ಕರ್ಣನ್ ನೆಪದಲ್ಲಿ ..

ಕರ್ಣನ್ ನನ್ನು ಕೇಳುವ ಆ ಒಂದು ಸಾಲು, “ನೀನೇಕೆ ಸಹನೆಯಿಂದ ಪ್ರಶ್ನಿಸುವುದಿಲ್ಲ?” ಎಂಬ ಸಾಲು ನನಗೆ ಒಂದು ಕಲ್ಲುಬಂಡೆಯಂತೆ ಬಂದು ಹೊಡೆಯಿತು .ನನಗೆ, ನನ್ನ ಹಾಗೆಯೇ ಅನ್ನಿಸಿರುವ ದಲಿತ/ತುಳಿಸಿಕೊಳ್ಳುವ ಸಮುದಾಯದ ಬಹಳ ಸ್ನೇಹಿತರಿದ್ದಾರೆ. ಅವರ ಸಿಟ್ಟನ್ನು ಅಸುರೀಕರಿಸಲಾಗುತ್ತದೆ ಅಥವಾ ತಳ್ಳಿ ಹಾಕಲಾಗುತ್ತದೆ , ಹೊರತು ಗುರುತಿಸಲಾಗುವುದಿಲ್ಲ. ಏಕೆಂದರೆ ಅವರೇನಾದರೂ ನಮ್ಮ ಕ್ರೋಧವನ್ನು ಗುರುತಿಸಿ ಬಿಟ್ಟರೆ ಆಗ ಈ ಸಮಾಜವೆಂದು ಕರೆಯಲ್ಪಡುವ ಈ ವ್ಯವಸ್ಥೆಯು ಎಷ್ಟರ ಮಟ್ಟಿಗೆ ದೋಷಭರಿತ, ಒಡೆದು ಚೂರಾದ, ಹಿಂಸಾಚಾರ ತುಂಬಿದ ವ್ಯವಸ್ಥೆಯೆಂಬುದನ್ನು ಅವರು ಒಪ್ಪಿಕೊಳ್ಳಬೇಕಾಗುತ್ತದೆ. ನಮ್ಮನ್ನೆಲ್ಲಾ ನಾವು ಇದು ನಮ್ಮ ಸಮಾಜವೆಂದು ಒಪ್ಪಿಕೊಳ್ಳುವವರೆಗೂ ಅವರು ತಡೆದು ಹಿಡಿದಿಟ್ಟುಕೊಳ್ಳುತ್ತಾರೆ, ಏಕೆಂದರೆ ಅಧಿಕಾರದಲ್ಲಿರುವವರಿಗೆ ಅದು ಲಾಭದಾಯಕವಾಗಿದೆ. ತನ್ನದೇ ಹಳ್ಳಿಯಲ್ಲಿ ತನ್ನದೇ ಕಾಲುಗಳನ್ನು ಸದಾ ಕಾಲ ಕಟ್ಟಿಸಿಕೊಂಡಿರುವ ಕತ್ತೆಯ ಹಾಗೆ.

ಶೋಷಕರ ಕಲ್ಪನೆಗೆ ನಿಲುಕದ ದಮನಿತರಿಗಾಗಿ.

ದಲಿತರು ಸಮಾಜದಲ್ಲಿ ಮಾತ್ರವಲ್ಲ ಮತ್ತೆಲ್ಲ ಕಡೆಯಲ್ಲಿಯೂ ಹೇಗೆ ಬಾಳಬೇಕೆಂಬುದರ ಬಗ್ಗೆ ಪ್ರತಿಯೊಬ್ಬರಿಗೂ ಪೂರ್ವಗ್ರಹಗಳಿವೆ. ನಾವು ಎಷ್ಟರ ಮಟ್ಟಿಗೆ ಸಮಾಜದಲ್ಲಿರುವ, ಜಾತಿಯನ್ನು ನಮೂದಿಸುವ ಕಣ್ಣಿಗೆ ಕಾಣದಿರುವ ಗೆರೆಗಳನ್ನು ಸಾಧಾರಣವೆಂದು ಒಪ್ಪಿಕೊಂಡು ಬಿಟ್ಟಿದ್ದೇವೆ ಎಂದರೆ ನಮ್ಮ ಕಣ್ಣಿಗೆ ಅವು ಗೋಚರವಾಗದಿದ್ದರೂ ಅವುಗಳನ್ನು ನಾವು ಅನುಸರಿಸಬೇಕೆಂಬ ಸಮಾಜದ ನಿರೀಕ್ಷೆಗೆ ನಾವು ಒಳಪಟ್ಟಿರುತ್ತೇವೆ. ಉದಾಹರಣೆಗೆ ಒಂದು ಆಫೀಸು, ಮಾಲ್, ಸ್ಕೂಲು, ಕಾಲೇಜು ಅಥವಾ ಅಂತಹ ಸಾಮಾಜಿಕ ಸ್ಥಳಗಳನ್ನೇ ತೆಗೆದುಕೊಳ್ಳಿ. ಅವುಗಳಲ್ಲಿ ಆ ಸ್ಥಳಗಳನ್ನು ಶುಭ್ರವಾಗಿ ಇಡುವ ಕೆಲಸಗಾರರ ಅಂದರೆ “ಹೌಸ್ ಕೀಪಿಂಗ್ ಸಿಬ್ಬಂದಿಯವರಿಗಾಗಿ ಒಂದು ರೂಮು ಮತ್ತು ಅಲ್ಲಿ ಅವರಿಗಾಗಿ ಒಂದು ಮೇಜು ಮತ್ತು ಕುರ್ಚಿಗಳಿರುತ್ತವೆ. ಈ ಏರ್ಪಾಡು ನಿಮಗೆ ಎಷ್ಟು ಅಪರಿಚಿತವಾಗಿ ತೋರುತ್ತದೆ ಎಂದೊಮ್ಮೆ ಯೋಚಿಸಿ, ಏಕೆಂದರೆ ನೀವು ಅದನ್ನು ಯಾವತ್ತೂ ನೋಡೇ ಇರುವುದಿಲ್ಲ. ಆದರೆ ಇಲ್ಲಿ, ಕರ್ಣನ್ ಅಲ್ಲಿ, ಮತ್ತೆಲ್ಲಾ ಜನರೂ ತಮ್ಮ ಜೀವನದಲ್ಲಿ ಯಾವಾಗಲೋ ಒಮ್ಮೆ ಮಾಡುವಂತೆ ಇವುಗಳನ್ನು ಬೀದಿಗೆ ಹೊರತಂದು ಸಂಭ್ರಮಿಸಲಾಗುತ್ತದೆ. ಅದರಿಂದ ಹೊರಬರುವ ಕಣ್ಣೆರಚುವ ಕ್ರೋಧವನ್ನು ನೀವು ನೋಡುತ್ತೀರಿ.

ಯಾವುದು ಅವಶ್ಯಕ, ಯಾವುದು ಅಲ್ಲ ಎಂದು ನಿರ್ಧರಿಸುವವರು ಯಾವಾಗಲೂ ದಬ್ಬಾಳಿಕೆ ಮಾಡುವವರೇ. ಅವರಿಗೆ ದಮನಿತರ ಕೈಯಲ್ಲಿ ಹಳ್ಳಿಯ ಆನೆ ಅನವಶ್ಯಕ ವಸ್ತುವಾಗಿ ತೋರುತ್ತದೆ. ಆನೆಯ ಮೇಲಿರುವ ಕರ್ಣ ತಾನು ಕುಳಿತುಕೊಳ್ಳಬಾರದ ಸ್ಥಳದಲ್ಲಿರುವಂತೆ ಅವರಿಗೆ ತೋರುತ್ತದೆ. ಅದನ್ನೇ ಇಂದಿನ ಸಮಾಜಕ್ಕೆ ತರ್ಜುಮೆ ಮಾಡಲಾಗುತ್ತದೆ. ತಮ್ಮ ಮದುವೆಯಲ್ಲಿ ಕುದುರೆ ಏರಿದ ಅಸಂಖ್ಯಾತ ದಲಿತ ಮದುವೆ ಗಂಡುಗಳನ್ನು ಕೊಲ್ಲಲಾಯಿತು. ಬೆಲೆಬಾಳುವ ಬೈಕುಗಳಲ್ಲಿ ರಸ್ತೆಗಳಲ್ಲಿ ಚಲಿಸುವ ದಲಿತ ಯುವಕರ ಜೊತೆ ಪೋಲೀಸರು ಹೇಗೆ ವರ್ತಿಸುತ್ತಾರೆ ಎಂಬುದು ಗೊತ್ತೇ ಇದೆ.

ಉತ್ತರ ಮದರಾಸಿನ ಜನ ಸಮುದಾಯದ ಹದಿವಯಸ್ಸಿನ ಹೈಕಳುಗಳನ್ನು ‘ಪುಲಿಂಗೋ’ ಅಥವಾ ‘ಚಿಲ್ಟಾರಿ’ಗಳು ಎಂದು ಕರೆಯುವ ವಾಡಿಕೆಯಿದೆ. ತಮ್ಮೆಲ್ಲಾ ಜೀವನವನ್ನೂ ದಬ್ಬಾಳಿಕೆಯ ಅಡಿಯಲ್ಲೇ ಕಳೆದಿರುವ ಮಕ್ಕಳು ಇವರು. ಇವರು, ಒತ್ತೊತ್ತಾಗಿರುವ ಸರಕಾರದ ಹೌಸಿಂಗ್ ಬೋರ್ಡ್ ಮನೆಗಳಲ್ಲಿ ಜೀವಿಸುವವರು. ಕರ್ಣನ್‌ನ ಆನೆ ಮತ್ತು ಅದರ ಸಂಭ್ರಮದಂತೆ, ಈ ಪಡ್ಡೆ ಹುಡುಗರು ಮಾಡುವ ಎಲ್ಲಾ ಚಟುವಟಿಕೆಗಳನ್ನೂ ಸೂಕ್ಶ್ಮ ದರ್ಶಕದಲ್ಲಿ ವೀಕ್ಷಿಸಿ ಪ್ರಶ್ನಿಸಲಾಗುತ್ತದೆ. ಅವರ ತಲೆಕೂದಲಿನ ವಿನ್ಯಾಸ, ಬಟ್ಟೆಬರೆ, ಬೈಕುಗಳು ಮತ್ತು ಸಲಕರಣೆಗಳನ್ನೆಲ್ಲಾ ಅನವಶ್ಯಕ ವೆಚ್ಚದಂತೆ ಪರಿಗಣಿಸಲಾಗುತ್ತದೆ. ಕೆಲವು ಜನರಂತೂ ಈ ಹುಡುಗರು ಮಾದಕವಸ್ತುಗಳನ್ನು ಮಾರುವುದರಿಂದಲೋ ಅಥವಾ ಮತ್ಯಾವುದೋ ಕಾನೂನು ಬಾಹಿರ ಚಟುವಟಿಕೆಯಿಂದಲೋ ಹಣ ಸಂಪಾದಿಸುತ್ತಿರ ಬೇಕು ಎನ್ನುವಷ್ಟರ ಮಟ್ಟಿಗೆ ಸಂದೇಹ ಪಡುತ್ತಾರೆ.

ನನ್ನದೇ ಜೀವನದಲ್ಲಿ ನನ್ನ ಅಮ್ಮ ಮತ್ತು ಅಕ್ಕಂತಂಗಿಯರು ತೊಡುತ್ತಿದ್ದ ಬಟ್ಟೆಗಳನ್ನು ಪ್ರಶ್ನಿಸಲಾಯಿತು, ಅವರ ಮಕ್ಕಳನ್ನು ಇಂಜಿನಿಯರಿಂಗ್ ಕಾಲೇಜುಗಳಿಗೆ ಕಳುಹಿಸುವುದನ್ನೂ ಮತ್ತು ಅವರ ಮಗಳನ್ನು ಸ್ನಾತಕ್ಕೋತ್ತರ ವಿದ್ಯಾಭ್ಯಾಸಕ್ಕೆ ಕಳುಹಿಸುವುದನ್ನೂ ಸಹ ನಮ್ಮ ಸುತ್ತಲಿನ ಸಮಾಜವು ಪ್ರಶ್ನಿಸಿತು. ನನ್ನ ಸುತ್ತಲಿನ ಜಾತಿವಾದ ತುಂಬಿದ ಸಮಾಜ ನನ್ನ ತಂದೆತಾಯಿಯರ ಮೇಲೆ ಮತ್ತು ನಂತರ ನನ್ನ ಮೇಲೆ ಹೇರಿದ ನಿರೀಕ್ಷೆಗಳಡಿಯಲ್ಲೇ ನನ್ನ ಜೀವನದ ಬಹು ಭಾಗ ಕಳೆದಿದೆ. ಈವತ್ತಿಗೂ ಕೂಡ ನನ್ನ ತಂಗಿಯ ಪಿಎಚ್ಡಿ ಕನಸನ್ನು , ಕರ್ಣನನ್ನು ಆನೆಯ ಮೇಲೆ ನೋಡಿದಂಥ ಪೋಲೀಸರ ಕಣ್ಣುಗಳಿಂದಲೇ ನೋಡಲಾಗುತ್ತದೆ. ಅದನ್ನು ಬರಿಯ ದುರಹಂಕಾರವೆಂದು ನೋಡದೆ ಬದಲಾಗಿ, ಜಾತಿವಾದೀ ಸಮಾಜದ ಗೆರೆಗಳನ್ನು ಉಲ್ಲಂಘಿಸಿದ ತುಳಿಸಿಕೊಳ್ಳಬೇಕಾದವರಂತೆ ನೋಡಲಾಗುತ್ತದೆ.

ಒಂದು ಜಾತಿವಾದೀ ಸಮಾಜವನ್ನು ಕೋಪಗೊಳಿಸುವುದು ಅಷ್ಟು ಸುಲಭವಾಗಿದ್ದರೆ , ನಾನು ಇನ್ನೂ ಹೆಚ್ಚು ಕರ್ಣನ್‌ರು ಬಂದು ರಸ್ತೆಗಳಲ್ಲಿ ನರ್ತಿಸಲಿ, ಕಾಲೇಜುಗಳಲ್ಲಿ ಭರ್ತಿಗೊಳ್ಳಲಿ, ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಸೇರಿಕೊಳ್ಳಲಿ, ದೊಡ್ಡ ದೊಡ್ಡ ಕಾರುಗಳಲ್ಲಿ ಹೊಕ್ಕಲಿ ಮತ್ತು ಬೆಲೆಬಾಳುವ ಬಟ್ಟೆಗಳನ್ನು ತೊಡಲಿ. ಇವೆಲ್ಲವೂ ಒಂದು ಆನೆಯಂತೆಯೇ ಅವರ ಕೈಗೆಟುಕದಂತೆ ಕಾಣಿಸುತ್ತದೆ. ನಮ್ಮನ್ನು ನೋಡುವ ಕಣ್ಣುಗಳು ಆನಂದದಿಂದ ತುಂಬಿಕೊಳ್ಳಲಿ ಅಥವಾ ಆ ಎಲ್ಲಾ ಕ್ರೋಧಗಳಿಂದ ಕುದಿದು ಕರಗಿ ಹೋಗಲಿ. ನಾವು ಇನ್ನು ಮುಂದೆ ನಿಮ್ಮ ಎರಕದ ಅಚ್ಚುಗಳಲ್ಲಿ ಅಡಕವಾಗಿರಲೊಲ್ಲೆವು.

ಯಾವುದೇ ಸಮಾಜದ ಅಭಿವೃದ್ಧಿ, ಆ ಸಮಾಜದಲ್ಲಿನ ಮಹಿಳೆಯರ ಸಂಘಟನೆಯಲ್ಲಿ ನೆಲೆಸಿರುತ್ತದೆ.

ಮಹಿಳೆಯರನ್ನು ಕೆಲವು ಸ್ಥಳಗಳಲ್ಲಿ ಮಾತ್ರ ಸೀಮಿತಗೊಳಿಸುವುದು, ಪುರುಷ ಪ್ರಧಾನ್ಯವನ್ನು ಸಮಾಜದಲ್ಲಿ ಹಿಡಿದೆತ್ತಿ ನಿಲ್ಲಿಸುವ ಒಂದು ಬಲವಾದ ಸ್ಥಂಬವಾಗಿದೆ. ಹೆಚ್ಚು ಜನ ಕರ್ಣನ್ ಚಿತ್ರದ ಕತೆಯ ಹಂದರವನ್ನು ಒಂದು ಬಸ್ ನಿಲ್ದಾಣಕ್ಕಾಗಿ ಬೇಡಿಕೆಗೆ ಸಂಕುಚಿಸಿ ಬಿಡಬಹುದು. ಆದರೆ ಸತ್ಯ ಅದಕ್ಕಿಂತ ಬಹಳ ಬೇರೆಯಾಗಿದೆ. ಚಿತ್ರದಲ್ಲಿನ ಬೇರೆಬೇರೆ ಮಹಿಳೆಯರು ಬೇರೆಬೇರೆ ಕಾರಣಗಳಿಂದಾಗಿ ಚಲಿಸುತ್ತಿರುವಂತೆ ತೋರುತ್ತದೆ. ಮರಿ ಸೆಲ್ವರಾಜ್ ಇದನ್ನು ಒಂದು ಉನ್ನತವಾದ ಉದ್ದೇಶದಿಂದ ಬರೆದಿದ್ದಾರೆ.

೧. ಚಲನೆಯಿಂದ ಮಹಿಳೆಯರಿಗೆ ಉತ್ತಮ ಆರೋಗ್ಯಸೇವೆಗಳು ಲಭ್ಯವಾಗುತ್ತವೆ.

ಚಿತ್ರವು ಒಂದು ಸಾವಿನಿಂದ ಆರಂಭವಾಗುತ್ತದೆ. ಆ ಹಳ್ಳಿಯಲ್ಲಿ ನಿಲ್ಲುವ ಒಂದೇ ಒಂದು ಬಸ್ ಇದ್ದಿದ್ದರೆ ಆ ಸಾವನ್ನು ತಡೆಯಬಹುದಾಗಿತ್ತು. ಆ ಸಮುದಾಯದಲ್ಲಿ ನಡೆದ ಆ ಪುಟ್ಟ ಹುಡುಗಿಯ ಸಾವು ಮೊದಲನೆಯದೇನಲ್ಲ ಎಂದೂ ತೋರಿಸಲಾಗುತ್ತದೆ. ಮತ್ತೊಂದು ಪ್ರಮುಖ ದೃಶ್ಯದಲ್ಲಿ ಹೇಗೆ ಒಬ್ಬ ಬಸುರಿ ಹೆಂಗಸಿಗಾಗಿಯೂ ಒಂದೇ ಒಂದು ಬಸ್ ಸಹ ಅಲ್ಲಿ ನಿಲ್ಲುವುದಿಲ್ಲವೆಂದೂ ಕಡೆಗೆ ಬಲವಂತವಾಗಿ ನಿಲ್ಲಿಸಿದಾಗ ಮಾತ್ರ ಒಂದು ಬಸ್‌ಅನ್ನು ನಿಲ್ಲಿಸಲಾಗುತ್ತದೆಂದೂ ತೋರಿಸಲಾಗುತ್ತದೆ.

೨೦೨೧ರಲ್ಲಿ ಕೂಡಾ ಸಂಚಾರ ಸಾರಿಗೆ ಸೌಲಭ್ಯವಿಲ್ಲದ ಹಳ್ಳಿಗಳಿವೆ. ಇದ್ದರೂ ಕೂಡಾ ಅವು ಮೇಲ್ಜಾತಿಯವರಿಗಾಗಿ ಮಾತ್ರಾ ಇವೆ. ತನ್ನ ಹೆಂಡತಿಯ ಶವವನ್ನು ಸೈಕಲ್ಲಿನ ಮೇಲೆ ಕೊಂಡೊಯ್ಯುವ ಬೇಕಾದಷ್ಟು ಗಂಡಂದಿರ ಸುದ್ದಿಯನ್ನು ಓದುತ್ತಿರುತ್ತೇವೆ. ಅಂತರಿಕ್ಷ ಯೋಜನೆಗಳನ್ನು ಹೆಮ್ಮೆಯಿಂದ ಸಾರಿಕೊಳ್ಳುವ ಮತ್ತು ಮೂಲಸೌಕರ್ಯ ಯೋಜನೆಗಳನ್ನು ಹೇಳಿಕೊಳ್ಳುವ ಭಾರತ ದೇಶ ಇದೇನಾ ಎಂದು ಆಶ್ಚರ್ಯ ಪಡುವಂತಾಗುತ್ತದೆ. ದಕ್ಷಿಣ ಭಾರತದಲ್ಲಿ ಬಸುರಿ ಹೆಂಗಸರಿಂದ ಹಣ ಪಡೆಯದ ಆಟೋರಿಕ್ಷಾ ಚಾಲಕರಿಗೆ ಪ್ರಣಾಮಗಳು.

೨. ಚಲನೆಯಿಂದ ಮಹಿಳೆಯರಿಗೆ ವಿದ್ಯಾಭ್ಯಾಸ ದೊರೆಯುತ್ತದೆ.

ಸಾರಿಗೆ ವ್ಯವಸ್ಥೆಯನ್ನು ನೀಡುವುದರಿಂದ ಹುಡುಗಿಯರು ಬೇರೆ ಊರುಗಳಲ್ಲಿರುವ ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ ಹೋಗಲು ಅವಕಾಶವಾಗುತ್ತದೆ. ತಮಿಳುನಾಡಿನಲ್ಲಿರುವ ಎರಡು ರಾಜಕೀಯ ಪಕ್ಷಗಳ ಅತ್ಯಂತ ಸುಂದರವಾದ ಅಂಶವೆಂದರೆ ಅವೆರಡೂ ಪಕ್ಷಗಳು ಹೆಣ್ಣುಮಕ್ಕಳ ಸಂಪೂರ್ಣ ಅಭಿವೃದ್ಧಿಯ ಮೇಲೆ ಕೇಂದ್ರೀಕೃತರಾಗಿದ್ದುದು. ತಮಿಳುನಾಡು ತನ್ನ ಹೆಣ್ಣುಮಕ್ಕಳಿಗೆ ಉಚಿತವಾಗಿ ಸೈಕಲ್ಲುಗಳನ್ನು ನೀಡಿದ್ದು ನನಗೆ ನೆನಪಿದೆ. ನನ್ನ ಸೋದರಿಯೊಬ್ಬಳು ತನ್ನ ೧೨ನೇ ತರಗತಿಯನ್ನು ಪೂರ್ಣಗೊಳಿಸಿದ್ದು ಆ ಸೈಕಲ್ಲಿನಿಂದಾಗಿಯೇ ಎಂಬುದು ವಾಸ್ತವ ವಿಚಾರ. ಬಹಳಷ್ಟು ಮನೆಗಳಲ್ಲಿ ಆ ಸೈಕಲ್ಲುಗಳು ಉರುವಲಿಗೆ, ಹಣಕ್ಕೆ ಮತ್ತು ನೀರಿಗೆ ಮೂಲವಾದವು.

೨೦೨೧ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಗಳ ಕಚೇರಿಯಿಂದ ಹೊರಬಿದ್ದ ಮೊದಲ ಅಧಿಕೃತ ಸಹಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡುವುದೇ ಆಗಿತ್ತು. ನಾನು ಬಹಳ ಸವಲತ್ತುಗಳಿರುವ ಜನರು ಈ ಉಚಿತದೇಣಿಗೆಗಳಿಂದ ತಮಿಳುನಾಡು ಹಾಳಾಗುತ್ತಿದೆಯೆಂದು ಹೇಳುವುದನ್ನು ಕೇಳಿದ್ದೇನೆ. ಎಷ್ಟು ಜನ ಮಹಿಳೆಯರು ಇದರಿಂದ ಚಲಿಸ ತೊಡಗುತ್ತಾರೆ, ಅವರು ತಿಂಗಳಿಗೆ ಎಷ್ಟು ಹಣವನ್ನು ಉಳಿತಾಯ ಮಾಡುತ್ತಾರೆ ಮತ್ತು ಎಷ್ಟು ಮಂದಿ ಎಳೆಯ ಹೆಣ್ಣು ಮಕ್ಕಳು ಉಚಿತ ವಿದ್ಯಾಭ್ಯಾಸವನ್ನು ಪಡೆದುಕೊಳ್ಳಲು ತಾವು ಮಾಡಬೇಕಾದ ಬಸ್ ಸಂಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂಬುದನ್ನು ಅವರ್ಯಾರೂ ಅರ್ಥಮಾಡಿಕೊಳ್ಳಲಾರರು.

೩. ಚಲನೆಯಿಂದ ಹೆಣ್ಣುಮಕ್ಕಳ ಸುರಕ್ಷತೆಯು ಸಾಧ್ಯವಾಗುತ್ತದೆ.

ಕೌಟುಂಬಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ನೌಕರಿ ಹೇಗೆ ಮುಖ್ಯವಾಗುತ್ತವೆ ಎಂದು ನಾನೂ ಮತ್ತು ನನ್ನ ತಂಗಿಯೂ ಮಾತನಾಡುತ್ತಿರುತ್ತೇವೆ. ಲೈಂಗಿಕ ಕಿರುಕುಳದ ಹೆದರಿಕೆಯು ಎಷ್ಟೋ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಗಳಿಸುವುದನ್ನು ತಡೆಯುತ್ತದೆ. ಅವರವರ ತರಗತಿಯ ಹುಡುಗರೊಂದಿಗೆ ಸ್ನೇಹದಿಂದಿದ್ದರು ಎಂಬ ಬರಿಯ ಬಾಯಿಮಾತಿಗಾಗಿ ನನ್ನ ಶಾಲೆಯ ಎಷ್ಟೋ ಗೆಳತಿಯರಿಗೆ ಅವರ ೧೦ನೇ ಮತ್ತು ೧೨ನೇ ತರಗತಿಯಲ್ಲಿರುವಾಗಲೇ ಮದುವೆ ಮಾಡಿಬಿಟ್ಟಿದ್ದರು.

ಹೆಚ್ಚು ಹೆಚ್ಚಾಗಿ ಚಲನೆಯನ್ನು ಸಾಧಿಸಿರುವ ಹೆಣ್ಣುಮಕ್ಕಳು ಅವರ ಸಮಾಜದ ಬಗ್ಗೆ ಹೆಚ್ಚು ಅರಿವಿನಿಂದ ಕೂಡಿದವರಾಗಿರುತ್ತಾರೆ, ಅವರ ಸಮಾಜದಲ್ಲಿ ಹೆಚ್ಚಿನ ಸುಧಾರಣೆಯನ್ನು ತರುತ್ತಾರೆ ಹಾಗೂ ಅವರ ಸಮಾಜವನ್ನು ಉತ್ತಮಗೊಳಿಸುತ್ತಾರೆ. ಉಚಿತ ಬಸ್ ಸೇವೆಗಳಿದ್ದರೆ, ಒಬ್ಬ ದೌರ್ಜನ್ಯಕ್ಕೊಳಗಾಗುತ್ತಿರುವ ಮಹಿಳೆಯು ತನ್ನ ಗಂಡನನ್ನು ಯಾವುದೇ ಸಮಯದಲ್ಲೂ ಕೂಡಾ, ಕೈಯ್ಯಲ್ಲಿ ಒಂದು ಕಾಸೂ ಇಲ್ಲದಿದ್ದರೂ ಕೂಡಾ ಬಿಟ್ಟು ದೂರ ನಡೆದುಬಿಡಬಹುದು.

ಮದುರೆಯ ವಾತ್ರಾಪಿನಿಂದ ಸುಮಾರು ೪-೫ ಕಿಲೋಮೀಟರ್ ದೂರದಲ್ಲಿ ನನ್ನ ಚಿಕ್ಕ ಹಳ್ಳಿಯಿದೆ. ವಾತ್ರಾಪಿನಿಂದ ನನ್ನ ಹಳ್ಳಿಗೆ ಬಸ್ ಇರಲಿಲ್ಲ. ಪ್ರತಿ ಬಾರಿಯೂ ನಮ್ಮ ತಾತಅಜ್ಜಿಯರನ್ನು ನೋಡಲು ಹೋಗುವಾಗ ನಾವು ಅಲ್ಲಿಂದ ನಮ್ಮ ಹಳ್ಳಿಗೆ ನಮ್ಮ ಸಾಮಾನುಗಳನ್ನು ಹೊತ್ತುಕೊಂಡು ನಡೆದು ಹೋಗುತ್ತಿದುದು ನನಗೆ ನೆನಪಿದೆ. ನನ್ನ ತಾತ ನನ್ನ ಸೂಟ್‌ಕೇಸನ್ನು ಹೊರುತ್ತಿದುದೂ, ನಾನು ನೀರಿನ ಬಾಟಲುಗಳಿದ್ದ ಸಣ್ಣ ಕೈಚೀಲವನ್ನು ಹಿಡಿರುತ್ತಿದುದೂ ಮತ್ತು ನಾವೆಲ್ಲಾ ಅಕ್ಕಪಕ್ಕದಲ್ಲಿ ಹಸಿರು ಗದ್ದೆಗಳಿರುವ ನಡುವಿನ ಕಾಲುದಾರಿಯಲ್ಲಿ ನಡೆದು ಊರು ಸೇರುತ್ತಿದುದೂ ನನಗೆ ನೆನಪಿದೆ. ರಾತ್ರಿಯಲ್ಲಿ ದೀಪಗಳಿಲ್ಲದಿದ್ದ ಕಾರಣ ಆ ಹಾದಿ ಬಹಳ ಅಪಾಯಕಾರಿಯಾಗಿತ್ತು. ಹಾಗಾಗಿ ಯಾವ ಹೆಂಗಸೂ ರಾತ್ರಿಯಲ್ಲಿ ಮನೆಯಿಂದ ಹೊರಬರುವ ಧೈರ್ಯ ಮಾಡುತ್ತಿರಲಿಲ್ಲ. ಕಳೆದ ಬಾರಿ ನಾನು ಅಲ್ಲಿಗೆ ಹೋದಾಗ ಆ ದಾರಿಯಲ್ಲಿ ಮಿನಿ ಬಸ್‌ಗಳು ಚಲಿಸುತ್ತಿದುದನ್ನು ನೋಡಿ ನನಗೆ ಬಹಳ ಖುಶಿಯಾಯಿತು. ಅಂದರೆ ಅಲ್ಲಿರುವ ಹೆಚ್ಚಿನ ಕುಟುಂಬಗಳಿಗೆ ಜಾತಿಯ ತಾರತಮ್ಯವನ್ನು ತಪ್ಪಿಸಿಕೊಳ್ಳಲು ತಕ್ಕಮಟ್ಟಿಗಿನ ಅವಕಾಶವಾಗುತ್ತದೆ.

ಕರ್ಣನ್ ನಿರ್ದೇಶಕ ಮರಿ ಸೆಲ್ವರಾಜ್

ಕರ್ಣನ್ ನಿರ್ದೇಶಕ ಮರಿ ಸೆಲ್ವರಾಜ್

ನಮ್ಮನ್ನು ಹಿಂದಕ್ಕೆ ಹಿಡಿದಿಡುವ ಅಂಶಗಳು.

ದಶಕಗಳ ನಂತರ ಪ್ರಥಮ ಬಾರಿಗೆ ಈ ಪೀಳಿಗೆಗೆ ವಿದ್ಯಾಭ್ಯಾಸ ಲಭ್ಯವಾಗಿದೆ, ಅವರಿಗೆ ದೊಡ್ಡ ಸ್ಥಳಗಳಲ್ಲಿ ನೌಕರಿ ಲಭಿಸಿದೆ, ಅವರು ಹೊರದೇಶಗಳಿಗೆ ಪ್ರಯಾಣ ಮಾಡಿದ್ದಾರೆ ಮತ್ತು ಅವರು ಹಿಂದೆ ಕನಸಿನಲ್ಲಿಯೂ ಊಹಿಸಲಾಗದಿದ್ದ ಜೀವನವನ್ನು ನಡೆಸುತ್ತಿದ್ದಾರೆ. ಇದಕ್ಕೆ ಒಂದು ಕರಾಳಬದಿಯೂ ಇದೆ. ಯಾವ ಮನೋವೈದ್ಯರಿಗೂ ಅರ್ಥವಾಗದ ಒಂದು ರೀತಿಯ “ಬದುಕುಳಿದವರ ಅಪರಾಧೀ ಪ್ರಜ್ಞೆ” ನಮ್ಮನ್ನು ಕಾಡುತ್ತಿದೆ.

ನಾನು ಬರೆಯುವ ಸಕ್ರಿಯತೆಯ ಬಗೆಗಿನ ಲೇಖನಗಳ ಪ್ರಮಾಣವನ್ನು ನೋಡಿ ನನ್ನ ಮನೆಯೊಂದು ಅತ್ಯಂತ ಆತ್ಮವಿಶ್ವಾಸದ, ಸಾಮಾಜಿಕ ನ್ಯಾಯವನ್ನು ಸಮರ್ಥವಾಗಿ ಪ್ರತಿಪಾದಿಸುವ ಸ್ಥಾನವೆಂದು ನೀವು ಅಂದುಕೊಂಡಿರಬಹುದು. ನಿಜ ಹೇಳಬೇಕೆಂದರೆ ಜಾತಿಯ ಬಗ್ಗೆಯಾಗಲೀ ಮತ್ತು ಅದರ ದಬ್ಬಾಳಿಕೆಯ ಬಗ್ಗೆಯಾಗಲೀ ಮಾತನಾಡ ಬಾರದೆಂದು ನನಗೆ ಯಾವಾಗಲೂ ತಿಳಿಸಲಾಗಿದೆ. ನಮ್ಮನ್ನು ನಮ್ಮ ನಮ್ಮ ಬೇರುಗಳನ್ನು ನೆನಪಿಟ್ಟುಕೊಳ್ಳ ಬೇಕೆಂದೂ ಆದರೆ ಅದರ ಬಗ್ಗೆ ಮಾತನಾಡಬಾರದೆಂದೂ ಕೇಳಿಕೊಳ್ಳಲಾಗುತ್ತದೆ. ಏಕೆಂದರೆ ಹಾಗೆ ಮಾತನಾಡಿದರೆ ಈ ಎಲ್ಲಾ ಇಂಗ್ಲೀಶಿನ ಮಧ್ಯೆಯೂ ಸಹ ನಾನು ಎಲ್ಲಿಂದ ಬಂದಿರುವೆನೆಂಬುದು ಇತರರಿಗೆ ತಿಳಿದು ಹೋಗುತ್ತದೆ. ಆದ್ದರಿಂದ ನಾವು ಅದರ ಬಗ್ಗೆ ಮಾತನಾಡುವುದಿಲ್ಲ. ನನಗೆ ಕಾಲೇಜಿಗೆ ಹೋಗುವವರೆಗೂ ನನ್ನ ಜಾತಿಯ ಬಗ್ಗೆ ತಿಳಿದಿರಲಿಲ್ಲ. ಆ ನಂತರ ನಾನು ನನ್ನ ಹಿಂದಿನ ಎಷ್ಟೋ ಘಟನೆಗಳನ್ನು ನೆನಪಿಸಿಕೊಂಡೆ. ಅವು ಬರಿಯ ತಾರತಮ್ಯವಾಗಿರುವುದಕ್ಕಿಂತ ಹೆಚ್ಚು ಅಸಭ್ಯವಾಗಿದ್ದವು.

ಈ ಚಿತ್ರದಲ್ಲಿ ತೋರಿಸಿರುವ ತಲೆಯಿಲ್ಲದ ದೇವರು ಮತ್ತು ತಲೆಯಿಲ್ಲದ ಚಿತ್ರಪಟಗಳಿಗೆ ನನ್ನಲ್ಲಿ ಇನ್ನೂ ಆಳವಾದ ಅರ್ಥವಿದೆ. ನನ್ನ ಕುಟುಂಬದ ಗಂಡಸರು ಸರಕಾರದಿಂದ ನೇಮಿತರಾದ ಮುಂದಾಳುಗಳಲ್ಲ, ಸಾಮಾಜಿಕ ನಾಯಕರೂ ಅಲ್ಲ ಅಥವಾ ದೊಡ್ಡ ದೊಡ್ಡ ಕಂಪನಿಗಳಲ್ಲಿ ಮ್ಯಾನೇಜರುಗಳ ಸ್ಥಾನಗಳಲ್ಲಿರುವವರೂ ಅಲ್ಲ. ನಾನು ನನ್ನ ಕುಟುಂಬದಲ್ಲಿ ಅಷ್ಟೇ ಅಲ್ಲ ನಮ್ಮ ಇಡಿಯ ಪೀಳಿಗೆಯಲ್ಲೇ ಮೊದಲ ಸ್ನಾತಕ ಪದವಿ ಪಡೆದ ವ್ಯಕ್ತಿ. ಅಂದರೆ, ನಾವು ಬೆಳೆಯುತ್ತಿದ್ದಾಗ ನಮಗೆ ಓದಿರಿ, ಕೆಲಸ ಮಾಡಿರಿ, ನಿಮ್ಮ ಬದುಕನ್ನು ಉತ್ತಮಗೊಳಿಸಿಕೊಳ್ಳಿರಿ, ಉತ್ತಮ ಅವಕಾಶಗಳನ್ನು ಕಂಡುಕೊಳ್ಳಿ ಎಂದು ಹೇಳಲಾಯಿತು. ಹಾಗೆ ಮಾಡುವುದರಿಂದ ನಾವು ನಮ್ಮ ಸಂಬಂಧೀಕರನ್ನೂ , ಒಡಹುಟ್ಟಿದವರನ್ನೂ ಕೆಲವು ವೇಳೆ ತಂದೆತಾಯಿಯರನ್ನೂ ಕೂಡ ಹಿಂದೆ ಬಿಟ್ಟು ನಡೆಯಬೇಕಾಗುತ್ತಿತ್ತು.

ತುಳಿಸಿಕೊಳ್ಳುವ/ದಲಿತ ಸಮುದಾಯದ ಯಾವುದೇ ಒಬ್ಬ ಗಂಡಸು ಪ್ರತಿಭಟಿಸಿದರೆ ಅಥವಾ ಯಾವುದೇ ರೀತಿಯಲ್ಲಿ ಆತ್ಮವಿಶ್ವಾಸದಿಂದ ಪಟ್ಟುಹಿಡಿದರೆ ಅಂತಹವರನ್ನು ಸಾಮಾಜಿಕವಾಗಿ ಬಹಿಷ್ಕಾರಿಸಲಾಗುವುದು ಅಥವಾ ಸರಕಾರೀ ಬೆಂಬಲದ ದೌರ್ಜನ್ಯಕ್ಕೆ ಅವರನ್ನು ಒಳಪಡಿಸಲಾಗುವುದು ಎಂದು ಅವರೆಲ್ಲರಿಗೂ ತಿಳಿದಿದೆ. ಅದರಿಂದಾಗಿ ನಮ್ಮ ಕುಟುಂಬಗಳಿಗೆ ಆಗುವ ನಷ್ಟದ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ. ನಮಗೆ ಇಂತಹ ದೌರ್ಜನ್ಯದ ಅಂಕಿಅಂಶಗಳು ಗೊತ್ತಿಲ್ಲ; ಆದರೆ ನಮ್ಮ ಬಳಿ ಕತೆಗಳಿವೆ; ನಾನು ಈಗ ನುಡಿಯುತ್ತಿರುವುದಕ್ಕಿಂತ ಅರ್ಧದಷ್ಟನ್ನು ನುಡಿದಿದ್ದಕ್ಕಾಗಿ ಜೈಲಿಗೆ ಹೋದ ಅಥವಾ ಸತ್ತೇ ಹೋದ ನಮ್ಮ ನೆಂಟರುಗಳಿದ್ದಾರೆ. ಹಾಗಾಗಿ ನಮ್ಮನ್ನು ದಬ್ಬಾಳಿಕೆ ಮಾಡುವವರಷ್ಟೇ ಅಲ್ಲ, ನಮ್ಮ ನಮ್ಮ ಕುಟುಂಬದವರೂ ಕೂಡಾ ನಮ್ಮ ಉತ್ತಮ ನಾಳೆಗಳ ಭರವಸೆಗಾಗಿ ನಮ್ಮ ಧ್ವನಿಗಳನ್ನು ಕಿತ್ತಿಕೊಂಡುಬಿಡುತ್ತಾರೆ.

ಇನ್ನೂ ಕೂಡಾ ಸಿಗಬೇಕಾದ ಅವಕಾಶಗಳಿಂದ ನಮ್ಮನ್ನು ಹೇಗೆ ವಂಚಿಸಲಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲಾರದೇ ನಾವು ಸೋತಿದ್ದೇವೆ. ಉದ್ಯೋಗಗಳಿಂದ, ಭಡ್ತಿಗಳು, ಮೌಲ್ಯಮಾಪನ, ಸಂಬಂಧಗಳು ಎಲ್ಲವುಗಳಿಂದಲೂ ನಮ್ಮನ್ನು ವಂಚಿತರನ್ನಾಗಿ ಮಾಡಲಾಗುತ್ತದೆ. ನಮ್ಮಲ್ಲಿ ಉಳಿಯುವುದು ಮಾತ್ರ, ಸದಾ ಕಾಡುವ ಆತ್ಮಸಂದೇಹದ ಹಿಂದೇಟುಗಳು ಮತ್ತು ಸ್ವಯಂ ನಿಷ್ಪ್ರಯೋಜಕತೆಯ ಭಾವನೆಗಳು.

ಈ ಹಿಂದಿನ ಕೆಲವು ವರ್ಷಗಳಿಂದ ನಾನು ಎಲ್ಲವನ್ನೂ ಪ್ರಶ್ನಿಸ ತೊಡಗಿದ್ದೇನೆ; ನನ್ನ ಮೇಲಿನ ದಬ್ಬಾಳಿಕೆ, ತುಳಿಸಿಕೊಳ್ಳುವ ಸಮುದಾಯಗಳ ಬಗ್ಗೆ ಸರಕಾರದ ವ್ಯವಸ್ಥೆಯ ಸೋಲು, ಕ್ರಿಸ್ಚಿಯನ್ ಧರ್ಮದಲ್ಲಿನ ಜಾತೀಯತೆ ಹಾಗೂ ಧರ್ಮದಲ್ಲಿ, ಚರ್ಚುಗಳಲ್ಲಿರುವ ಬೂಟಾಟಿಕೆ ಇವೆಲ್ಲವನ್ನೂ ಪ್ರಶ್ನಿಸತೊಡಗಿದ್ದೇನೆ. ಪ್ರತಿಬಾರಿಯೂ ಈ ರೀತಿ ಇವುಗಳನ್ನು ಪ್ರಶ್ನಿಸದಿರಲೂ ಹಾಗೂ ಇವುಗಳನ್ನೆಲ್ಲಾ ಬದಲಾಯಿಸಲು ಅಸಾಧ್ಯವಾಗಿರುವುದರಿಂದ ಇವೆಲ್ಲವನ್ನೂ ಒಪ್ಪಿಕೊಂಡುಬಿಡಲೂ ನನಗೆ ತಿಳಿಸಲಾಗುತ್ತದೆ. ಮತ್ತೆಲ್ಲರೂ ತಮ್ಮ ಹಣೆಬರಹವನ್ನು ಒಪ್ಪಿಕೊಂಡಿರುವಾಗ ನನ್ನೊಬ್ಬಳಿಗೆ ಮಾತ್ರಾ ಏಕೆ ಈ ಸಮಸ್ಯೆಗಳು ಕಾಣುತ್ತವೆ ಎಂದು ನನ್ನನ್ನೇ ಪ್ರಶ್ನಿಸಲಾಗುತ್ತದೆ. ಒಬ್ಬ ಕ್ರಿಸ್ಚಿಯನ್ ಆಗಿ ನಾನು ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಯನ್ನು ತೋರಿಸಿ ಶಾಂತಿಯ ಮಾತನ್ನಾಡಬೇಕಾಗಿರುವಾಗ ನನಗೇಕೆ ಇಷ್ಟೊಂದು ಕೋಪ ಬರುತ್ತದೆ ಎಂದು ನನ್ನನ್ನು ಕೇಳಲಾಗುತ್ತದೆ.

ಕರ್ಣನ್ ನನ್ನು ಕೇಳುವ ಆ ಒಂದು ಸಾಲು, “ನೀನೇಕೆ ಸಹನೆಯಿಂದ ಪ್ರಶ್ನಿಸುವುದಿಲ್ಲ?” ಎಂಬ ಸಾಲು ನನಗೆ ಒಂದು ಕಲ್ಲುಬಂಡೆಯಂತೆ ಬಂದು ಹೊಡೆಯಿತು .ನನಗೆ, ನನ್ನ ಹಾಗೆಯೇ ಅನ್ನಿಸಿರುವ ದಲಿತ/ತುಳಿಸಿಕೊಳ್ಳುವ ಸಮುದಾಯದ ಬಹಳ ಸ್ನೇಹಿತರಿದ್ದಾರೆ. ಅವರ ಸಿಟ್ಟನ್ನು ಅಸುರೀಕರಿಸಲಾಗುತ್ತದೆ ಅಥವಾ ತಳ್ಳಿ ಹಾಕಲಾಗುತ್ತದೆ , ಹೊರತು ಗುರುತಿಸಲಾಗುವುದಿಲ್ಲ. ಏಕೆಂದರೆ ಅವರೇನಾದರೂ ನಮ್ಮ ಕ್ರೋಧವನ್ನು ಗುರುತಿಸಿ ಬಿಟ್ಟರೆ ಆಗ ಈ ಸಮಾಜವೆಂದು ಕರೆಯಲ್ಪಡುವ ಈ ವ್ಯವಸ್ಥೆಯು ಎಷ್ಟರ ಮಟ್ಟಿಗೆ ದೋಷಭರಿತ, ಒಡೆದು ಚೂರಾದ, ಹಿಂಸಾಚಾರ ತುಂಬಿದ ವ್ಯವಸ್ಥೆಯೆಂಬುದನ್ನು ಅವರು ಒಪ್ಪಿಕೊಳ್ಳಬೇಕಾಗುತ್ತದೆ. ನಮ್ಮನ್ನೆಲ್ಲಾ ನಾವು ಇದು ನಮ್ಮ ಸಮಾಜವೆಂದು ಒಪ್ಪಿಕೊಳ್ಳುವವರೆಗೂ ಅವರು ತಡೆದು ಹಿಡಿದಿಟ್ಟುಕೊಳ್ಳುತ್ತಾರೆ, ಏಕೆಂದರೆ ಅಧಿಕಾರದಲ್ಲಿರುವವರಿಗೆ ಅದು ಲಾಭದಾಯಕವಾಗಿದೆ. ತನ್ನದೇ ಹಳ್ಳಿಯಲ್ಲಿ ತನ್ನದೇ ಕಾಲುಗಳನ್ನು ಸದಾ ಕಾಲ ಕಟ್ಟಿಸಿಕೊಂಡಿರುವ ಕತ್ತೆಯ ಹಾಗೆ.

ಅರ್ಹತೆಯ ಕಟ್ಟುಕತೆ

ಈ ಎರಡು ದೃಶ್ಯಗಳು ನನ್ನ ಹೃದಯವನ್ನು ಛಿದ್ರಮಾಡಿದವು.

೧. ಸೈನಿಕ ಪಡೆಗೆ ಆಯ್ಕೆಯಾಗುವ ಪಂದ್ಯ.

ಇದುವರೆಗಿನ ಸಮಸ್ಥ ತಮಿಳು ಸಿನೆಮಾಗಳೆಲ್ಲೆಲ್ಲಿಯೂ ಅರ್ಹತೆಯ ಪರಿಭಾಷೆ ಎಷ್ಟು ಮೂರ್ಖತನದ್ದೆಂಬುದನ್ನು ಪ್ರಬಲವಾಗಿ ವಿವರಿಸುವಂಥಾ ಇಂಥ ಮತ್ತೊಂದು ದೃಶ್ಯವಿಲ್ಲ. ಅಂತಹ ಓಟದ ಪಂದ್ಯಗಳ ದೃಶ್ಯಗಳಲ್ಲೆಲ್ಲಾ ಸಾಧಾರಣವಾಗಿ ನಾವು ಗೆಲುವಿನ ಪಟ್ಟಿಯನ್ನು ಸೀಳಿ ಮುಂದೋಡುವ ಹೀರೋಗಳನ್ನು ಮಾತ್ರಾ ನೋಡಿರುತ್ತೇವೆ. ಆ ಹೀರೋಗಳ ತೋಳಿನ ಸ್ನಾಯುಗಳೂ ಮತ್ತು ಕಣ್ಣುಗಳೂ ಉಬ್ಬೇರಿಕೊಂಡು ಗಂಡು-ಹಾರ್ಮೋನಿನ ನೆರೆ ಉಕ್ಕೇರಿ ಹರಿಯುವಂತೆ ಕಾಣುವ ಆತನ ಅತಿ ಹತ್ತಿರದ ಕ್ಯಾಮೆರಾ ಶಾಟ್‌ಗಳನ್ನು ನೋಡಿರುತ್ತೇವೆ. ಇಲ್ಲಿ ಕರ್ಣನ್ ಅಂತೂ ಇಂತೂ ಹೇಗೋ ಓಟವನ್ನು ಮುಗಿಸುತ್ತಾನೆ. ಆಗ ಓಟದ ಪಟ್ಟಿಯನ್ನು ಒಂದು ಹಗ್ಗದಿಂದ ಅಡ್ಡ ಹಾಕಿ ಉಳಿದ ಓಟಗಾರರನ್ನು ಅಲ್ಲೇ ನಿಲ್ಲಿಸಲಾಗುವುದು. ಅವನು ಅಲ್ಲೇ ಕುಳಿತು ನಿರಾಕರಿಸಲ್ಪಟ್ಟ ವ್ಯಕ್ತಿ ಆಯ್ಕೆದಾರರ ಕಾಲ ಬಳಿ ಬೀಳುವುದನ್ನು ನೋಡುತ್ತಾನೆ.

ಈ ದೃಶ್ಯ ಪಂದ್ಯದ ಬಗ್ಗೆ ಅಲ್ಲ; ಪಂದ್ಯ ಆರಂಭವಾಗುವ ಕ್ಷಣದ ಮುಂಚೆ ಏನು ನಡೆಯಿತು ಎನ್ನುವುದರ ಬಗ್ಗೆ. ಕರ್ಣನ್‌ಗೆ ತರಬೇತಿ ಪಡೆಯಲು ಯಾವುದೇ ನಿರ್ದಿಷ್ಟ ಓಟಪಟ್ಟಿಯಿರಲಿಲ್ಲ. ಅವನನ್ನು ಯಾವುದೇ ಚಂದದ ಕಾರಿನಲ್ಲಿ ಸೈನಿಕ ಕ್ರೀಡಾಂಗಣಕ್ಕೆ ತಲುಪಿಸಲಾಗಲಿಲ್ಲ. ಅವನು ಸೂರ್ಯೋದಯಕ್ಕೆ ಮುಂಚೆ ಏಳಬೇಕಿತ್ತು, ಗಂಟೆಗಟ್ಟಲೆ ಬಸ್‌ಗಾಗಿ ಕಾಯಬೇಕಿತ್ತು ಹಾಗೂ ಬಸ್ ಸಿಕ್ಕದಿದ್ದಾಗ ಲಾರಿಯಲ್ಲಿ ತೀಕ್ಷ್ಣವಾದ ಬಿಸಿಲಿನಲ್ಲಿ ನಿಂತು ಸ್ಪರ್ಧೆಗೆ ಬರಬೇಕಾಗಿತ್ತು. ತಾವೂ ಸಹ ಸೂರ್ಯನಡಿಯಲ್ಲಿ ನಿಂತು ತಮ್ಮೆಲ್ಲಾ ಶಕ್ತಿಯನ್ನೂ ಹಾಕಿ ಓಟದ ಸ್ಪರ್ದೆಗೆ ತಯಾರಿ ನಡೆಸಬೇಕಾಯಿತೆಂದು ಇತರರೂ ಹೇಳಬಹುದಾದರೂ, ಅವರಿಗೆ ಅರ್ಥವಾಗದ ಅಂಶವೆಂದರೆ ತಮ್ಮೆಲ್ಲಾ ಶಕ್ತಿಯನ್ನೂ ಸ್ಪರ್ದೆಯ ಸ್ಥಳಕ್ಕೆ ತಲುಪುವುದಕ್ಕಷ್ಟಕ್ಕೇ ವ್ಯಯಿಸಬೇಕಾಗಿ ಬರುವಂಥ ಬೇಕಾದಷ್ಟು ಕರ್ಣನ್‌ಗಳಿದ್ದಾರೆ. ಪ್ರತಿಬಾರಿ ಶಾಲೆಯ ಅಥವಾ ಕಾಲೇಜಿನ ಗೇಟಿಗೆ ತಲುಪಲೂ ಕೂಡಾ ನಾವು ಮುಕ್ಕಾಲುವಾಸಿ ಸತ್ತೇ ಹೋಗಿರುತ್ತೇವೆ. ಮುಂದಿನ ಬಾರಿ ನೀವು “ಕಷ್ಟ ಪಟ್ಟು ಪ್ರಯತ್ನ ಪಡಿ” ಎಂದು ಉಸುರುವ ಮುಂಚೆ ಇಲ್ಲದವರ ಒದ್ದಾಟಗಳ ಮೂಲಕ ಈ ಪದಗಳ ವ್ಯಾಖ್ಯಾನವನ್ನು ಮಾಡಿ ನೋಡಿ. ಸ್ಪರ್ದೆಯ ನಂತರ ಕರ್ಣನ್‌ನ ಮುಖದ ಮೇಲಿನ ಭಾವನೆ , ಗೆದ್ದ ನಮ್ಮಂಥವರಿಗೆ ಗೆಲುವಿನ ಸಂಭ್ರಮವೇಇಲ್ಲ, ಇರುವುದೆಲ್ಲಾ ಗೆಲ್ಲಲಾರದ ನಮ್ಮವರನ್ನು ಕುರಿತು ಬರಿಯ ಅಪರಾಧೀ ಭಾವವೊಂದೇ ಎಂದು ತೋರಿಸುತ್ತದೆ.

೨. ಅಜ್ಜನ ಮರಣ.

ಆತ್ಮಹತ್ಯೆಯನ್ನು ಹೇಡಿತನ ಎಂದು ಪರಿಗಣಿಸಲಾಗುತ್ತದೆ. ಆತ್ಮಹತ್ಯೆ ಎಂದರೆ ಜೀವನವನ್ನು ತ್ಯಜಿಸಿ ಒಗೆದು ಬಿಡುವುದು ಎಂದು ತಿಳಿಯಲಾಗುತ್ತದೆ. ಆದರೆ ಈ ಚಿತ್ರದಲ್ಲಿ ಕರ್ಣನ್‌ನ ಅಜ್ಜನ ಆತ್ಮಹತ್ಯೆಯೊಂದೇ ಈ ಪ್ರಕರಣದ ಬಗ್ಗೆ ಪ್ರಪಂಚವು ಮಾತನಾಡಲು ಇರುವ ದಾರಿಯೆಂದೂ, ನಡೆದಿರುವ ಅನ್ಯಾಯವನ್ನು ಪ್ರಪಂಚವು ಅರಿತುಕೊಳ್ಳುವ ಒಂದೇ ಮಾರ್ಗವೆಂದರೆ ಈ ಆತ್ಮಹತ್ಯೆಯೆಂದೂ ತೋರಿಸುತ್ತದೆ. ಏಕೆಂದರೆ ಚರಿತ್ರೆಯಲ್ಲಿ ತುಳಿಸಿಕೊಳ್ಳುವವರಿಗೆ/ ದಲಿತರಿಗೆ ಸ್ಥಳವಿಲ್ಲ ಹಾಗೂ ಸರಕಾರಕ್ಕೆ ತಮಗೆ ಬೇಡದುದನ್ನೆಲ್ಲಾ ಅಳಿಸಿ ಹಾಕಿ ಇದ್ದಿರಲೇ ಇಲ್ಲ ಎನ್ನಿಸಿ ಬಿಡುವಷ್ಟು ಪ್ರಾಬಲ್ಯವಿದೆ. ಆತ್ಮಹತ್ಯೆಗಳು ತುಳಿಸಿಕೊಳ್ಳುವ ಸಮುದಾಯಗಳಲ್ಲಿ ಬಹಳ ಹೆಚ್ಚು; ಅವು ತುಳಿತದ ಕಾರಣಕ್ಕೋ ಅಥವಾ ತುಳಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲೋ ಮಾಡಿಕೊಂಡ ಆತ್ಮಹತ್ಯೆಗಳಲ್ಲ;ನಮ್ಮ ನಮ್ಮ ಕತೆಗಳನ್ನು ಹೇಳಿಕೊಳ್ಳಲಷ್ಟೇ ಮಾಡಿಕೊಂಡ ಆತ್ಮಹತ್ಯೆಗಳು. ಏಕೆಂದರೆ ಅದನ್ನು ಬಿಟ್ಟರೆ ನಮ್ಮ ಕತೆಗಳನ್ನು ಕೇಳಿಸಿಕೊಳ್ಳಲು ಯಾರೂ ಸಿದ್ಧರಿಲ್ಲವೇ ಇಲ್ಲ.

ನೀಟ್ ಎಂದು ಕರೆಸಿಕೊಳ್ಳುವ ಒಂದು ದಬ್ಬಾಳಿಕೆಯ ಪರೀಕ್ಷೆಯಿಂದಾಗಿ ತನ್ನ ಡಾಕ್ಟರ್ ಆಗುವ ಕನಸು ನುಚ್ಚುನೂರಾದಾಗ ಸಾವನ್ನಪ್ಪಿದ ಅನಿತಾಳ ಮರಣದ ವಿಷಯಕ್ಕೆ ನಾನು ಮತ್ತೆ ಬರುತ್ತೇನೆ. ಅವಳು ಅತ್ಯುಚ್ಚ ನ್ಯಾಯಾಲಯದ ಮುಂದೆ ನಿಂತಿರುವ ದೃಶ್ಯ , ಸರಕಾರವು ಹೇಗೆ ಅವಳ ಕೈಬಿಟ್ಟಿತು ಎಂಬುದನ್ನು ತೋರಿಸಿ ನನ್ನನ್ನಿನ್ನೂ ಕಾಡಿ ನೆನಪಿಸುತ್ತದೆ. ಸವಲತ್ತುಗಳಿರುವ ಮಕ್ಕಳು ನೀಟ್ ತರಬೇತಿ ಶಾಲೆಗಳಿಗೆ ಹತ್ತಾರು ಲಕ್ಷ ರೂಪಾಯಿಗಳನ್ನು ಕೊಟ್ಟು ಸೇರಿಕೊಳ್ಳಬಲ್ಲರು. ಬರಿಯ ಶಾಲೆಗೆ ಸೇರಲು ಮಾತ್ರವೇ ಅಷ್ಟೊಂದು ತ್ಯಾಗಗಳನ್ನು ಮಾಡಬೇಕಾಗಿ ಬರುವ ಅನಿತಾಳಂಥ ಮಕ್ಕಳ ಗತಿ ಏನು?
ಎಲ್ಲಕ್ಕಿಂತಾ ಹೆಚ್ಚಾಗಿ, ಅವಳು ಸಾಯದಿದ್ದರೆ ನಾವು ಈಗ ಅವಳ ವಿಷಯದ ಬಗ್ಗೆ ಮಾತನಾಡುತ್ತಾ ಇರುತ್ತಿದ್ದೆವೇ? ಅವಳ ಆತ್ಮಹತ್ಯೆಯಿಂದಾಗಿ ತಮಿಳುನಾಡಿನಲ್ಲಿ ನೀಟ್ ಪರೀಕ್ಷೆಗಳ ವಿರುದ್ಧ ಮೊದಲ ಹೋರಾಟ ಆರಂಭವಾಯಿತು. ಈಗ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ನೀಟ್ ಪರೀಕ್ಷೆಗಳನ್ನು ರದ್ದು ಮಾಡುವ ಭರವಸೆಯನ್ನು ಪ್ರಸ್ತಾಪಿಸುತ್ತವೆ.

ಒಂದು ಆದರ್ಶ ಜಗತ್ತಿನಲ್ಲಿ ಈ ಬಗೆಯ ಅರ್ಹತೆಯನ್ನು ಅಳೆಯುವ ಕಲ್ಪಿತ ವ್ಯವಸ್ಥೆಗಳು ದಬ್ಬಾಳಿಕೆ ಮಾಡುತ್ತವೆ ಎಂದು ತಿಳಿಯಲು ಆತ್ಮಹತ್ಯೆಗಳ ಅಗತ್ಯವಿರಬಾರದು. ಅದು ಸರಳವಾದ ವಿವೇಚನೆಯಿಂದಲೇ ಅರಿಯುವಂತಿರಬೇಕು. ಆದರೇನು ಮಾಡುವುದು, ನಾವೀಗ ಇಲ್ಲಿದ್ದೇವೆ.

ನಿಮ್ಮ ಹೆಸರಿನ ಅಸಂಬದ್ಧತೆ.

ನಾನು ಆರನೇ ತರಗತಿಯಲ್ಲಿದ್ದಾಗ ಬೆಂಗಳೂರಿನಿಂದ ಮೆಟ್ಟುಪಾಳ್ಯಮ್‌ಗೆ ನೆಲೆಸಲು ನನ್ನ ಮನೆಯವರೊಂದಿಗೆ ಆಗ ತಾನೇ ನಾನು ಹೋಗಿದ್ದೆ. ದಾಖಲಾತಿಯ ಎಲ್ಲಾ ಕ್ರಮಗಳೂ ಮುಗಿದ ಮೇಲೆ ನಾನು ನನ್ನ ತರಗತಿಗೆ ಸ್ವಲ್ಪ ತಡವಾಗಿ ಹೋದೆ. ಉಪಾಧ್ಯಾಯರು ಪಾಠವನ್ನು ನಿಲ್ಲಿಸಿ ನನ್ನನ್ನು ಮುಂದಿನ ಬೆಂಚಿನ ಬೇರೆ ಮೂವರು ಹುಡುಗರ ಜೊತೆಗೆ ಕೂಡಿಸಿದರು. ಅವರು ನನ್ನ ಹೆಸರನ್ನೂ ನನ್ನ ತಂದೆಯ ಹೆಸರನ್ನೂ ಕೇಳಿದರು. ನಾನು ಹೇಳಿದೆ. ಅವರ ಮುಖದಲ್ಲಿ ಗೊಂದಲ ಎದ್ದು ಕಾಣುತ್ತಿತ್ತು. ಯಾಕೋ ಗೊತ್ತಿಲ್ಲ ಅವರು ನನ್ನ ಹೆಸರಿನ ಎರಡನೇ ಭಾಗವನ್ನು ಕೇಳಿದರು. ನಾನು ಹೇಳಿದೆ. ಅವರು ನಾನು ಎಲ್ಲಿಂದ ಬಂದಿರುವೆನೆಂದೂ, ನನ್ನ ಸ್ವಂತ ಊರು ಯಾವುದೆಂದೂ ಕೇಳಿದರು. ನಾನು ಹೇಳಿದೆ. ಅವರು ಮತ್ತೆ ನನ್ನ ತಾಯಿಯ ಸ್ವಂತ ಊರು ಯಾವುದೆಂದು ಕೇಳಿದರು. ನಾನು ಅದನ್ನೂ ಹೇಳಿದೆ. ಉಪಾಧ್ಯಾಯರು ನನ್ನ ಹೆಸರಿನ ಅರ್ಥವೇನೆಂದು ಕೇಳಿದರು. ನಾನು “ದೇವರು ನನ್ನ ನ್ಯಾಯವಾದಿ” ಎಂದು ಹೇಳಿದೆ. ಮಿಕ್ಕ ಮಕ್ಕಳೆಲ್ಲಾ ನಕ್ಕು ಪಿಸುಗುಟ್ಟಿದರು, ” ಅವನ ಮೈ ಬಣ್ಣಕ್ಕೆ ಅವನು ನರಕದಲ್ಲಿದ್ದು ನ್ಯಾಯದ ತೀರ್ಪುಕೊಡುತ್ತಿರಬೇಕಿತ್ತು”. ಶಾಲೆಯಲ್ಲಿ ನನ್ನ ಮೊದಲ ದಿನದಂದು ಆ ಎಲ್ಲಾ ಪ್ರಶ್ನೆಗಳು ಬಹಳ ವಿಚಿತ್ರವಾಗಿದ್ದವು. ಆಗ ನನಗೆ ನನ್ನ ಉಪಾಧ್ಯಾಯರು ನನ್ನ ಜಾತಿಯನ್ನು ಕಂಡುಹಿಡಿಯುವ ಪ್ರಯತ್ನದಲ್ಲಿದ್ದರು ಎಂಬ ಎಳ್ಳಷ್ಟೂ ಅರಿವಿರಲಿಲ್ಲ.

ಕಾಲೇಜಿನಲ್ಲಿ ಒಬ್ಬ ಉತ್ತರ ಭಾರತದ ವಿದ್ಯಾರ್ಥಿಗೆ ತಮಿಳುನಾಡಿನಲ್ಲಿ ಜನರಿಗೆ ಅಡ್ಡ ಹೆಸರಿರುವುದಿಲ್ಲ ಅಂತ ಗೊಂದಲವಾಗಿ ಬಿಟ್ಟಿತ್ತು. ಅವನಿಗೆ ತಮಿಳುನಾಡಿನ ಬಹಳಷ್ಟು ಜನರಿಗೆ ಎರಡನೆಯ ಹೆಸರೇ ಇರುವುದಿಲ್ಲ ಎನ್ನುವುದು ಇನ್ನೂ ಹೆಚ್ಚು ಗೊಂದಲವನ್ನುಂಟು ಮಾಡುತ್ತಿತ್ತು. ಯಥಾಪ್ರಕಾರ ಅವನು ಅವರ ತಾಯಿಯರ ಮತ್ತವರ ಚಾರಿತ್ರ್ಯದ ಬಗ್ಗೆ ನಗೆಚಾಟಿಕೆ ಮಾಡುತ್ತಿದ್ದ. ನನಗಾಗ ಈಗಿರುವಂತೆ ಜಾತಿಯ ಬಗ್ಗೆ ಸ್ಪಷ್ಟವಾದ ಅರಿವಿರಲಿಲ್ಲ. ಇದ್ದಿದ್ದರೆ ನಾನು ಅವನನ್ನು, ಜಾತಿಯ ಕೊಳೆಯುತ್ತಿರುವ ದುರ್ನಾತದ ಮೇಲೆ ನಿಂತಿರುವ ಒಂದು ಕಾಲ್ಪನಿಕ ಉಪನಾಮದಿಂದ ಹಿಡಿದೆತ್ತಲ್ಪಟ್ಟಿರುವ ಅವನ ಅಪ್ಪನ ಅಹಂ ಬಗ್ಗೆ ಕೇಳುತ್ತಿದ್ದೆ.

ನಾನು ಗಳಿಸದೇ ಇರುವ ವಿಷಯಗಳ ಬಗ್ಗೆ ನನಗೆ ಹೆಮ್ಮೆಯಿಲ್ಲ; ಉದಾಹರಣೆಗೆ ರಾಷ್ಟ್ರೀಯತೆ, ದೇಶಭಕ್ತಿ ಮತ್ತು ಭಾಷಾಭಿಮಾನ. ಆದರೆ ಆತ್ಮಗೌರವಕ್ಕಾಗಿ ನಡೆದ ಹೋರಾಟ ಉನ್ನತವಾಗಿಯೂ ಹೆಮ್ಮೆಯಿಂದಲೂ ತಲೆ ಎತ್ತಿ ನಿಂತಿರುವ ಈ ತಮಿಳುನಾಡಿನಲ್ಲಿ ಹುಟ್ಟಿರುವುದು ನನಗೆ ಸಂತೋಷ ತರುತ್ತದೆ. ನಾವು ಈ ಹೆಸರನ್ನು ಪಡೆಯಲು ಎಷ್ಟು ಹೋರಾಡ ಬೇಕಾಯಿತು, ಎಷ್ಟು ರಕ್ತವನ್ನು ಸುರಿಸಬೇಕಾಯಿತು, ಎಷ್ಟು ಜೀವಗಳನ್ನು ಕಳೆದುಕೊಳ್ಳಬೇಕಾಯಿತು ಎಂಬುದನ್ನು ಕರ್ಣನ್ ನನಗೆ ತೋರಿಸಿಕೊಡುತ್ತದೆ. ಆದ್ದರಿಂದ ನಿಮ್ಮ ಹೆಸರನ್ನು ಹೆಮ್ಮೆಯಿಂದ ಧರಿಸಿರಿ; ಒಬ್ಬ ನ್ಯಾಯವಾದಿಯಂತೆ, ಒಬ್ಬ ಮಹಾರಾಜನಂತೆ ಒಬ್ಬ ರಾಜಮನೆತನದವನಂತೆ ಹೆಮ್ಮೆಯಿಂದ ಧರಿಸಿರಿ. ನಿಮ್ಮ ಹೆಸರನ್ನು ಜೋರಾಗಿ ನುಡಿಯಿರಿ. ಒಂದು ಹೆಸರಿಗೆ ಮೌಲ್ಯವನ್ನು ಸಾಬೀತು ಮಾಡಲು ಆ ಹೆಸರಿಗೆ ಜಾತಿಯು ಅಂಟಿಕೊಳ್ಳಬೇಕಾದ ಅವಶ್ಯಕತೆಯಿಲ್ಲ ಎಂಬುದನ್ನು ಜನರೆಲ್ಲಾ ಅರಿತುಕೊಳ್ಳುವಂತೆ ಜೋರಾಗಿ ನುಡಿಯಿರಿ. ನಿಮ್ಮ ಹೆಸರು ಅಸಂಬದ್ಧವಲ್ಲ, ಅವರ ಜಾತಿಸೂಚಕ ಹೆಸರೇ ಅಸಂಬದ್ಧ.

ದೇವದಾಸನ ಮಗ ಡೇನಿಯಲ್ ಸುಕುಮಾರ್, ಹಾಗೂ ಅವನು ಜಾತಿಯ ಕಪಿಮುಷ್ಠಿಯಿಂದ ಮತ್ತೊಂದು ಹೆಜ್ಜೆ ದೂರ ಸರಿಯುತ್ತಿದ್ದಾನೆ.

ಸರಕಾರದಿಂದ ಪ್ರಾಯೋಜಿತ ದೌರ್ಜನ್ಯದ ಐದು ಅಂಶಗಳು.

ಸರಕಾರದಿಂದ ಪ್ರಾಯೋಜಿತ ದೌರ್ಜನ್ಯಕ್ಕೆ ಹಲವಾರು ಮುಖಗಳಿವೆ. ಎಲ್ಲರಿಗೂ ಗೊತ್ತಿರುವುದು ಪೋಲೀಸರ ದೌರ್ಜನ್ಯದ ಘಟನೆಗಳು.ಪೋಲೀಸರು ಸಾಮಾನ್ಯವಾಗಿ ಸಾರ್ವಜನಿಕರನ್ನು ಮತ್ತು ಪೋಲೀಸನ್ನು ದ್ವಂದ್ವಗಳಂತೆ ಕಾಣುತ್ತಾರೆ. ಪೋಲೀಸರನ್ನು ಸಬಲೀಕರಿಸುವುದು ಸರಕಾರದ ವಿಶ್ವಾಸಾರ್ಹ ಶಕ್ತಿಯಂದಷ್ಟೇ ಅಲ್ಲ, ಜಾತಿಯ ಪ್ರಾಧಾನ್ಯತೆಯೂ ಹೌದು ಎನ್ನುವುದನ್ನು ನಾವು ಸಾಮಾನ್ಯವಾಗಿ ಮರೆತು ಬಿಡುತ್ತೇವೆ. ಇದೇನೂ ದಂತಕತೆಯಲ್ಲ, ೨೦೨೦ರ ಪೋಲೀಸರ ಸುಪರ್ದಿಯಲ್ಲಿ ನಡೆದ ಜೈರಾಜ್ ಮತ್ತು ಜೆಲಿಕ್ಸ್ ಅವರ ಕೊಲೆಗಳು ಇದನ್ನು ಸಾಬೀತು ಮಾಡಿವೆ. ಈ ಎರಡು ಸಾವುಗಳ ಜೊತೆಗೆ ಉನಾವೋದಲ್ಲಿನ ೧೮ ವರ್ಷ ವಯಸ್ಸಿನ ತರಕಾರಿ ಮಾರುವ ಹುಸೇನ್‌ನ ಸಾವನ್ನೂ ನೋಡಿದರೆ ಇವುಗಳಿಗೆ ಕೋಮುವಾದದ ಪದರುಗಳಿರುವುದೂ ವಿದಿತವಾಗುತ್ತದೆ. ಆದರೆ ನಾವು ಸರಕಾರದಿಂದ ಪ್ರಾಯೋಜಿತ ಎಲ್ಲಾ ಅಪರಾಧಗಳಿಂದಲೂ ಸರಕಾರವನ್ನು ಮುಕ್ತರನ್ನಾಗಿ ಮಾಡಿಬಿಡುತ್ತೇವೆ. ಅಷ್ಟಲ್ಲದೆ ಕೆಲವು ಚಿತ್ರಗಳಲ್ಲಿ ತೋರಿಸಿರುವಂತೆ, ಉದಾಹರಣೆಗೆ ಸಿಂಘಮ್, ದಭಾಂಗ್, ದರ್ಬಾರ್ ಮುಂತಾದವುಗಳು- ಆ ಪೋಲೀಸರನ್ನು ಹೀರೋಗಳನ್ನಾಗಿ ಮಾಡಿ ಆ ಅಪರಾಧಗಳನ್ನು ರಂಜನೀಯ ಮಾಡಿಬಿಡುತ್ತೇವೆ.

ಎರಡನೇ ಸರಕಾರದಿಂದ ಪ್ರಾಯೋಜಿತ ದೌರ್ಜನ್ಯ ಹಿಂದೆ ನಡೆಯುತ್ತಿತ್ತು.
ನಾನು ನನ್ನ ಕುಟುಂಬದವರು, ಅದರಲ್ಲೂ ಸಣ್ಣ ಹಳ್ಳಿಗಳಿಂದ ಬಂದ ನನ್ನ ಕುಟುಂಬದವರು ಹೇಳುವುದನ್ನು ಕೇಳಿದ್ದೇನೆ. ಲಾಕ್‌ಅಪ್‌ನಲ್ಲಿ ಪೋಲೀಸರಿಂದ ಹೊಡೆತ ತಿಂದ ವ್ಯಕ್ತಿ ಹೆಚ್ಚು ದಿನ ಬದುಕುಳಿಯುವುದಿಲ್ಲವೆಂದು ಅವರು ಹೇಳುತ್ತಾರೆ. ಪೋಲೀಸರಿಗೆ ಯಾವುದೇ ಒಬ್ಬ ವ್ಯಕ್ತಿಗೆ ಹೇಗೆ ಹೊಡೆದರೆ ಆ ವ್ಯಕ್ತಿ ತಕ್ಷಣ ಸಾಯುವುದಿಲ್ಲ ಆದರೆ ಆ ಹೊಡೆತಗಳಿಂದಾಗಿ ಕೆಲವು ವರ್ಷಗಳಲ್ಲಿ ಖಂಡಿತಾ ಸಾಯುತ್ತಾನೆ ಎಂಬುದು ತಿಳಿದಿರುತ್ತದೆ ಎಂದು ನನ್ನ ಹಳ್ಳಿಯ ಜನರು ಮಾತನಾಡಿಕೊಳ್ಳುವುದನ್ನು ನಾನು ಕೇಳಿದ್ದೇನೆ. ಇದು ನಿಜವಾಗಿತ್ತು. ಏಕೆಂದರೆ ಪೋಲೀಸರು ನಡೆಸುವ ಲಾಕ್‌ಅಪ್ ದೌರ್ಜನ್ಯ ಎಷ್ಟರ ಮಟ್ಟಿಗೆ ಹಿಂಸಾನAದಕರವಾಗಿದೆ ಎನ್ನಿಸುತ್ತದೆ ಎಂದರೆ ಅದು ಉದ್ದೇಶಿತ ಕೊಲೆಯೆಂದು ಅನ್ನಿಸುಕೊಳ್ಳುವಷ್ಟರ ಮಟ್ಟಿಗೆ. ವೆಟ್ರಿಮಾರನ್ ಅವರ ವಾರಣಾಸಿಯಲ್ಲಿ ಇದರ ಬಗ್ಗೆ ಕೆಲವು ಅಂಶಗಳನ್ನು ಬರೆಯಲಾಗಿದೆ. ಆಸ್ಪತ್ರೆಗಳಿಗೂ ವೈದ್ಯಕೀಯ ಉಪಚಾರಗಳೂ ದಕ್ಕದ ಪೋಲೀಸರ ದೌರ್ಜನ್ಯಕ್ಕೆ ಒಳಗಾದ ಜನರು ಒಂದು ನಿಧಾನವಾದ ವೇದನೆಯಿಂದ ಕೂಡಿದ ಸಾವನ್ನಪ್ಪುತ್ತಾರೆ. ಯೋಗಿ ಬಾಬು ಈ ಚಿತ್ರದ ಕೊನೆಯಲ್ಲಿ ಅದನ್ನೇ ಹೇಳುತ್ತಾರೆ. ಅದೇ ನಡೆಯುತ್ತದೆ. ಪೋಲೀಸ್ ದೌರ್ಜನ್ಯವನ್ನು ನಮ್ಮ ಸಮಾಜದಲ್ಲಿ ಅದು ಹೇಗೋ ಅತಿಯಾಗಿ ಸಾಮಾನ್ಯೀಕರಿಸಿಕೊಂಡು ಬಿಟ್ಟಿದ್ದೇವೆ. ¥s಼ÉÃಸ್‌ಬುಕ್ಕಿನಲ್ಲಿ ಪೋಲೀಸರು ಸಾರ್ವಜನಿಕರನ್ನು ಬಡಿಯುವ ದೃಶ್ಯಗಳನ್ನು ನೋಡಿ ನಗಾಡುವ ಮಂದಿ ನಮ್ಮೆರ ನಡುವೆಯೂ ಇದ್ದಾರೆ.

ಪೋಲೀಸ್ ದೌರ್ಜನ್ಯದ ಮೂರನೇ ಅಂಶ ನೇರ ಮತ್ತು ಉದ್ದೇಶಿತವಾಗಿದೆ. ಒಂದು ಸಂಪೂರ್ಣ ಹಳ್ಳಿಯನ್ನು ಧ್ವಂಸ ಮಾಡಿ, ಅಲ್ಲಿರುವ ಎಲ್ಲರನ್ನೂ ಬಡಿಯಲು ಪರವಾನಿಗಿ ಕೊಡುವ ಕಲೆಕ್ರ‍್ನ ದೌರ್ಜನ್ಯದಂತೆ ಅದು. ಇದೊಂದು ನೈಜ ಘಟನೆಯನ್ನು ಆಧರಿಸಿದ್ದು ಎಂದು ನೆನೆಯುವುದೇ ಭಯಾನಕ. ಆದರೆ ಇದು ಪದೇಪದೇ ನಡೆಯುತ್ತಿರುವುದರಿಂದ ಇದು ಆಶ್ಚರ್ಯಕರವೇನೂ ಅಲ್ಲ. ಇದರ ಉದಾಹರಣೆಗೆ ನಾನೇನೂ ಬಹಳ ಹಿಂದಕ್ಕೆ ಹೋಗಬೇಕಿಲ್ಲ. ಇತ್ತೀಚೆಗೆ, ೨೦೧೮ರಲ್ಲಿ ಟುಟಿಕೋರಿನ್‌ನಲ್ಲಿ ಸ್ವಚ್ಚವಾದ ಗಾಳಿ ನೀರಿಗಾಗಿ ಬೇಡಿಕೆಯಿಟ್ಟಿದ್ದಕ್ಕಷ್ಟೇ ೧೩ ಜನರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅವರೆಲ್ಲರನ್ನೂ ಎದೆಗೆ ಮತ್ತು ತಲೆಗೆ ಗುಂಡಿಕ್ಕಿ ಕೊಲ್ಲಲಾಯಿತು. ಎಲ್ಲದಕ್ಕಿಂತಾ ಭಯಂಕರ ಸಾವು ಎಂದರೆ ೧೭ ವರ್ಷ ವಯಸ್ಸಿನ ಸ್ನೋಲಿನ್‌ಳದ್ದು. ಅವಳನ್ನು ಮುಖಕ್ಕೆ ಗುಂಡು ಹೊಡೆದು ಸಾಯಿಸಿದರು. ಸರಕಾರಕ್ಕೆ ತನ್ನದೇ ಜನರ ವಿರುದ್ಧ ಈ ಮಟ್ಟದ ಹಿಂಸೆ ದೌರ್ಜನ್ಯವನ್ನು ಛೂ ಬಿಡುವುದಕ್ಕೆ ಎಂದೂ ಯಾವುದೇ ಕಾರಣಗಳಿರುವುದಿಲ್ಲ.

ಹೆಚ್ಚಾದ ಆತ್ಮಹತ್ಯೆಗಳು ಹೇಗೆ ಸರಕಾರದಿಂದ ಪ್ರಾಯೋಜಿತ ಕೊಲೆಗಳಲ್ಲದೆ ಮತ್ತೇನೂ ಅಲ್ಲವೆಂಬ ಮುಖ್ಯವಾದ ನಾಲ್ಕನೇ ಅಂಶವನ್ನು ಕರ್ಣನ್ ಮುಂದಿರಿಸಿತು. ಕಡೆಯಲ್ಲಿ ಅಜ್ಜನ ಸಾವನ್ನು ಕೊಲೆಯೆಂದು ತೋರಿಸಿ, ಹೆಸರಿಸಿದ್ದು ಸರಿಯಾಗಿಯೇ ಇದೆ. ರೋಹಿತ್ ವೆಮುಲಾನಿಂದ ಹಿಡಿದು ಡಾ.ಪಾಯಲ್ ತಾಡ್ವಿ ವರೆಗೆ ಹಾಗೂ ಮತ್ತಿನ್ನು ಸಾವಿರಾರು ಹೆಸರಿಲ್ಲದ ಸಾವುಗಳೆಲ್ಲಾ ಸರಕಾರದ ಒಪ್ಪಿಗೆಯಿಂದ ನಡೆದ ಕೊಲೆಗಳು. ಏಕೆಂದರೆ ದುಶ್ಕರ್ಮಿಗಳನ್ನು ಸ್ವತಂತ್ರವಾಗಿ ತಿರುಗಾಡಿಕೊಂಡಿರಲು ಬಿಟ್ಟಾಗಿದೆ. ಕಾನೂನು ತನ್ನ ಮಾರ್ಗದಲ್ಲಿ ನಡೆದು ತೀರ್ಪು ನೀಡುವ ಮುಂಚೆಯೇ ಈ ಜಾತಿವಾದೀ ಕೊಲೆಗಾರರನ್ನು ವ್ಯವಸ್ಥೆಯು ಬೆಂಬಲಿಸುತ್ತದೆ; ಅವರಿಗಾಗಿ ಸಬೂಬುಗಳನ್ನು ನೀಡುತ್ತದೆ; ಮತ್ತು ಅವರನ್ನು ಮುಕ್ತಗೊಳಿಸುತ್ತದೆ. ಇಂಥಹ ವ್ಯವಸ್ಥೆಗೆ ಏನೂ ಆಗುವುದಿಲ್ಲ.

ಐದನೆಯ ಮತ್ತು ಅತಿ ಕಡಿಮೆಯಾಗಿ ಕೇಳಿ ಬರುವ ಸರಕಾರದಿಂದ ಪ್ರಾಯೋಜಿತ ಹಿಂಸಾಚಾರ ಎಂದರೆ ಆಸ್ತಿಪಾಸ್ತಿಗಳ ಮತ್ತು ಜನರ ಚೈತನ್ಯದ ಲೂಟಿ ಮತ್ತು ಧ್ವಂಸ. ಇದನ್ನು ಈ ಚಿತ್ರದಲ್ಲಿ ಚೆನ್ನಾಗಿ ನಿರೂಪಿಸಲಾಗಿದೆ. ಹಿಂದೆ ಧನುಶ್ ಮತ್ತು ಅವನ ಅನುಯಾಯಿಗಳಿಂದ ಆಗಿದ್ದಕ್ಕಿಂತ ಹೆಚ್ಚಾಗಿ ಬಸ್ಸಿನಲ್ಲಿ ಮತ್ತು ಪೋಲೀಸ್ ಸ್ಟೇಶನ್ನಿನಲ್ಲಿ ಆಸ್ತಿಪಾಸ್ತಿಗಳನ್ನು ಆ ಪೋಲೀಸ್ ಬಹಳವಾಗಿ ಧ್ವಂಸ ಮಾಡುತ್ತಾನೆ. ಅವನು ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡುತ್ತಾನೆ. ಹೀಗೆ ಮಾಡುವುದರಿಂದ ತನ್ನ ಮೇಲಧಿಕಾರಿಗಳಿಗೆ ಆಸ್ತಿಯ ಹಾನಿಯ ಬಗ್ಗೆ ಉತ್ಪೆçÃಕ್ಷೆಯಿಂದ ವರದಿ ಮಾಡಿ ಆ ಮೂಲಕ ಇನ್ನೂ ನಿಷ್ಠುರವಾದ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅವನಿಗೆ ಅವರಿಂದ ಒಪ್ಪಿಗೆ ಪಡೆದುಕೊಳ್ಳುವ ಆಸೆಯಿತ್ತು. ಇದೇ ಸೂತ್ರವನ್ನು ವಿದ್ಯಾರ್ಥಿಗಳ ಪ್ರತಿಭಟನೆಗಳನ್ನೂ, ಸಾರ್ವಜನಿಕ ಪ್ರತಿಭಟನೆಗಳನ್ನೂ ಅಥವಾ ಇನ್ಯಾವುದೇ ಸಾರ್ವಜನಿಕ ವಿರೋಧವನ್ನೂ ಚದುರಿಸಲು ಈಗಲೂ ಬಳಸುತ್ತಾರೆ. ಅಂತೆಯೇ ಕಾಲೇಜಿಗೆ ಸೇರಬೇಕೆಂದು ಬಯಸುವ ಒಬ್ಬ ಹುಡುಗಿಯ ಸರ್ಟಿಫಿûಕೇಟುಗಳನ್ನು ಪೋಲೀಸರು ಹರಿದು ಹಾಕಿ ಬಿಡುವ ದೃಶ್ಯವಿದೆ. ೧೯೯೫ರಲ್ಲಿ ಕೋಡಿಯಂಕುಳುಮ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಹಲವಾರು ವಿದ್ಯಾವಂತ ಯುವಕ-ಯುವತಿಯರಿಗೆ ನಡೆದದ್ದನ್ನು ಯಥಾವತ್ತಾಗಿ ಇಲ್ಲಿ ಹೇಳಿದೆ. ಅದೊಂದೇ ಭಾವಿಯು ಅವರ ನೀರಿನ ಪೂರೈಕೆಗೆ ಆಧಾರವಾಗಿದೆಯೆಂದು ಗೊತ್ತಿದ್ದೇ ಆ ಭಾವಿಗೆ ವಿಷ ಹಾಕಿದ್ದಾರೆ. ಇವೆಲ್ಲವೂ ಸರಕಾರದಿಂದ ಪ್ರಾಯೋಜಿತ ದೌರ್ಜನ್ಯಗಳೇ ಆದರೂ ಇದರ ಬಗ್ಗೆ ಎಲ್ಲೂ ಮಾತಿಲ್ಲ. ಆದರೆ ಹೆಚ್ಚಾದ ಜನರು, ತುಳಿಸಿಕೊಂಡ ಜನರಿಂದ ಸ್ವರಕ್ಷಣೆಯಲ್ಲಿ ಘಟಿಸಿದ ಚಟುವಟಿಕೆಗಳನ್ನು ಮಾತ್ರಾ ನೋಡಿ ಅವುಗಳನ್ನು ಹಿಂಸೆಯೆಂದು ಕರೆಯುತ್ತಾರೆ.

ತುಳಿಸಿಕೊಂಡವರಿಗೆ ವಿದ್ಯೆ ಸಿಕ್ಕಿದರೆ ಅದು ತುಳಿಯುವವರಿಗೆ ಹೆದರಿಕೆ ಹುಟ್ಟಿಸುತ್ತದೆ. ನೀವು ನಿಮ್ಮ ಬದುಕುವ ಸಮಾನ ಹಕ್ಕನ್ನು ಚಲಾಯಿಸಿ ಬಿಟ್ಟರೆ ಅವರಿಗೆ ಭಯವಾಗುತ್ತದೆ. ಆದ್ದರಿಂದಲೇ ಇವುಗಳನ್ನು ಆ ರೀತಿಯ ದೌರ್ಜನ್ಯದಿಂದ ತಡೆದು ಅದನ್ನು ಉದಾಹರಣೆಯನ್ನಾಗಿ ಮಾಡುತ್ತಾರೆ.
ಆದರೂ ಅಸಂಖ್ಯಾತ ಕರ್ಣನ್‌ಗಳು ಯಾವಾಗಲೂ ಇದ್ದೇ ಇರುತ್ತಾರೆ.


ಅನುವಾದ : ಜಯಶ್ರೀ ಜಗನ್ನಾಥ
ಫ಼್ರೆಂಚ್ ಭಾಷೆಯ ಉಪನ್ಯಾಸಕಿ . ಬರೆಯುವುದು, ಭಾಷಾಂತರ ಮಾಡುವುದು ಕೆಲಸಗಳು. ಪ್ರವಾಸ ಮಾಡುವುದು, ಓದುವುದು, ಸಹೃದಯರೊಂದಿಗೆ ಸಂಭಾಷಣೆ ಹವ್ಯಾಸಗಳು. ತನ್ನ ಸುತ್ತಮುತ್ತಿನ ಪರಿಸರಕ್ಕೆ ಪ್ರತಿಕ್ರಿಯಿಸಿವುದು ಮತ್ತು ಅಭಿವ್ಯಕ್ತಿಸುವುದು ತನಗೆ ಅನಿವಾರ್ಯ, ಅಗತ್ಯ ಎಂದುಕೊಂಡು ಬರೆತ್ತಿರುವ ಜಯಶ್ರೀ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ .