ಶ್ರೀಧರ ಬಳಗಾರರ “ಮೃಗಶಿರ”: ಕೆಲವು ಟಿಪ್ಪಣಿಗಳು

ಶ್ರೀಧರ ಬಳಗಾರರ ಹಿಂದಿನ ಕಾದಂಬರಿ”ಆಡುಕಳ” ಒಳ್ಳೆಯ ಪ್ರತಿಸ್ಪಂದನೆಗಳನ್ನು ಪಡೆದುಕೊಂಡಿತ್ತು. ಉತ್ತರ ಕನ್ನಡದ ಜನಜೀವನ, ಬದುಕನ್ನು ಕೇಂದ್ರವಾಗಿಟ್ಟುಕೊಂಡು ಅವರು ಈಗ ರಚಿಸಿದ ಎರಡನೇಯ “ಮೃಗಶಿರ” ಪ್ರಕಟವಾಗಿದೆ. ಇದರ ಬಗ್ಗೆ ನಾಗರೇಖಾ ಗಾಂವ್ಕರ್ ಅವರು ಬರೆದ ಪರಿಚಯಾತ್ಮಕ ಟಿಪ್ಪಣಿ ಇಲ್ಲಿದೆ. ಪುಸ್ತಕ ಋತುಮಾನ ಸ್ಟೋರ್ ಮಿಂದಾಣ ಮತ್ತು ಋತುಮಾನ ಆ್ಯಪ್ ನಲ್ಲಿ ಲಭ್ಯವಿದೆ. https://store.ruthumana.com/product/mrugashira/

“Happy families  are all alike; every unhappy family is unhappy in its own way” ಇದು ಟಾಲ್‍ಸ್ಟಾಯ್ ಬರೆದ ‘ಅನ್ನಾ ಕರೆನಿನಾ’ ಕಾದಂಬರಿಯ ಮೊದಲ ಸಾಲುಗಳು. ಬದುಕಿನ ಸುಖದ ಕಲ್ಪನೆಯಲ್ಲಿ ಮನುಷ್ಯ ಕಟ್ಟಿಕೊಂಡ ಕುಟುಂಬ ವ್ಯವಸ್ಥೆ, ಅಲ್ಲಿ ಸಿಗುವ ತೃಪ್ತಿ ಆಯಾ ಕುಟುಂಬವನ್ನು ಅವಲಂಬಿಸಿದೆ. ಮೃಗಶಿರ ಕಾದಂಬರಿ ಕೂಡಾ ಇಂತಹುದೇ ಅತೃಪ್ತ ಬದುಕಿನ ಕಥೆಯನ್ನು ನಮ್ಮೆದುರು ತೆರೆದಿಡುತ್ತದೆ.

ಬದುಕು ಅರ್ಥವಾಗುವುದು ಒಂದಿಷ್ಟು ಬದುಕಿದ ಮೇಲೆಯೇ. ಹಾಗಿದ್ದೂ ಅದು ಅರ್ಥವಾಗದೇ ಇರುವುದೇ ಹೆಚ್ಚು. ಮುಕ್ಕಾಲು ಪಾಲು ಪ್ರಾಯ ಮುಗಿಸಿಯೂ ‘ಜಗತ್ತನ್ನು ಅರ್ಥಮಾಡಿಕೊಂಡಿರುವೆ’ ಎಂದುಕೊಂಡರೂ ಅದು ಉತ್ಪ್ರೇಕ್ಷೆಯೇ! ಜೀವನದ ನಿಜವಾದ ಅರ್ಥ ಯಾವುದರಲ್ಲಿದೆ. ಬಂಧನದಲ್ಲೋ, ಬಿಡುಗಡೆಯಲ್ಲೋ, ಸಂಸಾರದಲ್ಲೋ, ಸಾಧನೆಯಲ್ಲೋ, ಪ್ರೀತಿ-ವಿಶ್ವಾಸದಲ್ಲೋ, ದ್ವೇಷ-ನಿಷ್ಠುರತೆಯಲ್ಲೋ, ಇವೆಲ್ಲದರ ಹೊರತಾಗಿಯೂ ಕಾಡುವ ವಿಚಿತ್ರ ವ್ಯಾಕುಲತೆ, ಎಲ್ಲವನ್ನೂ ಮೀರಬೇಕೆನ್ನುವ ತುಡಿತದಲ್ಲೋ, ಇದಕ್ಕೆಲ್ಲ ಉತ್ತರ ಸಿಕ್ಕಿಲ್ಲ. ಇಂತಹ ತಾತ್ವಿಕ ಚಿಂತನೆ ಅನ್ನುವ ಲೌಕಿಕದ ಹೊರತಾದ ಭಿನ್ನ ಆಯಾಮದತ್ತ ಲೌಕಿಕದ ಸಂಗತಿಯ ಮೂಲಕವೇ ಹೊರಳುವ ಪ್ರಯತ್ನದಂತಿದೆ ಶ್ರೀಧರ ಬಳಗಾರರ ಮೃಗಶಿರ ಕಾದಂಬರಿ.

ಕಾದಂಬರಿ ಸ್ವಾತಂತ್ರ್ಯ ಹೋರಾಟ ಕಾಲದ ಸಂದರ್ಭದ ಘಟನೆಯೊಂದನ್ನು ಹೇಳುತ್ತಾ, ವಿಶಿಷ್ಟ ಪ್ರಾದೇಶಿಕ ಚೆಲುವು, ಹಾಗೂ ಜೀವನ ಶೈಲಿಗಳ ಜೊತೆ, ಪ್ರಕೃತಿಯ ನಡುವೆ ಬದುಕುತ್ತಿದ್ದ ಆಧುನಿಕತೆಯಿಂದ ದೂರವಿದ್ದ ಉತ್ತರ ಕನ್ನಡದ ಜನಜೀವನವನ್ನು ತೆರೆದಿಡುತ್ತದೆ. ನದಿ ದಂಡೆಯಲ್ಲಿ ನಿಂತು ಬಲೆಯ ಬೀಸಿದರೆ ಅದು ನಿಧಾನಕ್ಕೆ ನೀರಿನಲೆಗಳ ನಡುವೆ ತೆರೆದುಕೊಳ್ಳುತ್ತಾ ಹೋದಂತೆ ಮುಖ್ಯ ನಿರೂಪಕ  ಕಾದಂಬರಿಯ ಉದ್ದಕ್ಕೂ ಸಂದರ್ಶಿಸುವ ಸುಬ್ರಾಯಪ್ಪ, ಶಂಕ್ರ, ಅಂತತ್ತೆ, ಲಕ್ಷ್ಮೀ, ಬಂಟ್ ಮಾಸ್ತರ, ತಂಗು, ನರಸಿಂಹ, ಗಪ್ಪತಿ ಮುಂತಾದ ಹಳ್ಳಿ ಬದುಕಿನ ಪಾತ್ರಗಳು, ಆ ಪಾತ್ರಗಳು ತೆರೆದಿಡುವ ನೆನಪುಗಳ ಬುತ್ತಿಯೇ ಇಡೀ ಕಾದಂಬರಿಯನ್ನಾಗಿಸಿದ್ದಾರೆ ಕಥೆಗಾರರು.

ಕಾದಂಬರಿಯ ಪ್ರಮುಖ ಪಾತ್ರ ಯಾರೂ ಅಲ್ಲದಿದ್ದರೂ, ಅನುಸೂಯಾ ಅಥವಾ ಅಂತು ಪಾತ್ರವೇ ಪ್ರಧಾನಪಾತ್ರ. ಮುಖ್ಯ ಭೂಮಿಕೆಯಲ್ಲಿ ಮತ್ತೆ ಮತ್ತೆ ಕಾದಂಬರಿ ಸುತ್ತು ಬಳಸುವುದು ಆ ಪಾತ್ರದ ಸುತ್ತಲೇ. ಮನೆಯವರ ಒತ್ತಾಯಕ್ಕೆ ಗಂಟು ಬಿದ್ದು ಅನುಸೂಯಾಳನ್ನು ವಿವಾಹವಾದ ನಂತರ ಗಡಿ ಮನೆಯ ಸುಬ್ರಾಯಪ್ಪ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದಾಗ, ಮುದಿ ಅತ್ತೆ ಮಾವಂದಿರ ಜೊತೆ ಎಳೆಯ ಪ್ರಾಯದ ಅಂತು  ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳುತ್ತಾಳೆ. ಆದರೆ ಜವಾಬ್ದಾರಿ ನಿಭಾಯಿಸಬಲ್ಲ ಗಂಡಿಲ್ಲದ ಕಾರಣ ಹೊಸ್ಮನೆಯ ಪುಟ್ಟಣ್ಣ ಈ ಸಂದರ್ಭವನ್ನು ತನ್ನ ಲಾಲಸೆಗಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ.

ಗಮಯಗಳ ದಾಳಿಯಿಂದ ಗದ್ದೆಯನ್ನು ಕಾಯಲು ಹೋದ ಅಂತು ಪುಟ್ಟಣ್ಣನ ಪೂರ್ವಯೋಜಿತ ಅಥವಾ ಅಲ್ಲದ ಸಂಚಿಗೆ ತನ್ನ ಶೀಲವನ್ನು ಕಳೆದುಕೊಳ್ಳುತ್ತಾಳೆ. ಅಥವಾ ಮದುವೆಯಾಗಿ ಪತಿಯ ಪ್ರೇಮದಲ್ಲಿ, ಆಲಿಂಗನದಲ್ಲಿ ಮುಳುಗೇಳಬಯಸಿದ ಆಕೆಯ ಹಸಿದ ದೇಹ ಕೂಡಾ ಆ ಸಂದರ್ಭದಲ್ಲಿ ಅಷ್ಟೇನೂ ಪ್ರತಿರೋಧ ತೋರದೇ ಇರುವುದು ಸಹಜವಾದ ದೇಹ ಧರ್ಮ. ಆದರೆ  ಆ ನಂತರ ಅಂತುವಿನಲ್ಲಿ ಏಳುವ ಪ್ರಶ್ನೆಗಳು ಸಮಾಜದ ಭಯದ ಕುರಿತಾದದ್ದು. ಅಂತು ಗಂಡು ಮಗುವಿಗೆ ಜನ್ಮ ನೀಡಿದರೂ ಅತ್ತೆ ಮಾವ ಅವಳ ಈ ಕೃತ್ಯವನ್ನೂ ಸಹಿಸದಿದ್ದರೂ, ಮಗನ ಅನುಪಸ್ಥಿತಿ, ಪರಿಸ್ಥಿತಿಯ ಕಾರಣ ಅಂತುವನ್ನು ಮತ್ತು ಮಗುವನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಾರೆ. ಇದಕ್ಕೆ  ಆ ಮನೆಗೆ ಇನ್ಯಾರೂ ದಿಕ್ಕಿಲ್ಲದ ಕಾರಣವೂ ಇರಬಹುದು. ಆದರೆ ತಂದೆತಾಯಿ ಸತ್ತ ನಂತರ ಜೈಲಿನಿಂದ ಬಿಡುಗಡೆ ಆಗಿ ಬರುವ ಸುಬ್ರಾಯಪ್ಪನಿಗೆ  ಇದೆಲ್ಲವೂ ಅರಿವಾಗುತ್ತಲೂ ಮನೆಯ ಮಾಳಿಗೆ ಏರಿ ಬಿಡುತ್ತಾರೆ. ಅಕ್ಷರಶಃ ಮೂಕನಾಗುತ್ತಾರೆ. ಖಾದಿ ಗ್ರಾಮೋದ್ಯೋಗದ ಚರಕವ ಹೊಸೆಯುತ್ತಾ, ಅಂತುವಿನಿಂದ ವಿಮುಖರಾಗುತ್ತಾ ಹೋಗುತ್ತಾರೆ. ಮನೆತನದ ಘನತೆಗಾಗಿ ಒಟ್ಟಿಗೆ ಇರುವ ದಂಪತಿಗಳು ಸಾರವಿಲ್ಲದ ಸಂಸಾರದಲ್ಲಿ  ಅಪರಿಚಿತರಂತೆ ಬದುಕುತ್ತಾರೆ.

ಪುರುಷ ಸಮಾಜ ವ್ಯವಸ್ಥೆಯಲ್ಲಿ ಸರ್ವಾಧಿಕಾರ ಹೊತ್ತ ಗಂಡು ಸುಬ್ರಾಯಪ್ಪ  ಸ್ವತಃ ಹೆಂಡತಿಯನ್ನು ಅಸ್ಪಶ್ರ್ಯಳಂತೆ ದೂರ ಇಡುವುದು ಆಕೆಯನ್ನು ಮಾನಸಿಕವಾಗಿ ಕೊಲ್ಲಲು. ಇದೇ ಸುಬ್ರಾಯಪ್ಪ ತನ್ನ ಶರೀರದ ಆಕಾಂಕ್ಷೆಯನ್ನು ತೀರಿಸಿಕೊಳ್ಳಲು ಆಚಾರಿ ಮಗಳು ವಿಧವೆ ಮೇನಕೆಯನ್ನು  ವಿವಾಹವಾಗುವುದು ವಿಚಿತ್ರ ಪುರುಷ ಮನಸ್ಥಿತಿಗೆ ಸಾಂಕೇತಿಕ. ಆದರೆ  ಸುಬ್ರಾಯಪ್ಪನ ಮನೆಯ ಎಲ್ಲ ಜವಾಬ್ದಾರಿಗಳನ್ನು ಅಂತು ನಿಭಾಯಿಸುತ್ತಾ ಬರುವುದರಲ್ಲಿ  ಆಕೆಯ ಸಬಲ ಮನಃಸ್ಥಿತಿ ವ್ಯಕ್ತಗೊಳ್ಳುತ್ತದೆ.  ಆಕೆಯೊಂದಿಗೆ ಆತ ಮಾತು ಮುರಿದುಕೊಳ್ಳುತ್ತಾನೆ. ಆಕೆಯೊಂದಿಗೆ ದಾಂಪತ್ಯ ತ್ಯಜಿಸಿ ಬದುಕುವ ಸುಬ್ರಾಯಪ್ಪನ ದೈನಂದಿನ ಜೀವನ ಸಾಂಗವಾಗಿ ನಡೆಯಲು ಆಕೆಯೇ ಬೇಕು. ಪ್ರೀತಿಗಿಂತ ಹೆಚ್ಚಾಗಿ ಗಂಡು ಬಯಸುವುದು ಆಳ್ವಿಕೆಯನ್ನು ಎಂಬುದಕ್ಕೆ ಇದು ಉದಾಹರಣೆ.

ಜೈವಿಕ ನೆಲೆಯಲ್ಲಿ ಹೆಣ್ಣಿನ ಅಸ್ತಿತ್ವದ ನೆಲೆ ತಾಯ್ತನ. ಸಾಮಾಜಿಕ ನೆಲೆಯಲ್ಲಿ ಅವಳ ಅಸ್ತಿತ್ವದ ಪ್ರಶ್ನೆ ಅವಳ ಹೆಣ್ತನ.  ಅದರ ಪಾವಿತ್ರ್ಯ. ಅದೇ ಪುರುಷ ಅವನ ಅಸ್ತಿತ್ವದ ಪ್ರಶ್ನೆ ಇರುವುದೇ ಆಳ್ವಿಕೆಯಲ್ಲಿ. ಈ ಭಯವೇ ಅವನಲ್ಲಿ ಎಲ್ಲವನ್ನೂ ಗೆಲ್ಲಬೇಕೆನ್ನುವ ತನ್ನದಾಗಿಸಿಕೊಳ್ಳಬೇಕೆನ್ನುವ ತುಡಿತಕ್ಕೆ ಕಾರಣ. ಈ ಭಯವನ್ನೆ ಇತರರ ಮೇಲೂ ಪ್ರಯೋಗಿಸಿ ಭಯಗೊಳಿಸಿ ಬದುಕುವುದು ಒಂದು ತಂತ್ರ.

ಮುಂದೆ ಪುಟ್ಟಣ್ಣ ಗುಂಡೇಟಿಗೆ ಬಲಿಯಾದಾಗ ಅದರ ಆರೋಪ ಕೇಳಿಬರುವುದು ಸುಬ್ರಾಯಪ್ಪನ ಮೇಲೆ. ಪುಟ್ಟಣ್ಣನ ಸಹೋದರನಾದ ತಿಮ್ಮಪ್ಪಣ್ಣನ ಮೇಲೆ ಮತ್ತು ಆತನ ಪತ್ನಿಯಾದ ತಂಗುವಿನ ಮೇಲೆ. ಹೀಗೆ ಆಕಸ್ಮಿಕದ ಘಟನೆಯೂ ಹಲವರ ಜೀವನದಲ್ಲಿ ವಿಚಿತ್ರ ಕೋಲಾಹಲವನ್ನು ಉಂಟುಮಾಡುತ್ತದೆ. ಕೊನೆಗೂ ಅದರ ನಿಜವಾದ ಅಪರಾಧಿ ಯಾರೆಂದು ಕಾದಂಬರಿ ಹೇಳದೇ ಓದುಗರನ್ನು ಜಿಜ್ಞಾಸೆಗೆ ಈಡುಮಾಡುತ್ತದೆ. ಗಂಡ ಸತ್ತು ವಿಧವೆಯಾದ ತಂಗುವಿಗೆ ಕೊನೆಗೆ ಆಸರೆಯಾಗಿ ಧೈರ್ಯದ ಸೆಲೆಯಾಗಿ ನಿಲ್ಲುವವಳು ಅಂತು.

ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಉತ್ತರ ಕನ್ನಡ ಉಗ್ರ ಚಳುವಳಿಯ ಸ್ಥಾನವಾಗಿತ್ತು. ಕರ್ನಾಟಕದ ಬಾರ್ಡೊಲಿ ಎಂದೇ ಉತ್ತರ ಕನ್ನಡದ ಅಂಕೋಲಾ ಪ್ರಸಿದ್ಧವಾಗಿದೆ. ಹಾಗೆ ಮುಂಚೂಣಿಯಲ್ಲಿದ್ದ ಸಿದ್ಧಾಪುರ, ಯಲ್ಲಾಪುರ ಮತ್ತು ಕುಮಟಾ ಇಲ್ಲಿಯೂ  ಚಳುವಳಿಯ ಚಟುವಟಿಕೆಗಳು ಗುಪ್ತವಾಗಿ ನಡೆಯುತ್ತಿದ್ದವು. ಸುದ್ದಿಗಳ ವಿನಿಮಯಕ್ಕೆ ಕರಪತ್ರ ಮುದ್ರಿಸುವ ಯಂತ್ರವಿರುತ್ತಿತ್ತು. ಗುಪ್ತ ಅಂಚೆ ಪೆಟ್ಟಿಗೆ ಇರುತ್ತಿದ್ದವು. ಹುಲ್ಲಿನ ಬಣವೆಯಲ್ಲಿ ಹುದುಗಿಸಿಟ್ಟ ಅಂಚೆ ಪೆಟ್ಟಿಗೆ ಮೂಲಕ ಕರಪತ್ರ ವಿನಿಮಯ ಮಾಡಲಾಗುತ್ತಿತ್ತು. ಇವೆಲ್ಲವನ್ನೂ  ಕಾದಂಬರಿಯಲ್ಲಿ ನಿರೂಪಿಸಿರುವ ಲೇಖಕರು ಆ ಕಾಲದ ಸಂಘರ್ಷದ ಚಿತ್ರಣವನ್ನೂ ಓದುಗನ ಮುಂದಿಡುತ್ತಾರೆ. ಅದೆಷ್ಟೋ ಯುವ ಮನಸ್ಸುಗಳು  ಗಾಂಧೀಜಿಯವರ ಭಾಷಣದಿಂದ ಪ್ರೇರೇಪಿಸಲ್ಪಟ್ಟಂತೆ  ಸುಬ್ರಾಯಪ್ಪ ಕೂಡಾ ಈ ಸಂಗ್ರಾಮದಲ್ಲಿ ಧುಮುಕುತ್ತಾರೆ. ಸುಬ್ರಾಯಪ್ಪನ ಸಾಧನೆಯನ್ನು ನಾವು ಅಲ್ಲಗಳಿಯುವಂತಿಲ್ಲ. ಆದರೆ ಕಾದಂಬರಿ ಹೇಳಹೊರಟಿರುವುದು ಸ್ವಾತಂತ್ರ್ಯ ಸಂಗ್ರಾಮದ ಕಥೆಯನ್ನಲ್ಲ. ಜೀವನ ಸಂಗ್ರಾಮದ್ದು.

ಹಾಗಿದ್ದೂ ಗಾಂಧಿ ತತ್ವಗಳಿಂದ ಎಳವೆಯಲ್ಲೇ ಪ್ರಚೋದಿತರಾದ ಸುಬ್ರಾಯಪ್ಪನವರ ಹಲವು ನಿರ್ಧಾರಗಳಲ್ಲಿ ಕಾಣುವುದು ಅದೇ ಗಾಂಧಿಮಾರ್ಗ. ಮೌನದ ಮೂಲಕ ಅಂತುವನ್ನು ನಿಯಂತ್ರಿಸಬಯಸುವ ಸುಬ್ರಾಯಪ್ಪ ಒಮ್ಮೆ ಮನಸ್ಸು ನಿರಾಕರಿಸಿದ ಸಂಗತಿಯನ್ನು ಮತ್ತೆಂದೂ ಸ್ವೀಕರಿಸುವುದಿಲ್ಲ, ಸ್ವತಃ ಪತ್ನಿಯನ್ನೂ ಕೂಡಾ. ಖಾದಿ ಗ್ರಾಮೋದ್ಯೋಗದ ಚರಕದಿಂದ ನೂಲು ತೆಗೆಯುತ್ತಾ, ಅದನ್ನು ಪಟ್ಟಣಗಳಲ್ಲಿಯ ಮಗ್ಗಗಳಿಗೆ ಮಾರಿ ಬರುತ್ತಲೋ, ಇಲ್ಲ ವಾನಪ್ರಸ್ಥಕ್ಕೆ ಹತ್ತಿರ ಬಂದ ದಂಪತಿಗಳ ತೀರ್ಥಕ್ಷೇತ್ರ ಯಾತ್ರೆಗೆ ಕರೆದೊಯ್ಯುವ ಉದ್ಯೋಗ ಮಾಡುತ್ತಲೂ ಜನಪರವಾಗಿ ಬದುಕು ಸಾಗಿಸುವ ಹಂಬಲ ತೋರುತ್ತಾರೆ. ಪುಟ್ಟಣ್ಣನ ಕೊಲೆಯ ಅಪರಾಧ ಬಂದ ಮೊದಲ ಆರೋಪಿ ಕುಣಬಿ ರಾಮನ ಅವಸ್ಥೆಗೆ ನೊಂದು ತಾವೇ ಆ ಕೊಲೆ ಮಾಡಿರುವೆನೆಂದು ಹೇಳಿ ಮುಂದೆ ಬರುತ್ತಾರೆ. ಹೊಸ್ಮನೆಯ ದೊಡ್ಡ ಅವಿಭಕ್ತ ಕುಟುಂಬದಲ್ಲಿ ಉಂಡು ಹೋಗುವವರಿಗೆ ಬರವಿಲ್ಲ ಎಂಬುದ್ದಕ್ಕೆ ಸಾಕ್ಷಿ ಎಂಬಂತೆ  ಊರಿನ ಶಾಲಾ ಮಾಸ್ತರ ವರ್ಷದುದ್ದಕ್ಕೂ ಆ ಮನೆಯಲ್ಲೇ ಉಳಿದುಕೊಂಡಿದ್ದರೂ ಪ್ರತ್ಯೇಕ ಪಂಕ್ತಿಯಲ್ಲಿ ಉಣ್ಣಲಿಕ್ಕಿವುದನ್ನು ಆ ಸಮಯದಲ್ಲಿ ಮಾಸ್ತರರಿಗೆ ಬಡಿಸ ಹೋಗುವ ಮನೆಯ ಹೆಣ್ಣುಮಕ್ಕಳ ಹಿತದ ದೃಷ್ಠಿಯಿಂದಲೂ, ಹಾಗೂ ತಾರತಮ್ಯದ ಕಾರಣದಿಂದಲೂ ಅದನ್ನೊಪ್ಪದ ಸುಬ್ರಾಯಪ್ಪ ಆ ಮನೆಯವರ ಮನವೊಲಿಸಿ, ಬಂಟ್ ಮಾಸ್ತರರನ್ನು ಕುಟುಂಬದೊಂದಿಗೆ  ಸಹಪಂಕ್ತಿ ಭೋಜನಕ್ಕೆ ವ್ಯವಸ್ಥೆ ಮಾಡಿಸುತ್ತಾರೆ. ಈ ಎಲ್ಲ ಸಮಾಜಮುಖಿ ಮತ್ತು ಕಾರುಣ್ಯಪೂರಿತ ಗುಣಗಳ ಕಾರಣ ಸುಬ್ರಾಯಪ್ಪ  ಕೂಡಾ ಓದುಗರ ಮನಸ್ಸಿನಲ್ಲಿ ಉಳಿದುಬಿಡುತ್ತಾರೆ.

ಗಂಡಸರು ಊರೂರು ಅಲೆಯುತ್ತಾ ದೇಶ ರಕ್ಷಣೆಯ ಹೊಣೆಯನ್ನು ನಿಭಾಯಿಸುತ್ತಿದ್ದರೆ, ಹೆಣ್ಣು ಜೀವಗಳ ಬವಣೆ, ಮನೆಯ ದೇಖರೇಖಿಗಳು ಕೆಲವೊಮ್ಮೆ ಅಂತತ್ತೆಗೆ ಆದಂತಹ ಪ್ರಮಾದಗಳು ನಡೆದು ಜಗದ ಮುಖಕ್ಕೆ ಮುಖಕೊಡಲಾಗದ ಹಿಂಸೆಯಲ್ಲಿ ತತ್ತರಿಸಿದ ಅದೆಷ್ಟೋ ಪಾತ್ರಗಳು ಅಂತತ್ತೆಯ ಮೂಲಕ ಇಲ್ಲಿ ಬೆಳಗಿದಂತಿವೆ. ಅಸ್ತಿತ್ವದ ಪ್ರಶ್ನೆ, ಹಸಿವು ಮತ್ತು ಭಯ ಈ ಮೂರು ಇತಿಹಾಸದ ಉದ್ದಕ್ಕೂ ಮನುಕುಲವನ್ನು ಕಾಡಿರುವುದು. ಇಲ್ಲಿಯೂ ಕೂಡಾ ಈ ಮೂರು ಸಂಗತಿಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.

ಉತ್ತರ ಕನ್ನಡದ ದೇಸಿ ಭಾಷಾ ಸೊಗಡನ್ನು ಯಥೇಚ್ಛವಾಗಿ ಅನ್ನುವದಕ್ಕಿಂತ ಮುಖ್ಯವಾಗಿ ಹವ್ಯಕ ಸಮುದಾಯದ ಭಾಷೆಯನ್ನು ದುಡಿಸಿಕೊಂಡಿರುವುದು ಕಾದಂಬರಿಯ ವೈಶಿಷ್ಟ್ಯ.  ಉತ್ತರ ಕನ್ನಡ ತನ್ನ ಭಾಷಾ ವೈವಿಧ್ಯತೆಗೆ ಪ್ರಸಿದ್ಧ. ಒಂದೇ ಪರಿಸರದ ವಿವಿಧ ಸಮುದಾಯಿಕ ಭಾಷಾ ಬಳಕೆಯಲ್ಲಿ, ಮಾತನಾಡುವಲ್ಲಿ ಕಾಣುವ ಏರಿಳಿತಗಳಿಂದಲೇ ಅದು ಸಮುದಾಯಕ್ಕೊಂದರಂತೆ   ಶೈಲಿಯಲ್ಲಿ ಗಮನಸೆಳೆಯುತ್ತದೆ.

ಕಾದಂಬರಿಯಲ್ಲಿಯೇ ಕೆಳಜಾತಿಯ ಬಾರ್ಕೆಲ ಬಳಸುವ ಭಾಷೆ ಮತ್ತು ಹವ್ಯಕ ಮನೆತನದ ಪುಟ್ಟಣ್ಣನ ಸಂಭಾಷಣೆಯಲ್ಲಿಯೇ ಈ ಭಿನ್ನತೆಯನ್ನು ಗುರುತಿಸಬಹುದು.  ಆಧುನಿಕ ಕನ್ನಡ  ಸಾಹಿತ್ಯದಲ್ಲಿ ಗ್ರಂಥಭಾಷೆಗಳಲ್ಲಿಯೇ ಕೃತಿ ರಚನೆಯ ಸಮೃಧ್ಧ ಬೆಳೆ ಈಗಾಗಲೇ ಬಂದಿರುವುದು. ಈ ಮೂಲಕ ಭಾಷೆಯ ಸಮರ್ಥ ಬಳಕೆಯಲ್ಲಿಯೇ  ಆ ಪರಿಸರಕ್ಕೆ ಯೋಗ್ಯವಾದ ನೆನಪುಗಳ ತುಂಬಿಕೊಡುತ್ತಾ, ವಿವರಿಸುತ್ತಾ ಹೋಗುತ್ತಲೇ ಪಾತ್ರಗಳು ತೀರಾ ಮೇಲ್ಪದರದ ಹಾಸು ದಾಟಿ ಒಳಕ್ಕಿಳಿದು ಅಲ್ಲಿಯ ಪಾತ್ರಗಳಲ್ಲಿ ನಾವೂ ಒಬ್ಬರಾಗಿ ಓದುತ್ತಾ ಹೋದಂತೆ ಭಾಸವಾಗುತ್ತದೆ. ಆ ವಿಶಿಷ್ಟತೆ ಈ ಕಾದಂಬರಿಯ ಉದ್ದಕ್ಕೂ ಕಾಣುವುದು.

ಮೇಲ್ಜಾತಿಯ ಮತ್ತು ಕೆಳಜಾತಿಯ ನಡುವಿನ ಜೀವನ ನಿರ್ವಹಣಾ ಭಾಂದವ್ಯ, ಉತ್ತರ ಕನ್ನಡದ ಜನಜೀವನ, ಆಡುಭಾಷೆ, ನಂಬಿಕೆಗಳು, ರೀತಿನೀತಿಗಳು, ಸಾಹಿತ್ಯ ದೃಷ್ಟಿಯಿಂದ ಮಾತ್ರವಲ್ಲದೇ ಸಂಸ್ಕøತಿಯನ್ನು ಪ್ರತಿಬಿಂಬಿಸಿದೆ. ಹಳ್ಳಿಗಾಡಿನ ಜನಪದರ ಜೀವನದ ಜೀವನ್ಮುಖಿ ತಂತುಗಳಲ್ಲಿ ಅಡಗಿದ ಸುಪ್ತ ಸುಗಂಧವನ್ನು, ದುರ್ಗಮ ದಾರಿಯನ್ನು ಬದುಕಿನ ಹತ್ತು ಹಲವು ಸಂಕೀರ್ಣತೆಗಳನ್ನು ತಾನು ಕಂಡಂತೆ, ಕೆಲವೊಮ್ಮೆ ಅನುಭವಿಸಿದ ಸಂಗತಿಗಳ ಹೊಸ ಅವಿರ್ಭಾವದಂತೆ ಕಟ್ಟಿಕೊಡಬಲ್ಲ ಕೌಶಲ್ಯ ಈ ಕಥೆಗಾರರದು. “ಗಡಿಮನೆಯ ಬಚ್ಚಲೊಳಗೆ ಹೊಂದಿಕೊಂಡು  ಹಿತ್ತಲ ಮಾಡನ್ನು ಛೇದಿಸಿ ಕೋಳಿಗೆ ಸಮಾನವಾಗಿ ಬೆಳೆದು ನಿಂತ ತೆಂಗಿನಮರ ತನ್ನ ಪುರಾಣ ಮಹಿಮೆಯನ್ನು ಹೇಳುತ್ತದೆ” ಉತ್ತರ ಕನ್ನಡದ ಮನೆ ಮನೆಯ ಭೌಗೋಲಿಕ ಚಹರೆ ವಿವರಿಸಲು ಇದೊಂದೇ ಸಾಲು ಸಾಕು.

ಯಾರೋ ಒಮ್ಮೆ ಶಿವರಾಮ ಕಾರಂತರನ್ನು ಅವರ ಬರಹಗಳಲ್ಲಿಯ ತಾತ್ವಿಕತೆ ಬಗ್ಗೆ ಕೇಳಿದಾಗ ‘ಹಾಗೆಂದರೇನು?’ ಎಂದು ಕಾರಂತರೇ ಮರು ಪ್ರಶ್ನಿಸಿದ್ದರಂತೆ. ಹಾಗೇ ಐನಸ್ಟೇನ್ ತನ್ನ ಸಾಪೇಕ್ಷ ಸಿದ್ಧಾಂತವನ್ನು ಪ್ರತಿಪಾದಿಸಿದ ನಂತರ ಕೆಲವು ವಿಜ್ಞಾನಿಗಳು ಅವರನ್ನು ಈ ಸಾಪೇಕ್ಷ ಸಿದ್ಧಾಂತವನ್ನು ವಿವರಿಸುವಂತೆ ಕೇಳಿದ್ದರಂತೆ. ಆಗ ಐನಸ್ಟೇನ್ ಅದು ತನಗೂ ಇನ್ನೂ ಏನು ಅರ್ಥವಾಗಿಲ್ಲ ಎಂದು ಹೇಳಿ ಎಲ್ಲರಲ್ಲೂ ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದರಂತೆ. ಹಾಗೇ ಈ ಕಾದಂಬರಿಯನ್ನು ಓದುತ್ತಾ ಅರ್ಥವಾಗಿಯೂ ಅರ್ಥವಾಗದಿರುವ ಬದುಕಿನ ಪ್ರಶ್ನೆ  ಕಾಡುತ್ತದೆ. ಶೀಲ ಮತ್ತು ಜೀವನ ಮೌಲ್ಯದ ಕುರಿತು ಸಂಘರ್ಷ, ಸಾಮಾಜಿಕ ಕಟ್ಟುಪಾಡುಗಳು ಮತ್ತು ಜೀವನ ಪ್ರೀತಿಯ ನಡುವಿನ ಕಂದಕ, ಅವುಗಳ ನಡುವಿನ ಘರ್ಷಣೆಯೇ ಇಲ್ಲಿ ಪ್ರಧಾನವಾಗಿ ಕಾಣುತ್ತದೆ. ಇಷ್ಟೆಲ್ಲ ಬದುಕಿನ ತಾತ್ವಿಕತೆಗಳ ಚರ್ಚಿಸಿಯೂ ಕೊನೆಗೂ ಮತ್ತೆ ಏನೂ ಅರ್ಥವಾಗದೇ ಇದ್ದುಬಿಡುವುದೇ ಬದುಕೇ? ಹಾಗಾಗೇ “The Philosophy which  includes all,exclusively  supports none”


 

One comment to “ಶ್ರೀಧರ ಬಳಗಾರರ “ಮೃಗಶಿರ”: ಕೆಲವು ಟಿಪ್ಪಣಿಗಳು”
  1. ಸುಂದರ ಅವಲೋಕನ. ಪುಸ್ತಕದ ಬಗೆಗೆ ಕುತೂಹಲ ಮೂಡಿಸಿದೆ.

ಪ್ರತಿಕ್ರಿಯಿಸಿ