ತುಳು ಚಳುವಳಿಯ ಹಿನ್ನಲೆ – ೨ : ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಮತ್ತು ಸಾಂವಿಧಾನಿಕ ಮಾನ್ಯತೆಗಾಗಿ ತುಳುವಿನ ಹೋರಾಟ

ತುಳುವಿಗೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು ಎಂಬ ಆಗ್ರಹ ತುಳುನಾಡಿನಲ್ಲಿ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಕನ್ನಡ ಮತ್ತು ತುಳು ಭಾಷಿಕರ ನಡುವೆ ದ್ವೇಷ ಪೂರಿತ ಸಂಬಂಧ ಹುಟ್ಟುತ್ತಿರುವ ಆತಂಕಕಾರಿ ಬೆಳವಣಿಗೆಗೆ ನಾವಿಂದು ಸಾಕ್ಷಿಯಾಗುತ್ತಿದ್ದೇವೆ, ಸಾಮಾಜಿಕ ಜಾಲತಾಣಗಳಲ್ಲಿ ಭಾಷೆ ಮತ್ತು ಸಂಸ್ಕೃತಿಗಳೆಂಬ ಗಂಭೀರ ವಿಚಾರಗಳು ಪರಸ್ಪರ ಕಿತ್ತಾಡಿಕೊಳ್ಳಲು ಬಳಕೆಯಾಗುತ್ತಿವೆ, ಭಾಷೆಯ ರಾಜಕಾರಣ ಹೇಗೆ ಭಾರತೀಯ ರಾಜಕಾರಣವನ್ನು ಪ್ರಭಾವಿಸುತ್ತವೆ ಎಂಬುದು ನಮಗೆಲ್ಲಾ ತಿಳಿದಿದೆ. ಹೊಸ ಮಾಧ್ಯಮ ತಂತ್ರಜ್ಞಾನಗಳ ಕಾಲದಲ್ಲಿ ಸಂದರ್ಭದಲ್ಲಿ ಭಿನ್ನ ಸ್ವರೂಪವನ್ನು ಪಡೆದುಕೊಂಡು ಇನ್ನಷ್ಟೂ ವಿಷಪೂರಿತವಾಗುತ್ತದೆ. ಭಾಷಿಕ ರಾಜಕಾರಣವು ದ್ವೇಷದ ರಾಜಕಾರಣವಾಗುತ್ತದೆಯೇ ಹೊರತು ಭಾಷೆ ಬೌದ್ದಿಕ, ಸಾಹಿತ್ಯಿಕ ಮತ್ತು ಚಾರಿತ್ರಿಕ ಹಿರಿಮೆಯನ್ನು ಪರಸ್ಪರ ಅರ್ಥಮಾಡಿಕೊಳ್ಳುವ ಚರ್ಚೆಯಾಗುತ್ತಿಲ್ಲ. ಈ ಸಂದರ್ಭದಲ್ಲಿ ತುಳು ಚಳುವಳಿ ಮತ್ತು ಕನ್ನಡ-ತುಳುವಿನ ಸಂಬಂಧವನ್ನು ಅವಲೋಕಿಸುವ ಪ್ರಯತ್ನವನ್ನು ಚರಣ್ ಐವರ್ನಾಡ್ ಬರೆಯುವ ಈ ಸರಣಿ ಮಾಡುತ್ತದೆ.
ಕರಾವಳಿಯ ಭಾರತೀಯ ರಾಜಕಾರಣದ ಅನೇಕ ಸ್ಥಿತ್ಯಂತರಗಳಿಗೆ ತನ್ನನ್ನು ಸ್ವತಂತ್ರ ಪೂರ್ವದಿಂದಲೇ ತೆರೆದುಕೊಂಡಿದೆ. ಕೋಮು ರಾಜಕಾರಣ ಅವಿಭಜಿತ ದಕ್ಷಿಣ ಕನ್ನಡವನ್ನು ತನ್ನ ಪ್ರಯೋಗಶಾಲೆಯಾಗಿ ಮಾಡಿಕೊಂಡಿದೆ. ಎರಡು ಸಾವಿರ ವರ್ಷಗಳಿಗಿಂತಲೂ ಹಿಂದೆಯಿಂದ ಪ್ರಪಂಚದ ಅನೇಕ ದೇಶಗಳ ಜೊತೆಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದ ತುಳುನಾಡು ಆಧುನಿಕತೆಗೆ ಬೇಗ ತೆರೆದುಕೊಂಡಿತು. ಭಿನ್ನ ಭಾಷಿಕ ಸಮುದಾಯಗಳ ನಿರಂತರ ವಲಸೆಗಳಿಂದ ಇಲ್ಲಿಯ ಸಂಸ್ಕೃತಿ ರಚನೆಯಾಗಿರುವುದರಿಂದ ತುಳುನಾಡು ಎಂದು ಕರೆಯಲ್ಪಡುವ ಈ ಭೂಭಾಗ ಕೇವಲ ತುಳು ಭಾಷಿಕರನ್ನು ಮಾತ್ರ ಹೊಂದಿಲ್ಲ. ಕನ್ನಡದ ಅನೇಕ ಪ್ರಬೇಧಗಳನ್ನು ಮಾತನಾಡುವ ಜನರಿದ್ದಾರೆ, ದೇಶದ ಇತರ ಭಾಗಗಳಲ್ಲಿ ಮಾತನಾಡುವ ಕೊಂಕಣಿ, ಬ್ಯಾರಿ, ಉರ್ದು ಮೊದಲಾದ ಭಾಷೆಗಳು ಮಾತ್ರವಲ್ಲ ತುಳುನಾಡಿನಲ್ಲಿಯೇ ಹುಟ್ಟಿ ಅಪರಿಚಿತವಾಗಿಯೇ ಉಳಿದಿರುವ ಕೊರಗ ಭಾಷೆಯೂ ತುಳುನಾಡಿನದ್ದೇ! ಒಬ್ಬ ತುಳುವನಿಗೆ ತನ್ನ ತಾಯಿನುಡಿಯಾದ ತುಳು ಮಾತ್ರವಲ್ಲದೆ ಬ್ಯಾರಿ, ಕೊಂಕಣಿ, ಮಲಯಾಳಂ ಮತ್ತಿತರ ಭಾಷೆಗಳನ್ನೂ ಮಾತನಾಡಬಲ್ಲರು. ಇದಕ್ಕೆ ಕಾರಣ ದೇಶದ ಕಡಲು ವ್ಯಾಪಾರಿ ಕೇಂದ್ರಗಳಲ್ಲಿ ಮುಖ್ಯವಾಗಿರುವ ತುಳುನಾಡಿಗೆ   ಕಾರಣಗಳನ್ನುಇಟ್ಟುಕೊಂಡು ಬಂದು ನೆಲೆಸಿದ ಸಮುದಾಯಗಳು.
ಕಳೆದ  ಕೆಲವು ದಿನಗಳ ಹಿಂದೆ ತುಳುವಿಗೆ ರಾಜ್ಯ ಭಾಷೆಯ ಸ್ಥಾನಮಾನ ನೀಡಬೇಕು ಮತ್ತು ಸಂವಿಧಾನದ ೮ನೇ ಪರಿಚ್ಚೇದಕ್ಕೆ ಸೇರಿಸಬೇಕು ಎಂಬ ಟ್ವಿಟ್ಟರ್‌ ಅಭಿಯಾನ ನಡೆಯಿತು. ಫೇಸ್ಬುಕ್‌ ತುಂಬಾ ಇದರ ಬರಹಗಳು ಹರಿದಾಡಿದವು.  ಇಂತಹ ಅಭಿಯಾನಗಳು ಆಗಾಗ ಹುಟ್ಟಿ ಕೆಲವೇ ದಿನಗಳಲ್ಲಿ ಮುಗಿದು ಹೋಗುತ್ತಿವೆ. ಈ ಅಭಿಯಾನದ ಹಿಂದೆ ಇದ್ದ ಒಂದು ತಕ್ಷಣದ ಕಾರಣವೆಂದರೆ ತುಳು ಧ್ವಜಕ್ಕೆ ಕನ್ನಡಿಗನೊಬ್ಬ ಅವಮಾನ ಮಾಡಿದ ಎಂಬ ಸಂಗತಿ. ಕಾರಣ ಏನೇ ಇದ್ದರೂ ಈ ವಿಚಾರ ಭಾಷೆಯೊಂದು ರಾಜಕೀಯವಾಗಿ ಬಲಗೊಳ್ಳಲು ಸಾಂವಿಧಾನಿಕ ಮಾನ್ಯತೆ ಕೇಳುತ್ತಾ ತನ್ನ ಉಳಿವಿಗಾಗಿ ದನಿ ಎತ್ತುತ್ತಿರುವ ಕಾರಣಕ್ಕೆ ಚರ್ಚೆ ಅಗತ್ಯ.
ಪ್ರಭುತ್ವ ಕೇಂದ್ರಿತ ಬರಹಗಳು ಸಮಾಜದ ಮುಖ್ಯವಾಹಿನಿಯ ವಿಚಾರಗಳಿಗಷ್ಟೇ ಸೀಮಿತಗೊಳ್ಳುತ್ತವೆ.  ಕೆಳಸ್ತರದ ಜನವರ್ಗ ಮತ್ತು ಸ್ಥಳೀಯ ವಿಚಾರಗಳು ನಗಣ್ಯವಾಗುತ್ತವೆ. ಹೀಗಾಗಿ ದೇಶದ ಚರಿತ್ರೆಯ ಮತ್ತು ಸಂಸ್ಕೃತಿಯ ಚರ್ಚೆಗಳಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಮುಂದುವರಿದ ಸಮುದಾಯಗಳ ಸಂಸ್ಕೃತಿಗಳ ಮೂಲಕ ದೇಶದ ಸಂಸ್ಕೃತಿಯನ್ನು ನಿರ್ವಚಿಸಲಾಗುತ್ತದೆ. ಭಾರತೀಯ ಸಂಸ್ಕೃತಿ ಎಂಬ ಚರ್ಚೆಯನ್ನು  ವೈದಿಕ ಸಂಸ್ಕೃತಿಯ ಮೂಲಕ ಆರಂಭಿಸುವುದು ಇದೇ ಕಾರಣದಿಂದ. ಇದು ಸಹಜವಾಗಿಯೇ  ವಸಾಹತುಶಾಹಿ ಮತ್ತು ರಾಷ್ಟ್ರೀಯತೆ ಎಂಬೆರಡು ಪರಿಕಲ್ಪನೆಗಳು ಇದಕ್ಕೆ ಪೂರಕವಾಗಿದ್ದ ಕಾರಣದಿಂದ ಭಾರತದಂತಹ ಬಹುಸಾಂಸ್ಕೃತಿಕ ರಾಷ್ಟ್ರದಲ್ಲೂ ಸ್ಥಳೀಯ ಸಮುದಾಯಗಳು,   ಭಾಷೆಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಾಗುತ್ತದೆ.
ಅಸ್ಮಿತೆಯ ಪ್ರಶ್ನೆ ಇಂದು ಕೇವಲ ಶೈಕ್ಷಣಿಕ ವಲಯದಲ್ಲಿ ಮಾತ್ರವಲ್ಲ ಜನಸಮುದಾಯಗಳಲ್ಲಿ ಕೂಡ ಈ ಕುರಿತು ಚಿಂತನೆ ಹುಟ್ಟಿದೆ. ಈ ಕಾರಣಕ್ಕೆ ಅನೇಕ ಸಮುದಾಯಗಳು ತಮ್ಮ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿವೆ. ತಮ್ಮ ಚರಿತ್ರೆಯನ್ನು ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸುತ್ತಿವೆ. ಈ ಮೂಲಕ ತಮ್ಮ ಅಸ್ಮಿತೆಯನ್ನು ಗಟ್ಟಿಗೊಳಿಸುವ ಯತ್ನ ನಡೆಸುತ್ತಿವೆ. ತಮ್ಮ ಹಿರಿಯರ ಬದುಕಿನ ಬೇರುಗಳನ್ನು ಹುಡುಕುತ್ತಲೇ ವರ್ತಮಾನದಲ್ಲಿ ತಮ್ಮ ಅಸ್ತಿತ್ವವನ್ನು ಬಹುಸಮುದಯಗಳ ಮಧ್ಯೆ ಸ್ಥಾಪಿಸಲು ಹೊರಟಿವೆ. ಆದರೆ ಈ ಐಡೆಂಟಿಟಿಯ ಸಮಸ್ಯೆ ಕೇವಲ ಸಮುದಾಯಗಳಿಗೆ ಮಾತ್ರ ನಿಲ್ಲದೆ ಭಾಷೆ ಮತ್ತು ಪ್ರದೇಶಗಳ ಅಸ್ಮಿತೆಗೂ ವ್ಯಾಪಿಸಿದೆ. ಭಾಷೆ, ಪ್ರದೇಶ, ಮತ, ಲಿಂಗ, ಜಾತಿ – ಇವೆಲ್ಲವೂ ತಮ್ಮ ಇರುವಿಕೆಯನ್ನು ಗಟ್ಟಿಗೊಳಿಸುತ್ತವೆ. ಇದರ ಮುಂದುವರಿದ ಭಾಗವಾಗಿ ಪ್ರತ್ಯೇಕ ರಾಜ್ಯ, ಭಾಷೆಗೆ ಸಾಂವಿಧಾನಿಕ ಮಾನ್ಯತೆ ಮೊದಲಾದ ಹೋರಾಟಗಳು ಹುಟ್ಟಿಕೊಂಡಿರುವುದು.
ವಸಾಹತು ಆಡಳಿತ ಭಾರತದಿಂದ ಹೋಗುತ್ತಲೇ ಇದು ಹೆಚ್ಚಾಗಿದೆ. ಇದಕ್ಕೆ ಕಾರಣ ವಸಾಹತು ಆಡಳಿತ ತಂದಿರುವ ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ತಮ್ಮ ಪಾಲು ಏನು ಎಂಬ ಪ್ರಶ್ನೆ. ಹಿಂದಿಯ ಎದುರು ಕನ್ನಡ ಹೊರಡುವ ಹಾಗೆ ಈಗ ಕನ್ನಡ ಪ್ರಧಾನ ಭಾಷೆಯಾಗಿರುವ ಕರ್ನಾಟಕದ ಸ್ವತಂತ್ರ ಭಾಷೆ ತುಳು ತನ್ನ ಸ್ಥಾನ ಏನು ಎಂದು ಕೇಳುತ್ತದೆ. ಒಂದು ವೇಳೆ ತುಳುವಿಗೆ ದಕ್ಕಬೇಕಾದ ಸ್ಥಾನಮಾನ ಸಿಕ್ಕಿದ ಮೇಲೆ ತುಳುವಿನ ಮಧ್ಯೆಯೇ ಹುಟ್ಟಿ ಬೆಳೆದ ಬ್ಯಾರಿ, ಕೊರಗ ಭಾಷೆಗಳ ಸ್ಥಾನಮಾನ ಏನು ಎಂಬ ಚರ್ಚೆ ಆರಂಭವಾಗುತ್ತದೆ.
ದೇಶಕ್ಕೆ ಸ್ವಾತಂತ್ರ ಬಂದು ಭಾಷಾವಾರು ರಾಜ್ಯಗಳ ರಚನೆ ಆದ ಮೇಲೂ ಈ ಹೋರಾಟ ನಿಂತಿಲ್ಲ. ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತುಳು, ಕೊಡವ ಸೇರಿದಂತೆ ಇನ್ನೂ ಅನೇಕ ಭಾಷೆಗಳು ಹೋರಾಟ ನಡೆಸುತ್ತಿವೆ. ಈ ಹೋರಾಟದಲ್ಲಿ ರಾಷ್ಟ್ರೀಯತೆಯ ಮೂಲ ಲಕ್ಷಣವಾದ ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎಂಬ ಏಕರೂಪಿ ಸಂಸ್ಕೃತಿಯ ಹೇರಿಕೆಗೆ ಸವಾಲಾಗಿ ಪರಿಣಮಿಸುವುದು ಮಾತ್ರವಲ್ಲ ಬಹು ಸಾಂಸ್ಕೃತಿಕ ನೆಲೆಗಳನ್ನು ಜೀವಂತವಾಗಿಡುತ್ತವೆ.
ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ದೇಶ ಹೊರಳಿದ ಮೇಲೆ ಈ ಹೋರಾಟಗಳು ಇನ್ನಷ್ಟೂ ಹೆಚ್ಚಾಗಿವೆ. ತುಳುನಾಡಿನ ಸಂದರ್ಭದಲ್ಲೂ ರಾಜಪ್ರಭುತ್ವ ಇದ್ದಾಗ ತುಳುವ ರಾಜವಂಶಗಳು ತಮ್ಮ ಪ್ರತ್ಯೇಕತೆ ಹೋರಾಡಿವೆ. ಪ್ರತ್ಯೇಕವಾಗಿ ಸ್ವತಂತ್ರವಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸಿವೆ. ಇದನ್ನು ಹತ್ತಿಕ್ಕುವ ಯತ್ನವನ್ನು ಇವರನ್ನು ಸಾಮಂತ ರಾಜರನ್ನಾಗಿ ಇಟ್ಟುಕೊಂಡು ಆಳಿದ ಮೇಲಿನ ದೊರೆಗಳು ಮಾಡಿದ್ದಾರೆ.
ಸ್ವಾತಂತ್ರ ಬಂದ ನಂತರ ಭಾಷಾವಾರು ರಾಜ್ಯಗಳು ರಚನೆಯಾದ ಮೇಲೂ ಯಾವ ಭಾಷೆಗಳನ್ನು ಪ್ರಧಾನ ಭಾಷೆಗಳನ್ನಾಗಿ ಇಟ್ಟುಕೊಳ್ಳಲಾಗಿತ್ತೋ ಅವು ಮತ್ತೆ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿವೆ. ಭಾಷೆಯ ಆಧಾರದ ಮೇಲೆ ಒಮ್ಮೆ ಪ್ರತ್ಯೇಕಗೊಂಡು ಗಣತಂತ್ರದಲ್ಲಿ ಏಕೀಕರಣಗೊಳ್ಳುವುದು ಒಂದು ಪ್ರಕ್ರಿಯೆ ಮುಗಿದ ಮೇಲೆ ಮತ್ತೆ ಪ್ರತ್ಯೇಕಗೊಳ್ಳಲು ಯತ್ನಿಸುವುದು ಇನ್ನೊಂದು ಪ್ರಕ್ರಿಯೆ. ಇದಕ್ಕೆ ಕಾರಣ ಭಾಷೆಗಳು ಮತ್ತು ಸ್ಥಳೀಯತೆಗೆ ಕಾಲಕಾಲಕ್ಕೆ ಉಂಟಾಗುವ ಅಸ್ತಿತ್ವದ ಭಯ!ತೆಲಂಗಾಣ, ತುಳುನಾಡು, ಕೊಡಗು, ವಿದರ್ಭ, ಸೌರಾಷ್ಟ್ರ, ಬುಂದೆಲ್ ಖಂಡ್, ಉತ್ತರ ಕರ್ನಾಟಕ, ಬೋಡೋ ಲ್ಯಾಂಡ್, ಡಾರ್ಜಿಲಿಂಗ್, ಪೂರ್ವಂಚಲ, ಪಶ್ಚಿಮಾಂಚಲ, ಗೂರ್ಖಲ್ಯಾಂಡ್ ಮುಂತಾದ ಪ್ರದೇಶಗಳು ಪ್ರತ್ಯೇಕತೆಗಾಗಿ ಹೊರಡಿವೆ. ಉತ್ತರಾಂಚಲ, ತೆಲಂಗಾಣ, ಛತ್ತೀಸ್ ಘಡ ಮೊದಲಾದವು ಇದರಲ್ಲಿ ಯಶಸ್ಸಾಗಿವೆ.
ಸ್ವತಂತ್ರ ಪೂರ್ವದಲ್ಲಿಯೇ ತುಳುನಾಡು ಪ್ರತ್ಯೇಕ ರಾಜ್ಯಕ್ಕಾಗಿ ದನಿ ಎತ್ತಿತ್ತು. ಆದರೆ ಇದು ಅಷ್ಟೊಂದು ಪ್ರಬಲ ಹೋರಾಟ ಆಗಿರಲಿಲ್ಲ. ಏಕೀಕರಣದ ಸಂದರ್ಭದಲ್ಲಿ ತುಳು ಭಾಷಿಕ ಕಾಸರಗೋಡು ಕೇರಳದ ತೆಕ್ಕೆಯನ್ನು ಸೇರಿತು. ಕೆಲವೇ ವರ್ಷಗಳಲ್ಲಿ ದಕ್ಷಿಣ ಕನ್ನಡವೂ ಉಡುಪಿ ಮತ್ತು ದಕ್ಷಿಣ ಕನ್ನಡ ಎಂದು ವಿಭಜನೆಯಾಯಿತು. ಸಾಂಸ್ಕೃತಿವಾಗಿ ಒಂದೇ ಆಗಿದ್ದ ತುಳುನಾಡು ರಾಜಕೀಯವಾಗಿ ಪ್ರತ್ಯೇಕಗೊಂಡು ಅನಿವಾರ್ಯವಾಗಿ ತಮ್ಮನ್ನು ಕನ್ನಡದ ಮೂಲಕ ಗುರುತಿಸಿಕೊಳ್ಳಬೇಕಾಯಿತು.
ತುಳುವರ ತಮ್ಮ ಭಾಷೆಗೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು ಎಂಬ ಹೋರಾಟದ ವೈಫಲ್ಯಕ್ಕೆ ಅದರ ಹಿಂದಿರುವ ಭಾಷಾ ರಾಜಕಾರಣವೇ ಕಾರಣ. ಇತ್ತೀಚೆಗೆ ಸಂಸದ ನಳೀನ್ ಕುಮಾರ್ ಕಟೀಲ್ ಅವರ ಭಾಷೆಗಾಗಿ ಪ್ರಾಣವನ್ನೇ ಕೊಟ್ಟೇನು ಎಂಬ ಪ್ರತಾಪ ತಣ್ಣಗಾಗಿ ಈ ಮಾನ್ಯತೆ ನೀಡಲು ತಾಂತ್ರಿಕ ಸಮಸ್ಯೆಗಳು ಇವೆ ಎಂಬಲ್ಲಿಗೆ ಬಂದು ನಿಂತಿದ್ದಾರೆ.
2011ರ ಜನಗಣತಿಯಲ್ಲಿ 19,569 ಭಾಷೆಗಳನ್ನು ತಮ್ಮ ಮಾತೃ ಭಾಷೆಗಳನ್ನಾಗಿ ದೇಶದ ಜನತೆ ಮಾನ್ಯ ಮಾಡಿದ್ದಾರೆ. 2001 ರ ಜನಗಣತಿಯ ಪ್ರಕಾರ 1,636 ಭಾಷೆಗಳು ಮಾತೃ ಭಾಷೆಗಳು ಎಂದು ಪರಿಗಣಿಸಲ್ಪಟ್ಟಿದ್ದವು. ಜನಗಣತಿಯ ಮಾನದಂಡಗಳಲ್ಲಿ ಬದಲಾವಣೆ ತಂದದ್ದೇ ಈ ಸಂಖ್ಯೆ ಹೆಚ್ಚಲು ಕಾರಣ. 2001 ರ ಜನಗಣತಿಯಲ್ಲಿ ಇರುವ ಸ್ವತಂತ್ರ ಭಾಷೆಗಳ ಸಂಖ್ಯೆ 122.  ಗಣೇಶ್ ದೇವಿಯವರು ತಯಾರಿಸಿದ ಭಾರತದ ಭಾಷಿಕ ನಕ್ಷೆಯಲ್ಲಿ 780 ಸ್ವತಂತ್ರ ಭಾಷೆಗಳು ಇವೆ. ಸ್ವತಃ ಗಣೇಶ್ ದೇವಿಯವರು ಸರಿ ಸುಮಾರು 850 ಭಾಷೆಗಳು ಭಾರತದಲ್ಲಿವೆ ಎನ್ನುತ್ತಾರೆ.
ಇಷ್ಟೊಂದು ಭಾಷೆಗಳು ಇರುವ ದೇಶವನ್ನು ಪ್ರತಿನಿಧಿಸುತ್ತಿರುವುದು ಕೇವಲ 22 ಭಾಷೆಗಳು! ಇಂದು 99 ತುಳುವಿನ ಜೊತೆಗೆ ಸಾಂವಿಧಾನಿಕ ಮಾನ್ಯತೆಗಾಗಿ ಕಾಯುತ್ತಿವೆ. ಮೂವತ್ತು ವರ್ಷಗಳ ಹಿಂದೆ ತುಳುವರು ಸಾಂವಿಧಾನಿಕ ಮಾನ್ಯತೆ ಕೇಳುವ ಸಂದರ್ಭದಲ್ಲಿ ಇಷ್ಟು ಸ್ಪರ್ಧೆ ಇರಲಿಲ್ಲ.
ಎಂಟನೇ ಪರಿಚ್ಛೇದದಲ್ಲಿ ಸೇರಲು ಒಂದು ಭಾಷೆಗೆ ಅದು ರಾಜ್ಯದ ಅಧಿಕೃತ ಭಾಷೆಯಾಗಿರಬೇಕು. ಸಂವಿಧಾನ ಜಾರಿಯಾದಾಗ 14 ಭಾಷೆಗಳು ಈ ಪಟ್ಟಿಗೆ ಸೇರಿದವು. 1967 ರಲ್ಲಿ ಸಿಂಧಿ ಭಾಷೆ, 1992 ರಲ್ಲಿ ಮಣಿಪುರಿ, ನೇಪಾಳಿ, ಕೊಂಕಣಿ ಭಾಷೆಗಳನ್ನು ಅಧಿಕೃತ ಭಾಷೆಗಳ ಪಟ್ಟಿಯಲ್ಲಿ ಸೇರಿಸಲಾಯಿತು.
2003 ರಲ್ಲಿ ಸಂವಿಧಾನದಲ್ಲಿ 92 ತಿದ್ದುಪಡಿ  The Constitution (Ninety Second Amendment) Act, 2003 ತಂದು 8 ನೇ ಪರಿಚ್ಛೇದದಲ್ಲಿ ರಾಜ್ಯ ಭಾಷೆಗಳಲ್ಲದ ಬೋಡೋ, ಡೋಗ್ರೀ, ಮೈಥಿಲಿ ಮತ್ತು ಸಂತಾಲಿ ಭಾಷೆಗಳನ್ನು ಸೇರಿಸಲಾಯಿತು.
ಇವುಗಳಿಗೆ ಎಂಟನೇ ಪರಿಚ್ಛೇದಕ್ಕೆ ಸೇರುವ ಅರ್ಹತೆ, ಲಕ್ಷಣ ಎಲ್ಲವೂ ಇವೆ ಎಂಬುದು ಕಾರಣವಲ್ಲ. ಕಾಶ್ಮೀರದ ಸಮಸ್ಯೆ ತಣ್ಣಗಾಗಿಸಲು ಡೋಗ್ರಿ ಭಾಷೆಯನ್ನು ಸೇರಿಸಲಾಯಿತು. ಆಗಸ್ಟ್ 18, 2003 ರಂದು ಈ ಬಿಲ್ ಅನ್ನು ಲೋಕಸಭೆಯಲ್ಲಿ ಮಂಡಿಸಿದ ಅಂದಿನ ಗೃಹ ಸಚಿವ ಮತ್ತು ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಮಾತೃ ಭಾಷೆ ಮೈಥಿಲಿ ಕೂಡ ಸೇರಿತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರತ್ಯೇಕ ಬೋಡೋ ಲ್ಯಾಂಡ್ ಕೇಳುತ್ತಿದ್ದ ಬೋಡೋ ಬುಡಕಟ್ಟನ್ನು ಸಂತೈಸಲು ಮತ್ತು ಪಶ್ಚಿಮ ಬಂಗಾಳ ಸರಕಾರದ ಒತ್ತಡಗಳ ಕಾರಣಕ್ಕೆ ಕ್ರಮವಾಗಿ ಬೋಡೋ ಮತ್ತು ಸಂತಾಲಿ ಭಾಷೆಗಳೂ ಅಧಿಕೃತ ಭಾಷೆಗಳಾಗಿ ಮಾನ್ಯತೆ ಪಡೆದವು.
2003ರಲ್ಲಿ ಎಸ್ ಎಂ ಕೃಷ್ಣ ಸರಕಾರ ಕೇಂದ್ರಕ್ಕೆ ಮನವಿಯನ್ನು ಕೊಟ್ಟಿದ್ದರೂ ತುಳುವನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿತು. 2004 ರಲ್ಲಿ ಇತರ ಭಾಷೆಗಳು ಸಾಂವಿಧಾನಿಕ ಮಾನ್ಯತೆಗಾಗಿ ಹೋರಾಟ ನಡೆಸುತ್ತಿದ್ದರಿಂದ 39 ಭಾಷೆಗಳನ್ನು ಪರಿಶೀಲಿಸಲು ಸೀತಾಕಾಂತ್ ಮಹಾಪಾತ್ರ ಸಮಿತಿ ರಚಿಸಿತು. ಈ ಸಮಿತಿ ಎಂಟನೇ ಪರಿಚ್ಛೇದದಲ್ಲಿ ಹೆಚ್ಚಿನ ಭಾಷೆಗಳನ್ನು ಸೇರಿಸಲು  ಶಿಫಾರಸ್ಸು ಮಾಡಿತ್ತು. ಆದರೆ ಇಷ್ಟು ವರ್ಷಗಳಾದರೂ ಈ ವರದಿಯ ಪರಿಶೀಲನೆ ಆಗದೆ ಸಮಿತಿಯೇ ಕೈಚೆಲ್ಲಿ ಕುಳಿತಿದೆ.
ಭಾಷೆಗಳ ಬಗ್ಗೆ ಸರಕಾರಗಳು ಸಂಪೂರ್ಣವಾಗಿ ನಿರ್ಲಕ್ಷ್ಯ ತಾಳಿವೆ. ಇಂದು ತುಳುವಿನ ಜೊತೆಗೆ ಸ್ಪರ್ಧಿಸಲು ನೂರಾರು ಭಾಷೆಗಳು ಸಿದ್ಧವಾಗಿವೆ.
ಎಂಟನೇ ಪರಿಚ್ಛೇದಕ್ಕೆ ಸೇರಿದ ಭಾಷೆಗಳಲ್ಲಿ ದೂರದರ್ಶನ ಆರಂಭಿಸುವುದು ಆರ್ಥಿಕ ಸವಾಲು ಎಂದು ಪ್ರಸಾರ ಭಾರತಿ ತಿಳಿಸಿದೆ. ಈ ಎಲ್ಲಾ ಭಾಷೆಗಳಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಲೋಕ ಸೇವಾ ಆಯೋಗಕ್ಕೆ ಅನುಮಾನವಿದೆ. ಹೀಗಿರುವಾಗ ತುಳುವಿನ ಹೋರಾಟಕ್ಕೆ ಪ್ರತಿಫಲ ಸಿಗುತ್ತದೆಯೇ ಎಂಬ ಅನುಮಾನದ ಹೊರತಾಗಿ ಹೋರಾಟದ ಸ್ವರೂಪವೂ ಬದಲಾಗಬೇಕಿದೆ.
ತುಳು, ಕೊಡವ ಮೊದಲಾದ ಕರ್ನಾಟಕದ ಭಾಷೆಗಳಿಗೆ ರಾಜ್ಯ ಭಾಷಾ ಸ್ಥಾನಮಾನ ಯಾಕೆ ನೀಡಬಾರದು?
ಅಖಿಲ ಭಾರತ ಮಟ್ಟದಲ್ಲಿ ತುಳುವಿಗೆ ಸ್ಥಾನಮಾನವನ್ನು ಕಲ್ಪಿಸುವ ಮುನ್ನ ಕರ್ನಾಟಕದಲ್ಲಿ ಅದರ ಸ್ಥಾನ ಏನು ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಇದು ಕೊಡವ ಮತ್ತಿತರ ಕರ್ನಾಟಕದಲ್ಲಿ ಆಡುವ ಭಾಷೆಗಳ ಪ್ರಶ್ನೆ ಕೂಡ ಹೌದು. ಕರ್ನಾಟಕದಲ್ಲಿ ಕೊಡವ, ತುಳು, ಅರೆಭಾಷೆಗಳಿಗೆ ಅಕಾಡೆಮಿಗಳಿವೆ. ಆದರೆ ಇವಾವುಗಳಿಗೂ ರಾಜ್ಯದ ಅಧಿಕೃತ ಭಾಷೆಗಳು ಎಂಬ ಸ್ಥಾನಮಾನ ಸಿಕ್ಕಿಲ್ಲ. ಬಿಹಾರದಲ್ಲಿ ಬಿಹಾರಿ ಭಾಷೆಯ ಜೊತೆಗೆ ಬಾಂಗ್ಲಾ, ಅಂದ್ರದಲ್ಲಿ ತೆಲುಗಿನ ಜೊತೆಗೆ ಉರ್ದು, ದೆಹಲಿಯಲ್ಲಿ ಹಿಂದಿಯೊಂದಿಗೆ ಉರ್ದು ಮತ್ತು ಪಂಜಾಬಿ, ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾ ಜೊತೆಗೆ ಉರ್ದು, ಪಂಜಾಬಿ, ಹಿಂದಿ, ನೇಪಾಳಿ ಮತ್ತು ಒರಿಯಾ ಅಧಿಕೃತ ಭಾಷೆಗಳು ಎಂದು ಘೋಷಿಸಲ್ಪಟ್ಟಿವೆ. ಹಾಗಾದರೆ ಕರ್ನಾಟಕದಲ್ಲಿ ತುಳು, ಕೊಡವ ಮೊದಲಾದ ಭಾಷೆಗಳಿಗೆ ನೀಡಲು ಯಾಕೆ ಸಾಧ್ಯವಿಲ್ಲ?
ಸರಕಾರಕ್ಕೆ ಭಾಷೆಗಳ ಉಳಿವು ಮುಖ್ಯವಲ್ಲ! ಕರಾವಳಿಯ ಸಮಕಾಲೀನ ರಾಜಕಾರಣದಲ್ಲಿ ಭಾಷೆ ಎಂಬುದು ಚುನಾವಣೆಯ ಸಂದರ್ಭದಲ್ಲಿ ಮೂಗಿಗೆ ಸವರುವ ತುಪ್ಪವಾಗಿ ಪರಿಣಮಿಸುತ್ತಿದೆ. ಇದರ ಜೊತೆ ಜೊತೆಗೆ ತುಳು ಮತ್ತು ಕನ್ನಡ ಭಾಷೆಗಳ ನಡುವೆ ಒಡಕು ಮೂಡುತ್ತಿರುವ ಅರಿವಿದ್ದೂ ಈ ಸಮಸ್ಯೆಗಳನ್ನು ಬಗೆ ಹರಿಸಲು ಸರಕಾರ ಕೂಡ ಸಿದ್ದವಿಲ್ಲ!
ತುಳುವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಮತ್ತು ತುಳು ಸಂಬಂಧಿ ಹೋರಾಟಗಳು ಕೂಡ ರಾಜಕೀಯ ಪ್ರೇರಿತ ಮತ್ತು ತಾತ್ಕಾಲಿಕವಾಗುತ್ತಿವೆ. ಒಮ್ಮೆ ಪ್ರಾಣ ಕೊಡಲು ಸಿದ್ಧ ಎನ್ನುವ ನಾಯಕ ಪ್ರಾಣ ಕೊಡುವುದು ಬೇಡ, ಕನಿಷ್ಟ ಭಾಷೆಯನ್ನು ಪ್ರತಿನಿಧಿಸುವ ಕೆಲಸವಾದರೂ ಮಾಡಬೇಕು.

ಪ್ರತಿಕ್ರಿಯಿಸಿ