ಸೆಕ್ಯೂಲರಿಸಮ್ಮಿನ ಮರಣೋತ್ತರ ಪರೀಕ್ಷೆ ಮತ್ತು ವಾಸ್ತವದತ್ತ ಕುರುಡುನೋಟ

“ದ ಪ್ರಿಂಟ್” ಗೆ ಯೋಗೆಂದ್ರ ಯಾದವ್ ಬರೆದ ಲೇಖನದ ಕನ್ನಡ ಅನುವಾದವನ್ನು ಋತುಮಾನ ಈ ಹಿಂದೆ ಪ್ರಕಟಿಸಿತ್ತು. ಅಯೋಧ್ಯೆಯ ಭೂಮಿಪೂಜೆಯನ್ನು ಗಮನದಲ್ಲಿಟ್ಟುಕೊಂಡು ಅವರು ಅದರ ಸುತ್ತಲಿನ ಹೊಸಭಾರತದ ರಾಜಕಾರಣವನ್ನು ಪರೀಕ್ಷಿಸಲು ಪ್ರಯತ್ನಿಸಿದ್ದರು. ಅದಕ್ಕೆ ಪ್ರತಾಪ್ ಭಾನು ಮೆಹ್ತಾ The Indian Express ನಲ್ಲಿ ಪ್ರತಿಕ್ರಿಯೆಯನ್ನು ಬರೆದಿದ್ದರು. ಅದರ ಅನುವಾದ ಇಲ್ಲಿದೆ.  ಈ ಚರ್ಚೆ-ಸರಣಿಯ ಭಾಗವಾಗಿ ಪ್ರಕಟಗೊಳ್ಳುತ್ತಿರುವ ಎರಡನೇ ಬರಹ ಇದು.

ಭಾರತದ ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯ ಒಳಗಿನ ಮೂಲ ಬೇರನ್ನು ತಲುಪಬೇಕಾದ ಪ್ರಯತ್ನಗಳಲ್ಲಿ ಸೆಕ್ಯುಲರಿಸಮ್ಮಿನ ಪರಾಭವದ ಬಗ್ಗೆ ತನಿಖಾ ರೀತಿಯ ಶೋಧಿಸುವ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಈ ಧಾಟಿಯ ಒಂದು ವಿಶಿಷ್ಠವಾದ ಆತ್ಮವಿಮರ್ಶಕ ಬರಹವನ್ನು ಯೋಗೇಂದ್ರ ಯಾದವ್ ಅವರು ” ಸೆಕ್ಯುಲರಿಸಮ್ ತನ್ನ ಧರ್ಮದ ಭಾಷೆಯನ್ನು ಬಿಟ್ಟುಕೊಟ್ಟಿತು. ಅಯೋಧ್ಯಾದಲ್ಲಿ ನಡೆದ ಭೂಮಿಪೂಜೆ ಅದರ ಪರಿಣಾಮ ” ಎಂಬ ತಲೆಬರಹದ ಅಡಿಯಲ್ಲಿ ಆಗಸ್ಟ್ 5ರ ‘ದ ಪ್ರಿಂಟ್’ ಪತ್ರಿಕೆಯಲ್ಲಿ ಬರೆದರು. ನಾನೂ ಯೋಗೇಂದ್ರ ಅವರೂ ಹಲವು ವಿಷಯಗಳ ಬಗ್ಗೆ ಪರಸ್ಪರ ಒಪ್ಪುತ್ತೇವೆ : ಪ್ರಾಚೀನ ಕ್ರಮದ ಬಹುತ್ವ ಮತ್ತು ಭಾರತೀಯ ಸಂಸ್ಕೃತಿಯನ್ನು ಯಾವುದೇ ಗಾಂಭೀರ್ಯದೊಂದಿಗೆ ಅರ್ಥಮಾಡಿಕೊಳ್ಳುವುದನ್ನು ಅಸಮರ್ಥಗೊಳಿಸಿದ, ಎಲ್ಲವನ್ನೂ ಸರಳಸಮೀಕರಣವಾಗಿಸಿಬಿಡುವ ಎಡದ ಭೌದ್ಧಿಕ ರೀತಿಗಳು. ರಾಜಕೀಯ ಅನುಕೂಲಸಿಂಧುತ್ವಕ್ಕೆ ಸೆಕ್ಯುಲರಿಸಮ್ ಸಮಾನಾರ್ಥವಾಗಿಬಿಟ್ಟಿತು. ಅದರಿಂದಾಗಿ ಒಂದು ಕ್ರಿಯಾಶೀಲವಾದ ಸ್ಪರ್ದಾತ್ಮಕ ಆಹುತೀಕರಣ ಭಾವವನ್ನು ಕಟ್ಟಿಡಲಾಯಿತು.

ಆದರೆ ಮುಂದುವರೆದು ಯೋಗೇಂದ್ರ ಅವರು ಹೀಗೂ ಹೇಳುತ್ತಾರೆ : ಸೆಕ್ಯುಲರಿಸಮ್ ಪರಾಭವಗೊಂಡಿದ್ದು ಯಾತಕ್ಕಾಗಿ ಎಂದರೆ , ಅದು ನಮ್ಮ ಭಾಷೆಗಳಿಗೆ ಬೆಂಬಲವನ್ನು ನಿರಾಕರಿಸಿತು ಏಕೆಂದರೆ ಅದು ನಮ್ಮ ಪರಂಪರೆಯ ಭಾಷೆಗಳ ಜೊತೆಗೆ ನೆಂಟಸ್ಥನ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ, ಏಕೆಂದರೆ ಅದು ನಮ್ಮ ಧರ್ಮಗಳ ಭಾಷೆಯನ್ನು ಕಲಿಯುವುದನ್ನಾಗಲೀ ಮಾತನಾಡುವುದನ್ನಾಗಲೀ ಒಪ್ಪಿಕೊಳ್ಳಲಿಲ್ಲ.ನಿರ್ದಿಷ್ಟವಾಗಿ ಹೇಳಬೇಕೆಂದರೆ ನಮ್ಮ ಕಾಲಕ್ಕೆ ತಕ್ಕಂತಹ ಹಿಂದು ಧರ್ಮದ ನವವ್ಯಾಖ್ಯಾನವನ್ನು ಬೆಳೆಸುವುದರ ಬದಲು ಅದು ಹಿಂದು ಧರ್ಮವನ್ನು ಅಪಹಾಸ್ಯ ಮಾಡಿತು. ಇದರಿಂದಾಗಿ ಸೆಕ್ಯುಲರಿಸಮ್ ಸೋಲನ್ನಪ್ಪಿತು.” ಇದೊಂದು ಮೇಲ್ಪರದರದಲ್ಲಿ ಸರಿಯಂತೆ ಕಾಣಿಸಿಬಿಡುವ ರೂಢಿವೈಖರಿಯ ಹೇಳಿಕೆ. ಆದರೆ ಆಲೋಚಿಸಿದಾಗ ಈ ಹೇಳಿಕೆ, ಐತಿಹಾಸಿಕವಾಗಿ ಸಮಸ್ಯಾತ್ಮಕವಾಗಿಯೂ,ತಾತ್ವಿಕವಾಗಿ ಸಂಶಯಾಸ್ಪದವಾಗಿಯೂ ಮತ್ತು ಸಾಂಸ್ಕೃತಿಕವಾಗಿ ಅಪಾಯಕಾರಿಯಾಗಿಯೂ ಕಾಣಿಸುತ್ತದೆ.

ಭಾರತ ಗಣರಾಜ್ಯ ದೇಶದ ವಿಭಜನೆಯ ಹಿಂಸಾತ್ಮಕ ಮಹಾದುರಂತದ ನೆರಳಿನಲ್ಲಿ ಜನ್ಮ ತಾಳಿತು. ಆಗ ಮಾರ್ಕ್ಸ್‌ವಾದದ  ಎಡಪಂಥೀಯರನ್ನು ಬಿಟ್ಟು ಮಿಕ್ಕೆಲ್ಲಾ ರಾಷ್ಟ್ರೀಯ ಪಕ್ಷಗಳ ನಾಯಕರುಗಳೂ ಸಹ ತಮ್ಮ ರಾಜಕೀಯ ಭಾಷಾನುಡಿಗಟ್ಟುಗಳಲ್ಲಿ ಧಾರ್ಮಿಕ ಭಾಷೆಯನ್ನು ಹೊಸೆಯುತ್ತಿದ್ದರು. ಭಾರತೀಯ ಶಬ್ದಸಂಗ್ರಹದ ಒಳಗಡೆಯೇ ಒಂದು ವಿಶಿಷ್ಠ ಭಾರತೀಯ ಆಧುನಿಕತೆಯನ್ನು ಅವರು ರಚನಾತ್ಮಕವಾಗಿ ನೇಯುತ್ತಿದ್ದರು. ಅಂದರೆ ಅವರು, ಸಂಪ್ರದಾಯವನ್ನು ಕಡೆಗಣಿಸದೆಯೇ ಸಂಪ್ರದಾಯವನ್ನು ಮೀರಿ ಮುನ್ನೆಡೆಯುವ ಪ್ರಯತ್ನದಲ್ಲಿದ್ದರು. ಆದರೆ ಗಾಂಧಿ ಮನಗಂಡಂತೆ ಆ ಯೋಜನೆ ಒಂದು ಅರ್ಥದಲ್ಲಿ ಸೋಲನ್ನಪ್ಪಿತು : ಅಂದರೆ ಅದು ಭಾರತದ ಕೋಮುವಾದವನ್ನು ಅಡ್ಡಗಟ್ಟಲಿಲ್ಲ. ಗಾಂಧಿಯ ಉದಾಹರಣೆ ಕಳೆದುಳಿದ ನೈತಿಕ ಬಲವನ್ನು ಬಳಸಿಕೊಳ್ಳಬಹುದು. ಆದರೆ ಯಾವಾಗ ಧಾರ್ಮಿಕ ವಿಷಯಗಳು ರಾಜಕೀಯಕ್ಕೆ ಕರೆದುತರಲ್ಪಟ್ಟವೋ ಆಗೆಲ್ಲಾ ಅವು ಘರ್ಷಣೆಯನ್ನು ಹುಟ್ಟುಹಾಕಿದವು. ಅವು 1935 ನಲ್ಲಿ ಕಾಂಗ್ರೆಸ್ ಸರಕಾರಗಳು ಚುನಾಯಿತರಾದಾಗ ಮಾಡಿದ ಅನುದಿನದ ಕಾರ್ಯನೀತಿಗಳಲ್ಲಿರಬಹುದು ಅಥವಾ ವಿಶಾಲವಾದ ಸೈದ್ಧಾಂತಿಕ ಯೋಜನೆಗಳು ಮತ್ತು ಬಳಕೆಯ ಮಾತುಗಳಲ್ಲಾಗಿರಬಹುದು, ಅವು ಘರ್ಷಣೆಯನ್ನು ಹುಟ್ಟುಹಾಕಿದವು. ಆದ್ದರಿಂದ ರಾಜಕೀಯದ ಭಾಗದಂತೆ ಧರ್ಮವನ್ನು ಗಂಭೀರವಾಗಿ ಪರಿಗಣಿಸುವುದು ಕೋಮುವಾದದ ಸಮಸ್ಯೆಯನ್ನು ಬಗೆಹರಿಸುತ್ತದೆ, ಎನ್ನುವುದು ಐತಿಹಾಸಿಕವಾಗಿ ಒಂದು ಸಂದೇಹಾತ್ಮಕ ಪ್ರತಿಪಾದನೆಯಾಗಿದೆ. ಆಧುನಿಕ ಧಾರ್ಮಿಕ ರಾಜಕೀಯವು, ಪ್ರಜಾಸತ್ತೆ ಮತ್ತು ರಾಷ್ತ್ರೀಯತೆಗಳ ಮೂಸೆಯ ಅಗ್ನಿಪರೀಕ್ಷೆಯಲ್ಲಿ ಹುಟ್ಟಿದೆಯೇ ಹೊರತು ಧರ್ಮಶಾಸ್ತ್ರದಲ್ಲಲ್ಲ.

ರಾಷ್ಟ್ರವಿಭಜನೆಯ ಹೊಸದರಲ್ಲಿ ಕಲಿತ ಪಾಠವೆಂದರೆ ಹಿಂಸಾಚಾರವನ್ನು ತಪ್ಪಿಸಲು, ಧರ್ಮವನ್ನು ರಾಜಕೀಯದಿಂದ ಹೊರಗಿಟ್ಟು ರಾಜಕೀಯದ ಹಿಡಿತದ ಎಲ್ಲೆಯನ್ನು ಕಡಿಮೆ ಮಾಡುವುದಾಗಿತ್ತು. ಆಗಿನ ಭಾರತೀಯ ಸೆಕ್ಯುಲರಿಸಮ್ಮಿನ ಮಿಡುಕಿದ ಅಂತಃಪ್ರೇರಣೆಯೇನೆಂದರೆ, ಧರ್ಮವನ್ನು ಸಾರ್ವಜನಿಕ ಸ್ಪರ್ದೆಯ ವಿಷಯವನ್ನಾಗಿಸದಂತೆ ತಡೆಯಲು ಪ್ರಯತ್ನಿಸುತ್ತಾ ಶಾಂತಿಯನ್ನು ಬೆಳೆಸುವುದು. ಆಗಿನ ನಮ್ಮ ಬಹುತೇಕ ಎಲ್ಲಾ ರಾಜಿ ಒಪ್ಪಂದಗಳೂ ಅದರದೇ ಪರಿಣಾಮವಾಗಿತ್ತು. ಇದೊಂದು ಹಿಡಿದಿಟ್ಟುಕೊಳ್ಳಲಾಗದಂತಹ ಸಿದ್ಧಾಂತ ಸ್ಥಾನ. ಏಕೆಂದರೆ ದಬ್ಬಾಳಿಕೆಯ ಅಧಿಕಾರ ಸೋಪಾನ ವ್ಯವಸ್ಥೆಯ ಧಾರ್ಮಿಕ ಶ್ರೇಣಿಗಳಿಂದ ವ್ಯಕ್ತಿಗಳನ್ನು ಬಚಾವು ಮಾಡಲು ಆಧುನಿಕ ರಾಷ್ಟ್ರದ ಸುಧಾರಣೆಗಳಿಗಾಗಿ ಧರ್ಮದ ಮಧ್ಯವರ್ತಿಕೆ ಅವಶ್ಯವಾಗುತ್ತದೆ. ಕೆಲವು ಬಾರಿ ಈ ಮಧ್ಯವರ್ತಿಕೆಯನ್ನು ಕೆಲವು ಗುಂಪುಗಳಿಗೆ ಇತರ ಗುಂಪುಗಳಿಗಿಂತ ಹೆಚ್ಚಾಗಿ ಅನ್ವಯಿಸುವುದರಿಂದ ಅಸಮಾನವಾಗಿ ಉಪಯೋಗಿಸಲಾಯಿತು. ಆದರೆ ಈ ದುರ್ಬಲತೆಗಳು ಸಂಪೂರ್ಣ ಪ್ರಮಾಣದ ಬಹುಸಂಖ್ಯಾತವಾದವನ್ನು ನ್ಯಾಯಸಮ್ಮತಗೊಳಿಸಿಬಿಡುವುದಕ್ಕೆ ಅವೇ ಕಾರಣವೆಂದು ವಿವರಿಸಿಬಿಡುತ್ತದೆಯೇ?

ಈಗಿನ ಸಧ್ಯದ ವಿವಾದ ಪರಂಪರಾ ರೂಪದ ಧಾರ್ಮಿಕತೆಯ ಬಗೆಗಂತೂ ಅಲ್ಲವೇ ಅಲ್ಲ : ಹೆಚ್ಚೂಕಡಿಮೆ ಎಲ್ಲಾ ಹಿಂದೂಗಳೂ ತಾವು ಕಾಪಾಡಿಕೊಂಡು ಬಂದಿರುವ ತಮ್ಮ ಧಾರ್ಮಿಕತೆಗೂ ಮತ್ತು ಆಧುನಿಕತೆಗೂ ತಮ್ಮದೇ ಆದ ಸೈದ್ಧಾಂತಿಕ ಶಾಂತಿ ಒಪ್ಪಂದವನ್ನು ಮಾಡಿಕೊಂಡೇ ಬಿಟ್ಟಿದ್ದಾರೆ. ಹಾಲಿಯಲ್ಲಿನ ಸ್ಪರ್ದಾ ವಿವಾದ ಇರುವುದು, ಧರ್ಮವನ್ನೂ ಸೆಕ್ಯುಲಿರಿಸಮ್ಮನ್ನೂ ವಸಾಹತುಗೊಳಿಸಿಕೊಂಡು ಬಿಟ್ಟಿರುವ ರಾಷ್ಟ್ರೀಯತೆಯ ಬಗ್ಗೆ. ಈ ರಾಜಕೀಯ ಸಮುದಾಯದ ಸದಸ್ಯರುಗಳಾಗಲು ಯಾರಿಗೆ ಅವಕಾಶ ಸಿಗುತ್ತದೆ? ಅದರ ಪ್ರಬಲ ನಿರೂಪಣೆಗಳಿಗೆ ಅದರ ವೈವಿಧ್ಯಮಯವಾದ ಚರಿತ್ರೆಗಳನ್ನು ನಿರೂಪಿಸಲು ಅವಕಾಶಗಳಿರುತ್ತದೆಯೇ?
ಇದು ಮುಖ್ಯವಾಗಿ ಧರ್ಮಗಳ ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ್ದಲ್ಲ. ಇಂದಿನ ಸಧ್ಯದ ಸ್ಥಿತಿಯ ನಿಜ ಸ್ವರೂಪವನ್ನು ಅರ್ಥೈಸುವುದು ಏನು ಎಂಬುದನ್ನು ಒಪ್ಪಿಕೊಳ್ಳುವಾಗ ಮೀನಮೇಶ ಎಣಿಸದೇ ಒಪ್ಪಿಕೊಳ್ಳೋಣ. ಅದು ಹೆಚ್ಚಾಗಿ ಏನೆಂದರೆ ಮುಸಲ್ಮಾನರನ್ನು ಭಾರತದ ಕಥಾನಿರೂಪಣೆಯ ಅಂಚಿನೆಡೆಗೆ ದೂಡುವುದು.

ನಾನೂ ಮತ್ತು ಯೋಗೇಂದ್ರ ಯಾವಾಗಲೂ ಒಪ್ಪಿಕೊಳ್ಳುವಂತೆ ನಾವೆಲ್ಲರೂ ಸೆಕ್ಯುಲರ್ ರಾಜಕೀಯ ಪಕ್ಷಗಳ ಹಿಂದಿರುವ ರಾಜಕೀಯ ಅವಕಾಶವಾದವನ್ನು ಒಪ್ಪಿಕೊಂಡುಬಿಡೋಣ. ಹಿಂದೂ ಆಗಲೀ ಇಸ್ಲಾಮ್ ಆಗಲೀ , ಯಾವುದೇ ದೊಡ್ಡ ಧಾರ್ಮಿಕ ಸಮುದಾಯದ ಒಳಗೆ ಇರುವ ಬೇಕಾದಷ್ಟು ಸಂಖ್ಯೆಯ ಕೋಮುವಾದೀ ಪಕ್ಷಪಾತಿಗಳ ಇರುವಿಕೆಯನ್ನೂ ನಾವು ಒಪ್ಪಿಕೊಂಡು ಬಿಡೋಣ. ಐತಿಹಾಸಿಕ ನಿರೂಪಣೆಗಳ ಜೊತೆ ‘ಎಡ’ವು ಅಪ್ರಮಾಣಿಕವಾಗಿ ನಡೆದುಕೊಂಡಿತೆಂದೂ ಒಪ್ಪಿಕೊಂಡುಬಿಡೋಣ. ಇವುಗಳಿಂದ ನಿಜವಾಗಿಯೂ ಈಗ ನಾವು ಕಾಣುತ್ತಿರುವುದಕ್ಕೆ ಪರವಾಗಿನಿ ಸಿಕ್ಕಂತಾಗುತ್ತದೆಯೇ? : ಅಂದರೆ ಮುಸಲ್ಮಾನರ ವಿರುದ್ಧದ ಪರಿಪೂರ್ಣ ವಿಷಪೂರಿತ ಪೂರ್ವಾಗ್ರಹವನ್ನು ನ್ಯಾಯಸಮ್ಮತವೆನ್ನಿಸುವುದು? ಯೋಗೇಂದ್ರ ತೋರಿಸಿರುವ ಕಾರಣಗಳು , ಕಾರಣಗಳಲ್ಲ. ಎಡ್ಮಂಡ್ ಬ್ರುಕ್‍ನ ಮಾತನ್ನು ಉಪಯೋಗಿಸುವುದಾದರೆ ಅವುಗಳು ‘ನೆಪಗಳು.’ ಪೂರ್ವಾಗ್ರಹಗಳಿಗಾಗಿ ಧಾರ್ಮಿಕ – ಮತ್ತು ಧಾರ್ಮಿಕವಲ್ಲದ ದ್ವಂಧ್ವಗಳ ನಡುವಿನ ನೆಪಗಳು. ಸಾಮಾನ್ಯವಾಗಿ ಅದರ ಅರ್ಥ ಏನೆಂದರೆ, ನೀನು ಯಾರೆಂದು ಮತ್ಯಾರೋ ಒಬ್ಬರು ಅರ್ಥೈಸುವುದು. ಅಂದರೆ, ಶ್ರದ್ಧೆಯುಳ್ಳವರನ್ನು ‘ಒಳ್ಳೆಯ’ ಮತ್ತು ‘ಕೆಟ್ಟ’ ಶ್ರದ್ಧೆಯವರು ಎಂದು ನಿರ್ಧರಿಸಿ ಅವರನ್ನು ವಿಭಜಿಸಿ ಹಣೆಪಟ್ಟಿ ಲಗತ್ತಿಸುವುದಕ್ಕಾಗಿ ಧರ್ಮದ ಅಧಿಕೃತ ಮಾದರಿಯನ್ನು ರಚಿಸುವುದು. ಜನರ ಭಾವನೆಗಳಿಗೆ ಅನುಕೂಲಸಿಂಧುಗಳಾಗುವಂತೆ ನಿರೂಪಿಸುವ ರೀತಿಯಲ್ಲಿ ಧರ್ಮದ ಇತಿಹಾಸಗಳನ್ನೂ ಅವುಗಳ ಭೂತಕಾಲದ ಆಗುಹೋಗುಗಳೆಲ್ಲವನ್ನೂ ತೊಳೆದು ಸಾರಿಸಿಡುವುದು, ಅಂದರೆ ರಾಜಕೀಯ ಉದ್ದೇಶಗಳಿಗಾಗಿ ಧರ್ಮವನ್ನು ಸಲಕರಣೆಯನ್ನಾಗಿ ಮಾಡಿಕೊಳ್ಳುವುದು. ನಮಗೆ ಒಳ್ಳೆಯ ಹಿಂದು ಆಗುವುದೇನೆಂದು ತಿಳಿಹೇಳುವ ಮತ್ತೊಂದು ಮಾದರಿಯ ಅವಶ್ಯಕತೆಯಿಲ್ಲ. ಅದನ್ನು ನಿರ್ದಿಷ್ಠವಾಗಿ ಅರ್ಥೈಸಿ ಅದನ್ನು ಸ್ಥಾಪಿಸುವಂಥಹ ದುರಹಂಕಾರದ ತಲೆಪ್ರತಿಷ್ಠೆತನ ಯಾರಿಗುಂಟು? ತನ್ನ ಎಲ್ಲಾ ಅಪಾಯಸಾಧ್ಯತೆಗಳೊಂದಿಗೆ, ಆತ್ಮಾನುಮಾನಗಳೊಂದಿಗೆ ಗುರುತುಗಳನ್ನು ರೂಪಿಸುತ್ತಾ ಮತ್ತೆ ಮತ್ತೆ ಮರುರೂಪಿಸುತ್ತಾ ಇರುವ, ಸ್ವಾತಂತ್ರ್ಯಕ್ಕಾಗಿ ಒಂದು ಅಪ್ಪಟವಾದ ಬದ್ಧತೆಯ ಅವಶ್ಯಕತೆಯಿದೆ.

ಧರ್ಮವನ್ನು ಗಂಭೀರವಾಗಿ ಪರಿಗಣಿಸುವುದು ಎಂದರೆ ಸರ್ವರಿಗೂ ಧಾರ್ಮಿಕ ಸ್ವಾತಂತ್ರ್ಯನೀಡುವ ಸ್ಥಿತಿಯನ್ನು ಕಾಪಾಡುವುದು; ಅಂದರೆ ಸರ್ವರಿಗೂ ಅವರವರ ಸ್ವಂತ ಇರುವಿಕೆಯ ಕಾನೂನನ್ನು ಅವರವರೇ, ತಮಗೆ ತಾವೇ ಕಂಡುಕೊಳ್ಳುವುದಕ್ಕೆ ಬಿಡುವುದು. ಒಂದು ರಾಜಕೀಯಗೊಂಡ ಸಾರ್ವಜನಿಕ ಪ್ರಭಾವವಲಯ, ಧರ್ಮವನ್ನು ಗಂಭೀರವಾಗಿ ತೆಗೆದುಕೊಳ್ಳಬಹುದು ಎಂಬ ಆಲೋಚನೆಯೇ ನನ್ನನ್ನು ನಡುಗಿಸುತ್ತದೆ.

ಭಾರತೀಯ ಸಂಸ್ಕೃತಿಯೊಂದಿಗೆ ‘ಎಡ’ಕ್ಕೆ ಇರುವ ಸಂಬಂಧದಲ್ಲಿ ಒಂದು ಬಗೆಯ ಸರಳೀಕರಿಸಿದ ಸಾಂಸ್ಕೃತಿಕ ಒರಟುತನವಿತ್ತು. ನಾವು ಸ್ವಲ್ಪ ವಾಸ್ಥವಕ್ಕೆ ಬರೋಣ. ಪ್ರಾಯಶಃ ‘ಎಡ’ಕ್ಕೆ ಒಂದೈದಾರು ವಿಶ್ವವಿದ್ಯಾಲಯಗಳಲ್ಲಿ ಉನ್ನತ ನಿಯಂತ್ರಣವಿರಬಹುದು : ಆದರೆ ಎಪ್ಪತ್ತರ ದಶಕದಲ್ಲಿ ಹೆಚ್ಚೂಕಮ್ಮಿ ಎಲ್ಲಾ ವಿಶ್ವವಿದ್ಯಾಲಯಗಳೂ “ಆಡುಭಾಷೀಕರಣ’ಗೊಳಿಸಲ್ಪಟ್ಟವು. ಜೆ.ಎನ್.ಯೂ.ನ ಇತಿಹಾಸಕಾರರುಗಳಿಗಿಂತ ಹೆಚ್ಚಾಗಿ ವಿ.ಡಿ. ಮಾಹಾಜನ್ ಅವರ ಪುಸ್ತಕಗಳನ್ನು ಪಠ್ಯವಾಗಿ ಹೆಚ್ಚುಹೆಚ್ಚು ಓದಲಾಯಿತು. ಮಹಾಭಾರತ ರಾಮಾಯಣಗಳನ್ನು ತನ್ನ ಪಠ್ಯಕ್ರಮದಲ್ಲಿ ಸೇರಿಸಿಕೊಳ್ಳುವ ಬಗ್ಗೆ ದೆಹಲಿ ವಿಶ್ವವಿದ್ಯಾಲಯದ ಮೂರ್ಖತನವಿದ್ದಾಗ್ಯೂ ಕೂಡ ದೂರದರ್ಶನವು ಮಹಾಭಾರತ ಮತ್ತು ರಾಮಾಯಣಗಳನ್ನು ಪ್ರಸಾರ ಮಾಡಿತು. ಕ್ಷಿಪ್ತವಾಗಿ ಹೇಳಬೇಕೆಂದರೆ ಭಾರತದ ಸಂಸ್ಕೃತಿಯನ್ನು ರೂಪುಗೊಳಿಸುವಲ್ಲಿ ‘ಎಡ’ದ ಪ್ರಾಮುಖ್ಯತೆ ಮತ್ತು ಸಾಂಸ್ಕೃತಿಕ ವರ್ಚಸ್ಸನ್ನು ಅತಿಯಾದ ಅತಿಶಯೋಕ್ತಿಯನ್ನಾಗಿಸಲಾಗಿದೆ. ಅವರು ಅನುರೂಪವಾದೀ ಶೈಕ್ಷಣಿಕ ರಾಜಕೀಯದ ಆಟವಾಡಿದರು. ಆದರೆ ಹಿಂದುಗಳನ್ನು ಸಾಂಸ್ಕೃತಿಕವಾಗಿ ಅಂಚಿನೆಡೆಗೆ ದೂಡಿ ನಿರ್ಲಕ್ಷಿಸಲಾಗಿದೆ ಎಂಬುದೊಂದು ಟೊಳ್ಳುವಾದ. ಅದು ವಾಸ್ಥವವನ್ನು ತಿಳಿಸುವುದರ ಬದಲು ಹಿಂದುಗಳನ್ನು ಬಲಿಪಶುಗಳನ್ನಾಗಿಸಿದೆ ಎಂಬ ಆಹುತಿವಾದಕ್ಕೆ ಪುಷ್ಠಿಕೊಡುತ್ತದಷ್ಟೇ.

ಯೋಗೇಂದ್ರ ಹೇಳಿದಂತೆ, ಹಿಂದಿ ಭಾಷೆಗಿರಬೇಕಾದ ಸ್ಥಾನದ ಮೇಲಿನಿಂದ ಹುಟ್ಟಿದ ಅತೃಪ್ತಿ ಮತ್ತು ಅಸಮಧಾನಗಳ, ಒಂದು ವಿಚಿತ್ರ ರಾಜಕೀಯ ಉತ್ತರ ಭಾರತದಲ್ಲಿ ಇರುವುದು ಸತ್ಯ. ಸೆಕ್ಯೂಲರ್ವಾದಿಗಳು ಅದು ಹೇಗೋ ಭಾರತೀಯ ಭಾಷೆಗಳನ್ನು ಕಡೆಗಣಿಸಿದರು ಎಂಬ ಒಂದು ಇಂಗಿತ ಇಲ್ಲಿದೆ. ಇದು ಸ್ವಲ್ಪ ವಿಚಿತ್ರ. ಏಕೆಂದರೆ ಅದು ಹೇಗೋ ಸೆಕ್ಯುಲರ್ವಾದವನ್ನು ಇಂಗ್ಲೀಶಿನ ಜೊತೆ ಗಂಟುಹಾಕಲಾಗಿದೆ. ಪ್ರತಿಯೊಂದು ಭಾರತೀಯ ಭಾಷೆಯೂ ಸೆಕ್ಯುಲರ್ ವಾದವನ್ನು ತನ್ನದೇ ಆದ ಒಂದು ಮಾದರಿಯಲ್ಲಿ ಆಡುಭಾಷಾಕರಿಸಿ ರೂಪಿಸಿತ್ತು. ಉದಾಹರಣೆಗೆ, ಹಿಂದಿಯ ವೃತ್ತದಲ್ಲಿ ರಾಮ್ಧಾರಿ ಸಿಂಗ್ ದಿನಕರ್, ಧರಮ್ ವೀರ್ ಭಾರತಿ, ಹeóÁರಿ ಪ್ರಸಾದ್ ದ್ವಿವೇದಿ, ಕನ್ವರ್ ಸಿಂಗ್ ಮತ್ತಿತರರಿದ್ದರು. ಅವರು ಧಾರ್ಮಿಕವಾಗಿ ತೊಡಗಿಸಿಕೊಂಡ ಆದರೆ ಆಧುನಿಕವಾಗಿ ಸಾರ್ವಜನಿಕವಾಗಿ ಟೀಕಿಸುವ ಜನರನ್ನೊಳಗೊಂಡ ಗುಂಪಿನ ಭಾಗವಾಗಿದ್ದರು. ಅವರನ್ನು ಅಂಚಿಗೆ ತಳ್ಳಿ ನಿರ್ಲಕ್ಶಿಸಿದ್ದು, ಇಂಗ್ಲೀಶಲ್ಲ, ಹಿಂದಿವಾಲಾಗಳು. ಕ್ರಿಯಾಶೀಲರಾದ, ಸಾಂಸ್ಕೃತಿಕ ಸೂಕ್ಷ್ಮಮತಿಗಳಾದ ಸೆಕ್ಯುಲರ್ ಹಿಂದಿ ಗುಂಪಿನವರನ್ನು ಹೊಸಪೀಳಿಗೆಯ ಪ್ರಾದೇಶಿಕ ಭಾಷೆಯ ಪತ್ರಿಕೆಗಳ ಯಜಮಾನರು ಒಡೆದು ಹೊರತಳ್ಳಿದರು. ಈ ಬಿಕ್ಕಟ್ಟು ಹಿಂದಿ ಪ್ರದೇಶಕ್ಕೆ ಆಂತರಿಕವಾಗಿದೆ. ಅದು ಮತ್ತದೇ ಬಿಜೆಪಿ ಉಪಯೋಗಿಸುವ ಟೊಳ್ಳುವಾದವಾದ ಮಹಾನಗರಗಳ ಬುದ್ಧಿಜೀವಿಗಳು ಹೇಗೋ ಮಾಡಿ ಭಾರತದ ಎಲ್ಲಾ ಸಂಕಷ್ಟಗಳಿಗೂ ಕಾರಣಕರ್ತರು ಎಂಬ ಅನುಕೂಲಸಿಂಧುವಾದ ಪೊಳ್ಳುಮಾತಿನಿಂದ ಈ ಬಿಕ್ಕಟ್ಟು ಪುಷ್ಠಿಪಡೆಯುತ್ತದೆ.

ಸೆಕ್ಯುಲರಿಸಮ್ಮಿನ ಮರಣೋತ್ತರ ಪರೀಕ್ಷೆಯಲ್ಲಿ ನಾವು ಧರ್ಮದ ಬಗ್ಗೆ ಅತಿಗಾಭರಿ ವ್ಯಕ್ತಪಡಿಸುಸುತ್ತಾ ಕೈಕೈಹಿಸುಕಿಕೊಳ್ಳುತ್ತಾ ಇದ್ದೇವೆ. ಅದು ನಾವು ಅದರ ಕೀಲಿಕೈಯ್ಯನ್ನು ಕಳೆದುಕೊಂಡಿದ್ದೇವೆ ಎಂಬುದಕ್ಕಲ್ಲ, ಬದಲಾಗಿ ಅಲ್ಲಿ ಬೆಳಕಿನ ಕಿರಣವಿದೆ ಎಂದು. ಎಲ್ಲಕ್ಕಿಂತಾ ಆಳವಾದ ಪ್ರಶ್ನೆ ಈ ಸೈದ್ಧಾಂತಿಕ ಚರ್ಚೆಗಳಲ್ಲ; ಹೇಗಿದ್ದರೂ ಅಭಿಪ್ರಾಯಬೇಧಗಳು ಅನಿವಾರ್ಯ ಮತ್ತು ಅವುಗಳನ್ನು ಹೇಗಾದರೂ ಮಾಡಿ ನಿರ್ವಹಿಸಬಹುದು. ಪೂರ್ವಾಗ್ರಹಗಳನ್ನು ಒಪ್ಪಿಕೊಂಡುಬಿಡುವುದು ಜಾಸ್ತಿಯಾಗುತ್ತಿರುವುದು ಮತ್ತು ಕ್ರೂರವಾದ ಕರಾಳತೆಯನ್ನು ಛೂ ಬಿಟ್ಟಿರುವುದು. ಈ ದುಷ್ಟಮೃಗವನ್ನು ಹೆಸರಿಸಿ ಗುರುತಿಸೋಣ ಬದಲಾಗಿ ಧರ್ಮದ ಮತ್ತು ಸೆಕ್ಯುಲರಿಸಮ್ಮುಗಳ ಧರ್ಮಶ್ರದ್ಧೆಯ ಹಿಂದೆ ಅವಿತು ಅಡಗಿಕೊಳ್ಳುವುದು ಬೇಡ. ಯೋಜನೆಯನ್ನು ಮರುಚೇತನಗೊಳಿಸುವುದು ಅಂದರೆ ಧರ್ಮದೆಡೆಗೆ ಹಿಂದಿರುಗುವುದು ಅಂತಲ್ಲ. ಅದರ ಬದಲಾಗಿ ವ್ಯಕ್ತಿಗತ ಗೌರವ ಮತ್ತು ಹಕ್ಕುಗಳನ್ನು ಉಳಿಸಿಕೊಳ್ಳಲು ಮಾಡುವ ಒಂದು ಸ್ವಾತಂತ್ರ್ಯ ಹೋರಾಟವನ್ನು ನಡೆಸಿಕೊಂಡು ಹೋಗುವುದಾಗಿ ನೀಡುವ ಆಣೆಪ್ರಮಾಣದ ಮೇಲಿನ ನಂಬಿಕೆ, ಒಬ್ಬರು ಇನ್ನೊಬ್ಬರ ಮೇಲೆ ಬಿಡದೆ ನಡೆಸುವ ಅಸಮಧಾನ, ಅತೃಪ್ತಿಯ ಆಟವಲ್ಲ.

ಚರ್ಚೆಯ ಮೊದಲನೇ ಬರಹ ಇಲ್ಲಿದೆ: https://ruthumana.com/2020/09/15/yogendra-yadaav-ayodhye/


ಪ್ರತಾಪ್ ಭಾನು ಮೆಹ್ತಾ: ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯ ಸಂಪಾದಕೀಯ ಬಳಗದಲ್ಲಿದ್ದಾರೆ. ದೆಹಲಿಯ ಅಶೋಕ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು ಮತ್ತು ಪ್ರಭಾವೀ ಥಿಂಕ್ ಟ್ಯಾಂಕ್ ಸೆಂಟರ್ ಪಾಲಿಸಿ ರಿಸರ್ಚ್ ನ ಅಧ್ಯಕ್ಷರೂ ಆಗಿದ್ದರು. ಅದಕ್ಕೂ ಮೊದಲು ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪೊಲಿಟಿಕಲ್ ಥಿಯರಿ ಯ ನ್ನು ಬೋಧಿಸುತ್ತಿದ್ದರು.

ಅನುವಾದ : ಜಯಶ್ರೀ ಜಗನ್ನಾಥ. 

ಪ್ರತಿಕ್ರಿಯಿಸಿ