೨೦ ಶತಮಾನದ ಮಹತ್ವದ ಸ್ಪಾನಿಷ್ ಕವಿ ಹೋರ್ಹೆ ಲುಯಿ ಬೋರ್ಹೆಸ್ ಜನ್ಮದಿನದಂದು ಆರಂಭವಾದ ಸರಣಿ ಇದು. ಮಾಂತ್ರಿಕ ವಾಸ್ತವವಾದದ ಮೊಳಕೆಗಳನ್ನು ಇವನ ಬರಹಗಳಲ್ಲಿ ಕಾಣಬಹುದು ಎಂದು ವಿಮರ್ಶಕರು ಗುರುತಿಸುತ್ತಾರೆ. ಸಾಹಿತ್ಯದ ಅಭಿಜಾತ ಪ್ರಕಾರವಾದ ಕಾವ್ಯಕ್ಕೆ ಆಳವಾಗಿ ತನ್ನನ್ನು ತೆತ್ತುಕೊಂಡ ಬೋರ್ಹೆಸ್- ಸಾಹಿತ್ಯದ ಇತಿಹಾಸ, ಅನುವಾದ ಸಿದ್ಧಾಂತಗಳ ಕುರಿತೂ ಕೆಲಸ ಮಾಡಿದ. ೬೦ರ ದಶಕದ ತುದಿಗೆ ದೃಷ್ಟಿಹೀನನಾಗುತ್ತ ಹೋದ ಕವಿ, ೧೯೬೭-೬೮ ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೀಡಿದ ಉಪನ್ಯಾಸಗಳ ಸರಣಿಯೇ “The Craft of Verse”. ಕೇವಲ ನೆನಪಿನ ಶಕ್ತಿಯಿಂದಲೇ ಹೊಸ ಹಳೆಯ ಕಾವ್ಯದ ಸಾಲುಗಳನ್ನು ಉಪನ್ಯಾಸದ ಉದ್ದಕ್ಕೂ ಉದ್ಧರಿಸುತ್ತ ಹೋಗುವ ಈ ಮಹಾಕವಿ – ಕಾವ್ಯದ ಕುರಿತು ತಳಸ್ಪರ್ಶಿಯಾಗಿ ಆಡಿದ ಮಾತುಗಳು ಇವು. ತತ್ವಜ್ಞಾನ, ಇತಿಹಾಸ, ಅಸಮಾನ್ಯ ಕಲ್ಪನಾಶೀಲತೆಯ ಎರಕವಾದ ಈ ಬರಹಗಳನ್ನು ಕಮಲಾಕರ್ ಕಡವೆ ತನ್ಮಯ ಪ್ರತಿಭೆಯಿಂದ ಅನುವಾದಿಸಿದ್ದಾರೆ. ಈ ಅನುವಾದ ಸರಣಿಯ ಐದನೇಯ ಭಾಗ ಋತುಮಾನ ದ ಓದುಗರಿಗಾಗಿ.
ಎಲ್ಲ ಕಲೆಗಳೂ ಸಂಗೀತದ ಸ್ಥಿತಿಯನ್ನು ಪಡೆಯಲು ಹಂಬಲಿಸುತ್ತವೆ ಎನ್ನುತ್ತಾನೆ ವಾಲ್ಟರ್ ಪೇಟರ್. ಓರ್ವ ಸಾಮಾನ್ಯನಾಗಿ ನನಗನಿಸುವಂತೆ, ಅದಕ್ಕೆ ಕಾರಣ, ಸಂಗೀತದಲ್ಲಿ ಸ್ವರೂಪ ಮತ್ತು ವಿಷಯಗಳನ್ನು ಬೇರ್ಪಡಿಸಲಾಗದು. ಹಾಡು ಅಥವಾ ಸಂಗೀತದ ಯಾವುದೇ ಒಂದು ತುಣುಕು, ಸಮಯದಲ್ಲಿ ಅನಾವರಣಗೊಳ್ಳುವ ಸದ್ದು ಮತ್ತು ಮೌನದ ಆಕೃತಿ. ಇದೊಂದು ಬೇರ್ಪಡಿಸಲಾಗದ ಆಕೃತಿ ಎಂದು ಕೊಂಡಿದ್ದೇನೆ. ಹಾಡು ಎನ್ನುವುದು ಅದನ್ನು ಸೃಜಿಸಿದ ಮತ್ತದು ಸೃಜಿಸುವ ಭಾವನೆಗಳ ಒಂದು ಆಕೃತಿಯಷ್ಟೇ. ಸಂಗೀತವೆನ್ನುವುದು ನಾವು ಬಳಸಬಹುದಾದ, ಅರ್ಥಮಾಡಿಕೊಳ್ಳಬಹುದಾದ ಆದರೆ ಅನುವಾದಿಸಲು ಅಸಾಧ್ಯವಾದ ಭಾಷೆಯೆನ್ನುತ್ತಾನೆ ಆಸ್ಟ್ರಿಯಾದ ಚಿಂತಕ ಹಾನ್ಸಕ್ಲಿಕ್.
ಸಾಹಿತ್ಯದ ಸಂಧರ್ಭದಲ್ಲಿ, ಅದರಲ್ಲೂ ಕಾವ್ಯವನ್ನು ಪರಿಗಣಿಸಿದರೆ, ವ್ಯತಿರಿಕ್ತ ಸ್ಥಿತಿ ಇದೆಯೆಂದು ನಾವು ಯೋಚಿಸುತ್ತೇವೆ. ಕಾದಂಬರಿಯೊಂದರ, “ಸ್ಕಾರ್ಲೆಟ್ ಲೆಟರ್” ಅಂದುಕೊಳ್ಳಿ, ಕತಾಹಂದರವನ್ನು ಸ್ಥೂಲರೂಪದಲ್ಲಿ ಅದನ್ನು ಓದಿರದ ಸ್ನೇಹಿತರಿಗೆ ನಾವು ಹೇಳಬಹುದು, ಅಂತೆಯೇ, ಕವನವೊಂದರ, ಯೇಟ್ಸನ “ಲೆಡಾ ಅಂಡ್ ದ ಸ್ವಾನ್” ಸುನೀತವೆಂದುಕೊಳ್ಳಿ, ಸ್ವರೂಪ, ಚೌಕಟ್ಟು, ಹಂದರವನ್ನು ಸಹ ನಾವು ಹೇಳಬಹುದು ಅನ್ನಿಸುತ್ತದೆ. ಹೀಗೆ ನಾವು, ಕಾವ್ಯವೆಂದರೆ ಸಂಮಿಶ್ರ, ಕಲಬೆರಕೆಯ ವಸ್ತುವಿನಂತಹ ಕಲೆ ಎಂದು ಯೋಚಿಸುವತ್ತ ಹೊರಳುತ್ತೇವೆ.
ರಾಬರ್ಟ್ ಲೂಯಿ ಸ್ಟೀವನ್ಸನ್ ಕೂಡ ಕಾವ್ಯದ ಈ ಇಮ್ಮುಖದ ಕುರಿತು ಮಾತನಾಡಿದ್ದಿದೆ. ಕಾವ್ಯ ಸಾಮಾನ್ಯ ಮನುಷ್ಯನಂತೆ ಇರುತ್ತದೆ ಎನ್ನುತ್ತಾನೆ ಅವನು. ಯಾಕೆಂದರೆ, ಕಾವ್ಯದ ಮೂಲದ್ರವ್ಯವೆಂದರೆ ಶಬ್ದಗಳು; ಮತ್ತು ಆ ಶಬ್ದಗಳು ನಿತ್ಯಜೀವನದ ನುಡಿಯಾಗಿರುತ್ತವೆ. ದೈನಂದಿನ ಸಾಧಾರಣ ಉದ್ದೇಶಗಳಿಗಾಗಿ ಬಳಸುವ ಶಬ್ದಗಳೇ ಕವಿಯ ಮೂಲದ್ರವ್ಯ, ಸದ್ದು ಹೇಗೆ ಸಂಗೀತಗಾರನ ಮೂಲದ್ರವ್ಯವೋ ಹಾಗೆ. ಶಬ್ದಗಳು ಕೇವಲ ಸೌಕರ್ಯಗಳು, ಅಡಿಗಲ್ಲುಗಳು ಎನ್ನುತ್ತಾನೆ ಸ್ಟೀವನ್ಸನ್. ದೈನಂದಿನ ಸಾಧಾರಣ ಉದ್ದೇಶಗಳಿಗಾಗಿ ಇರುವ ಪೆಡಸು ಸಂಕೇತಗಳನ್ನು “ಜಾಲ”ದಂತಹ ಸ್ವರೂಪಗಳನ್ನಾಗಿ ಹೆಣೆಯುವ ಕವಿಯ ಕುರಿತು ಅವನಿಗೆ ಬೆರಗು. ಸ್ಟೀವನ್ಸನ್ನನ ದೃಷ್ಟಿಯನ್ನು ಅನುಸರಿಸಿದರೆ, ಕಾವ್ಯಸಿದ್ಧಾಂತವೊಂದು ದೊರೆಯುತ್ತದೆ – ಶಬ್ದಗಳ ಯೋಜಿತ ಅರ್ಥಗಳನ್ನು ಮೀರಿದ ಬಳಕೆಯಲ್ಲಿ ಸಾಹಿತ್ಯ ಅವುಗಳನ್ನು ತೊಡಗಿಸಿಕೊಳ್ಳುತ್ತದೆ. ನಿತ್ಯದ ವ್ಯವಹಾರಗಳಿಗಾಗಿ ಇರುವ ಶಬ್ದಗಳಿಂದ ಕವಿ ಅದು ಹೇಗೋ ಮ್ಯಾಜಿಕ್ ಮಾಡಿಬಿಡುತ್ತಾನೆ ಎನ್ನುವುದು ಸ್ಟೀವನ್ಸನ್ನನ ವಿಚಾರ. ಅವನೊಂದಿಗೆ ನಾನು ಒಪ್ಪುತ್ತೇನೆ, ಆದರೂ, ಅವನ ವಿಚಾರ ತಪ್ಪು ಎಂದು ಸಿದ್ಧ ಮಾಡಬಹುದೆನ್ನಿಸುತ್ತದೆ. ಒಂಟಿಯಾಗಿ ಬದುಕುತ್ತಿದ್ದ ನಾರ್ಸ ನಾಡಿನ ಶ್ಲಾಘ್ಯ ಜನ, ತಮ್ಮ ಏಕಾಂತ, ಧೈರ್ಯ, ವಿಧೇಯತೆ, ಕರಾಳ ಸಾಗರ ಮತ್ತು ಕರಾಳ ಕಾಳಗಗಳ ಕುರಿತಾದ ಭಾವನೆಗಳನ್ನು ತಮ್ಮ ಶೋಕಗೀತೆಗಳಲ್ಲಿ (elegy) ಅಭಿವ್ಯಕ್ತಿಸಿರುವುದು ನಮಗೆ ತಿಳಿದಿದೆ. ನಮಗೆ ತೀರಾ ಸಮೀಪವೆನಿಸುವ, ಶತಮಾನಗಳ ಹಿಂದಿನಿಂದ ನಮಗೆ ತಲುಪಿರುವ, ಆ ಕಾವ್ಯವನ್ನು ರಚಿಸಿದ ಆ ಜನರಿಗೆ ಗದ್ಯದಲ್ಲಿ ಬರೆಯಬೇಕಾದ ಪ್ರಸಂಗ ಬಂದಿದ್ದರೆ ಬಹುಶಃ ತುಂಬ ಶ್ರಮ ಪಡುತ್ತಿದ್ದರೇನೋ. ದೊರೆ ಆಲ್ಫ್ರೆಡನ ವಿಚಾರದಲ್ಲಿಯೂ ಇದು ನಿಜ. ಅವನ ಗದ್ಯಶೈಲಿ ನೇರವಾಗಿಯೇ ಇದೆ; ಉದ್ದಿಶ್ಯಸಾಧನೆಗೆ ಸೂಕ್ತವಾಗಿದ್ದರೂ ಕೂಡ ಅದು ನಮ್ಮನ್ನು ಆಳವಾಗಿ ತಟ್ಟುವುದಿಲ್ಲ. ಕತೆಯೊಂದನ್ನು ಅವನು ಹೇಳುತ್ತಿದ್ದಾನೆ – ಕತೆ ಆಸಕ್ತಿಕರವಾಗಿರಬಹುದು, ಅಥವಾ ಇರದಿರಬಹುದು, ಅಷ್ಟೇ. ಅವನ ಸಮಕಾಲೀನರು ಬರೆದ ಕಾವ್ಯ ಇನ್ನೂ ಜೀವಂತವಾಗಿದೆ, ಇನ್ನೂ ಮನಸೆಳೆಯುತ್ತದೆ.
ಐತಿಹಾಸಿಕ ದೃಷ್ಟಿಕೋನದಿಂದ ನೋಡಿದರೆ (ನಾನು ಬಳಸಿರುವುದು ಯಾದೃಚ್ಚಿಕ ಉದಾಹರಣೆಯೇ ಆದರೂ ಜಗದೆಲ್ಲಕಡೆ ಅನುರೂಪಗಳು ಸಿಗುತ್ತವೆ) ಶಬ್ದಗಳು ಮೂರ್ತದಲ್ಲಿ ಮೊದಲಾಗಿರುತ್ತವೆಯೇ ವಿನಃ ಅಮೂರ್ತದಲ್ಲಿ ಅಲ್ಲ – ಮೂರ್ತ ಪದದ ಅರ್ಥವಿಲ್ಲಿ ಕಾವ್ಯಕ್ಕೆ ಹೊಂದುತ್ತದೆ. ಇಂಗ್ಲೀಷಿನ “dreary” (ಉತ್ಸಾಹಶೂನ್ಯ/ಕಳೆಗೆಟ್ಟ) ಶಬ್ದವನ್ನು ತೆಗೆದುಕೊಳ್ಳೋಣ – ಅದರ ಮೂಲ ಅರ್ಥ “ರಕ್ತ ಮೆತ್ತಿದ” ಎಂದು. ಹಾಗೆಯೇ, “glad” ಪದದ ಅರ್ಥ “ಹೊಳಪುಳ್ಳ”; “threat” ಪದದ ಮೂಲ ಅರ್ಥ “ಬೆದರಿಕೆ ಒಡ್ಡುವ ಗುಂಪು”. ಈ ಶಬ್ದಗಳಿಗೆ ಈಗ ಅಮೂರ್ತ ಅರ್ಥವಿದೆಯಾದರೂ, ಅವುಗಳು ಮೂಲದಲ್ಲಿ ಮೂರ್ತ ಅರ್ಥದಿಂದಲೇ ಮೊದಲಾಗಿದ್ದವು.
ಉದಾಹರಣೆಗಳನ್ನು ಮತ್ತಷ್ಟು ಕೊಡಬಹುದು. ನಾರ್ಸ ನಾಡಿನ ಜನರ ದೈವವಾದ “ತೋರ್”ಗೆ ಸಂವಾದಿಯಾದ ಸ್ಯಾಕ್ಸನ್ ಜನಾಂಗದ “ಥನಾರ್” ದೈವವನ್ನು ನೆನಪಿಸಿಕೊಂಡರೆ, ಇಂಗ್ಲೀಷಿನ ಶಬ್ದವಾದ “thunder” ನಮಗೆ ಅರ್ಥವಾಗುತ್ತದೆ. ಸ್ಯಾಕ್ಸನ್ ಜನಾಂಗದ “ಥನಾರ್” ಪದ ಗುಡುಗು ಮತ್ತು ದೈವ ಎರಡನ್ನೂ ಸೂಚಿಸುವಂತದ್ದು. ಐದನೇ ಶತಮಾನದಲ್ಲಿ ಹೆಂಗೆಸ್ಟನ ಮುಂದಾಳತ್ವದಲ್ಲಿ ಇಂಗ್ಲಂಡಿಗೆ ಗುಳೆ ಬಂದ ಜನರನ್ನು “ಥನಾರ್” ಅಂದರೆ ಆಕಾಶದಲ್ಲಾಗುವ ಸದ್ದು ಎಂದರ್ಥವೋ, ಕೋಪಿಷ್ಟ ದೇವತೆಯ ಹೆಸರೋ ಎಂದು ಕೇಳಿದ್ದರೆ ಅವರಿಗೆ ಅವುಗಳ ನಡುವೆ ಭಿನ್ನತೆ ಏನು ಎಂದೇ ಅಚ್ಚರಿಯಾಗುತ್ತಿತ್ತು ಬಹುಷಃ. (ಆಕಾಶದ ಆ ಸದ್ದನ್ನೇ ದೇವರ ಜೊತೆ ಅವರು ಸಮೀಕರಿಸುತ್ತಿದ್ದುದರಿಂದ.) ಇವೆರಡೂ ಅರ್ಥಗಳಲ್ಲಿ ಒಂದಕ್ಕೆ ಮಾತ್ರ ಜೋತು ಬೀಳದಯೇ, ಎರಡೂ ಅರ್ಥವ್ಯಾಪ್ತಿ ಇರುವ ಪದವಿದು ಎಂದೇ ತಿಳಿಯಬೇಕು. “ಥಂಡರ್” ಎಂಬ ಶಬ್ದ ನುಡಿಯುತ್ತಲೇ ಅಥವಾ ಕೇಳುತ್ತಲೇ, ಅವರು ಆಕಾಶದಿಂದ ಹೊಮ್ಮುವ ಗದ್ದಲವನ್ನೂ, ಮಿಂಚನ್ನೂ, ನೆನೆವುದರೊಂದಿಗೆಯೇ ದೇವರನ್ನೂ ಕೂಡ ನೆನೆಯುತ್ತಿದ್ದರು ಎಂದು ನನ್ನೆಣಿಕೆ. ಶಬ್ದಗಳಲ್ಲಿ ಮ್ಯಾಜಿಕ್ ಇತ್ತು; ಅವುಗಳು ತೀರಾ ನಿರ್ದಿಷ್ಟ ಪಡಿಸಿದ ಅರ್ಥ ಹೊಂದಿರಲಿಲ್ಲ.
ಹಾಗಾಗಿ, ಕಾವ್ಯದ ಕುರಿತು ಮಾತನಾಡುವಾಗ ಸ್ಟೀವನ್ಸನ್ ಅನ್ನುವಂತೆ ಅಗುವುದಿಲ್ಲವೆನ್ನಬಹುದು – ತಾರ್ಕಿಕ ಅರ್ಥಗಳುಳ್ಳ ಪದಗಳನೆತ್ತಿಕೊಂಡು ಅವುಗಳ ಮೂಲಕ ಮ್ಯಾಜಿಕ್ ಮಾಡುವ ಕೆಲಸ ಕಾವ್ಯ ಮಾಡುವುದಿಲ್ಲ. ಬದಲಿಗೆ, ಭಾಷೆಯನ್ನು ಅದರ ಮೂಲಕ್ಕೆ ಮರಳಿ ತರುತ್ತದೆ. ಆಲ್ಫ್ರೆಡ್ ನಾರ್ಥ್ ವೈಟ್ಹೆಡ್ ನೆನಪಿಸುವಂತೆ, ನಮಗಿರುವ ಹಲವಾರು ಭ್ರಮೆಗಳಲ್ಲಿ ಪರಿಪೂರ್ಣ ಶಬ್ದಕೋಶದ ಭ್ರಮೆಯೂ ಒಂದು – ನಾವು ಅನುಭವಿಸುವ ಪ್ರತಿ ಗ್ರಹಿಕೆಗೂ, ಪ್ರತಿ ಸಾಲಿಗೂ, ಪ್ರತಿ ಅಮೂರ್ತ ವಿಚಾರಕ್ಕೂ, ನಿಖರವಾದ ಸಂಜ್ನೆಯನ್ನು ಕಂಡುಕೊಳ್ಳಬಹುದೆನ್ನುವ ಭ್ರಮೆ. ಭಾಷೆಗಳ ವೈವಿಧ್ಯತೆ ನಮಗೆ ಈ ಕುರಿತು ಸಂದೇಹ ಹುಟ್ಟಿಸುತ್ತದೆ. ಉದಾಹರಣೆಗೆ, ಇಂಗ್ಲೀಷಿನಲ್ಲಿ (ಸ್ಕಾಟ್ ಜನರ ಬಳಕೆಯಲ್ಲಿ) “eerie” ಮತ್ತು “uncanny”ಯಂತ ಶಬ್ದಗಳಿವೆ. ಇತರ ಭಾಷೆಗಳಲ್ಲಿ ಈ ತರಹದ ಶಬ್ದಗಳು ಸಿಗುವುದಿಲ್ಲ. (ಜರ್ಮನ್ ಭಾಷೆಯಲ್ಲಿ ಅನ್ಹೀಮ್ಲಿಕ್ ಪದವಿದೆಯಾದರೂ) ಇದು ಹೀಗೇಕೆ? ಯಾಕೆಂದರೆ, ಇತರ ಭಾಷೆಗಳನ್ನಾಡುವ ಜನರಿಗೆ ಈ ಶಬ್ದಗಳ ಅಗತ್ಯ ಕಾಣಲಿಲ್ಲ – ಯಾವುದೇ ಸಮಾಜವೂ ತನಗೆ ಅವಶ್ಯ ಶಬ್ದಗಳನ್ನು ಮಾತ್ರ ಸೃಜಿಸುವುದು ಸಹಜ. ಹೀಗೆ ಹೇಳಿದ ಚೆಸ್ಟರ್ಟನ್ ಅವರ ಪ್ರಕಾರ ಭಾಷೆಯೆನ್ನುವುದು ಶಬ್ದಕೋಶ ರಚಿಸುವ ವಿದ್ವಾಂಸರ ಅಥವಾ ಭಾಷಾಪಂಡಿತರ ಸೃಷ್ಟಿಯಲ್ಲ. ಬದಲಿಗೆ, ಸುದೀರ್ಘ ಕಾಲ ವಿಕಸಿತಗೊಂಡಿದ್ದು – ರೈತರಿಂದ, ಮೀನುಗಾರರಿಂದ, ಬೇಟೆಗಾರರಿಂದ, ಕುದುರೆ ಸವಾರರಿಂದ. ಭಾಷೆ ಗ್ರಂಥಾಲಯಗಳಿಂದ ಬಂದದ್ದಲ್ಲ; ಅದು ಬಂದದ್ದು ಹೊಲದಿಂದ, ಸಮುದ್ರದಿಂದ, ನದಿಯಿಂದ, ರಾತ್ರಿಯಿಂದ, ಮುಂಜಾನೆಯಿಂದ.
ಹೀಗೆ, ನನಗನಿಸುವಂತೆ, ಒಂದು ರೀತಿಯಲ್ಲಿ ಶಬ್ದಗಳು ಭಾಷೆಯಲ್ಲಿ ಮ್ಯಾಜಿಕ್ನಂತೆ ಮೊದಲಾದವು. ಬಹುಶಃ ಒಂದು ಕಾಲದಲ್ಲಿ “ಲೈಟ್” ಶಬ್ದಕ್ಕಿದ್ದಿರಬಹುದು ಹೊಳಪು, “ನೈಟ್” ಶಬ್ದಕ್ಕೆ ಕಪ್ಪಿಟ್ಟಿದ್ದಿರಬಹುದು. ’ನೈಟ್’ ಶಬ್ದದ ಸಂಧರ್ಭದಲ್ಲಿ ಅದು ಶುರುವಾತಿನಲ್ಲಿ ರಾತ್ರಿಯನ್ನೇ ಸೂಚಿಸಿದ್ದಿರಬಹುದು, ಅದರ ಕತ್ತಲು, ಅದು ಸೂಚಿಸುವ ಭೀತಿ, ಹೊಳೆವ ತಾರೆಗಳನ್ನು. ಮುಂದೆ ಅದೆಷ್ಟೊ ಕಾಲದ ತರುವಾಯ ’ನೈಟ್’ ಶಬ್ದದ ಮೂರ್ತ ಅರ್ಥಕ್ಕೆ ನಾವು ಬರುತ್ತೇವೆ – ಅಂದರೆ ಸಂಜೆಯಾದ ನಂತರದ ಮತ್ತು ಮುಂಜಾವಿನ ಮುಂಚಿನ ಅವಧಿಯನ್ನು ಸೂಚಿಸುವ ಶಬ್ದವಾಗಿ.
ಯಹೂದಿಗಳ ಅನುಭಾವ ಪರಂಪರೆಯ ’ಕಬ್ಬಾಲಾ’ದಲ್ಲಿ ನಮಗೆ ಮತ್ತೊಂದು ಉದಾಹರಣೆ ಸಿಗುತ್ತದೆ. ಶಬ್ದಗಳಲ್ಲಿ ಇರುವ ಶಕ್ತಿಯ ಬಗೆಗೆ ಯಹೂದಿಗಳಿಗೆ ಸಹಜ ನಂಬಿಕೆಯಿತ್ತು. ಅರೇಬಿಯನ್ ನೈಟ್ಸನಲ್ಲಿ ಕಂಡುಬರುವ ತಾಯತಗಳ, ಅಬ್ರಕಡಬ್ರಾಗಳ ಕಥೆಗಳ ಹಿನ್ನೆಲೆಯೇ ಇದು. ತೋರಾ ಗ್ರಂಥದ ಮೊದಲ ಅಧ್ಯಾಯದಲ್ಲಿರುವ ಸಾಲು: “ಬೆಳಕಾಗಲಿ” ಎಂದು ಪರಮೇಶ್ವರ ನುಡಿದಂತೆ ಬೆಳಕಾಯಿತು.” ಅವರಿಗೆ ಹೀಗೆ ಬೆಳಕು ಎಂಬ ಶಬ್ದದಲ್ಲಿ ಜಗವನ್ನು ಬೆಳಗಿಸುವ ಶಕ್ತಿಯಿರುವುದು, ಬೆಳಕನ್ನು ಸೃಜಿಸುವ ಶಕ್ತಿಯಿರುವುದು ಸಹಜವೆನಿಸಿತ್ತು. ವಿಚಾರ ಮತ್ತು ಅರ್ಥಗಳ ಈ ಸಮಸ್ಯೆಯ ಕುರಿತು ನಾನು ಸ್ವಲ್ಪ ಯೋಚನೆ ಮಾಡಿದ್ದೇನೆ (ಆ ಸಮಸ್ಯೆಗೆ ನಾನೇನೂ ಪರಿಹಾರ ಸೂಚಿಸುತ್ತಿಲ್ಲ). ಸಂಗೀತದಲ್ಲಿ ವಿಷಯ-ಸ್ವರೂಪಗಳೂ ಏಕವಾಗಿದ್ದು, ಬೇರ್ಪಡಿಸಲಾಗದೆಂದು ಈ ಹಿಂದೆ ಪ್ರಸ್ತಾಪಿಸಲಾಗಿದೆ. ಕಾವ್ಯದಲ್ಲೂ ಹಾಗೆಯೇ ಆಗುವುದೆಂದು ಎಣಿಸಬಹುದು.
ಇಬ್ಬರು ಮಹಾಕವಿಗಳ ಎರಡು ತುಣುಕಗಳನ್ನು ನೋಡೋಣ. ಮೊದಲನೆಯದು ಐರ್ಲೆಂಡಿನ ಮಹಾನ್ ಕವಿ ವಿಲಿಯಂ ಬಟ್ಲರ್ ಯೇಟ್ಸನ ಕವಿತೆಯ ಸಣ್ಣ ತುಣುಕು: “Bodily decrepitude is wisdom; young / We loved each other and were ignorant.” (ದೈಹಿಕ ಸವಕಳಿವೊಂದು ವಿವೇಕ; ಯೌವನದಿ/ ನಾವು ಅರಿವಿರದೆ ಪರಸ್ಪರ ಪ್ರೀತಿಸಿಹೆವು). ಇದು ಹೇಳಿಕೆಯೊಂದರಿಂದ ಶುರುವಾಗುತ್ತದೆ “ದೈಹಿಕ ಸವಕಳಿಯೊಂದು ವಿವೇಕ”. ವ್ಯಂಗ್ಯವೆಂದು ಕೂಡ ಇದನ್ನು ನಾವು ಓದಿಕೊಳ್ಳಬಹುದು. ವಿವೇಕವನ್ನು ಹೊಂದದೆಯೂ ದೈಹಿಕ ಸವಕಳಿ ಸಾಧ್ಯವೆಂದು ಯೇಟ್ಸ ಬಲ್ಲ. ಬಹುಷಃ ಪ್ರೀತಿಗಿಂತಲೂ ವಿವೇಕ ಹೆಚ್ಚು ಮುಖ್ಯ; ಕೇವಲ ಸಂತೋಷಕ್ಕಿಂತ ಪ್ರೀತಿ. ಸಂತೋಷವೆನ್ನುವುದರಲ್ಲಿ ಏನೋ ಕ್ಷುಲ್ಲಕವಾದುದಿದೆ. ಈ ಚರಣದ ಬೇರೆಡೆ ಸಂತೋಷದ ಕುರಿತಾದ ಹೇಳಿಕೆ ಇದೆ. “ದೈಹಿಕ ಸವಕಳಿಯೊಂದು ವಿವೇಕ; ಯೌವನದಿ/ ನಾವು ಅರಿವಿರದೆ ಪರಸ್ಪರ ಪ್ರೀತಿಸಿಹೆವು”.
ಜಾರ್ಜ್ ಮೆರೆಡಿತ್ ನ ಒಂದು ಕವನದತ್ತ ಹೊರಳೋಣ. ಅದು ಹೀಗಿದೆ: “Not till the fire is dying in the grate/ Look we for any kinship with the stars.” (“ಒಲೆಯಲ್ಲಿ ಬೆಂಕಿ ಆರುವುದಕ್ಕೆ ಮುನ್ನ/ ತಾರೆಗಳೊಂದಿಗೆ ಸಖ್ಯವ ಬೆಳೆಸುವುದಿಲ್ಲ ನಾವು”.) ಈ ಹೇಳಿಕೆ ಮೇಲ್ನೋಟಕ್ಕೆ ಅಸಾಧುವೇ ಸರಿ. ದೈಹಿಕ ವಾಂಛೆಗಳಿಂದ ಮುಕ್ತರಾದ ಮೇಲೆಯೇ ನಾವು ತತ್ವಜ್ನಾನದಲ್ಲಿ ಆಸಕ್ತರಾಗುತ್ತೇವೆ ಎನ್ನುವುದು ನನ್ನ ಎಣಿಕೆಯಲ್ಲಿ ಸರಿಯಲ್ಲ. ಅದೆಷ್ಟೋ ಅದಮ್ಯ ಯುವ ತತ್ವಜ್ನಾನಿಗಳಿದ್ದಾರೆ – ಬರ್ಕ್ಲಿ, ಸ್ಪಿನೋಜಾ, ಶಾಪೆನ್ಹವರ್. ಆದರೆ, ಇಲ್ಲಿ ಅದು ಅಪ್ರಸ್ತುತ. ಮುಖ್ಯವೇನೆಂದರೆ, ಈ ಎರಡೂ ತುಣುಕುಗಳನ್ನು – “ದೈಹಿಕ ಸವಕಳಿಯೊಂದು ವಿವೇಕ; ಯೌವನದಿ/ ನಾವು ಅರಿವಿರದೆ ಪರಸ್ಪರ ಪ್ರೀತಿಸಿಹೆವು” ಮತ್ತು ಮೆರೆಡಿತ್ ನ “ಒಲೆಯಲ್ಲಿ ಬೆಂಕಿ ಆರುವುದಕ್ಕೆ ಮುನ್ನ/ ತಾರೆಗಳೊಂದಿಗೆ ಸಖ್ಯವ ಬೆಳೆಸುವುದಿಲ್ಲ ನಾವು”, – ಅಮೂರ್ತ ಸ್ತರದಲ್ಲಿ ಓದಿದಾಗ, ಹೇಳುತ್ತಿರುವುದು ಹೆಚ್ಚುಕಡಿಮೆ ಒಂದೇ. ಆದರೂ, ಅವು ಭಿನ್ನ ಧ್ವನಿ ಹೊಂದಿವೆ. ಅವುಗಳ ಅರ್ಥ ಒಂದೇ ಎಂದು ನಾವು ಕೇಳಿದಾಗ, ಅಥವಾ ನಾನೀಗ ಹೇಳಿದಾಗ, ನಿಮಗೆ ತಕ್ಷಣ ಅದು ಅಪ್ರಸ್ತುತವೆಂದು ಹೊಳೆಯುತ್ತದೆ ಮತ್ತು ಈ ಪದ್ಯಗಳು ಪರಸ್ಪರ ಭಿನ್ನವೆಂದೇ ಅನಿಸುತ್ತದೆ.
ಹಲವು ಸಲ ನನಗನ್ನಿಸಿದ್ದಿದೆ ಕಾವ್ಯದಲ್ಲಿ ಅರ್ಥವೆನ್ನುವುದು ಬಾಹ್ಯ ಬೆರಕೆಯೆಂದು. ಕವನವೊಂದರ ಅರ್ಥವನ್ನು ಅರಿಯುವುದರ ಮುನ್ನವೇ ಅದರ ಸೊಗಸಿನ ಭಾವ ನಮ್ಮನ್ನು ತಟ್ಟಿರುತ್ತದೆಯೆಂಬ ಸತ್ಯ ನನಗೆ ಗೊತ್ತು. ಶೇಕ್ಸಪಿಯರನ ಈ ಸುನೀತವನ್ನು ಈ ಮೊದಲು ಉಲ್ಲೇಖಿಸಿದ್ದೇನೆಯೋ ನೆನಪಿಲ್ಲ:
The mortal moon hath her eclipse endured,
And the sad augurs mock their own presage;
Incertainties now crown themselves assured,
And peace proclaims olives of endless age.
ಚಂದ್ರನ ಭೌತಿಕ ದೇಹ ಗ್ರಹಣದಿಂದ ಪಾರಾಗಿದೆ
ಗ್ರಹಚಾರದ ಶಕುನಗಳು ತಮ್ಮ ತಾವು ಅಣಕವಾಡಿವೆ;
ಅನಿರ್ದಿಷ್ಟತೆಗಳು ಖಾತರಿಯ ಕಿರೀಟ ಧರಿಸಿವೆ
ಶಾಂತಿ ಕೊನೆಯಿರದ ಕಾಲದ ಸುಮವ ತೋರಿದೆ.
ಈ ಕವನದ ಮೊದಲೆರಡು ಸಾಲುಗಳು ರಾಣಿ ಎಲಜಬೆಥ್ ಳನ್ನು ಉಲ್ಲೇಖಿಸಿರುವಂತದ್ದು. ಅವಿವಾಹಿತ ರಾಣಿಯನ್ನು ಪರಿಶುದ್ಧ ಕನ್ಯೆ ಡಯಾನಾಗೆ ಹೋಲಿಸುವುದು ಆಸ್ಥಾನ ಕವಿಗಳ ಪರಿಪಾಠ. ಶೇಕ್ಸಪಿಯರ್ ಈ ಸಾಲುಗಳನ್ನು ಬರೆದಾಗ ಬಹುಷಃ ಚಂದಿರನ ಎರಡೂ ಅರ್ಥಗಳು ಅವನ ಮನಸ್ಸಿನಲ್ಲಿದ್ದವು – ರೂಪಕವಾಗಿ ರಾಣಿ ಎಲಿಜಬೆಥ್ ಳನ್ನು ನೆನೆವಾಗಲೂ ಆಗಸದಲ್ಲಿರುವ ಚಂದಿರನನ್ನು ನೆನೆಯದಿರಲು ಸಾಧ್ಯವಿರಲಿಲ್ಲವೆನಿಸುತ್ತದೆ. ನಾನಿಲ್ಲಿ ಹೇಳಬೇಕಿರುವುದೆಂದರೆ ಈ ಅರ್ಥಗಳಲ್ಲಿ ಒಂದನ್ನು ಮಾತ್ರ ಆಯುವುದಕ್ಕೆ ನಾವು ಬದ್ಧರಾಗಬೇಕಿಲ್ಲ. ಇವುಗಳಲ್ಲಿ ಒಂದು, ಅಥವಾ ಇನ್ನೊಂದು, ಅಥವಾ ಎರಡೂ ಅರ್ಥಸಾಧ್ಯತೆಗಳನ್ನು ಒಪ್ಪುವ ಮುನ್ನವೇ ನಾವು ಕವನವನ್ನು “ಭಾವಿಸಿರುತ್ತೇವೆ”. “ಚಂದ್ರನ ಭೌತಿಕ ದೇಹ ಗ್ರಹಣದಿಂದ ಪಾರಾಗಿದೆ/ ಗ್ರಹಚಾರದ ಶಕುನಗಳು ತಮ್ಮ ತಾವು ಅಣಕವಾಡಿವೆ” ಈ ಸಾಲುಗಳ ಅರ್ಥದ ಪರಿಧಿಯಾಚೆಯ ಸೊಗಸು ನನಗಂತೂ ವೇದ್ಯವಾಗಿದೆ.
ಖಂಡಿತವಾಗಿ ಅದೆಷ್ಟೋ ಕವನಗಳು ಅರ್ಥಹೀನವಾಗಿದ್ದರೂ ಸುಂದರವಾಗಿವೆ. ಆದರೂ, ಅವುಗಳಿಗೊಂದು ಅರ್ಥವಿರುತ್ತದೆ – ನಮ್ಮ ತಾರ್ಕಿಕ ಬುದ್ದಿಗಲ್ಲದಿದ್ದರೂ, ಕಲ್ಪನೆಗೆ ಎಟುಕುವಂತದ್ದು. ಒಂದು ಸರಳ ಉದಾಹರಣೆ ಎಂದರೆ, “Two red roses across the moon.” (“ಚಂದಿರನ ಅತ್ತಿತ್ತ ಎರಡು ಕೆಂಗುಲಾಬಿಗಳು”) ನಾವಿಲ್ಲಿ ಹೇಳಬಹುದು, ಶಬ್ದಗಳು ಸೂಚಿಸುತ್ತಿರುವ ಪ್ರತಿಮೆಯಲ್ಲಿ ಇದರ ಅರ್ಥವಿದೆಯೆಂದು. ನನಗಂತೂ, ಇಲ್ಲಿ ಯಾವುದೇ ನಿರ್ಧಿಷ್ಟ ಪ್ರತಿಮೆ ಕಾಣುವುದಿಲ್ಲ. ಶಬ್ದಗಳಲ್ಲಿಯೇ ಒಂದು ಉಲ್ಲಾಸವಿದೆ, ಶಬ್ದಗಳ ಲಯದಲ್ಲಿ, ಶಬ್ದಗಳ ನಾದದಲ್ಲಿ. ವಿಲಿಯಂ ಮಾರಿಸ್ಸನ ಇನ್ನೊಂದು ಉದಾಹರಣೆ ನೋಡೋಣ: “‘Therefore,’ said fair Yoland of the flowers/ ‘This is the tune of Seven Towers.’” (ಹೂಗಳ ಚೆಲುವೆ ಯೋಲಾಂಡಳು ನುಡಿದಳು/ ’ಏಳು ಕೋಟೆಗಳ ಧಾಟಿಯಿದು ಎನುತ’). ಅವುಗಳ ಸಂಧರ್ಭದ ಹೊರಗೆ ಉಲ್ಲೇಖಿಸುತ್ತಿದ್ದರೂ, ಈ ಸಾಲುಗಳು ಗಮನ ಸೆಳೆಯುತ್ತವೆಯೆಂದು ನನ್ನ ಎಣಿಕೆ.
ಇಂಗ್ಲೀಷು ಭಾಷೆಯೆಂದರೆ ನನಗೆ ಮೆಚ್ಚುಗೆಯೇ ಇದೆಯಾದರೂ, ಇಂಗ್ಲೀಷ ಕಾವ್ಯವನ್ನು ನೆನಪಿಸಿಕೊಳ್ಳುತ್ತಿರುವಾಗ ನನ್ನ ಸ್ಪ್ಯಾನಿಷ್ ಭಾಷೆ ನನ್ನನ್ನು ಕರೆಯುತ್ತದೆ. ಈ ಭಾಷೆಯ ಕೆಲವು ಸಾಲುಗಳನ್ನು ಉದ್ಧರಿಸುತ್ತೇನೆ. ನಿಮಗೆ ಅರ್ಥವಾಗದಿದ್ದರೆ, ಅವು ನನಗೂ ಅರ್ಥವಾಗಿಲ್ಲವೆಂದು, ಅವಕ್ಕೆ ಅರ್ಥವೇ ಇಲ್ಲವೆಂದು ಭಾವಿಸಿ ನಿರ್ಲಕ್ಷಿಸಿಬಿಡಿ. ತುಂಬಾ ಸೊಗಸಾದ ರೀತಿಯಲ್ಲಿ ಅವು ಅರ್ಥಹೀನವಾಗಿವೆ. ಅರ್ಥದತ್ತ ಸೂಚಿಸದೇ ಇರುವುದೇ ಅದಕ್ಕಿರುವ ಅರ್ಥ. ಕೆಲಸಲ ಜನ ಮರೆತು ಬಿಡುವ ಬೊಲೀವಿಯಾದ ಕವಿ ರಿಕಾರ್ಡೋ ಫ್ರಿಯರಿಯ ರಚನೆಯ ಕವನವಿದು. ಹತ್ತೊಂಬತ್ತನೇ ಶತಕದ ಕೊನೆಯ ದಶಕದಲ್ಲಿ ಅವನಿದನ್ನು ರಚಿಸಿದ. ಇಡೀ ಸುನೀತವನ್ನು ನಾನು ನೆನಪು ಮಾಡಿಕೊಳ್ಳ ಬಲ್ಲೆನಾದರೆ, ಚೆನ್ನಾಗಿತ್ತು. ಈ ಪದ್ಯದ ಲಯ-ನಾದದ ಗುಣ ನಿಮ್ಮನ್ನು ತಟ್ಟುತ್ತದೆ ಎಂದು ನನ್ನ ಭಾವನೆ. ಇರಲಿ, ಈ ಸಾಲುಗಳು ಸಹ ಸಾಕು. ಅವು ಹೀಗಿವೆ:
Peregrina paloma imaginaria
Que enardeces los últimos amores
Alma de luz, de música y de _ores
Peregrina paloma imaginaria.
ಕಾಲ್ಪನಿಕ ತೀರ್ಥಯಾತ್ರಿ ಪಾರಿವಾಳವೇ
ಮರಳಿ ನೀ ಹೊತ್ತಿಸುವೆ ಉರಿ ಆರುತ್ತಿರುವ ಪ್ರೀತಿಯಲ್ಲಿ
ಬೆಳಕು, ಸಂಗೀತ, ಹೂವುಗಳ ಆತ್ಮದಲ್ಲಿ
ಕಾಲ್ಪನಿಕ ತೀರ್ಥಯಾತ್ರಿ ಪಾರಿವಾಳವೇ
ಈ ಸಾಲುಗಳಿಗೆ ಏನೂ ಅರ್ಥವಿಲ್ಲ, ಅರ್ಥವಿರಬೇಕೆಂದು ಬರೆದ ಸಾಲುಗಳಲ್ಲ, ಆದರೂ ಅವು ನಮ್ಮನ್ನು ತಟ್ಟುತ್ತವೆ. ಸುಂದರ ಸಂಗತಿಯಾಗಿ ನಮಗೆ ಗೋಚರಿಸುತ್ತವೆ. ನನ್ನ ಮಟ್ಟಿಗಂತೂ, ಅವು ಅಕ್ಷಯವೆಂದರೂ ಸರಿಯೇ.
ಮೆರೆಡಿತ್ ನನ್ನು ಉಲ್ಲೇಖಿಸಿದ್ದರಿಂದ ನಾನೀಗ ಮತ್ತೊಂದು ಉದಾಹರಣೆ ಎತ್ತಿಕೊಳ್ಳುತ್ತೇನೆ. ಉಳಿದವುಗಳಿಂದ ಇದು ಭಿನ್ನವಾಗಿದೆ, ಯಾಕೆಂದರೆ ಇದು ಅರ್ಥಪೂರ್ಣವಾಗಿದೆ. ಕವಿಯ ಅನುಭವಕ್ಕೆ ಸಂವಾದಿಯಾದ ಕವನವೆಂದು ನಮಗೆ ನಂಬಿಕೆ ಬರುತ್ತದೆ. ಆದರೂ, ನಾವು ಆ ಅನುಭವವನ್ನು ಪರೀಕ್ಷಿಸಿದರೆ, ಅಥವಾ ಕವಿ ತಾನು ಈ ಸಾಲುಗಳನ್ನು ಬರೆದುದರ ಹಿಂದಿನ ಕತೆ ಹೇಳಿದರೆ, ನಮಗೇ ಕಸಿವಿಸಿಯಾದೀತು. ಸಾಲುಗಳು ಹೀಗಿವೆ:
Love, that had robbed us of immortal things,
This little movement mercifully gave,
Where I have seen across the twilight wave
The swan sail with her young beneath her wings
ಅಳಿಯದ ಸಂಗತಿಗಳನು ನಮ್ಮಿಂದ ದೋಚುವ ಪ್ರೀತಿ
ಇದೊಂದು ಪುಟ್ಟ ಚಲನೆಯ ದಯಮಾಡಿಸಿತು
ಸಂಜೆಬೆಳಕಿನಡಿಯ ಅಲೆಗಳಲ್ಲಿ ಹಂಸವೊಂದು ಮರಿಗಳ
ಜೊತೆ ಈಜುತಿರುವ ದೃಶ್ಯ ಕಾಣಿಸಿತು.
ಮೊದಲನೆಯ ಸಾಲಿನಲ್ಲಿ ವಿಚಿತ್ರವೆನಿಸಬಹುದಾದ ಯೋಚನೆ ಕಾಣುತ್ತೇವೆ: “ಅಳಿಯದ ಸಂಗತಿಗಳನು ನಮ್ಮಿಂದ ದೋಚುವ ಪ್ರೀತಿ” – ನಾವು ನಿರೀಕ್ಷಿಸುವ ಹಾಗೆ, “ಅಳಿಯದ ಸಂಗತಿಗಳ ನಮಗಿತ್ತ ಪ್ರೀತಿ” ಎಂದಲ್ಲ. ಕವಿಯು ತನ್ನ ಮತ್ತು ತನ್ನ ಪ್ರಿಯತಮೆಯ ಕುರಿತು ಹೇಳುತ್ತಿದ್ದಾನೆ ಎಂಬ ಭಾವವನ್ನು ನಮ್ಮಲ್ಲಿ ಮೂಡಿಸಲಾಗಿದೆ. ಮೂರು ಮತ್ತು ನಾಲ್ಕನೆಯ ಸಾಲುಗಳಲ್ಲಿ ಈ ಕವನದ ಮತ್ತೊಂದು ಪಾರ್ಶ್ವದ ಅನಾವರಣವಾಗಿದೆ – ನಮಗೆ ಬೇರೆ ಕತೆ ಬೇಕಿಲ್ಲ ಹಂಸದ ಬಗೆಗೆ, ನದಿಯಲ್ಲಿ ಅದು ತೇಲಿಬಂದ ಬಗೆಗೆ, ಮತ್ತು ಮೆರೆಡಿತ್ ನ ಪದ್ಯದೊಳಗೆ ತೇಲಿ ಬಂದ ಬಗೆಗೆ, ಆಮೇಲೆ ನನ್ನ ಸ್ಮೃತಿಯನ್ನು ಸದಾಕಾಲಕ್ಕಾಗಿ ಒಳಹೊಕ್ಕಿದ ಬಗೆಗೆ. ನಮಗೆ ಗೊತ್ತು, ನನಗಂತೂ ಗೊತ್ತು, ಅವಿಸ್ಮರಣೀಯವಾದುದನ್ನು ನಾನು ಕೇಳಿದ್ದೇನೆ ಎಂದು. ಹ್ಯಾನ್ಸ್ಲಿಕ್ ಸಂಗೀತದ ಬಗೆಗೆ ಹೇಳಿದಂತೆ, ನಾನು ಇದರ ಕುರಿತು ಹೀಗೆ ಹೇಳುತ್ತೇನೆ: ನೆನಪಿಸಿಕೊಳ್ಳಬಲ್ಲೆ ನಾನು, ಅರ್ಥಮಾಡಿಕೊಳ್ಳಬಲ್ಲೆ ನಾನು, (ತರ್ಕ ಮಾತ್ರದಿಂದಲ್ಲ, ಆಳ ಕಲ್ಪನೆಯಿಂದ); ಆದರೆ, ಅನುವಾದಿಸಲಾರೆ. ನನಗೆ ಅನ್ನಿಸುವ ಹಾಗೆ, ಇದನ್ನು ಅನುವಾದಿಸ ಬೇಕಿಲ್ಲ ಕೂಡ.
ಅಲೆಕ್ಸಾಂಡ್ರಿಯಾದ ಗ್ರೀಕ್ ಕವಿಯೊಬ್ಬನು ಬಳಸಿದ್ದ ರೂಪಕವೊಂದು ಈ ಸಂಧರ್ಭದಲ್ಲಿ ನೆನಪಾಗುತ್ತಿದೆ. ಅವನು “ಮೂರುಸ್ತರದ ರಾತ್ರಿಯ ಪದ್ಯ”ದ ಕುರಿತಾಗಿ ಬರೆದಿದ್ದ. ಇದೊಂದು, ನನಗನ್ನಿಸುವ ಹಾಗೆ, ಶಕ್ತಿಶಾಲಿ ಸಾಲು. ಇದರ ಕುರಿತಾಗಿ ಟಿಪ್ಪಣಿ ಓದಿದಾಗ ನಾನು ಕಲಿತಿದ್ದೆಂದರೆ, ಆ ಪದ್ಯ ಹರ್ಕ್ಯುಲೀಸ್ ಬಗೆಗಿದೆ. ಹರ್ಕ್ಯುಲೀಸ್ ಜುಪಿಟರನಿಗೆ ಹುಟ್ಟಿದವ. ದೇವತೆಯಾದ ಜುಪಿಟರನ ಹರ್ಷವು ಎಷ್ಟು ಅಗಾಧವೆಂದರೆ ಆ ರಾತ್ರಿ ಮೂರು ರಾತ್ರಿಗಳಿಗೆ ಸಮವಾಗಿತ್ತಂತೆ. ಈ ವಿವರಣೆ ಇಲ್ಲಿ ಅಪ್ರಸ್ತುತ; ಇದರಿಂದ ಪದ್ಯದ ಸಾಲಿಗೆ ಒಳಿತೇನಿಲ್ಲ. ಸಣ್ಣದೊಂದು ಕತೆಯ ಹೇಳಿ, “ಮೂರುಸ್ತರದ ರಾತ್ರಿಯ ಪದ್ಯ”ವೆಂಬ ಅದ್ಭುತ ಒಗಟನ್ನು ಹಾಳುಮಾಡಿಬಿಡುತ್ತದೆ. ಇಷ್ಟು ಸಾಕು – ಈ ಒಗಟು. ಬೇರೆ ನಾವು ಓದಬೇಕಿಲ್ಲ, ಈ ಒಗಟು ಸಾಕು.
ಮನುಷ್ಯರು ಶಬ್ದಗಳನ್ನು ಆವಿಷ್ಕರಿಸಿದಾಗ ಅವು ಎದ್ದುಕಾಣುವುದರ ಬಗ್ಗೆ ಹಿಂದೆ ಪ್ರಸ್ತಾಪಿಸಿದ್ದೇನೆ. ನನಗನ್ನಿಸುವಂತೆ “thunder” ಶಬ್ದವು ಗುಡುಗಿನ ಸದ್ದು ಮಾತ್ರವಲ್ಲ, ದೇವರನ್ನೂ ಸೂಚಿಸಿರಬಹುದು. ಅಂತೆಯೇ, ನಾನು “night” ಶಬ್ದದ ಕುರಿತೂ ಪ್ರಸ್ತಾಪಿಸಿದ್ದೇನೆ. ರಾತ್ರಿಯ ಕುರಿತು ಮಾತಾಡುವಾಗ ನನಗೆ ಅನಿವಾರ್ಯವಾಗಿ “ಫಿನೆಗನ್ಸ್ ವೇಕ್” ಕಾದಂಬರಿಯ ಮೊದಲ ಅಧ್ಯಾಯದ ಕೊನೆಯ ವಾಕ್ಯ ನೆನಪಾಗುತ್ತದೆ. ಜಾಯ್ಸ್ ನ ವಾಕ್ಯ ಹೀಗಿದೆ: “the rivering waters of, hitherandthithering waters of Night!” (ರಾತ್ರಿಯ ಹರಿವ ನೀರು, ಅಲ್ಲಿಲ್ಲಿಯಾಗುವ ನೀರು) ಅತಿಯಾದ ಶೈಲಿಯ ಒಂದು ಉಗ್ರ ಉದಾಹರಣೆ. ಶತಮಾನಗಳ ಕಾಲದ ಸಾಹಿತ್ಯದ ತರುವಾಯವೇ ಇಂತಹುದೊಂದು ವಾಕ್ಯ ರಚನೆಯಾಗಬಹುದು. ನನ್ನ ಪ್ರಕಾರ, ಈ ವಾಕ್ಯವೊಂದು ಆವಿಷ್ಕಾರ, ಇದೊಂದು ಕವಿತೆ, – ಸಂಕೀರ್ಣ ಜಾಲ, ಸ್ಟೀವನ್ಸನ್ ಹೇಳುವ ಹಾಗೆ. ಬಹುಷಃ ಅದೊಂದು ಕಾಲದಲ್ಲಿ, “ರಾತ್ರಿ” ಶಬ್ದವೂ ಸಹ ಇದೇ ರೀತಿ ಭಿನ್ನತೆ ಹೊಂದಿದ್ದು, ಪ್ರಭಾವಶಾಲಿಯಾಗಿತ್ತು, ಈ ಶಕ್ತಿಶಾಲಿ ಜೇಮ್ಸ್ ಜಾಯ್ಸನ ವಾಕ್ಯದಂತೆ ಅಪ್ರತಿಮವಾಗಿತ್ತು ಎಂದು ನಮಗನಿಸಿದರೆ ತಪ್ಪಲ್ಲ.
ಕಾವ್ಯವನ್ನು ಎರಡು ರೀತಿಯಲ್ಲಿ ಬಳಸಬಹುದು, ಎರಡು ಪರಸ್ಪರ ವಿರೋಧಿ ನೆಲೆಯಲ್ಲಿ (ಹಾಗೆ, ಕಾವ್ಯವನ್ನು ಬಳಸಲು ಬಹಳ ರೀತಿಗಳಿವೆ). ಕವಿಯು ಸಾಮಾನ್ಯ ಶಬ್ದಗಳನ್ನು ಅಸಾಮಾನ್ಯ ರೀತಿಯಲ್ಲಿ ಬಳಸಬಹುದು – ಅದರೊಳಗಿನ ಮ್ಯಾಜಿಕ್ಕನ್ನು ವಿಕಸಿಸಿಕೊಳ್ಳಲು. ಎಡ್ಮಂಡ್ ಬ್ಲಂಡನ್ ಎಂಬ ಇಂಗ್ಲೀಷ್ ಕವಿಯ ನ್ಯೂನೋಕ್ತಿಯುಳ್ಳ ಈ ರಚನೆ ಇದಕ್ಕೆ ಒಳ್ಳೆಯ ಉದಾಹರಣೆಯಾಗಬಲ್ಲದು:
I have been young and now am not too old;
And I have seen the righteous forsaken,
His health, his honor and his quality taken.
This is not what we formerly were told
ಹರಯದವನಿದ್ದೆ ನಾನು, ಈಗಲೂ ಮುದುಕನಾಗಿಲ್ಲ
ಕಂಡಿದ್ದೇನೆ ನೀತಿವಂತರು ನೀರುಪಾಲಾದುದನ್ನು
ಸ್ವಾಸ್ಥ್ಯ, ಘನತೆ, ಗುಣಗಳನ್ನೂ ಕಳೆದುಕೊಂಡಿದ್ದನ್ನು
ಇದಾಗಿರಲಿಲ್ಲ ಹಿಂದೆ ನಮಗೆ ಹೇಳಿದ ಮಾತುಗಳು
ಇಲ್ಲಿ, ಸಾಮಾನ್ಯ ಶಬ್ದಗಳಿವೆ, ಸಾಮಾನ್ಯ ಅರ್ಥವಿದೆ, ಏನಿಲ್ಲವೆಂದರೂ ಸಾಮಾನ್ಯ ಭಾವವಿದೆ – ಅದು ಮುಖ್ಯ. ಜಾಯ್ಸನ ವಾಕ್ಯದಂತೆ ಶಬ್ದಗಳಿಲ್ಲಿ ಎದ್ದು ತೋರುವುದಿಲ್ಲ.
ಮುಂದಿನದು ಕೇವಲ ಮೂರು ಶಬ್ದಗಳ ಒಂದು ಉಲ್ಲೇಖ: “Glittergates of elfinbone.” (ದಂತದ ಹೊಳೆವದ್ವಾರಗಳು). “Glittergates” ಎಂಬ ಶಬ್ದ ಜಾಯ್ಸ್ ನಮಗೆ ಕೊಟ್ಟಿರುವ ಕೊಡುಗೆ. ಆಮೇಲೆ, ಮತ್ತೊಂದು ಶಬ್ದವಿದೆ – elfinbone. ಜಾಯ್ಸ ಈ ಶಬ್ದ ಬಳಸಿದಾಗ ಜರ್ಮನ್ ಭಾಷೆಯಲ್ಲಿ ದಂತಕ್ಕಿರುವ (ivory) ಶಬ್ದ elfenbein ಮನಸ್ಸಿನಲ್ಲಿಟ್ಟು ಬರೆದಿದ್ದ. Elfenbein ಎನ್ನುವುದು ಜರ್ಮನ್ನಿನ Elephantenbein (“elephant bone” ಆನೆಯ ಮೂಳೆ) ಶಬ್ದದ ಹೃಸ್ವರೂಪ. ಆದರೆ, ಜಾಯ್ಸ್ ನೋಡಿ, ಇಂಗ್ಲೀಷಿನಲ್ಲಿ ಹೀಗೊಂದು ಶಬ್ದ ಸಾಧ್ಯವೆಂದು ಯೋಚಿಸಿ elfinbone ಎಂಬ ಶಬ್ದವನ್ನು ಆವಿಷ್ಕರಿಸಿದ್ದಾನೆ. ನಾವು elfinbone ಶಬ್ದವನ್ನು ಕೇಳಿದಾಗ ನಮಗೆ ಆಶ್ಚರ್ಯ, ಆಘಾತಕಾರಿ ವಿಸ್ಮಯ ಉಂಟಾಗುತ್ತದೆ – ಆ ಶಬ್ದದ ಹೊಸತನದಿಂದ, ಅದರ ಸೊಗಸಿನಿಂದ.
ಹೀಗೆ, ಕಾವ್ಯರಚನೆಯಲ್ಲಿ ಎರಡು ದಾರಿಗಳಿವೆ. ಒಂದೋ ಸರಳ ಶೈಲಿ, ಇನ್ನೊಂದು ವಿಸ್ತಾರದ ಶೈಲಿಯೆಂದು ಜನ ಗುರುತಿಸುತ್ತಾರೆ. ಕವನದ ಶೈಲಿ ಸರಳವೋ, ವಿಸ್ತಾರವೋ ಮುಖ್ಯವಲ್ಲ, ಬದಲಿಗೆ, ಕಾವ್ಯ ಜೀವಂತವೋ, ನಿರ್ಜೀವವೋ ಅನ್ನುವುದು ಮುಖ್ಯವೆಂದು ನನ್ನ ಅನಿಸಿಕೆ. ಇದು ಕವಿಯ ಮೇಲೆ ಅವಲಂಭಿಸಿರುತ್ತದೆ. ಕಣ್ಣುಕೋರೈಸುವಂತ ಕಾವ್ಯವನ್ನು ಸರಳ ಶೈಲಿಯಲ್ಲಿ ಬರೆದಿರಬಹುದು, ಆದರೂ ಅಂತಹ ಕವನಗಳು ನನ್ನೆಣಿಕೆಯಲ್ಲಿ ಶ್ಲಾಘನೀಯವೇ – ಕೆಲಸಲ ಹೆಚ್ಚು ಶ್ಲಾಘನೀಯ. ಉದಾಹರಣೆಗೆ, ಸ್ಟೀವನ್ಸನ್ (ಹಿಂದೆ ನಾನು ಅವನೊಡನೆ ಒಪ್ಪಿರಲಿಲ್ಲವೆಂದು, ಈಗ ಹೊಗಳುತ್ತೇನೆ), ಅವನ “ಶೋಕಗೀತೆ”ಯಲ್ಲಿ ಬರೆಯುತ್ತಾನೆ:
Under the wild and starry sky
Dig the grave and let me lie
Glad did I live and gladly die,
And I laid me down with a will.
This be the verse you ’grave for me:
“Here he lies where he longed to be;
Home is the sailor, home from the sea,
And the hunter home from the hill.
ತಾರೆತುಂಬಿದ ವಿಶಾಲ ಬಾನಿನಡಿ
ಗೋರಿಯ ತೋಡಿ, ಸಾಯಲು ಬಿಡು ನನ್ನ
ಖುಷಿಯಿಂದಲೇ ಜೀವಿಸಿದೆ, ಅಂತೆಯೇ ಸಾಯುವೆ
ಬಿಟ್ಟು ಹೀಗೊಂದು ಮೃತ್ಯುಪತ್ರ ನಾ ಹೋಗುವೆ
ಬರೆದಿಡು ಗೋರಿಯ ಮೇಲೆ ನೀನಿದನು
“ಮಲಗಿಹನಾತ ಇಲ್ಲಿ, ತಾನು ಮಲಗಬಯಸಿದಲ್ಲಿ
ಮನೆಗೆ ಬಂದ ನಾವಿಕ, ಕಡಲಿಂದ ಮರಳಿದವ
ಪರ್ವತಗಳಿಂದ ತಿರುಗಿ ಬಂದ ಬೇಟೆಗಾರ.”
ಈ ಕವನ ಸರಳ ಭಾಷೆಯಲ್ಲಿದೆ; ಸರಳವಿದ್ದರೂ ಇದು ಜೀವಂತವಾಗಿದೆ. ಕವಿಯು ಬಹಳ ಕಷ್ಟಪಟ್ಟು ಈ ಸರಳ ಘನತೆಯನ್ನು ಗಳಿಸಿರಬೇಕು. “ಖುಷಿಯಿಂದಲೇ ಜೀವಿಸಿದೆ, ಅಂತೆಯೇ ಸಾಯುವೆ” ಇಂತಹ ಸಾಲುಗಳು ಸೂಚಿಸುವುದು ಸ್ಫೂರ್ತಿದೇವತೆ ಹರಸಿದ ಆ ಕೆಲವೇ ಅಪರೂಪದ ಕ್ಷಣಗಳಲ್ಲಿ ಮಾತ್ರ ಸಾಧ್ಯ.
ಶಬ್ದಗಳು ಬೀಜಗಣಿತದಂತೆ ಎಂಬ ನಂಬಿಕೆ ನಮಗೆ ಬಹುಷಃ ಶಬ್ದಕೋಶಗಳಿಂದ ಬರುತ್ತದೆ. ಹಾಗೆಂದು, ಶಬ್ದಕೋಶಗಳಿಗೆ ನಾನು ಕೃತಘ್ನನಾಗಬಯಸುವುದಿಲ್ಲ. ಡಾ. ಜಾನ್ಸನ್ ಮತ್ತು ಡಾ. ಸ್ಕೀಟ್ ನನ್ನ ಮೆಚ್ಚುಗೆಯ ಓದುಗಳು, ಹಾಗೆಯೇ ಹಲವರು ಸೇರಿ ಮಾಡಿದ ಆಕ್ಸಫರ್ಡ್ ಪುಟ್ಟ ಶಬ್ದಕೋಶ ಕೂಡ. ಆದರೂ ಕೂಡ ನನ್ನ ನಂಬಿಕೆ ಏನೆಂದರೆ ಉದ್ದುದ್ದ ಶಬ್ದಗಳ ಪಟ್ಟಿ, ಮತ್ತವುಗಳ ವಿವರಣೆಗಳು, ಒಂದು ಶಬ್ದವನ್ನು ಇನ್ನೊಂದರ ಜೊತೆ ವಿನಿಮಯ ಮಾಡಬಹುದು, ವಿವರಣೆಗಳೇ ಶಬ್ದಗಳ ಸರ್ವಸ್ವವೆಂಬ ಭ್ರಮೆಯನ್ನು ನಮ್ಮಲ್ಲಿ ಬರಿಸುತ್ತವೆ. ಪ್ರತಿ ಶಬ್ದವೂ ಅನನ್ಯ, ತಾನು ತಾನೇ ಆಗಿರುತ್ತದೆ ಎಂಬ ಸತ್ಯ ನಮಗೆ ತಿಳಿದಿರುತ್ತದೆ, ಕವಿಗಳಿಗಂತೂ ಅನುಭವವೂ ಆಗಿರುತ್ತದೆ. ಲೇಖಕನೊಬ್ಬ ಅಷ್ಟಾಗಿ ಜನಜನಿತವಲ್ಲದ ಶಬ್ದವನ್ನು ಬಳಸಿದಾಗ ನಮಗಿದು ಅರಿವಿಗೆ ಬರುತ್ತದೆ. ಉದಾಹರಣೆಗೆ, “sedulous” (ಉದ್ಯೋಗಶೀಲ) ಎಂಬ ಶಬ್ದವನ್ನು ನಾವು ಅಪರೂಪದ್ದು, ಕುತೂಹಲಕಾರಿಯಾದುದು ಎಂದು ಭಾವಿಸುತ್ತೇವೆ. ಆದರೂ, ಸ್ಟೀವನ್ಸನ್ (ಮತ್ತವನ ನೆನೆಯುತ್ತಿದ್ದೇನೆ) ತಾನು ಹ್ಯಾಜಲಿಟ್ ನಿಗೆ “ಉದ್ಯೊಗಶೀಲ ಮರ್ಕಟವಾಗಿ” ದುಡಿಯುತ್ತಿದ್ದೇನೆಂದು ಬರೆದಾಗ ಆ ಶಬ್ದ ಜೀವಂತವಾಗುತ್ತದೆ. ಶಬ್ದಗಳು ಮ್ಯಾಜಿಕ್ಕಿನಲ್ಲಿ ಶುರುವಾಗಿ ಕಾವ್ಯದಿಂದ ಮ್ಯಾಜಿಕ್ಕಿಗೆ ಮರಳುತ್ತವೆಂಬ ಈ ತತ್ವವು, (ಇದು ನನ್ನದೇನಲ್ಲ, ಇತರ ಲೇಖಕರಲ್ಲಿಯೂ ಕೂಡ ಕಂಡುಬಂದೀತು), ಸಮಂಜಸವಾದುದು ಎಂದು ನನ್ನ ಎಣಿಕೆ.
ನಾವೀಗ ಮತ್ತೊಂದು ಮುಖ್ಯ ಪ್ರಶ್ನೆಯೆಡೆಗೆ ಹೊರಳೋಣ: ಬದ್ಧತೆಯ ಕುರಿತಾದದ್ದು. ನಾವು ಯಾವುದೇ ಲೇಖಕರನ್ನು ಓದಿದಾಗ, (ಅದು ಕಾವ್ಯವಾಗಿರಲಿ, ಗದ್ಯವಾಗಿರಲಿ), ಅವರನ್ನು ನಂಬುವಂತಾಗಬೇಕು ಅನ್ನುವುದು ಬಹಳ ಮುಖ್ಯ. ಅಥವಾ, ಕೋಲರಿಜ್ ಹೇಳಿದ ಅಪನಂಬಿಕೆಯನ್ನು ಬದಿಗಿರಿಸುವ ಸಮ್ಮತಿ ನಮ್ಮಲ್ಲಿ ಉಂಟಾಗಬೇಕು. ಹಿಂದೆ ನಾನು ವಿಸ್ತೃತ ಶೈಲಿಯ ಕಾವ್ಯದ ಕುರಿತು ಮಾತನಾಡುವಾಗ ನೆನಪಾಗಬೇಕಿದ್ದ ಕೋಲರಿಜ್ಜನ ಸಾಲುಗಳು:
Weave a circle round him thrice,
And close your eyes with holy dread,
For he on honey-dew hath fed,
And drunk the milk of Paradise
ಮೂರು ಪ್ರದಕ್ಷಿಣೆ ಅವನ ಸುತ್ತ ಹಾಕಿರಿ
ಪೂಜ್ಯ ಭೀತಿಯಲ್ಲಿ ನಿಮ್ಮ ಕಣ್ಣ ಮುಚ್ಚಿರಿ
ಅವನೋ ಜೇನು-ಹನಿಯ ಸೇವಿಸಿಹನು
ಸಗ್ಗದ ಹಾಲನು ಕುಡಿದುನ್ಮತ್ತನಾಗಿಹನು
ಈಗ ನಾವು ನಮ್ಮ ಅಂತಿಮ ವಿಷಯಕ್ಕೆ ಬರೋಣ. ಅದು ಬದ್ಧತೆಯ ಕುರಿತು – ಗದ್ಯ ಮತ್ತು ಪದ್ಯವೆರಡರಲ್ಲಿಯೂ. ಕಾದಂಬರಿಯ ಸಂಧರ್ಭದಲ್ಲಿ (ಕಾವ್ಯದ ಕುರಿತು ಚರ್ಚೆ ನಡೆಸಿರುವಾಗ, ಕಾದಂಬರಿಯ ಕುರಿತು ಯಾಕಾಗಬಾರದು?), ಕೇಂದ್ರ ಪಾತ್ರದಲ್ಲಿ ನಮಗಿರುವ ನಂಬಿಕೆಯೇ ನಮ್ಮ ಬದ್ಧತೆಯೂ ಆಗಿರುತ್ತದೆ. ಕೇಂದ್ರ ಪಾತ್ರದಲ್ಲಿ ನಂಬಿದೆವಾದರೆ, ಎಲ್ಲವೂ ಸುಸೂತ್ರ. ನಿಮಗಿದು ವಿಪರೀತವೆನಿಸಬಹುದು, ನನಗೆ, ಡಾನ್ ಕಿಯೋಟೆಯ ಸಾಹಸಗಳ ಕುರಿತು ವಿಶ್ವಾಸವಿಲ್ಲ. ನಾನು ಕೆಲವನ್ನು ನಂಬದಿರಬಹುದು, ಕೆಲವು ಅತಿಶಯೋಕ್ತಿಯಿರಬಹುದು. ಆದರೆ, ವೀರಯೋಧ (knight), ಜಮೀನುದಾರನೊಡನೆ (squire) ಮಾತನಾಡುವಾಗ ಅಷ್ಟು ಉದ್ದುದ್ದ ಭಾಷಣ ಮಾಡಿರಲಾರನೆಂದು ನನ್ನ ಅನಿಸಿಕೆ. ಹಾಗೆಂದು, ಈ ವಿವರಗಳೇನೂ ಮುಖ್ಯವಲ್ಲ. ಡಾನ್ ಕಿಯೋಟೆಯನ್ನು ನಾನು ನಂಬುವುದು ಮುಖ್ಯ. ಆದುದರಿಂದಲೇ ಅಜೋರಿನ್ನನ ಅಥವಾ ಉನಾಮುನೋನ ಕಿಯೋಟೆ ಕೃತಿಗಳು ಅಪ್ರಸ್ತುತವೆನಿಸುತ್ತದೆ ನನಗೆ, ಅವುಗಳಲ್ಲಿ ಸಾಹಸಗಳು ತೀರಾ ಗಂಭೀರವಾಗುತ್ತವೆ. ವೀರಯೋಧ (knight) ಕಿಯೋಟೆಯನ್ನು ನಾನು ನಿಜಕ್ಕೂ ನಂಬಬಲ್ಲೆ. ಅವೆಲ್ಲಾ ನಡೆದ ಸಂಗತಿಗಳಲ್ಲವೆಂದು ಯಾರಾದರೂ ನನಗೆ ಹೇಳಿದರೂ ಸಹ, ಗೆಳೆಯನೊಬ್ಬನ ಮೇಲೆ ಇರಿಸುವ ವಿಶ್ವಾಸವನ್ನು ಡಾನ್ ಕಿಯೋಟೆಯ ಮೇಲೆ ನಾನಿಡುತ್ತೇನೆ.
ನನ್ನ ಅದೃಷ್ಟದಿಂದ ನನಗೆ ಹಲವಾರು ಒಳ್ಳೆಯ ಗೆಳೆಯರಿದ್ದಾರೆ ಮತ್ತು ಅವರ ಕುರಿತು ಹಲವಾರು ಕಿರುಗತೆಗಳನ್ನು ಹೇಳಲಾಗುತ್ತದೆ. ಅವುಗಳಲ್ಲಿ ಕೆಲವನ್ನು – ಇದು ನನ್ನ ಗರ್ವವೂ ಹೌದು, ಲಜ್ಜೆಯೂ ಹೌದು – ನಾನೇ ಹೊಸೆದದ್ದು. ಅವು ಹಾಗೆಂದು ಸುಳ್ಳಲ್ಲ – ಮೂಲತಃ ಅವುಗಳಲ್ಲಿರುವುದು ನಿಜವೇ. ಡಿ ಕ್ವಿನ್ಸಿ ಹೇಳಿದಂತೆ ಎಲ್ಲ ಕಿರುಗತೆಗಳೂ ಕಲ್ಪಿತವೇ. ಅವನೇನಾದರೂ ಕೊಂಚ ಆಳವಾಗಿ ಯೋಚಿಸಿದ್ದರೆ, ಖಂಡಿತ ಅವನು ಕಿರುಗತೆಗಳು ಐತಿಹಾಸಿಕವಾಗಿ ಕಲ್ಪಿತವಾದರೂ, ಮೂಲತಃ ಸತ್ಯವಿರುತ್ತವೆ ಎನ್ನುತ್ತಿದ್ದ. ಯಾರೊಬ್ಬರ ಕುರಿತೊಂದು ಕತೆಯಿದೆಯಾದರೆ, ಅದು ಅವರನ್ನು ಹೋಲುತ್ತದೆ; ಆ ಕತೆ ಅವರ ಸಂಕೇತವಾಗುತ್ತದೆ. ನಾನು ಯಾವಾಗ ನನ್ನ ಒಳ್ಳೆಯ ಗೆಳೆಯರಾದ ಡಾನ್ ಕಿಯೋಟೆ, ಮಿಸ್ಟರ್ ಪಿಕ್ವಿಕ್, ಮಿಸ್ಟರ್ ಶೆರ್ಲಾಕ್ ಹೋಮ್ಸ್, ಡಾ. ವಾಟ್ಸನ್, ಹಕಲ್ಬರಿ ಫಿನ್, ಪೀರ್ ಜಯಂಟ್, ಮತ್ತಿತರರ ಕುರಿತು ಯೋಚಿಸುತ್ತೇನೆಯೋ (ಇನ್ನೆಷ್ಟು ಇದ್ದಾರೆಂದು ಸಹ ನನಗೆ ಗೊತ್ತಿಲ್ಲ), ಅವುಗಳನ್ನು ಬರೆದವರು ಸ್ವಲ್ಪ ಉದ್ದನೆಯ ಕತೆ ಹೇಳಿದ್ದಾರೆಂದು ಅನಿಸಿದರೂ ಸಹ, ಅವರನ್ನು ಬೆಳೆಸಿದ ಸಾಹಸಗಳು ಅವರಿಗೆ ಹಿಡಿದ ಕನ್ನಡಿ, ಅಥವಾ ಅವರಿಗೆ ಕೊಟ್ಟ ವಿಶೇಷಣ, ಅಥವಾ ಲಕ್ಷಣವೆಂದು ನನಗನಿಸಿದೆ. ನಾವು ಮಿಸ್ಟರ್ ಶೆರ್ಲಾಕ್ ಹೋಮ್ಸನನ್ನು ನಂಬುತ್ತೇವಾದರೆ, ಬಾಸ್ಕರವಿಲ್ಲಿನ ಕೀಳುಮನುಷ್ಯನನ್ನು ತಿರಸ್ಕರಿಸಬಹುದು; ಅವನಿಗೆ ಹೆದರಬೇಕಾಗಿಲ್ಲ. ಹಾಗಾಗಿ, ನಾವು ಕಾದಂಬರಿಯ ಪಾತ್ರದಲ್ಲಿ ನಂಬಿಕೆ ಇಡುವುದು ಅತ್ಯಂತ ಮುಖ್ಯವೆಂದು ನಾನು ಹೇಳುತ್ತಿರುವುದು.
ಕಾವ್ಯದ ಸಂಧರ್ಭದಲ್ಲಿ ಸ್ವಲ್ಪ ಭಿನ್ನತೆ ಕಾಣಬಹುದು – ಯಾಕೆಂದರೆ ಕವಿಗಳು ರೂಪಕಗಳೊಂದಿಗೆ ಕೆಲಸ ನಡೆಸಿರುತ್ತಾರೆ. ರೂಪಕಗಳನ್ನು ನಾವು ನಂಬಬೇಕಿಲ್ಲ. ಆದರೆ, ಇಲ್ಲಿ ಮುಖ್ಯವಾದುದೆಂದರೆ, ಆ ರೂಪಕಗಳು ಕವಿಯ ಭಾವನೆಯ ಪ್ರತಿರೂಪವೆಂದು ನಾವು ಯೋಚಿಸಬೇಕಾಗುತ್ತದೆ. ಇಷ್ಟಾದರೆ ಸಾಕು ಎನಿಸುತ್ತದೆ ನನಗೆ. ಉದಾಹರಣೆಗೆ, ಲುಗಾನ್ಸ್ ಸೂರ್ಯಾಸ್ತದ ಕುರಿತು “un violento pavo real verde, deliriado en oro” (a violent green peacock, delirious in gold; ಚಿನ್ನದ ಉದ್ರೇಕದಲ್ಲಿರುವ ವ್ಯಗ್ರ ಹಸಿರು ನವಿಲು) ಎಂದು ಬರೆದಾಗ, ಸೂರ್ಯಸ್ತ ಹೇಗೆ ಹಸಿರು ನವಿಲಿಗೆ ಹೋಲುತ್ತದೆ, ಅಥವಾ ಹೋಲುವುದಿಲ್ಲ ಎಂದು ನಾವು ಚಿಂತಿಸಬೇಕಿಲ್ಲ. ನಮಗೆ ನಂಬಿಕೆ ಉಂಟಾಗಬೇಕಿರುವುದು ಸೂರ್ಯಾಸ್ತವು ಕವಿಯನ್ನು ಗಾಢವಾಗಿ ಕಲಕಿದೆ, ಅದನ್ನು ಸೂಚಿಸಲು ಅವನಿಗೆ ರೂಪಕದ ಅವಶ್ಯಕತೆ ಕಂಡಿದೆ ಎನ್ನುವುದರಲ್ಲಿ ಮಾತ್ರ. ಕಾವ್ಯದಲ್ಲಿ ಬದ್ಧತೆ ಎಂದರೆ, ನನ್ನ ಪ್ರಕಾರ, ಇಷ್ಟು ಮಾತ್ರ.
ಇದಕ್ಕೂ ಸರಳ ಅಥವಾ ವಿಸ್ತಾರ ಶೈಲಿಗೂ ಸಂಬಂಧವಿಲ್ಲ. ಮಿಲ್ಟನ್ ಬರೆದುದನ್ನು ಉದಾಹರಣೆಗೆ ನೋಡಿ (ಇದು ಪ್ಯಾರಡೈಸ್ ರಿಗೇನ್ಡ್” ಕೃತಿಯ ಅಂತಿಮ ಸಾಲುಗಳು) “hee unobserv’d / Home to his Mothers house private
return’d”; ಇಲ್ಲಿ ಭಾಷೆ ಸರಳವಿದ್ದರೂ ನಿರ್ಜೀವವಾಗಿದೆ. ಆದರೆ, ಅವನದೇ ಈ ಸಾಲುಗಳನ್ನು ನೋಡಿ: “When I consider how my light is spent / Ere half my days, in this dark world,” ಇವುಗಳ ಭಾಷೆ ವಿಸ್ತೃತ ಶೈಲಿಯದಾಗಿದ್ದರೂ, ಜೀವಂತಿಕೆಯಿಂದ ತುಂಬಿದ ಭಾಷೆಯದು. ಈ ಅರ್ಥದಲ್ಲಿ ಗೊಂಗೊರಾ, ಜಾನ್ ಡನ್, ವಿಲಿಯಂ ಬಟ್ಲರ್ ಯೇಟ್ಸ್, ಜೇಮ್ಸ್ ಜಾಯ್ಸ್ ಇಂತಹ ಲೇಖಕರನ್ನು ನಾವು ಸಮರ್ಥಿಸಬಹುದು. ಅವರ ಶಬ್ದಗಳು, ಚರಣಗಳು ವಿಪರೀತವಿರಬಹುದು; ಅವರ ಬರಹಗಳಲ್ಲಿ ಅಸಹಜತೆಯೂ ಇರಬಹುದು. ಆದರೆ, ಅವುಗಳ ಹಿಂದಿನ ಭಾವದಲ್ಲಿ ಸತ್ಯಾಂಶವಿದೆ ಎಂಬ ನಂಬಿಕೆ ನಮ್ಮಲ್ಲಿ ಮೂಡುವ ಹಾಗಿರುತ್ತದೆ ಅವರ ಬರಹಗಳು. ಅವರನ್ನು ಮೆಚ್ಚಿಕೊಳ್ಳಲು ಇಷ್ಟು ಸಾಕು.
ಇಂದು ನಾನು ಬಹಳ ಕವಿಗಳ ಹೆಸರು ಎತ್ತಿಕೊಂಡು ಮಾತನಾಡಿದ್ದೇನೆ. ನನ್ನ ಮುಂದಿನ ಉಪನ್ಯಾಸದಲ್ಲಿ ನಾನು ಓರ್ವ ಸಣ್ಣ ಕವಿಯ ಕುರಿತು ಮಾತನಾಡಲಿದ್ದೇನೆ – ಆ ಕವಿಯ ಕೃತಿಗಳನ್ನು ನಾನು ಓದಿಲ್ಲ, ಆ ಕವಿಯ ಕೃತಿಗಳನ್ನು ನಾನು ಬರೆಯಬೇಕಾಗಿದೆ. ನಾನು ನನ್ನ ಕುರಿತಾಗಿಯೇ ಮಾತನಾಡಲಿದ್ದೇನೆ. ಇದು ನಿಮಗೆ ನಿರಾಶಾದಾಯಕ ಸಮಾರೋಪ ಎನಿಸಿದರೆ ಅದೊಂದು ಮಮತಾಪೂರ್ಣ ಸಮಾರೋಪವೆಂದು ಭಾವಿಸುತ್ತೇನೆ.
… ಮುಂದುವರೆಯುವುದು
- ಕಾವ್ಯ ಎಂಬ ಒಗಟು:
ಭಾಗ ೧: https://ruthumana.com/2020/08/24/borges-craft-of_verses-riddles-of-poetry-1/
ಭಾಗ ೨: https://ruthumana.com/2020/09/04/borges-craft-of_verses-riddles-of-poetry-2/
2. ರೂಪಕ:
ಭಾಗ ೧: https://ruthumana.com/2020/10/18/borges-craft-of_verses-the-metaphor-1/
ಭಾಗ ೨: https://ruthumana.com/2020/12/31/borges-craft-of_verses-the-metaphor-2/
3. ಕಥೆಯ ನಿರೂಪಣೆ:
ಪೂರ್ಣ ಭಾಗ: https://ruthumana.com/2021/05/11/borges-craft-of_verses-the-narrating_a_story/
4. ಪದ-ನಾದ ಮತ್ತು ಅನುವಾದ
ಪೂರ್ಣ ಭಾಗ: https://ruthumana.com/2021/06/06/word_rythm_translation/
ಕಮಲಾಕರ ಕಡವೆ ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರ್ಶಿಯ ಕಡವೆ ಗ್ರಾಮದವರು.
ಈಗ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಕಾಲೇಜು ಪ್ರಾಧ್ಯಾಪಕರಾಗಿದ್ದರೆ.
ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯುವ, ಅನುವಾದ ಮಾಡಿರುವ ಅವರು ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ.