ಗಿರೀಶ್ ಕಾರ್ನಾಡ್ ಸರಣಿ : ಕಾರ್ನಾಡ್ ಮತ್ತು ‘ಕಲಾತ್ಮಕ ಚಿತ್ರ’ – ಭಾಗ ೧

ಗಿರೀಶ್ ಕಾರ್ನಾಡರ ಚಿತ್ರಜೀವನದ ಕುರಿತ ಹೊಸ “ಋತುಮಾನ ಸರಣಿ” ಆರಂಭವಾಗುತ್ತಿದೆ. ಸುಮಾರು ೮ ಕಂತುಗಳಲ್ಲಿ ಡೇವಿಡ್ ಬಾಂಡ್ ಕಾರ್ನಾಡರ ನಟನೆ, ನಿರ್ದೇಶನ ಮತ್ತು ಚಿತ್ರಗಳ ಕುರಿತು ಕೇವಲ ಕಲಾವಿಮರ್ಷೆಯ ದೃಷ್ಟಿಕೋನದಿಂದಷ್ಟೇ ಅಲ್ಲದೇ, ಭಾರತದ ಸಾಮಾಜಿಕ ರಚನೆ; ಸಾರಸ್ವತ ಸಮುದಾಯ ಭಾರತೀಯ ಚಲನಚಿತ್ರ ಇತಿಹಾಸದೊಂದಿಗೆ ಹೊಂದಿದ ವಿಶಿಷ್ಟ ಸಂಬಂಧಗಳ ಕುರಿತೂ ಚರ್ಚಿಸಲಿದ್ದಾರೆ. ಕಾರ್ನಾಡರ ಕುರಿತು ಈ ಸರಣಿಯು ಒಂದು ಅಧ್ಯಯನಶೀಲ ಪೂರ್ಣಾವಲೋಕನ ಒದಗಿಸಲಿದೆ. ಅದರ ಮೊದಲನೇಯ ಕಂತು ಇಲ್ಲಿದೆ.

ಗಿರೀಶ ಕಾರ್ನಾಡರ ಬಗೆಗಿನ ಈ ಲೇಖನ ಸರಣಿಯಲ್ಲಿ ನನ್ನ ವಿಶ್ಲೇಷಣೆಯು ನಿರ್ದಿಷ್ಟವಾಗಿ ಅವರ ಚಲನಚಿತ್ರ ನಿರ್ದೇಶನ ಹಾಗೂ ನಟನೆಯ ಕುರಿತಾಗಿದೆ. ಹಾಗೇ ನೋಡಿದರೆ ನಾನು ವಿಶ್ಲೇಷಣೆಗೆ ಆಯ್ದುಕೊಂಡಿರುವ ವಿಷಯದ ಕಾರ್ಯಕ್ಷೇತ್ರದಲ್ಲಿ ಗಿರೀಶರ ಜೀವನದ ಯಶಸ್ಸು ಅಷ್ಟಾಗಿ ಎದ್ದು ಕಾಣುವುದಿಲ್ಲ. ಜೀವನಪೂರ್ತಿ ಚಲನಚಿತ್ರಗಳ ಬಗ್ಗೆ ಅವರಿಗಿದ್ದ ಒಲವು ಒಂದು ರೀತಿ ಅಸ್ಪಷ್ಟತೆಯಿಂದ ಕೂಡಿತ್ತು. ಚಲನಚಿತ್ರ ಕ್ಷೇತ್ರದಲ್ಲಿನ ಅವರ ಸಾಧನೆಯ ಕುರಿತು ಯಾವುದೇ ಸಂದೇಹವಿಲ್ಲ. ಆದರೆ, ನಾಟಕ ರಚನೆ ಹಾಗೂ ರಂಗಭೂಮಿಯಂತೆ ಚಿತ್ರೋದ್ಯಮದಲ್ಲಿನ ಕೆಲಸ ಸೃಜನಶೀಲತೆಯಲ್ಲಿ ಹೊಸತನ ಕಂಡುಕೊಳ್ಳಲು ಅವರಿಗೆ ಸಹಕಾರಿಯಾಯಿತು ಅಂತ ನನಗನ್ನಿಸುವುದಿಲ್ಲ. ಆ ನಿಟ್ಟಿನಲ್ಲಿ ಅದೊಂದು ಕಷ್ಟದ ಹಾದಿಯಾಗಿತ್ತು. ಇದೇ ಕಾರಣದಿಂದಾಗಿ ಬದುಕಿನ ಕೊನೆಯ ದಶಕಗಳಲ್ಲಿ ಚಿತ್ರ ನಿರ್ದೇಶನಕ್ಕಿಳಿಯದೆ ಕೇವಲ ನಟನೆಯಲ್ಲಿ ಮಾತ್ರ ಅವರು ತೊಡಗಿದ್ದರು. ಈ ಅವಧಿಯಲ್ಲಿ ವಿಭಿನ್ನತೆ ಇರುವ ಅನೇಕ ಚಿತ್ರಗಳ ಪೊಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

Picture22

ಸಿನಿಮಾರಂಗದಲ್ಲಿ ಕಾಣಿಸಿಕೊಳ್ಳುವ ಮುಂಚೆಯೇ ನಾಟಕಕಾರರಾಗಿ ಗಿರೀಶರು ಸಾಕಷ್ಟು ಹೆಸರು ಮಾಡಿದ್ದರು. ಕೆಲವರ ಪ್ರಕಾರ ಅವರ ಅತ್ಯುತ್ತಮ ನಾಟಕ ಎಂದೇ ಪರಿಗಣಿತವಾಗಿರುವ ‘ತುಘಲಕ್’ 1964ರಲ್ಲೇ ಪ್ರಕಟವಾಗಿತ್ತು. ಅದಾದ ಆರು ವರ್ಷಗಳ ತರುವಾಯ ಬಿಡುಗಡೆಯಾದ (1970) ‘ಸಂಸ್ಕಾರ’ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದ ಚಿತ್ರ ಕತೆಯನ್ನೂ ಗಿರೀಶರೇ ಸಿದ್ಧಪಡಿಸಿದ್ದರು. ತದನಂತರ ಬಿ. ವಿ. ಕಾರಂತರ ಜತೆಗೂಡಿ ‘ವಂಶವೃಕ್ಷ’ ಸಿನಿಮಾ ನಿರ್ದೇಶಿಸಿದರು. 1972ರಲ್ಲಿ ಮೊದಲ ಬಾರಿ ಸ್ವತಂತ್ರವಾಗಿ ಕವಿ ದ. ರಾ. ಬೇಂದ್ರೆಯವರ ಕುರಿತಾದ ಸಾಕ್ಷ್ಯಚಿತ್ರ, 1973ರಲ್ಲಿ ‘ಕಾಡು’ ಸಿನಿಮಾಗಳ ನಿರ್ದೇಶನದ ಜವಾಬ್ದಾರಿಯನ್ನು‌ ಯಶಸ್ವಿಯಾಗಿ ನಿಭಾಯಿಸಿದರು. 1974ರಲ್ಲಿ ಪುಣೆಯ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್ ಟಿಐಐ) ನಿರ್ದೇಶಕರಾದರು. ಆ ಹುದ್ದೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದರು. ಅದಾದ ಮೇಲೆ ಶ್ಯಾಮ್ ಬೆನಗಲ್ ನಿರ್ದೇಶಿಸಿದ ಅನೇಕ ಯಶಸ್ವಿ ಸಿನಿಮಾಗಳಲ್ಲಿ ನಟ ಹಾಗೂ ಚಿತ್ರಕತೆಗಾರನಾಗಿ ದುಡಿದ ಗಿರೀಶ, ಸಾಕಷ್ಟು ಪ್ರಸಿದ್ಧರಾದರು. ಹೀಗಾಗಿ, ಅಲ್ಪ ಕಾಲಾವಧಿಯಲ್ಲಿ ಕರ್ನಾಟಕದ ಒಳಗೂ ಹೊರಗೂ ಸಿನಿಮಾ ಕ್ಷೇತ್ರದ ಹಲವು ಹಂತಗಳಲ್ಲಿ ಅವರು ತೊಡಗಿದ್ದರು. ಇದೇ ಕಾರಣಕ್ಕಾಗಿ 70ರ ದಶಕದ ನಾಟಕ ರಚನೆ ಮತ್ತು ರಂಗಭೂಮಿಯಲ್ಲಿನ ಕೆಲಸಕ್ಕಿಂತಲೂ ಸಿನಿಮಾ ಕ್ಷೇತ್ರದಲ್ಲಿ ಅವರು ಸಾಧಿಸಿದ್ದು ಹೆಚ್ಚು ಮಹತ್ವಪೂರ್ಣ.

ಈ ಕಾಲಾವಧಿಯು ತನಗೆ ಬಹಳ ಉತ್ತೇಜನಕಾರಿಯಾಗಿತ್ತು ಎಂದು ಅವರು ಹೇಳಿದ್ದರು. ವೈವಿಧ್ಯಮಯ ಸಾಂಸ್ಕೃತಿಕ ಕೇಂದ್ರಗಳ ನಡುವಿನ ಕೊಡುಕೊಳ್ಳುವಿಕೆ, ಹಾಗೆಯೇ ‘ಭಾರತದ ಬಹುತ್ವ ಪ್ರಜ್ಞೆ’ ಇದರ ಹಿಂದೆ ಕೆಲಸ ಮಾಡಿದ್ದು ಗಿರೀಶರ ಅಭಿಪ್ರಾಯಕ್ಕೆ ಮುಖ್ಯ ಕಾರಣ. ಈ ಅವಧಿಯು ಹಲವು ಸಾಧ್ಯತೆಗಳ ವಿಸ್ತರಣೆಗೆ ಅನುವು ಮಾಡಿಕೊಟ್ಟಿತ್ತು ಎಂದರೆ ಉತ್ಪ್ರೇಕ್ಷೆ ಆಗಲಿಕ್ಕಿಲ್ಲ. ರಂಗಭೂಮಿಗೆ ಸಂಬಂಧಿಸಿದಂತೆ ಗಿರೀಶರು ಮಾಡಿದ ಕೆಲಸದಲ್ಲೂ  ಈ ವಿಭಿನ್ನ ಸಂಸ್ಕೃತಿಗಳ ಒಳಗೊಳ್ಳುವಿಕೆಯನ್ನು  ಕಾಣಬಹುದು. ಅವರು ರಚಿಸಿದ ಕೆಲವೇ ನಾಟಕಗಳು ಮಾತ್ರ ಮೊದಲಿಗೆ ಕನ್ನಡದಲ್ಲಿ ರಂಗಕ್ಕೆ ರೂಪಾಂತರವಾದವು ಎಂಬುದೇ ಇದಕ್ಕೆ ಪುರಾವೆ. ಇದನ್ನು ಅವರೇ ಸಾಕಷ್ಟು ಸಲ‌ ಹೇಳಿಕೊಂಡಿದ್ದಾರೆ. ಗಿರೀಶರ ಆತ್ಮೀಯ ಸಹೋದ್ಯೋಗಿ ಬಿ. ವಿ. ಕಾರಂತರು (ಕಾರ್ನಾಡರ ಹಲವು ನಾಟಕಗಳನ್ನು ನಿರ್ದೇಶಿಸಿದವರು) ಮೊದಲಿಗೆ ದೆಹಲಿ ನಂತರ ಭೋಪಾಲ್ ನಲ್ಲಿ ಕೆಲಸ ಮಾಡಿದವರು. ಕಾರ್ನಡರಿಗೆ ಮರಾಠಿ ರಂಗಭೂಮಿ ಹಾಗೆಯೇ ಮುಂಬೈನ ಪೃಥ್ವಿನ್ ಥಿಯೇಟರ್ ಜತೆ ಉತ್ತಮ ಸಂಬಂಧವಿತ್ತು.

70ರ ದಶಕವು ‘ಹೊಸ ಅಲೆಯ’ ಸಿನಿಮಾಗಳ ಉಚ್ಛ್ರಾಯ ಕಾಲ. ಸತ್ಯಜಿತ್ ರೇ ಅವರ ಅನೇಕ ಬೆಂಗಾಲಿ ಸಿನಿಮಾಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಗಳಿಸಿದ ನಂತರ, ತುಸು ತಡವಾಗಿ ಈ ‘ಹೊಸ ಅಲೆಯ’ ಚಿತ್ರಗಳ ಕಾಲ ಆರಂಭವಾಯಿತು. ಕಾರ್ನಾಡರ ಪ್ರಕಾರ ಸತ್ಯಜಿತ್ ಅವರ ಸಿನಿಮಾಗಳು ಆ ಮಾಧ್ಯಮದ ‘ಕಲಾತ್ಮಕ’ ಸಾಧ್ಯತೆಯನ್ನು ಆವಿಷ್ಕರಿಸಿ ಎತ್ತರಿಸಿದ್ದವು. ಅವರ ಮಾತಿನಲ್ಲಿಯೇ ಹೇಳುವುದಾದರೆ ರೇ ಅವರ ಕಲಾಕೃತಿಗಳು ಸಿನಿಮಾ ರಂಗದ ‘ಗೌರವ ಹೆಚ್ಚಿಸಿದ್ದವು’ ಮತ್ತು ಅಂತಹ ‘ಗೌರವ’ವನ್ನು ಚಿತ್ರರಂಗ ಅಲ್ಲಿಯವರೆಗೆ ಕಂಡಿರಲಿಲ್ಲ.

ಈ ಲೇಖನದಲ್ಲಿ ‘ಆರ್ಟ್ ಫಿಲ್ಮ್’ (ಕಲಾತ್ಮಕ ಚಿತ್ರ) ಎಂಬ ಪರಿಕಲ್ಪನೆಯ ಬಗ್ಗೆ ಹೆಚ್ಚು ಮಾತನಾಡಲು ನನಗೆ ಇಷ್ಟವಿಲ್ಲ. ಈ ಪರಿಕಲ್ಪನೆಯನ್ನು ಹಲವರು ಭಿನ್ನವಾಗಿ ವ್ಯಾಖ್ಯಾನಿಸುತ್ತಾರೆ. ಸಿನಿಮಾ ಚರಿತ್ರೆಯ ಎಲ್ಲ ಕಾಲಘಟ್ಟಗಳಲ್ಲಿ ಭಿನ್ನವಾದ ವಿಶ್ಲೇಷಣೆಯೊಂದಿಗೆ ಈ ಪರಿಕಲ್ಪನೆಯನ್ನು ಅರ್ಥೈಸಲಾಗುತ್ತದೆ. ‘ಆರ್ಟ್ ಹೌಸ್’ (ಅಮೆರಿಕದಲ್ಲಿ ಹಾಲಿವುಡ್ ನಿಂದ ಹೊರಗಿದ್ದ ವಿದೇಶಿ ಸಿನಿಮಾಗಳನ್ನು ಹೀಗೇ ಕರೆಯುತ್ತಿದ್ದರು) ಮತ್ತು ‘ಪ್ಯಾರಲಲ್ ಸಿನಿಮಾ’ (ಇದಂತೂ ಅರ್ಥಹೀನ ಪದ) ಎಂಬ ಪರಿಕಲ್ಪನೆಗಳ ಕುರಿತು ಮಾತನಾಡಲು ನನಗೆ ಆಸಕ್ತಿಯಿಲ್ಲ. ಆದರೆ ಹಲವು ದೇಶಗಳ ಭಿನ್ನ ಕಾಲಾವಧಿಗಳಲ್ಲಿ ‘ಆರ್ಟ್ ಫಿಲ್ಮ್’ ಎಂಬುದರ ಸುತ್ತ ಹೆಣೆದ ಆಲೋಚನಾ ಕ್ರಮಗಳಿಗೆ ಮಹತ್ವವಿದೆ. ನನ್ನ ಮಟ್ಟಿಗೆ ಎಲ್ಲ ಉತ್ತಮ ಸಿನಿಮಾಗಳು ಕಲಾತ್ಮಕವೇ.

70-80ರ ದಶಕಗಳ ಭಾರತದಲ್ಲಿ ಈ ಆಲೋಚನಾ ಕ್ರಮವು ನಿಸ್ಸಂಶಯವಾಗಿ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಸಿನಿಮಾ ಚರಿತ್ರೆಯಲ್ಲಿ ಆದ ಅನೇಕ ಮಹತ್ವದ ಬದಲಾವಣೆ ಮತ್ತು ಬೌದ್ಧಿಕ ಚಳವಳಿಗಳಂತೆ, ಈ ಪರಿಕಲ್ಪನೆಯೂ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳಿಗೆ ಕಾರಣವಾಗಿದೆ. ಈ ಅವಧಿಯಲ್ಲಿ ಆಸಕ್ತಿದಾಯಕ ಮತ್ತು ಅತ್ಯುತ್ತಮವಾದ ಅನೇಕ ಸಿನಿಮಾಗಳು ತೆರೆಗೆ ಬಂದವು. ಅಂತಹ ಪರಿಕಲ್ಪನೆಯ ಆಲೋಚನಾ ಕ್ರಮವಿಲ್ಲದಿದ್ದರೆ ಆ ಸಿನಿಮಾಗಳು ಪ್ರಾಯಶಃ ನಿರ್ಮಾಣವಾಗುತ್ತಿರಲಿಲ್ಲ. ಆದರೆ, ಇದರಿಂದಾಗಿ ಸಿನಿಮಾ ನಿರ್ಮಾಣ ಮತ್ತು ಪ್ರೇಕ್ಷಕರ ಮಧ್ಯೆ ಬಿರುಕು ಮೂಡಿ ಎರಡು ವಿರೋಧಿ ಬಣಗಳಾಗಿದ್ದು ಸುಳ್ಳಲ್ಲ. ಈ ಬೆಳವಣಿಗೆಯ ಉತ್ತರವಾಗಿ ಶುರುವಾದ ಅನಾರೋಗ್ಯಕರ ವಾತಾವರಣ ಈಗಲೂ ಭಾರತದ ಎಲ್ಲ ಸಿನಿಮಾ ಸಂಪ್ರದಾಯಗಳಲ್ಲಿ ಮುಂದುವರಿದಿದೆ.

ಮುಂಬೈ, ಕೇರಳ, ಕರ್ನಾಟಕ ಸೇರಿದಂತೆ ಭಾರತದ ಅನೇಕ ಕಡೆ 70ರ ದಶಕದ ‘ಹೊಸ ಅಲೆಯ’ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದ ಜನರು ಮಾತ್ರ ತಾವು ಈ ಕಲ್ಪನಾತೀತ ‘ಆರ್ಟ್ ಫಿಲ್ಮ್’ ಎಂಬ ಪರಿಕಲ್ಪನೆಯ ಹುಡುಕಾಟದಲ್ಲಿದ್ದೇವೆ ಎಂಬ ಭಾವನೆಯಲ್ಲಿದ್ದರು. ತಮಿಳು ಚಿತ್ರರಂಗ ಮಾತ್ರ ಈ ಪರಿಕಲ್ಪನೆಗಿಂತ ಭಿನ್ನವಾಗಿ ಮತ್ತು ಅರ್ಥಪೂರ್ಣವಾಗಿ ಸಿನಿಮಾ ಕಲೆಯ ಶೋಧನೆಯಲ್ಲಿ ಮುಳುಗಿತ್ತು. ನಾನು ಆಗಲೇ ಹೇಳಿದಂತೆ ಕಾರ್ನಾಡರಿಗೆ ಮಾತ್ರ ಈ ಪರಿಕಲ್ಪನೆಯೇ ‘ಹೆಚ್ಚು ಗೌರವ’ದಿಂದ ಕೂಡಿತ್ತು. ಅವರ ಮಾತುಗಳಲ್ಲೇ ಹೇಳುವುದಾದರೆ “ಸಿನಿಮಾ, ಸಾಹಿತ್ಯ ಹಾಗೂ ರಂಗಭೂಮಿಯ ಕ್ಷೇತ್ರಗಳಿಗೆ ಈ ಹೊಸ ಅಲೆಯು ವಿನೂತನ ಚೈತನ್ಯ ತುಂಬಿತು. ಹೀಗಾಗಿ, ವಿಶಿಷ್ಟ ಸೃಜನಶೀಲ ಶಕ್ತಿ ಮತ್ತು ಉತ್ಕಟತೆಯೊಂದಿಗೆ ಇಂತಹ ಸಿನಿಮಾಗಳು ಆಗ ನಿರ್ಮಾಣವಾದವು.” ಇದೇ ಕಾರಣಕ್ಕಾಗಿ ಆ ಪರಿಕಲ್ಪನೆಯ ಅನ್ವೇಷಣೆಯಲ್ಲಿ ತೊಡಗಿದ ಪ್ರಕ್ರಿಯೆಯೇ ಕಾರ್ನಾಡರಿಗೆ ಮುಖ್ಯವಾಗುತ್ತದೆ.

ಟಾಮ್ ಕೋವನ್: ಸಂಸ್ಕಾರ ಚಿತ್ರದ ಛಾಯಾಗ್ರಹಕ

ಟಾಮ್ ಕೋವನ್: ಸಂಸ್ಕಾರ ಚಿತ್ರದ ಛಾಯಾಗ್ರಹಕ

1970ರ ‘ಸಂಸ್ಕಾರ’ ಸಿನಿಮಾದಲ್ಲಿ ಕಾರ್ನಾಡರು ತೊಡಗಿಕೊಳ್ಳಲು ಕಾರಣ ಅವರೇ ಹೇಳಿದ ಈ ಸೃಜನಶೀಲ ಹಸಿವು ಹಾಗೂ ಉತ್ಕಟತೆ. ಯಾವುದೇ ರೀತಿಯ ‘ಕಲೆಯ’ ಅನ್ವೇಷಣೆಗಿಂತ ಹೆಚ್ಚಾಗಿ ಈ ಕಾರಣಗಳು ಅವರ ಮೊದಲ ಸಿನಿಮಾದಲ್ಲಿನ ಕೆಲಸದಲ್ಲಿ ಎದ್ದು ಕಾಣುತ್ತದೆ. ಯು. ಆರ್. ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಗಿಂತ ಹೆಚ್ಚಾಗಿ ಆ ಕಾದಂಬರಿ ಆಧಾರಿತ ಸಿನಿಮಾದಲ್ಲಿ ಈ ಅಂಶಗಳು ತುಸು ಪ್ರಖರವಾಗಿಯೇ ಕಂಡುಬರುತ್ತವೆ. ಈ ಸಿನಿಮಾ ಕಂಡ ಯಶಸ್ಸು ಮತ್ತು ಬೀರಿದ ಪ್ರಭಾವಕ್ಕೆ ತಾನೇ ಮುಖ್ಯ ಕಾರಣ ಎಂಬ ಭಾವನೆ ಮೂಡುವಂತೆ ಕಾರ್ನಾಡರು ಅನೇಕ ಸಲ ಮಾತಾಡಿದ್ದಿದೆ. ಅದನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದಿಲ್ಲ. ಆ ಸಿನಿಮಾ ಗಮನಾರ್ಹವಾಗಲು ಕಾರಣ ಕೇವಲ ಗಿರೀಶರು ಬರೆದ ಚಿತ್ರಕತೆ ಅಲ್ಲ. ಬದಲಿಗೆ ಚಿತ್ರದ ಒಟ್ಟಾರೆ ಶೈಲಿ ಹಾಗೂ ಅದು ಹೊಂದಿದ್ದ ‘ಸಾಕ್ಷ್ಯಚಿತ್ರದ’ ಗುಣ. ಭಾರತೀಯ ಚಿತ್ರಗಳಲ್ಲಿ ಈ ಸಾಕ್ಷ್ಯಚಿತ್ರದ ಗುಣ ಕಾಣಸಿಗುವುದು ಬಹಳ ಅಪರೂಪ. ಆದರೆ ಆ ಕಾಲದಲ್ಲಿ ಜಗತ್ತಿನಾದ್ಯಂತ ಇಂತಹ ಗುಣವನ್ನು ಅಳವಡಿಸಿಕೊಳ್ಳುವುದು ‘ಫ್ಯಾಷನ್’ ಆಗಿತ್ತು. ಅದೇ ವೇಳೆಯಲ್ಲಿ ವಿಯೆಟ್ನಾಂ ಮತ್ತು ನೈಜೀರಿಯದಲ್ಲಿ ನಡೆದ ಯುದ್ಧದ ವರದಿಗಳ ನ್ಯೂಸ್ ರೀಲ್ ದೃಶ್ಯಗಳು ಎಲ್ಲ ರೀತಿಯ ಸಿನಿಮಾ ನಿರ್ದೇಶಕರ ಮೇಲೆ ಗಾಢವಾದ ಪರಿಣಾಮ ಬೀರಿದ್ದವು.

ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿ ಮಾತ್ರ ಹಳೆಯ ಶೈಲಿಯಲ್ಲಿಯೇ ಇದೆ. 30-40ರ ದಶಕಗಳ ಬ್ರಿಟಿಷ್‌ ಲೇಖಕರ ಶೈಲಿಯೇ ನವ್ಯ ಸಾಹಿತ್ಯದ ಗೀಳಾಗಿತ್ತು. ಆದರೆ ಈ ಕಾದಂಬರಿಯನ್ನು ಸಿನಿಮಾಗೆ ರೂಪಾಂತರಗೊಳಿಸಿದ ಪಟ್ಟಾಭಿರಾಮ ರೆಡ್ಡಿ ಮಾತ್ರ ಅದಕ್ಕೊಂದು ಆಧುನಿಕತೆಯ ಭಾವ ತುಂಬಿದರು. ಅವರೊಂದಿಗೆ ಚಿತ್ರದ ಛಾಯಾಗ್ರಾಹಕ ಟಾಮ್ ಕೊವನ್ ಅವರ ಪರಿಶ್ರಮವು ಸ್ತುತ್ಯಾರ್ಹ. ಟಾಮ್, ಅಲ್ಲಿಯವರೆಗೆ ಸಾಕ್ಷ್ಯಚಿತ್ರದ ನಿರ್ಮಾಣ ಕಾರ್ಯದಲ್ಲಿ ಮಾತ್ರ ಅನುಭವ ಹೊಂದಿದ್ದರು. ಟಾಮ್ ಮತ್ತು ಪಟ್ಟಾಭಿರಾಮ ರೆಡ್ಡಿ, staccato rhythm (ಎಲ್ಲ‌ ಪಾತ್ರಧಾರಿಗಳು ಒಬ್ಬರಿಗೊಬ್ಬರು ಬೇರ್ಪಟ್ಟು ತಮ್ಮದೇ ಭಾವಗಳಲ್ಲಿ ಇರುವಂತೆ ಮಾಡುವುದು ಎಂದು ಇಲ್ಲಿ ಗ್ರಹಿಸಬೇಕು) ಎಂಬ ತಂತ್ರವನ್ನು ‘ಸಂಸ್ಕಾರ’ದಲ್ಲಿದ್ದ ಅನನುಭವಿ ನಟ-ನಟಿಯರ ಮೇಲೆ ಹೇರುವಲ್ಲಿ ಯಶಸ್ವಿಯಾದರು. ರಷ್ಯಾದ ಶ್ರೇಷ್ಠ ನಿರ್ದೇಶಕ ಇವಗೆನಿ ಬಾವರ್ ಕೂಡ ಇದೇ ರೀತಿ ತನ್ನ ಸಿನಿಮಾಗಳ ಕಲಾವಿದರಿಗೆ ಕಿರಿಕಿರಿ ಮಾಡುತ್ತಿದ್ದನಂತೆ. ಕ್ಯಾಮೆರಾ ಮುಂದೆ ನಟಿಸದೇ ನಿಮ್ಮ ಭಾವಗಳಲ್ಲಿ ಇದ್ದು ಬಿಡಿ, ಕ್ಯಾಮೆರಾ ತನ್ನ ಕೆಲಸ ಮಾಡಲಿದೆ ಎಂದು ಪದೇ ಪದೇ ಹೇಳುತ್ತಾ ಅವರ ಮೇಲೆ ಒತ್ತಡ ಹೇರುತ್ತಿದ್ದನಂತೆ. ಅಲ್ ಫ್ರೆಡ್ ಹಿಚ್ ಕಾಕ್ ಕೂಡ ಮುಂದೆ ಇದೇ ತಂತ್ರವನ್ನು ಬಳಸಿದ. ಈ ಮಾದರಿಯಲ್ಲಿ ಸಂಸ್ಕಾರದ ಎಲ್ಲ ಪಾತ್ರಧಾರಿಗಳು ನಟಿಸಿಯೇ ಇಲ್ಲ ಎಂದು ಕಾಣುವ ಹಾಗೆ ರೆಡ್ಡಿ ಮತ್ತು ಟಾಮ್ ಕೆಲಸ ಮಾಡಿದ್ದರು. ಹೀಗೆ ಮಾಡಿ ಪಾತ್ರಗಳಲ್ಲಿನ ಭಾವಗಳನ್ನು ಹೆಚ್ಚು ವಾಸ್ತವಿಕ ನೆಲೆಯಲ್ಲಿ ಸೆರೆಹಿಡಿದು ‘ರಿಯಲ್’ ಎಂಬುವಂತೆ ತೋರಿಸುವಲ್ಲಿ ಯಶಸ್ಸು ಸಾಧಿಸಿದ್ದರು. ಕಾರ್ನಾಡರ ನಟನಾ ವೃತ್ತಿಜೀವನದಲ್ಲಿ ಪ್ರಾಣೇಶಾಚಾರ್ಯನ ಪಾತ್ರದಲ್ಲಿನ ಅವರ ಅಭಿನಯ ಅತ್ಯುತ್ತಮವಾಗಿದೆ ಎಂಬುದು ನನ್ನ ಅನಿಸಿಕೆ. ‘ನಟನೆ’ಯ ಕಷ್ಟ ಗೊತ್ತಾಗದ ಹಾಗೆ ಪಾತ್ರದ ಮಾನಸಿಕ ತಾಕಲಾಟಗಳನ್ನು ಅವರು ಪ್ರೇಕ್ಷಕರಿಗೆ ದಾಟಿಸಿದ್ದರು. ಈ ಪಾತ್ರದಲ್ಲಿ ನಟ ಕಾರ್ನಾಡರಿಗಿಂತ ‘ಪ್ರಾಣೇಶಾಚಾರ್ಯ’ನಾಗಿ ಅವರು ಪ್ರಭಾವ ಬೀರಿದ್ದರು. ಮುಂದೆ ಕಾರ್ನಾಡರನ್ನು ಹೀಗೆ ತೆರೆಯ ಮೇಲೆ ನೋಡಲಾಗಲಿಲ್ಲ.

ಇನ್ನೂ ಈ ಸಿನಿಮಾಗೆ (ಮತ್ತು ಕಾದಂಬರಿ) ಸುತ್ತಿಕೊಂಡ ವಿವಾದಗಳು ಅದರ ವಿಷಯದಿಂದಲ್ಲದೇ, ಅನಂತಮೂರ್ತಿಯವರ ಗಟ್ಟಿಯಾದ ರಾಜಕೀಯ ನಿಲುವುಗಳಿಂದ ಉದ್ಭವವಾಗಿರಬಹುದು ಎಂದೇ ನನ್ನ ಅನುಮಾನ. ಕಾದಂಬರಿಯ ವಿಷಯದಲ್ಲಿನ ವ್ಯಂಗ್ಯವು ಚಾಣಾಕ್ಷತನದಿಂದ ಕೂಡಿದೆ. ಆದರೆ, ಸಾಮಾಜಿಕ ವ್ಯವಸ್ಥೆಯ ವಿಮರ್ಶೆಯಾಗಿ ಅಷ್ಟು ಪ್ರಖರವಾಗಿಲ್ಲ. ಇದರಲ್ಲಿ ಚಿತ್ರಿತವಾದ ‘ಅಗ್ರಹಾರ’ ಸಮುದಾಯವು ಸಮಕಾಲೀನವಾಗಿರಲಿಲ್ಲ. ಒಂದು ರೀತಿಯ reductio ad absurdism (ಅಂದರೆ ಒಂದು ಪ್ರದೇಶದಲ್ಲಿನ ಘಟನಾವಳಿಗಳನ್ನು ಅಸಂಗತ ಅಥವಾ ವಿರೋಧಾಭಾಸದ ತರ್ಕದಿಂದ ನೋಡುತ್ತಾ ಸಮರ್ಥಿಸುವ ಧಾಟಿಯಲ್ಲಿ ಮಾತಾಡುವುದು) ಸಂಸ್ಕಾರದಲ್ಲಿ ಕಾಣಿಸುತ್ತದೆ. ಕ್ರೌರ್ಯದ ಹೇಸಿಗೆಯನ್ನು ಹಾಗೂ ಅದರ ಸುತ್ತಲಿನ ಕ್ಲುಲ್ಲಕ ರಾಜಕಾರಣವನ್ನು ಎಷ್ಟೇ ಪ್ರಖರವಾಗಿ ತೋರಿಸಲು ಯತ್ನಿಸಿದರೂ, ಅದೊಂದು ‘ಹಾಸ್ಯ/ವ್ಯಂಗ್ಯ ಲೇಪಿತ’ ಕತೆಯಾಗಿ ಮಾತ್ರವೇ ನಿಲ್ಲುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಸಂಸ್ಕಾರದ ‘ಅಗ್ರಹಾರವು’ 1934ರ ಗೆಬ್ರಿಯಲ್ ಶಿವಲಿಯೆ ಬರೆದ ‘ಕ್ಲೊಶ್ ಮೇರೊ’ ಎಂಬ ಫ್ರೆಂಚ್ ಕಾದಂಬರಿಯಲ್ಲಿನ ಚಿಕ್ಕ ಪಟ್ಟಣದಂತೆ ನನಗೆ ಕಾಣುತ್ತದೆ.

ಕ್ಲೊಶ್ ಮೇರೊ ಎಂಬ ಪಟ್ಟಣದ ಜನರು ಸಾರ್ವಜನಿಕ ಶೌಚಾಲಯ ಕಟ್ಟುವ ಸ್ಥಳೀಯ ಶಾಲಾ ಮಾಸ್ತರನೊಬ್ಬನ ಯೋಜನೆಯ ಕುರಿತು ಸದಾಕಾಲ ತೀವ್ರಸ್ತರದ ವಾದದಲ್ಲಿ ತೊಡಗಿರುತ್ತಾರೆ; ಮಾಡಲು ಅದೊಂದೇ ಕೆಲಸವಿದೆ ಎನ್ನುವಂತೆ. ಅದೊಂದು ‘ಬ್ಲ್ಯಾಕ್ ಕಾಮಿಡಿ’. ಇದೇ ರೀತಿ ಸಂಸ್ಕಾರವು ಭಾರತೀಯ ಸನ್ನಿವೇಶದಲ್ಲಿ ಒಂದು ‘ಬ್ಲ್ಯಾಕ್ ಕಾಮಿಡಿ’. ವ್ಯಂಗ್ಯದ ಹೊರತಾಗಿ ಈ ಎರಡು ಕಥಾನಕಗಳು ಹಳೆಯ ನೆನಪುಗಳ ಮೇಲೆ ಸವಾರಿ ಮಾಡುತ್ತ ಕೊನೆಯಾಗುತ್ತವಷ್ಟೆ. ಅಗ್ರಹಾರದ ವಿಮರ್ಶೆಯನ್ನು ತೋರಿಕೆಗಾಗಿ ಮಾಡಲಾಗಿದೆ ಎಂದು ಅನ್ನಿಸುವುದು ಇದೇ ಕಾರಣಕ್ಕಾಗಿ. ವಿಲಕ್ಷಣ ಮತ್ತು ಹಾಸ್ಯಾಸ್ಪದವಾದ ಆದರೆ ಕೆಡುಕುಂಟು ಮಾಡದ ಸಮುದಾಯ ಇದರಲ್ಲಿ ಚಿತ್ರಿತವಾಗಿದೆ. ಭೂತಕಾಲದ ಕತೆ ಹೇಳುವ ಸಂಸ್ಕಾರವು ಪ್ರಖರತೆ ಇಲ್ಲದೇ ಸೊರಗಿದೆ. ಭೂತಕಾಲದ ಅಗ್ರಹಾರದ ವ್ಯವಸ್ಥೆ ಮತ್ತು ಅದರಲ್ಲಿನ ಕ್ರೌರ್ಯದ ಬಗ್ಗೆ ಆ ಕಾಲದಲ್ಲಿ ಮಾತನಾಡಿದ್ದ ಕಾದಂಬರಿ, ವರ್ತಮಾನ ಹಾಗೂ ಭವಿಷ್ಯದಲ್ಲಿ ಅದರಿಂದಾಗುವ ದುಷ್ಪರಿಣಾಮಗಳ ಮೇಲೆ ಬೆಳಕು ಚೆಲ್ಲದೇ ಇರುವುದು ವಿಷಯದ ಗಂಭೀರತೆಯನ್ನು ಪರಿಗಣಿಸಿಲ್ಲ ಎಂಬುದನ್ನು ತೋರಿಸುತ್ತದೆ.

ಸಂಸ್ಕಾರ ಪ್ರಕಟವಾದ ವರ್ಷದಲ್ಲಿಯೇ ಹೊರಬಂದ ಎಸ್. ಎಲ್.‌ ಭೈರಪ್ಪನವರ ‘ವಂಶವೃಕ್ಷ’ ಕಾದಂಬರಿಯನ್ನು ಆಧರಿಸಿ ಬಿ. ವಿ. ಕಾರಂತರೊಟ್ಟಿಗೆ ಕಾರ್ನಾಡರು ಸಿನಿಮಾ ನಿರ್ದೇಶಿಸಿದ್ದರು. ಸಂಸ್ಕಾರಕ್ಕಿಂತ ಭೈರಪ್ಪನವರ ಈ ಕಾದಂಬರಿಯು ಸಾಮಾಜಿಕ ವ್ಯವಸ್ಥೆಯನ್ನು ತೀಕ್ಷ್ಣವಾಗಿ ವಿಮರ್ಶಿಸುತ್ತದೆ. ಭೂತಕಾಲದ ಚಿತ್ರಣದ ಬದಲಾಗಿ ವಾಸ್ತವಿಕವಾದ ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಘಟನಾವಳಿಗಳು ಇದರಲ್ಲಿರುವುದೇ ಅದರ ತೀಕ್ಚ್ಣತೆಗೆ ಕಾರಣ. ಜತೆಗೆ, ಸಂಸ್ಕಾರದಂತೆ ಈ ಕಾದಂಬರಿಗೆ ಉದ್ದೇಶಪೂರ್ವಕವಾದ ಮತ್ತು ಆಗ ಸಾಕಷ್ಟು ಚಾಲ್ತಿಯಲ್ಲಿದ್ದ ರಾಜಕೀಯ ಚಿಂತನೆಯನ್ನು ಎತ್ತಿ ಹಿಡಿಯುವ ಲೆಕ್ಕಾಚಾರವಿರಲಿಲ್ಲ ಎಂಬುದು ಮತ್ತೊಂದು ಕಾರಣ. ಅಗ್ರಹಾರದ ಸಾಮುದಾಯಿಕ ಆಚರಣೆಗಳಿಂದ ದೂರ ಸರಿದ ಮಂದಿಗೆ ಅನಂತಮೂರ್ತಿಯವರ ಕತೆ-ಕಾದಂಬರಿಗಳು ಹೆಚ್ಚಾಗಿ ರುಚಿಸುತ್ತವೆ. ಅವುಗಳಲ್ಲಿನ ಉಪದೇಶದ ಧಾಟಿಯು ಇದಕ್ಕೆ ಕಾರಣ. ಇದರಿಂದಾಗಿ ಅವುಗಳಲ್ಲಿನ ವಿಚಾರಧಾರೆಯನ್ನು ಮೆಚ್ಚುವ ಜನರಿಗೆ ಅದು ಮುಖ್ಯವಾಗುತ್ತದೆ. ಮೆಚ್ಚದೇ ಇರುವವರಲ್ಲಿ ಕಿರಿಕಿರಿಯ ಭಾವ ಉಂಟು ಮಾಡುತ್ತದೆ. ಆದರೆ, ಇದೇ ಮಾತನ್ನು ವಂಶವೃಕ್ಷ ಕಾದಂಬರಿ ಹಾಗೂ ಸಿನಿಮಾದ ಬಗ್ಗೆ ಹೇಳಲು ಸಾಧ್ಯವಾಗುವುದಿಲ್ಲ. ಈ ಎರಡು ಮಾಧ್ಯಮಗಳಲ್ಲಿ ಚಿತ್ರಿತವಾದ ಕತೆಯು ಓದುಗ-ನೋಡುಗರನ್ನು ಚಿಂತನೆಗೆ ಹಚ್ಚುತ್ತದೆ. ಭಿನ್ನ ವೈಚಾರಿಕ ನೆಲೆಯಲ್ಲಿರುವ ಸಂಪ್ರದಾಯಸ್ಥ ಹಾಗೂ ಆಧುನಿಕರಿಗೆ ತಮ್ಮ ನಂಬಿಕೆಗಳನ್ನು ಅನುಮಾನದಿಂದ ನೋಡುವ ಹಾಗೆ ಪ್ರಚೋದಿಸುತ್ತದೆ. ವಂಶವೃಕ್ಷದ ಎಲ್ಲ ಪಾತ್ರಗಳು ತಮ್ಮ ನಂಬಿಕೆಗಳಿಂದಲೇ ಆಘಾತ ಅನುಭವಿಸುತ್ತವೆ. ಸಂಪ್ರದಾಯಸ್ಥ ಕುಟುಂಬ ವ್ಯವಸ್ಥೆಯಲ್ಲಿ ಇಟ್ಟ ನಂಬಿಕೆಯು ಮಾವನ ಪಾತ್ರವಾದ ಶ್ರೋತೃಗಳಿಗೆ ಘಾಸಿ ಮಾಡುತ್ತದೆ. ಗಂಡನನ್ನು ಕಳೆದುಕೊಂಡ ಶ್ರೋತೃಗಳ ಸೊಸೆ ಮರು ಮದುವೆಯಾಗಲು ಹವಣಿಸುತ್ತಾಳೆ. ಆದರೆ, ಕೊನೆಗೆ ಇಂತಹ ವ್ಯಕ್ತಿ ಸ್ವಾತಂತ್ರ್ಯ ನೀಡುವ ಚಿಂತನಾ ಕ್ರಮವೇ ಮುಳುಗುವಾಗುವಂತಹ ಸನ್ನಿವೇಶ ಆಕೆಗೆ ಎದುರಾಗುತ್ತದೆ. ಸಾವಿನ ಹೊರತಾಗಿ, ಈ ಎಲ್ಲ‌ ಜಂಜಾಟಗಳಿಂದ ತಪ್ಪಿಸಿಕೊಳ್ಳಲು ಶ್ರೋತೃಗಳು ಹುಡುಕುವ ದಾರಿ ‘ಸನ್ಯಾಸತ್ವ’. ಶ್ರೀಲಂಕಾದ ಹುಡುಗಿಯ ಪಾತ್ರವು (ರತ್ನಾ) ಭಾರತವನ್ನು ಬಿಟ್ಟು ತಾಯ್ನಾಡಿಗೆ ಹೋಗುವುದನ್ನೇ ಬಿಡುಗಡೆಯ ದಾರಿಯಾಗಿಸಿಕೊಳ್ಳುತ್ತಾಳೆ.

ನೈಜ ಅರ್ಥದಲ್ಲಿ ವಂಶವೃಕ್ಷ ಸಿನಿಮಾ ಜಾತಿ ವ್ಯವಸ್ಥೆಯ ಕುರಿತಾಗಿಲ್ಲ. ಭಾರತವು ಸೇರಿದಂತೆ ವಿಶ್ವದೆಲ್ಲೆಡೆ ಇರುವ ಸಂಪ್ರದಾಯಸ್ಥ ಕುಟುಂಬ ವ್ಯವಸ್ಥೆಯ ಬಗ್ಗೆ ಸಿನಿಮಾ ಗಟ್ಟಿಯಾಗಿ ಮಾತಾಡುತ್ತದೆ. ಈ ವ್ಯವಸ್ಥೆಯಲ್ಲಿ ಅಡಗಿರುವ ಭ್ರಮೆ, ಪಾಪ ಪ್ರಜ್ಞೆ, ವಿಶ್ವಾಸಘಾತುಕತನ, ಅಸಹನೆ, ದಬ್ಬಾಳಿಕೆ ಹಾಗೂ ಕ್ರೌರ್ಯದ ಅಂಶಗಳ ಮೇಲೆ ಬೆಳಕು ಚೆಲ್ಲುತ್ತದೆ. “Family, that’s a nice word. It’s a word that has haunted me for years” (ಕುಟುಂಬವೆನ್ನುವ ಪದ ಎಷ್ಟು ಸುಮಧುರ! ಆದರೆ, ಆ ಪದವು ತುಂಬ ವರ್ಷಗಳ ಕಾಲ ನನ್ನನ್ನು ಕಾಡಿದೆ) ಎನ್ನುವ ರತ್ನಳ ಮಾತು ಅತೀವ ವ್ಯಂಗ್ಯದಿಂದ ಕೂಡಿದೆ. ಸಿನಿಮಾದಲ್ಲಿ ಚಿತ್ರಿತವಾಗಿರುವ ವಿಧವೆಯೊಬ್ಬಳ ಮರುಮದುವೆಯ ವಿಷಯ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಚ್ಚಾಗಿ ಕಾಣಿಸುವ ಪ್ರಮುಖ ಸಮಸ್ಯೆಯೇ ಸರಿ. ಆದರೆ, ಮರುಮದುವೆಯ ನಂತರ, ಹಾಗೆಯೇ ಹಿಂದಿನ ಸಂಬಂಧದಲ್ಲಿ ಹುಟ್ಟಿದ ಮಕ್ಕಳಿಗೆ ಸಮಾಜದಲ್ಲಿ ಸಿಗುವ ಸ್ಥಾನ ಮತ್ತದರಲ್ಲಿನ ಹುಸಿತನದ ಚಿತ್ರಣ ಮಾತ್ರ ಸಾರ್ವತ್ರಿಕವಾದುದು.

ಪ್ರಾಣೇಶಾಚಾರ್ಯನಾಗಿ ಕಾರ್ನಾಡ್

ಪ್ರಾಣೇಶಾಚಾರ್ಯನಾಗಿ ಕಾರ್ನಾಡ್

ಈ ಎಲ್ಲ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತಿದ್ದ ಕಾಲದಲ್ಲಿ ಸತ್ಯಜಿತ್ ರೇ ಅವರಿಗೆ ಇದರ ಬಗ್ಗೆ ಅಭಿಪ್ರಾಯ ಕೇಳಲಾಗಿತ್ತಂತೆ. ಕನ್ನಡದಲ್ಲಿ ಹೊರಬರುತ್ತಿದ್ದ ಈ ‘ಕಲಾತ್ಮಕ ಚಿತ್ರ’ಗಳು ಬ್ರಾಹ್ಮಣ್ಯ ಮತ್ತದರ ಆಚರಣೆಗಳ ಸುತ್ತಲೇ ಗಿರಕಿ ಹೊಡೆಯುತ್ತಿವೆ ಎಂದು ಅವರು ಹೇಳಿದ್ದರಂತೆ. ಅದರ ಅರ್ಥ, ಕನ್ನಡದ ‘ಕಲಾತ್ಮಕ’ ಸಿನಿಮಾದ ಚಿಂತನೆ ಮತ್ತು ತಯಾರಿಕೆಯಲ್ಲಿ ಬಹುತೇಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರೇ ಹೆಚ್ಚಿದ್ದರು ಎಂಬುದು. ಬ್ರಾಹ್ಮಣರಿಂದಲೇ ರಚಿತವಾದ, ಅದೇ ಸಮುದಾಯದ ಕತೆಗಳನ್ನು ಹೇಳುವ ಸಾಹಿತ್ಯ ಕೃತಿಗಳನ್ನೇ ಸಿನಿಮಾಗಳಾಗಿ ರೂಪಾಂತರಿಸಲಾಗಿತ್ತು. ಈ ಸಿನಿಮಾಗಳಿಗೆ ಚಿತ್ರಕತೆ ಮತ್ತು ನಿರ್ದೇಶನ ಮಾಡಿದವರಲ್ಲಿ ಬ್ರಾಹ್ಮಣರೇ ಹೆಚ್ಚು. ಕುವೆಂಪು ಅವರಂತ ಮೇರು ಲೇಖಕನ ಹೊರತಾಗಿ ಸಾಹಿತ್ಯಿಕ ಪ್ರಾಮುಖ್ಯತೆ ಪಡೆದ ಈ ‘ಬ್ರಾಹ್ಮಣ ಕೃತಿಗಳು’, ಕರ್ನಾಟಕದಲ್ಲಿ ‘ಕಲಾತ್ಮಕ ಚಿತ್ರ’ದ ಆಲೋಚನಾ ಕ್ರಮವನ್ನು ಪ್ರಬಲವಾಗಿ ನಿರ್ದೇಶಿಸಿ ವ್ಯಾಖ್ಯಾನಿಸಿದವು ಎಂಬುದು ನನ್ನ ಅಭಿಪ್ರಾಯ. ಅಷ್ಟರಮಟ್ಟಿಗ ಈ ಚಿಂತನೆಯು ಸೀಮಿತವಾಗಿತ್ತು.

 

ಮುಂದುವರೆಯುವುದು…

ಮೂಲ ಇಂಗ್ಲಿಷ್ ಲೇಖನ: https://ruthumana.com/?post_type=blog_post&p=7901


ಅನುವಾದ: ವರುಣ ನಾಯ್ಕರ

ಹುಟ್ಟಿದ್ದು ಬೆಂಗಳೂರು. ಬೆಳೆದಿದ್ದು ಧಾರವಾಡದಲ್ಲಿ. ಡಿಗ್ರಿ ಮುಗಿಸಿದ್ದು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ. ನಂತರ ಸ್ನಾತಕೋತ್ತರ ಪದವಿ (ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಷಯ) ಮುಗಿಸಿದ್ದು ಬೆಂಗಳೂರಿನ ಜೈನ್ ಸಿಎಮ್ ಎಸ್ ಶಿಕ್ಷಣ ಸಂಸ್ಥೆಯಲ್ಲಿ. ಅದಾದಮೇಲೆ ಉಪಸಂಪಾದಕ/ವರದಿಗಾರನಾಗಿ ಪ್ರಜಾವಾಣಿ ಪತ್ರಿಕೆಯಲ್ಲಿ ಎರಡು ವರ್ಷಗಳ ಕಾಲ ಕೆಲಸ. ವಿವಿಧ ಜ್ಞಾನ ಶಾಖೆಗಳು ಮತ್ತವುಗಳ ಅಂತರ್ ಶಿಸ್ತೀಯ ಓದು, ಚರ್ಚೆ ಆಸಕ್ತಿಕರ ವಿಷಯಗಳು. ‘ಸಿನಿಮಾ ಓದುವಿಕೆ’ಯ ಬಗ್ಗೆ ಒಲವು.


4 comments to “ಗಿರೀಶ್ ಕಾರ್ನಾಡ್ ಸರಣಿ : ಕಾರ್ನಾಡ್ ಮತ್ತು ‘ಕಲಾತ್ಮಕ ಚಿತ್ರ’ – ಭಾಗ ೧”
  1. Pingback: ಗಿರೀಶ್ ಕಾರ್ನಾಡ್ ಸರಣಿ: ಕಾರ್ನಾಡ ಮತ್ತು ‘ಕಲಾತ್ಮಕ ಚಿತ್ರ’ – ಭಾಗ ೨ – ಋತುಮಾನ

  2. Pingback: ಗಿರೀಶ್ ಕಾರ್ನಾಡ್ ಸರಣಿ : ಗಿರೀಶ ಕಾರ್ನಾಡರು ಮತ್ತು ಸಾರಸ್ವತ ಸಂಪ್ರದಾಯ – ಋತುಮಾನ

  3. Pingback: ಗಿರೀಶ್ ಕಾರ್ನಾಡ್ ಸರಣಿ : ಆಸ್ಕರ್, ಕುರಸೋವಾ ಮತ್ತು ಕಾರ್ನಾಡ್ – ಋತುಮಾನ

  4. Pingback: ಗಿರೀಶ್ ಕಾರ್ನಾಡ್ ಸರಣಿ – ಕೊನೆಯ ಭಾಗ : ಹಸುಗಳೂ, ಹುಲಿಗಳೂ – ಋತುಮಾನ

ಪ್ರತಿಕ್ರಿಯಿಸಿ