ಡ್ಯುಯೆಟ್: ಕೆಲವು ಪ್ರಾಯೋಗಿಕ ಕಾಳಜಿಗಳು

ಇಂದು ಜಾನ್ ಡ್ರೇಜ್ ಅವರ ಡ್ಯುಯೆಟ್ ಪ್ರಸ್ತಾವನೆಗೆ ಅಶ್ವಿನಿ ಕುಲಕರ್ಣಿಯವರ ಅಭಿಪ್ರಾಯವನ್ನು ಅನುವಾದಿಸಿ ಪೋಸ್ಟ್ ಮಾಡುತ್ತಿದ್ದೇವೆ. ಅಶ್ವಿನಿ ಕುಲಕರ್ಣಿಯವರು ನಾಶಿಕ್‌ನಲ್ಲಿರುವ ಪ್ರಗತಿ ಅಭಿಯಾನ್ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಬಡತನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಎರಡು ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ. ಪ್ರಗತಿ ಅಭಿಯಾನ್ ನಾಶಿಕ್ ಜಿಲ್ಲೆಯ ಬುಡಕಟ್ಟು ಹಳ್ಳಿಗಳ ಜೊತೆಯಲ್ಲಿ ಕೆಲಸ ಮಾಡುತ್ತಿದೆ. ಅದು ಸಂಶೋಧನೆ ಹಾಗೂ ನೀತಿ ರೂಪಿಸುವ ಕೆಲಸದಲ್ಲಿ ಕೂಡ ತನ್ನನ್ನು ತೊಡಗಿಸಿಕೊಂಡಿದೆ.

 

 

ಭಾರತದ ನಗರಗಳಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆಯನ್ನು ಮನರೇಗಾ ಯೋಜನೆಯ ಒಂದು ವಿಭಿನ್ನ ಮಾದರಿ ಎಂಬಂತೆ ಚರ್ಚಿಸಲಾಗುತ್ತಿದೆ. ಆದರೆ ನಗರಗಳ ಪರಿಸ್ಥಿತಿ ತುಂಬಾ ಭಿನ್ನ. ಸರ್ಕಾರಗಳ ಮೂಲಭೂತ ವ್ಯವಸ್ಥೆಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ತುಂಬಾ ಸಾಮಗ್ರಿಗಳು ಮತ್ತು ವಿಭಿನ್ನ ಬಗೆಯ ಕೌಶಲವಿರುವ ಕೆಲಸಗಾರರು ಬೇಕು. ಮನರೇಗಾ ರೀತಿಯಲ್ಲಿ ಪರಸ್ಪರ ಪರಿಚಯವೇ ಇಲ್ಲದಿರುವ ಕೆಲಸಗಾರರನ್ನು ಯಾದೃಚ್ಛಿಕವಾಗಿ ಆರಿಸಿಕೊಂಡು ತಂಡಗಳನ್ನು ರಚಿಸುವುದಕ್ಕೆ ಸಾಧ್ಯವಿಲ್ಲ. ನೇಮಕಾತಿಯನ್ನು ಸ್ಥಳೀಯವಾಸಿಗಳಿಗೆ ಸೀಮಿತಮಾಡಿಕೊಳ್ಳುವುದರಿಂದ ಕೆಲಸ ಇನ್ನಷ್ಟು ಕಷ್ಟವಾಗುತ್ತದೆ. ಜೊತೆಗೆ ಅವರ ವಸತಿಯ ಪರಿಶೀಲನೆಯ ಸಮಸ್ಯೆಯೂ ಸೇರಿಕೊಳ್ಳುತ್ತದೆ. ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಹಾಗೂ ಅದರ ಮೇಲ್ವಿಚಾರಣೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ಒಂದಿಷ್ಟು ತಿಳುವಳಿಕೆ ನನಗಿದೆ. ಡ್ಯುಯೆಟ್ ಅಡಿಯಲ್ಲಿ ಆ ಯೋಜನೆಗಳು ಹೇಗೆ ನಡೆಯುತ್ತವೆ ಅನ್ನುವುದು ನನಗೆ ಗೊತ್ತಿಲ್ಲ. ಜೊತೆಗೆ ಇದರಿಂದ ತುಂಬಾ ಒಳ್ಳೆಯದಾಗುತ್ತದೆ ಎಂದು ಹೇಗೆ ನಿರೀಕ್ಷಿಸುವುದು? ಇಲ್ಲಿ ಒಳ್ಳೆಯ ಫಲಿತಾಂಶ ಅಂದರೆ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ ಮತ್ತು /ಅಥವಾ ನಗರ ಚೆನ್ನಾಗಿ ಸುಧಾರಣೆಯಾಗುತ್ತದೆ ಎಂಬ ಅರ್ಥದಲ್ಲಿ ಹೇಳುತ್ತಿದ್ದೇನೆ.

 

ಡ್ಯುಯೆಟ್‌ನಿಂದ ಸರ್ಕಾರಕ್ಕೆ ಹೆಚ್ಚಿನ ಖರ್ಚು ಆಗುತ್ತದೆ. ಸರ್ಕಾರದ ಕಂದಾಯದಿಂದ ಮಾಡುವ ಹೆಚ್ಚುವರಿ ಖರ್ಚಿನಲ್ಲಿ ಮೊದಲ ಆದ್ಯತೆಯನ್ನು ನಗರದ ಮೂಲಭೂತ ಸೌಕರ್ಯಗಳಿಗೆ ನೀಡಬೇಕು ಎಂದು ಭಾವಿಸಿಕೊಳ್ಳುವುದಕ್ಕೆ ಸಾಧ್ಯವೇ? ಎರಡನೆಯದಾಗಿ ಹೌದು ಎಂದು ಭಾವಿಸಿಕೊಂಡರೂ ಅದೇ ಹಣವನ್ನು ರಾಜ್ಯ ಸರ್ಕಾರಗಳು ಈಗಿರುವ ವ್ಯವಸ್ಥೆಯಲ್ಲಿ ಖರ್ಚುಮಾಡಿದಾಗ ಬರುವುದಕ್ಕಿಂತ ಉತ್ತಮವಾದ ಫಲಿತಾಂಶ ಡ್ಯುಯೆಟ್‌ನಲ್ಲಿ ಯಾಕೆ ಉಂಟಾಗುತ್ತದೆ? ರಾಜ್ಯ ಸರ್ಕಾರಗಳು ಇದೇ ಮೊಬಲಗನ್ನು ಬಳಸಿಕೊಂಡು ನಗರದ ಮೂಲಭೂತ ಸೌಕರ್ಯವನ್ನು ವಿಸ್ತರಿಸಿದಾಗ ಸೃಷ್ಟಿಯಾಗುವುದಕ್ಕಿಂತ ಹೆಚ್ಚು ಉದ್ಯೋಗವನ್ನು ಅಥವಾ ಹೆಚ್ಚು ಒಳ್ಳೆಯ ಕೆಲಸಗಳನ್ನು ಡ್ಯುಯೆಟ್ ಸೃಷ್ಟಿಸುತ್ತದೆಯೇ? ಹೌದಾದರೆ, ಏಕೆ? ಈಗಿರುವ ವ್ಯವಸ್ಥೆಗಿಂತ ಹೆಚ್ಚಿನ ಕೆಲಸಗಳನ್ನಾಗಲಿ ಅಥವಾ ಉತ್ತಮ ಮೂಲಸೌಕರ್ಯವನ್ನು ಸೃಷ್ಟಿಸದೇ ಹೋದರೆ ಡ್ಯುಯೆಟ್‌ನಿಂದ ಪ್ರಯೋಜನವಾದರೂ ಏನು?

 

ಸದ್ಯಕ್ಕೆ ಸರ್ಕಾರಿ ಕಟ್ಟಡದ ಉಸ್ತುವಾರಿ ಮುಂತಾದ ನಗರದ ಸಾರ್ವಜನಿಕ ಯೋಜನೆಗಳಿಗೆ ರಾಜ್ಯ ಸರ್ಕಾರ ಹಣ ಮೀಸಲಿಡುತ್ತದೆ. ಇದಕ್ಕಾಗಿ ಬರುವ ಅರ್ಜಿಗಳಲ್ಲಿ ಕೆಲವಕ್ಕೆ ಬಜೆಟ್ಟಿನಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಡ್ಯುಯೆಟ್ ಯೋಜನೆಯಲ್ಲಿಯೂ ಆಯ್ಕೆ ಹಾಗೂ ವಿತರಿಸುವ ನಿರ್ಧಾರ ರಾಜ್ಯ ಸರ್ಕಾರದ ಹಿಡಿತದಲ್ಲಿಯೇ ಇರುತ್ತದೆ (ಡ್ರೆಜ್ ಪ್ರಸ್ತಾಪ ೫ನೆಯ ಅಂಶ). ಉದ್ಯೋಗ ಸ್ಟಾಂಪುಗಳನ್ನು ಯಾರು ಪಡೆಯುತ್ತಾರೆ ಎಂಬುದನ್ನು ಸರ್ಕಾರದ ಆಡಳಿತ ವರ್ಗವೇ ನಿರ್ಧರಿಸುತ್ತದೆ. ಅದು ಹೌದಾದರೆ ಡ್ಯುಯೆಟ್ ಇಂದ ಆಯ್ಕೆಯ ಕ್ರಮದಲ್ಲಿ ಸುಧಾರಣೆಯಾಗುವುದಿಲ್ಲ. ಅದು ಅದರ ಉದ್ದೇಶವಲ್ಲ ಅನ್ನುವುದು ಸ್ಪಷ್ಟ. ಹಾಗಾದರೆ ಡ್ಯುಯೆಟ್ ಇಂದ ಹೆಚ್ಚು ಸೂಕ್ತವಾದ ಯೋಜನೆಗಳು ಸೃಷ್ಟಿಯಾಗುತ್ತದೆ ಎಂದು ಭಾವಿಸುವುದಾದರೂ ಹೇಗೆ?
ನಗರ ಕೇಂದ್ರಗಳಲ್ಲಿ ಲೋಕೋಪಯೋಗಿ ಯೋಜನೆಗಳು ಸಾಮಾನ್ಯವಾಗಿ ಕೆಳಕಂಡ ಕೆಲಸಗಳನ್ನು ಮಾಡುತ್ತವೆ: ನೀರು ಸರಬರಾಜು, ನೈರ್ಮಲ್ಯ, ನೀರು ಶುಚಿಗೊಳಿಸುವ ಘಟಕಗಳು, ಪಾರ್ಕು ಇತ್ಯಾದಿಗಳನ್ನು ಸುಸ್ಥಿತಿಯಲ್ಲಿಡುವುದು, ಸರ್ಕಾರಿ ಕಟ್ಟಡಗಳ ನಿರ್ಮಾಣ ಹಾಗೂ ನಿರ್ವಹಣೆ (ಉದಾಹರಣೆಗೆ ಕಛೇರಿಗಳು, ಶಾಲೆಗಳು, ಆಸ್ಪತ್ರೆಗಳು ಇತ್ಯಾದಿ), ರಸ್ತೆ, ರಸ್ತೆ ಬದಿಯ ಗಿಡಗಳು, ದಾರಿದೀಪಗಳು, ಕಸ ವಿಲೇವಾರಿ, ಕೊಳಚೆ ನೀರು ನಿರ್ವಹಣೆ ಇತ್ಯಾದಿ. ಪ್ರಕ್ರಿಯೆ ಕೆಳಕಂಡ ರೀತಿ ಇರುತ್ತದೆ. ಒಂದು ರಾಜ್ಯ ವಿಶ್ವವಿದ್ಯಾನಿಲಯ ಕಟ್ಟಡಕ್ಕೆ ಬಣ್ಣ ಹೊಡೆಸಬೇಕಾಗಿದ್ದರೆ, ಅದು ರಾಜ್ಯ ಸರ್ಕಾರಕ್ಕೆ ಅರ್ಜಿ ಹಾಕಿಕೊಳ್ಳುತ್ತದೆ. ಮನವಿ ಸ್ವೀಕೃತವಾಗಿ ಹಣಕಾಸಿಗೆ ಅನುಮೋದನೆ ಸಿಕ್ಕರೆ, ಟೆಂಡರ್ ಕರೆಯಲಾಗುತ್ತದೆ. ಬೇರೆ ಬೇರೆ ಉದ್ದಿಮೆಗಳು ಟೆಂಡರ್‌ಗೆ ಅರ್ಜಿ ಹಾಕಿಕೊಳ್ಳುತ್ತವೆ. ಅತ್ಯಂತ ಕಡಿಮೆ ಹಣ ಕೇಳಿದ ಉದ್ದಿಮೆಗೆ ಕಾಂಟ್ರಾಕ್ಟ್ ಸಿಗುತ್ತದೆ. ಆಯ್ಕೆಯಾದ ಸಂಸ್ಥೆ ಒಬ್ಬ ಕಾರ್ಮಿಕ ಕಂಟಾಕ್ಟ್‌ದಾರನಿಗೆ ಸೂಕ್ತ ಕೌಶಲವಿರುವ ಕಾರ್ಮಿಕರನ್ನು ಒದಗಿಸುವುದಕ್ಕೆ ಉಪಕಾಂಟ್ರಾಟ್ಟ್ ಕೊಡುತ್ತದೆ. ಕಂಟ್ರಾಕ್ಟ್ ಪಡೆದ ಉದ್ದಿಮೆ ತನ್ನದೇ ಉಪಕರಣಗಳನ್ನು, ವಿಧಾನವನ್ನು ಬಳಸಿ ಬಣ್ಣ ಹೊಡೆಯುವ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ.

 

ಈ ಉದ್ದಿಮೆಗಳಿಗೆ ಕೂಲಿಯ ಕಂಟ್ರಾಕ್ಟರುಗಳು ಏಕೆ ಬೇಕು? ಯಾಕೆಂದರೆ ಅಂತಹ ನಿರ್ಮಾಣ ಹಾಗೂ ಉಸ್ತುವಾರಿಯ ಯೋಜನೆಗಳನ್ನು ನಿರ್ವಹಿಸುತ್ತಿರುವ ಕಂಪೆನಿಗಳು ನಿರ್ದಿಷ್ಟ ಯೋಜನೆಗೆ ದಿನಗೂಲಿ ಕಾರ್ಮಿಕರನ್ನು ನೇಮಿಸಿಕೊಂಡೇ ಕೆಲಸ ಮಾಡುತ್ತಾರೆ. ಉದ್ದಿಮೆಗಳಿಗೆ ಬೇಕಾದ ಕೂಲಿಯವರ ಸಂಖ್ಯೆ ಅವುಗಳಿಗೆ ದೊರೆತ ಕಾಂಟ್ರಾಕ್ಟುಗಳನ್ನು ಆಧರಿಸಿ ಹೆಚ್ಚುಕಡಿಮೆ ಆಗುತ್ತಿರುತ್ತದೆ. ಇಂದು ೧೦೦ ಜನ ಕೆಲಸಗಾರರು ಬೇಕಾದರೆ, ನಾಳೆ ೫೦ ಜನ ಸಾಕಾಗಬಹುದು. ೧೫೦ ಜನರನ್ನು ನಿಭಾಯಿಸುವುದಕ್ಕಿಂತ ಒಂದೋ ಎರಡೋ ಕಾರ್ಮಿಕ ಕಂಟ್ರಾಕ್ಟರುಗಳನ್ನು ನಿಭಾಯಿಸುವುದು ಸುಲಭ. ಜೊತೆಗೆ ಕಾರ್ಮಿಕರಿಗೆ ಸಂಬಂಧಿಸಿದ ಸಮಸ್ಯೆ ತಲೆದೋರಿದಾಗ ಕಾರ್ಮಿಕ ಕಂಟ್ರಾಕ್ಟರುಗಳನ್ನು ಹೊಣೆಗಾರರನ್ನಾಗಿ ಮಾಡಬಹುದು. ಹೆಚ್ಚಿನ ಯೋಜನೆಗಳನ್ನು ಸೂಕ್ತವಾದ ಕೌಶಲಗಳನ್ನು ಹೊಂದಿರುವ ಕಾರ್ಮಿಕರ ತಂಡವನ್ನು ರೂಪಿಸಿ, ನಿಭಾಯಿಸಲಾತ್ತದೆ. ಅವಶ್ಯಕ ಕೌಶಲವಿರುವ ಕೆಲಸಗಾರರನ್ನು ಆರಿಸುವುದು ಹಾಗೂ ಕೆಲಸ ಹೆಚ್ಚು ಸಂಘಟಿತವಾಗಿ ಆಗುವಂತೆ ನೋಡಿಕೊಳ್ಳುವುದು ಕೂಲಿ ಕಂಟ್ರಾಕ್ಟರುಗಳ ಕೆಲಸ. ಮನರೇಗ ವಿಷಯದಲ್ಲಿ ಇದು ಹೆಚ್ಚು ಸುಲಭ. ಅಲ್ಲಿ ಅಷ್ಟೊಂದು ವಿಧದ ಕೌಶಲ ಬೇಕಾಗುವುದಿಲ್ಲ. ಅಲ್ಲಿ ನಡೆಯುವುದು ಬಹುಪಾಲು ಶ್ರಮದ ದುಡಿಮೆಯಾಗಿರುತ್ತದೆ. ಜೊತೆಗೆ ಎಲ್ಲಾ ಕೆಲಸಗಾರರು ಒಂದೇ ಕಡೆಯಿಂದ ಬಂದಿರುತ್ತಾರೆ. ಸಾಮಾನ್ಯವಾಗಿ ಪರಸ್ಪರ ಪರಿಚಯವಿರುತ್ತದೆ. ಅದರಿಂದಾಗಿಯೇ ನಗರದ ನಿರ್ಮಾಣ ಕೆಲಸಗಳಿಗೆ ಕೂಲಿ ಕಂಟ್ರಾಕ್ಟರುಗಳು ಕೆಲಸಗಾರರನ್ನು ಒಂದೇ ಹಳ್ಳಿಯಿಂದ ಕರೆದುಕೊಂಡು ಬರುತ್ತಾರೆ.

 

ಅಂತಿಮವಾಗಿ, ನಾನು ಪ್ರಣಬ್ ಬರ್ದನ್ ಅವರ ಸಲಹೆಯನ್ನು ಅನುಮೋದಿಸುತ್ತೇನೆ. ಡ್ಯುಯೆಟ್ ಸಣ್ಣ ತಾಲ್ಲೂಕಗಳ ಮಟ್ಟದಲ್ಲಿ ಕೆಲಸಮಾಡಬೇಕು. ಅಲ್ಲಿ ಉಸ್ತುವಾರಿ ಹಾಗೂ ರಿಪೇರಿಯ ಕೆಲಸದ ಅವಶ್ಯಕತೆ ದೊಡ್ಡ ನಗರಗಳಿಗಿಂತ ಹೆಚ್ಚಿರುತ್ತದೆ. ಕಡಿಮೆ ವರಮಾನದ ಮನೆಗಳು ಇಂದು ತುಂಬಾ ತುರ್ತಾಗಿ ಬೇಕಾಗಿವೆ. ಗ್ರಾಮೀಣ ಪ್ರದೇಶಗಳಿಂದ ವಲಸಿಗರು ಪಟ್ಟಣಕ್ಕೆ ಬರಬೇಕಾದರೆ ಇದು ತುಂಬಾ ಅವಶ್ಯಕ.

 

ಡ್ಯುಯೆಟ್ ತುಂಬಾ ಶ್ಲಾಘನೀಯವಾದ ಬೃಹತ್ ಯೋಜನೆ. ಪ್ರಾಯೋಗಿಕ ಕಾಳಜಿಯಿಂದಾಗಿ ನನಗೆ ಈ ಕೆಲವು ಆತಂಕಗಳು ಹುಟ್ಟಿಕೊಂಡಿವೆ. ಜಾನ್ ಅವುಗಳನ್ನು ಪರಿಗಣಿಸುತ್ತಾರೆ ಹಾಗೂ ಚರ್ಚಿಸುತ್ತಾರೆ ಎಂದು ನಿರೀಕ್ಷಿಸುತ್ತೇನೆ.
ಅನುವಾದ : ಟಿ. ಎಸ್ . ವೇಣುಗೋಪಾಲ್

ಪ್ರತಿಕ್ರಿಯಿಸಿ