೆ ಅವರ ವರ್ತನೆ ಆಕ್ಷೇಪಾರ್ಹವಾಗಿರುತ್ತಿತ್ತು. ’ಪ್ರಶ್ನಿಸದೇ ಒಪ್ಪದಿರಿ’ ಎಂದ, ’ಅಂಧಾನುಕರಣೆ ಬೇಡ’ ಎಂದ ಎಚ್ಚೆನ್, ಕೆಲವರನ್ನು, ಕೆಲವೊಂದನ್ನು ಪ್ರಶ್ನಿಸಲಿಲ್ಲ. ಅವರದೇ ಸಂಸ್ಥೆಯ ದೂರದೂರುಗಳ ಕಾಲೇಜಿನಲ್ಲಿನ ವಿದ್ಯಾರ್ಥಿಗಳ/ಸ್ಥಳೀಯ ಪುಢಾರಿಗಳ ದುಂಡಾವರ್ತನೆಯ ಬಗ್ಗೆ ಎಚ್ಚೆನ್ ಮೌನಿಯಾಗಿದ್ದೇ ಹೆಚ್ಚು. ’ಸರ್ಕಾರಿ ಸಂತ’ ಎಂಬ ಹೀಗಳಿಕೆಗೂ ಒಳಗಾಗುತ್ತಿದ್ದರು.
ಅದನ್ನೆಲ್ಲಾ ಮೀರಿ ನೋಡಿದಾಗ, ಒಳ್ಳೆಯ ಮನುಷ್ಯರಾಗಿದ್ದರು. ಅಪಾರ ಪ್ರೀತಿ, ಆತ್ಮೀಯತೆಯ ಎಚ್ಚೆನ್, ಜೀವನವನ್ನು ಬಂದಂತೆ ಸ್ವೀಕರಿಸಿದರು. ಯಾವುದನ್ನೂ ತಿರಸ್ಕರಿಸಲಿಲ್ಲ. ಕಡುಬಡತನದ ಕುಟುಂಬದಲ್ಲಿ ಹುಟ್ಟಿ , ಬರಿಗಾಲಲ್ಲಿ ಬೆಂಗಳೂರಿಗೆ ನಡೆದುಹೋಗಿ ವಿದ್ಯೆ ಕಲಿತು ದಿಟ್ಟತನದಿಂದ ಜೀವನ ಪಯಣದಲ್ಲಿ ಈಸಿದ ಹಳ್ಳಿಯ ಹೈದನೊಬ್ಬನ, ಆ ಇಚ್ಛಾಶಕ್ತಿ ಅಚ್ಚರಿಗೊಳಿಸುತ್ತದೆ. ಈಗಲೂ ಆಗಾಗ ಬಸವನಗುಡಿಯ ಕಾಲೇಜಿಗೆ ಹೋಗುತ್ತೇನೆ. ’ಓ ಬಾರಪ್ಪ..ಎನ್ಸಮಾಚಾರ’ ಎನ್ನುತ್ತಾ ಹೆಗಲಮೇಲೆ ಕೈಹಾಕಿ ದೂಡಿಕೊಂಡೇ ಎಳೆದೊಯ್ಯುತ್ತಿದ್ದ ಎಚ್ಚೆನ್ ಈಗ ಅಲ್ಲಿಲ್ಲ ಎಂದು ಮನದಟ್ಟಾದಾಗ ವಿಷಾದ ಮೂಡುತ್ತದೆ.
ಮೂಲತಃ ಮೈಸೂರಿಗ. ಕೆ.ಆರ್.ನಗರ, ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸೂರು, ಗೌರೀಬಿದನೂರು, ನಂತರ ಬೆಂಗಳೂರು, ಪಿಲಾನಿಯ ಬಿಟ್ಸ್ ನಲ್ಲಿ ವಿದ್ಯಾಭ್ಯಾಸ. ಸಾಫ಼್ಟ್ ವೇರ್ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ-ಕ್ರಿಕೆಟ್-ಸಿನಿಮಾ-ರಾಜಕೀಯ ಬಹಳ ಪ್ರೀತಿಯ ವಿಚಾರಗಳು. ತಕ್ಕಮಟ್ಟಿಗೆ ಈ ವಿಷಯಗಳಲ್ಲಿ ಓದು..ಆಗಾಗ ಬರೆಯುವ ಹವ್ಯಾಸ.
ಪ್ರಿಯ ರಾಘವನ ಚಕ್ರವರ್ತಿ….
ಎಚ್ಚೆನ್ ರ ಪ್ರೀತಿ, ಕಾಳಜಿ ಹಾಗು ಅವರೊಂದಿಗಿನ ಆತ್ಮೀಯತೆಯ ವಿಚಾರಗಳನ್ನು ಮತ್ತು ನೆನಪುಗಳನ್ನು ನಮ್ಮೊಂದಿಗೂ ಹಂಚಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು.
ಬಸವರಾಜ ಬೂದಿಹಾಳ. ಗೋವಾ
Thanks Basavaraj…
Dear Raghavan Chakravarty
I felt so happy after reading your article. Wonderful writing. Many thanks 😊🌹.
ನಮಸ್ಕಾರ ಸರ್ ನಾನು ಆನಂದ ಎಂ..ಎಚ್.ಎನ್ ಅವರ ಬಗ್ಗೆ ಓದಿದ್ದೆ ಸರ್ , ಅವರನ್ನು ಹತ್ತಿರದಿಂದ ಕಂಡ ನಿಮ್ಮ ಅನುಭವ ಕೇಳಿ,ಧನ್ಯನಾದೆ ಸರ್.ಧನ್ಯವಾದಗಳು
Its very beautiful sir….i was a student of that institute and presently working in this institute as a teacher such a great person i always salute to Dr H N