ಹಿಂದಿ ಭಾಷೆಯ ಕ್ಷಿಪ್ರ ಕ್ರಾಂತಿ

ಹಿಂದಿಯೇತರ ಪ್ರದೇಶಗಳ ತೀವ್ರ ಪ್ರತಿರೋಧದ ನಡುವೆಯೂ ಕೂಡ 1949 ರಲ್ಲಿ ನೂತನವಾಗಿ ರಚನೆಯಾದ ಸ್ವತಂತ್ರ ಭಾರತದ ಸಂವಿಧಾನ ರಚನಾ ಸಭೆ (Constituent Assembly) ಹಿಂದಿಯನ್ನು ಅಧಿಕೃತ ಭಾಷೆ ಎಂದು ಸ್ವೀಕರಿಸಿತು. ಹಿಂದಿಯ ಹೇರಿಕೆ ವಿವಾದ ಇಂದಿಗೂ ಕೂಡ ಭಾರತದ ಕೆಲವು ಭಾಗಗಳಲ್ಲಿ ಮುಂದುವರೆದಿದ್ದರೂ ಸಹಿತ ಸುಮಾರು 70 ವರ್ಷಗಳ ನಂತರ ಹಿಂದಿ ಭಾಷೆ ಬಹಳ ದೂರದವರೆಗೆ ಸಾಗಿದೆ ಎಂದು ಹೇಳಬಹುದು. ಒಂದು ಸ್ಥಳೀಯ ಉಪ ಭಾಷೆಯಾಗಿದ್ದಂತ ಹಿಂದಿ ಭಾಷೆ ಈಗ ಭಾರತದಲ್ಲಿ ಅಧಿಕ ಜನರು ಮಾತನಾಡುವ ಭಾಷೆಗಳಲ್ಲಿ ಒಂದಾಯಿತು ಎನ್ನುವುದು ನಿಜಕ್ಕೂ ಅದರ ರೋಚಕ ಕಥನ.

 

ಹಿಂದಿಯನ್ನು ಹೇರುವ ಕೆಲವು ಪ್ರಯತ್ನಗಳು ವಿವಾದವನ್ನು ಹುಟ್ಟು ಹಾಕಿದ್ದರೂ ಸಹ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆ ಜನರು ಹಿಂದಿ ಭಾಷೆಯಲ್ಲಿ ಮಾತನಾಡಲು ಮತ್ತು ಅರ್ಥೈಸಿಕೊಳ್ಳಲು ಸಾಧ್ಯವಾಗಿದೆ, ಇದರ ಶ್ರೇಯ ಹಿಂದಿ ಚಲನಚಿತ್ರರಂಗಕ್ಕೆ ಮತ್ತು ಅನೇಕ ಮನರಂಜನಾ ಚಾನೆಲ್ ಗಳಿಗೆ ಸಲ್ಲಬೇಕು. ಇನ್ನೊಂದು ಅಚ್ಚರಿಯ ಸಂಗತಿ ಏನೆಂದರೆ ಇಂದು ಹಿಂದಿ ಎಂದು ಕರೆಯುವ ಭಾಷೆ ಕೇವಲ 150 ವರ್ಷಗಳ ಹಿಂದೆ ದೆಹಲಿ ಮತ್ತು ಮೀರತ್ ಭಾಗಗಳಲ್ಲಿ ಬ್ರಜ್ ಭಾಷೆಯ ಉಪ ಭಾಷೆಯಾದ ಖಡಿ ಬೊಲಿ ಎಂದು ಕರೆಯಲಾಗುತ್ತಿತ್ತು. ಹಿಂದಿ ಭಾಷೆ ಬೆಳವಣಿಗೆ ಅಷ್ಟು ಸುಲಭವಾಗಿರದಿದ್ದರೂ ಕೂಡ ಅದರ ವೇಗ ತೀವ್ರಗತಿಯಲ್ಲಿತ್ತು. 1880 ರಿಂದ 1930 ರ ನಡುವೆ ಕೇವಲ 50 ವರ್ಷಗಳಲ್ಲಿ ಹಿಂದಿ ಭಾಷೆ ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಪಡೆಯಿತು.

ಹಿಂದವಿ ಅಥವಾ ಹಿಂದಿ ಎಂದು ಕರೆಯುವ ಈ ಭಾಷೆಯ ಆರಂಭಿಕ ಉಲ್ಲೇಖನವೂ 13ನೇ ಶತಮಾನದಷ್ಟು ಹಳೆಯದಾಗಿದೆ. ಖ್ಯಾತ ಕವಿ ಅಮೀರ್ ಖುಸ್ರೌ (ಕ್ರಿ.ಶ. 1253-1325) ದೆಹಲಿ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸುತ್ತಲೂ ಮಾತನಾಡುವ ಬ್ರಜ್ ಭಾಷಾ ಉಪಭಾಷೆಯಾದ ಹಿಂದವಿ / ಹಿಂದಿಯಲ್ಲಿ ಬರೆದಿದ್ದಾರೆ.19ನೇ ಶತಮಾನದವರೆಗೆ ಮೊಘಲ್ ಸಾಮ್ರಾಜ್ಯ ಹಾಗೂ ಇತರ ಅವದ್, ಜೈಪುರ್ ಮತ್ತು ಗ್ವಾಲಿಯರ್ ಆಸ್ತಾನದಲ್ಲಿ ಪರ್ಶಿಯನ್ ಭಾಷೆ ನ್ಯಾಯಾಲಯದ ಭಾಷೆಯಾಗಿ ಬಳಕೆಯಲ್ಲಿತ್ತು, ಇದಲ್ಲದೆ ಬ್ರಜ್ ಭಾಷಾ ಉಪಭಾಷೆಗಳಾದ ಹರಿಯಾನ್ವಿ (ಹರಿಯಾಣದಲ್ಲಿ), ಅವಧಿ (ಅವಧ್‌ನಲ್ಲಿ), ಬುಂದೇಲ್‌ಖಂಡಿ (ಬುಂದೇಲ್‌ಖಂಡ್‌ನಲ್ಲಿ) ಮತ್ತು ಹೀಗೆ ಅನೇಕ ಭಾಷೆಗಳು ಉತ್ತರ ಭಾರತಾದ್ಯಂತ ಪಸರಿಸಿದ್ದವು. ಹಿಂದಿ ಭಾಷೆ ಆಗ ತನ್ನ ಸ್ವಂತ ವ್ಯಾಕರಣದಿಂದ ರೂಪಿತವಾದ ಭಾಷೆಯಾಗಿರಲಿಲ್ಲ.

ಜಾನ್ ಬೋರ್ತ್ವಿಕ್ ಗಿಲ್ಕ್ರಿಸ್ಟ್ |Wikipedia Commons

19ನೇ ಶತಮಾನದಲ್ಲಿ ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪನಿಯ ಸ್ಕಾಟಿಷ್ ಶಸ್ತ್ರಚಿಕಿತ್ಸಕ ಮತ್ತು ಭಾಷಾಶಾಸ್ತ್ರಜ್ಞ ಜಾನ್ ಬೋರ್ತ್ವಿಕ್ ಗಿಲ್ಕ್ರಿಸ್ಟ್ (1759-1841) ನಿಂದಾಗಿ ಹಿಂದಿ ಭಾಷೆಯ ಹೊಸ ಅಧ್ಯಾಯ ತೆರೆದುಕೊಂಡಿತು.1784 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವೈದ್ಯಕೀಯ ಸೇವೆಗೆ ಸೇರಿದ ಅವರು ತಮ್ಮ ಪ್ರಯಾಣದ ಅವಧಿಯಲ್ಲಿ ಹಿಂದೂಸ್ತಾನಿ ಭಾಷೆ ಬಹುತೇಕವಾಗಿ ಉತ್ತರ ಭಾರತಾದ್ಯಂತ ಚಾಲ್ತಿಯಲ್ಲಿರುವುದನ್ನು ಗಮನಿಸಿದರು. ಇದಾದ ನಂತರ 1786 ರಲ್ಲಿ ಅವರು ‘ಎ ಡಿಕ್ಷನರಿ: ಇಂಗ್ಲಿಷ್ ಆಂಡ್ ಹಿಂದೂಸ್ತಾನಿ’ ಮತ್ತು ‘ಗ್ರಾಮರ್ ಆಫ್ ದಿ ಹಿಂದೂಸ್ತಾನಿ ಲಾಂಗ್ವೇಜ್’ ಕೃತಿಯನ್ನು ಪ್ರಕಟಿಸಿದರು. ಆಸಕ್ತಿಕರ ಸಂಗತಿ ಎಂದರೆ ದೇವನಾಗರಿ ಲಿಪಿಯಲ್ಲಿ ಪ್ರಕಟವಾದ ಆರಂಭಿಕ ಕೃತಿಗಳಲ್ಲಿ ಇದು ಒಂದು. ಇದನ್ನು ಮತ್ತೊಬ್ಬ ಇಂಡಾಲಜಿ ತಜ್ಞರಾದ ಚಾರ್ಲ್ಸ್ ವಿಲ್ಕಿನ್ಸ್ (1750-1836) ಅಭಿವೃದ್ಧಿಪಡಿಸಿದರು.

ಗಿಲ್ಕ್ರಿಸ್ಟ್ ಅವರ ಸಲಹೆಯ ಮೇರೆಗೆ, ಕ್ರಿ.ಶ 1800 ರಲ್ಲಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್-ಜನರಲ್, ಲಾರ್ಡ್ ವೆಲ್ಲೆಸ್ಲಿ ಅವರು ಭಾರತೀಯ ಅಧಿಕಾರಿಗಳಿಗೆ ಆಡಳಿತ ವ್ಯವಹಾರಗಳಲ್ಲಿ ತರಬೇತಿ ನೀಡಲು ಕಲ್ಕತ್ತಾದಲ್ಲಿ ಫೋರ್ಟ್ ವಿಲಿಯಂ ಕಾಲೇಜನ್ನು ಸ್ಥಾಪಿಸಿದರು. ಈ ಕಾಲೇಜಿನ ಮೊದಲ ಪ್ರಾಂಶುಪಾಲರಾಗಿದ್ದ ಗಿಲ್ಕ್ರಿಸ್ಟ್ ಅವರು ಹಿಂದಿಯನ್ನು ದೇವನಾಗರಿ ಲಿಪಿಯಲ್ಲಿ ಮತ್ತು ಉರ್ದು ಭಾಷೆಯನ್ನು ಅರೇಬಿಕ್ ಲಿಪಿಯಲ್ಲಿ ಕ್ರೋಡೀಕರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.18 ನೇ ಶತಮಾನದ ಉತ್ತರಾರ್ಧದಲ್ಲಿ ಆಧುನಿಕ ಮುದ್ರಣದ ಆಗಮನದಿಂದಾಗಿ ಹಿಂದಿ ಮತ್ತು ಮರಾಠಿಯಂತಹ ಭಾಷೆಗಳಲ್ಲಿ ದೇವನಾಗರಿ ಲಿಪಿಯನ್ನು ಬಳಸುವುದು ಸುಲಭದ ಕಾರ್ಯವಾಯಿತು. ಬಂಗಾಳದ ಸೆರಾಂಪೋರ್ ಮಿಷನ್ ಮುದ್ರಣಾಲಯ ಮತ್ತು ತಂಜಾವೂರಿನ ರಾಜಾ ಸೆರ್ಫೋಜಿ (1807 ರಲ್ಲಿ ಮಹಾರಟ್ಟ ಮುದ್ರಣಾಲಯವನ್ನು ಸ್ಥಾಪಿಸಿದರು) ಭಾರತದಲ್ಲಿ ದೇವನಾಗರಿ ಲಿಪಿ ಮುದ್ರಣದ ಪ್ರವರ್ತಕರಾಗಿದ್ದರು.

ಕಲ್ಕತ್ತಾದ ಫೋರ್ಟ್ ವಿಲಿಯಂ ಕಾಲೇಜು |Wikimedia Commons

ಹಿಂದಿ ಭಾಷೆಯು 1820 ರ ದಶಕದಿಂದ ಹೊಸ ಉತ್ತುಂಗಕ್ಕೆ ತಲುಪಲು ಆರಂಭಿಸಿತು. ಮೇ 30, 1826 ರಂದು ಹಿಂದಿ ಭಾಷೆ ಮೊದಲ ಪತ್ರಿಕೆ ‘ಉದಾಂತ್ ಮಾರ್ತಂಡ್’ ಕಲ್ಕತ್ತಾದಿಂದ ಪ್ರಕಟಿತವಾಯಿತು. ಆದರೆ ಚಂದಾದಾರರ ಕೊರತೆಯಿಂದಾಗಿ ತದನಂತರ ಪತ್ರಿಕೆ ಸ್ಥಗಿತಗೊಂಡಿತು. ಆದರೆ ಇಂದಿಗೂ ಕೂಡ ಮೇ 30ನ್ನು ಹಿಂದಿ ಪತ್ರಿಕೋದ್ಯಮ ದಿನ ( ಹಿಂದಿ ಪತ್ರಕಾರಿತಾ ದಿವಸ್) ಎಂದು ಆಚರಿಸಲಾಗುತ್ತದೆ. ಭಾಷಾಶಾಸ್ತ್ರಜ್ಞ ರೆವ್ ಆಡಮ್ ಅವರ ‘ಹಿಂದಿ ಭಾಷಾ ಕಾ ವ್ಯಾಕರಣ’ ಕೃತಿ 1827ರಲ್ಲಿ (ಹಿಂದಿ ಭಾಷೆಯ ವ್ಯಾಕರಣ) ಪ್ರಕಟಣೆಯಾಯಿತು. ಆರ್.ಕೆ.ಚೌಧರಿಯಂತಹ ಹಿಂದಿ ಭಾಷಾ ಇತಿಹಾಸಕಾರರು ಈ ಪುಸ್ತಕವನ್ನು 19ನೇ ಶತಮಾನದ ಹಿಂದಿ ಭಾಷೆಯ ಅತ್ಯಂತ ಪರಿಣಾಮಕಾರಿ ವ್ಯಾಕರಣ ಪುಸ್ತಕಗಳೆಂದು ಪರಿಗಣಿಸಿದ್ದಾರೆ. ಏಕೆಂದರೆ, ಶಾಲೆ ಮತ್ತು ಕಾಲೇಜಿನಲ್ಲಿ ಹಿಂದಿಯನ್ನು ಮೊದಲ ಭಾಷೆಯಾಗಿ ಕಲಿಯುವವರಿಗೆ ಇದನ್ನು ವ್ಯಾಕರಣ ಪುಸ್ತಕವಾಗಿ ಬಳಸಲಾಗುತ್ತದೆ. ಈ ಪುಸ್ತಕ ಹಿಂದಿ ಭಾಷೆಯನ್ನು ಔಪಚಾರಿಕವಾಗಿ ಕಲಿತ ಬಗೆ ಮತ್ತು ಅದನ್ನು ಲಿಖಿತವಾಗಿ ಬಳಸಿಕೊಂಡಿರುವ ವಿಧಾನದ ಬಗ್ಗೆ ಬೆಳಕು ಚೆಲ್ಲುತ್ತದೆ. ಇದಾದ ಎರಡು ವರ್ಷಗಳ ನಂತರ 1829 ರಲ್ಲಿ ರೆವ್ ಆಡಮ್ ಹಿಂದಿ ಭಾಷೆಯ ಮೊದಲ ಏಕಭಾಷಿಕ ನಿಘಂಟು ‘ಹಿಂದಿ ಶಬ್ಧಕೋಶ’ ವನ್ನು ಪ್ರಕಟಿಸಿದರು. ಈ ಎಲ್ಲ ಬೆಳವಣಿಗೆಗಳನ್ನು ನಾವು ಆಧುನಿಕ ಹಿಂದಿಯ ಆರಂಭಿಕ ಹಂತದ ಭಾಗವೆಂದು ಹೇಳಬಹುದು.

ಹಿಂದಿ ಭಾಷೆಯ ಮೊದಲ ಪತ್ರಿಕೆ ಉದಾಂತ್ ಮಾರ್ತಾಂಡ |Wikipedia Commons

ಆರಂಭದ ದಿನಗಳಲ್ಲಿ ಪತ್ರಿಕೋದ್ಯಮ ಮತ್ತು ಅದರ ಮೂಲಕ ಹಿಂದಿ ಹರಡುವಿಕೆಯು ಹಿಂದಿ ಭಾಷೆಯ ಬೆಳವಣಿಗೆಯನ್ನು ಉತ್ತೇಜಿಸಿತು, ಇದರ ನಂತರದ ಹಿಂದಿ ಭಾಷೆಯ ಅಭಿವೃದ್ದಿ ಹಂತವು ರಾಜಕೀಯ ಮೇಲಾಟದ ಮೂಲಕ ರೂಪುಗೊಂಡಿತು ಎಂದು ಹೇಳಬಹುದು.

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಪರ್ಷಿಯನ್ ಭಾಷೆಯನ್ನು 1830 ರ ದಶಕದಿಂದ, ಭಾರತದ ವಿವಿಧ ಪ್ರದೇಶಗಳಲ್ಲಿ ಸ್ಥಳೀಯ ಭಾಷೆಗಳೊಂದಿಗೆ ಬದಲಾಯಿಸಲು ಪ್ರಾರಂಭಿಸಿತು.ಇಂದು ಹಿಂದಿ ಬೆಲ್ಟ್ (ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ) ಎಂದು ಕರೆಯಲ್ಪಡುವ ಪ್ರದೇಶಗಳಲ್ಲಿ ಪರ್ಷಿಯನ್ ಭಾಷೆಯನ್ನು ಉರ್ದು ಬದಲಿಗೆ ಜಾರಿಗೊಳಿಸಲಾಯಿತು.ಇನ್ನೊಂದೆಡೆಗೆ 1860 ರ ದಶಕದಿಂದ ಉರ್ದುವಿನ ಸ್ಥಾನದಲ್ಲಿ ಹಿಂದಿ ಭಾಷೆಯನ್ನು ತರಲು ಹಲವಾರು ಸಂಘಟನೆಗಳು ಚಳುವಳಿಯನ್ನು ಪ್ರಾರಂಭಿಸಿದವು. ಇದರಿಂದಾಗಿ ಮುಂದೆ ಇದು ಉರ್ದು-ಹಿಂದಿ ವಿವಾದಕ್ಕೆ ಕಾರಣವಾಯಿತು. ಸಂಸ್ಕೃತೀಕರಿಸಿದ ಹಿಂದಿಯನ್ನು ಹಿಂದೂಗಳ ಭಾಷೆ ಎಂದು ಮತ್ತು ಪರ್ಷಿಯನ್ ಉರ್ದುವನ್ನು ಮುಸ್ಲಿಮರ ಭಾಷೆ ಎಂದು ವಾದಿಸಲಾಯಿತು. ಕೆಲವರು ಇದನ್ನು ಕೃತಕವಾಗಿ ವಿಭಜಿಸಲ್ಪಟ್ಟ ಒಂದೇ ಭಾಷೆ ಎಂದು ವಾದಿಸಿದರು. ಆದರೆ ಇಂದಿಗೂ ಕೂಡ ಈ ಉರ್ದು-ಹಿಂದಿ ವಿವಾದ ಮಾತ್ರ ಇನ್ನೂ ಹಾಗೆ ಮುಂದುವರೆದಿದೆ.

ಭಾರತೀಯ ಶಿಕ್ಷಣದ ಪ್ರಗತಿಯನ್ನು ಪರಿಶೀಲಿಸಲು ಭಾರತೀಯ ಶಿಕ್ಷಣ ಆಯೋಗವು 1882ರಲ್ಲಿ (Indian Education Commission) ಉತ್ತರ ಪ್ರದೇಶ ಮತ್ತು ಪಂಜಾಬ್‌ಗಳಲ್ಲಿ ಪ್ರವಾಸ ಕೈಗೊಂಡಾಗ ಹಿಂದಿ ಭಾಷೆಯ ಚಳುವಳಿಯು ಇನ್ನೂ ಉತ್ತುಂಗಕ್ಕೇರಿತು.1883 ರಲ್ಲಿ ಬಂದಂತಹ ಭಾರತೀಯ ಶಿಕ್ಷಣ ಆಯೋಗದ ‘review the progress of education in India ಎನ್ನುವ ವರದಿಯಲ್ಲಿ ಉರ್ದು ಬದಲಿಗೆ ಹಿಂದಿ ಜಾರಿಗೆ ತರಬೇಕು ಎನ್ನುವ ಬೇಡಿಕೆಯನ್ನು ತಿರಸ್ಕರಿಸಿದ್ದರಿಂದ ಬಹುತೇಕ ಹಿಂದಿ ಭಾಷಾ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ತದನಂತರ ಹಿಂದಿ ಕಾರ್ಯಕರ್ತರು ಆಯೋಗಕ್ಕೆ ತಮ್ಮ ಬೇಡಿಕೆಯನ್ನು ಸಾರಲು ಸಾವಿರಾರು ಮನವಿ ಪತ್ರಗಳನ್ನು ಸಲ್ಲಿಸಿದರು.

ಇದೇ ಅವಧಿಯಲ್ಲಿ ಆಧುನಿಕ ಹಿಂದಿ ಭಾಷೆಯ ಸ್ಪೂರ್ತಿಯ ಚಿಲುಮೆಯಾಗಿ ಬನಾರಸ್ ನಗರ ಹೊರಹೊಮ್ಮಿತು. ಇದಕ್ಕೆ ಪೂರಕವಾದ ಎರಡು ಅಂಶಗಳು ಇದರಲ್ಲಿವೆ. ಮೊದಲನೆಯದಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿಂದಿ ಮಾತಾಡುವ ವಿದ್ಯಾವಂತ ಮಧ್ಯಮ ವರ್ಗ ಮತ್ತು ಆಗತಾನೆ ಉತ್ತುಂಗಕ್ಕೆ ತಲುಪುತ್ತಿದ್ದ ಪ್ರಕಾಶನ ಉದ್ಯಮದ ಉಪಸ್ಥಿತಿ ಪ್ರಭಾವ ಇದಕ್ಕೆ ಕಾರಣ ಎನ್ನಬಹುದು.ಹಿಂದಿ ಭಾಷಾ ಕಾರ್ಯಕರ್ತರು ಸ್ಥಳೀಯ ಶೈಕ್ಷಣಿಕ ಮಂಡಳಿಗಳು ಮತ್ತು ಶಾಲಾ ಪಠ್ಯಪುಸ್ತಕ ಪ್ರಕಾಶಕರನ್ನು ಪಠ್ಯಕ್ರಮದಲ್ಲಿ ಹಿಂದಿ ಭಾಷೆಯನ್ನು ಸೇರಿಸಲು ಲಾಬಿ ಮಾಡುತ್ತಿದ್ದರು. ವಾಸ್ತವವಾಗಿ ಎಲ್ಲ ಕಾರ್ಯಕರ್ತರಲ್ಲಿ ಬಹುತೇಕರು ಸ್ಥಳೀಯ ಶಾಲಾ ಶಿಕ್ಷಕರಾಗಿದ್ದರು ಎನ್ನುವುದು ಗಮನಾರ್ಹ ಸಂಗತಿ.

ಆಧುನಿಕ ಹಿಂದಿ ಸಾಹಿತ್ಯದ ಪಿತಾಮಹ ಭರತೆಂದು ಹರಿಶ್ಚಂದ್ರ |Wikimedia Commons

ಆಧುನಿಕ ಹಿಂದಿ ಭಾಷೆಯ ಆರಂಭಿಕ ಕರ್ತೃಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಭರತೆಂದು ಹರಿಶ್ಚಂದ್ರ (1850-1885) ಅವರನ್ನು ಆಧುನಿಕ ಹಿಂದಿ ಸಾಹಿತ್ಯ ಮತ್ತು ಹಿಂದಿ ರಂಗಭೂಮಿಯ ಪಿತಾಮಹ ಎಂದು ಕರೆಯಲಾಗುತ್ತದೆ. ಭರತೆಂದು ಹರಿಶ್ಚಂದ್ರ 1877ರಲ್ಲಿ ತಮ್ಮ ‘ಹಿಂದಿ ಕಿ ಉನ್ನತಿ ಪೆ ವ್ಯಾಕ್ಯಾನ್’ ಎಂಬ ಅಪ್ರತಿಮ ಭಾಷಣದಲ್ಲಿ ಅವರು ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಲು ಒತ್ತಾಯಿಸುತ್ತಾರೆ. ಮುಂದೆ ಭರತೇಂದು ಅವರು 1885 ರಲ್ಲಿ ತಮ್ಮ 35 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಇಷ್ಟು ಸಣ್ಣ ವಯಸ್ಸಿನಲ್ಲಿ ಅವರು ನಿಧನರಾದರೂ ಕೂಡ ಹಿಂದಿ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಗಮನಾರ್ಹವಾದುದು, ಹಿಂದಿ ಸಾಹಿತ್ಯಕ್ಕೆ ನೀಡಿರುವ ಅವರ ಕೊಡುಗೆಯನ್ನು ಪರಿಗಣಿಸಿ ಅವರ ಅವಧಿಯನ್ನು ಭರತೇಂದು ಯುಗ ಎಂದು ಕರೆಯಲಾಗುತ್ತದೆ. ಹಿಂದಿ ಭಾಷೆಗೆ ಅವರು ಸಮರ್ಪಿಸಿದ ದೋಹಾ ಇಂದಿಗೂ ಕೂಡ ಹಿಂದಿಯಲ್ಲಿ ಅನುರಣಗೊಳ್ಳುತ್ತದೆ.

  • निज भाषा उन्नति अहै, सब उन्नति को मूल, बिन निज भाषा ज्ञान के, मिटन न हिय के सूल’।

(ಸ್ವಭಾಷೆಯಲ್ಲಿನ ಪ್ರಗತಿಯು ಎಲ್ಲಾ ಪ್ರಗತಿಗೂ ಮೂಲವಾಗಿದೆ; ನಿಮ್ಮ ಸ್ವಂತ ಭಾಷೆಯ ಜ್ಞಾನವಿಲ್ಲದೆ ಹೋದಲ್ಲಿ, ನಿಮ್ಮ ಹೃದಯದ ಸಮಸ್ಯೆಗಳನ್ನು ಸಹ ಪರಿಹರಿಸುವುದು ಅಸಾಧ್ಯ)

ಹಿಂದಿ ಕಾದಂಬರಿಗಳ ಸಂಖ್ಯೆಯೂ 1880 ರ ದಶಕದಲ್ಲಿ ಹೆಚ್ಚಳವಾಯಿತು, ಇದರಲ್ಲಿ ಪ್ರಮುಖವಾದ ಕಾದಂಬರಿ ಎಂದರೆ ದೇವಕಿ ನಂದನ್ ಖತ್ರಿ ಅವರ ಚಂದ್ರಕಾಂತ ಎನ್ನಬಹುದು. ಇದು ವೀರ ಯೋಧರು, ರಾಜಕುಮಾರಿಯರು ಮತ್ತು ಗೂಢಚಾರರ ಕುರಿತಾದ ಒಂದು ಕಾಲ್ಪನಿಕ ಕಾದಂಬರಿಯಾಗಿದೆ, ಈ ಕಾದಂಬರಿ ಹಿಂದಿಯಲ್ಲಿ ಎಷ್ಟು ಜನಪ್ರಿಯವಾಯಿತೆಂದರೆ ಈ ಕಾದಂಬರಿಯನ್ನು ಓದಲಿಕ್ಕಾಗಿಯೇ ಜನರು ದೇವನಾಗರಿ ಲಿಪಿಯನ್ನು ಕಲಿತಿದ್ದರು ಎಂದು ಹೇಳಲಾಗುತ್ತದೆ.

ಚಂದ್ರಕಾಂತ್ ಹಿಂದಿಯ ಮೊದಲ ಫಾಂಟಸಿ ಕಾದಂಬರಿ| Amazon

ಬನಾರಸ್‌ನಲ್ಲಿ 1893ರಲ್ಲಿ ‘ನಗರಿ ಪ್ರಚಾರಿಣಿ ಸಭಾ’ ಸ್ಥಾಪನೆಯಾಯಿತು, ಇದು 20ನೇ ಶತಮಾನದಲ್ಲಿ ಹಿಂದಿ ಭಾಷೆಯ ಪ್ರಚಾರಕ್ಕಾಗಿ ಪ್ರಾರಂಭವಾದ ಅತ್ಯಂತ ಪ್ರಭಾವಶಾಲಿ ಸಂಘಟನೆಯಾಗಿ ಹೊರಹೊಮ್ಮಿತು. ಈ ಸಂಸ್ಥೆ ಹಿಂದಿ ಪಠ್ಯಪುಸ್ತಕಗಳನ್ನು ತಯಾರಿಸಿತು ಮತ್ತು ಅನೇಕ ಹಿಂದಿ ಕ್ಲಾಸಿಕ್‌ ಕೃತಿಗಳನ್ನು ಪ್ರಕಟಿಸಿತು. ಭಾರತದಲ್ಲಿಯೇ ಸುಸಜ್ಜಿತ ಹಿಂದಿ ಗ್ರಂಥಾಲಯಗಳನ್ನು ನಿರ್ಮಿಸಿದ್ದಲ್ಲದೇ ಮತ್ತು ವಿಶೇಷ ವಿದ್ವಾಂಸರ ವಿಶಾಲ ಜಾಲವನ್ನು ಸ್ಥಾಪಿಸಿತು. ಆಡಳಿತದಲ್ಲಿ ಹಿಂದಿ ಬಳಕೆಗಾಗಿ ಸ್ಥಳೀಯ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಇದು ಒಂದು ರೀತಿಯಲ್ಲಿ ಲಾಬಿ ಗುಂಪಾಗಿ ಕಾರ್ಯನಿರ್ವಹಿಸಿತು.

20ನೇ ಶತಮಾನದ ಆರಂಭದಲ್ಲಿ ಹಿಂದಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿತು. ಅಲಹಾಬಾದ್‌ನಲ್ಲಿ 1910 ರಲ್ಲಿ ‘ಹಿಂದಿ ಸಾಹಿತ್ಯ ಸಮ್ಮೇಳನ್’ ಸ್ಥಾಪನೆಯಾಯಿತು. ಇದು ಹಿಂದಿ ಕಾರ್ಯಕರ್ತರು ಮತ್ತು ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರೂ ಅವರಂತಹ ರಾಷ್ಟ್ರೀಯ ನಾಯಕರ ನಡುವೆ ಪ್ರಬಲ ಲಾಬಿ ಗುಂಪಾಗಿ ಮತ್ತು ಮುಖ್ಯ ಸೇತುವೆಯಾಗಿ ಕಾರ್ಯನಿರ್ವಹಿಸಿತು.ಯುರೋಪಿನಲ್ಲಿ ಮೊದಲನೆಯ ಜಾಗತಿಕ ಮಹಾಯುದ್ಧ ಮತ್ತು ಸ್ವಾತಂತ್ರ್ಯ ಚಳವಳಿಯಿಂದಾಗಿ ಹಿಂದಿ ಪ್ರಕಟಣೆಗಳಿಗೆ ಹೆಚ್ಚಿನ ಬೇಡಿಕೆ ಬಂದಿತು, ಇದರ ಪರಿಣಾಮವಾಗಿ ಅದು ಭಾರತದ ಬೃಹತ್ ನಗರಗಳನ್ನು ಮೀರಿದ ಅಧಿಕ ಸಂಖ್ಯೆಯ ಓದುಗರ ವರ್ಗವನ್ನು ಸೃಷ್ಟಿಸಿತು.

1920ರ ದಶಕದಿಂದ ಹಿಂದಿ ಪತ್ರಿಕಾ ಮತ್ತು ಸಾಹಿತ್ಯದಲ್ಲಿ ಮಹಿಳೆಯರ ಧ್ವನಿಗೆ ಕೂಡ ಮಹತ್ವ ಬಂದಿತು, ಅದು ಅಲ್ಲಿಯವರೆಗೆ ಪುರುಷ ಪ್ರಾಧಾನ್ಯ ಕ್ಷೇತ್ರವಾಗಿತ್ತು. ಇತಿಹಾಸಕಾರ ಫ್ರಾನ್ಸೆಸ್ಕಾ ಒರ್ಸಿನಿ ತನ್ನ ‘Hindi Public Domain 1920-1940 (2009) ಎಂಬ ಕೃತಿಯಲ್ಲಿ ಆ ಕಾಲದಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಹೇಗೆ ಶಿಕ್ಷಣ ಪಡೆಯಲು ಆರಂಭಿಸಿದ್ದರು ಎಂಬುದರ ಬಗ್ಗೆ ಬರೆಯುತ್ತಾರೆ, ‘ಭಾರತೀಯ ಸಂಸ್ಕೃತಿಯೊಂದಿನ ಸಂಬಂಧದಿಂದಾಗಿ ಹಿಂದಿಯು ಮಹಿಳೆಯರ ಶಿಕ್ಷಣಕ್ಕೆ ಒಂದು ಆದರ್ಶ ಭಾಷೆಯಾಗಿ ರೂಪುಗೊಂಡಿತು. ಆಗಿನ ಕಾಲಘಟ್ಟದಲ್ಲಿ ಸಾಮಾನ್ಯವಾಗಿ ಹುಡುಗರು ಉದ್ಯೋಗಕ್ಕಾಗಿ ಇಂಗ್ಲಿಷ್ ಮತ್ತು ಉರ್ದು ಭಾಷೆಯಲ್ಲಿ ಶಿಕ್ಷಣ ಪಡೆದರೆ, ಹುಡುಗಿಯರು ಸಾಮಾನ್ಯವಾಗಿ ಹಿಂದಿಯಲ್ಲಿ ಶಿಕ್ಷಣ ಪಡೆಯುತ್ತಿದ್ದರು’ ಎಂದು ಉಲ್ಲೇಖಿಸಿದ್ದಾರೆ.

ಮಹಾವೀರ ಪ್ರಸಾದ್ ದ್ವಿವೇದಿ (1864-1938)

ಉನ್ನತ ಶಿಕ್ಷಣ ಪಡೆದ ಮಹಿಳೆಯರ ಸಂಖ್ಯೆಯ ಹೆಚ್ಚಳದಿಂದಾಗಿ ತಮ್ಮದೇ ಅನೇಕ ಹಿಂದಿ ಪ್ರಕಟಣೆಗಳು ಹೊರಹೊಮ್ಮಿದವು.ಇವುಗಳಲ್ಲಿ ಗೃಹಲಕ್ಷ್ಮಿ (1909), ಶ್ರೀ ದರ್ಪಣ (1909), ಆರ್ಯ ಮಹಿಳಾ (1917), ಚಂದ್ (1922) ಮತ್ತು ಮಾಧುರಿ (1922) ಸೇರಿವೆ. ಯಾರ್ಕ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಶೋಭನಾ ನಿಜವನ್ ಅವರು ‘Women and Girls in the Hindi Public Sphere’ ಎನ್ನುವ ಪುಸ್ತಕದಲ್ಲಿ ಸಾಹಿತ್ಯದಲ್ಲಿ ಮಹಿಳೆಯರು ಹೇಗೆ ಬದಲಾವಣೆಯನ್ನು ತಂದರು ಎನ್ನುವುದರ ಕುರಿತು ಪ್ರಸ್ತಾಪಿಸಿಸುತ್ತಾರೆ. ಈ ಹಿಂದಿನ ಸಾಹಿತ್ಯದಲ್ಲಿ ಮಧ್ಯಮ ವರ್ಗದ ಮಹಿಳೆಯರಿಗೆ ನೀಡುತ್ತಿದ್ದ ಪ್ರಾಯೋಗಿಕ ಅಥವಾ ನೈತಿಕ ಸಲಹೆಗಳನ್ನಷ್ಟೇ ಅಲ್ಲದೆ ಅದಕ್ಕಿಂತ ಹೆಚ್ಚಾಗಿ ಅವರು ಭಾರತ ಮತ್ತು ಜಾಗತಿಕ ರಾಜಕೀಯ ಸುದ್ದಿಗಳು ಮತ್ತು ಸಾಮಾಜಿಕ ಸುಧಾರಣೆಗಳ ಬಗ್ಗೆ ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಆರಂಭಿಸಿದರು. ಸ್ತ್ರೀದರ್ಪಣ್ ಎನ್ನುವ ನಿಯತಕಾಲಿಕೆ ತನ್ನ ಜಾಹಿರಾತುವಿನಲ್ಲಿ ‘ಧರ್ಮದ ಜೊತೆಗೆ ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ತಿಳಿಸುವ ಏಕೈಕ ನಿಯತಕಾಲಿಕೆಯಾಗಿದೆ. ಏಕೆಂದರೆ ಪತಿಯಂದಿರು, ಸಹೋದರರು ಮತ್ತು ತಂದೆಯರು ಮಹಿಳೆಯರನ್ನು ಪ್ರಾಣಿಗಳಂತೆ ನೋಡಿಕೊಳ್ಳುವಾಗ ದೇಶದ ಕಲ್ಯಾಣ ಅವರಿಂದ ಸಾಧ್ಯವಿಲ್ಲ’ ಎಂದು ಪ್ರಕಟಿಸಿತ್ತು.

ಸ್ತ್ರೀ ದರ್ಪಣ್ (1909) ರಾಮೇಶ್ವರಿ ನೆಹರು ಅವರು ಸಂಪಾದಿಸಿದ ಆರಂಭದಲ್ಲಿನ ಮಹಿಳಾ ಪ್ರಕಟಣೆ

1920 ಮತ್ತು 30 ರ ದಶಕವನ್ನು ‘ಹಿಂದಿ ಸಾಹಿತ್ಯದ ಸುವರ್ಣಯುಗ’ ಎಂದು ಕರೆಯಲಾಗುತ್ತದೆ. ಮುನ್ಶಿ ಪ್ರೇಮ್‌ಚಂದ್, ಮೈಥಿಲಿ ಶರಣ್ ಗುಪ್ತಾ, ಜೈಶಂಕರ್ ಪ್ರಸಾದ್, ಮಹಾದೇವಿ ವರ್ಮಾ, ಸುಭದ್ರಾ ಕುಮಾರಿ ಚೌಹಾನ್ ಮತ್ತು ಇನ್ನೂ ಅನೇಕ ಕವಿಗಳ ಯುಗ ಇದಾಗಿದೆ. ಆಗ ಪ್ರಮುಖ ಹಿಂದಿ ಸಾಹಿತಿಯಾಗಿದ್ದ ಮುನ್ಷಿ ಪ್ರೇಮಚಂದ್ರ ಅವರು ತಮ್ಮ ಉಳಿದೆಲ್ಲ ಸಾಹಿತಿ ಮಿತ್ರರಿಗಿಂತ ಭಾಷೆಯ ವಿಚಾರದಲ್ಲಿ ಭಿನ್ನ ನಿಲುವು ತಾಳಿದರು, ಅವರು ಸಂಸ್ಕೃತೀಕರಿಸಿದ ಹಿಂದಿಯನ್ನು ವಿರೋಧಿಸಿ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆ ಮುಖ್ಯ ಎಂದು ವಾದಿಸಿದರು.

ಮುನ್ಷಿ ಪ್ರೇಮಚಂದ (1886-1936) |Creative Commons

ಹಲವು ಪ್ರಭಾವಿ ನಾಯಕರ ವ್ಯಾಪಕ ಬೆಂಬಲದಿಂದಾಗಿ ಆಗಲೇ ಹಿಂದಿ ರಾಜಕೀಯವಾಗಿಯೂ ರಂಗ ಪ್ರವೇಶವನ್ನು ಮಾಡಿತು. ಆಗಿನ ಕಾಂಗ್ರೆಸ್ ನಾಯಕರು ಕೂಡ ಹಿಂದಿ ಬುದ್ದಿಜೀವಿಗಳನ್ನು ಮೆಚ್ಚಿಸುವ ನಿಟ್ಟಿನಲ್ಲಿ ಭಾರತದಾದ್ಯಂತ ನಡೆದ ಹಿಂದಿ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡರು. 1947ರ ಭಾರತದ ವಿಭಜನೆ ಸಂದರ್ಭದಲ್ಲಿ ಅಂತಿಮವಾಗಿ ಹಿಂದಿ ಪರವಾಗಿ ನಿಲ್ಲುವುದರ ಮೂಲಕ ಹಿಂದಿ-ಉರ್ದು ವಿವಾದವನ್ನು ಇತ್ಯರ್ಥಪಡಿಸಲಾಯಿತು.

ಹಿಂದಿಯೇತರ ಪ್ರದೇಶಗಳ ತೀವ್ರ ಪ್ರತಿರೋಧದ ನಡುವೆಯೂ ಕೂಡ 1949 ರಲ್ಲಿ ನೂತನವಾಗಿ ರಚನೆಯಾದ ಸ್ವತಂತ್ರ ಭಾರತದ ಸಂವಿಧಾನ ರಚನಾ ಸಭೆ (Constituent Assembly) ಹಿಂದಿಯನ್ನು ಅಧಿಕೃತ ಭಾಷೆ ಎಂದು ಸ್ವೀಕರಿಸಿತು. ಹಿಂದಿಯ ಹೇರಿಕೆ ವಿವಾದ ಇಂದಿಗೂ ಕೂಡ ಭಾರತದ ಕೆಲವು ಭಾಗಗಳಲ್ಲಿ ಮುಂದುವರೆದಿದ್ದರೂ ಸಹಿತ ಸುಮಾರು 70 ವರ್ಷಗಳ ನಂತರ ಹಿಂದಿ ಭಾಷೆ ಬಹಳ ದೂರದವರೆಗೆ ಸಾಗಿದೆ ಎಂದು ಹೇಳಬಹುದು. ಒಂದು ಸ್ಥಳೀಯ ಉಪ ಭಾಷೆಯಾಗಿದ್ದಂತ ಹಿಂದಿ ಭಾಷೆ ಈಗ ಭಾರತದಲ್ಲಿ ಅಧಿಕ ಜನರು ಮಾತನಾಡುವ ಭಾಷೆಗಳಲ್ಲಿ ಒಂದಾಯಿತು ಎನ್ನುವುದು ನಿಜಕ್ಕೂ ಅದರ ಅದ್ಬುತ ಕಥನವಾಗಿದೆ. ಆಗಿನ ಸಂದರ್ಭದಲ್ಲಿ ದೇಶದ ನಾಡಿ ಮಿಡಿತವನ್ನು ಗುರುತಿಸಿ ಹಿಂದಿ ಭಾಷೆಯ ಬೆಳವಣಿಗೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಜನರಿಗೆ ಇದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಬೇಕು.


ಕನ್ನಡಕ್ಕೆ : ಮಂಜುನಾಥ ನರಗುಂದ

ಕೃಪೆ :  ಇದನ್ನು livehistoryindia.com ದಲ್ಲಿ ಪ್ರಕಟವಾದ Hindi’s Meteoric Rise ಎನ್ನುವ ಇಂಗ್ಲೀಷ್ ಲೇಖನದಿಂದ ಕನ್ನಡಕ್ಕೆ ಅನುವಾದಿಸಲಾಗಿದೆ.

ಪ್ರತಿಕ್ರಿಯಿಸಿ