ದೇಶದ ವಿದ್ಯುಚ್ಛಕ್ತಿಯ ಸ್ವಾವಲಂಬನೆಗೆ ಪೆಟ್ಟು

ವಿದ್ಯುಚ್ಛಕ್ತಿ ಮಸೂದೆಯ ತಿದ್ದುಪಡಿಯು ಸಂವಿಧಾನದಲ್ಲಿ ವಿದ್ಯುಚ್ಛಕ್ತಿಗೆ ನೀಡಿರುವ ಸಮವರ್ತಿ ಪಟ್ಟಿಯ ಸ್ಥಾನವನ್ನು ಅಳಿಸಿ ಹಾಕಿ ರಾಜ್ಯಗಳ ಮೇಲಿನ ಭಾರವನ್ನು ಹೆಚ್ಚಿಸಲಿದೆ.

 

ಮೂಲ: Unsplash. Neelkamal Deka

ಕೊರೊನ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಹೊರಡಿಸಲಾಗಿರುವ ಆರ್ಥಿಕತೆ ಉತ್ತೇಜನ ಪ್ಯಾಕೇಜ್‍ನ ಭಾಗವಾಗಿ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ವಿದ್ಯುಚ್ಛಕ್ತಿ ಸುಂಕ ನೀತಿಯನ್ನು ಪುನಃರೂಪಿಸುವುದಾಗಿ ಘೋಷಿಸಿದ್ದಾರೆ. ಇದು ೨೦೦೩ರ ವಿದ್ಯುಚ್ಛಕ್ತಿ ಕಾಯಿದೆಯನ್ನು ಸಮಗ್ರವಾಗಿ ತಿದ್ದುಪಡಿಗೊಳಿಸಬೇಕೆಂದು ಇತ್ತೀಚಿಗೆ ಮಾಡಲಾಗಿರುವ ಪ್ರಸ್ತಾಪಗಳ ಒಂದು ಭಾಗವೇ ಆಗಿದೆ. ಒಟ್ಟು ಸೇರಿಸಿ ಇವು ವಿದ್ಯುಚ್ಛಕ್ತಿಗೆ ಸಂವಿಧಾನ ನೀಡಿರುವ ಸಮವರ್ತಿ ಸ್ಥಾನಮಾನವನ್ನು ಅಳಿಸಿಹಾಕುತ್ತವೆ. ಇವನ್ನು ಕಾರ್ಯರೂಪಕ್ಕೆ ತಂದರೆ ಇವು ವಿದ್ಯುಚ್ಛಕ್ತಿಯಂತಹ ಮೂಲಭೂತ ಅಗತ್ಯವನ್ನು ಪೂರೈಸುವ ಉದ್ಯಮವೊಂದರ ಮೇಲೆ ರಾಜ್ಯಗಳ ನಿಯಂತ್ರಣವನ್ನು ದುರ್ಬಲವಾಗಿಸುತ್ತವೆಯಷ್ಟೇ ಅಲ್ಲದೇ, ವಿತರಣಾ ಕಂಪನಿಗಳ (DISCOM) ಉಸಿರುಕಟ್ಟಿಸುವಂತಹ ಹರಿತ ಆಯುಧಗಳನ್ನು ಕೇಂದ್ರಕ್ಕೆ ಒದಗಿಸಿ, ದೇಶದ ವಿದ್ಯುಚ್ಛಕ್ತಿ ಸ್ವಾವಲಂಬನೆಗೆ ಧಕ್ಕೆಯಾಗುತ್ತವೆ.

DISCOM ತೊಂದರೆಗಳು

ಈ ಪ್ರಸ್ತಾಪಗಳನ್ನು ನಿರಂತರವಾಗಿ ಈ ವಲಯವನ್ನು ಕೇಂದ್ರೀಕರಿಸುತ್ತಿರುವ ಹಿನ್ನಲೆಯಲ್ಲಿ ಗಮನಿಸಬೇಕಿದೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಈ ಕೇಂದ್ರೀಕರಣದ ಪ್ರಮುಖ ಪರಿಣಾಮವೆಂದರೆ ವಿದ್ಯುತ್ ಖರೀದಿಯ ವೆಚ್ಚವನ್ನು ರಾಜ್ಯ ಡಿಸ್ಕಾಮ್‍ಗಳ ಒಟ್ಟು ವೆಚ್ಚದ ಎಂಬತ್ತು ಪ್ರತಿಶತದಷ್ಟು ಹೆಚ್ಚಾಗಿಸಿರುವುದು. ೧೯೯೦ರ ದಶಕದಲ್ಲಿ ವಿಶ್ವಬ್ಯಾಂಕ್‍ನ ಇಚ್ಛೆಗನುಸಾರವಾಗಿ ವಿದ್ಯುಚ್ಛಕ್ತಿ ಮಂತ್ರಾಲಯವು ಜಾರಿಗೊಳಿಸಿದ ಎರಡು-ಭಾಗಗಳ ಸುಂಕ ನೀತಿಯು ಡಿಸ್ಕಾಮ್ ಸಂಕಟಗಳ ಕೇಂದ್ರಭಾಗದಲ್ಲಿದೆ. ವಿದ್ಯುತ್ ಉತ್ಪಾದನೆಗೆ ಹೆಚ್ಚು ಹೆಚ್ಚು ಖಾಸಗಿ ಉತ್ಪಾದಕರು ಮುಂದೆ ಬರುವ ಜೊತೆಯಲ್ಲಿ, ಡಿಸ್ಕಾಮ್‍ಗಳು ದೀರ್ಘಾವದಿ ವಿದ್ಯುತ್ ಖರೀದಿ ಒಪ್ಪಂದಗಳನ್ನು (Power purchase agreement – PPA, ಪಿಪಿಎ) ಸಹಿ ಮಾಡಬೇಕಾಯಿತು. ಈ ಮುಖಾಂತರ ರಾಜ್ಯವು ವಿದ್ಯುತ್ ಅನ್ನು ತೆಗೆದುಕೊಳ್ಳುತ್ತಿದೆಯೋ ಇಲ್ಲವೋ ಒಂದು ನಿಗದಿತ ಬೆಲೆಯನ್ನು ಉತ್ಪಾದಕರಿಗೆ ನೀಡುತ್ತಿರಲು ಹಾಗೂ ವಿದ್ಯುತ್ ತೆಗೆದುಕೊಳ್ಳುತ್ತಿರುವಾಗ ಇಂಧನಕ್ಕಾಗಿ ಬದಲಾಗುತ್ತಿರುವ ದರವನ್ನು ಭರಿಸುವ ವ್ಯವಸ್ಥೆಗೆ ಬದ್ಧವಾಯಿತು.

ಡಿಸ್ಕಾಮ್‍ಗಳು ಸಹಿ ಮಾಡಿದ PPAಗಳು ಕೇಂದ್ರ ವಿದ್ಯುತ್ ಪ್ರಾಧಿಕಾರ (Central Electricity Authority – CEA, ಸಿಇಎ) ಹೆಚ್ಚಾಗಿ ಅಂದಾಜಿಸಿದ ವಿದ್ಯುಚ್ಛಕ್ತಿಯ ಬೇಡಿಕೆಯನ್ನಾಧರಿಸಿವೆ. ೧೮ನೇ ವಿದುಚ್ಛಕ್ತಿ ಸಮೀಕ್ಷೆ (Electric Power Survey – EPS, ಇಪಿಎಸ್) ೨೦೧೯-೨೦೨೦ರ ಗರಿಷ್ಠ ವಿದ್ಯುತ್ ಬೇಡಿಕೆಯನ್ನು ೭೦ ಗಿಗಾ ವ್ಯಾಟ್‍ಗಳಷ್ಟು ಹೆಚ್ಚಾಗಿ ಅಂದಾಜಿಸಿತು. ೨೦೧೭ರಲ್ಲಿ ಪ್ರಕಟವಾದ ೧೯ನೇ ಇಪಿಎಸ್, ೨೫ ಗಿಗಾವ್ಯಾಟ್‍ಗಳಷ್ಟು ಹೆಚ್ಚಾಗಿ ಅಂದಾಜಿಸಿತು, ಎರಡೂ ಕೂಡ ಕೋವಿಡ್-೧೯ರ ಮುಂಚಿನ ಸಮೀಕ್ಷೆಗಳು. ಹೀಗಿರುವ ಸನ್ನಿವೇಶದಲ್ಲಿ, ಡಿಸ್ಕಾಮ್‍ಗಳು ದೀರ್ಘಾವದಿ ಒಪ್ಪಂದಗಳಲ್ಲಿ ಕೂಡಿಕೊಂಡವು ಮತ್ತು ತೆಗೆದುಕೊಳ್ಳದ ವಿದ್ಯುಚ್ಛಕ್ತಿಗೆ ನಿರಂತರವಾಗಿ ನಿಗದಿತ ದರಗಳನ್ನು ನೀಡುತ್ತ ಬಂದವು. ಕರ್ನಾಟಕದಲ್ಲಿರುವ ಎನ್‍ಟಿಪಿಸಿ ಲಿಮಿಟೆಡ್‍ನ ಕುಡ್ಗಿ ಒಂದೇ, ಜಡ ನಿಗದಿತ ದರದ ರೂಪದಲ್ಲಿ ೪೮೦೦ ಕೋಟಿ ರುಪಾಯಿಗಳನ್ನು ಗಳಿಸಿತು, ಸ್ಥಾವರದ ಲೋಡ್ ಕೇವಲ ೨೨ ಶೇಕಡ ಇದ್ದಾಗ. ಸಿಇಎಯ ಹೆಚ್ಚು ಅಂದಾಜುಗಳಿಂದ, ದೇಶದಾದ್ಯಂತ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳ ಲೋಡ್ ಪ್ರಮಾಣವು ಕೋವಿಡ್-೧೯ರ ಮುಂಚೆಯೂ ಕೂಡ ಕೇವಲ ೫೬ ಶೇಕಡಾ ಆಗಿತ್ತು. 

ನವೀಕರಿಸಬಹುದಾದ ಶಕ್ತಿಗಳ ಸಂಗತಿ

೨೦೧೦ರಿಂದ, ಸೌರಶಕ್ತಿ ಮತ್ತು ವಾಯು ವಿದ್ಯುತ್ ಸ್ಥಾವರಗಳನ್ನು “ಚಲಿಸುತ್ತಲೇ ಇರಬೇಕಾದವು” ಎಂದು ಘೋಷಿಸಲಾಯಿತು. ಈಗಾಗಲೇ ಇದ್ದ ಕಡ್ಡಾಯ ನವೀಕರಿಸಬಹುದಾದ ಶಕ್ತಿ ಖರೀದಿಯ ತಾಕೀತುಗಳ ಜೊತೆಗೆ, ಸೂರ್ಯ ಮತ್ತು ವಾಯು ಇರುವವರೆಗೆ ಡಿಸ್ಕಾಮ್‍ಗಳು ಎಲ್ಲ ನವೀಕರಿಸಬಹುದಾದ ಶಕ್ತಿಯನ್ನು ಉಪಯೋಗಿಸಬೇಕೆಂದಾಯಿತು. ಇದರ ಪರಿಣಾಮವೆಂದರೆ ಈ ಎಲ್ಲ ಪರಿಸರ ಸ್ನೇಹಿ ವಿದ್ಯುತ್‍ ಅನ್ನು ಒಳಗೊಳ್ಳುವುದಕ್ಕಾಗಿ ಉಷ್ಣ ವಿದ್ಯುತ್ ಉತ್ಪಾದನೆಯನ್ನು ಕಡಿಮೆ ಮಾಡುವುದು, ತನ್ಮೂಲಕ ಎರಡು ಭಾಗಗಳ ಸುಂಕ ನೀತಿಯ ಕಾರಣದಿಂದಾಗಿ ನೀಡಬೇಕಾದ ಜಡ ನಿಗದಿತ ದರಗಳ ಪ್ರಮಾಣವನ್ನು ಇನ್ನಷ್ಟು ಹೆಚ್ಚಾಗಿಸುವುದು.

ಎರಡನೆಯದಾಗಿ, ವಿದ್ಯುತ್ ಬೇಡಿಕೆಯು ಸೂರ್ಯಾಸ್ತದ ನಂತರ ಗರಿಷ್ಠ ಪ್ರಮಾಣಕ್ಕೆ ತಲುಪುತ್ತದೆ. ಸಶಕ್ತ ಶೇಖರಣಾ ವ್ಯವಸ್ಥೆಯ ಅನುಪಸ್ಥಿತಿಯಲ್ಲಿ ಸೂರ್ಯಾಸ್ತದ ನಂತರವೂ ಬೆಳಕಿರಬೇಕೆಂದರೆ ನವೀಕರಿಸಬಹುದಾದ ಶಕ್ತಿಯ ಪ್ರತಿ ಮೆಗಾವ್ಯಾಟ್‍ಗೆ ಅದರ ಎರಡರಷ್ಟು ಸ್ಪಿನ್ನಿಂಗ್ ರಿಸರ್ವ್ಗಳನ್ನು (ಟರ್ಬೈನ್‍ನ ರೋಟರ್‍ನ ತಿರುಗುಬಲವನ್ನು ಹೆಚ್ಚಿಸುವುದು) ನೀಡಬೇಕಾಗುತ್ತದೆ. ಸೌರ ಹಾಗೂ ವಾಯು ಶಕ್ತಿ ಸ್ಥಾವರಗಳು ಹೊಂದಿರುವ “ಚಲಿಸುತ್ತಲೇ ಇರಬೇಕಾದ” ಸ್ಥಾನದ ಕಾರಣ ಡಿಸ್ಕಾಮ್‍ಗಳು, ವಿಶೇಷವಾಗಿ ದಕ್ಷಿಣ ಭಾರತದವು, ಹೆಚ್ಚು ಸುಂಕದ ಹೊರತಾಗಿಯೂ (ಕರ್ನಾಟಕದಲ್ಲಿ ಕಿಲೋ ವ್ಯಾಟ್ ಘಂಟೆಗೆ ೫ರೂ, ತಮಿಳುನಾಡಿನಲ್ಲಿ ಕಿಲೋ ವ್ಯಾಟ್ ಘಂಟೆಗೆ ೬ರೂ) ಬಹಳ ಪ್ರಮಾಣದ ದುರ್ಬಲ ಗುಣಮಟ್ಟದ ಶಕ್ತಿಯನ್ನು ಒಳಗೊಳ್ಳಬೇಕಾಗಿದೆ. ಇದು ೧೮ನೇ ಇಪಿಎಸ್ ಊಹಿಸಿದ ಬೇಡಿಕೆಯ ಹೆಚ್ಚಳ ವಾಸ್ತವವಾಗಲಿಲ್ಲ ಎನ್ನುವುದರ ನಡುವೆ.  

ಮೂರನೆಯದಾಗಿ, ೨೦೧೫ರಲ್ಲಿ ನವೀಕರಿಸಬಹುದಾದ ಶಕ್ತಿಗೆ  ಕೇಂದ್ರವು ೨೦೨೨ರ ಒಳಗೆ ೧೭೫ ಗಿಗಾ ವ್ಯಾಟ್‍ಗಳನ್ನು ತಲುಪುವ ಮಹತ್ವಾಕಾಂಕ್ಷೆಯ ಗುರಿಯನ್ನು ಷೋಷಿಸಿತು. ನವೀಕರಿಸಬಹುದಾದ ಶಕ್ತಿಯ ಉತ್ಪಾದಕರಿಗೆ ಹಲವು ವಿನಾಯಿತಿಗಳನ್ನು ನೀಡಿ ಡಿಸ್ಕಾಮ್‍ಗಳ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸಲಾಯಿತು. ಇದರ ಮಧ್ಯೆ ಕಳೆದ ಐದು ವರ್ಷಗಳಲ್ಲಿ ಭಾರತದ ಸೌರ ಫಲಕಗಳ ಆಮದಿನಿಂದ ಚೈನಾ ೧೩ ಬಿಲಿಯನ್ ಡಾಲರ್‍ಗಳಷ್ಟು ಲಾಭ ಗಳಿಸಿತು. 

ಫೈನ್ ಪ್ರಿಂಟ್

ಈ ಹಿನ್ನಲೆಯಲ್ಲಿ ನಾವು ವಿದ್ಯುಚ್ಛಕ್ತಿ ಮಸೂದೆಯ ತಿದ್ದುಪಡಿಗೆ ೨೦೨೦ರಲ್ಲಿ ಮಾಡಿರುವ ಪ್ರಸ್ತಾಪಗಳನ್ನು ನೋಡಬೇಕಿದೆ.

ಮೊದಲೆನೆಯ ವಿಷಯ, ಈ ತಿದ್ದುಪಡಿಯು ಪ್ರಾಯಶಃ ಖಾಸಗಿಯಾದ  ಉಪ-ಫ್ರಾಂಚೈಸ್‍ಗಳ ಪ್ರಸ್ತಾಪವಿಟ್ಟಿದೆ. ಈ ಮೂಲಕ ಮಾರುಕಟ್ಟೆಯನ್ನು ಹಿಂಬಾಗಿಲಿನಿಂದ ತಳ್ಳುವ ಉದ್ದೇಶವನ್ನು ಹೊಂದಿದೆ. ಈ ಹಿಂದಿನ ಖಾಸಗೀಕರಣದ ಪ್ರಯೋಗಗಳನ್ನು ಗಮನಿಸಿದರೆ ತಿಳಿಯುವುದೆಂದರೆ, ಈ ಉಪ ಫ್ರಾಂಚೈಸ್‍ಗಳು ಡಿಸ್ಕಾಮ್‍ಗಳ ವ್ಯಾಪ್ತಿಯಲ್ಲಿ ಹೆಚ್ಚು ಲಾಭದಾಯಕ ಭಾಗಗಳನ್ನು ಆಯುವ ಸಾಧ್ಯತೆ ಹೆಚ್ಚು. ಈ ತರಹದ ಖಾಸಗಿ ಉಪ-ಫ್ರಾಂಚೈಸ್‍ಗಳು ಡಿಸ್ಕಾಮ್‍ನಿಂದ ಒಂದು ಜಡ ನಿಗದಿತ ದರಗಳನ್ನೂ ಸೇರಿಸಿದ ದರ ನೀಡಿ ವಿದ್ಯುತ್ ಖರೀದಿಸಬೇಕೋ ಅಥವಾ ವಿದ್ಯುತ್ ವಿನಿಮಯದಿಂದ ಕಡಿಮೆ ದರದಲ್ಲಿ ವಿದ್ಯುತ್ ಖರೀದಿಸಬೇಕೋ ಎನ್ನುವುದರ ಕುರಿತು ೨೦೨೦ರ ತಿದ್ದುಪಡಿಗಳ ಪ್ರಸ್ತಾಪವು ಮೌನ ತಾಳಿದೆ. ಮೊದಲೆನೆಯದ್ದಾದರೆ, ಈ ನಡೆಯಿಂದ ಯಾವುದೇ ಲಾಭವಿರುವ ಸಾಧ್ಯತೆ ಕಡಿಮೆ ಏಕೆಂದರೆ ಈ ಉಪ ಫ್ರಾಂಚೈಸ್‍ಗಳಿಗೆ ಆಕರ್ಷಕವಾದ ಈಗಾಗಲೇ ಲಾಭದಾಯಕವಾಗಿರುವ ಪ್ರದೇಶಗಳಲ್ಲಿ ದಕ್ಷತೆಯನ್ನು ಹೆಚ್ಚಾಗಿಸುವ ಅವಕಾಶ ಸಾಕಷ್ಟಿಲ್ಲ. ಎರಡನೆಯದ್ದಾದರೆ, ಈಗಾಗಲೇ ಸಿಕ್ಕಿಕೊಂಡಿರುವ ಪಿಪಿಎಗಳ ದುಬಾರಿ ವಿದ್ಯುತ್ ಖರೀದಿಯ ಹೊರೆಯನ್ನು ಡಿಸ್ಕಾಮ್‍ಗಳು ಹೊರಬೇಕಾಗುತ್ತದೆ ಮತ್ತು ಇದನ್ನು ಮರುಪಡೆಯಲು ಲಾಭದಾಯಕ ಪ್ರದೇಶಗಳು ಕಡಿಮೆಯಾಗುತ್ತವೆ.

ಎರಡನೆಯದಾಗಿ, ನವೀಕರಿಸಬಹುದಾದ ವಿದ್ಯುತ್ ಉತ್ಪಾದಕರಿಗೆ ಇನ್ನೂ ಹೆಚ್ಚು ರಿಯಾಯಿತಿಯನ್ನು ಈ ತಿದ್ದುಪಡಿ ಪ್ರಸ್ತಾಪಿಸುತ್ತದೆ. ಇದು ಕ್ರಮೇಣ ಜಡವಾದ ನಿಗದಿತ ದರಗಳ ಮೇಲೆ ಇನ್ನಷ್ಟು ಪರಿಣಾಮ ಬೀರಲಿದೆ ಹಾಗೂ ಡಿಸ್ಕಾಮ್‍ಗಳ ಕಾರ್ಯಸಾಧ್ಯತೆಯನ್ನು ಇನ್ನಷ್ಟು ಕುಂದಿಸಲಿದೆ.

ಮೂರನೆಯದಾಗಿ, ಅತ್ಯಂತ ವಿವಾದಾತ್ಮಕವಾಗಿರುವ ತಿದ್ದುಪಡಿಯೆಂದರೆ, ಒಂದೇ ಏಟಿನಲ್ಲಿ ವಿದ್ಯುತ್ ಬೆಲೆಯ ಮೇಲೆ ನೀಡುವ ಕ್ರಾಸ್ ಸಬ್ಸಿಡಿಗಳನ್ನು (ಒಬ್ಬರಿಗೆ ಹೆಚ್ಚು ದರ ವಿಧಿಸುವ ಮೂಲಕ ಇನ್ನೊಬ್ಬರಿಗೆ ಸಬ್ಸಿಡಿ ನೀಡುವುದು) ತೆಗೆದುಹಾಕಲಾಗುತ್ತಿದೆ. ಇದರರ್ಥ ಪ್ರತಿಯೊಂದು ಗ್ರಾಹಕ ವರ್ಗವು ತನ್ನದೇ ವರ್ಗಕ್ಕೆ ನೀಡುತ್ತಿರುವ ಸೇವೆಗಾಗಿ ದರ ನೀಡಬೇಕಾಗುತ್ತದೆ. ಉದ್ದ ಲೈನ್‍ಗಳ ಅಗತ್ಯವುಳ್ಳ ಮತ್ತು ಹಲವು ಸ್ಟೆಪ್ ಡೌನ್ ಟ್ರಾನ್ಸ್ಫಾರ್ಮರ್‍ಗಳು ಬೇಕಾದ, ಲೈನ್‍ನಲ್ಲಿ ಹೆಚ್ಚು ವಿದ್ಯುತ್ ನಷ್ಟವಾಗುವ ಸಂದರ್ಭವಿರುವ ಗ್ರಾಮೀಣ ಗ್ರಾಹಕರು ಅತಿ ಹೆಚ್ಚಿನ ದರವನ್ನು ನೀಡಬೇಕಾಗುತ್ತದೆ. ಪ್ರಸ್ತಾಪ ಮಾಡಲಾಗಿರುವ ತಿದ್ದುಪಡಿಗಳು ಅಪ್ರಮಾಣಿಕವಾಗಿ, ರಾಜ್ಯ ಸರ್ಕಾರಗಳು ಯಾವ ವರ್ಗಗಳಿಗೆ ಸಬ್ಸಿಡಿ ನೀಡಬೇಕೋ ಅವರಿಗೆ ನೇರ ಲಾಭ ವರ್ಗಾವಣೆ (direct benefit transfers) ಮೂಲಕ ಸಬ್ಸಿಡಿ ನೀಡುತ್ತದೆ ಎಂದು ಹೇಳಿವೆ. ಸೋಪ್, ದಿನಪತ್ರಿಕೆ ಅಥವಾ ಟೆಲಿಕಾಮ್‍ ಸೇರಿ ಹಲವು ಖಾಸಗಿ ಉದ್ಯಮಗಳಲ್ಲಿ ಕ್ರಾಸ್ ಸಬ್ಸಿಡಿ ಒಂದು ಅವಶ್ಯಕ ಸತ್ಯವಾಗಿದೆ. ವಿದ್ಯುತ್‍ನಲ್ಲಿ ಇರುವ ತೀವ್ರ ಕ್ರಾಸ್ ಸಬ್ಸಿಡಿಗಳನ್ನು ಕಡಿಮೆ ಮಾಡಬೇಕೆನ್ನುವ ವಾದ ಖಂಡಿತ ಇದೆ. ಆದರೆ ಈಗಾಗಲೇ ನೇರ ವಿದ್ಯುತ್ ಸಬ್ಸಿಡಿಗಳಿಂದ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಗಳು ಅವನ್ನು ಸಂಪೂರ್ಣವಾಗಿ ಒಂದೇ ಏಟಿನಲ್ಲಿ ಹೊಡೆದುಹಾಕಿರುವುದು ಅವುಗಳ ಹಣಕಾಸಿನ ಸ್ಥಿತಿಗತಿಯನ್ನು ಇನ್ನಷ್ಟು ಹದಗೆಡಿಸಲಿದೆ, ಹಾಗೂ ನೇರ ಲಾಭ ವರ್ಗಾವಣೆಗಳ ಹಲವು ಗೋಜಲುಗಳು ಇದ್ದೇ ಇವೆ. ಸಬ್ಸಿಡಿಗಳ ಹಿಂದಿನ ರಾಜಕೀಯ ಅಂಶಗಳನ್ನು ಪರಿಗಣಿಸದೇ, ಮತ್ತು ಕೋವಿಡ್-೧೯ರ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದರಿಂದ ಈ ಪ್ರಸ್ತಾಪ ಪ್ರಾಯೋಗಿಕವಾಗಿಲ್ಲ. ಬಲವಂತವಾಗಿ ಇದನ್ನು ಕಾರ್ಯರೂಪಕ್ಕೆ ತಂದರೆ, ಇದು ಅವ್ಯವಸ್ಥೆಗೆ ಕಾರಣವಾಗುತ್ತದೆ. 

ನಾಲ್ಕನೆಯದಾಗಿ, ರಾಜ್ಯದ ನಿಯಂತ್ರಕರನ್ನು ಇನ್ನು ಮುಂದೆ ಕೇಂದ್ರ ಆಯ್ಕೆ ಸಮಿತಿಯೊಂದು ನೇಮಿಸಲಿದೆ. ಈ ಸಮಿತಿಯ ಸದಸ್ಯ ರೂಪವನ್ನು ನೋಡಿದರೆ ಇದರ ವಸ್ತುನಿಷ್ಠತೆಯ ಕುರಿತು ವಿಶ್ವಾಸ ಮೂಡುವುದಿಲ್ಲ. ಇದು ನಿಯಂತ್ರಣದಲ್ಲಿ ಸ್ವಾಯತ್ತತೆ ಹಾಗೂ ಸ್ವಾತಂತ್ರ್ಯವನ್ನು ಇಲ್ಲವಾಗಿಸುವುದಲ್ಲದೇ ವಿದ್ಯುತ್ ಕ್ಷೇತ್ರಕ್ಕಿರುವ ಸಮವರ್ತಿಸ್ಥಾನಮಾನವನ್ನೂ ಅಲ್ಲಗೆಳೆಯುತ್ತದೆ.

ಕೊನೆಯದಾಗಿ, ಈ ಹಲವು ಮುಳ್ಳುಗಳುಳ್ಳ ಹರಿತ ಆಯುಧದ ಕೊನೆಯ ಮುಳ್ಳೆಂದರೆ ಕೇಂದ್ರೀಕರಿಸಿದ ವಿದ್ಯುತ್ ಒಪ್ಪಂದ ಜಾರಿ ಪ್ರಾಧಿಕಾರ (Electricity Contract Enforcement Authority). ಇದರ ಸದಸ್ಯರು ಮತ್ತು ಮುಖ್ಯಸ್ಥರನ್ನು ಕೂಡ ಮೇಲೆ ಹೇಳಿದ ಆಯ್ಕೆ ಸಮಿತಿಯೇ ಆಯ್ಕೆ ಮಾಡುತ್ತದೆ. ಮೇಲ್ನೋಟಕ್ಕೆ ಈ ಒಪ್ಪಂದಗಳ ಪಾವಿತ್ರತೆಯನ್ನು ಎತ್ತಿ ಹಿಡಿಯಲೆನ್ನುವಂತೆ ಒಪ್ಪಂದಗಳ ಕುರಿತ ಕಲಹಗಳನ್ನು ಬಗೆಹರಿಸುವ ಅಧಿಕಾರವನ್ನು ರಾಜ್ಯ ವಿದ್ಯುತ್ ನಿಯಂತ್ರಣ ಮಂಡಳಿಗಳಿಂದ ಕಸಿದು ಈ ಹೊಸ ಪ್ರಾಧಿಕಾರಕ್ಕೆ ನೀಡಲಾಗಿದೆ. ದುಬಾರಿ ದರದ ಪಿಪಿಎ‍ಗಳ ಹಾಗೂ ನಿಷ್ಕ್ರಿಯ ಪೂರ್ವ ನಿರ್ಧಾರಿತ ದರಗಳ ಹೊರೆಯನ್ನು ಹೊತ್ತ, ಜೊತೆಗೆ ತಮ್ಮ ಬುಟ್ಟಿಯಲ್ಲಿಯ ನವೀಕರಿಸಬಹುದಾದ ವಿದ್ಯುತ್‍ನ ಭಾಗವನ್ನೂ ಹೆಚ್ಚಿಸಲು ಬಲವಂತಗೊಂಡಿರುವ ರಾಜ್ಯಗಳು ಯಾವುದೇ ನಡೆಯಿಡಲು ಜಾಗವಿರದಂತೆ ಮಾಡುವ ಪ್ರಯತ್ನ ಇದಾಗಿದೆ.

ದೇಶವು ಕೊರೊನ ವೈರಸ್ ಬಿಕ್ಕಟ್ಟಿನ ಆರ್ಥಿಕ ಪರಿಣಾಮದ ಸುಳಿಯಲ್ಲಿ ಸಿಲುಕಿರುವ ಹೊತ್ತಿನಲ್ಲಿ ಈ ವಿದ್ಯುಚ್ಛಕ್ತಿ ಮಸೂದೆ ೨೦೨೦ ಕೇಂದ್ರ ಸರ್ಕಾರದ ಸಮೀಪ ದೃಷ್ಟಿಯ ನೀತಿಗಳಿಂದ ಉಂಟಾದ ಹೊರೆಯನ್ನು ನಿಸ್ಸಹಾಯಕ ರಾಜ್ಯಗಳಿಗೆ ದಾಟಿಸುವ ಅಪ್ರಾಮಾಣಿಕ ನಡೆಯಾಗಿದೆ.

ಸುಧಾ ಮಹಾಲಿಂಗಂ, ತೇಜಲ್ ಕಾನಿಟ್ಕರ್ ಮತ್ತು ಆರ್. ಶ್ರೀಕಾಂತ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಬೆಂಗಳೂರಿನಲ್ಲಿ ಕ್ರಮವಾಗಿ ರಾಜಾ ರಾಮಣ್ಣ ಕುರ್ಚಿಯ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಮತ್ತು ಶಕ್ತಿ ಹಾಗೂ ಪರಿಸರ ವಿಭಾಗದ ಡೀನ್ ಆಗಿದ್ದಾರೆ. 

ಮೂಲ ಲೇಖನ “ದ ಹಿಂದು” ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಅನುವಾದ: ಸುಬ್ರಹ್ಮಣ್ಯ ಹೆಗಡೆ ಅಲಹಾಬಾದ್‍ನ ಹರೀಶ್-ಚಂದ್ರ ಸಂಶೋಧನಾ ಸಂಸ್ಥೆಯಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದ ಡಾಕ್ಟರೇಟೋತ್ತರ ಸಂಶೋಧಕರು.

One comment to “ದೇಶದ ವಿದ್ಯುಚ್ಛಕ್ತಿಯ ಸ್ವಾವಲಂಬನೆಗೆ ಪೆಟ್ಟು”
  1. ಅನುವಾದ ಅರ್ಥವಾಗುವುದು ಬಹಳ ಕಷ್ಟವಾಯಿತು. ತಾಂತ್ರಿಕ ಪದಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಇರುವಂತೆಯೇ ಬಳಸುವುದು ಒಳ್ಳೆಯದು. ಇಂಂಗ್ಲಿಷ್ ಪದ ಮತ್ತು ವಾಕ್ಯ ರಚನೆಗೆ ನಿಷ್ಠವಾಗಿರಬೇಕೆಂಬ ಹಟದಲ್ಲಿ ಅ.ಸಹಜ ಕನ್ನಡ ರೂಪುಗೊಂಡಿದೆ ಅನ್ನಿಸಿತು.

ಪ್ರತಿಕ್ರಿಯಿಸಿ