ಋತುಮಾನ ಪ್ರಕಟಣೆ: ಮಗಳಿಗೆ ಅಪ್ಪ ಬರೆದ ಪತ್ರಗಳು

ಋತುಮಾನದ ಎರಡನೇ ಪುಸ್ತಕ ನಿಮ್ಮ ಮುಂದಿಡಲು ಸಂತೋಷವಾಗುತ್ತಿದೆ. ಎರಡು ದಶಕಗಳಿಗಿಂತ ಹಿಂದಿನ ಮರುಪ್ರಕಟಣೆಯಾಗದ ಹಳೆಯ ಕೆಲವು ಅನರ್ಘ್ಯ ರತ್ನಗಳನ್ನು ಪ್ರಕಟಣೆ ಮಾಡುವ ನಮ್ಮ ಬಹಳ ಕಾಲದ ಹಂಬಲವೊಂದು ಈ ಪುಸ್ತಕದ ಮೂಲಕ ಸಾಕಾರಗೊಳ್ಳುತ್ತಿದೆ. ಜವಾಹರಲಾಲ ನೆಹರೂ ತನ್ನ ಹತ್ತು ವರ್ಷದ ಮಗಳು ಇಂದಿರೆಗೆ ಬರೆದ ಪ್ರಾಚೀನ ಜಗತ್ತಿನ ವೃತ್ತಾಂತಗಳ ಪತ್ರಗಳ ಪುಸ್ತಕರೂಪವನ್ನು ಪ್ರಿಂಟ್, ಇ ಪುಸ್ತಕ ಮತ್ತು ಕೇಳು ಪುಸ್ತಕದ ರೂಪದಲ್ಲಿ ನಿಮ್ಮ ಮುಂದಿಡುತಿದ್ದೇವೆ.
ಈ ಕೃತಿ ೧೯೨೯ರಲ್ಲಿ ಇಂಗ್ಲೀಷಿನಲ್ಲಿ ಪುಸ್ತಕರೂಪ ಪಡೆದು ೧೯೪೧ರಲ್ಲಿ ಶ್ರೀ ಕಪಟರಾಳ ಕೃಷ್ಣರಾಯರಿಂದ ಕನ್ನಡಕ್ಕೆ ಅನುವಾದಗೊಂಡಿತು. ಹುಬ್ಬಳ್ಳಿಯ ಸಾಹಿತ್ಯ ಭಂಡಾರದ ಮಂಗಳೂರು ಗೋವಿಂದರಾಯರು ಇದನ್ನು ಪ್ರಕಟಿಸಿದರು. ಸರಿ ಸುಮಾರು ಒಂದು ಶತಮಾನದ ಹಿಂದೆ ತಂದೆಯೊಬ್ಬ ಮಗಳಿಗೆ ಲೋಕದ ಬಾಗಿಲನ್ನು ತೆರೆದು ತೋರಿಸಿದ ಪರಿ ಇದು. ಈಗ ೨೧ನೇ ಶತಮಾನದ ಮಕ್ಕಳು ಈ ಪುಸ್ತಕವನ್ನು ಏಕೆ ಓದಬೇಕು? ಮಾಹಿತಿಯ ಭಂಡಾರವೇ ನಮ್ಮೆದುರು ಸುಲಭ ಲಭ್ಯವಿರುವಾಗ ಈ ಪುಸ್ತಕದ ಔಚಿತ್ಯದ ಪ್ರಶ್ನೆ ಬರುವುದು ಸಹಜ.
ನಮ್ಮ ಬೆರಳ ತುದಿಯಲ್ಲೇ ಜಗತ್ತಿನ ಚರಿತ್ರೆ, ವಾರ್ತೆಗಳು ಲಭ್ಯವಿದ್ದರೂ ಮಕ್ಕಳು ಅದನ್ನು ತಿಳಿದುಕೊಳ್ಳಲು ಒಂದು ಸರಿಯಾದ ಕ್ರಮದ ಅಗತ್ಯವಿದೆ. ಆ ಕ್ರಮ ಈ ಪುಸ್ತಕದ ಓದಿನಿಂದ ಸಾಧ್ಯವಾಗಲಿದೆ. ಅದಕ್ಕಿಂತ ಮಿಗಿಲಾಗಿ ಮಕ್ಕಳಲ್ಲಿ ಆಧುನಿಕ ದೃಷ್ಟಿಕೋನ ಮತ್ತು ವೈಚಾರಿಕ ಮನೋಭಾವ ಬೆಳೆಸುವಲ್ಲಿ ಈ ಪುಸ್ತಕ ಮೊದಲ ಹೆಜ್ಜೆಯಾಗಲಿದೆ.
ಇದನ್ನು ನಾವು ಪ್ರಕಟಿಸಲು ಇನ್ನೊಂದು ಸ್ಪಷ್ಟ ಕಾರಣ ನೆಹರೂವಿನ ಸುತ್ತ ದ್ವೇಷದ ಗೋಡೆ ಕಟ್ಟಿ ಅವರ ವ್ಯಕ್ತಿತ್ವ ದಮನಿಸುವ ವಿಷಕಾರಿ ಬೆಳವಣಿಗೆಗಳು. ಸ್ವಾತಂತ್ರ್ಯೋತ್ತರ ಹೊಸ ಭಾರತವನ್ನು ಸೆಕ್ಯುಲರ್, ವೈಜ್ಞಾನಿಕ ಮತ್ತು ಪ್ರಗತಿಪರ ಚಿಂತನೆಯ ಅಡಿಪಾಯದ ಮೇಲೆ ಕಟ್ಟಬೇಕು ಎಂಬ ಕನಸನ್ನ ಇಟ್ಟುಕೊಂಡವರು ನೆಹರೂ. ಈ ನಿಟ್ಟಿನಲ್ಲಿ ನೆಹರು ಅವರನ್ನ ಅರ್ಥ ಮಾಡಿಕೊಳ್ಳುವಲ್ಲಿ ಎಳೆಯರಿಗೆ ಈ ಕೃತಿ ಸಹಕಾರಿಯಾಗಲಿದೆ. ಮುಗ್ದತೆಯ ಪೊರೆ ಕಳಚಿಕೊಂಡು ಜಾಗತಿಕ ವಿದ್ಯಮಾನಗಳಿಗೆ ಕುತೂಹಲದ ಕಣ್ಣ ತೆರೆಯುತ್ತಿರುವ ಎಳೆಯರಿಗೆ ಇಲ್ಲಿನ ಲೋಕ ವಿಚಾರಗಳು ವೈಚಾರಿಕ ಮನೋಭಾವದೆಡೆಗೆ ಸೂಕ್ತ ಅಡಿಪಾಯ ಹಾಕಿಕೊಡುತ್ತವೆ ಮತ್ತು ನಿಸ್ಸಂದೇಹವಾಗಿ ಭಾರತ ಕಂಡ ಒಬ್ಬ ಪ್ರಮುಖ ವಿಚಾರವಾದಿಯೊಬ್ಬರ ಮನಸ್ಸನ್ನು ಕನ್ನಡ ನಾಡಿನ ಮಕ್ಕಳಿಗೆ ಈ ಕೃತಿ ತೆರೆದಿಡುತ್ತದೆ ಎಂಬ ನಂಬಿಕೆ ಈ ಪುಸ್ತಕ ಪ್ರಕಟಣೆಯ ಹಿಂದಿದೆ.
ಕಪಟರಾಳ ಕೃಷ್ಣರಾಯರ ಈ ಅನುವಾದ ೭೦ ವರುಷ ಹಳೆಯದು. ಸರಳವಾಗಿಯೂ ಸೊಗಸಾಗಿಯೂ ಇರುವ ಈ ಅನುವಾದವನ್ನು ಈ ಹೊತ್ತು ನೋಡಿದಾಗ ಕನ್ನಡ ಭಾಷೆ ಈ ಏಳು ದಶಕದಲ್ಲಿ ಹೇಗೆಲ್ಲ ಬದಲಾಗಿದೆ ಎಂಬ ಅಚ್ಚರಿಯನ್ನು ನಮ್ಮಲ್ಲಿ ಮೂಡಿಸುತ್ತದೆ. ತೀರಾ ಅನಿವಾರ್ಯವಾದ ಕಡೆ ತಿದ್ದಿದ್ದು ಬಿಟ್ಟರೆ ಇನ್ನುಳಿದಂತೆ ಮೂಲ ಅನುವಾದವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ವಾಕ್ಯಗಳು ಸುಲಲಿತವಾಗಲೆಂದು ವಿಶಾಲ ಕರ್ನಾಟಕದ ಅನೇಕ ಆಡುನುಡಿಗಳಿಂದ ಅನುವಾದಕರು ಪದಗಳನ್ನು ಹೆಕ್ಕಿ ಬಳಸಿದ್ದಾರೆ. ಬಳಕೆಯಾದ ಅನೇಕ ಅಪರಿಚಿತ ಪದಗಳಿಗೆ ಪುಸ್ತಕದ ಕೊನೆಯಲ್ಲಿ ಅರ್ಥವನ್ನು ಕೊಡಲಾಗಿದೆ . ಈ ಬರವಣಿಗೆಯನ್ನು ಪೂರ್ಣ ಓದಿ ತಿದ್ದುಪಡಿ ಮಾಡಿದ ರಾಧಿಕಾ ಮತ್ತು ಗೀತಾ ಅವರಿಗೆ, ಸುಂದರವಾದ ಮುಖಪುಟವನ್ನು ವಿನ್ಯಾಸ ಮಾಡಿದ ಗೌರೀಶ್ ಕಪನಿ ಅವರಿಗೆ, ಒಳಪುಟಗಳಿಗೆ ಚಿತ್ರಗಳನ್ನು ಬಿಡಿಸಿಕೊಟ್ಟು ಪುಸ್ತಕದ ಮೆರುಗನ್ನು ಹೆಚ್ಚಿಸಿದ ಮಹಾಂತೇಶ್ ದೊಡ್ಡಮನಿ ಮತ್ತು ಚೇತನಾ ತೀರ್ಥಹಳ್ಳಿ , ಪುಟ ವಿನ್ಯಾಸ ಮಾಡಿದ ಟೆಕ್ ಫಿಜ್ ಸಂಸ್ಥೆ, ಕೇಳು ಪುಸ್ತಕಕ್ಕೆ ಧ್ವನಿ ನೀಡಿದ ನರೇಶ್ ಭಟ್ ಅವರಿಗೆ ನಾವು ಆಭಾರಿಗಳು.
– ಋತುಮಾನ ತಂಡ
ಪುಸ್ತಕ ನಿಮಗೆ Paperback ಮತ್ತು Hardbound ಎರಡೂ ತರದಲ್ಲೂ ಲಭ್ಯವಿದೆ.
For eBook & Audio book . Download RUTHUMANA App
** Android *** :
** iphone ** :
ಋತುಮಾನ ಆಪ್ ಬಳಸಿ ಕೊಂಡರೆ ಪ್ರಿಂಟ್, ಇ ಪುಸ್ತಕ ಮತ್ತು ಕೇಳು ಪುಸ್ತಕ ಗಳ ಮೇಲೆ ವಿಶೇಷ 15% ಸೋಡಿ ದೊರೆಯಲಿದೆ . ( MBEAFL15 ಕೂಪನ್ ಬಳಸಿ )
ಇನ್ನೆರಡು ದಿನಗಳಲ್ಲಿ ಪುಸ್ತಕ ಮಳಿಗೆಗಳನ್ನೂ ತಲುಪಲಿದೆ. ನೇರವಾಗಿ ಖರೀದಿಸಲು ಇಚ್ಛಿಸುವವರು 9480035877 ಗೂ ಕರೆ ಮಾಡಬಹುದು.

ಪ್ರತಿಕ್ರಿಯಿಸಿ