ಎರಡು ಕವನ : ಬೆಳಕು, ಬೆಳಕು ಕೂಡಿ, ಅಂಜನ, ಅಂಜನ ಸೇರಿ

ಮೊದಲು, ಅವರು ಬಂದದ್ದು ಇಂಗ್ಲಿಶಿನಲ್ಲಿ First They Came ಎಂದು ಹೆಸರುವಾಸಿಯಾಗಿರುವ ಪದ್ಯದ ಭಾವಾನುವಾದ. ಇದು ಜರ್ಮನ್ ಪಾದ್ರಿ ಮಾರ್ಟಿನ್ ನೀಮೊಲ್ಲರ್ (Martin Niemoller, 1892-1984) ಆಡಿದ ಕೆಲವು ಮಾತುಗಳನ್ನು ಆಧರಿಸಿದೆ.

ಕ್ರಿಶ್ಚಿಯನ್ ಶ್ರದ್ಧಾವಂತರು, ವಿಶೇಷವಾಗಿ ಕ್ಯಾಥೊಲಿಕ್ಕರು, ಪಾದ್ರಿಯೊಬ್ಬರ ಬಳಿಗೆ ತೆರಳಿ, ಅವರಲ್ಲಿ ಏಕಾಂತದಲ್ಲಿ ಮಾತಾಡಿ, ಮಾಡಿಕೊಳ್ಳುವ ಆತ್ಮನಿವೇದನೆ ಅವರ ಮತಧರ್ಮದ ವಿಧಿಗಳಲ್ಲಿ ತುಂಬ ಮುಖ್ಯವಾದದ್ದು. ಪಾದ್ರಿ ಮಾರ್ಟಿನ್ ನೀಮೊಲ್ಲರ್ 1946ರಲ್ಲಿ ಮಾಡಿಕೊಂಡ ಅಂಥದೊಂದು ನಿವೇದನೆ ಈ ಪದ್ಯಕ್ಕೆ ಆಧಾರ. ನೀಮೊಲ್ಲರ್ ಅವರ ನಿವೇದನೆ ಇದ್ದದ್ದು ದಿನನಿತ್ಯದ ‘ಗದ್ಯ’ದ ಮಾತಿನಲ್ಲಿ. ಆ ನಿವೇದನೆ ಬಹಳ ಬೇಗ ಪ್ರಸಿದ್ಧವಾಯಿತು. ಆಗ ಅನಾಮಿಕರು ಯಾರೋ ಅದರ ಸಾರಾಂಶಕ್ಕೆ First They Came ಎಂಬ ‘ಪದ್ಯ’ದ ರೂಪ ಕೊಟ್ಟರು. ಅಲ್ಲಿಂದಾಚೆಗೆ, ಇಂದಿನವರೆಗೆ, ಇದು ಆಧುನಿಕ, ಜಾಗತಿಕ ಜನಪದ ಪದ್ಯವಾಗಿದೆಯಷ್ಟೇ ಅಲ್ಲ, ಅನೃತ, ಅಧರ್ಮಗಳ ಮಹಾಪಾತಕ ನಡೆಯುವಾಗ ನಾವು ಮತ್ತೆಂದೂ ಜಾಣಕುರುಡು-ಕಿವುಡು-ಮೂಗು ನಟಿಸುವ ಜೀವಂತ ಹೆಣಗಳಾಗಿರಬಾರದು, ಆತ್ಮವನ್ನು ಒತ್ತೆ ಇಟ್ಟವರಾಗಿರಬಾರದು ಎಂದು ಬೋಧಿಸುವ – ಪಶ್ಚಾತ್ತಾಪ, ಪ್ರಾಯಶ್ಚಿತ್ತ, ಆತ್ಮಜಾಗೃತಿಗಳ –  ತತ್ತ್ವಪದವೇ ತಾನಾಗಿದೆ.

ಮರುಬರುಹ ಇಂಗ್ಲಿಶ್ ಭಾಷೆಯ ಬಹುದೊಡ್ಡ ಕವಿ ಡಬ್ಟ್ಯೂ. ಬಿ. ಯೇಟ್ಸನ The Second Coming ಎಂಬ ಪ್ರಸಿದ್ಧ ಕವಿತೆಯ ಭಾವಾನುವಾದ. ಯೇಟ್ಸ್ ತನ್ನ ಆ ಕವಿತೆಯನ್ನು ಬರೆದದ್ದು 1919ರಲ್ಲಿ; ಮೊದಲು ಪ್ರಕಟಿಸಿದ್ದು ಅದೇ ವರ್ಷ The Dial ಎಂಬ ಪತ್ರಿಕೆಯಲ್ಲಿ. ಆಮೇಲೆ ಅದು 1921ರಲ್ಲಿ ಹೊರಬಂದ ಆತನ ಕವನ ಸಂಕಲನ Michael Robartes and the Dancer ಎಂಬ ಹೊತ್ತಿಗೆಯ ಭಾಗವಾಗಿ, ಜಗತ್ತಿನ ಕಾವ್ಯಲೋಕದಲ್ಲಿ ಅಜರಾಮರವಾಗಿದೆ. ಯೇಟ್ಸ್‍ನ ಈ ಕವಿತೆ ಮಾಂತ್ರಿಕವಾದೊಂದು ದುಃಸ್ವಪ್ನ ದರ್ಶನವಾಗಿದೆ; ಮಹಾಕೇಡಿನ ಕಾಲಜ್ಞಾನವಾಗಿದೆ; ಬೆಡಗಿನ ವಚನದ ಗೂಢ ಬೋಧವೇ ತಾನಾಗಿದೆ.

ಕಳೆದ ಹಲವು ದಶಕಗಳಲ್ಲಿ, ಜಗತ್ತಿನಾದ್ಯಂತದ ಜನರು ಈ ಎರಡು ಕವಿತೆಗಳ ಬೆಳಕಿನಲ್ಲಿ, ಅಂಜನದಲ್ಲಿ ಅಂದಂದಿನ ತಮ್ಮ ದೇಶ, ಕಾಲ, ಲೋಕ, ಜೀವನ, ಮನಸ್ಸು, ಆತ್ಮಗಳನ್ನು ಕಂಡಿದ್ದಾರೆ, ಕಂಡುಕೊಂಡಿದ್ದಾರೆ.

ಈ ಕವನಗಳ ಬೆಳಕು, ಬೆಳಕು, ಅಂಜನ, ಅಂಜನ ಸೇರಿ ನೀಡುವ ಕಾಣ್ಕೆ ಇಂದಿನ ದೇಶಕಾಲದ ನಮಗೆ ಇನ್ನಿಲ್ಲದಂತೆ ಬೇಕು. ಅದಕ್ಕಾಗಿಯೆ ಇವುಗಳನ್ನು ಇಲ್ಲಿ ಒಟ್ಟಿಗೆ ನೆನೆದು, ಒಟ್ಟಿಗೆ ಇಟ್ಟು ಧ್ಯಾನಿಸಿದೆ.

ಈ ಕವಿತೆಗಳನ್ನು ಕುರಿತು ಇಲ್ಲಿ ಇನ್ನು ಹೆಚ್ಚು ಹೇಳಲಾಗದು, ಹೇಳಕೂಡದು ಕೂಡ. ಓದುಗರು ಇವುಗಳೊಂದಿಗೆ ಒಡನಾಡಿ, ಸಂಸಾರಮಾಡಿ, ಇವುಗಳ ‘ಅರ್ಥ’ ಮತ್ತು ಇವುಗಳ ನಂಟು, ಒಂದಕ್ಕೊಂದು, ಹೇಗೆ, ಮತ್ತು ಇವುಗಳಿಗೂ ತಮಗೂ ಅಂಟಿದ ನಂಟು ಏನು ಎಂದು ತಾವೇ ಕಂಡುಕೊಳ್ಳುವುದು ಸರಿ.

ಹೆಚ್ಚಿನ ಓದಿಗೆ ನೆರವಾಗಲೆಂದು, ಅಂತರಜಾಲದಲ್ಲಿ ಸಿಕ್ಕುವ ಕೆಲವು ಲೇಖನಗಳಿಗೆ ಕೊಂಡಿಯನ್ನು ಕವಿತೆಗಳ ಪಾಠದ ಕೆಳಗೆ ಕೊಟ್ಟಿದೆ.

ಮೊದಲು, ಅವರು ಬಂದದ್ದು

                              – ಮಾರ್ಟಿನ್ ನೀಮೊಲ್ಲರ್

ಮೊದಲು, ಅವರು ಬಂದದ್ದು
ಕಮ್ಯೂನಿಸ್ಟರಿಗೆ ಅಂತ  

                        ನಾನುಸಿರೆತ್ತಲಿಲ್ಲ
                        ಕಮ್ಯೂನಿಸ್ಟನಲ್ಲವಲ್ಲ

ಮತ್ತೆ, ಅವರು ಬಂದದ್ದು 
ಸೋಷಿಯಲಿಸ್ಟರಿಗೆ ಅಂತ 

                         ನಾನು ಉಸಿರೆತ್ತಲಿಲ್ಲ
                         ಸೋಷಿಯಲಿಸ್ಟನಲ್ಲವಲ್ಲ

ತಿರುಗಿ, ಅವರು ಬಂದದ್ದು
ಟ್ರೇಡ್ಯೂನಿಯನ್ನವರಿಗೆ ಅಂತ

                         ಉಸಿರೆತ್ತಲಿಲ್ಲ ನಾನು
                         ಟ್ರೇಡ್‍ ಯೂನಿಯನ್‍ನವನಲ್ಲವಲ್ಲ

ಆಮೇಲೆ, ಅವರು ಬಂದದ್ದು
ಯಹೂದಿಗಳಿಗೆ ಅಂತ         

                       ನಾನು ಉಸಿರು ಎತ್ತಲಿಲ್ಲ
                       ಯಹೂದಿ ಅಲ್ಲವಲ್ಲ

ಈಗ ಅವರು ಬಂದಿರೋದು
ನನಗಾಗಿ, ನನಗಾಗಿ ಅಂತ

                     ಯಾರೂ ಉಸಿರು ಎತ್ತುತಾ ಇಲ್ಲ
                     ಎತ್ತೋದಕ್ಕೆ ಯಾರೂ ಉಳಿದಿಲ್ಲ

*******

ಮರುಬರುಹ

                                 – ಡಬ್ಲ್ಯು. ಬಿ. ಯೇಟ್ಸ್

ಸುತ್ತುತ್ತ ಸುತ್ತುತ್ತ ಶಂಕು ಅಗಲಗಲ ಗಿರಕಿ ಗಿಡುಗನಿಗೆ 
ಗಿಡುಗಗಾರನ ಕೂಗು ಮೂಕ. ಒಡಕಲು ಎಲ್ಲ. ನಡುಹಿಡಿತ 
ಭದ್ರವಿಲ್ಲ. ಅರಾಜಕತೆ, ಅಟಮಟ, ಬಿಚ್ಚು-ಹುಚ್ಚು, ನೆತ್ತರು ಮ
ಬ್ಬಿನ ಉಬ್ಬರ: ಮುಳುಗಿತು ಅಮಾಯಕತೆಯ ಮರ್ಯಾದೆ
ಎಲ್ಲೆಲ್ಲು. ಧೀಮಂತರಿಗಿಲ್ಲ ನಂಬಿಕೆ ಯಾವುದರಲ್ಲೂ; ತುಂಬಿ
ತುಳುಕುವಾವೇಗವೆ ಅಲ್ಪರಿಗೆ ಎಲ್ಲೂ
 
ಆಗಲಿದೆ ಹಾಗಾದರೆ ಯಾವುದೊ ಮಹದರ್ಶನ; ಆಗಲಿದೆ
ಮರುಬರುಹ. ಮರುಬರುಹ! ಎಂದೆನೊ ಇಲ್ಲವೊ, ಅಗೋ
ಅಪಾರ ಬ್ರಹ್ಮಾತ್ಮದೊಳಗಿಂದ ನುಗ್ಗಿ ಕಾಣುವುದು ಕಾಣ್ಕೆ:
ಎಲ್ಲೊ, ಮರಳುಗಾಡಿನುಸುಕಲ್ಲಿ ಕೆರಳಿ, ಸುತ್ತ ತೂರಾಡುವ
ಮರಳಹಕ್ಕಿಗಳ ನೆರಳ ನಡುವೆ ಸಿಂಹದ ಮೈ, ಮನುಷ್ಯನ 
ತಲೆಯದು, ಏನೋs ಸುಡುಹೊತ್ತಿನಂತೆ ಖಾಲಿ ನೋಟ,
ಕೆಕ್ಕರುಗಣ್ಣು ತೊಡೆ ಸಡಿಲುತ ನಿದಾs, ಮಿಡುಕುವುದು.
ಕತ್ತಲಿಳಿವುದು ಮತ್ತೆ. ಆದರೀಗ ನನಗೆ ಗೊತ್ತು: ಇಪ್ಪತ್ತು ಶತ
ಮಾನಗಳ ಬಂಡೆಗಲ್ಲ ನಿದ್ರೆ, ಕೆಟ್ಟು ಹಳವಂಡವಾಗಿದೆ ತೊಟ್ಟಿಲ
ತೂಗಿನಿಂದ. ಯಾವ ರಾಕ್ಷಸ ಮೃಗವಿದು, ಅಂತು ಬಂತು ತನ್ನ
ಕಾಲ ಎಂದು, ನುಗುಳುತಿದೆ ಬೆಥ್ಲೆಹೆಮಿನತ್ತ ಈಗ ಹುಟ್ಟಲೆಂದು?

*******

ಹೆಚ್ಚಿನ ಓದು

ಅಂತರಜಾಲದಲ್ಲಿ ಸುಲಭವಾಗಿ ಸಿಕ್ಕುವ ಕೆಲವು ಲೇಖನಗಳಿಗೆ ಕೊಂಡಿಗಳಿವು. ಆದರೆ  ಯೇಟ್ಸ್ ಮತ್ತು ಆತನ ಈ ಕವಿತೆಯನ್ನು ಕುರಿತ ಗಂಭೀರವಾದ ತಿಳಿವಳಿಕೆಗಾಗಿ ಆತನ ಕಾವ್ಯವನ್ನು ಕುರಿತ ಪುಸ್ತಕಗಳನ್ನು ಓದುವುದೇ ಮೇಲು.

First They Came ಪದ್ಯ ಕುರಿತು:
https://en.wikipedia.org/wiki/First_they_came_
https://en.wikipedia.org/wiki/Martin_Niem%C3%B6ller
https://en.wikipedia.org/wiki/Holocaust_Memorial_Day_(UK)
https://www.hmd.org.uk/
https://en.wikipedia.org/wiki/Aryan_paragraph
http://martin-niemoeller-stiftung.de/martin-niemoeller/was-sagte-niemoeller-wirklich
http://marcuse.faculty.history.ucsb.edu/niem.htm
http://marcuse.faculty.history.ucsb.edu/publications/articles/Marcuse2016OriginReceptionNiemoellersQuotationOcr.pdf

The Second Coming ಕವಿತೆ ಕುರಿತು:
https://en.wikipedia.org/wiki/The_Second_Coming_(poem)
https://www.npr.org/2020/11/28/939561949/opinion-reading-william-butler-yeats-100-years-later
https://www.thoughtco.com/things-fall-apart-a-guide-2725492
https://scroll.in/article/947817/how-a-hundred-year-old-poem-speaks-to-the-central-conflict-of-the-2010s

********

ಪ್ರತಿಕ್ರಿಯಿಸಿ