ಡ್ಯುಯೆಟ್: ಅನೌಪಚಾರಿಕ ಕೆಲಸಗಾರರಿಗೂ ಸಾಮಾಜಿಕ ರಕ್ಷಣೆ ಸಿಗುವಂತಾಗಲಿ

ಕಳೆದ ಮೇ ೧೧ ರಂದು ನಗರಗಳಲ್ಲಿ ಉದ್ಯೋಗಕ್ಕಾಗಿ ಡ್ಯಯೆಟ್ ಯೋಜನೆ ಎಂಬ ವಿಷಯವಾಗಿ ಜೀನ್ ಡ್ರೀಜ಼್ ಅವರ ಪ್ರಸ್ತಾವನೆಯನ್ನು ಪ್ರಕಟಿಸಿದ್ದೆವು. ಅದಕ್ಕೆ ಪ್ರತಿಕ್ರಿಯೆಯಾಗಿ ಇಂದು ಡ್ಯುಯೆಟ್ ಪ್ರಸ್ತಾವನೆಗೆ ಅಜೀಮ್ ಪ್ರೇಂಜೀ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಅಮಿತ ಬಸೋಲೆ ಹಾಗೂ ಸೋಷಿಯಲ್ ಅಕೌಂಟಬಿಲಿಟಿ ಫೋರಂ ಫಾರ ಅಕ್ಷನ್ ಅಂಡ್ ರೀಸರ್ಚ್ ಸಂಸ್ಥೆಯ ರಕ್ಷಿತಾ ಸ್ವಾಮಿಯವರ ಅಭಿಪ್ರಾಯವನ್ನು ಅನುವಾದಿಸಿ ಪ್ರಕಟಿಸುತ್ತಿದ್ದೇವೆ . ಅನುವಾದಿಸಿ ಪ್ರಕಟಿಸಲು ಅನುಮತಿ ಕೊಟ್ಟ ಅವರಿಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ನಗರದಲ್ಲಿ ಉದ್ಯೋಗವನ್ನು ಸೃಷ್ಟಿಸುವುದು ತುಂಬಾ ತುರ್ತಾಗಿ ಆಗಬೇಕಾಗಿದೆ. ಆ ದಿಕ್ಕಿನಲ್ಲಿ ನೀತಿಗಳನ್ನು ರೂಪಿಸುವ ದಿಕ್ಕಿನಲ್ಲಿ ಒತ್ತಾಯ ತರುವುದು ಇಂದಿನ ತುರ್ತು. ಆ ನಿಟ್ಟಿನಲ್ಲಿ ವ್ಯಾಪಕ ಚರ್ಚೆ ನಡೆಯಬೇಕಾಗಿದೆ. ಇದು ಅ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ಎಂದು ಭಾವಿಸಿದ್ದೇವೆ. ಈ ಸರಣಿಯನ್ನು ಅನುವಾದಿಸಿ ಕೊಡುತ್ತಿರುವ ಟಿ. ಎಸ್ . ವೇಣುಗೋಪಾಲ್ ಅವರಿಗೆ ಕೃತಜ್ಞತೆಗಳು.

ಭಾರತ ಸರ್ಕಾರ ಕೋವಿಡ್-೧೯ರಿಂದ ಕೆಲಸ ಕಳೆದುಕೊಂಡ ಕೋಟ್ಯಾಂತರ ಕೆಲಸಗಾರರಿಗೆ ಕನಿಷ್ಠ ವರಮಾನ ಖಾತರಿಗಾಗಿ ನಗರ ಉದ್ಯೋಗ ಖಾತರಿ ಯೋಜನೆಯನ್ನು ಪ್ರಾರಂಭಿಸಲು ಚಿಂತಿಸುತ್ತಿದೆ ಅನ್ನುವ ವರದಿಗಳು ಕೆಲವು ವಾರಗಳ ಹಿಂದೆ ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದು ಒಂದು ಒಳ್ಳೆಯ ಸುದ್ಧಿ. ಪಟ್ಟಣದಲ್ಲಿನ ಅನೌಪಚಾರಿಕ ವಲಯದ ಕೆಲಸಗಾರರು ಕೋವಿಡ್‌ನಿಂದಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ಹಲವು ಸಮೀಕ್ಷೆಗಳು ವರದಿಗಳು ತಿಳಿಸಿವೆ. ಬೇರೆಯವರಿಗೆ ಹೋಲಿಸಿದರೆ, ನಗರದ ಅನೌಪಚಾರಿಕ ವಲಯದ ಕೆಲಸಗಾರರಿಗೆ ಸಾಮಾಜಿಕ ರಕ್ಷಣೆ ಬಹತೇಕ ಇಲ್ಲವೇ ಇಲ್ಲ. ಇದು ಲಾಕಡೌನ್ ಮತ್ತು ನಂತರದ ದಿನಗಳಲ್ಲಿ ತುಂಬಾ ಸ್ಪಷ್ಟವಾಗಿದೆ.

ಮನರೇಗಾ ಬಗ್ಗೆ ತುಂಬಾ ಚರ್ಚೆಯಾಗುತ್ತಿದೆ. ಅದೊಂದು ಉತ್ತಮ ಯೋಜನೆ ಎನ್ನಲಾಗಿದೆ. ಮನರೇಗಾವನ್ನು ಜಾರಿಗೆ ತರುವಾಗ ನಮಗೆ ಕ್ಷಾಮ-ಪರಿಹಾರ ಯೋಜನೆಗಳ ಹಾಗೂ ಮಹಾರಾಷ್ಟ್ರದ ಉದ್ಯೋಗ ಖಾತ್ರಿ ಯೋಜನೆಯ ಅನುಭವ ಇತ್ತು. ಆದರೆ ನಗರ ಉದ್ಯೋಗ ಖಾತ್ರಿಯ ಯೋಜನೆಯನ್ನು ರೂಪಿಸುವುದಕ್ಕೆ, ನಮಗೆ ಅಂತಹ ಪೂರ್ವ ನಿದರ್ಶನಗಳಿಲ್ಲ.

ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ. ಈಗಾಗಲೇ ಹಲವಾರು ರಾಜ್ಯ ಸರ್ಕಾರಗಳು ನಗರ ಪ್ರದೇಶಗಳಲ್ಲಿ ಉದ್ಯೋಗ ಯೋಜನೆಗಳನ್ನು ಪ್ರಾರಂಭಿಸಿವೆ. ಒರಿಸ್ಸಾದ ನಗರ ಕೂಲಿ ಯೋಜನೆ, ಹಿಮಾಚಲದ ಮುಖ್ಯಮಂತ್ರಿ ಶಹ್ರಿ ಆಜೀವಿಕಾ ಖಾತ್ರಿ ಯೋಜನೆ, ಇತ್ತೀಚೆಗಿನ ಜಾರ್ಖಂಡದ ಮುಖ್ಯಮಂತ್ರಿ ಶ್ರಮಿಕ ಯೋಜನೆ ಇತ್ಯಾದಿ ಹಲವು ಯೋಜನೆಗಳು ಪ್ರಾರಂಭವಾಗಿವೆ. ಇವೆಲ್ಲಾ ಇತ್ತೀಚೆಗಷ್ಟೇ ಪ್ರಾರಂಭವಾದ ಯೋಜನೆಗಳು, ಅವುಗಳ ಪರಿಣಾಮವನ್ನು ಕುರಿತು ಮಾತನಾಡುವುದು ಕಷ್ಟ. ಕೇರಳದ ಅಯ್ಯಂಕಲಿ ನಗರ ಉದ್ಯೋಗ ಖಾತ್ರಿ ಯೋಜನೆಯು ಹಲವು ವರ್ಷಗಳಿಂದ ಚಾಲ್ತಿಯಲ್ಲಿವೆ. ಅದರಿಂದ ನಾವೊಂದಿಷ್ಟು ಕಲಿಯಬಹುದು. ಆದರೆ ಎಲ್ಲಾ ರಾಜ್ಯಗಳು (ಹಿಮಾಚಲ ಪ್ರದೇಶ, ಜಾರ್ಖಂಡ್ ಹಾಗೂ ಕೇರಳದಲ್ಲಿಯಂತೆ) ತಮ್ಮ ಯೋಜನೆಗಳನ್ನು ಉದ್ಯೋಗ ಖಾತ್ರಿ ಯೋಜನೆಗಳು ಎಂದು ಕರೆದುಕೊಂಡಿವೆ. ಆದರೆ ಅವುಗಳಿಗೆ ಮೀಸಲಿಟ್ಟಿರುವ ಬಜೆಟ್ ತುಂಬಾ ಕಡಿಮೆ. ಅವು ನಿಜವಾಗಿ ಉದ್ಯೋಗ ಖಾತ್ರಿ ನೀಡುವುದಕ್ಕೆ ಸಾಧ್ಯವಿಲ್ಲ. ಒಂದು ರಾಷ್ಟ್ರೀಯ ನಗರ ಉದ್ಯೋಗ ಖಾತ್ರಿ ಯೋಜನೆಯನ್ನೂ ಕಳೆದ ವರ್ಷ ಸೂಚಿಸಲಾಗಿತ್ತು (ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯ).

ಜಾನ್ ಡ್ರೇಜ್ ಅವರು ವಿಕೇಂದ್ರೀಕೃತ ನಗರ ಉದ್ಯೋಗ ಹಾಗು ತರಬೇತಿಗೆ ಸಂಬಂಧಿಸಿದಂತೆ ಮುಂದಿಟ್ಟಿರುವ ಪ್ರಸ್ತಾಪ ಈ ಚರ್ಚೆಯನ್ನು ಹೆಚ್ಚು ಶ್ರೀಮಂತಗೊಳಿಸಿದೆ. ಈಗಿರುವಂತೆ ಜಾನ್ ಅವರ ಸಲಹೆ, ಲೋಕೋಪಯೋಗಿ ಕೆಲಸಗಳಿಗೆ ಸಂಬಂಧಿಸಿದ ಯೋಜನೆಯ ವಿಸ್ತೃತ ರೂಪ. ಅದರ ಒಂದು ಉದ್ದೇಶ, ಕೆಲಸ ಕಳೆದುಕೊಂಡಿರುವ ನಗರದ ದಿನಗೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದು ಮತ್ತು ಈ ಮೂಲಕ ಅವರ ವರಮಾನವನ್ನು ಹೆಚ್ಚಿಸುವುದು. ಇದರಿಂದ ಅವರ ವೈಯಕ್ತಿಕ ಕೂಲಿ ದರವೂ ಏರುವ ಸಾಧ್ಯತೆಯಿದೆ. ಅದರ ಎರಡನೇ ಉದ್ದೇಶ, ಸ್ಥಳೀಯ ಸಾರ್ವಜನಿಕ ಮೂಲಭೂತ ಸೌಕರ್ಯದ ಗುಣಮಟ್ಟವನ್ನು ಸುಧಾರಿಸುವುದು. ಡ್ಯುಯೆಟನ್ನು ಗ್ರಾಮೀಣ ಉದ್ಯೋಗ ಖಾತ್ರಿಯನ್ನು ಒದಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಜಾನ್ ಯೋಚಿಸುತ್ತಿದ್ದಾರೆ ಅನ್ನುವುದನ್ನೂ ಗಮನಿಸಬೇಕು.

ಡ್ಯುಯೆಟ್‌ನ ಶಕ್ತಿ ಇರುವುದೇ ಅದರ ಸರಳ ವಿನ್ಯಾಸದಲ್ಲಿ. ಅದನ್ನು ಜಾರಿಗೆ ತರುವುದಕ್ಕೆ ದೊಡ್ಡ ಮಟ್ಟದ ಹೆಚ್ಚುವರಿ ಆಡಳಿತಾತ್ಮಕ ವ್ಯವಸ್ಥೆಯೂ ಬೇಕಾಗಿಲ್ಲ. ಕನಿಷ್ಠ ಮಟ್ಟದ ವ್ಯವಸ್ಥೆ ಸಾಕು. ಕೇವಲ ನಗರದಲ್ಲಿರುವ ಸ್ಥಳೀಯ ಸಂಸ್ಥೆಗಳಿಂದ ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದಕ್ಕೆ ಆಗುವುದಿಲ್ಲ. ಹಾಗಾಗಿ ಈ ಯೋಜನೆಯಲ್ಲಿ ಅವುಗಳನ್ನಷ್ಟೇ ನೆಚ್ಚಿಕೊಂಡಿಲ್ಲ. ವಿಭಿನ್ನ ಸ್ಥಳೀಯ ನೇಮಕಾತಿ ಏಜೆನ್ಸಿಗಳನ್ನು ಬಳಸಿಕೊಳ್ಳುವುದಕ್ಕೆ ಈ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದು ಈ ಯೋಜನೆಯ ಮತ್ತೊಂದು ಮುಖ್ಯ ಲಕ್ಷಣ. ಕಾರ್ಮಿಕರ ಸಹಕಾರ ವ್ಯವಸ್ಥೆಯನ್ನು ನೇಮಕಾತಿ ಏಜೆನ್ಸಿ ಯಾಗಿ ಬಳಸಿಕೊಳ್ಳಬಹುದು ಅನ್ನುವುದು ಕೂಡ ತುಂಬಾ ಒಳ್ಳೆಯ ಸಲಹೆ. ನಗರ ಪ್ರದೇಶಗಳಲ್ಲಿ ಕಾರ್ಮಿಕರ ಕಾಂಟ್ರಕ್ಟರುಗಳ ಪ್ರಾಬಲ್ಯವನ್ನು ಕಡಿಮೆ ಮಾಡುವುದರಲ್ಲಿ ಇದು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಕೆಲಸಗಾರರ ಸಮುದಾಯವನ್ನು ಸಂಘಟಿಸುವ ಮೂಲಕ, ಕೆಲಸಗಾರರನ್ನು ನೊಂದಾಯಿಸುವುದಕ್ಕೆ ಹಾಗೂ ಅವರಿಗೆ ಕೆಲಸ ಹುಡುಕುವುದಕ್ಕೆ ನೆರವಾಗುತ್ತದೆ. ಇದರಿಂದ ಅವರ ಸಮಷ್ಠಿ ಸಂಘಟನೆಗೆ ಮತ್ತೊಂದು ಆಯಾಮವೂ ಸೇರಿಕೊಳ್ಳುತ್ತದೆ. ಈ ಯೋಜನೆಯಲ್ಲಿ ಕೆಲಸಗಾರರಿಗೆ ಚೌಕಾಸಿ ಮಾಡುವ ಸಾಮರ್ಥ್ಯ ಹೆಚ್ಚುತ್ತದೆ.
ಈ ಯೋಜನೆಯ ಮುಂದುವರಿಕೆಯಾಗಿ ಕೆಲವು ಅಂಶಗಳನ್ನು ಗಮನಿಸುವುದು ಒಳ್ಳೆಯದು:

ಮೊದಲನೆಯದಾಗಿ, ಕೂಲಿಯೇತರ ಖರ್ಚನ್ನು ಗಮನಿಸಬೇಕು. ಡ್ಯುಯೆಟ್ ಕೂಲಿಯನ್ನು ನೀಡುವುದಕ್ಕಾಗಿ ಉದ್ಯೋಗ ಓಚರುಗಳನ್ನು ನೀಡುತ್ತದೆ. ಆದರೆ ಸ್ಥಳೀಯ ಸಾರ್ವಜನಿಕ ಸಂಸ್ಥೆಗಳಿಗೆ ಅವಶ್ಯಕವಾದ ಇತರ ಸರಕುಗಳನ್ನು ಕೊಳ್ಳುವುದಕ್ಕೆ ಹಾಗೂ ಬೇರೆ ಖರ್ಚನ್ನು ಭರಿಸುವುದಕ್ಕೆ ಸಂಪನ್ಮೂಲದ ಕೊರತೆಯುಂಟಾಗಬಹುದು. ಡ್ಯುಯೆಟ್‌ನಲ್ಲಿ ಕೂಲಿಯೇತರ ಖರ್ಚನ್ನು ಭರಿಸಲು ನಿರ್ದಿಷ್ಟ ಬಜೆಟ್ಟನ್ನು ಸೂಚಿಸಬೇಕು. ಇಲ್ಲದೇ ಹೋದರೆ ಹಣಕಾಸಿನ ಮಿತಿಯಿಂದ ಯೋಜನೆಯನ್ನು ಪ್ರಾರಂಭಿಸುವುದಕ್ಕೇ ಕಷ್ಟವಾಗಬಹುದು.

ಎರಡನೆಯದಾಗಿ ಗ್ರಾಮೀಣ-ನಗರದ ವಲಸೆಯೂ ಸಮಸ್ಯೆಯನ್ನು ಉಂಟುಮಾಡಬಹುದು. ಅದನ್ನೂ ಗಮನಿಸಬೇಕು. ನಗರದಲ್ಲಿ ವಾಸವಿರುವ ಎಲ್ಲಾ ಕೆಲಸಗಾರರಿಗೂ ಡ್ಯುಯೆಟ್ ಹಾಗೂ ನಗರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾಗವಹಿಸುವ ಅವಕಾಶವಿರಬೇಕು. ಜನರ ಕಲ್ಯಾಣದ ದೃಷ್ಟಿಯಿಂದ ಇದು ಅವಶ್ಯಕ. ಡ್ಯುಯೆಟ್‌ನಿಂದ ಅನುಕೂಲ ಪಡೆದುಕೊಳ್ಳುವ ನಗರದ ಸಂಕಷ್ಟದಲ್ಲಿರುವ ಬಹುಪಾಲು ಜನ ಬಹುಶಃ ವಲಸೆ ಕಾರ್ಮಿಕರಾಗಿರುತ್ತಾರೆ. ಅವರಿಗೆ ಒಂದು ನಿರ್ದಿಷ್ಟ ವಿಳಾಸ ಇರುವುದಿಲ್ಲ. ವಿಳಾಸದ ಆಧಾರ ಒದಗಿಸುವುದು ಕಡ್ಡಾಯವಾಗಬಾರದು. ಬದಲು ಅದಕ್ಕಾಗಿ ಸಲ್ಲಿಸಬಹುದಾದ ದಾಖಲೆಗಳ ಒಂದು ವಿಸ್ತೃತ ಪಟ್ಟಿಯನ್ನು ತಯಾರಿಸಬಹುದು. ರಾಜ್ಯಮಟ್ಟದ ಗೃಹ ನಿರ್ಮಾಣ ಯೋಜನೆಗೆ ಮಾಡಿದಂತೆ ಇಲ್ಲೂ ಅಂತಹ ಒಂದು ಪಟ್ಟಿಯನ್ನು ತಯಾರಿಸಬಹುದು ಮತ್ತು ಮನರೇಗಾ ಉದ್ಯೋಗ ಕಾರ್ಡ್‌ದಾರರನ್ನು ಈ ಯೋಜನೆಯಿಂದ ಹೊರಗೆ ಇಡಬಾರದು. ಕೂಲಿಯನ್ನು ನಿರ್ಧರಿಸುವ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಬೇಕು. ಕೂಲಿಯ ಪ್ರಮಾಣ ವಲಸೆಯ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಬಹುದು. ಅದನ್ನು ತಪ್ಪಿಸುವ ದೃಷ್ಟಿಯಿಂದ ಇಂತಹ ಅಧ್ಯಯನ ಅವಶ್ಯಕ.

ಮೂರನೆಯದಾಗಿ, ಈ ಯೋಜನೆಯಡಿಯಲ್ಲಿ ಕೆಲಸಗಾರರಿಗೆ ಲಿಂಗಬೇಧ ಮಾಡದೆ ಸಮಾನ ಕೂಲಿ ನೀಡಬೇಕು, ಕೆಲಸದ ಸ್ಥಳದಲ್ಲಿ ಕಾನೂನುಬದ್ಧ ಸೌಕರ್ಯಗಳನ್ನು ಒದಗಿಸಿಕೊಡಬೇಕು, ವಿಮೆ ಮತ್ತು ಅಪಘಾತ ಹಾಗೂ ಗಾಯಗಳಿಗೆ ಪರಿಹಾರ ಸಿಗಬೇಕು, ಕೂಲಿ ಪಾವತಿಯಲ್ಲಿ ತಡವಾದಾಗಲೂ ಪರಿಹಾರ ಸಿಗಬೇಕು. ಈ ರೀತಿಯ ಕನಿಷ್ಠ ಹಕ್ಕುಗಳು ಕೆಲಸಗಾರರಿಗೆ ದೊರಕಬೇಕು. ಯೋಜನೆಯ ಜಾರಿಗೆ ಸಂಬಂಧಿಸಿದ ಮತ್ತು ಸಾಮಾಜಿಕ ಪರಿಶೋಧನೆಗೆ ಸಂಬಂಧಿಸಿದ ನಿಯಮಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕು.

ಅಂತಿಮವಾಗಿ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಪಾತ್ರದ ಬಗ್ಗೆಯೂ ಸ್ಪಷ್ಟತೆ ಇರಬೇಕು. ಸಾರ್ವಜನಿಕ ಸಂಸ್ಥೆಗಳ ದುರಸ್ತಿ ಹಾಗೂ ಉಸ್ತುವಾರಿ ರಾಜ್ಯಗಳ ಪಿಡಬ್ಲ್ಯುಡಿ ಆಡಳಿತದ ವ್ಯಾಪ್ತಿಗೆ ಬರುತ್ತದೆ. ಅವಶ್ಯಕತೆ ಬಂದಾಗ ಪಿಡಬ್ಲ್ಯುಡಿ ಸೃಷ್ಟಿಸುವುದಕ್ಕಿಂತ ಹೆಚ್ಚಿನ ಉದ್ಯೋಗಗಳನ್ನು ಡ್ಯುಯೆಟ್ ಮೂಲಕ ಸೃಷ್ಟಿಸುವುದಕ್ಕೆ ಸಾಧ್ಯವೇ? ಇದನ್ನು ಹಲವು ರೀತಿಯಲ್ಲಿ ಸಾಧಿಸಬಹುದು. ಮೊದಲನೆಯದಾಗಿ ಕೆಲಸವನ್ನು ಹಂಚುವುದರಲ್ಲಿ ಕೂಲಿ ಕಾಂಟ್ರಕ್ಟರುಗಳಿಗೆ ಇರುವ ಏಕಸ್ವಾಮ್ಯವನ್ನು ಕಮ್ಮಿ ಮಾಡಬೇಕು. ಎರಡನೆಯದಾಗಿ ಸಾರ್ವಜನಿಕ ಸಂಸ್ಥೆಗಳು ಮಾಡಬಹುದಾದ ಕೆಲಸಗಳ ಸ್ವರೂಪವನ್ನು ವಿಸ್ತರಿಸಬೇಕು. ಅದನ್ನು ನಿರ್ಮಾಣ ಹಾಗೂ ಶುಚಿಗೊಳಿಸುವ ಕೆಲಸಗಳಿಗೆ ಸೀಮಿತಗೊಳಿಸಿಕೊಳ್ಳದೆ ಬೇರೆ ಕೆಲಸಗಳನ್ನೂ ಯೋಜಿಸಬೇಕು. ಸಂಸ್ಥೆಯಲ್ಲಿನ ನಿವಾಸಿಗಳ ಯೋಗಕ್ಷೇಮವನ್ನು ನೋಡಿಕೊಳ್ಳುವುದು, ಸಂಸ್ಥೆಯ ಒಳಗೆ ಬೇಕಾದ ಕೆಲಸಗಳ ಸಮೀಕ್ಷೆ ಹಾಗೂ ಮೇಲ್ವಿಚಾರಣೆಯನ್ನು ಮಾಡುವುದು, ಸಂಸ್ಥೆಯ ಪ್ರಮುಖ ಕೆಲಸಗಾರರಿಗೆ ನೆರವಾಗುವುದು, ಕಲಾತ್ಮಕ ಹಾಗೂ ಮೌಲ್ಯ ಸೃಷ್ಟಿಸುವಂತಹ ಕೆಲಸಗಳಿಗೆ ಪ್ರೋತ್ಸಾಹ ನೀಡುವುದು, ಇತ್ಯಾದಿ.

ಕೊನೆಯದಾಗಿ, ಪ್ರತಿ ಸಂಸ್ಥೆಯೊಳಗೆ ಕೆಲಸದ ಕಾಂಟ್ರಾಕ್ಟ್ ಹೆಚ್ಚು ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು. ಆಗ ಇದು ಪಿಡಬ್ಲ್ಯುಡಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸಮಾಡುವುದಕ್ಕೆ ಸಾಧ್ಯವಾಗುತ್ತದೆ. ಜೊತೆಗೆ ವಿಶ್ವಾಸವೂ ಹೆಚ್ಚುತ್ತದೆ. ಪಿಡಬ್ಲ್ಯುಡಿಯಲ್ಲಿ ಇದು ಅಷ್ಟೊಂದು ಸಮರ್ಪಕವಾಗಿಲ್ಲ.

ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಕೇವಲ ಒಂದು ಲೋಕೋಪಯೋಗಿ ಇಲಾಖೆಯ ಕಾರ್ಯಕ್ರಮವನ್ನಾಗಿ ನೋಡುವುದಕ್ಕಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಹೆಚ್ಚು ವಿಸ್ತಾರವಾಗಿ ನೋಡಬೇಕು. ಆಗ ಅದು ಹೆಚ್ಚು ಸಮಗ್ರವಾದ ಮಾರ್ಗವಾಗುತ್ತದೆ. ಆಗ ಕಾಯ್ದೆಯು ಲೋಕೋಪಯೋಗಿ ಕೆಲಸಗಳ ಮೂಲಕ ಉದ್ಯೋಗವನ್ನು ಸೃಷ್ಟಿಸುವುದು ಮಾತ್ರವಲ್ಲದೆ ಸ್ವ ಉದ್ಯೋಗಿಗಳು/ಅನೌಪಚಾರಿಕ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ಸಾಮಾಜಿಕ ರಕ್ಷಣೆಯನ್ನು ನೀಡುತ್ತದೆ. ಈ ಪರಿಕಲ್ಪನೆಯನ್ನು ಕಾರ್ಮಿಕ ಸಂಘಟನೆಗಳು ಹಾಗೂ ಕೆಲಸಗಾರರ ಸಮಷ್ಠಿಗಳು ಬಲವಾಗಿ ಪ್ರತಿಪಾದಿಸುತ್ತವೆ. ಅದರಲ್ಲೂ ವಿಶೇಷವಾಗಿ ಭಾರತದ ಪಾರ್ಲಿಮೆಂಟ್ ಸೆಪ್ಟೆಂಬರ್ ೨೦೨೦ರಲ್ಲಿ ಜಾರಿಗೆ ತಂದ ಕಾರ್ಮಿಕ ಕಾಯ್ದೆಯ ಹಿನ್ನಲೆಯಲ್ಲಿ ಇದು ಮುಖ್ಯವಾಗುತ್ತದೆ. ವಿಭಿನ್ನ ಪಾಲುದಾರರೊಂದಿಗೆ ಚರ್ಚಿಸಿ, ಅದರ ಆಧಾರದ ಮೇಲೆ ಒಂದು ಪತ್ರವನ್ನು ಭಾರತ ಸರ್ಕಾರಕ್ಕೆ ಕಳುಹಿಸಿದ್ದೇವೆ. ಅದರಲ್ಲಿ ಈ ಎಲ್ಲಾ ಶಿಫಾರಸ್ಸುಗಳನ್ನು ಪಟ್ಟಿ ಮಾಡಲಾಗಿದೆ.

ಪ್ರತಿಯೊಂದು ಮಾರ್ಗದ ಒಳಿತು ಕೆಡಕುಗಳನ್ನು ಅರಿತುಕೊಂಡು, ಎಲ್ಲರನ್ನೂ ಒಳಗೊಂಡು, ಎಲ್ಲರ ಪಾಲ್ಗೊಳ್ಳುವಿಕೆ ಇರುವ ಸಾರ್ವಜನಿಕ ಸಂವಾದ ನಡೆಯಬೇಕು. ಅಂತಹ ಸಂವಾದ ನಡೆದಾಗ ನಗರದ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ತುಂಬಾ ಅವಶ್ಯಕವಾದ ಮಧ್ಯಪ್ರವೇಶಕ್ಕೆ ಅನುಕೂಲವಾಗುತ್ತದೆ. ಅನೌಪಚಾರಿಕ ಕಾರ್ಮಿಕರಿಗೆ ನಗರ ಪ್ರದೇಶಗಳಲ್ಲಿ ಉದ್ಯೋಗಕ್ಕೆ ಸಂಬಂಧಪಟ್ಟು ಇರುವ ಕಾಯ್ದೆಗಳು ಮತ್ತು ಕಾಯ್ದೆಗಳನ್ನು ಕುರಿತ ಚರ್ಚೆಯನ್ನು ಡ್ಯುಯೆಟ್ ಮುಖ್ಯವಾಹಿನಿಗೆ ತಂದಿದೆ. ಈಗ ಇದು ಸಕಾಲಿಕ ಕೂಡ.

Further Reading
• Abraham, R et al. (2020), ‘COVID-19 Livelihoods Survey’, Azim Premji University, June 2020.
• Basole, A et al. (2019), ‘State of Working India 2019’, Azim Premji University, April 2019.

ಅಮಿತ ಬಸೋಲೆ | ಅಜೀಮ್ ಪ್ರೇಮ್‌ಜೀ ವಿಶ್ವವಿದ್ಯಾನಿಲಯ
ರಕ್ಷಿತಾ ಸ್ವಾಮಿ | ಸೋಷಿಯಲ್ ಅಕೌಂಟಬಿಲಿಟಿ ಫೋರಂ ಫಾರ ಅಕ್ಷನ್ ಅಂಡ್ ರೀಸರ್ಚ್
ಅನುವಾದ : ಟಿ. ಎಸ್ . ವೇಣುಗೋಪಾಲ್

ಪ್ರತಿಕ್ರಿಯಿಸಿ