ಕೋವಿಡ್ ೧೯ ಖಾಯಿಲೆಯ ಹಂತಗಳು | ಡಾ. ಮ್ಯಾಥ್ಯೂ ವರ್ಗೀಸ್ | ಕನ್ನಡ

ದೆಹಲಿಯ ಸಂತ ಸ್ಟೀವನ್ಸ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಮ್ಯಾಥ್ಯೂ ವರ್ಗೀಸ್ ಕೋವಿಡ್-೧೯ ಹೇಗೆ ಕಾಲಕ್ರಮೇಣ ಉಲ್ಬಣಗೊಳ್ಳುತ್ತದೆ ಎಂದು ಸ್ಪಷ್ಟವಾಗಿ ವಿವರಿಸುತ್ತ, ಜೊತೆಗೇ ಅದರ ಉಪಶಮನದ ಕ್ರಮಗಳನ್ನು ಪಟ್ಟಿಮಾಡುತ್ತಾರೆ.

ಈ ವಿಡೀಯೋದಲ್ಲಿ- ರೋಗಿಗಳು ಮತ್ತು ಶುಶ್ರೂಶಕರು ಪ್ರತೀದಿನವೂ ಯಾವ ಯಾವ ಉಪಕ್ರಮಗಳನ್ನು ಯಾವ ಯಾವ ಸಮಯದಲ್ಲಿ ಕೈಗೊಳ್ಳಬೇಕು ಎಂಬುದನ್ನು ಸೂಚಿಸುತ್ತ, ವೈದ್ಯಕೀಯ ಸಹಾಯವು ಅಗತ್ಯ ಬೀಳುವ ಸಂದರ್ಭಗಳು ಯಾವುವು ಎಂಬುದನ್ನು ಸೂಚಿಸಲಾಗಿದೆ.

ಕೋವಿಡ್-೧೯ ಗೆ ಒಳಗಾದವರು ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಬೇಕು. ಅದಕ್ಕೆ ಚಿಕಿತ್ಸೆ ಏನು, ಖಾಯಿಲೆಯನ್ನು ವಿವಿಧ ಹಂತಗಳಲ್ಲಿ ನಿರ್ವಹಿಸುವುದು ಹೇಗೆ ಎಂಬುದರ ಕುರಿತು ಈ ವಿಡೀಯೋ ಉಪಯುಕ್ತವಾದ ಸೂಚನಾಪಟ್ಟಿಯನ್ನು ನೀಡುತ್ತದೆ.

ಕಳೆದ ಒಂದೂವರೆ ವರ್ಷಗಳಿಂದ ಕೊರೊನಾ ಮಹಾಮಾರಿ ಉಗ್ರ ಅವತಾರ ತಾಳಿದ್ದು, ಸನ್ನಿವೇಶ ನಿರಾಶಾದಾಯಕವಾಗಿದ್ದರೂ, ಈ ಹೊತ್ತಿಗೆ, ನಮಗೆ ಎಷ್ಟೊಂದು ವಿಚಾರಗಳು ಗೊತ್ತಾಗಿವೆ. ಏನಾಗುತ್ತಲಿದೆ, ಮತ್ತು ಸೋಂಕಿನಿಂದ ಮನುಷ್ಯನ ದೇಹದ ಮೇಲಾಗುವ ಪರಿಣಾಮಗಳೇನು ಅನ್ನುವ ಬಗ್ಗೆ ತುಂಬಾ ವಿಚಾರಗಳು ಗೊತ್ತಾಗಿವೆ. ಇದರಿಂದ, ಈಗ ನಮಗೆ ಸ್ವಲ್ಪ ಭರವಸೆ ಬಂದಿದೆ, ಅಲ್ಲದೇ ಲಸಿಕೆಯೂ ಈಗ ನಮಗೆ ಸಿಕ್ಕಿದೆ. ಹಲವು ರೀತಿಯ ಲಸಿಕೆಗಳ ಲಭ್ಯತೆಯಿದೆ. ಆದರೆ ಈಗ ಬಂದಿರುವ ಅಲೆ ವ್ಯಾಪಕವಾಗಿದ್ದು, ಸೋಂಕಿಗೆ ತುತ್ತಾಗುವ ಭೀಕರ ಸನ್ನಿವೇಶದಿಂದ ತಪ್ಪಿಸಿಕೊಳ್ಳುವುದಕ್ಕೆ, ರೋಗದ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳುವುದು ತುಂಬಾ ಉಪಯುಕ್ತ.

ಕೊರೊನಾ ವೈರಾಣು ಗಂಟಲಿನಲ್ಲಿ ಸೇರಿಕೊಂಡು; ವೈದ್ಯಜಗತ್ತಿನಲ್ಲಿ‌ ಗಂಟಲಿಗೆ ನಾವು ಫಾರಿಂಕ್ಸ್‌ ಅನ್ನುತ್ತೇವೆ, ಅಲ್ಲಿಂದ ಇದು ಜೀವಕೋಶದ ಭಾಗವಾಗಿಬಿಡುತ್ತದೆ. ಇದು ಹೆಚ್ಚಿನ ಜನರಿಗೆ ಅರ್ಥವಾಗದೇ ಇರುವ ವಿಚಾರ. ಇದು ಜೀವಕೋಶದ ಭಾಗವಾಗುವುದು ಹೇಗೆ ಅಂದ್ರೆ, ಜೀವಕೋಶದ (ಮೆಟಾಬಲಿಸಂ) ಜೀವರಾಸಾಯನವನ್ನೇ ತನ್ನ ಅನುಕೂಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಂಡು, ಆ ಮೂಲಕ  ತನ್ನದೇ ಪ್ರತಿರೂಪದ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಜೀವಕೋಶವನ್ನು ಉಪಯೋಗಿಸಿಕೊಳ್ಳುತ್ತದೆ.  ಇದರಿಂದಾಗಿ ಒಂದೆರಡು ದಿನಗಳ ಅಂತರದಲ್ಲಿ  ಮಿಲಿಯನ್ನುಗಟ್ಟಲೆ ವೈರಸ್ಸುಗಳಾಗಿ ಜೀವಕೋಶಗಳನ್ನು ಸೋಂಕಿತವಾಗಿಸಿಬಿಡುತ್ತವೆ.

ಈ ರೀತಿಯಲ್ಲಿ ಜೀವಕೋಶಗಳ ಮೇಲೆ ಧಾಳಿಯಾಗಿ ವೈರಸ್ಸುಗಳ ಸಂಖ್ಯೆ ಹೆಚ್ಚಾದಾಗ, ದೇಹವು ಈ ಧಾಳಿಯನ್ನು ಗುರುತಿಸುತ್ತದೆ.  ಆನಂತರ ದೇಹವು ಆಂಟಿಬಾಡಿಯೆನ್ನುವ ʼಪ್ರತಿವಿಷʼವನ್ನು ಉತ್ಪಾದಿಸಿ, ಹೊರಗಿನ ವೈರಿ ವೈರಸ್ಸಿನ ವಿರುದ್ಧ ಪ್ರತಿರೋಧಕ್ಕೆ ಅಣಿಯಾಗಿ, ವೈರಸ್ಸಿನ ಮೇಲೆ ದಾಳಿ ನಡೆಸಿ ಕೊಲ್ಲುತ್ತದೆ.  ಇದು ಒಂದು ಸಾಮಾನ್ಯ ಪ್ರಕ್ರಿಯೆ. ನಮ್ಮ ದೇಹವನ್ನು ಬಾಧಿಸುವ ಎಲ್ಲಾ ವೈರಸ್ಸುಗಳನ್ನೂ ನಾಶಪಡಿಸುವ ಪ್ರಕ್ರಿಯೆ, ಅವು ನಾಶವಾಗುವುದು ಔಷಧಿಗಳಿಂದ ಅಲ್ಲ, ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆ ಆಂಟಿಬಾಡಿ (ಪ್ರತಿವಿಷ) ಉತ್ಪಾದಿಸುವ ಮೂಲಕ ಅಪಾಯಕಾರಿ ವೈರಸ್‌ಗಳ ಮೇಲೆ ದಾಳಿ ನಡೆಸಿ ಅವನ್ನು ನಾಶಪಡಿಸುವ ಪ್ರಕ್ರಿಯೆ.

ಇದು ಸಾಮಾನ್ಯವಾಗಿ ಬರುವ ಶೀತದ ವಿಚಾರದಲ್ಲೂ, ಹಾಗೆಯೇ ಹಲವಾರು ವೈರಸ್‌ ಸಂಬಂಧಿ ಖಾಯಿಲೆಗಳ ವಿಚಾರದಲ್ಲೂ ಸತ್ಯ. ಸಾಮಾನ್ಯವಾಗಿ ವೈರಸ್‌ ಸಂಖ್ಯೆ ದೊಡ್ಡದಾಗಿದ್ದು, ಸಾಕಷ್ಟು ಆಂಟಿಬಾಡಿ(ಪ್ರತಿವಿಷ) ಸಾಕಷ್ಟು ಉತ್ಪಾದನೆಯಾಗಿದ್ದು, ಸುಮಾರು 4-5 ನೇ ದಿನ ಇವೆರಡರ ನಡುವೆ ಹೋರಾಟ ಆರಂಭವಾಗುತ್ತದೆ. ಈ ಹೋರಾಟದಲ್ಲಿ ರಕ್ತದ ಹರಿವಿಗೆ ಸೈಟೋಕೈನ್ಸ್ (cytokines) ಎಂಬ ರಾಸಾಯನಿಕಗಳು ಬಿಡುಗಡೆಯಾಗಿ, ದೇಹದ ತಾಪ ಹೆಚ್ಚಾಗುವಂತೆ ಮಾಡುತ್ತವೆ. ದೇಹದಲ್ಲಿ ಸ್ನಾಯುಸೆಳೆತವನ್ನು, ಮೈನೋವನ್ನು ಉಂಟುಮಾಡುತ್ತವೆ. ಗಂಟಲಿಗೆ ಸೋಂಕು ತಗುಲಿದ್ದರೆ, ಗಂಟಲುಬಾಧೆ, (ಗಂಟಲು ಊತ/ಕೆರೆತ) ಆಗುವುದು, ಯಾಕಂದ್ರೆ ಗಂಟಲಿನ ಜೀವಕೋಶಗಳಲ್ಲಿ ಹೆಚ್ಚಿನ ವೈರಸ್ಸುಗಳಿರುತ್ತವೆ.  ಹಾಗಾಗಿ ಅಲ್ಲಿ ಕಿರಿಕಿರಿಯಿಯಾಗುವುದರಿಂದ ಸ್ವಲ್ಪ ಕೆಮ್ಮು ಆಗುವ ಸಾಧ್ಯತೆಯಿದೆ.  ಈ ಎಲ್ಲಾ ಲಕ್ಷಣಗಳಿಗೆ ಕಾರಣ, ದೇಹದಲ್ಲಿ ಹೆಚ್ಚಿನ ಸಂಖ್ಯೆಯ ವೈರಸ್ಸುಗಳು ಸೇರಿಕೊಂಡು, ಅವುಗಳ ವಿರುದ್ದದ ಹೋರಾಟ ನಡೆಯುತ್ತಿರುವುದು.

ನಿಮಗೆ ಸೋಂಕು ತಗುಲಿರಬಹುದಾದ ದಿನವನ್ನು ಗುರುತಿಸುವುದು ಹೇಗೆ?

ವೈರಸ್ಸಿನ ಕಾವಿನಕಾಲ (ಮೊಳಕೆಯಕಾಲ), ಅಂದರೆ ವೈರಸ್ಸು ದೇಹಕ್ಕೆ ಸೇರಿ, ಮೊದಲ ಲಕ್ಷಣ ಕಾಣಿಸಿಕೊಳ್ಳುವ ಸಮಯ ಸರಿಸುಮಾರು  ಐದು ದಿನ ಹಾಗೂ ಒಂದೆರಡು ದಿನಗಳು ಹೆಚ್ಚುಕಮ್ಮಿ ಆಗಬಹುದು.  ಆದರೆ ವೈರಸ್ಸು ವ್ಯಾಪಕವಾಗಿ ಹರಡಿರುವ ಈಗಿನ ಅಲೆಯಲ್ಲಿ,  ಸೋಂಕು ಎಲ್ಲಿಂದ ಬಂತು ಅನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಹಿಂದಿನ ಅಲೆಯಾದಾಗ, ಜನರು ಮದುವೆಗೆ ಹೋಗಿದ್ದಾಗ, ನಿಶ್ಚಿತಾರ್ಥಕ್ಕೆ ಹೋಗಿದ್ದಾಗ, ಪಾರ್ಟಿಗೆ ಅಥವಾ ಬೇರೆಲ್ಲೋ ಹೋಗಿದ್ದಾಗ ಸೋಂಕು ತಗುಲಿದೆ ಅನ್ನುವಂತಹ ವಿಚಾರ ಗೊತ್ತಾಗುತ್ತಿತ್ತು. ಆದರೆ ಈಗಿರುವ ಅಲೆಯಲ್ಲಿ ಸೋಂಕು ಎಲ್ಲಿಂದ ಬಂತು ಅನ್ನುವುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ವೈರಸ್ಸಿನ ಕಾವಿನಕಾಲ (ಮೊಳಕೆಯ ಕಾಲ) ವನ್ನು ಲೆಕ್ಕ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.  ಆದ್ದರಿಂದ ಈ ಕಾವಿನಕಾಲವನ್ನು ಪಕ್ಕಕ್ಕಿರಿಸಿ, ಮೊದಲ ರೋಗಲಕ್ಷಣ ಯಾವಾಗ ಆಯಿತೆಂಬುದನ್ನು ಗಮನಿಸಿ. ಮೊದಲ ರೋಗಲಕ್ಷಣ  ಗಂಟಲುಬಾಧೆಯಾಗಿರಬಹುದು, ಗಂಟಲು ಕೆರೆತ, ಕೆಮ್ಮು, ಜ್ವರ, ಮೈನೋವು, ತಲೆನೋವು; ಇವುಗಳಲ್ಲಿ ಯಾವುದಾದರೂ ಅಥವಾ ಎಲ್ಲವೂ ಆಗಿರಬಹುದು. ಸೋಂಕಿನಿಂದಾಗಿ ರೋಗಲಕ್ಷಣವನ್ನು ಉಂಟಾದ ಮೊದಲ ದಿನ, ಈ ವಿಚಾರ ಮಾತ್ರ ಕಡ್ಡಾಯವಾಗಿ ನಿಮ್ಮ ನೆನಪಿನಲ್ಲಿಡಬೇಕು.  ನಿಮಗೆ ರೋಗಲಕ್ಷಣದಲ್ಲಿ ಒಂದಾದರೂ ಕಾಣಿಸಿಕೊಂಡ ಮೊದಲ ದಿನ.  ತುಂಬಾ ಜನರಿಗೆ, ಮೊದಲು ಉಂಟಾದ ರೋಗಲಕ್ಷಣ ಯಾವುದೆಂದು ಕೇಳುವಾಗ, ಅವರಿಗೆ ಈಗ ಹೆಚ್ಚಾಗಿ ಬಾಧಿಸುವಂತಹದ್ದನ್ನು ಹೇಳ್ತಾರೆ. ಅದು ಅವರ ದೇಹಕ್ಕೆ ಹೆಚ್ಚು ತೊಂದರೆ ಮಾಡುವ ಲಕ್ಷಣವೇ ಆಗಿದ್ದಿದ್ದರೂ, ಇಲ್ಲ, ಇದು ಹಿಂದಿನ ವಾರ ಆಗಿತ್ತು ಅಂತಾರೆ.  ತಪ್ಪು, ಇಲ್ಲಿ ನೀವು ಕರಾರುವಕ್ಕಾಗಿ ಹೇಳಬೇಕು.

ಏಕೆಂದ್ರೆ  ಒಂದೆರಡು ದಿನಗಳ ಲೆಕ್ಕಾಚಾರ ತಪ್ಪಾಗಿ ಆದರೆ, ನೀವು ಆರಾಮಾಗಿ ಓಡಾಡಿಕೊಂಡಿರುವ ದಿನಗಳ ಹಾಗೂ ನೀವು ವೆಂಟಿಲೇಟರ್‌ ನಲ್ಲಿ ಮಲಗಿರುವ ದಿನಗಳ ನಡುವಿನ ವ್ಯತ್ಯಾಸ ಆಗಿಬಿಡಬಹುದು!

 ಹಾಗಾಗಿ ನೀವು ಕರಾರುವಕ್ಕಾದ ದಿನಾಂಕ ನೆನಪಿಡುವುದು ತುಂಬಾ ಮುಖ್ಯ. ಅದಾಗಿ ಗಂಟಲುಬಾಧೆ ತೀವ್ರವಾಗಬಹುದು, ಎರಡನೇ ದಿನ ಜ್ವರ ಇರಬಹುದು, ಮೂರನೇ ದಿನವೂ ಜ್ವರ ಇರಬಹುದು. ಸಾಮಾನ್ಯವಾಗಿ ನಾಲ್ಕನೇ ದಿನ ಜ್ವರ ಕಡಿಮೆಯಾಗಿ ದೇಹದ ತಾಪ 99 ಕ್ಕೆ ಅಥವಾ 98.4 ಗೆ ಇಳಿಯಬಹುದು, ಹಾಗಾದ್ರೆ ಅದು ನಿಮ್ಮ ದೇಹದ ಮಾಮೂಲಿ ತಾಪಮಾನ.   ಸುಮಾರು 80 ಶೇಕಡಾ ವೈರಸ್‌ ಸೋಂಕಿನ ಪ್ರಕರಣಗಳಲ್ಲಿ, ಪೂರ್ತಿ ಸೋಂಕಿನ ಅಂತಿಮ ಫಲಿತಾಂಶ ಹೀಗೆಯೇ ಇರುತ್ತದೆ;  ಅಂದರೆ ಸಣ್ಣ ರೋಗಲಕ್ಷಣವಿರುತ್ತದೆ, ಮೂರ್ನಾಲ್ಕು ದಿನಗಳಲ್ಲಿ ಕಡಿಮೆಯಾಗಿ, ಆನಂತರ ಅವರು ಆರಾಮಾಗಿ ಓಡಾಡಿಕೊಂಡಿರುತ್ತಾರೆ.

ಆದರೆ, ಸುಮಾರು 10 ರಿಂದ 15 ಶೇಕಡಾ ಪ್ರಕರಣಗಳು ಅಥವಾ ಬಹುಶಃ 20 ಶೇಕಡಾ ಪ್ರಕರಣಗಳು ಅಪಾಯಕಾರಿ ತಿರುವು ಪಡೆದುಕೊಳ್ಳುತ್ತವೆ. ಏನದು ಅಪಾಯಕಾರಿ ತಿರುವು? ಮತ್ತು ಇದರಿಂದ ಏನಾಗುತ್ತೆ?

ಗಂಭೀರ ಸಮಸ್ಯೆಯ ಎಚ್ಚರಿಕೆಯ ಮುನ್ಸೂಚನೆಗಳು

ಜ್ವರ ಕಡಿಮೆಯಾಗಿದ್ದರೆ ಮತ್ತೆ ಜ್ವರ ಬರುತ್ತೆ, ಅಥವಾ ಕಡಿಮೆಯಾಗದೇ ಹಾಗೇ ಇದ್ದರೆ ಇನ್ನೂ ಉಲ್ಬಣಗೊಳ್ಳುತ್ತದೆ. ಕೆಮ್ಮಿದ್ದರೆ, ಒಣಕೆಮ್ಮಿನ ಹಾಗಾಗುತ್ತದೆ… ಜೋರಾಗಿ ಕೆಮ್ಮುತ್ತಿದ್ದರೂ, ಕಫವೇನೂ ಬರದಿದ್ದರೂ ಒಣಕೆಮ್ಮಿನ(ನಾಯಿಕೆಮ್ಮಿನ) ಹಾಗೆ ಇರುತ್ತದೆ.

ಹಾಗಾಗಿ ರೋಗವು ಅಪಾಯಕಾರಿ ತಿರುವು ಪಡೆಯುವುದು ಎಂದು, ನಿಮಗೆ ಎಚ್ಚರಿಸುವ, ಮುನ್ಸೂಚನೆ ಕೊಡುವ ಮೂರು ಲಕ್ಷಣಗಳೆಂದರೆ,

ಒಂದು, ಮೊದಲಿದ್ದುದಕ್ಕಿಂತ ಹೆಚ್ಚಿನ ತಾಪಮಾನದ ಜ್ವರ, ಅಥವಾ ಜ್ವರ ಇಲ್ಲದೇ ವಾಸಿಯಾಗಿದ್ದು, ಸುಮಾರು 100 ಡಿಗ್ರಿ ಫ್ಯಾರನ್ಹೀಟ್‌ ಗಿಂತ ಹೆಚ್ಚು ತಾಪಮಾನದ ಜ್ವರ ಮರುಕಳಿಸುವುದು.

ಎರಡು ಎದೆ ಬಿಗಿತ ಅಥವಾ ಉಸಿರೆಳೆದುಕೊಳ್ಳಲು ಹೊರಬಿಡಲು ಕಷ್ಟವಾಗುವುದು.

ಮತ್ತು ಮೂರು, ಒಂದು ರೀತಿಯ ಜೋರಾದ ಕೆಮ್ಮು, ಅಂದರೆ ನೀವು ಮಲಗಿದರೂ ಸಹ ಕಷ್ಟ ಅನಿಸುವಂತಹ ಜೋರಾದ ಕೆಮ್ಮು.

ಈ ಎರಡನೇ ಅಪಾಯಕಾರಿ ತಿರುವಿನಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾಗಿರುವುದೇನೆಂದರೆ,  ಇದು ವೈರಸ್ಸಿನ ಕಾರಣಕ್ಕೆ ಆಗುವುದಲ್ಲ.  ತುಂಬಾ ಜನ ವೈರಸ್ಸಿನಿಂದ ನ್ಯುಮೋನಿಯಾ ಆಗಿದೆ ಅಂದುಕೊಳ್ತಾರೆ. ಖಾಯಿಲೆಯನ್ನು ಮೊದಲು ಅರ್ಥಮಾಡಿಕೊಂಡಿದ್ದರಲ್ಲಿ ಆದ ಅತಿದೊಡ್ಡ ತಪ್ಪು ಇದು!

ಎಕ್ಸ್‌-ರೇ ಚಿತ್ರಗಳಲ್ಲಿ ನ್ಯುಮೋನಿಯಾ ರೀತಿ ಕಾಣುತ್ತಿದ್ದು, ಇಟಲಿಯಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಇದು ನ್ಯುಮೋನಿಯಾ ಅಲ್ಲ, ನಿಜವಾಗಿ ಇಲ್ಲಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿರುವುದು ಎಂಬುದನ್ನು ಪತ್ತೆ ಮಾಡಿದರು.

ದೆಹಲಿಯ ಸಂತ ಸ್ಟೀವನ್ಸ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಮ್ಯಾಥ್ಯೂ ವರ್ಗೀಸ್ ಕೋವಿಡ್-೧೯ ಹೇಗೆ ಕಾಲಕ್ರಮೇಣ ಉಲ್ಬಣಗೊಳ್ಳುತ್ತದೆ ಎಂದು ಸ್ಪಷ್ಟವಾಗಿ ವಿವರಿಸುತ್ತ, ಜೊತೆಗೇ ಅದರ ಉಪಶಮನದ ಕ್ರಮಗಳನ್ನು ಪಟ್ಟಿಮಾಡುತ್ತಾರೆ. ಈ ವಿಡೀಯೋದಲ್ಲಿ- ರೋಗಿಗಳು ಮತ್ತು ಶುಶ್ರೂಶಕರು ಪ್ರತೀದಿನವೂ ಯಾವ ಯಾವ ಉಪಕ್ರಮಗಳನ್ನು ಯಾವ ಯಾವ ಸಮಯದಲ್ಲಿ ಕೈಗೊಳ್ಳಬೇಕು ಎಂಬುದನ್ನು ಸೂಚಿಸುತ್ತ, ವೈದ್ಯಕೀಯ ಸಹಾಯವು ಅಗತ್ಯ ಬೀಳುವ ಸಂದರ್ಭಗಳು ಯಾವುವು ಎಂಬುದನ್ನು ಸೂಚಿಸಲಾಗಿದೆ.
ಕೋವಿಡ್-೧೯ ಗೆ ಒಳಗಾದವರು ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಬೇಕು. ಅದಕ್ಕೆ ಚಿಕಿತ್ಸೆ ಏನು, ಖಾಯಿಲೆಯನ್ನು ವಿವಿಧ ಹಂತಗಳಲ್ಲಿ ನಿರ್ವಹಿಸುವುದು ಹೇಗೆ ಎಂಬುದರ ಕುರಿತು ಈ ವಿಡೀಯೋ ಉಪಯುಕ್ತವಾದ ಸೂಚನಾಪಟ್ಟಿಯನ್ನು ನೀಡುತ್ತದೆ.

ಆ ಸಂಶೋಧನೆಯಿಂದಾಗಿ ಈ ಪ್ರಕ್ರಿಯೆಯನ್ನು ನಾವು ಅರ್ಥಮಾಡಿಕೊಳ್ಳುವುದಕ್ಕೆ ಸಹಾಯವಾಯ್ತು.  ಮತ್ತು ಈ ಸಂಶೋಧನೆಯು ರೋಗಲಕ್ಷಣದ ಶಾಸ್ತ್ರವನ್ನು ತಿಳಿದುಕೊಳ್ಳಲು ಮಾರ್ಗದರ್ಶನ ಮಾಡಿತು. ಹೀಗಾದಾಗ ನಾವು ಏನು ಮಾಡಬೇಕೆಂದು ನಮಗೀಗ ಗೊತ್ತಾಗಿದೆ.  ವೈರಸ್‌ ಸೋಂಕಿನ ಎರಡನೇ ಅಪಾಯಕಾರಿ ಹಂತದಲ್ಲಿ ಉಂಟಾದ ಖಾಯಿಲೆಯನ್ನು ಅರ್ಥಮಾಡಿಕೊಳ್ಳುವ ಮೂಲಕ ಹೀಗೆ ಮಾಡಲಾಯಿತು.

ಸೋಂಕಿನ ಅಪಾಯಕಾರಿ ಹಂತ ಮತ್ತು ಖಾಯಿಲೆಯ ಅರಿವು

ಮನುಷ್ಯನ ದೇಹದ ರೋಗನಿರೋಧಕ ವಿಧಾನವು ವೈರಸ್ಸನ್ನು  ಹೊರಗಿನ (ಅನ್ಯ)ಭಾಗ ಎಂದು ಗುರುತಿಸುತ್ತದೆ. ಇದು ಹೇಗೆ ಆಗುತ್ತದೆ? ಇದು ವೈರಸ್‌ ನ ಮೇಲ್ಪದರದಲ್ಲಿರುವ ಒಂದು ವಿಶಿಷ್ಟ ಚೂಪಾದ ಪ್ರೊಟೀನ್‌ ಅನ್ನು, ಆಂಟಿಬಾಡಿ (ಪ್ರತಿವಿಷ) ಗುರುತಿಸುವ ಮೂಕ ಆಗುತ್ತದೆ. ಒಂದು ರೀತಿಯಲ್ಲಿ ಇದು, ನಿರ್ಧಿಷ್ಟ ವ್ಯಕ್ತಿಯ ಒಂದು ಏಕಮಾತ್ರ ಗುರುತಿನ ಚೀಟಿಯಹಾಗೆ.

ಆದರೆ, ಈ ವೈರಸ್‌ನ ಚೂಪಾದ ಪ್ರೊಟೀನ್‌ ನ ರಚನೆಯನ್ನೇ ಹೋಲುವಂತಹ ಪ್ರೊಟೀನ್‌ ಹೊಂದಿರುವ ಕೆಲವು ಜೀವಕೋಶಗಳೂ ಇವೆ. ಈ ರಚನೆಯು ನಿರ್ಧಿಷ್ಟವಾಗಿ ಶ್ವಾಸಕೋಶದೊಳಗಿರುವ ರಕ್ತನಾಳಗಳಲ್ಲಿ, , ಅಲ್ಲದೇ ಕರುಳಿನಲ್ಲೂ ಸಹ ಪತ್ತೆಯಾಗಿದೆ. ಈ ಕಾರಣಕ್ಕಾಗಿಯೇ ಭೇದಿ ಆಗುವುದು.  ಇದು ಪಿತ್ತಜನಕಾಂಗ (ಯಕೃತ್ತು) ದಲ್ಲಿ, ಮೂತ್ರಪಿಂಡಗಳಲ್ಲೂ ಪತ್ತೆಯಾಗಿದೆ. ಶ್ವಾಸಕೋಶಗಳಲ್ಲಿ, ಕೇವಲ ಹೊರಗಿನ ವೈರಸ್ಸುಗಳ ಮೇಲೆ ದಾಳಿ ಮಾಡಬೇಕಿದ್ದ ಆಂಟಿಬಾಡಿ (ಪ್ರತಿವಿಷ)  ಇದೇ ಗುರುತು ಹೊಂದಿರುವ ಜೀವಕೋಶಗಳನ್ನೂ ಪತ್ತೆಮಾಡಿ ದಾಳಿ ಮಾಡುತ್ತದೆ. ಒಮ್ಮೆ ದಾಳಿಯಾದ ಮೇಲೆ ಆ ಜೀವಕೋಶಗಳಿಗೆ ಹಾನಿಯಾಗುತ್ತದೆ. ಜೀವಕೋಶಗಳಿಗೆ ಹಾನಿಯಾದಾಗ ರಕ್ತನಾಳದ ಒಳಪದರಗಳ ಸಾಮಾನ್ಯ ಮೆದುತ್ವ ಕಳೆದುಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.  ರಕ್ತನಾಳಗಳ ಒಳಗೋಡೆಗಳಲ್ಲಿ ಜೀವಕೋಶಗಳ ಪದರ ಒರಟಾಗಿ, ರಕ್ತದೊಳಗಿರುವ ಜೀವಕೋಶಗಳು ಅಂಟಿಕೊಳ್ಳುತ್ತವೆ.  ಇದು ಕ್ರಮೇಣ ರಕ್ತ ಹೆಪ್ಪುಗಟ್ಟಿದಂತಾಗಿ, ರಕ್ತನಾಳದಲ್ಲಿ ಹೆಚ್ಚಿನ ರಕ್ತಸಂಚಾರಕ್ಕೆ ತಡೆ ಉಂಟಾಗುತ್ತದೆ. ಶ್ವಾಸಕೋಶದಲ್ಲಿ ಹೀಗಾದಾಗ, ಶ್ವಾಸಕೋಶದ ಗಾಳಿಚೀಲಗಳಲ್ಲಿ ಗಾಳಿ ಮತ್ತು ರಕ್ತದ ನಡುವೆ ನಡೆಯುವ ಆಮ್ಲಜನಕದ ವಿನಿಮಯ ಎಂದಿನಂತೆ ನಡೆಯುವುದಿಲ್ಲ. ರಕ್ತ ಚಲನೆ ಇಲ್ಲವಾದರೆ ಆಮ್ಲಜನಕ ಇಲ್ಲ, ಆಮ್ಲಜನಕ ಇಲ್ಲವಾದರೆ, ನಿಮ್ಮ ರಕ್ತದಲ್ಲಿರುವ ಆಮ್ಲಜನಕದ ಮಿತಿ ಇಳಿಯುತ್ತಾ ಹೋಗುತ್ತದೆ. ನಿಮಗೆ ಉಸಿರುಕಟ್ಟಿದ ಹಾಗಾಗಿ ಉಸಿರಾಡುವುದಕ್ಕೆ ಕಷ್ಟವಾಗಿ, ನಿಮ್ಮ ಶ್ವಾಸಕೋಶಗಳಿಗೆ ಹಾನಿಯಾಗಿ ಗಂಭೀರ ಸ್ವರೂಪಕ್ಕೆ ತಿರುಗಿದಾಗ, ನಿಮಗೆ ಕಷ್ಟವಾಗುತ್ತದೆ.  ಹಾಗಾಗಿ ರೋಗಲಕ್ಷಣ ಶಾಸ್ತ್ರದ ಪ್ರಕಾರ, ನಿಮ್ಮ ಶ್ವಾಸಕೋಶಗಳಲ್ಲಿ ವೈರಸ್‌ ಪರಿಣಾಮದ ತೀವ್ರತೆಯಿಂದ ಹೀಗಾಗುವುದಲ್ಲ,  ಇದು ವೈರಸ್ಸಿಗೆ ನಿಮ್ಮ ದೇಹವು ಪ್ರತಿಕ್ರಯಿಸುವುದರಿಂದ ಉಂಟಾಗುವ ಪರಿಸ್ಥಿತಿ.  ಹಾಗಾಗಿ ನ್ಯುಮೋನಿಯಾ ರೀತಿಯಲ್ಲಿ ಕಾಣುವುದು ನ್ಯುಮೋನಿಯಾ ಅಲ್ಲ.  ಇದು ನಿಮ್ಮ ರಕ್ತನಾಳಗಳ ಒಳಗೆ ಆಗುವ ರಕ್ತ ಹೆಪ್ಪುಗಟ್ಟುವಿಕೆ. ಆಂಟಿಬಾಡಿಗಳು (ಪ್ರತಿವಿಷ) ರಕ್ತನಾಳದಲ್ಲಿರುವ ಜೀವಕೋಶಗಳನ್ನು ವೈರಸ್ಸೆಂದು ತಪ್ಪು ತಿಳಿದು ದಾಳಿ ಮಾಡುತ್ತಿವೆ, ನಿಜವಾಗಿ ಅಲ್ಲಿ ವೈರಸ್‌ ನ ಮೇಲ್ಪದರದಲ್ಲಿರುವ ಪ್ರೊಟೀನ್‌ ಗೆ ಹೋಲುವಂತಹ ಸಣ್ಣ ಪ್ರೊಟೀನ್‌ ಕಣ ಇರುವುದಷ್ಟೇ.

ಆಗಬಹುದಾದ ಹಾನಿಯ ನಿರೀಕ್ಷೆ ಮತ್ತು ತಡೆಗಟ್ಟುವಿಕೆ.

ಕೆಲವು ಜನರಲ್ಲಿ ಈ ರೀತಿಯ ಹಾನಿ ಮಾರಣಾಂತಿಕವಾಗಿದೆ. ಕೆಲವು ಜನರು ಮಾತ್ರ ಹೆಚ್ಚು ಪ್ರಭಾವಕ್ಕೊಳಗಾಗುತ್ತಿರುವುದಕ್ಕೆ ನಮಗಿನ್ನೂ ಉತ್ತರ ಗೊತ್ತಿಲ್ಲ. ಬಹುಶಃ, ಅನುವಂಶೀಯ ಪಕ್ಷಪಾತವಿರಬಹುದು,  ಪರಿಸರಕ್ಕೆ ಸಂಬಂಧಿಸಿದ ಅಂಶಗಳಿರಬಹುದು, ಬಹುಶಃ ಇವೆರಡರ  ಸಂಯೋಜಿತ ಪರಿಣಾಮಗಳೂ ಇರಬಹುದು, ಅದು ನಮಗಿನ್ನೂ ಗೊತ್ತಿಲ್ಲ.  ಆದರೆ ವಾಸ್ತವ ಏನೆಂದರೆ ಕೆಲವರು ಉಳಿದವರಿಗಿಂತ ಹೆಚ್ಚು ಪ್ರಭಾವಕ್ಕೊಳಗಾಗುತ್ತಿದ್ದಾರೆ.

ಇದನ್ನು ಮುಂದುವರಿಯುವುದಕ್ಕೆ ಬಿಟ್ಟರೆ, ಇನ್ನೂ ಹೆಚ್ಚು ರಕ್ತನಾಳಗಳಲ್ಲಿ ರಕ್ತಹೆಪ್ಪುಗಟ್ಟುತ್ತಾ, ಆಮ್ಲನಜಕವನ್ನು ಹೊರಗಿನಿಂದ ಕೊಡುವಂತಹ ಹಂತಕ್ಕೆ ತಲುಪಬೇಕಾಗುತ್ತದೆ. ಹಾಗೂ ಮೆದುಳು ಕಾರ್ಯನಿರ್ವಹಿಸುವುದಕ್ಕೆ ಸಾಕಾಗುವಷ್ಟು ಆಮ್ಲಜನಕದ ಹರಿವಿನ ಮಟ್ಟವನ್ನು ತಲುಪುವವರೆಗೆ ಆಮ್ಲಜನಕದ ಹರಿವನ್ನು ಹೆಚ್ಚಿಸುತ್ತಾ ಹೋಗಬೇಕಾಗುತ್ತದೆ. ಅದು 2 ರಿಂದ 3 ಲೀಟರ್‌, 5, 10,  60 ಲೀಟರ್‌ ಆದರೂ ನಿಭಾಯಿಸಬಹುದು, ಅದರ ನಂತರ  ಬೈಪಾಪ್ಸ್‌, ಸಿಪಾಪ್ಸ್‌  ಅದರ ನಂತರ ವೆಂಟಿಲೇಟರ್‌ ಮೊರೆ ಹೋಗಬೇಕಾಗುತ್ತದೆ.  ಇದು ನೀವು ನಿರೀಕ್ಷಿಸಬಹುದಾದ ಅಪಾಯಕಾರಿ ತಿರುವು.  ಇದನ್ನು ನಿರೀಕ್ಷಿಸದಿದ್ದರೆ ನೀವು ಖಾಯಿಲೆಯ ನಿಯಂತ್ರಣ ಮಾಡುವುದಕ್ಕಾಗುವುದಿಲ್ಲ. 15 ರಿಂದ 20 ಶೇಕಡಾ ಇರುವ ಎರಡನೇ ಹಂತ ಉಂಟಾಗುವುದು ವೈರಸ್ಸಿನಿಂದ ಅಲ್ಲ ಆದರೆ ಆಂಟಿಬಾಡಿಗಳು (ಪ್ರತಿವಿಷ) ದೇಹದ ಜೀವಕೋಶಗಳ ಮೇಲೆಯೇ ದಾಳಿ ಮಾಡುವುದರಿಂದ.

ಹಾಗಾಗಿ ಐದನೇ ಆರನೇ ದಿನ ರೋಗಿಯಲ್ಲಿ ಹೆಚ್ಚಿದ ಜ್ವರ, ಜೋರಾದ ಕೆಮ್ಮು ಮತ್ತು ಉಸಿರುಕಟ್ಟಿದಂತಾದರೆ, ಸೈಟೋಕೈನ್‌ ತುಂತುರು ಶುರುವಾಯಿತೆಂದು ತಿಳಿಯಿರಿ. ಈ ಹಂತದಲ್ಲಿ ನೀವು ಸೈಟೋಕೈನ್‌ ಅಧಿಕ ಪ್ರಮಾಣದಲ್ಲಿ ಬಿಡುಗಡೆಯಾಗಿ, ತುಂತುರಿರುವುದು ಪ್ರವಾಹವಾಗುವುದರಿಂದ ತಡೆಗಟ್ಟಬೇಕು. ಅದನ್ನು ಹೇಗೆ ಮಾಡಬೇಕು?

ನಮ್ಮಲ್ಲೊಂದು ಉಪಾಯ ಇದೆ, ಇದು ತುಂಬಾ ಹಳೆಯ ಔಷಧಿ. ಅದುವೇ ಬಾಯಿಯ ಮೂಲಕ ಅಥವಾ ಚುಚ್ಚುಮದ್ದಿನ ಮೂಲಕ ಕೊಡುಂತಹ ಸ್ಟೀರಾಯ್ಡ್‌, ಇದು ಸೈಟೋಕೈನ್‌ ತುಂತುರು, ದೊಡ್ಡ ಪ್ರವಾಹವಾಗಿ, ನಾವು ಗಮನಿಸುತ್ತಿರುವ ವಿಧ್ವಂಸಕ ಪರಿಣಾಮಗಳಾಗುವುದನ್ನು ತಡೆಗಟ್ಟುವುದು.

ಆದರೆ ದುರಾದೃಷ್ಟಕ್ಕೆಂಬಂತೆ, ಶ್ವಾಸಕೋಶದ ರಕ್ತನಾಳಗಳಲ್ಲಿ ಸ್ಟೀರಾಯ್ಡ್‌ ಮಾತ್ರವೇ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವುದಿಲ್ಲ.  ಹಾಗಾಗಿ ಇದನ್ನು ಹೆಪ್ಪುನಿರೋಧಕಗಳೊಂದಿಗೆ ಸಂಯೋಜಿಸಿ ಕೊಡಬೇಕು.  ಇದರಿಂದಾಗಿ ಈ ಹಂತದಲ್ಲಿ ನಾವು ಕೊಡಬೇಕಾದ ಎರಡು ಮುಖ್ಯ ಔಷಧಿಗಳು ಹೆಪ್ಪುನಿರೋಧಕದೊಂದಿಗೆ ಸಂಯೋಜಿಸಿದ ಸ್ಟೀರಾಯ್ಡ್‌ . ಆದರೆ ನೆನಪಿನಲ್ಲಿರಲಿ, ಸ್ಟೀರಾಯ್ಡ್‌ ಗಳನ್ನು ಹಗುರವಾಗಿ ಪರಿಗಣಿಸಬೇಡಿ. ಹೆಪ್ಪುನಿರೋಧಕಗಳನ್ನೂ ಹಗುರವಾಗಿ ಪರಿಗಣಿಸಬೇಡಿ.  ಹಾಗಾಗಿ ನೀವೇ ಖುದ್ದಾಗಿ ಈ ಔಷಧೋಪಚಾರಗಳನ್ನು ಮಾಡುವುದಕ್ಕೆ ಮುಂದಾಗಬೇಡಿ. ವೈದ್ಯರ ಶಿಫಾರಸ್ಸು ಪಡೆದು ಮಾತ್ರ ಹಾಗೆ ಮಾಡಿ. ಸ್ಟೀರಾಯ್ಡ್‌ ನಿಂದ ಇರುವ ಅಪಾಯವಾದರೂ ಏನು ಅಂತ ನೀವು ಕೇಳಬಹುದು… ಸ್ಟೀರಾಯ್ಡ್‌ಗಳಿಗೆ, ಕಾಲಕ್ರಮ ಮುಖ್ಯವಾಗುತ್ತದೆ.  ಒಂದು ವೇಳೆ ಆರಂಭಿಕ ಹಂತದಲ್ಲಿ ಸ್ಟೀರಾಯ್ಡ್‌ ಗಳನ್ನು ಕೊಟ್ಟರೆ; ಹಲವು ರೋಗಿಗಳಿಗೆ ಕೊಡುವುದನ್ನು ನೋಡಿದ್ದೀನಿ.  ರೋಗಲಕ್ಷಣಗಳನ್ನು ಗುರುತಿಸಿದಿರಿ, ಸ್ಟೀರಾಯ್ಡ್‌ ಶುರು ಮಾಡಿದಿರಿ; ಬೇಡ! ಹಾಗೆ ಮಾಡಬೇಡಿ!!

ನೀವೇ ಖುದ್ದಾಗಿ ಹಾಗೆ ಮಾಡಲೇಬಾರದು, ಏಕೆಂದರೆ ಮೊದಲ ರೋಗಲಕ್ಷಣದ ಮೊದಲ ದಿನದಿಂದ ಸುಮಾರು ಮೂರು ನಾಲ್ಕು ದಿನ ಕಳೆದ ನಂತರವೂ ನಿಮ್ಮ ಆಂಟಿಬಾಡಿ (ಪ್ರತಿವಿಷ) ದಾಳಿ ಮಾಡಿದ ನಂತರವೂ ವೈರಸ್ಸುಗಳ ಸಂಖ್ಯೆ ಹೆಚ್ಚುವಿಕೆ ಮುಂದುವರಿಯುತ್ತದೆ.  ಸ್ಟೀರಾಯ್ಡ್‌ ಗಳನ್ನು ಆರಂಭಿಕ ಹಂತದಲ್ಲಿ ಶುರು ಮಾಡಿದರೆ, ನಿಮ್ಮ ಖಾಯಿಲೆ ಉಲ್ಬಣಿಸುತ್ತದೆ.  ಆ ತಪ್ಪು ಮಾಡಬೇಡಿ, ಏಕೆಂದರೆ ನಿಮ್ಮ ದೇಹವು ವೈರಸ್‌ ನಾಶಪಡಿಸುವುದಕ್ಕೆ ಅಡ್ಡಿ ಮಾಡುವ ಮೂಲಕ, ನಿಮ್ಮ ದೇಹಕ್ಕೆ ನೀವೇ ಹಾನಿ ಮಾಡುತ್ತೀರಿ. ಹಾಗೆ ಮಾಡಬೇಡಿ.

ಈ ಕಾರಣಕ್ಕಾಗಿ ಸ್ಟೀರಾಯ್ಡ್‌ ಶುರು ಮಾಡದೇ ಇರುವುದಕ್ಕೆ ಕಾಲಕ್ರಮ ಮುಖ್ಯವಾಗುತ್ತದೆ.

ಖಾಯಿಲೆಯ ಮೊದಲ ಐದು ದಿನಗಳಲ್ಲಿ ವೈರೀಮಿಯಾ (ವೈರಸ್ಸಿನ ದಾಳಿ ) ಪ್ರಕ್ರಿಯೆ ಮುಗಿದ ಮೇಲೆ, ದೇಹದಲ್ಲಿ ತಾನಾಗಿಯೇ ಉತ್ಪಾದನೆಯಾಗುವ ಆಂಟಿಬಾಡಿ (ಪ್ರತಿವಿಷ) ಪ್ರತಿಕ್ರಿಯೆ ಶುರುವಾಗಿ,  ಆ ಹಂತದಲ್ಲಿ  ಸ್ಟೀರಾಯ್ಡ್‌ ಶುರುಮಾಡಬೇಕು.

ಐದು ಆರನೇ ದಿನ ಹೀಗೆ  ಲಕ್ಷಣವನ್ನು ಗುರುತಿಸುವ ಮೂಲಕ ಶುರುಮಾಡುವುದು, ಸಾಮಾನ್ಯವಾದ ಕಾಲಕ್ರಮ.

ಎರಡನೇ ಹಂತದಲ್ಲಿ ರೋಗಲಕ್ಷಣ ಇಲ್ಲದವರು, ಚಿಂತಿಸಬೇಡಿ.  ಸ್ಟೀರಾಯ್ಡ್‌ ಶುರುಮಾಡಿದವರು, ಸ್ಟೀರಾಯ್ಡ್‌ ನ ಹೊರತಾಗಿಯೂ ಹೆಪ್ಪು ನಿರೋಧಗಳನ್ನು ಸಂಯೋಜಿಸಿ ಬಳಸಿ ಏಕೆಂದರೆ ಸ್ಟೀರಾಯ್ಡ್‌ ದೆಸೆಯಿಂದಲೂ ಶ್ವಾಸಕೋಶದ ರಕ್ತನಾಳಗಳ ಹೆಪ್ಪು ತಡೆಯುವುದು ಆಗುವುದಿಲ್ಲ. ಅದನ್ನು ಹೆಪ್ಪು ನಿರೋಧಕಗಳಿಂದ ತಡೆಯಬೇಕು.  ತುಂಬಾ ಜನ ಆಸ್ಪಿರಿನ್‌ ನಲ್ಲಿ ನಿಭಾಯಿಸಿಬಿಡಬಹುದು ಅಂದುಕೊಳ್ತಾರೆ. ದಯವಿಟ್ಟು ನೆನಪಿಡಿ, ಅದು ಪ್ರಯೋಜನವಾಗುವುದಿಲ್ಲ. ನಾನು ಓದಿರುವ ಪ್ರಕಾರ ನಾನು ಕಂಡುಕೊಂಡಿರುವುದು ಇದು ಪ್ರಯೋಜನವಾಗುವುದಿಲ್ಲವೆಂದೇ. ಯಾಕೆ?

ಯಾಕಂದ್ರೆ ವೈರಸ್‌ ಸೋಕಿನಿಂದಾಗಿಯೇ,  ರೋಗಿಯ ರಕ್ತದ ಪ್ಲೇಟೆಟ್‌ ಪ್ರಮಾಣವನ್ನು ಗಮನಿಸಿದರೆ ಪ್ಲೇಟೆಟ್‌ ಪ್ರಮಾಣವು ಬಹುತೇಕ 40000, 30000  ಕೆಲವರಿಗೆ 25000ನಷ್ಟು ಕಡಿಮೆಯಿರುತ್ತದೆ.

ಅದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆಯಾ? ಇಲ್ಲ, ಅವರಲ್ಲೂ ರಕ್ತ ಹೆಪ್ಪುಗಟ್ಟುತ್ತದೆ. ಕೇವಲ ಆಸ್ಪಿರಿನ್‌ ಕೊಡುವುದು ಪ್ರಯೋಜನವಾಗುವುದಿಲ್ಲ, ಹೆಪ್ಪುನಿರೋಧಕಗಳನ್ನೇ ಕೊಡಬೇಕು, ಹಾಗೂ ಇದು ಮೂರು ವಾರಗಳವರೆಗೆ ಮುಂದುವರಿಸಬೇಕು.  ಯಾಕೆ ಮೂರು ವಾರ?  ಸ್ಟೀರಾಯ್ಡ್‌ ಗಳ ಹಾಗೆ ಹತ್ತು ದಿನ ಯಾಕಿಲ್ಲ?  ಯಾಕಂದ್ರೆ  ಹೆಪ್ಪುಗಟ್ಟುವ ಸಾಧ್ಯತೆ ಎರಡು ಮೂರು ವಾರಗಳವರೆಗೂ ಇರುತ್ತದೆ. ಹಾಗಾಗಿ ಮೂರು ವಾರಗಳ ತನಕ ಮುಂದುವರಿಸಬೇಕು. ಹೀಗೆ ಮಾಡುವುದರಿಂದ ಪ್ರವಾಹ ಆಗುವುದನ್ನು ತಪ್ಪಿಸಬಹುದು, ಖಾಯಿಲೆ ಉಲ್ಬಣಿಸುವುದನ್ನು ನಿಭಾಯಿಸಬಹುದು ಮತ್ತು ಬಹುತೇಕ ರೋಗಿಗಳಿಗೆ ಇದು ಫಲಕಾರಿಯಾಗಿದೆ.

ಜಗತ್ತಿನಾದ್ಯಂತ ತಪ್ಪು ಎಲ್ಲಾಗುತ್ತಿದೆ? ಭಾರತದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತ, ಯು.ಎಸ್‌. ಯೂರೋಪ್‌ ನಲ್ಲಿಯೂ…

ನಮ್ಮ ಮಾಮೂಲಿ ಶ್ವಾಸಕೋಶಗಳು ಎರಡು, ಎರಡು ಕಿಡ್ನಿಗಳಿರುವ ಹಾಗೆಯೇ ಎರಡು ಶ್ವಾಸಕೋಶಗಳು, ಸರಿಯಾ?  ಒಂದು ಕಿಡ್ನಿಯನ್ನು ದಾನ ಮಾಡಿಯೂ ಸಹ ಉಳಿದ ಒಂದೇ ಕಿಡ್ನಿಯಲ್ಲಿ ಸಕ್ರಿಯರಾಗಿರಬಹುದು.  ಹಾಗೆಯೇ ನನ್ನ ಬಳಿ ಒಂದು ಶ್ವಾಸಕೋಶವನ್ನು ತೆಗೆದುಹಾಕಬೇಕಾದ, ಕ್ಷಯರೋಗದ, ಶ್ವಾಸಕೋಶ ಕ್ಯಾನ್ಸರ್‌ ಇರುವ ರೋಗಿಗಳಿದ್ದಾರೆ. ಆದಾಗ್ಯೂ ಉಳಿದ ಒಂದೇ ಶ್ವಾಸಕೋಶದಲ್ಲಿ ನೂರು ಶೇಕಡಾ ಮಿತಿಯಲ್ಲಿರುವ ಹಾಗೆ  ಸಕ್ರಿಯವಾಗಿರುವುದು ಸಾಧ್ಯವಿದೆ.  ನೂರು ಪ್ರತಿಶತ.  ಅವರಲ್ಲಿ 93 ಶೇಕಡಾ ಮಿತಿ ಇರುವುದಿಲ್ಲ. ನೂರು ಪ್ರತಿಶತ.  ಹಾಗಾದರೆ ತೊಂದರೆ ಏನು? ಅವರಿಗೆ ಓಡುವುದಕ್ಕೆ, ನಾಲ್ಕು ಅಂತಸ್ತಿನ ಮೆಟ್ಟಿಲು ಹತ್ತುವುದಕ್ಕೆ ತೊಂದರೆಯಾಗುತ್ತದೆ. ಅವರಿಗೆ ಉಸಿರುಕಟ್ಟುತ್ತದೆ.  ಮಾಮೂಲಿ ಮನುಷ್ಯನ ಬಳಿ  ಮೂರನೇ ಎರಡು ಭಾಗ ಶ್ವಾಸಕೋಶಗಳು ಮೀಸಲು ಸಾಮರ್ಥ್ಯದ್ದಾಗಿರುತ್ತವೆ.  ವಿನ್ಯಾಸವೇ ಹಾಗಿರುತ್ತದೆ.

ಹಾಗಾಗಿ,  ರೋಗಿಗೆ ನೀವು ಮನೆಯಲ್ಲಿ ಕುಳಿತು ಡಿಜಿಟಲ್‌ ಸೆನ್ಸರ್‌ ನಲ್ಲಿ ಆಮ್ಲಜನಕದ ಮಿತಿ ಕಡಿಮೆ ಆಗುವ ತನಕ ಕಾದಿರುವುದಕ್ಕೆ ಹೇಳಿದರೆ, ಆಮ್ಲಜನಕದ ಮಿತಿ ಕ್ಷೀಣಿಸುವುದಕ್ಕಿಂತ ಮೊದಲು,  ಸಾಮಾನ್ಯ ಕಾರ್ಯನಿರ್ವಹಣೆಯ, ಮೂರನೇ ಎರಡು ಭಾಗ ಶ್ವಾಸಕೋಶಕ್ಕೆ ಹಾನಿ ಮಾಡಿದ ಹಾಗಾಗುತ್ತದೆ.

ಆನಂತರ ನೀವು ಆಸ್ಪತ್ರೆಗೆ ದೌಡಾಯಿಸುವಿರಿ, ಆನಂತರ ನಿಮಗೆ ಆಕ್ಸಿಜನ್‌ ಕೊಡಲೇಬೇಕಾಗುತ್ತದೆ, ಸಾಲದಿದ್ದರೆ ವೆಂಟಿಲೇಟರ್‌ ಗೆ ಹೋಗಬೇಕಾಗುತ್ತದೆ. ಹಾಗಾಗುವುದು ದುರಂತ.  ಅಲ್ಲಿಯತನಕ ಕಾಯಬೇಡಿ, ಡಿಜಿಟಲ್‌ ಸೆನ್ಸರ್‌ ಇಟ್ಟುಕೊಂಡು ಮನೆಯಲ್ಲಿ ಕಾಯಬೇಡಿ. ಇದು ಉಪಯುಕ್ತವೇ, ಇಲ್ಲಾ ಅನ್ನುವುದಿಲ್ಲ, ಇದು ಆಸ್ಪತ್ರೆಯಲ್ಲಿ ಉಪಯೋಗಕ್ಕೆ ಬರುತ್ತದೆ, ಆಸ್ಪತ್ರೆಗೆ ಹೋಗುವುದನ್ನು ತೀರ್ಮಾನಿಸುವುದಕ್ಕೆ ಉಪಯೋಗಕ್ಕೆ ಬರುತ್ತದೆ. ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯದಲ್ಲಿ ರೋಗಿಯ ಸ್ಥಿತಿ ಕ್ಷೀಣಿಸುತ್ತಿದೆಯೇ ಎಂದು ಗಮನಿಸಲು ಇವೆಲ್ಲಕ್ಕೂ ಉಪಯೋಗಕ್ಕೆ ಬರುತ್ತದೆ.  ಆದರೆ ಇದನ್ನಿಟ್ಟುಕೊಂಡು ಮನೆಯಲ್ಲಿ ಕುಳಿತಿರಬೇಡಿ.  ಅದು ದೊಡ್ಡ ತಪ್ಪಾಗುತ್ತದೆ.

ಸ್ಟೀರಾಯ್ಡ್‌ ಬಳಸುವುದರಿಂದ ಸಂಭವಿಸಬಹುದಾದ ಅಡ್ಡಪರಿಣಾಮಗಳು.

ನೀವು ಅರ್ಥಮಾಡಿಕೊಳ್ಳಲೇಬೇಕಾದ ಎರಡು ವಿಚಾರಗಳು.

ಸ್ಟಿರಾಯ್ಡ್‌ ಗಳು ರೋಗನಿರೋಧಕತೆಯನ್ನು ಕಡಿಮೆ ಮಾಡುತ್ತವೆ, ಆದ್ದರಿಂದ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ. ಹಾಗಾಗಿ ನೀವು ಐದು ಅಥವಾ ಆರನೇ ದಿನ ಸ್ಟಿರಾಯ್ಡ್‌ ಶುರು ಮಾಡಿದಿರಿ, ಹೆಪ್ಪು ನಿರೋಧಕಗಳನ್ನು ಶುರು ಮಾಡಿದಿರಿ, ಚಮತ್ಕಾರವೆಂಬಂತೆ ವಾಸಿಯಾಗುತ್ತದೆ. ಶಕ್ತಿಶಾಲಿಗಳಾಗುತ್ತಾರೆ. ಮಾರನೆಯ ದಿನ ಅವರ ಜ್ವರ ಇಳಿದುಬಿಡುತ್ತದೆ. ಕೆಮ್ಮು ಕಡಿಮೆಯಾಗುತ್ತದೆ. ವಾಸಿಯಾದವರ ಹಾಗೆ, ಶಕ್ತಿ ಬಂದವರ ಹಾಗಾಗ್ತಾರೆ. ಅವರದು ಸರಿ, ವಿಶೇಷವಾಗಿ ವೃದ್ಧರಿಗೆ (ಹಿರಿಯ ವಯಸ್ಸಿನವರಿಗೆ), ಮಧುಮೇಹ ರೋಗಿಗಳಿಗೆ (ಸಕ್ಕರೆ ಕಾಯಿಲೆಯ ರೋಗಿಗಳಿಗೆ), ವಿಶೇಷವಾಗಿ ಕಡಿಮೆ ರೋಗನಿರೋಧಕತೆಯಿರುವವರಿಗೆ, ಸ್ಟಿರಾಯ್ಡ್‌ ಕೊಡುವ ಸುಮಾರು ನಾಲ್ಕನೇ ದಿನಕ್ಕೆ  ಅವರಿಗೆ ಮತ್ತೆ ಜ್ವರ ಬರಲು ಶುರುವಾಗುತ್ತದೆ.  ಅಯ್ಯಯ್ಯೋ ಮತ್ತೆ ವೈರಸ್‌ ಬಂದುಬಿಡ್ತಾ?  ಅದು ವೈರಸ್‌ ಮತ್ತೆ ಬಂದಿರುವುದಲ್ಲ.  ರೋಗನಿರೋಧಕತೆ ಕಡಿಮೆಯಾಗಿರುವುದರಿಂದ ನಮ್ಮ ಶ್ವಾಸಕೋಶಗಳಲ್ಲಿ  ಸಾಮಾನ್ಯ ಬ್ಯಾಕ್ಟೀರಿಯಾಗಳು  ದೇಹದ ಮೇಲೆ ದಾಳಿ ಮಾಡಿ ನ್ಯುಮೋನಿಯಾ ಉಂಟುಮಾಡುತ್ತವೆ.  ಈ ಹಂತದ ಸೋಂಕು, ಬ್ಯಾಕ್ಟೀರಿಯಾ ಕಾರಣದಿಂದ ಬಂದಿರುವ ಬ್ಯಾಕ್ಟೀರಿಯಲ್‌ ನ್ಯುಮೋನಿಯಾ. ಇದನ್ನು ಆಂಟಿಬಯಾಟಿಕ್‌ ಗಳಿಂದ ಉಪಚರಿಸಬೇಕು .

ಮತ್ತೊಮ್ಮೆ ಒತ್ತಿ ಹೇಳುವುದೇನೆಂದರೆ,  ಸ್ಟೀರಾಯ್ಡ್‌ ಗಳು ದೊಡ್ಡ ಮಟ್ಟಿಗೆ, ಜೀವ ಉಳಿಸುವ ಮಟ್ಟಿಗೆ ಉಪಕಾರಿಯಾಗಿರುವಂತಹವು.  ಆದರೆ, ನಮ್ಮ ಶ್ವಾಸಕೋಶಗಳಲ್ಲಿರುವ ಅವಕಾಶವಾದಿ ಬ್ಯಾಕ್ಟೀರಿಯಾಗಳ ಸೋಂಕಿಗೆ ಉತ್ತೇಜನ ಕೊಡುವಂತಹ ತೊಂದರೆಯೂ ಇವುಗಳಿಂದ ಇದೆ.

ಇದನ್ನು ಆಂಟಿಬಯಾಟಿಕ್‌ ಗಳಿಂದ ಉಪಚರಿಸಬೇಕು. ಈ ಒಂದು ಹಂತದಲ್ಲಿ ಮಾತ್ರ ಆಂಟಿಬಯಾಟಿಕ್‌ ಗಳನ್ನು ಕೊಡಬೇಕು.  ಮೊದಲ ರೋಗಲಕ್ಷಣ ಇದ್ದಾಗ ಆಂಟಿಬಯಾಟಿಕ್‌ ಕೊಡುವುದು ಅಂದರೆ ಬ್ಯಾಕ್ಟೀರಿಯಾ ನಿರೋಧಕತೆಯನ್ನು ಹೆಚ್ಚಿಸಿದ ಆಗಾಗುತ್ತದೆ. ಅಸಿಟೋಮೈಸೀನ್‌, ಡಾಕ್ಸಿಸೈಕ್ಲಿನ್‌, ಯಾವುದಾದರೂ ಆಗಿರಲಿ, ವೈರಸ್‌ ನಿರ್ಮೂಲನೆಗೆ ಯಾವ ರೀತಿಯಲ್ಲೂ ಪರಿಣಾಮ ಬೀರುವುದಿಲ್ಲ. ಅವುಗಳಿಂದ ಯಾವುದೇ ಸಹಾಯವೇ ಆಗುವುದಿಲ್ಲ. ಆ ಹಂತದಲ್ಲಿ ಅವು ನಿರುಪಯುಕ್ತ, ಆದರೆ ರೋಗಿಗೆ ಸ್ಟೀರಾಯ್ಡ್‌ ಆರಂಭಿಸಿದ ನಾಲ್ಕು ಐದು ದಿನಗಳ ನಂತರ ಬರಬಹುದಾದ, ಬ್ಯಾಕ್ಟೀರಿಯಲ್‌ ನ್ಯುಮೋನಿಯಾದಿಂದ ರಕ್ಷಿಸುವುದಕ್ಕೆ ಅವು ಸಹಾಯಕವಾಗುತ್ತವೆ.  ಹಾಗಾಗಿ ನಾವು ಕಾಲಕ್ರಮವನ್ನು ನೆನಪಿಟ್ಟುಕೊಂಡೇ ಇರಬೇಕು.

ಆನಂತರ ಸ್ಟೀರಾಯ್ಡ್‌ ಗಳು, ಮಧುಮೇಹಕಾರಿ. ಅಂದರೆ ಸಕ್ಕರೆ ಖಾಯಿಲೆ ತರಿಸುವಂತಹವು. ಹಾಗಾಗಿ ಮೊದಲೇ ಮಧುಮೇಹದಿಂದ ಬಳಲುತ್ತಿರುವವರಿಗೆ ಸ್ಟೀರಾಯ್ಡ್‌ ಕೊಟ್ಟಾಗ, ತೀವ್ರತೆ ಹೆಚ್ಚುತ್ತದೆ. ರಕ್ತದ ಸಕ್ಕರೆ ಪ್ರಮಾಣ 250 ಕ್ಕೆ ಹೋಗಿದೆ, ಹೌದು ಅದು ಸಾಧ್ಯ. ಮಧುಮೇಹಿಗಳ ಸಕ್ಕರೆ ಪ್ರಮಾಣ 400, 500 ಕ್ಕೆ ಏರುವುದೂ ಸಾಧ್ಯವಿದೆ.  ಆ ಸನ್ನಿವೇಶವನ್ನು ನಿಭಾಯಿಸುವುದಕ್ಕೆ, ನಿಮ್ಮ ವೈದ್ಯರ ಅಥವಾ ಮಧುಮೇಹ ತಜ್ಞರ ಸಂಪರ್ಕದಲ್ಲಿದ್ದು, ನಿಯಂತ್ರಣಕ್ಕೆ ತರಬೇಕು. ಇಲ್ಲವಾದರೆ ಮಧುಮೇಹ ಉಲ್ಬಣಗೊಂಡು ಅದು ತೊಂದರೆಯಾಗುತ್ತದೆ.

ಹೆಚ್ಚಿನ ರೋಗಲಕ್ಷಣವುಳ್ಳ ಜನರಲ್ಲಿ, ಎರಡನೇ ಹಂತದ ಸೋಂಕಿಗೆ ಸರಿಯಾಗಿ ಸ್ಪಂದಿಸಲಾಗದಿರುವುದರಿಂದ, ಅಥವಾ ಮಧುಮೇಹ ಸಮಸ್ಯೆ, ಮತ್ತು ಮೂತ್ರಪಿಂಡ ಸಮಸ್ಯೆಗಳು, ಈಗ ಕೊಡುವ ಸ್ಟೀರಾಯ್ಡ್‌ ನಿಂದಾಗಿ ದೇಹದ ಜೀವದ್ರವಗಳ ಅಸಮತೋಲನದ ಕಾರಣದಿಂದ, ಕಳಪೆ ಫಲಿತಾಂಶಗಳನ್ನು ಕಾಣಬಹುದು.  ಹಾಗಾಗಿ ಸ್ಟೀರಾಯ್ಡ್‌ ಗಳು ಜೀವರಕ್ಷಕಗಳಾಗಿದ್ದರೂ ಸಹ ಅಪಾಯಕಾರಿ, ಎಚ್ಚರಿಕೆಯಿಂದ ಉಪಯೋಗಿಸಿ.

ಸಾರಾಂಶ.

ನಾನು ನಿಮಗೆ ತಲುಪಿಸುವ ಮುಖ್ಯ ಸಂದೇಶ, ತುಂಬಾ ಸ್ಪಷ್ಟವಾಗಿರುವಂತಹವು. ನಿಮಗೆ ಕೋವಿಡ್‌ ಪಾಸಿಟಿವ್‌ ಅನಿಸಿದಾಗ, ನಿಮಗೇ ಖುದ್ದು ಪಾಸಿಟಿವ್‌ ಅನಿಸಿದಾಗ; ನಿಮಗೆ ಟೆಸ್ಟ್‌ ಮಾಡಿ ಪಾಸಿಟಿವ್‌ ಇದೆ ಅಂದಾಗ ಅಲ್ಲ, ಟೆಸ್ಟ್‌ ನಲ್ಲಿ ಪಾಸಿಟಿವ್‌ ಅಥವಾ ನೆಗೆಟಿವ್‌ ಎಂದಿರುವುದನ್ನು ಅವಲಂಬಿಸಲು ಹೋಗದೇ, ವೈದ್ಯರ ಸಲಹೆ ಪ್ರಕಾರ, ನಿಮ್ಮ ರೋಗಲಕ್ಷಣಗಳು ಹೊಂದುತ್ತವೆಯಾ? ಎನ್ನುವ ರೀತಿಯಲ್ಲಿ ನಿಭಾಯಿಸಬೇಕು. ಹಾಗಾಗಿ, ಟೆಸ್ಟ್‌ ಅವಲಂಬಿಸದೇ, ಮೊದಲ ರೋಗಲಕ್ಷಣದ ಪ್ರಕಾರ ಮುಂದುವರಿದು,

ಐದು ದಿನಗಳ ನಂತರ ನಿಮಗೆ ರೋಗಲಕ್ಷಣ ಇಲ್ಲದಿದ್ದರೆ, ಸಂತೋಷಪಡಿ, ನೀವು ಕೊರೋನಾ ವಿರುದ್ಧ ಹೋರಾಡಿದ ಸೈನಿಕ.  ನೀವು ಇನ್ನೂ ಐದು ದಿನ ಗಮನವಿಟ್ಟುಕೊಂಡಿರಬಹುದು, ಯಾಕಂದ್ರೆ, ನಿಮಗಿನ್ನೂ ಸ್ವಲ್ಪ ಕೆಮ್ಮು, ಉಸಿರು ಬಿಗಿತ, ದೇಹ ಬಿಗಿಯುವಂತಹದ್ದು ಇರಬಹುದು, ಇದು ಸ್ವಲ್ಪ ಕಾಲ ಉಳಿದಿರುತ್ತದೆ, ಚಿಂತಿಸಬೇಡಿ.

ಆದರೆ ಅಪಾಯಕಾರಿ ತಿರುವು ಗುರುತಿಸಿದ ನಂತರ,  ಉಪಚಾರ ಮಾಡಿ, ಸ್ಟಿರಾಯ್ಡ್‌ ಮತ್ತು ಹೆಪ್ಪು ನಿರೋಧಕಗಳನ್ನುಬಳಸಿ, ಹತ್ತು ದಿನ ಸ್ಟೀರಾಯ್ಡ್‌  ಮತ್ತು ಮೂರು ವಾರ ಹೆಪ್ಪು ನಿರೋಧಕಗಳನ್ನು ಕೊಡುವ ಮೂಲಕ ಸೈಟೋಕೈನ್‌ ಪ್ರವಾಹವನ್ನು ತಡೆಗಟ್ಟಿ. ನಿಮ್ಮ ವೈದ್ಯರ ಸಲಹೆಯ ಮೇರೆಗೆ ಈ ಔಷಧಿಗಳನ್ನು ಉಪಯೋಗಿಸಿ, ಅವುಗಳಿಂದ ಪರಿಣಾಮದಿಂದ ಆಗಬಹುದಾದ  ಅಸ್ವಸ್ಥತೆಗಳನ್ನು ತಡೆಗಟ್ಟಿ.

ಎರಡೂ ಸಹ ಅಪಾಯಕಾರಿ ಔಷಧಿಗಳು ಹಾಗಾಗಿ ಮೇಲ್ವಿಚಾರಣೆಯ ಮೂಲಕವೇ ಪಡೆಯಬೇಕು. ನೀವೇ ಖುದ್ದಾಗಿ, ಬಹುಶಃ ಕೆಲವು ವಿಟಮಿನ್‌ ಗಳನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳುವುದರ ಹೊರತಾಗಿ ಬೇರೇನೂ ಔಷಧೋಪಚಾರವನ್ನು ಮಾಡಿಕೊಳ್ಳಬೇಡಿ.

ರೆಮ್‌ಡೆಸ್ವಿರ್‌ ಐವರ್‌ಮೆಕ್ಟಿನ್  ನಂತಹ ಔಷಧಿಗಳ ಬಗ್ಗೆ ಏನು ಹೇಳುವುದು?

ಇವು ವಿಶೇಷ ಔಷಧಿಗಳು, ಅವು ಫಲಕಾರಿಯಾಗುವ ಯಾವುದೇ ಸಾಕ್ಷ್ಯಗಳಿಲ್ಲ, ಪ್ಲಾಸ್ಮಾ ಕೂಡ,  ಫಲದಾಯಕವಾಗುವುದರ ಬಗ್ಗೆ ಸಾಕ್ಷ್ಯಗಳಿಲ್ಲ.  ಹಾಗಾಗಿ  ನೀವು ಲಭ್ಯವಿರುವ ಮಾರ್ಗದರ್ಶನಗಳನ್ನು ಗಮನಿಸಿದರೆ, ಪ್ಲಾಸ್ಮಾ ಥೆರಪಿ, ರೆಮ್‌ಡೆಸಿವಿರ್‌, ಟೊಸಿಲಿಸಮ್ಯಾಬ್ ಐವರ್‌ಮೆಕ್ಟಿನ್ ಅಥವಾ ಈ ರೀತಿಯ ಯಾವುದೇ ಔಷಧಿ ಭಳಕೆಯೂ ಸಹ  ಅವುಗಳಲ್ಲಿ ಸಮರ್ಪಕವಾದ ಸಾಕ್ಷ್ಯಗಳಿಲ್ಲ.  ಮೊದಲ ಐದು ದಿನಗಳಲ್ಲಿ ಆಂಟಿಬಯಾಟಿಕ್‌ ಗಳ ಪಾತ್ರ ಏನೂ ಇರುವುದಿಲ್ಲ.  ಎರಡನೇ ಹಂತದ ಕಡೆಯ ಐದು ದಿನಗಳಲ್ಲಿ ಮಾತ್ರ ಆಂಟಿಬಯಾಟಿಕ್‌ ಗಳನ್ನು ಬಳಸಿ.  ಇದು ನಿಮಗೆ ಸ್ಪಷ್ಟವಾದರೆ, ನೀವು ಆಸ್ಪತ್ರೆಗೆ ಹೋಗುವುದನ್ನು ತಪ್ಪಿಸಿ ಮನೆಯಲ್ಲಿದ್ದೇ ನಿಭಾಯಿಸಬಹುದು.   ನಿಮಗೆ ಆಸ್ಪತ್ರೆ ಸೇರಬೇಕಾದ ಅಗತ್ಯ ಬೀಳುವುದು, ದೇಹದಲ್ಲೇ ಉತ್ಪಾದನೆಯಾಗುವ ಆಂಟಿಬಾಡಿಗಳು (ಪ್ರತಿವಿಷ) ರಕ್ತನಾಳಗಳ ಮೇಲೆ ದಾಳಿ ಮಾಡುವ, ಅಪಾಯದ ಕೆಂಪುಸೂಚನೆಗಳನ್ನು ನೀವು ಗಮನಿಸದೇ ಹೋದಾಗ.

ಇನ್ನುಮುಂದೆ, ಈಗ ಹೇಳಿದ ತಿಳುವಳಿಕೆಯ ಮೂಲಕ ನೀವದನ್ನು ಪತ್ತೆ ಮಾಡಬಹುದು, ಗುರುತಿಸಬಹುದು, ಸಹಾಯ ಕೇಳಿ ನಿಯಂತ್ರಿಸಬಹುದು. ಇದು ಇತ್ತೀಚೆಗೆ ಅರ್ಥವಾಗಿರುವ ವಿಚಾರ, ಹಾಗೂ ನಾವು ಹಲವಾರು ರೋಗಿಗಳಿಗೆ ಮಾರ್ಗದರ್ಶನ ಮಾಡುವ ಮೂಲಕ, ಆಕ್ಸಿಜನ್‌ ಇಲ್ಲದೇ, ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲದೇ, ವೆಂಟಿಲೇಶನ್‌ ನ ಅಗತ್ಯವಿಲ್ಲದೇ, ನಾವು ನೋಡುತ್ತಿರುವ ಯಾವ ದುರಂತವೂ ಎದುರಾಗದಂತೆ ನಿಭಾಯಿಸುವುದು ಸಾಧ್ಯವಾಗಿದೆ,

ತುಂಬಾ ಧನ್ಯವಾದಗಳು.


ಮೂಲ ಆಂಗ್ಲ ಪ್ರಸ್ತುತಿ : ಮ್ಯಾಥ್ಯು ವರ್ಗಿಸ್
ಯೂಟ್ಯೂಬ್ ಚಾನೆಲ್

ಕನ್ನಡ ಪ್ರಸ್ತುತಿ : ಋತುಮಾನ
ಅನುವಾದ : ಅಶ್ವತ್ ಪುಟ್ಟಸ್ವಾಮಿ
ಕೊಳ್ಳೆಗಾಲ ಶರ್ಮ
ಧ್ವನಿ : ಸುಶೀಲ್ ಸಂದೀಪ್ ಎಂ

ಪ್ರತಿಕ್ರಿಯಿಸಿ