ಜಾತ್ಯತೀತತೆಯು ಧಾರ್ಮಿಕ ಭಾಷೆಯನ್ನು ಬಿಟ್ಟುಕೊಟ್ಟಿದ್ದರ ಫಲವೇ ಅಯೋಧ್ಯೆಯ ಭೂಮಿಪೂಜೆ.

“ದ ಪ್ರಿಂಟ್” ಗೆ ಯೋಗೆಂದ್ರ ಯಾದವ್ ಬರೆದ ಲೇಖನದ ಕನ್ನಡ ಅನುವಾದ ಇಲ್ಲಿದೆ. ಅಯೋಧ್ಯೆಯ ಭೂಮಿಪೂಜೆಯನ್ನು ಗಮನದಲ್ಲಿಟ್ಟುಕೊಂಡು ಅವರು ಅದರ ಸುತ್ತಲಿನ ಹೊಸಭಾರತದ ರಾಜಕಾರಣವನ್ನು ಪರೀಕ್ಷಿಸಲು ಪ್ರಯತ್ನಿಸಿದ್ದಾರೆ. 

ಅಯೋಧ್ಯೆ ಮತ್ತು ಕಾಶ್ಮೀರದಲ್ಲಿ  ಜಯಗಳಿಸಿದ್ದಕ್ಕೆ ಹಿಂದೂರಾಷ್ಟ್ರದ ಬೆಂಬಲಿಗರಿಗೆ ಮನ್ನಣೆ ನೀಡಬೇಡಿ, ಅವರು ಭಾರತದ ಜಾತ್ಯಾತೀತ ರಾಜಕೀಯದ ವಿಫಲತೆಯ ಫಲಾನುಭವಿಗಳು ಮಾತ್ರ.

ಆಗಸ್ಟ್‌ ೫, ೨೦೨೦ರಂದು ಭಾರತದಲ್ಲಿ ಜಾತ್ಯಾತೀತತೆಯು ಕೊನೆಯಾಯಿತೆಂದು ಭವಿಷ್ಯದ ಇತಿಹಾಸಕಾರರು  ದಾಖಲಿಸಬಹುದು. ರೋಗಿಯು ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿದ್ದ ಮತ್ತು ಮೂರು ದಶಕದಿಂದ ರೋಗ ಹೆಚ್ಚು ಉಲ್ಬಣವಾಗಿದೆ ಎಂದು ನಿಸ್ಸಂದೇಹವಾಗಿ ಅವರು ಉಲ್ಲೇಖಿಸುತ್ತಾರೆ. ಬಿ.ಜೆ.ಪಿ, ಆರ್.ಎಸ್.ಎಸ್‌ ಮತ್ತು ಅದರ ಅಂಗಸಂಸ್ಥೆಗಳು ಈ ಗಾಯ ಮಾರಕವಾಗುವ ದಿಕ್ಕಿನಲ್ಲಿ ಪ್ರಯತ್ನ ಮಾಡಿದ ದಿನಾಂಕಗಳನ್ನು ಸಹ ಅವರು ಗುರುತಿಸುತ್ತಾರೆ. ಆದರೆ ಆ ಇತಿಹಾಸಕಾರರು ಹೇಳುವ ಮುಖ್ಯ ಮಾತೆಂದರೆ- ಜಾತ್ಯಾತೀತತೆಯ ಶವಪೆಟ್ಟಿಗೆ ಕೊನೆಯ ಮೊಳೆ ಹೊಡೆದದ್ದು ಮಾತ್ರ ಬಿ. ಜೆ. ಪಿ ಅಲ್ಲ.

ಇಂದು ಜಾತ್ಯಾತೀತತೆಯು ಕೊನೆಯಾಯಿತು ಎನ್ನಲು ಆಯೋಧ್ಯೆಯಲ್ಲಿ ನಡೆದ ಭೂಮಿಪೂಜೆ ಮಾತ್ರ ಕಾರಣವಲ್ಲ. ಯಾವುದೇ ದೇವಾಲಯ, ಗುರುದ್ವಾರ, ಚರ್ಚ್‌, ಮಸೀದಿಯ ನಿರ್ಮಾಣವು ದು:ಖಕ್ಕೆ ಕಾರಣವಾಗಬಾರದು. ಜಾತ್ಯಾತೀತ ರಾಜ್ಯವು ನಿರ್ಮಾಣವಾಗುವುದಾದರೆ  ಅಲ್ಲಿ ಸಾವುಗಳಾಗಬಾರದು. ಬೃಹತ್‌ ದೇವಾಲಯಗಳಲ್ಲಿ,  ವಿಶೇಷವಾಗಿ ಶ್ರೀರಾಮನಿಗೆ ಸಂಬಂಧಪಟ್ಟ ಅಯೋಧ್ಯೆಯಲ್ಲಿ ಈ ರೀತಿಯ ಪೂಜೆಯು  ಸಾಮಾನ್ಯ ಸಂಗತಿಯಾಗಬೇಕು.  ಗುರುನಾನಕರ ಜನಿಸಿದ ಸ್ಥಳದಲ್ಲಿ ಯಾತ್ರಿಕರ ದಾರಿಯೊಂದನ್ನು ನಿರ್ಮಿಸಿದಷ್ಟೆ ಸಹಜಕ್ರಿಯೆ ಇದಾಗಬೇಕು. ಜಾತ್ಯಾತೀತ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು. ಆದರೆ ಭಾರತದಲ್ಲಿ ಯಾವುದೂ ಅಸಹಜವಲ್ಲ.

ಆರ್ಟಿಕಲ್‌ ೩೭೦ ಅನ್ನು ತೆಗೆದು ಹಾಕಿ ಒಂದು ವರ್ಷವಾಗಿದೆ; ಮತ್ತು ಜಮ್ಮು ಕಾಶ್ಮೀರವನ್ನು ಬೇರ್ಪಡಿಸಿ ಅದರ ಶಕ್ತಿಯನ್ನು ಕುಗ್ಗಿಸುವಂತೆ  ಮಾಡಲಾಗಿದೆ. ಇದು ಜಾತ್ಯಾತೀತರ  ಮುಖ್ಯ ಕಾಳಜಿಯಾಗಬೇಕು. ಇದು ಭಾರತೀಯ ಒಕ್ಕೂಟದ ಏಕೈಕ ಮುಸ್ಲಿಂ ಬಹುಮತವಿರುವ ರಾಜ್ಯವಾಗಿತ್ತು ಎಂಬುದನ್ನು ಕಡೆಗಣಿಸುವುದು ಕಷ್ಟ. ಹಿಂದೂ ಬಹುಮತವಿರುವ ರಾಜ್ಯವೊಂದು ರಾತ್ರಿಯೊಂದರಲ್ಲಿ ಹೋಳಾಗುತ್ತದೆ ಎಂಬುದನ್ನು ಊಹಿಸಿಕೊಳ್ಳುವುದು ಕೂಡ ಕಷ್ಟ. ಸಾಮಾನ್ಯ ನಾಗರೀಕರು ಮತ್ತು ದೊಡ್ಡ ರಾಜಕಾರಣಿಗಳ ನಾಗರೀಕ ಹಕ್ಕನ್ನು ತಡೆ ಹಿಡಿದು ಒಂದು ವರ್ಷವಾಗುತ್ತಿದೆ. ಕಾಶ್ಮೀರ ಸಮಸ್ಯೆಯ ಪ್ರಾದೇಶಿಕ  ಅಧಃಪತನವು ಧಾರ್ಮಿಕವಾದದ್ದು. ಕಾಶ್ಮೀರ ದುರಂತವು ನಮ್ಮ ಸಂಯುಕ್ತ ವ್ಯವಸ್ಥೆಯ ಬಹುದೊಡ್ಡ ವಿಫಲತೆ ಮತ್ತು ನಮ್ಮ  ರಾಷ್ಟ್ರೀಯ ಭದ್ರತೆಯ ಪ್ರತಿರೋಧದ ಕಲ್ಪನೆಗಿಂತ ಅದು ಜಾತ್ಯಾತೀತತೆಯ ಸಾವಿನ ಸಂಕೇತವಾಗಿ  ಕಾಣಿಸುತ್ತದೆ.

Photo Credits: Suraj Singh Bisht | ThePrint

ಮಹತ್ವಾಕಾಂಕ್ಷೆಯ ಗೆಲುವು

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌  ಆಯೋಧ್ಯೆಯಲ್ಲಿ ಭೂಮಿಪೂಜೆಯನ್ನು ನೆರವೇರಿಸಿದರು. ಈ ಕಾರ್ಯಕ್ರಮವು ಮಹತ್ವಾಕಾಂಕ್ಷೆ ರಾಜಕಾರಣದ ಸೂಚಕವಾಗಿದೆ. ಆದರೂ ಭವಿಷ್ಯದ ಇತಿಹಾಸಕಾರರು ಮಹತ್ವಾಕಾಂಕ್ಷೆಯ ರಾಜಕಾರಣದ ಪಯಣವು ೧೯೮೯ರಲ್ಲಿಯೆ ಆರಂಭವಾಗಿತ್ತು ಎಂದು ದಾಖಲಿಸಬಹುದು.  ಇಲ್ಲೆನಾದರೂ ಹೊಸತಿದ್ದರೆ  ಅದರ ಅಧಿಕೃತೆತಯ ಮುದ್ರೆ ಅಷ್ಟೆ. ೧೯೪೯ ಅಥವಾ ೧೯೮೬ರಲ್ಲಿ ಆದಂತೆ ಈ ಸಮಯದಲ್ಲಿ ಭಕ್ತರ ಪ್ರವೇಶಕ್ಕೆ ಸುಪ್ರಿಂಕೋರ್ಟ್‌ ಅನುಮತಿ ನೀಡಬೇಕಿರಲಿಲ್ಲ.  (ನ್ಯಾಯಾಲಯದ ತಿರಸ್ಕಾರಕ್ಕಾಗಿ ಬಹಿರಂಗವಾಗಿ ಮಾತನಾಡುವ ಸಾರ್ವಜನಿಕ ಹಿತಾಸಕ್ತಿಯುಳ್ಳ ವಕೀಲರನ್ನು  ಕಿರುಕುಳ ಮಾಡುವ ಮೂಲಕ ಸುಪ್ರೀಂಕೋರ್ಟ್‌ ಈ ದಿನವನ್ನು ಗುರುತಿಸಿದೆ ಎಂಬುದನ್ನು ಆಕೆ ಗಮನಿಸಬೇಕು)  ಧಾರ್ಮಿಕ ನೆಲೆಯಲ್ಲಿ ಭವಿಷ್ಯದ ನಾಗರೀಕರನ್ನು  ಅಸಮಾನವಾಗಿ ಕಾಣುವ ಪೌರತ್ವ ತಿದ್ದುಪಡಿ ಕಾಯ್ದೆ ೨೦೧೯ನ್ನು ರದ್ದುಪಡಿಸಲು ಸುಪ್ರಿಂಕೋರ್ಟ್‌ ಒಪ್ಪುವುದಿಲ್ಲ ಎಂಬುದನ್ನೂ ಕೂಡ ಭವಿಷ್ಯದ ಇತಿಹಾಸಕಾರರು ಗುರುತಿಸಬೇಕು.

ಆಯೋಧ್ಯೆಯ ಪೂಜಾ ಕಾರ್ಯಕ್ರಮವು ಧಾರ್ಮಿಕವಾದ ಅಥವಾ ಪವಿತ್ರವಾದ ಆಚರಣೆ ಮಾತ್ರವಲ್ಲ, ಇದು ಇದೊಂದು ರಾಜಕೀಯ ವಿಜಯ.  ಈ ಆಚರಣೆಯು ಅಧಿಕಾರದ ಅನೇಕ ರೂಪಗಳ ಸಮ್ಮಿಲನವನ್ನು ಸಂಕೇತಿಸುತ್ತದೆ. ಅಧಿಕಾರ ಶಕ್ತಿ, ಬಹುದೊಡ್ಡ ಪಕ್ಷವೊಂದರ ರಾಜಕೀಯ ಶಕ್ತಿ, ಆಧುನಿಕ ಮಾಧ್ಯಮಗಳ ಶಕ್ತಿ, ಬಹುಸಂಖ್ಯಾತ ಸಮುದಾಯದ ಶಕ್ತಿ, ಧಾರ್ಮಿಕ ಗುಂಪುಗಳ ಅಧಿಕಾರ. ಇಲ್ಲಿ ಕಾಣದೆ ಕಾಣದೆ ಇದ್ದದ್ದು ವಿರೋಧಪಕ್ಷಗಳ ಭಾಗವಹಿಸುವಿಕೆ. ಕಾಂಗ್ರೆಸ್‌ನ್ನು ಗಾಂಧಿಯ ಹೆಸರನ್ನಿಟ್ಟುಕೊಂಡ ಕುಟುಂಬದವರು ಮುನ್ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷವು ಜಾತ್ಯಾತೀತತೆಯ ಶವ ಪೆಟ್ಟಿಗೆಗೆ ಕೊನೆಯ ಮೊಳೆಯನ್ನು ಹೊಡೆಯಿತು.

ಜಾತ್ಯಾತೀತತೆಯ ಪರಾಭವ

ಇದು ದೀರ್ಘ ಪಯಣವೊಂದು ಪರಾಕಾಷ್ಠೆಯನ್ನು ತಲುಪಿದಂತಿದೆ. ನಮ್ಮ ಭವಿಷ್ಯದ ಇತಿಹಾಸಕಾರರು  ಗುರುತಿಸಬಹುದಾದ ಸಂಗತಿಯೆಂದರೆ ಜಾತ್ಯಾತೀತತೆಯ ಯುದ್ದವು ಚುನಾವಣೆಯಲ್ಲಿ ಸೋಲು ಕಾಣಲಿಲ್ಲ. ಇದು ಸೈದ್ದಾಂತಿಕತೆಗಳ ಯುದ್ದ. ಜಾತ್ಯಾತೀತತೆಯು  ಸೋತಿದ್ದು ಭಾರತೀಯರ ಮನಸಿನಲ್ಲಿ. ಹಿಂದೂ ರಾಷ್ಟ್ರದ ಪ್ರತಿಪಾದಕರು ಇದರ ಗೆಲುವಿನ ಪಾಲು ತಮ್ಮದೆಂದು ಹೇಳಿಕೊಳ್ಳುವಂತೆ ಇಲ್ಲ. ಅವರೆಲ್ಲ ಜಾತ್ಯಾತೀತ ರಾಜಕಾರಣದ ವಿಫಲತೆಯ  ಫಲಾನುಭವಿಗಳು. ಜಾತ್ಯಾತೀತ ಆಲೋಚನೆಗಳನ್ನು ಹೊಂದಿರುವವರೆಲ್ಲರೂ ಈ ಸೋಲಿಗೆ ಹೊಣೆಗಾರರು.

ಇಂದು ನಾವು ಗುರುತಿಸಬಹುದಾದ ಸಂಗತಿಯೆಂದರೆ ಜಾತ್ಯಾತೀತತೆಯ ಸೋಲಿಗೆ ಕಾರಣವೆಂದರೆ ಜಾತ್ಯಾತೀತರು ತಮ್ಮ ಕಾರ್ಯಸಾಧನೆಯ ಆಲೋಚನೆಗಳನ್ನು ಜನರ ಜೊತೆ ಹಂಚಿಕೊಳ್ಳಲು ನಿರಾಕರಿಸಿದ್ದು. ಜಾತ್ಯಾತೀತೆಯ ಸೋಲಿಗೆ ಕಾರಣವೆಂದರೆ ಜಾತ್ಯಾತೀಯವಾದಿಗಳು ಟೀಕೆಗಳನ್ನು  ಇಂಗ್ಲಿಷಿನಲ್ಲಿ ಮಾಡಿದ್ದು. ಜಾತ್ಯಾತೀತತೆಯು ಸೋತಿತು ಏಕೆಂದರೆ ಅದು ನಮ್ಮ ಭಾಷೆಗಳನ್ನು ನಿರಾಕರಿಸಿತು.  ಭಾಷೆಯ ಸಂಸ್ಕೃತಿಯ ಜೊತೆ ಒಂದುಗೂಡುವಲ್ಲಿ ಅದು ಸೋತಿತು. ಅದು ನಮ್ಮ ಧಾರ್ಮಿಕತೆಯ ಭಾಷೆಯನ್ನು ಕಲಿಯಲು ನಿರಾಕರಿಸಿತು ಮತ್ತು ಅದನ್ನು ನಿರ್ಲಕ್ಯ ಮಾಡಿತು. ಜಾತ್ಯಾತೀತತೆಯ ಸೋಲಿಗೆ ವಿಶೇಷವಾದ ಕಾರಣವೆಂದರೆ ನಮ್ಮ ಕಾಲದ ಹಿಂದೂತ್ವಕ್ಕೆ ಪರ್ಯಾಯವಾದ ಆಲೋಚನೆಯನ್ನು ರೂಪಿಸುವುದು ಬಿಟ್ಟು ಅದು ಹಿಂದೂತ್ವದ ಅಣಕದಲ್ಲಿ ತೊಡಗಿತು. ಅಲ್ಪಸಂಖ್ಯಾತರ ಪರವಾಗಿರುತ್ತಲೆ ತನ್ನನ್ನು ಭಿನ್ನ ಎಂದು ತೋರಿಸಿಕೊಳ್ಳಲು ಪ್ರಯತ್ನಿಸಿತು.  ಅಲ್ಪಸಂಖ್ಯಾತರ ಕೋಮುವಾದದತ್ತ  ಅದರ ದೃಷ್ಟಿ ಕುರುಡಾಗಿತ್ತು. ಜಾತ್ಯಾತೀತತೆಯು ಮನ್ನಣೆಯನ್ನು ಕಳೆದುಕೊಳ್ಳಲು ಕಾರಣವೆಂದರೆ ಅದು ದೋಷನಿರ್ಣಯವನ್ನು ಬಿಟ್ಟು ಮನವೊಲಿಕೆಯಲ್ಲಿ ತೊಡಗಿತು ಮತ್ತು ನಂತರ ಅಲ್ಪಸಂಖ್ಯಾತ ಮತದಾರರನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳುವ ಸಂಚಿನಲ್ಲಿ ತೊಡಗಿತು.

ಇಂದು ಈ ಸಾಂಸ್ಕೃತಿಕ ಖಾಲಿತನವು ತಿಲಕ ಅಥವಾ ತ್ರಿಶೂಲ ಹಿಡಿದಿರುವ ಯಾರಾದರೂ ಹಿಂದೂನಾಯಕ ಎಂದು ಹೇಳಿಕೊಳ್ಳುವ ಸ್ಥಿತಿಯನ್ನು ಸೃಷ್ಟಿಸಿದೆ. ಇದು ಜಾತ್ಯಾತೀತತೆಯನ್ನು  ರಾಕ್ಷಸೀಕರಣಗೊಳಿಸಿ  ಅದರ ಮೇಲೆ ಆಕ್ರಮಣ ಮಾಡಬಹುದು ಎಂಬ ಆಲೋಚನೆಯನ್ನು  ಸೃಷ್ಟಿಸಿದೆ.  ಇದು ರಾಜಕೀಯ ಅಸ್ಥಿರತೆಯನ್ನು ಸೃಷ್ಟಿಸಿ  ಕಾಂಗ್ರೆಸ್‌  ಹಿಂದೂತ್ವಕ್ಕೆ ಶರಣಾಗುವಂತೆ ಮಾಡಿದರು ಮಾಡಬಹುದು.

ಇಂದು ಹೊಸ ಪಯಣಕ್ಕೆ ಸರಿಯಾದ ದಿನ, ಈ ಪಯಣದಲ್ಲಿ ಕಳೆದುಹೋದ ಧಾರ್ಮಿಕ ಸಹಿಷ್ಣುತೆಯ   ಭಾಷೆಯನ್ನು ಮರುಶೋಧಿಸಿ  ಹಿಂದೂಧರ್ಮವನ್ನು ಪುನನಿರ್ಮಿಸಿ ಮತ್ತು ನಮ್ಮ ಗಣರಾಜ್ಯದ ಭವಿಷ್ಯವನ್ನು ಪಡೆಯಬೇಕಿದೆ.

ಅನುವಾದ: ಡಾ. ನವೀನ್ ಮಂಡಗದ್ದೆ

One comment to “ಜಾತ್ಯತೀತತೆಯು ಧಾರ್ಮಿಕ ಭಾಷೆಯನ್ನು ಬಿಟ್ಟುಕೊಟ್ಟಿದ್ದರ ಫಲವೇ ಅಯೋಧ್ಯೆಯ ಭೂಮಿಪೂಜೆ.”
  1. Pingback: ಸೆಕ್ಯೂಲರಿಸಮ್ಮಿನ ಮರಣೋತ್ತರ ಪರೀಕ್ಷೆ ಮತ್ತು ವಾಸ್ತವದತ್ತ ಕುರುಡುನೋಟ – ಋತುಮಾನ

ಪ್ರತಿಕ್ರಿಯಿಸಿ