ಗಾಯತ್ರಿ ಸ್ಪಿವಾಕ್: ‘ಸಾಯುವುದರ ಮೂಲಕ ತಳಸಮುದಾಯದವರು ಮಾತನಾಡುತ್ತಾರೆ’

ಭಾರತದಲ್ಲಿನ ಗ್ರಾಮೀಣ ಪ್ರದೇಶದ ಬಡವರ ಶೈಕ್ಷಣಿಕ ಸಬಲೀಕರಣ ಕುರಿತು ಸ್ಪಿವಾಕ್ ಜೊತೆ ಒಂದು ಮಾತುಕತೆ ಮತ್ತು ಪ್ರಭುತ್ವ ಹಾಗೂ ಪ್ರಜೆಗಳ ಬಗೆಗಿನ ಅವರ ಚಿಂತನೆಗಳು ಇಲ್ಲಿವೆ. “ಮಯನ್ಮಾರ್ಸ್ ಎನೆಮಿ ವಿತಿನ್ ಬುದ್ದಿಸ್ಟ್ ವಯೊಲೆನ್ಸ್ – ದಿ ಮೇಕಿಂಗ್ ಆಫ್ ಎ ಮುಸ್ಲಿಂ ಅದರ್ ಎಂಬ ಪುಸ್ತಕಗಳನ್ನು ಬರೆದಿರುವ  ಪತ್ರಕರ್ತ ಮತ್ತು  ಬರಹಗಾರ ಫ್ರಾನ್ಸಿಸ್ ವೇಡ್, ಸ್ಪಿವಾಕ್ ಅವರನ್ನು ಸಂದರ್ಶಿಸಿದ ಪಠ್ಯದ ಅನುವಾದ ಇಲ್ಲಿದೆ.

1980ರ ದಶಕದ ಮಧ್ಯ ಭಾಗದಿಂದ ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ಕೊಲಿಂಬಿಯಾ ವಿಶ್ವವಿದ್ಯಾಲಯದಲ್ಲಿ ಮಾನವಿಕ  ವಿಷಯಗಳ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.  ಅಲ್ಲದೆ ನಮ್ಮ ದೇಶದ ಪಶ್ಚಿಮ ಬಂಗಾಳದ ಕೆಲವು ಗ್ರಾಮಗಳಲ್ಲಿ ಅವರ ವಿಸ್ತೃತ ಕೆಲಸ ಮುಂದುವರೆಯುತ್ತಿದೆ. ಕೋಲ್ಕತ್ತದಿಂದ ಸುಮಾರು ಒಂದು ದಿನದ ರೈಲು ಮತ್ತು ಮೋಟರ್ಬೈಕ್ ಪಯಣದ ತರುವಾಯ ಅವರು ನಡೆಸುತ್ತಿರುವ ನಾಲ್ಕು ಪ್ರೈಮರಿ ಶಾಲೆಗಳನ್ನು ತಲುಪಬಹುದು.  ಅಲ್ಲಿನ ಶಿಕ್ಷಕರು ಮಕ್ಕಳಿಗೆ ಮಾಹಿತಿಗಳನ್ನು ಉರುಮಾಡುವುದರ ಮೂಲಕ ನೆನಪಿನಲ್ಲಿ ಉಳಿಯುವಂತೆ ಬೋಧನೆಯನ್ನು ಮಾಡುತ್ತಿದ್ದರು.  ಇಂತಹ ಸಾಂಪ್ರದಾಯಿಕ ಕಲಿಕಾ ಪದ್ಧತಿಯ ಬದಲು ಮಕ್ಕಳು ವಿವೇಚನೆಯ ಆಲೋಚನಾ ಸಾಮರ್ಥ್ಯಗಳನ್ನು ಪಡೆಯುವಂತಹ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ.

ಮಾರ್ಕ್ಸವಾದ, ಡಿಕನ್ಸ್ಟ್ರಕ್ಷನ್ (ನಿರಚನಾವಾದ- ತಾತ್ವಿಕ ಮತ್ತು ಸಾಹಿತ್ಯಿಕ ಭಾಷೆಯ ವಿಮರ್ಶಾತ್ಮಕ ವಿಶ್ಲೇಷಣಾ ವಿಧಾನದ ಅಧ್ಯಯನ), ಮಹಿಳಾವಾದ ಮತ್ತು ವಸಾಹುತೋತ್ತರ ಅಧ್ಯಯನ(ಪೋಸ್ಟ್ ಕಲೋನಿಯಲಿಸಂ)ದ ಸ್ಪಿವಾಕರ ವಿದ್ವತ್ತಿನ ಕೆಲಸಗಳು ವ್ಯಾಪಕವಾಗಿದ್ದು, ಪ್ರಭಾವಶಾಲಿಯೂ ಆಗಿವೆ. ಅವರು 1942ರಲ್ಲಿ ಕೋಲ್ಕತ್ತದಲ್ಲಿ ಜನಿಸಿದರು.  1961ರಲ್ಲಿ ಅಮೆರಿಕಾಗೆ ತೆರಳಿ, ಅಲ್ಲಿನ ಕಾರ್ನೆಲ್ನಲ್ಲಿ ಪದವಿ ಶಿಕ್ಷಣವನ್ನು ಪಡೆದರು.  ಅವರು 1976ರಲ್ಲಿ ಜಾಕ್ ಡೆರ್ರಿಡಾನ ‘ ಡಿ ಲ ಗ್ರ್ಯಾಮಟಾಲಜಿ ‘ (ಗ್ರ್ಯಾಮಟಾಲಜಿ- ಬರೆಯುವ ವಿಧಾನಗಳ ವ್ಯವಸ್ಥೆಗಳನ್ನೊಳಗೊಂಡ ವೈಜ್ಞಾನಿಕ ಅಧ್ಯಯನ- ಅನುವಾದಕ) ಎಂಬ ಗ್ರಂಥವನ್ನು ಆಂಗ್ಲ ಭಾಷೆಗೆ ಅನುವಾದಿಸಿದರು.  ಇದರಲ್ಲಿ ಅವರು ಬರೆದ ದೀರ್ಘ ಮುನ್ನುಡಿ ವ್ಯಾಪಕ ನೆಲೆಯಲ್ಲಿ ಚರ್ಚೆ ಮತ್ತು ವಿಮರ್ಶೆಗೆ ಒಳಗಾಯಿತು.  1988ರಲ್ಲಿ ಅವರು ಬರೆದ ‘ ಕ್ಯಾನ್ ದಿ ಸಬಾಲ್ಟ್ರನ್ ಸ್ಪೀಕ್? ( ತಳ /ನಿರ್ಲಕ್ಷಿತ ಸಮುದಾಯದವರು ಮಾತನಾಡಬಲ್ಲರೇ?) ಎಂಬ ಪ್ರಬಂಧ ಕುಟುಂಬದೊಳಗಿನ ಮಹಿಳೆಯರ ಬಗೆಗಿನ ತಪ್ಪು ಗ್ರಹಿಕೆಗಳು ಮತ್ತು ಅವರ ಆತ್ಮಹತ್ಯೆಗಳನ್ನು ಕುರಿತು ಶೋಧಿಸಿತು.  ಇದು ಮೊದಲ ಬಾರಿಗೆ 1983ರಲ್ಲಿ ಒಂದು ಸಮಾವೇಶದಲ್ಲಿ ಮಂಡನೆಯಾಯಿತು.  ನಂತರ ಇದು ವಸಾಹುತೋತ್ತರ ಅಧ್ಯಯನದಲ್ಲಿ ಒಂದು ಪಠ್ಯವಾಯಿತು.  ಇದು ‘ಸಬಾಲ್ಟ್ರನ್‘ ಎಂಬ ಪರಿಕಲ್ಪನೆ ಬೆಳೆಯುವುದರಲ್ಲಿ ಮತ್ತು ಜನಪ್ರಿಯವಾಗುವುದರಲ್ಲಿ ಗಮನಾರ್ಹ ಪಾತ್ರವನ್ನು ವಹಿಸಿತು. ಇತಿಹಾಸದಲ್ಲಿ ಅಂಚಿಗೆ ತಳ್ಳಲ್ಪಟ್ಟಿರುವ ಸಾಮಾಜಿಕ ಗುಂಪುಗಳನ್ನು  ಬಣ್ಣಿಸಲು ‘ ಸಬಾಲ್ಟ್ರನ್ ‘ ಎಂಬ ಪದವನ್ನು ಮೊದಲು ಆಂಟೊನಿಯೊ ಗ್ರಾಮ್ಷಿ ತನ್ನ ‘ ಪ್ರಿಸನ್ ನೋಟ್ಬುಕ್ಸ್ ‘ ನಲ್ಲಿ ಬಳಸಿದ.

ನಾನು ಸ್ಪಿವಾಕ್ ಜೊತೆ ಏಪ್ರಿಲ್ನಲ್ಲಿ ಅವರು ಪಶ್ಚಿಮ ಬಂಗಾಳದಿಂದ ವಾಪಸ್ಸಾದ ತರುವಾಯ ಮಾತನಾಡಿದೆ.  ಅವರು ಬಂಗಾಳಕ್ಕೆ ಭೇಟಿ ಮಾಡಿದಾಗ ಅಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯ ತಯಾರಿ ಜರುಗಿತ್ತು.  ನಾವು ಅವರ ಜೊತೆ ಪ್ರಾಥಮಿಕ ಶಾಲೆಗಳು, ಶಿಕ್ಷಣಕ್ಕೆ ಸಂಬಂಧಿಸಿದ ಅವರ ಹಿಂದಿನ ಬರೆಹಗಳು ಮತ್ತು ಸಣ್ಣ ಮಕ್ಕಳು, ಶಿಕ್ಷಕರು  ನಾಗರಿಕರಾಗಿ ಪ್ರಭುತ್ವದ ಜೊತೆಗಿನ ಸಂಧಾನ-ಅನುಸಂಧಾನಗಳ ಬಗೆಗೆ ಹೇಗೆ ಅರಿವನ್ನು ಪಡೆದುಕೊಳ್ಳಬಹುದು ಎಂಬ ವಿಷಯಗಳ ಬಗೆಗೆ ಮಾತನಾಡಿದೆವು. ನಾವು ಮಾತನಾಡಿದ ತರುವಾಯ,  ಪಶ್ಚಿಮ ಬಂಗಾಳ, ಬಿಜೆಪಿ ಮತ್ತು ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಬೆಂಬಲಿಗರ ನಡುವಿನ ಹಿಂಸೆಯ ತಾಣವಾಗಿದೆ.  ಮೇ 2ರಂದು ತೃಣಮೂಲ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಜಯಶಾಲಿಯಾಯಿತು.

ಫ್ರಾನ್ಸಿಸ್ ವೇಡ್ : ಹಿಂದೆ ಹೇಳಿದಂತೆ, ನೀವು ಕ್ರಿಯಾಶೀಲವಾಗಿರುವ ಪಶ್ಚಿಮ ಬಂಗಾಳದ  ಹಳ್ಳಿಗಳಲ್ಲಿನ ಪ್ರಾಥಮಿಕ ಶಾಲಾ ಮಕ್ಕಳಿಗೆ ಪ್ರಜಾಪ್ರಭುತ್ವ ಪದ್ಧತಿಯ ಆಚರಣೆಗಳ ಬಗೆಗೆ ಬೋಧನೆಯಾಗುತ್ತಿದೆ. ಏನಿದರ ಅರ್ಥ?

ಗಾಯತ್ರಿ ಸ್ಪಿವಾಕ್ : ನಾನು ಕೆಲಸ ಮಾಡುತ್ತಿರುವ ಹಳ್ಳಿಗಳಲ್ಲಿ ಸಾವಿರಾರು ವರ್ಷಗಳಿಂದ ಸ್ವತಂತ್ರವಾಗಿ ಯೋಚನೆ ಮಾಡುವ ಹಕ್ಕನ್ನೇ ಹತ್ತಿಕ್ಕಲಾಗಿದೆ.  ಆದುದರಿಂದ ಕಲ್ಪನಾ ಕ್ರಿಯಾಶೀಲತೆಯ ಆಧಾರದ ಒಂದು ಬೌದ್ಧಿಕ ಚಿಂತನಾ ಮಾದರಿಯನ್ನು ಹೇಗೆ ಕಲಿಸಿಕೊಡಬಹುದೆಂಬ ನಿಟ್ಟಿನಲ್ಲಿ ಕಾರ್ಯೋನ್ಮುಖಳಾಗಿದ್ದೇನೆ.  ನಾನು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಬಗೆಗೆ ಉಪನ್ಯಾಸವನ್ನು ಮಾಡುವುದಿಲ್ಲ. ಆದರೆ ಅವರಿಗೆ ಆಂಗ್ಲ, ಬೆಂಗಾಲಿ, ಗಣಿತ, ಭೂಗೋಳ ಶಾಸ್ತ್ರ, ಅಂದರೆ ಪಶ್ಚಿಮ ಬಂಗಾಳದ ರಾಜ್ಯ ಪಠ್ಯಕ್ರಮದಲ್ಲಿರುವ ವಿಷಯಗಳನ್ನೇ ಕಲಿಸುತ್ತೇನೆ.  ಈ ವಿಷಯಗಳನ್ನು ಹೇಗೆ ಕಲಿಸಲಾಗುತ್ತದೆ ಎಂಬುದೇ ಮುಖ್ಯವಾದ ಸಂಗತಿ.  ನಾನು ಒಂದು ವಿಷಯವನ್ನು ಅವರಿಗೆ ಮನದಟ್ಟು ಮಾಡುತ್ತೇನೆ. ಅದೆಂದರೇ ಚೂಟಿಯಾದ ವಿದ್ಯಾರ್ಥಿಗಳು ಯಾವಾಗಲೂ ಶಿಕ್ಷಕ ಕೇಳುವ ಪ್ರಶ್ನೆಗಳನ್ನು ಉತ್ತರಿಸುವುದಿಲ್ಲ.  ವಸಾಹುತೋತ್ತರ ಸಂದರ್ಭದಲ್ಲಿ ಒಂದು ನೈಜ ಸಮಸ್ಯೆ ಎಂದರೆ ಅದು ನಾಯಕರ ಅಸ್ತಿತ್ವ ಮತ್ತು ನಾಯಕನಾಗಬೇಕೆಂಬ ಅಭೀಪ್ಸೆ.  ಇದನ್ನು ಫ್ಯಾನನ್( ಈತ ಫ್ರೆಂಚ್ ವೆಸ್ಟ್ ಇಂಡಿಯನ್ ಮನೋವಿಜ್ಞಾನಿ ಮತ್ತು ರಾಜಕೀಯ ತತ್ವಶಾಸ್ತ್ರಜ್ಞನಾಗಿದ್ದ. ವಸಾಹತೋತ್ತರ ಅಧ್ಯಯನದ ಮೇಲೆ ಈತನ ಚಿಂತನೆಗಳು ಗಾಢವಾದ ಪರಿಣಾಮಗಳನ್ನು ಬೀರಿವೆ- ಅನುವಾದಕ) ಗಮನಿಸಿದ.  ಫ್ಯಾನನ್ ಮತ್ತು ಗ್ರಾಮ್ಷಿ ಮಾತನಾಡಿದ್ದು ಮತ್ತು ನಾನು ಮಾತನಾಡುತ್ತಿರುವುದಲ್ಲಿ ಒಂದು ಸಾಮ್ಯತೆ ಇದೆ.  ಅದೆಂದರೆ- ಸರ್ಕಾರದ ರಚನೆಯಲ್ಲಿ ಮತ್ತು ದೈನಂದಿನ ಆಗುಹೋಗುಗಳಲ್ಲಿ , ಅಮೆರಿಕದಲ್ಲಿರುವಂತೆ ಒಂದು ನಾಯಕತ್ವದ ಹಪಾಹಪಿಯಿದೆ.  ಇದು ನಿಜಕ್ಕೂ ಹಾನಿಕಾರಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಸಂಗತಿ.

ಗ್ರಾಮಗಳಲ್ಲಿ ಹಚ್ಚಿನ ಮಟ್ಟಿಗೆ ಕೆಟ್ಟ ನಾಯಕತ್ವವಿದೆ.  ಅನೇಕ ನಾಯಕರೆನಿಸಿಕೊಂಡವರು ಠಕ್ಕರೇ ಆಗಿರುತ್ತಾರೆ.  ಇವು ಆ ಸ್ತರದ ರಾಜಕಾರಣದ ಭಾಗಗಳಾಗಿವೆ.  ಆದುದರಿಂದ  ಬೋಧನೆ ಮಾಡದೆ ಮಕ್ಕಳ ಸೂಕ್ಷ್ಮ ಮನಸ್ಸುಗಳನ್ನು ಹೇಗೆ ರೂಪಿಸುವುದು ಎಂಬ ಪ್ರಶ್ನೆ ನಮ್ಮೆದುರಿಗಿದೆ.  ಅಲ್ಲದೆ, ಯಾವಾಗ ಗೆಲ್ಲುವುದಕ್ಕೆ ಹೋರಾಟ ಮಾಡಬಾರದು ಎಂಬ ಅಂಶವನ್ನೂ ಅವರಿಗೆ ಮನವರಿಕೆ ಮಾಡಿಕೊಡಬೇಕು.  ತರಗತಿಯಲ್ಲಿ ಮುಂದಿರುವುದು ಮತ್ತು ಶಿಕ್ಷಕರ ಪ್ರಶ್ನೆಗಳನ್ನೆಲ್ಲ ಉತ್ತರಿಸುವುದು ನಿತ್ಯದ ವಿದ್ಯಮಾನಬೇಕಿಲ್ಲ.  ಸ್ವಲ್ಪ ಮೊದ್ದು ಆಗಿರಬೇಕು. ಇಂತಹ ವಿಷಯಗಳು ಸಹಜ ಎಂಬುದು ಮಕ್ಕಳು ಅರಿಯುವಂತಾಗಬೇಕು..  ನಾನು ಏನು ಮಾಡುತ್ತೇನೆಂದರೇ ನನಗೆ ಉತ್ತರಗಳು ತಿಳಿದಿದ್ದರೂ ಪ್ರಶ್ನೆಗಳನ್ನು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ.  ಇದೊಂದು ಪ್ರಜಾಪ್ರಭುತ್ವವಾದಿ ಪ್ರವೃತ್ತಿ.  ನಾನು ಮುಂದಾಳತ್ವವನ್ನು ನೀಡಬೇಕಿಲ್ಲ ಅಥವಾ ಮುಂದಾಳತ್ವವನ್ನು ನೀಡುವುದು ಒಂದು ಮೊದ್ದಿನ ಸಂಗತಿ ಎಂಬುದು ಮಕ್ಕಳ ಆಳಕ್ಕಿಳಿಯಬೇಕು.

ಫ್ರಾನ್ಸಿಸ್ ವೇಡ್ :  ನೀವು ಬ್ರಾಹ್ಮಣ ಜಾತಿಗೆ ಸೇದಿದವರು, ತುಂಬ ಬಡವ ಮತ್ತು ಅಂಚಿನಲ್ಲಿರುವ ಸಮುದಾಯಗಳಲ್ಲಿ ಕೆಲಸವನ್ನು ಮಾಡುತ್ತಿರುವಿರಿ.  ನೀವು ಬಂದಿರುವ ಸ್ತರಕ್ಕೂ ಅವರದ್ದಕ್ಕೂ ತುಂಬ ವ್ಯತ್ಯಾಸಗಳಿವೆ.  ಹೀಗಾಗಿ, ನಿಮ್ಮ ಉಪಸ್ಥಿತಿ ಮತ್ತು ಈ ತೆರೆನಾದ ಕಲಿಕಾ ವಿಧಾನಕ್ಕೆ ವಿದ್ಯಾರ್ಥಿಗಳು ಸ್ಪಂದಿಸುವರೇ?

ಗಾಯತ್ರಿ ಸ್ಪಿವಾಕ್ :  ನಾನು ಅಲ್ಲಿ ನೇರವಾಗಿ ಕೆಲಸವನ್ನು ಮಾಡುತ್ತಿದ್ದೇನೆ. ಅಸ್ಪೃಶ್ಯತೆಯನ್ನು ಮತ್ತು ಇಡೀ ಉನ್ನತ ಜಾತಿಗಳು ತಳಸಮುದಾಯದವರನ್ನು ಕೀಳು ಮಟ್ಟದವರು ಎಂದು ಪರಿಭಾವಿಸುವಂತೆ ಮಾಡಿರುವ ನನ್ನ ಜಾತಿ ಮಾಡಿರುವ ಚಾರಿತ್ರಿಕ ಅಪರಾಧವನ್ನು ಸರಿಪಡಿಸಬಹುದೇ ಎಂಬುದು ನನಗೆ ತಿಳಿಯಬೇಕಿದೆ.  ನಾವು (ಬ್ರಾಹ್ಮಣರು )ಇಂತಹ ಮಂದಿಯನ್ನು ಮುಟ್ಟುವುದಿಲ್ಲ ; ಸುಡುಬೇಸಿಗೆಯಲ್ಲೂ ಅವರ ಜೊತೆ  ನೀರನ್ನು ಕುಡಿಯುವುದಿಲ್ಲ.  ನಮ್ಮ ಕೆರೆಗಳಿಂದ ಸಣ್ಣ ಮಕ್ಕಳು ಕೂಡ ನೀರನ್ನು ಬಳಸದಂತೆ ನೋಡಿಕೊಳ್ಳುತ್ತೇವೆ.  ನಮ್ಮಲ್ಲಿ ಆಳವಾಗಿ ಬೇರೂರಿರುವ ಈ ಭಾವನೆ ಹೋಗಿಲ್ಲ ; ಜಾತಿ ಪೂರ್ವಾಗ್ರಹ ಇನ್ನೂ ಸಕ್ರಿಯವಾಗಿದೆ.  ಜಾತಿ ಪದ್ಧತಿಯನ್ನು ಗಂಭೀರವಾಗಿ ಪರಿಗಣಿಸಬೇಕು.  ತಳಸಮುದಾಯದವರು ತಮ್ಮನ್ನು ನಿಕೃಷ್ಟವಾಗಿ ಕಾಣುವುದು ಸಹಜ ಎಂದು ಭಾವಿಸುತ್ತಾರೆ.  ಏಕೆಂದರೆ ಅವರು ಜಾತಿ ಪದ್ಧತಿ ಮನುಷ್ಯರು ಮಾಡಿದ್ದಲ್ಲ, ದೇವರು ಸೃಷ್ಟಿಸಿದ್ದು ಎಂದು ತಿಳಿಯುತ್ತಾರೆ.  ನಮ್ಮಲ್ಲಿ ತುಂಬ ಸಮಯದಿಂದ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ವಿಚಾರಗಳು ಅಸ್ತಿತ್ವದಲ್ಲಿವೆ.  ಆದರೆ ಜಾತಿ ಪದ್ಧತಿಯ ಬಲಿಪಶುವಾಗಿರುವ ಈ ಮಂದಿಗೆ ಈ ಪ್ರಜಾಪ್ರಭುತ್ವ ತಲುಪಿಲ್ಲ.  ಇದಕ್ಕೆ ಸಂಬಂಧಿಸಿದ ಉನ್ನತ ವಿಚಾರಗಳನ್ನು  ಉಚ್ಚ ಜಾತಿಗಳ ಬಳಿಯೇ ಇವೆ ಎಂದು ಅವರು ಭಾವಿಸುತ್ತಾರೆ.

ಫ್ರಾನ್ಸಿಸ್ ವೇಡ್ :  ಮೋದಿಯ ಆಡಳಿತದಲ್ಲಿ ಹಿಂದಿಗಿಂತಲೂ ಹಿಂಸೆಯನ್ನು ಒಂದು ರಾಜಕೀಯ ಸಾಧನವಾಗಿ ಮುಕ್ತವಾಗಿ ಬಳಸಲಾಗುತ್ತಿದೆಯೆಂಬ ಭಾವನೆ ಆಗಾಗ್ಗೆ ಬರುತ್ತದೆ.  ಮಕ್ಕಳು ಹಿಂಸೆ ಮತ್ತು ರಾಜಕಾರಣದ ನಡುವಿನ ಕೊಂಡಿಗೆ ಹೇಗೆ ಸ್ಪಂದಿಸುತ್ತಾರೆ?

ಗಾಯತ್ರಿ ಸ್ಪಿವಾಕ್ :  ನಾನು ಇತ್ತೀಚಿನ ಘಟನೆಯನ್ನು ಪ್ರಸ್ತಾಪಿಸುವುದರ  ಮೂಲಕ ತರಗತಿಯಲ್ಲಿ  ನನ್ನ ಮಾತುಗಳನ್ನು ಶುರುಮಾಡುತ್ತೇನೆ.  ಈ ಬಾರಿ ಅಲ್ಲಿ ಚುನಾವಣೆ ಹತ್ತಿರದಲ್ಲಿತ್ತು.  ಆ ತರಗತಿಯಲ್ಲಿದ್ದ 10 ವರ್ಷದ ಮಕ್ಕಳು ಇನ್ನು ಎಂಟು ವರ್ಷಗಳಲ್ಲಿ ಮತವನ್ನು ಚಲಾಯಿಸುವುದಕ್ಕೆ ಅರ್ಹರಾಗುತ್ತಾರೆ.  ಆದುದರಿಂದ ನಾನು ಚುನಾವಣೆಗಳ ಬಗೆಗೆ ನಿಮ್ಮ ಆಲೋಚನೆಗಳೇನು ಎಂದು ಪ್ರಶ್ನಿಸಿದೆ.  ಚೂಟಿಯಾದ ಮಕ್ಕಳಲ್ಲಿ ಒಬ್ಬನಾಗಿರುವ ಒಂಬತ್ತು ವರ್ಷದ ರಾಮ್ ಭಂಡಾರಿ ಲೋಹರ್ ಆಂಗ್ಲ ಭಾಷೆಯಲ್ಲಿ ಉತ್ತರಿಸಿದ( ತರಗತಿಯಲ್ಲಿ ಮೊದಲು ನಾನು ಆಂಗ್ಲ ಭಾಷೆಯಲ್ಲಿ ಮಾತನಾಡುತ್ತೇನೆ).  ಆತ “ ಚುನಾವಣೆ ಎಂದರೆ ಒಂದು ಆಟ “ ಎಂದ.  “ ಒಳ್ಳೆಯದು. ಈಗ ಬೆಂಗಾಲಿಯಲ್ಲಿ ಚುನಾವಣೆ ಎಂದರೆ ಆಟ ಹಾಗೂ ಅದು ಯಾವ ಬಗೆಯ ಆಟ ಎಂಬುದನ್ನು ವಿವರಿಸು “ ನಾನೆಂದೆ.  ನಾನು ಆತನ ಬಳಿ ನಿಧಾನವಾಗಿ ಮಾತನಾಡಿದೆ.  ಆತ ಬಂಗಾಲಿಯಲ್ಲಿ “ ಹೊಡೆದಾಟ “ ಎಂದು ತಿಳಿಸಿದ. ನೋಡಿ, ಅಲ್ಲಿ ಎಷ್ಟು ಹಿಂಸೆ ಇದೆಯೆಂದರೇ, ಪಕ್ಷ ರಾಜಕೀಯವನ್ನು ಅರಿಯದೆ ಇರಲು ಸಾಧ್ಯವಿಲ್ಲ. ಈ ಮಕ್ಕಳು ಅಮೆರಿಕಾದ ಮಕ್ಕಳಂತೆ ಮಕ್ಕಳಾಗಿಯೇ ಉಳಿಯುವುದಿಲ್ಲ.

ಆದರೆ ಇದು ಹಳ್ಳಿಗಳಲ್ಲಿ ಜರುಗಿರುವ ನಮ್ಮ ಯಶಸ್ಸಿನ ಒಂದು ಉದಾಹರಣೆ.  ಆ ಹುಡುಗ ಒಂದು ವಿಸ್ತೃತ ನೆಲೆಯ ವಿಷಯದ ಪರಿಣಾಮದ ಬಗೆಗೆ ಮಾತನಾಡಲು ಸಾಧ್ಯವಾಯಿತು.  ಅಮೆರಿಕದಲ್ಲಿರುವ ನಮಗೆ ಇಂತಹ ವಿಷಯಗಳು ಅರ್ಥವಾಗುತ್ತದೆ.  ಆದರೆ ಅಧಿಕಾರದಲ್ಲಿರುವ ಕೆಲವು ಮಂದಿ ಮತ್ತು ಶಾಸನಕಾರರು  ಆ ಸಣ್ಣ ಹುಡುಗ ತಲುಪಲು ಪ್ರಯತ್ನಿಸುತ್ತಿರುವ ಸತ್ಯದ ವಿರುದ್ಧ ತಮ್ಮನ್ನು ತಾವೇ ರಕ್ಷಿಸಿಕೊಳ್ಳುತ್ತಿದ್ದಾರೆ.  ಅದೆಂದರೆ ಚುನಾವಣಾ ರಾಜಕೀಯದಲ್ಲಿರುವ ಹಿಂಸೆ ವಿಶ್ವಾತ್ಮಕ ಸತ್ಯ ಎಂಬುದು. ಅದು ಆ ಹಳ್ಳಿಗಳಿಗೆ ಮಾತ್ರ ಸೀಮಿತವಾಗಿಲ್ಲ.  ನಾವು ಜನವರಿ 6ರಂದು ಯೂಎಸ್ ಕ್ಯಾಪಿಟಲ್ ಕಟ್ಟಡದ ಮೇಲಿನ ಟ್ರಂಪ್ ಬೆಂಬಲಿಗರ ಧಾಳಿಯನ್ನು ವೀಕ್ಷಿಸಿದ್ದೇವೆ.  ನಾವು ಭಾರತದ ಹಳ್ಳಿಗಳಲ್ಲಿ ಮಾತ್ರ ಹಿಂಸೆಯಿದೆ ಎಂದು ಗುರುತಿಸುವುದಕ್ಕಿಂತ ಹೆಚ್ಚಾಗಿ ಆ ಹುಡುಗನ ಉತ್ತರದಿಂದ ಕಲಿತುಕೊಳ್ಳಬಹುದು.

ಫ್ರಾನ್ಸಿಸ್ ವೇಡ್ :  “ ತಪ್ಪುಗಳನ್ನು ಸರಿಮಾಡುವುದು “ ಎಂಬ ನಿಮ್ಮ 2004ರ ಪ್ರಬಂಧದಲ್ಲಿ ನೂರು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯ ಹಿಂದೆ ಬೂಕರ್ ಟಿ ವಾಷಿಂಗ್ಟನ್ ಮತ್ತು ಡಬ್ಲ್ಯು.ಇ.ಬಿ ಯವ ನಡುವೆ,  ತಳ/ನಿರ್ಲಕ್ಷಿತ  ಸಮುದಾಯದವರು(ಸಬಾಲ್ಟ್ರನ್) ತಮ್ಮ ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಹೇಗೆ ಸಾಗಬೇಕೆಂಬುದರ ಬಗೆಗಿನ ದೀರ್ಘ ಚರ್ಚೆ ಕುರಿತಂತೆ ನೀವು ನಿಮ್ಮ ನಿಲುವನ್ನು ವ್ಯಕ್ತಪಡಿಸಿರುವಿರಿ.  “ ನಾನು ಬೂಕರ್ ಟಿ ವಾಷಿಂಗ್ಟನ್ಗಿಂತಲೂ ಡಬ್ಲ್ಯು ಇ  ಬಿ ದು ಬುವನ ನಿಲುವಿನ ಜೊತೆ ಇದ್ದೇನೆ.  ತಕ್ಷಣದ ಭೌತವಾದಿ ಸೌಕರ್ಯದ ಆಶ್ವಾಸನೆಗಿಂತ ಒಂದು ವಿಮರ್ಶಾತ್ಮಕ ಬುದ್ಧಿಮತ್ತೆಯನ್ನು ಬೆಳೆಸುವುದು ಮುಖ್ಯ” ಎಂದು ನೀವು ಬರೆದಿರುವಿರಿ , ನೀವು ತೆಗೆದುಕೊಂಡ ನಿಲುವಿನ ಬಗೆಗೆ ವಿವರಣಣೆಯನ್ನು ನೀಡುತ್ತೀರಾ?

ಗಾಯತ್ರಿ ಸ್ಪಿವಾಕ್ :  ನಾನು ಚೀನಾದಲ್ಲಿ ತುಂಬ ಕೆಲಸ ಮಾಡಿದ್ದೇನೆ.  ಎರಡು ವರ್ಷಗಳ ಹಿಂದೆ ಅಲ್ಲಿನ ಯುನ್ನನ್ ಸುತ್ತಮುತ್ತಯಿರುವ ಅನೇಕ ಪ್ರಾಂತ್ಯಗಳ ಮಹಿಳಾ ಗುಂಪುಗಳ ಜೊತೆ ಮಾತನಾಡುವ ಅವಕಾಶ ದೊರೆಯಿತು.  ಆಗ ಅವರು ತಿಳಿಸಿದ ಎಲ್ಲ ಪ್ರಾಂತಿಯ ಸುಧಾರಣೆಗಳು ಆದಾಯ ಗಳಿಸುವಿಕೆಯ ಸುತ್ತ ಗಿರಕಿ ಹೊಡೆಯುತ್ತಿದ್ದವು. ಶಿಕ್ಷಣ ಕೇವಲ ಆದಾಯ ಗಳಿಸುವ ಸಾಧನ ಮಾತ್ರವಾಗದೇ ಅದು ಒಬ್ಬ ವ್ಯಕ್ತಿ ಸಾಮಾಜಿಕ ಒಳಿತಿಗಾಗಿ  ಒಂದು ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕಾ ಅಥವಾ ಬರೀ ಆದಾಯವನ್ನು ಗಳಿಸುವುದತ್ತ ನಿಗಾ ವಹಿಸಬೇಕಾ ಎಂಬ ವಿಷಯ ಕುರಿತಂತೆ ಒಂದು ಬುದ್ಧಮತ್ತೆಯನ್ನು ಸೃಷ್ಟಿಸಬೇಕು.  ಇದನ್ನೇ ದು ಬುವ ಹೇಳಿದ್ದು ಮತ್ತು ನಾನು “ ತಪ್ಪುಗಳನ್ನು ಸರಿಮಾಡುವುದು “ ಎಂಬ ನನ್ನ ಪ್ರಬಂಧದಲ್ಲಿ ಪ್ರಸ್ತಾಪಿಸಿದ್ದು. ಪ್ರಬಂಧದಲ್ಲಿನ ಈ ವಾಕ್ಯದ ಮುನ್ನ ಬರುವ ಒಂದು ವಾಕ್ಯದಲ್ಲಿ ನಾನು ಯೂನೈಟೆಡ್ ಸ್ಟೇಟ್ಸ್ ನ್ನು ಖಂಡಿಸಿದ್ದೇನೆ. ಅದು ಹೀಗಿದೆ: ಯಾವನೋ ಒಬ್ಬ ಅಮೆರಿಕಾದವನ ಬಳಿಯಿರುವ ಸಿರಿವಂತಿಕೆ ತಳ/ನಿರ್ಲಕ್ಷಿತ ಸಮುದಾಯದವರಲ್ಲಿ(ಸಬಾಲ್ಟ್ರನ್ಸ್) ಶೋಷಣೆಯ ಇಚ್ಛಾಶಕ್ತಿಯನ್ನು ಸೃಷ್ಟಿಸುವ ಬೆಣೆಯೊಂದರ ಚೂಪಾದ ತುದಿಯಾಗಬಹುದು. ಪೌಲೊ ಫ್ರೈರೆ ( ಈತ  ಬ್ರೆಝಿಲ್ನ ಶಿಕ್ಷಣತಜ್ಞ ಮತ್ತು ತತ್ವಶಾಸ್ತ್ರಜ್ಞನಾಗಿದ್ದ. ವಿಮರ್ಶಾತ್ಮಕ ಅಧ್ಯಾಪನಾಶಾಸ್ತ್ರದ (ಕ್ರಿಟಿಕಲ್ ಪಿಡಗಾಗಿ) ಆದ್ಯ ಪ್ರವರ್ತಕನಾಗಿದ್ದ- ಅನುವಾದಕ) “ ಶೋಷಿತರನ್ನು ಕುರಿತಂತೆ ಅಧ್ಯಾಪನಾಶಾಸ್ತ್ರ(ಪಿಡಗಾಗಿ) ಇರದಿದ್ದರೇ, ಶೋಷಿತರು ಉಪ-ಶೋಷಕರಾಗಲು ಬಯಸುತ್ತಾರೆ.” ಎಂದು ಹೇಳಿದ. ತಾನು  ಏನನ್ನು ಹೇಳುತ್ತಿರುವೆ ಎಂದು ಆತನಿಗೆ ಚೆನ್ನಾಗಿಯೇ ತಿಳಿದಿತ್ತು.  ಆತ ಶೋಷಿತರನ್ನು ರಂಜನೀಯಗೊಳಿಸುತ್ತಿಲ್ಲ.  ನಾನೂ ಅದನ್ನೇ ಹೇಳಲು ಪ್ರಯತ್ನಿಸುತ್ತಿರುವುದು.  ಇದೇ ಬುಕರ್ ಟಿ ವಾಷಿಂಗ್ಟನ್ ಮತ್ತು ದು ಬುವ ನಡುವೆ ಇದ್ದ ವೈರುದ್ಧ್ಯದ ವಿಷಯ.

ಫ್ರಾನ್ಸಿಸ್ ವೇಡ್ :  ಅದೇ ಪ್ರಬಂಧದಲ್ಲಿ ನೀವು ಸ್ಥಳೀಯ ಆಡಳಿತದಿಂದ ಹಳ್ಳಿಗೆ ಟ್ಯೂಬ್ವೆಲೊಂದನ್ನು ಪಡೆಯುವುದರಲ್ಲಿ ವಿಫಲವಾದ ಸಂಗತಿಯ ಪ್ರಸ್ತಾಪವನ್ನು ಮಾಡಿರುವಿರಿ.  ಈ ನಿಟ್ಟಿನಲ್ಲಿ ನೀವು ಯಾವುದೋ ಅಂತರರಾಷ್ಟ್ರೀಯ ಸೇವಾಸಂಸ್ಥೆಯಿಂದ ಟ್ಯೂಬ್ವೆಲ್ ಮತ್ತು ಅದರ ಸಲಕರಣೆಗಳನ್ನು ಪಡೆದುಕೊಳ್ಳಲು ಮುಂದಾಗುವುದಿಲ್ಲ.  “ ನಮ್ಮ ಮಕ್ಕಳು ಸಣ್ಣ ಅವಧಿಯ ಪ್ರತಿರೋಧದ ಮಾತುಗಳಲ್ಲಿ ಮುಳುಗದೇ, ಆಡಳಿತ ವ್ಯವಸ್ಥೆಗಳ ಹೃದಯಶೂನ್ಯತೆಯನ್ನು ಅರಿಯಬೇಕು “ ಎಂಬುದಾಗಿ ಕೂಡ ಬರೆದಿದ್ದೀರಿ.  ಅವರು ಏಕೆ ಈ ವಿಷಯವನ್ನು ಅರಿಯಬೇಕು?

ಗಾಯತ್ರಿ ಸ್ಪಿವಾಕ್ :  ನಾನು ಆ ಪ್ರಭಂಧದಲ್ಲಿ ತಳೆದ ನಿಲುವು ತಪ್ಪಾಗಿತ್ತು.  ನಾನು ಕೆಲಸ ಮಾಡಿದ ಹಳ್ಳಿಗಳ(ಪ್ರಬಂಧದಲ್ಲಿ ಪ್ರಸ್ತಾಪಿಸಿದಂತೆ) ಅನುಭವದ ನಿಟ್ಟಿನಿಂದ ಹೇಳುವುದಾದರೇ ಅದು ನೀಡಿದ ಪುರಾವೆಯನ್ನು ನಾನು ಅರ್ಥೈಸಿಕೊಂಡ ರೀತಿಯೇ ಭಾವನಾತ್ಮಕವಾಗಿತ್ತು.  ನಾನು ನಮ್ಮ ಶಾಲೆಗಳಿರುವ ಪ್ರದೇಶಕ್ಕೆ ಭೇಟಿ ನೀಡಿದಾಗ,  ಮೇಲೆ ಪ್ರಸ್ತಾಪಿಸಿರುವ ಪುರಾವೆಯ ಬಗೆಗಿನ ನನ್ನ ದೃಷ್ಟಿಕೋನ ಬದಲಾಯಿತು.  ಆ ಪ್ರದೇಶ ನಮ್ಮ ಆಧುನಿಕ ಬಡ ಭಾರತದ ಯಾವುದೇ ಪ್ರದೇಶದಂತೆಯೇ ಇತ್ತು.  ಅಂದರೆ ಅದು ಒಬ್ಬ ಮಾಜಿ ಊಳಿಗಮಾನ್ಯ ಭೂಮಾಲಿಕನಿಂದ ರಕ್ಷಣೆಯಲ್ಲಿರುವ ಮಾನವಶಾಸ್ತ್ರದ ಆಧಾರದ ಮೇಲೆ ಸಂರಕ್ಷಿಸಲ್ಪಟ್ಟಿರುವ “ ಬುಡಕಟ್ಟು “ ವಲಯದಂತಿರಲಿಲ್ಲ.  ಈ ನಿಟ್ಟಿನಲ್ಲಿ ನನ್ನ ಮುಂದಿನ ನಡೆ ರೋಸಾ ಲಕ್ಸಂಬರ್ಗ್ ಪ್ರತಿಪಾದಿಸಿದ ಸೋಶಿಯಲ್ ಡೆಮಾಕ್ರಸಿಯನ್ನು ಆಧರಿಸಿತ್ತು.  ಅದೆಂದರೇ, ಪ್ರಭುತ್ವವನ್ನು ಬರೀ ಹೃದಯಶೂನ್ಯ ಎಂದು ಮಾತ್ರ ಬಗೆಯದೆ ಅದನ್ನು ಹೇಗೆ ಬಳಸಿಕೊಳ್ಳಬೇಕೆಂಬುದಾಗಿತ್ತು.  ನಾವು ಮಕ್ಕಳಿಗೆ ಪ್ರಭುತ್ವ ಹೃದಯಶೂನ್ಯ ಎಂದು ಮಾತ್ರ ಹೇಳಿದ್ದು ತಪ್ಪಾಗಿತ್ತು.  ಪ್ರಾಯೋಗಿಕ ಲೋಕವನ್ನು ಹೊಕ್ಕರೆ, ನಾನು ತಪ್ಪುಗಳಿಂದ ಪಾಠಗಳನ್ನು ಕಲಿಯುತ್ತೇನೆ.  ಇದು ನನ್ನ ಮೂಲ ವಿಧಾನ.  ಈ ವಿಷಯದಲ್ಲಿ ನಾನು ಮಾಡಿದ ದೊಡ್ಡ ತಪ್ಪೆಂದರೇ ಪ್ರಭುತ್ವ ಒಂದು ಶತ್ರು ಎಂದು ಚಿಂತಿಸಿದ್ದು ಮತ್ತು ಹಾಗೆಂದು ಮಾತನಾಡಿದ್ದು.  ರೋಸಾ ಲಕ್ಸಂಬರ್ಗ್ ಮತ್ತು ಗ್ರಾಮ್ಷಿ ಇಬ್ಬರೂ ಪ್ರ ಭುತ್ವವನ್ನು ಔಷಧಿ ಮತ್ತು ವಿಷದಂತೆ ಕಂಡರು.  ನೀವು ಅದನ್ನು ವಿಷವಾಗದಂತೆ ಬಳಸಬೇಕು.  ಹೀಗೆ ಮಾಡಿದಾಗ ನಿಮಗೆ ಶಿಕ್ಷೆ ಆಗಲೂಬಹುದು.  ಈ ರೀತಿಯಲ್ಲಿ ನೀವು ಅಪಾಯಗಳನ್ನು ಎದುರಿಸುವ ಪ್ರಜೆಯಾಗಬಹುದು.

ಆದರೆ ಅವರಿಗೆ ಒಂದು ವಾಸ್ತವವನ್ನು ಹೇಳಿಕೊಡುತ್ತೇನೆ.  ಅದು ಏನೆಂದರೆ ಪ್ರಭುತ್ವ ಅವರಿಗೆ ಕೆಲಸಗಳನ್ನು ಮಾಡಿಕೊಡುತ್ತದೆ. ಏಕೆಂದರೆ ನನಗೆ ಪಶ್ಚಿಮ ಬಂಗಾಳದಲ್ಲಿ ಜನರ ಪರಿಚಯವಿದೆ.  ಹಾಗಾಗಿ ಕೆಲಸಗಳು ಆಗುತ್ತವೆ.  ಆದರೆ ಶಾಲೆಯ ಸೂಪರ್ವೈಸರ್ಗಳಿಗೆ ನಾನು ಹೇಳುವುದೇನೆಂದರೆ- ಪ್ರಭುತ್ವವನ್ನು ಪ್ರತಿನಿಧಿಸುವ ಅಧಿಕಾರಿಗಳು ನಿಮಗೆ ಕೆಲಸಗಳನ್ನು ಮಾಡಿಕೊಡಬೇಕು ಏಕೆಂದರೆ ನೀವು ಪ್ರಜೆಗಳು.  ನಾನು ಅವರಿಗೆ ಹೇಳುತ್ತೇನೆ : “ ನಾನೇ ನಿಮಗೆ ಶತ್ರು.  ಆದರೆ ನಾನು ಒಳ್ಳೆಯವಳು.  ನನ್ನ ತಂದೆ-ತಾಯಿಯವರೂ ಸಹ.  ಆದರೆ ಎರಡು ತಲೆಮಾರುಗಳು ಸಾವಿರಾರು ವರ್ಷಗಳ ದಮನವನ್ನು ಕೊನೆಗೊಳಿಸುವುದಿಲ್ಲ.  ನಾನಿಲ್ಲದೆಯೇ ನೀವು ನಿಮ್ಮ ಕೆಲಸಗಳನ್ನು ಮಾಡಬೇಕು “.  ಇದು ಪ್ರಭುತ್ವವನ್ನು ನಡೆಸಿಕೊಳ್ಳುವ ರೀತಿ.  ಹೌದು ಈ ತರಹದ ಮಾತುಗಳು ತುಂಬ ಪರಿಣಾಮವನ್ನು ಬೀರುವುದಿಲ್ಲ.  ಆದರೆ ಈ ರೀತಿ ಹೇಳುತ್ತಲೇ ಇರುತ್ತೇನೆ.  ನನ್ನ ಜೊತೆ ದೀರ್ಘಾವಧಿಯಿಂದ ಕೆಲಸ ಮಾಡುತ್ತಿರುವ ಇಬ್ಬರು ಸೂಪರ್ವೈಸರ್ಗಳು ಪ್ರಭುತ್ವವನ್ನು ಎದುರಿಸಲು ಪ್ರಯತ್ನಿಸುತ್ತಿದ್ದಾರೆ.

ಫ್ರಾನ್ಸಿಸ್ ವೇಡ್ :   ನಮ್ಮ ಭಾರತದಲ್ಲೇ ಆಗಲಿ ಅಥವಾ ಬೇರೆಲ್ಲೇ ಇರಲಿ ಸರ್ಕಾರ ಶಿಕ್ಷಣಕ್ಕೆ ಕಡಿಮೆ ಹಣವನ್ನು ಒದಗಿಸುವುದು, ಇದಕ್ಕೆ  ಬಡ ವಿದ್ಯಾರ್ಥಿಗಳು ಉದ್ಧಾರ ಆಗುತ್ತಾರೋ ಇಲ್ಲವೋ  ಎಂಬ ವಿಷಯದ ಬಗೆಗೆ ಇರುವ ಪ್ರಭುತ್ವದ ಉದಾಸೀನತೆ ಕಾರಣವೇ? ಅಥವಾ ಅದು ಒಂದು ಬಗೆಯಲ್ಲಿ ಪ್ರಭುತ್ವ ಉದ್ದೇಶಪೂರ್ವಕವಾಗಿ ಅನುಸರಿಸುವ /ನಿರ್ವಹಿಸುವ ವರ್ಗಬೇಧ ನೀತಿಯೇ?

ಗಾಯತ್ರಿ ಸ್ಪಿವಾಕ್ :  ಎಲ್ಲ ಸಾಮಾಜಿಕ ವ್ಯವಸ್ಥೆಗಳಲ್ಲಿ, ಆಳುವ ವರ್ಗಕ್ಕೆ ಆಳುತ್ತಿರಬೇಕು ಎಂಬ ಆಸೆ ಇದ್ದೇ ಇರುತ್ತದೆ.  ಶಿಕ್ಷಣದ ಗುಣಮಟ್ಟದಲ್ಲಿರುವ ಅಂತರದ ಬಗೆಗೆ ನಾನು ಖಚಿತವಾದ ಕಾರಣವನ್ನು ನೀಡಲಾರೆ.  ಪ್ರತಿ ಸನ್ನೀವೇಶದಲ್ಲೂ ಪ್ರತ್ಯೇಕ (ವೈಯಕ್ತಿಕ) ಅಂಶಗಳು ಇರುತ್ತವೆ.  ಆಳುವ ವರ್ಗ ಮತದಾರರ ಪೈಕಿ ದೊಡ್ಡ ಸಂಖ್ಯೆಯ ಮಂದಿಯನ್ನು ವಿಮರ್ಶಾತ್ಮಕ ತೀರ್ಮಾನವನ್ನು ತೆಗೆದುಕೊಳ್ಳದಂತೆ ನೋಡಿಕೊಳ್ಳುತ್ತದೆ.  ಹೀಗಾಗಿ ಅವರಿಗೆ ಮತದಾನದ ಬಗೆಗಿನ ಅರ್ಥೈಸುವಿಕೆ ದೂರವೇ ಉಳಿಯುತ್ತದೆ.  ಆದರೆ ಇಂತಹ ಮಂದಿಯೇ ಪ್ರಭುತ್ವಕ್ಕೆ ಕಾರಣರಾಗುತ್ತಾರೆ.  ಪ್ರಭುತ್ವ ಎನ್ನುವುದು ಅವರ ಶತ್ರುವಲ್ಲ ಎಂಬ ಅಂಶವನ್ನು ಅವರ ಅರಿವಿಗೆ ಬರದಂತೆ ತಡೆಹಿಡಿಯಲಾಗುತ್ತದೆ.  ಅಂದರೆ ಪ್ರಭುತ್ವ ಇರುವುದು ತಮಗಾಗಿ ಎಂಬ ವಿಚಾರವನ್ನೇ ಅವರಿಂದ ಮರೆಮಾಚಲಾಗುತ್ತದೆ.  ಪ್ರಭುತ್ವ ಅವರ ಶತ್ರುವಲ್ಲ, ಅದು ಅವರಿಗಾಗಿರುವ ಒಂದು ಸಾಧನ.  ಅದನ್ನು ಶುಚಿ ಮಾಡುತ್ತಿರಬೇಕು.  ಆಗಲೇ ಅದು ಕೆಲಸ ಮಾಡುವುದು.

ಈ ವಿಷಯದ ಬಗೆಗಿನ ಚಿಂತನೆ ಹೀಗೆ ಸಾಗಬಹುದು: ನಮ್ಮ ಮತದಾರರ ಪೈಕಿ ಗರಿಷ್ಟ ಮಂದಿಗೆ ಮೇಲಿನ ಸ್ತರದಿಂದ ಕೆಳಗಿನವರೆಗೂ ಕೆಲವು ಭೌತಿಕ ಅನುಕೂಲಗಳನ್ನು ಕಲ್ಪಿಸಿಕೊಡಲಾಗುವುದು.  ಅವರು ಆಳುವವರ ಈ ಊಳಿಗಮಾನ್ಯ ಹೃದಯವೈಶಾಲ್ಯತೆಯಿಂದ ಸಂಪ್ರೀತರಾಗುತ್ತಾರೆ.  ನಾನು ನನ್ನ ಶಾಲೆಗಳಲ್ಲಿರುವ ಸೂಪರ್ವೈಸರ್ಗಳಿಗೆ ಹೇಳುತ್ತೇನೆ: ಪ್ರಭುತ್ವ ನಿಮಗೆ ಫುಟ್ಬಾಲ್ ಫೆಲೋಶಿಪ್ಗಳನ್ನು ನೀಡುತ್ತದೆ.  ಆದರೆ ಸ್ವತಂತ್ರವಾಗಿ ಆಲೋಚಿಸುವಂತೆ ಮಾಡಲು ಆಸ್ಪದವನ್ನು ನೀಡುವುದಿಲ್ಲ.  ಜನರು ಸ್ವತಂತ್ರವಾಗಿ ಆಲೋಚಿಸುವುದಿಲ್ಲ.  ಏಕೆಂದರೆ ಉಚ್ಚ ಜಾತಿಗಳು ಸಾವಿರಾರು ವರ್ಷಗಳಿಂದ ಅವರನ್ನು ಅಂತಹ ಪ್ರಕ್ರಿಯೆಗೆ ಪಕ್ಕಾಗದಂತೆ ಮಾಡಿವೆ.  ಹೀಗೆಯೇ ಮುಂದುವರೆಸುತ್ತಿದ್ದಾರೆ ನಮ್ಮನ್ನು ಈಗ ಆಳುತ್ತಿರುವ ಪ್ರಭುಗಳು.  ಅವರ ಬಳಿ ಈ ವಿಷಯಗಳ ಬಗೆಗೆ ಚರ್ಚೆಯನ್ನು ನಡೆಸಬಹುದು- ಹೇಗೆ ಸ್ವತಂತ್ರವಾಗಿ ಆಲೋಚಿಸುವುದು? ಹೇಗೆ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡು ಹಿಡಿಯುವುದು? ನಾನು ಇಂತಹ ವಿಚಾರಗಳನ್ನು ಅವರಿಗೆ ಕಲಿಸಲು ಪ್ರಯತ್ನಿಸುತ್ತಿದ್ದೇನೆ.

ಫ್ರಾನ್ಸಿಸ್ ವೇಡ್ :   ಪ್ರಭುತ್ವ ಹಳ್ಳಿಗರನ್ನು ಪರಿತ್ಯಜಿಸಿದೆಯೇ? ಅವರನ್ನು ನಿಕೃಷ್ಟವಾಗಿ ಉದಾಸೀನ ಮಾಡಿರುವುದನ್ನು ಕಂಡರೆ ಪ್ರಭುತ್ವ ಎನ್ನುವುದು ಗೈರುಹಾಜರಿಯಾಗಿದೆ ಎಂಬ ಕಲ್ಪನೆ ಬರುತ್ತದೆ.

ಗಾಯತ್ರಿ ಸ್ಪಿವಾಕ್ :  ಈ ತಳ/ನಿರ್ಲಕ್ಷಿತ ಸಮುದಾಯಗಳಲ್ಲಿರುವರನ್ನು ಪ್ರಭುತ್ವ ದೂರದಲ್ಲಿ ಇರಿಸಿಲ್ಲ.  ಪ್ರಭುತ್ವಕ್ಕೆ ಅವರು ಬೇಕು.  ಅದು ಅವರನ್ನು ಬಳಸಿಕೊಳ್ಳುತ್ತದೆ.  ಅವರಿಗೆ ಸಂಬಂಧಿಸಿ ಹೇಳುವುದಾದರೇ ಪ್ರಭುತ್ವ ಎಲ್ಲೆಡೆ ಇದೆ.  ಹಳ್ಳಿಗಳಲ್ಲಿ ಅವರು ಬಿಜೆಪಿಗೆ ಮತವನ್ನು ಹಾಕದಿರಲು, ವಿರೋಧ ಪಕ್ಷವಾದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಎಲ್ಲ ಹಳ್ಳಿಗರಿಗೂ ಲಸಿಕೆಯನ್ನು ಹಾಕೆಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.  ಕೋಲ್ಕತ್ತದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಅಷ್ಟು ಚೆನ್ನಾಗಿ ಜರುಗಿಲ್ಲ.  ಆದರೆ ಬಡವರಲ್ಲಿ ಬಡವರು ಕೂಡ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.  ಇದು ನನಗೆ ಅಪೂರ್ವ ವಿಷಯವಾಗಿ ಕಂಡಿತು.  ಹೀಗಾಗಿ ಪ್ರಭುತ್ವ ಎಲ್ಲೆಡೆ ಇದೆ.  ನಾಗರೀಕತ್ವದ ಜೊತೆ ತಳುಕುಹಾಕಿಕೊಂಡಿರುವ ವಿಶೇಷ ಸವಲತ್ತುಗಳು ಬಡವರಿಗೆ ಎಟಕುತ್ತಿಲ್ಲ.  ಆದರೆ ಅವರನ್ನು ತಲುಪಲಾಗುತ್ತಿದೆ.

ಫ್ರಾನ್ಸಿಸ್ ವೇಡ್ :   ನೀವು ಅನೇಕ ವರ್ಷಗಳಿಂದ ಮಯನ್ಮಾರ್ನಲ್ಲಿ ಜರಗುತ್ತಿರುವ ಸಾಮೂಹಿಕ ಹಿಂಸೆಯ ಬಗೆಗೆ ಗಟ್ಟಿದನಿಯಲ್ಲಿ ಮಾತನಾಡಿರುವಿರಿ.  ಪ್ರಸ್ತುತ ಅಲ್ಲಿ ಪ್ರತಿರೋಧವನ್ನು ಹತ್ತಿಕ್ಕುವ ಎಲ್ಲೆಯನ್ನು ಮಿಲಿಟರಿ ವಿಸ್ತರಿಸುತ್ತಲೇ ಇದೆ.  ನಿಮಗೇನೆನಿಸುತ್ತದೆ?

ಗಾಯತ್ರಿ ಸ್ಪಿವಾಕ್ :  ಮಯನ್ಮಾರ್ನಲ್ಲಿ ಜರಗುತ್ತಿರುವುದು ರೋಸಾ ಲಕ್ಸಂಬರ್ಗ್ ಹೇಳಿದ ಸ್ವಾಭಾವಿಕತೆ(spontaneity).  ಅದು ಮಾನಸಿಕ( ಸೈಕಲಾಜಿಕಲ್) ಸ್ವಾಭಾವಿಕತೆ ಅಲ್ಲ.  ಅದು ಮುಂದುವರೆಯುತ್ತಲೇ ಇರುವ ದಮನದಿಂದ ಉಂಟಾಗುವ ಸಾಮಾಜಿಕ ಪ್ರೇರಣೆ. ದೀರ್ಘಾವಧಿಯಿಂದ ಅಲ್ಲಿ ತುಂಬ ಹಿಂಸೆ, ಶೋಷಣೆ ಮತ್ತು ದಮನ ಜರಗುತ್ತಿವೆ.  ಜನತೆ ಅವುಗಳ ನಡುವೆಯೇ ಬೆಳೆಯುತ್ತಿದ್ದಾರೆ.  ಅವರಿಗೆ ಸಾವಿನ ಭಯವಿಲ್ಲ.  ನಿಜಕ್ಕೂ, ಅವರು ಸಾಯಲು ಹೆದರುತ್ತಿಲ್ಲ.  ಇದು ತುಂಬ ವಿಲಕ್ಷಣ ವಿಷಯ.  ಮನೋವಿಜ್ಞಾನಿ ಫ್ಯಾನನ್ ಹೇಳಿದಂತೆ- ಎಲ್ಲಿ ಬಾಳನ್ನು ಕಟ್ಟಿಕೊಳ್ಳುವುದರಲ್ಲಿ ಸಮಾನತೆಯನ್ನು ನಿರಾಕರಿಸಲಾಗುತ್ತದೆಯೋ( ಸಮಾನತೆ ಎಂಬ ಮೂಲಭೂತ ಗುಣವೇ ನಮ್ಮನ್ನು ಮಾನವರನ್ನಾಗಿ ಮಾಡುವುದು), ಅಲ್ಲಿ ತೀವ್ರ ಸ್ವರೂಪದ ಹಿಂಸೆ ಜನ್ಮವನ್ನು ತಳೆಯುತ್ತದೆ.  ಆದರೆ ಅದು ಸಾವಿಗೆ ಹೆದರದ ಮನೋಸ್ಥಿತಿಯನ್ನೂ ಉಂಟು ಮಾಡುತ್ತದೆ.  ಸಾಯುವುದರ ಮೂಲಕ ತಳ/ನಿರ್ಲಕ್ಷಿತ ಸಮುದಾಯದವನು ಮಾತನಾಡುತ್ತಾನೆ( ಅರಬ್ ಸ್ಪ್ರಿಂಗ್ ಗೆ ಕಾರಣವಾದ ಟುನೀಸಿಯಾದ  ವ್ಯಾಪಾರಿ ಮೊಹಮ್ಮದ್ ಬೌಝಿಝಿ ಮತ್ತು ಜಾರ್ಜ್ ಫ್ಲ್ಯಾಡರಂತೆ).

ಆದರೆ ಇದು ತುಂಬ ಸಮಯ ಇರುವುದಿಲ್ಲ.  ಡೇವಿಡ್ ರೋಡಿಗರ್(ಅಮೆರಿಕಾದ ಇತಿಹಾಸ ಮತ್ತು ಆಪ್ರೋ-ಅಮೆರಿಕನ್ ಅಧ್ಯಯನದ ಪ್ರಾಧ್ಯಾಪಕ- ಅನುವಾದಕ) ‘ ಕ್ರಾಂತಿಕಾರಕ ಸಮಯ ‘ ಎಂಬ ವಿಷಯವನ್ನು ಪ್ರಸ್ತಾಪಿಸುತ್ತಾನೆ.  ಅದು ಮನನೀಯ ವಿಷಯ.  ಮಯನ್ಮಾರ್ನಲ್ಲಿ ಪ್ರಸ್ತುತ ಇರುವ, ರಾಜಕೀಯ ಬೇಡುವ ತುರ್ತು ಸನ್ನಿವೇಶಗಳಂತಹ ಸಂದರ್ಭದಲ್ಲಿ ಜನತೆ ತ್ವರಿತವಾಗಿ ಅನೇಕ ಕಾರ್ಯಗಳಲ್ಲಿ ತೊಡಗುತ್ತಾರೆ.  ಸಾವಿನ ಬಗೆಗೆ ಕೂಡ ಭಯವನ್ನು ಕಳೆದುಕೊಳ್ಳುತ್ತಾರೆ.  ಈ ‘ ಕ್ರಾಂತಿಕಾರಕ ಸಮಯ ‘ ಎನ್ನುವುದು ಗಾಢವಾಗಿರುತ್ತದೆ,  ನಿಜ. ಆದರೆ ಅದು ದೀರ್ಘ ಕಾಲ ಇರುವುದಿಲ್ಲ.  ಅದರ ಆಧಾರದಲ್ಲಿ ಒಂದು ಖಾಯಂ ರಾಜಕೀಯ ಬದಲಾವಣೆಯ ಸಂರಚನೆಯನ್ನು ಕಟ್ಟಲು ಸಾಧ್ಯವಾಗುವುದಿಲ್ಲ.  ಗ್ರಾಮ್ಷಿ  ಹೇಳಿದಂತೆ ರಾಜಕೀಯದ ಪ್ರಜ್ವಲವಾದ ತೀವ್ರಾಸಕ್ತಿ( Incandescent Passion)ಯ ಮೂಲಕ ಖಾಯಂ ರಾಜಕೀಯ ಸಂರಚನೆಗಳನ್ನು ಕಟ್ಟಲಾಗುವುದಿಲ್ಲ.  ಆದುದರಿಂದ ಮಯನ್ಮಾರ್ನಲ್ಲಿ ಜರಗುತ್ತಿರುವುದು ಅಸಮಾನ್ಯ ಬೆಳವಣಿಗೆ, ನಿಜ.  ಆದರೆ ಅದು ದೀರ್ಘ ಕಾಲ ಉಳಿಯುತ್ತದೆ ಎಂದು ಭಾವಿಸಬೇಕಿಲ್ಲ.  ನೋಡಿ, ನಮ್ಮ ಎದುರಿಗೆ ಟುನೀಸಿಯ ಮತ್ತು ಈಜಿಪ್ಟ್ನ ಉದಾಹರಣೆಗಳಿವೆ.  ಅಲ್ಲಿ ಜರುಗಿದ ಇಂತಹದ್ದೇ ಬೆಳವಣಿಗೆಗಳು ಅಲ್ಪ ಸಮಯದಲ್ಲೇ ಕಮರಿ ಹೋದವು.  ಮಯನ್ಮಾರ್ನಲ್ಲಿ  ಜರಗುತ್ತಿರುವುದು ನಿಜಕ್ಕೂ ಪ್ರಬಲ ಬೆಳವಣಿಗೆಯೇ ಸರಿ.  ಆದರೆ ಅದರ ಬಗೆಗೆ ತುಂಬ ಭರವಸೆಯ್ನು ಇಷ್ಟು ಬೇಗ ಹೊಂದುವುದು ಸರಿಯೆನಿಸಲಾರದು.  ನಮ್ಮ ಪಾತ್ರ ಬರೀ ಗಮನಿಸುವುದಕ್ಕೆ ಮಾತ್ರ ಸೀಮಿತವಾಗಬಾರದು.  ನಾವು ಅಂತರರಾಷ್ಟ್ರೀಯ ದನಿಗೆ ಒತ್ತಾಸೆಯಾಗಿ ನಿಲ್ಲಬೇಕು.


 ಅನುವಾದಕರು :     ಮ ಶ್ರೀ ಮುರಳಿ ಕೃಷ್ಣ

 

3 comments to “ಗಾಯತ್ರಿ ಸ್ಪಿವಾಕ್: ‘ಸಾಯುವುದರ ಮೂಲಕ ತಳಸಮುದಾಯದವರು ಮಾತನಾಡುತ್ತಾರೆ’”
  1. ಒಳ್ಳೆಯ ಪ್ರಯತ್ನ. ಅನುವಾದ ಮಾಹಿತಿಗಳನ್ನು ಮುಟ್ಟಿಸಿದರೆ ಮಾತ್ರವೇ ಸಾಲದು. ತಟ್ಟುವಂತೆಯೂ ಇರಬೇಕು. ಆದರೂ ಇಂತಹ ಚಿಂತನೆಗಳನ್ನು ತಲುಪಿಸಲು ಪ್ರಯತ್ನಿಸುವ ಶ್ರಮವನ್ನು ಮೆಚ್ಚದಿರಲಾಗದು.

    ಚಲಪತಿ

  2. ಗಾಯತ್ರಿ ಸ್ಪಿವಾಕ್ ಅವರ ಬಗ್ಗೆ ಏನೂ ತಿಳಿದಿರಲಿಲ್ಲ. ಕಿರುಪರಿಚಯವಾದಂತಾಯಿತು.

  3. ಮುರಳಿ, ಅನುವಾದ ಓದಿದೇ. ತುಂಬಾ ಚನ್ನಾಗಿ ಅನುವಧಿಸಿಧಿಯ. ವಯಕ್ತಿಕವಾಗಿ ನನಗೆ ತುಂಬಾ ಹಿಡಿಸಿತು.

ಪ್ರತಿಕ್ರಿಯಿಸಿ