ಸಾಂಸ್ಕೃತಿಕ ವರದಿಗಾರಿಕೆ ಅಂದು-ಇಂದು

ನೀವು ಯಾವುದರ ಬಗ್ಗೆಯಾದರೂ ಬರೆಯಿರಿ, ನೀವು ಬರೆದದ್ದು ಓದುಗನಿಗೆ ಸುಲಭವಾಗಿ ಅರ್ಥವಾಗುವಂತಿರಬೇಕು. ಅರ್ಥವಾದರೆ ನೀವು ಬರಹಗಾರರಾಗಿ ಗೆದ್ದಂತೆ. ನೀವು ಬಳಸುವ ಭಾಷೆ ಸರಳವಾಗಿ, ನೇರವಾಗಿ, ಸ್ಪಷ್ಟವಾಗಿರಬೇಕು. ನೀರು ಕುಡಿದಷ್ಟೇ ಸರಾಗವಾಗಿರಬೇಕು. ಪತ್ರಿಕೆಯನ್ನು ಭಾಷೆಯ ಸೊಗಸಿಗಾಗಿಯೇ ಹಣ ಕೊಟ್ಟು ಖರೀದಿಸುವ ಓದುಗರಿದ್ದಾರೆ. ಅವರೇ ನಮ್ಮ ಪ್ರಭುಗಳು. ಅವರಿಗೆ ನಮ್ಮ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿ ಕಠಿಣ ಪದಗಳನ್ನು, ಪಾರಿಭಾಷಿಕ ಶಬ್ದಗಳನ್ನು ಬಳಸಿ ಕಷ್ಟ ಕೊಡಬಾರದು.
                         -ಲಂಕೇಶ್

ಕೃಪೆ: Espalanade

ಕೃಪೆ: Espalanade

ಸಾಂಸ್ಕೃತಿಕ ವರದಿಗಾರಿಕೆ ಎನ್ನುವುದು, ಆಯಾಯ ಪತ್ರಿಕೆಗಳ ಆಡಳಿತವರ್ಗ ಅಥವಾ ಸಂಪಾದಕರ ಧೋರಣೆ, ನಿಲುವು ಮತ್ತು ನೀತಿಗೊಳಪಟ್ಟು ಪರಿಷ್ಕರಣೆಗೊಳಗಾಗುತ್ತಿದೆ. ಸಾಹಿತ್ಯ ಸಮ್ಮೇಳನ, ಸಂವಾದ, ಪುಸ್ತಕ ಬಿಡುಗಡೆ, ವಿಚಾರ ಸಂಕಿರಣಕ್ಕೆ ಸಂಬಂಧಿಸಿದ ವರದಿಗಾರಿಕೆಯಲ್ಲಿ ಗಣ್ಯರ ಮಾತುಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವ, ವಿವಾದಾತ್ಮಕ ಸಂಗತಿಗಳು ಮಾತ್ರ ಸಾಂಸ್ಕೃತಿಕ ವರದಿಗಳಾಗುವ ಸ್ಥಿತಿಗೆ ಪತ್ರಿಕೆಗಳು ಬಂದು ನಿಂತಿವೆ. ಸಂಗೀತ, ನೃತ್ಯಗಳ ಜಾಗವನ್ನು ರಿಯಾಲಿಟಿ ಶೋಗಳು ಆಕ್ರಮಿಸಿಕೊಂಡಿವೆ.

ಸಾಮಾಜಿಕ ಚಳವಳಿಗಳಿಗೆ ಬೆನ್ನೆಲುಬಾಗಿ ನಿಂತು ಪತ್ರಿಕೆಗಳು ಓದುಗರನ್ನು, ಚಾನೆಲ್‍ಗಳು ವೀಕ್ಷಕರನ್ನು ಬೌದ್ಧಿಕವಾಗಿ ಬೆಳೆಸುವ ಜತೆಗೆ ತಾವೂ ಬೆಳೆಯುತ್ತಿದ್ದ ಆರೋಗ್ಯಪೂರ್ಣ ವಾತಾವರಣ ಇಂದು ಬದಲಾಗಿದೆ. ಜೊತೆಗೆ ಕನ್ನಡದ ಅಸ್ಮಿತೆಯನ್ನು ಕರ್ನಾಟಕದ ಅನನ್ಯತೆಯನ್ನು ಬೆಂಬಲಿಸಿ, ಬಿಂಬಿಸಿ, ಬೆಳೆಸಿ, ಬಲಿಷ್ಠಗೊಳಿಸಬೇಕಾಗಿದ್ದ ಮಾಧ್ಯಮಗಳು, ಬದಲಾದ ಕಾಲಮಾನಕ್ಕೆ ತಕ್ಕಂತೆ ತಾಳ ಹಾಕುತ್ತಾ, ಪ್ರತಿಯೊಂದರಲ್ಲೂ ಟಿಆರ್‍ಪಿ ಹಾಗೂ ಸಕ್ರ್ಯುಲೇಷನ್ ಜಪ ಮಾಡುತ್ತಾ ಜಾಹೀರಾತಿಗೆ ಬಲಿ ಬಿದ್ದಿರುವುದು ಕೂಡ ಇವತ್ತಿನ ಈ ಸ್ಥಿತಿಗೆ ಕಾರಣವಾಗಿರಬಹುದು.

****

ಸುದ್ದಿಮನೆಗಳಲ್ಲಿ ಅತ್ಯಂತ ದುರ್ಬಲವಾಗಿರುವ ಇಲ್ಲವೇ ಅಸ್ತಿತ್ವದಲ್ಲೇ ಇಲ್ಲದಿರುವ ಸಂಗತಿಗಳಲ್ಲೊಂದು ‘ಸಾಂಸ್ಕೃತಿಕ ವರದಿಗಾರಿಕೆ’. ವಿಧಾನಸೌಧದ ಮೊಗಸಾಲೆಯ ಚಟುವಟಿಕೆಗಳ ನಿರೂಪಣೆಯೇ ವರದಿಗಾರಿಕೆ ಎಂದು ಭಾವಿಸಿರುವವರಿಗೆ ಸಾಂಸ್ಕೃತಿಕ ಸಂಗತಿಗಳಿಗೆ ಮಾಧ್ಯಮಗಳಲ್ಲಿ ಸ್ಥಳಾವಕಾಶ ನೀಡುವುದರ ಬಗ್ಗೆಯೇ ತಕರಾರಿದೆ.

‘’ವರ್ತಮಾನದ ಸಂಗತಿಗಳನ್ನು ತಲ್ಲಣಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅವುಗಳ ಸವಾಲುಗಳನ್ನು ಎದುರಿಸುವುದು ಜೀವನಧರ್ಮ. ಅದರಲ್ಲೂ ಒಬ್ಬ ವರದಿಗಾರ ಇತಿಹಾಸಕಾರನೂ ಆದಕಾರಣ ಸಾಂಸ್ಕೃತಿಕ ವರದಿಗಳು ಸಾಂಸ್ಕೃತಿಕ ಇತಿಹಾಸವಾಗಿಯೂ ಕೆಲಸ ಮಾಡುತ್ತವೆ. ಆದಕಾರಣ ಈ ಎಲ್ಲ ಸಂಗತಿಗಳನ್ನು ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯಿಂದ ದಾಖಲಿಸುವುದು ಅಗತ್ಯ.’’ – ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲರು ಮೂರು ವರ್ಷಗಳ ಹಿಂದೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಲಲಿತಾ ಕಲಾ ಅಕಾಡೆಮಿ ಆಯೋಜಿಸಿದ್ದ ಸಾಹಿತ್ಯ-ಕಲೆ ರಸಾಸ್ವಾದನ ಶಿಬಿರದ ಸಮಾರೋಪದಲ್ಲಿ ಪತ್ರಕರ್ತರನ್ನು ಕುರಿತು ಹೀಗೆ ಹೇಳಿದ್ದರು.

ಕೃಪೆ: The Hindu Businessline

ಕೃಪೆ: The Hindu Businessline

ಕವಿ, ನಾಟಕಕಾರ, ಸಂಘಟನಕಾರ, ಹೋರಾಟಗಾರ, ಆಡಳಿತಗಾರ ಹಾಗೂ ಸಂಪಾದಕರಾದ ಚಂದ್ರಶೇಖರ ಪಾಟೀಲರದು ಬಹುಮುಖ ವ್ಯಕ್ತಿತ್ವ. ಸುಮಾರು 6 ದಶಕಗಳ ಕಾಲ ದೇಶದ ಆಗುಹೋಗುಗಳಿಗೆ ಮುಖಾಮುಖಿಯಾದವರು. ವರ್ತಮಾನದ ತಲ್ಲಣಗಳಿಗೆ ತಮ್ಮದೆ ಆದ ರೀತಿಯಲ್ಲಿ – ಕವನ, ಲೇಖನ, ನಾಟಕ, ಭಾಷಣ, ಹೋರಾಟಗಳ ಮೂಲಕ ಸ್ಪಂದಿಸುತ್ತಿರುವವರು. ಆದರೆ ಅವರ ಸ್ಪಂದನಕ್ಕೆ ಸುದ್ದಿಮಾಧ್ಯಮಗಳು ಆದ್ಯತೆ ನೀಡಿವೆಯೇ? ಸೂಕ್ತ ಸ್ಥಳ ನೀಡಿ ಪುರಸ್ಕರಿಸಿವೆಯೇ? ಅದು ಜನಮಾನಸದ ಮೇಲೆ ಉಂಟುಮಾಡುವ ಸಂಚಲನ, ಸಾಮಾಜಿಕ ಪರಿಣಾಮದ ಅರಿವು ಪತ್ರಕರ್ತರಿಗಿದೆಯೇ? ಎಂಬ ಪ್ರಶ್ನೆಗಳು ಎದುರಾಗುವುದು ಸಹಜ.

ಈ ನಿಟ್ಟಿನಲ್ಲಿ ಚಂದ್ರಶೇಖರ ಪಾಟೀಲರು ಸುದ್ದಿ ಮಾಧ್ಯಮಗಳ ಸ್ಪಂದನವನ್ನು ಗಮನದಲ್ಲಿಟ್ಟುಕೊಂಡೇ ಸಾಂಸ್ಕೃತಿಕ ವರದಿಗಳು ಸಾಂಸ್ಕೃತಿಕ ಇತಿಹಾಸವಾಗಿಯೂ ಕೆಲಸ ಮಾಡುತ್ತವೆ. ಆದಕಾರಣ ಈ ಎಲ್ಲ ಸಂಗತಿಗಳನ್ನು ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ದಾಖಲಿಸಬೇಕಾಗುತ್ತದೆ ಎಂದು ಪತ್ರಕರ್ತರಿಗೆ ಕಿವಿಮಾತು ಹೇಳಿರುವುದು ಸೂಕ್ತವಾಗಿದೆ.

ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಸಿನಿಮಾ, ರಂಗಭೂಮಿ, ಛಾಯಾಗ್ರಹಣ ಕ್ಷೇತ್ರಗಳ ಸೃಜನಶೀಲ ಕ್ರಿಯೆಯನ್ನು; ವ್ಯಕ್ತಿ, ತಂಡ ಅಥವಾ ಸಂಸ್ಥೆಯ ಕೊಡುಗೆಯನ್ನು; ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಸುದ್ದಿ ಮಾಧ್ಯಮಗಳು ಆದ್ಯತೆಯ ಮೇಲೆ ವರದಿ ಮಾಡಬೇಕಾಗುತ್ತದೆ. ಈ ಕ್ಷೇತ್ರಗಳ ಕುರಿತು ಮಾಡುವ ವರದಿಗಳನ್ನು ಪತ್ರಿಕೋದ್ಯಮದ ಪರಿಭಾಷೆಯಲ್ಲಿ ‘ಸಾಂಸ್ಕೃತಿಕ ವರದಿಗಾರಿಕೆ’ ಎನ್ನಲಾಗುತ್ತದೆ. ಸಾಂಸ್ಕೃತಿಕ ವರದಿಗಳನ್ನು ಮಾಡುವ ಪತ್ರಕರ್ತರು ಸಾಮಾನ್ಯವಾಗಿ ಸಾಹಿತ್ಯದ ವಿದ್ಯಾರ್ಥಿಗಳಾಗಿರಬೇಕು. ಅಕಸ್ಮಾತ್ ಆಗದಿದ್ದರೂ ಸಾಹಿತ್ಯದ ಬಗ್ಗೆ ಒಲವುಳ್ಳವರಾಗಿರಬೇಕು. ಓದುವ ಹವ್ಯಾಸವಿರಬೇಕು. ಕನ್ನಡ ಭಾಷೆಯನ್ನು ಶುದ್ಧವಾಗಲ್ಲದಿದ್ದರೂ, ಅರ್ಥ ಕೆಡದಂತೆ ಬಳಸಬಲ್ಲವರಾಗಿರಬೇಕು.

ಹೀಗೆ ಹೇಳುವಾಗ ನನಗೆ ನೆನಪಾಗುವುದು, 80ರ ದಶಕದಲ್ಲಿ ಬಂದ ‘ಲಂಕೇಶ್ ಪತ್ರಿಕೆ’. ಆ ಪತ್ರಿಕೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಾಗ, ಪಿ. ಲಂಕೇಶರು ತಮ್ಮ ವರದಿಗಾರರೊಂದಿಗೆ ಪ್ರತಿ ವಾರ, ಮುಂದಿನ ವಾರದ ಸಂಚಿಕೆಯ ಸಿದ್ಧತೆ ಕುರಿತು ಪುಟ್ಟ ಸಂವಾದದಂತಹ ಸಭೆ ಮಾಡುತ್ತಿದ್ದರು. ಅಲ್ಲಿ ಅವರು, “ನೀವು ಯಾವುದರ ಬಗ್ಗೆಯಾದರೂ ಬರೆಯಿರಿ, ನೀವು ಬರೆದದ್ದು ಓದುಗನಿಗೆ ಸುಲಭವಾಗಿ ಅರ್ಥವಾಗುವಂತಿರಬೇಕು. ಅರ್ಥವಾದರೆ ನೀವು ಬರಹಗಾರರಾಗಿ ಗೆದ್ದಂತೆ. ನೀವು ಬಳಸುವ ಭಾಷೆ ಸರಳವಾಗಿ, ನೇರವಾಗಿ, ಸ್ಪಷ್ಟವಾಗಿರಬೇಕು. ನೀರು ಕುಡಿದಷ್ಟೇ ಸರಾಗವಾಗಿರಬೇಕು. ಪತ್ರಿಕೆಯನ್ನು ಭಾಷೆಯ ಸೊಗಸಿಗಾಗಿಯೇ ಹಣ ಕೊಟ್ಟು ಖರೀದಿಸುವ ಓದುಗರಿದ್ದಾರೆ. ಅವರೇ ನಮ್ಮ ಪ್ರಭುಗಳು. ಅವರಿಗೆ ನಮ್ಮ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿ ಕಠಿಣ ಪದಗಳನ್ನು, ಪಾರಿಭಾಷಿಕ ಶಬ್ದಗಳನ್ನು ಬಳಸಿ ಕಷ್ಟ ಕೊಡಬಾರದು’’ ಎಂದು ಹೇಳುತ್ತಿದ್ದುದು, ಈಗಲೂ ನೆನಪಿದೆ.

ಇಂಗ್ಲಿಷ್ ಎಂ.ಎ. ಮಾಡಿ ಉಪನ್ಯಾಸಕರಾಗಿದ್ದ ಲಂಕೇಶರು, ಅಕಡೆಮಿಕ್ ಭಾಷೆಯಲ್ಲಿ ಬರೆಯಬಲ್ಲವರಾಗಿದ್ದರೂ – ಆಸ್ಟ್ರೇಲಿಯಾದ ಆಟದ ಬಗ್ಗೆ, ಆಡ್ರೆ ಹೆಬ್ಬರ್ನ್ ಸಿನಿಮಾಗಳ ಬಗ್ಗೆ, ಬದನವಾಳುವಿನ ಜಾತಿ ಸಂಘರ್ಷದ ಬಗ್ಗೆ, ಮುದುಕಿಯೊಬ್ಬಳ ಮೌಖಿಕ ಜ್ಞಾನದ ಬಗ್ಗೆ, ರೈತ-ದಲಿತ ಚಳವಳಿಗಳ ಬಗ್ಗೆ, ಅನಂತಮೂರ್ತಿಯವರ ಗದ್ಯದ ಬಗ್ಗೆ – ಎಲ್ಲವನ್ನೂ ಜನಬಳಕೆಯ ಭಾಷೆಯಲ್ಲಿಯೇ ಜನಸಾಮಾನ್ಯರಿಗೂ ಅರ್ಥವಾಗುವಂತೆ ಬರೆಯುತ್ತಿದ್ದರು. ಅದನ್ನೇ ವರದಿಗಾರರಿಗೂ ಹೇಳುತ್ತಿದ್ದರು.

ಸಾಂಸ್ಕೃತಿಕ ವರದಿಗಾರಿಕೆ ಜನರನ್ನು ಚಿಂತನೆಗೆ ಹಚ್ಚುವ, ಆರೋಗ್ಯಕರ ಸಮಾಜ ನಿರ್ಮಾಣದತ್ತ ಪ್ರೇರೇಪಿಸುವ ಸಾಧನವಾಗಿಯೂ ಕೆಲಸ ಮಾಡುತ್ತದೆ. ನಾಡಿನ ನೆಲ, ಜಲ, ಭಾಷೆಯ ಬಗೆಗೆ ಅಭಿಮಾನ ಮೂಡಿಸುತ್ತದೆ. ಕನ್ನಡದ ಅಸ್ಮಿತೆಯನ್ನು, ಕರ್ನಾಟಕದ ಅನನ್ಯತೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವನ್ನೂ ಮಾಡುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆಯಾಗಿ ಗೋಕಾಕ್ ಚಳವಳಿ, ಆ ಚಳವಳಿಗೆ ಸಿಕ್ಕ ಸ್ಪಂದನ ಮತ್ತು ಮಾಧ್ಯಮಗಳ ಕಾಣ್ಕೆಯನ್ನು ನೋಡಬಹುದಾಗಿದೆ.

ರಾಜಕುಮಾರ್ ಎಲ್ಲರಿಗೂ ಗೊತ್ತಿರುವ ಚಿತ್ರನಟ. ಇವರು ಶಾಲಾಕಾಲೇಜುಗಳ ಮೆಟ್ಟಿಲು ಹತ್ತಿದವರಲ್ಲ. ಪಂಡಿತ ಪಾಮರರ ಕುಟುಂಬದಿಂದ ಬಂದವರಲ್ಲ. ರಾಜ್ ಬೆಳೆದು ಬಂದ ಬಗೆ ಬೆರಗು ಹುಟ್ಟಿಸುವಂತಹದ್ದೂ ಅಲ್ಲ. ಹಳ್ಳಿಗಾಡಿನಿಂದ ಬಂದ ಸಾಮಾನ್ಯರಲ್ಲಿ ಸಾಮಾನ್ಯರು. ಅವರ ತಂದೆ ಪುಟ್ಟಸ್ವಾಮಯ್ಯನವರಿಗೆ ರಂಗಭೂಮಿ ಹಿನ್ನೆಲೆ ಇತ್ತು, ಅದನ್ನೇ ಮುಂದುವರೆಸಿದ ರಾಜಕುಮಾರ್ ಹೊಟ್ಟೆಪಾಡಿಗಾಗಿ ವೃತ್ತಿರಂಗಭೂಮಿಯ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಆ ಮೂಲಕ ಚಿತ್ರರಂಗಕ್ಕೆ ಬಂದರು. ನಟರಾಗಿ, ಗಾಯಕರಾಗಿ ಕನ್ನಡಿಗರ ಜನಮನ ಗೆದ್ದರು. ಕನ್ನಡ ಭಾಷೆಗೆ ಮೆರುಗು ತಂದರು. ಕನ್ನಡ ಸಂಸ್ಕøತಿಯ ಭಾಗವಾದರು.

ಇಂತಹ ಜನಪ್ರಿಯ ನಟ ರಾಜಕುಮಾರ್ 1980ರಲ್ಲಿ ಗೋಕಾಕ್ ಚಳವಳಿಯ ನೇತೃತ್ವ ವಹಿಸಿದರು. ಕನ್ನಡ, ಕನ್ನಡಿಗ, ಕರ್ನಾಟಕದ ಬಗ್ಗೆ ಅತೀವ ಅಭಿಮಾನ ಹೊಂದಿದ್ದ ರಾಜಕುಮಾರ್, ಭಾಷೆಯ ವಿಷಯಕ್ಕೆ ಬಂದಾಗ ಚಳವಳಿಗೆ ಧುಮುಕಿದರು. ಮುಂಚೂಣಿ ನಾಯಕನಾಗಿ, ಜನರ ಪ್ರೇರಕಶಕ್ತಿಯಾಗಿ, ನಾಡಿನ ಭಾಷೆಗೆ ನ್ಯಾಯ ಒದಗಿಸಿದರು.

ಗೋಕಾಕ್ ಚಳವಳಿಗೆ ರಾಜಕುಮಾರ್ ಧುಮುಕಲು ಕಾರಣವೇನೆಂದರೆ, ಕರ್ನಾಟಕ 1956ರಿಂದಲೇ ಶಾಲಾ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿತ್ತು. 1967ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಸಾಂವಿಧಾನಿಕ ತಿದ್ದುಪಡಿ ಮಾಡಿದರು. ಹಿಂದಿ ಪ್ರಾಬಲ್ಯವಿರದಿದ್ದ ಪ್ರದೇಶಗಳಲ್ಲಿ ಹಿಂದಿ ಭಾಷೆಗೆ ವಿರೋಧ ವ್ಯಕ್ತವಾದ್ದರಿಂದ ಹಿಂದಿಯೊಡನೆ ಇಂಗ್ಲಿಷ್ ಭಾಷೆಯನ್ನೂ ಸೇರಿಸಲಾಯಿತು. ಇದು ಮುಂದುವರೆದು ಶಾಲಾ ಶಿಕ್ಷಣದಲ್ಲ್ಲಿಯೂ ಇಂಗ್ಲಿಷ್ ಹಾಗೂ ಹಿಂದಿ ಕಡ್ಡಾಯವೆನ್ನುವಂತಾಯಿತು. ಆದರೆ ಕರ್ನಾಟಕದಲ್ಲಿ ಅಧಿಕೃತ ಭಾಷೆಯೇ ಇರದಿರುವುದು ಶಾಲಾ ಶಿಕ್ಷಣದಲ್ಲಿ ಕನ್ನಡ ಭಾಷಾ ಅನುಷ್ಠಾನಕ್ಕೆ ಹಿನ್ನಡೆಯಾಗಲು ಮುಖ್ಯ ಕಾರಣವಾಯಿತು. ಕನ್ನಡವನ್ನು ಕರ್ನಾಟಕದಲ್ಲಿ ಅಧಿಕೃತ ಭಾಷೆಯಾಗಿಯೂ ಹಾಗೂ ಆಡಳಿತ ಭಾಷೆಯಾಗಿಯೂ ಘೋಷಿಸದ ಹೊರತು ಶಾಲಾ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಅನುಷ್ಠಾನ ಕಷ್ಟ ಸಾಧ್ಯವೆನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿತ್ತು. ಆದ್ದರಿಂದಲೇ ಕರ್ನಾಟಕದಲ್ಲಿ ಎಷ್ಟೋ ಶಾಲೆಗಳು ಕನ್ನಡ ಭಾಷೆಯೇ ಇಲ್ಲದಂತೆ ಸಂಸ್ಕøತ ಮತ್ತಿತರ ಭಾಷೆಗಳನ್ನು ಕಲಿಸುತ್ತಿದ್ದವು. ಸಾಲದೆಂಬಂತೆ ಆ ಸಮಯದಲ್ಲಿ ಶಾಲಾ ಶಿಕ್ಷಣದಲ್ಲಿ ಸಂಸ್ಕøತ ಎಲ್ಲ ಭಾಷೆಗಳಿಗಿಂತ ಹೆಚ್ಚಿನ ಬೇಡಿಕೆಯಲ್ಲಿದ್ದ ಭಾಷೆಯಾಗಿತ್ತು. ಎಷ್ಟೋ ಮಕ್ಕಳು ಕನ್ನಡವನ್ನು ಒಂದು ಭಾಷೆಯಾಗಿ ಅಭ್ಯಸಿಸದೆ ಶಾಲಾಶಿಕ್ಷಣವನ್ನು ಮುಗಿಸುತ್ತಿದ್ದರು. ಇವುಗಳಿಗೆಲ್ಲ ಇತಿಶ್ರೀ ಹಾಡಲು ಕನ್ನಡದ ಕವಿ ವಿ.ಕೃ. ಗೋಕಾಕ್ ವಿಸ್ತೃತ ವರದಿಯೊಂದನ್ನು ಸಿದ್ಧಪಡಿಸಿದರು.

ಈ ವರದಿಯ ಅನುಷ್ಠಾನಕ್ಕಾಗಿ ಕೆಲವೇ ಕೆಲವು ಸಾಹಿತಿಗಳು ಹಾಗೂ ಕನ್ನಡ ಬೋಧಕವರ್ಗದಿಂದ ನಡೆಯುತ್ತಿದ್ದ ಭಾಷಾ ಚಳವಳಿ ಅಷ್ಟಾಗಿ ಸುದ್ದಿಯೇನು ಮಾಡಿರಲಿಲ್ಲ. ಸರಕಾರದೊಂದಿಗೆ ಪತ್ರಗಳ ಮುಖೇನ ಮಾತುಕತೆ ನಡೆಯುತ್ತಿದ್ದರೂ ಚಳವಳಿಯ ಮೂಲ ಸ್ವರೂಪವೇನು ಎಂದು ಸಾಮಾನ್ಯ ಜನರಿಗೆ ಅರ್ಥವೇ ಆಗಿರಲಿಲ್ಲ. ಚಳವಳಿಯ ವಿಚಾರವಾಗಿ ಕೆಲವೇ ಕೆಲವರು ಕರಾರುವಾಕ್ಕಾದ ನಿಲುವು ಹೊಂದಿದ್ದರೂ, ಸಾಮಾನ್ಯ ಜನರಿಗೆ – ಅದರಲ್ಲೂ ಕನ್ನಡಿಗರಿಗೆ ವಿಚಾರ ತಿಳಿಯದ ಕಾರಣ ಚಳವಳಿ ವೈಫಲ್ಯದ ಹಾದಿ ಹಿಡಿದಿತ್ತು. ಹೀಗಿದ್ದಾಗ ಚಳವಳಿಗೆ ಕಾವು ಕೊಡುವ, ಚಳವಳಿಯನ್ನು ರಾಜ್ಯವ್ಯಾಪಿ ವಿಸ್ತರಿಸುವ ವ್ಯಕ್ತಿತ್ವಕ್ಕಾಗಿ ಹುಡುಕಾಟ ನಡೆಯಿತು. ಆಗ ಕಣ್ಣಿಗೆ ಬಿದ್ದದ್ದೇ ಕನ್ನಡದ ಮೇರುನಟ ರಾಜಕುಮಾರ್. ಅವರ ನೇತೃತ್ವದಲ್ಲಿ ಹೋರಾಟಕ್ಕಿಳಿದರೆ ಇಡೀ ಚಿತ್ರರಂಗವನ್ನು, ಆ ಮೂಲಕ ಅಭಿಮಾನಿಬಳಗವನ್ನು ಚಳವಳಿಗೆ ತರುವುದು ಬಹು ಸುಲಭವೆನ್ನುವ ವಿಚಾರ ಚಳವಳಿಯಲ್ಲಿದ್ದವರ ಚಿತ್ತಕ್ಕಿಳಿಯಿತು. ಸ್ವತಃ ರಾಜಕುಮಾರ್ ಕೂಡ ಕನ್ನಡ ಭಾಷೆಯ ಬಗ್ಗೆ ಕಳಕಳಿಯುಳ್ಳವರಾಗಿದ್ದರಿಂದ ಸಮಾನ ಮನಸ್ಕರು ಒಂದಾದರು. ಚಳವಳಿಯ ಸ್ವರೂಪವೇ ಬದಲಾಗಿಹೋಯಿತು.

ಅತಿ ದೊಡ್ಡ ಮಟ್ಟದಲ್ಲಿ ನಡೆದ ಚಳವಳಿಯನ್ನು ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು, ಶಿಕ್ಷಕ-ಬೋಧಕ ವರ್ಗ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕವಿ-ಕಲಾವಿದರು, ಚಿತ್ರರಂಗದವರು- ಎಲ್ಲರೂ ಬೆಂಬಲಿಸಿದರು. ಹಲವಾರು ದಿನಗಳು ನಡೆದ ಬೃಹತ್ ಚಳವಳಿ ಸರಕಾರವನ್ನು ಆಗ್ರಹಿಸುವುದರಲ್ಲಿ ಸಫಲವಾಯಿತು. ಅದರ ಫಲವಾಗಿ ಕರ್ನಾಟಕ ಸರಕಾರ ಜುಲೈ 5, 1980 ರಲ್ಲಿ ಶಾಲಾ ಶಿಕ್ಶಣದ ಭಾಷಾ ನೀತಿ ಮರುಯೋಜನೆಗೆ ಸಮಿತಿಯೊಂದನ್ನು ರಚಿಸಿತು ಹಾಗೂ ವಿ.ಕೃ. ಗೋಕಾಕರನ್ನೇ ಆ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿತು. ಕನ್ನಡಕ್ಕೆ ಆದ್ಯತೆ ಸಿಕ್ಕಿ ಕರ್ನಾಟಕದಲ್ಲಿ ಕನ್ನಡಕ್ಕೇ ಅಗ್ರಸ್ಥಾನ ಸಿಗುವಂತಾಯಿತು.

ಇಲ್ಲಿ ಗಮನಿಸಬೇಕಾದ ಮುಖ್ಯವಾದ ವಿಷಯವೆಂದರೆ, ಈ ಸಂದರ್ಭದಲ್ಲಿ ಕರ್ನಾಟಕದ ಸುದ್ದಿ ಮಾಧ್ಯಮಗಳು ನಿರ್ವಹಿಸಿದ ಪಾತ್ರ. ತಳೆದ ನಿಲುವು, ತೆಗೆದುಕೊಂಡ ನಿರ್ಧಾರ ಮತ್ತು ನೀಡಿದ ಪ್ರಚಾರ. ಗೋಕಾಕ್ ಚಳವಳಿ ಭಾಷಾ ಚಳವಳಿಯಾದ್ದರಿಂದ, ನಾಡಿನ ಜನರ ಪಾಲ್ಗೊಳ್ಳುವಿಕೆ ಬಹಳ ಮುಖ್ಯವಾದ್ದರಿಂದ, ಚಳವಳಿಯ ಧ್ಯೇಯೋದ್ದೇಶವನ್ನು, ಪ್ರಾಮುಖ್ಯತೆಯನ್ನು ಬೆಂಬಲಿಸುವ, ಬಿಂಬಿಸುವ ಮತ್ತು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಮುಂಚೂಣಿಯಲ್ಲಿದ್ದವು. ಪ್ರತಿದಿನ ಮುಖಪುಟದಲ್ಲಿ ಪ್ರಚಾರ ನೀಡಿ ಪ್ರೋತ್ಸಾಹಿಸಿದವು. ಇದು ಸಹಜವಾಗಿಯೇ ಜನರ ನಾಲಗೆಯ ನಲಿದಾಡಿ, ನರನಾಡಿಗಳಲ್ಲಿ ಇಳಿಯುವಂತಾಯಿತು. ಜನರನ್ನು ಚಳವಳಿಯ ಭಾಗವಾಗುವಂತೆ ಪ್ರೇರೇಪಿಸಿತು. ಯಶಸ್ವಿಯೂ ಆಯಿತು.
ಇದು 80ರ ದಶಕದ ಪತ್ರಿಕೋದ್ಯಮದ ರೀತಿ-ನೀತಿ. ನಾಡಿನ ಸಾಂಸ್ಕøತಿಕ ಕ್ಷೇತ್ರವನ್ನು ಸಮೃದ್ಧಗೊಳಿಸಿದ ಸ್ಯಾಂಪಲï. ಹೀಗಿದ್ದ ನಾಡಿನ ಮಾಧ್ಯಮ ಲೋಕ ಈಗ, ಬದಲಾದ ಕಾಲಮಾನದಲ್ಲಿ ಹೇಗಾಗಿದೆ, ಅದರ ನಿಲುವು-ಒಲವುಗಳೇನು, ಆದ್ಯತೆ-ಅಭಿರುಚಿಗಳೇನು ಎನ್ನುವುದನ್ನು ನೋಡೋಣ. ಉದಾಹರಣೆಗೆ, 2019ರ ಆಗಸ್ಟ್ ಮೊದಲ ವಾರದಲ್ಲಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆ ಮತ್ತು ನೆರೆಯಿಂದಾದ ಅವಘಡವನ್ನೇ ಅವಲೋಕಿಸೋಣ. ನಿರಂತರ ಸುರಿದ ಮಳೆಗೆ ಹಾಗೂ ಇದ್ದಕ್ಕಿದ್ದಂತೆ ಬಂದ ನೆರೆಗೆ ಜನಜೀವನ ಅಸ್ತವ್ಯಸ್ತವಾಯಿತು. ಲೆಕ್ಕವಿಡಲಾಗದಷ್ಟು ನಷ್ಟವುಂಟಾಯಿತು. ಗ್ರಾಮಗಳೇ ಕಣ್ಮರೆಯಾದವು. ಬೆಲೆ ಕಟ್ಟಲಾಗದಷ್ಟು ಬೆಳೆ ನಾಶವಾಯಿತು. ಮನೆ ಮಠ ಕಳೆದುಕೊಂಡ ರೈತರು ಆತ್ಮಹತ್ಯೆಗೆ ಶರಣಾದರು. ಕರ್ನಾಟಕದ ಅರ್ಧಭಾಗವೇ ಕಣ್ಣೀರಿನಲ್ಲಿ ಕಾಲಕಳೆಯುತ್ತಿತ್ತು.

ನಾಡಿನ ಈ ದಿಕ್ಕೆಟ್ಟ ಸ್ಥಿತಿಯನ್ನು ಸಮರ್ಥವಾಗಿ ಬಿಂಬಿಸಿ, ಅಸಹಾಯಕ ಜನರ ಬೆಂಬಲಕ್ಕೆ ನಿಲ್ಲಬೇಕಾದ ಮಾಧ್ಯಮಗಳು, ಅದರಲ್ಲೂ ಈ ಕಾಲದ ಪ್ರಭಾವಿ ಮಾಧ್ಯಮವೆಂದು ಬಿಂಬಿತವಾದ ದೃಶ್ಯ ಮಾಧ್ಯಮಗಳು ತುಂಬಿ ಹರಿದ ನೀರನ್ನು, ನೀರಿನಲ್ಲಿ ಮುಳುಗುತ್ತಿರುವ ಮನೆಗಳನ್ನು, ಬೆಳೆಗಳನ್ನು ಬಣ್ಣ ಕಟ್ಟಿ ಬಣ್ಣಿಸತೊಡಗಿದವು. ಸಾಲದೆಂಬಂತೆ ಸುದ್ದಿಗೆ ಬೆಂಕಿಯ ತುಪ್ಪವನ್ನು, ಕರ್ಕಶ ಶಬ್ದವನ್ನು ಸೇರಿಸಿ ತಾರಕಕ್ಕೇರಿಸತೊಡಗಿದವು. ಆ ಸದ್ದುಗದ್ದಲದಲ್ಲಿ ತಾವು ನಿರ್ವಹಿಸಬೇಕಾದ ಪಾತ್ರವನ್ನು, ಜವಾಬ್ದಾರಿಯನ್ನು ಮರೆತವು. ನಿಷ್ಕ್ರಿಯ ಆಡಳಿತಯಂತ್ರದ ಲೋಪದೋಷಗಳನ್ನು ನಿರ್ಲಕ್ಷಿಸಿದವು. ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾದ ರಾಜ್ಯ ಸರಕಾರ ವಿಫಲವಾದಾಗ, ಪ್ರಶ್ನಿಸದೆ ಮೈಮರೆತವು.

ಕೊನೆಗೆ, ಅರವತ್ತು ದಿನಗಳ ನಂತರ, ಬಿಜೆಪಿಯ ಶಾಸಕ ಬಸನಗೌಡ ಪಾಟೀಲï ಯತ್ನಾಳ್, “ನಾನು ನೆರೆ ಸಂತ್ರಸ್ತರ ಬಗ್ಗೆ ದನಿ ಎತ್ತದೆ ಹೋಗಿದ್ದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು 15 ದಿನದೊಳಗಾಗಿ ರಾಜೀನಾಮೆ ನೀಡಬೇಕಾಗಿತ್ತು. ಯಡಿಯೂರಪ್ಪನವರಿಗೆ 76 ವರ್ಷವಾಗಿದೆ ಎಂಬ ನೆಪ ಮುಂದಿಟ್ಟು ನಮ್ಮದೇ ಪಕ್ಷದ ಕೇಂದ್ರ ಸಚಿವರಿಬ್ಬರು, ಕೇಂದ್ರ ನಾಯಕರೊಂದಿಗೆ ಸೇರಿ ಷಡ್ಯಂತ್ರ ನಡೆಸುತ್ತಿದ್ದಾರೆ’’ ಎಂದು ತಮ್ಮ ಪಕ್ಷದ ಸರಕಾರದ ವಿರುದ್ಧವೇ ಬಹಿರಂಗವಾಗಿ ಟೀಕೆಗಿಳಿದಾಗ, ಅವರ ಹೇಳಿಕೆಯನ್ನು ಪ್ರಸಾರ ಮಾಡುವ ಮೂಲಕ, ನೆರೆ ಸಂತ್ರಸ್ತರ ಬಗೆಗಿನ ತಮ್ಮ ಬೇಜವಾಬ್ದಾರಿಯನ್ನು ಬಯಲು ಮಾಡಿಕೊಂಡವು. ಜೊತೆಗೆ ರಾಜ್ಯ ಮತ್ತು ಕೇಂದ್ರ ಸರಕಾರದ ವರ್ತನೆ ಕುರಿತು ಸೋಷಿಯಲï ಮೀಡಿಯಾಗಳಲ್ಲಿ ಟೀಕೆಗಳು ಹೆಚ್ಚಾದಾಗ ಮಾಧ್ಯಮಗಳು ಎಚ್ಚೆತ್ತುಕೊಂಡಂತೆ ವರ್ತಿಸತೊಡಗಿದವು. ಆದರೆ ನೆರೆ ಸಂತ್ರಸ್ತರ ಬದುಕನ್ನು ಎಳೆಎಳೆಯಾಗಿ ಬಿಡಿಸಿಡಬಲ್ಲ, ಅವರ ಕರುಣಾಜನಕ ಕತೆಯನ್ನು ನಾಡಿಗೆ ತಿಳಿಸಬಲ್ಲ, ನಾಡಿನ ಜನ ಅವರ ನೆರವಿಗೆ ಧಾವಿಸಬಲ್ಲ ಮಹತ್ವದ ಜವಾಬ್ದಾರಿಯನ್ನು ಮನಸ್ಸಿಟ್ಟು ಮಾಡಲಿಲ್ಲ. ಹೀಗಾಗಿ ನೆರೆಸಂತ್ರಸ್ತರ ಬದುಕು ಇನ್ನಷ್ಟು ದಿಕ್ಕೆಟ್ಟುಹೋಯಿತು. ಸುಸ್ಥಿತಿ ಎನ್ನುವುದು ದೂರವೇ ಉಳಿಯಿತು. ರಾಜ್ಯ ಮತ್ತು ಕೇಂದ್ರ ಸರಕಾರದ ಕೋಟಿಗಟ್ಟಲೆ ಹಣ ನೀರಿನೊಂದಿಗೇ ಕರಗಿಹೋಯಿತು.

ಜನಪರವಾಗಿರಬೇಕಾದ ಮಾಧ್ಯಮಗಳು ಇಂದು ವ್ಯಾಪಾರ-ವಹಿವಾಟಿಗೆ ಮೊದಲ ಆದ್ಯತೆ ನೀಡತೊಡಗಿವೆ. ನಾಡಿನ ನೆಲ, ಜಲ, ಸಂಸ್ಕøತಿ ಬಗೆಗಿನ ಕಳಕಳಿಯ ಜಾಗದಲ್ಲಿ ಜಾಹೀರಾತು ಭೂತ ಬಂದು ಕೂತಿದೆ. ಸುದ್ದಿ ಮಾಧ್ಯಮಗಳಲ್ಲಿ ಸಾಂಸ್ಕøತಿಕ ವರದಿಗಾರಿಕೆಯ ವಿಭಾಗವೇ ಕಣ್ಮರೆಯಾಗಿದೆ; ಬೇರೆ ವಿಭಾಗಗಳ ವರದಿಗಾರರನ್ನು ಈ ಕಾರ್ಯಕ್ರಮಗಳಿಗೆ ನಿಯೋಜಿಸಿ, ವರದಿ ಮಾಡಿಸುವ ಸಂದರ್ಭ ಸೃಷ್ಟಿಯಾಗಿದೆ. ಜೊತೆಗೆ ಪತ್ರಕರ್ತರ ಎಡ, ಬಲ ಪಂಥಗಳ ಮೇಲಾಟ ಜೋರಾಗಿದೆ. ವರದಿ ಮಾಡುವಾಗ ವಾಸ್ತವವಾದಿಯಾಗಬೇಕಾದ ವರದಿಗಾರ, ಆಸೆ-ಆಮಿಷಗಳಿಗೆ ಬಲಿಯಾಗಿ ಆಶಾವಾದಿಯಾಗುವುದು, ಆಶಾವಾದಿ ಪತ್ರಕರ್ತರನ್ನು ನೋಡಿ ಮತ್ತಷ್ಟು ಮಂದಿ ನಿರಾಶವಾದಿಗಳಾಗುವುದು ಮಾಧ್ಯಮಲೋಕದ ಹೊಸ ಬೆಳವಣಿಗೆಯಾಗಿದೆ. ಪತ್ರಿಕೋದ್ಯಮದ ಚೌಕಟ್ಟಿನಾಚೆಗೆ ಹೊಸದಾಗಿ ಹುಟ್ಟಿಕೊಂಡಿರುವ, ಅಂಕೆ ಮೀರಿ ಬೆಳೆಯುತ್ತಿರುವ ಸೋಷಿಯಲ್ ಮೀಡಿಯಾ ಕೂಡ ಪತ್ರಕರ್ತರ ಅಸ್ತಿತ್ವವನ್ನೇ ಅಲ್ಲಾಡಿಸುತ್ತಿದೆ.

ಇಂತಹ ಸಂದರ್ಭದಲ್ಲಿ ಸಾಂಸ್ಕøತಿಕ ವರದಿಗಾರಿಕೆ ಎನ್ನುವುದು, ಆಯಾಯ ಪತ್ರಿಕೆಗಳ ಆಡಳಿತವರ್ಗ ಅಥವಾ ಸಂಪಾದಕರ ಧೋರಣೆ, ನಿಲುವು ಮತ್ತು ನೀತಿಗೊಳಪಟ್ಟು ಪರಿಷ್ಕರಣೆಗೊಳಗಾಗುತ್ತಿದೆ. ಸಾಹಿತ್ಯ ಸಮ್ಮೇಳನ, ಸಂವಾದ, ಪುಸ್ತಕ ಬಿಡುಗಡೆ, ವಿಚಾರ ಸಂಕಿರಣಕ್ಕೆ ಸಂಬಂಧಿಸಿದ ವರದಿಗಾರಿಕೆಯಲ್ಲಿ ಗಣ್ಯರ ಮಾತುಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವ, ವಿವಾದಾತ್ಮಕ ಸಂಗತಿಗಳು ಮಾತ್ರ ಸಾಂಸ್ಕøತಿಕ ವರದಿಗಳಾಗುವ ಸ್ಥಿತಿಗೆ ಪತ್ರಿಕೆಗಳು ಬಂದು ನಿಂತಿವೆ. ಸಂಗೀತ, ನೃತ್ಯಗಳ ಜಾಗವನ್ನು ರಿಯಾಲಿಟಿ ಶೋಗಳು ಆಕ್ರಮಿಸಿಕೊಂಡಿವೆ. ಜನರ ಅಭಿರುಚಿ ಎಂದರೆ ಲೈಫ್ ಸ್ಟೈಲï, ಮಾಲï ಕಲ್ಚರ್, ಟ್ರಾವೆಲï, ಶೋ ಬ್ಯುಸಿನೆಸ್ ಎಂದಾಗಿ, ಮಾಧ್ಯಮಗಳು ಅವುಗಳಿಗೇ ಹೆಚ್ಚು ಆದ್ಯತೆ ನೀಡುವಂತಾಗಿದೆ. ಜಗಮಗಿಸುವ ಮಾರಾಟ ಮತ್ತು ಪ್ರದರ್ಶನದ ನೆಪದಲ್ಲಿ ನಡೆಯುವ ಆರೋಗ್ಯ, ಆಹಾರ, ಕೃಷಿ, ಕರಕುಶಲ ಮೇಳಗಳೇ ಸಂಸ್ಕøತಿ ಎನ್ನುವಂತೆ ಬಿಂಬಿಸಲಾಗುತ್ತಿದೆ.

ಸಾಮಾಜಿಕ ಚಳವಳಿಗಳಿಗೆ ಬೆನ್ನೆಲುಬಾಗಿ ನಿಂತು ಪತ್ರಿಕೆಗಳು ಓದುಗರನ್ನು, ಚಾನೆಲïಗಳು ವೀಕ್ಷಕರನ್ನು ಬೌದ್ಧಿಕವಾಗಿ ಬೆಳೆಸುವ ಜತೆಗೆ ತಾವೂ ಬೆಳೆಯುತ್ತಿದ್ದ ಆರೋಗ್ಯಪೂರ್ಣ ವಾತಾವರಣ ಇಂದು ಬದಲಾಗಿದೆ. ಜೊತೆಗೆ ಕನ್ನಡದ ಅಸ್ಮಿತೆಯನ್ನು ಕರ್ನಾಟಕದ ಅನನ್ಯತೆಯನ್ನು ಬೆಂಬಲಿಸಿ, ಬಿಂಬಿಸಿ, ಬೆಳೆಸಿ, ಬಲಿಷ್ಠಗೊಳಿಸಬೇಕಾಗಿದ್ದ ಮಾಧ್ಯಮಗಳು, ಬದಲಾದ ಕಾಲಮಾನಕ್ಕೆ ತಕ್ಕಂತೆ ತಾಳ ಹಾಕುತ್ತಾ, ಪ್ರತಿಯೊಂದರಲ್ಲೂ ಟಿಆರ್‍ಪಿ ಹಾಗೂ ಸಕ್ರ್ಯುಲೇಷನ್ ಜಪ ಮಾಡುತ್ತಾ ಜಾಹೀರಾತಿಗೆ ಬಲಿ ಬಿದ್ದಿರುವುದು ಕೂಡ ಇವತ್ತಿನ ಈ ಸ್ಥಿತಿಗೆ ಕಾರಣವಾಗಿರಬಹುದು.

ಇಂತಹ ಕಾಲಘಟ್ಟದಲ್ಲಿ ಮಾಧ್ಯಮಗಳಲ್ಲಿ ಸಂಸ್ಕøತಿಯನ್ನು ಹುಡುಕುವುದು, ಸಾಂಸ್ಕøತಿಕ ವರದಿಗಾರಿಕೆಗೆ ಮಹತ್ವ ಸಿಗುವುದು ಕನಸಿನ ಮಾತಾಗಬಹುದು. ಕಾಲವೇ ಅದಕ್ಕೆ ಉತ್ತರಿಸಬಹುದು.

ಕೃಪೆ: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ೭೦ರ ಸಂಭ್ರಮದ ಸ್ಮರಣ ಸಂಚಿಕೆ


ಪ್ರತಿಕ್ರಿಯಿಸಿ