ಕಾರಂತರ ಕಾದಂಬರಿ “ಜಾರುವ ದಾರಿಯಲ್ಲಿ” ಕುರಿತು ಕೆ. ಸತ್ಯನಾರಾಯಣ ಬರಹ

ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಅಷ್ಟಾಗಿ ವಿಮರ್ಷಕರ ಗಮನ ಸೆಳೆಯದ ಒಂದು ಕಾದಂಬರಿ “ಜಾರುವ ದಾರಿಯಲ್ಲಿ”. ವಲಸೆ ಕಾರ್ಮಿಕರ ಸಮಸ್ಯೆಯನ್ನು ಕೇಂದ್ರದಲ್ಲಿ ಹೊಂದಿರುವ ಈ ಕೃತಿಯ ಬಗ್ಗೆ  ಕೆ. ಸತ್ಯನಾರಾಯಣ ಇಲ್ಲಿ ಬರೆದಿದ್ದಾರೆ. ಕಾರಂತರ ಕಾದಂಬರಿಗಳಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಕೆಲವು ಅಂಶಗಳನ್ನು ಹಾಗೂ ಅವುಗಳು ಕಾರಂತರ ಇತರ ಕಾದಂಬರಿಗಳೊಂದಿಗೆ ಹೊಂದಿರುವ ಸಾತತ್ಯವನ್ನು ಈ ಬರಹ ಅನಾವರಣಗೊಳಿಸುತ್ತದೆ.

1952ರಲ್ಲಿ ಈ ಕಾದಂಬರಿ ಮೊದಲ ಮುದ್ರಣ ಕಂಡಿದೆ. ಈಗಾಗಲೇ ಗುರುತಿಸಿರುವಂತೆ, 1951ರಲ್ಲಿ “ಕುಡಿಯರ ಕೂಸು” ಮತ್ತು “ಚಿಗುರಿದ ಕನಸು” ಕಾದಂಬರಿಗಳು ಪ್ರಕಟವಾಗಿದ್ದವು. ಈ ಮೂರೂ ಕಾದಂಬರಿಗಳು – ಎರಡೇ ವರ್ಷಗಳ ಕಾಲಾವಧಿಯಲ್ಲಿ ಪ್ರಕಟವಾಗಿದ್ದರೂ ವಸ್ತು ಮತ್ತು ಅನುಭವ ಪ್ರಪಂಚ ಭಿನ್ನವಾದದ್ದು. ಕುಡಿಯರ ಕೂಸು, ಮಲೆ ಕುಡಿಯರ ಸಮಾಜವನ್ನು ಕುರಿತದ್ದು. ಚಿಗುರಿದ ಕನಸು, ಪಟ್ಟಣವಾಸದ ಹಿನ್ನೆಲೆಯುಳ್ಳ ಒಬ್ಬ ಆದರ್ಶವಾದಿ ತರುಣ, ದೇಶದ ರಾಜಧಾನಿಯಾದ ದಿಲ್ಲಿಯಿಂದ ಬಂದು ಕರಾವಳಿಯ ಗ್ರಾಮವೊಂದರಲ್ಲಿ ಬೇರುಗಳನ್ನು ಹುಡುಕುತ್ತಾ, ಕಾಡು ಭೂಮಿಯನ್ನು ಹಸನುಗೊಳಿಸಿ ವೈಜ್ಞಾನಿಕ ಬೇಸಾಯವನ್ನು ಜಾರಿಗೆ ತಂದ ಹೋರಾಟದ ಬದುಕನ್ನು ಕುರಿತದ್ದು. ಜಾರುವ ದಾರಿಯಲ್ಲಿ ಕಾದಂಬರಿ ಎರಡನೆಯ ಮಹಾಯುದ್ಧದ ಹಿನ್ನೆಲೆಯಲ್ಲಿ, ಕರಾವಳಿಯ ಕಾಡುಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ, ಗ್ರಾಮ ವಸತಿಗಳಲ್ಲಿ, ಜರುಗಿದ ಪಲ್ಲಟ, ಅರಣ್ಯಗಳ, ಕಾರ್ಮಿಕರ ವಲಸೆ, ಬದುಕು, ಬವಣೆಗಳನ್ನು ಕುರಿತದ್ದು. ಯುದ್ಧವು ತಂದ ಸಂಪತ್ತು, ಸಂಕಟಗಳ ದೆಸೆಯಿಂದಾಗಿ ಮನುಷ್ಯನ, ಸಮಾಜದ ಮೌಲ್ಯಗಳು, ಜೀವನ ಕಲ್ಪನೆಗಳಲ್ಲಿ ಆದ ಬದಲಾವಣೆಗಳನ್ನು ಒಬ್ಬ ಆದರ್ಶವಾದಿ ವೈದ್ಯನ ಸಾಂಸಾರಿಕ ಏಳುಬೀಳುಗಳ ಹಿನ್ನೆಲೆಯಲ್ಲಿ ಪರಿಶೀಲಿಸುವ ಪ್ರಯತ್ನವೂ ಇಲ್ಲಿದೆ. ಕಾರಂತರ ಕೃಷಿ ಜೀವನದ ಕಾದಂಬರಿಗಳ ಪಟ್ಟಿಗೆ ಈ ಕಾದಂಬರಿ ಸೇರುವುದಿಲ್ಲ. ವೃತ್ತಿ ಪ್ರಪಂಚ, ವ್ಯಾಪಾರ ಪ್ರಪಂಚ, ಕೂಲಿಕಾರರ ಜಗತ್ತು, ಈ ಕಾದಂಬರಿಯ ಪ್ರಧಾನ ಭೂಮಿಕೆ. ಶ್ರಮದ ಪರಿಕಲ್ಪನೆ ಬದಲಾದ ರೀತಿ, ಶ್ರಮಿಕರ ಜೀವನದ ಹೊಸ ಬವಣೆಗಳು ಕಾದಂಬರಿಯ ಒಂದು ಹಂತದಲ್ಲಿ ಕೇಂದ್ರದಲ್ಲಿವೆ. ಒಂದು ಕುಟುಂಬದ ಕತೆಯೂ ಇದೆ. ಕೂಲಿಕಾರರ ಶ್ರಮವಿನ್ಯಾಸ ಮಾತ್ರ ಈ ಜಗತ್ತಿನಲ್ಲಿ ಬದಲಾಗುವುದಿಲ್ಲ, ವೃತ್ತಿಯ ಬೇಕು-ಬೇಡಗಳು ಕೂಡ ಬದಲಾಗುತ್ತವೆ. ಹೀಗಾಗಿ ಕಾದಂಬರಿಗೆ ಬಹುಮುಖೀ ಆಯಾಮಗಳಿವೆ. ಹೀಗೆ ಮೂರು ಭಿನ್ನ ಅನುಭವ ವಲಯಗಳಿಗೆ ಸೇರಿದ ಕಾದಂಬರಿಗಳನ್ನು ಕಾರಂತರು ಎರಡೇ ವರ್ಷದ ಕಾಲಾವಧಿಯಲ್ಲಿ ಬರೆದಿರುವ ಸೃಜನಶೀಲ ಸೋಜಿಗವನ್ನು ಕೂಡ ಗಮನಿಸಬೇಕು.

ಗುಲಾಬಿಯ ಪಾತ್ರವನ್ನು ಮೊದಲಿಗೆ ಗಮನಿಸೋಣ. ಕನ್ನಡ ಕಾದಂಬರಿ ಪ್ರಪಂಚದಲ್ಲೇ ಇದೊಂದು ವಿಶಿಷ್ಟ ಪಾತ್ರ, ವಿಭಿನ್ನ ಮಾದರಿ. ಈಕೆ ಕಲಾವಂತರ ಕುಟುಂಬದವಳು. ಜೀವನದ ಒಂದು ಘಟ್ಟದ ತನಕ, ಕಲಾವಂತ ಕುಟುಂಬಗಳ ಬದುಕನ್ನೇ ಬದುಕಿದವಳು. ಸನ್ನಿವೇಶಗಳ ಒತ್ತಡ, ಆತ್ಮಪರಿವೀಕ್ಷಣೆ ಎರಡೂ ಸೇರಿ, ತನ್ನ ಹಿನ್ನೆಲೆಯನ್ನು, ಸ್ವಭಾವವನ್ನು ಮೀರಿದವಳು. ಹೊಸ ವ್ಯಕ್ತಿತ್ವ ಕಂಡುಕೊಂಡವಳು. ಆರ್ಥಿಕವಾಗಿ ಸಾಕಷ್ಟು ಸಂಪನ್ನವಾಗಿರುವ ಹಿನ್ನೆಲೆಯಿದ್ದು, ದಾದಿಯ ಕೆಲಸವನ್ನು ಆಯ್ಕೆ ಮಾಡಿಕೊಂಡವಳು. ಗಮನಿಸಬೇಕಾದ ಸಂಗತಿಯೆಂದರೆ, ಇದಕ್ಕೆ ಬೇಕಾದ ವೃತ್ತಿ ಶಿಕ್ಷಣವಾಗಲಿ, ತರಬೇತಿಯಾಗಲಿ ಆಕೆಗೆ ಇಲ್ಲ. ವೃತ್ತಿಶಿಕ್ಷಣ ಮಾತ್ರವಲ್ಲ, ಉಳಿದಂತೆ ಕೂಡ ಅವಳಿಗೆ ಓದು-ಬರಹ ಬರುತ್ತದೆ ಅನ್ನುವುದನ್ನು ಬಿಟ್ಟರೆ, ಶಾಲಾ-ಕಾಲೇಜು ಶಿಕ್ಷಣವಿಲ್ಲ. ಆದರೆ ದಾದಿಯ ವೃತ್ತಿಗೆ ಬೇಕಾದ ಸೇವಾ ತತ್ಪರತೆ, ಸಾಮಾಜಿಕ ಕಾಳಜಿ, ಬದ್ಧತೆಯೆಲ್ಲ ಇವೆ. ಕಾದಂಬರಿಯ ಕೊನೆಯ ಭಾಗದಲ್ಲಿ ಇಂದುಮತಿಗೆ ದೀರ್ಘಕಾಲದ ಶುಶ್ರೂಷೆ-ಚಿಕಿತ್ಸೆಗಾಗಿ ಒಂದು ಸುಸಜ್ಜಿತ ಆಧುನಿಕ ಬೃಹತ್ ಆಸ್ಪತ್ರೆಯಲ್ಲಿ ಇರಬೇಕಾಗಿ ಬಂದಾಗ, ಗುಲಾಬಿಗೆ ಗೊತ್ತಾಗುತ್ತದೆ ತನಗೆ ವೃತ್ತಿ ಶಿಕ್ಷಣವಿಲ್ಲವೆಂದು, ತರಬೇತಿಯಿಲ್ಲವೆಂದು. ಆದರೆ ಈಕೆಯ ವ್ಯಕ್ತಿತ್ವ ವಿಕಸನಕ್ಕೆ, ಸೇವಾ ತತ್ಪರತೆಗೆ ಇವೆಲ್ಲ ಅಡ್ಡಿಯಾಗುವುದೇ ಇಲ್ಲ. ಕಾದಂಬರಿಯ ಅರ್ಧ ಭಾಗದ ನಂತರ, ಈಕೆಯ ಪಾತ್ರ, ಕಥನದಲ್ಲಿ ಮುನ್ನೆಲೆಗೆ ಬರುತ್ತದೆ. ಆದರೂ ಓದುಗರ ಮನಸ್ಸನ್ನು ಕಲಕುತ್ತದೆ, ಸಾವಕಾಶ ಆಕ್ರಮಿಸುತ್ತದೆ. ಈಕೆ ಕೂಡ ಯುದ್ಧವೇ ಕಾರಣವಾಗಿ ಸಮಾಜದಲ್ಲಿ, ವಾಸಿಸುತ್ತಿರುವ ಪಟ್ಟಣದಲ್ಲಿ ಜರುಗುವ ಸಕಲ ಪಲ್ಲಟಗಳ ಮಧ್ಯೆ ಬದುಕುತ್ತಿರುವವಳೇ. ಆದರೆ ಅವಳ ವ್ಯಕ್ತಿತ್ವ ವಿಕಸನವಾಗುವ ರೀತಿ ಅಪೂರ್ವವಾದದ್ದು. ಹಾಗೆ ನೋಡಿದರೆ, ಈಕೆಯೇನೂ ಘೋಷಿತ ಆದರ್ಶವಾದಿಯಲ್ಲ, ಸಮಾಜ ಸುಧಾರಕಿಯಲ್ಲ. ಸಾಮಾನ್ಯ ವ್ಯಕ್ತಿತ್ವ, ಆದರೆ ಸಾಕ್ಷಾತ್ಕಾರ ಕಂಡುಕೊಂಡವಳು. ಪ್ರಧಾನ ಪಾತ್ರ, ಪ್ರಧಾನ ಭೂಮಿಕೆಯಿಂದಾಚೆಗೂ ಬೆಳಗುವ ಮುಖ್ಯವಾದ ಆಯಾಮವೊಂದು ಈ ಪಾತ್ರದ ಮೂಲಕ ಪ್ರಕಟವಾಗುವುದರಿಂದಲೂ ಕಾದಂಬರಿ ವಿಶಿಷ್ಟವಾಗಿದೆ.

ಈ ಕಾದಂಬರಿಯನ್ನು ಕಾರಂತರು ಸಾಮಾಜಿಕ ಚಿತ್ರವೆಂದು ಸೂಚಿಸಿದ್ದಾರೆ. ಕಾಳೂರು ಎಂಬ ಕಾಲ್ಪನಿಕ ನಗರ (ಸಣ್ಣ ಪಟ್ಟಣ) ಕಾದಂಬರಿ ಮುಗಿಯುವ ಹೊತ್ತಿಗೆ ಕಾಂಚನಾಪುರವಾಗುತ್ತದೆ. ಯುದ್ಧದ ಹಿನ್ನೆಲೆಯಲ್ಲಿ ಈ ಕಾಲ್ಪನಿಕ ನಗರದ ಜೀವನಶೈಲಿ, ದುಡಿಮೆ, ವಿರಾಮ, ಆಸೆ, ಆಕಾಂಕ್ಷೆ. ಸ್ವಬಾವವೆಲ್ಲ ಹೇಗೆ ಬದಲಾಯಿತು; ಈ ಬದಲಾವಣೆಗಳ ನಡುವೆಯೂ ಡಾ|| ಶಿವಪ್ಪ ಎಂಬ ವೈದ್ಯ ತನ್ನ ಋಜು ಸ್ವಭಾವವನ್ನು, ಆದರ್ಶದ ಪ್ರೀತಿಯನ್ನು ಉಳಿಸಿಕೊಂಡು ಹೇಗೆ ಮಾಗಿದ ಎಂದು ನಿರೂಪಿಸುವಾಗ ಕಾರಂತರಿಗೆ ಕಾಳೂರು ಮತ್ತು ಅಲ್ಲಿಯ ಬದುಕು ಒಂದು ಪ್ರಾತಿನಿಧಿಕ ಪಟ್ಟಣದ ಬದುಕಾಗಬೇಕು ಎಂಬ ಉದ್ದೇಶವಿದೆ. ಆರ್.ಕೆ. ನಾರಾಯಣರ ಕಾದಂಬರಿಗಳ ಸಣ್ಣ ಪಟ್ಟಣಗಳಂತೆಯೇ ಕಾಣುವ ಕಾಳೂರಿನಲ್ಲಿ, ಎಲ್ಲರೂ, ಎಲ್ಲರಿಗೂ ಪರಿಚಿತರೇ. “ಊರಿನ ರೈತರು, ಕೂಲಿಗಳು, ಕಸಬುದಾರರು, ನಿರಕ್ಷರರಿರಲಿ, ಬಡವರಿರಲಿ, ಕಾಳೂರಿನ ಪರಿಚಿತ ವ್ಯಕ್ತಿಯಾಗಿದ್ದಾರೆಯೇ ಹೊರತು ಕಸವಾಗಿಲ್ಲ, ಕಃಪದಾರ್ಥವೆನಿಸಿಲ್ಲ (ಪುಟ 6, 7). ಊರಿನ ಪ್ರತಿಯೊಂದು ಬೀದಿ, ತಿರುವುಗಳನ್ನು ಪರಿಚಯಿಸುತ್ತಲೇ, ಭಿನ್ನ ಕಸಬುದಾರರ ಶ್ರಮದ ಶೈಲಿಯನ್ನು ಪರಿಚಯಿಸುತ್ತಾರೆ. ಕಾಳೂರಿನಲ್ಲಿ ಮುಂದೆ ಜರುಗುವ ಬದಲಾವಣೆಗಳ ದೃಷ್ಟಿಯಿಂದ ಮತ್ತು ಆದ್ಯಯನಕ್ಕೆ ಆಯ್ದುಕೊಂಡಿರುವ ವಿಷಯ ವ್ಯಾಪ್ತಿಯ ದೃಷ್ಟಿಯಿಂದ ಈ ವಿವರಗಳು ತುಂಬಾ ಮುಖ್ಯ.

ಮೊಗೇರರನ್ನು ಕುರಿತ ವಿವರಗಳು ಹೀಗಿವೆ — “ಜನ ಮೈಗಳ್ಳರಾಗಿಲ್ಲ. ಒಂದಿಲ್ಲೊಂದು ಕೆಲಸ ಮಾಡಿಕೊಂಡಿರುತ್ತಾರೆ. ಅವರ ನಡಿಗೆ, ಮಾತುಗಳು ವಿರಾಮವಾದುವು. ಅವರ ಹೆಂಗಸರು ತೀರಾ ಚುರುಕಿನವರು. ಎಂದೂ ಮೈಗಳ್ಳ ಜೀವರಲ್ಲ. ಗಳಿಗೆ ಗಳಿಗೆಯ ವಿಧಿವಿಲಾಸವನ್ನು ಹೊಂದಿದ್ದು, ಅವರಲ್ಲಿ ಕೂಡಿಡುವ ಹಂಬಲವಿಲ್ಲ. ನಿಸರ್ಗದ ಮಕ್ಕಳ ಈ ಆಟದ ಚೆಲುವು ಸಾಮಾನ್ಯವಲ್ಲ.”

ಸೂಳೆಗೇರಿಯ ವರ್ಣನೆಯನ್ನು ನೋಡಿ. ಹಿಂದೆ ಪ್ರಸ್ತಾಪಿಸಿದ ಗುಲಾಬಿಯ ವಿಶಿಷ್ಟ ಪಾತ್ರ ಇಲ್ಲಿಂದಲೇ ಒಡಮೂಡಿ ಬಂದಿತು ಎಂಬುದನ್ನು ಗಮನದಲ್ಲಿಟ್ಟುಕೊಂಡಾಗ ಈ ವಿವರಗಳು ಧ್ವನಿಪೂರ್ಣವಾಗಿಯೇ ಕಾಣುತ್ತವೆ.

“ದೇವಸ್ಥಾನದ ಬೀದಿಯ ನಡುವಿಗೆ ಕವಲೊಡೆಯುವ ಚಿಕ್ಕ ರಸ್ತೆಯಲ್ಲಿ ಸೂಳೆಗೇರಿಯಿದೆ. ಈ ಕೇರಿಯಲ್ಲಿ ಹಿಂದೆ ತುಂಬಾ ಮನೆಗಳಿದ್ದವಂತೆ. ಅಷ್ಟೇ ಸಂಪನ್ನರಾದ ಗಣಿಕೆಯರೂ ಇದ್ದರಂತೆ. ಈಗ ಕುಲದ ಕಸುಬನ್ನು ಬಿಡಲಾರದವರು ಎಂಬುದಕ್ಕೆ ಅಂತಹ ನಾಲ್ಕೆಂಟು ಮನೆಗಳಿವೆ. ಈಗ ಅಂತಹ ವೈಭವವೇನಿಲ್ಲ. ಜನರು ಸಹನೆಯಿಂದಲೇ ನೋಡುತ್ತಿರುವ ಕೇರಿಯಿದು.”

ಮಕ್ಕಳು, ಹೆಂಗಸರು ದುಡಿಯುವ ರೀತಿಯನ್ನು, ಅದರ ಅನಿವಾರ್ಯತೆಯನ್ನು ಕೂಡ ಕಾರಂತರು ಪಟ್ಟಣದ ಪರಿಚಯದ ಭಾಗವಾಗಿ ಮಾಡಿಕೊಡುವುದು ಒಂದು ವಿಶೇಷ. ಸಾಮಾನ್ಯವಾಗಿ ಕನ್ನಡ ಕಥನಕಾರರು ಈ ಅಂಶದ ಬಗ್ಗೆ ಗಮನ ಕೊಡುವುದಿಲ್ಲ. ಹೆಚ್ಚೆಂದರೆ, ಅದು ಅನುಷಂಗಿಕವಾಗಿ ಬರುತ್ತದೆ.

“ಹತ್ತನೆಯ ವರ್ಷದ ಬಾಲಕ, ಬಾಲಿಕೆಯರು, ತಮ್ಮ ಆಟದ ಜೊತೆಗೆ ಹಿರಿಯರ ಕೆಲಸಕ್ಕೂ ನೆರವಾಗುತ್ತಾರೆ. ಹಾಗೆ ನೆರವಾಗದೆ ಹೋದರೆ, ಜೀವನ ಸಾಧ್ಯವಿಲ್ಲ.

ಹೆಂಗಸರಿಗೂ ಗಂಡಸರ ರೀತಿಯ ಉದ್ಯೋಗಗಳಿವೆ. ಅವರೂ ದೋಣಿ ಒತ್ತುತ್ತಾರೆ. ಕಡಲ ದಂಡೆಯನ್ನು ಹಾರೆಯಿಂದಗೆದು ಏಡಿ ಹಿಡಿಯುತ್ತಾರೆ. ತೋಡು ದಂಡೆಗಳ ಮಗ್ಗುಲುಗಳಿಗೆ ಬೆರಳು ತುರುಕಿ ಏಡಿ ಅರಸುತ್ತಾರೆ. ಮನೆ ಹಿತ್ತಿಲುಗಳಲ್ಲಿ ಕುಳಿತರೂ ಅವರು ಹಲವಾರು ವೃತ್ತಿ ನಡೆಸಬಲ್ಲರು …… ಹಗ್ಗ ಹೊಸೆಯುವರು, ಬಲೆ ದುರಸ್ತಿ ಮಾಡುವುದು, ತೆಂಗಿನ ಗರಿಗಳಿಂದ ಮಡಲು ಹೆಣೆಯುವುದು, ಸಂಜೆಯ ಹೊತ್ತಿಗೆ ಹಿಡಿದ ಮೀನುಗಳನ್ನು ಬುಟ್ಟಿಯಲ್ಲಿ ತುಂಬಿಸಿ, ಪೇಟೆಯವರಿಗೆ ಅದರ ಕಂಪನ್ನು ಬೀರುತ್ತಾ ಸಾಗಿ ವಿಕ್ರಯಿಸುವುದು. ಹಾಗೆ ಹೇಳ ಹೋದರೆ, ಹೆಂಗಳೆಯರಷ್ಟು ದುಡಿಮೆ ಗಂಡಸರದ್ದಲ್ಲ. ಗಂಡಸರು ತೀರಾ ನಸೀಬಿನ ಗುಲಾಮರು.

ಕಾರಂತರ ಕಾದಂಬರಿಗಳ ಓದುಗರಿಗೆ ಈಗಾಗಲೇ ಗೊತ್ತಿರುವ ಸಂಗತಿಯೆಂದರೆ ಸಮಾಜದ ವಿವಿಧ ಜನವರ್ಗಗಳ ಬದುಕು-ಶ್ರಮವನ್ನು ಕುರಿತು ಅವರಿಗಿರುವ ಸಂವೇದನಾಶೀಲ ಆಸಕ್ತಿ. ಹಾಗಾಗಿಯೇ ಈ ವಿವರಗಳು ಅವರ ಸೃಜನಶೀಲ ಮೂಸೆಯನ್ನು ಹಾದು ಹೊರಬರುತ್ತವೆ. ಕಾದಂಬರಿಯ ಗತಿ ಮುಂದುವರೆದಂತೆ ಈ ಅಂಶಗಳಲ್ಲಿ ಆಗುವ ಬದಲಾವಣೆಗಳನ್ನು ಕುರಿತು ಕೂಡ ಓದುಗರು ಗಮನಹರಿಸುವುದು ಈ ವಿವರಗಳಿಂದಲೇ ಪ್ರೇರಣೆ ಪಡೆಯುತ್ತದೆ.

ಕಾದಂಬರಿಯ ನಾಯಕ ಶಿವಪ್ಪ, ವೈದ್ಯಕೀಯ ವಿದ್ಯಾಭ್ಯಾಸದ ನಂತರ ದೊಡ್ಡ ಪಟ್ಟಣಗಳಿಗೆ ಹೋಗಿ ವೃತ್ತಿನಿರತನಾಗಿ ಹಣ ಸಂಪಾದಿಸಬಹುದಿತ್ತು. ಹುಟ್ಟೂರಿನ ಋಣ ತೀರಿಸುವುದೇ ನಿಜವಾದ ದೇಶಪ್ರೇಮ ಎಂಬ ಕಾರಂತರ ನಂಬಿಕೆಗನುಗುಣವಾಗಿ ಆತ ಕಾಳೂರಿನಲ್ಲೇ ಉಳಿಯುತ್ತಾನೆ. ಇದು ಅವನ ಸಂಪಾದನೆ, ವೃತ್ತಿ ಪರಿಣಿತಿ, ಜನರಿಗೆ ಮಾಡುವ ಸೇವೆಯ ಮೇಲೆ ಪರಿಣಾಮ ಬೀರುತ್ತದೆ. ಕಾದಂಬರಿ ಮುಗಿದರೂ ಇನ್ನೂ ಶಿವಪ್ಪನ ಮನೆ ಮತ್ತು ಆಸ್ಪತ್ರೆ ನಿರ್ಮಾಣವಾಗಿಲ್ಲ ಎಂಬುದನ್ನು ಗಮನಿಸಬೇಕು.

ಈ ರೀತಿಯ “ಋಣ”ದ ಕಲ್ಪನೆಯಿರುವುದರಿಂದಲೇ ಯುದ್ಧದ ದೆಸೆಯಿಂದಾಗಿ ಎಲ್ಲ ಜನವರ್ಗಗಳಲ್ಲೂ ಹೊರ-ಆದಾಯದ ಸಂಚಾರ ಹಚ್ಚಿದ್ದರೂ ಶಿವಪ್ಪನ ಸಾಲಸೋಲಗಳು ಹಾಗೇ ಉಳಿದಿರುತ್ತವೆ. ಸ್ವಂತ ಹೆಂಡತಿಯ ಜಿಕಿತ್ಸೆಗೂ ಕೂಡ ಇತರ ಆತ್ಮೀಯರ ನೆರವು ಬೇಕಾಗುತ್ತದೆ.

ಕಾದಂಬರಿಯ ಏಳನೇ ಮತ್ತು ಎಂಟನೇ ಅಧ್ಯಾಯಗಳು ಯುದ್ಧದ ಪರಿಣಾಮವಾಗಿ ಉಂಟಾಗುವ ಬದಲಾವಣೆಗಳ ಎಲ್ಲ ಆಯಾಮಗಳನ್ನು, ಅವುಗಳ ಸಂಕೀರ್ಣತೆ, ಸೂಕ್ಷ್ಮತೆಯಲ್ಲಿ ದಾಖಲಿಸುತ್ತದೆ. ಕುಂಬಾರಗುಂಡಿ, ಮತ್ತಿಗುಂಡಿ ಎಂಬ ಎರಡು ಹೇಳ ಹೆಸರಿಲ್ಲದ ಸ್ಥಳಗಳು ಹೇಗೆ ಮುನ್ನೆಲೆಗೆ ಬಂದವೆಂದರೆ, ಯುದ್ಧದ ದೆಸೆಯಿಂದಾಗಿ. ಒಂದು ಪ್ರದೇಶ ಇಷ್ಟೆಲ್ಲ ಬದಲಾವಣೆಗೆ ಒಳಗಾಗಬಹುದೆ ಎಂದು ಯಾರಿಗಾದರೂ ಆಶ್ಚರ್ಯವಾಗುತ್ತದೆ. ಇಷ್ಟೊಂದು ವಿವರಗಳನ್ನು ಒಂದು ಹೆಣಿಗೆಯಲ್ಲಿ ಗ್ರಹಿಸುವ ಕಾರಂತರ ಗಾಢವಾದ ಸೃಜನಶೀಲತೆಯ ಬಗ್ಗೆ ಗೌರವ ಮೂಡುತ್ತದೆ. ಒಂದು ಕಾಲಕ್ಕೆ ಘಟ್ಟವನ್ನು ದಾಟಿ ಯಲ್ಲಾಪುರದ ಕಡೆಗೆ ಹೋಗುತ್ತಿದ್ದವರಿಗೆ ಈಗ ಘಟ್ಟವನ್ನು ದಾಟದೆ ಅದರ ಬುಡದಲ್ಲಿಯೇ ಬೀಡುಬಿಟ್ಟು ದಿನ ಕಳೆಯಬಹುದು ಎಂಬುದು ಕಾರಂತರ ಪ್ರಕಾರ ಮಹಾಯುದ್ಧದ ಸಂಶೋಧನೆಯ ಫಲ. “ಅಂತಹ ಪವಿತ್ರ ಸ್ಥಳಗಳಲ್ಲಿ ಕುಂಬಾರಗುಂಡಿಯೂ ಒಂದು” ಎಂಬುದು ಕಾರಂತರ ವ್ಯಂಗ್ಯ.

ಕೆಲವು ವಿವರಗಳಂತೂ ಭಯಾನಕವಾಗಿವೆ. ಕಣಿವೆಯ ಯಾವ ಮೂಲೆಯಿಂದಲೂ ಮರ ಕಡಿಯುವ ಸದ್ದು ನಿರಂತರವಾಗಿ ಕೇಳುತ್ತದೆ. ಈ ಘೋರ ವಿವರವನ್ನು ನೋಡಿ —

“ಆ ಬಯಲಿನ ನಟ್ಟ ನಡುವೆ, ಊರ ನಾಟಕ ಕಂಪನಿಗಳ ಮಳೆಗಾಲದ ಥಿಯೇಟರಿನಂತೆ ಕಟ್ಟಿದ ಭಾರಿ ದೊಡ್ಡ ಮಳೆಮಾಡಿದೆ; ಅದರೊಳಕ್ಕೆ ನೀಳವಾದ ಗುಂಡಿಗಳಿವೆ. ಅವುಗಳ ಮೇಲೆ ಮರದ ಸೇತುವೆಗಳಿವೆ. ಈ ಸೇತುವೆಗಳ ಮೇಲ ಭುಜಬಲದಿಂದ ನಾಟಗಳನ್ನುರುಳಿಸಿ, ಹಲವರು ಮರ ಸಿಗಿಯತೊಡಗುತ್ತಾರೆ. ಒಮ್ಮೊಮ್ಮೆ ಇಪ್ಪತ್ತು-ಮೂವತ್ತು ಜೊತೆ ಕೆಲಸಗಾರರು ಸಾಲುಸಾಲಾಗಿ ಮರ ಸಿಗಿಯುವಂತಹ ಈ ಚಿತ್ರ ಗರುಡ ಪುರಾಣದ ನರಕ ಕಲ್ಪನೆಯನ್ನು ಹುಟ್ಟಿಸುತ್ತದೆ. ಪಾಪವನ್ನು ಮಾಡಿ, ದೆವ್ವದಾಕಾರದ ಮರಗಳಿಗೆ ಹುಟ್ಟಿದ ಈ ಜೀವಗಳಿಗೆ ಯಮಾಲಯದಲ್ಲಿ ಸಲ್ಲಿಸುವ ಒಂದು ಘೋರ ದೃಶ್ಯದಂತೆ ಕಾಣುತ್ತದೆ” (ಪುಟ 142).

ಇಲ್ಲಿ ಪ್ರಾಣಿಗಳಿಗೂ ಹಿಂಸೆ ತಪ್ಪಿದ್ದಲ್ಲ. ತಗ್ಗು ದಾರಿಯಲ್ಲಿ, ಜವುಗು ನೆಲದಲ್ಲಿ ನಾಟಗಳನ್ನು ಸಾಗಿಸಿಕೊಂಡು ಹೋಗುವುದಕ್ಕೆ ಕೋಣಗಳನ್ನು ಬಳಸುವಾಗ ಅವುಗಳ ಮನಸ್ಸಿಗೆ ಹೇಗೆನ್ನಿಸುತ್ತದೆ ಎಂದು ನಿರೂಪಣೆ ಪ್ರಶ್ನಿಸುತ್ತದೆ. ಇಂತಹ ಕೆಲಸಕ್ಕೆ ನೂರಾರು ಜೀವಗಳು ದುಡಿಯುವಂತೆ ಮಾಡಿದ ಸಾಹಸ ಸಾಮಾನ್ಯರಿಂದ ಆಗುವಂತದ್ದಲ್ಲವಂತೆ. ಊರಲ್ಲಿ ದಿನಕ್ಕೆ ಮೂರು ಪಾವಲಿ ಸಿಕ್ಕಿದರೆ, ಇಲ್ಲಿ ಮೂರು ರೂಪಾಯಿ ಸಿಗುತ್ತದೆ ಎಂಬುದು ನಿಜ. ಆದರೆ, ಈ ಸೀಮೆಯಲ್ಲಿ ಬರುವ ಜ್ವರ ಚೈತನ್ಯವನ್ನೇ ಹಿಂಡುತ್ತದೆ. ಕೆಲಸ ಮುಗಿದು ಊರಿಗೆ ಹೋದ ಮೇಲೂ ಜ್ವರ ಮುಂದುವರಿದೇ ಇರುತ್ತದೆ. ಇನ್ನು ವಾಸಕ್ಕೆ ಸಿಗುವ ಮನೆಗಳೋ, “ಗೌರವಕ್ಕಷ್ಟೇ ಅವನ್ನು ಮನೆಗಳೆನ್ನಬೇಕು. ಗಾಡಿಯ ಮಾಡಿನಷ್ಟು ಕಿರಿದಾದುವು. ಅವಕ್ಕಿಂತ ತುಸು ಅಗಲವಾದ ಅತ್ತರು ತಟ್ಟಿಯ ಗೂಡುಗಳು, ಅಂತಹ ಗುಡಿಸಲುಗಳಲ್ಲಿ ನೂರಾರು ಜನ ವಾಸವಾಗಿದ್ದಾರೆ. ನೆಲವಂತೂ ತಣಸು ತುಂಬಿದ್ದು, ಯಾವ ಮೂಲೆಯನ್ನು ನೋಡಿದರೂ ಇಂತಹ ಗುಡಿಸಲುಗಳು ಕಾಣಸಿಗುತ್ತವೆ. ಅವುಗಳಲ್ಲೇ ನೆಲಸಿ, ನಿತ್ಯ ಜೀವನ ಸಾಗಿಸುವ ಮಲಿನವಸ್ತ್ರರೂ, ಮಲಿನ ಮುಖಿಗಳೂ ಆದ ಹೆಂಗುಸರು, ಗಂಡಸರು” (ಪುಟ 142). ಇದ್ಯಾವುದೂ ಕೆಲಸಗಾರರನ್ನು ಕುಂಬಾರಗುಂಡಿಯಿಂದ ವಿಮುಖ ಮಾಡಲು ಸಾಧ್ಯವಿಲ್ಲ. ಈಗ ಕಾಳೂರಿನಲ್ಲೂ ಕೆಲಸಕ್ಕೆ ಆಳುಗಳು ಸಿಗುವುದಿಲ್ಲ. ಘಟ್ಟದ ಮೇಲಿನ ತೋಟಗಳ ಕೆಲಸಕ್ಕೂ ಕೂಲಿಗಳು ಸಿಗುವುದಿಲ್ಲ. ಅಕ್ಕಿ, ಭತ್ತ, ಮುಂಗಡ ಹಣಗಳಿಂದ ಒಲಿಸಿ ತಂದೆ ಕೂಲಿಗಳೆಲ್ಲ ಕುಂಬಾರಗುಂಡಿಯಲ್ಲಿ ದುಡಿಯುತ್ತಿರುವ “ಕಾಲದಲ್ಲೇ ಅಲ್ಲಿನ ಜ್ವರದ ಸುಗ್ಗಿಯೂ ಬಲಿಯುತ್ತದೆ” (ಪುಟ 153).

ಮೊದಲಿಗೆ ಸಾಹೇಬರುಗಳು ಇದರ ಬಗ್ಗೆ ನಿರ್ಲಕ್ಷ್ಯ, ಉಡಾಫೆಯ ಧೋರಣೆಯನ್ನು ತೋರಿಸುತ್ತಾರೆ. ಈ ಕ್ಯಾಂಪ್‍ಗಳಿಗೆ ವೈದ್ಯ ಶಿವಪ್ಪ ಚಿಕಿತ್ಸೆ ನೀಡಲೆಂದು ಬರುತ್ತಾನೆ. ಸಾಹೇಬರು ಮತ್ತು ವೈದ್ಯರ ನಡುವೆ ನಡೆಯುವ ಮಾತುಕತೆಯ ಒಂದು ಭಾಗ ತುಂಬಾ ಮಾರ್ಮಿಕವಾಗಿದೆ —

“ಇದು ಮುಗಿಯುತ್ತದೆ ಅಥವಾ ಮುಗಿಯಿತು ಅನ್ನುವ ಧೈರ್ಯವೇ ನನಗಿಲ್ಲವಲ್ಲ. ಸಾಹೇಬರೇ ಇವರ ಮನೆಗಳೋ, ಇವರು ಕುಡಿಯುವ ನೀರೋ-ಇವೆಲ್ಲ ಹೀಗೆಯೇ ಇದ್ದರೆ ಮತ್ತೇನಾದೀತು?”

“ಕೊಲೆರಾ ಅದರಿಂದ ಬರುತ್ತದೆಯೆ?” ಎಂದು ಗೊತ್ತಿದ್ದೂ ಪ್ರಶ್ನೆ ಕೇಳಿದರು. ಅನಂತರ ಇಲ್ಲಿ ಮಲೇರಿಯಾವೂ ತುಂಬ; ಸೀಜನಿನಲ್ಲಿ ನೂರು ಜನ ಬಂದರೆ ದುಡಿಯುವುದಕ್ಕೆ ಇಪ್ಪತ್ತು ಜನ ಸಿಗುವುದಿಲ್ಲ. ಇಲ್ಲವಾದರೆ ಇದರ ನಾಲ್ಕು ಪಟ್ಟು ಕೆಲಸವಾಗುತ್ತಿತ್ತು” (ಪುಟ 154).

ಕಾದಂಬರಿ ಕೂಲಿಕಾರರ ಮನೋಧರ್ಮದಲ್ಲಾದ ಬದಲಾವಣೆಗಳನ್ನು ಕೂಡ ಗಮನಿಸುತ್ತದೆ. ಹಾಗೆಯೇ ಊರಿನಲ್ಲೇ ಉಳಿದ ಬಡಗಿಗಳು, ಕಮ್ಮಾರರು ಕೂಡ ತಮ್ಮ ವೇತನವನ್ನು ಏರಿಸುತ್ತಾರೆ. ಉಳಿ, ಚಾಣ, ಕೊಡತಿ ಹಿಡಿಯಬಲ್ಲವರೆಲ್ಲರೂ ಕೂಡ ಹೆಚ್ಚಿನ ಮಜೂರಿಯನ್ನು ಬಯಸುತ್ತಾರೆ. ಕೊಂಚ ಚಾಲಾಕಿತನ ಇದ್ದವರು, ಕಾಳಸಂತೆಯ ವ್ಯಾಪಾರದಲ್ಲೂ ತೊಡಗುತ್ತಾರೆ. ವೈದ್ಯರಿಗೇ ಔಷಧಿ ಪದಾರ್ಥಗಳನ್ನು ಹೆಚ್ಚಿನ ಬೆಲೆಗೆ ಮಾರಲು ಪ್ರಯತ್ನಿಸುತ್ತಾರೆ. ಶಿವಪ್ಪನ ಬಳಿ ಕೆಲಸದಲ್ಲಿದ್ದ ಕಾಂಪೋಂಡರ್ ಶೀನಪ್ಪ, ತಾನೇ ಒಂದು ಖಾಸಗಿ ಶಾಪನ್ನು, ಮದ್ದಿನಂಗಡಿಯನ್ನು ತೆರೆಯುತ್ತಾನೆ. ಶಿವಪ್ಪನ ತಂದೆ, ಕಿಟ್ಟಪ್ಪ ಮಾಸ್ತರ ಕೂಡ ಈ ವಾತಾವರಣದಿಂದಾಗಿ ದುರಾಸೆಗೆ ಒಳಗಾಗುತ್ತಾನೆ.

ಮತ್ತಿಗುಂಡಿಯ ಸುತ್ತಮುತ್ತಲ ಹಳ್ಳಿಗಳಲ್ಲಿ ಜನ ವಸತಿಗಳಲ್ಲಿ ಕಂಡುಬರುವ ಬೆಳವಣಿಗೆಗಳು ಕುಂಬಾರಗುಂಡಿಯಲ್ಲಿ ನಡೆಯುತ್ತಿರುವ ಬದಲಾವಣೆಗಳಿಗೆ ಪೂರಕವಾಗಿವೆ. ಹೊಸ ಬೆಳವಣಿಗೆಗಳಿಂದ ಕೈ ತುಂಬಾ ದುಡ್ಡು ಬರುತ್ತದೆ. ಆದರೆ ಊರಿನಲ್ಲಿ ಬದುಕು ನಡೆಸುವುದೇ ದುಸ್ತರವಾಗಿದೆ. ಒಮ್ಮೆ ಮನೆಮಠ ದನಕರುಗಳನ್ನು ಅಟ್ಟಿಕೊಂಡು ಹೊರಟವರು ನಾಳೆ ಯಾವ ಊರಿಗೆ ಹೋಗಬೇಕು, ಯಾವ ಜೀವನ ಸಾಗಿಸಬೇಕು ಎಂಬುದನ್ನು ಊಹಿಸಲಾರರು. ಆದರೆ ಸಂಪಾದನೆಯ ಹೊಸ ಮಾರ್ಗಗಳ ಆಕರ್ಷಣೆ ಎಷ್ಟೆಂದರೆ, “ಈ ವರ್ಷ ಮಾರಿ ಬಲೆ ಬಿಟ್ಟರೂ ಚಿಂತೆಯಿಲ್ಲ. ನಮ್ಮ ಹುಡುಗರಿಗೊಂದು ಒಳ್ಳೆಯ ಕೆಲಸವಾಯಿತು ಎಂದು ಒಬ್ಬ ಗುತ್ತಿಗೆದಾರನ ಸಹಾಯಕನೇ ಹೇಳುತ್ತಾನೆ. ಎಲ್ಲ ಕಡೆಯೂ ಹೀಗೆ ಅರಣ್ಯ ನಾಶದ, ಸಂಪತ್ತಿನ ವಿಕೃತ ದುರುಪಯೋಗದ ಕತೆಯೇ. ಸಾವಿರಾರು ವರ್ಷಗಳಿಂದ ಇಲ್ಲೇ ಬದುಕಿದ್ದವರ ಮನಸ್ಸಿನಲ್ಲಿ ಏನಾದರೂ ಪ್ರತಿರೋಧ ಇಲ್ಲ, ಸ್ಪಂದನವು ತದ್ವಿರುದ್ಧವಾಗಿದೆ. ಹೊಸ ಬೆಳವಣಿಗೆಗಳಿಗೆ ವ್ಯಾಪಾರಿಯರು, ಮಿಲಿಟರಿಯವರೂ, ಗುತ್ತಿಗೆದಾರರು ಮಾತ್ರ ಕಾರಣರು ಎಂದು ಮಾತ್ರ ಹೇಳಿದ್ದರೆ, ಚಿತ್ರ ಏಕಮುಖವಾಗಿರುತ್ತಿತ್ತು. ಕಾದಂಬರಿ ತನ್ನ ವಿವರಗಳಲ್ಲೇ ವಸ್ತುನಿಷ್ಠತೆಯನ್ನು, ಸನ್ನಿವೇಶದ ಬಹುಮುಖತೆಯನ್ನು ಗುರುತಿಸುತ್ತದೆ.

“ಸಾಹೇಬರು ಊರಿನಲ್ಲೇ ಕುಳಿತು, ರೂಪಾಯಿಗೆ ಹತ್ತಾಣೆ ಮುನಾಫೆ ತೆಗೆಯುತ್ತಾರೆ ಎಂದರೆ ಊರವರಿಗೆ ಅಸೂಯೆ ಹುಟ್ಟದಿದ್ದೀತೆ? ಸರಿ, ಪ್ರತಿಯೊಬ್ಬರ ಮನಸ್ಸೂ ಕಾಡಿನ ಕಡೆಗೆ ಹರಿಯಿತು. ಮರ ಕೊಳ್ಳುವುದು, ಕಳುಹಿಸುವುದು, ಕತ್ತಲಲ್ಲಿ ಸಾಗಿಸುವುದು. ಊರಿನಲ್ಲೇ ಸಿಗಿದು ರೂಪಾಂತರಗೊಳಿಸುವುದು, ಇವೇ ಮೊದಲಾದ ವನಯುದ್ಧ ಪ್ರಯತ್ನಗಳು ನಡೆದವು” (ಪುಟ 166).

ಕೂಲಿಕಾರರು, ಗ್ರಾಮೀಣರು ಮಾತ್ರ ಈ ಮನೋಸ್ಥಿತಿಗೆ ತಲುಪುವುದಿಲ್ಲ. ಶಿವಪ್ಪನ ಸಹಪಾಠಿಯಾಗಿದ್ದು, ನಂತರ ವಕೀಲಿಕೆ ಮಾಡುತ್ತಿದ್ದ ಗೆಳೆಯನೊಬ್ಬ ಕೂಡ, ಈ ಸುಲಭ, ಶೀಘ್ರ ಹಣದಾಸೆಗೆ ಬಿದ್ದು ಅರಣ್ಯ ಸಂಪತ್ತನ್ನು ಲೂಟಿ ಮಾಡುವ ಗುತ್ತಿಗೆದಾರನಾಗಲು ಬಯಸಿ ಇನ್ನಿಲ್ಲದ ಕಷ್ಟ-ನಷ್ಟಗಳಿಗೆ ಒಳಗಾಗುತ್ತಾನೆ. ಶಿವಪ್ಪನ ತಂದೆಯಾದ ಕಿಟ್ಟಪ್ಪ ಮಾಸ್ತರ ದುರಾಸೆಗೆ ಬಲಿಯಾಗುವುದು ಮಾತ್ರವಲ್ಲ, ಋಜು ಜೀವನ ನಡೆಸುತ್ತಿರುವ ಮಗನ ಬಗ್ಗೆ ಕೂಡ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸುತ್ತಾನೆ.

“ಊರಲ್ಲಿ ಪ್ರತಿಯೊಬ್ಬರೂ ಯುದ್ಧದಿಂದ ದೊರೆತ ಅವಕಾಶವನ್ನು ಯಾವ ರೀತಿಯಿಂದಲೇ ಆಗಲಿ ಸ್ವಭಾವಕ್ಕೆ ತಿರುಗಿಸಿಕೊಂಡು, ಸಾಮಾನಿಗೆ ಬೆಲೆಯೇರುತ್ತಾ ಹೋದರೂ, ದುಡ್ಡನ್ನು ಕಸವೆಂದು ತಿಳಿದು ವರ್ತಿಸುತ್ತಿರುವುದನ್ನು ಕಂಡ” ಡಾಕ್ಟರನಾದ ತನ್ನ ಮಗ ಹತ್ತು ಜನರ ಗಾಯ ತೊಳೆಯುವವ, ನೂರು ಜನಗಳ ರೋಗಕ್ಕೆ ಮದ್ದುಕೊಡುವವ, ಒಂದು ಬಂಗಲೆ ಕಟ್ಟಿಲ್ಲ, ತನ್ನ ಹೆಂಡತಿಯ ಕೊರಳಿಗೆ ಹತ್ತು ಪವನು ಚಿನ್ನ ಹಾಕಲಿಲ್ಲ. ಅಪ್ಪ ಇಕೊ ಎಂದು ನನ್ನ ಕೈ ಮೇಲೆ ಹತ್ತು ರೂಪಾಯಿ ಇಡಲಿಲ್ಲ. ಎಂಥ ನಾಚಿಕೆಗೇಡು” ಅನ್ನುತ್ತಿದ್ದಾರೆ. ಸನ್ನಿವೇಶವೂ ನಾಗರಿಕರೂ ಈ ಮನೋಸ್ಥಿತಿ ತಲುಪಿದ ಮೇಲೆ, ಯುದ್ದಾನಂತರವೂ, ಅರಣ್ಯನಾಶದ ಇದೇ ಕತೆ ಧಾರಾವಾಹಿಯ ರೀತಿಯಲ್ಲಿ ಮುಂದುವರೆಯುತ್ತಾ ಹೋಗುವುದರಲ್ಲಿ ಆಶ್ಚರ್ಯವೇನು? ಶಿವಪ್ಪನ ವೃತ್ತಿ, ದಿನಚರಿಯ ಮೇಲೂ ಈ ಬೆಳವಣಿಗೆಗಳು ಪ್ರಭಾವ ಬೀರುತ್ತದೆ ಎಂಬುದನ್ನು ಗಮನಿಸಬೇಕು. ಗುತ್ತಿಗೆದಾರ ಗಂಪು, ಈ ಸನ್ನಿವೇಶದಲ್ಲೇ ಸಂಪತ್ತು ಗಳಿಸಿದವ, ಪ್ರಭಾವ ಬೆಳೆಸಿಕೊಂಡವ. ಮನುಷ್ಯ ಸಂಬಂಧದ ನೆಲೆಗಳಲ್ಲಿ ಈತ ವೈದ್ಯರ ಕುಟುಂಬಕ್ಕೆ ನೆರವಾಗುತ್ತಾನೆ, ಮಿತ್ರನಾಗುತ್ತಾನೆ ಎಂಬ ಮಾತು ಬೇರೆ. ಆದರೆ ಈತ ಕೂಡ ಸನ್ನಿವೇಶದ ಲಾಭ, ಅನುಕೂಲಗಳನ್ನು ಪಡೆದುಕೊಂಡವನೇ. ಹಾಗೆ ನೋಡಿದರೆ, ಗುಲಾಬಿಯೇ ಇಂತಹ ಸವಾಲಿನ, ಸಮಸ್ಯಾತ್ಮಕ ಸನ್ನಿವೇಶದಲ್ಲೂ ತನ್ನ ಸ್ವಭಾವವನ್ನೂ ಹಿನ್ನೆಲೆಯನ್ನೂ ಮೀರುತ್ತಾಳೆ — ಹಣ, ಚಿನ್ನದ ವ್ಯಾಮೋಹವನ್ನು, ಶಾರೀರಿಕ ಬಯಕೆಯ ಒತ್ತಡಗಳನ್ನು ಕೂಡ ಗೆಲ್ಲುತ್ತಾಳೆ.

ಆವತ್ತಿಗೂ, ಈವತ್ತಿಗೂ ಗಮನಿಸಬೇಕಾದ ಒಂದು ವ್ಯಂಗ್ಯವೆಂದರೆ, ಇಷ್ಟೆಲ್ಲಾ ಹಣ-ಸಂಪತ್ತು ಹರಿದಾಡುತ್ತಿದ್ದರೂ, ಬಹುಪಾಲು ಗ್ರಾಮವಾಸಿಗಳು ನಾನಾ ರೀತಿಯ ರೋಗ-ರುಜಿನಗಳಿಂದ ನರಳುತ್ತಾ ಒದ್ದಾಡುತ್ತಿದ್ದರು. ಒಂದು ಆಸ್ಪತ್ರೆ, ಒಂದು ದವಾಖಾನೆಯನ್ನು ಸ್ಥಾಪಿಸಲು ಯಾರೂ ಮುಂದೆ ಬರುವುದಿಲ್ಲವೆಂಬುದನ್ನು ಬೇರೆಯವರಿಗಿರಲಿ, ಸ್ವತಃ ಶ್ರಮಿಕರಿಗೂ ಇದರ ಬಗ್ಗೆ ಆಸಕ್ತಿಯಿಲ್ಲವೆಂಬುದನ್ನು, ಕೊನೆಗೆ ಇದಕ್ಕೆ ಮುಂದಾಗುವವನು ವೈದ್ಯನಾದ ಶಿವಪ್ಪ ಮಾತ್ರವೇ. ಆದರೆ ಅವನಾದರೂ ಯುದ್ಧದಿಂದ ಮೂಡಿದ ಬೆಳವಣಿಗೆಗಳಿಂದ ಹಣ-ಸಂಪತ್ತು ಮಾಡಿಕೊಂಡಿರುವ ಗಂಪುವಿನ ಎರವು ಪಡೆಯಬೇಕಾಗುತ್ತದೆ. ಅವರ ಹಾಗೆ ಮಾಡಿಕೊಳ್ಳುವಾಗ ಶಿವಪ್ಪ ಯಾವುದೇ ಮೌಲ್ಯದ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಗಂಪು ಕೂಡ ಇದನ್ನು ಬಯಸುವುದಿಲ್ಲ ಎಂಬುದು ಮುಖ್ಯವಾಗುತ್ತದೆ. ಕಾದಂಬರಿಯೇನೂ ಇದನ್ನೆಲ್ಲ ಹೇಳುವುದಿಲ್ಲ. ಕಾದಂಬರಿಯ ಮುಂದಿನ ಗಮನವಿರುವುದು ಕಥನದ ಅವಶ್ಯಕತೆಗೆ, ಶಿವಪ್ಪನ ಕುಟುಂಬದಲ್ಲಿ ಕಂಡುಬರುವ ಬದಲಾವಣೆ, ಪಲ್ಲಟಗಳಿಗೆ —

ಯುದ್ಧದ ನಂತರದ ಬದುಕು ಬದಲಾಯಿತು, ದುಸ್ತರವೂ ಆಯಿತು. ಎಲ್ಲ ಯುದ್ಧಗಳಿಂದಲೂ ಆಗುವಂತೆ ಇಲ್ಲೂ ಕೂಡ ಅದು ಕೆಲವರಿಗೆ ಸಂಪತ್ತಿನ ದಾರಿ ತೋರಿಸಿಕೊಟ್ಟಿದೆ. ಆದರೆ ಹೆಚ್ಚಿನ ಜನಸಂಖ್ಯೆಯನ್ನು ಅಧೋಗತಿಗೆ ಇಳಿಸಿದೆ. ಆಹಾರ ವಸ್ತುಗಳಿಗೆ ಬೆಲೆ ಹೆಚ್ಚಿದ್ದರಿಂದ, ಬೇಸಾಯಗಾರರಿಗೆ ಲಾಭವಾದರೂ, “ಈ ಧಾರಣೆ, ಈ ಬೆಲೆಗಳನ್ನು ಕೊಟ್ಟು ಶ್ರಮಗಾರರು ಬದುಕುವುದು ಉಂಟೆ (ಪುಟ 231). ಶಿವಪ್ಪ-ಇಂದುಮತಿಯರ ದಾಂಪತ್ಯ ಜೀವನದಲ್ಲಿ ವೈಯಕ್ತಿಕವಾದ ಕೊರಗು, ಅತೃಪ್ತಿಗಳಿಗೆ ಹೆಚ್ಚಿನ ಎಡೆ ಇರಲಿಲ್ಲ. ಏಕೆಂದರೆ ಅವರ ಬದುಕು ಹೂವಿನ ಹಾಸಿಗೆಯಲ್ಲದಿದ್ದರೂ, ಅತ್ಯಭಿಲಾಷೆಯಿಲ್ಲದ್ದರಿಂದ ಮುಳ್ಳಿನ ಹಾಸಿಗಯೂ ಆಗಿರಲಿಲ್ಲ” (ಪುಟ 248).

ಇಂತಹ ಇಂದುಮತಿಗೂ ತನ್ನ ಚಿಕ್ಕ ಸಂಸಾರದಲ್ಲಿಯೂ ಅರ್ಥವಾಗದಂತಹ ವಿಚಿತ್ರ ನಡತೆ ಕಾಣುತ್ತಿದೆ. ಹಿಂದಿಗಿಂತ ಹೆಚ್ಚು ಸಂಪಾದನೆಯಿದ್ದರೂ ಏನೋ ಕೊರೆ, ಏನೋ ಅತೃಪ್ತಿ. ತಮಗಿಂತ ಕಡಿಮೆ ವರಮಾನವುಳ್ಳವರ ಗತಿ ಏನು ಎಂದು ಮತ್ತೆ ಮತ್ತೆ ಯೋಚಿಸುತ್ತಾಳೆ. ಯದ್ಧಾನಂತರ ಕಾಳೂರಿನಲ್ಲೇ ಕಾರ್ಖಾನೆಗಳು ಸ್ಥಾಪನೆಯಾಗುತ್ತವೆ. ಕಾರ್ಪೋರೇಟ್ ಶೈಲಿಯ ಮೋಸ-ತಟವಟ ಕೂಡ ಶುರುವಾಗುತ್ತದೆ. ಡಾಕ್ಟರ್ ಕುಟುಂಬಕ್ಕೆ ಆತ್ಮೀಯವಾಗಿರುವ ಗಂಪು ಕೂಡ, ನಿಮ್ಮ ದುಡಿಮೆಗೆ ತಕ್ಕಷ್ಟು ಸಂಪಾದನೆ, ಈ ಪಟ್ಟಣದಲ್ಲಿ ಇಲ್ಲ ಅಲ್ಲವೇ ಎಂಬ ಪ್ರಶ್ನೆ ಕೇಳುತ್ತಾನೆ. ಯಾವ ದುಡಿಮೆಯಲ್ಲಿ, ಯಾವ ವೃತ್ತಿಪರತೆಯಲ್ಲಿ ಸಮಾಜದ ಋಣವನ್ನು ತೀರಿಸುವ ಆಯಾಮವಿರುವುದಿಲ್ಲವೋ, ಅಂತಹ ದುಡಿಮೆ, ಅಂತಹ ದುಡಿಮೆಯಿಂದ ಬೇರೆ ಸಂಪಾದನೆಗೆ ಯಾವ ರೀತಿಯ ಮೌಲ್ಯವೂ ಇಲ್ಲ ಎಂಬ ಕಾರಂತರ ಮೌಲ್ಯದ ಮುಖವಾಣಿಯಾಗುತ್ತಾನೆ ಶಿವಪ್ಪ.

ಚಿತ್ರಕೃಪೆ: Kannadiga World

ಇಂದುಮತಿ-ಶಿವಪ್ಪರ ಸಂಬಂಧ ಮಾಗುವುದು, ಇಂದುಮತಿ ಗಂಡನ ಸಮಾಜಮುಖಿ ದುಡಿಮೆಯ ಲಯವನ್ನು ಅರ್ಥ ಮಾಡಿಕೊಂಡು ಪಕ್ವವಾಗುವುದು ಕೂಡ ಕಾದಂಬರಿಯ ಒಂದು ಮುಖ್ಯ ಎಳೆ. ಇಂದುಮತಿ ಅನುಕೂಲಸ್ಥ ಹಿನ್ನೆಲೆಯಿಂದ ಬಂದವಳು. ವೈದ್ಯಕಿಯÀ ಶಿಕ್ಷಣ ಪಡೆಯುವಾಗಲೇ ಗಂಡ ಆಕೆಯ ತಂದೆಯಿಂದ ನೆರವು ಪಡೆದಿದ್ದಾನೆ. ಅಷ್ಟಾಗಿ ಅದು ವರದಕ್ಷಿಣೆಯ ಮದುವೆಯಲ್ಲ. ವರ್ಷಾನುಗಟ್ಟಲೆ ಹೆಣಗಾಡಿ ಕಂತು ಕಂತಿನಲ್ಲಿ ಶಿವಪ್ಪ ಆ ಸಾಲವನ್ನು ತೀರಿಸುತ್ತಾನೆ. ಕಾಳೂರಿನಲ್ಲಿ ಧಾರವಾಡ ಶೈಲಿಯ ಸಾಮಾಜಿಕ ಜೀವನವೂ ಇಲ್ಲ. ಜೊತೆಗೆ ಶಿವಪ್ಪನ ತಂದೆಯ ವರಾತ ಬೇರೆ — ಮಗ ಆರ್ಥಿಕವಾಗಿ ಮುಂದೆ ಬರುತ್ತಿಲ್ಲ, ಹಣ ಸಂಪಾದನೆ ಮಾಡುತ್ತಿಲ್ಲ ಎಂದು. ಇದ್ಯಾವುದೂ ಶಿವಪ್ಪನನ್ನು ವಿಚಲಿತಗೊಳಿಸುವುದಿಲ್ಲ. ಕ್ರಮೇಣವಾಗಿ, ನಿಖರವಾಗಿ ಇಂದುಮತಿ ಶಿವಪ್ಪನ ಸೂಕ್ಷ್ಮ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಅವಳ ಕೊನೆಯ ಕ್ಷಣಗಳು ಮನಕಲಕುತ್ತವೆ.

ಶಿವಪ್ಪನವರು ಮಂಚದ ಮೇಲೆ ಕುಳಿತು, ಅವಳ ಕೈಯನ್ನು ಹಿಡಿದು ತಲೆ ತಗ್ಗಿಸಿ ಹಣೆಯನ್ನೊಮ್ಮೆ ಮುದ್ದಿಸಿದರು.

“ನನಗೆ ಇನ್ನೇನೂ ಆಸೆಯಿಲ್ಲ. ನನ್ನ ಋಣವನ್ನೆಲ್ಲ ತೀರಿಸಿದ್ದೀರಿ. ಹಾಗೆಯೇ ಲೋಕದ ಋಣವನ್ನು ತೀರಿಸುತ್ತೀರಿ.”

ಒಂದು ಗಳಿಗೆ ಕಾಲ ಶಿವಪ್ಪನವರು ಮಾತಿಲ್ಲದೆ ನಡುಗಿದರು. ಅಲ್ಲಿಯೇ ಇಂದುವಿನ ಮಗ್ಗುಲ ಬದಿಯಲ್ಲಿ ಕುಳಿತು ಅಳತೊಡಗಿದರು (ಪುಟ 276).

ಕಾದಂಬರಿಗಳಲ್ಲಿ ಆದರ್ಶವಾದಿ ಪಾತ್ರಗಳನ್ನು ಸೃಷ್ಟಿಸುವುದು ಕಷ್ಟವಲ್ಲ. ಆದರೆ ಅಂತಹ ಪಾತ್ರಗಳಲ್ಲಿ ಭಾವನಾತ್ಮಕ ಪ್ರಾಮಾಣಿಕತೆ ಮತ್ತು ನಿಸ್ಪøಹತೆ ಇರುವಂತೆ, ಅದು ಓದುಗರಿಗೆ ನಿಜ ಅನ್ನಿಸುವಂತೆ ಪಾತ್ರ ವಿನ್ಯಾಸ ಮಾಡುವುದು ಸವಾಲಿನ ಕೆಲಸ. Iಜeoಟogiಛಿಚಿಟ ಆದ, ನಿರ್ದಿಷ್ಟ ನಿಲುವಿನ ಪಾತ್ರಗಳನ್ನು ಕೂಡ ವಿನ್ಯಾಸಗೊಳಿಸಬಹುದು. ಆದರೆ ಮೇಲೆ ಹೇಳಿದ ಗುಣ ಸ್ವಭಾವಗಳಿರುವ ಪಾತ್ರಗಳನ್ನಲ್ಲ, ಈ ಮಾನದಂಡ ಮುಖ್ಯಸವೆಂದು ಒಪ್ಪುವುದಾದರೆ, ಕಾರಂತರೊಬ್ಬರೇ ಕನ್ನಡ ಕಾದಂಬರಿ ಪ್ರಪಂಚದಲ್ಲಿ ಇಂತಹ ಪಾತ್ರಗಳೂ ಕೂಡ ನಿಜವೆನ್ನುವಂತೆ ಸೃಷ್ಟಿಸುವುದರಲ್ಲಿ ಅಗ್ರಗಣ್ಯರು ಎಂಬುದನ್ನು ಒಪ್ಪಲೇಬೇಕಾಗುತ್ತದೆ. ಯಾವುದೇ ವೃತ್ತಿ, ವ್ಯವಸಾಯದಲ್ಲಿದ್ದರೂ, ಒಂದು ಸ್ತರದ ಸಂವೇದನಾಶೀಲತೆ ತುಂಬಿದ ದುಡಿಮೆ ಶೈಲಿಯಿಂದ ಎಂತಹ ಕಾಲದಲ್ಲೂ ಮನುಷ್ಯ ಸಾರ್ಥಕವಾದ ಬದುಕನ್ನು ನಡೆಸಬಹುದು ಎಂದು ಕಾರಂತರು ಮತ್ತೆ ಮತ್ತೆ ಓದುಗರನ್ನು ಒಪ್ಪಿಸುತ್ತಿರುವಂತಿದೆ. ಇಂದುಮತಿಯ ತೀವ್ರ ಅನಾರೋಗ್ಯದ ನಡುವೆಯೂ ಶಿವಪ್ಪನ ವೃತ್ತಿಯ ದಿನಚರಿ ಬದಲಾಗುವುದಿಲ್ಲ. ಕಾಳೂರು, ಕುಂಬಾರಗುಂಡಿ, ಮತ್ತಿಗುಂಡಿಯಲ್ಲಿ ಏನೆಲ್ಲ ಬದಲಾವಣೆಗಳು ಜರುಗಿಹೋದರೂ, ಶಿವಪ್ಪನ ದುಡಿಮೆಯ ಶೈಲಿ ಮತ್ತು ಬದ್ಧತೆ ಯಾವಾಗಲೂ ಒಂದೇ ರೀತಿಯಲ್ಲಿರುವುದು ಒಂದು ಚೇತೋಹಾರಿ ಸ್ಥಾಯಿ ಭಾವನೆಯಂತಾಗಿದೆ. ದುಡಿಮೆ ಯಾವಾಗ ಒಂದು ಸಾಮಾಜಿಕ ನೈತಿಕ ಮೌಲ್ಯವೂ ಆಗುತ್ತದೆ ಎಂಬುದನ್ನು ಕಾರಂತರು ಶಿವಪ್ಪನ ಪಾತ್ರದ ಮೂಲಕ ವಿವೇಚಿಸಿದಂತಿದೆ.

ತಲೆಮಾರಿನಿಂದ ತಲೆಮಾರಿಗೆ ಶ್ರಮಿಕರ, ವೃತ್ತಿಪರರ, ಕುಶಲಕರ್ಮಿಗಳ, ಕಲಾವಂತರ ದುಡಿಯುವ ಶೈಲಿ ಬದಲಾದ ಹಾಗೆ ಹಣವನ್ನು, ದುಡಿಯುವವರ, ಹಣದ ಮೂಲಕವೇ ದುಡಿಮೆ ಮಾಡುವವರ, ದುಡಿಮೆಯ ಜೀವನದ ಶೈಲಿಯೂ ಕೂಡ ಬದಲಾಗುತ್ತದೆ. ಈ ವಿದ್ಯಮಾನವನ್ನು ಕೂಡ ಕಾದಂಬರಿ ಗಮನಿಸುತ್ತದೆ. ಕೆಲವೇ ವರ್ಷಗಳಲ್ಲಿ, ಯುದ್ಧದ ವಿಶೇಷ ಸಂದರ್ಭವೂ ಕಾರಣವಾಗಿ, ವಾಸಪ್ಪಯ್ಯ, ಶ್ರೀಪತಿರಾಯ, ಆದಂ ಸಾಹೇಬರ ಕುಟುಂಬ ಮತ್ತು ಬಂಧುಗಳು, ಪಂಜಾಬ್‍ನಿಂದ ಬರುವ ಸಿಖ್ ಜನಾಂಗದವರು, ಎಲ್ಲರೂ ದುಡ್ಡಿಗಾಗಿ, ಲಾಭಕ್ಕಾಗಿ ಹಪಹಪಿಸುವವರೇ. ಈ ಹಪಾಹಪಿತನದಲ್ಲಿ ಗೆಲುವು ಸಾಧಿಸುವುದೇ. ಆದರೆ ಇದಕ್ಕೆ ಬೆಲೆಯನ್ನು ತೆರಬೇಕಾಗುತ್ತದೆ. ಆದರೆ ಒಂದೇ ರೀತಿಯಲ್ಲಲ್ಲ. ಕುಟುಂಬದ ಶಾಂತಿ ಕೆಡಬಹುದು, ಮನಸ್ಸಿನ ಸ್ವಾಸ್ಥ್ಯ ತೀವ್ರವಾಗಿ ಏರುಪೇರಾಗಿ ಯಾವಾಗಲೂ ಆತಂಕದ ಸ್ಥಿತಿಯಲ್ಲಿರುವುದು, ದೇಹಕ್ಕೆ ಅಂಟಿಕೊಳ್ಳುವ, ಅಂಟಿಸಿಕೊಳ್ಳುವ ಕಾಯಿಲೆಗಳು, ಸೆರಮೆನವಾಸ, ಹೀಗೆ ಒಂದಲ್ಲ ಒಂದು ವಿರುದ್ಧ ಪರಿಣಾಮಗಳನ್ನು ಇಲ್ಲಿಯ ಎಲ್ಲ ವಣಿಕ ಕುಟುಂಬಗಳೂ ಎದುರಿಸುತ್ತವೆ.

ವಲಸೆ-ಚಲನೆಯ ಪ್ರಶ್ನೆ. ಈ ಅಧ್ಯಯನಕ್ಕೆಂದು ಪರಿಶೀಲಿಸಿದ ಎಲ್ಲ ಕಾದಂಬರಿಗಳಲ್ಲೂ ಹಾಸುಹೊಕ್ಕಾಗಿದೆ. ಇಲ್ಲೂ ಕೂಡ ಗುಂಪು ವಲಸೆ, ಗುಳೆ ಹೋಗುವುದು, ಎಲ್ಲ ವಿದ್ಯಮಾನಗಳೂ ಇವೆ. ಆದರೆ ಮಹಾಯುದ್ಧದ ವಿಶೇಷ ಸಂದರ್ಭದಲ್ಲಿ ಇದು ನಡೆಯುವುದರಿಂದ, ವಲಸೆಯ ಪ್ರಶ್ನೆ ತೀರಾ ಮುನ್ನೆಲೆಗೆ ಬರುವುದಿಲ್ಲ. ಈ ವಿಶೇಷ ಸಂದರ್ಭ ಏನೇ ಇದ್ದರೂ, ವಲಸೆ ಹೋಗುವವರು ಬರುವವರ ಮೇಲೆ ಆಗುವ ಪರಿಣಾಮ ಒಂದೇ ರೀತಿಯದಿರುತ್ತದೆ ಎಂಬುದನ್ನು ಗಮನಿಸಬೇಕು. ಚೋಮನ ಮಕ್ಕಳು ದುಡಿಯುವುದಕ್ಕೆ ಹೋದಾಗ ವಾಸ ಮಾಡುವ ಮನೆಯ ರೀತಿಗೂ, ಅಂಟಿಸಿಕೊಳ್ಳುವ ಕಾಯಿಲೆಗಳಿಗೂ, ಮತ್ತಿಗುಂಡಿ, ಕುಂಬಾರಗುಂಡಿಯ ಶ್ರಮಿಕರ ಮನೆಗಳ ಉದ್ದಳತೆ, ಎದುರಿಸಬೇಕಾದ ಕಾಯಿಲೆ ಕಸಾಲೆಗಳಿಗೂ ಏನು ವ್ಯತ್ಯಾಸವಿದೆ ಹೇಳಿ? ಚೋಮನ ದುಡಿ ಕಾದಂಬರಿಯಲ್ಲಿ ನದಿ ತೀರದಲ್ಲಿ ಒಂದು ಮಗು ಸತ್ತಾಗ ತೋರುವ ನಿರ್ಲಕ್ಷ್ಯಕ್ಕೂ ಅಂತಹ ವ್ಯತ್ಯಾಸವೇನಿಲ್ಲ. ಕಾಲಮಾನದ ದೃಷ್ಟಿಯಿಂದ ಒಂದು ಇಪ್ಪತ್ತು-ಇಪ್ಪತ್ತೈದು ವರ್ಷ ಆ ಕಡೆ, ಈ ಕಡೆ ಆಗಿರಬಹುದಷ್ಟೆ.

ಯಾವುದೇ ಕಾದಂಬರಿ ನಿರ್ದಿಷ್ಟ ಕಾಲಮಾನದಲ್ಲಿ ಜನ ಬದುಕುವ ರೀತಿಯನ್ನು ಹೇಳುತ್ತದೆ. ಮುಂದಿನ ತಲೆಮಾರಿನ ಓದುಗರು ಕೃತಿಗಳನ್ನು ಓದುವಾಗ, ಕಾಲ, ಜೀವನದ ಕಷ್ಟ-ನಷ್ಟಗಳು ಏನೂ ಬದಲಾಗೇ ಇಲ್ಲವಲ್ಲ ಎಂಬ ಭಾವನೆ ಖಂಡಿತ ಬರುತ್ತದೆ. ಇದಕ್ಕೆ ಬದುಕಿನ ಆವರ್ತನ ಸ್ವಭಾವ ಕಾರಣವೋ, ಕಾದಂಬರಿಕಾರರಿಗೆ ಭವಿಷ್ಯದ ಬಗ್ಗೆ ಭರವಸೆ ಇಲ್ಲದೇ ಹೋದದ್ದು ಕಾರಣವೋ, ಇಲ್ಲ ಸಮಾಜ ಮೂಲಭೂತವಾಗಿ ಬದಲಾಗದೇ ಇರುವುದು ಕಾರಣವೋ — ಇಂತಹ ಪ್ರಶ್ನೆಗಳನ್ನು ಕೂಡ “ಜಾರುವ ದಾರಿ” ಕಾದಂಬರಿ ಮುನ್ನೆಲೆಗೆ ತರುತ್ತದೆ.

3 comments to “ಕಾರಂತರ ಕಾದಂಬರಿ “ಜಾರುವ ದಾರಿಯಲ್ಲಿ” ಕುರಿತು ಕೆ. ಸತ್ಯನಾರಾಯಣ ಬರಹ”
  1. ಈ ಕಾದಂಬರಿ ಯ ಬಗ್ಗೆ ಏನೂ ಗೊತ್ತಿರಲಿಲ್ಲ ಸತ್ಯನಾರಾಯಣ ಅವರ ವಿಮರ್ಶೆ ಅದರ ಪ್ರಸ್ತುತತೆ ಯನ್ನು ಅರ್ಥ ಪೂರ್ಣವಾಗಿ ವಿವರಿಸುತ್ತದೆ ರಘುನಾಥ್ ಎಂ ಎಸ್ ಬೆಂಗಳೂರು

  2. ಕಾರಂತರ ಈ ಅಷ್ಟೇನೂ ಪರಿಚಿತವಲ್ಲದ ಕೃತಿಯನ್ನು ತುಂಬ ಚೆನ್ನಾಗಿ ಪರಿಚಯಿಸಿದ್ದೀರಿ. ಸತ್ಯನಾರಾಯಣ, ಧನ್ಯವಾದಗಳು.
    ಶಿವರಾಮ ಪಡಿಕ್ಕಲ್

  3. ಸತ್ಯನಾರಾಯಣ ರ ಈ ನೋಟ ಮೌಲಿಕ ವಾಗಿದೆ ದುರಾಸೆ ಮತ್ತು ಲಂಪಟತೆ ಸದಾ ಕಾಲಕ್ಕೂ ವಿಸ್ತರಿಸುವ ಜಾಯಮಾನಗಳಾಗಿದ್ದು ಶಿವಪ್ಪರಂತಹವರ ಜೀವಪರ ಪಾತ್ರ ಗಳು ಕಡಿಮೆ ಸಂಖ್ಯೆಯಾದರೂ ಅದೇ ಸಮಾಜದ ಭಾಗವಾಗಿ ಬದುಕಿನ ವಿಶ್ವಾಸ ಉಂಟಾಗುತ್ತದೆ
    ಕಾರಂತರ ಸೂಕ್ಷ್ಮ ಮತ್ತು ದಿಟ್ಟ ಗ್ರಹಿಕೆಯನ್ನು ಇಲ್ಲಿ ತುಂಬಾ ಚನ್ನಾಗಿಪರಿಚಯಿಸಲಾಗಿದೆ
    ಸತ್ಯನಾರಾಯಣ ರಿಗೆ ಧನ್ಯವಾದಗಳು

Leave a Reply to ನಾ ಸು ನಾಗೇಶ Cancel reply