ಕೊರೋನಾ ನಂತರ: ಸವಾಲನ್ನೇ ಶಿಕ್ಷಣವಾಗಿಸಿಕೊಳ್ಳುವುದು ಹೇಗೆ?

ಕೋವಿಡ್ ಮನುಷ್ಯರೆದುರು ಒಡ್ಡಿರುವ ಸವಾಲು ಅನೂಹ್ಯವಾಗಿದೆ ಮತ್ತು ನಮ್ಮ ಸಾಮಾಜಿಕತೆಯ ಕಲ್ಪನೆಯ ಪ್ರತಿಯೊಂದು ಅಂಶವನ್ನೂ ಪುನರವಲೋಕನಕ್ಕೆ ಒತ್ತಾಯಿಸುತ್ತಿದೆ. ಈ ಎಲ್ಲದರ ಪೈಕಿ ಮನುಷ್ಯರ ಮೂಲಭೂತ ಬೆಳವಣಿಗೆಯ ಇಟ್ಟಿಗೆಯಾದ ಶಿಕ್ಷಣದ ಮೇಲೆ ಇದರ ಪರಿಣಾಮವೇನು? ಇದು ಇನ್ನು ಮುಂದಿನ ಕೆಲವು ವರ್ಷಗಳಲ್ಲಿ ಬೃಹತ್ ಪ್ರಶ್ನೆಯಾಗಿ ಬೆಳೆಯಲಿದೆ. ಆ ನಿಟ್ಟಿನಲ್ಲಿ ಒಂದು ನೋಟ ಇದು.

ಲೋಕವನ್ನ ಬೇಕಾಬಿಟ್ಟಿಯಾಗಿ ಭಾವಿಸಿಬಿಟ್ಟಿದ್ದ ನಮ್ಮೆಲ್ಲರ ನಡೆಗಳನ್ನ ನಡುಗಿಸಿಬಿಟ್ಟಿರುವ ಕೊರೋನಾ ವೈರಸ್ ನಮ್ಮ ಬದುಕುಗಳಲ್ಲಿ ಮಾನಸಿಕ ಕ್ಲೇಷ ಮತ್ತು ಅನಿಶ್ಚಿತತೆ ಹುಟ್ಟು ಹಾಕಿರುವ ಈ ನಿರ್ಣಾಯಕ ಕಾಲಘಟ್ಟದ ಕವಲುದಾರಿಯಲ್ಲಿ ನಿಂತ ಶಿಕ್ಷಕ ಮತ್ತು ಶೈಕ್ಷಣಿಕ ತಜ್ಞರಾಗಿರುವ ನಾವು ಕರುಣಾಜನಕವಾಗಿ ವಿಫಲರಾಗುತ್ತಿರುವುದು ನನ್ನ ದುಃಖಿತನಾಗಿಸಿದೆ. ಈ ಅಯೋಮಯ ಕಾಲಘಟ್ಟದಲ್ಲಿ ಶಿಕ್ಷಣದ ಅರ್ಥ ಮತ್ತು ಉದ್ದೇಶಗಳೇನಿರಬೇಕು ಎಂಬ ಬಗ್ಗೆ ಮರುಚಿಂತನೆ ಮಾಡುವ ಬದಲಿಗೆ ಯಾವ ಸೂಕ್ತ ಆಪುಗಳನ್ನ ಬಳಸಿ ಆನ್ ಲೈನ್ ಶಿಕ್ಷಣ ಕೊಡುವ ಮೂಲಕ ಶಾರೀರಿಕ ಅಂತರ ಎಂಬ ತೊಡಕನ್ನ ಯಾವ ರೀತಿ ವಶೀಕರಣ ಮಾಡಿಕೊಳ್ಳಬಹುದು ಎಂಬ ತಾಂತ್ರಿಕತೆಯ ಬಗೆಗಷ್ಟೇ ನಾವು ಕಾಳಜಿ ವಹಿಸಿದಂತಿದೆ. ಇದು ಹ್ಯಾಗಿದೆ ಎಂದರೆ ನಮ್ಮ ಬದುಕುಗಳಲ್ಲಿ ಯಾವ ಮೂಲಭೂತ ಬದಲಾವಣೆಯೂ ಆಗಿಲ್ಲ , ಆದ್ದರಿಂದ ಅದೇ ಪಠ್ಯ ಪುಸ್ತಕಗಳು, ಅದೇ ಬೋದನಾ ಕ್ರಮ , ಅದೇ ಏಕಾಂಕ ನಾಟಕ, ಅದೇ ಅಸೈನಮೆಂಟ್ ಮತ್ತು ಅದೇ ಪರೀಕ್ಷೆಗಳನ್ನ ‘ ಆನ್ ಲೈನ್ ‘ ಟೀಚಿಂಗ್ ಎಂಬ ಪವಾಡ ಸದೃಶ ತಾಂತ್ರಿಕ ಶಕ್ತಿಯಿಂದ ಸಾಧಿಸಿಬಿಡಬಹುದು ಎಂಬ ಕೃತಕ ಸಹಜತೆಯನ್ನ ನಮಗೆ ನಾವೇ ಹೇರಿಕೊಂಡು ನಟನೆ ಮಾಡುತ್ತಿರುವಂತೆ ತೋರುತ್ತಿದೆ.

ಸಾಂದರ್ಭಿಕ ಚಿತ್ರ: ಕೃಪೆ – Times of India

ಕೋವಿಡ್ ಉಪದ್ರವದ ಮಾನಸಿಕ ಪರಿಣಾಮಗಳನ್ನ ಭಾವಿಸಿ ನೋಡಿ, ಸಾವು ಎಂದರೆ ಅದು ಅಂಕಿ ಸಂಖೆಗಳ ಅಮೂರ್ತ ರೂಪವಲ್ಲ, ಅದೀಗ ನಮ್ಮ ನಡುವಿನ ವಾಸ್ತವ; ಗೋಡೆ ಕಟ್ಟಿಕೊಂಡು ನಾವೀಗ ತುಂಬಾ ಸುಭದ್ರ ಎಂದು ಭ್ರಮಿಸಲಾಗಿದ್ದ ಗೇಟೆಡ್ ಕಮ್ಯೂನಿಟಿಗಳನ್ನ ಈ ವೈರಸ್ ಯಾವ ಕ್ಷಣದಲ್ಲಾದರೂ ಒಳಹೊಕ್ಕು , ಸೋಂಕು ತಾಗಿ ನಾವು ಉಸಿರಾಟದ ತೊಂದರೆ ಮತ್ತು ಕೆಮ್ಮಿನ ಬಾಧೆಗೆ ಒಳಗಾಗಿಬಿಡಬಹುದು. ಆದರೆ ಆಗ ಕಾಲೇಜು ಕಲಿಕಾರ್ಥಿಯೊಬ್ಬಳು ದಿಗಿಲು ಮತ್ತು ಚಿಂತೆಯಿಂದ ತನ್ನ ಲ್ಯಾಪ್ ಟಾಪ್ ತೆರೆದಾಗ ಪ್ರಾಧ್ಯಾಪಕ ‘ ಸ್ನೋ ಬಾಲ್ ತಂತ್ರ ಮತ್ತು ಉದಾಹರಣೆಗಳನ್ನ ಬಳಸಿ ಸಮಾಜಶಾಸ್ತ್ರೀಯ ಅಧ್ಯಯನ ಮಾಡುವ ವಿಧಾನವನ್ನ ಬೋದಿಸುತ್ತಿರುವುದನ್ನ ಕಾಣುತ್ತಾಳೆ ! ಇದು ಅಸಂಗತ ಎನಿಸುವುದಿಲ್ಲವೇ ? ಅಥವಾ ಸಮಾಜಕ್ಕೆ ಬೀಗ ಜಡಿದಿರುವಾಗ ಕೆಳ ಮಧ್ಯಮ ವರ್ಗದ 12 ವಯಸಿನ ಕಲಿಕಾರ್ಥಿಯೊಬ್ಬ ಇಕ್ಕಟ್ಟಿನ ಕೋಣೆಯಲ್ಲಿ ಚಡಪಡಿಕೆಗೆ ಒಳಗಾಗುವುದಿಲ್ಲವೇ ? ಆದರೂ ಆನ್ ಲೈನ್ ತರಗತಿ ಎಂಬುದು ಆಗಲೇಬೇಕಾಗಿರುವುದರಿಂದ ಕುಟುಂಬದಲ್ಲಿ ಇರುವ ಏಕಮಾತ್ರ ಸ್ಮಾರ್ಟ್ ಫೋನನ್ನ ತನ್ನ ತಂದೆಯಿಂದ ಪಡೆದು ತನ್ನ ಮಾಸ್ತರು ಶೇಕಡಾವಾರು ಲೆಕ್ಕ ಅಥವಾ ಲಾಭ ನಷ್ಠಗಳೆಂಬ ಜೀವಘಾತುಕ ಅಧ್ಯಾಯ ಪೂರ್ಣಗೊಳಿಸುವುದನ್ನ ನೋಡುತ್ತಾನೆ ; ಇದು ಅಸಂಗತವಷ್ಟೇ ಅಲ್ಲ ಶುದ್ಧ ಒರಟುತನ ಮತ್ತು ಅಸೂಕ್ಷ್ಮ ಕಿರುಕುಳವಲ್ಲದೇ ಮತ್ತೇನು ಆಗಿರಲು ಸಾಧ್ಯ ?

ಶಿಕ್ಷಣ ಎಂಬುದು ನಿಜವಾಗಲೂ ಬದುಕು ಮತ್ತು ಜೀವವನ್ನ ಖಚಿತಪಡಿಸುವಂಥದೇ ಆಗಿದ್ದರೆ ಅದು ಈ ಎಳೆಯ ಮನಸುಗಳನ್ನ ಎಚ್ಚರಗೊಳಿಸಿ‌, ಅವರ ಪ್ರಜ್ಞೆಯ ಪಾತಳಿಗಳನ್ನ ಮುಟ್ಟಿ ಕೋವಿದ್ ಉಪದ್ರವ ತಂದಿಟ್ಟಿರುವ ಬಿಕ್ಕಟ್ಟನ್ನ ಏಗುವಂಥ ಮಾನಸಿಕ ಮತ್ತು ಆಧ್ಯಾತ್ಮಿಕ ಚೈತನ್ಯವನ್ನ ತಂದುಕೊಡಬೇಕಿತ್ತು. ಮತ್ತು ಉಪದ್ರವದ ದಿಗಿಲು ಸಹಜ ಎಂಬಂತಾಗಿಬಿಟ್ಟಿರುವಾಗ ಸೋಂಕಿತರ ಬಗೆಗಿನ ನಿಶೇಧ , ಅಂತರ ಕಾದುಕೊಳ್ಳುವುದೇ ಪ್ರವಚನವಾಗಿ ಕಟ್ಟಿಕೊಳ್ಳುತ್ತಿರುವಾಗ ತಾನು ಮತ್ತು ಲೋಕದ ಸಂಬಂಧವನ್ನ ಮರು ನಿರೂಪಕ್ಕೆ ಒಳಪಡಿಸುವ , ಕಲಿಕಾರ್ಥಿಗಳ ಸಂದೇಹ ಮತ್ತು ದುಗುಡವನ್ನ ಅರ್ಥ ಮಾಡಿಕೊಳ್ಳುವ , ಅವರೊಂದಿಗೆ ಲಯಬದ್ಧವಾಗಿ ಸಂವಾದ ಮಾಡುವ ಚೈತನ್ಯ ತೋರಬೇಕಿತ್ತು. ವಸ್ತುವೊಂದರ ಘನಮೌಲ್ಯವನ್ನ ತಿಳಿದುಕೊಳ್ಳದಿದ್ದರೆ ಅಥವಾ ಮೊಘಲ್ ಸಾಮ್ರಾಜ್ಯ ಕುಸಿದು ಬೀಳಲು ಇದ್ದ ಹತ್ತು ಕಾರಣಗಳನ್ನ ಈಗಿಂದೀಗಲೇ ನೆನಪಾಗಿ ಧಾರಣೆ ಮಾಡಿಕೊಂಡಿರದಿದ್ದರೆ ಆಗುವಂಥ ತೊಂದರೆ ಎಂಥದೂ ಇರಲಿಲ್ಲ, ಬದಲಾಗಿ ನಿಜವಾಗಿ ಆಗಬೇಕಾಗಿದ್ದು ಏನೆಂದರೆ ಸಾಂತ್ವನಪಡಿಸುವ ಮಾನವೀಯ ಸ್ಪರ್ಷ ; ಮನೆಯಲ್ಲಿ ಮಾಡಿದ ಅಸೈನ್ಮೆಂಟ್ ಮತ್ತು ಪ್ರಾಜೆಕ್ಟ್ ಅಪ್ ಲೋಡ್ ಮಾಡುವ ಕಾಮಗಾರಿಯಲ್ಲ. ಇದೇ ರೀತಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಕ್ಲಾಡ್ ಲೆವಿ ಸ್ಟ್ರಾಸನ ರಾಚನಿಕತೆ ಅಥವಾ ಥರ್ಮೋಡೈನಾಮಿಕ್ಸಿನಂಥ ಮಾಮೂಲು ಉಪನ್ಯಾಸಗಳನ್ನ ಕೊಟ್ಟಿರದಿದ್ದರೆ ಮಾನವರ ಬುದ್ಧಿವಂತಿಕೆಗೆ ಎಂಥ ನಷ್ಠವೂ ಸಂಭವಿಸುತ್ತಿರಲಿಲ್ಲ. ವಾಸ್ತವಿಕವಾಗಿ ಈ ಉಪದ್ರವ ಬಿಕ್ಕಟ್ಟಿನ ಕಾಲಕ್ಕೆ ಬೇಕಾಗಿದ್ದೆಂದರೆ ಎಚ್ಚೆತ್ತ ಜಾಣ್ಮೆ, ಆಳವಾದ ಧಾರ್ಮಿಕತೆ ಮತ್ತು ಗಹನವಾದ ಸೂಕ್ಷ್ಮತೆಯ ಬಂಧಗಾರಿಕೆ. ಬೋದಕರಾದ ನಾವು ಅಧಿಕೃತ ಪಠ್ಯಕ್ಕೂ ಮಿಗಿಲಾಗಿ ಇಂಥದೊಂದು ವಿಧಾನದ ಭಾಗೀದಾರರಾಗಬಲ್ಲೆವೇ ?

ಇಂಥ ಸಂದರ್ಭದಲ್ಲಿ ಮೂರು ಮುಖ್ಯ ಅಂಶಗಳನ್ನ ನಿಮ್ಮ ಮುಂದಿಡುತ್ತಿದ್ದೇನೆ

ಮೊದಲನೆಯದು : ನಿಸರ್ಗದ ಮೇಲಿನ ಮಾನವನ ಪ್ರಾಬಲ್ಯ, ವಿಜ್ಞಾನ ತಂತ್ರಜ್ಞಾನಗಳೆಂಬ ದೇವತೆಗಳ ಮೂಲಕ ಸಾಧಿಸಬಹುದಾದ ಅಪರಿಮಿತ ಪ್ರಗತಿ, ವ್ಯವಸ್ಥೆಯೊಂದನ್ನ ಊಹಿಸುವ, ನಿಯಂತ್ರಿಸುವ ಮೂಲಕ ಅಧಿಪತ್ಯವೊಂದನ್ನ ಸ್ಥಾಪಿಸಬಹುದೆಂಬ ಸ್ವಮೋಹಿ ನಂಬಿಕೆ ಮತ್ತು ಆಧುನಿಕತೆಯ ಸ್ವಗ್ರಹಿತ ಪರಿಕಲ್ಪನೆಗಳನ್ನ ಈ ಕೊರೋನಾ ವೈರಸ್ ಧ್ವಂಸ ಮಾಡಿಬಿಟ್ಟಿದೆ ಎಂಬುದನ್ನ ನಾವೀಗ ಅರ್ಥ ಮಾಡಿಕೊಳ್ಳಲೇಬೇಕಾಗಿದೆ, ನಮ್ಮ ಗ್ರಹಿಕೆ ಮತ್ತು ಚಾಲೂಕುತನಗಳು ಸುಸಂಬದ್ಧವಾಗಿ ಇರುವುದೇ ಆದರೆ ನಾವೀಗ ಹೊಸ ಸವಾಲುಗಳಿಗೆ ಎದುರಾಗಬೇಕು. ಉದಾಹರಣೆಗೆ ನಾವು ಅಹಂಕಾರಿ ಆಕ್ರಮಣಕಾರರಾಗಿರುವ ಬದಲಿಗೆ ವಿನಯವಂತ ಅಲೆಮಾರಿಗಳಾಗಿರುವುದು ಹ್ಯಾಗೆ, ಸ್ತರ ವಿಸ್ತಾರದ ನಿಸರ್ಗ ವ್ಯವಸ್ಥೆಯ ಜೊತೆಗೆ ಜೀವಂತ ಸಂಬಂಧವನ್ನ ಹೊಚ್ಚ ಹೊಸ ಕಾಲ್ಪನಿಕತೆಗಳ ಮೂಲಕ ಕಟ್ಟಿಕೊಳ್ಳುವುದು ಹ್ಯಾಗೆ , ನಾವು ಆರಾದಿಸುತ್ತಿರುವ ಅಣ್ವಸ್ತ್ರ ಸಾಮರ್ಥ್ಯ, ಬಾಹ್ಯಾಕಾಶ ಸಂಶೋಧನೆ, ಬೃಹತ್ ಆಸ್ಪತ್ರೆ ಮತ್ತು ಬುದ್ದಿವಂತಿಕೆಯ ಭ್ರಮೆಯಲ್ಲಿದ್ದ ಅಮೇರಿಕದಂಥ ದೈತ್ಯ ದೇಶದ ಆತ್ಮವಿಶ್ವಾಸವನ್ನೇ ಅಗೋಚರ ವೈರಸ್ ಒಂದು ಉಡುಗಿಸಿಬಿಟ್ಟಿರುವಾಗ ಈ ವಾಸ್ತವಿಕತೆಗಳ ಜೊತೆಗೆ ಯಾವ ರೀತಿಯ ಒಪ್ಪಂದಕ್ಕೆ ಬರುತ್ತೇವೆ ; ಸರಳ ನುಡಿಗಟ್ಟಿನಲ್ಲಿ ಹೇಳಬೇಕೆಂದರೆ ಹೊಚ್ಚ ಹೊಸ ಲೋಕವೊಂದರ ಗಳಿಕೆಗಾಗಿ ಆಧುನಿಕತೆ ಈ ಎಲ್ಲ ಪರಿಕಲ್ಪನೆಗಳನ್ನ ಬಿಚ್ಚಿ ಬಿಸಾಡಬಲ್ಲೆವೇ ?

ಸಾಂದರ್ಭಿಕ ಚಿತ್ರ: ಕೃಪೆThe Hindu

ಎರಡನೆಯದು: ಕೊರೋನ ಉಪದ್ರವಕ್ಕೆ ಸಂಬಂಧಿಸಿದಂತೆ ಆದ ಲೋಕದ ಈ ಬೀಗಮುದ್ರೆ ನಾವು ನಮ್ಮ ಅಂತರಂಗದ ಜೊತೆಗೆ ಒಂದು ಒಪ್ಪಂದಕ್ಕೆ ಬರುವಂತೆ ನಮ್ಮನ್ನ ಒತ್ತಾಯಿಸಿದೆ. ಆಧುನಿಕತೆಯ ಈ ಯುಗದಲ್ಲಿ ಇದು ಅಷ್ಟು ಸುಲಭವಾಗಿ ಸಾಧ್ಯವಾಗುವಂಥದಾಗಿ ಇರಲಿಲ್ಲ ಯಾಕೆಂದರೆ ನಾವೆಲ್ಲ ಬಾಹ್ಯವಾದುದರ ಬಗೆಗಷ್ಟೇ ಮನಸನ್ನ ಕೇಂದ್ರೀಕರಿಸಿಕೊಂಡಿದ್ದೆವು. ಬಾಹ್ಯ ಲೋಕದಲ್ಲಿ ಮಾತ್ರ ಕಾರ್ಯ ನಿರ್ವಹಿಸಲು ಅನುವಾಗುವಂತೆ ತಾಂತ್ರಿಕ ಕುಶಲತೆಗಳಲ್ಲಿ ಪರಿಣತಿ ಸಾಧಿಸಿದ್ದರ ಫಲವಾಗಿ ನಾವು ನಮ್ಮ ಅಂತರಂಗದ ಚಲನಶೀಲತೆಯನ್ನ ಅರ್ಥ ಮಾಡಿಕೊಳ್ಳುವ ಕಲೆಗಾರಿಕೆಯನ್ನೇ ಕಳೆದುಕೊಂಡಿದ್ದೆವು; ನಮ್ಮ ದಿಗಿಲು ಮತ್ತು ಸಿಟ್ಟು , ನಮ್ಮ ಅಹಂ ಮತ್ತು ಆಕ್ರಮಣ ಅಥವಾ ನಮ್ಮ ಕನಸು ಮತ್ತು ಪ್ರಾರ್ಥನೆ ಈ ಎಲ್ಲದರ ಚಲನಶೀಲತೆಗೆ ನಾವು ಕುರುಡರಾಗಿದ್ದೆವು. ವಾಸ್ತವಿಕತೆ ಎಂಥದೆಂದರೆ ಬಹಿರಂಗಕ್ಕೆ ಮಾತ್ರ ಮುಖ ಮಾಡಿದ್ದ ಪ್ರಜ್ಞೆ ಅಂತರಂಗದ ಜೊತೆ ಏಗಲು ಅಸಮರ್ಥವಾಗಿತ್ತು. ಈಗ ನಾವು ಜಗತ್ತಿನಾದ್ಯಂತ ಕಾಣುತ್ತಿರುವ ಮಾನಸಿಕ ವಾಕರಿಕೆ, ಏಕತಾನತೆ ಮತ್ತು ಕೌಟುಂಬಿಕ ಹಿಂಸೆ ಈ ಯಾವೂ ಅಷ್ಟು ಆಶ್ಚರ್ಯ ತರುವಂಥವಲ್ಲ. ಆದ್ದರಿಂದ ಈಗ ನಾವು ನಮ್ಮ ಅಂತರಂಗವನ್ನ ಹ್ಯಾಗೆ ಸಲಹಲಿದ್ದೇವೆ, ತಾಳಿಕೆ ಮತ್ತು ಸಹ.

ಮೂರನೆಯದು: ಅಂತರ ಕಾದುಕೊಳ್ಳುವ ಗೀಳಿನ ದಿಗಿಲು ನಮ್ಮ ಸಾಮುದಾಯಿಕ ನೆಮ್ಮದಿಗೆ ಅಗತ್ಯವಾಗಿದ್ದ ಪ್ರೇಮದ ಆಕರ್ಷಣೆ, ನಂಬಿಕೆ ಮತ್ತು ಮಾನವೀಯ ಸ್ಪರ್ಷವನ್ನೇ ಕಳೆದು ನಮ್ಮಲ್ಲಿ ಅನಿಶ್ಚಿತತೆ ತಂದು ಕುಬ್ಜರನ್ನಾಗಿಸಿದೆ. ಈಗ ಎದುರಾಗಿರುವ ಗಂಡಾಂತರ ಎಂದರೆ ಈ ಬಿಕ್ಕಟ್ಟು ತಮ್ಮ ಬೇಹುಗಾರಿಕೆ ಹೆಚ್ಚಿಸಿಕೊಳ್ಳಲು ಮತ್ತು ಪರಸ್ಪರ ಸಂದೇಹ ಶಂಕೆ ಪ್ರಚೋದಿಸಲು ಸರ್ವಾಧಿಕಾರಿ ಆಡಳಿತಗಳಿಗೆ ಅನುವು ಮಾಡಿಕೊಟ್ಟಿರುವುದು. ಹಾಗಾದರೆ ನಾವು ಮಾನವೀಯ ಸಾಂಗತ್ಯವಿಲ್ಲದ, ಸಹಪಯಣಿಗರ ಒಡನಾಟವುಳ್ಳ ಜೀವಂತ ತರಗತಿ , ಸೃಷ್ಠಶೀಲ ಮನಸುಗಳ ಪ್ರತಿರೋಧಿ ಮೆರವಣಿಗೆ, ಕಾಫಿ ಅಡ್ಡೆಗಳ ನಗೆಬುಗ್ಗೆಯ ಸಂತಸವೇ ಇಲ್ಲದಂತೆ ತಂತ್ರಾತ್ಮಕ ಮತ್ತು ಜೈವಿಕವಾಗಿ ಮಾತ್ರ ಬದುಕಿರಬೇಕೆ, ಕಂಡುಕೊಳ್ಳಲಿರುವ ಹೊಚ್ಚಹೊಸ ಲೋಕದಲ್ಲಿ ನಾವು ಪ್ರೇಮದ ಚೈತನ್ಯ ಮತ್ತು ಮಾನವೀಯ ಸಾಂಗತ್ಯವನ್ನ ಮತ್ತೆ ಕಟ್ಟಿಕೊಳ್ಳಬಲ್ಲೆವೇ, ಶಾಲೆಯ ಮಕ್ಕಳಾಗಿ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾಗಿ ತಾವು ಮನೆಗೆ ಸೀಮಿತವಾಗಿದ್ದರೂ ಅವರೆಲ್ಲ ಇಂಥದೊಂದು ಪ್ರಶ್ನೆಗೆ ಮುಖಾಮುಖಿಯಾಗಿರುವುದು ದಿಟ.

ಶಿಕ್ಷಕರು ಮತ್ತು ಶೈಕ್ಷಣಿಕ ತಜ್ಞರಾಗಿರುವ ನಾವು ಮಾನವತೆಯ ಈ ಅಸ್ತಿತ್ವದ ಪ್ರಶ್ನೆ ಮತ್ತು ಸಮಸ್ಯೆಗಳಿಗೆ ನಮ್ಮ ಶೈಕ್ಷಣಿಕ ವಿಧಾನಗಳನ್ನ ಹತ್ತಿರ ಹತ್ತಿರ ತಾರದಿದ್ದರೆ ನಾವೆಲ್ಲ ಹೊಣೆಗಾರಿಕೆಯೇ ಇಲ್ಲದಂಥ ಒರಟರಾಗಷ್ಟೇ ಉಳಿದುಬಿಡುತ್ತೇವೆ. ಅರ್ಥಪೂರ್ಣ ಶಿಕ್ಷಣ ಮಾದರಿಯೋಂದು ಸಾಕಾರವಾಗಬೇಕು ಎಂಬುದು ಪರ ವಿರೋಧಿ ಚರ್ಚಾಕೂಟವಲ್ಲ, ಪಾಠ ಪ್ರವಚನಗಳನ್ನ ಸಕಾಲಕ್ಕೆ ಪೂರ್ಣಗೊಳಿಸಬೇಕು ಎಂಬ ಹಟವೂ ಅಲ್ಲ , ಆದರೆ ನಮಗೆ ಆಪ್ತವಾಗಿದ್ದ ಲೋಕ ಅವಸಾನದ ಸ್ಥಿತಿ ತಲುಪಿರುವಾಗ, ಪುಸ್ತಕದ ಜ್ಞಾನ ನಿರರ್ಥಕ ಎಂದು ಸಾಬೀತಾಗಿರುವಾಗ ಅದು ಸುಸೂಕ್ಷ್ಮ ವ್ಯತ್ಯಾಸಗಳನ್ನ ಬದುಕುವ ಕಲೆ.

ಅನುವಾದ: ಎಲ್. ಸಿ. ನಾಗರಾಜ್


ಪ್ರತಿಕ್ರಿಯಿಸಿ