ಸರಿದುಹೋಯಿತೆ ಪುರವಣಿಗಳ ಪರ್ವಕಾಲ?

ಲಂಕೇಶ್ ಪತ್ರಿಕೆ’ಯ ಅಡಿ ಟಿಪ್ಪಣಿಗಳಾದ ‘ರಂಜನೆ, ಬೋಧನೆ ಹಾಗೂ ಪ್ರಚೋದನೆ’ ಮಾದರಿ ‘ಪುರವಣಿ’ಯೊಂದರ ಪರಿಕಲ್ಪನೆಯೂ ಹೌದು. ಈ ಮೂರು ಸೂತ್ರಗಳನ್ನೇ ತಮ್ಮ ವ್ಯಕ್ತಿತ್ವನ್ನಾಗಿಸಿಕೊಂಡು ಸತ್ವಪೂರ್ಣವಾಗಿ ಬೆಳೆದಿದ್ದ ಕನ್ನಡ ಪತ್ರಿಕೆಗಳ ಪುರವಣಿಗಳು ಈಗ ತಮ್ಮ ಚಹರೆಯನ್ನೇ ಕಳೆದುಕೊಂಡು ಕಲಸುಮೇಲೋಗರ ಆಗಿರುವ ಸಂದರ್ಭವಿದು. ಯಾಕೆ ಹೀಗಾಗಿದೆ? ಪುರವಣಿಗಳ ಸುವರ್ಣಕಾಲ ಮುಗಿದುಹೋಯಿತೆ?

ವೃತ್ತಪತ್ರಿಕೆಗಳೆಂದರೆ ಮುಖ್ಯವಾಗಿ ರಾಜಕೀಯ ಸುದ್ದಿ-ವಿದ್ಯಮಾನಗಳನ್ನು ವರದಿ ಮಾಡುವಂತಹವು. ರಾಜಕೀಯವೇ ಅದರ ಕೇಂದ್ರ ಎನ್ನುವುದು ಒಂದು ಗೃಹೀತ. ಚರ್ಚಾಸ್ಪದವಾದರೂ ಹೆಚ್ಚು ಮಾರ್ಪಡಿಸಲು ಬಾರದ ಗ್ರಹಿಕೆ. ಓದುಗರು ಅವುಗಳಿಂದ ನಿರೀಕ್ಷಿಸುವುದು ಸಹ ಮುಖ್ಯವಾಗಿ ಅದನ್ನೇ. ಆದರೆ ಒಂದು ದೇಶದ ರಾಜತಾಂತ್ರಿಕತೆಯಲ್ಲಿ ಸೇನೆ, ಶಸ್ತ್ರಾಸ್ತ್ರ ಬಲಗಳ ‘ಹಾರ್ಡ್‍ಪವರ್’ ಜತೆಜತೆಗೆ ಸ್ನೇಹ, ಸಂಸ್ಕೃತಿಗಳ ವಿನಿಮಯದ ‘ಸಾಫ್ಟ್ ಪವರ್ ’ ಸಹ ಬಹಳ ಮುಖ್ಯ ಎಂಬ ವಾದ ಇತ್ತೀಚೆಗೆ ಬಲ ಪಡೆದುಕೊಂಡಿದೆ. ಈ ಹೋಲಿಕೆ ಬಳಸಿಕೊಂಡು ಹೇಳುವುದಾದರೆ ಪತ್ರಿಕೆಯೊಂದರ ಮುಖ್ಯಪುಟಗಳು ಹಾರ್ಡ್‍ಪವರ್ ಎನಿಸಿದರೆ, ಸಾಫ್ಟ್ ಪವರ್ ಆಗಿಯೇ ಉದ್ದೇಶ ಈಡೇರಿಸಿಕೊಳ್ಳಬಲ್ಲ ಹೆಗ್ಗಳಿಕೆ ಹೊಂದಿರುವವು ಅದರ ಪುರವಣಿಗಳು.

ಮುಖ್ಯವಾಗಿ ಸಾಹಿತ್ಯಕ ವಿಷಯಗಳನ್ನು ಹೊಂದಿರುತ್ತಿದ್ದ ಭಾನುವಾರದ ಪುರವಣಿಯನ್ನು ನಾನು ನಿರ್ವಹಿಸುತ್ತಿದ್ದ 2000-2010ರ ದಶಕದ ಕಡೆ ಒಂದು ಹಿನ್ನೋಟ ಬೀರಿದರೆ ಪುರವಣಿಗಳು ಆಗ ಬಹಳ ಪ್ರಭಾವಿ ಎನಿಸಿದ್ದವು. ಅವು ತೆರೆದಿಡುತ್ತಿದ್ದ ಸಾಹಿತ್ಯಕ ಚರ್ಚೆ, ಉತ್ತಮ ಕತೆಗಳ ಆಕರ್ಷಕ ಪ್ರಸ್ತುತಿ, ಕವಿ-ಕಲಾವಿದರ ಪರಿಚಯ ತರುಣ ತಲೆಮಾರನ್ನು ಬಹಳ ಸೆಳೆಯುತ್ತಿತ್ತು. “ಅಲ್ಲಿ ಕೆಲಸ ಮಾಡಬೇಕು, ಇಂತಹ ಮಹಾನ್ ಸಾಹಿತಿಯ ಸಂದರ್ಶನ ಮಾಡಬೇಕು, ಅದರಲ್ಲಿ ಈ ಒಂದು ಕಠಿಣ ಪ್ರಶ್ನೆ ಕೇಳಬೇಕು, ಇಂತಹ ಪದ ಚಮತ್ಕಾರ ಮಾಡಿ ಅದಕ್ಕೊಂದು ಶೀರ್ಷಿಕೆ ಕೊಡಬೇಕು… ಅಥವಾ ಸುಪ್ರಸಿದ್ಧ ಇಂಗ್ಲಿಷ್ ಕತೆಯೊಂದನ್ನು ಸಮರ್ಥವಾಗಿ ಅನುವಾದಿಸಬೇಕು’ ಎಂಬಂತಹ ಒಂದು ಒಳತೋಟಿ – ಪತ್ರಕರ್ತ ಹುದ್ದೆಯಲ್ಲಿ ಇರುವವರಿರಬಹುದು ಅಥವಾ ಇತರರಾಗಿರಬಹುದು – ಅವರಲ್ಲಿ ಉಂಟಾಗುತ್ತಿದ್ದುದನ್ನು ಕಾಣಬಹುದಿತ್ತು. ಇದರಲ್ಲಿ ಯುವಕರೇ ಮುಂಚೂಣಿಯಲ್ಲಿದ್ದರು ಎಂದರೆ ಅದು ಪುರವಣಿಗಳ ಏಳಿಗೆಯ ಕಾಲ ಎಂದೇ ಅರ್ಥೈಸಬೇಕು. ಈ ಮಾತು ಏಕೆಂದರೆ ಭಾರತೀಯ ಪತ್ರಿಕೋದ್ಯಮದ ಆರಂಭಿಕ ವರ್ಷಗಳಲ್ಲಿ ಮಹಿಳೆಯರಿಗೆ ರಾಜಕೀಯ ವರದಿಗಾರಿಕೆಯಲ್ಲಿ ಜಾಗವಿರಲಿಲ್ಲ, ಸುಲಭ ನಿರ್ವಹಣೆಯವು ಎನ್ನಲಾಗುವ ಪುರವಣಿಗಳು, ಶಿಕ್ಷಣ, ಫ್ಯಾಶನ್, ಸಿನಿಮಾ ವಿಭಾಗಗಳನ್ನೇ ಅವರಿಗೆ ನೀಡಲಾಗುತ್ತಿತ್ತು ಎಂಬ ಒಂದು ಅಂಶ ಜನಜನಿತವಾಗಿದೆ. ಆದರೆ ಪ್ರಾದೇಶಿಕವಾದ ಕನ್ನಡ ಪತ್ರಿಕೋದ್ಯಮದಲ್ಲಿ ತದ್ವಿರುದ್ಧವಾದ ವಾತಾವರಣ.

ಪುರವಣಿಗಳ ಜನಪ್ರಿಯತೆಗೆ ಭೂಮಿಕೆ ಸಿದ್ಧಪಡಿಸಿಕೊಟ್ಟಿದ್ದು ವಿಅರ್‍ಎಲ್ ಸಮೂಹದ ಮಾಸಪತ್ರಿಕೆಯಾಗಿದ್ದ ‘ಭಾವನಾ’ ಎಂಬುದನ್ನೂ ಇಲ್ಲಿ ನೆನೆಯಬೇಕು. ಕೇವಲ ಒಂದೂವರೆ ವರ್ಷ ಪ್ರಕಟವಾಗಿದ್ದ ಈ ಮಾಸಿಕ ಅಲ್ಪಾಯುಷಿಯಾಗಿದ್ದರೂ ಬಹುಶ್ರುತ ಪ್ರತಿಭಾವಂತರಾದ ಹೆಸರಾಂತ ಸಾಹಿತಿ ಜಯಂತ ಕಾಯ್ಕಿಣಿಯವರ ಸಂಪಾದಕತ್ವದಲ್ಲಿ ರೂಪುಗೊಂಡಿದ್ದರಿಂದ ಓದುಗರಲ್ಲಿ ತನ್ನ ಛಾಪೊತ್ತಿತ್ತು. ಅವರೊಂದಿಗೆ ಕೆಲಸ ಮಾಡಿದ್ದ ನಾವು ಕೆಲವರು ‘ವಿಜಯ ಕರ್ನಾಟಕ’ದ ಭಾನುವಾರದ ಪುರವಣಿಗೂ ಅದರದೇ ಮಾದರಿಯನ್ನು ಸಹಜವಾಗಿ ಅನುಸರಿಸಿದೆವು. ಅದರಿಂದಾಗಿ, ಸಿದ್ಧಪ್ರಸಿದ್ಧರ ಒಂದು ಕತೆ, ಕವಿತೆ, ನಾಟಕ/ಸಿನಿಮಾ ಕುರಿತ ಬರಹ, ಪುಸ್ತಕ ವಿಮರ್ಶೆ… ಮುಂತಾಗಿ ಒಂದು ಫಾರ್ಮುಲಾಗೆ ಕಟ್ಟುಬಿದ್ದಿದ್ದ ಪುರವಣಿಗೆ ತಂತಾನೇ ಒಂದು ತಾಜಾತನ ಪ್ರಾಪ್ತವಾಯಿತು ಎನ್ನಬಹುದು. ಚಿತ್ರಕಲೆ, ಸಂಗೀತ, ವಿಶ್ವ ಸಿನಿಮಾ, ಸಾಮಾಜಿಕ ಪಲ್ಲಟಗಳ ಕುರಿತ ಚರ್ಚೆ, ವಿಶಿಷ್ಟ ಅಂಕಣ ಬರಹಗಳು, ಅರಿವನ್ನು ವಿಸ್ತರಿಸುವ ಅನುವಾದಗಳು, ವಿಸ್ತøತ ಸಂದರ್ಶನಗಳು ಪುರವಣಿಯಲ್ಲಿ ಪ್ರವೇಶ ಪಡೆದವು. ಸಹಸ್ರಮಾನ ಮಡಿಕೆ ಬಿಚ್ಚಿಟ್ಟ ಹೊಸ ಕಾಲಕ್ಕೆ ತಕ್ಕಂತೆ, ಇತರ ಭಾರತೀಯ ಭಾಷೆಗಳು ಹಾಗೂ ಸ್ಥಳೀಯ ಇಂಗ್ಲಿಷ್ ಸಾಹಿತ್ಯಲೋಕಗಳ ಕಡೆ ಕಣ್ಣಿಟ್ಟ ಸಂವೇದನೆಗಳ ಗೊಂಚಲು ಆಗ ನಿರ್ಮಾಣವಾಯಿತು (ಶೈಶವಾವಸ್ಥೆಯವೇ ಆದರೂ) ಮತ್ತು ಅದನ್ನು ಸ್ವೀಕರಿಸಬಲ್ಲ ಓದುಗ ಸಮುದಾಯವನ್ನು ತಲುಪಿತು ಎನ್ನುವುದೇನೂ ಅನುಚಿತವಲ್ಲ.

‘ಹಾಸ್ಯ ಮೀಮಾಂಸೆ’ಯನ್ನು ಪುರವಣಿ ವಿಷಯ ಮಾಡಿದ್ದು, ಲೈಂಗಿಕತೆ, ಶೃಂಗಾರ (ಹೆಸರೆತ್ತಿದೊಡನೆ ಕೋಲಾಹಲ ಎಬ್ಬಿಸುವ ಸಾಮರ್ಥ್ಯ ಇರುವವಾದ್ದರಿಂದ ಪ್ರಸರಣಕ್ಕೆ ಲಾಭದಾಯಕ ಎಂಬುದು ಆ ಕಾಲಕ್ಕೆ ಅನ್ವಯವಾಗುತ್ತಿದ್ದ ವೃತ್ತಿರಂಗದ ಕಿವಿಮಾತು) ಇತ್ಯಾದಿಗಳನ್ನು ಕನ್ನಡದ ಮಿತಿಯಲ್ಲಿಯೇ ನಿರ್ವಹಿಸಿದ್ದು ಸ್ಮರಣೀಯ. ಜತೆಗೆ ಸೃಜನಶೀಲತೆಗೆ ಸಮಯ, ಆಸಕ್ತಿ ಎರಡೂ ಇದ್ದ ಓದುಗ ಗೃಹಿಣಿಯರನ್ನು ಬರಹಕ್ಕೆಳಸಿದ interactive ಸಂವಾದ, ಸಮೀಕ್ಷೆಗಳಿಗೆ ಮಹಿಳಾಪುಟಗಳಲ್ಲಿ ಜಾಗ ಮಾಡಿದ್ದು, ಬರವಣಿಗೆ ಸಾಮಥ್ರ್ಯವಿರುವ ಸಂಗೀತ, ನೃತ್ಯ ಮತ್ತಿತರ ಲಲಿತ ಕಲೆಗಳ ಕಲಾವಿದರಿಗೆ ವೇದಿಕೆ ಒದಗಿಸಿದ್ದು, ಆ ಪ್ರಯತ್ನದಲ್ಲಿ ವಿನೂತನ ಸರಣಿಗಳನ್ನು ಪ್ರಾರಂಭಿಸಿದ್ದು, ವಿಭಿನ್ನ ಪ್ರವಾಸ ಕಥನಗಳನ್ನು ಯಥೇಚ್ಛ ಪ್ರಕಟಿಸಿದ್ದು… ಎಲ್ಲ ಒಂದು ‘ಪ್ಯಾಕೇಜ್’ನಂತೆ ಪರಿಣಮಿಸಿತು. ಇದನ್ನೇ ಪತ್ರಿಕೆಯೊಂದರ ‘ವ್ಯಕ್ತಿತ್ವ ನಿರ್ಮಾಣ’ ಎಂದು ಕರೆಯಬಹುದಾದರೆ, ಅಂದಿನ ವಿ.ಕ. ಸಂಪಾದಕ ವಿಶ್ವೇಶ್ವರ ಭಟ್ ಅವರಿಗೆ ಆ ಕುರಿತು ಒಂದು ಸ್ಪಷ್ಟತೆಯಿದ್ದುದೂ ಒಂದು ಒದಗಿಬಂದ ಅನುಕೂಲ: ‘ಪುರವಣಿಗಳೇ ಒಂದು ಪತ್ರಿಕೆಯ ಜನಪ್ರಿಯತೆ/ಬೇಡಿಕೆಯನ್ನು ನಿರ್ಧರಿಸುವ ಪುಟಗಳು. ಮುಖ್ಯಪುಟಗಳ ಸುದ್ದಿಗಳು ಎಲ್ಲ ಪತ್ರಿಕೆಗಳಲ್ಲಿ ಬಹುತೇಕ ಒಂದೇ ಆಗಿರುತ್ತವಲ್ಲವೇ?’ ಎಂಬುದು ಅವರು ನೀಡಿದ ಹೊಳಹು. ಕನ್ನಡ ಪತ್ರಿಕೋದ್ಯಮದ ಆಚಾರ್ಯರುಗಳಲ್ಲಿ ಒಬ್ಬರಾದ ವೈಯೆನ್ಕೆ ಶಿಷ್ಯರಾಗಿದ್ದ, ಪುಟ ವಿನ್ಯಾಸ, ಒಪ್ಪ ಮತ್ತಿತರ ಅಂದಗಾಣಿಸುವಿಕೆಗೆ ವಿಶೇಷ ಒತ್ತುನೀಡುತ್ತಿದ್ದ ಸಂಪಾದಕರಾಗಿ ಅವರಿಂದ ನಮಗೆ ದೊರೆತ ಉತ್ತೇಜನ ಅನನ್ಯ. ಪುರವಣಿಗೂ ಮುಖ್ಯಪುಟಗಳಿಗೆ ನೀಡುವಷ್ಟೇ ಅಪರೂಪದ ಆಸ್ಥೆಯನ್ನು ಅವರು ವಹಿಸುತ್ತಿದ್ದುದು ಉಲ್ಲೇಖನೀಯ. ಆಡಳಿತ ಮಂಡಳಿಯಿಂದ ಅಸ್ತು ಎನಿಸಿಕೊಂಡು ದಾಖಲಾರ್ಹ ಬಹುಮಾನಗಳ ಕಥಾಸ್ಪರ್ಧೆ ಆಯೋಜಿಸಿದ್ದು, ವರ್ಷ, ಅರೆವರ್ಷಗಳಿಗೊಮ್ಮೆ ಹೊರತರಬೇಕಾಗಿದ್ದ ಪುಸ್ತಕ ರೂಪದ ವಿಶೇಷಾಂಕಗಳನ್ನು ಸಂಗ್ರಾಹ್ಯ ಸಂಚಿಕೆಗಳಾಗುವಂತೆ ರೂಪಿಸಿದ್ದು ಅವರ ನೇತೃತ್ವದಲ್ಲಿಯೇ. ಹಾಗೆ ಕೆಲ ವರ್ಷಗಳ ನಂತಹ ಪ್ರಚುರಗೊಂಡ ‘ಪತ್ರಿಕೆಯೊಂದು ನಂಬಲರ್ಹ ‘ಬ್ರ್ಯಾಂಡ್’ ನಿರ್ಮಿಸಬೇಕು’ ಮುಂತಾದ ಮಾರ್ಕೆಟಿಂಗ್ ಕಾರ್ಯತಂತ್ರಗಳ ಹೆಸರಿಟ್ಟುಕೊಳ್ಳದೆಯೇ ಅಂದು ವಿ.ಕ. ಒಂದು ಬ್ರ್ಯಾಂಡ್ ನಿರ್ಮಿಸಿತು; ಅದೂ ಶುದ್ಧ ಸಾಹಿತ್ಯಕ ನೆಲೆಯಲ್ಲಿ.

ನಂತರದ ವರ್ಷಗಳಲ್ಲಿ ಕೃಷಿ, ವಿಜ್ಞಾನ, ಆರ್ಥಿಕತೆ… ಹೀಗೆ ಲೇಖನಗಳ ‘ಬ್ರ್ಯಾಂಡ್ ವಿಸ್ತರಣೆ’ ಮಾಡಿಕೊಂಡು, ಒಟ್ಟಾರೆ, ‘ರಂಜನೆ, ಬೋಧನೆಗಳ ಉದ್ದೇಶವಿಟ್ಟುಕೊಂಡಿರುವ ಉತ್ತಮ ಬರವಣಿಗೆ’ ಎಂಬ ವ್ಯಾಖ್ಯೆಯನ್ನು ಅಪ್ಪಿಕೊಂಡು ಒಂದು ಉತ್ಕರ್ಷವನ್ನು ‘ಪುರವಣಿ ಪತ್ರಿಕೋದ್ಯಮ’ ಆ ದಿನಗಳಲ್ಲಿ ತಲುಪಿತು ಎಂದರೆ ತಪ್ಪಲ್ಲ. ಒಂದು ಪತ್ರಿಕಾಲಯದಿಂದ ಇನ್ನೊಂದಕ್ಕೆ ಹಬ್ಬಿ ಸಾಂಕ್ರಾಮಿಕವಾದ ಉತ್ಸಾಹ, ಅದರೊಂದಿಗೆ ಮೇಳೈಸಿದ ಆರೋಗ್ಯಕರ ಸ್ಪರ್ಧೆ ನಾಡಿನ ಸಾಹಿತ್ಯಪ್ರೇಮಿಗಳನ್ನು ಭಾನುವಾರಗಳಂದು ಎಲ್ಲ ಕನ್ನಡ ದೈನಿಕಗಳ ಪುರವಣಿಗಳನ್ನು ಹರಡಿ ಕೂರುವಂತೆ ಮಾಡುತ್ತಿದ್ದುದೂ ಸುಳ್ಳಲ್ಲ.

ಒಂದೊಮ್ಮೆ ಕನ್ನಡ ಪತ್ರಿಕೆಗಳ ಸಾಹಿತ್ಯಿಕ ಸಂಚಿಕೆಗಳನ್ನು ದೂರದಿಂದಲೇ ನಿಯಂತ್ರಿಸುತ್ತಿದ್ದ ವಿಶ್ವವಿದ್ಯಾಲಯಗಳ ಅಧ್ಯಾಪಕ ವೃಂದ, ಸಾಹಿತ್ಯಕ್ಷೇತ್ರದ ಗಣ್ಯಮಾನ್ಯರು ರವಷ್ಟು ಆಘಾತಗೊಂಡರು! ಕ್ರಮೇಣ ಸುಧಾರಿಸಿಕೊಂಡು ಏನು ನಡೆಯುತ್ತಿದೆ ಎಂದು ಗಮನಿಸುವ ಅಭ್ಯಾಸವೂ ಅವರಲ್ಲಿ ಬೆಳೆಯಿತು. ಇದೇ ಘಟ್ಟದಲ್ಲಿ ಹುಂಬ ಉತ್ಸಾಹದಲ್ಲಿ ಮಾಡಿದ ‘ಟಾಪ್ ಟೆನ್’ ವಗೈರೆಗಳು ವಿದ್ವತ್‍ಲೋಕದಲ್ಲಿ ಒಂದು ಸಂಚಲನ ಉಂಟುಮಾಡಿ, ಆ ಕುರಿತು ಏನನ್ನೂ ಅನುಮಾನಿಸದೆ ಸುಮ್ಮನೆ ಒಂದು ಕಲ್ಲು ಒಗೆದಿದ್ದ ನಮ್ಮನ್ನು ದಿಗ್ಭ್ರಾಂತಗೊಳಿಸಿತು.

ಆದರೆ ಹೊಸ ಪ್ರಯೋಗಗಳನ್ನು ತಾಳಿಕೆಗೊಳಿಸುವ ನಿರ್ಣಾಯಕ ಅಂಶ ಗುಣಮಟ್ಟವನ್ನು ಸದಾ ಕಾಯ್ದುಕೊಳ್ಳುವುದು. ಅದಕ್ಕೆ ಅಡೆತಡೆಗಳು ಇದ್ದೇಇದ್ದವು: ಉತ್ತಮ ಕತೆ-ಕವಿತೆಗಳನ್ನು ವಾರಾಂತರದಲ್ಲಿ ಸಂಪಾದಿಸಬೇಕಾದ ಅನಿವಾರ್ಯ, ಸಾಹಿತ್ಯೇತರ ವಿಷಯಗಳ ತಜ್ಞಬರವಣಿಗೆ ಉತ್ತಮ ಬರವಣಿಗೆ ಆಗಿರದ ಅಂಶ ಅಧೀರಗೊಳಿಸುವಂತಹದು. ಹಲವು ಹೊಳಹುಗಳು, ಉದ್ಧರಣೆ, ಉಲ್ಲೇಖಗಳೊಡಗೂಡಿ, ಪ್ರಾಸಂಗಿಕ ತುಲನೆ ಮಾಡಿ, ಸವಕಲಾದ ಪದಪುಂಜಗಳನ್ನು ಕೈಬಿಟ್ಟು, ಆಕರ್ಷಕವಾಗಿ ಪುಸ್ತಕ/ಕಲಾ ವಿಮರ್ಶೆಗಳನ್ನು ಬರೆಯಬಹುದಾದ ಸಾಧ್ಯತೆಗೆ ವೃತ್ತಿನಿರತರು ವಿಮುಖರಾಗಿದ್ದು ಕೊರತೆಯಾಗಿ ಕಾಡಿತು. ಕಂಟೆಂಟ್ ಚೆನ್ನಾಗಿದ್ದ ಲೇಖನಗಳು ಭಾಷಾ ಶುದ್ಧತೆ, ವಾಕ್ಯರಚನೆಗಳಲ್ಲಿ ದೋಷಪೂರ್ಣವಾಗಿ ‘ಉತ್ತಮ ಬರವಣಿಗೆ’ ಅರ್ಹತೆಯನ್ನು ಆಂಶಿಕವಾಗಿಯಷ್ಟೇ ಪೂರೈಸುತ್ತಿದ್ದವು. ಚಂದವಾಗಿದೆ ಎಂದು ಮೇಲ್ನೋಟಕ್ಕೆ ತೋರುತ್ತಿದ್ದ ಅಂಕಣ ಬರಹ ಇತ್ಯಾದಿಗಳಲ್ಲಿ ವಸ್ತು ಚರ್ವಿತಚರ್ವಣ ಆಗತೊಡಗಿದವು.

ವೈ ಎನ್ ಕೆ

ವೈ ಎನ್ ಕೆ

ಪತ್ರಿಕಾ ಕಚೇರಿಯ ಒಳಹೊರಗೆ ಹರಡಿದ್ದ ‘ಸಾಹಿತ್ಯ ನಿರ್ಮೋಹಿ ಅಖಾಡಾ’ ಸತ್ವಪೂರ್ಣ ಪುರವಣಿಗಳಿಗೆ ಒಂದು ಅವಸಾನ ಗೀತೆ ಹಾಡಲು ಹೊಂಚಿದ್ದು ಇದೇ ವೇಳೆಗೆ. ಅಲ್ಲಿಯತನಕ ‘ನಮ್ಮ ಪುರವಣಿ ನಮ್ಮ ಹೆಮ್ಮೆ’ ಎಂದುಕೊಂಡಿದ್ದ ಕಾಲಾಳುಗಳು ‘ಭಾನುವಾರಗಳಂದು ಪ್ರಸಾರ ಸಂಖ್ಯೆ ಕುಸಿಯುತ್ತಿದೆ’ ಎಂಬ ದುರ್ವಾರ್ತೆ ಕೇಳಿ ಕಪ್ಪಿಟ್ಟರು. ‘ಯಾರು ಓದ್ತಾರೆ, ಈ ಕತೆ-ಕವನ?’ ಎಂಬ ಭತ್ರ್ಸನೆಗೆ ಮಂಕಾದರು. ಮುಖ್ಯವಾಹಿನಿ ಪತ್ರಿಕೋದ್ಯಮಕ್ಕೆ ಅವರು ಹೊಂದಿಕೊಳ್ಳಬಹುದೇ ಅಥವಾ ಇಲ್ಲವೇ ಎಂಬ ಸಂಶಯದ ಫಲವಾಗಿ ಅವರುಗಳ ಕೆಲಸದ ಭದ್ರತೆಗೂ ಧಕ್ಕೆ ಬಂತು ಎಂಬಲ್ಲಿಗೆ ವೃತ್ತ ಒಂದು ಆವರ್ತನ ಪೂರೈಸುತ್ತದೆ. ಆದರೆ ಆ ಪಯಣದಲ್ಲಿ ಆದ ಅನುಭವ ವೃತ್ತಿಬದುಕಿನಲ್ಲಿ ಲಾಭಕರವಾಗಿತ್ತು ಎಂಬ ಬಗ್ಗೆ ಎರಡು ಮಾತಿಲ್ಲ. ಈಗ ಅಗ್ರಸಾಲಿನ ಕತೆ-ಕಾದಂಬರಿಕಾರರಾಗಿರುವ ಒಬ್ಬ ಲೇಖಕರ ಪುಟಗಟ್ಟಲೆ ಇದ್ದ ಚೊಚ್ಚಲ ಕತೆಯನ್ನು ಹಂತಹಂತವಾಗಿ ಎಡಿಟ್ ಮಾಡಿ ಸಾಪ್ತಾಹಿಕಕ್ಕೆ ಸಿದ್ಧಪಡಿಸಿದ್ದು ಆಗಾಗ ನೆನಪಿಗೆ ಬರುತ್ತದೆ. ಭಿನ್ನ ರಂಗಗಳ ಪ್ರತಿಭಾವಂತರು ಎಷ್ಟು ಶೀಘ್ರವಾಗಿ ಪತ್ರಿಕಾಬರವಣಿಗೆಯ ನಾಡಿಮಿಡಿತ ಹಿಡಿಯುತ್ತಾರೆ, ಅದಕ್ಕಾಗಿ ಸಾಹಿತ್ಯಕ ಪುರವಣಿಯೊಂದರ ವೇದಿಕೆ ಅವರಿಗೆ ಎಷ್ಟೊಂದು ಸಹಾಯಕ ಎಂಬಂತಹ ನಿರೀಕ್ಷೆಗಳನ್ನೂ ಅದು ಹುಟ್ಟುಹಾಕಿದೆ. ಅಂತೆಯೇ ಅಂದು ವಿ.ಕ.ದಲ್ಲಿ ಅವಕಾಶಕ್ಕಾಗಿ ಕಾತರಿಸಿದವರು, ಪ್ರಕಟಣೆಗೆ ಯೋಗ್ಯವಾಗುವ ತನಕ ಛಲ ಬಿಡದೆ ಬರೆದೂ ಬರೆದೂ ಕೌಶಲ ಗಳಿಸಿಕೊಂಡವರ ಹೆಸರುಗಳು ಇಂದು ಪತ್ರಿಕೆಗಳಲ್ಲಿ ಮುಂಚೂಣಿಯಲ್ಲಿವೆ.

ಭಾರತೀಯ ಇಂಗ್ಲಿಷ್ ಸಾಹಿತ್ಯದಲ್ಲಿ ಈಚಿನ ವರ್ಷಗಳಲ್ಲಿ ಬೆಳಕಿಗೆ ಬಂದ ಹಲವು ಪ್ರತಿಭಾನ್ವಿತರು ವೃತ್ತಿಯಿಂದ ಪತ್ರಕರ್ತರು. ಅಂದರೆ ಭಾರತೀಯ ಸಂವಿಧಾನ, ಅಪರಾಧ ವಿಭಾಗದಲ್ಲಿರುವವರಾದರೆ ದಂಡಸಂಹಿತೆ, ನ್ಯಾಯಾಂಗದ ತತ್ವ-ಸಿದ್ಧಾಂತಗಳನ್ನೂ ಸಾಹಿತ್ಯ ಚರಿತ್ರೆಯಷ್ಟೇ ಅವರು ಅರಗಿಸಿಕೊಂಡಿರಲು ಸಾಕು. ಸಾಹಿತ್ಯದಲ್ಲಿ ಪದವಿ ಪಡೆದವರಿಗೆ ಹಿಂದಿನ ವರ್ಷಗಳಲ್ಲಿ ಮತ್ತು ಇಂದೂ ಸಹ ಪತ್ರಿಕಾಲಯಗಳಲ್ಲಿ ಪ್ರವೇಶವಿದೆ. ಈ ಅಂಶಗಳನ್ನು ಗಮನಿಸಿದರೆ ಮುಖ್ಯವಾಹಿನಿ ಹಾಗೂ ಪುರವಣಿ ಪತ್ರಿಕೋದ್ಯಮ ಎಂಬ ವಿಭಾಗೀಕರಣವೇ ಹುಸಿಯೆನಿಸುತ್ತದೆ. ‘ಉತ್ತಮವಾಗಿ ಬರೆಯಬಲ್ಲರು’ ಎಂಬ ತಿರುಳು ಅರ್ಹತೆ ಗಳಿಸಿಕೊಂಡಿದ್ದರೆ ಅಲ್ಲಿಯವರು ಇಲ್ಲಿಯೂ, ಇಲ್ಲಿಯವರೂ ಅಲ್ಲಿಯೂ ಸಲ್ಲಲೇನೂ ಅಡ್ಡಿಯಿಲ್ಲ. ರೂಢಿಗತ ನಿರೂಪಣೆ, ಕ್ಲೀಷೆಯುಕ್ತ ಪದಪುಂಜಗಳನ್ನು ರಾಜಕೀಯ ವರದಿಗಾರಿಕೆಯಲ್ಲಿ ಆಗಿಂದಾಗ್ಗೆ ಮುರಿಯಲು ಸಹ ಈ ಅದಲುಬದಲು ನೆರವಿಗೆ ಬರಬಹುದು. ಕೊಂಚ ಆಢ್ಯತೆ ಗಳಿಸಿಕೊಂಡಿರುವ ಇಂಗ್ಲಿಷ್ ಟೆಲಿವಿಷನ್ ಪತ್ರಿಕೋದ್ಯಮದಲ್ಲಿ ನಿರೂಪಕರೇ ವರದಿಗಾರರೂ ಆಗಿ, ವಿಷಯತಜ್ಞರೊಂದಿಗೆ ಸಂವಾದ ನಡೆಸಬಲ್ಲವರಾಗಿ ಹಲವು ಪಾತ್ರ ನಿರ್ವಹಣೆ ಮಾಡುತ್ತಾರೆ. ಮುಂಬೈ ಉಗ್ರದಾಳಿಯ ಪ್ರತ್ಯಕ್ಷವರದಿ ಮಾಡಿದ ಪತ್ರಕರ್ತೆಯೇ ನೊಬೆಲ್ ವಿಜೇತ ಅರ್ಥಶಾಸ್ತ್ರಜ್ಞ ಅಮತ್ರ್ಯ ಸೇನ್‍ರ ಸಂದರ್ಶನ, ಭಾರತ ಮೂಲದ, ಅಂತರರಾಷ್ಟ್ರೀಯ ಖ್ಯಾತಿಯ ಸಲ್ಮಾನ್ ರಶ್ದಿಯವರೊಂದಿಗೆ ಸಾಹಿತ್ಯ ಸಲ್ಲಾಪವನ್ನೂ ನಡೆಸಿಕೊಡುವುದನ್ನೂ ಇಂದು ನೋಡಿದ್ದೇವೆ. ಪ್ರಭಾವಶಾಲಿ ಹಾಗೂ ಪರಿಣಾಮಕಾರಿಯಾದ ಸುಶಿಕ್ಷಿತ ಅಭಿವ್ಯಕ್ತಿಯೇ ಅದಕ್ಕೆ ತಳಹದಿ.

ಕೃಷಿ ಪುರವಣಿಯ ಒಂದು ಪುಟ

ಕೃಷಿ ಪುರವಣಿಯ ಒಂದು ಪುಟ

ಅಲ್ಲದೆ ಸಾಹಿತ್ಯ ಓದಿಕೊಂಡವರು ರಾಜಕೀಯ ಪ್ರಜ್ಞಾವಂತಿಕೆ ಗಳಿಸಿಕೊಂಡಿರುವುದು ಹಾಗೂ ರಾಜಕೀಯ ಪ್ರತಿಭೆ ಇರುವವರು ಭಾಷೆ-ಸಾಹಿತ್ಯಗಳ ಮೇಲೆ ಪ್ರಭುತ್ವ ಗಳಿಸಿಕೊಂಡವರೂ ಆಗಿರುವುದು ಅಸಾಮಾನ್ಯ ಎಂದೇನೂ ಅಲ್ಲ. ಚಿಂತಿಸುವ ಸಾಮಥ್ರ್ಯ ಇರುವ ಮಹಿಳೆಯರೆಲ್ಲ ಸ್ತ್ರೀವಾದಿಗಳೇ ಆಗಿರುತ್ತಾರೆ ಎಂಬಷ್ಟು ಇದು ಸ್ವಯಂಸ್ಪಷ್ಟ. ಕನ್ನಡ ದೈನಿಕಗಳ ಪರಂಪರೆಯನ್ನು ಅವಲೋಕಿಸಿದರೆ ಮೇರು ಸಂಪಾದಕರುಗಳಿಗೆ ಸಾಹಿತ್ಯ-ಸಂಗೀತ ಅಪಥ್ಯವಾಗೇನೂ ಇರಲಿಲ್ಲ. ಅದೇ ರೀತಿ ಪುರವಣಿಯ ಸಂಪಾದಕರು ರಾಜಕೀಯ, ಆರ್ಥಿಕ ಜ್ಞಾನ, ಇಂಗ್ಲಿಷ್ ಪರಿಣತಿ ಗಳಿಸಿಕೊಂಡ ಶ್ರೇಷ್ಠ ಪತ್ರಕರ್ತರಾಗಿರುತ್ತಿದ್ದರು ಎನ್ನುವುದು ಮನವರಿಕೆಯಾಗುತ್ತದೆ. ಕನ್ನಡ ಪತ್ರಿಕಾಭಾಷೆ, ರಾಜಕೀಯದ ನರೇಟಿವ್ ಲಂಕೇಶರಂತಹ ಅಪ್ಪಟ ಸಾಹಿತಿಯ ‘ವಿದ್ಯುದಾಲಿಂಗನ’ದಿಂದ ಏನೇನು ಗಳಿಸಿಕೊಂಡಿತು ಎಂಬುದನ್ನು ಗಮನಿಸಿದ್ದೇವೆ.

ಬೇಕಿದ್ದೀತು, ಪುರವಣಿಗಳಲ್ಲಿ ಕೆಲಸ ಮಾಡುವವರಿಗೆ ಇನಿತಿಷ್ಟು ನಿಸೂರು. ಪರಾಮರ್ಶೆ, ವಿಪುಲ ಸಂಶೋಧನೆಗೆ ಆಸ್ಪದ ನೀಡುವ ಸರ್ಚ್ ಎಂಜಿನ್‍ಗಳಿಂದ ಅಗತ್ಯ ಮಾಹಿತಿ ಪಡೆಯಲು ಒಂದಷ್ಟು ಬಿಡುವಿನ ಗಂಟೆಗಳು. ಕವಿಗೋಷ್ಠಿಯಲ್ಲಿ ಕಳೆದುಹೋಗಲು ಒಂದರ್ಧ ದಿನದ ರಜೆ… ಆದರೆ ಮಾರನೇ ಬೆಳಗು ಉಪ ಚುನಾವಣೆ ನಿರ್ವಹಿಸುವ ಪುಟಕ್ಕೆ ದೂಡಿದರಾಯ್ತು, ಸಮಾಸಮ ಆಗಿ ಸಹೋದ್ಯೋಗಿ ಶತ್ರುಗಳ ಸಿಡಿಕಿಡಿ ಚರ್ಚೆ ಬರಖಾಸ್ತು! ವಿನೋದ ಬದಿಗಿಟ್ಟು ಹೇಳುವುದಾದರೆ, ಕನ್ನಡದ ಪ್ರಮುಖ ಪತ್ರಿಕೆಯೊಂದು ಹೀಗೆ ಎಲ್ಲರನ್ನೂ, ಎಲ್ಲ ವಿಭಾಗಕ್ಕೂ ನೇಮಿಸುವ ಸಂಪ್ರದಾಯವನ್ನು ಬಹುಕಾಲದಿಂದ ಪಾಲಿಸಿಕೊಂಡು ಬಂದಿದೆ. ಆದರೆ ಈ ವ್ಯವಸ್ಥೆಯ ಒಂದೇ ದೋಷವೆಂದರೆ ಸಾಹಿತ್ಯಕ ಸಂವೇದನೆ ಏನೇನೂ ಇರದವರನ್ನು ಪುರವಣಿಗೆ ನಿಯುಕ್ತಿಗೊಳಿಸಿದಾಗ ಆ ಅವಧಿಯಲ್ಲಿ ಅವು ಬಡವಾಗುತ್ತವೆ; ಗೋಳು ಕರೆಯುತ್ತವೆ.

ಪುರವಣಿ ಎಂದಾಕ್ಷಣ ಅದು ಸಾಹಿತ್ಯಕ ಪುರವಣಿಯೇ ಆಗಿರುತ್ತದೆ ಎಂಬ ಇಂಗಿತ ಈ ಬರಹದಲ್ಲಿ ಮೂಡಿದೆಯಾದರೂ ಕನ್ನಡದಲ್ಲಿ ‘ಅಭಿವೃದ್ಧಿ ಪತ್ರಿಕೋದ್ಯಮ’ಕ್ಕೆ ಒಂದಷ್ಟು ಜಾಗ ಕಲ್ಪಿಸಿದ ‘ಪ್ರಜಾವಾಣಿ’ಯ ಕೃಷಿ ಪುರವಣಿಯ ಉಲ್ಲೇಖ ಮಾಡದೇ ಇರಲಾಗದು. ಗ್ರಾಮೀಣ ಜಾಗೃತಿ, ಸಾಮಾಜಿಕ ಬದ್ಧತೆ, ಪರಿಸರ ಸಂರಕ್ಷಣೆ, ರೈತರ ಹಿತಾಸಕ್ತಿ, ಕೃಷಿ ಕ್ಷೇತ್ರದ ಆಗುಹೋಗುಗಳ ವರದಿಗೆ ಎಷ್ಟು ಮಹತ್ವ ನೀಡಿದರೂ ಸಾಲದು ಎಂದು ಒಂದಿಡೀ ತಲೆಮಾರಿನ ಕಿರಿಯ ಸಹೋದ್ಯೋಗಿಗಳಿಗೆ ತೋರಿಸಿಕೊಟ್ಟ ನಮ್ಮ ನಡುವಿನ ಲೆಜೆಂಡರಿ ಪತ್ರಕರ್ತ ನಾಗೇಶ್ ಹೆಗಡೆಯವರ ಮಿದುಳ ಕೂಸದು. (ಜನಪರ ಕಾಳಜಿ, ಅಗತ್ಯಬಿದ್ದಾಗ ಆಡಳಿತ ವಿರೋಧಿ ನಿಲುವು ತಳೆದು ಓದುಗರ ಪ್ರಜ್ಞಾವಂತಿಕೆ ಹೆಚ್ಚಿಸಿ ಚಳವಳಿ ರೂಪಿಸುವುದಕ್ಕೂ ಪತ್ರಿಕೆಗಳು ವಾಹಕವಾಗಬೇಕು ಎಂಬುದು ಅವರು ನಿರ್ಮಿಸಿದ ಪರಂಪರೆ.) ಆದರೆ ಇದೇ ದರ್ಜೆಯ ಆರೋಗ್ಯ-ವಿಜ್ಞಾನ, ವಿತ್ತ, ಕ್ರೀಡೆಗಳ ಪುರವಣಿಗಳು (ಯಾವಾಗಲೋ ಶುರುವಾದ ಈ ವಿಪರೀತ ವಿಭಾಗಿಸುವಿಕೆ ಬರಬರುತ್ತಾ ಕಂಟಕವೇ ಆಯಿತು) ಕನ್ನಡ ಪತ್ರಿಕೆಗಳಲ್ಲಿ ಬೆಳಕು ಕಾಣಲಿಲ್ಲ. ಕನ್ನಡಿಗ ವಿಜ್ಞಾನಿಗಳು/ಪರಿಣತರು ಅದೆಂದೋ ಬರೆದ ಪ್ರಾಥಮಿಕ ಹಂತದ ಪುಸ್ತಕಗಳೇ ಇಂದಿಗೂ ಉಜ್ವಲವಾಗಿವೆ. ಗಣಿತಜ್ಞ, ಖಗೋಳಾಸಕ್ತ ದಿ. ಜಿ.ಟಿ. ನಾರಾಯಣ ರಾವ್, ರಸಾಯನಶಾಸ್ತ್ರಜ್ಞ ದಿ. ಜೆ.ಎಸ್. ಲಕ್ಷ್ಮಣ ರಾವ್ ಭೌತಿಕ ವಿಜ್ಞಾನ ವಿಷಯಗಳ ಕುರಿತು ಬರೆದಿದ್ದು ಕ್ಲಾಸಿಕ್ ಆಗಿದೆ. ಡಾ. ಅನುಪಮಾ ನಿರಂಜನ ಬರೆದ ವೈದ್ಯಕೀಯ ಲೇಖನ/ಪುಸ್ತಕಗಳನ್ನು ಸರಿಗಟ್ಟುವ ಸಮಕಾಲೀನ ಲೇಖಗಳು ಪುರವಣಿಗಳಲ್ಲಿ ಪ್ರಕಟವಾಗಲಿಲ್ಲ. ನಾಗೇಶ ಹೆಗಡೆಯವರ ಅಂಕಣವೇನೋ ವರ್ಷದಿಂದ ವರ್ಷಕ್ಕೆ ಸತತವಾಗಿ ಹರಿದು ಕನ್ನಡದ ಹೆಮ್ಮೆಯಾಗಿದೆ, ಓದುಗರ ಪುಣ್ಯ! ಖಗೋಳ ಕ್ಷೇತ್ರದ ವಿದ್ಯಮಾನಗಳ ಕುರಿತು ಬರೆಯುವ ವಿಜ್ಞಾನಿ ಡಾ. ಬಿ.ಎಸ್. ಶೈಲಜಾ, ವ್ಯಕ್ತಿಗತ ವಿಕಾಸ ಹಾಗೂ ಲೈಂಗಿಕತೆ ಪರಸ್ಪರ ಹಾಸುಹೊಕ್ಕಾಗಿರುವ ಕುರಿತು ‘ಸುಧಾ’ ವಾರಪತ್ರಿಕೆಯಲ್ಲಿ ವಿಪುಲವಾಗಿ ಬರೆಯುತ್ತಿರುವ ಸೈಕಿಯಾಟ್ರಿಸ್ಟ್ ಡಾ. ವಿನೋದ್ ಛಬ್ಬಿ ಕೆಲ ಅಪವಾದಗಳು.

ಜಿ ಟಿ ನಾರಾಯಣ ರಾವ್

ಜಿ ಟಿ ನಾರಾಯಣ ರಾವ್

ಯಾವುದೇ ಕ್ಷೇತ್ರದ ಸದ್ದು ಮಾಡುತ್ತಿರುವ-ಸುದ್ದಿಯೋಗ್ಯವಾದ ‘ಕತೆ’ಯನ್ನು ಪ್ರಮುಖವಾಗಿ ನಿರ್ವಹಿಸುವುದು ಪುರವಣಿಗೆ ಕಲಶಪ್ರಾಯ. ಮಾನವೀಯ ಸ್ಪರ್ಶ, ಸಂವೇದನಾಶಾಲಿ ಒಳನೋಟಗಳು, ಭಾಷಾ ಪ್ರೌಢಿಮೆ, ನೂತನ ಪದಪುಂಜ-ನುಡಿಗಟ್ಟುಗಳ ಪ್ರಯೋಗ, ಸೃಷ್ಟ್ಯಾತ್ಮಕ ತುಲನೆ, ಉಪಮೆ-ರೂಪಕ-ಉಕ್ತಿಗಳ ಬಳಕೆ, ಸಾಕಷ್ಟು ಸಂಶೋಧನೆಗಳಿಂದ ಮೂಡಿಬಂದ ಯಾವುದೇ ವಿಷಯ ಕುರಿತ ಲೇಖನದ ಓದು ಮುದಗೊಳಿಸುವಂಥದಾಗಿರುತ್ತದೆ. ಒಂದು ಪದ್ಯವನ್ನೋ-ಕತೆಯನ್ನೋ ಓದಿದಾಗ ಆಗುವ ಸಂತಸಕ್ಕೆ ಅದು ಸಂವಾದಿಯಾಗಿರುವುದು ಹೇಗೆಂದರೆ ಸಾಹಿತ್ಯಕ ಅಂಶಗಳನ್ನು ಧಾರಾಳವಾಗಿ ಎರವಲು ಪಡೆದುಕೊಂಡಿರುವುದರಿಂದ. Poetry is language heightened ಎನ್ನುವ ವ್ಯಾಖ್ಯೆ ಇದರ ಗುಟ್ಟು ಬಿಟ್ಟುಕೊಡಬಹುದು. (ಇತ್ತೀಚಿನ ವರ್ಷಗಳಲ್ಲಿ, ಆಹಾರ ತಜ್ಞ ಡಾ.ಸಿ.ರಘು ಬರೆಯುತ್ತಿರುವ ಲೇಖನಗಳನ್ನು ನೋಡಿದರೆ ಅದರ ಅನುಭವವಾಗುತ್ತದೆ).

ಒಟ್ಟಾರೆ ರಾಜಕೀಯ, ಸಾಹಿತ್ಯ, ಸಿನಿಮಾ, ಸಂಗೀತ, ಪುಸ್ತಕ ವಿಮರ್ಶೆ, ಸಮಾಜದ ಆಗುಹೋಗುಗಳಿಗೆ ಚುರುಕು-ಹರಿತ ಪ್ರತಿಕ್ರಿಯೆ ನೀಡಬಲ್ಲ ಪ್ರಜ್ಞಾವಂತರ ಅಂಕಣ ಬರಹಗಳು ಎಲ್ಲವನ್ನೂ ಒಳಗೊಂಡ ಒಂದು ಸಮೃದ್ಧ ಸಾಪ್ತಾಹಿಕ ಸಂಚಿಕೆ ಬಹುಶಃ ಉತ್ತಮ ಪತ್ರಿಕಾ ಪುರವಣಿ ಎನಿಸಿಕೊಳ್ಳಬಹುದು. ಆದರೆ ಬಿಟ್ಟೂಬಿಡದೆ ಅಲ್ಲಿ ಸಾಹಿತ್ಯಕ ವಿಷಯಗಳನ್ನು ಪ್ರಸ್ತುತಪಡಿಸುವುದು ಅತ್ಯಂತ ಅಪೇಕ್ಷಣೀಯ. ಲಂಕೇಶ್ ಇದನ್ನು ಮಾಡಿ ತೋರಿಸಿದ್ದರು. ಸಾಹಿತ್ಯಕ ಪರಿಮಳದ ಪುಟ್ಟ-ದೊಡ್ಡ ಸ್ಲಾಟ್‍ಗಳು ‘ಪತ್ರಿಕೆ’ ತುಂಬ ಹರಡಿಕೊಂಡಿರುತ್ತಿದ್ದವು. ಉತ್ತಮ ಸಾಹಿತ್ಯದ ಓದು ತರುವ ಬುದ್ಧಿ-ಭಾವಗಳ ವಿಕಾಸ, Quantm jump ಮಾಹಿತಿ ಕೋಷ್ಟಕಗಳು, ಗ್ರಾಫಿಕ್ ಪ್ರಸ್ತುತಿಗಳು, ಢಾಳಾದ ಡಿಸೈನಿಂಗ್‍ಗಳಿಂದ ಸರ್ವಥಾ ಸಾಧ್ಯವಿಲ್ಲ. ಯಾವಾಗ, ಹೇಗೆ, ಯಾರನ್ನು, ಏಕೆ ಅದು ಮೀಟುತ್ತದೆ ಎಂಬುದು ಅನೂಹ್ಯ. ಉದಾಹರಣೆಗೆ ‘ಪ್ರಜಾವಾಣಿ’ಯ ‘ಮುಕ್ತಛಂದ’ ಪುರವಣಿಯಲ್ಲಿ ಇದ್ದಕ್ಕಿದ್ದಂತೆ ಒಂದು ಸುಂದರ ಒಕ್ಕಣೆಯ ಬರಹ ಪ್ರಕಟವಾಯಿತು. ಜಯಂತ ಕಾಯ್ಕಿಣಿ ಮುಂಬೈ ಬಿಟ್ಟಮೇಲೆ ಅವರು ಸೃಷ್ಟಿಸಿದ ಪಾತ್ರಗಳು ಅಲ್ಲಿ ಹೇಗಿವೆ, ಏನು ಕಾರ್ಯಭಾರ ನಡೆಸಿವೆ ಎಂದು ಊಹಾತ್ಮಕವಾಗಿ ಚಿಂತಿಸಿ ಬರೆದ ಒಬ್ಬ ಅಭಿಮಾನಿ ಲೇಖಕಿಯ ಚೆಲುವಾದ ಅಭಿವ್ಯಕ್ತಿ ಕಾಯ್ಕಿಣಿಯವರ ಮಿಡಿವ ಬರೆವಣಿಗೆಯ ಸೂಕ್ಷ್ಮಗಳನ್ನೆಲ್ಲ ಪ್ರಾತಿನಿಧಿಕವಾಗಿ ಹೊಂದಿತ್ತು!

ಮೇಲೆ ಪ್ರಸ್ತಾಪಿಸಿದಂತೆ ‘ನಿರ್ಮೋಹಿ’ಗಳ ದಾಂಧಲೆ ಆಗಾಗ ನಡೆಯುತ್ತಲೇ ಇರುತ್ತದೆ. ‘ಪರೀಕ್ಷಾ ಮಾರ್ಗದರ್ಶಿ’ ಕೊಡಿ, ‘ಸಾಮಾನ್ಯ ಜ್ಞಾನ’ ಇರಲಿ, ‘ತಾಂತ್ರಿಕ ಮಾಹಿತಿ’ ಬೇಕು ಎಂದು ಅವರು ಮುಂದಿಡುವ ಬೇಡಿಕೆಗಳಿಗೆ ಬಲಿಬಿದ್ದರೆ ಪುರವಣಿಗಳು ವಿರೂಪಗೊಳ್ಳುತ್ತವೆ. ಸಾಂಸ್ಕøತಿಕ ಹೊಳಪು ಕಳೆದುಕೊಳ್ಳುತ್ತವೆ. ದಿನಕ್ಕೊಂದು ಪುರವಣಿ ಹೊರಬೀಳುತ್ತಿರುವ ಪ್ರಸ್ತುತ ದಿನಮಾನದಲ್ಲಿ ಯಥಾವತ್ ಸನ್ನಿವೇಶ. ತಮ್ಮ ಆದ್ಯತೆಗಳನ್ನು ಬದಲಿಸಿಕೊಂಡಿರುವ ಸಪ್ಲಿಮೆಂಟುಗಳು ದಿಕ್ಕು ಕಳೆದುಕೊಂಡ ನಾವೆಗಳಂತಾಗಿವೆ. ಹೊಸ ‘ಬಕೆಟ್ ಲಿಸ್ಟ್’ನಲ್ಲಿರುವ ಆಧ್ಯಾತ್ಮಿಕ, ಜೀವನಕೌಶಲ ಕೇಂದ್ರಿತ ಪುರವಣಿಗಳಿಗೆ ಆಯಾ ವಿಷಯಗಳಲ್ಲಿ ಹುದುಗಿರುವ ಅಪಾರ ಸಾಮಥ್ರ್ಯವನ್ನು ಬಳಸಿಕೊಳ್ಳಲು ಬೇಕಾದ ಉತ್ಕøಷ್ಟ ಲೇಖನಗಳ ಕೊರತೆ ಎದ್ದುಕಾಣುತ್ತದೆ. ನವಯುಗಕ್ಕೆ ತಕ್ಕನಾಗಿ, ಓದುಗರ ನಿರೀಕ್ಷೆಗಳನ್ನು ಪೂರೈಸಲು ಅಧಿಕ ಪುರವಣಿಗಳನ್ನು ಹೊರತರಲಾಗುತ್ತಿದೆ ಎಂಬ ಸಮರ್ಥನೆ ಮಾಡಿಕೊಂಡರೂ ಮುಖ್ಯ ಸಂಚಿಕೆಯ annexure – ಹೆಚ್ಚುವರಿ ಪುಟಗಳು ಎನ್ನಬಹುದಲ್ಲದೆ ‘ಪುರವಣಿ’ ಎಂದು ಅವುಗಳನ್ನು ಕರೆಯಲಾಗದು.

ಕೃಪೆ: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ೭೦ರ ಸಂಭ್ರಮದ ಸ್ಮರಣ ಸಂಚಿಕೆ


2 comments to “ಸರಿದುಹೋಯಿತೆ ಪುರವಣಿಗಳ ಪರ್ವಕಾಲ?”
  1. ಬಹಳ ಒಳ್ಳೆಯ ಬರಹ. ಚನ್ನಾಗಿದೆ. ಒಂದು ಕಾಲದಲ್ಲಿ ವಿಜಯ ಕರ್ನಾಟಕದ ಅಂಕಣಗಳಿಗಾಗಿ ಕಾದಿರುತ್ತಿದ್ದೆವು. ಅದಕ್ಕೆ ಮುಖ್ಯ ಕಾರನವು ಆ ಅಕಣಗಳು ವಿಸ್ತಾರವಾಗಿರುತ್ತಿದ್ದವು. ಉದಾಹರಣೆಗೆ ತಿರುಮಲೇಶರ ಲೇಖನಗಳು. ಅದೊಂದು ಹಬ್ಬವೇ ಸೈ. ಇನ್ನು ಪುರವಾಣಿಗಳಂತೂ ಅದ್ಬುತ. ಒಂದಿಷ್ಟು ದಿನ ವಿವೇಕ ಶಾನುಭಾಗರು ಹಾಗು ಒಂದಿಷ್ಟು ಜನರು ಪ್ರಜಾವಾಣಿಯ ಸಾಹಿತ್ಯಿಕ ಪುರವಾನಿಯನ್ನೇ ತರುತ್ತಿದ್ದರು. ಯಾವುದೋ ಕಾರಣಾಂತರಗಳಿಗೆ ನಿಂತು ಹೋಯಿತು. ಆ ಪುರವಾಣಿಯು ನಿಜಕ್ಕೂ ಸಂಗ್ರಹಯೋಗ್ಯವಾದದ್ದಾಗಿತ್ತು. ಆದರೆ ಅದು ನಿಂತು ಹೋದದ್ದು ಬೇಸರದ ಸಂಗತಿ.
    ನಿಜಕ್ಕೂ ಇಂದು ಅಂತಹ ದೀರ್ಘ ಬರಹಗಳು ಬಹಳ ಅಪರೂಪದ ಸಂಗತಿಗಳಾಗಿವೆ. ಈ ಸಮಯದಲ್ಲಿ ಆಂಗ್ಲ ಪತ್ರಿಕೆ ದಿ ಹಿಂದು ವನ್ನು ಸ್ಮರಿಸಬೇಕಾಗಿದೆ. ಪ್ರತಿ ಶನಿವಾರ ಅದು ಪ್ರಕಟಿಸುವ ಒಂದು ಇಡೀ ಪುಟದ ವಿಶೇಷ ಲೇಖನಗಳಂತೂ ಒಂದೊಂದೂ ಸಂಗ್ರಹ ಯೋಗ್ಯವಾದದ್ದು. ಏಕೆ ನಮ್ಮ ಕನ್ನಡ ಪತ್ರಿಕೆಗಳು ಈ ರೀತಿಯ ಬಗೆಗೆ ಚಿಂತಿಸುವುದಿಲ್ಲ ಎಂಬುದು ಬೇಸರದ ಸಂಗತಿ.

  2. ಈ ಲೇಖನ ಬಹಳ ವ್ಯಾಪಕವಾಗಿದೆ, ಚೆನ್ನಾಗಿದೆ. ಅಂದು ಇಂದುಗಳನ್ನು ನಿರ್ಮಮವಾಗಿ ಗಮನಿಸಿದೆ.
    ಎಚ್. ಎಸ್. ರಾಘವೇಂದ್ರ ರಾವ್

ಪ್ರತಿಕ್ರಿಯಿಸಿ