ಪ್ರಸ್ತಾಪದ ಮೊದಲ ಪ್ಯಾರಾದಲ್ಲೇ ಕೋವಿಡ್-೧೯ರ ಪಿಡುಗಿನಿಂದಾಗಿ ಜಾರಿಯಾದ ಲಾಕ್‌ಡೌನ್ ಇಂದ ಅಪಾರವಾಗಿ ಉದ್ಯೋಗ ನಷ್ಟ ಆಗಿದೆ ಹಾಗೂ ಹಿಂದೆ ಯಾವಾಗಲೂ ಜನ ಈ ಪ್ರಮಾಣದಲ್ಲಿ ಕೆಲಸ ಕಳೆದುಕೊಂಡಿರಲಿಲ್ಲ ಎಂಬ ಉಲ್ಲೇಖ ಬರುತ್ತದೆ. ಆದರೆ ಪ್ರಸ್ತಾಪನೆಯಲ್ಲಿ ಸೂಚಿಸಿರುವ ಕ್ರಮ ಒಂದು ತಾತ್ಕಾಲಿಕ ಕ್ರಮವಲ್ಲ, ಬದಲಿಗೆ ಅದನ್ನು ಒಂದು ಶಾಶ್ವತ ಕ್ರಮವನ್ನಾಗಿಯೇ ಯೋಚಿಸಲಾಗಿದೆ. ಇದು ಒಳ್ಳೆಯದೆ. ಯಾಕೆಂದರೆ ಕೋವಿಡ್-೧೯ರಿಂದ ಸೃಷ್ಟಿಯಾದ ಸಂಕಷ್ಟ ಎಷ್ಟು ಭಯಾನಕವಾಗಿತ್ತು ಅಂದರೆ ಉದ್ಯೋಗವನ್ನು ಸೃಷ್ಟಿಸಲು ತೆಗೆದುಕೊಳ್ಳುವ ಯಾವುದೇ ತಾತ್ಕಾಲಿಕ ಪರಿಹಾರವೂ ಸ್ವಾಗತವೇ. ಜಾನ್ ಅವರ ಪ್ರಸ್ತಾಪದಲ್ಲಿ ಹಾಗೂ ದೇಬ್ರಾಜ್ ಅವರ ಪ್ರತಿಕ್ರಿಯೆಯಲ್ಲಿ ಉದ್ಯೋಗದ ಹಕ್ಕನ್ನು ಭಾರತದಲ್ಲಿ ಪೌರತ್ವದ ಹಕ್ಕಾಗಿ ಮಾಡುವ ಕಡೆಗೆ ಒಂದು ಹೆಜ್ಜೆಯಾಗಿ ನೋಡಲಾಗಿದೆ. ಹಾಗಾಗಿ ಡ್ಯುಯೆಟ್ ಅನ್ನು ಒಂದು ಶಾಶ್ವತ ಕ್ರಮವಾಗಿ ಗ್ರಹಿಸಲಾಗಿದೆ ಅನ್ನುವ ದೃಷ್ಟಿಕೋನದಿಂದಲೇ ಪರಿಶೀಲಿಸುತ್ತೇನೆ. ಉದ್ಯೋಗವನ್ನು ಪೌರತ್ವದ ಹಕ್ಕಾಗಿ ನೋಡುವುದು ಒಂದು ಆಕರ್ಷಕ ಆಲೋಚನೆ. ಆದರೆ ಪ್ರಸ್ತಾವನೆಯ ವಿನ್ಯಾಸವನ್ನು ವಿವರವಾಗಿ ನೋಡುವುದಕ್ಕೆ ಮುಂಚೆ ನಾನು ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳುತ್ತೇನೆ. ಹಲವು ಓದುಗರಿಗೂ ಈ ಪ್ರಶ್ನೆಗಳು ಬಂದಿರಬಹುದು. ಅವರೂ ಅವುಗಳಿಗೆ ಉತ್ತರವನ್ನು ನಿರೀಕ್ಷಿಸುತ್ತಿರಬಹುದು.
ಡ್ಯುಯಟ್ ಕೂಡ ಮನರೇಗಾ ರೀತಿಯಲ್ಲಿ ಉದ್ಯೋಗ ಸೃಷ್ಟಿಸುವ ಕಾರ್ಯಕ್ರಮ. ಆದರೆ ಅವೆರಡರ ನಡುವೆ ಕೆಲವು ಮುಖ್ಯವಾದ ವ್ಯತ್ಯಾಸಗಳಿವೆ. ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ವರ್ಷವಿಡೀ ಇರುವುದಿಲ್ಲ. ಅದು ಕೆಲವು ಕಾಲದಲ್ಲಿ ಮಾತ್ರ ನಡೆಯುವ ಕ್ರಿಯೆ. ಹಾಗಾಗಿ ಮನರೇಗಾವನ್ನು ವಿಮಾ ಯೋಜನೆಯಾಗಿ ಯೋಜಿಸಿರುವುದರಿಂದ ಅದು ಹೆಚ್ಚು ಆಕರ್ಷಕವಾಗಿದೆ. ಕಾಲಿಕ ನಿರುದ್ಯೋಗದ ಸಮಯದಲ್ಲಿ ಅಥವಾ ಕ್ಷಾಮದ ವರ್ಷದಲ್ಲಿ ಆಸರೆಗೆ ಅದು ಅವಕಾಶವನ್ನು ಒದಗಿಸುತ್ತದೆ. ಆದರೆ ನಗರದ ಉತ್ಪಾದನೆ ಕಾಲಿಕವಲ್ಲ.
ಹಾಗಾದರೆ ಡ್ಯುಯಟ್ ಯಾಕೆ ಬೇಕು? ಡ್ಯುಯೆಟ್‌ನಿಂದ ಏನು ಅನುಕೂಲ? ನನಗೆ ಅರ್ಥವಾದಂತೆ, ಅದನ್ನು ನಗರದಲ್ಲಿ ಕಾಡುತ್ತಿರುವ ನಿರುದ್ಯೋಗ ಹಾಗೂ ನಗರದ ಅವನತಿ ಈ ಎರಡೂ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ರೂಪಿಸಲಾಗಿದೆ. ಸಧ್ಯದ ಪರಿಸ್ಥಿತಿಯಲ್ಲಿ ನಗರದ ಮೂಲಸೌಕರ್ಯ ಸಮರ್ಪಕವಾಗಿಲ್ಲ. ಮತ್ತು ನಗರದಲ್ಲಿ ನಿರುದ್ಯೋಗ ಇದೆ ಅನ್ನುವುದು ವಾಸ್ತವ. ಹಾಗಾದರೆ ನಗರಪಾಲಿಕೆಗಳು ನಿರುದ್ಯೋಗಿಗಳನ್ನು ನೇಮಿಸಿಕೊಂಡು ರಿಪೇರಿ, ಶುಚಿ, ಮತ್ತು ಮೂಲಸೌಕರ್ಯದ ನಿರ್ಮಾಣ ಇತ್ಯಾದಿ ಕೆಲಸಗಳನ್ನು ಏಕೆ ಮಾಡಿಸಬಾರದು? ಅವುಗಳಲ್ಲಿ ಅದಕ್ಕೆ ಬೇಕಾದ ಸಂಪನ್ಮೂಲ ಇಲ್ಲದೇ ಇರಬಹುದು. ಅವರಿಗೆ ತೆರಿಗೆ ಸಂಗ್ರಹಿಸುವದಕ್ಕೆ ಇರುವ ಅವಕಾಶ ಕಡಿಮೆ. ಹಾಗಾದರೆ ಕೇಂದ್ರ ಸರ್ಕಾರದಿಂದ ಹೆಚ್ಚು ಸಂಪನ್ಮೂಲಗಳನ್ನು ನಗರದ ಸ್ಥಳೀಯ ಸರ್ಕಾರಕ್ಕೆ (ನಗರ ಪಾಲಿಕೆಗೆ) ಬರುವಂತೆ ಏಕೆ ಮಾಡಬಾರದು? ಅದಕ್ಕೆ ಇರಬಹುದಾದ ಒಂದು ಕಾರಣ ಅಂದರೆ ನಗರಪಾಲಿಕೆಗಳು ನಿರುದ್ಯೋಗವನ್ನು ಪರಿಹರಿಸುವ ಉದ್ದೇಶವನ್ನು ನಿರ್ಲಕ್ಷಿಸಿರಬಹುದು. ಕೆಲಸಗಾರರನ್ನು ಕೂಲಿಗೆ ನೇಮಿಸಿಕೊಳ್ಳುವುದಕ್ಕಿಂತ ಬಂಡವಾಳವನ್ನು ಸೇರಿಸುವುದರಲ್ಲೇ ಹೆಚ್ಚು ಖರ್ಚು ಮಾಡುವುದಕ್ಕೆ ಬಯಸಬಹುದು. ಇದು ಡ್ಯುಯೆಟ್‌ಗೆ ಒಂದು ಸಮರ್ಥನೆ ಆಗಬಹುದಾ?
ನಗರಗಳಲ್ಲಿನ ನಿರುದ್ಯೋಗಕ್ಕೆ ಕಾರಣಗಳೇನು? ಮೊದಲಿಗೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು. ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳಿಗಳಿಂದ ನಗರಕ್ಕೆ ಬರುತ್ತಿದ್ದಾರೆ. ಅಂದರೆ ನಗರ ಪ್ರದೇಶಗಳಲ್ಲಿ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇದೆ ಎಂದಾಗುತ್ತದೆ. ಹಾಗಾದರೆ ಅವಶ್ಯಕ ಕೌಶಲವಿರುವ ಕೆಲಸಗಾರರ ಕೊರತೆ ಪ್ರಸ್ತುತ ನಿರುದ್ಯೋಗಕ್ಕೆ ಕಾರಣವಿರಬಹುದೆ? ಹೌದಾದರೆ ಈಗ ಮುಖ್ಯವಾಗಿ ಆಗಬೇಕಾಗಿರುವುದು ಕೌಶಲವನ್ನು ಕಲಿಸುವ ಕಾರ್ಯಕ್ರಮ. ಅಥವಾ ಡ್ಯುಯೆಟ್ ಅನ್ನು ಕೇವಲ ಲಭ್ಯವಿರುವ ಕೌಶಲಕ್ಕೆ ಸರಿಹೊಂದುವ ಕೆಲಸವನ್ನು ಸೃಷ್ಟಿಸುವ ಒಂದು ಪ್ರಯತ್ನವಾಗಿ ನೋಡಬೇಕಾ? ಜೊತೆಗೆ ಕೇಂದ್ರ ಸರ್ಕಾರ ಹೇಳುತ್ತಿರುವ ಗ್ರಾಮೀಣ ಮೂಲ ಸೌಕರ್ಯ, ಅಥವಾ ಸಾರ್ವಜನಿಕ ಶಿಕ್ಷಣ ಅಥವಾ ಸಾರ್ವಜನಿಕ ಆರೋಗ್ಯ ಇತ್ಯಾದಿಗಳಿಗಿಂತ ನಗರ ಉದ್ಯೋಗಕ್ಕೆ ಆದ್ಯತೆ ನೀಡಬೇಕಾ ಅನ್ನುವ ಪ್ರಶ್ನೆಯೂ ಇದೆ.
ಡ್ಯುಯೆಟ್‌ಗೆ ಇನ್ನೊಂದು ಸಮರ್ಥನೆ ಸಾಧ್ಯ. ಅದನ್ನು ಒಂದು ರೀತಿಯ ನಿರುದ್ಯೋಗ ವಿಮಾ ಯೋಜನೆಯನ್ನಾಗಿ ನೋಡಬಹುದು. ಎಲ್ಲಾ ಮುಂದುವರಿದ ರಾಷ್ಟ್ರಗಳಲ್ಲೂ ನಿರುದ್ಯೋಗ ವಿಮಾ ಯೋಜನಗೆಳು ಇವೆ. ಅದು ತುಂಬಾ ಒಳ್ಳೆಯ ಸುರಕ್ಷಾ ವ್ಯವಸ್ಥೆ. ಆದರೆ ಭಾರತದಲ್ಲಿ ಶೇಕಡ ೯೦ರಷ್ಟು ಉದ್ಯೋಗ ಅಸಂಘಟಿತ ಕ್ಷೇತ್ರದಲ್ಲಿದೆ. ಅದರಲ್ಲಿ ನಿರುದ್ಯೋಗಿಗಳನ್ನು ಗುರುತಿಸುವುದು ಕಷ್ಟ. ಹಾಗಾಗಿ ನೇರವಾಗಿ ಅವಶ್ಯಕತೆಯಿರುವವರಿಗೆ ಉದ್ಯೋಗ ಸಿಗುವಂತೆ ಯೋಜನೆಯನ್ನು ವಿನ್ಯಾಸಗೊಳಿಸಬೇಕು. ಅಥವಾ ಆ ರೀತಿಯಲ್ಲಿ ಉದ್ಯೋಗ ನೆರವು (ಉದ್ಯೋಗದ ಬದಲು ಹಣ)ನೀಡುವ ಯೋಜನೆಯನ್ನು ಯೋಚಿಸಬೇಕು. ಡ್ಯುಯೆಟ್ ಮುಖ್ಯವಾಗಿ ಅಸಂಘಟಿತ (ಅನೌಪಚಾರಿಕ) ಆರ್ಥಿಕತೆಯಲ್ಲಿ ನಿರುದ್ಯೋಗ ವಿಮಾ ಯೋಜನೆಯಾಗಿ ಕೆಲಸ ಮಾಡುತ್ತದಾ? ಬಹುಶಃ ಹೌದು! ಆದರೆ ಅದರಲ್ಲಿ ಕೆಲವು ಆಂತರಿಕ ಸಮಸ್ಯೆಗಳಿವೆ. ಉದ್ಯೋಗ ನೆರವು ಕಾರ್ಯಕ್ರಮ ನೇರವಾಗಿ ಅವಶ್ಯಕತೆಯಿರುವವರಿಗೆ ತಲುಪುವಂತಿರಬೇಕು ಅನ್ನುವುದು ದೈಹಿಕ ಶ್ರಮದ ವಿಷಯದಲ್ಲಿ ಮಾತ್ರ ಸಾಧ್ಯ. ನಿರ್ದಿಷ್ಟ ಕೌಶಲಗಳನ್ನು ನಿರೀಕ್ಷಿಸುವ ಕೆಲಸಗಳ ವಿಷಯದಲ್ಲಿ ಇದು ಕಷ್ಟ. ಅಲ್ಲಿ ನಿಜವಾಗಿ ಕೆಲಸ ಬಯಸುತ್ತಿರುವವರಿಗೆ ಅದು ತಲುಪುವುದು ಕಷ್ಟ. ಎರಡನೆಯದಾಗಿ ಹೆಚ್ಚಿನ ಅಸಂಘಟಿತ ಕೆಲಸಗಳಿಗೆ ಅಧಿಕೃತ ಕನಿಷ್ಠ ಕೂಲಿಗಿಂತ ಕಡಿಮೆ ಕೂಲಿ ಕೊಡಲಾಗುತ್ತದೆ. ಆದರೆ ಡ್ಯುಯಟ್ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ. ಹಾಗಾಗಿ ಮನರೇಗಾ ಕೂಲಿಗೆ ಸಂಬಂಧಿಸಿದಂತೆ ಕಾನೂನುರೀತ್ಯ ಕನಿಷ್ಠ ಕೂಲಿಯನ್ನು ಕೊಡಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಅದಕ್ಕೆ ಅನುಗುಣವಾಗಿ ಡ್ಯುಯೆಟ್ ಕೂಡ ನಡೆದುಕೊಳ್ಳಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಜನ ತಾವು ಸಾಮಾನ್ಯವಾಗಿ ಮಾಡುತ್ತಿರುವ ಕೆಲಸ ಬಿಟ್ಟು ಇಲ್ಲಿಗೆ ಬರುವ ಸಾಧ್ಯತೆ ಇದೆ. ಇದನ್ನು ತಪ್ಪಿಸುವುದು ಹೇಗೆ? ಲಭ್ಯವಿರುವ ವೋಚರಿಗಿಂತ ಜನ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಹುಡುಕಿಕೊಂಡು ಬಂದರೆ ಪರಿಸ್ಥಿತಿ ಏನಾಗಬಹುದು?
ಜೊತೆಗೆ ನಗರದಲ್ಲಿರುವ ನಿರುದ್ಯೋಗಿ ಯಾವ ರೀತಿಯ ಕೆಲಸಗಳನ್ನು ಮಾಡಬಹುದು? ನಿರ್ಮಾಣದ ಕೆಲಸವನ್ನು ಹೆಚ್ಚಾಗಿ ಕೂಲಿ ಕಂಟ್ರಾಕ್ಟರುಗಳು ಕರೆತರುವ ಕಾರ್ಮಿಕರ ತಂಡವು ಮಾಡುತ್ತವೆ ಅಂದುಕೊಂಡಿದ್ದೇನೆ. ಅವರಲ್ಲಿ ಹೆಚ್ಚಿನವರು ಹಳ್ಳಿಗಳಿಂದ ಬಂದ ವಲಸೆ ಕಾರ್ಮಿಕರು. ಪ್ರಣಬ್ ಬರ್ದನ್ ಉಲ್ಲೇಖಿಸುವ ಬಹುಪಾಲು ಕೆಲಸಗಳಿಗೆ ಹೆಚ್ಚಿನ ಕೌಶಲ ಬೇಕು ಅನ್ನಿಸುತ್ತದೆ. ಅದನ್ನು ತರಬೇತಿಯಿಲ್ಲದ ನಗರದ ಯುವಕರಲ್ಲಿ ನಿರೀಕ್ಷಿಸುವುದಕ್ಕೆ ಆಗುವುದಿಲ್ಲ. ಕನಿಷ್ಠ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಕ್ಕೆ ಮುಂಚೆ ಅವರು ಅನುಭವಿ ನುರಿತ ಕೆಲಸಗಾರರ ಅಡಿಯಲ್ಲಿ ಸ್ವಲ್ಪ ದಿನಗಳಾದರೂ ಕೆಲಸ ಮಾಡಿರಬೇಕು. ತರಬೇತಿ ಡ್ಯುಯೆಟಿನ ಒಂದು ಭಾಗ. ಅದನ್ನು ನೀಡುವುದು ಹೇಗೆ? ಕೌಶಲ ಪಡೆದುಕೊಂಡರೆ ನಿರುದ್ಯೋಗಿಗಳಿಗೆ ಡ್ಯುಯೆಟ್ ಇರಲಿ ಇಲ್ಲದಿರಲಿ ಕೆಲಸ ಸಿಗುತ್ತದೆ. ಕೌಶಲವಿರುವ ಕೆಲಸಗಾರನಿಗೆ ಉದ್ಯೋಗ ಸಿಗದೇ ಇರುವ ಸಂದರ್ಭದಲ್ಲಿ ಡ್ಯುಯೆಟ್ ಬೇಕಾಗುತ್ತದೆ. ಅಥವಾ ಡ್ಯುಯೆಟನ್ನು ಮುಖ್ಯವಾಗಿ ತರಬೇತಿ ನೀಡುವ ಹಾಗೂ ಕೌಶಲ ನೀಡುವ ಕಾರ್ಯಕ್ರಮವಾಗಿ ಯೋಚಿಸಬೇಕಾ? ಉದ್ಯೋಗದ ಸ್ಟಾಂಪುಗಳನ್ನು ಸಂಭಾವ್ಯ ಉದ್ಯೋಗದಾತ ಕೌಶಲವಿಲ್ಲದ ಕೆಲಸಗಾರರನ್ನು ತರಬೇತಿ ನೀಡುವುದಕ್ಕಾಗಿ ಬಳಸಿಕೊಂಡರೆ, ಕೌಶಲವಿಲ್ಲದ ಕೆಲಸಗಾರನಿಗೆ ಕೌಶಲದ ಮಟ್ಟವನ್ನು ಹೆಚ್ಚಿಸುವುದಕ್ಕೆ ಸಹಾಯವಾಗುತ್ತದೆ.
ಕೆಲಸ ಮಾಡದೇ ಇರುವ ಸ್ಥಳೀಯ ಸರ್ಕಾರಗಳಿಗೆ ಡ್ಯುಯೆಟ್ ಒಂದು ಪರಿಹಾರ ಎಂದು ಭಾವಿಸಬೇಕೆ? ನಗರಗಳನ್ನು ನೋಡಿಕೊಳ್ಳಲು ನಗರಪಾಲಿಕೆಗಳನ್ನು ಸೃಷ್ಟಿಸಲಾಗಿದೆ. ಅದಕ್ಕಾಗಿ ಒಂದು ಇಡೀ ವ್ಯವಸ್ಥೆಯನ್ನೇ ನಿರ್ಮಾಣವಾಗಿದೆ. ನಗರಪಾಲಿಕೆಯ ಕೌನ್ಸಿಲರುಗಳು ಚುನಾವಣೆಯಲ್ಲಿ ಆಯ್ಕೆಯಾಗಿರುತ್ತಾರೆ. ಚುನಾಯಿತ ಪ್ರತಿನಿಧಿಗಳ ಬಗ್ಗೆ ಆ ಪ್ರದೇಶದ ನಿವಾಸಿಗಳು ಅತೃಪ್ತರಾಗಿದ್ದರೆ ಅವರನ್ನು ಅಧಿಕಾರದಿಂದ ಇಳಿಸಬಹುದು. ನಗರಪಾಲಿಕೆಗಳಿಗೆ ಸಾಮಾಜಿಕ ಕಲ್ಯಾಣವನ್ನು ಸಮರ್ಪಕವಾಗಿ ಸಾಧಿಸುವುದಕ್ಕೆ ಸಾಧ್ಯವಾಗದೇ ಹೋದಲ್ಲಿ, ಡ್ಯುಯೆಟ್ ಹೇಗೆ ಸಮರ್ಪಕವಾಗಿ ನಿರ್ವಹಿಸುತ್ತದೆ? ಬಹುಶಃ ಕೆಲಸದ ತುರ್ತು ಇರುವ ನಿರುದ್ಯೋಗಿಗಳು ಹಾಕುವ ಒತ್ತಡದಿಂದ ಅದು ಚೆನ್ನಾಗಿ ಕೆಲಸ ಮಾಡಬಹುದೇ? ಆದರೆ ಮನರೇಗಾ ರೀತಿಯಲ್ಲಿ ಡ್ಯುಯೆಟನ್ನು ಬೇಡಿಕೆಯನ್ನು ಆಧರಿಸಿದ ಕಾರ್ಯಕ್ರಮವಾಗಿ ಯೋಚಿಸಿಲ್ಲ. ಅದರಿಂದ ಒಂದು ಪ್ರದೇಶದ ನಿರುದ್ಯೋಗಿ ಕೆಲಸಗಾರರಿಗೆ ಸಾಮೂಹಿಕವಾದ ಚೌಕಾಸಿ ಮಾಡುವ ಶಕ್ತಿಯನ್ನು ಬರುವುದಿಲ್ಲ. ಮನರೇಗಾದಲ್ಲಿ ಕೆಲಸಗಾರರ ಕ್ಷೇತ್ರ ಸೃಷ್ಟಿಯಾಗುತ್ತದೆ. ಅಲ್ಲಿ ಎಲ್ಲರೂ ಪರಸ್ಪರ ಪರಿಚಿತರಾಗಿರುತ್ತಾರೆ. ನಿರುದ್ಯೋಗ ಅವರನ್ನು ಒಟ್ಟಿಗೆ ತರುತ್ತದೆ. ಅವರು ಆಯಾ ಪ್ರದೇಶದ ಗ್ರಾಮ ಪಂಚಾಯಿತಿಯ ಮೇಲೆ ಒತ್ತಡ ಹಾಕಿ ಯೋಜನೆಗಳನ್ನು ಕೇಳಬಹುದು. ಉದ್ಯೋಗದ ಪೌರತ್ವದ ಹಕ್ಕನ್ನು ಚಲಾಯಿಸಬಹುದು. ಆದರೆ ನಗರದ ನಿರುದ್ಯೋಗಿಗಳಿಗೆ ಡ್ಯುಯೆಟ್ ಅಂತಹ ಸಾಮೂಹಿಕ ಶಕ್ತಿ ಬರುವುದಿಲ್ಲ. ಅದರಿಂದ ಅಂತಹ ಯಾವುದೇ ಸಾಮೂಹಿಕ ಕ್ರಿಯೆಯ ಸೃಷ್ಟಿಯ ಸಾಧ್ಯತೆಗಳೂ ಕಾಣುತ್ತಿಲ್ಲ. ಹಾಗಿರುವಾಗ ಡ್ಯುಯೆಟ್ ನಗರಪಾಲಿಕೆಗಳಿಗಿಂತ ಚೆನ್ನಾಗಿ ನಗರದ ಆಸ್ತಿಗಳನ್ನಾಗಲಿ ಅಥವಾ ಉದ್ಯೋಗವನ್ನಾಗಲಿ ಸೃಷ್ಟಿಸುತ್ತದೆ ಎಂದು ಭಾವಿಸುವುದಕ್ಕೆ ಹೇಗೆ ಸಾಧ್ಯ?
ಅಂತಿಮವಾಗಿ ಹೆಚ್ಚು ಉದ್ಯೋಗವನ್ನು ಸೃಷ್ಟಿಸುವುದು ಬಹುಮುಖ್ಯ ಗುರಿ ಆಗಬೇಕೇ ಹೊರತು, ನಗರದ ನಿರುದ್ಯೋಗವನ್ನು ಕಡಿಮೆ ಮಾಡುವುದಲ್ಲ. ನಗರದ ನಾವು ಕಾಣುವ ನಿರುದ್ಯೋಗದಲ್ಲಿ ಹ್ಯಾರಿಸ್-ಟೊಡಾರೋ ಮಾದರಿಯ ನಿರುದ್ಯೋಗ ಯಾವುದು? ಅಂದರೆ ನಗರದ ನಿರುದ್ಯೋಗಿಗಳಲ್ಲಿ ಹೆಚ್ಚಿನವರು ಸಂಘಟಿತ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಹಳ್ಳಿಯಿಂದ ನಗರಕ್ಕೆ ವಲಸೆ ಬಂದವರಾ? ಅದು ನಿಜವಾದರೆ ಈ ರೀತಿಯ ನಿರುದ್ಯೋಗ ಮುಂದೆಯೂ ಇರುತ್ತದೆ. ಡ್ಯುಯೆಟ್ ಕನಿಷ್ಠ ಕೂಲಿಯ ಕೆಲಸವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾದರೆ ಒಳ್ಳೆಯ ಕೆಲಸ ಸಿಗುವ ಸಾಧ್ಯತೆ ಹೆಚ್ಚಾಗುವುದರಿಂದ ಹಳ್ಳಿಯಿಂದ ಜನ ವಲಸೆ ಬರುವುದು ಹೆಚ್ಚುತ್ತದೆ.
ಯೋಜನೆಯ ವಿನ್ಯಾಸದ ವಿವರಗಳನ್ನು ಚರ್ಚಿಸುವ ಮೊದಲು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಒಳ್ಳೆಯದು.
ಆಶೋಕ್ ಕೊತ್ವಾಲ್
ಪ್ರಧಾನ ಸಂಪಾದಕರು, ಐಡಿಯಾ ಫಾರ್ ಇಂಡಿಯಾ,
ಯುನಿವರ್ಸಿಟಿ ಆಫ್ ಕೊಲಂಬಿಯಾ
Professor of Economics
Senior Fellow, (BREAD) Bureau for Research and Economic Analysis in Development
Associate, (ThRed) Theoretical Research in Economic Development
Editor-in-Chief, ‘Ideas for India’ (a portal dedicated to the development and policy issues in India). http://www.ideasforindia.in/
ಅನುವಾದ : ಟಿ. ಎಸ್ . ವೇಣುಗೋಪಾಲ್