ಗಿರೀಶ್ ಕಾರ್ನಾಡ್ ಸರಣಿ: ಕಾರ್ನಾಡ ಮತ್ತು ‘ಕಲಾತ್ಮಕ ಚಿತ್ರ’ – ಭಾಗ ೨

ಗಿರೀಶ್ ಕಾರ್ನಾಡರ ಚಿತ್ರಜೀವನದ ಕುರಿತ “ಋತುಮಾನ ಸರಣಿ” ಇದು. ಸುಮಾರು ೮ ಕಂತುಗಳಲ್ಲಿ ಡೇವಿಡ್ ಬಾಂಡ್ ಕಾರ್ನಾಡರ ನಟನೆ, ನಿರ್ದೇಶನ ಮತ್ತು ಚಿತ್ರಗಳ ಕುರಿತು ಕೇವಲ ಕಲಾವಿಮರ್ಷೆಯ ದೃಷ್ಟಿಕೋನದಿಂದಷ್ಟೇ ಅಲ್ಲದೇ, ಭಾರತದ ಸಾಮಾಜಿಕ ರಚನೆ; ಸಾರಸ್ವತ ಸಮುದಾಯ ಭಾರತೀಯ ಚಲನಚಿತ್ರ ಇತಿಹಾಸದೊಂದಿಗೆ ಹೊಂದಿದ ವಿಶಿಷ್ಟ ಸಂಬಂಧಗಳ ಕುರಿತೂ ಚರ್ಚಿಸಲಿದ್ದಾರೆ. ಕಾರ್ನಾಡರ ಕುರಿತು ಈ ಸರಣಿಯು ಒಂದು ಅಧ್ಯಯನಶೀಲ ಪೂರ್ಣಾವಲೋಕನ ಒದಗಿಸಲಿದೆ. ಅದರ ಎರಡನೇಯ ಕಂತು ನಿಮ್ಮ ಓದಿಗೆ.

 

ಭಾಗ ೧: ಗಿರೀಶ್ ಕಾರ್ನಾಡ್ ಸರಣಿ: ಕಾರ್ನಾಡ ಮತ್ತು ‘ಕಲಾತ್ಮಕ ಚಿತ್ರ’ – ಭಾಗ ೧: https://ruthumana.com/2020/06/14/girish-karnad-and-art-film-part1/

ಬೆಂಗಾಲಿಯ ‘ಕಲಾತ್ಮಕ ಚಿತ್ರ’ಗಳಲ್ಲೂ ಬ್ರಾಹ್ಮಣರ ಪ್ರಾಬಲ್ಯವಿತ್ತು. ಆದರೆ, ಆ ಸಿನಿಮಾಗಳು ಸಮಾಜದ ಒಟ್ಟಾರೆ ಜನಜೀವನದ ಭಾಗವಾಗಿ ಚಿತ್ರಿತವಾಗಿದ್ದವು. ಅದರಲ್ಲಿ ಬ್ರಾಹ್ಮಣ ಸಮುದಾಯವೇ ಇದ್ದರೂ, ಅದಕ್ಕಾಗಿಯೇ ಹೆಚ್ಚು ಒತ್ತು ಕೊಡದೇ ಅದನ್ನು ಸಾಮಾಜಿಕ ವ್ಯವಸ್ಥೆಯ ಒಂದು ಭಾಗವಾಗಿ ತೋರಿಸಲಾಗಿತ್ತು. ಕನ್ನಡ ಕಾದಂಬರಿ ಮತ್ತು ಸಿನಿಮಾಗಳಲ್ಲಿ ಈ ಅಂಶವು ವ್ಯತಿರಿಕ್ತವಾಗಿದೆ ಎಂಬ ಭಾವನೆ ಹಲವರಲ್ಲಿ ಬರುವುದು ಸಹಜ. ಜನಸಮುದಾಯದ ಭಾಗವಾಗಿ ಬ್ರಾಹ್ಮಣರನ್ನು ಚಿತ್ರಿಸದೇ, ಉದ್ದೇಶಪೂರ್ವಕವಾಗಿ ಅವರಿಗೆ, ಅವರ ಜಗತ್ತಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿತ್ತು. ಜತೆಗೆ, ಈ ಸಿನಿಮಾಗಳು ‘ಬ್ರಾಹ್ಮಣ’ ಹಾಗೂ ‘ಹರಿಜನ’ (ದಲಿತರನ್ನು ಉದ್ದೇಶಿಸಿ ಗಾಂಧೀಯವರು ಬಳಸುತ್ತಿದ್ದ ಈ ಪದವು ಆ ಕಾಲದಲ್ಲಿ ಇನ್ನೂ ಪ್ರಚಲಿತದಲ್ಲಿತ್ತು) ಸಮುದಾಯಗಳನ್ನು ಮಾತ್ರವೇ ವಿರುದ್ಧ ದಿಕ್ಕಿನಲ್ಲಿ ನಿಲ್ಲಿಸಿ ಸಾಮಾಜಿಕ ವ್ಯವಸ್ಥೆಯನ್ನು ಚಿತ್ರಿಸಿದ್ದವು. ಈ ಚಿತ್ರಗಳ ಬಲುದೊಡ್ಡ ಮಿತಿ ಇದು. ಇದರಿಂದಾಗಿ, ಭೌಗೋಳಿಕ ಭಾರತದಲ್ಲಿ ಹರಿದು ಹಂಚಿಹೋಗಿರುವ ಬಹುಸಂಖ್ಯಾತ ಮತ್ತು ಭಿನ್ನವಾದ ಹಲವು ಶೂದ್ರ ಜಾತಿಗಳು ಈ ಸಿನಿಮಾಗಳಲ್ಲಿ ನಮಗೆ ಕಾಣಿಸುವುದಿಲ್ಲ. ಹೀಗಾಗಿ, ಈ ಸಿನಿಮಾಗಳಲ್ಲಿ ಚಿತ್ರಿತವಾಗಿರುವ ‘ಬ್ರಾಹ್ಮಣ’ ಅಥವಾ ‘ದಲಿತ’ ಸಮುದಾಯಗಳೊಂದಿಗೆ ಗುರುತಿಸಿಕೊಳ್ಳಲು ಇತರ ಶೂದ್ರ ಜನಾಂಗಗಳಿಗೆ ಸಾಧ್ಯವಾಗಲಿಲ್ಲ.

1973ರಲ್ಲಿ ಬಿಡುಗಡೆಯಾದ ಶ್ರೀ ಕೃಷ್ಣ ಆಲನಹಳ್ಳಿಯವರ ಕಾದಂಬರಿ ಆಧಾರಿತ ‘ಕಾಡು’ ಹಲವು ಕಾರಣಗಳಿಂದಾಗಿ ಕಾರ್ನಾಡರ ಸಿನಿಮಾ ಪಯಣದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಕನ್ನಡದಲ್ಲಿ ಬೆಳೆಯುತ್ತಿದ್ದ ‘ಕಲಾತ್ಮಕ ಚಿತ್ರ’ದ ವಾತಾವರಣ ಹಾಗೂ ದೇಶದ ಇತರೆಡೆ ಸಿನಿಮಾ ರಂಗದಲ್ಲಿ ಆಗುತ್ತಿದ್ದ ಬೆಳವಣಿಗೆಗಳಿಗೆ ಸೇತುವೆಯಾಗಿ ‘ಕಾಡು’ ಕೆಲಸ ಮಾಡಿತು. ಸಂಸ್ಕಾರ ಬಂದ ಎರಡು ವರ್ಷಗಳ ನಂತರ, ‘ಚೋಮನ ದುಡಿ’ ತೆರೆಗೆ ಬಂದ ಎರಡು ವರ್ಷಗಳ ಮುನ್ನ ಹಾಗೆಯೇ ‘ಘಟಶ್ರಾದ್ಧ’ (ಗಿರೀಶ್ ಕಾಸರವಳ್ಳಿಯವರ ಚೊಚ್ಚಲ ಸಿನಿಮಾ)  ಬಿಡುಗಡೆಯ ನಾಲ್ಕು ವರ್ಷಗಳ ಮುಂಚೆ ‘ಕಾಡು’ ಸಿನಿಮಾವನ್ನು ನಿರ್ಮಿಸಲಾಗಿತ್ತು. ಚೋಮನ ದುಡಿ ಮತ್ತು ಘಟಶ್ರಾದ್ಧ ‘ಬ್ರಾಹ್ಮಣರೇ’ ಸಿದ್ಧಪಡಿಸಿದ ಎರಡು ಅತ್ಯುತ್ತಮ ಸಿನಿಮಾಗಳು ಎಂದು ನನಗನ್ನಿಸುತ್ತದೆ. ಕಾಡು ಸಿನಿಮಾ ಬಂದ ವರ್ಷದ ಮೇಲೆ ಶ್ಯಾಮ್ ಬೆನಗಲ್ ನಿರ್ದೇಶಿಸಿದ ‘ಅಂಕುರ್’ ಬಿಡುಗಡೆಯಾಯಿತು ಎಂಬುದು ಗಮನಾರ್ಹ ಸಂಗತಿ. ಭಾರತದ ಹೊಸ ಅಲೆಯ ಸಿನಿಮಾಗಳಲ್ಲೇ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಿದ ಮೊದಲ ಸಿನಿಮಾ ‘ಅಂಕುರ್’.

ಕಾಡು ಚಿತ್ರಕ್ಕಾಗಿ ಗಿರೀಶರು ಕನ್ನಡದ ನಟ ಲೊಕೇಶ್ ಮತ್ತು ಪಂಜಾಬಿ ನಟ ಅಮರೀಶ್ ಪುರಿಯವರನ್ನು ಜತೆಗೂಡಿಸಿದ್ದರು. ಅಮರೀಶ್ ಆಗ ಬಾಂಬೆಯ ಪೃಥ್ವಿ ಥಿಯೇಟರ್‌ ನೊಂದಿಗೆ ಗುರುತಿಸಿಕೊಂಡಿದ್ದರು. ಇವರೊಂದಿಗೆ ತರುಣ ಪ್ರತಿಭೆ ಗೋವಿಂದ್ ನಿಹಲಾನಿಯವರನ್ನು ಛಾಯಾಗ್ರಾಹಕರಾಗಿ ಕರೆತಂದಿದ್ದರು. ಅಲ್ಲಿಯವರೆಗೆ ನಿಹಲಾನಿ, ವಿ. ಕೆ.‌ ಮೂರ್ತಿ (ಗುರುದತ್ ಸಿನಿಮಾಗಳಿಗೆ ಕ್ಯಾಮೆರಾಮನ್ ಆಗಿ ದುಡಿದ ಅನುಪಮ ಪ್ರತಿಭೆ) ಅವರೊಟ್ಟಿಗೆ ಕೆಲಸ ಮಾಡಿದ್ದರು. ಮುಂದೆ ಕಾರ್ನಾಡರಂತೆ ಶ್ಯಾಮ್ ಬೆನಗಲ್ ರ ಅನೇಕ ಸಿನಿಮಾಗಳಲ್ಲಿ ಗೋವಿಂದ್ ಕೆಲಸ ಮಾಡಿದರು. ತದನಂತರ ಹೊಸ ಅಲೆಯ ಹಿಂದಿ ಸಿನಿಮಾಗಳ ಬೆಳವಣಿಗೆಯಲ್ಲಿ ನಿರ್ದೇಶಕರಾಗಿಯೂ ಮುಖ್ಯ ಪಾತ್ರವಹಿಸಿದರು.

ವಿಮರ್ಶಕ ಎಂ. ಕೆ. ರಾಘವೆಂದ್ರರ ಪ್ರಕಾರ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಮುತುವರ್ಜಿಯಿಂದ ಪ್ರೋತ್ಸಾಹಿಸುತ್ತಿದ್ದ ‘ಭಾರತೀಯತೆ’ಯ ಗುಣವನ್ನು ಕಾಡು ಸಿನಿಮಾ ಎತ್ತಿಹಿಡಿದಿತ್ತು. ಇಂತಹ ಪ್ಯಾನ್ ಇಂಡಿಯಾದ ಕಲ್ಪನೆಯು ಅದರಲ್ಲಿತ್ತು ಎಂಬುದು ಅವರ ಅನಿಸಿಕೆ. ಹಾಗೆಯೇ ಆಗ ತಾನೆ ಸ್ಥಾಪಿತವಾಗಿದ್ದ  ಎಫ್ ಎಫ್ ಸಿ (FFC – Film Finance Corporation – ಈ ಸಂಸ್ಥೆಯು ಭಾರತದ ಅನೇಕ ಹೊಸ ಅಲೆಯ ಸಿನಿಮಾಗಳನ್ನು ನಿರ್ಮಿಸಿ ಅದರ ಬೆಳವಣಿಗೆಗೆ ಕಾರಣವಾಯಿತು)ಯ ಉದ್ದೇಶವನ್ನು ಕಾಡು ಪ್ರತಿನಿಧಿಸಿತ್ತು ಎಂದು ಅವರು ಹೇಳಿದ್ದರು.

ರಾಘವೆಂದ್ರರ ಈ ಒಳನೋಟವು ತುಂಬ ಸರಳವಾಗಿದೆ. ದೇಶದಲ್ಲಿನ ರಾಜಕೀಯ ಬೆಳವಣಿಗೆಗಳು ಸಿನಿಮಾ ತಯಾರಿಕೆಯ ಮೇಲೆ ಖಂಡಿತ ನೇರವಾಗಿ ಪ್ರಭಾವ ಬೀರುತ್ತವೆ ಎಂಬುದು ಸತ್ಯ. ಅಗಾಧ ವ್ಯಾಪ್ತಿ ಹೊಂದಿರುವ ‘ಭಾರತೀಯ ಪ್ರಜ್ಞೆ’ಯ ಬಗ್ಗೆ ಕಾರ್ನಾಡರಿಗೂ ನಿಖರವಾದ ತಿಳಿವಳಿಕೆ ಇತ್ತು. ಇದರ ಬಗ್ಗೆ ಲೇಖನದ ಮೊದಲಿಗೆ ಮಾತನಾಡಿದ್ದೇನೆ. ಆದರೆ, ಆಳವಾಗಿ ಬೇರೂರಿರುವ ಪ್ರಾದೇಶಿಕ ಪ್ರಜ್ಞೆಯನ್ನು ವಿರೋಧಿಸಿ ಈ ‘ಭಾರತೀಯತೆಯ ಗುಣ’ವನ್ನು ಎತ್ತಿಹಿಡಿಯಬೇಕೆನ್ನುವ ಹಠ ಕಾರ್ನಾಡರಿಗಿರಲಿಲ್ಲ‌. ಕಾಡು ನಿರ್ದೇಶಿಸುವ ಮುನ್ನ, ಪ್ರವಾಸೋದ್ಯಮ ಇಲಾಖೆಗಾಗಿ ಗಿರೀಶರು ನಿಹಲಾನಿಯರೊಂದಿಗೆ ಸೇರಿ ಬೇಂದ್ರೆಯವರ ಬಗ್ಗೆ ಎಂಟು ನಿಮಿಷಗಳ ಸಾಕ್ಷ್ಯಚಿತ್ರವೊಂದನ್ನು ತಯಾರಿಸಿದ್ದರು. ಒಬ್ಬ ಕವಿಯ ಬದುಕು ಮತ್ತು ಸಾಹಿತ್ಯವು ತಾನಿರುವ ಪ್ರದೇಶದ ಪರಿಸರ ಹಾಗೂ ಸಾಂಸ್ಕೃತಿಕ ಗುಣಗಳಿಂದ ಹೇಗೆ ಸ್ಪೂರ್ತಿ ಪಡೆಯುತ್ತದೆ ಎಂಬ ಬಗ್ಗೆ ಈ ಸಾಕ್ಷ್ಯಚಿತ್ರದಲ್ಲಿ ಸೂಕ್ಷ್ಮವಾದ ಗ್ರಹಿಕೆಗಳಿವೆ.

Picture22

ಸೀಮಿತ ಪರಿಧಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ‘ಕಲಾತ್ಮಕ ಚಿತ್ರ’ದ ವಾತಾವರಣ, ಅದು ಸಾಗುತ್ತಿದ್ದ ಹಾದಿಯಿಂದ ತಪ್ಪಿಸಿಕೊಳ್ಳಲು ಕಾರ್ನಾಡರು ಕಾಡು ಸಿನಿಮಾದಲ್ಲಿ ಯತ್ನಿಸಿದ್ದಾರೆ. ಈ ಮೂಲಕ ‘ಕಲಾತ್ಮಕ ಚಿತ್ರ’ದ ಸೀಮಿತ ವ್ಯಾಪ್ತಿಯ ಆಲೋಚನಾ ಕ್ರಮದಿಂದಲೇ ತಕ್ಕಮಟ್ಟಿಗೆ ಬಿಡುಗಡೆ ಹೊಂದಿದರು ಎನ್ನಬಹುದು. ಕಾಡು ಸಿನಿಮಾದ ಕಥಾಹಂದರದಲ್ಲಿ ‘ಜಾತಿ ವ್ಯವಸ್ಥೆಯ’ ಪ್ರಶ್ನೆ ಕಾಣೆಯಾಗಿರುವುದೇ ಅದರಲ್ಲಿನ ಪ್ಯಾನ್ ಇಂಡಿಯಾ ಗುಣಕ್ಕೆ ಸಾಕ್ಷಿ ಎಂದು ರಾಘವೇಂದ್ರರು ಅಭಿಪ್ರಾಯಪಟ್ಟಿದ್ದರು. ಹಾಗೇ ನೋಡಿದರೆ ಜಾತಿ ವ್ಯವಸ್ಥೆಯ ಪ್ರಶ್ನೆ ಎಲ್ಲ ಕಾಲದಲ್ಲೂ ಹಿಂದಿ ಸಿನಿಮಾಗಳಿಂದ ಕಾಣೆಯಾಗಿದೆ. ಜಾತಿಯ ಅಸ್ತಿತ್ವವನ್ನು ಅಲ್ಲಗಳೆಯುವಂತೆಯೇ, ಜಾತಿಯೊಂದೇ ಸಾಮಾಜಿಕ ಸಮಸ್ಯೆ ಮತ್ತು ಅದರ ಬಗ್ಗೆ ಚರ್ಚಿಸುವುದಷ್ಟೇ ಮುಖ್ಯ ಎಂದು ವಾದಿಸುವುದು ನನ್ನ ಮಟ್ಟಿಗೆ ಸಮಸ್ಯಾತ್ಮಕ. ಕಾಡು ಸಿನಿಮಾ ‘ಬ್ರಾಹ್ಮಣರ ಚಿತ್ರ’ಗಳಿಗಿಂತಲೂ ಹೆಚ್ಚು ಗಟ್ಟಿಯಾಗಿ ಕರ್ನಾಟಕದ ಸಂಸ್ಕೃತಿಯಲ್ಲಿ ಬೇರೂರಿದೆ ಅಂತ ನನಗನ್ನಿಸುತ್ತದೆ. ಭೂತಕಾಲದಲ್ಲಿದ್ದ ಸಂಸ್ಕಾರದ ಅಗ್ರಹಾರಕ್ಕಿಂತ, ಎರಡು ಹಳ್ಳಿಗಳ ನಡುವಿನ ವೈರತ್ವದ ಕತೆ ಇರುವ ಕಾಡು ಸಿನಿಮಾವನ್ನು ಪ್ಯಾನ್ ಇಂಡಿಯನ್ ಅಂತ ಪರಿಗಣಿಸುವ ಹಠ ಏಕೆ? ಹೆಚ್ಚು ಜನರು ವಾಸಿಸದ ಪ್ರದೇಶಗಳಲ್ಲಿ ಇರುವ ಅಪಾಯ ಮತ್ತು ಬುಡಕಟ್ಟು ಸಮುದಾಯಗಳಲ್ಲಿನ ಹಿಂಸೆಗಿಂತ ಭಿನ್ನವಾದ ಆಚರಣೆಯ ಕುರಿತಾಗಿರುವ ಕಾಡು ಸಾಮಾಜಿಕವಾಗಿ ಯಾಕೆ ಮುಖ್ಯವಾಗಬಾರದು?

ಕಾಡು ಸಿನಿಮಾ ನಿರ್ದೇಶಿಸುವ ಮೂಲಕ ಕಾರ್ನಾಡರು “ಬ್ರಾಹ್ಮಣ-ಹರಿಜನ” ಎಂಬ ವಿಭಜನೆಯಲ್ಲಿ ಮುಳುಗಿದ್ದ ‘ಕಲಾತ್ಮಕ ಚಿತ್ರ’ದ ಆಲೋಚನೆ ಮತ್ತು ಜಾತಿ ವ್ಯವಸ್ಥೆಯ ವಿಮರ್ಶೆಯಿಂದ ದೂರವಾದರು. ಈ ಮೂಲಕ ಸಿನಿಮಾ ಕಲೆಯ ಕ್ಯಾನ್ವಾಸ್ ವಿಸ್ತರಿಸಿದರು. ಆದರೆ, ಆ ಕ್ಯಾನ್ವಾಸ್ ನಲ್ಲಿ ಭಾರತೀಯತೆಯನ್ನು ಸಮಗ್ರವಾಗಿ ಶೋಧಿಸಲು ಹೋಗಲಿಲ್ಲ. ಜತೆಗೆ ಅಸ್ಪಷ್ಠವಾದ ಪ್ಯಾನ್ ಇಂಡಿಯಾ ಇಮೇಜ್ ಸಾಧಿಸಲು ಜನಜೀವನದ ಭಾಗವಾದ ‘ಪ್ರಾದೇಶಿಕ ಪ್ರಜ್ಞೆ’ ಕಳೆದುಕೊಳ್ಳಲಿಲ್ಲ. ಈ ಮೂಲಕ ಆಗಿನ ಒಕ್ಕೂಟ ಸರ್ಕಾರದ ರಾಜಕೀಯ ಚಿಂತನೆಗೆ ಪ್ರಾಶಸ್ತ್ಯ ನೀಡಲಿಲ್ಲ.

“ಬ್ರಾಹ್ಮಣ-ಹರಿಜನ” ಎಂಬ ಎರಡು ಸಮುದಾಯಗಳ ಮಧ್ಯದಲ್ಲಿ ಅನೇಕ ಗಹನವಾದ ವಿಷಯಗಳಡಗಿವೆ. ಇದೇ ರೀತಿ, ಹಳ್ಳಿಯೊಂದರ ಸಮುದಾಯ ಮತ್ತು ಒಕ್ಕೂಟ ವ್ಯವಸ್ಥೆಯ ಪ್ರಭುತ್ವದ ನಡುವೆ ಅನೇಕ ಭಿನ್ನ ಸಂಗತಿಗಳಿವೆ. ಕಾಡು ಸಿನಿಮಾದ ಕೊನೆಯಲ್ಲಿ ಹಿಂಸೆಯನ್ನು ತಹಬದಿಗೆ ತರಲು ಮಧ್ಯಪ್ರವೇಶಿಸುವ ಪೊಲೀಸರು ಹಳ್ಳಿಯ ಜನರಿಗೆ ಅನ್ಯ ಗ್ರಹದ ಜೀವಿಗಳಂತೆ ಕಾಣುವ ಹಾಗೆ ಚಿತ್ರಿತವಾಗಿದ್ದಾರೆ. ಈ ‘ಅನ್ಯ ಗ್ರಹದ ಜೀವಿ’ಗಳು ಹಳ್ಳಿಗೆ ಪರಿಚಿತವಾಗಿರುವ ಹತ್ತಿರದ ಬೆಂಗಳೂರಿನ ಬದಲು ದೂರದ ದೆಹಲಿಯಿಂದ ಬಂದರೇ ಎಂಬ ಬಗ್ಗೆ ಸಿನಿಮಾ ನೋಡುವಾಗ ಯಾರಿಗಾದರೂ ಅನುಮಾನ ಬಂದಿತ್ತೇ? ಹಳ್ಳಿಗಾಡಿನ ಪ್ರದೇಶವು ಪೊಲೀಸರ ಸುಪರ್ದಿಗೆ ಬಂದ ನಂತರ ‘ಜೀವಂತಿಕೆ’ಯಿಂದ ವಿಮುಖವಾದಂತೆ ಸಿನಿಮಾದಲ್ಲಿ ಕಾಣಿಸುತ್ತದೆ. ಪೊಲೀಸರ ಸಮಕ್ಷಮದಲ್ಲಿ ಸುರಕ್ಷಿತವಾಗಿರುವ, ಆದರೆ ನಿರ್ಜನವಾಗಿ ಕಾಣಿಸುವಂತೆ ಈ ಪ್ರದೇಶವನ್ನು ದೃಶ್ಯೀಕರಿಸಲಾಗಿದೆ. ಅನಾಥ ಪ್ರಜ್ಞೆಯಲ್ಲಿರುವ ‘ಒಬ್ಬಂಟಿ ಬಾಲಕ’ ತಾನು‌ ಕಳೆದುಕೊಂಡ ಈ ಹಳ್ಳಿಗಾಡಿನ ಜಗತ್ತಿನ ನೆನಪಲ್ಲಿ ಅಳುತ್ತಿರುವಾಗಲೇ ಸಿನಿಮಾ ಕೊನೆಯಾಗುತ್ತದೆ.

ಈ ಸಿನಿಮಾಗಾಗಿ ಬಿ. ವಿ. ಕಾರಂತರು ಸಂಯೋಜಿಸಿದ ಸಂಗೀತ ಮತ್ತು ಬಳಸಿದ ವಿಶಿಷ್ಠ ಧ್ವನಿಗ್ರಹಣ ಶೈಲಿಯು ಕತೆಗೆ ಪೂರಕವಾಗಿವೆ‌. ಹಳ್ಳಿಗಾಡಿನ ಅಪಾಯ, ಇಕ್ಕಟ್ಟಿನ ವಾತಾವರಣವನ್ನು ತೋರಿಸುವಲ್ಲಿ ಗೆದ್ದಿವೆ. ಸಿನಿಮಾದಲ್ಲಿ ಒಂದೊಂದಾಗಿ ನಡೆಯುವ ಘಟನೆಗಳನ್ನು ಬಾಲಕ ತನ್ನ ಆಲೋಚನೆಗಳ ಮೂಲಕ ಗ್ರಹಿಸುವ ಹಾಗೆ ನಿಹಲಾನಿ ಚಿತ್ರಿಕರಿಸಿದ್ದಾರೆ. ಜತೆಗೆ ತನ್ನ ‘ಅತ್ತೆಯ’ ಅತೀವ ನೋವಿನ ಅನುಭವದ ಆಧಾರದ ನೆರವಿನೊಂದಿಗೆ ಘಟನಾವಳಿಗಳನ್ನು ಅರ್ಥೈಸಲು ಬಾಲಕ ಯತ್ನಿಸುವುದನ್ನೂ ಚಿತ್ರದಲ್ಲಿ ಕಾಣಬಹುದು. ಊರಿನಲ್ಲಿ ನಡೆಯುವ ಹಬ್ಬ ಹಾಗೂ ಹಿಂಸಾತ್ಮಕ ಸನ್ನಿವೇಶಗಳ ‘ಮೊಂಟಾಜ್’ ಶಾಟ್ ಗಳು ಪ್ರೇಕ್ಷಕನಿಗೆ ಪರಿಣಾಮಕಾರಿಗೆ ನಾಟುವಂತಿವೆ. ಹಬ್ಬ ಮತ್ತು ಹಿಂಸೆಯ ನಡುವಿನ ವ್ಯತ್ಯಾಸ ಗುರುತಿಸಲು ಕಷ್ಟವಾಗುವಂತಹ ಕ್ಷಣಗಳನ್ನು ಸಮರ್ಪಕವಾಗಿ ಸೆರೆ ಹಿಡಿಯಲಾಗಿದೆ. ಬಾಲಕ ಕಿಟ್ಟಿಯ ಪಾತ್ರದಲ್ಲಿ ನಟರಾಜ್ ಹಾಗೂ ಆತನ ‘ಅತ್ತೆಯ’ ಪಾತ್ರಧಾರಿ ನಂದಿನಿ ಭಕ್ತವತ್ಸಲ ಅವರ ಅಭಿನಯ ಅಮೋಘವಾಗಿದೆ. ಅಮರೀಶ್ ಪುರಿ ಕೂಡ ಆವರೆಗಿನ ಸಿನಿಮಾ ನಟನೆಗಿಂತ ಭಿನ್ನವಾಗಿ ಇದರಲ್ಲಿ ಅಭಿನಯಿಸಿದ್ದಾರೆ.

ವಿಭಿನ್ನ ನಿರ್ದೇಶನ ಹಾಗೂ ಸಂಗೀತದ ಮುಖಾಂತರ ಕಾರ್ನಾಡ-ಕಾರಂತ ಜೋಡಿ ಹಿಂಸೆಯ ಶೋಧದ ಕಥಾನಕವನ್ನು ‘ಕಲಾತ್ಮಕ ಚಿತ್ರ’ವಾಗಿಸಿದ್ದರು. ವಿಷಯ ಯಾವುದೇ ಇದ್ದರೂ ಉತ್ತಮ ಚಿತ್ರ ಮಾಡಬಹುದು ಎಂದು ತೋರಿಸಿಕೊಟ್ಟರು. ಆ ಮೂಲಕ ಆಗ ಬೆಳೆಯುತ್ತಿದ್ದ ಕನ್ನಡ ‘ಕಲಾತ್ಮಕ ಚಿತ್ರದ’ ಆಲೋಚನಾ ಕ್ರಮದಿಂದ ಭಿನ್ನವಾಗಿ ನಿಂತರು. ‘ಬ್ರಾಹ್ಮಣ ಚಿತ್ರಗಳು’ ಎಂದು ನಾನು ಕರೆಯಲು ಕಾರಣ ಅವುಗಳು ಒಳಗೊಂಡಿದ್ದ ಒಂದೇ ತರದ ವಿಷಯಗಳು‌. ಇದರೊಂದಿಗೆ ಅವುಗಳ ಮೂಲದಲ್ಲೂ ಬ್ರಾಹ್ಮಣರಷ್ಟೇ ಇದ್ದಿದ್ದು. ಈ ಚಿತ್ರಗಳ ಗುಣಮಟ್ಟದ ಬಗ್ಗೆ ನನಗೆ ಯಾವುದೇ ಆಕ್ಷೇಪವಿಲ್ಲ. ಈ ನಿಟ್ಟಿನಲ್ಲಿ ಕನ್ನಡದ ‘ಆರ್ಟ್ ಫಿಲ್ಸ್ಮ್’ ಬಗ್ಗೆ ಸತ್ಯಜಿತ್ ರೇ ಅವರು ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಆದರೆ, ಅವರ ಅಭಿಪ್ರಾಯದಲ್ಲಿ ಅಡಗಿರುವ ತೀರಸ್ಕಾರದ ಧೋರಣೆಯನ್ನು ಒಪ್ಪಲಾಗುವುದಿಲ್ಲ.

ನಾನು ಈಗಾಗಲೇ ಹೇಳಿದಂತೆ 1975 ಮತ್ತು 1977 ರಲ್ಲಿ ಬಿಡುಗಡೆಯಾದ, ಬ್ರಾಹ್ಮಣರೇ ಬರೆದು ನಿರ್ದೇಶಿಸಿದ, ಚೋಮನ ದುಡಿ ಹಾಗೂ ಘಟಶ್ರಾದ್ಧ ಈ ‘ಕಲಾತ್ಮಕ ಚಿತ್ರ’ ಪರಂಪರೆಯಲ್ಲಿ ಒಡಮೂಡಿದ ಶ್ರೇಷ್ಠ ಸಿನಿಮಾಗಳು. ಶಿವರಾಮ ಕಾರಂತರ ‘ಚೋಮನ ದುಡಿ’ ಕಾದಂಬರಿಯನ್ನು ಬಿ. ವಿ. ಕಾರಂತ್ ಹಾಗೂ ಯು. ಆರ್. ಅನಂತಮೂರ್ತಿಯವರ ‘ಘಟಶ್ರಾದ್ಧ’ ಕತೆಯನ್ನು ಗಿರೀಶ್ ಕಾಸರವಳ್ಳಿಯವರು ದೃಶ್ಯಕ್ಕೆ ಒಗ್ಗಿಸಿದ ಪರಿ ಉನ್ನತ ಮಟ್ಟದ್ದಾಗಿದೆ. ಈ ‘ಕಲಾತ್ಮಕ ಚಿತ್ರ’ಗಳು ತಮ್ಮ ಸೀಮಿತ ಪರಿಧಿಯಲ್ಲಿಯೇ ಶೋಧಿಸಿದ ವಿಷಯ ಮತ್ತು ಚಿಂತನೆಯನ್ನು ಪ್ರೇಕ್ಷಕರಿಗೆ ಯಶಸ್ವಿಯಾಗಿ ದಾಟಿಸಿದವು. ಸಿನಿಮಾ ಕಲೆಯ ಮಾಧ್ಯಮದಲ್ಲಿ ಇದು ದೊಡ್ಡ ಸಾಧನೆಯೇ ಸರಿ. ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿಯನ್ನು ನಾನು ಓದಿಲ್ಲ. ಆದರೆ, ಅದರಲ್ಲಿನ ಕತೆಯು ಸಿನಿಮಾ ಮಾಧ್ಯಮದಲ್ಲಿ ಪರಿಣಾಮಕಾರಿಯಾಗಿ ಪ್ರಕಟವಾಗಿದೆ ಎಂದು ಹೇಳಿದರೆ ಅತೀಶಯೋಕ್ತಿ ಆಗಲಿಕ್ಕಿಲ್ಲ.

ಚೋಮನ ದುಡಿ ಸಿನಿಮಾ ಒಂದು ಮೇರು ಕೃತಿ. ಭಾರತೀಯ ಚಿತ್ರಗಳಲ್ಲಿ ಕಾಣುವ ವಿರಳ ಸಿನಿಮಾಗಳಲ್ಲಿ ಇದು ಕೂಡ ಒಂದು. ಒಟ್ಟಾರೆಯಾಗಿ ಅದನ್ನು ನವ ವಾಸ್ತವಿಕ ಸಿನಿಮಾ ಎಂದು ಪರಿಗಣಿಸಬಹುದು. ವಿಮರ್ಶಕರೊಬ್ಬರು ಈ ಚಿತ್ರವನ್ನು ‘ನಿರ್ದಯತೆ ಮತ್ತು ಶೋಚನಿಯತೆ’ಯ ಸಂಕೇತ ಎಂದಿದ್ದರು. ಅವರ ಅಭಿಪ್ರಾಯವೇ ಈ ಚಿತ್ರ ಯಾಕೆ ಭಾರತದಲ್ಲಿ ವಿರಳ ಎಂಬುದನ್ನು ವಿವರಿಸುತ್ತದೆ. ಅಮೆರಿಕದ ಹಾಲಿವುಡ್ ನಲ್ಲೂ ಇಂತಹ ನವ ವಾಸ್ತವಿಕ ಚಿತ್ರಗಳು ಇಲ್ಲವೇ ಇಲ್ಲ ಎನ್ನಬಹುದು‌. ದುಡಿವ ವರ್ಗದ ಜನರ ಬವಣೆಯನ್ನು ಹೇಳುವ (ನವ ವಾಸ್ತವಿಕ ಚಿತ್ರಗಳ ಗುಣಗಳಲ್ಲಿ ಒಂದು) ಚೋಮನ ದುಡಿಯಲ್ಲಿ ಎಲ್ಲರ ಅಭಿನಯ ಗಮನಾರ್ಹವಾಗಿದೆ. ಚೋಮನಾಗಿ ಎಂ. ವಿ. ವಾಸುದೇವ ಹಾಗೂ ಇತರ ಪಾತ್ರಧಾರಿಗಳ ಅಭಿನಯ ಅವರಿರುವ ಶೋಚನಿಯ ಪರಿಸರವನ್ನು ನೋಡುಗರ ಮನಕ್ಕೆ ಮುಟ್ಟಿಸುತ್ತದೆ. ವಂಶವೃಕ್ಷದಂತೆ, ಈ ಚಿತ್ರವು ನೈಜ ಅರ್ಥದಲ್ಲಿ ಜಾತಿ ಸಮಸ್ಯೆಯ ಕುರಿತಾಗಿಲ್ಲ. ಎಲ್ಲ ಪಾಳೆಗಾರಿಕೆ, ಅರೆ ಪಾಳೆಗಾರಿಕೆಯ ಸಮಾಜಗಳಲ್ಲಿ ಕಾಣುವ ಶೋಷಣೆಯ ಕತೆಯನ್ನು ಸಿನಿಮಾ ಹೇಳುತ್ತದೆ. ಇನ್ನೂ ಘಟಶ್ರಾದ್ಧ, ದೃಶ್ಯದ ತಾಕತ್ತನ್ನು ಬಳಸಿಕೊಂಡು ಕತೆಯನ್ನು ಪ್ರಸ್ತುತಪಡಿಸುತ್ತ, ಆ ಮೂಲಕ ವಿಷಯವನ್ನು ಸಾರ್ವತ್ರಿಕಗೊಳಿಸುವ ಅಪ್ರತಿಮ ಗುಣ ಹೊಂದಿದೆ. ‘ಕಲಾತ್ಮಕ ಚಿತ್ರ’ ಪರಂಪರೆಯನ್ನು ಎತ್ತರಿಸಿದ ಕೀರ್ತಿ ಅದಕ್ಕೆ ಸಲ್ಲಬೇಕು. 

ಈ ಎರಡೂ ಚಿತ್ರಗಳ ನಿರ್ದೇಶಕರು ಕಾರ್ನಾಡರ ‘ಕಾಡು’ ಸಿನಿಮಾಕ್ಕೆ ಹೆಚ್ಚು ಋಣಿಯಾಗಿರಬೇಕು. ಕಾಡು ಸಿನಿಮಾದ ವಿಶೇಷ ಸಂಗೀತ ಮತ್ತು ಧ್ವನಿ ಸಂಯೋಜನೆಯನ್ನು ಕಾರಂತರು ಚೋಮನ ದುಡಿಗೂ ವಿಸ್ತರಿಸಿದ್ದರು. ಆ ಚಿತ್ರದಲ್ಲಿ ಅವರ ಸಂಗೀತ ಸಂಯೋಜನೆ ಮತ್ತೊಂದು ಮಜಲನ್ನು ಮುಟ್ಟಿತ್ತು. ಘಟಶ್ರಾದ್ಧ ಸಿನಿಮಾದಲ್ಲಿನ ಎಸ್. ರಾಮಚಂದ್ರರವರ ಛಾಯಾಗ್ರಹಣದ ಬಗ್ಗೆ ಹೇಳಲೇಬೇಕು. ಅಚ್ಚುಕಟ್ಟಾದ ಹಾಗೆಯೇ ಅತ್ಯುತ್ತಮವಾದ ಛಾಯಾಗ್ರಹಣ ಅದು. ವ್ಯಕ್ತಿಗಳಿಗಿಂತ ವಸ್ತುಸ್ಥಿತಿಯ ಚಿತ್ರಣವನ್ನು ಕಟ್ಟುಕೊಡುವ ತಂತ್ರವನ್ನು ರಾಮಚಂದ್ರ ಅನುಸರಿಸಿದ್ದಾರೆ.  ಛಾಯಾಗ್ರಹಣದ ಈ ತಂತ್ರವು  ನವ ವಾಸ್ತವವಾದಿ ಚಿತ್ರಗಳ ಮತ್ತೊಂದು ಗುಣವಾದ ನಿರ್ಭಾವುಕತೆಯನ್ನು ಸೆರೆಹಿಡಿಯಲು ಮುಖ್ಯವಾಗುತ್ತದೆ. ವಂಶವೃಕ್ಷ ಸಿನಿಮಾಗೆ ಸಹಾಯಕ ಛಾಯಾಗ್ರಾಹಕರಾಗಿದ್ದ ರಾಮಚಂದ್ರ, ಈ ಚಿತ್ರಕ್ಕೆ ಸಂಪೂರ್ಣ ಭಿನ್ನವಾದ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಮಾನಸಿಕ ತಳಮಳದ ನೋವಿನಲ್ಲಿರುವ ಹೆಣ್ಣು ಮತ್ತು ಪರಕೀಯ ಭಾವದಲ್ಲಿರುವ ಬಾಲಕ, ಇವರಿಬ್ಬರ ಗ್ರಹಿಕೆಗಳನ್ನು ಈ ತಾಂತ್ರಿಕ ಶೈಲಿಯಲ್ಲಿ ಒಟ್ಟಾಗಿಸಿದ್ದಾರೆ. ಕಾಡು ಸಿನಿಮಾದಲ್ಲಿನ ನಿಹಲಾನಿಯವರ ಛಾಯಾಗ್ರಹಣಕ್ಕೂ ಈ ಚಿತ್ರದ ದೃಶ್ಯಿಕರಣಕ್ಕೂ ಅನೇಕ ಸಾಮ್ಯತೆಗಳಿವೆ.

ಈ ಎಲ್ಲ ‘ಕಲಾತ್ಮಕ’ ಸಿನಿಮಾಗಳ ಉತ್ತಮ ಗುಣಗಳ ಬಗ್ಗೆ ಇಷ್ಟೆಲ್ಲ ಹೇಳಿದ ಮೇಲೂ ಅವುಗಳ ಸೀಮಿತ ವ್ಯಾಪ್ತಿಯ ಕುರಿತು ನನ್ನ ಅಭಿಪ್ರಾಯ ಬದಲಾಗುವುದಿಲ್ಲ. ರೇ ಹೇಳಿದಂತೆ,  ಕನ್ನಡದ ‘ಕಲಾತ್ಮಕ ಚಿತ್ರ’ ಪರಂಪರೆಯ ಆರಂಭದ ದಿನಗಳ ಕ್ಯಾನ್ವಾಸ್ ವಿಶಾಲವಾಗಿರಲಿಲ್ಲ. ಸತ್ಯಜಿತ್ ರೇ ಸಿನಿಮಾಗಳಲ್ಲಿನ ಬೆಂಗಾಲಿ ‘ಬ್ರಾಹ್ಮಣ’ ಜಗತ್ತಿಗೆ ಹೋಲಿಸಿದರೆ ಕನ್ನಡದ ‘ಬ್ರಾಹ್ಮಣ’ ಜಗತ್ತು ಹೆಚ್ಚು ಅಂತರ್ಮುಖಿಯಾಗಿತ್ತು. ಸೂಕ್ಷ್ಮವಾಗಿ ನೋಡಿದರೆ, ‘ಸಾರಸ್ವತ ಬ್ರಾಹ್ಮಣ’ ಪ್ರಪಂಚ ಹೊಂದಿದ್ದ ‘ವಿಶ್ವ ಪ್ರಜ್ಞೆ’ (cosmopolitan) ಯು ಕನ್ನಡದ ‘ಬ್ರಾಹ್ಮಣ ಜಗತ್ತಿನಲ್ಲಿ’ ಕಾಣಿಸುವುದು ವಿರಳ. ಇದೇ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಗಿರೀಶ ಕಾರ್ನಾಡ ಮತ್ತು ಆ ಸಮುದಾಯದಲ್ಲಿನ ‘ವಿಶ್ವ ಪ್ರಜ್ಞೆ’ಯ ಬಗ್ಗೆ ಮುಂದಿನ ಲೇಖನದಲ್ಲಿ ಚರ್ಚಿಸುತ್ತೇನೆ.

ಮುಂದುವರೆಯುವುದು…

ಮೂಲ ಇಂಗ್ಲಿಷ್:  https://ruthumana.com/?post_type=blog_post&p=7905


ಅನುವಾದ: ವರುಣ ನಾಯ್ಕರ

ಹುಟ್ಟಿದ್ದು ಬೆಂಗಳೂರು. ಬೆಳೆದಿದ್ದು ಧಾರವಾಡದಲ್ಲಿ. ಡಿಗ್ರಿ ಮುಗಿಸಿದ್ದು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ. ನಂತರ ಸ್ನಾತಕೋತ್ತರ ಪದವಿ (ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಷಯ) ಮುಗಿಸಿದ್ದು ಬೆಂಗಳೂರಿನ ಜೈನ್ ಸಿಎಮ್ ಎಸ್ ಶಿಕ್ಷಣ ಸಂಸ್ಥೆಯಲ್ಲಿ. ಅದಾದಮೇಲೆ ಉಪಸಂಪಾದಕ/ವರದಿಗಾರನಾಗಿ ಪ್ರಜಾವಾಣಿ ಪತ್ರಿಕೆಯಲ್ಲಿ ಎರಡು ವರ್ಷಗಳ ಕಾಲ ಕೆಲಸ. ವಿವಿಧ ಜ್ಞಾನ ಶಾಖೆಗಳು ಮತ್ತವುಗಳ ಅಂತರ್ ಶಿಸ್ತೀಯ ಓದು, ಚರ್ಚೆ ಆಸಕ್ತಿಕರ ವಿಷಯಗಳು. ‘ಸಿನಿಮಾ ಓದುವಿಕೆ’ಯ ಬಗ್ಗೆ ಒಲವು.


3 comments to “ಗಿರೀಶ್ ಕಾರ್ನಾಡ್ ಸರಣಿ: ಕಾರ್ನಾಡ ಮತ್ತು ‘ಕಲಾತ್ಮಕ ಚಿತ್ರ’ – ಭಾಗ ೨”
  1. Pingback: ಗಿರೀಶ್ ಕಾರ್ನಾಡ್ ಸರಣಿ : ಗಿರೀಶ ಕಾರ್ನಾಡರು ಮತ್ತು ಸಾರಸ್ವತ ಸಂಪ್ರದಾಯ – ಋತುಮಾನ

  2. Pingback: ಗಿರೀಶ್ ಕಾರ್ನಾಡ್ ಸರಣಿ : ಆಸ್ಕರ್, ಕುರಸೋವಾ ಮತ್ತು ಕಾರ್ನಾಡ್ – ಋತುಮಾನ

  3. Pingback: ಗಿರೀಶ್ ಕಾರ್ನಾಡ್ ಸರಣಿ – ಕೊನೆಯ ಭಾಗ : ಹಸುಗಳೂ, ಹುಲಿಗಳೂ – ಋತುಮಾನ

ಪ್ರತಿಕ್ರಿಯಿಸಿ