ವಂದೇ ಭಾರತ್ ಮಿಷನ್: ಮೂತ್ರದಲ್ಲಿ ಮತ್ಸ್ಯಬೇಟೆ

ಬಹುತೇಕ ದೇಶಗಳು ತಮ್ಮ ಪ್ರಜೆಗಳನ್ನು ಯಾವುದೇ ಬೊಂಬಡಾ ಬಜಾಯಿಸದೇ ತವರಿಗೆ ಕರೆಸಿಕೊಂಡಿವೆ. ಇಸ್ರೆಲ್ ಕೂಡಾ – ಭಾರತವೂ ಸೇರಿದಂತೆ –  ಬೇರೆ ದೇಶದ ವಿದ್ಯಾರ್ಥಿಗಳಿಗೆ ತಾನೇ ಸಹಾಯ ಮಾಡಿ ಮರಳಿಹೋಗಲು ವ್ಯವಸ್ಥೆಮಾಡಿದೆ. ಅದನ್ನೂ ತನ್ನ ವಿದೇಶಾಂಗ ನೀತಿಯ ಸಾಧನೆ ಎಂದು ಕೊಚ್ಚಿಕೊಳ್ಳುವುದು ಈಗ ಬಾಕಿ ಇದೆ ಅಷ್ಟೇ. ಬಾಲವಾಡಿ ಮಕ್ಕಳು ತಮ್ಮ ಆಟಿಕೆಗಳಿಗೆ ಹೆಸರಿಡುವಂತೆ, ಎಲ್ಲದಕ್ಕೂ ನಾಮಕರಣ ಮಾಡುವ ಚಟದ ಸರ್ಕಾರ “ವಂದೇ ಭಾರತ್ ಮಿಷನ್” ನ ಅಡಿಯಲ್ಲಿ ಅನಿವಾಸಿಗಳ ತಲೆಗೆ ಬೋಳೆಣ್ಣೆ ಸವರಿದ್ದು ಹೇಗೆ? ಜರ್ಮನಿಯಿಂದ ಭಾರತಕ್ಕೆ ಮರಳಿ ಬರುವ ಎರಡೂವರೆ ತಿಂಗಳಿನ ಕಾಲದ ಕತೆ ಇದು.

೨೦೧೧ರಲ್ಲಿ ಮಡಗಾಸ್ಕರ್ ಎಂಬ ದೇಶದಿಂದ ಭಾರತಕ್ಕೆ ವಾಪಾಸ್ ಬಂದ ಮಾರನೇಯ ದಿನ ಬಿ.ಎಂಟಿ.ಸಿ ಬಸ್ಸಿನಲ್ಲಿ ಕುಳಿತಿದ್ದೆ. ನವರಂಗ್ ಟಾಕೀಸಿನ ಪಕ್ಕ ಹೋಗುತ್ತಿದ್ದ ಆ ಬಸ್ಸಿನ ಡ್ರೈವರ್ ಸೀಟಿನ ಹಿಂದುಗಡೆ ಇದ್ದಾಗ, ಪಕ್ಕದಲ್ಲಿ ಒಂದು ಆಟೋ ಬಂತು. ಟ್ರಾಫಿಕ್ ಇತ್ತು. ಬಸ್ಸಿನ ಡ್ರೈವರ್ “ಅಮ್ಮನ್ ಅಕ್ಕನ್” ಎಂದು ಪಕ್ಕದ ಆಟೋದವನ ನೆಪದಲ್ಲಿ ಆಟೋ ಡ್ರೈವರುಗಳ ಕುಲದವರಿಗೆಲ್ಲ ಬಯ್ದ. ಮತ್ತೊಮ್ಮೆ ದೇಶ ಬಿಟ್ಟು ಹೋಗಿ ಎರಡು ವರ್ಷದ ತರುವಾಯ ಫ್ರಾನ್ಸಿನಿಂದ ಮರಳಿ ಬಂದಾಗ ಬಸವೇಶ್ವರ ನಗರದ ಪವಿತ್ರಾ ಪ್ಯಾರಡೈಸ್ ಬಳಿ ಇನ್ನೊಂದು ಬಿಎಂಟಿಸಿ ಬಸ್ಸಿನಲ್ಲಿ ಕುಳಿತಿದ್ದೆ. ಪಕ್ಕದಲ್ಲಿ ಇನ್ನೊಂದು ಬಿಎಂಟಿಸಿ ಬಸ್ಸು ಟ್ರಾಫಿಕ್ಕಿನಲ್ಲಿ ನುಸುಳಿಕೊಂಡು ಬಂತು. ನಮ್ಮ ಡ್ರೈವರ್ ಪಕ್ಕದ ಬಸ್ಸಿನದೇ ಡ್ರೈವರ್ ನಿಗೆ ಉಗಿದು “ಅಮ್ಮಾ ಅಕ್ಕಾ” ಎಲ್ಲ ಮಾಡಿ “ಬಸ್ ಓಡ್ಸೋಕೆ ಬರಲ್ಲಾ… ಎಲ್ಲಿಂದ ಬರ್ತಾರೇನೋ” ಗೊಣಗಿಕೊಂಡ. ಎರಡು ವರ್ಷದ ಕೆಳಗೆ ಬಸ್ಸಿನವನಿಗೆ, ಆಟೋದವನು “ಅನ್ಯನಾಗಿ” ಕಂಡು ಸಿಟ್ಟಿಗೆ ತುತ್ತಾಗುತ್ತಿದ್ದರೆ, ಅನುಕಂಪ ಮತ್ತು ನಮ್ಮವರೇ ಎನ್ನುವ ಭಾವ ಎರಡು ವರ್ಷಗಳಲ್ಲಿ ಇನ್ನಷ್ಟು ಸೋರಿಹೋಗಿ ತನ್ನಂಥದೇ ಇನ್ನೊಬ್ಬ ಬಸ್ ಡ್ರೈವರ್ರೇ ಅನ್ಯನಾಗಿಹೋಗಿದ್ದ.

ಕೃಪೆ: Banglore Mirror

ಕೃಪೆ: Banglore Mirror

ಈಗ ಸುಮಾರು ಏಳು ವರ್ಷದ ನಂತರ, ಭಾರತದಿಂದ ಹೊರಗೆ ಹೋಗಿ, ಮೂರು ವರ್ಷದ ತರುವಾಯ ವಿಚಿತ್ರ ಸಂದರ್ಭದಲ್ಲಿ ಮರಳಿ ಬಂದಿದ್ದೇನೆ. ವೈರಸ್ಸೂ ನಮ್ಮೆಲ್ಲರನ್ನೂ ದೂರ-ದೂರವಿರುವಂತೆ ಒತ್ತಾಯಿಸಿದೆ. ನಿಮ್ಮ-ತಲೆಗೆ-ನಿಮ್ಮದೇ-ಕೈ (ಅರ್ಥಾತ್ ಆತ್ಮನಿರ್ಭರರಾಗಿ) ಎಂದು ಅಧಿನಾಯಕರೂ ಪೊಲಿಟಿಕಲ್ ಡಿಸ್ಟೆಂನ್ಸ್ ಮಾಡಿಕೊಂಡಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದ ಕ್ಷಣದಿಂದ ಪರಸ್ಪರರು ಅನ್ಯರೆಂಬ ತಿಳುವಳಿಕೆ ಕೇವಲ ದೈಹಿಕ ಮಟ್ಟದಲ್ಲಿಯಷ್ಟೇ ಅಲ್ಲದೇ, ತಮ್ಮತಮ್ಮ ಸರ್ವೈವಲ್ ನ ಹಪಹಪಿಯಾಗಿ ಬದಲಾಗಿರುವಂತೆ ಕಂಡದ್ದು ಕಳೆದೆರಡು ಅನುಭವಗಳ ಸಹಜ ಮುಂದುವರಿಕೆಯೇ. ಇದನ್ನು ಯಾವ ಹಳಹಳಿಕೆಯಲ್ಲಿಯೂ ಬರೆಯುತ್ತಿಲ್ಲ. ಜಗತ್ತಿನ ಮುಖ್ಯ ಚಿಂತಕರೆಲ್ಲರೂ- ಎಂದಿಗಿಂತಲೂ ಈಗ ಜಗತ್ತು ಪರಸ್ಪರ ಸಹಕಾರದಲ್ಲಿರಬೇಕಿದೆ ಎಂದು ಎಚ್ಚರಿಸುತ್ತಿರುವಾಗಲೇ ಅದಕ್ಕೆ ಇನ್ವರ್ಸ್ ಆಗಿ ಎಲ್ಲವೂ ಛಿದ್ರವಾಗಲು ಹಾತೊರೆಯುತ್ತಿರುವ ವೇಗದ ಕುರಿತಾಗಿ ಕುತೂಹಲದಲ್ಲಿ ಮಾತ್ರ. ಇದು Empathy Fatigue ನ ಕಾಲ. ಅರ್ಧರ್ಧ ಗಂಟೆಗೆ ಒಂದಕ್ಕಿಂತ ಇನ್ನೊಂದು ದುಃಖಮಯವಾದ ವಿಷ್ಯುಯಲ್ಸ್ ತುಂಬಿಕೊಂಡಾಗ, ಬೇಸತ್ತು ಮಿಡಿದೇ ಸುಸ್ತಾಗಿಬಿಡುವ ಸಮಯದಲ್ಲಿ ನಾವಿದ್ದೇವೆ.

ಈ ಹಿನ್ನೆಲೆಯಲ್ಲಿ, ಜರ್ಮನಿಯಲ್ಲಿ ಮಾರ್ಚ್ ೧೫ ರಂದು ಲಾಕ್ ಡೌನ್ ಘೋಷಿತವಾದ ದಿನದಿಂದ, ಭಾರತಕ್ಕೆ ಮರಳಲು ಯತ್ನಿಸಿದ ನನ್ನಂಥಹ ಅನೇಕರ ಅನುಭವಗಳ, ಹಿಂಸೆಗಳ ಬಗ್ಗೆಯೂ ಮತ್ತು ಭಾರತ ದೇಶದ ಪ್ರಶ್ನಾತೀತ ಸರ್ಕಾರದ “ವಂದೇ ಭಾರತ್ ಮಿಷನ್” ಎಂಬ ಪ್ರಚಾರ ಕಾರ್ಯಕ್ರಮದ ಬಗ್ಗೆಯೂ ತಿಳಿಯೋಣ, ಸ್ವಾಗತ.

***

“ಭಾರತೀಯ ಎಂಬೆಸಿಯಿಂದಲೋ ಅಥವಾ ಏರ್ ಇಂಡಿಯಾದಿಂದಲೋ ಸರಿಯಾದ ಉತ್ತರವನ್ನು ನಿರೀಕ್ಷಿಸೋದು ರಾಯಲಸೀಮೆಯಲ್ಲಿ ಮಳೆಗೆ ಕಾದಷ್ಟೇ ದಡ್ಡತನ ” ಎಂಬುದು ಆ ವಾಟ್ಸಾಪ್ ಗ್ರೂಪಿನಲ್ಲಿ ನಾನು ಓದಿದ ಮೊದಲ ಸಂದೇಶ. ಜರ್ಮನಿಯಿಂದ ಭಾರತಕ್ಕೆ ಮರಳಲು ಬಯಸುವವರೆಲ್ಲ ಸೇರಿ ಪರಸ್ಪರ ಸುಖ-ದುಃಖ (ಬಹುತೇಕ ದುಃಖ) ಹಂಚಿಕೊಳ್ಳಲು ಒಂದು ವಾಟ್ಸಾಪ್ ಗುಂಪನ್ನು ರಚಿಸಿಕೊಂಡಿದ್ದರು.

ಪುಣ್ಯಭೂಮಿ ಭಾರತವನ್ನು ಸೇರುವ ತವಕದಲ್ಲಿಯೋ ಅಥವಾ ಹಣ ಖಾಲಿಯಾಗುತ್ತಿರುವ ದುಗುಡದಲ್ಲಿಯೇ ನಾನೂ ಆ ಗುಂಪಿಗೆ ದಾಖಲಾದದ್ದು ಮತ್ತು ಅಲ್ಲಿಯೇ ಈ ಸಂದೇಶವನ್ನು ಓದಿದ್ದು.  ಮೇ ೭ ನೇ ತಾರೀಖು ಆರಂಭವಾದ “ವಂದೇ ಭಾರತ್ ಮಿಷನ್” ನ ಹಳವಂಡಗಳು -ನಾನು ಸೇರ್ಪಡೆಯಾಗುವ ವೇಳೆಗಾಗಲೇ- ಗ್ರೂಪಿನ ಸದಸ್ಯರಲ್ಲಿ ಗೊಂದಲ, ಆತಂಕ ಮತ್ತು ನಿರಾಶೆಯನ್ನು ಹುಟ್ಟಿಸಿಯಾಗಿತ್ತು. ಎಷ್ಟರ ಮಟ್ಟಿಗೆಂದರೆ, ಕೋವಿಡ್ ಕಾಲದ ಭಾರತೀಯರಂತೆ, ದೇಶ ತೊರೆದ ಎಲ್ಲ ಜನರೂ ಎಂಥದ್ದೇ ಭರವಸೆಯನ್ನೂ ನಂಬಲು ತಯಾರಿದ್ದರು. ನಾನೊಂದು ಪಬ್ಲಿಕ್ ವಾಟ್ಸಾಪ್ ಗುಂಪಿನ ಭಾಗವಾಗಿದ್ದು ಇದೇ ಮೊದಲ ಬಾರಿ. ದೇವರೇ! ಸುಮಾರು ಮುನ್ನೂರು ಜನರ ನಾಡಿಬಡಿತವನ್ನು ತಿಳಿದುಕೊಳ್ಳುವುದಷ್ಟೇ ಅಲ್ಲ, ಹೇಗೆ ಜನರ ತಲೆಯನ್ನು ಹಾಳುಮಾಡಿಬಿಡಬಹುದು ಎಂದು ಅರ್ಥವಾಗಿ ನಾನು ಸತ್ಯಕ್ಕೂ ಬೆಚ್ಚಿಬಿದ್ದೆ. ಸಧ್ಯದ ಭಾರತೀಯ ಮೂಲದ ಜನ ಎಷ್ಟು ಭಕ್ತಮುಠ್ಠಾಳರಾಗಿದ್ದಾರೆಂದರೆ, ಸುಳ್ಳುಸುದ್ಧಿಯೇ ಅವರಿಗೆ ಸುದ್ಧಿ. ಒಂದೊಮ್ಮೆ ನಾನು “ಫ್ರಾಂಕ್‍ಫರ್ಟ್ ಏರ್ಪೋರ್ಟಿಗೆ ನೇರವಾಗಿ ಹೋಗಿ; ಅಲ್ಲಿಂದಲೇ ಜನರನ್ನು ಹತ್ತಿಸಿಕೊಂಡು ಹೋಗುತ್ತಾರೆ” ಎಂಬ ಒಂದು ಸುಳ್ಳುಸುದ್ಧಿಯನ್ನು ನಾನು ಹಬ್ಬಿಸಿದ್ದರೆ ಗ್ರೂಪಿನ ಮುನ್ನೂರರಲ್ಲಿ ಕನಿಷ್ಟ ೧೦ ಜನರಾದರೂ ಅದಕ್ಕೆ ಪಿಗ್ಗಿ ಬಿದ್ದಿದ್ದಾರು. (ಅದನ್ನು ಜೋಕಿಗೆ ಹೇಳಿ ಒಬ್ಬರನ್ನು ನಂಬಿಸಿಯೂ ಬಿಟ್ಟಿದ್ದೆ ಕೂಡಾ.)

ಪರಿಸ್ಥಿತಿ ತಿಳಿಯಲು ದೂತವಾಸವನ್ನು ಸಂಪರ್ಕಿಸಿದಾಗ ಅಲ್ಲಿಯ ಅಧಿಕಾರಿಗಳು, ಏರ್‍ಇಂಡಿಯಾ ವನ್ನು ಸಂಪರ್ಕಿಸಿ ಎನ್ನುತ್ತಿದ್ದರು. ಪೂರ್ವಜನ್ಮದ ಸುಕೃತವಿದ್ದವರ ಫೋನ್ ಅನ್ನು ಮಾತ್ರ ಸ್ವೀಕರಿಸುತ್ತಿದ್ದ ಏರ್‍ಇಂಡಿಯಾ ದ ಜನ ಭಾರತ ಸರ್ಕಾರದತ್ತ ಬೆಟ್ಟು ತೋರಿಸುತ್ತಿದ್ದರು. ಭಾರತ ಸರ್ಕಾರದ ಟ್ವಿಟರ್ ತೆಗೆದರೆ “ವಂದೇ ಭಾರತ್” ಎಂಬ ಏಕಮೇವಾದ್ವಿತೀಯ ಮಿಷನ್ ನ ಅಭೂತಪೂರ್ವ ಸಾಧನೆಯ ಪೋಸ್ಟ್ ಗಳು. ಯಾರನ್ನು ಬಚಾವು ಮಾಡಿ ಕರೆದುಕೊಂಡು ಹೋಗಿದ್ದಾರೆ? ಯಾರಿಗೂ ಗೊತ್ತಿಲ್ಲ!

ಸಮಸ್ಯೆಗಳಿದ್ದದ್ದು ಒಂದೆರಡಲ್ಲ. ಭಾರತಕ್ಕೆ ಹೋಗುವ ಜನರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದದ್ದು ಭಾರತೀಯ ಎಂಬೆಸಿ. ಆದ್ಯತೆಯ ಮೇರೆಗೆ ಜನರನ್ನು ಆಯ್ದುಕೊಳ್ಳುತ್ತಿದ್ದೇವೆ ಎಂಬ ಹೇಳಿಕೆಯ ನಂತರ ಬಿಡುಗಡೆಗೊಂಡ ಪಟ್ಟಿಯಲ್ಲಿ ಗಂಡ-ಹೆಂಡತಿಯ ಹೆಸರುಗಳಿದ್ದರೆ. ಅವರ ಒಂದೂವರೆ ವರ್ಷದ ಮಗುವಿನ ಹೆಸರು ನಾಪತ್ತೆ. ಇನ್ನೂ ಒಂದಕ್ಕಿಂತ ಹೆಚ್ಚು ವರ್ಷ ವೀಸಾ ಇದ್ದವರ ಹೆಸರು ಕಾಣಿಸಿಕೊಂಡರೆ, ವೀಸಾ ಮುಗಿದು ಹೋದ ಅನೇಕರು ಇನ್ನೂ ಅಲ್ಲಿಯೇ ಉಳಿದುಕೊಂಡಿದ್ದಾರೆ. ಜರ್ಮನಿಯೇನೋ ಒಂದೆರಡು ತಿಂಗಳು ವೀಸಾವನ್ನು ವಿಸ್ತರಿಸಿತಾದರೂ, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಜರ್ಮನಿಯೇ ಕೊನೆಗೆ ಬೇಸತ್ತು ಪೌರತ್ವವನ್ನೇ ಕೊಟ್ಟುಬಿಡುವುದೇನೋ ಎಂಬಂಥ ಹತಾಶೆ (ಆಸೆ?!) ಯ ಮೆಸೇಜುಗಳೂ ಹರಿದಾಡಲು ಆರಂಭಿಸಿದ್ದವು. ಅಷ್ಟೇ ಅಲ್ಲ. ಹೀಗೆ, ಅದೃಷ್ಟವಶಾತ್ ಪಟ್ಟಿಯಲ್ಲಿ ಸೇರ್ಪಡೆಗೊಂಡ ಕೆಲವರು, ಬಳಿಕ ಟಿಕೆಟ್ ಪಡೆಯಲು ಏರ್‍ಇಂಡಿಯಾಕ್ಕೆ ಕರೆ ಮಾಡಿದಾಗ ಸಿಕ್ಕ ಉತ್ತರ: “ಸಾರ್, ವಿಮಾನ ಭರ್ತಿಯಾಗಿದೆ!” ಎಂದು. ಇದು ಯಾವ ರೇಂಜ್ ಗೆ ಎಂದರೆ, ಬೆಂಗಳೂರಿನ ಸಿಲ್ಕ್ ಬೋರ್ಡಿನಿಂದ ಹೊಸೂರಿನ ಕಡೆಗೆ ಹೋಗಲು ನಿಂತಿರುವ ಬಸ್ಸುಗಳ ಕಂಡಕ್ಟರ ಹತ್ತಿರ “ಮೆಜೆಸ್ಟಿಕ್ ಗೆ ಹೋಗುತ್ತ?” ಎಂದು ಕೇಳಿ ನೋಡಿ. “ಹತ್ತಿ ಹತ್ತಿ ಸಾರ್..” ಎಂದು ಕರೆದು ದುಡ್ಡಿಸಿದುಕೊಂಡು ಎಲಕ್ಟ್ರಾನಿಕ್ ಸಿಟಿ ಹತ್ತಿರ ಇಳಿಸಿ ಆಲ್ರೈಟ್ ಎಂದು ಹೋಗಿಬಿಡುತ್ತಾನೆ. ಆಗ ದಿಕ್ಕುತೋಚದೇ ಮಿಕಿಮಿಕಿ ನೋಡುತ್ತೇವಲ್ಲ, ಹಾಗೆ ಆಕಾಶ ನೋಡಿಕೊಂಡಿರುವ ಪರಿಸ್ಥಿತಿ ಅನೇಕ ಭಾರತೀಯರದ್ದಾಗಿತ್ತು. ಒಂದೊಂದು ಟಿಕೇಟಿಗೆ ಮೂರು-ನಾಲ್ಕು ಬಾರಿ ದುಡ್ಡು ತೆತ್ತೂ, ಟಿಕೆಟ್ ಕೂಡಾ ಸಿಗದೇ ಇನ್ನೂ ಜರ್ಮನಿಯಲ್ಲಿಯೇ ಬಾಕಿಯಾಗಿರುವ ಅನೇಕರಿದ್ದಾರೆ. ನಾಳೆ ವಿಮಾನ ಹೊರಡುವುದೆಂದರೆ, ಇಂದು ರಾತ್ರಿ “ನೀವು ಆಯ್ಕೆಯಾಗಿದ್ದೀರಾ” ಎಂಬ ಮೈಲ್ ಬರುತ್ತದೆ. ಅದಕ್ಕೂ ತಯಾರಾಗಿ ರಾತ್ರೆ ಪೂರಾ ನಿದ್ದೆ ಬಿಟ್ಟು ಕಳೆದರೆ, ಬೆಳಿಗ್ಗೆ ನಿಮ್ಮ ಹೆಸರು ಮಾಯವಾಗಿರುತ್ತದೆ. ಈ ದೊಂಬರಾಟದ ಬಗ್ಗೆ ಗ್ರೂಪ್‍ನಲ್ಲಿ ಯಾರೋ ಒಬ್ಬ ಬರೆದ ಈ ಇಲ್ಲಿ ಹಾಕಲಾಗಿರುವ  ಸ್ಕ್ರೀನ್-ಶಾಟ್ ಒಂದರಲ್ಲಿದೆ: “ಮುಂದೊಮ್ಮೆ ಅಕ್ಷಯ್ ಕುಮಾರ್ ಈ ಇವ್ಯಾಕ್ಯುಯೇಶನ್ ನ ಮೇಲೆ ಚಲನಚಿತ್ರ ಮಾಡಿದರೆ, ನಿಜವಾಗಿ ಇದೆಲ್ಲ ಹೇಗೆ ಮಾಡಲ್ಪಟ್ಟಿತು ಎಂಬುದು ಎಲ್ಲರಿಗೂ ತಿಳಿಯಲಿ.” ಎಂದು.

ಭಾರತ ಸರ್ಕಾರವು ಈ ಯೋಜನೆಗೆ “ವಂದೇ ಭಾರತ್ ಮಿಷನ್” ಎಂಬ ಅದ್ಭುತವಾದ ಹೆಸರನ್ನೇನೋ ಇಟ್ಟಿತು. ಆದರೆ, ಸಾಧಾರಣ ಸಂದರ್ಭದಲ್ಲಿ ೧೭ ರಿಂದ ೨೦ ಸಾವಿರ ರುಪಾಯಿಗಳಿಷ್ಟಿದ್ದ ಟಿಕೆಟ್ಟಿನ ದರ ಈ ಮಿಷನ್ ನಲ್ಲಿ ೫೬ ಸಾವಿರ ರುಪಾಯಿಗಳು. ಹಣ ಕಟ್ಟಿಯೂ ಟಿಕೆಟ್ ದೊರಕದವರಿಗೆ ೨ ವರ್ಷದ ಒಳಗೆ ಮರಳಿ ಟಿಕೆಟ್ ಖರೀದಿಸುವ ವೋಚರ್ ಕೊಡಲಾಗಿದೆ! ವಾಟ್ಸಾಪ್ ಗುಂಪಿನ ಸದಸ್ಯನೊಬ್ಬ “ಇದು ನಮ್ಮನ್ನು ಗೇಲಿ ಮಾಡುತ್ತಿರುವುದೋ ಅಥವಾ ನೀವು ಇನ್ನೂ ಅಷ್ಟು ಕಾಲ ಬದುಕಿರುತ್ತೀರಿ ಎಂಬ ಭರವಸೆ ಕೊಡುತ್ತಿರುವುದೋ?” ಎಂದು ಕೇಳಿ ವಿಷಣ್ಣನಾಗಿ ನಕ್ಕ. ಜರ್ಮನಿಯಲ್ಲಿ ತಟ್ಟೆ, ಜಾಗಟೆ ಬಡಿದು ಸದ್ದು ಮಾಡಲು ಅನುಮತಿ ಇರದ ಕಾರಣ, ವಾಟ್ಸಾಪಿನೊಳಗೇ ಗಂಟೆ ಇಮೋಜಿ ಹಾಕಿದವರಲ್ಲಿ ಅವನೂ ಒಬ್ಬ. ಇನ್ನು ಕೆಲವರಿಗೆ ಮೊದಲು ಖರೀದಿಸಿದ ಟಿಕೆಟ್ ನ ೩೦-೩೫% ಹಣವನ್ನು ಮಾತ್ರ ಮರಳಿಸಿ, ಹೊಸ ಟಿಕೆಟ್ ಗೆ ಪುನಃ ಹಣ ತೆರಲು ಹೇಳಲಾಯಿತು. ಅಂದರೆ ಜರ್ಮನಿಯಿಂದ ಭಾರತಕ್ಕೆ ಮರಳಲು ಅವರು ಕೊಡಬೇಕಾದ ಹಣ ಸುಮಾರು ೮೦-೯೦ ಸಾವಿರ ರುಪಾಯಿಗಳು. ಸಾಲ ಮಾಡಿ ಓದಲು ಹೋದ ವಿಧ್ಯಾರ್ಥಿಗಳಿಗೋ, ೪ ಜನರ ಕುಟುಂಬವೊಂದಕ್ಕೋ ಇದು ಊಹಾತೀತವಾದದ ಮೊತ್ತ.

"ವಂದೆ ಭಾರತ್ ಮಿಷನ್" ಫಲಾನುಭವಿ ಲೇಖಕ

“ವಂದೆ ಭಾರತ್ ಮಿಷನ್” ಫಲಾನುಭವಿ ಲೇಖಕ

ಇದೆಲ್ಲದರ ನಡುವೆ, ಕಾದು, ಹಣಚೆಲ್ಲಿ, ಹತಾಶರಾಗಿ ವಾಟ್ಸಾಪ್ ಗ್ರೂಪಿನಲ್ಲಿ ಸರ್ಕಾರದ ವಿರುದ್ಧ ಒಂದು ಸಂದೇಶ ಕಳುಹಿಸಿದ ಕೂಡಲೇ, ಸುಂಯ್ ಟಪಕ್ ಎಂದು ಎಲ್ಲಿಂದಲೋ ಜನ ದುತ್ತೆಂದು ಪ್ರತ್ಯಕ್ಷರಾಗುತ್ತಾರೆ. “ಇದು ಸರ್ಕಾರವನ್ನು ಟೀಕಿಸುವ ವೇಳೆಯಲ್ಲ; ಜಗತ್ತಿನಲ್ಲಿ ಭಾರತವೊಂದೇ ತನ್ನ ಜನರನ್ನು ಮರಳಿ ಕರೆಸಿಕೊಳ್ಳುತ್ತಿರುವ ದೇಶ” ಎನ್ನುತ್ತಾರೆ. ಇದು ಸುಳ್ಳೆಂದೂ, ಜಗತ್ತಿನ ಎಲ್ಲಾ ದೇಶಗಳೂ ತಮ್ಮ ಪ್ರಜೆಗಳನ್ನು ಮರಳಿ ಕರೆಸಿಕೊಳ್ಳುತ್ತಿವೆ ಎಂದು ತಿಳಿದಿದ್ದರೂ – ಅನೇಕರು ಪ್ರತಿಭಟಿಸಲು ಅಧೈರ್ಯ ತೋರಿ ಸುಮ್ಮನಾಗಿಬಿಡುವುದನ್ನು ನೋಡಲು ಸಖೇದಾಶ್ಚರ್ಯವಾಗುತ್ತದೆ. ಒಂದು ವಾಟ್ಸಾಪ್ ಗುಂಪಿನ ಒಳಗೇ ತಮ್ಮ ನಿಜವಾದ ಅವಶ್ಯಕತೆಯನ್ನು ವ್ಯಕ್ತಪಡಿಸಲು ಭಯಪಡುವುದು ಮಾತ್ರ ಸತ್ಯಕ್ಕೂ Orwellian ಪರಿಸ್ಥಿತಿಯೇ ಹೌದು. ಈ ಲೇಖನದ ಜೊತೆಗೆ ಬಳಸಿರುವ ಫೋಟೋವನ್ನು ತೆಗೆದುಕೊಡಲು ನಾನು ಫ್ರಾಂಕ್‍ಫರ್ಟ್ ವಿಮಾನನಿಲ್ದಾಣದಲ್ಲಿ ಒಬ್ಬರ ಬಳಿ ಕೇಳಿಕೊಂಡೆ. ಏರ್ಪೋರ್ಟಿನಲ್ಲಿಡೀ ಎಲ್ಲರ ಜೊತೆಗೂ ಈ “ವಂದೇ ಭಾರತ್ ಮಿಷನ್” ಅನ್ನೂ ತಮಾಷೆ ಮಾಡುತ್ತಲೂ, ಸರ್ಕಾರದ ಹಳವಂಡವನ್ನು ಟೀಕಿಸುತ್ತಲೂ ಇದ್ದ ನನ್ನನ್ನು ನೋಡಿದ್ದ ಅವರು, ನೇರವಾಗಿ ಸರ್ಕಾರವನ್ನು ಸಮರ್ಥಿಸಿಕೊಳ್ಳಲೂ ಆಗದೇ, ನನ್ನ ಟೀಕೆಗೆ ಜೊತೆಯಾಗಲೂ ಆಗದೇ, “Why need a photo? These are bad times. We shouldn’t register them” ಎಂದು ಹೇಳಿ ತಪ್ಪಿಸಿಕೊಂಡರು. ಬೆನ್ನೆಲುಬಿದ್ದ ಹುಡುಗಿಯೊಬ್ಬಳು ಫೋಟೋ ತೆಗೆದುಕೊಟ್ಟಳು.

ಹಾಗೆಯೇ, ದಕ್ಷಿಣ ಭಾರತದ ರಾಜ್ಯಗಳ ಜನರು, ಮುಖ್ಯವಾಗಿ ಕೇರಳ-ಆಂದ್ರದವರು- ತಮ್ಮ ರಾಜ್ಯಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಗ್ರೂಪಿನಲ್ಲಿ ಮೆಸೆಜ್ ಹಾಕಿದ ಕ್ಷಣಮಾತ್ರದಲ್ಲಿಯೇ ಉತ್ತರ ಭಾರತೀಯರಿಗೆ ತಮ್ಮ ಯಾವ ಪ್ರಿವಿಲೇಜ್ ಗೆ ಧಕ್ಕೆ ಬಂದ ಭಾವ ಉಂಟಾಗುವುದೋ ಏನೋ? ಭಾರತ ದೇಶವನ್ನು ಹೊಗಳಿ ಕಾಪಾಡಿಕೊಳ್ಳಲು ಆರಂಭಿಸಿಬಿಡುತ್ತಾರೆ. ನಾವು ದಕ್ಷಿಣದ ಎರಡನೇ ದರ್ಜೆ ನಾಗರಿಕರೆಂಬ ಅಡಿಯಾಳಿರದೇ ಅವರ ಅಹಂ ಪೂರ್ತಿಯಾಗುವುದಿಲ್ಲ ಅನ್ನಿಸುತ್ತದೆ. ತೆಲಂಗಾಣದವರು ತಮ್ಮದೇ ಒಂದು ವಾಟ್ಸಾಪ್ ಗುಂಪು ಮಾಡಿಕೊಳ್ಳಲು, ಮೂಲ ಗುಂಪಿನಲ್ಲಿಯೇ ಒಂದು ವಿನಂತಿಯ ಮೆಸೆಜ್ ಹಾಕಿದಾಗ – ಒಬ್ಬರ ಮೇಲೋಬ್ಬರು ಟಣ್ಣನೆ ಅವತರಿಸಿ “ಭಾರತೀಯರು ನಾವೆಲ್ಲ ಒಂದು” ಎಂದು ಡಂಗುರ ಸಾರಲು ಆರಂಭಿಸಸುತ್ತಾರೆ. ಆದರೆ, ಎಲ್ಲರಿಗಿಂತ ಮೊದಲು ದೆಹಲಿ, ಪಂಜಾಬು, ಹರಿಯಾಣಗಳಿಗೆ ವಿಮಾನ ಸಿಕ್ಕಿ, ಮರಳಿ – ವಾಟ್ಸಾಪ್ ಗ್ರೂಪನ್ನು ಎಕ್ಸಿಟ್ ಮಾಡಿದವರೂ ಅವರೇ.

ಜರ್ಮನಿಯನ್ನು ಹಾಗೆ ಇದ್ದಕ್ಕಿದ್ದಂತೆ ಬಿಟ್ಟುಬರುವುದು ಸುಲಭವೇನೂ ಅಲ್ಲ. ಮನೆಯ ಕರಾರು, ಬ್ಯಾಂಕಿನ ಖಾತೆ, ವಿಶ್ವವಿದ್ಯಾಲಯದ ಪತ್ರವ್ಯವಹಾರ, ವಿಮೆಯನ್ನು ನಿಲ್ಲಿಸುವ ಕೆಲಸ ಇತ್ಯಾದಿಗಳನ್ನು ಶಾಸ್ತ್ರೋಕ್ತವಾಗಿಯೇ ಮುಗಿಸಬೇಕು. ಇಲ್ಲದ್ದಿದ್ದರೆ ಶಿಸ್ತಿಗೆ (ಕು)ಖ್ಯಾತಿಯಾದ ಆ ದೇಶ ವಿಧಿಸುವ ದಂಡ ಏರ್‍ಇಂಡಿಯಾದ ವಿಮಾನ ಪ್ರಯಾಣಕ್ಕಿಂತಲೂ ದುಬಾರಿಯಾಗಿರುತ್ತದೆ. ಇದೆಲ್ಲದರ ಮಧ್ಯೆ ನಾನು ಬರಬೇಕಿದ್ದ ವಿಮಾನ ಇದ್ದಕ್ಕಿದ್ದ ಹಾಗೆ ರದ್ದಾಗಿ, ನನ್ನ ಮನೆಯ ಕಾಂಟ್ರಾಕ್ಟ್ ಕೂಡಾ ಮುಗಿದುಹೋದ್ದರಿಂದ, ಯೂನಿವರ್ಸಿಟಿಯ ಹುಲ್ಲುಹಾಸಿನ ಮೇಲೆ ಒಂದು ರಾತ್ರಿ ಮಲಗಿದ್ದು ಈ ಕಾಲ ನನಗೆ ನೀಡಿದ ಖಾಸಗೀ ಅನುಭವ.

ಹೀಗೆಲ್ಲ ನಾವು ಸುಮಾರು ಎರಡು ತಿಂಗಳು ದುರಂತಶಾಹಿಗಳಾಗಿ ಮನೆಯಲ್ಲಿ ತ್ರಿಶಂಕುವಾಗಿ ಬಿದ್ದುಕೊಂಡು, ನಿಮಿಷಕ್ಕೊಮ್ಮೆ ಎಂಬೆಸಿಯ ಟ್ವಿಟರ್ ತೆಗೆದು ಏನಾದರೂ ಹೊಸಸುದ್ಧಿಯೇ ಎಂದು ನೋಡುತ್ತಿದ್ದರೆ, ಜೂನ್ ೨೧ ರಂದು “ಯೋಗದಿವಸ” ವನ್ನು ಪ್ರಚಾರ ಮಾಡುವುದರಲ್ಲಿ ಮಾನ್ಯ ವಿದೇಶಾಂಗ ಮಂತ್ರಿ ಜೈಶಂಕರ್ ಬ್ಯುಸಿಯಾಗಿದ್ದರು. ವಾಟ್ಸಾಪಿನ ಜನ ಭಾರತದ ಯೋಗ ದಿನದ ಬಗ್ಗೆ ವಿದೇಶದ ಕೊಲಿಗುಗಳ ಜೊತೆ ಕೊಚ್ಚಿಕೊಳ್ಳಲು ಕೂಡಾ ಆಫೀಸಿಗೆ ಹೋಗಲಾಗದೇ, ಇತ್ತ ಮಾತೃಭೂಮಿ ಭಾರತಕ್ಕೂ ಮರಳಲಾಗದೇ ತ್ರಿಶಂಕುವಾಗಿದ್ದರು.

ಭಾರತಕ್ಕೆ ಮರಳಿದ ಬಳಿಕ : ಕ್ವಾರಂಟೈನ್

ದೆಹಲಿ ಏರ್ಪೋರ್ಟಿನಲ್ಲಿ ಕಾಲಿಟ್ಟ ಕ್ಷಣವೇ ನಮ್ಮಲ್ಲಿ ಅನೇಕರಿಗೆ ಕೊರೋನಾ ಅಂಟಿಕೊಳ್ಳುವುದು ಖಚಿತವಾಯಿತು. ಸಾಮಾಜಿಕ ದೂರ ಇರಲಿ, ವಯಕ್ತಿಕ ಅಂತರವನ್ನು ಕಾಯ್ದುಕೊಳ್ಳುವ ವ್ಯವಸ್ಥೆಯನ್ನೂ ಸಮರ್ಪಕವಾಗಿ ನಿರ್ವಹಿಸಲಿಲ್ಲ. ನಮಗಿಂತ ಮುಂಚೆ ಹೋಗಿದ್ದ ವಿಮಾನಗಳ ಜನಕ್ಕೆ ಭಾರತದ ಏರ್ಪೋರ್ಟಿನಲ್ಲಿ ಫೋಟೋಶೂಟ್ ಎಲ್ಲ ಮಾಡಲಾಗಿತ್ತು. ನಮಗೆ ಆ ಭಾಗ್ಯ ದಕ್ಕಲಿಲ್ಲ. ಭೂತಾಕಾರದ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ವೃದ್ಧರಿಗೆ, ಮಕ್ಕಳನ್ನು ಕಂಕುಳಲ್ಲಿ ಸಿಕ್ಕಿಸಿಕೊಂಡ ತಾಯಂದಿರಿಗೆ ಟರ್ಮಿನಲ್ ನಿಂದ ಟರ್ಮಿನಲ್ ಗೆ ನಡೆಯುವುದು ಸುಲಭವಲ್ಲ.

ದೇಶದ ರಸ್ತೆಗಳಲ್ಲಿ ಬಡವರು ನಡೆದೇ ಸತ್ತಿದ್ದಾರೆ ಎಂಬುದರ ಅರಿವು ನನಗೆ ಇದೆ. ಆದರೆ, ದೇಶದೊಳಕ್ಕೆ ಸೋಂಕನ್ನು ತಂದವರು ನಾವು ಅನಿವಾಸೀ ಭಾರತೀಯರೇ ಅಲ್ಲವೇ? ಸೋಂಕು ಉಲ್ಬಣವಾಗದಂತೆ ತಡೆಯಲಾದರೂ ನಮ್ಮನ್ನು ಹೆಚ್ಚು ಸುರಕ್ಷಿತವಾಗಿ ನಿರ್ವಹಿಸಬೇಕಿತ್ತು ಎಂಬುದಷ್ಟೇ ನನ್ನ ಕಾಳಜಿ.

ಬಹುಷಃ, ನಮ್ಮ ಗೌರವಾನ್ವೀತ ಭಾರತೀಯ ಸಹ-ಪ್ರಜೆಗಳನ್ನು ಅರ್ಥ ಮಾಡಿಕೊಳ್ಳುವುದು ದುಃಸ್ಸಾಧ್ಯದ ಕೆಲಸ. ವಿಮಾನ ನಿಲ್ದಾಣದಲ್ಲಿ, ಗೇಟಿನ ಮುಂದೆ ವಿಮಾನ ಹೊರಡುವ ಗಂಟೆ ಮುಂಚೆಯೇ ಯಾಕೆ ಕ್ಯೂ ನಿಂತುಬಿಡುತ್ತಾರೆ. ಯಾಕೆ ಎಂದು ಅರ್ಥವೇ ಆಗುವುದಿಲ್ಲ. ಈಗಿನ ಕಾಲದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಕಂಡಕ್ಟರೇ ಕಾದು ನಿಂತು- ಕಾಲ್ ಮಾಡಿ ಹತ್ತಿಸಿಕೊಂಡು ಹೋಗುತ್ತಾನೆ. ಅದರಲ್ಲೂ ಇದು ವಿಮಾನ. ಅದಿರಲಿ. ಇಳಿಯಬೇಕಾದರೂ ಅಷ್ಟೇ. ವಿಮಾನದ ಮೂತಿಯ ಚಕ್ರ ಭೂಸ್ಪರ್ಷವಾಗುವುದರೊಳಗೇ ಜಿಗಿದು ಹಾರಿ, ತಲೆಯಮೇಲಿನ ಕಪಾಟಿನಿಂದ ಬ್ಯಾಗು ತೆಗೆದು, ಎಲ್ಲರನ್ನೂ ದೂಡಿ-ತಳ್ಳಾಡಿ ತಯಾರಾಗಿಯಾಗಿರುತ್ತದೆ. ಮನೆಗೆ ಹೋಗುವ ಆತುರವಿರುತ್ತದೆ ಎಂದುಕೊಳ್ಳೋಣ. ಮಸಾಲೆಪುರಿ ತಿನ್ನುವ ಬಯಕೆ; ಒಪ್ಪೋಣ.. “ಮುಂದಿನ ಸೂಚನೆಯವರೆಗೂ ದಯವಿಟ್ಟು ಕುಳಿತುಕೊಳ್ಳಿ” ಎಂದು ವಿಮಾನದವರು ಬೊಬ್ಬೆ ಹೊಡೆಯುತ್ತಿದ್ದರೂ ಕಿವಿಗೆ ಹಾಕಿಕೊಳ್ಳುವರೇ ನಮ್ಮ ಜನ? ಎಲ್ಲ ಎದ್ದು ನಿಂತು ರೆಡಿ. ಹೋಗುತ್ತಿರುವುದಾದರೂ ಎಲ್ಲಿಗೆ? ಕ್ವಾರಂಟೈನ್ ಗೆ. ಹೊರಗೆ  ಸಂಗಾತಿ ಕಾಯುತ್ತಿಲ್ಲ. ಅಮ್ಮ ಅಳುತ್ತಿಲ್ಲ. ಮಕ್ಕಳ ಮುಖವೇನೂ ಕಾಣುವುದಿಲ್ಲ. ಆದರೂ ಅರ್ಜಂಟು ಯಾಕೆ? ಅವರಿಗೂ ಗೊತ್ತಿಲ್ಲ. ಸ್ನೇಹಿತನೊಬ್ಬ ಭಾರತೀಯರ ಈ ಮನಸ್ಥಿತಿಗೆ ಒಂದು ಹೆಸರಿಟ್ಟಿದ್ದಾನೆ: “ಆಧಾರ್ ಕಾರ್ಡ್ ಮೆಂಟಾಲಿಟಿ” ಎಂದು. ಏನಾದರೂ ಕಾರ್ಡೋ ಮತ್ತೊಂದೋ ಕೊಡುತ್ತಾರೆ ಎಂದ ಕೂಡಲೇ ಹೋಗಿ ಕ್ಯೂ ನಿಂತುಕೊಂಡು ಬಿಡುವುದು. ಏನದು? ಯಾಕೆ ಬೇಕು? ಅದೆಲ್ಲ ಪ್ರಶ್ನೆಯೇ ಅಲ್ಲ. ಬೇಕು ಅಷ್ಟೇ.

ವಾಸ್ತವ ಹೇಳುತ್ತೇನೆ. ವಿಮಾನ ನಿಲ್ದಾಣದಲ್ಲಿ ಆರೋಗ್ಯ ಸೇತು ಆಪ್ ಇದೆಯಾ ಇಲ್ಲವಾ ಎಂದು ಯಾರ ಬಳಿಯೂ ಕೇಳಲಿಲ್ಲ. ನಾನಂತೂ ಮೊನ್ನೆಯ ವರೆಗೂ ಅದನ್ನು ಹಾಕಿಕೊಂಡಿರಲಿಲ್ಲ. ಕೈಮೇಲೆ ಹಾಕಿದ ಸ್ಟಾಂಪ್, ಏರ್ಪೋರ್ಟಿನಲ್ಲಿ ಬ್ಯಾಗುಗಳನ್ನು ಎತ್ತಿಕೊಳ್ಳುವ ವೇಳೆಗೆ ಅಳಿಸಿಹೋಗಿತ್ತು. ನಾನು ಬಂದ ದಿನ ಬೆಳಿಗ್ಗೆ ವೇಳೆಗೆ ವಿದೇಶದಿಂದ ಬಂದ ವಿಮಾನಗಳು ಎರಡು ಮಾತ್ರ. ಒಟ್ಟು ೫೫೦-೬೦೦ ಜನ. ಅಷ್ಟು ಮಂದಿಯನ್ನೇ ಏನೂ ಟ್ರಾಕ್ ಮಾಡಲಿಲ್ಲವೆಂದ ಮೇಲೆ, ಇನ್ನು ಸರ್ಕಾರ ಯಾವ ಜವಾಬ್ದಾರಿ ನಿರ್ವಹಿಸಿತ್ತು ಎನ್ನುವುದು ಅರ್ಥಹೀನ ಪ್ರಶ್ನೆಯೇ ಸರಿ. ಇದೆಲ್ಲದರ ಬಳಿಕ, ಇನ್ನೇನು ಹೊರಗೆ ಬರಬೇಕು ಎನ್ನುವಷ್ಟರಲ್ಲಿ – ಕಸ್ಟಮ್ಸ್ ನ ಅಧಿಕಾರಿ ಹಿಡಿದುಕೊಂಡು ಒಂದು ನಾಲ್ಕು ನಾನ್ಸೆನ್ಸ್ ಪ್ರಶ್ನೆಗಳನ್ನು ಕೇಳುತ್ತ ಹೊರಹೋಗುವುದು ತಡಮಾಡಿದ. ಹಸಿವಾಗುತ್ತಿದ್ದರಿಂದ ನನಗೂ ಒಟ್ಟು ಹೋಗಿಬಿಟ್ಟರೆ ಸಾಕಿತ್ತು. ಅದನ್ನು ತಿಳಿದವನಂತೆ ಆತ, ನನ್ನ ಕೈಗೆ ೧೫ ಸಾವಿರ ತುರುಕಿ ೪ ಬಾಟಲು ಗ್ಲೆನ್‍ಫಿಡಿಶ್ ಬ್ಲೂ ಬಾಟಲನ್ನು ಡ್ಯೂಟಿ ಫ್ರೀ ಇಂದ ತಂದುಕೊಡಲು ಹೇಳಿದ. (ನಾನೂ ಉಲ್ಟಾ ಲಂಚ ಕೇಳಿ ಒಂದು ಬಾಟಲಾದರೂ ಇಸಿದುಕೊಳ್ಳಬೇಕಿತ್ತು ಎಂದು ಹೊಳೆದದ್ದು ಆಮೇಲೆ.) ನನ್ನ ಕಣ್ಣೆದುರೇ ಆತ, ಆ ಒಂದೇ ದಿನ, ಹೆಂಡವನ್ನು ಹೀಗೆ ಅನೇಕರಿಂದ ತರಿಸಿಕೊಂಡು, ಕದ್ದು ಮಾರಿ ದುಡಿದಿರಬಹುದಾದ್ದು ಒಂದು ಲಕ್ಷ. ಅದು “ವಂದೇ ಭಾರತ್ ಮಿಷನ್” ನ ಸಾಧನೆಯ ಅಡಿಯಲ್ಲಿ ಅವನ ಫೋಟೋವನ್ನೂ ಹಾಕಬೇಕು.

ನಿಲ್ದಾಣದಿಂದ ಹೊರಬಂದು, ಕ್ವಾರಂಟೈನ್ ಕೇಂದ್ರಗಳಿಗೆ ಹೋಗಲು ಸಾಲಿನಲ್ಲಿ ನಿಂತ ಒಬ್ಬೊಬ್ಬರ ಕತೆಯೂ ಚಿತ್ರವಿಚಿತ್ರ. ಫ್ರಾಂಕ್‍ಫರ್ಟ್ ನಿಂದ ಬಂದ ಮಹಿಳೆಯೊಬ್ಬರು ಬಂದಿದ್ದರು. ಬಗಲಲ್ಲಿ ಕೂಸೊಂದು ಜೋತಾಡುತ್ತಿತ್ತು. ಅವರ ತಂದೆ ತೀರಿಕೊಂಡು ೪ ದಿನಗಳಾಗಿವೆ. ಕೈಲಿ ತಂದೆಯ ಮರಣಪತ್ರವಿದೆ. ಅದನ್ನು ತೋರಿಸಿದರೂ ಅವರನ್ನು ಮನೆಗೆ ತೆರಳಲು ಅನುಮತಿಸಲಿಲ್ಲ. (ಹಾಗೆ ಅವರನ್ನು ಕಳುಹಿಸಲು ಅವಕಾಶವಿತ್ತು). ಹಾಗೆಯೇ, ಜರ್ಮನಿಯಿಂದ ಬಂದ ಉಡುಪಿಯ ಇನ್ನೊಬ್ಬರ ತಂದೆ ಐಸಿಯು ನಲ್ಲಿ ದಾಖಲಾಗಿದ್ದಾರೆ. ಒಬ್ಬನೇ ಮಗನಾಗಿರುವ ಇವರು ಆಸ್ಪತ್ರೆಯ ದಾಖಲೆಗಳನ್ನು ತೋರಿಸಿ ಅನುಮತಿ ಕೇಳಿದಾಗ ಅಧಿಕಾರಿಗಳು ಕೊಟ್ಟ ಉತ್ತರ, ನಂಬಿದರೆ ನಂಬಿ: “If he were dead, we would have let you go” ಎಂದು! ಬಳಿಕ ಆ ವ್ಯಕ್ತಿಯೇ ಯಾರುಯಾರನ್ನೋ ಸಂಪರ್ಕಿಸಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿಕೊಂಡರೂ ಯಾವನೂ ಸೊಪ್ಪು ಹಾಕಲಿಲ್ಲ. ಕರ್ನಾಟಕ ಸರ್ಕಾರವೇ ಅಧಿಕೃತವಾಗಿ ಪ್ರಕಟಿಸಿದ್ದ ಸಹಾಯವಾಣಿ ಸಂಖ್ಯೆ ಮತ್ತು ಈಮೈಲ್ ಗಳಿಗೆ ಸಂಪರ್ಕಿಸಿದರೆ ನಡೆದದ್ದು ತಮಾಷೆ. ದೂರವಾಣಿ ಸಂಖ್ಯೆ ತುಮಕೂರಿನ ಯಾವುದೋ ರೈತನದಾಗಿದ್ದರೆ, ಅಧಿಕೃತ ಈಮೈಲ್ ನಿಂದ ಬಂದ ಪ್ರತಿಕ್ರಿಯೆಯ ಚಿತ್ರವನ್ನು ಈ ಕೆಳಗೆ ಹಾಕಿದ್ದೇನೆ ನೋಡಿ.

 

ವಿಮಾನ ನಿಲ್ದಾಣದಿಂದ ಹೊರಬಂದು ಬಂದು ಬಸ್ ಹತ್ತಿ ಕುಳಿತುಕೊಂಡಿದ್ದೆ. ದೆಹಲಿ ಏರ್ಪೋರ್ಟನ್ನು ಪೂರ್ತಿ ಕುಂಟಿಕೊಂಡು ನಿಧಾನಕ್ಕೆ ನಡೆದಿದ್ದ ಒಬ್ಬರು ಸದಾ ಗಮನಕ್ಕೆ ಬೀಳುತ್ತಿದ್ದರು. ಅವರು  ಲಂಡನ್ನಿಂದ ಬಂದಿದ್ದರು ಎಂದು ಇಮ್ಮಿಗ್ರೇಷನ್ನಿನಲ್ಲಿ ಗೊತ್ತಾಗಿತ್ತು. ನನ್ನ ಹಿಂದೆಯೇ ನಡೆದು ಬರುತ್ತಿದ್ದ ಅವರು ಯಾವುದೋ ಅನ್ಯಮನಸ್ಕತೆಯಲ್ಲಿ, ಅರಿಯದೇ ಸಾಲನ್ನು ದಾಟಿ ವಿಮಾನ ನಿಲ್ದಾಣದಿಂದ ಹೊರಗೆ ನಡೆದು ಬಿಟ್ಟರು. ಕುಂಟಿಕೊಂಡೇ ಟ್ರಾಲಿ ಎಳೆದುಕೊಂಡು ಹೋಗುತ್ತಿದ್ದ ಅವರನ್ನು ದೂರದಿಂದ ಗಮನಿಸಿದ ಪೋಲೀಸರು “ಏ ಕುಂಟಾ… ಎಲ್ಲಿ ಓಡ್ತೀಯಾ ನಿಲ್ಲಲೇ..!” ಎಂದು ಕೂಗುತ್ತ ಮರಳಿ ಕರೆತಂದು ಬಸ್ಸಿಗೆ ಅಟ್ಟಿದರು.

ಸಂಪೂರ್ಣವಾಗಿ ಕುರುಡಾಗಿರುವ ಈ ವ್ಯವಸ್ಥೆ ಕುಂಟರಿಗೆ ಯಾವ ಗೌರವ ತಾನೇ ನೀಡಬಲ್ಲದು?

ನಮ್ಮನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲ್ಪಟ್ಟ ಹೊಟೆಲಿನ ಕಥೆಯೂ ರೋಚಕವಾಗಿದೆ. ೩೦೦ ರೂಮುಗಳ ಹೋಟೆಲಿನಲ್ಲಿ ಇದ್ದದ್ದು ಕೇಂದ್ರೀಕೃತ ವಾತಾನುಕೂಲ ವ್ಯವಸ್ಥೆ (ಎಸಿ). ಕಿಟಕಿಗಳನ್ನು ತೆಗೆಯಲಾಗದ ರೂಮುಗಳು. ಗಾಳಿ ಹೊರಹೋಗಲು ಇಡೀ ಹೋಟೇಲ್ಲಿಗೆ ನಾಲ್ಕೋ-ಆರೋ ಡಕ್ಟ್ ಗಳು ಮಾತ್ರ. ಈ ಕೋವಿಡ್ ವೈರಾಣು ಇಂಥ ವಾತಾವರಣದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಜೀವಿಸುತ್ತದೆ. ವಿಮಾನ ನಿಲ್ದಾಣದಿಂದ ತೆರೆದ ಬಸ್ಸುಗಳಲ್ಲಿ ಕರೆತಂದು ಮುಚ್ಚಿದ ಏಸಿ ಇರುವ ಹೋಟೆಲಿನಲ್ಲಿ ಬಂಧಿಸಿದರೆ ನಮ್ಮಲ್ಲಿ ಒಬ್ಬರಿಗೆ ಕೋವಿಡ್ ಇದ್ದರೂ ಅನೇಕರು ಸೋಂಕಿತರಾಗುವುದು ಸ್ವವೇಧ್ಯವೆಂಬುದು ಸರ್ಕಾರಕ್ಕೆ ಪಾಪ ಅರಿವಾಗಲಿಲ್ಲ. ೪ ನೇ ದಿನ ನಡೆಯಬೇಕಾದ ಕೋವಿಡ್ ಪರೀಕ್ಷೆ ೬ ನೇ ದಿನ ಮಾಡಲ್ಪಟ್ಟಿತು. ೭ ನೇ ದಿನವೂ ನಮ್ಮ ಪರೀಕ್ಷಾ ಪಲಿತಾಂಶಗಳನ್ನು ನೀಡದೇ – “ಮನೆಗೆ ತೆರಳುವವರು ತೆರಳಬಹುದು; ನಿಮ್ಮ ರಿಪೋರ್ಟ್ ಗಳು ನಾಳೆ ಕೈಸೇರಲಿವೆ” ಎಂದು ಕಳಿಸಲಾಯಿತು. ಹಾಗಿದ್ದರೆ ಒಟ್ಟಾರೆ ೭ ದಿನ ಕ್ವಾರಂಟೈನ್ ಮಾಡಿದ ಅರ್ಥವೇನು? ಲುಕ್ಸಾನಿನಲ್ಲಿ ನಡೆಯುತ್ತಿದ್ದ ಹೋಟೆಲ್ ಗಳಿಗೆ ಲಾಭವಾಗಲೆಂದೇ? ಅಥವಾ ಶಾಸ್ತ್ರಕ್ಕೆ ನಡೆಸಿದ ಕರ್ಮಕಾಂಡವಿದು ಮಾತ್ರವೆ?

ಭಾರತದಲ್ಲಿ ಈ ವೈರಸ್ಸು ಮತ್ತು ಸರ್ಕಾರ ಎರಡೂ ಒಂದು ರೀತಿಯಲ್ಲಿ ಶಾರ್ಡಿಂಜರ್ ನ ಬೆಕ್ಕಿದ್ದ ಹಾಗೆ. ಭಯಂಕರ ಫಿಲಾಸಫಿಕಲ್ ವೈರಸ್‍ಗಳು ಇವು. ಪೆಟ್ಟಿಗೆ ತೆಗೆಯುವವರೆಗೂ ಎರಡೂ ಸತ್ತಿವೆಯೋ ಬದುಕಿವೆಯೋ ಗೊತ್ತಾಗುವುದಿಲ್ಲ. ಸರ್ಕಾರದ ಪೆಟ್ಟಿಗೆಯನ್ನಂತೂ ಎಂದಿಗೂ ತೆಗೆಯಲು ಸಾಧ್ಯವಿಲ್ಲ. ಆದರೆ, ಜಗತ್ತಿನ ಪೆಂಡೋರಾ ಪೆಟ್ಟಿಗೆಗೆ ಮಾತ್ರ ಕೋವಿಡ್ ಎಂಬ ಹೊಸ ಅನೂಹ್ಯತೆ ಸೇರ್ಪಡೆಯಾಗಿದೆ.


2 comments to “ವಂದೇ ಭಾರತ್ ಮಿಷನ್: ಮೂತ್ರದಲ್ಲಿ ಮತ್ಸ್ಯಬೇಟೆ”
  1. ಈ ಲೇಖನ ಕೇವಲ ಕಾಂಗ್ರೆಸ್ ಪಕ್ಷದ ಅಥವಾ ಕಮ್ಯುನಿಸ್ಟ್ ಪಕ್ಷದ ವಕ್ತಾರರ ಹೇಳಿಕೆ ತರ ಇದೆ.
    ಹೌದು ನಾನು ನೋಡಿದಂತೆ ಋತುಮಾನ ಕೂಡ ಎಡ(ಬಿಡಂಗಿ)
    ಲೇಖನಗಳಿಗೆ ಹೆಸರುವಾಸಿ.
    ಇನ್ನು ಲೇಖಕರಲ್ಲಿ ನನ್ನ ವಿನಂತಿ,ಲೋಪಗಳಿಲ್ಲದ ಇರುವಂಥದು ಯಾವದೂ ಇಲ್ಲ,
    ಇನ್ನು ಈ ಕೇವಲ ಪೂರ್ವಗ್ರಹ ಪೀಡಿತ(ಬಹಳಷ್ಟು ಬುದ್ದಿಜೀವಿಗಳು ಇದೆ ಮನೋಬಾವ) ಕೇವಲ ಮೋದಿಯವರನ್ನು ಬೈಯಲು ಈ ಕಾಲಂ ದುರುಪಯೋಗ ಪಡಿಸಿಕೊಂಡಿರುವ ರೀತಿ ಬೆರಗು ಹುಟ್ಟಿಸುತ್ತದೆ.

  2. ನಿಮ್ಮ ಬರಹದಲ್ಲಿ”ತುಕಡೆ ತುಕಡೆ ಗ್ಯಾಂಗ್” ನ ಮನೋಭಾವದ ಪ್ರತಿಪಾದನೆ ಇದೆ.
    ನಿಮ್ಮ ಬರಹಕ್ಕೆ ಧಿಕ್ಕಾರ.

ಪ್ರತಿಕ್ರಿಯಿಸಿ