ಋತುಮಾನದ ಮೊದಲ ಪುಸ್ತಕ !

ಇದೀಗ ನಿಮ್ಮ ಪುಸ್ತಕ ಕಪಾಟಿನೊಳಗೆ ಋತುಮಾನ:

ಅಂತರ್ಜಾಲದಲ್ಲಿ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಸಾಹಿತ್ಯಾಸಕ್ತ ಸಹೃದಯರೊಂದಿಗೆ ಒಡನಾಡಿದ ನಂತರ ಋತುಮಾನದಿಂದ ಮೊದಲ ಪುಸ್ತಕ ಪ್ರಕಟಿಸುತಿದ್ದೇವೆ

೧೯೯೭ರಲ್ಲಿ ಚಿಂತನ ವೇದಿಕೆ ಅಂಬಲಪಾಡಿ ಉಡುಪಿ (ಪ್ರಸ್ತುತ ಮುರಾರಿ ಬಲ್ಲಾಳ ಚಿಂತನ ಫೌಂಡೇಶನ್) ಮತ್ತು ರಥಬೀದಿ ಗೆಳೆಯರು (ರಿ), ಉಡುಪಿ ಇವರ ಸಹ ಪ್ರಾಯೋಜಕತ್ವದಲ್ಲಿ ಅಂಬಲಪಾಡಿ ದೇವಸ್ಥಾನದ ಸಭಾಂಗಣದಲ್ಲಿ ದಿನವಿಡೀ ನಡೆದ ವಿಚಾರ ಸಂಕಿರಣದಲ್ಲಿ ಮಂಡನೆಯಾದ ಉಪನ್ಯಾಸಗಳ ಬರಹ ರೂಪ ಈ ಪುಸ್ತಕ. ಹಲವು ವಿದ್ವತ್ ಪೂರ್ಣ ಪ್ರತಿಭೆಗಳು ನಡೆಸಿರುವ ಅಪರೂಪದ ಸಂವಾದ ವೈದಿಕ -ಅವೈದಿಕ ದರ್ಶನ. ಋತುಮಾನದ ಮೊದಲ ಪ್ರಕಟಣೆಗೆ ಇದಕ್ಕಿಂತ ಒಳ್ಳೆಯ ಆಯ್ಕೆ ನಮ್ಮೆದುರಿರಲಿಲ್ಲ. ಪ್ರಾಚೀನ ಭಾರತೀಯ ವೈದಿಕ-ಅವೈದಿಕ ಪರಂಪರೆಯಲ್ಲಿ ನಡೆದ ತಾತ್ವಿಕ ವಾಗ್ವಾದಗಳ ಕುರಿತು ವಿದ್ವಾಂಸರುಗಳಾದ ಡಿ.ಆರ್. ನಾಗರಾಜ್, ಅವಧಾನಿ ಅಶ್ವತ್ಥನಾರಾಯಣ ಮತ್ತೂರು, ಎಂ. ರಾಜಗೋಪಾಲ ಆಚಾರ್ಯ, ವಿದ್ವಾನ್ ಎನ್. ರಂಗನಾಥ ಶರ್ಮ, ಪ್ರಭಾಕರ್ ಜೋಶಿ, ಶ್ರೀಪತಿ ತಂತ್ರಿ, ರಾಜನ್ ಗುರುಕ್ಕಳ್ ಇಲ್ಲಿ ಮಾತಾಡಿದ್ದಾರೆ. ಮನುದೇವದೇವನ್ ಅವರು ಹಳೆಯ ಸಂವಾದಕ್ಕೊಂದು ಹೊಸ ಪ್ರತಿಕ್ರಿಯೆ ಬರೆದಿದ್ದಾರೆ. ಈ ಇಡೀ ಸಂವಾದವನ್ನು ಅಚ್ಚುಕಟ್ಟಾಗಿ ಬರಹರೂಪಕ್ಕೆ ಇಳಿಸಿದ ಎಲ್ಲಾ ಶ್ರೇಯಸ್ಸು ಪ್ರಜ್ಞಾ ಶಾಸ್ತ್ರೀಯವರದ್ದು. ಅವರಿಗೆ ಋತುಮಾನ ಆಭಾರಿ.

ಜಗತ್ತು ಸ್ಪಷ್ಟವಾಗಿ ದ್ವಿದಳವಾಗುತ್ತಿದೆ; ಅಸಂಖ್ಯ ಭಾರತೀಯ ಪರಂಪರೆಗಳ ನಡುವೆ ಸಾವಿರಾರು ವರ್ಷಗಳ ಕಾಲ ಮಥನಗೊಳ್ಳುತ್ತ, ಪುನರುಜ್ಜೀವಿತಗೊಳ್ಳುತ್ತ ಬಂದ ವಿಚಾರಗಳು ಎರಡು ಸವಾಲುಗಳನ್ನು ಎದುರಿಸುತ್ತಿವೆ. ಒಂದು ಪಾಶ್ಚಾತ್ಯ ಆಧುನಿಕತೆಯ ಎದುರು ಹಳತಾಗುವುದಾದರೆ, ಮತ್ತೊಂದು ನಮ್ಮದೇ ಏಕಶಿಲಾ ಪ್ರತಿಮೆಯಡಿಯಲ್ಲಿ ಅಪ್ಪಚ್ಚಿಯಾಗುವುದು. ಸುಮಾರು ೨೩ ವರ್ಷಗಳ ಹಿಂದೆ ಈ ಬಗೆಯ ವಾಗ್ವಾದಗಳೇ ನಶಿಸಿಹೋಗುತ್ತಿವೆ ಎಂಬ ಆತಂಕದಲ್ಲಿ – ಮೇಲ್ನೋಟಕ್ಕೆ ಪರಸ್ಪರ ವಿರೋಧಿಗಳೆಂದು ತೋರುವ – ವೈಚಾರಿಕರನ್ನು ಕೂಡಿಸಿ ಒಂದು ಚಿಂತನಾಘೋಷ್ಷ್ಠಿ ಯನ್ನು ನಡೆಸಲಾಗಿತ್ತು. ಚರ್ಚೆಯನ್ನು ಆರಂಭಿಸುತ್ತ ವಿದ್ವಾಂಸ ಡಿ.ಆರ್. ನಾಗರಾಜ್ ಒಂದು ಮಾತನ್ನು ನುಡಿಯುತ್ತಾರೆ : ಅದು ಭಾರತೀಯ ಪರಂಪರೆ “ಸಂಕಲಾನುಸಂಧಾನ” ದ, ಅಂದರೆ, ಎಲ್ಲ ತಾತ್ವಿಕ ಪ್ರಸ್ಥಾನಗಳೂ ಅಂತಿಮವಾಗಿ ಒಂದೇ ಆಗುವ ಪರಂಪರೆಯೂ ಹೌದು ಎಂಬ ಮಾತು. ಸದ್ಯದ ಭಾರತದ ವಾಸ್ತವದಲ್ಲಿ ತುಂಬಾ ಮುಖ್ಯವಾದ ಮಾತಿದು.

ಕೇವಲ ೧೨೫ ಪುಟಗಳಲ್ಲಿ ಅದ್ಬುತ ಪ್ರತಿಭೆಗಳ ವಾಗ್ವೈಖರಿ, ವಿಚಾರದರ್ಶನಗಳನ್ನು ಒಳಗೊಂಡ ಈ ಪುಸ್ತಕವನ್ನ ಬೇಡಿಕೆಗೆ ತಕ್ಕಂತೆ ಪ್ರಕಟಿಸಲಿದ್ದೇವೆ (“ಪ್ರಿಂಟ್ ಆನ್ ಡಿಮಾಂಡ್”) . ಬೇಡಿಕೆಗೆ ತಕ್ಕಂತೆ ಪ್ರಕಟಿಸಲು ಸ್ವಲ್ಪ ಹೆಚ್ಚು ವೆಚ್ಚ ತಗಲುವುದರಿಂದ ಬೆಲೆಯನ್ನು ೧೫೦ ರೂಪಾಯಿಗೆ ನಿಗದಿ ಮಾಡಿದ್ದೇವೆ. ಈ ಪುಸ್ತಕ ಸದ್ಯದಲ್ಲಿ ಋತುಮಾನದ ಇ-ಪುಸ್ತಕವಾಗಿಯೂ ಲಭ್ಯವಾಗಲಿದೆ. ಋತುಮಾನ ಸ್ಟೋರ್ ನ ಈ ಕೆಳಗಿನ ಕೊಂಡಿಯನ್ನು ಬಳಸಿ ತಾವು ಈ ಪುಸ್ತಕವನ್ನು ಕೊಳ್ಳಬಹುದು. ಋತುಮಾನದ ಮೊಬೈಲ್ ಆ್ಯಪ್ ನಲ್ಲೂ ನೀವಿದನ್ನು ಖರೀದಿಸಬಹುದು .
https://store.ruthumana.com/product/vaidika-avaidika-darshana

ನಮ್ಮೆಲ್ಲ ಹುಚ್ಚು ಸಾಹಸಗಳಿಗೆ ಜೊತೆಯಾಗಿರುವ ಓದುಗ ಲೋಕ ಈ ಹೊಸ ಹುಚ್ಚನ್ನ ಮೆಚ್ಚಿ ಪ್ರೋತ್ಸಾಹಿಸಲಿದೆ ಎಂಬ ನಿರೀಕ್ಷೆ ಯೊಂದಿಗೆ…
ನೀವೂ ಕೊಳ್ಳಿ.. ನಿಮ್ಮ ಸ್ನೇಹಿತರಿಗೂ ಉಡುಗೊರೆಯಾಗಿ ನೀಡಿ.

ಮುಖಪುಟ ಚಿತ್ರ : ಮಾಳವಿಕಾ ರಾಜ್
ವಿನ್ಯಾಸ : ಚೆನ್ನಕೇಶವ

ಪ್ರತಿಕ್ರಿಯಿಸಿ