ಡ್ಯುಯೆಟ್ : ಸಣ್ಣ ಪಟ್ಟಣಗಳಲ್ಲಿ ಲೋಕೋಪಯೋಗಿ ಕೆಲಸಗಳಲ್ಲಿ ಉದ್ಯೋಗ ಕಾರ್ಯಕ್ರಮ

ಪ್ರಣಬ್ ಬರ್ದಾನ್ ಪ್ರಖ್ಯಾತ ಅರ್ಥಶಾಸ್ತ್ರಜ್ಞರು. ಅವರು ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ಯಾಧ್ಯಾಪಕರು. ಅವರ ಪ್ರತಿಕ್ರಿಯೆಯನ್ನು ಇಂದು ಪ್ರಕಟಿಸುತ್ತಿದ್ದೇವೆ. ತಮ್ಮ ಪ್ರತಿಕ್ರಿಯೆಯಲ್ಲಿ ಅವರು ಭಾರತದ ನಗರ ಪ್ರದೇಶದಲ್ಲಿ ನಿರುದ್ಯೋಗ ಹಾಗೂ ಅರೆ-ಉದ್ಯೋಗದ ಸಮಸ್ಯೆ ತೀವ್ರವಾಗಿರುವ ಹಿನ್ನಲೆಯಲ್ಲಿ ಡ್ಯುಯೆಟ್ ಪ್ರಸ್ತಾವನೆಯ ಪ್ರಾಮುಖ್ಯವನ್ನು ಗುರುತಿಸುತ್ತಾರೆ. ಅದರಲ್ಲೂ ವಿಶೇಷವಾಗಿ ತೀವ್ರವಾಗಿ ಹೆಚ್ಚುತ್ತಿರುವ ಯುವ ಜನತೆಯಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚು ತೀವ್ರವಾಗಿದೆ. ಈ ಸಂದರ್ಭದಲ್ಲಿ ಪಟ್ಟಣಗಳಲ್ಲಿನ ಲೋಕೋಪಯೋಗಿ ಕೆಲಸಗಳಲ್ಲಿ ಉದ್ಯೋಗ ಒದಗಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದು ತುಂಬಾ ಅವಶ್ಯಕ ಎಂದು ಇದಕ್ಕೆ ಪ್ರಣಬ್ ಬರ್ಧನ್ ತುಂಬಾ ಮಹತ್ವ ನೀಡುತ್ತಾರೆ. ಅವರ ದೃಷ್ಟಿಯಲ್ಲಿ ಅಂತಹ ಕಾರ್ಯಕ್ರಮ ಎಲ್ಲರನ್ನೂ ಒಳಗೊಳ್ಳುವಂತಿರಬೇಕು. ಸ್ಥಳೀಯ ಸರ್ಕಾರ ಇದನ್ನು ನಿರ್ವಹಿಸಬೇಕು. ಸಣ್ಣ ಪಟ್ಟಣಗಳಲ್ಲಿ ಪರಿಸರ ಹಾಗೂ ಆರೋಗ್ಯವನ್ನು ಕೇಂದ್ರವಾಗಿಟ್ಟುಕೊಂಡ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂದು ಅವರ ಸಲಹೆ ನೀಡುತ್ತಾರೆ.
ನಗರ ಪ್ರದೇಶಗಳಲ್ಲಿ ನಿರುದ್ಯೋಗ ಹಾಗೂ ಅರೆ ಉದ್ಯೋಗದ ಸಮಸ್ಯೆ ತೀವ್ರವಾಗುತ್ತಿದೆ. ಹಲವು ವರ್ಷಗಳಿಂದ ಇದು ನನ್ನನ್ನು ಬಾಧಿಸುತ್ತಿದೆ. ಭಾರತದಲ್ಲಿ ವಿಶೇಷವಾಗಿ ಯುವಜನತೆಯಲ್ಲಿ ಈ ಸಮಸ್ಯೆ ತುಂಬಾ ತೀವ್ರವಾಗಿದೆ. ಜೊತೆಗೆ ಯುವಜನತೆಯ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ರೂಪಿಸಬೇಕಾದ ನೀತಿಗಳಿಗೆ ಸಂಬಂಧಿಸಿದಂತೆ ೨೦೧೭ರಿಂದ ಲೇಖನಗಳನ್ನು ಬರೆದು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಉದಾಹರಣೆಗೆ ೧) ನಗರದ ಲೋಕೋಪಯೋಗಿ ಕೆಲಸಗಳಲ್ಲಿ ಉದ್ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ೨) ಔಪಚಾರಿಕ ಕ್ಷೇತ್ರಗಳಲ್ಲಿನ ಕೆಲಸಗಳಿಗೆ ಕೂಲಿಯಲ್ಲಿ ಸಬ್ಸಿಡಿ ನೀಡಬೇಕು ಇತ್ಯಾದಿ ಸಲಹೆಗಳನ್ನು ನೀಡಿದ್ದೇನೆ.
ಕೊರೋನ ಪಿಡುಗಿನಿಂದಾಗಿ ಜಾರಿಗೆ ತಂದ ಕಠಿಣವಾದ ಲಾಕ್‌ಡೌನಿಂದಾಗಿ ನಿರುದ್ಯೋಗದ ಸಮಸ್ಯೆ ತೀವ್ರವಾಗಿದೆ. ಹಾಗೆಯೇ ನೀತಿಗಳನ್ನು ಜಾರಿಗೊಳಿಸಬೇಕಾದ ತುರ್ತು ತೀವ್ರವಾಗಿದೆ. ಸರ್ಕಾರ ಕೆಲವು ಜಿಪುಣತನದ ಪರಿಹಾರ ಕ್ರಮಗಳನ್ನು ತೆಗೆದುಕೊಂಡಿದೆ. ಅವುಗಳನ್ನೂ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲೇ ಜಾರಿಗೆ ತರಲಾಗಿದೆ. ನಗರ ಪ್ರದೇಶಗಳಲ್ಲಿ ಆ ಕ್ರಮಗಳು ತುಂಬಾ ಕಡಿಮೆಯಿವೆ. ತಕ್ಷಣದ ಕೆಲವು ಸಮಸ್ಯೆಗಳು ಪರಿಹಾರವಾದರೂ ಎಷ್ಟೋ ಸಮಸ್ಯೆಗಳು ನಮ್ಮನ್ನು ಹಲವು ವರ್ಷಗಳು ಕಾಡುತ್ತವೆ. ಹಾಗಾಗಿ ನಾನು ಒಟ್ಟಾರೆಯಾಗಿ ಜಾನ್ ಅವರ ಡ್ಯುಯೆಟ್ ಸಲಹೆಯನ್ನು ಉತ್ಸಾಹದಿಂದಲೇ ಬೆಂಬಲಿಸುತ್ತೇನೆ.
ಜಾನ್ ಅವರ ಸಲಹೆಯನ್ನು ಹೇಗೆ ಮಾರ್ಪಡಿಸಬಹುದು ಅಥವಾ ವಿಸ್ತರಿಸಬಹುದು ಅನ್ನುವುದಕ್ಕೆ ಕೆಲವು ಸಲಹೆಗಳನ್ನು ಕೆಳಗೆ ನೀಡಿದ್ದೇನೆ.
೧. ರಾಜ್ಯ ಸರ್ಕಾರಗಳ ಬದಲು, ಆಯಾ ಪ್ರದೇಶದಲ್ಲಿನ ಸ್ಥಳೀಯ ಸರ್ಕಾರಗಳು ಅನುಮೋದಿತ ಸಾರ್ವಜನಿಕ ಸಂಸ್ಥೆಗಳಿಗೆ ಮತ್ತು ಅನುಮೋದಿತ ಯೋಜನೆಗಳಿಗೆ (ಅವುಗಳಿಗೆ ಅನುಮೋದನೆಯನ್ನು ಒಂದು ಕಾಲಮಿತಿಯಲ್ಲಿ ನೀಡಬೇಕು. ಅಂತಹ ಒಂದು ಪ್ರಕ್ರಿಯೆ ಇರಬೇಕು) ಉದ್ಯೋಗ ಸ್ಟಾಂಪುಗಳನ್ನು ಬಿಡುಗಡೆ ಮಾಡಬೇಕು. ಸ್ಥಳೀಯ ಸರ್ಕಾರಗಳಿಗೆ (ಸಂಸ್ಥೆಗಳು ಹಾಗೂ ಅವುಗಳ ಯೋಜನೆಗಳ ಬಗ್ಗೆ) ಹೆಚ್ಚಿನ ಮಾಹಿತಿ ಇರುತ್ತದೆ. ಅವುಗಳಿಗೆ ಹೆಚ್ಚಿನ ಹೊಣೆಗಾರಿಕೆಯೂ ಇರುತ್ತದೆ. ಹಣಪಾವತಿಯಾಗದೆ ಹೋದ ಸಂದರ್ಭದಲ್ಲಿ ಕನಿಷ್ಠ ಯಾರ ವಿರುದ್ದ ಹೋರಾಡಬೇಕು ಅನ್ನುವುದಾದರೂ ಜನರಿಗೆ ಗೊತ್ತಿರುತ್ತದೆ. ಅವರು ಸಲೀಸಾಗಿ ಸಿಗುತ್ತಿರುತ್ತಾರೆ. ಅವಶ್ಯಕತೆ ಬಂದಾಗ ಸ್ಥಳೀಯ ಚುನಾವಣೆಗಳಲ್ಲಿ ತಮ್ಮ ನೋವನ್ನು ತೋರಿಸಿಕೊಳ್ಳುವುದಕ್ಕೂ ಅವಕಾಶವಿದೆ. ಸಂಸ್ಥೆಗಳಿಗೆ ಹಾಗೂ ಯೋಜನೆಗಳಿಗೆ ಅನುಮೋದನೆ ನೀಡುವಾಗ ಸ್ಥಳೀಯ ಸರ್ಕಾರಗಳನ್ನು ಸೇರಿಸಿಕೊಳ್ಳಬೇಕು ಅಥವಾ ವಾರ್ಡ್ ಸಮಿತಿಗಳ ಮತ್ತು ಸ್ಥಳೀಯ ಎನ್‌ಜಿಒಗಳ ಅಭಿಪ್ರಾಯವನ್ನು ಕೇಳಬೇಕು.
೨. ಪೂರ್ಣಗೊಂಡ ಯೋಜನೆಗಳ ಯಾದೃಚ್ಛಿಕ ಪರಿಶೀಲನೆ ನಡೆಯಬೇಕು. ಮತ್ತು ಅದನ್ನು ಕುರಿತು ವ್ಯಾಪಕವಾಗಿ ತಕ್ಷಣ ಪ್ರಚಾರ ಮಾಡಬೇಕು. ಉದ್ದೇಶಪೂರ್ವಕವಾಗಿ ಅಲಕ್ಷ್ಯ ತೋರಿರುವುದು ಅಥವಾ ಭ್ರಷ್ಟಾಚಾರ ನಡೆದಿರುವುದು ಕಂಡುಬಂದರೆ ಶಿಕ್ಷಿಸುವುದಕ್ಕೂ ಒಂದಿಷ್ಟು ಅವಕಾಶವಿರಬೇಕು. ಜಾನ್ ಅವರ ಸಲಹೆ ಭಾರತದ ಎಲ್ಲಾ ನಗರ ಪ್ರದೇಶಗಳಿಗೆ ಅನ್ವಯವಾಗುತ್ತದೆ. ಆದರೆ ಪ್ರಾರಂಭದಲ್ಲಿ ಮೆಟ್ರೋಪಾಲಿಟನ್ ನಗರಗಳನ್ನು ಬಿಡುವುದು ಒಳ್ಳೆಯದು (ಹೆಚ್ಚಿನ ದಟ್ಟಣೆಯ ಮೇಲೆ ಆಗಬಹುದಾದ ಪರಿಣಾಮ ಹೆಚ್ಚು ಗಂಭೀರವಾಗಿರುತ್ತದೆ). ಮೊದಲಿಗೆ ಬಹುಸಂಖ್ಯೆಯಲ್ಲಿರುವ ಸಣ್ಣ ಪಟ್ಟಣಗಳಿಗೆ ಕಾರ್ಯಕ್ರಮವನ್ನು ಸೀಮಿತಮಾಡಿಕೊಳ್ಳಬಹುದು (ಅಲ್ಲಿ ಸಾರ್ವಜನಿಕ ಮೂಲಭೂತ ಸೌಕರ್ಯಗಳು ಬೃಹತ್ ನಗರಗಳಿಗಿಂತ ಕೆಟ್ಟದಾಗಿರುತ್ತದೆ).
೩. ಯೋಜನೆಗಳನ್ನು ನಿರ್ಧರಿಸುವಾಗ ಆದ್ಯತೆಯನ್ನು ೧) ಹೆಚ್ಚು ಶ್ರಮ ಬೇಡುವ ಯೋಜನೆಗಳಿಗೆ ಅದರಲ್ಲೂ ಮುಖ್ಯವಾಗಿ ಪರಿಸರ ಹಾಗೂ ಆರೋಗ್ಯವನ್ನು ಕೇಂದ್ರವಾಗಿ ಇಟ್ಟುಕೊಂಡಿರುವ ಯೋಜನೆಗಳಿಗೆ ನೀಡಬೇಕು. ಉದಾಹರಣೆಗೆ ೧) ಕಟ್ಟಡ ಮತ್ತು ರಸ್ತೆ ರಿಪೇರಿ, ಸಾರ್ವಜನಿಕ ಗೃಹ ನಿರ್ಮಾಣ ಇತ್ಯಾದಿ ೨) ಕಸವನ್ನು ಪ್ರತ್ಯೇಕಿಸುವ ಹಾಗೂ ಮರುಬಳಕೆ ಮಾಡುವ, ಸುತ್ತಮುತ್ತಲ ಸಾರ್ವಜನಿಕ ಸ್ಥಳಗಳನ್ನು ಮತ್ತು ಪಾರ್ಕುಗಳನ್ನು ನವೀಕರಿಸುವ, ಸಾಮೂಹಿಕ ಸಾರಿಗೆ ನಿರ್ಮಾಣ, ಸೋಲಾರ್ ಸೆಲ್ಲುಗಳನ್ನು ಅಳವಡಿಸುವುದು, ಕೆರೆ, ಕಾಲುವೆಗಳನ್ನು ಪುನರ್‌ನಿರ್ಮಿಸುವುದು ಹಾಗೂ ಶುಚಿಗೊಳಿಸುವುದು, ಮಳೆ ನೀರಾವರಿ ಇತ್ಯಾದಿ.
೪. ಸೊಳ್ಳೆಗಳಿಗೆ ಕ್ರಿಮಿನಾಶಕಗಳನ್ನು ಸಿಂಪಡಿಸುವುದು, ಕೊಳಚೆ ಕೊಳವೆಗಳನ್ನು ಮುಚ್ಚುವುದು, ಸಾರ್ವಜನಿಕ ಕಕ್ಕಸ್ಸುಗಳನ್ನು ಅದರಲ್ಲೂ ವಿಶೇಷವಾಗಿ ಕೊಳಚೆಗೇರಿಗಳಲ್ಲಿ ನಿರ್ಮಿಸುವುದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಗಳನ್ನು ನೇಮಕಮಾಡಿಕೊಳ್ಳುವುದು, ಹೆಚ್ಚಿನ ಆಶಾ ಕೆಲಸಗಾರರನ್ನು ನೇಮಿಸಿಕೊಳ್ಳುವುದು.
೫. ಕೆಲಸಗಾರರನ್ನು ನೋಂದಾಯಿಸಿಕೊಂಡು ಅವರಿಗೆ ಉದ್ಯೋಗ ಕಾರ್ಡುಗಳನ್ನು ನೀಡುವಾಗ ಯಾರನ್ನೂ ಹೊರಗಿಡಬಾರದು. ನಗರವಾಸಿಗಳು ಎನ್ನುವುದಕ್ಕೆ ಯಾವುದೇ ಪುರಾವೆಯನ್ನಾದರೂ ಅವರು ತೋರಿಸಬಹುದು. ವಲಸೆ ಕಾರ್ಮಿಕರ ವಿಷಯದಲ್ಲಿ ಪೋರ್ಟಬಲ್ ಪಡಿತರ ಕಾರ್ಡುಗಳನ್ನು ಮಾನ್ಯಮಾಡಬೇಕು. ಕೆಲವರು ಎರಡೂ ಕಡೆ ಅನುಕೂಲ ಪಡೆದುಕೊಳ್ಳುತ್ತಿದ್ದರೆ ನನಗೆ ಚಿಂತೆ ಇಲ್ಲ. ಯಾರಾದರೂ ಮನರೇಗಾ ಹಾಗೂ ಡ್ಯುಯೆಟ್ ಎರಡೂ ಕಡೆ ಉದ್ಯೋಗ ಪಡೆದುಕೊಂಡರೆ ಚಿಂತೆಯಿಲ್ಲ. ನಿಜವಾಗಿ ಆತಂಕದ ವಿಷಯ ಅಂದರೆ ಸುಳ್ಳು ಕೆಲಸಗಾರರ ಪಟ್ಟಿ. ಅದನ್ನು ತಪ್ಪಿಸುವುದಕ್ಕೆ ಯಾದೃಚ್ಛಿಕವಾಗಿ ಪರಿಶೋಧನೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದು ಮುಖ್ಯವಾಗುತ್ತದೆ. ಸ್ಮಾರ್ಟ್ ಕಾರ್ಡುಗಳಿಗೆ ವ್ಯವಸ್ಥೆ ಮಾಡುವುದು ಕಷ್ಟವಾಗಲಾರದು ಎಂದು ಭಾವಿಸುತ್ತೇನೆ. ಪಾವತಿಯ ವಿವರಗಳ ದಾಖಲೆಯನ್ನು ಒಂದು ವರ್ಷಕ್ಕೆ ಸೀಮಿತಮಾಡಿಕೊಳ್ಳಬಹುದು.
೬. ಎರಡು ರೀತಿಯ ಡ್ಯುಯೆಟ್ ಕೆಲಸಗಳನ್ನು ಬೇರೆಯಾಗಿಯೇ ನೋಡಬೇಕು. ನಾವು ಮುಖ್ಯವಾಗಿ ಶ್ರಮವನ್ನು ಆಧರಿಸಿದ ಕೆಲಸಗಳು ಹಾಗೂ ಕಡಿಮೆ ಕೌಶಲದ ಕೆಲಸಗಳ ನಡುವೆ ವ್ಯತ್ಯಾಸವನ್ನು ಗುರುತಿಸಬೇಕು. ಉದಾಹರಣೆಗೆ ನಾನು ಮೇಲೆ ಹೇಳಿದ ಯೋಜನೆಗಳಲ್ಲಿ ಆರೋಗ್ಯ ಸಂಬಂಧಿ ಕೆಲಸಗಳು ಅಥವಾ ಸೋಲಾರ್ ಸೆಲ್ಲುಗಳನ್ನು ಅಳವಡಿಸುವುದು ಅಥವಾ ಕಟ್ಟಡ ನಿರ್ಮಾಣದಲ್ಲಿನ ಗಾರೆ ಕೆಲಸ ಇವುಗಳಿಗೆ ಒಂದಿಷ್ಟು ಕೌಶಲ ಬೇಕಾಗುತ್ತದೆ. ಸಂಪೂರ್ಣ ಶ್ರಮವನ್ನೇ ಆಧರಿಸಿದ ಕೆಲಸಗಳಿಗೆ ಕನಿಷ್ಠ ಕೂಲಿಯನ್ನು ಕೊಡಬೇಕು. ಕಡಿಮೆ ಕೌಶಲದ ಕೆಲಸಗಳಿಗೆ (ಆ ಕೌಶಲಕ್ಕೆ ಕನಿಷ್ಠ ಕೂಲಿ ಚಾಲ್ತಿಯಲ್ಲಿಲ್ಲದೇ ಹೋದ ಸಂದರ್ಭದಲ್ಲಿ) ಕನಿಷ್ಠ ಕೂಲಿಗಿಂತ ಒಂದು ನಿರ್ದಿಷ್ಟ ಶೇಕಡವಾರು ಪ್ರಮಾಣದಲ್ಲಿ ಹೆಚ್ಚಿನ ಕೂಲಿ ಕೊಡಬೇಕು. ಆದರೆ ಕನಿಷ್ಠ ಕೂಲಿಗಿಂತ ತುಂಬಾ ಹೆಚ್ಚು ಕೊಡಬಾರದು. ಈಗಾಗಲೇ ಉದ್ಯೋಗದಲ್ಲಿರುವ ಬಹುಪಾಲು ಜನರನ್ನು ಡ್ಯುಯಟ್‌ಗೆ ಸೆಳೆದುಕೊಳ್ಳುವಂತೆ ಆಗಬಾರದು.
೭. ನೇಮಕಾತಿ ಏಜೆನ್ಸಿಗಳ ಉದ್ದೇಶವೇ ಶಾಮೀಲಾಗುವುದನ್ನು ತಪ್ಪಿಸುವುದಾದರೆ ಏಜೆನ್ಸಿಗಳು ಸ್ವತಂತ್ರವಾಗಿರಬೇಕು (ಅದು ಕೇವಲ ಆಡಳಿತಾತ್ಮಕ ಸಂಸ್ಥೆಯಾಗದಿದ್ದರೆ ಸ್ಥಳೀಯ ಸರ್ಕಾರದ ಆಳುವ ಹಾಗೂ ವಿರೋಧ ಪಕ್ಷದವರು ಸೂಚಿಸುವವರನ್ನು ಏಜೆನ್ಸಿಯಲ್ಲಿ ಸೇರಿಸಿಕೊಳ್ಳಬೇಕು.)
೮. ಡ್ಯುಯೆಟ್‌ಗೆ ಹಣ ಕೇಂದ್ರ ಸರ್ಕಾರದಿಂದ (ಬಹುಶಃ ಹಣಕಾಸು ಕಮಿಷನ್ ಮೂಲಕ) ಬರಬೇಕು. ಅದರ ನಿರ್ವಹಣೆಯ ಜವಾಬ್ದಾರಿಯನ್ನು ನೇರವಾಗಿ ಸ್ಥಳೀಯ ಸರ್ಕಾರಗಳಿಗೆ ವಹಿಸಬೇಕು. ಅಂತಿಮವಾಗಿ ಸ್ಥಳೀಯ ಆಸ್ತಿ ತೆರಿಗೆ ವ್ಯವಸ್ಥೆಯನ್ನು (ಈಗ ಸಧ್ಯಕ್ಕೆ ಅಲ್ಲಿ ಕಡಿಮೆ ವಸೂಲಾಗುತ್ತಿದೆ ಮತ್ತು ಭ್ರಷ್ಟಾಚಾರ ತುಂಬಿಕೊಂಡಿದೆ) ಸರಿಪಡಿಸಬೇಕು. ಸ್ಥಳೀಯ ಆಸ್ತಿ ತೆರಿಗೆಯ ಮೂಲಕ ಡ್ಯುಯೆಟ್‌ನ ಖರ್ಚನ್ನು ನಿಭಾಯಿಸಬೇಕು. (ಡ್ಯುಯೆಟ್‌ನಲ್ಲಿ ಲೋಕೋಪಯೋಗಿ ಕೆಲಸ ಯಶಸ್ವಿಯಾದಂತೆ ಸ್ಥಳೀಯ ಆಸ್ತಿ ಮೌಲ್ಯವೂ ಹೆಚ್ಚಬೇಕು). ಅದನ್ನು ಹೆಚ್ಚು ಜವಾಬ್ದಾರಿಯುತವನ್ನಾಗಿ ಮಾಡಬೇಕು. ಸ್ಥಳೀಯ ಜನತೆ ಅವರ ತೆರಿಗೆ ಹಣ ಕಳುವಾದರೆ ಅಥವಾ ಅಪಬಳಕೆಯಾದರೆ ಪ್ರಶ್ನಿಸುತ್ತಾರೆ. ಇದರಿಂದ ಸ್ಥಳೀಯ ರಾಜಕಾರಣಿಗಳ ಚುನಾವಣಾ ಭವಿಷ್ಯದ ಮೇಲೆ ಪರಿಣಾಮವಾಗಬಹುದು.
೯. ನಗರ ಪ್ರದಶಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಘೋಷಿಸುವದರಲ್ಲಿ ಹಲವು ಪ್ರಾಯೋಗಿಕ ರಾಜಕೀಯ ಸಮಸ್ಯೆಗಳಿವೆ. ಅಂತಹ ಸಮಸ್ಯೆಗಳು ಡ್ಯುಯೆಟ್‌ನಲ್ಲಿ ಆಗದೇ ಇರಬಹುದು. ಕನಿಷ್ಠ ತಕ್ಷಣದಲ್ಲಂತೂ ಆಗುವುದಿಲ್ಲ. ಡ್ಯುಯೆಟ್ ಬೇರೂರಲು ಪ್ರಾರಂಭಿಸಿದ ಕೂಡಲೇ ಕಾರ್ಮಿಕರ ನಿರೀಕ್ಷೆಯಲ್ಲಿ ಬದಲಾವಣೆಗಳಾಗುತ್ತವೆ. ಉದ್ಯೋಗ ಖಾತ್ರಿಯನ್ನು ಘೋಷಿಸದೇ ಹೋದರೂ ಅದರಿಂದ ರಾಜಕಾರಣಿಗಳ ಮೇಲೆ ಸಾಕಷ್ಟು ಒತ್ತಡ ಬರುವ ಸಾಧ್ಯತೆ ಇರುತ್ತದೆ.
ಪ್ರಣಬ್ ಬರ್ದನ್
   ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯ
ಅನುವಾದ : ಟಿ. ಎಸ್ . ವೇಣುಗೋಪಾಲ್

ಪ್ರತಿಕ್ರಿಯಿಸಿ