Gobble you up! — ಮಕ್ಕಳ ಚಿತ್ರಪುಸ್ತಕದಲ್ಲಿ ರಾಜಸ್ತಾನದ ಜನಪದ ಕಲೆ

ಕನ್ನಡದಲ್ಲಿ ಮಕ್ಕಳ ಚಿತ್ರ ಪುಸ್ತಕ ಗಳು ಬೆರಳೆಣಿಕೆಯಷ್ಟು ಮಾತ್ರ . ಇತರ ಭಾಷೆಗಳಂತೆ ನಮ್ಮಲ್ಲೂ ಮಕ್ಕಳ ಚಿತ್ರಗಳು ಹೆಚ್ಚೆಚ್ಚು ಬರಬೇಕೆಂಬ ಉದ್ದೇಶದಿಂದ ಋತುಮಾನ ಸಂದರ್ಶನ ಸರಣಿಯೊಂದನ್ನು ಆರಂಭಿಸುತ್ತಿದೆ. ಇತ್ತೀಚೆಗೆ ಮಕ್ಕಳ ಚಿತ್ರ ಪುಸ್ತಕಗಳಿಗೆ ಚಿತ್ರ ಬರೆಯುವುದನ್ನು ವೃತ್ತಿಯಾಗಿ ಸ್ವೀಕರಿಸಿರುವ ಮತ್ತು ಭಾರತದ ಅನೇಕ ಪ್ರಸಿದ್ಧ ಮಕ್ಕಳ ಚಿತ್ರ ಪುಸ್ತಕ ಪ್ರಕಾಶನ ಸಂಸ್ಥೆಗಳಿಗೆ ಚಿತ್ರಗಳನ್ನು ಬಿಡಿಸಿಕೊಟ್ಟಿರುವ ಬೆಂಗಳೂರಿನ ನಿಹಾರಿಕಾ ಶೆಣೈ ಈ ಸರಣಿಯಲ್ಲಿ ಅನೇಕ ಮಕ್ಕಳ ಚಿತ್ರಕಲಾವಿದರನ್ನು ಮಾತಾಡಿಸಿದ್ದಾರೆ. ಬಹುತೇಕ ಹಿಂದಿ , ಇಂಗ್ಲೀಷಿನಲ್ಲಿರುವ ಈ ಸಂದರ್ಶನಗಳನ್ನು ಕನ್ನಡಕ್ಕೆ ಅನುವಾದಿಸಲಾಗುತ್ತದೆ. ನಮ್ಮಲ್ಲೂ ಜನರಿಗೆ ಮಕ್ಕಳಿಗಾಗಿ ಚಿತ್ರ ಪುಸ್ತಕಗಳನ್ನು ಬರೆಯುವ ಆಸಕ್ತಿ ಹುಟ್ಟಿ , ಆ ಪರಂಪರೆ ಮತ್ತು ಅದಕ್ಕೆ ಬೇಕಾದ ಮೂಲ ಸೌಕರ್ಯಗಳೂ ಬೆಳೆಯಲಿ ಎಂಬುದು ನಮ್ಮ ಸದಾಶಯ.

 

 

ರಾಜಾಸ್ಥಾನದ ಮಣ್ಣಿನ ಮನೆಗಳನ್ನು ನೆನಪಿಸುವಂಥಾ ಕಂದು ಬಣ್ಣದ ಹಾಳೆಗಳ ಮೇಲೆ ಒಂದು ಚತುರ ನರಿಯೊಂದು ಅತ್ತಿಂದಿತ್ತ ಓಡಾಡುತ್ತಿತ್ತು. ಅದರ ಹೊಟ್ಟೆಬಾಕತನಕ್ಕೆ ಇಡೀ ಕಾಡೇ ಅದರ ಹೊಟ್ಟೆಯೊಳಕ್ಕೆ ಇಳಿಯುವ ತನಕ ಅದು ಹೀಗೆಯೇ ಸುತ್ತು ಹಾಕುತ್ತಿತ್ತು.

ಆದರೆ, ನರಿಗೆ ಮತ್ತು ನಮ್ಮ ಓದುಗರಿಗೆ ಸಧ್ಯದಲ್ಲೇ ಅರಿವಾಗುವಂತೆ, ಹಾಗೆ ಎಲ್ಲಾರನ್ನೂ ಕಬಳಿಸಿ ಬಿಡುವುದರ ಪರಿಣಾಮವಾಗಿ ನೋವು ಕೂಡಾ ಉಂಟಾಗುತ್ತದೆ.

ರಾಜಾಸ್ಥಾನದ ಈ ಜಾನಪದ ಕತೆಯನ್ನು ಹಾಸ್ಯಮಯವಾದ ಮಕ್ಕಳ ಚಿತ್ರಕತೆಯಾಗಿ ಪುಸ್ತಕದಲ್ಲಿ ಮತ್ತೆ ಹೇಳಿರುವುದು ಆಸಕ್ತಿಕರವಾಗಿರುವುದಕ್ಕೆ ಎರಡು ಕಾರಣಗಳಿವೆ. ಒಂದು, ರಾಜಾಸ್ಥಾನದ ಮೀನಾ ಬುಡಕಟ್ಟು ಜನರ ಜಾನಪದ ಕಲೆಯನ್ನು ಇದರಲ್ಲಿ ಉಪಯೋಗಿಸಿರುವುದು ಮತ್ತು ಇದರ ಮುದ್ರಣ ತಂತ್ರ.

Gobble you up! (ನಿನ್ನನ್ನು ಕಬಳಿಸಿ ಬಿಡುವೆ !), ಇದು ಸಂಪೂರ್ಣವಾಗಿ ಕೈಯಲ್ಲಿ ಮಾಡಿದ ಪುಸ್ತಕ. ಪ್ರತಿ ಚಿತ್ರವನ್ನೂ ಕೈಯಲ್ಲೇ ಬಣ್ಣಗಳಲ್ಲಿ ಚಿತ್ರಿಸಲಾಗಿದೆ, ಈ ಚಿತ್ರಪುಸ್ತಕದ ಪ್ರತಿ ಹಾಳೆಯನ್ನೂ ಕಲಾಕಾರರು ಸ್ಕ್ರೀನ್ ಪ್ರಿಂಟ್ ಮಾಡಿದ್ದಾರೆ ಹಾಗೂ ಇದು ಕೈಯಲ್ಲೇ ಕಟ್ಟಿದ ಪುಸ್ತಕವೂ ಆಗಿದೆ. ಇದರ ಕಾಗದವೂ ಸಹ ಕೈಯಲ್ಲೇ ಮಾಡಿದ್ದೆಂದು ಬೇರೆಯಾಗಿ ಹೇಳಬೇಕಾಗಿಲ್ಲ. ಈ ಕೈಯಲ್ಲೇ ಮಾಡಿದ ಕಾಗದವನ್ನು ‘ತಾರಾ ಬುಕ್ಸ್” ರವರು ಸ್ಥಳೀಯವಾಗಿ ಪಡೆದುಕೊಂಡಿದ್ದಾರೆ.

ತಾರಾ ಬುಕ್ಸ್ ನಿಂದ ಪ್ರಕಟಿಸಲ್ಪಟ್ಟ Gobble you up! ಪುಸ್ತಕಕ್ಕೆ ಜೀವ ತುಂಬಿದ ಚಿತ್ರಕಾರರಾದ ಸುನಿತಾ ಅವರನ್ನು ನಾನು ಫೋನಿನಲ್ಲಿ ಮಾತಾಡಿಸಿದೆ . ನಮ್ಮ ಮಾತುಕತೆಯಿಂದ, ಈ ಪುಸ್ತಕವು ಹೇಗೆ ರಚಿತವಾಯಿತು ಎಂದು ಅವರಿಂದ ನೇರವಾಗಿ ತಿಳಿದು ಕೊಳ್ಳುವುದು ಬಹಳ ಚೇತೋಹಾರಿಯಾಗಿತ್ತು.

Gobble you up! ಪುಸ್ತಕ ಹೇಗೆ ರೂಪುಗೊಂಡಿತು?

ಸುನಿತ : ‘ತಾರ ಬುಕ್ಸ್” ರವರು ಚೆನ್ನೈಯಲ್ಲಿ ಒಂದು ಕಾರ್ಯಾಗಾರವನ್ನು ಏರ್ಪಡಿಸಿದ್ದರು. ಅದಕ್ಕೆ ಬೇರೆಬೇರೆ ಕಡೆಗಳಿಂದ ಜಾನಪದ ಕಲಾವಿದರನ್ನು ಕರೆಸಿದ್ದರು. ಅವರಲ್ಲಿ ಇತರರೊಂದಿಗೆ ಒಬ್ಬ ಗೋಂಡ್ ಕಲಾವಿದರು, ಒಬ್ಬ ಮಧುಬನಿ ಕಲಾವಿದರೂ ಸಹ ಇದ್ದರು…. ಅಲ್ಲದೆ ಅವರಿಗೆ ಒಬ್ಬ ರಾಜಸ್ಥಾನದ ಕಲಾವಿದರೂ ಕೂಡಾ ಬೇಕಾಗಿದ್ದರು. ತಾರಾದವರ ಜೊತೆ ಸೇರಿ ಮಾಂಡ್ನಾ ಕಲೆಯ ಬಗ್ಗೆ ( ಮಾಂಡ್ನಾ – ನಿಜಾರ್ಥದಲ್ಲಿ ಸಗಣಿಯನ್ನು ತಟ್ಟಿ ಬೆರಣಿ ಮಾಡುವ ಕ್ರಿಯೆ ) ಒಂದು ಪುಸ್ತಕ ರಚಿಸಿದ್ದ ಮದನ್ ಎಂಬ ನನ್ನ ಗೆಳೆಯ, ನನಗೆ ಈ ಕಾರ್ಯಾಗಾರಕ್ಕೆ ಹೋಗಲು ಸಲಹೆ ಕೊಟ್ಟ. ನಿಜ ಹೇಳಬೇಕೆಂದರೆ ಇಲ್ಲಿಯ ಬಹಳ ಮಹಿಳೆಯರಿಗೆ ಮಂದನ ಕಲೆ ರಚಿಸುವುದು ಗೊತ್ತು. ಆದರೆ ಮನೆಯ ಹೊರಗೆ ಕಾಲಿಡಲು ಅವರುಗಳಿಗೆ ಅನುಮತಿಯಿಲ್ಲ. ಹಾಗಾಗಿ ನಾನು ಚೆನ್ನೈಗೆ ಹೋಗಬೇಕಾಗಿ ಬಂತು.

ಅಲ್ಲಿ ನಾವು ೪ ದಿನ ಇದ್ದೆವು. ಪ್ರತಿಯೊಬ್ಬ ಕಲಾವಿದರೂ ಅವರವರ ಕಲೆಯನ್ನು ರಚಿಸುವ ತಮ್ಮ ಕೆಲಸವನ್ನು ಮಾಡುವ ರೀತಿಯನ್ನು ಮಾಡಿ ತೋರಿಸಿದರು.

ಬೇರೆಯವರೆಲ್ಲಾ ಕುಂಚಗಳನ್ನು ಉಪಯೋಗಿಸುತ್ತಿದ್ದರು. ಆದರೆ ನಾನು ನನ್ನ ಬೆರಳುಗಳಿಂದ ಬಣ್ಣಗಳನ್ನು ಹಚ್ಚುತ್ತಾ ಚಿತ್ರಿಸುತ್ತಿದ್ದೆ. ಯಾಕೆಂದರೆ ಸಾಂಪ್ರದಾಯಿಕವಾಗಿ ನಾವು ನೆಲದ ಮೇಲೆ ಬಣ್ಣಗಳಿಂದ ಚಿತ್ರಿಸುವಾಗಲೆಲ್ಲಾ ನಾವು ಹಾಗೆಯೇ ಮಾಡುತ್ತೇವೆ.

ಗೀತಾ ವೂಲ್ಫ್ ರವರು ಅದನ್ನು ತುಂಬಾ ಇಷ್ಟಪಟ್ಟರು. ರೇಖೆಗಳು ಮೃದುವಾಗಿದ್ದವು ಹಾಗೂ ಹೆಚ್ಚು ಆಪ್ತವಾಗಿದ್ದವು. ಮಕ್ಕಳಿಗಾಗಿ ಒಂದು ಕೈಯಿಂದ ಚಿತ್ರಿಸಿರುವ ಚಿತ್ರಗಳಿರುವ ಪುಸ್ತಕ ತಯಾರಿಸಬೇಕೆಂದು ತಾರಾ ಬುಕ್ಸ್ ಇಚ್ಚಿಸಿವುದಾಗಿ ಅವರು ನನಗೆ ಹೇಳಿದರು. ಅಂತಹ ಒಂದು ಪುಸ್ತಕವನ್ನು ರಚಿಸಲು ತಕ್ಕುದಾದ ಯಾವುದಾದರೂ ಜಾನಪದ ಕತೆ ಗೊತ್ತಿದೆಯೇ ಎಂದು ಅವರು ನನ್ನನ್ನು ಕೇಳಿದರು. ನನಗೆ ನಾನು ಚಿಕ್ಕಂದಿನಲ್ಲಿ ಕೇಳುತ್ತಾ ಇದ್ದ ಅನೇಕ ಕತೆಗಳು ನೆನಪಾದವು.

ಹಾಗಿದ್ದರೆ “Gobble you up !” ನೀವು ನಿಮ್ಮ ಬಾಲ್ಯದಲ್ಲಿ ಕೇಳಿದ್ದ ಜಾನಪದ ಕತೆ.

ಸುನಿತಾ: ಹೌದು ಆದರೆ ಅದು ನಾನು ಕೇಳಿದ್ದ ಸಂಪೂರ್ಣ ಕತೆಯಲ್ಲ. ಅವರಿಗೆ ಕತೆ ಬಹಳ ಇಷ್ಟವಾಯಿತು, ಆದರೆ ಆ ಕತೆ ಬಹಳ ಚಿಕ್ಕುದಾಗಿತ್ತು. ಅವರು ನನಗೆ ಅದನ್ನು ವಿಸ್ತರಿಸಿ ಕನಿಷ್ಟ ಪಕ್ಷ ನಲವತ್ತು ಸಾಲುಗಳಿರುವ ಒಂದು ಕತೆಯನ್ನಾಗಿಸಲು ತಿಳಿಸಿದರು. ಅಲ್ಲದೆ ಅದಕ್ಕಾಗಿ ಕನಿಷ್ಟ ಪಕ್ಷ ನಲವತ್ತು ಚಿತ್ರಗಳ ಅಗತ್ಯವೂ ಇರುತ್ತದೆ ಎಂದು ಅವರು ನನಗೆ ಹೇಳಿದರು. ಹಾಗಾಗಿ ನನ್ನ ಪತಿ ಪ್ರಭಾತ್‌ರವರು ಆ ಕತೆಗೆ ಇನ್ನಷ್ಟು ವಿವರಗಳನ್ನು ಸೇರಿಸಿದರು.

ನಂತರ ಚಿತ್ರಪುಸ್ತಕಕ್ಕಾಗಿ ಗೀತಾ ವೂಲ್ಫ್ರವರು ಅದನ್ನು ಸಂಪಾದಿಸಿ, ಇಂಗ್ಲೀಷಿಗೆ ಭಾಷಾಂತರಿಸಿ ಪುನಃರಚಿಸಿದರು.

ಸುನೀತಾ ಬಿಡಿಸಿರುವ ಮಂದನಕಲೆಯಲ್ಲಿ ಮೂಡಿಬಂದ ಒಂದು ಚಿತ್ರ

ನೀವು ಮಾಂಡ್ನಾ ರಚಿಸುವುದನ್ನು ಎಲ್ಲಿ ಕಲಿತಿರಿ?

ಸುನಿತಾ: ನನ್ನ ಹಳ್ಳಿ, ಅಂದರೆ ರಾಮ್‌ಸಿಂಘ್‌ಪುರದಲ್ಲಿ ಕಲಿತೆ. ಅಲ್ಲಿ ಎಲ್ಲಾ ಮಹಿಳೆಯರೂ ಅದನ್ನು ರಚಿಸುತ್ತಿದ್ದರು. ನಮ್ಮ ಹಳ್ಳಿಯಲ್ಲಿ ಮಣ್ಣಿನ  ಮನೆಗಳಿದ್ದವು. ನಾನು ನನ್ನ ಅಜ್ಜಿಯ ಮನೆಯಲ್ಲಿ ಬೆಳೆದೆ. ಮಣ್ಣಿನ ಮನೆಗಳನ್ನು ಕಾಲಕಾಲಕ್ಕೆ ಶುದ್ಧಿ ಮಾಡಿ ನಂತರ ಮಣ್ಣು ಮತ್ತು ಸೆಗಣಿಯನ್ನು ಕಲೆಸಿಕೊಂಡು ಎಲ್ಲಾ ಕಡೆಯಲ್ಲೂ ಬಳಿಯಲಾಗುತ್ತದೆ. ಪ್ರತಿಬಾರಿ ಹೀಗೆ ಮಾಡುವಾಗಲೂ ನಾವು ನೆಲದ ಮೇಲೆ ಮತ್ತು ಗೋಡೆಗಳ ಮೇಲೆ ಚಿತ್ತಾರಗಳನ್ನು ಬಿಡಿಸುತ್ತೇವೆ. ನಾನು ನನ್ನ ಅಜ್ಜಿ ಮತ್ತು ಅಮ್ಮನನ್ನು ನೋಡಿ ಕಲಿತುಕೊಂಡೆ.

ನಾವು ದೀಪಾವಳಿಯ ಹಬ್ಬಕ್ಕೆಂದು ಹೆಚ್ಚು ಹೆಚ್ಚು ಸುಂದರವಾದ ಹೆಚ್ಚು ಹೆಚ್ಚು ವಿಸ್ತಾರವಾದ ಚಿತ್ತಾರದ ವಿನ್ಯಾಸಗಳನ್ನು ಮಾಡುತ್ತಿದ್ದೆವು. ನಾವೆಲ್ಲಾ ಒಬ್ಬರ ಮನೆಗೆ ಮತ್ತೊಬ್ಬರು ಹೋಗುತ್ತಾ ಅಲ್ಲೆಲ್ಲಾ ಮಾಡುತ್ತಿರುವ ಚಿತ್ತಾರಗಳನ್ನು ನೋಡುತ್ತಿದ್ದೆವು. ಹಾಗೆ ಹೋದಾಗ ನಮಗೆ ಅಲ್ಲೆಲ್ಲಾದರೂ ಮಿಕ್ಕೆಲ್ಲವುಗಳಿಗಿಂತಾ ಹೆಚ್ಚು ಸುಂದರವಾದ ವಿನ್ಯಾಸಗಳು ಕಂಡರೆ ಮನೆಗೆ ಬಂದು ನಮ್ಮಲ್ಲೂ ಅವುಗಳ ಪ್ರತಿರೂಪವನ್ನು ರಚಿಸಲು ಯತ್ನಿಸುತ್ತಿದ್ದೆವು. ಕೆಲವೊಮ್ಮೆ ಚಿಮಣಿ ಎಣ್ಣೆ ದೀಪದ ಬುಡ್ಡಿಯ ಬೆಳಕಿನಲ್ಲಿ ರಾತ್ರಿಯೆಲ್ಲಾ ಚಿತ್ರಿಸುತ್ತಿದ್ದೆವು. ಆಗ ನಮ್ಮ ಹಳ್ಳಿಯಲ್ಲಿ ಬಹಳಶ್ಟು ಬಾರಿ ವಿದ್ಯುಶ್ಚಕ್ತಿ ಕಡಿತವಿರುತ್ತಿತ್ತು!!

ನನ್ನ ಅಜ್ಜಿಯ ಮನೆಯಲ್ಲಿ ಅತಿ ಹೆಚ್ಚು ಮಾಂಡ್ನಾ ಗಳನ್ನು ರಚಿಸುತ್ತಿದ್ದವಳು ನಾನೇ. ನನಗೆ ಅವುಗಳನ್ನು ರಚಿಸುವುದು ಬಹು ಪ್ರಿಯವಾಗಿತ್ತು. ಸುಮಾರು ಒಂದು ತಿಂಗಳಿಗೊಮ್ಮೆ ನಾವು ಮಣ್ಣು ಮತ್ತು ಸೆಗಣಿ ಕಲೆಸಿ ಒಂದು ಹೊಸ ಪದರವನ್ನು ಬಳಿಯುತ್ತಿದ್ದೆವು ಹಾಗೂ ಅದರ ಮೇಲೆ ಹೊಸಹೊಸ ಮಂದಣಗಳನ್ನು ರಚಿಸುತ್ತಿದ್ದೆವು. ಹಬ್ಬಗಳಲ್ಲಿ ಎಲ್ಲರಿಗಿಂತಾ ಹೆಚ್ಚು ಸುಂದರ ಮಾಂಡ್ನಾಗಳನ್ನು ರಚಿಸಲು ಎಲ್ಲಾ ಹೆಂಗಸರ ನಡುವೆಯೂ ಪೈಪೋಟಿಯಿರುತ್ತಿತ್ತು ! ” ನಾನು ಹೊಲಕ್ಕೆ ಹೋಗುತ್ತಿದ್ದೇನೆ. ಅಂಗಳವನ್ನು ಶುದ್ಧಿ ಮಾಡಿ, ಸಾರಿಸಿ ಮಂದಣವನ್ನು ರಚಿಸಿ ಬಿಡು” ಎಂದು ನನ್ನಮ್ಮ ಹೇಳಿ ಹೋಗುತ್ತಿದ್ದಳು. ಅವಳು ಹಿಂತಿರುಗುವ ಮುನ್ನಾ ನಾನು ಹಾಗೆ ಮಾಡಿರುತ್ತಿದ್ದೆ. ನಮ್ಮ ಮನೆ ಹೊಸದಾಗಿ ಕಾಣುತ್ತಿತ್ತು. (ನಗುತ್ತಾಳೆ)

ಮಾಂಡ್ನಾಗಳನ್ನು ಹೇಗೆ ರಚಿಸುತ್ತಾರೆ? ಪುಸ್ತಕಕ್ಕಾಗಿ ರಚಿಸುವಾಗ ಏನಾದರೂ ವ್ಯತ್ಯಾಸವಾಯಿತೇ?
ಸುನಿತಾ: ನಾನು ಬೆರಳುಗಳ ಮಧ್ಯೆ ಹತ್ತಿಯ ಬಟ್ಟೆಯನ್ನಿಟ್ಟುಕೊಂಡು ನೆಲದ ಮೇಲೆ ಕೈಯಿಂದ ಚಿತ್ರಗಳನ್ನು ರಚಿಸುತ್ತೇವೆ. ಗೋಡೆಯ ಮೇಲೆ ರಚಿಸುವಾಗ ಕುಂಚಗಳನ್ನು ಉಪಯೋಗಿಸುತ್ತೇವೆ. ನಾವು ಬಿಳಿ ಬಣ್ಣಕ್ಕಾಗಿ ಸುಣ್ಣದ ಜೊತೆಗೆ ಸೀಮೆಸುಣ್ಣವನ್ನು ಬಳಸುತ್ತೇವೆ. ಕೆಂಪು ಬಣ್ಣಕ್ಕಾಗಿ ಗಣಿಗಳ ಕಾವಿಮಣ್ಣನ್ನು ಉಪಯೋಗಿಸುತ್ತೇವೆ. ನಾವು ಕಾವಿ ಮಣ್ಣನ್ನು ಉಪಯೋಗಿಸುವುದು ಬಹಳ ಕಡಿಮೆ. ಎಲ್ಲೆಲ್ಲಿ ಬಿಳಿ ಬಣ್ಣದ ಹೊರ ರೇಖೆಗಳು ಸ್ಫುಟವಾಗಿ ಉಜ್ವಲವಾಗಿ ಕಾಣಬೇಕಾಗುತ್ತದೆಯೋ ಅಲ್ಲಿ ಮಾತ್ರ ಉಪಯೋಗಿಸುತ್ತೇವೆ. ಒಮ್ಮೊಮ್ಮೆ ನಾವು ಕೆಂಪು ಜೇಡಿಮಣ್ಣನ್ನು ಸಹಾ ಉಪಯೋಗಿಸುತ್ತೇವೆ. ಕೆಂಪು ಜೇಡಿಮಣ್ಣನ್ನು ಸೆಗಣಿಯೊಂದಿಗೆ ಬೆರೆಸಿ ಅಂಗಳವನ್ನು ಸಾರಿಸುತ್ತೇವೆ. ಅದರಿಂದ ಬಿಳಿಯ ಚಿತ್ತಾರಗಳಿಗೆ ಸುಂದರವಾದ ಹಿನ್ನೆಲೆಯಾಗುತ್ತದೆ ಹಾಗೂ ಬಿಳಿ ಬಣ್ಣವು ಹೆಚ್ಚು ಎದ್ದು ಕಾಣುತ್ತದೆ.

ಪುಸ್ತಕಕ್ಕಾಗಿ ಕೆಲಸ ಮಾಡುವಾಗ ನನ್ನ ಬಳಿ ದೊಡ್ಡ ದೊಡ್ಡ ಕಂದು ಬಣ್ಣದ ಹಾಳೆಗಳಿದ್ದವು. ಅವು ಮೂರು ಅಡಿ ಉದ್ದ ಮೂರು ಅಡಿ ಅಗಲವಿರುತ್ತಿದ್ದವು. ನಾನು ಅಕ್ರಿಲಿಕ್ ಬಣ್ಣಗಳಲ್ಲಿ ಅದ್ದಿದ ಹತ್ತಿಯ ಬಟ್ಟೆಯನ್ನು ಉಪಯೋಗಿಸುತ್ತಿದ್ದೆ. ನನಗೆ ಬೇಕಾಗಿದ್ದ ಹಾಳೆಗಳು, ಬಣ್ಣಗಳೆಲ್ಲವನ್ನೂ ತಾರ ಬುಕ್ಸ್ ನವರೇ ನನಗೆ ಕೊಟ್ಟರು.

ಹೊಸದಾಗಿ ಬಣ್ಣ ಬಳಿದ ಗೋಡೆಗಳ ಮೇಲೆ ಬಿಳಿಯ ಚಿತ್ತಾರಗಳು ಎಷ್ಟು ಚಂದವಾಗಿ ಕಾಣಬಹುದೆಂದು ನಾನು ಊಹಿಸಿಕೊಳ್ಳ ಬಲ್ಲೆ. ಪುಸ್ತಕದಲ್ಲಿ ನೀವು ಸಾಂಪ್ರದಾಯಿಕ ವಿನ್ಯಾಸಗಳನ್ನೇ ಬಳಸಿದಿರಾ?

ಸುನಿತಾ: ವಿಧವಿಧವಾದ ಮಾಂಡ್ನಾಗಳಿವೆ. ಸಂಪ್ರದಾಯದ ಚೌಕಟ್ಟಿನ ಒಳಗೂ ಸಹ ಅದು ಕಲಾವಿದರನ್ನು ಅವಲಂಬಿಸಿರುತ್ತವೆ. ನಿಜ, ಅದರಲ್ಲಿ ಕೆಲವು ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಮೂಲಭೂತ ವಿನ್ಯಾಸಗಳಿವೆ. ಅವು ರೇಖೆಗಳಿಂದ ರಚಿತವಾಗಿರುತ್ತವೆ. ಹೊರ ಪರಿಧಿಯ ರೇಖೆಗಳು ಸಾಮಾನ್ಯವಾಗಿ ಒಂದೇ ರೀತಿಯಲ್ಲಿರುತ್ತವೆ. ಆದರೆ ಆ ಹೊರ ಪರಿಧಿಯನ್ನು ನೀವು ಹೇಗೆ ತುಂಬಿಸುತ್ತೀರಿ, ಅವುಗಳಲ್ಲಿ ಹೆಚ್ಚಾಗಿ ಏನನ್ನು ಸೇರಿಸುತ್ತೀರಿ ಎನ್ನುವುದು ಸಂಪೂರ್ಣವಾಗಿ ಕಲಾಕಾರರ ಕಲ್ಪನೆಗೆ ಬಿಟ್ಟದ್ದು.

ನಾನು ಹಿಂದನ ಹಲವು ವರ್ಷಗಳಲ್ಲಿ ನನ್ನದೇ ಆದ ಶೈಲಿಯನ್ನು ಬೆಳೆಸಿಕೊಂಡಿದ್ದೇನೆ. ಅದನ್ನು ನಾನು ಯಾರ ಬಳಿಯಲ್ಲೂ ಕಲಿಯಲಿಲ್ಲ. ನಾನು ಸಾಂಪ್ರದಾಯಿಕ ಶೈಲಿಯ ಮಾಂಡ್ನಾದೊಂದಿಗೆ ನನ್ನದೇ ಸೃಜನಶೀಲತೆಯನ್ನೂ ಬೆರಸಿ ಹೊಸದೇನನ್ನೋ ಸೃಷ್ಟಿಸುತ್ತೇನೆ. ಆಗ ಅದು ನನ್ನ ಸ್ವಂತ ಶೈಲಿಯಾಗುತ್ತದಲ್ಲವೇ? ಅಂದರೆ ಜನರು ನನ್ನ ಕಲೆಯನ್ನು ನೋಡಿದಾಗ ಅದು ನನ್ನದೇ ಸೃಷ್ಟಿ, ಅದನ್ನು ರಚಿಸಿದ್ದು ನಾನೇ ಎಂದು ಗುರುತಿಸುತ್ತಾರೆ.

ಖಂಡಿತ. ಈ ಕತೆಯನ್ನು ಚಿತ್ರಗಳಲ್ಲಿ ಕಲ್ಪಿಸಿಕೊಳ್ಳಲು ಕಷ್ಟವಾಯಿತೇ?

ಸುನಿತಾ: ಇಲ್ಲವೇ ಇಲ್ಲ. ಕಲ್ಪಿಸಿಕೊಳ್ಳುವುದು ಅತ್ಯಂತ ಸುಲಭವಾಗಿತ್ತು! ನನಗೇ ಬಿಟ್ಟರೆ ನಾನು ಈ ರೀತಿಯ ನೂರಾರು ಪುಸ್ತಕಗಳನ್ನು ಮಾಡುತ್ತೇನೆ ! (ನಗುತ್ತಾಳೆ)

ಈ ಪುಸ್ತಕವನ್ನು ಬೆರಳುಗಳಿಂದ ಚಿತ್ರಿಸಿ ಕೈಗಳನ್ನು ಉಪಯೋಗಿಸಿ ರಚಿಸಬೇಕಾಗಿತ್ತು. ನನಗೆ ಹಾಗೆ ಮಾಡುವುದು ಅತ್ಯಂತ ಪ್ರಿಯವಾದದ್ದು. ಅಳತೆಯಲ್ಲಿ ದೊಡ್ಡದಾಗಿದ್ದುದರಿಂದ ರೇಖೆಗಳನ್ನು ಪೆನ್ಸಿಲ್ ಹಾಕಿ ಎಳೆದೆ ನಿಜ, ಆದರೆ ಆಮೇಲೆ ನನ್ನ ಬೆರಳುಗಳಿಂದ ಕೆಲಸ ಮುಂದುವರೆಸಿದೆ. ನಾನು ಕರಡು ಚಿತ್ರಗಳನ್ನು ಮಾಡಿಕೊಳ್ಳಲೇ ಇಲ್ಲ. ನೇರವಾಗಿ ಅಂತಿಮ ಕಲೆಯ ರಚನೆಯೊಳಗೆ ಧುಮುಕಿ ಬಿಟ್ಟೆ.

ತಾರಾ ಬುಕ್ಸ್ ತಂಡದವರೊಂದಿಗೆ ಚಿತ್ರಗಳನ್ನು ಹೇಗೆ ಸಂಯೋಜಿಸಬೇಕು ಎಂಬುದರ ಬಗ್ಗೆ ಮಾತುಕತೆ ನಡೆಸಿದ್ದಿರಾ?
ಸುನಿತಾ: ಇಲ್ಲ, ಅವರು ನನಗೆ ಸಂಪೂರ್ಣ ಸ್ವಾತಂತ್ತ್ಯ ಕೊಟ್ಟು ಬಿಟ್ಟರು. “ನೀನು ನಿನ್ನ ಕಲ್ಪನೆಯಂತೆ ಎಲ್ಲಾ ಚಿತ್ರಗಳನ್ನೂ ರಚಿಸಿಬಿಡು. ನಂತರ ಯಾವ ಚಿತ್ರದೊಂದಿಗೆ ಯಾವ ಪಠ್ಯವನ್ನು ಸೇರಿಸಬೇಕೆಂದು ನಮಗೆ ತಿಳಿಸು.” ಎಂದು ಅವರು ನನಗೆ ಹೇಳಿದರು. ಹಾಗಾಗಿ ನಾನು ಚಿತ್ರಗಳನ್ನು ರಚಿಸಿ ಅವರಿಗೆ ಕೊಟ್ಟೆ.

 

ಬಣ್ಣಗಳ ಬಗ್ಗೆ ನಿಮ್ಮ ಅನಿಸಿಕೆಗಳೇನು?

ಸುನಿತಾ: ನಾನು ರಚಿಸಿದ ಮೂಲ ಚಿತ್ರಗಳು ಕಪ್ಪುಬಿಳಿಯಲ್ಲಿ ಇರಲಿಲ್ಲ. ಕಂದು ಬಣ್ಣದ ಹಾಳೆಯ ಮೇಲೆ ನಾನು ಬಿಳಿ ಬಣ್ಣದಲ್ಲಿ ಕೆಲಸ ಮಾಡಿದೆ. ಕೆಲವು ಸ್ಥಳಗಳಲ್ಲಿ ನಾನು ಮೆರೂನ್ ಬಣ್ಣವನ್ನು ಉಪಯೋಗಿಸಿದ್ದೆ. ಅವರು ಪುಸ್ತಕವನ್ನು ವಿನ್ಯಾಸಗೊಳಿಸುವಾಗ ಅದನ್ನು ಅದಲಿಬದಲಿ ಮಾಡಿಬಿಟ್ಟರು. ಕಡೆಗೆ ಪುಸ್ತಕದಲ್ಲಿ ನರಿ ಕಪ್ಪಗಿದೆ ಮತ್ತು ಇತರ ಎಲ್ಲಾ ಪ್ರಾಣಿಗಳೂ ಬೆಳ್ಳಗಿವೆ.

 

ಪ್ರಾಣಿಗಳೊಗಿನ ಪ್ರಾಣಿಗಳ ಕಲ್ಪನೆಯು ನನಗೆ ಬಹಳ ಇಷ್ಟವಾಯಿತು! ನೀವು ಬಣ್ಣಗಳನ್ನು ಎಷ್ಟು ಚೆನ್ನಾಗಿ ಪರಿಣಾಮಕಾರಿಯಾಗಿ ಬಳಸಿದ್ದೀರಿ! ಈ ಚಿತ್ರಗಳನ್ನು ರಚಿಸಲು ನಿಮಗೆ ಎಷ್ಟು ಕಾಲ ಹಿಡಿಯಿತು? ಹಾಗೂ ಈ ಪೂರ್ತಿ ಪುಸ್ತಕವನ್ನು ತಯಾರು ಮಾಡಲು ನೀವು ತೆಗೆದುಕೊಂಡ ಅವಧಿ ಎಷ್ಟು?

ಸುನಿತಾ: ಆ ಕೆಲಸ ಎಷ್ಟು ಸ್ಪಷ್ಟವಾದ ವಿವರಗಳಿಂದ ಕೂಡಿದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಕಡಿಮೆ ವಿವರಗಳುಳ್ಳ ಚಿತ್ರಗಳಿಗೆ ಸುಮಾರು ಮೂರು ಘಂಟೆಗಳ ಕಾಲ ತೆಗೆದುಕೊಂಡಿರಬಹುದು ಅಂದುಕೊಳ್ಳುತ್ತೇನೆ. ಕೆಲವು ಚಿತ್ರಗಳಿಗೆ ಇಡೀ ದಿನ ಹಿಡಿಯಿತು. ಬೆರಳುಗಳಿಂದ ಚಿತ್ರಿಸುವಾಗ ರೇಖೆಗಳು ದಪ್ಪಗಿರುತ್ತವೆ. ಹಾಗಾಗಿ ಚಿತ್ರಗಳು ಬೇಗ ಮುಗಿಯುತ್ತವೆ.

ಎಲ್ಲಾ ಚಿತ್ರಗಳನ್ನೂ ಮುಗಿಸಲು ಸುಮಾರು ಒಂದು ತಿಂಗಳು ಹಿಡಿಯಿತು. ನಾನು ತಡೆಯಿಲ್ಲದಂತೆ ಒಂದೇ ಸಮನಾಗಿ ಕೆಲಸ ಮಾಡಿದೆ, ನೋಡಿ. ಆದರೆ ವಿನ್ಯಾಸ ಮಾಡಲು ಮತ್ತು ಮುದ್ರಿಸಲು ಸ್ವಲ್ಪ ಹೆಚ್ಚು ಸಮಯ ಹಿಡಿಯಿತು. ನಾನು ನನ್ನ ಚಿತ್ರಗಳನ್ನು ಮುಗಿಸಿ ಕಳಿಸಿದ ಮೇಲೆ ಮತ್ತೆ ಚೆನ್ನೈಗೆ ಹೋಗಬೇಕಾಗಿತ್ತು. ಏಕೆಂದರೆ ನಾನು ಪುಸ್ತಕಕ್ಕಾಗಿ ಇನ್ನೂ ಸ್ವಲ್ಪ ಕೆಲಸ ಮಾಡಬೇಕಿತ್ತು. ಆಮೇಲೆ ಅವರು ಚಿತ್ರವನ್ನು ವಿನ್ಯಾಸ ಮಾಡಿದರು. ಅದು ೨೦೧೩ ರಲ್ಲಿ ಮುದ್ರಿತವಾಗಿ ಹೊರಬಂತು.

ಎಲ್ಲಾ ಒಟ್ಟು ಸೇರಿ ಪುಸ್ತಕಕ್ಕೆ ಮೂರು ವರ್ಷ ಹಿಡಿಯಿತು!

ಅಂತಿಮವಾದ ಕಲಾಕೃತಿ ಅತಿ ದೊಡ್ಡದಾಗಿರಬೇಕು ಅಲ್ಲವೇ?

ಸುನಿತಾ: ಹೌದು. ನಾನು ಚೆನ್ನೈಯಿಂದ ವಾಪಸ್ ಮನೆಗೆ ಬಂದಾಗ ನನಗೆ ದೊಡ್ಡ ಕಂದು ಬಣ್ಣದ ಖಾಲಿ ಹಾಳೆಗಳನ್ನು ನೀಡಿದ್ದರು. ಅವರಿಗೆ ಚಿತ್ರಗಳು ಆದಷ್ಟು ಬೇಗ ಬೇಕಿತ್ತು. ಆದ್ದರಿಂದ ನಾನು ೪೦-೫೦ ಚಿತ್ರಗಳನ್ನು ರಚಿಸಿದೆ. ನಾವು ಅದನ್ನು ಅಂಚೆಯಲ್ಲಿ ಕಳುಹಿಸಿದೆವು. ಅವನ್ನು ನಾವು ಅಚ್ಚುಕಟ್ಟಾಗಿ ಒಂದು ಪೈಪ್‌ನ ಒಳಗೆ ಸುರುಳಿ ಸುತ್ತಿ ಅವು ಹಾಳಾಗದಂತೆ ಇಟ್ಟುಬಿಟ್ಟು ಕಳಿಸಿದೆವು.

“Gobble you up! ” ಇದು ನೀವು ಮಕ್ಕಳಿಗಾಗಿ ರಚಿಸಿದ ಮೊದಲ ಪುಸ್ತಕವೇ?

ಸುನಿತಾ: ಇದಕ್ಕೆ ಮೊದಲು ನಾನು ಜೈಪುರದ ಒಂದು ಸರ್ಕಾರೇತರ ಸಂಸ್ಥೆ, “ದಿಗಂತರ್ ಸಂಸ್ಥೆ”ಗಾಗಿ ಒಂದು ಚಟುವಟಿಕೆಯ ಕ್ರಿಯಾ ಪುಸ್ತಕವನ್ನು ತಯಾರಿಸಿದ್ದೆ. ಅಲ್ಲದೆ ‘ರೂಮ್ ಟು ರೀಡ್‌ಗಾಗಿ’ ಎರಡು ಪುಸ್ತಕಗಳ ಕೆಲಸ ಮಾಡಿದ್ದೆ. ಆ ಪುಸ್ತಕಗಳ ಹೆಸರು ರಾಯಿ ಔರ್ ಚೌನ್ರಿ ಮತ್ತು ಬಬೂಲ್ ಕಾ ಪೇಡ್. ರಾಯಿ ಔರ್ ಚೌನ್ರಿಯ ಕತೆಯನ್ನು ಪ್ರಭಾತ್ ಅವರು ಬರೆದಿದ್ದರು. ಬಬೂಲ್ ಕಾ ಪೇಡ್ ನ ಕತೆಯನ್ನೂ ಮತ್ತು ಚಿತ್ರಗಳನ್ನೂ ನಾನೇ ಬರೆದಿದ್ದೆ. ಅದು ನನ್ನ ಬಾಲ್ಯದ ಹಳ್ಳಿಯ ಅನುಭವವನ್ನು ಆಧರಿಸಿತ್ತು.

Rai aur Chaunri, written by Prabhat and illustrated by Sunita for Room to Read

ನಿಮ್ಮ ವೃತ್ತಿಯಲ್ಲಿ ನೀವು ಅತಿ ಹೆಚ್ಚು ಆನಂದಿಸಿ ರಚಿಸಿರುವ ಚಿತ್ರಗಳಾವುವು?

ಸುನಿತಾ: ಸುಶೀಲ್ ಅವರು ಚಕ್ಮಕ್ ಪತ್ರಿಕೆಯ ಸಂಪಾದಕರಾಗಿದ್ದಾಗ,” ನೀನು ನಿನ್ನ ಜಾನಪದ ಕತೆಗಳನ್ನು ಬರೆದು ಅವುಗಳಿಗೆ ಚಿತ್ರಗಳನ್ನು ರಚಿಸು” ಎಂದು ನನಗೆ ಹೇಳಿದರು. ನನ್ನ ಬಾಲ್ಯದಲ್ಲಿ ನಾನು ಕೇಳಿದ್ದ ಜಾನಪದ ಕತೆಗಳನ್ನು ಬರೆಯುವ ಅವಕಾಶ ನನಗೆ ಸಿಕ್ಕಿತು. ಆ ಕತೆಗಳು ಚಕ್ಮಕ್‌ನಲ್ಲಿ ಪ್ರಕಟವಾದವು. ಆಗ ಅದರಲ್ಲಿ ನಾನು ಮೊದಲ ಬಾರಿಗೆ ಬಣ್ಣದ ಕುಂಚ ಹಿಡಿದು ಕೆಲಸ ಮಾಡಿದೆ ಮತ್ತು ನಾಲ್ಕು ಬಣ್ಣದ ಚಿತ್ರಗಳನ್ನು ರಚಿಸಿದೆ. ಅದು ಒಳ್ಳೆಯ ಕಲಿಕೆಯಾಗಿತ್ತು. ನಾನು ಹೆಚ್ಚು ಖುಷಿಯಿಂದ ಮಾಡಿದ ಇನ್ನೊಂದು ಕೆಲಸ, ಬಬೂಲ್ ಕಾ ಪೇಡ್.

( ಸುಶೀಲ್ ಶುಕ್ಲಾ, ಏಕ್ತಾರಾದ ಡೈರೆಕ್ಟರ್, ಮಕ್ಕಳ ಸಾಹಿತ್ಯ ಮತ್ತು ಕಲಾ ಕೇಂದ್ರ, ತಕ್ಶಿಲಾ)

Babool ka ped, written and illustrated by Sunita for Room to Read

 

ಹಾಗಿದ್ದರೆ ನೀವು ಸುಶೀಲ್ ರವರ ಮೂಲಕವೇ ” ಚಿತ್ರಕಾರರ ರಿಯಾಜ್ ಅಕಡೆಮಿ” ಬಗ್ಗೆ ತಿಳಿದುಕೊಂಡಿರಾ? ಆ ಅನುಭವ ಹೇಗಿತ್ತು?
ಸುನಿತಾ: ಹೌದು. ಸುಶೀಲ್ ನನ್ನ ಕೆಲಸವನ್ನು ನೋಡಿ ನನಗೆ ಆ ಪಠ್ಯಕ್ರಮದ ಬಗ್ಗೆ ತಿಳಿಸಿದರು. ಅದು ಹೇಗಿರಬಹುದೆಂದು ನನಗೆ ಗೊತ್ತೇ ಇರಲಿಲ್ಲ! ಕಲೆಯಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಆ ಕಲೆಯಲ್ಲಿ ಉತ್ತಮಗೊಳ್ಳಲು ಅಲ್ಲಿ ಸಹಾಯ ಮಾಡುತ್ತಾರೆ ಎಂದಷ್ಟೇ ನನಗೆ ತಿಳಿದಿತ್ತು. ಆದ್ದರಿಂದ ನಾನು “ಆಗಲಿ, ನಾನೂ ಕಲಿಯುತ್ತೇನೆ” ಎಂದು ಹೇಳಿದೆ.

ರಿಯಾಜ್ನಲ್ಲಿ ಶಿಕ್ಷಕರು ಅದ್ಭುತವಾಗಿದ್ದರು. “ನಮ್ಮ ಶಾಲೆಗಳಲ್ಲಿ ಅಂತಹ ಶಿಕ್ಷಕರು ಯಾಕಿರಲಿಲ್ಲ?” ಎಂದು ನಾನು ಯೋಚಿಸುತ್ತಿದ್ದೆ. ಕಲೆಯನ್ನು ಸಂಭ್ರಮಿಸುವ ಒಂದು ವಾತಾವರಣದಲ್ಲಿ ನಾನು ಮೊಟ್ಟ ಮೊದಲ ಬಾರಿಗೆ ಇದ್ದೆ. ನಾನು ನಿಜಕ್ಕೂ ಅಲ್ಲಿ ಖುಶಿಯಾಗಿದ್ದೆ. ಇಲ್ಲಿಯೇ ನಾನು ಬಣ್ಣಗಳನ್ನು ಉಪಯೋಗಿಸುವುದನ್ನೂ, ಕುಂಚವನ್ನು ಉಪಯೋಗಿಸಿ ಕೆಲಸ ಮಾಡುವುದನ್ನೂ ಕಲಿತೆ. ಜಾನಪದ ಕಲೆಯೊಳಗಡೆಯೇ ನನ್ನದೇ ಆದ ಒಂದು ಶೈಲಿಯನ್ನು ಕೂಡಾ ನಾನು ಗುರುತಿಸಿಕೊಂಡೆ.

ನನ್ನ ಕಲೆಯಲ್ಲಿ ಮಾಂಡ್ನಾದ ಭಾವನೆಗಳಿವೆಯಾದರೂ ಅದರ ಸ್ವರೂಪ ಮಾತ್ರಾ ನನ್ನದೇ ಸ್ವಂತ ಸೃಷ್ಟಿಯಾಗಿದೆ ಎಂದು ನಾನು ಅರಿತುಕೊಂಡೆ.

ನನ್ನಿಂದ ವಾಸ್ತವಿಕ ಚಿತ್ರ ರಚನೆ ಸಾಧ್ಯವಿಲ್ಲ. ಆದರೆ ನನ್ನದೇ ಆದ ವಿಶಿಷ್ಠವಾದ ಅನನ್ಯ ಶೈಲಿಯಿಂದ ನಾನು ಸಂತೃಪ್ತಳಾಗಿದ್ದೇನೆ.

ಈಗ ನೀವು ಯಾವುದರಲ್ಲಿ ಕೆಲಸ ಮಾಡುತ್ತಿದ್ದೀರಿ?
ಸುನಿತಾ : ಹನ್ನೆರಡು ತಿಂಗಳುಗಳು ಮತ್ತು ಋತುಗಳನ್ನು ಕುರಿತು ನಾನು ಚಿತ್ರಗಳ ಸರಣಿಯನ್ನು ರಚಿಸುತ್ತಿದ್ದೇನೆ. ಪ್ರತಿ ತಿಂಗಳನ್ನೂ ಬೇರೆಬೇರೆ ರೀತಿಯಲ್ಲಿ ಚಿತ್ರಿಸಲಿದ್ದೇನೆ.

ಅದು ಬಹಳ ಆಸಕ್ತಿಕರವಾಗಿದೆ ! ನೀವು ನಿಮ್ಮ ಸಾಂಪ್ರದಾಯಿಕ ಕಲೆಯನ್ನು ಹೇಗೆ ಮುಂದುವರೆಸಿಕೊಂಡು ಹೋಗುತ್ತಿದ್ದೀರಿ ಎಂಬುದನ್ನು ನೋಡಿದಾಗ ನಿಮ್ಮ ಕುಟುಂಬದವರು ಯಾರಾದರೂ ಇದರಲ್ಲಿ ಆಸಕ್ತಿ ತೋರಿಸುತ್ತಿದ್ದಾರಾ?
ಸುನಿತಾ: ನನ್ನ ಮಗಳು ಖುಶಿ ಬರೋಡಾದ ಎಮ್.ಎಸ್. ವಿಶ್ವವಿದ್ಯಾಲಯದಲ್ಲಿ ಚಿತ್ರಕಲೆಯನ್ನು ಕಲಿಯುತ್ತಿದ್ದಾಳೆ. ಅವಳು ವಾಸ್ತವಿಕ ಕಲೆ ಮತ್ತು ಮಾಂಡ್ನಾ ಗಳೊಂದಿಗೆ ಪ್ರಯೋಗಗಳನ್ನು ಮಾಡುತ್ತಿದ್ದಾಳೆ.

ಹಳ್ಳಿಯಲ್ಲಿರುವ ನನ್ನ ಮಿಕ್ಕ ಕುಟುಂಬದ ಸದಸ್ಯರುಗಳ ಬಗ್ಗೆ ಹೇಳಬೇಕೆಂದರೆ, ಅವರಿಗೆ ನಾನು ಮಾಡುತ್ತಿರುವ ಕೆಲಸ ಅರ್ಥವಾಗುವುದಿಲ್ಲ. (ನಗುತ್ತಾಳೆ). ನನ್ನ ಅಣ್ಣತಮ್ಮಂದಿರು, ಅಕ್ಕತಂಗಿಯರು ಮತ್ತು ಅಕ್ಕನ ಮಗಳು ಇವರೆಲ್ಲಾ ಪುಸ್ತಕಗಳನ್ನು ನೋಡುತ್ತಾರೆ ಆದರೂ ನನ್ನನ್ನು,” ನೀನು ಏಕೆ ಹೀಗೆ ಸುಮ್ಮನೆ ಕಾಲ ಕಳೆಯುತ್ತಿರುವೆ?” ಎಂದು ಕೇಳುತ್ತಾರೆ.
ನನ್ನ ಅತ್ತಿಗೆ, “ನನಗೂ ಕಲಿಸು” ಎನ್ನುತ್ತಾಳೆ. ನಾನು ಈ ಕಲೆಯಿಂದ ಹಣ ಸಂಪಾದಿಸುತ್ತಿದ್ದೇನೆ ಎಂಬುದನ್ನು ಅವರು ಕಾಣುತ್ತಾರೆ. ಆದ್ದರಿಂದ ಅವರೂ ಕಲಿಯಲಿ ಇಚ್ಚಿಸುತ್ತಾರೆ. ಅವರಿಗೆ ನಾನು ಹೇಳುತ್ತೇನೆ, “ಖಂಡಿತ ಕಲಿಯಿರಿ. ಇದು ಯಾರೂ ಕಲಿಸಬಹುದಾದ ಕಲೆಯಲ್ಲ. ನಿಮ್ಮ ಸ್ವಂತ ಆಸಕ್ತಿಯಿಂದ ನೀವೇ ರಚಿಸಬೇಕು”. ಆದ್ದರಿಂದಲೇ ಇಲ್ಲಿ ಮಾಂಡ್ನಾ ದಿನನಿತ್ಯದ ಕಲಾಕಾಯಕ. ಇದು ನಮ್ಮ ಜನಜೀವನದ ಒಂದು ಸಾಮಾನ್ಯ ಅಂಗವಾಗಿದೆ.

ಆದರೆ ಮಾಂಡ್ನಾ ಕಲಾಕಾರರು ನಿಧಾನವಾಗಿ ಕೊನೆಗೊಳ್ಳುತ್ತಿದ್ದಾರೆಂದು ನಾನು ಕೇಳಿದೆ.
ಸುನಿತಾ: ನಿಜ. ಈಗ ಎಲ್ಲರೂ ಬಿಳಿಯ ಸುಣ್ಣ ಬಳಿದ ಸಿಮೆಂಟಿನ ಮನೆಗಳಲ್ಲಿ ವಾಸಿಸುತ್ತಾರೆ. ಹಳ್ಳಿಗಳಲ್ಲೂ ಸಹ ಮಣ್ಣಿನ ಕಚ್ಚಾ ಮನೆಗಳನ್ನು ನಿರ್ಮಿಸುವುದು ಬಹಳ ಶ್ರಮದ ಕೆಲಸವಾಗಿದೆ. ಮಣ್ಣಿನ ಗೋಡೆಗಳನ್ನು ಮತ್ತು ಅಂಗಳವನ್ನು ಶುಭ್ರಗೊಳಿಸುವುದು, ಮನೆಯ ಕೆಲಸಗಳನ್ನು ಮಾಡುವುದು, ಹೊಲಗದ್ದೆಗಳ ಕೆಲಸಗಳನ್ನು ನಿರ್ವಹಿಸುವುದು, ಮಕ್ಕಳ ಮೇಲ್ವಿಚಾರಣೆ, ದನಕರುಗಳನ್ನು ನಿಭಾಯಿಸುವುದು ಇವೆಲ್ಲಾ ಮನೆಯ ಹೆಂಗಸರಿಗೆ ಅತಿ ಕಷ್ಟವಾಗುತ್ತದೆ.

ಹೌದು, ಈ ಕಲೆಯನ್ನು ತನ್ನ ಕೊನೆಯತ್ತ ಸಾಗುತ್ತಿದೆ. ನೀವು ಹಳ್ಳಿಗಳಿಗೆ ಹೋದರೆ ಈಗ ಮಣ್ಣಿನ ಮನೆಗಳನ್ನು ಒಡೆದು ಹಾಕಿರುವುದನ್ನೂ ಅಥವಾ ಮಣ್ಣಿನ ಮನೆಗಳನ್ನು ದನಗಳ ಕೊಟ್ಟಿಗೆಯಂತೆ ಉಪಯೋಗಿಸುತ್ತಿರುವುದನ್ನೂ ನೋಡಬಹುದು. ನನ್ನ ಅಜ್ಜಿಯ ಮನೆಯವರೂ ಕೂಡಾ ಈಗ ಸಿಮೆಂಟ್ ಮನೆಯನ್ನು ಕಟ್ಟಿಕೊಂಡಿದ್ದಾರೆ. ನಾನು ಆಗಾಗ್ಗೆ ನನ್ನ ಹಳೆಯ ಮನೆಯನ್ನು ನೋಡಲು ಹೋಗುತ್ತೇನೆ. “ಮಗೂ ಈಗ ಎಲ್ಲವೂ ಪಾಳು ಬಿದ್ದಿದೆ. ಅದನ್ನು ನೋಡಲು ನೀನೇಕೆ ಹೋಗುತ್ತೀಯಾ?” ಎಂದು ನನ್ನ ಅಜ್ಜಿ ನನ್ನನ್ನು ಕೇಳುತ್ತಾರೆ.

“ಇಲ್ಲಿ ನನ್ನ ಬಾಲ್ಯವಿದೆ” ನಾನು ಅವಳಿಗೆ ಹೇಳುತ್ತೇನೆ. “ಅದನ್ನು ನೋಡಲು ನನಗೆ ಇಷ್ಟ. ಅದನ್ನು ನೋಡಿ ನಾನು ತಿರುಗಿ ಬರುತ್ತೇನೆ” (ನಗುತ್ತಾಳೆ)

********

ಸುನಿತಾ ಈ ವಿಷಯಗಳ ಬಗ್ಗೆ ಅತ್ಯಂತ ವಸ್ತುನಿಷ್ಠಳಾಗಿದ್ದಾರೆ. ನನ್ನ ಮಟ್ಟಿಗೆ ಹೇಳುವುದಾದರೆ ಪುಸ್ತಕಗಳ ಮೂಲಕವಾದರೂ ಈ ಕಲೆಯನ್ನು ಜೀವಂತವಾಗಿಡಲಾಗಿದೆಯಲ್ಲಾ ಎಂದು ನನಗೆ ಸಂತೋಷವಾಗುತ್ತದೆ.

ಜಾನಪದ ಚಿತ್ರಕಲೆಗಳು ಮಾನವರಿಂದ ಮೊಟ್ಟಮೊದಲಿಗೆ ರಚಿಸಲ್ಪಟ್ಟ ಕಲೆಯನ್ನು ಪ್ರತಿನಿಧಿಸುತ್ತದೆ. ಅವುಗಳಲ್ಲಿರುವ ಕತೆ ಹೇಳುವ ಶಕ್ತಿಯು ನನ್ನನ್ನು ಯಾವಾಗಲೂ ಚಕಿತಗೊಳಿಸುತ್ತದೆ. ಅವುಗಳು ನಮ್ಮ ಮಕ್ಕಳ ಪುಸ್ತಕಗಳಲ್ಲಿ ಖಂಡಿತವಾಗಿ ಸೇರಿಕೊಳ್ಳಬೇಕಾಗಿದೆ.
ನೀವು ಸುನಿತಾಳನ್ನು ಈಮೇಲ್ ಮೂಲಕ ಕೆಲಸಕ್ಕಾಗಿ ಸಂಪರ್ಕಿಸಬಹುದು.

Gobble you up! ” ಪುಸ್ತಕ ತಾರಾ ಬುಕ್ಸ್ಅಮೆಜಾನ್ ನಲ್ಲೂ ಲಭ್ಯವಿದೆ.

ಭಾರತದಲ್ಲಿನ ಮಕ್ಕಳ ಪುಸ್ತಕಗಳ ಚಿತ್ರಪುಸ್ತಕಗಳ ಪ್ರಕಟಣೆಯ ಪ್ರಪಂಚದ ಒಳನೋಟವೊಂದನ್ನು ಓದುಗರಿಗೆ ನೀಡುವುದು ಈ ಸಂದರ್ಶನಗಳ ಉದ್ದೇಶವಾಗಿದೆ. ಈ ಚಿತ್ರಗಳು ವಾಸ್ತವವಾಗಿ ಹೇಗೆ ಕೆಲಸ ಮಾಡುತ್ತವೆ ಮತ್ತವುಗಳ ಮಾಂತ್ರಿಕ ಶಕ್ತಿ ಏನೆಂದು ತಿಳಿಯೋಣ ! ಸಂಪರ್ಕದಲ್ಲಿರಿ !


ಅನುವಾದ : ಜಯಶ್ರೀ ಜಗನ್ನಾಥ
ಫ಼್ರೆಂಚ್ ಭಾಷೆಯ ಉಪನ್ಯಾಸಕಿ . ಬರೆಯುವುದು, ಭಾಷಾಂತರ ಮಾಡುವುದು ಕೆಲಸಗಳು. ಪ್ರವಾಸ ಮಾಡುವುದು, ಓದುವುದು, ಸಹೃದಯರೊಂದಿಗೆ ಸಂಭಾಷಣೆ ಹವ್ಯಾಸಗಳು. ತನ್ನ ಸುತ್ತಮುತ್ತಿನ ಪರಿಸರಕ್ಕೆ ಪ್ರತಿಕ್ರಿಯಿಸಿವುದು ಮತ್ತು ಅಭಿವ್ಯಕ್ತಿಸುವುದು ತನಗೆ ಅನಿವಾರ್ಯ, ಅಗತ್ಯ ಎಂದುಕೊಂಡು ಬರೆತ್ತಿರುವ ಜಯಶ್ರೀ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ .

One comment to “Gobble you up! — ಮಕ್ಕಳ ಚಿತ್ರಪುಸ್ತಕದಲ್ಲಿ ರಾಜಸ್ತಾನದ ಜನಪದ ಕಲೆ”
  1. ತುಂಬಾ ಆಸಕ್ತಿಕರವಾಗಿದೆ.. ಮುಂದಿನ ಸರಣಿಗಾಗಿ ಕಾಯುತ್ತಿರುವೆ ❤👍

ಪ್ರತಿಕ್ರಿಯಿಸಿ