ಹಿಂಸೆ ಮತ್ತು ಪ್ರೇಮಾನುಸಂಧಾನಗಳ ‘ಗುಂಡಿಗೆಯ ಬಿಸಿರಕ್ತ’

ಕೇಶವ ಮಳಗಿಯವರು ತಮ್ಮ ವಿಶಿಷ್ಟ ಧ್ವನಿಯ, ಭಾಷೆಯ ಕಥೆಗಳು ಮತ್ತು ಕಾದಂಬರಿಗಳಿಂದ ಕನ್ನಡದ ಓದುಗರಿಗೆ ಪರಿಚಿತರು. ಅನುವಾದದಲ್ಲಿಯೂ ಅನುಪಮವಾಗಿ ಕೆಲಸ ಮಾಡಿರುವ ಅವರ ಹತ್ತಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ. ರಂಗನಾಥ ಕಂಟನಕುಂಟೆಯವರು, ಕೇಶವ ಮಳಗಿಯವರ ಹೊಸ ಪುಸ್ತಕ “ಗುಂಡಿಗೆಯ ಬಿಸಿರಕ್ತ”ವನ್ನು ಪರಿಚಯಿಸುತ್ತ ಈ ಕೆಳಗಿನ ಬರಹದಲ್ಲಿ ಗುರುತಿಸುವ ಹಾಗೆ, ಯೂರೋಪಿನ ಕಣ್ಣುಗಳ ಮೂಲಕ ಮಾತ್ರವೇ ಕನ್ನಡದಲ್ಲಿ ಪರಿಚಿತವಾದ ಆಫ್ರಿಕನ್ ಸಾಹಿತ್ಯವನ್ನು, ಚಿಂತನೆಗಳನ್ನು ಮೀರಿ, ೫೩ ದೇಶಗಳಿರುವ, ಅಸಂಖ್ಯಾತ ಸಂಸ್ಕೃತಿ-ಭಾಷೆಗಳಿಂದ ದಟ್ಟವಾದ ಆಫ್ರಿಕಾದ ಬಹುತ್ವವ್ಚನ್ನು ಅರ್ಥ ಮಾಡಿಕೊಳ್ಳುವ-ಅನುಸಂಧಾನಿಸುವ ಅಗತ್ಯವಿದೆ. ತಮ್ಮ ಸೂಕ್ಷ್ಮವಾದ ಹಾಗೂ ಅಧ್ಯಯನಪೂರ್ವಕ ಒಳನೋಟಗಳಿಂದ ಕನ್ನಡವನ್ನು ಸುಪುಷ್ಟಗೊಳಿಸುತ್ತಿರುವ ರಂಗನಾಥ್, ಇಲ್ಲಿ ಮಳಗಿಯವರ ಹೊಸ ಪುಸ್ತಕದ ಪ್ರವೇಶಿಕೆಯನ್ನು ಋತುಮಾನದ ಓದುಗರಿಗಾಗಿ ಮಾಡಿಕೊಟ್ಟಿದ್ದಾರೆ.

ಸಾಹಿತ್ಯವನ್ನು ಕುರಿತು ಮತ್ತೆ ಮತ್ತೆ ಯೋಚಿಸುವಾಗಲೆಲ್ಲಾ ಒಂದು ಕೇಳ್ವಿ ಎದುರಾಗುತ್ತದೆ. ಅದೇನೆಂದರೆ, ಕಲೆ ಮತ್ತು ಸಾಹಿತ್ಯವು ಸದಾ ಎದುರುಗೊಳ್ಳುವ ‘ವಸ್ತು’ ಯಾವುದು? ಆಗ ಕಣ್ಮುಂದೆ ಬರುವ ವಸ್ತುವೆಂದರೆ ‘ಹಿಂಸೆ’. ಈ ಹಿಂದಿನ ಬರೆಹವೊಂದರಲ್ಲಿಯೂ ಇದೇ ಪ್ರಶ್ನೆ ಎದುರಾಗಿತ್ತು. ವಿರಾಟ್ ರೂಪ ಪಡೆದಿರುವ ‘ಹಿಂಸೆ’ಯನ್ನು ಎದುರುಗೊಳ್ಳುತ್ತ ಅದಕ್ಕೆ ಮದ್ದಾಗಿ ‘ಜೀವಜಲ’ದಂತೆ ಎದುರು ನಿಲ್ಲುವ ಮತ್ತೊಂದು ವಸ್ತು-ಜೀವನ ಮೌಲ್ಯವೆಂದರೆ ಅದು ‘ಪ್ರೇಮ’. ಇದು ಬಿಡುಗಡೆ ಮತ್ತು ಸಮಾನತೆಯ ಕನಸೂ ಹೌದು. ಎಲ್ಲ ಕಲೆಗಳು ಮತ್ತು ಸಾಹಿತ್ಯ ‘ಹಿಂಸೆ’ಯ ನಾನಾ ಬಗೆಗಳನ್ನು ಎದುರುಗೊಳ್ಳುತ್ತ ತಮ್ಮ ಆತ್ಯಂತಿಕ ಕಾಣ್ಕೆಯಾಗಿ ಪ್ರೇಮದರ್ಶನ ಮಾಡಿಸುತ್ತವೆ. ಇದನ್ನು ಗಮನಿಸಿದರೆ ಹಿಂಸೆ ಬದಲಿಯಾಗಿ ಪ್ರೇಮತತ್ವ ಮಂಡಿಸಿರುವುದು ನಮ್ಮ ಅನುಭವಕ್ಕೆ ಬರುತ್ತದೆ. ಹೀಗೆ ಅನುಸಂಧಾನ ನಡೆಸುವ ಕೆಲಸವನ್ನು ಯಾವುದೋ ಒಂದು ಭಾಶೆ ಒಂದು ದೇಶದ ಜನರು ಮಾತ್ರ ನಡೆಸಿಲ್ಲ. ಕಾಲ ದೇಶ ಭಾಶೆಗಳನ್ನು ಮೀರಿ ಎಲ್ಲ ದೇಶಗಳ ಎಲ್ಲ ಕಾಲಗಳ ಎಲ್ಲ ಭಾಶೆಗಳ ಜನರು ಹಿಂಸೆಯನ್ನು ಎದುರುಗೊಂಡಿದ್ದಾರೆ. ಅದನ್ನು ನಿತ್ಯ ಎದುರುಗೊಳ್ಳುತ್ತಲೇ ಬದುಕಿಗೆ ಬೇಕಾದ ಅತ್ಯಂತ ಮೂಲಭೂತ ಜೀವಜಲವಾಗಿ ‘ಪ್ರೇಮತತ್ವ’ವನ್ನು ಕಂಡುಕೊಂಡಿದ್ದಾರೆ.

ಇಲ್ಲಿ ಹಿಂಸೆಯ ಬಗೆಗಳನ್ನು ವಿವರಿಸಿಕೊಳ್ಳಬಹುದೆನಿಸುತ್ತದೆ. ‘ಹಿಂಸೆ’ಯು ಎರಡು ನೆಲೆಗಳಲ್ಲಿ ಸೃಶ್ಟಿಯಾಗುತ್ತದೆ. ಒಂದು ನಿಸರ್ಗ ಕೇಂದ್ರಿತ ನೆಲೆ. ಎರಡು ಮನುಶ್ಯರ ಸ್ವಾರ್ಥದಿಂದ ಹುಟ್ಟುವ ಸಂಘಟಿತ ನೆಲೆಯ ಹಿಂಸೆ. ಇದರಲ್ಲಿ ನಿಸರ್ಗ ಕೇಂದ್ರಿತವಾದ ಹಿಂಸೆಯ ಬಗೆಗೆ ಜನರು ಅಶ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಅದನ್ನು ಮೀರಲೂ ಸಾಧ್ಯವಿರುವುದಿಲ್ಲ. ಹಾಗಾಗಿ ಅದನ್ನು ಅನಿವಾರ್ಯವಾಗಿ ಒಪ್ಪಿಕೊಂಡೇ ಸಾಗಬೇಕಿರುತ್ತದೆ. ಜನರು ಅದನ್ನು ಎಂದಿಗೂ ಮಾಡುತ್ತಲೇ ಬಂದಿದ್ದಾರೆ. ನೈಸರ್ಗಿಕವಾಗಿ ಎಶ್ಟೊಂದು ಅವಘಡಗಳು ಸಂಭವಿಸಿ ಸಾವು ನೋವಾಗಿವೆ; ಅದೆಲ್ಲವನ್ನು ಇತರೆ ಜೀವಿಗಳಂತೆ ಜನರ ಅರಗಿಸಿಕೊಂಡು ತಮ್ಮ ಜೀವನವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ಆದರೆ ಮನುಶ್ಯರು ತಮ್ಮ ಸ್ವಾರ್ಥ-ದುರಾಸೆಗಳಿಗೆ ವ್ಯವಸ್ಥಿತ ಮತ್ತು ಸಂಘಟಿತವಾಗಿ ಸೃಶ್ಟಿಸುವ ‘ಹಿಂಸೆ’ ಬಹಳ ಕ್ರೂರವಾದುದು. ಇದಕ್ಕೆ ಒಂದು ಉದಾಹರಣೆಯನ್ನು ಇಲ್ಲಿ ನೀಡಬಹುದು. ಆಫ್ರಿಕಾದಲ್ಲಿ ವಜ್ರದ ಗಣಿಗಾರಿಕೆಯಿಂದಾಗಿ ನಡೆದಿರುವ ಹಿಂಸೆಯ ಬಗೆಗೆ ಅಂಗೋಲಾದಲ್ಲಿ ಕೇಂದ್ರ ಸರ್ಕಾರ ನೌಕರರಾಗಿ ಕೆಲಸ ಮಾಡಿದ ಪ್ರಸಾದ್ ನಾಯ್ಕ್ ‘ಹಾಯ್ ಅಂಗೋಲಾ’ ಎಂಬ ತಮ್ಮ ಪ್ರವಾಸ ಕಥನದಲ್ಲಿ ನೀಡಿರುವ ಒಂದು ವಿವರಣೆ ಭಯಾನಕವಾಗಿದೆ.  “ಆಫ್ರಿಕಾದ ಕೆಲ ಭಾಗಗಳಿಂದ ಹೊರತೆಗೆಯಲಾಗುವ ವಜ್ರಗಳನ್ನು ‘ಬ್ಲಡ್ ಡೈಮಂಡ್’ ಎಂದು ವಿಶ್ವಸಂಸ್ಥೆ ಕರೆದಿರುವುದು ಸುಮ್ಮನೆಯಲ್ಲ. ಅವು ನಿಜಕ್ಕೂ ರಕ್ತಸಿಕ್ತ ವಜ್ರಗಳೇ. ಸಾವಿರಾರು ಬಡ ಕಾರ್ಮಿಕರ ರಕ್ತ ಕುಡಿದು ಹೊಳೆಯುತ್ತಿರುವ ವಜ್ರಗಳು. ಲಕ್ಶಾಂತರ ಆಫ್ರಿಕನ್ನರ ಜೀವನವನ್ನೇ ಶಾಶ್ವತವಾಗಿ ಹೊಸಕಿಹಾಕಿ ತಮ್ಮ ಹೊಳಪಿನಿಂದ ಈ ದೌರ್ಜನ್ಯದ ಕಥೆಗಳನ್ನು ಮರೆಮಾಚಿರುವ ವಜ್ರಗಳು. ರಕ್ತಕ್ಕಿಂತ ಸಾವಿರಾರು ಪಟ್ಟು ಹೆಚ್ಚು ಸಂಪತ್ತು ಹರಿದುಬಂದಿದೆ ಎಂಬ ಒಂದೇ ಒಂದು ಕಾರಣಕ್ಕಾಗಿ ಕಣ್ಣೆದುರಿಗೇ ಎಲ್ಲವೂ ನಡೆಯುತ್ತಿದ್ದರೂ ಏನೂ ನಡೆಯುತ್ತಿಲ್ಲವೆಂಬಂತೆ ಅಧಿಕಾರಸ್ಥರ, ಪ್ರಬಲರ ಎಲ್ಲಾ ಇಂದ್ರಿಯಗಳನ್ನು ಮುಚ್ಚಿಸಿಬಿಟ್ಟ ಅಮೂಲ್ಯ ವಜ್ರಗಳು”. (ಪು.202) ಎಂದಿದ್ದಾರೆ. ಅವರ ಈ ಮಾತು ವಜ್ರದ ಗಣಿಗಾರಿಕೆ ಆಫ್ರಿಕಾದ ಜನರನ್ನು ಹೇಗೆ ನಾಶ ಮಾಡಿದೆ; ಅಲ್ಲಿನ ಜನರು ಅದೆಶ್ಟು ನೆತ್ತರನ್ನು ಸುರಿಸಿದ್ದಾರೆ ಎಂಬುದನ್ನು ಸ್ಪಶ್ಟಪಡಿಸುತ್ತದೆ. ಹಾಗೆಯೇ ಆಫ್ರಿಕನ್ನರ ಬೇಟೆ ಮತ್ತು ವ್ಯಾಪಾರಗಳ ಕೌರ್ಯವನ್ನು ಅಲೆಕ್ಸ್ ಹೆಲಿಯ ‘ದಿ ರೂಟ್ಸ್’ (ತಲೆಮಾರು:ಅನು-ಬಂಜಗೆರೆ ಜಯಪ್ರಕಾಶ್) ಕಾದಂಬರಿ ನಿರೂಪಿಸಿರುವುದನ್ನು ಇಲ್ಲಿ ಗಮನಿಸಬಹುದು. ಇಂತಹ ಅಸಂಖ್ಯ ಉದಾಹರಣೆಗಳನ್ನು ಆಫ್ರಿಕಾದ ಸಾಹಿತ್ಯ, ಚರಿತ್ರೆ ಮತ್ತು ವರ್ತಮಾನದ ಬದುಕಿನಿಂದ ಹೊರತೆಗೆದು ಎತ್ತುಗೆಯಾಗಿ ನೀಡಬಹುದು. ಇಶ್ಟೆಲ್ಲಾ ಹಿಂಸೆಯನ್ನು ಅನುಭವಿಸಿಯೂ ಆಫ್ರಿಕಾದ ಜನತೆ ತಮ್ಮ ಬದುಕುವ ಅದಮ್ಯ ಉತ್ಸಾಹವನ್ನು ಎಂದಿಗೂ ಬಿಟ್ಟುಕೊಡದಿರುವುದು ಗಮನಾರ್ಹ ಸಂಗತಿ.

ಆಫ್ರಿಕಾದಲ್ಲಿ ಇಂತಹ ಹಿಂಸೆಯನ್ನು ವಸಾಹತುಶಾಹಿಗಳು ಮತ್ತು ಅವರ ಉತ್ತರಾಧಿಕಾರಿಗಳು ಧರ್ಮ, ನಾಗರಿಕತೆ, ಅಭಿವೃದ್ಧಿ ಮತ್ತು ಸಂಸ್ಕøತಿಗಳ ಹೆಸರಿನಲ್ಲಿ ನಡೆಸಿರುವುದು ಮತ್ತು ಇಂದಿಗೂ ಅದನ್ನು ಮುಂದುವರಿಸಿದ್ದಾರೆ. ಇಂದು ಹಲವು ದೇಶಗಳು ಸರ್ವಾಧಿಕಾರಿಗಳ ಕಪಿಮುಶ್ಟಿಯಲ್ಲಿ ಸಿಕ್ಕಿ ನರಳುತ್ತಿವೆ. ಈ ಸಂಘಟಿತ ಹಿಂಸೆ ಎರಡು ನೆಲೆಯಲ್ಲಿರುತ್ತದೆ. ಒಂದು ದೈಹಿಕವಾದ ಹಿಂಸೆ ಮತ್ತು ಮತ್ತೊಂದು ಮಾನಸಿಕ ಹಿಂಸೆ. ಮನುಶ್ಯ ನಿರ್ಮಿತವಾದ ಈ ಬಗೆಯ ಹಿಂಸೆಗಳನ್ನು ಮೀರಬಹುದಾಗಿದೆ. ಮಾನವರ ಪ್ರಯತ್ನದಿಂದ ತಪ್ಪಿಸಲು ಸಾಧ್ಯವಿದೆ. ಆದರೆ ಸ್ಥಾಪಿತ ಸಮಾಜ ಮತ್ತು ಆಳುವ ವರ್ಗ ಹಾಗೂ ಪ್ರಭುತ್ವ ಇದನ್ನು ಬದಲಿಸಲು ಇಚ್ಚಿಸುವುದಿಲ್ಲ. ಯಾಕೆಂದರೆ, ಇಂತಹ ಹಿಂಸೆಯ ತಳಹದಿಯ ಮೇಲೆ ಸಾಮಾಜಿಕ-ರಾಜಕೀಯ ವ್ಯವಸ್ಥೆ ರೂಪುಗೊಂಡಿರುವುದರಿಂದ ಅದನ್ನು ಬಿಟ್ಟುಕೊಡಲು ಆಳುವವರು ತಯಾರಿರುವುದಿಲ್ಲ. ಹಾಗಾಗಿ ಆಳುವ ವರ್ಗಗಳು ಯುದ್ಧ, ಅಭಿವೃದ್ಧಿಯ ಹೆಸರಿನಲ್ಲಿ ಜೀವಸಂಕುಲಗಳ ಮೇಲಣ ಆಕ್ರಮಣ, ಜಾತಿವ್ಯವಸ್ಥೆ, ಲಿಂಗಭೇದ, ಪಿತೃಪ್ರಧಾನತೆ, ವರ್ಣಭೇದ, ವರ್ಗಭೇದ ಮತ್ತು ಪ್ರಭುತ್ವಗಳ ಸರ್ವಾಧಿಕಾರಿ ಧೋರಣೆಗಳಿಂದ ನಿರಂತರವಾಗಿ ಹಿಂಸೆಯನ್ನು ಉತ್ಪಾದಿಸುತ್ತವೆ. ಅಲ್ಲದೆ ಆಳುವವರ ಜನವಿರೋಧಿತನವನ್ನು ಪ್ರತಿಭಟಿಸುವ ಜನರ ಮೇಲೆ ದಾಳಿ-ಹತ್ಯೆಗಳ ಮೂಲಕ ಪ್ರಭುತ್ವವೇ ಹಿಂಸೆಯನ್ನು ಸೃಶ್ಟಿಸುತ್ತದೆ. ಇದಕ್ಕೆ ಕಾನೂನು, ಸೇನೆ-ಪೋಲಿಸ್ ಮತ್ತು ನ್ಯಾಯಾಲಯಗಳನ್ನು ಬಳಸಲಾಗುತ್ತದೆ. ಆಳುವವರು ನಡೆಸುವ ಗೂಢಾಚಾರಿಕೆ ಹಿಂಸೆಗೆ ಸೋಪಾನಗಳನ್ನು ಸೃಶ್ಟಿಸುತ್ತದೆ. ಇದನ್ನು ಗಮನಿಸಿದರೆ ಹಿಂಸೆ ಯಾವುದೇ ಸಮಾಜದಲ್ಲಿ ಆಕಸ್ಮಿಕವಾಗಿ ಹುಟ್ಟುವುದಿಲ್ಲ. ಬದಲಿಗೆ ಅದು ಆಳುವಳರ ಹುನ್ನಾರಗಳಿಂದ ವ್ಯವಸ್ಥಿತವಾಗಿ ಸೃಶ್ಟಿಯಾಗುತ್ತಿರುತ್ತದೆ. ಆಳುವವರ ಹಿಂಸಾರತಿಯ ಮೂಲಕ ಜನರ ಸಂಪತ್ತನ್ನು ಕಾನೂನುಬದ್ದವಾಗಿ ದರೋಡೆ ಮಾಡಲಾಗುತ್ತಿರುತ್ತದೆ. ಇದರ ಪರಿಣಾಮವಾಗಿ ಹಿಂಸೆಯ ಹಲವು ದೇಶಗಳಲ್ಲಿ ಸಹಜ ವಿದ್ಯಮಾನ ಎಂಬಂತಾಗಿದೆ. ಆದರೆ ಇದನ್ನು ಅರ್ಥಮಾಡಿಕೊಳ್ಳುವಲ್ಲಿ ನಮ್ಮ ಸಮಾಜ, ಲೇಖಕರು ವಿಫಲಗೊಳ್ಳುತ್ತಿರುವುದು ಶೋಚನೀಯವಾದುದು.

ಮನುಶ್ಯರ ಇಂತಹ ಸ್ವಾರ್ಥಕೇಂದ್ರಿತ ಹಿಂಸೆಯನ್ನು ನಿವಾರಿಸಿಕೊಂಡು ನೆಮ್ಮದಿ ಮತ್ತು ಸಮಾನತೆಯ ಬದುಕನ್ನು ಕಾಣುವ ಪ್ರೇಮತತ್ವದ ಹಂಬಲದೊಂದಿಗೆ ಜನರು ಕಲೆ ಸಾಹಿತ್ಯವನ್ನು ಸೃಶ್ಟಿಸುತ್ತಾರೆ. ಅಂದರೆ ಸಮಾನತೆಯ ತಳಹದಿಯ ಮೇಲೆ ನೆಮ್ಮದಿಯ ಜೀವನ ನಡೆಸುವ ಕನಸುಗಳುಳ್ಳ ಆಶಯದೊಂದಿಗೆ

 ಸಾಹಿತ್ಯ-ಕಲೆಗಳು ರಚನೆಗೊಂಡಿರುತ್ತವೆ. ಯಾವುದೇ ಕಲಾಕೃತಿ ಇಲ್ಲವೇ ಸಾಹಿತ್ಯ ಕೃತಿ ಹಿಂಸೆಯನ್ನು ವೈಭವೀಕರಿಸಿ ಅದನ್ನು ಸಮರ್ಥಿಸಿಕೊಂಡು ಮಹತ್ವದ ಸಾಹಿತ್ಯ ಕೃತಿಯಾಗಿ ಇಲ್ಲವೇ ಕಲಾಕೃತಿಯಾಗಿ ಬಿಂಬಿತವಾಗಿಲ್ಲ. ಅವು ‘ಹಿಂಸೆ’ಯ ರುದ್ರದರ್ಶನ ಮಾಡಿಸುತ್ತಲೇ ಅದರಿಂದ ಬಿಡುಗಡೆಗೊಳ್ಳಬೇಕಾದ ಅಗತ್ಯವನ್ನು ಧ್ವನಿಸುತ್ತಿರುತ್ತವೆ. ಇಂತಹ ಧ್ವನಿಯನ್ನು ಗಮನಿಸಿದಾಗ ಜಗತ್ತಿನ ಕಲೆ-ಸಾಹಿತ್ಯಗಳು ನಿರಂತರವಾಗಿ ಹಿಂಸೆಯನ್ನು ವಿರೋಧಿಸುತ್ತ ‘ಪ್ರೇಮತತ್ವ’ದÀ ಜೊತೆಗೆ ಅನುಸಂಧಾನ ನಡೆಸಿರುವುದನ್ನು ಕಾಣಬಹುದು. ಜಗತ್ತಿನ ಎಲ್ಲ ಮಹಾಕಾವ್ಯಗಳೂ ಇದನ್ನೇ ಧ್ವನಿಸುತ್ತಿವೆ. ಉದಾಹರಣೆಗೆ ರನ್ನನ ‘ಗದಾಯುದ್ಧ’ದಲ್ಲಿ ದುರ್ರ್ಯೋಧನ ಏಕಾಂಗಿಯಾಗಿ ಯುದ್ಧಭೂಮಿಯಲ್ಲಿ ನಡೆಯುತ್ತಾನೆ. ಮರುಳ್ಗಳು ಅವನನ್ನು ಛೇಡಿಸುತ್ತವೆ. ಈ ಸಂದರ್ಭವು ದುರ್ಯೋಧನನಿಗೆ ಹಿಂಸೆ ಭೀಕರತೆಯ ದರ್ಶನ ಮಾಡಿಸುತ್ತದೆ. ಅಲ್ಲದೆ ಹಾಗೆ ಹಿಂಸೆಯ ಕರಾಳ ರೂಪವನ್ನು ತೋರಿಸುತ್ತಲೇ ಅದರಿಂದ ಮನುಶ್ಯರು ಹೊರಬರಬೇಕಾದ ಅಗತ್ಯವನ್ನು ಆ ಸಂದರ್ಭ ಧ್ವನಿಸುತ್ತದೆ. ಅದೇ ಸಾಹಿತ್ಯದ ನಿಜವಾದ ಕ್ರಿಯೆಯಾಗಿರುತ್ತದೆ. ಕುವೆಂಪು ಅವರ ‘ಸ್ಮಶಾನ ಕುರುಕ್ಶೇತ್ರ’ ನಾಟಕವೂ ಇದೆ ಬಗೆಯದು. ರಾಮಾಯಣದಂತಹ ಮಹಾಕಾವ್ಯ ವೈದಿಕರ ಪ್ರಣಾಳಿಕೆಯಂತೆ ಕೆಲಸ ಮಾಡಿದರೂ ಅದರ ಆಳದಲ್ಲಿ ಹಿಂಸೆಯ ಅನಾವರಣ ಮತ್ತು ಪ್ರೇಮದ ಉತ್ಕನನವಿದೆ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’

ಕಾದಂಬರಿಯನ್ನೂ ಇದಕ್ಕೆ ಎತ್ತುಗೆಯಾಗಿ ಗಮನಿಸಬಹುದು.

ಸದ್ಯ ಇದಿಶ್ಟನ್ನು ಇಲ್ಲಿ ಪ್ರಸ್ತಾಪಿಸಿದ ಉದ್ದೇಶವೆಂದರೆ ಕನ್ನಡದ ಪ್ರಮುಖ ಕಥೆಗಾರರಾದ ಕೇಶವ ಮಳಗಿ ಅವರು ಆಫ್ರಿಕನ್ ಲೇಖಕರ ವೈಚಾರಿಕ ಮತ್ತು ಸೈದ್ಧಾಂತಿಕ ಬರೆಹಗಳನ್ನು ಕನ್ನಡದಲ್ಲಿ ಅನುಸೃಶ್ಟಿಸಿದ್ದಾರೆ. ಈ ಅನುಸೃಶ್ಟಿಯ ಫಲವೇ ‘ಗುಂಡಿಗೆಯ ಬಿಸಿರಕ್ತ’ ಕೃತಿ. ಈ ಹಿಂದೆ ಆಫ್ರಿಕನ್ ಸಾಹಿತ್ಯವನ್ನು ಕನ್ನಡಕ್ಕೆ ಪರಿಚಯಿಸುವ ಹಲವು ಪ್ರಯತ್ನಗಳು ನಮ್ಮಲ್ಲಿ ನಡೆದಿವೆ. ಡಾ. ಎಚ್.ಎಸ್. ರಾಘವೇಂದ್ರರಾವ್ ಅವರು ‘ಕಪ್ಪುಕವಿತೆ’ ಎಂಬ ಹೆಸರಿನಲ್ಲಿ ಆಫ್ರಿಕಾ ಖಂಡದ ನೂರು ಕವಿತೆಗಳನ್ನು ಕನ್ನಡೀಕರಿಸಿಕೊಟ್ಟಿದ್ದಾರೆ. ಆ ಮೂಲಕ ಆಫ್ರಿಕನ್ ದೇಶಗಳ ಜನರ ಸಂವೇದನಾಶೀಲತೆಯನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ. ಹಾಗೆಯೇ ಪ್ರೊ. ಪ್ರಮೋದ್ ಮುತಾಲಿಕ್ ಅವರು ಚಿನುವಾ ಅಚಿಬೆಯವರ ‘ಥಿಂಗ್ಸ್ ಫಾಲ್ ಅಪಾರ್ಟ್’ ಕಾದಂಬರಿಯನ್ನು ‘ಕಳಚಿಕೊಂಡಿ’ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಡಾ. ಬಂಜಗೆರೆ ಜಯಪ್ರಕಾಶ್ ಅವರು ಗೂಗಿವಾ ಥಿಯಾಂಗೊ ಅವರ ‘ಡೆವಿಲ್ ಆನ್ ದಿ ಕ್ರಾಸ್’ ಕಾದಂಬರಿಯನ್ನು ‘ದೇಗುಲದಲ್ಲಿ ದೆವ್ವ’ ಎಂದು ಅನುವಾದಿಸಿದ್ದಾರೆ. ಜಗದೀಶ್ ಕೊಪ್ಪ ಅವರು ವಾರಿಸ್ ಡಿರಿ ಅವರ ‘ದಿ ಡೆಸರ್ಟ್ ಫ್ಲವರ್’ ಎಂಬ ಆತ್ಮಕತೆಯನ್ನು ‘ಮರಳು

ಗಾಡಿನ ಹೂವು’ ಎಂದು ಅನುವಾದಿಸಿದ್ದಾರೆ. ಡಾ. ಸಿ. ನಾಗಣ್ಣ ಅವರು ಗೂಗಿಯವರ ‘ವೀಪ್ ನಾಟ್ ಚೈಲ್ಡ್’ ಕಾದಂಬರಿಯನ್ನು ‘ಅಳಬೇಡ ಕಂದ,’ ಎಂದು ಈಚೆಗೆ ಅನುವಾದಿಸಿದ್ದಾರೆ. ಹಾಗೆಯೇ ಗೂಗಿ ವಾ ಥಿಯಾಂಗೋ ಅವರ ‘ಡಿಕಲೊನೈಸಿಂಗ್ ದಿ ಮೈಂಡ್’ ಎಂಬ ಕೃತಿಯನ್ನು ಪ್ರೊ. ರಹಮತ್ ತರೀಕೆರೆ ಅವರು ‘ವಸಾಹತು ಪ್ರಜ್ಞೆ ಮತ್ತು ವಿಮೋಚನೆ’ ಎಂದು ಸಂಗ್ರಹಾನುವಾದ ಮಾಡಿದ್ದಾರೆ. ಪ್ರೊ. ನಟರಾಜ್ ಹುಳಿಯಾರ್, ಪ್ರೊ. ಗಂಗಾಧರಯ್ಯ ಅವರ ಜೊತೆಗೂಡಿ ಕೇಶವ ಮಳಗಿಯವರು ‘ಆಫ್ರಿಕಾ ಸಾಹಿತ್ಯ ವಾಚಿಕೆ’ಯನ್ನು ಸಿದ್ದಪಡಿಸಿದ್ದಾರೆ. ಇದಲ್ಲದೆ ಪ್ರೊ. ನಟರಾಜ್ ಹುಳಿಯಾರ್ ಅವರು ಆಫ್ರಿಕನ್ ಮತ್ತು ಕನ್ನಡ ಸಾಹಿತ್ಯಗಳ ತೌಲನಿಕ ಅಧ್ಯಯನ ಕೃತಿಯಾದ ‘ಆಫ್ರಿಕನ್ ಮತ್ತು ಕನ್ನಡ ಸಾಹಿತ್ಯದಲ್ಲಿ ಆಧುನಿಕತೆ ಮತ್ತು ಪರಂಪರೆ’ ಎಂಬ ಕೃತಿಯಲ್ಲಿ ಆಫ್ರಿಕಾದ ನಿರೂಪಣೆಯಿದೆ. ಇವೆಲ್ಲ ಕೃತಿಗಳೂ ಆಫ್ರಿಕಾ ಖಂಡದ ವಿವಿಧ ದೇಶಗಳ ಜನರ ಜೀವನ, ರಾಜಕೀಯ ದುರಾಡಳಿತ, ಹೋರಾಟಗಳನ್ನು ಪರಿಚಯಿಸುವ ಕೆಲಸ ಮಾಡಿವೆ. ಹೀಗೆ ಅನೇಕ ಕೃತಿಗಳು ಕನ್ನಡಕ್ಕೆ ಅನುವಾದವಾಗಿವೆ. ಇಲ್ಲಿಯವರೆಗೂ ಆಫ್ರಿಕನ್ ಲೇಖಕರ ಕವಿತೆಗಳು ಕಥೆಗಳು ಕಾದಂಬರಿಗಳು ಹೆಚ್ಚು ಅನುವಾದವಾಗಿದ್ದವು. ಈ ಕೃತಿಯಲ್ಲಿ ಹೆಚ್ಚು ಸೈದ್ದಾಂತಿಕ, ವೈಚಾರಿಕ ಮತ್ತು ವಿಮರ್ಶಾತ್ಮಕವಾದ ಗದ್ಯ ಬರೆಹಗಳಿವೆ. ಇದು ಈ ಕೃತಿಯ ವಿಶೇಶ ಅಂಶ. ಯುರೋಪಿಯನ್ ಭಾಶೆಗಳಿಂದ ಇದುವರೆಗೂ ಸೈದ್ಧಾಂತಿಕ ಬರೆಹಗಳು ಹೆಚ್ಚು ಅನುವಾದವಾಗುತ್ತಿದ್ದವು. ಸದ್ಯ ಆ ಯಜಮಾನಿಕೆಯಿಂದ ಹೊರಬರಬೇಕಿರುವುದರ ಸೂಚನೆಯಂತೆ ಆಫ್ರಿಕನ್ ದೇಶಗಳ ಅರಿವನ್ನು ಸ್ವೀಕರಿಸಲು ಪ್ರಯತ್ನಿಸಿರುವುದು ಮುಖ್ಯಸಂಗತಿ.

ಆಫ್ರಿಕಾದ ಸಂದರ್ಭ ಮತ್ತು ಭಾರತದ ಸಂದರ್ಭಗಳ ನಡುವೆ ಅನೇಕ ಸಾಮ್ಯ ಅಂಶಗಳು ಇರುವುದು ಆಫ್ರಿಕನ್ ಸಾಹಿತ್ಯ ಕನ್ನಡೀಕರಿಸಲು ಇರುವ ಪ್ರಮುಖ ಪ್ರೇರಣೆ. ಅಲ್ಲದೇ ವಸಾಹತೋತ್ತರ ಸಂದರ್ಭದಲ್ಲಿ ಆಫ್ರಿಕಾದ ದೇಶಗಳಲ್ಲಿ ಸಂಭವಿಸಿದ ದುರಂತಗಳ ಬಗೆಗೆ ಕನ್ನಡ ಮನಸ್ಸು ಸ್ಪಂದಿಸಿದೆ. ನೆಲ್ಸನ್ ಮಂಡೇಲಾ, ಕೆನ್ ಸಾರೋ ವಿವಾ ಅವರ ಹೋರಾಟಗಳಿಗೂ ಧ್ವನಿಗೂಡಿಸಿದೆ. ಈ ಇಬ್ಬರನ್ನು ಕುರಿತು ಕನ್ನಡದಲ್ಲಿ ಕವಿತೆಗಳೂ ರಚನೆಯಾಗಿವೆ.  ಹೀಗೆ ಸ್ಪಂದಿಸುವ ಮತ್ತು ಆ ಸಾಹಿತ್ಯ ಸಂವೇದನೆಯನ್ನು ತನ್ನದನ್ನಾಗಿಸಿಕೊಳ್ಳುವ ಕೆಲಸವನ್ನು ಕನ್ನಡ ಮನಸ್ಸು ಮಾಡುತ್ತಲೇ ಬಂದಿದೆ. ಅದರ ಮುಂದುವರಿಕೆಯಾಗಿ ‘ಗುಂಡಿಗೆಯ ಬಿಸಿರಕ್ತ’ ಕೃತಿಯಿದೆ. ಕೇಶವ ಮಳಗಿಯವರು ಇದಶ್ಟೇ ಅಲ್ಲದೆ ಈ ಮೊದಲು ಇಂಗ್ಲಿಶ್, ಫ್ರೆಂಚ್ ಮತ್ತು ವಿವಿಧ ಭಾಶೆಗಳ ಮಹತ್ವದ ಸಾಹಿತ್ಯ ಕೃತಿಗಳನ್ನು ಕನ್ನಡೀಕರಿಸಿದ್ದಾರೆ. ಆಲ್ಬರ್ಟ್ ಕಮೂ ವಾಚಿಕೆ, ಫ್ರೆಂಚ್ ಕಥಾ ಸಾಹಿತ್ಯ, ಆಫ್ರಿಕನ್ ಸಾಹಿತ್ಯ ವಾಚಿಕೆ ಹೀಗೆ ಹಲವು ಪಠ್ಯಗಳನ್ನು ಕನ್ನಡಿಗರಿಗೆ ಕೊಟ್ಟಿದ್ದಾರೆ. ಅವರ ಆಯ್ಕೆ, ಅನುಸೃಶ್ಟಿಯನ್ನು ಗಮನಿಸಿದರೆ ಅದರ ಹಿಂದಿನ ಕಾಳಜಿ ಮತ್ತು ಅವರ ಸಾಹಿತ್ಯ ಸಂವೇದನೆ, ತಿಳುವಳಿಕೆ ಸ್ಪಶ್ಟವಾಗುತ್ತದೆ. ವರ್ತಮಾನದ ಸಂದರ್ಭದಲ್ಲಿ ನಮ್ಮ ಸಮಾಜದಲ್ಲಿ ಏನಾಗುತ್ತಿದೆ? ಇದನ್ನು ಹೇಗೆ ಎದುರಿಸಬೇಕು? ಇದಕ್ಕೆ ಬೇಕಾದ ರಾಜಕೀಯ ತಿಳುವಳಿಕೆ ಮತ್ತು ಬದ್ದತೆ ಎಂತಹದು? ಎಂಬುದರ ಬಗೆಗೆ ಅವರಿಗೆ ಸ್ಪಶ್ಟತೆಯಿದೆ. ಹಾಗಾಗಿಯೇ ‘ಮಂಪರಿನಲ್ಲಿರುವ ಕನ್ನಡ ಸಂವೇದನೆಯನ್ನು ಜಾಗೃತಗೊಳಿಸಲು ಈ ಕೃತಿಯ ಮೂಲಕ ಯತ್ನಿಸಿದ್ದಾರೆ ಎನ್ನಿಸುತ್ತಿದೆ.

ಇಲ್ಲಿ ಇನ್ನೊಂದು ಸಂಗತಿಯನ್ನು ಗಮನಿಸಬೇಕಿದೆ. ಅದೇನೆಂದರೆ, ಮೇಲೆ ಹೆಸರಿಸಿದ ಎಲ್ಲ ಕೃತಿಗಳು ಕನ್ನಡದಲ್ಲಿ ಓದಲು ಲಭ್ಯವಾಗುವ ಮೊದಲು ಆಫ್ರಿಕಾ ಖಂಡವನ್ನು ಕಗ್ಗತ್ತಲ ಖಂಡವೆಂದೂ ಅಲ್ಲಿರುವುದು ಅನಾಗರಿಕರೂ ರಾಕ್ಶಸರೂ ಎಂಬ ಅರ್ಥ ಬರುವ ಹಾಗೆ ಚಿತ್ರಿಸಲಾಗಿತ್ತು. ವಸಾಹತುಶಾಹಿಗಳು ಪ್ರಪಂಚಕ್ಕೆ ಪರಿಚಯಿಸಿದ ಆಫ್ರಿಕಾ ಖಂಡದ ಚಿತ್ರಣ ಅಮಾನುಶವಾಗಿತ್ತು. ಅಂತಹ ಚಿತ್ರಣದ ಅಪಾಯಗಳೇನು ಎಂಬುದನ್ನು ಚಿಮಮಾಂಡ ಅವರ ‘ಏಕಮುಖಿ ಕಥನದ ಅಪಾಯ’ ಎಂಬ ಲೇಖನದಲ್ಲಿ ನಿರೂಪಿತವಾಗಿದೆ. ವಸಾಹತುಶಾಹಿ ಕಣ್ಣೋಟದ ಆಫ್ರಿಕಾದ ಚಿತ್ರಣಕ್ಕೂ ಆಫ್ರಿಕಾ ಖಂಡದ ವಾಸಿಗಳಾದ ಈ ಎಲ್ಲ ಕೃತಿಗಳ ಲೇಖಕರು ಕಟ್ಟಿಕೊಡುವ ಚಿತ್ರಣಕ್ಕೂ ಎಶ್ಟೊಂದು ವ್ಯತ್ಯಾಸವಿದೆ ಎಂಬುದನ್ನು ಈ ಎಲ್ಲ ಕೃತಿಗಳು ಸ್ಪಶ್ಪಪಡಿಸುತ್ತವೆ. ಪ್ರಸ್ತುತ ಕೃತಿಯಂತೂ ಆಫ್ರಿಕನ್ ದೇಶಗಳ ಸ್ವಾಭಿಮಾನ ಮತ್ತು ಹೋರಾಟದ ಕಸುವನ್ನು ಎತ್ತಿ ತೋರಿಸುವ ಮೂಲಕ ವಸಾಹತುಶಾಹಿಯ ವಿರುದ್ಧ ಸಮರ ಸಾರಿರುವುದು ಖಚಿತವಾಗುತ್ತದೆ. ವಸಾಹತುಶಾಹಿ ಕಣ್ಣೋಟದ ಆಫ್ರಿಕಾದ ಕಲ್ಪನೆಯನ್ನು ಚಿದ್ರಗೊಳಿಸಿ ಆಫ್ರಿಕನ್ ಜನರ ನಿಜವಾದ ಚಿತ್ರಣವನ್ನು ಕಟ್ಟಿಕೊಡುತ್ತಿವೆ.

ಈ ಕೃತಿಯಲ್ಲಿ ವಿಶ್ವಪ್ರಸಿದ್ದ ಲೇಖಕರಾದ ನಜೀಬ್ ಮೆಹಫೂಸ್, ವೊಲೆ ಶೊಯಿಂಕ, ಚಿನುವಾ ಅಚಿಬೆ, ಗೂಗಿ ವಾ ಥಿಯಾಂಗೊ, ಲೆಫೊಲ್ಡ್ ಸೆಡರರ್ ಸೆಂಘಾರ್, ಲೊರೆಟ್ಟ ಎನ್ ಕೊಬೊ, ನವಲ್ ಅಲ್ ಸಾದವಿ, ಚಿಮಮಂದಾ ಎನ್ ಗೋಜಿ ಅಡಿಚೆ, ನೆಲ್ಸನ್ ಮಂಡೆಲಾ, ನದೀನ್ ಗಾರ್ಡಿಮರ್, ವಂಗಾರಿ ಮಥಾಯಿ, ಆಮಾ ಆತಾ ಆಯಿದೂ, ಜೂಲಿಯಸ್ ನೆರೆರೆಯವರನ್ನು ಒಳಗೊಂಡಂತೆ ಮೂವತ್ತು ಲೇಖಕರ ವೈವಿಧ್ಯಮಯ ಬರೆಹಗಳಿವೆ. ಈ ಎಲ್ಲರ ಬರೆಹಗಳನ್ನು ಓದಿದಾಗ ಮೇಲಿನ ವಿಚಾರ ಮನದಲ್ಲಿ ಮೂಡಿತು. ಇಲ್ಲಿನ ಬರೆಹಗಳಲ್ಲಿ ವಿವಿಧ ಬಗೆಯ ಹಿಂಸೆಯನ್ನು ಎದುರುಗೊಂಡಿರುವ ಮತ್ತು ಎದುರುಗೊಳ್ಳಬೇಕಿರುವ ತುಡಿತಗಳಿವೆ. ಆಳುವ ವರ್ಗಗಳ ಅಮಾನುಶ ಹಿಂಸೆಯಿಂದ ಬಿಡುಗಡೆಗೊಂಡು ನೆಮ್ಮದಿಯಿಂದ ಬದುಕಬೇಕೆಂದು ಬಯಸುವ ಮನುಕುಲದ ತುಡಿತವಿದೆ.

ಹಾಗೆಯೇ ಈ ಕೃತಿಯ ಬರೆಹಗಳ ಕೇಂದ್ರನೆಲೆ ಯಾವುದು? ಎಂದು ಯೋಚಿಸಿದಾಗಲೂ ಮನಸ್ಸಿನಲ್ಲಿ ಹೊಳೆದದ್ದು ಮೇಲಿನ ವಿಚಾರವೇ ಆಗಿದೆ. ಅಲ್ಲದೆ ಅಂತಹ ಹಿಂಸೆಯನ್ನು ಎದುರುಗೊಳ್ಳುವ ಮೂಲಕ ಮಾನವ ಪ್ರೇಮವನ್ನು ಸಂಗೋಪಿಸುವ ಪ್ರಯತ್ನಗಳ ಹುಡುಕಾಟವೂ ಆಗಿದೆ. ಹಾಗಾಗಿ ಸಾಹಿತ್ಯದ ಮೂಲ ಇರುವುದೇ ಹಿಂಸೆಯನ್ನು ಎದುರುಗೊಳ್ಳುವುದರಲ್ಲಿ ಮತ್ತು ಅದನ್ನು ನಿವಾರಿಸಿಕೊಳ್ಳುವುದರಲ್ಲಿ ಎನ್ನಿಸುತ್ತದೆ. ‘ಧರ್ಮ’ದ ಮೂಲವೂ ಹಿಂಸೆಯೇ ಆಗಿದೆ. ಬಸವಣ್ಣ ‘ದಯೆಯೇ ಧರ್ಮದ ಮೂಲ’ ಎನ್ನುತ್ತಾನೆ.  ಆದರೆ ಆ ದಯೆಯ ಅಗತ್ಯವಿರುವುದೇ ಹಿಂಸೆಯೆಂಬ ವಿಕೃತ ರೋಗಕ್ಕೆ ಬದಲಿ ಮದ್ದಾಗಿ ಬೇಕಾಗಿದೆ.  ಹಾಗಾಗಿ ಸಾಹಿತ್ಯ ಮತ್ತು ಧರ್ಮಗಳ ಮೂಲ ಇಲ್ಲವೇ ಕೇಂದ್ರ ನೆಲೆ ಇರುವುದೇ ಹಿಂಸೆ ಮತ್ತು ಪ್ರೇಮಗಳ ಅನುಸಂಧಾನದಲ್ಲಿ ಎಂದನಿಸುತ್ತದೆ. ಗ್ರೀಕ್, ಇಂಗ್ಲಿಶ್, ಆಫ್ರಿಕನ್ ಮತ್ತು ಭಾರತೀಯ ಭಾಶೆಗಳಲ್ಲಿ ಸೃಶ್ಟಿಯಾಗಿರುವ ಸಾಹಿತ್ಯವೆಲ್ಲವೂ ಇಂತಹ ಅನುಸಂಧಾನ ನಡೆಸಿರುವುದನ್ನು ನಿಚ್ಚಳವಾಗಿ ಗುರುತಿಸಬಹುದು. ಇದನ್ನು ಆಯಾ ಭಾಶೆಗಳ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಖಚಿತಪಡಿಸಿಕೊಳ್ಳಬಹುದು. ಸದ್ಯ ಅದನ್ನು ವಿಸ್ತಾರವಾಗಿ ಚರ್ಚಿಸುವ ಉದ್ದೇಶ ಈ ಬರೆಹಕ್ಕಿಲ್ಲ.

ಪ್ರಸ್ತುತ ಬರೆಹದಲ್ಲಿ ಮೇಲೆ ಚರ್ಚಿಸಿದ ತಾತ್ವಿಕ ಚೌಕಟ್ಟಿನಲ್ಲಿ ಈ ಕೃತಿಯನ್ನು ವಿವರಿಸಿಕೊಳ್ಳಲು ಸಾಧ್ಯವಿದೆ. ಈ ಕೃತಿಯಲ್ಲಿನ ಬರೆಹಗಳು ವಸಾಹತುಶಾಹಿ ಆಡಳಿತ ಮತ್ತು ಅದರ ವಿರುದ್ಧದ ಹೋರಾಟದ ಕುರಿತು ಚಿಂತಿಸಿವೆ. ನಂತರ ಆಫ್ರಿಕಾ ಖಂಡದ ವಿವಿಧ ದೇಶಗಳು ವಸಾಹತುಶಾಹಿಯಿಂದ ಬಿಡುಗಡೆಗೊಂಡ ನಂತರ ಅವು ನವವಸಾಹತುಶಾಹಿ ಕಾಲದಲ್ಲಿ ಸರ್ವಾಧಿಕಾರಿ ಆಡಳಿತಕ್ಕೆ ಬಲಿಯಾದುದರ ಬಗೆಗೆ ಚಿಂತಿಸಿವೆ. ಹಾಗೆಯೇ ಪ್ರಭುತ್ವಗಳ ಕ್ರೂರ ದಮನದ ನಡುವೆ ಧಾರ್ಮಿಕ ಮೂಲಭೂತವಾದ ಮತ್ತು ಜನಾಂಗಭೇದ ನೀತಿಗಳಿಂದ ದೇಶಗಳು ಹಿಂಸೆಯ ಕುಲುಮೆಯಲ್ಲಿ ಬೇಯುತ್ತಿರುವ ಸಂದರ್ಭವನ್ನು ಕುರಿತು ಚಿಂತಿಸಿವೆ. ಇದಲ್ಲದೆ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರವನ್ನು ನಾಶ ಮಾಡುವುದರ ಪರಿಣಾಮ ಮತ್ತು ಅದನ್ನು ಮೀರುವ ಬಗೆಗೆ ಚಿಂತಿಸಲಾದ ಬರೆಹಗಳಿವೆ. ಪಿತೃಪ್ರಧಾನ ವ್ಯವಸ್ಥೆಯಡಿಯಲ್ಲಿ ನಿತ್ಯ ಬೇಯುತ್ತಿರುವ ಹೆಣ್ಣಿನ ‘ತಾಯ್ತತನ’ದ ಸಂಕಟಮಯ ಜೀವನದ ಬಗೆಗೆ ತಾತ್ವಿಕವಾಗಿ ಚರ್ಚಿಸಿರುವ ಬರೆಹಗಳಿವೆ. ಹಾಗೆಯೇ ಸಮಾಜವಾದ, ಮಾಕ್ರ್ಸ್‍ವಾದ, ರಾಶ್ಟ್ರೀಯತೆಯ ಹೋರಾಟ, ಶಿಕ್ಶಣ, ಸಿನೆಮಾ, ಭಾಶೆ-ಬಹುಸಂಸ್ಕøತಿಗಳು ಮತ್ತು ನಿಗ್ರಿಟ್ಯೂಡ್ ಕಲ್ಪನೆ ಕುರಿತಾದ ಮಹತ್ವ ಬರೆಹಗಳಿವೆ. ಎಲ್ಲ ಬರೆಹಗಳೂ ಭಿನ್ನವಾಗಿದ್ದು ವಿಶಿಶ್ಟವಾಗಿವೆ.

ಇವು ಆಫ್ರಿಕಾ ಖಂಡದ ವಿವಿಧ ದೇಶಗಳ ಲೇಖಕರನ್ನು, ಅವರ ಸಮಾಜದಲ್ಲಿ ನಿತ್ಯ ಸಂಭವಿಸುತ್ತಿರುವ ಸಂಘಟಿತ ಹಿಂಸೆ ಹೇಗೆ ಬಾಧಿಸಿದೆ? ಎಂಬುದನ್ನು ಪರಿಚಯಿಸುತ್ತವೆ. ಇಲ್ಲಿ ಗಮನಿಸಬೇಕಾಗಿರುವ ಬಹಳ ಮುಖ್ಯವಾದ ಸಂಗತಿಯೆಂದರೆ ಲೇಖಕರು ಹಿಂಸೆಯನ್ನು ವೈಭವೀಕರಿಸಿ ಬರೆದಿಲ್ಲ. ಬದಲಾಗಿ ಅಂತಹ ಹಿಂಸೆಯನ್ನು ಕುರಿತು ವಿವೇಚಿಸುತ್ತ ಮನುಶ್ಯಪ್ರೇಮವನ್ನು ಸಮಾಜದಲ್ಲಿ ಸಂಗೋಪಿಸುವುದರ ಬಗೆಗೆ ಹೆಚ್ಚು ಚಿಂತಿಸಲಾಗಿದೆ. ಆ ಮೂಲಕ ವಿಮೋಚನೆಯ ದಾರಿಗಳನ್ನು ಶೋಧಿಸಲು ಪ್ರಯತ್ನಿಸಲಾಗಿದೆ. ಈ ಕುರಿತು ಚಿಂತಿಸಿರುವ ಎಲ್ಲ ಬರೆಹಗಳೂ ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸುತ್ತವೆ. ನಮ್ಮೊಳಗೆ ಕಂಪನವುಂಟು ಮಾಡುವ ಮೂಲಕ ನಮ್ಮನ್ನು ಚಿಂತನೆಗೆ ಹಚ್ಚಿ ತೀವ್ರವಾಗಿ ಕಾಡಿಸುತ್ತವೆ. ನಮ್ಮ ನೆಲದ ಬಿಕ್ಕಟ್ಟುಗಳನ್ನು ಎದುರಿಸಲು ಬೇಕಾದ ಶಕ್ತಿಯನ್ನೂ ನಮ್ಮೊಳಕ್ಕೆ ಹರಿಸುತ್ತವೆ. ಆ ಮೂಲಕ ಆಫ್ರಿಕಾದ ಜನರ ಕಶ್ಟಗಳ ಜೊತೆಗೆ ನಮ್ಮ ಕಶ್ಟಗಳನ್ನೂ ಜೋಡಿಸುತ್ತವೆ. ಹಾಗೆಯೇ ಅವರ ಸಂಕಟಗಳನ್ನು ನಮ್ಮ ಸಂಕಟಗಳನ್ನಾಗಿಸುತ್ತವೆ. ದುಃಖದ ವಿನಿಮಯ ಮಾಡಿಸುತ್ತವೆ. ವಸಾಹತುಶಾಹಿ ಆಡಳಿತಕ್ಕೆ ಒಳಗಾಗಿದ್ದ ಭಾರತ ಮತ್ತು ಆಫ್ರಿಕಾ ಖಂಡಗಳ ಸಮಸ್ಯೆಗಳು ಹೆಚ್ಚೂ ಕಡಿಮೆ ಒಂದೇ ಆಗಿರುವುದನ್ನು ಇಲ್ಲಿನ ಬರೆಹಗಳ ಎತ್ತಿ ತೋರಿಸುತ್ತವೆ.

ಹಾಗೆ ತೋರಿಸುತ್ತಲೇ ಅಧಿಕಾರಸ್ಥ ಶಕ್ತಿಗಳನ್ನು ಎದುರುಗೊಳ್ಳುವ ಹಾದಿಯಲ್ಲಿ ಲೇಖಕರ ಪಾತ್ರವೇನು? ಎಂಬ ನೈತಿಕ ಮತ್ತು ರಾಜಕೀಯದ ಪ್ರಮುಖ ಪ್ರಶ್ನೆಯನ್ನು ಮುಂದಿಡುತ್ತವೆ. ಈ ಸಂಗತಿಯೇ ಇಲ್ಲಿ ನಮಗೆ ಹೆಚ್ಚು ಪ್ರಸ್ತುತವಾಗಿರುವುದು. ಅಂದರೆ ಬಲಿಶ್ಟರು, ಧಾರ್ಮಿಕ ಮೂಲಭೂತವಾದಿಗಳು, ಸರ್ವಾಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ನೆತ್ತರು ಹರಿಸಿ ಆಡಳಿತ ನಡೆಸುವಾಗ ಲೇಖಕರು ನಿರ್ವಹಿಸಬೇಕಾದ ಚಾರಿತ್ರಿಕ ಕರ್ತವ್ಯದ ಬಗೆಗೆ ಈ ಕೃತಿಯಲ್ಲಿ ಹೆಚ್ಚು ಹೊತ್ತಿದೆ. ಇಲ್ಲಿನ ಎಲ್ಲ ಲೇಖಕರ ಬರೆಹಗಳಲ್ಲಿಯೂ ಅದು ಎದ್ದು ಕಾಣುವ ಅಂಶ. ಇವುಗಳ ಓದು ನಮ್ಮ ತಿಳುವಳಿಕೆಯನ್ನು ಹೆಚ್ಚಿಸುತ್ತದೆ. ಚಿನುವಾ ಅಚಿಬೆಯವರ ಒಂದು ಮಾತನ್ನು ಇಲ್ಲಿ ಗಮನಿಸಬಹುದು. “ವ್ಯಕ್ತಿಯೊಬ್ಬ ಬೇರೊಬ್ಬನ ನೋವಿಗೆ ಸೂಕ್ಶ್ಮವಾಗಿ ಸ್ಪಂದಿಸುತ್ತಿಲ್ಲವೆಂದರೆ ಆತ ತನ್ನ ಕಲ್ಪನಾಶಕ್ತಿಯಲ್ಲಿ ಬಲಹೀನನಾಗಿದ್ದಾನೆಂದೇ ಅರ್ಥ. ತನ್ನದಲ್ಲದೆ ಬೇರೊಬ್ಬರ ಚರ್ಮ, ಕಣ್ಣುಗಳ ಮೂಲಕ ಅನುಭವಿಸುವ ನೋಡುವ ಶಕ್ತಿಯನ್ನು ಕಳೆದುಕೊಂಡಿದ್ದಾನೆಂದೇ ಅರ್ಥ.” ಎನ್ನುತ್ತಾರೆ. ಅಂದರೆ ಇದು ಲೇಖಕರಾದವರು ಬೇರೆಯವರ ನೋವಿನ ಹೃದಯಗಳ ಒಳಗಿಳಿದು ಅದನ್ನು ಅರಿತು ಸ್ಪಂದಿಸಬೇಕಿರುವುದರ ಅಗತ್ಯವನ್ನು ವಿವರಿಸುತ್ತ ಈ ಮಾತನ್ನು ಹೇಳಿದ್ದಾರೆ. ಅಂದರೆ ಲೇಖಕರಾದವರು ತಮ್ಮ ಕಾಲದ ಜನಸಾಮಾನ್ಯರ ನೋವುಗಳ ಆಳಕ್ಕಿಳಿದು ಅವನ್ನು ತಮ್ಮವನ್ನಾಗಿಸಿಕೊಂಡು ಅವಕ್ಕೆ ಜೀವ ನೀಡಬೇಕಾಗಿರುತ್ತದೆ ಎಂಬುದನ್ನು ತಿಳಿಸುತ್ತಾರೆ. ಅವರೇ ಮುಂದುವರಿದು ಮತ್ತೊಂದು ಮಾತನ್ನು ಹೇಳುತ್ತಾರೆ. “ಮನುಶ್ಯರ ಸವಲತ್ತುಗಳು ಕಲ್ಪನಾವಿಲಾಸಕ್ಕೆ ಮಹಾಮಾರಿಯಂತೆ ಕಾಡುತ್ತವೆ. ಸುಖ ಮನುಶ್ಯನ ಸಂವೇದನೆಯ ಮೇಲೆ ಅಸೂಕ್ಶ್ಮತೆಯ ಕೊಬ್ಬಿನ ಪೊರೆಯನ್ನು ಬೆಳೆಸುತ್ತದೆ” ಎನ್ನುತ್ತಾರೆ. ಇಲ್ಲಿ ಅಚಿಬೆ ಅವರು ಬಳಸಿರುವ ‘ಕಲ್ಪಾನವಿಲಾಸ’ ಪರಿಕಲ್ಪನೆಯು ಸೃಜಲಶೀಲ ಬರೆಹಗಾರರ ಸಂವೇದನೆಯನ್ನು ಉದ್ದೇಶಿಸಿ ಹೇಳಿರುವುದಾಗಿದೆ. ಯಾರಿಗೆ ಇನ್ನೊಬ್ಬರ ಕಶ್ಟವನ್ನು ಕಂಡು ಅದಕ್ಕೆ ಸಂವೇದಿಸುವ ಗುಣ ಇರುವುದಿಲ್ಲವೋ ಅವರಿಗೆ ಲೇಖಕರಾಗಲು ಬೇಕಾದ ಸೃಜನಶೀಲ ಸಾಮಥ್ರ್ಯವಿರಲು ಸಾಧ್ಯವಿಲ್ಲ; ಬರೆಹಗಾರರಿಗೆ ಅಗತ್ಯವಿರುವ ಕಲ್ಪನಾಶಕ್ತಿ ಗಳಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ. ಅದನ್ನೆ ಅಚಿಬೆ ಇಲ್ಲಿ ಕಲ್ಪನಾವಿಲಾಸ ಎಂದು ಕರೆದಿದ್ದಾರೆ. ಅಂದರೆ ಲೇಖಕರು/ಲೇಖಕಿಯರು ಜನರ ಕಶ್ಟನಶ್ಟಗಳಿಗೆ ಸಂವೇದನಾಶೀಲರಾಗಿ ಸ್ಪಂದಿಸುವುದು ಸೃಜನಶೀಲರಾಗಲು ಇರುವ ಪ್ರಾಥಮಿಕ ಅರ್ಹತೆಯಾಗಿರುತ್ತದೆ ಎಂಬುದು ಅವರ ಮಾತಿನಿಂದ ಸ್ಪಶ್ಟವಾಗುತ್ತದೆ.

ಲೇಖಕರ ಹೊಣೆಗಾರಿಕೆಯ ಬಗೆಗೆ ಅಚಿಬೆ ಮತ್ತು ಆಫ್ರಿಕಾದ ಇತರ ಲೇಖಕರು ವ್ಯಕ್ತಪಡಿಸಿರುವ ಈ ವಿಚಾರ ನಮ್ಮ ಸಂದರ್ಭಕ್ಕೂ ಅನ್ವಯಿಸುತ್ತದೆ. ಯಾಕೆಂದರೆ, ಇಂದು ನಮ್ಮ ದೇಶದ ರಾಜಕೀಯಾರ್ಥಿಕ ಸಂದರ್ಭವನ್ನು ಗಮನಿಸಿದರೆ ಇಲ್ಲಿ ಬಂಡವಾಳಶಾಹಿಗಳ ದಬ್ಬಾಳಿಕೆ, ಮತೀಯವಾದಿಗಳ ಆರ್ಭಟ ಮತ್ತು ಪ್ರಜಾಪ್ರಭುತ್ವದ ದೇಶ ಸರ್ವಾಧಿಕಾರತ್ವದ ಕಡೆಗೆ ಹೆಜ್ಜೆ ಹಾಕುತ್ತಿರುವುದರ ಘಮಲು ಮೂಗಿಗೆ ಬಡಿಯುತ್ತದೆ. ಇಂತಹ ಹೊತ್ತಿನಲ್ಲಿ ಸೃಜನಶೀಲ ಲೇಖಕರು ತಮ್ಮ ದಂತಗೋಪುರಗಳಲ್ಲಿ ಸುಖಾಸೀನವಾಗಿರುವುದು ಅಕ್ಶಮ್ಯ ಅಪರಾಧ. ಆದರೆ ಇಂತಹ ಹೊತ್ತಿನಲ್ಲಿ ಹಲವು ಲೇಖಕರು ದಂತಗೋಪುರಗಳಲ್ಲಿ ಸುಖಿಸುತ್ತಿರುವುದನ್ನು ಕಾಣಬಹುದು. ಇದರ ಸಮರ್ಥನೆಗೆ ಅನುಕೂಲಸಿಂಧು ವಾದಗಳನ್ನು ಸೃಶ್ಟಿಸಿಕೊಳ್ಳುತ್ತಿರುವುದು ಇದೆ. ವರ್ತಮಾನದ ವಿದ್ಯಮಾನಗಳು ಕರಾಳ ರೂಪ ಪಡೆದು ಮನಸ್ಸು ತಲ್ಲಣಿಸಿದರೂ ಅದನ್ನು ಹೊರಹಾಕಲು ಧೈರ್ಯ ಮಾಡದಿರುವುದು ಇದೆ. ಆಳುವ ಶಕ್ತಿಗಳನ್ನು ಸಮರ್ಥಿಸುತ್ತ ಸ್ತುತಿಗೀತೆ ಬರೆದು ಜನರ ಮನಸ್ಸಿನಲ್ಲಿ ಗೊಂದಲ ಸೃಶ್ಟಿಸುವುದು ನಡೆದಿದೆ. ಇದಲ್ಲದೆ ತಮ್ಮದೇ ಒಂದು ‘ಮಧ್ಯಮ ಮಾರ್ಗ’ವನ್ನು ಮುಂದಿಡಲಾಗುತ್ತಿದೆ. ಆ ಮೂಲಕ ಜನರ ಕಶ್ಟಗಳಿಗೆ ಬೆನ್ನು ತಿರುಗಿಸಿ ಆಳುವ ದಣಿಗಳಿಗೆ ಸಲಾಮು ಹೊಡೆವುದು ಎದ್ದು ಕಾಣಿಸುತ್ತದೆ. ಇಡೀ ಸಮಾಜವು ಧ್ರುವೀಕರಣಗೊಂಡು ಸಂಘರ್ಶದ ಹಾದಿಯಲ್ಲಿ ನಡೆಯುತ್ತಿದೆ. ಇಂತಹ ಹೊತ್ತಿನಲ್ಲಿ ಲೇಖಕರು ದಮನಕಾರರ ಆಳುವವರ ಸ್ತುತಿಯಲ್ಲಿ ತೊಡಗುವುದು ಇಲ್ಲವೇ ಅದನ್ನು ಪ್ರಶ್ನಿಸದೆ ಮೌನ ವಹಿಸುವುದು ಮಹಾ ಅಪರಾಧ. ಇಂತಹ ಮೌನ ಮತ್ತು ದಣಿಗಳ ಸ್ತುತಿಯು ದೊಡ್ಡ ಅಪರಾಧ ಎಂಬ ಪಾಪಪ್ರಜ್ಞೆಯ ಭಾವವನ್ನು ಈ ಕೃತಿ ನಮ್ಮಲ್ಲಿ ಮೂಡಿಸುತ್ತದೆ.  ಮತ್ತು ಸೃಜನಶೀಲ ಲೇಖಕರು ನಿರ್ವಹಿಸಬೇಕಾದ ಪಾತ್ರದ ಬಗೆಗೆ ಗಮನ ಸೆಳೆಯುತ್ತದೆ ಮತ್ತು ಅಂತಹ ಕೆಲಸಕ್ಕೆ ಆತ್ಮವಿಶ್ವಾಸ ತುಂಬುತ್ತದೆ. ನೆತ್ತರನ್ನು ತಣ್ಣಗಾಗಿಸಿಕೊಂಡು ಸುಖಾನುಭವದಲ್ಲಿರುವ ಲೇಖಕರು ತಮ್ಮ ‘ಗುಂಡಿಗೆಯಲ್ಲಿ ಬಿಸಿರಕ್ತ’ ಹರಿಸಬೇಕಾದರೆ ಈ ಕೃತಿಯನ್ನು ಎಲ್ಲರೂ ಓದಲೇಬೇಕಾಗಿದೆ. ನಮ್ಮ ಹೊಣೆಗೇಡಿತನವನ್ನು, ಮಂಪರುತನವನ್ನು, ಕಣ್ಣುಗಳ ಮೇಲೆ ಬೆಳೆದಿರುವ ಕೊಬ್ಬಿನ ಪೊರೆಯನ್ನೂ ಕಳಚುವ ಶಕ್ತಿ ಈ ಕೃತಿಗಿದೆ.

ಸದ್ಯದ ಕನ್ನಡದ ಅರಾಜಕ ಮತ್ತು ದಿಕ್ಕೆಟ್ಟ ಸಂದರ್ಭವನ್ನು ಗಮನಿಸಿಯೇ ಕೇಶವ ಮಳಗಿಯವರು ಈ ಹೊತ್ತಗೆಯನ್ನು ಸಿದ್ದಪಡಿಸಿದ್ದಾರೆ ಎಂಬುದರಲ್ಲಿ ಯಾವ ಸಂದೇಹವಿಲ್ಲ. ಇಲ್ಲಿನ ಎಲ್ಲ ಬರೆಹಗಳು ಖಚಿತ ರಾಜಕೀಯ ತಿಳುವಳಿಕೆಯಿಂದ ಕೂಡಿದ್ದು ಸ್ಪಶ್ಟ ಧೋರಣೆಯನ್ನು ಹೊಂದಿವೆ. ನಮ್ಮಲ್ಲಿ ಇನ್ನೂ ಅನೇಕ ಲೇಖಕರು ರಾಜಕೀಯ ಧೋರಣೆ ಎಂದರೇನು? ಲೇಖಕರಿಗೆ ಚಳವಳಿಗಳ ಸಖ್ಯ ಬೇಕೆ? ಬೇಡವೇ? ‘ಇಸಂ’ಗಳ ನಂಟು ಬೇಕೆ ಬೇಡವೇ? ಎಂಬ ಅಪ್ರಬುದ್ಧ ಪ್ರಶ್ನೆಗಳನ್ನು ಕೇಳುವುದರಲ್ಲಿಯೇ ತಲ್ಲೀನರಾಗಿದ್ದಾರೆ. ಅಂತಹವರು ಇಲ್ಲಿನ ಬರೆಹಗಳನ್ನು ಓದಿದರೆ ಲೇಖಕರ ಎಡಬಿಡಂಗಿತನ ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲ. ಲೇಖಕರ ಎಡಬಿಡಂಗಿತನವನ್ನು ಅರ್ಥಮಾಡಿಕೊಂಡಿರುವ ಮಳಗಿಯವರು ಅದನ್ನು ಎದುರುಗೊಳ್ಳಲು ಇಂತಹ ಮಹತ್ವದ ಬರೆಹಗಳಳನ್ನು ಸಂಗ್ರಹಿಸಿ ಓದಿ ಗ್ರಹಿಸಿ ಅನುಭವಿಸಿ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಆಫ್ರಿಕನ್ ಲೇಖಕರ ಖಚಿತ ರಾಜಕೀಯ ಧೋರಣೆಯನ್ನು ಪರಿಚಯಿಸುವ ಈ ಕೃತಿ ನಮ್ಮ ರಾಜಕೀಯ ಅರಿವು ಮತ್ತು ಬದ್ದತೆಯನ್ನು ಖಂಡಿತವಾಗಿಯೂ ವಿಸ್ತರಿಸುತ್ತದೆ. ಅದೇ ಈ ಕೃತಿಯ ಹೆಚ್ಚುಗಾರಿಕೆ. ಹಾಗಾಗಿ ಈ ಕೃತಿಯನ್ನು ಕನ್ನಡ ಎಲ್ಲ ಓದುಗರು ಮತ್ತು ಬರೆಹಗಾರರು ತಪ್ಪದೆ ಓದಬೇಕಿದೆ. ತಮ್ಮ ಅರಿವಿನ ಎಲ್ಲೆಗಳನ್ನು ವಿಸ್ತರಿಸಿಕೊಳ್ಳಬೇಕಿದೆ.

ಪುಸ್ತಕ ಕೊಳ್ಳಲು : https://store.ruthumana.com/product/gundigeya-bisirakta/

 

ಪ್ರತಿಕ್ರಿಯಿಸಿ