ಕ್ರಿ.ಪೂ 8000ರ ಹೊತ್ತಿಗೆ ಭಾರತದ ಕಾಡು ಕುದುರೆಗಳು ಕಣ್ಮರೆಯಾದವು . ಆದರೆ ಋಗ್ವೇದದಲ್ಲಿ ಹಸುವಿಗಿಂತ ಹೆಚ್ಚಿಗೆ ಅವುಗಳ ಉಲ್ಲೇಖವಿದೆ . ಇತ್ತೀಚೆಗೆ ಬಿಡುಗಡೆಯಾದ ಯಶಸ್ವಿನಿ ಚಂದ್ರ ಅವರ ‘ದಿ ಟೇಲ್ ಆಫ್ ದಿ ಹಾರ್ಸ್’ ಕೃತಿಯ ಆಯ್ದ ಭಾಗ ಇಲ್ಲಿದೆ . ಈ ಪುಸ್ತಕದಲ್ಲಿ ವೇದಗಳಿಂದ ಕ್ರಿಸ್ತ ಶಕದ ಯುದ್ಧಗಳವರೆಗೆ ಭಾರತದಲ್ಲಿನ ಕುದುರೆಗಳ ಕಥೆಯನ್ನು ಲೇಖಕರು ದಾಖಲಿಸಿದ್ದಾರೆ.
ಭಾರತದ ಪ್ರಾಚೀನ ಮಹಾಕಾವ್ಯಗಳಾದ “ರಾಮಾಯಣ” ಮತ್ತು “ಮಹಾಭಾರತ”, ಕುದುರೆಗಳು ಸಾಗರದಿಂದ ಉದ್ಭವಿಸಿವೆ ಎಂದು ಸ್ಪಷ್ಟಿಕರಿಸುತ್ತವೆಯಾದರೂ, ಕುದುರೆಗಳು ಸ್ವರ್ಗದಿಂದ ಧರೆಗಿಳಿದವು ಎಂಬುದು ಅನೇಕ ದಾಖಲೆಗಳು ವರ್ಷಾಂತರಗಳ ಕಾಲ ರೂಪಿಸುತ್ತ ಬಂದಬಂದ ಮತ್ತೊಂದು ಉಧ್ಭವ ಕಥೆ. ಹಾಗೆಯೆ ಶಾಲಿಹೋತ್ರ ಅಥವಾ ಅಶ್ವಶಾಸ್ತ್ರ ಸಾಹಿತ್ಯದ ಪ್ರಕಾರ ಇವುಗಳು ರೆಕ್ಕೆಯುಳ್ಳ ಆಕಾಶಜೀವಿಗಳು.
ಬಹಳಷ್ಟು ಪೌರಾಣಿಕ ಕಥೆಗಳಲ್ಲಿ, ಕುದುರೆಗಳ ಪೂರ್ವಜರು ತಮ್ಮ ರೆಕ್ಕೆಗಳನ್ನ ಶಾಲಿಹೋತ್ರನಿಂದಾಗಿ ಕಳೆದುಕೊಂಡವು. ನಂತರ ದೇವತೆಗಳ ರಾಜನಾದ ಇಂದ್ರನು ತನ್ನ ರಥವನ್ನ ನೆಡೆಸಲು ಸಹಾಯವಾಗಬಹುದೆಂದು ಅವುಗಳಿಗೆ ಮತ್ತೆ ರೆಕ್ಕೆಗಳನ್ನ ಜೋಡಿಸಿದನು. ಇನ್ನೂ ಕೆಲವು ಪೌರಾಣಿಕ ಆವೃತ್ತಿಗಳ ಪ್ರಕಾರ, ಈ ರೆಕ್ಕೆಗಳಿದ್ದ ಕುದುರೆಗಳ ಚೇಷ್ಟೆ ಅನಿಯಂತ್ರಿತವಾಗಿ, ಇಂದ್ರನಿಗೆ ತೊಂದರೆಯಾದದ್ದರಿಂದ ಆತ ಅವುಗಳ ರೆಕ್ಕೆಗಳನ್ನು ಕಿತ್ತು ಶಾಶ್ವತವಾಗಿ ಭೂಮಿಗೆ ಅಟ್ಟಿದನು. ಹೀಗೆ ಕುದುರೆಗಳು ಸ್ವರ್ಗ ಹಾಗು ಸಾಗರದಿಂದ ಬಂದಿರಬಹುದೆಂದು ನಮ್ಮ ಬೇರೆ ಬೇರೆ ಪುರಾಣ ಕಥೆಗಳಿಂದ ತಿಳಿಯಬಹುದು. ಆಶ್ಚರ್ಯಕರ ಸಂಗತಿಯೆಂದರೆ, ಭಾರತಕ್ಕೆ ನಿಜವಾಗಿಯೂ ಕುದುರೆಗಳು ಆಗಮಿಸಿದ ಮುಖ್ಯ ಮಾರ್ಗಗಳು ಈ ಎರಡೂ ಕಥೆಗಳನ್ನ ಸೇರಿಸಿದಂತಿದೆ. ಇತಿಹಾಸದ ಹಲವಾರು ಆವೃತ್ತಿಗಳಲ್ಲಿ, ಕುದುರೆಗಳು ಮಧ್ಯಪ್ರಾಚ್ಯದೇಶಗಳಿಂದ ಅರಬ್ಬೀ ಸಮುದ್ರವನ್ನ ದಾಟಿ ಬಂದಿವೆಯೆಂದು ಹೇಳಲಾದರೂ, ಅವುಗಳು ಭೂಮಿ ದಿಗಂತವನ್ನ ಸೇರುವ ಮಧ್ಯ ಏಷ್ಯಾಖಂಡದಿಂದ ಭೂಮಾರ್ಗವಾಗಿ ಬಂದಿರುವ ಸಾಧ್ಯತೆಗಳೂ ಇವೆ.
ಆದರೆ, ಭಾರತಕ್ಕೆ ಕುದುರೆಗಳು ಹೀಗೆ ಬೇರೆಬೇರೆ ದೇಶಗಳಿಂದ ಆಮದು ಬರುವ ಮೊದಲು ಇಲ್ಲಿ ಅವುಗಳ ಜಾತಿ ಇರಲಿಲ್ಲ. ಯಾಕೆಂದರೆ ಇಲ್ಲಿನ ಮೂಲ ಕಾಡು ಕುದುರೆಗಳ ಸಂತಾನ ಸುಮಾರು ಕ್ರಿ.ಪೂರ್ವ ೮೦೦೦ವರ್ಷಗಳ ಹೊತ್ತಿಗೆ ಅಳಿದುಹೋಗಿತ್ತು. ಇದ್ದದ್ದು ಏನಿದ್ದರೂ ಈ ವಾಯುವ್ಯ ಹಾಗು ಪಶ್ಚಿಮ ಭಾಗಗಳಲ್ಲಿ ಭಾರತದ ಕಾಡುಕತ್ತೆಗಳು (ghor khar – Indian wild ass ) ಮಾತ್ರ. ಆದ್ದರಿಂದ ನಂತರ ಕಾಲದಲ್ಲಾದ ಕುದುರೆಗಳ ಆಗಮನವನ್ನು, ಸುಮಾರು ಕ್ರಿ.ಪೂರ್ವ ೧೫೦೦ರ ಸಮಯದಲ್ಲಿ ವಲಸೆಬಂದ, ಸಂಸ್ಕೃತ ಭಾಷೆಗೆ ಮೂಲವೆನ್ನುವ ಇಂಡೋ ಯುರೋಪಿಯನ್ಭಾಷೆಯನ್ನಾಡುತ್ತಿದ್ದ ಇಂಡೋ ಆರ್ಯನ್ನರಿಗೆ ಹೊಂದಿಸಬಹುದು.
ಕಂಚಿನ ಯುಗ, ಹರಪ್ಪ ಅಥವಾ ಸಿಂಧು ನದಿ ನಾಗರೀಕತೆ ನೆಲೆಸಿದ್ದ ಕಾಲದಲ್ಲಿ ಕುದುರೆಗಳು ಇದ್ದವು ಎಂಬುದಕ್ಕೆ ಇರುವ ಪುರಾವೆಗಳು ತುಂಬಾ ವಿರಳ. ಈ ನಾಗರೀಕತೆಗಳ ಮೂಲ ಜಾಗದಲ್ಲಿ ದೊರಕಿರುವ ಮಣ್ಣಿನ ವಸ್ತುಗಳು ಅಥವಾ ಬೇರೆ ಚಿತ್ರಗಳು ಹಲವಾರು ಇತರ ಪ್ರಾಣಿಗಳ ಬಗೆಗೆ ಮಾಹಿತಿ ನೀಡುತ್ತವೆಯೇ ಹೊರತು ಕುದುರೆಗಳ ಇರುವಿಕೆಯನ್ನ ಉಲ್ಲೇಖಿಸುವುದಿಲ್ಲ. ಅವುಗಳಲ್ಲಿ ಕೆಲವೇ ಕೆಲವು ಈ ಮಣ್ಣಿನ ಮೂರ್ತಿ, ಆಟಿಕೆಗಳು ಹಾಗು ಹಲ್ಲು ಮತ್ತು ಮೂಳೆಯ ಪಳೆಯುಳಿಕೆಗಳು ಕುದುರೆಯನ್ನ ಹೋಲಿವೆ. ಆದರೂ ಕನಿಷ್ಠ ಹರಪ್ಪ ನಾಗರೀಕತೆಯ ಕೊನೆಯ ಕಾಲದವರೆಗಂತೂ , ಅವುಗಳನ್ನ ಸಾಕಾಣಿಕೆಗೆ ಒಗ್ಗಿಸಲಾಗಿತ್ತು ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯ ದೊರೆತಿಲ್ಲ. ನಂತರದ ಕಾಲದಲ್ಲಿ ಕುದುರೆಗಳ ಬಗ್ಗೆ ಯಾವುದೇ ಉಲ್ಲೇಖವಿದ್ದರೂ, ಅದು ಮಧ್ಯ ಏಷ್ಯಾ ಖಂಡ ಅಥವಾ ಇರಾನ್, ಪರ್ಷಿಯಾದಿಂದ ವಲಸೆ ಬಂದವರು ಹರಪ್ಪಾದ ಜನರ ಜೊತೆ ಮಿಳಿತವಾಗಿರುವುದರ ಕಾರಣ ಇರಬಹುದು. ಇತ್ತೀಚಿಗೆ ಉತ್ತರ ಪ್ರದೇಶದ ಸನೌಲಿ(Sanauli) ಯಲ್ಲಿ ನೆಡೆದ ಉತ್ಖನನದಲ್ಲಿ, ಕ್ರಿ ಪು. ೨೦೦೦- ೧೮೦೦ ರ ಕಾಲದ, ಮೂರು ಬಲವಾದ ಚಕ್ರವುಳ್ಳ ರಥಗಳು ದೊರೆತಿವೆ. ಇವುಗಳು ಕುದುರೆಗಳನ್ನ ಬಳಸಿ ಓಡಿಸಬಹುದಾದ ರಥಗಳಂತಿವೆ.
ಇಂತಹ ಪುರಾವೆಗಳು ಕುದುರೆಯ ವಿಷ್ಯದ ಬಗ್ಗೆ ಬೆಳಕು ಚೆಲ್ಲಿದರೂ, ಭಾರತೀಯ ಕಂಚಿನ ಯುಗದಲ್ಲಿ ಅವುಗಳಿದ್ದ ಸ್ಪಷ್ಟತೆಯ ಬಗ್ಗೆ ಇನ್ನೂ ಹಲವಾರು ಚರ್ಚೆ ಸಂಶೋಧನೆಗಳು ಆಗುತ್ತಲೇ ಇವೆ. ಕುದುರೆಗಳು ಹಾಗು ಅವುಗಳು ಓಡಿಸುತ್ತಿದ್ದ ರಥಗಳು ಇಂಡೋ ಆರ್ಯನ್ನರ ಜೀವನ ಶೈಲಿಯ ಮುಖ್ಯ ಅಂಗವಾಗಿತ್ತು. ಇಂಡೋ ಆರ್ಯನ್ನರು ಭಾರತಕ್ಕೆ ವಲಸೆ ಬರುವ ಕಾಲಕ್ಕೆ, ಇಲ್ಲಿನ ಹರಪ್ಪ ನಾಗರಿಕತೆಯು ನಿಧಾನವಾಗಿ ತನ್ನ ವೈಭವವನ್ನು ಕಳೆದುಕೊಂಡು ಅವನತಿಯ ಅಂಚಿನಲ್ಲಿತ್ತು. ಆಗ ಇಂಡೋ ಆರ್ಯನ್ನರು ತಮ್ಮ ಕುದುರೆಗಳನ್ನು ಮತ್ತು ರಥಗಳನ್ನು ಸಾಗಾಟದ, ಯುದ್ಧದ ಸಾಧನವಾಗಿಸಿಕೊಂಡು, ಬಹುಪಾಲು ಉತ್ತರ ಭಾರತದ ಭಾಗದಲ್ಲಿ ನೆಲೆಯೂರಿದರು.
ಈ ಕುದುರೆಗಳ ಕೊಡುಗೆಯನ್ನ ಹೊರತುಪಡಿಸಿ, ಆರ್ಯನ್ನರ ಸಾಧನೆಯೆಂದರೆ ವೇದಗಳ ರಚನೆ. ಶ್ಲೋಕ ಹಾಗು ಮಂತ್ರಗಳಿಂದಕೂಡಿದ ೪ ವೇದಗಳು ಹಿಂದೂ ಧರ್ಮದ ಪುರಾತನ ಪಠ್ಯ ಎನಿಸಿಕೊಂಡಿವೆ. ಇದು ಬಾಯಿಂದ ಬಾಯಿಗೆ ಹರಡಿ, ಆಮೇಲೆ ಅವುಗಳನ್ನು ಬರವಣಿಗೆಯ ರೂಪಕ್ಕೆ ತಂದರು. ಇದು ವೈದಿಕ ಧರ್ಮಕ್ಕೆ ಆಧಾರವಾಯಿತು ಮತ್ತು ತರುವಾಯ ಹಿಂದೂ ಧರ್ಮವಾಗಿದೆ.
ವೇದಗಳಲ್ಲಿಯೇ ಹಳೆಯದಾದ್ದು ಋಗ್ವೇದ. ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ ಕುದುರೆಗೆ ಇರುವ ಮಹತ್ವವನ್ನ ಈ ಋಗ್ವೇದವೇ ಒತ್ತಿ ಹೇಳಿದೆ. ಇದರಲ್ಲಿ ನಮಗೆ ಆಶ್ಚರ್ಯವೆನಿಸುವ ಅಂಶವೆಂದರೆ, ಋಗ್ವೇದದಲ್ಲಿ ಕುದುರೆಗಳ ಬಗೆಗೆ ೨೧೫ ಬಾರಿ ಉಲ್ಲೇಖವಾಗಿದೆ. ಇದು ಗೋವಿನ ಉಲ್ಲೇಖಗಿಂತ ೩೯ ಪಟ್ಟು ಜಾಸ್ತಿ. ಇದರಲ್ಲಿನ ಶ್ಲೋಕಗಳು, ಕುದುರೆಗಳು ವೇದಕಾಲದ ಸಮರಗಳಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿತ್ತು ಎಂದು ನಿರೂಪಿಸುತ್ತವೆ. ಹಾಗೆಯೇ, ವೀರ ಶೂರರಾದ ಸೈನಿಕರು ಈ ಕುದುರೆಗಳಿಂದ ಓಡಿಸಲ್ಪಟ್ಟ ರಥಗಳ ಮೇಲೆ ವಿಜೃಂಭಿಸುವುದನ್ನ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ. ಆ ಬರಹಗಳು ಸೈನಿಕ ನಾಯಕ ಯುದ್ಧಕ್ಕೆ ತೆರಳುವಾಗ ಅವನ “ಮುಖವು ಗುಡುಗುವ ಮೋಡದಂತೆ ಇವೆ” ಎಂದು ವರ್ಣಿಸುತ್ತವೆ. ಕುದುರೆಯು ಒಂಟಿಗಾಲಿನ ಮೇಲೆ ಬಾಗುವುದುದನ್ನು ಸ್ತ್ರೀಯೊಬ್ಬಳು ತನ್ನ ಪ್ರೀತಿಯ ಸ್ನೇಹಿತೆಯನ್ನು ಆಲಂಗಿಸಿ ಬಗ್ಗಿ ಕಿವಿಯಲ್ಲಿ ಏನೋ ಹೇಳುವಂತಿದೆ” ಎಂದು ವರ್ಣಿಸುವ ಮೂಲಕ ಕುದುರೆಯನ್ನು ಶೃಂಗಾರಮಯ ಪ್ರತಿಮೆಯನ್ನಾಗಿಸುತ್ತದೆ. ಕುದುರೆಯ ಬೆನ್ನಿಗೆ ಬಿಗಿದಿರುವ ಜೀನು ಹಗ್ಗ ಹೆಣ್ಣಿನ ಧ್ವನಿಯಂತೆ ಮಧುರ ಸದ್ದು ಮಾಡುತ್ತ ನಿನ್ನನ್ನು ಸುರಕ್ಷಿತವಾಗಿ ರಣಾಂಗಣಕ್ಕೆ ಕೊಂಡೊಯ್ಯುತ್ತದೆ” ಎನ್ನುವ ಮಾತುಗಳೂ ಅಲ್ಲಿವೆ. ಹಾಗೆಯೇ ಶ್ಲೋಕಗಳು ತನ್ನ ರಥದಲ್ಲಿ ಕುದುರೆಯ ನಾಗಾಲೋಟವನ್ನ ಪ್ರಶಂಸಿಸುತ್ತದೆ : “ತನ್ನ ಶಕ್ತಿಯುತ ಗೊರಸುಗಳಿಂದ ಅತಿ ವೇಗವಾಗಿ ರಥವನ್ನ ಓಡಿಸುತ್ತಾ, ಎಲ್ಲರನ್ನ ಹಿಂದಿಕ್ಕುತ್ತವೆ. ಹಾಗೆಯೆ ತನ್ನ ಹರಿತವಾದ ಗೊರಸುಗಳ ತುದಿಯಿಂದ ವೈರಿಗಳನ್ನ ಮೆಟ್ಟಿ ಹೀನಾಯವಾಗಿ ಸೋಲಿಸುತ್ತವೆ. ಯುದ್ಧಕಾಲದಲ್ಲಿ ಅಥವಾ ಅಷ್ಟೇ ಭಯಾನಕವಾದ, ಕುದುರೆಗಳ ಸಾಂಪ್ರದಾಯಕ ಮಹತ್ವವನ್ನ ತಿಳಿಸುವ, ಅಶ್ವಮೇಧ ಯಜ್ಞದ ಸಮಯದಲ್ಲಿ, ಶ್ರೇಷ್ಠ ರಾಜರಿಗೆ ಆಶೀರ್ವದಿಸಲು ರಾಜಪುರೋಹಿತರು ಈ ಶ್ಲೋಕಗಳನ್ನ ಉಚ್ಚರಿಸುತ್ತಿದ್ದರು. ಬಹುಪಾಲು ರಾಜ್ಯಗಳನ್ನ ಗೆದ್ದು ಚಕ್ರವರ್ತಿಯಾದ ಮೇಲೆ ಅದನ್ನ ನಿರೂಪಿಸಲು ರಾಜರು ಮಾಡುವ ಕಟ್ಟಕಡೆಯ ಸಮಾರಂಭ ಈ ಅಶ್ವಮೇಧ ಯಜ್ಞ. ಈ ಯಾಗ, ಅವರ ಆಡಳಿತವನ್ನ ಪವಿತ್ರ ಹಾಗು ಅಮರವಾಗಿಸುತ್ತದೆ ಎಂಬ ನಂಬಿಕೆ. ಇದನ್ನ ರಾಮಾಯಣ ಹಾಗು ಮಹಾಭಾರತ ಎರಡರಲ್ಲೂ ಉಲ್ಲೇಖಿಸಲಾಗಿದೆ.
ಧರ್ಮಶಾಸ್ತ್ರದಲ್ಲಿ ಹೇಳುವ ಹಾಗೆ ಇದರ ಕಷ್ಟಕರವಾದ ನಿಯಮಗಳು, ಸಂಪ್ರದಾಯಗಳನ್ನ ನೋಡಿದರೆ, ಆ ಕಾಲದಲ್ಲಿಯೂ ಈ ಯಾಗ ಅತಿ ವಿರಳವಾಗಿತ್ತು ಎನ್ನುವುದು ಆಶ್ಚರ್ಯಕರವಾಗೇನು ಕಾಣುವುದಿಲ್ಲ. ಬಹಳ ವಿಸ್ತಾರವಾಗಿರುವ ಈ ಯಜ್ಞ , ಅದಕ್ಕಾಗಿಯೇ ಮೀಸಲಿಟ್ಟ ಆ ಒಂದು ಕುದುರೆಯ ಬಲಿಯಲ್ಲಿ ಕೊನೆಗೊಳ್ಳುತ್ತದೆ. ಈ ಬಲಿಯ ಕುದುರೆ, ಪೌರಾಣಿಕ ಕಥೆಗಳಲ್ಲಿ ಬರುವ “ಉಚ್ಚೈಶ್ರವಸ್ಸು” (ದೇವಾಸುರರು ಅಮೃತ ಪ್ರಾಪ್ತಿಗಾಗಿ ಕ್ಷೀರ ಸಮುದ್ರವನ್ನು ಕಡೆದಾಗ ಉದ್ಭವಿಸಿದ ಕುದುರೆ) ನ ಹಾಗೆ ಬಿಳಿಯಾಗಿ ಮತ್ತು ಅತಿ ವೇಗವನ್ನು ಹೊಂದಿರಬೇಕು . ಕೆಲವೊಂದು ಉಲ್ಲೇಖದ ಪ್ರಕಾರ ಕಪ್ಪು ಬಿಳಿ ಅಥವಾ ಕಂದು ಬಿಳಿ ಇರುವ ಕುದುರೆಗಳನ್ನೂ, ಗಮನಾರ್ಹ ನೋಟವಿರುವುದರಿಂದ, ಬಳಸಬಹುದು. ಜೊತೆಗೆ , ತುಂಬಾ ಅಂದದ ರಾತ್ರಿನೀಲಿ ಬಣ್ಣದ ಕೆಸರವುಳ್ಳ ಕುದುರೆಯೂ ಇದಕ್ಕೆ , ಅರ್ಹ. ಹೀಗೆ, ಈ ಗುಣಗಳುಳ್ಳ ಕುದುರೆಯನ್ನ ನೂರಾರು ರಾಜಕುಮಾರರು ಮತ್ತು ಸೈನಿಕರೊಡಗೂಡಿ, ಒಂದು ವರ್ಷದ ಕಾಲ, ಅದಕ್ಕೆ ಬೇಕಾದಂತೆ ಅಲೆಯಲು ಬಿಡಲಾಗುತ್ತದೆ. ಇವರು ಆ ಪವಿತ್ರ ಕುದುರೆಯನ್ನ ಕಾಪಾಡಬೇಕು ಹಾಗು ಅದು ಓಡಾಡಿದ ರಾಜ್ಯದ ರಾಜರು ಅದನ್ನ ಬಂಧಿಸದರೆ ಅವರೊಂದಿಗೆ ಯುದ್ಧ ಮಾಡಿ ಗೆದ್ದು ಆ ಕುದುರೆಯನ್ನ ಮರಳಿ ಪಡೆಯಬೇಕು. ಹೀಗೆ ಸೋತ ರಾಜರು ಮುಂದೆ ಈ ಅಶ್ವಮೇಧ ನೆಡೆಸುತ್ತಿರುವ ರಾಜನ ಅಧೀನದಲ್ಲಿರಬೇಕಾಗುತ್ತದೆ. ಅಂತಿಮವಾಗಿ, ಆ ಕುದುರೆಯನ್ನ ಅದರ ಮೂಲ ರಾಜ್ಯದಲ್ಲಿ, ಮೊದಲೇ ಹಲವಾರು ಇತರ ಸಾಕುಪ್ರಾಣಿಗಳನ್ನ ಬಲಿ ಕೊಟ್ಟು ರಕ್ತಸಿಕ್ತವಾಗಿರುವ ಜಾಗದಲ್ಲಿ, ಬಲಿ ಕೊಡಲಾಗುತ್ತದೆ.
ಕುದುರೆಯನ್ನ ಬಲಿ ಕೊಡಲು ಹಲವಾರು ವಿಧದ ಕ್ರಮಗಳನ್ನ ಬಳಸುತ್ತಿದ್ದರು. ಬಲಿ ಮುಗಿಯುವವರೆಗೂ ಬಲಿ ಕೊಡುವವನ ಜೊತೆ ಇನ್ನಿಬ್ಬರು ಆ ಕುದುರೆಯು ಶಾಂತಿಯಿಂದ ಇರುವಂತೆ ನೋಡಿಕೊಳ್ಳಬೇಕಾಗಿತ್ತು. ಹೆಚ್ಚು ನೋವಿಲ್ಲದೆ ಬೇಗ ಸಾಯಿಸಲು, ಅದರ ಕತ್ತನ್ನು ಹಿಸುಕುತ್ತಿದ್ದರು. ಈ ಬಲಿಯ ಪ್ರಕ್ರಿಯೆಯಲ್ಲಿ ರಾಜ್ಯದ ಮಹಾರಾಣಿಯ ಮುಖ್ಯ ಪಾತ್ರವಿತ್ತು. ಆಕೆ, ಸತ್ತ ಕುದುರೆಯೊಂದಿಗೆ ಲೀನವಾಗಲೋ ಎಂಬಂತೆ ಸಾಂಕೇತಿಕವಾಗಿ ಅದರ ಪಕ್ಕ ಸೆರಗು ಮುಚ್ಚಿ ಕೂರಬೇಕಾಗಿತ್ತು. ಆದರೆ ಇಷ್ಟೂ ಪ್ರಕ್ರಿಯೆಗಳು ನೆಡೆದು ಕುದುರೆ ಸಾಯುವಾಗ, ತಾನು ತನ್ನ ಯಜಮಾನನ ಎಲ್ಲ ಪಾಪಗಳನ್ನ ಮನ್ನಿಸಿ, ಒಳ್ಳೆಯದನ್ನ ಆಶೀರ್ವದಿಸು ಎಂದು ಬೇಡಲು ಸ್ವರ್ಗಕ್ಕೆ ಹೋಗುತ್ತೇನೆ ಎಂದು ಅದಕ್ಕೇನೂ ಗೊತ್ತಿರಲಿಕ್ಕಿಲ್ಲ- “ನೀನು ಇದರಿಂದ ಕಷ್ಟಕ್ಕೊಳಗಾಗುವುದಿಲ್ಲ ಅಥವಾ ಸಾಯುವುದೂ ಇಲ್ಲ . ನೀನು ನೇರವಾಗಿ, ಸುಲಭ ದಾರಿಯಿಂದ ದೇವರ ಬಳಿಗೆ ಹೋಗುತ್ತೀಯಾ……. ಈ ಕುದುರೆ ನಮಗೆ ಒಳ್ಳೆಯ ಜಾನುವಾರುಗಳನ್ನು, ಇದರಂಥ ಕುದುರೆಗಳನ್ನು, ಗಂಡು ಸಂತಾನವನ್ನೂ, ಆಯುರಾರೋಗ್ಯವನ್ನೂ ಕರುಣಿಸಲಿ. ಅದಿತಿ ನಮ್ಮನ್ನ ಎಲ್ಲಾ ಪಾಪಗಳಿಂದ(ಈ ಕುದುರೆಯನ್ನ ಕೊಂಡ ಪಾಪದಿಂದಲೂ) ಮುಕ್ತಿ ಕೊಡಲಿ. ಈ ಕುದುರೆ ಬಲಿ ನಮಗೆ ಸಾರ್ವಭೌಮತ್ವನ್ನ ನೀಡಲಿ”.
ಕುದುರೆಯು ಒಂದು ಪ್ರತಿಮೆಯಾಗಿ ಪುನರುಕ್ತಗೊಳ್ಳುತ್ತಲೇ ಬಂದು, ಅದು ಅನೇಕ ಸ್ಥಳೀಯ ಸಂಪ್ರದಾಯಗಳಲ್ಲಿ ಬಹುರೂಪಿಯಾದ ಅರ್ಥ, ಸ್ವರೂಪಗಳನ್ನು ಪಡೆದುಕೊಂಡಿದೆ. ಈ ಪ್ರಕ್ರಿಯೆಯ ಜೊತೆಗೇ ಕುದುರೆಯು ಯುದ್ಧಕಾಲದ ಒಂದು ಮುಖ್ಯ ಆಯುಧವಾಗಿ ರೂಪುಗೊಳ್ಳುತ್ತ ಬಂದದ್ದೂ ತಿಳಿಯುತ್ತದೆ.
ಕ್ರಿಸ್ತಶಕದ ಆರಂಭದವರೆಗೂ, ಭಾರತದ ಯುದ್ಧಭೂಮಿಯಲ್ಲಿ ರಥಗಳನ್ನು ನಿಲ್ಲಿಸುತ್ತಿದರೇ ಹೊರತು, ಓಡಿಸುವ ಕ್ರಮ ಇರಲಿಲ್ಲ. ಏಳನೇ ಶತಮಾನದ ನಂತರವಷ್ಟೇ ಈ ರಥಗಳು ಕುದುರೆಗಳಿಂದ ಓಡಿಸಲ್ಪಡುತ್ತಿದ್ದವು. ಭಾರತದ ಮೊದಲ ದೊಡ್ಡ ಸಾಮ್ರಾಜ್ಯವಾಗಿದ್ದ ಮೌರ್ಯವಂಶದಲ್ಲಿ ಅಶ್ವದಳ ಅವರ ಸೈನ್ಯದ ಬಹುಮುಖ್ಯ ಅಂಗವಾಗಿತ್ತು. ಈ ಮೌರ್ಯವಂಶ ಕ್ರಿ.ಪೂರ್ವ ಸುಮಾರು ೪ ರಿಂದ ೨ನೇ ಶತಮಾನದವರೆಗೂ ಭಾರತವನ್ನು ಆಳಿತು. ಈ ಕಾಲದಲ್ಲಿಯೇನಮ್ಮಲ್ಲಿ ಕುದುರೆಗಳ ತಳಿ ಉತ್ಪನ್ನ ಸಂಸ್ಥೆಗಳು ಹಾಗು ದೂರದ ದೇಶಗಳಿಂದ ಅವುಗಳ ಆಮದು ಎಲ್ಲ ಪ್ರಾರಂಭವಾಯಿತೆಂದು ಹೇಳಬಹುದು.
ಅನುವಾದ : ಅರ್ಪಿತಾ ಭಟ್
ಅರ್ಥಪೂರ್ಣ ಮತ್ತು ಮಹತ್ವಯುತ ಲೇಖನ ಮತ್ತಷ್ಟು ಲೇಖನಗಳು ಹೊರ ಬರಲಿ.