ಕನ್ನಡ ಸಿನಿಮಾಗಳಲ್ಲಿ ಗಝಲ್

ರಾಜ್‌ಕುಮಾರ್ ಅವರಿಗೆ ಗಜಲ್ ಸಂಗೀತ ಪ್ರಕಾರದ ಮೇಲಿದ್ದ ಹುಚ್ಚಿನಿಂದಾಗಿ ಪಾಕಿಸ್ತಾನಿ ಗಾಯಕರು ರಾಗ ಹಾಕಿ ಹಾಡಿದ್ದ ಹಲವು ಪ್ರಸಿದ್ದ ಗಜಲ್ ಗಳನ್ನು ಕನ್ನಡದ ಚಲನಚಿತ್ರಗಳಲ್ಲಿ ಅಳವಡಿಸಿಕೊಳ್ಳುವಂತಾಯಿತು. ಈ ಕುರಿತು ಬೆಳಕು ಚೆಲ್ಲುವ ನಾಗರಾಜ್ ಬಿ. ಎಸ್ ಅವರ ಬರಹ .
ಭಾರತದ  ಸಿನಿಮಾ ಸಂಗೀತ ಒಂದು ವಿಶಿಷ್ಟ ಸಂಗೀತ ಪ್ರಕಾರ. ಅದು ಯಾವುದೇ genre ಗೂ ಒಗ್ಗಿಕೊಳ್ಳದಂತಹ ಸಂಗೀತ ಪ್ರಕಾರ. ಅದರಲ್ಲಿ ಎಲ್ಲವೂ ಇದೆ. ಶಾಸ್ತ್ರೀಯ — ಕರ್ನಾಟಕ/ಹಿಂದುಸ್ಥಾನಿ — ಜನಪದ, ಪಾಶ್ಚಿಮಾತ್ಯ – ಶಾಸ್ತ್ರೀಯ/ಪಾಪ್ … ಹೀಗೆ ಹಲವು ಪ್ರಕಾರಗಳ  ಸಂಗೀತವನ್ನು ಒಳಗೊಂಡ ತನ್ನದೇ ಆದ ಒಂದು ಸಂಗೀತ ಪ್ರಕಾರ.
ಬಾಲಿವುಡ್, ತೆಲುಗು, ತಮಿಳು, ಮಲಯಾಳ, ಬಂಗಾಳಿ ಸಿನಿಮಾ ಸಂಗೀತಗಳಂತೆಯೇ ಕನ್ನಡ ಸಿನಿಮಾ ರಂಗವೂಭಾರತದ, ಯಾಕೆ ವಿಶ್ವದ, ಹಲವು ಸಂಗೀತ ಪ್ರಕಾರಗಳಿಂದ ತನ್ನ ಸಂಗೀತವನ್ನು ಸಮೃದ್ಧಿಗೊಳಿಸಿಕೊಂಡಿರುವುದು ಎಲ್ಲರೂ ಬಲ್ಲ ವಿಷಯವೇ.

 

ಗಝಲ್ ಮೂಲತಃ ಪರ್ಷಿಯಾ (ಇಂದಿನ ಇರಾನ್) ದಿಂದ ಬಂದದ್ದು. ಪ್ರೇಮ, ವಿರಹಗಳ ಬಗ್ಗೆ ಹೆಚ್ಚು ಸಂಬಂಧ ಉಳ್ಳ ಒಂದು ಕಾವ್ಯ ಪ್ರಕಾರ. ಒಂದು ರೀತಿ ನಮ್ಮ ಭಾವ ಗೀತೆಗಳ ಹಾಗೆ.  ಕನ್ನಡ ಸಿನಿಮಾ ಸಂಗೀತಗಾರರು ಬೇರೆ ಪ್ರಕಾರಗಳಂತೆ ಗಝಲ್ ಅನ್ನು ಕೂಡ ಅಲ್ಲಲ್ಲಿ ಬಳಸಿರುವುದು ಕಾಣುತ್ತೇವೆ. ಗಝಲ್ ಸಾಮಾನ್ಯವಾಗಿ ಐದರಿಂದ ಹದಿನೈದು ದ್ವಿಪದಿಗಳಿಂದ (ಶೇರ್) ಕೂಡಿರುತ್ತವೆ.ಅವುಗಳು ಸ್ವತಂತ್ರವೂ ಹೌದು, ಒಂದಕ್ಕೊಂದು ಸಂಬಂಧವೂ ಹೊಂದಿರಬಹುದು.
ಗಝಲ್ ನ ಪ್ರಕಾರವನ್ನು  ಕನ್ನಡ ಸಿನಿಮಾಗಳಲ್ಲಿ ಪರಿಚಯ ಮಾಡಿದ ಹೆಗ್ಗಳಿಕೆ ಡಾ ರಾಜಕುಮಾರ್ ಗೆ ಸಲ್ಲಬೇಕು. ಅವರಿಗೆ ಗಝಲ್ ಎಂದರೆ ಎಲ್ಲಿಲ್ಲದ ಹುಚ್ಚು. ಅವರು ದೂರದ  ಊರುಗಳಿಗೆ  ಪ್ರಯಾಣ ಮಾಡುವಾಗ ಕಾರಿನ ಆಡಿಯೋ ಸಿಸ್ಟಮ್ ನಲ್ಲಿ ಸದಾ ಗಝಲ್ಗಳನ್ನ ಕೇಳುತಿದ್ದರಂತೆ. ಅದರಲ್ಲೂ ಪಾಕಿಸ್ತಾನದ ಮೆಹದಿ ಹಸ್ಸನ್ ಹಾಗು ಘುಲಾಮ್ ಅಲಿ ಅವರ ಹಾಡುಗಳ ಬಗ್ಗೆ ಅಪಾರವಾದ ಒಲವು. ಎಲ್ಲೊ ಓದಿದ/ಕೇಳಿದ ನೆನಪು. ಅವರಿಗೆ  ತಮ್ಮ ಇಷ್ಟವಾದ ಗಝಲ್ ಗಾಯಕರ ಹಾಡುಗಳ ಟ್ಯೂನ್ ಗಳಲ್ಲಿ ತಾವು ಕೂಡ ಯಾವುದಾದರೂ ಒಂದನ್ನ ಹಾಡಬೇಕೆಂಬ ಹೆಬ್ಬಾಸೆಯಿಂದ ತಮ್ಮ ಸಿನಿಮಾಗಳ ಸಂಗೀತ ನಿರ್ದೇಶಕರನ್ನು ಪದೇ ಪದೇ ಕೇಳುತಿದ್ದರಂತೆ. ಅದರ ಸ್ವಾಗತಾರ್ಹ ಪರಿಣಾಮ ಈ ಮರೆಯಲಾಗದ ಹಾಡುಗಳು.

 

೧೯೮೩ರಲ್ಲಿ ತೆರೆ ಕಂಡ ಕವಿರತ್ನ ಕಾಳಿದಾಸ ಸಿನಿಮಾದ  ‘ಸದಾ ಕಣ್ಣಲೇ ಪ್ರಣಯದ ಕವಿತೆ ಹಾಡುವೆ’  ಈ ಹಾಡು ಮೆಹದಿ ಹಸ್ಸನ್ ರ ಅತ್ಯದ್ಭುತ ಗಝಲ್ಗಳಲ್ಲಿ ಒಂದಾದ ‘ನವಾಜಿಶ್ ಕರಮ್ ಶುಕ್ರಿಯ ಮೆಹೆರ್ಬಾನಿ’  ದ  ನಕಲು.

ಹಾಗೆ ೧೯೮೨ರಲ್ಲಿ ತೆರೆಗೆ ಬಂದ ಹೊಸ ಬೆಳಕು ಚಿತ್ರದ ಹಾಡು ‘ಕಣ್ಣೀರ ಧಾರೆ ಇದೇಕೆ ಇದೇಕೇ.’ ಜಗಜಿತ್ ಸಿಂಗ್ ರ ‘ಕೋಇ ಪಾಸ್ ಆಯಾ ಸವೆರೆ ಸವೆರೆ’ ಗಝಲ್ ನ ನಕಲು. ಈ ಹಾಡು ಹಿಂದೂಸ್ತಾನಿ ಶೈಲಿಯ ರಾಗ ಲಲಿತ್ ಮೇಲೆ ಆಧಾರಿತ ವಾಗಿದೆ. ಇದೇ ರಾಗದಲ್ಲೇ ಇರುವ ಮತ್ತೊಂದು ಹಾಡು ಹಿಂದಿ ಸಿನಿಮಾ ಚಂದ್ರಕಾಂತ ದಲ್ಲಿಯೂ ಇದೆ (ಏಕ್  ಶಹನ್ ಶಾನೆ ಬನವಾಕೆ  ಹಸೀನ್ ತಾಜ್ ಮಹಲ್).

 

ರಾಜಕುಮಾರ ಮತ್ತೊಂದು ಅತ್ಯಂತ ಜನಪ್ರಿಯ ಗೀತೆಗಳಲ್ಲಿ ಒಂದು ಎನಿಸಿಕೊಂಡ ಈ ಶೃಂಗಾರ ರಸದ ಹಾಡು — ಗೆಳತಿ ಬಾರದು ಇಂಥ ಸಮಯ (ಎರಡು ನಕ್ಷತ್ರಗಳು 1983) — ಪ್ರಖ್ಯಾತ ಪಾಕಿಸ್ತಾನಿ ಗಾಯಕರಾದ ಘುಲಾಮ್ ಅಲಿ ರವರ ಗಝಲ್ ‘ದಿಲ್ ಮೆ ಏಕ್ ಲೆಹರ್ ಸಿ ಉಠಿ ಹೈ ಅಭಿ’ ದ ಕನ್ನಡ ಅವತರಿಣಿಕೆ.

ಈ ಹಾಡುಗಳ ಟ್ಯೂನ್ ಗಳು ನಕಲಾದರೂ ಕನ್ನಡ ಸಿನಿಮಾದ ಮಟ್ಟಿಗೆ ಅವು ಮೈಲಿಗಲ್ಲುಗಳು, ಕ್ಲಾಸಿಕ್ ಅನ್ನಿಸಿಕೊಂಡಂತಹವು.ನಕಲು ಅನ್ನುವುದಕ್ಕಿಂತ re-creation ಅನ್ನಬಹುದೇನೋ.ಇವೆಲ್ಲವೂ ಮೂಲ ಗಝಲ್ಗಳ ರಾಗದಲ್ಲಿವೆಯಾದರೂ ಅವು ಆ ಸಿನಿಮಾಗಳಲ್ಲಿನ ಸಂದರ್ಭಕ್ಕೆ ತಕ್ಕಂತೆ ಅವುಗಳ ಭಾವವಿದೆ.

 

ಈ ಹಾಡುಗಳೆಲ್ಲವೂ ೮೦ರ ದಶಕದ್ದವಾದರೆ, ೧೯೯೯ರಲ್ಲಿ ತೆರೆಕಂಡ ಸ್ಪರ್ಶ ಚಿತ್ರದಲ್ಲಿನ, ಹಂಸಲೇಖರ ಸಂಗೀತ ಸಂಯೋಜನೆಯಲ್ಲಿ ರಚಿತವಾದ ಹಾಡು ‘ಚಂದಕಿಂತ ಚಂದ ನೀನೇ ಸುಂದರ’ ಕೂಡ ಗಝಲ್ ಶೈಲಿಯಲ್ಲೇ ಇದೆ. ಇದನ್ನು ಹಾಡಿದವರು ಖ್ಯಾತ ಗಝಲ್ ಗಾಯಕ ಪಂಕಜ್ ಉಧಾಸ್.

ಇವೆಲ್ಲವನ್ನು ಬಿಟ್ಟರೆ ಗಝಲ್ ಶೈಲಿಯಲ್ಲಿ ರಚಿತವಾದ ಕನ್ನಡ ಸಿನಿಮಾಗಳ ಹಾಡುಗಳು ಬೆರಳೆಣಿಕೆಯಲ್ಲಿ ಮಾತ್ರ. ಆದರೆ ಸಿನಿಮಾ ಸಂಗೀತದ ಹೊರಗೆ ಕನ್ನಡದಲ್ಲಿ ಸಾಕಷ್ಟು ಗಝಲ್ ಪ್ರಯೋಗಗಳು ಕಾವ್ಯ ರಚನೆಯಲ್ಲಾಗಲಿ ಸಂಗೀತದ ಮಟ್ಟಿಗಾಗಲೀ ನಡೆದಿವೆ.
ಇತ್ತೀಚಿಗೆ (೨೦೧೮) ತೆರೆ ಕಂಡ ವಿನಯ್ ರಾಜಕುಮಾರ್ ನಟಿಸಿರುವ ಚಿತ್ರ ಅನಂತು vs ನುಸ್ರತ್ ದಲ್ಲಿ ಅಮೀರ್ ಕುಸ್ರೋ ಬರೆದ ಪ್ರಸಿದ್ಧ ಗಝಲ್ ‘ಜಿಹಾಲ್-ಎ-ಮಿಸ್ಕೀನ್  ಮಕುನ್  ತಗಾಫುಲ್’ ಅನ್ನು ಬಳಸಿಕೊಳ್ಳಲಾಗಿದೆ. ಇದು ಸೂಫಿ ಕವಿ ಅಮೀರ್ ಖುಸ್ರೊ (೧೨೫೩ – ೧೩೨೫) ಫ಼ಾರ್ಸಿ ಮತ್ತು ಬ್ರಜ್ ಮಿಶ್ರಿತ ಭಾಷೆಗಳಲ್ಲಿ ಬರೆದ ಸುಂದರವಾದ ಕವಿತೆ.

ಕಳೆದ ಒಂದೆರಡು ದಶಕಗಳಲ್ಲಿ ಗಝಲ್ ಪ್ರಕಾರದ ಹಾಡುಗಳು ಕನ್ನಡ ಸಿನಿಮಾಗಳಲ್ಲಿ ವಿರಳವಾಗಿವೆ. ಆದರೆ ಬೇರೆ ಪ್ರಕಾರಗಳಲ್ಲಿ  — ಉದಾಹರಣೆಗೆ jazz – ಪ್ರಯೋಗಗಳು ಅಲ್ಲಲ್ಲಿ ನಡೆಯುತ್ತಿವೆ.

 

3 comments to “ಕನ್ನಡ ಸಿನಿಮಾಗಳಲ್ಲಿ ಗಝಲ್”
  1. ಆಸಕ್ತಿದಾಯಕ ಮಾಹಿತಿ. ಅನ್ಯ ಸಂಗೀತ ಕ್ಷೇತ್ರದಿಂದ ಕನ್ನಡ ಚಿತ್ರರಂಗ ಕಂಡ ಪಡೆದಿರುವುದೇ ಅಧಿಕ

    • Very nice article. Made very interesting reading. I did not know this angle of Dr.Rajkumar. Looking forward to hearing
      the ghazals and their Kannada re-creations
      at leisure. Thank you so much, Nagaraj.

Leave a Reply to Srinivas Cancel reply