ಗಿರೀಶ್ ಕಾರ್ನಾಡ್ ಸರಣಿ – ಕೊನೆಯ ಭಾಗ : ಹಸುಗಳೂ, ಹುಲಿಗಳೂ

ಡೇವಿಡ್ ಬಾಂಡ್ ಬರೆದ “ಗಿರೀಶ್ ಕಾರ್ನಾಡ್ ಸರಣಿ”ಯ ಕಡೇಯ ಕಂತು ಇದು. ಹತ್ತಾರು ವಿಧ್ವತ್ಪೂರ್ಣವೂ, ರೋಮಾಂಚಕಾರೀಯೂ ಆದ ಪುಸ್ತಕಗಳಿಗಾಗುವಷ್ಟು ಸಂಶೋಧನೆಯನ್ನು ಮಾಡಿಟ್ಟು, ಪ್ರಕಟಣೆಯ ಯಾವ ಆಸಕ್ತಿಯನ್ನೂ ತೋರಿಸದೇ ತೀರಿಹೋದ ಡೇವಿಡ್ ಗೆ ಋತುಮಾನ ಕೃತಜ್ಞತೆಯನ್ನು ಅರ್ಪಿಸುತ್ತದೆ. ಡೇವಿಡ್ ನ ಸಂಶೋಧನೆಯ ಆಕರಗಳನ್ನು ಸಿನೆಮಾಸಕ್ತ, ಚರಿತ್ರೆಯಲ್ಲಿ ಗಾಢವಾದ ಆಸಕ್ತಿಯುಳ್ಳ ವಿದ್ಯಾರ್ಥಿಗಳ ಜೊತೆ ಹಂಚಿಕೊಳ್ಳುವುದಕ್ಕೆ ಋತುಮಾನ ಉತ್ಸುಕವಾಗಿದೆ. ಈ ಮೂಲ ಆಕರಗಳ ಅಧ್ಯಯನವು ಜಗತ್ತಿನ ಸಿನೆಮಾ ಇತಿಹಾಸದ ಕುರಿತು ಕನ್ನಡದಲ್ಲಿ ಬರಬಹುದಾದ ಸಂಶೋಧನೆಗೆ ಅಪೂರ್ವ ಕೊಡುಗೆಯನ್ನು ನೀಡಬಲ್ಲದು. ಆಸಕ್ತರು [email protected]  ವನ್ನು ಸಂಪರ್ಕಿಸಿ.


ಒಂದಾನೊಂದು ಕಾಲದಲ್ಲಿ ಮತ್ತು ಉತ್ಸವ್ ಚಿತ್ರಿಸುವ ಮುನ್ನ, ಮಂಥನ್(1976) ಚಿತ್ರಕತೆಯನ್ನು ಬರೆದು ಅದರಲ್ಲಿ ಅಭಿನಯಿಸುವ ಒಂದು ವರ್ಷ ಮುಂಚೆ ಗಿರೀಶ ಕಾರ್ನಾಡರು ಬಿ.ವಿ.ಕಾರಂತರೊಡನೆ ಮತ್ತೆ ಸೇರಿ ಚಿತ್ರವೊಂದನ್ನು ನಿರ್ಮಿಸಿದರು. ಹಿಂದೆ 1971 ರಲ್ಲಿ ಅವರಿಬ್ಬರೂ ಸೇರಿ ಎಸ್.ಎಲ್.ಬೈರಪ್ಪನವರ ಕಾದಂಬರಿ “ವಂಶವೃಕ್ಷವನ್ನು” ಚಿತ್ರೀಕರಣ ಮಾಡಿದ್ದರು. ಈ ಬಾರಿ ಅವರಿಬ್ಬರೂ ಮತ್ತೆ ಎಸ್.ಎಲ್.ಬೈರಪ್ಪನವರದೇ ಆದ, ಅವರ ವಂಶವೃಕ್ಷಕ್ಕಿಂತ ಹಿಂದಿನ ಕಾದಂಬರಿ “ತಬ್ಬಲಿಯು ನೀನಾದೆ ಮಗನೆ” ಯನ್ನು ಚಿತ್ರೀಕರಿಸಿದರು. ಈ ಸಮಯಕ್ಕೆ ಕಾರ್ನಾಡರು ಆಗಲೇ ಎರಡು ಬೇರೆಬೇರೆ ಚಿತ್ರಪ್ರಪಂಚಗಳಲ್ಲಿ ಕಾರ್ಯನಿರತರಾಗಿದ್ದರಿಂದ ಅವರ ಈ ಎರಡು ಕಾರ್ಯಕ್ಷೇತ್ರಗಳನ್ನು ಅಂಗೀಕರಿಸಲೋ ಎಂಬಂತೆ ಈ ಚಿತ್ರವನ್ನು ಒಟ್ಟಿಗೆ ಎರಡು ಭಾಷೆಗಳಲ್ಲಿ, ಅಂದರೆ ಕನ್ನಡ ಮತ್ತು ಹಿಂದಿಯಲ್ಲಿ, ಬೇರೆಬೇರೆ ಚಿತ್ರೀಕರಿಸಲಾಯಿತು. ಈ ಎರಡೂ ಚಿತ್ರಗಳಲ್ಲಿ ಬೇರೆಬೇರೆ ತಾರಾಗಣವಿತ್ತು. ಹಿಂದಿ ಆವೃತ್ತಿಯನ್ನು ಗೊಧೂಲಿ ಎಂಬ ಒಂದು ವಿಲಕ್ಷಣವಾದ ಹೆಸರಿನಿಂದ ಕರೆದರು.( ಹಸುವಿನ ಕಾಲ್ಧೂಳು ಅಥವಾ ಇಳಿಸಂಜೆ). ಇದು ಕರ್ನಾಟಕಕ್ಕೆ ಕಾರ್ನಾಡರ ಪುರಾಗಮನವಾದರೂ ಸಹ (ಈ ಚಿತ್ರವನ್ನು ಬೆಂಗಳೂರಿನ ಹೊರವಲಯದಲ್ಲಿ ಚಿತ್ರೀಕರಿಸಲಾಯಿತು) ಕಾರ್ನಾಡರು ತಮ್ಮ FTII ಸಹವರ್ತಿಗಳನ್ನೂ ಮತ್ತು ಬೆನೆಗಲ್ಲರೊಂದಿಗೆ ಕೆಲಸ ಮಾಡಿದವರನ್ನೂ ತಮ್ಮೊಂದಿಗೆ ಇರಿಸಿಕೊಂಡರು. ಎ.ಕೆ. ಕೌಲರ 1973ರ ಅದ್ಭುತ ಹಿಂದಿ ಚಿತ್ರವಾದ 27 ಡೌನ್ ಚಿತ್ರದ ತನ್ನ ಕೆಲಸಕ್ಕೆ ಬಹಳ ಮೆಚ್ಚುಗೆ ಗಳಿಸಿದ್ದ FTII ನ ಹಳೆಯ ವಿದ್ಯಾರ್ಥಿ ಅಪುರ್ಬ ಕಿಶೋರ್ ದಾಸ್ ಅವರು ಈ ಚಿತ್ರದ ಸಿನೆಮಾಟೋಗ್ರಾಫರ್ ಆಗಿದ್ದರು. ಈ ಚಿತ್ರವನ್ನು ಬಣ್ಣದಲ್ಲಿ ಚಿತ್ರಿಸಲಾಗಿತ್ತು ಹಾಗೂ ಈ ಚಿತ್ರದ ಸಿನೆಮಾಟೋಗ್ರಫಿ ಕಾರ್ನಾಡರ ಹಿಂದಿನ ಚಿತ್ರಗಳಿಗಿಂತ ಹೆಚ್ಚು ನಿಕಟ ವಿವರಗಳದ್ದಾಗಿತ್ತು. ಬೆನೆಗಲ್ ಅವರ ಚಿತ್ರಗಳಲ್ಲಿ ಸಾಮಾನ್ಯವಾಗಿ ಯಾವಾಗಲೂ ಕಾಣಿಸಿಕೊಳ್ಳುತ್ತಿದ್ದ ನಸೀರುದ್ದೀನ್ ಶಾ, ಕುಲ್‍ಭೂಶಣ್ ಕರ್ಬಾಂದಾ ಮತ್ತು ಓಮ್ ಪುರಿಯವರು ಈ ಚಿತ್ರದ ಹಿಂದಿ ಆವೃತ್ತಿಯಲ್ಲೂ ಇದ್ದರು. ಆರಿಸಿದ್ದ ಕನ್ನಡದ ನಟ ಉಪಲಬ್ಧವಿಲ್ಲದ್ದರಿಂದ ಕನ್ನಡದ ಅವತರಣಿಕೆಯಲ್ಲೂ ನಸೀರುದ್ದೀನ್ ಶಾ ರವರು ಅಭಿನಯಿಸಿದರು.

ಮಂಥನ್ ಚಿತ್ರದಲ್ಲಿ ಕಾರ್ನಾಡರು ಆಧುನಿಕ ಆಲೋಚನೆಗಳುಳ್ಳ ಒಬ್ಬ ಡಾಕ್ಟರ ಪಾತ್ರ ಮಾಡಿದ್ದರು. ಆ ಡಾಕ್ಟರ್ ಒಂದು ಹೈನುಗಾರಿಕೆ ನಡೆಸುವ ಸಮುದಾಯಕ್ಕೆ ಬದಲಾವಣೆಯ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿಸುತ್ತಾನೆ. ತಬ್ಬಲಿಯು ನೀನಾದೆ ಮಗನೆ ಚಿತ್ರದಲ್ಲಿ ಒಬ್ಬ ಆಧುನಿಕ ಆಲೋಚನೆಗಳುಳ್ಳ, ಆಗ ತಾನೇ ಅಮೆರಿಕದಿಂದ ಹಿಂದಿರುಗಿದ ವ್ಯವಸಾಯಗಾರನು (ಕಳಿಂಗ ಎಂಬ ಆ ಪಾತ್ರವನ್ನು ಕನ್ನಡದ ಅವತರಣಿಕೆಯಲ್ಲಿ ಮನು ಅಭಿನಯಿಸಿದ್ದರು) ಒಂದು ಹೈನುಗಾರಿಕೆ ಮಾಡುವ ಸಮುದಾಯಕ್ಕೆ ಬದಲಾವಣೆಯ ಪ್ರಾಮುಖ್ಯತೆಯ ಬಗ್ಗೆ ಮನದಟ್ಟು ಮಾಡಿಸಿಕೊಡಲು ಸಂಪೂರ್ಣವಾಗಿ ಸೋಲುತ್ತಾನೆ. ಇಬ್ಬರೂ ಹಸುಗಳು ಮತ್ತು ಹಾಲು ಉತ್ಪಾದನೆಯ ಬಗ್ಗೆ ಕಾಳಜಿ ಹೊಂದಿರುತ್ತಾರೆ. ಮೊದಲನೆಯ ಚಿತ್ರದ ನಾಯಕನ ಆಶಾವದಿತ್ವ ಅರ್ಥವಾಗುವಂತೆಯೇ ಎರಡನೇ ಚಿತ್ರದ ನಾಯಕನ ನಿರಾಶಾವಾದಿತ್ವವೂ ಅರ್ಥವಾಗುತ್ತದೆ. ಸಂಪ್ರದಾಯ ಮತ್ತು ಆಧುನಿಕತೆಗಳಿಗೆ ಹಾಲು ಮತ್ತು ಆಕಳು ಒಂದು ಸಂಕೀರ್ಣವಾದ ರಣರಂಗವಾಗುವುದನ್ನು ನಾವು ಕಾಣುತ್ತೇವೆ.

ಕಾರ್ನಾಡರಿಗೆ ಆ ಕಾದಂಬರಿಯ ಬಗ್ಗೆ ಆ ಸಮಯದಲ್ಲೇ ಕೆಲವು ಚಿಂತೆಗಳಿದ್ದವು. (ಹಾಗೆಯೇ ತಮ್ಮದೇ ಖ್ಯಾತಿಯ ಬಗ್ಗೆಯೂ). ಆ ಕಾದಂಬರಿಯು ಎಸ್.ಎಲ್.ಬೈರಪ್ಪನವರು ಅತ್ಯುತ್ತಮ ಕಾದಂಬರಿಗಳ್ಳಿ ಒಂದೇನೂ ಆಗಿಲ್ಲವೆಂದು ಅವರು ಪತ್ರಕರ್ತರಿಗೆ ಆಗಲೇ ಹೇಳಿದ್ದರು. “ಈ ಕಾದಂಬರಿ ಪೂರ್ವ ಮತ್ತು ಪಶ್ಚಿಮಗಳ ನಡುವಿನ ತಿಕ್ಕಾಟವನ್ನು ವಿವರಿಸುತ್ತದೆಂದೂ ಕಡೆಯಲ್ಲಿ ಯಾವ ಮುಲಾಜೂ ಇಲ್ಲದೆ ಪಶ್ಚಿಮವು ತಪ್ಪು ಎಂದು ತೋರಿಸುತ್ತಾ, ಕಟ್ಟಕಡೆಗೆ, ಭಾರತದ ಪವಿತ್ರ ಮೌಲ್ಯಗಳನ್ನು ಯಾವ ಕಾಲಕ್ಕೂ ಎತ್ತಿ ಹಿಡಿಯಲಾಗುವುದು ಎಂದು ತೋರಿಸಿದೆ.” ಎಂದರು. ಅಂತಹ ಕಾದಂಬರಿಗೆ ಬದಲಾಗಿ ತಮ್ಮ ಚಿತ್ರವು ಒಂದು ಶುದ್ಧವಾದ ವೈಯಕ್ತಿಕ ಕತೆಯನ್ನು ಹೇಳುತ್ತದೆ ಎಂದು ಅವರು ಹೇಳಿದ್ದರು.” ಚಿತ್ರದಲ್ಲಿರುವ ಅಮೆರಿಕನ್ ಹುಡುಗಿಯು ವಿದೇಶೀ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಒಬ್ಬ ವ್ಯಕ್ತಿಯಷ್ಟೇ. ಅವಳು ಪಾಶ್ಚಾತ್ಯ ಸಂಕೃತಿಯ ಪ್ರತಿನಿಧಿಯೂ ಅಲ್ಲ, ಅಥವಾ ಅ ಚಿತ್ರದಲ್ಲಿರುವ ಹಳ್ಳಿಯು ಭಾರತೀಯ ಸಂಸ್ಕೃತಿಯ ಪ್ರತೀಕವೂ ಅಲ್ಲ.” ಎಂದು ಅವರು ವಿವರಿಸಿದರು.

ಕಾರ್ನಾಡರ ಚಿತ್ರದಲ್ಲಿ, ಕಾದಂಬರಿಯಲ್ಲಿ ಯಾವುದಕ್ಕೆ ಪ್ರಾಶಸ್ತ್ಯ ಕೊಡಲಾಗುತ್ತದೆಯೋ ಆ ಅಂಶವನ್ನು ಸ್ವಲ್ಪ ಮಟ್ಟಿಗೆ ಸ್ಥಳಾಂತರಿಸಿದ್ದೇನೋ ನಿಜ, ಆದರೆ ಅದು ” ಕತೆಯ ನಿರೂಪಣೆಯ ಒಳಗಡೆಯಲ್ಲಿಯೇ “. ಆ ಬರಹವು ಹೇಳುವಂತೆ, ‘ ಚಿತ್ರಕ್ಕೂ ಕಾದಂಬರಿಗೂ ವ್ಯತ್ಯಾಸ ಆ ಪ್ರಾಶಸ್ತ್ಯದ ಬದಲಾವಣೆಯಲ್ಲಿ ಮಾತ್ರವಿದೆ ಮತ್ತು ಕಾರ್ನಾಡರ ಕಾದಂಬರಿಯ ಅಣಕು ಅನ್ಯಾಯ ಮತ್ತು ತಪ್ಪು. ತಬ್ಬಲಿಯು ನೀನಾದೆ ಮಗನೆ ಯ ಕತೆ ಪೂರ್ವ ಮತ್ತು ಪಶ್ಚಿಮದ ನಡುವಿನ ತಿಕ್ಕಾಟವನ್ನು ಪ್ರತಿನಿಧಿಸುವುದಿಲ್ಲ. ಬದಲಾಗಿ ವಂಶವೃಕ್ಷದ ಕತೆಯಂತೆಯೇ ಇಲ್ಲಿಯೂ ಸಹ ಪರಂಪರೆ ಮತ್ತು ಆಧುನಿಕತೆಗಳ ನಡುವೆ ಘರ್ಷಣೆಯಾಗುತ್ತದೆ. ಆ ಕಾದಂಬರಿಯಂತೆಯೇ ಇಲ್ಲಿಯೂ ಸಹ ಬೈರಪ್ಪನವರು ಈ ವಸ್ತುವನ್ನು ಹೆಚ್ಚಿನ ಆಶಾವಾದದಿಂದಾಗಲೀ ಖಾತರಿಯಿಂದಾಗಲೀ ಸಮೀಪಿಸುವುದಿಲ್ಲ. ಕತೆಯಲ್ಲಿ ನನಗೆ ಎಲ್ಲಿಯೂ ಅವರು ” ಭಾರತೀಯ ಪವಿತ್ರ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದ್ದಾರೆ” ಎಂದೆನ್ನಿಸಿಲ್ಲ. ಬದಲಾಗಿ ಅವರು ಪವಿತ್ರವೋ ಅಲ್ಲವೋ, ಪಾರಂಪರಿಕ ಮೌಲ್ಯಗಳಿಗೆ ಆಕ್ರಮಿಸುತ್ತಿರುವ ಆಧುನಿಕತೆಯಿಂದ ಅನಿವಾರ್ಯವಾಗಿ ಎಸೆಯಲ್ಪಡುವ ಸವಾಲುಗಳ ಬಗೆಗೆ ಅತ್ಯಂತ ಯುಕ್ತವಾಗಿಯೇ ಕಾಳಜಿ ಹೊಂದಿದ್ದಾರೆ.

ಆ ಅಮೆರಿಕನ್ ಹುಡುಗಿ, (ಅವಳು ಕಳಿಂಗನು ಅಮೆರಿಕದಲ್ಲಿ ಭೇಟಿಯಾದ ಬ್ರಿಟಿಶ್ ಹುಡುಗಿಯೆಂದು ನನಗೆ ಅನ್ನಿಸುತ್ತದೆ) ಖಂಡಿತವಾಗಿಯೂ ಯಾವ ರೀತಿಯಲ್ಲೂ ಪಾಶ್ಚಾತ್ಯ ಸಂಸ್ಕೃತಿಯ ಪ್ರತಿನಿಧಿಯೇನೂ ಅಲ್ಲ. ಅಷ್ಟಕ್ಕೂ ಮೊದಮೊದಲು ಜರುಗುವ ಸಂಘರ್ಷಕ್ಕೆ ಅವಳು ಜವಾಬುದಾರಳೂ ಅಲ್ಲ. ಅವಳ ನಡವಳಿಕೆ ಆಗಾಗ ಅವಿವೇಕತನದಿಂದ ಮತ್ತು ಮೂರ್ಖತನದಿಂದ ಕೂಡಿರುತ್ತದೆಯಷ್ಟೆ. ವಾಸ್ತವದಲ್ಲಿ ವ್ಯವಸಾಯಗಾರನಾದ ಅವಳ ಗಂಡ ಕಳಿಂಗ ಮತ್ತು ಸಂಕುಚಿತ ಮನೋಭಾವದ ಪೂಜಾರಿಯಾದ ವೆಂಕಟರಮಣ ಇವರಿಬ್ಬರ ನಡುವಿನ ತಿಕ್ಕಾಟದಲ್ಲಿ ಸುಮ್ಮನೇ ಅವಳೊಬ್ಬ ಬಲಿಪಶು ಆಗಿಹೋಗುತ್ತಾಳೆ. ವೆಂಕಟರಮಣನ ಪಾತ್ರವನ್ನು ಎರಡೂ ಭಾಷೆಯ ಅವತರಣಿಕೆಗಳಲ್ಲಿ ನಾಸೀರುದ್ದೀನ್ ಶಾ ಮಾಡಿದ್ದಾರೆ. ಚಿತ್ರದಲ್ಲಿ ಆ ಸಂಘರ್ಷ ಕಳಿಂಗನ ಹೆಂಡತಿ ಹಸುವನ್ನು ಅದರ ಮಾಂಸ ತಿನ್ನಲು ಕಡಿಸುವುದರಿಂದ ಶುರುವಾಗುವುದಿಲ್ಲ. ಅವಳು ಹಾಗೆ ಮಾಡುವುದು ಆ ಪೂಜಾರಿ ಅವಳ ಹೊಟ್ಟೆಯಲ್ಲಿರುವ ಮಗುವನ್ನು ಶಪಿಸುವುದರಿಂದ ಅವಳಿಗೆ ಉಕ್ಕೇರಿ ಬರುವ ಕ್ರೋಧದಿಂದಾಗಿ ಅಷ್ಟೆ.  ಆ ಸಂಘರ್ಷ ಮೊಟ್ಟಮೊದಲು ಶುರುವಾಗುವುದು ಕಳಿಂಗನು ವ್ಯಾಪಾರೀ ದೃಷ್ಟಿಯಿಂದ ಉಪಯೋಗವಿಲ್ಲದ ಮುದಿಗೊಡ್ಡು ಹಸುಗಳನ್ನು ಕಟುಕರಿಗೆ ಮಾರಲು ನಿರ್ಧರಿಸಿದಾಗ. ಅದಕ್ಕೆ ಮುಂಚೆ ಅವನು ಯಾವುದೇ ಸೂಕ್ಷ್ಮ ಭಾವನೆಗಳಿಲ್ಲದೆ ದೇವಸ್ಥಾನಕ್ಕೆ ಹೋಗುವ ನೀರಿನ ಹರಿವನ್ನು ತಿರುಗಿಸಿಬಿಟ್ಟಿರುತ್ತಾನೆ.

 

ಚಿತ್ರ ಆರಂಭವಾಗುವುದು ಹಳ್ಳಿಯ ನಾಟಕ ಪ್ರದರ್ಶನದಲ್ಲಿ ಜಾನಪದದ “ಪುಣ್ಯಕೋಟಿ ಗೋವಿನ ಹಾಡು” ನಡೆಯುತ್ತಿರುವಾಗ. ಆ ಹಾಡಿನಿಂದಲೇ ಚಿತ್ರದ ಹೆಸರನ್ನೂ ಆರಿಸಿಕೊಳ್ಳಲಾಗಿದೆ, “ತಬ್ಬಲಿಯು ನೀನಾದೆ ಮಗನೆ”.  ಹಸಿದ ಹುಲಿಯು ಅಡ್ಡ ಹಾಕಿದಾಗ ಪುಣ್ಯಕೋಟಿ ಹಸುವು, ಹುಲಿಯು ತನ್ನನ್ನು ತಿನ್ನುವ ಮೊದಲು ಕಡೆಯ ಸಲ ಒಂದು ಬಾರಿ ತನ್ನ ಕಂದನಿಗೆ ಹಾಲು ಕುಡಿಸಿ ಬರುತ್ತೇನೆ ಎಂದು ಬೇಡಿಕೊಳ್ಳುತ್ತದೆ. ಹಾಲು ಕುಡಿಸಿ ತಿರುಗಿ ಬಂದೇ ಬರುವೆ ಎಂದು ಹುಲಿಗೆ ಹಸು ಭಾಷೆ ಕೊಡುತ್ತದೆ. ಕರುವಿಗೆ ಹಾಲು ಕುಡಿಸಿ ತಾನು ಸಾಯಲು ಹೋಗುವ ಸುದ್ದಿಯನ್ನು ಅದಕ್ಕೆ ತಿಳಿಸುತ್ತದೆ. ತಿರುಗಿ ಹೋಗದೆ ತಪ್ಪಿಸಿಕೊಂಡು ಬಿಡುವ ಎಲ್ಲಾ ಸಲಹೆಗಳನ್ನೂ ಪುಣ್ಯಕೋಟಿ ತಳ್ಳಿ ಹಾಕಿ ಬಿಡುತ್ತದೆ. ತಾನು ಕೊಟ್ಟ ಭಾಷೆಯನ್ನು ಉಳಿಸಿಕೊಳ್ಳಲು ತಾನು ತಿರುಗಿ ಹೋಗಲೇ ಬೇಕು ಎಂದು ಅದು ಖಂಡಿತವಾಗಿ ಹೇಳುತ್ತದೆ. ಹುಲಿಗೆ ವಾಪಸ್ ಬಂದ ಹಸುವಿನ ಪ್ರಾಮಾಣಿಕತೆಯನ್ನು ನೋಡಿ ಬಹಳ ಆಶ್ಚರ್ಯವಾಗುತ್ತದೆ. ಅದು ಹಸುವನ್ನು ತಿನ್ನುವುದಿಲ್ಲ. ಬದಲಾಗಿ ಕಣಿವೆಯಲ್ಲಿ ಹಾರಿ ತನ್ನ ಪ್ರಾಣತ್ಯಾಗ ಮಾಡುತ್ತದೆ.

ಆ ಕಾಲದ ಎಲ್ಲಾ ಸಂಸ್ಕೃತಿಗಳ ಆ ರೀತಿಯ ಕತೆಗಳಂತೆ ‘ಪುಣ್ಯಕೋಟಿ ಗೋವಿನ ಹಾಡು’ ಕತೆಯಲ್ಲಿಯೂ ಸಹಾ ಮೇಲೆ ನೋಡುವುದಕ್ಕೆ ಒಂದು ಸರಳವಾದ ನೇರವಾದ ನೀತಿ ಪಾಠವಿದೆ. ಒಳ್ಳೆಯವರಾಗಿರಬೇಕು, ಪ್ರಾಮಾಣಿಕರಾಗಿರಬೇಕು, ಕರ್ತವ್ಯನಿಷ್ಠರಾಗಿರಬೇಕು. ಆದರೆ, ಎಲ್ಲಾ ಸಂಸ್ಕೃತಿಗಳ ಹೆಚ್ಚಿನ ಕತೆಗಳಲ್ಲೂ ಮತ್ತು ಎಲ್ಲಾ ಕಲೆಗಳಲ್ಲೂ ಇರುವಂತೆ ಇಲ್ಲಿಯೂ ಸ್ವಲ್ಪ ಮಟ್ಟಿನ ಸಂಧಿಗ್ದತೆಯಿದೆ. ಪುಣ್ಯಕೋಟಿ ಹಸುವು ಮೇಲ್ನೋಟಕ್ಕೆ ಮೆಚ್ಚತಕ್ಕಂಥದ್ದಾಗಿ ಕಂಡು ಬಂದರೂ, ಬರಿಯ ಕರ್ತವ್ಯಕ್ಕಾಗಿ ಬದುಕುವವರನ್ನು ಕಂಡು ಅನುಕಂಪ ಹುಟ್ಟುವುದು ಕಷ್ಟ. ಅದರಲ್ಲೂ ಯಾರಿಗೆ ಬೇರಾವುದೂ ದಾರಿಯೇ ತೋರುವುದಿಲ್ಲವೋ ಯಾರು ಬೇರಾವುದೇ ನೈತಿಕ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರೋ ಅಂಥಹವರ ಮೇಲೆ ಅನುಕಂಪ ಮೂಡುವುದು ಕಷ್ಟ. ಆದರೆ ಆ ಕತೆಯಲ್ಲಿನ ಹುಲಿಯು ಒಂದು ಸಂಪೂರ್ಣವಾದ “ಮಾನವಿಕ” ನಡವಳಿಕೆಯನ್ನು ಪ್ರದರ್ಶಿಸುತ್ತದೆ. ತನ್ನ ಸ್ವಭಾವ ಮತ್ತು ಆಸಕ್ತಿಗಳಿಗೆ ವಿರುದ್ಧವಾಗಿ ಅದು ಒಂದೇ ಕ್ಷಣದಲ್ಲಿ ಧೈರ್ಯದಿಂದ ಒಂದು ನೈತಿಕ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ; ಅದರಿಂದ ಅದರ ಅದು ಸಾವಿಗೀಡಾಗುತ್ತದೆ.

ಈ ಸಂದಿಗ್ಧತೆಯು ಕಾದಂಬರಿಯಲ್ಲಿ ಹಾಗೂ ಚಿತ್ರದಲ್ಲೂ ಸಹ ಬಹಳ ಪ್ರಸ್ತುತವಿದೆ. ಇಲ್ಲಿ ಪಾರಂಪರಿಕ ಹಳ್ಳಿಯ ಜೀವನದ ಆದರ್ಶೀಕರಣವೇನೂ ಇಲ್ಲ. ತಾಯಿ ಮೂಕಿಯಾಗಿರುತ್ತಾಳೆ, ಹಳ್ಳಿಯ ಮುಖ್ಯಸ್ಥ ಕ್ಷಯ ರೋಗಿಯಾಗಿದ್ದಾನೆ. ( ಅವನ ಸ್ಥಿತಿಗೆ ಕಾಯಿಸದ ಹಾಲು ಕುಡಿಯುವುದೇ ಕಾರಣ) ಕಳಿಂಗ ಶೈಶವದಲ್ಲಿ ಹೆಚ್ಚೂಕಡಿಮೆ ಸತ್ತು ಬದುಕಿದ್ದಾನೆ. ಅವನ ಮಗನೂ ಹಾಗೆ ಆಗುವ ಸಾಧ್ಯತೆಗಳಿವೆ. ಯಾವುದೇ ಬದಲಾವಣೆಗಳನ್ನು ಆ ಇಡೀ ಹಳ್ಳಿಯೇ ಮೃಗೀಯವಾಗಿ ವಿರೋಧಿಸುತ್ತದೆ. ವಂಶವೃಕ್ಷದಲ್ಲಿದ್ದಂತೆಯೇ ಇಲ್ಲಿಯೂ ಸಹ ಪರಂಪರೆಯ ಪರದ ವಾದ ದಿಟ್ಟನೆಟ್ಟನೇರವಾದದ್ದೇನೂ  ಏನೂ ಅಲ್ಲ. ಆಧುನಿಕತೆಯ ಪರವಾದ ವಾದದಲ್ಲೂ ಅಷ್ಟೇ ಹುಳುಕುಗಳಿವೆ. ಕಳಿಂಗ ಒಟ್ಟಾರೆ ತನ್ನ ನಡವಳಿಕೆಯಲ್ಲಿ ಸೂಕ್ಷ್ಮಸಂವೇದನೆಯೇ ಇಲ್ಲದವನಂತೆ ನಡೆದುಕೊಳ್ಳುತ್ತಾನೆ. ಅಷ್ಟೇನೂ ಆಕರ್ಷಕವಲ್ಲದ ಪಾತ್ರದಲ್ಲಿ ಕಳಿಂಗನ ಬ್ರಿಟಿಶ್ ಹೆಂಡತಿ, ತಾನು ಹಸುವಿನ ಮಾಂಸ ತಿನ್ನಲೆಂದು ಪುಣ್ಯಕೋಟಿ ತಳಿಯ ಒಂದು ಹಸುವನ್ನು ಕೊಚ್ಚಿ ಹಾಕಲು ಆದೇಶ ನೀಡುವಾಗ ಅಗತ್ಯವೇ ಇಲ್ಲದ ಮೂರ್ಖತನವನ್ನು ಪ್ರದರ್ಶಿಸುತ್ತಾಳೆ.

ಪರಂಪರೆ ಮತ್ತು ಆಧುನಿಕತೆಗಳೆರಡೂ ಒಂದು ಬಗೆಯಲ್ಲಿ ವಾಸ್ತವವಾಗಿ ಯಾವುದೇ ಅಸ್ತಿತ್ವವಿಲ್ಲದ ಸೋಗಿನವುಗಳೇ ಎಂದು ಬಿಂಬಿಸುವಲ್ಲಿ ಬೈರಪ್ಪನವರ ಸೃಜನಾತ್ಮಕ ಶಕ್ತಿಯಿದೆ. ಅವುಗಳೆರಡೂ ಬರಿಯ ಪರಿಕಲ್ಪನೆಗಳಷ್ಟೇ ಹೊರತಾಗಿ ಅವುಗಳಿಗೆ ಒಂದು ನಿಜವಾದ ಅಸ್ತಿತ್ವವಿಲ್ಲ. ಒಂದೋ ನಾವು ರೂಢಿಯಲ್ಲಿರುವ ಪದ್ಧತಿಗಳನ್ನು ಮಾನ್ಯಗೊಳಿಸಲು ನಿರ್ಧರಿಸುತ್ತೇವೆ ( ಹೆಚ್ಚು ಬಾರಿ ಸಾಮಾಜಿಕ ಬದಲಾವಣೆಗಳಿಂದಾಗಿ ಅವುಗಳನ್ನು ರೂಢಿಸಿಕೊಂಡು ಹೋಗಲು ಕಾರ್ಯಸಾಧ್ಯವಲ್ಲದಾಗ) ಅಥವಾ ಎಲ್ಲಾ ಬದಲಾವಣೆಗಳೂ “ಅಭಿವೃದ್ಧಿಗಳೇ” ಎಂದು ನಂಬುವುದನ್ನು ಮಾನ್ಯ ಮಾಡಿ ಅನುಮೋದಿಸುವುದು.(ಹೆಚ್ಚಾಗಿ ಅದರಲ್ಲಿ ಒಳಗೊಂಡಿರುವ ವಿಷಯಗಳನ್ನು ಆಳವಾಗಿ ಪರಿಗಣಿಸದೆ ನಿರ್ಧರಿಸಿಬಿಡುವುದು). ಕಾಳಿಂಗನ ತಾಯಿಯು (ಎರಡೂ ಅವತರಣಿಕೆಗಳಲ್ಲಿ ಲಕ್ಷ್ಮಿ ಕೃಷ್ಣಮೂರ್ತಿಯವರು ಸುಂದರವಾಗಿ ಅಭಿನಯಿಸಿದ್ದಾರೆ.)ಪಾಪದ ವ್ಯಕ್ತಿ. ಅವಳೂ ಮತ್ತು ಅವಳ ಪರ ವಹಿಸುವ ಪೂಜಾರಿಯೂ ಒಳ್ಳೆಯವರು ಮತ್ತು ಪ್ರಾಮಾಣಿಕರು ಎಂದು ತಕ್ಕಮಟ್ಟಿಗೆ ಪರಿಗಣಿಸಬಹುದಾದ ವ್ಯಕ್ತಿತ್ವಗಳು. ಆದರೆ ತಾಯಿಯ “ಹಸುಗಳ ಬಗೆಗಿನ ಹುಚ್ಚು” ಸ್ವಲ್ಪ ಅತಿಯಾಗಿಯೇ ಇದೆ. ಅವಳ ಸಾವಿಗೆ ಮುಂಚೆ ನಡೆಯುವ ಗೌಪೂಜೆ ಮನಕರಗಿಸುತ್ತದೆಯಾದರೂ ಭೀಕರವಾಗಿದೆ. ವೆಂಕಟರಾಮ ಒಪ್ಪಿಕೊಳ್ಳಲು ಪ್ರಾರಂಭಿಸಿದರೂ ಅವನ ನಡವಳಿಕೆ ತತ್ವಬದ್ಧವಾಗಿ ನಿಷ್ಠುರವಾಗಿದೆ. ಕೊನೆಗೆ ಸಾಮಾನ್ಯ ಹಳ್ಳಿಜನರೂ ಮತ್ತವರ ಸಾಮಾನ್ಯ ಜ್ಞಾನವೂ ಮತ್ತು ಅವರು ಬರಿಯ ಮನುಷ್ಯರಂತೆ ಸ್ವಾಭಾವಿಕವಾಗಿ ಹಾಗೂ ಸ್ವಲ್ಪ ಎರ್ರಾಬಿರ್ರಿಯಾಗಿ ಘಟನೆಗಳಿಗೆ ಪ್ರತಿಕ್ರಿಯಿಸುವಾಗಲೇ,ಅದು ಚಿತ್ರದ ಒಂದೇ ಒಂದು ನಿಜವಾಗಿಯೂ ಆಶಾವಾದದ, ಆನಂದದ ಕ್ಷಣವಾಗುತ್ತದೆ.  ಅಷ್ಟೊಂದು ಜಗಳವಿದ್ದರೂ ಜನರು ಕಾಳಿಂಗ ಮತ್ತು ಅವನ ಹೆಂಡತಿಗೆ ತಮ್ಮ ರೋಗಗ್ರಸ್ತ ಮಗುವಿಗೆ ಹಸು ತನ್ನ ಕೆಚ್ಚಲಿನಿಂದ ಹಾಲು ಕುಡಿಸುವುದನ್ನು ತಡೆಯುವುದಿಲ್ಲ.

ಇತ್ತೀಚೆಗೆ ಚಿತ್ರದ ಬಗ್ಗೆ ಮಾತನಾಡುತ್ತಾ ಬೈರಪ್ಪನವರು ತಮಗೆ ಸಸ್ಯಾಹಾರದ ಸಾಮಾನ್ಯ ಪ್ರಶ್ನೆಯನ್ನು ಉದಹರಿಸುತ್ತಾ ಅದೇ ತಮಗೆ ಅತ್ಯಂತ ಕಾಳಜಿಯ ಅಂಶವಾಗಿತ್ತು ಎಂದರು. ಅವರು ಇದನ್ನು ಖಂಡಿತವಾಗಿ ಭಾರತೀಯ ಪರಂಪರೆಗೆ ನಿರ್ದಿಷ್ಟವಾಗಿ ಜೋಡಿಸುತ್ತಾರೆ. ಅವರು ಜೈನ ಧರ್ಮವನ್ನೂ ಉದಹರಿಸುತ್ತಾ ಸಸ್ಯಾಹಾರೀ ಕ್ರಮಕ್ಕೂ ಪುನರ್ಜನ್ಮದ ನಂಬಿಕೆಗೂ ಸಂಬಂಧ ಕಲ್ಪಿಸುತ್ತಾರೆ. ಸಸ್ಯಾಹಾರಿ ಆಹಾರ ಕ್ರಮವು ಭಾರತಕ್ಕೇ ಮಾತ್ರವೇ ಸಲ್ಲುವುದೇನೂ ಅಲ್ಲ. (1968ರಲ್ಲಿ ಈ ಕಾಲಕ್ಕಿಂತ ಹೆಚ್ಚು ಹಾಗಿದ್ದಿದ್ದೂ ನಿಜ) ಸಸ್ಯಾಹಾರವು ಬಡತನವನ್ನೂ ಮಾಂಸಾಹಾರ ಸೇವನೆ ಸಿರಿವಂತಿಕೆಗೆ ಐಶ್ವರ್ಯಕ್ಕೆ ಬಲವಾಗಿ ಅಂಟಿಕೊಂಡಿದ್ದುದರಿಂದ ಯೂರೋಪಿಯನ್ನರು ಸಾಂಪ್ರದಾಯಿಕವಾಗಿ ಅದನ್ನು ತ್ಯಜಿಸಿದ್ದರು. ಸಸ್ಯಾಹಾರೀ ಆಹಾರ ಕ್ರಮವು 19ನೆಯ ಶತಮಾನದಿಂದೀಚೆಗೆ ಮಾತ್ರಾ ಯೂರೋಪಿನಲ್ಲಿ ಸಾಮಾನ್ಯವಾಗತೊಡಗಿತು ಮತ್ತು ಅದು ಆಗಿನಿಂದ ಇಲ್ಲಿಯವರೆಗೂ ನಿಧಾನವಾಗಿ ಆದರೆ ಧೃಢವಾಗಿ ಬೆಳೆಯುತ್ತಲೇ ಇದೆ.

ಯೂರೋಪು ಮತ್ತು ಅಮೆರಿಕದಲ್ಲಿ(ಹಾಗೂ ಪ್ರಪಂಚದ ಇತರ ಅನೇಕ ಭಾಗಗಳಲ್ಲಿ) ಸಸ್ಯಾಹಾರದ ಪದ್ಧತಿ ಇಲ್ಲದಿರುವುದರಿಂದ ಸಸ್ಯಾಹಾರ ಮತ್ತು ವೀಗನಿಸಮ್‍ಗಳು ಯಾವಾಗಲೂ ತತ್ವಾಧಾರಿತವೆಂದೇ ಪರಿಗಣಿಸಲ್ಪಡುತ್ತವೆ. (ಜೀವವು ಅತ್ಯಂತ ಪವಿತ್ರವಾದುದು ಎಂಬ ಒಂದು ತತ್ವದ ಮೇಲೆ ಇದು ಆಧರಿಸಿದೆ ಎಂದು ಸ್ಥೂಲವಾಗಿ ಹೇಳಬಹುದು)ಇದು ವೀಗನ್ ಜೈನರಿಗೆ, ಅಂದರೆ ಪ್ರಾಣಿಗಳಿಂದ ಬರುವ ಯಾವುದೇ ಪದಾರ್ಥಗಳನ್ನೂ, ಹಾಲುಮೊಸರುತುಪ್ಪ ಇತ್ಯಾದಿ ಹೈನುಗಾರಿಕೆಯ ವಸ್ತುಗಳನ್ನೂ ಸಹ ಸೇವಿಸದಿರುವ ಜೈನರಿಗೂ ಅನ್ವಯಿಸುತ್ತದೆ. ಅದಕ್ಕೆ ಎದುರಾಗಿ ಹಿಂದೂ ಪದ್ಧತಿಗಳು ಬಹಳ ವಿಧವಿಧವಾಗಿವೆ. ಬಹುಸಂಖ್ಯಾತ ಹಿಂದೂಗಳು ಸಸ್ಯಾಹಾರಿಗಳೇ ಅಲ್ಲ. ಎಲ್ಲಾ ಜಾತಿಗೆ ಸೇರಿದ ಬಹುತೇಕ ಜನರು ಸಿದ್ಧಾಂತದಲ್ಲಷ್ಟೇ ಸಸ್ಯಾಹಾರಿಗಳು ನಿಜಜೀವನದಲ್ಲಲ್ಲ. ಹಾಗೂ ಸಸ್ಯಾಹಾರಿಗಳಾದ ಅನೇಕರು ಅನುಕೂಲಕ್ಕಾಗಿ ಅಥವಾ ರೂಢಿಗಾಗಿಯೇ ಹೊರತು ತತ್ವಕ್ಕಾಗಿ ಅಲ್ಲ.

ಇದನ್ನು ಆಚರಿಸುವವರಿಗೆ ಇದೊಂದು ಉತ್ತಮವಾದ ಹಿತವಾದ ರಾಜಿ. ಆದರೂ ಇದೊಂದು ರಾಜಿಯೇ. ತತ್ವವಾದಿಗಳಾದ ಸಸ್ಯಾಹಾರಿಗಳು ಎದುರಿಸಬೇಕಾದ ಮುಜುಗರಗೊಳಿಸುವ ಸತ್ಯ ಏನೆಂದರೆ ತರ್ಕಬದ್ಧವಾಗಿ ನೋಡಿದರೆ ಜೈನರು ಮತ್ತು ವೀಗನ್ನುಗಳು ಮಾತ್ರವೇ ಯಾವಾಗಲೂ ತಪ್ಪದೇ ನಿಜವಾದ ಸಸ್ಯಾಹಾರಿಗಳಾಗಿರುತ್ತಾರೆ. ಕೋಳಿ, ಕೋಳಿಮೊಟ್ಟೆ ಮತ್ತುಮೀನು ತಿನ್ನುವ ಸಸ್ಯಾಹಾರಿಗಳನ್ನು ಮರೆತುಬಿಡಿ. ಆಧುನಿಕ ಜಗತ್ತಿನಲ್ಲಿ ಹಾಲು ಕುಡಿಯುವ ವ್ಯಕ್ತಿಯೂ ಕೂಡಾ ವಾಸ್ತವದಲ್ಲಿ ಹಸುವಿನ ಮಾಂಸದ ಉದ್ಯಮದ ಪೋಷಣೆಯಲ್ಲಿ ಸಹಭಾಗಿತ್ವ ಹೊಂದಿರುತ್ತಾನೆ. ಹಿಂದು ಮತ್ರಿಕೆಯಲ್ಲಿ ಕೆಲವು ವರ್ಷಗಳ ಹಿಂದೆ ಒಂದು ಬರಹದಲ್ಲಿ ಹೀಗೆ ಬರೆಯಲಾಗಿತ್ತು : ” ಹಸುವಿನ ಮಾಂಸ ಮತ್ತು ಹಾಲು ಎರಡೂ ಒಂದೇ ನಾಣ್ಯದ ಎರಡು ಮುಖಗಳು, ಅದರೂ ಭಾರತದಲ್ಲಿ. ಏಕೆಂದರೆ ಭಾರತದಲ್ಲಿ ಹಸು ಮತ್ತು ಎಮ್ಮೆಗಳನ್ನು ಮುಖ್ಯವಾಗಿ ಹಾಲಿಗಾಗಿ ಸಾಕುತ್ತಾರೆ.  “ಮಾಂಸ” ಕ್ಕಾಗಿ ಮಾತ್ರವೇ ಸಾಕುವ ಹಸುಗಳು ಭಾರತದಲ್ಲಿಲ್ಲ. ಆದರೂ ಆಕಳ ಮಾಂಸ ಭಾರತದ ಮಾಂಸ ಉತ್ಪಾದನೆಯ 62% ಅಷ್ಟಿದೆ. ಹಸುವಿನ ಮಾಂಸವನ್ನು ಭಾರತದಲ್ಲಿ ಹೈನುಗಾರಿಕೆ ಉದ್ಯಮದ ಮೂಲದಿಂದ ಪಡೆಯಲಾಗುತ್ತದೆ.  ಹಾಲು ಉತ್ಪಾದನೆಯ ಉದ್ಯಮ ಭಾರತದಲ್ಲಿ ಆರ್ಥಿಕವಾಗಿ ಸುಸ್ಥಿರವಾಗಿರುವುದಕ್ಕೆ ಕಾರಣವೆಂದರೆ ಅದು ಹಸುವಿನ ಮಾಂಸದ ಉದ್ಯಮ ಮತ್ತು ಆ ಉದ್ಯಮದಿಂದ ಹುಟ್ಟುವ ಇತರ ವಸ್ತುಗಳ ಅಂದರೆ ಚರ್ಮದ ಉದ್ಯಮಗಳು. (ಡಾರ್ಕ್ ಅಂಡ್ ಡೈರಿ: ಹೈನುಗಾರಿಕೆ ಪ್ರಾಣಿಗಳ ದುಃಖಕರ ಕತೆ. ದೆ ಹಿಂದು. 8 ನವೆಂಬರ್ 2014.)

ಇದಕ್ಕೆ ಕಾರಣಗಳು ಸರಳ ಮತ್ತು ಸ್ಪಷ್ಟವಾಗಿವೆ. ಹೆಣ್ಣಾಕಳು ಅಂದರೆ ಹಸು ಮಾತ್ರಾ ಹಾಲು ಕೊಡುತ್ತದೆ.  ಸಾಂಪ್ರದಾಯಿಕವಾದ ಹಿಂದಿನ ಕಾಲದಲ್ಲಿ ಎತ್ತುಗಳಿಗೂ , ಬರಗಾಲಕ್ಕೆ ಮತ್ತು ಸರಕುಸಾಗಾಣಿಕೆಗಾಗಿ ಅಷ್ಟೇ ಮೌಲ್ಯವಿತ್ತು.  ಆದರೆ ಆಧುನಿಕ ಕಾಲದಲ್ಲಿ ಇದು ಬದಲಾಗಿದೆ. ಈಗ ಅವುಗಳನ್ನು ಉಪವಾಸದಲ್ಲಿ ಸಾಯಲು ಬಿಡುತ್ತಾರೆ(ಇದು ಭಾರತದಲ್ಲಿ ಸಾಮಾನ್ಯ ಪದ್ಧತಿ. ಆದರೆ ಇದುಯಾವುದೇ ದೃಷ್ಟಿಕೋನದಲ್ಲಿ ನೋಡಿದರೂ ವಿವೇಚನೆಯ ಕಾರ್ಯವಲ್ಲ)ಅಥವಾ ಅವುಗಳನ್ನು ಕಟುಕರಿಗೆ ಮಾರಿಬಿಡುತ್ತಾರೆ. ಯೂಎಸ್, ಬ್ರೆಜಿûಲ್, ಉರುಗ್ವೇ ಅಥವಾ ಅರ್ಜೆಂಟೈನಾದಷ್ಟು ಆಕಳನ್ನು ಭಾರತದಲ್ಲಿ ಉತ್ಪಾದನೆ ಮಾಡದಿದ್ದರೂ ಸಹ ಪ್ರಪಂಚದ ಅತಿ ಹೆಚ್ಚು ಆಕಳು ಮಾಂಸ ರಫ್ತು ಮಾಡುವ ದೇಶಗಳಲ್ಲಿ ಒಂದಾಗಿದೆ. ಅಧಿಕೃತವಾಗಿ ರ¥sóÀ್ತು ಮಾಡುವ ಎಲ್ಲಾ ಮಾಂಸವನ್ನೂ “ಎಮ್ಮೆಯ ಮಾಂಸ ” ಎಂಬ ತಲೆಪಟ್ಟಿಯಡಿಯಲ್ಲಿ ಮಾರಲಾಗುತ್ತದೆ. (ಹಾಗಿರುವುದು ಅಸಾಧ್ಯ)ಸರಳವಾಗಿ ಹೇಳಬೇಕೆಂದರೆ ಸುಮಾರು ಇಂತಿಷ್ಟು ಗ್ಯಾಲ್ಲನ್ನುಗಳ ಹಾಲನ್ನು ಕುಡಿದಿರೆಂದಿರೆ, ಇನ್ನೆಲ್ಲೋ ಯಾರೋ ಹಸುವಿನ ಮಾಂಸವನ್ನು ತಿಂದಿರಲೇ ಬೇಕು. (ಭೀಫ್ ಸ್ಟೇಕ್)

ತಬ್ಬಲಿಯು ನೀನಾದೆ ಮಗನೆ ಚಿತ್ರದ ಅಂತ್ಯ ಈ “ಆಕಳತೂಕ”ದ ಸಮಸ್ಯೆಯನ್ನು ಎದುರಿಸುತ್ತದೆ. ಚಿತ್ರದ ಕೊನೆಯಲ್ಲಿ ತನ್ನ ಭಾವನಾರಹಿತವಾದ ನಡವಳಿಕೆಯನ್ನು ತಿದ್ದಿಕೊಳ್ಳಲು ಕಾಳಿಂಗ ಪ್ರಯತ್ನಿಸಿದಾಗ ತಾನು ಮಾರಿ ಬಿಟ್ಟ ಹಸುಗಳನ್ನು ಮರಳಿ ತರುತ್ತಾನೆ. ಆದರೆ ಗೋಧೂಳಿ ಎದ್ದಿರುವ ಆ ಸಂಜೆಯಲ್ಲಿ ಅವನಿಗೆ ಕಟುಕರ ದೊಡ್ಡಿಯಲ್ಲಿ ತನ್ನ ಹಸುಗಳ್ಯಾವುವು, ಬೇರೆಯವು ಯಾವುವು ಎಂದು ತಿಳಿಯುವುದೇ ಇಲ್ಲ. ಮೇಲೆ ಉದಹರಿಸಿದ ಬರಹ ಮುಕ್ತಾಯ ಇನ್ನೂ ಹೆಚ್ಚು ನಿಖರವಾಗಿದೆ. ” ಹಾಲು ಕುಡಿಯುವುದು ಮಾಂಸ ತಿನ್ನುವುದರಷ್ಟೇ ವೇದನೆಯುಂಟುಮಾಡುತ್ತದೆ. ನಿಜ ಹೇಳಬೇಕೆಂದರೆ ಅದಕ್ಕೂ ಹೆಚ್ಚು ಕಷ್ಟ ಕೊಡುತ್ತದೆ. ವಾಸ್ತವವಾಗಿ ಹಾಲು ಮಾಂಸಕ್ಕಿಂತಾ ಹೆಚ್ಚು ಕ್ರೌರ್ಯಕ್ಕೆ ಕಾರಣವಾಗಿದೆ.” ಆದ್ದರಿಂದ ಹಸುಗಳು ಮತ್ತು ಅವನ್ನು ಸಾಕುವವರು ಸಂಪೂರ್ಣವಾಗಿ ಪ್ರಾಮಾಣಿಕವಾಗಿದ್ದಿದ್ದರೆ, ಹುಲಿಗಳು ಹಸಿದುಕೊಂಡಿರಲು ಯಾವ ಕಾರಣಗಳೂ ಇರುತ್ತಿರಲಿಲ್ಲ.

1977ರಲ್ಲಿ ಬೈರಪ್ಪನವರ ಕಾದಂಬರಿಯನ್ನು ಕುರಿತು ಕಾರ್ನಾಡರಿಗೆ ಎಷ್ಟೇ ಅನುಮಾನಗಳಿದ್ದಾಗ್ಯೂ ಸಹ ಆ ಕಾದಂಬರಿಯನ್ನು ಯಾವ  ಪ್ರಾಮಾಣಿಕತೆಯಿಂದ ಬರೆಯಲಾಗಿತ್ತೋ ಆ ಪ್ರಾಮಾಣಿಕತೆಯನ್ನು ಅವರು ಪ್ರಬಲವಾಗಿ ಸಮರ್ಥಿಸಿದರು. ಅಲ್ಲದೆ ಮಾನವಿಕ ಸ್ಥಿತಿಗಳ ಬಗ್ಗೆ ಬರೆಯುವಾಗ ಅವುಗಳನ್ನು ಆ ಕಾದಂಬರಿಯಲ್ಲಿ ಬರೆದ ರೀತಿ ಅತ್ಯುತ್ತಮವಾಗಿದೆಯೆಂದು ಒಪ್ಪಿಕೊಂಡರು. ಇದೇ ವಸ್ತುವಿನ ವಿಷಯವಾಗಿ ಅವರು ತಮ್ಮ ಮುಂದಿನ ವೃತ್ತಿ ಜೀವನದಲ್ಲಿ ಹೆಚ್ಚು ಮುಗುಮ್ಮಾಗಿದ್ದರು. “ಈಗ ನಾನು ನನಗೆ ಮತ್ತು ಬೈರಪ್ಪನವರಿಗೂ ನನ್ನಿಂದ ಸಂದ ಅನ್ಯಾಯಕ್ಕಾಗಿ ಪರಿತಪಿಸುತ್ತೇನೆ. ಏಕೆಂದರೆ ನಮ್ಮಿಬ್ಬರ ಮೂಲಭೂತ ತತ್ವಗಳು ಸಂಪೂರ್ಣವಾಗಿ ಬೇರೆಬೇರೆಯಾಗಿವೆ. ನಾನು ಆ ಚಿತ್ರವನ್ನು ಮಾಡಿ ಗೋ ಹತ್ಯಾ ಖಂಡನೆಯ ಮಸೂದೆಯನ್ನು ಬೆಂಬಲಿಸಿಬಿಟ್ಟೆ ಎನ್ನಿಸುತ್ತದೆ. ನನಗೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿದಿರಲಿಲ್ಲ. ಹಾಗೂ ಅದು ಅಧಿಕಾರಕ್ಕೆ ಬಂದಾಗ ಒಂದು ಸಮುದಾಯದ, ಅದು ತನ್ನ ಆಹಾರ ಗಳಿಸಿಕೊಳ್ಳುವ ಹಕ್ಕನ್ನು ಕಿತ್ತುಕೊಳ್ಳುವ ಶಾಸನವನ್ನು ತರುತ್ತದೆ ಎಂದು ನನಗೆ ಗೊತ್ತಿರಲಿಲ್ಲ.” ಇದನ್ನು ಹೇಳಿದ್ದು ಒಂದು ರೀತಿಯ ಕಠಿಣವಾದ ರಾಜಕೀಯ ಪರಿಸ್ಥಿತಿಯಲ್ಲಿ. ಆಗ ಕಾರ್ನಾಡರನ್ನು ಒಂದು ರೀತಿಯ “ಪವಿತ್ರವಾದ ರಾಕ್ಷಸ”ರಂತೆ ಕಾಣಲಾಗುತ್ತಿತ್ತು. ಅಂದರೆ ಒಬ್ಬ “ಸಾರ್ವಜನಿಕ ಬುದ್ಧಿಜೀವಿ” ಎಂದು ಪರಿಗಣಿಸಲಾಗುತ್ತಿತ್ತು. ಆ ಬೆಳವಣಿಗೆಗಳ ಬಗ್ಗೆ ನಾನು ಈ ಸರಣಿಯ ಮುಂದಿನ ಬರಹದಲ್ಲಿ ಚರ್ಚಿಸುತ್ತೇನೆ.


ಅನುವಾದ: ಜಯಶ್ರೀ ಜಗನ್ನಾಥ: ಫ್ರೆಂಚ್  ಭಾಷೆಯ ಉಪಾದ್ಯಾಯಿನಿ. ಬರೆಯುವುದು, ಭಾಷಾಂತರ ಮಾಡುವುದು ಇವು ನನ್ನ ಕೆಲಸಗಳು. ಪ್ರವಾಸ ಮಾಡುವುದು, ಓದುವುದು, ಸಹೃದಯರೊಂದಿಗೆ ಸಂಭಾಷಣೆ ಹವ್ಯಾಸಗಳು. ತನ್ನ ಸುತ್ತಮುತ್ತಿನ ಪರಿಸರಕ್ಕೆ ಪ್ರತಿಕ್ರಿಯಿಸಿವುದು ಮತ್ತು ಅಭಿವ್ಯಕ್ತಿಸುವುದು ತನಗೆ ಅನಿವಾರ್ಯ, ಅಗತ್ಯ ಎಂದುಕೊಂಡು ಬರೆತ್ತಿರುವ ಜಯಶ್ರೀ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ .

ಗಿರೀಶ್ ಕಾರ್ನಾಡ್ ಸರಣಿ  ಮೊದಲ ಭಾಗ

ಗಿರೀಶ್ ಕಾರ್ನಾಡ್ ಸರಣಿ  ಎರಡನೇ ಭಾಗ

ಗಿರೀಶ್ ಕಾರ್ನಾಡ್ ಸರಣಿ  ಮೂರನೇ ಭಾಗ

ಗಿರೀಶ್ ಕಾರ್ನಾಡ್ ಸರಣಿ ನಾಲ್ಕನೇ ಭಾಗ

For English Original: https://ruthumana.com/blog-post/4-girish-karnad-cows-and-tigers/

ಪ್ರತಿಕ್ರಿಯಿಸಿ