“ಪರೋಕ್ಷತೆ ಸಾಹಿತ್ಯದ ಮೂಲಗುಣಗಳಲ್ಲಿ ಒಂದು” : ವಿವೇಕ ಶಾನಭಾಗ ಸಂದರ್ಶನ

ವಿವೇಕ ಶಾನಭಾಗರ ಒಂದು ವಿಸ್ತಾರ ಸಂದರ್ಶನ ಇಲ್ಲಿದೆ. ಭಾಷೆ, ಕಥನಕ್ರಮ, ಪ್ರಕಾರವನ್ನು ಅವರು ಆಯ್ದುಕೊಳ್ಳುವ ಬಗೆ, ಸಮಯ ಪಾಲನೆ, ಸಾಹಿತ್ಯ ಮತ್ತು ವಯಕ್ತಿಕ ಶಿಸ್ತು, ವಿವೇಕರ ಮತ್ತು ಚಿತ್ತಾಲರ ಕಾದಂಬರಿಗಳಲ್ಲಿ ವಿಶಿಷ್ಟವೆಂಬಂತೆ ಕಾಣಿಸಿಕೊಳ್ಳುವ ಅಡುಗೆ-ಊಟದ ವಿವರಗಳು ಎಲ್ಲದರ ಬಗ್ಗೆಯೂ ನಮ್ಮ ಪ್ರಶ್ನೆಗಳಿಗೆ ಅವರು ಲವಲವಿಕೆ-ಒಳನೋಟಗಳಿಂದ ಕೂಡಿದ ಉತ್ತರಗಳನ್ನು ಕೊಟ್ಟಿದ್ದಾರೆ. ಸುತ್ತಲಿನ ರಾಜಕೀಯದ ಜೊತೆಗೆ ಸಾಹಿತ್ಯವನ್ನು ರಚಿಸುವವನ ಸಂಬಂಧದ ಕುರಿತಾದ ಪ್ರಶ್ನೆಯನ್ನು ಅನೇಕ ಸಂದರ್ಭದಲ್ಲಿ, ಅಸಂಖ್ಯ ರೀತಿಗಳಲ್ಲಿ ಚರ್ಚಿಸಲಾಗಿದೆ. ಇದರ ಬಗ್ಗೆಯೇ ಸ್ವಲ್ಪ ಚೂಪಾಗಿ ಕೇಳಲಾದ ಈ ಸಂದರ್ಶನದ ಕೊನೆ ಪ್ರಶ್ನೆಗೆ ವಿವೇಕ ಶಾನಭಾಗರು ವಿಸ್ತಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸಮಕಾಲೀನರಾದ ಬರಹಗಾರರೊಬ್ಬರು ಪ್ರಸ್ತುತಕ್ಕೆ ಉತ್ಸುಕವಾಗಿ ಸ್ಪಂದಿಸಿರುವ ಈ ಸಂದರ್ಶನ ಋತುಮಾನದ ಓದುಗರಿಗಾಗಿ. ವಿವೇಕ ಶಾನಭಾಗರಿಗೆ ನಮ್ಮ ಕಡೆಯಿಂದ ಧನ್ಯವಾದಗಳು.

ಋತುಮಾನ:  ಇಪ್ಪತ್ತು ವರುಷದ ಹಿಂದೆ ಬಂದ ‘ಇನ್ನೂ ಒಂದು’ ನಿಮ್ಮ ಮೊದಲ ಕಾದಂಬರಿ. ಅಲ್ಲಿಂದ ಇಲ್ಲಿಯವರೆಗೆ ಘಾಚರ್ ಘೋಚರ್ ಅನ್ನೂ ಸೇರಿಸಿ ‘ಸಕೀನಾಳ ಮುತ್ತು’ ಐದನೆಯ ಕಾದಂಬರಿ. ಘಾಚರ್ ಘೋಚರ್ ಇಂಗ್ಲಿಷ್ ಗೆ ಅನುವಾದಗೊಂಡು ಜಾಗತಿಕ ಮನ್ನಣೆ ಪಡೆಯಿತು. ಕೆಲವು ವಿಮರ್ಶಕರು ಇದನ್ನು ಆರ್ ಕೆ ನಾರಾಯಣ್, ಚೆಕಾವ್ ಅವರ ಕಾದಂಬರಿಗಳೊಂದಿಗೆ ಹೋಲಿಸಿದರು. ನ್ಯೂಯಾರ್ಕ್ ಟೈಮ್ಸ್ ನ 2017 ರಲ್ಲಿ ಬಂದ ಅತ್ಯುತ್ತಮ ಪುಸ್ತಕಗಳ ಪಟ್ಟಿಯಲ್ಲಿ ಘಾಚರ್ ಘೋಚರ್ ಕೂಡ ಒಂದಾಯಿತು. ಕನ್ನಡ ಜಗತ್ತಿನ ಹೊರಗೆ ಸಿಕ್ಕ ಈ ಕೀರ್ತಿ ಒಬ್ಬ ಬರಹಗಾರನಾಗಿ ನಿಮ್ಮ ಸದ್ಯದ ಬರವಣಿಗೆಯ ಮೇಲೆ ಒತ್ತಡ ಸೃಷ್ಟಿಸಿದೆಯೇ? ಹೌದು ಎಂದಾದಲ್ಲಿ ಹೇಗೆ ಅದನ್ನು ನಿಭಾಯಿಸಿದಿರಿ?

ವಿವೇಕ ಶಾನಭಾಗ: ಸುದೈವದಿಂದ ಘಾಚರ್ ಘೋಚರ್ ನನ್ನ ಮೊದಲ ಪುಸ್ತಕವಲ್ಲ. ಹಾಗಾಗಿ ಇದು ಬರವಣಿಗೆಯ ಮೇಲೆ ಯಾವ ಒತ್ತಡವನ್ನೂ ಸೃಷ್ಟಿಸಲಿಲ್ಲ. ಅದಕ್ಕೆ ದೊರೆತ ಪ್ರತಿಕ್ರಿಯೆಗಳಿಂದ ನನ್ನ ಇತರ ಬರವಣಿಗೆ ಮತ್ತು ಶೈಲಿಯ ಬಗ್ಗೆ ಕನ್ನಡದ ಹೊರಗೆ ಕುತೂಹಲ ಹೆಚ್ಚಾಯಿತು. ಇದರಿಂದ ನನಗೆ ಜಗತ್ತಿನ ಹಲವಾರು ಲೇಖಕರ ಒಡನಾಟ ಒದಗಿಬಂತು. ಇನ್ನೊಂದು ಭಾಷೆ, ದೇಶ, ಸಂಸ್ಕೃತಿಗಳಲ್ಲಿ ಬರೆಯುವವರ ಜೊತೆ ನಡೆಯುವ ಕೊಡುಕೊಳ್ಳುವಿಕೆ ಮತ್ತು ಸಂವಾದಗಳು ಬರಹಗಾರನಾಗಿ ನನಗೆ ಅಮೂಲ್ಯವಾದ ಒಳನೋಟಗಳನ್ನು ಕೊಟ್ಟಿವೆ.

ಯಾವ ಓದುಗರನ್ನು ಗಮನದಲ್ಲಿಟ್ಟು ಬರೆಯುತ್ತೀರಿ ಎನ್ನುವುದು ಬಹಳ ಮುಖ್ಯ. ನನ್ನ ಬರವಣಿಗೆ ಸಾರ್ಥಕವಾಗುವುದು ಕನ್ನಡ ಓದುಗರಲ್ಲಿ ಮಾತ್ರ. ಅದಕ್ಕೆ ಹತ್ತಾರು ಸೂಕ್ಷ್ಮಜ್ಞ ಓದುಗರಿದ್ದರೂ ಸಾಕು. ಅಂಥವರನ್ನು ಭಾವಿಸಿಯೇ ನಾನು ಬರೆಯುವುದು. ಅನುವಾದದಲ್ಲಿ ಅಪಾರ ಸಂಖ್ಯೆಯ ಓದುಗರನ್ನು ಪಡೆಯುವುದು ಸಂತೋಷದ ವಿಷಯ. ಆದರೆ ಸೃಷ್ಟಿಕಾರ್ಯದ ಹೊತ್ತಿನಲ್ಲಿ, ನನ್ನ ಭಾಷೆಯ ಜೊತೆ ಕರುಳಬಳ್ಳಿಯ ಸಂಪರ್ಕವಿರದ ಓದುಗರಿಗಾಗಿ ಬರೆಯುವುದು ನನಗಂತೂ ಸಾಧ್ಯವಿಲ್ಲ.

ಋತುಮಾನ: ಆಲೋಚನೆಯ ಯಾವ ಹಂತದಲ್ಲಿ ನೀವು ಕತೆಯ ಎಳೆಯೊಂದು ಸಣ್ಣ ಕತೆಯಾಗಬೇಕೋ ಕಾದಂಬರಿಯಾಗಬೇಕೋ ಎಂಬುದನ್ನು ನಿರ್ಧರಿಸುತ್ತೀರಿ? ಈ ಹಿನ್ನೆಲೆಯಲ್ಲಿ ಸಕೀನಾಳ ಮುತ್ತು ನಿಮ್ಮಲ್ಲಿ ಹುಟ್ಟಿ ಈಗ ಕಾದಂಬರಿಯಾಗಿ ಪ್ರಕಟವಾಗುತ್ತಿರುವ ಕುರಿತು ಹೇಳಿ.

ನನ್ನತ್ತ ಒಂದು ಕತೆ, ನಾಟಕ ಅಥವಾ ಕಾದಂಬರಿ ಸುಳಿಯುತ್ತದೆಯೇ ಹೊರತು ಯಾವುದೋ ಒಂದು ವಿಚಾರ ಅಥವಾ ಅನುಭವವನ್ನು ಯಾವ ಪ್ರಕಾರದಲ್ಲಿ ಕೂರಿಸಲಿ ಎಂಬ ಯೋಚನೆ ಬರುವುದಿಲ್ಲ. ಬಹುಶಃ ಇದು ನಾವು ಯಾವುದನ್ನು ಸ್ವೀಕರಿಸಲು ನಮ್ಮ ಮನಸ್ಸನ್ನು ತೆರೆದಿರುತ್ತೇವೆ ಎಂಬುದನ್ನು ಆಧರಿಸಿದೆ. ಉದಾಹರಣೆಗೆ ಕವಿತೆಗಳು ನನ್ನತ್ತ ಬರುವುದೇ ಇಲ್ಲ. ಊರು ಭಂಗ ಕಾದಂಬರಿಯಲ್ಲಿ ಹೊರತುಪಡಿಸಿದರೆ ನಾನು ಕವಿತೆ ಬರೆದೇ ಇಲ್ಲ. ಇತ್ತೀಚೆಗೆ ನನಗೆ ಕಾದಂಬರಿ ಅಥವಾ ನಾಟಕಗಳನ್ನು ಬರೆಯಬೇಕೆನ್ನಿಸುವುದರಿಂದ ಮನಸ್ಸು ಅಂಥ ಸಂಜ್ಞೆಗಳಿಗಾಗಿ ಹುಡುಕಾಡುತ್ತದೆ. ಮುಖ್ಯವಾಗಿ ಈ ಎರಡೂ ಪ್ರಕಾರಗಳಲ್ಲಿರುವ ಸವಾಲುಗಳು ಬಹಳ ದೊಡ್ಡವು ಮತ್ತು ನಾನು ಈವರೆಗೂ ಕಂಡಿರದ ಬದುಕಿನ ಮಗ್ಗಲುಗಳನ್ನು ಶೋಧಿಸಲು ಇವು ಅನುವು ಮಾಡಿಕೊಡುತ್ತವೆ ಅನಿಸುತ್ತದೆ. ಸಕೀನಾಳ ಮುತ್ತು ನನ್ನೊಳಗೆ ಕೆಲ ಕಾಲದಿಂದ ಇದ್ದ ಕಾದಂಬರಿ. ಬರೆದು ತಿದ್ದಿ ಮುಗಿಸಿದ ಬಳಿಕ ಇನ್ನೊಂದು ದೃಷ್ಟಿಕೋನದಿಂದ ಕಂಡರೆ ಕಾದಂಬರಿಯೊಳಗಿನ ಅನುಭವ ಶೋಧನೆ ಹೆಚ್ಚು ಆಳವಾಗಬಹುದು ಅನಿಸಿದ್ದರಿಂದ ಅದನ್ನು ಮತ್ತೊಮ್ಮೆ ಬರೆದೆ.

ಋತುಮಾನ: ನಿಮ್ಮ ಕಾದಂಬರಿಗಳಲ್ಲಿ ಹೆಣ್ಣು ಪಾತ್ರಗಳು – ಇನ್ನೂ ಒಂದರ ಸ್ವಾತಿ, ಒಂದು ಬದಿ ಕಡಲಿನ ಫಂಡರಿ, ಘಾಚರ್ ಘೋಚರ್ ನ ಮೂರೂ ಹೆಣ್ಣು ಪಾತ್ರಗಳಿರಬಹುದು- ಅತ್ಯಂತ ಉತ್ಕಟತೆಯಿಂದ ಬದುಕನ್ನ ಎದುರುಗೊಳ್ಳುವ ರೀತಿ. ಕತೆಯ ನಿರೂಪಣೆಯ ಮುಖ್ಯಧಾರೆಯಲ್ಲಿ ಇಲ್ಲವೆಂದು ಭಾಸವಾದರೂ ಕಾದಂಬರಿಯ ಕೊನೆಗೆ ಅತ್ಯಂತ ಕಾಡುವ ಈ ಹೆಣ್ಣು ಧ್ವನಿಗಳ ಬಗ್ಗೆ ಹೇಳಿ. ಸುಧೀರನ ತಾಯಿ ಕತೆಯನ್ನೂ ಇಲ್ಲಿ ಉದಾಹರಿಸಬಹುದು. 

ವಿವೇಕ ಶಾನಭಾಗ: ಸಮಾಜದ ಕಟ್ಟಳೆಗಳಿಂದ ಅವಕಾಶವಂಚಿತರಾದ ಪ್ರತಿಭಾವಂತ ಹೆಂಗಸರನ್ನು, ಪುರುಷ ಪಾರಮ್ಯವನ್ನು ಮೆಟ್ಟಿ ನಿಂತ ಹೆಂಗಸರನ್ನು ನನ್ನ ಬಾಲ್ಯದಿಂದಲೂ ಹತ್ತಿರದಿಂದ ಕಂಡಿದ್ದೇನೆ. ಮತ್ತು ಅವರ ದಿಟ್ಟತನದಿಂದ ತುಂಬ ಪ್ರಭಾವಿತನಾಗಿದ್ದೇನೆ. ಸಾಮಾನ್ಯವಾಗಿ ಚಿಕ್ಕ ಮಕ್ಕಳಿಗೆ ಹೆಂಗಸರ ಪ್ರಪಂಚದೊಳಗೆ ಪ್ರವೇಶ ಸುಲಭವಾಗಿರುತ್ತದೆ. ಬಾಲ್ಯದ ಆ ನೆನಪುಗಳು ಇನ್ನೂ ಅಚ್ಚಳಿಯದಂತಿವೆ.

ಋತುಮಾನ: ನಿಮ್ಮ ಕಾದಂಬರಿಗಳ ನಿರೂಪಣೆಯಲ್ಲಿರುವ ನಿಗೂಢತೆ ಅಥವಾ ಸಸ್ಪೆನ್ಸ್. ಒಂದು ಬದಿ ಕಡಲು ಹೊರತು ಪಡಿಸಿದರೆ ಉಳಿದ ಮೂರೂ ಕಾದಂಬರಿಗಳಲ್ಲಿ ಈ ಸಸ್ಪೆನ್ಸ್ element ಇದೆ. ಮತ್ತೊಬ್ಬನ ಸಂಸಾರ, ನಿರ್ವಾಣದ ಕತೆಗಳಲ್ಲೂ ಇದನ್ನು ನೋಡಬಹುದು. ಇದನ್ನು ನೀವು ಒಂದು ತಂತ್ರವಾಗಿ ಬಳಸುತ್ತಿರೋ ಅಥವಾ ಸಹಜ ನಿರೂಪಣಾ ಶೈಲಿಯೋ?

ವಿವೇಕ ಶಾನಭಾಗ: ನನ್ನ ಮಟ್ಟಿಗೆ ತಂತ್ರ ಎನ್ನುವುದು ಶುಷ್ಕವಾದ ಶಬ್ದ. ಅಂದರೆ ಸಿದ್ಧ ಮಾದರಿಗಳಲ್ಲಿ ಯಾವುದನ್ನು ಆರಿಸಿಕೊಳ್ಳಲಿ ಎಂದು ನಾನು ಯೋಚಿಸುವುದಿಲ್ಲ. ಕತೆಯನ್ನು ಸಮರ್ಪಕವಾಗಿ, ಸಶಕ್ತವಾಗಿ ಹೇಳಲು ಯಾವುದು ಸೂಕ್ತವಾದ ಪರಿ ಎನ್ನುವುದಷ್ಟೇ ನನ್ನ ಕಾಳಜಿ. ಶ್ರೀಮಂತವಾದ ಜಾನಪದ ಕಲೆ ಮತ್ತು ಹೇರಳ ಮೌಖಿಕ ಸಂಪ್ರದಾಯವಿರುವ ನಮ್ಮಲ್ಲಿ ಕಥನಕ್ರಮಗಳ ಕೊರತೆಯಿಲ್ಲ. ಕೇಳುವ ಕಿವಿ, ಕಾಣುವ ಕಣ್ಣಿರಬೇಕು.

ಎಲ್ಲ ಬರವಣಿಗೆಗೂ ಓದಿಸಿಕೊಳ್ಳುವ ಗುಣ ಅತ್ಯವಶ್ಯ. ಇದನ್ನು ವಿಶಾಲವಾದ ಅರ್ಥದಲ್ಲಿ ಹೇಳುತ್ತಿದ್ದೇನೆ. ಅಂದರೆ ಓದುಗರು ನಾನು ಹೇಳುತ್ತಿರುವುದನ್ನು ಕಿವಿ ನಿಮಿರಿಸಿ ಕೇಳಿಸಿಕೊಳ್ಳುವ ಹಾಗೆ ಮಾಡಿದಾಗಲೇ ಪಿಸುಮಾತುಗಳು ಸಂಭವನೀಯ. ಇದನ್ನು ನಾನಾ ಬಗೆಯಲ್ಲಿ ಸಾಧಿಸಬಹುದು. ಭಾಷಾಪ್ರಯೋಗ, ಹೊಸ ಅನುಭವಲೋಕದ ಅನಾವರಣ ಹೀಗೆ ಹತ್ತು ಹಲವು ಬಗೆಗಳಲ್ಲಿ ಇದು ಕೈಗೂಡಬಹುದು.

ಏನೋ ಒಂದನ್ನು ಅರಿಯುವಾಗ ಅದರಲ್ಲಿ ನಿಗೂಢತೆ ಅಥವಾ ಸಸ್ಪೆನ್ಸ್ ಇರುತ್ತದೆ. ಅದು ಎಲ್ಲ ಚಿಂತನೆ, ಶೋಧನೆಗಳ ಸ್ವಭಾವ. ಗೊತ್ತಿಲ್ಲದ ಏನೋ ಒಂದು ಪ್ರಕಟವಾಗುವುದು ಅನುಭವ ಶೋಧನೆಯಲ್ಲಿಯೂ ನಿಜ Intellectual pursuit ನಲ್ಲಿಯೂ ನಿಜ. ಇದನ್ನು ಗುರುತಿಸಿ ಕಥನದಲ್ಲಿ ನೇಯ್ದಾಗ ಅಂಥ ಬರಹಗಳು ಅವು ಲೇಖನಗಳಾಗಿದ್ದರೂ ಸಹ ಅವುಗಳಿಗೆ ಈ ಗುಣ ಮೈಗೂಡುತ್ತದೆ. ನಮ್ಮ ಅತ್ಯುತ್ತಮ ಗದ್ಯ ಬರಹಗಾರರನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಮಾತು ಇನ್ನಷ್ಟು ಸ್ಪಷ್ಟವಾದೀತು.

ಋತುಮಾನ: ಚಿತ್ತಾಲರ ಕಾದಂಬರಿಗಳಲ್ಲಿ ಚಹಾ ಕೂಟವು ಮತ್ತೆ ಮತ್ತೆ ಕತೆಯ ಪ್ರಮುಖ ಘಟ್ಟಗಳಲ್ಲಿ ಬರುವಂತೆ ನಿಮ್ಮ ಕಾದಂಬರಿಗಳ ಪ್ರಮುಖ ಹಂತದಲ್ಲಿ ಆಹಾರದ ಪ್ರಸ್ತಾಪ ಬರುತ್ತದೆ. ಒಂದು ಬದಿ ಕಡಲಿನ ಯಮುನೆಯ ಗಂಡ ಗಂಜಿ ಉಣ್ಣುವ ಮುನ್ನ ತೀರಿಕೊಳ್ಳುವ ದೃಶ್ಯ , ಇನ್ನೂ ಒಂದರಲ್ಲಿ ಕಶ್ಯಪ ಮತ್ತು ಮನೋಹರನ ಭೇಟಿಯ ಸಂದರ್ಭದಲ್ಲಿ ಬರುವ ಸುಧೀರ್ಘ ಗೋವೆಯ ಚಿಕನ್ ಕರಿಯ ಪ್ರಸ್ತಾಪ, ಘಾಚರ್ ಘೋಚರಿನ ಮಸೂರಿ ಕಾಳಿನ ಸಾರು ಡಬ್ಬಿಯಿಂದ ಚೆಲ್ಲುವ ಇಮೇಜ್ ಅಂತೂ ಇಡೀ ಕಾದಂಬರಿಯ ಕೇಂದ್ರ ಚಿತ್ರ. ಆ ಗರಂ ಮಸಾಲೆಯ ಘಮ ಮುಂದೆ ಕಾದಂಬರಿ ಮುಗಿಯುವವರೆಗೂ ನಮ್ಮೊಡನಿರುತ್ತದೆ. ನಿಮ್ಮ ಈ ಆಹಾರ ಪ್ರೇಮದ ಬಗ್ಗೆ ಹೇಳಿ. ಜೊತೆಗೆ ಮಸೂರಿ ಕಾಳಿನ ದೃಶ್ಯ ಬಹುತೇಕ ಆ ಕಾದಂಬರಿ ಓದಿದವರೆಲ್ಲ ಮತ್ತೆ ಮತ್ತೆ ಮೆಲುಕು ಹಾಕಿಕೊಳ್ಳುವಂತದ್ದು. ಆ ಭಾಗ ಅಷ್ಟು ಇಂಟೆನ್ಸ್ ಆಗಿ ಓದುಗರ ಜೊತೆಗೆ ಉಳಿದುಕೊಳ್ಳುತ್ತದೆ ಎಂದು ನಿಮಗೆ ಅನಿಸಿತ್ತಾ?

ವಿವೇಕ ಶಾನಭಾಗ: ಈವರೆಗೂ ಭಾರತೀಯ ಕುಟುಂಬಗಳಲ್ಲಿ, ಕುಟುಂಬದ ಎಲ್ಲರನ್ನೂ ಸ್ಪರ್ಷಿಸುವ, ಪರಸ್ಪರ ಸಂಬಂಧವೇರ್ಪಡಿಸುವ ಸಂಗತಿ ಆಹಾರವಾಗಿದೆ. ಮನೆಯಲ್ಲಿ ಕೆಲವು ದಿನ ಕೆಲವರಿಗೆ ಪ್ರಿಯವಾದ ಅಡಿಗೆ ಮಾಡುತ್ತಾರೆ. ಉಳಿದವರು ಸಹನೆಯಿಂದ ಅದನ್ನು ತಿನ್ನುತ್ತಾರೆ. ಆಹಾರದ ಕೊರತೆಯಿದ್ದಾಗ ಹಂಚಿ ತಿನ್ನುವಲ್ಲಿ ಸಂಬಂಧಗಳ ತರತಮಗಳು, ಬದುಕುವ ಕೆಲವು  ಉಪಾಯಗಳು ಮುನ್ನೆಲೆಗೆ ಬರುತ್ತವೆ. ಒಟ್ಟಿನಲ್ಲಿ ಆಹಾರವು ಎಲ್ಲ ದೇಶಗಳ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಕುಟುಂಬಗಳ ಸದಸ್ಯರನ್ನು ಪರಸ್ಪರ ಬೆಸೆಯುವ ಬಹುಮುಖ್ಯವಾದ ಸಂಗತಿಯಾಗಿದೆ. ಕುಟುಂಬದೊಳಗಿನ ಆಹಾರದ ‘ರಾಜಕೀಯ’ವೂ ಸಹ ಕಡೆಗಣಿಸಲಾಗದ ವಿಷಯವಾಗಿದೆ.

‘ಘಾಚರ್ ಘೋಚರ್’ ಕಾದಂಬರಿಯಲ್ಲಿ ಬರುವ ಮಸೂರಿ ಕಾಳಿನ ಘಟನೆಯ ಸಂದರ್ಭದಲ್ಲಿ ಕುಟುಂಬದ ಎಲ್ಲರೂ ಉಪಸ್ಥಿತರಿದ್ದಾರೆ. ಆ ಘಟನೆಗೆ ಪ್ರತಿಕ್ರಿಯಿಸುವ ರೀತಿಯಲ್ಲೇ ಅವರವರ ವ್ಯಕ್ತಿತ್ವದ ಮೂಲಗುಣವೊಂದು ಪ್ರಕಟವಾಗುತ್ತದೆ. ಈ ಗುಣವು ಕಾದಂಬರಿಯುದ್ದಕ್ಕೂ ನಡೆಯುವ ಬೇರೆಬೇರೆ ಘಟನೆಗಳಿಂದ ಪುಷ್ಟವಾಗುತ್ತ ಹೋಗುತ್ತದೆ. ಬಹುಶಃ ಈ ಕಾರಣದಿಂದ ಅದು ಓದುಗರ ಮನಸ್ಸಿನಲ್ಲಿ ಕೊನೆತನಕ ಉಳಿದಿರಬಹುದು.

ಋತುಮಾನ: ನಮ್ಮ ಕೆಲವೇ ವರುಷಗಳ ಅನುಭವದಲ್ಲಿ ಈಗಿನ ಯುವ ಓದುಗರು ಫಿಕ್ಷನ್ ಗಿಂತ ಹೆಚ್ಚಾಗಿ ವೈಚಾರಿಕ ಕೃತಿಯ ಓದಿನಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಕತೆ ಕಾದಂಬರಿಯಂತಹ ಸೃಜನಶೀಲ ಕೃತಿಗಳ ಓದು ಮತ್ತು ವೈಚಾರಿಕ ಚಿಂತನೆ ಇವೆರಡರ ನಡುವಿನ ಸಂಬಂಧ ಯಾವ ತರದ್ದು?

ವಿವೇಕ ಶಾನಭಾಗ: ಸೃಜನಶೀಲ ಕೃತಿ ಮತ್ತು ವೈಚಾರಿಕ ಚಿಂತನೆ ಇವೆರಡನ್ನೂ ಪ್ರತ್ಯೇಕಗೊಳಿಸಿ ನೋಡಲಾಗುವುದಿಲ್ಲ. ಉತ್ತಮ ಸೃಜನಶೀಲ ಕೃತಿಗಳ ಆಂತರ್ಯದಲ್ಲಿ ಆಳವಾದ ಚಿಂತನೆಯಿರುತ್ತದೆ. ಚಿಂತನೆಯ ಸ್ಪರ್ಷವಿಲ್ಲದ ಹಸಿ ಅನುಭವಗಳು ಸಾಹಿತ್ಯವಾಗುವುದಿಲ್ಲ.

ಋತುಮಾನ: ಒಂದು ಕಡೆ ಪುಸ್ತಕದ ಓದು ಕಡಿಮೆಯಾಗುತ್ತಿದೆಯೆಂದು ಅನಿಸುವ ಹೊತ್ತಿನಲ್ಲೇ ಪುಸ್ತಕ ಪ್ರಕಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ವಿಪರೀತದ ನಡುವೆ ಓದುಗನಿಗೆ ಆಯ್ಕೆಯ ಮಾನದಂಡ ಯಾವುದು? ನಮ್ಮ ಸಾಹಿತ್ಯಿಕ ಚರ್ಚೆಗಳು ಇನ್ನೂ ಅನಂತಮೂರ್ತಿ, ತೇಜಸ್ವಿ, ಲಂಕೇಶ್ ಸುತ್ತವೇ ಸುತ್ತುತ್ತಿರಲು ತದ ನಂತರದ ಸಾಹಿತಿಗಳ ಕುರಿತು ಗಂಭೀರವಾದ ವಿಮರ್ಶೆಗಳು ಬಾರದಿರುವುದು ಕಾರಣವೇ? 

ವಿವೇಕ ಶಾನಭಾಗ:  ಓದುಗನ ಆಯ್ಕೆಯ ಮಾನದಂಡಗಳನ್ನು ಬರಹಗಾರರು ನಿರ್ಧರಿಸಲಾರರು, ನಿರ್ಧರಿಸಬಾರದು. ಅದು ಅವರವರ ವೈಯಕ್ತಿಕ ಆಯ್ಕೆ. ಆದರೆ ಓದುಗರು ಒಂದು ಪುಸ್ತಕವನ್ನೆತ್ತಿಕೊಳ್ಳುವಂತೆ ಮಾಡುವಲ್ಲಿ ಇಂದು ಯಾವ ಸಂಗತಿಗಳು ಪ್ರಭಾವ ಬೀರುತ್ತವೆಂಬುದರ ಬಗ್ಗೆ ಕನ್ನಡದ ಸಂದರ್ಭದಲ್ಲಿ ಗಂಭೀರವಾಗಿ ಯೋಚಿಸಬೇಕಾಗಿದೆ. ಇದು ದೀರ್ಘ ಸಮಯ ಮತ್ತು ಅವಕಾಶ ಬೇಡುವ ಪ್ರತ್ಯೇಕ ವಿಷಯವಾದ್ದರಿಂದ ಇಲ್ಲಿಗೇ ನಿಲ್ಲಿಸುತ್ತೇನೆ.

ನಮ್ಮ ಸಾಹಿತ್ಯಿಕ ಚರ್ಚೆಗಳು ಹಳೆಯ ತಲೆಮಾರಿನ ಲೇಖಕರಲ್ಲೇ ಇನ್ನೂ ಸಿಲುಕಿಕೊಂಡಿರುವುದಕ್ಕೆ ವಿಮರ್ಶಕರನ್ನು ಮಾತ್ರ ದೂರುವುದು ತಪ್ಪಾದೀತು. ಅದಕ್ಕೆ ಹಲವಾರು ಕಾರಣಗಳಿವೆ. ವಿಮರ್ಶೆಗೆ ಅಕೆಡೆಮಿಕ್ ಆದ ತರಬೇತಿಯ ಅಗತ್ಯವಿದೆ. ನಮ್ಮ ವಿಶ್ವವಿದ್ಯಾಲಯಗಳ ಕನ್ನಡ ಮತ್ತು ಇಂಗ್ಲಿಷ್ ವಿಭಾಗಗಳ ಇಂದಿನ ಗುಣಮಟ್ಟ ನೋಡಿದರೆ ಸಾಕು ಹೆಚ್ಚಿಗೇನೂ ಹೇಳಬೇಕಾಗಿಲ್ಲ.

ನೀವು ಉಲ್ಲೇಖಿಸಿದ ’ಗಂಭೀರವಾದ ವಿಮರ್ಶೆ’ಯೆಂಬುದು ಕಾಲಾಂತರದಲ್ಲಿ ಹಣ್ಣು ಬಿಡುವ ಮರ. ಎಲ್ಲ ಕ್ಷೇತ್ರಗಳ ಹಾಗೆ ಇಲ್ಲಿಯೂ ತಕ್ಷಣದ ತೃಪ್ತಿ ಬಯಸುವವರು ಬಿಡಿಪುಸ್ತಕ ವಿಮರ್ಶೆಯ ಮೊರೆಹೋಗುತ್ತಾರೆ. ವಿಮರ್ಶೆಯೆಂದರೆ ಕೃತಿಗಳ ಮೂಲಕ ಕನ್ನಡ ಲೋಕದೊಡನೆ ನಡೆಸುವ ಗಾಢವಾದ ಮತ್ತು ತೀವ್ರವಾದ ಸಂವಾದ ಎಂಬುದನ್ನು ಮರೆತು ತಾವು ಕೃತಿಗಳ ಬೆಲೆಕಟ್ಟುವವರೆಂಬ ತಪ್ಪು ಕಲ್ಪನೆಗೆ ಈಡಾಗುತ್ತಾರೆ. ಇದರ ಫಲವಾಗಿ ತಾವು ನಿಷ್ಪಕ್ಷಪಾತಿಗಳೆಂದೂ, ಸಮತೋಲನವಿರುವವರೆಂದೂ ಸಾಬೀತುಪಡಿಸಲು ಒಂದು ಕೃತಿಯು ಎಷ್ಟೇ ಇಷ್ಟವಾದರೂ ಏನಾದರೂ ಹುಳುಕು ಹುಡುಕಲು ಪ್ರಯತ್ನಿಸುತ್ತಾರೆ. ಹಾಗಾಗಿ ವಿಮರ್ಶೆಯೆಂಬುದು ಇಷ್ಟಾನಿಷ್ಟಗಳ ಪಟ್ಟಿಯಾಗುವ ಅಪಾಯದಲ್ಲಿದೆ.

ಇನ್ನೂ ಮುಖ್ಯವಾದ ಸಂಗತಿಯೆಂದರೆ ಕಳೆದ ಕೆಲವು ದಶಕಗಳಲ್ಲಿ ಕನ್ನಡದಲ್ಲಿ ಸೃಷ್ಟಿಯಾಗಿರುವ ದಲಿತ ಸಾಹಿತ್ಯದೊಡನೆ ಗಾಢವಾದ ಸಂವಾದ ನಡೆಸಬಲ್ಲ ವಿಮರ್ಶೆ ಸಾಕಷ್ಟು ಬಾರದಿರುವುದು. ಲಂಕೇಶ್ ಅನಂತಮೂರ್ತಿ ತೇಜಸ್ವಿ ಮುಂತಾದವರು ಬಳಸಿದ ಮತ್ತು ಇಂದಿಗೂ ಆಧುನಿಕ ಕನ್ನಡ ವಿಮರ್ಶೆಯು ಬಳಸುವ ಬಹುತೇಕ ಸಲಕರಣೆಗಳು ಪಶ್ಚಿಮದಿಂದ ಬಂದವು. ಇದನ್ನು ಬಿಟ್ಟು ಅಥವಾ ಇದಕ್ಕೆ ಹೊಸ ಚೈತನ್ಯ ಕೊಡುವ ನಮ್ಮ ನೆಲದ ಪರಿಭಾಷೆಯನ್ನು ಬಳಸದಿದ್ದರೆ ನಾವು ಅಲ್ಲಲ್ಲೇ ಸುತ್ತುತ್ತೇವೆ.  ಜಿ. ಎಚ್. ನಾಯಕರು ಕುಸುಮಬಾಲೆಯ ಕುರಿತು ಹೇಳಿದ, ನಮ್ಮ ವಿಮರ್ಶೆಯ ಮಾನದಂಡಗಳನ್ನು ಬದಲಿಸಬೇಕೆನ್ನುವ ಮಾತು ಒಂದು ರುಚಿಕಟ್ಟಾದ ಹೇಳಿಕೆಯಾಗಿ – ಕೋಟೆಬಲ್ ಕೋಟ್ ಆಗಿ – ಉಳಿಯಿತೇ ವಿನಃ ಆ ನಿಟ್ಟಿನಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ.

ಋತುಮಾನ: ಬರವಣಿಗೆಯಲ್ಲಿ ಭಾಷೆಯ ಪಾತ್ರ ಏನು ಮತ್ತು ಎಷ್ಟರದು? ಈ ಪ್ರಶ್ನೆಯನ್ನು ಯಾಕೆ ಕೇಳುತ್ತಿದ್ದೆನೆಂದರೆ ಇಂದಿನ ಹೊಸ ತಲೆಮಾರಿನ ಕೆಲವರು ಕಥೆಗೆ ಅಚ್ಚುಕಟ್ಟಾದ ಭಾಷೆ, ಭಾಷಾ ಶುದ್ಧತೆ ಎನ್ನುವುದು ಮುಖ್ಯವೇ ಅಲ್ಲ ಎನ್ನುವ ಧೋರಣೆಯನ್ನು ಹೊಂದಿದ್ದಾರೆ. ಇನ್ನೊಂದೆಡೆ ಭಾಷೆಯೇ ಅಂತಿಮ ಎಂದು ನಂಬಿದ ರೀತಿಯಲ್ಲಿ ತಮ್ಮ ಬರವಣಿಗೆಗೆ ತಾವೇ ಮಾರು ಹೋದವರಂತೆ ಕಾಣುವ ಬರಹಗಾರರೂ ಇದ್ದಾರೆ. ನಿಮ್ಮ ದೃಷ್ಟಿಯಲ್ಲಿ ಬರಹಗಾರ ಭಾಷೆಯನ್ನು ಹೇಗೆ ನೋಡಬೇಕು? ಹೇಗೆ ಬಳಸಿಕೊಳ್ಳಬೇಕು?

ವಿವೇಕ ಶಾನಭಾಗ: ಬರವಣಿಗೆಗೆ ಭಾಷೆಯು ಅತ್ಯಂತ ಮಹತ್ವದ್ದು. ಅದೇ ಅದರ ದೇಹ. ಯಾವುದನ್ನೇ ಆಗಲಿ ಸರಳವಾಗಿ, ನೇರವಾಗಿ ಮತ್ತು ಸೂಕ್ತವಾಗಿ ಹೇಳುವುದು ಮುಖ್ಯ. ನಮ್ಮ ವಿಚಾರ, ಭಾವನೆ ತಲುಪಬೇಕಾದರೆ ಭಾಷೆ ಪಾರದರ್ಶಕವಾಗಿರಬೇಕೇ ಹೊರತು ಅಡ್ಡಿಯಾಗಬಾರದು. ಹೀಗಲ್ಲದೇ ಬೇರೆ ಯಾವ ಬಗೆಯಲ್ಲಿಯೂ ಇದನ್ನು ಹೇಳಲಾಗದು ಅನ್ನುವ ರೀತಿಯಲ್ಲಿ ಭಾಷೆಯಿರಬೇಕು. ಇಲ್ಲಿ ‘ಸೂಕ್ತ’ ಎಂಬುದು ತುಂಬಾ ಮಹತ್ವದ ಮಾತು. ಉಳಿದಂತೆ ಭಾಷಾ ಶುದ್ಧತೆ, ಅಚ್ಚುಕಟ್ಟು ಮುಂತಾದ ಸಾಪೇಕ್ಷ ಪದಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ತುಸು ಅಲಂಕಾರಿಕವಾಗಿ ಬರೆಯುವವರು ಸಾಮಾನ್ಯವಾಗಿ ತಮ್ಮ ಭಾಷೆಗೆ ತಾವೇ ಮಾರುಹೋಗುತ್ತಾರೆ. ಬಾಸಿಂಗ ನಮ್ಮ ಬಳಿ ಇದೆಯೆಂಬ ಮಾತ್ರಕ್ಕೆ ಹೊತ್ತುಗೊತ್ತಿಲ್ಲದೇ ಅದನ್ನು ಧರಿಸಿ ಓಡಾಡಬಹುದೇ?

ಋತುಮಾನ: ಕತೆ ಬರೆದವರೆ ಸ್ವತಃ ತನ್ನ ಕತೆ ಓದುವ (ಕೆಲವೊಮ್ಮೆ ಬೇರೆಯವರೂ) ಆಡಿಯೋ ಕತೆಗಳ ಕುರಿತು. ಕತೆಗಾರನ ಧ್ವನಿ ಓದುಗನಿಗೆ ತಟ್ಟುವುದು ಅಕ್ಷರದ ರೂಪದಲ್ಲಿ. ಇಲ್ಲಿ ಅಕ್ಷರಗಳೇ ಕತೆಗಾರನ ಧ್ವನಿ ಮತ್ತು ಅದು ಕತೆಗಾರ-ಓದುಗನ ನಡುವೆ ಖಾಸಗಿಯಾಗಿದ್ದಷ್ಟು ಒಳ್ಳೆಯದು. ಹೀಗೆ ಕತೆಗಾರ ಬಹಿರಂಗವಾಗಿ ಬರೆದದ್ದನ್ನ ಓದಿದ ತಕ್ಷಣ ಆ ಕತೆಗೊಂದು ಸೀಮಿತತೆ ಪ್ರಾಪ್ತಿಯಾಗುವುದಿಲ್ಲವೇ? ಈ ಬರೆದ ಕತೆಗಳನ್ನು ಓದುವುದರ ಬಗ್ಗೆ ನಿಮ್ಮ ಅನಿಸಿಕೆ ಏನು?

ವಿವೇಕ ಶಾನಭಾಗ: ಸ್ನೇಹಿತರ ಒತ್ತಾಯದಿಂದ ಓದಿದ್ದೇನೆಯೇ ಹೊರತು ಕತೆಯನ್ನು ಸ್ವತಃ ಓದುವುದು ನನಗೆ ಇಷ್ಟವಿಲ್ಲ. ಓದುವ ಕ್ರಿಯೆಯನ್ನು ಗಮನದಲ್ಲಿರಿಸಿಕೊಂಡು ಮತ್ತು ಮೌನವಾಗಿ ಓದುವಾಗ ಸಹ ಒಂದು ಧ್ವನಿ ನಮ್ಮ ಕಿವಿಗಳಲ್ಲಿ ಆ ಶಬ್ದಗಳನ್ನು ಉಸುರುತ್ತಿರುತ್ತದೆ ಎಂಬ ಎಚ್ಚರದಲ್ಲಿ ಬರೆಯುತ್ತೇನೆ. ಪುಸ್ತಕವನ್ನು ಇನ್ನೊಬ್ಬರ ಕಂಠದಲ್ಲಿ ಕೇಳಿದಾಗ, ಕಾದಂಬರಿಯ ಮೆಚ್ಚಿನ ಪಾತ್ರವನ್ನು ಸಿನೇಮಾದಲ್ಲೋ ನಾಟಕದಲ್ಲೋ ನಟಿ/ನಟನೊಬ್ಬನ ರೂಪದಲ್ಲಿ ಕಂಡಾಗ ಉಂಟಾಗುವಂಥ ಭ್ರಮನಿರಸನವಾಗುತ್ತದೆ. ಹಾಗಾಗಿ ವೈಯಕ್ತಿಕವಾಗಿ ಕೇಳು ಪುಸ್ತಕಗಳ ಬಗ್ಗೆ ನನಗೆ ಹೆಚ್ಚು ಒಲವಿಲ್ಲ. ಅದು ಬೇಕೆನ್ನುವವರ ಬಗ್ಗೆ ಅನಾದರವೂ ಇಲ್ಲ. ಅದರಿಂದ ಕೆಲವು ಅನುಕೂಲಗಳಿವೆ. ಉದಾಹರಣೆಗೆ ದೇವನಾಗರಿಯಲ್ಲಿ ಓದುವುದು ನಿಧಾನವಾಗುತ್ತದೆಂಬ ಕಾರಣಕ್ಕೆ ನಾನು ಮರಾಠಿಯ ಕೇಳು ಪುಸ್ತಕಗಳನ್ನು ಬಳಸುತ್ತೇನೆ.

ಋತುಮಾನ: ಕನ್ನಡದಲ್ಲಿ “ಗೋರಾ”, ‘ದ ರೆಡ್ ಹೇರ್ಡ್ ವುಮನ್’ ಇತ್ಯಾದಿಗಳಂಥ Novels of ideas ಯಾಕೆ ಕಡಿಮೆ? ನಮ್ಮಲ್ಲಿ ಒಂದೋ ಕಥೆ ಅಥವಾ ಕಥನವನ್ನು ನೆಚ್ಚುವ Novels of charactersಗಳು ಹೆಚ್ಚಾಗಿ ಬರುತ್ತವೆ. ಇದು ಮಹತ್ವಾಕಾಂಕ್ಷೆಯ ಕೊರತೆಯ ಕಾರಣದಿಂದಲೇ? ಅಥವಾ ಬಿಗ್ ಪಿಕ್ಚರ್ ಅನ್ನು ಅರ್ಥ ಮಾಡಿಕೊಂಡು, ತೊಡಗಿಕೊಳ್ಳಲು, ಅದನ್ನು ಸಾಹಿತ್ಯದ ಒಳಕ್ಕೆ ತರಲು ಬಯಸದ ಬೌದ್ದಿಕ ಸೋಮಾರಿತನದ ಕಾರಣದಿಂದ ಉಂಟಾದದ್ದೇ?

ವಿವೇಕ ಶಾನಭಾಗ: ನನಗೆ novels of ideas ಗಳ ಬಗ್ಗೆ ಒಲವಿಲ್ಲ. ಪಾತ್ರಗಳನ್ನು ಬುದ್ಧಿಪೂರ್ವಕ ನಿಯಂತ್ರಿಸುವುದರಿಂದ ಇಂಥ ಕಾದಂಬರಿಗಳಲ್ಲಿ ಪಾತ್ರಗಳು ಚಪ್ಪಟೆಯಾಗುತ್ತವೆ. ಮತ್ತು stylistic devices ಎನ್ನುತ್ತೇವಲ್ಲ ಅವು ಇಂಥ ಕೃತಿಗಳಲ್ಲಿ ಢಾಳಾಗಿ ಎದ್ದು ಕಾಣುತ್ತವೆ ಎಂಬುದು ನನ್ನ ಅನಿಸಿಕೆ. ಪಾತ್ರ ಯಾ ಕಥನವನ್ನು ಅವಲಂಬಿಸಿದ ಕಾದಂಬರಿಗಳನ್ನು ಬರೆಯುವುದೇ ಹೆಚ್ಚಿನ ಸವಾಲು. ಇದಕ್ಕೆ ಬೇಕಾಗುವ ಚಿಂತನೆ ಗಾಢವಾದುದು. ಬೌದ್ಧಿಕ ಸೋಮಾರಿತನ ಎಂಬ ನಿಮ್ಮ ಮಾತನ್ನು ಒಪ್ಪಲಾಗದು. ಅದಲ್ಲದೇ, ಪ್ರತಿ ವಿಚಾರವನ್ನೂ ಸಾಹಿತ್ಯದ ಒಳಗೆ ತರಬೇಕಾಗಿಲ್ಲ.

ಋತುಮಾನ: ನೀವು ಸುಮಾರು ಕಾಲು ಶತಮಾನಕ್ಕೂ ಹೆಚ್ಚು ಸಮಯ ಕಾರ್ಪೊರೇಟ್ ನಲ್ಲಿ ಇದ್ದವರು. ನಿಮಗಿಂತ ಹಿಂದಿನ ಅಥವಾ ಸಮಕಾಲೀನರಾದ ಬಹುಪಾಲು ಬರಹಗಾರರು ಸಾಹಿತ್ಯ, ಯೂನಿವರ್ಸಿಟಿಗಳ ಲೋಕದಲ್ಲಿಯೇ ತೊಡಗಿಕೊಂಡಿದ್ದು ಜೀವನೋಪಾಯಕ್ಕೂ ಅದನ್ನೇ ಅವಲಂಬಿಸಿದವರಾಗಿದ್ದರು. ಈ ಕಾಂಟೆಕ್ಸ್ಟ್ ನಲ್ಲಿ ನಿಮಗೆ ಕೆಲವು ಪ್ರಶ್ನೆಗಳಿವೆ.

– ನೀವು ಈ ಎರಡು ದೋಣಿಗಳ ಪಯಣವನ್ನು ಹೇಗೆ ನಿಭಾಯಿಸಿದಿರಿ? ಅಂದರೆ, ಕೆಲಸವನ್ನು ಜೀವನ ನಿರ್ವಹಣೆಗಾಗಿ ಮಾಡುತ್ತ, ಸಾಹಿತ್ಯವನ್ನೇ ನಿಮ್ಮ ಮುಖ್ಯ ಉದ್ದೇಶವಾಗಿ ಹಿಡಿದಿದ್ದಿರೇ?

ವಿವೇಕ ಶಾನಭಾಗ: ಸಾಹಿತ್ಯಕ್ಕೆ ಯಾವಾಗಲೂ ನನ್ನ ಹೃದಯದಲ್ಲಿ ಮೊದಲ ಸ್ಥಾನ. ಈ ಕುರಿತು ನನ್ನಲ್ಲಿ ಗೊಂದಲವಿಲ್ಲದ್ದರಿಂದ ಎರಡು ದೋಣಿಗಳ ಪಯಣ ಎಂದು ನನಗೆ ಅನ್ನಿಸಲಿಲ್ಲ. ಪೂರ್ಣಾವಧಿ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಆರು ವರ್ಷಗಳ ಕೆಳಗೆ ನಾನು ಕೆಲಸ ಬಿಟ್ಟೆ. ಕಳೆದೆರಡು ವರ್ಷಗಳಿಂದ ದೆಹಲಿಯ ಅಶೋಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ವಿಸಿಟಿಂಗ್ ಪ್ರೊಫೆಸರ್ ಆಗಿದ್ದೇನೆ. ಇದು ಹೆಚ್ಚಿನ ಸಂತೋಷ ಮತ್ತು ಚೈತನ್ಯವನ್ನು ಕೊಟ್ಟಿದೆ.

– ಇಂಥ ಸಂದರ್ಭದಲ್ಲಿ ಕೆಲಸ ಮಾಡುವಾಗ, ಸಾಹಿತ್ಯದ ವಾತಾವರಣದಲ್ಲಿಯೇ ಜೀವನೋಪಾಯಕ್ಕೂ ತೊಡಗಿಕೊಂಡಿದ್ದ ಇತರರಿಗಿಂತ ನಿಮ್ಮ ಓದಿನ ವಿಸ್ತಾರ (ಸಮಯದ ಅಭಾವದ ಕಾರಣದಿಂದ) ಕಡಿಮೆ ಆಯಿತೇನೋ ಎಂದು ನಿಮಗೆ ಅನ್ನಿಸುತ್ತದೆಯೇ? ಈಗಿನ ತುಂಬ ಜನ ಯುವ ಬರಹಗಾರರು ಡೈವರ್ಸಿಫೈಡ್ ಆದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಸಮಯ ನಿರ್ವಹಣೆಯ ಬಗ್ಗೆ ನಿಮ್ಮ ಸಲಹೆ ಏನು?

ವಿವೇಕ ಶಾನಭಾಗ: ಓದಿಗಾಗಲೀ ಬರವಣಿಗೆಗಾಲೀ ಅದು ನನ್ನ ಇಷ್ಟದ ಕೆಲಸವಾದ್ದರಿಂದ ನನಗೆ ಯಾವತ್ತೂ ಸಮಯದ ಅಭಾವವಾಗಲಿಲ್ಲ. ಮಹತ್ವದ್ದಲ್ಲದ ಸಂಗತಿಗಳನ್ನು ಕಡೆಗಣಿಸುವುದನ್ನು ಕಲಿತರೆ, ಎಂಥ ಕೆಲಸದ ಒತ್ತಡದ ನಡುವೆಯೂ ಬೇಕಾದಷ್ಟು ಸಮಯ ಒದಗಿ ಬರುತ್ತದೆ. ಸ್ವಲ್ಪ ಶಿಸ್ತನ್ನೂ ರೂಢಿಸಿಕೊಂಡೆ. ಇದನ್ನು ನಾನು ಕಲಿತದ್ದು ಯಶವಂತ ಚಿತ್ತಾಲರಿಂದ. ನಾನು ಉದ್ಯೋಗದಲ್ಲಿದ್ದಾಗ ನಿತ್ಯ ಬೆಳಿಗ್ಗೆ ತುಂಬಾ ಬೇಗ ಎದ್ದು ಮೂರು ಗಂಟೆಗಳ ಕಾಲ ಓದು ಬರಹಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಆ ಸಮಯದಲ್ಲಿ ಸಾಹಿತ್ಯ ಸಂಬಂಧಿತವಲ್ಲದ ಬೇರೆ ಏನನ್ನೂ ಮಾಡುತ್ತಿರಲಿಲ್ಲ. ಪ್ರತಿನಿತ್ಯ ದೊರಕುವ ಮೂರು ಗಂಟೆಗಳೆಂದರೆ ಅಪಾರವಾದ ಸಮಯ. ದಿನದ ಆರಂಭದಲ್ಲಿಯೇ ನನ್ನ ಓದಿನ ಹಸಿವು ತಣಿಯುತ್ತಿದ್ದರಿಂದ ಉಳಿದ ಹೊತ್ತಿನಲ್ಲಿ ಮನಸ್ಸನ್ನು ಬೇರೆ ಕೆಲಸದಲ್ಲಿ ತೊಡಗಿಸುವುದು ಸುಲಭವಾಯಿತು.

– ಕಾರ್ಪೊರೇಟ್ ನಲ್ಲಿ ಜೀವನದ ಮುಖ್ಯ ಸಮಯವನ್ನು ತೊಡಗಿಕೊಂಡಿದ್ದ ನಿಮಗೆ, ನಿಮ್ಮ ಮುಖ್ಯ ವಲಯ ಅಲ್ಲಿಯೂ ಇದೆ ಎಂದು ಅನ್ನಿಸುತ್ತದೆಯೇ ಅಥವಾ ಅದು ಸಾಹಿತ್ಯವನ್ನು ಸೃಷ್ಟಿಸಲು ಬೇಕಾದ ಅನುಭವ, ಪಾತ್ರಪ್ರಪಂಚಗಳನ್ನು ಸೃಷ್ಟಿಸುವ ದ್ರವ್ಯ ಮಾತ್ರವೇ ಆಗಿತ್ತೆ? ಒಂದೊಮ್ಮೆ ಹೌದು ಎಂದಾಗಿ, ಸಾಹಿತ್ಯವೇ ನಿಮ್ಮ ಬದುಕಿನ ಕೇಂದ್ರಬಿಂದುವಾಗಿದ್ದರೆ, ಆ ಇನ್ನೊಂದು ಪ್ರಪಂಚದಲ್ಲಿನ ನಿಮ್ಮ ಪಾತ್ರವನ್ನು ಹೇಗೆ ನಿರ್ವಹಿಸಿದಿರಿ?

ವಿವೇಕ ಶಾನಭಾಗ ಎಲ್ಲ ಕೆಲಸಗಳಂತೆ ಅದೊಂದು ಕೆಲಸ ಅನ್ನುವುದನ್ನು ಬಿಟ್ಟರೆ ನನಗೆ ಅದರ ಬಗ್ಗೆ ಹೆಚ್ಚಿನ ಮೋಹವಿಲ್ಲ. ಆದರೆ ಅದರಿಂದಾಗಿ ಕಾರ್ಪೊರೇಟ್ ಜಗತ್ತನ್ನು ತುಂಬಾ ಹತ್ತಿರದಿಂದ ನೋಡುವ, ಹೊರದೇಶಗಳಲ್ಲಿ ಹಲವು ವರ್ಷ ವಾಸಿಸುವ ಮತ್ತು ಉದ್ಯೋಗನಿಮಿತ್ತ ಪ್ರಪಂಚದಾದ್ಯಂತ ಪ್ರವಾಸ ಮಾಡುವ ಅವಕಾಶ ಒದಗಿಬಂತು. ಜಾಗತಿಕ ಮಟ್ಟದ ವ್ಯವಹಾರಗಳು ಮತ್ತು ರಾಜಕಾರಣದ ಪರಿಚಯವಾಯಿತು. ಆದರೆ ಯಾವ ಹೊರದೇಶದಲ್ಲಿಯೂ ನೆಲೆಸಬೇಕೆಂದು ನನಗನ್ನಿಸಲಿಲ್ಲ.

ಋತುಮಾನ: ಈ ಕೊನೆಯ ಪ್ರಶ್ನೆಯನ್ನು ಸ್ವಲ್ಪ ವ್ಯಂಗ್ಯವಾಗಿ ಕೇಳುತ್ತೇವೆ. ತಪ್ಪು ತಿಳಿಯಬೇಡಿ. ನಿಮ್ಮನ್ನೂ ಒಳಗೊಂಡಂತೆ ಕನ್ನಡದ ಈಗಿನ ಲೇಖಕರಿಗೆ – ನೀವು overt ಆಗಿ ಪ್ರಸ್ತುತ ರಾಜಕೀಯದ ಬಗ್ಗೆ ಯಾವ ಬಗೆಯಲ್ಲಿಯೂ ಸ್ಪಂದಿಸುವುದಿಲ್ಲ ಯಾಕೆ? ಎಂಬ ಪ್ರಶ್ನೆಯನ್ನು ನಾವೆಲ್ಲರೂ ಕೇಳುತ್ತಿರುತ್ತೇವೆ. ಇದಕ್ಕೆ ಟೈಲರ್ ಮೇಡ್ ಪ್ರತಿಕ್ರಿಯೆ ಎಂಬಂತೆ. “ಸಾಹಿತ್ಯವು ನೇರವಾಗಿ ರಾಜಕೀಯಕ್ಕೆ ಪ್ರತಿಸ್ಪಂದಿಸಬೇಕಿಲ್ಲ” ಎಂದೋ, “ಎಲ್ಲ ಬಗೆಯ ಬರಹವೂ ಒಂದು ಬಗೆಯಲ್ಲಿ ರಾಜಕೀಯ ಪ್ರತಿಕ್ರಿಯೆಯೇ” ಎಂದೋ ಅಥವಾ ಇಂಥದ್ದೇ ಎಲ್ಲರಿಗೂ ಗೊತ್ತಿರುವಂಥ ಉತ್ತರಗಳನ್ನು ನೀಡಲಾಗುತ್ತದೆ. ಸಾಹಿತ್ಯದಲ್ಲಿ ರಾಜಕೀಯ ಪ್ರತಿಕ್ರಿಯೆಗಳು ಹಾಸುಹೊಕ್ಕಾಗಿದ್ದರೂ, ಸಮಾಜ ಅತ್ಯಂತ ವಿಷಮಯವಾಗುತ್ತಿರುವಾಗ ಯಾವ ಸ್ಪಂದನೆಯನ್ನೂ ನೀಡದೇ ಮುಗುಮ್ಮಾಗಿರಲು ಒಂದು ಬಗೆಯ “ಅಸೂಕ್ಷ್ಮತೆ” ಬರಹಗಾರನಿಗಿರಬೇಕಾಗುತ್ತದೆ ಅಲ್ಲವೇ?

ವಿವೇಕ ಶಾನಭಾಗ: ಈ ಪ್ರಶ್ನೆಯನ್ನು ಯಾಕೆ ವ್ಯಂಗ್ಯವಾಗಿ ಕೇಳಬೇಕೆನ್ನುವುದು ನನಗೆ ಅರ್ಥವಾಗುತ್ತಿಲ್ಲ. ಇದೊಂದು ಗಂಭೀರವಾದ ಪ್ರಶ್ನೆ. ವ್ಯಂಗ್ಯವಾಗಿ ಕೇಳಿದರೆ ವ್ಯಂಗ್ಯವಾದ ಉತ್ತರ ದೊರಕುತ್ತದೆ! ಈ ಪ್ರಶ್ನೆಯನ್ನು ಕೇಳಿದ ಧಾಟಿಯಲ್ಲೇ ಇಂದಿನ ಸಮಸ್ಯೆಯ ಹೊರರೂಪವು ಗೋಚರಿಸುತ್ತದೆ. ರಾಜಕೀಯವು ನಮ್ಮ ಜೀವನವನ್ನು ಇಷ್ಟೊಂದು ಪ್ರಭಾವಿಸುತ್ತಿರುವಾಗ ಅದನ್ನು ಬಿಟ್ಟು ಯೋಚಿಸುವುದು, ಬರೆಯುವುದು ನನಗಂತೂ ಅಸಾಧ್ಯ. ಅದಕ್ಕೆ ಸೃಜನಶೀಲ ಲೇಖಕನಾಗಿ ನನ್ನದೇ ಆದ ಅಭಿವ್ಯಕ್ತಿಯಿದೆ. ಯಾರದೇ ಅಥವಾ ಯಾವುದೇ ಗುಂಪಿನ ಅಪೇಕ್ಷೆಗಳನ್ನು ಪೂರೈಸಿಲ್ಲ ಎಂದ ಮಾತ್ರಕ್ಕೆ, ಅವರ ಭಾಷೆಯಲ್ಲಿ ಮಾತನಾಡುವುದಿಲ್ಲ ಎಂದ ಮಾತ್ರಕ್ಕೆ ರಾಜಕೀಯ ಸ್ಪಂದನವಿಲ್ಲ ಎಂದು ಅರ್ಥವಲ್ಲ. ಅಂಥ ಒತ್ತಾಯಕ್ಕೆ ನಾನು ಒಳಗಾಗುವುದೂ ಇಲ್ಲ. ನಿಮ್ಮ ಪ್ರಶ್ನೆಯಲ್ಲೇ ಯಾವ ಉತ್ತರಗಳನ್ನು ನೀವು ಕೇಳಲು ಇಚ್ಛಿಸುವುದಿಲ್ಲ ಎಂಬುದನ್ನು ನೀವಾಗಲೇ ನಿರ್ಧರಿಸಿಬಿಟ್ಟಿದ್ದೀರಿ. ಈವತ್ತಿನ ಸಮಸ್ಯೆಯಿರುವುದು ಇಂಥ ಮುಚ್ಚಿದ ಮನಸ್ಥಿತಿಯಲ್ಲಿ. ಇಂದು ಪಕ್ಷಭೇದವಿಲ್ಲದೇ ಬಹುತೇಕರು ಘಂಟಾಕರ್ಣರಾಗಿದ್ದಾರೆ. ರಾಜಕೀಯ ಚಿಂತನೆಯೆನ್ನುವುದು ಕೇವಲ ಪಕ್ಷರಾಜಕೀಯವಾಗಿದೆ. ಹೀಗಾದ್ದರಿಂದ whataboutry ಗೆ ವಿಪುಲ ಅವಕಾಶ ದೊರೆತು ಯಾವುದೇ ಅರ್ಥಪೂರ್ಣ ಸಂವಾದ ಸಾಧ್ಯವಾಗುವುದಿಲ್ಲ. ಒಬ್ಬ ನಮ್ಮ ಕಡೆಗೋ ಅವರ ಕಡೆಗೋ ಎಂಬುದು ಮುಖ್ಯವಾಗಿದೆಯೇ ಹೊರತು ಆತನ/ಅವಳ ಚಿಂತನೆಗಳಲ್ಲ. ವ್ಯಕ್ತಿಗಳನ್ನು ಖಾನೆಯಲ್ಲಿ ಕೂರಿಸುವ ತನಕ ಪುರಸತ್ತಿಲ್ಲ. ‘ಇನ್ನೊಬ್ಬರು’ ತಮ್ಮ ನಿಲುವನ್ನು ಪ್ರಕಟಿಸಬೇಕೆನ್ನುವ ತಹತಹವು ಭಿನ್ನ ನಿಲುವಿನ ಬಗ್ಗೆ ಇರುವ ತೀವ್ರ ಅಸಹನೆಯಿಂದ ಹುಟ್ಟಿದುದಾಗಿದೆ. ಪ್ರತಿ ಪ್ರಜೆಯೂ ಪಕ್ಷರಾಜಕೀಯ ಮಾಡಬೇಕೆಂದು ಎಲ್ಲ ರಾಜಕೀಯ ಪಕ್ಷಗಳು ಮತ್ತು ಅವರ ಬೆಂಬಲಿಗರು ಬಯಸುತ್ತಾರೆ. ಯಾಕೆಂದರೆ political base ಸೃಷ್ಟಿಯಾಗುವುದು ಹೀಗೆಯೇ.

ಈ ಕಾಲದ ಬಹು ಮುಖ್ಯ ರಾಜಕೀಯ ನಡೆಯಾದ, ಮಾರುಕಟ್ಟೆ ಆಧಾರಿತ ಮತ್ತು ಅಸಮಾನತೆಯೇ ತಳಹದಿಯಾದ ಬಲಪಂಥೀಯ ಆರ್ಥಿಕ ಮಾದರಿಯನ್ನು ನಾವೆಲ್ಲರೂ ಪಕ್ಷಭೇದವಿಲ್ಲದೇ ಅಪ್ಪಿಕೊಂಡು ಅದರ ಫಲಾನುಭವಿಗಳಾಗಿದ್ದುದು ಈವತ್ತಿನ ಕ್ಷೋಭೆಯ, ವಿಷಮಯ ವಾತಾವರಣದ ಹಿಂದಿನ ಮುಖ್ಯ ಕಾರಣಗಳಲ್ಲಿ ಒಂದು. ಜಾಗತೀಕರಣದ ಫಲಾನುಭವವು ಉಂಟುಮಾಡಿದ ನೈತಿಕ ಬಿರುಕು ಎಷ್ಟು ಅಸಾಮಾನ್ಯವೆಂದರೆ ಈವತ್ತಿಗೂ ಅದಕ್ಕೆ ಸರಿಯಾದ ಪ್ರತಿರೋಧ ರೂಪಗೊಂಡಿಲ್ಲ. ಬೆರಳೆಣಿಕೆಯ ದೇಶಗಳನ್ನು ಬಿಟ್ಟರೆ ಜಗತ್ತಿನಾದ್ಯಂತ ಲಿಬರಲ್ ಧೋರಣೆಯ ದೇಶಗಳೂ ಸಹ right leaning economy ಯನ್ನೇ ಆಯ್ದುಕೊಂಡಿವೆ. ವಿಷವೃಕ್ಷವನ್ನು ಬೆಳೆಸಿ ಅಮೃತಫಲಗಳನ್ನು ಅಪೇಕ್ಷಿಸಿ ಹೋರಾಟ ಮಾಡುತ್ತಿದ್ದೇವೆ.

ಒಬ್ಬ ಸಾಹಿತಿಯ ರಾಜಕೀಯ ಸ್ಪಂದನವನ್ನು ಅರಿಯಲು ಅವಳ/ನ ಕೃತಿಗಳನ್ನು ಆಳವಾಗಿ ಓದಬೇಕು. ಆದರೆ ಈವತ್ತು ಆ ಶ್ರಮವಹಿಸುವ ತಾಳ್ಮೆ ಮತ್ತು ಸೂಕ್ಷ್ಮತೆ ಕಾಣುತ್ತಿಲ್ಲ. ಅದರ ಬದಲು ನೀವು ಯಾವ ಕಡೆ ಎಂದು ಹೇಳಿಬಿಡಿ ಎಂಬ ಒತ್ತಾಯ ಹೆಚ್ಚಾಗುತ್ತಿದೆ. ಚಿಂತನೆಯಿಲ್ಲದೇ, ಶ್ರಮವಿಲ್ಲದೇ ಅಭಿಪ್ರಾಯಗಳನ್ನು ಸ್ವೀಕರಿಸುವಂತಹ ಮನಸ್ಥಿತಿಯನ್ನು ಸಮಾಜದಲ್ಲಿ ಬೆಳೆಸುವುದು, ಸಮೂಹಕ್ಕಿಂತ (ಕಮ್ಯೂನಿಟಿಗಿಂತ) ವೈಯಕ್ತಿಕವೇ ಮುಖ್ಯ ಎಂಬ ಮೌಲ್ಯವನ್ನು ಬೆಳೆಸುವುದು ಮಾರುಕಟ್ಟೆ ಆಧಾರಿತ ಉದ್ದಿಮೆಗಳು ನಡೆಯಲು ಅತ್ಯವಶ್ಯಕ. ಇದಕ್ಕಾಗಿ ಕಲ್ಪನೆಗೂ ನಿಲುಕದಷ್ಟು ಅಗಾಧ ಪ್ರಮಾಣದ ಹಣ ವ್ಯಯವಾಗಿದೆ, ವ್ಯಯವಾಗುತ್ತಿದೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಜಗತ್ತಿನ ಸಂಪತ್ತು ಯಾವ ಉದ್ದಿಮೆಗಳತ್ತ ಹರಿದಿದೆಯೆಂದು ಗಮನಿಸಿದರೆ ಇದು ನಿಚ್ಚಳವಾಗುತ್ತದೆ. ಇಪ್ಪತ್ತು ಸೆಕೆಂಡುಗಳ ಜಾಹೀರಾತು ನೋಡಿ ಪ್ರಭಾವಿತರಾಗುವ ಮನಸ್ಥಿತಿಯನ್ನು ಒಮ್ಮೆ ರೂಪಿಸಿದಿರೋ ಅದು ರಾಜಕೀಯವನ್ನೂ ಒಳಗೊಂಡಂತೆ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸತೊಡಗುತ್ತದೆ. ಖ್ಯಾತ ನಟ ಅಥವಾ ಕ್ರಿಕೆಟರ್ ಸೂಚಿಸಿದ ವಸ್ತುವಿನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸದಿರುವ ನಿಲುವನ್ನು ಬಿತ್ತಲಾಗುತ್ತದೆ. ಅದು ರಾಜಕೀಯ ನೇತಾರರಿಗೂ ವಿಸ್ತರಿಸುತ್ತದೆ. Critical thinking ಇಲ್ಲದೇ ಅಭಿಪ್ರಾಯವನ್ನು ಸ್ವೀಕರಿಸುವ ಇಂಥ ಮನಸ್ಥಿತಿಯ ಸೃಷ್ಟಿಯಿಂದಾಗಿಯೇ ಇಡಿಯ ಜಗತ್ತು ಉಳ್ಳವರ ಪರವಾದ, ಪರಿಸರವಿರೋಧಿಯಾದ ಧೋರಣೆಗಳತ್ತ ವಾಲುತ್ತಿದೆ. ಲೈಕ್ ಗುಂಡಿಯ ಹಿಂದಿರುವುದು ಕೂಡ ಇದೇ – ತೀರಾ ಯೋಚಿಸದೇ ಒಂದು ಅಭಿಪ್ರಾಯದ ಪರ ವಹಿಸು ಎಂಬ ಪುಸಲಾಯಿಸುವಿಕೆ. ಟಿವಿಯಲ್ಲಿ ನಡೆಯುವ ಡಿಬೇಟುಗಳಿಂದ ನಮ್ಮ ಅಪೇಕ್ಷೆಗಳೇನೆಂದರೆ ನಮ್ಮೊಳಗೆ ನಡೆಯಬೇಕಾದ ವಾಗ್ವಾದಗಳನ್ನು ಅಲ್ಲಿ ವೇದಿಕೆಯ ಮೇಲಿರುವವರು ನಡೆಸಿ ಕೊನೆಯಲ್ಲಿ ನಮ್ಮ ಕೈಗೆ ಅಭಿಪ್ರಾಯದ ಫಸಲನ್ನು ಕೊಟ್ಟು ಹೋಗಲಿ ಎಂಬುದೇ. ನಮ್ಮನ್ನು ಕಲಕುವ, ಚಿಂತನೆಯ ಮೂಲಕ ಅರ್ಥಗಳನ್ನು ಬಿಟ್ಟುಕೊಡುವ ಸಾಹಿತ್ಯಕ್ಕಿಂತ ಸಂದಿಗ್ಧಗಳಿಲ್ಲದ ಸುಗಮ ಸಾಹಿತ್ಯವನ್ನು ಬಯಸುವಂತಹ ವಾತಾವರಣ ರೂಪಗೊಂಡಿದೆ. ಒಂದು ಪುಸ್ತಕವನ್ನು ಓದದೇ ಅದರ ಬಗ್ಗೆ ಅಭಿಪ್ರಾಯ ತಳೆಯಲು ಸಾಧ್ಯವಾಗುವುದು ಸುಲಭದ ದಾರಿಯಲ್ಲವೇ? ಆದರೆ, ಸರಳೀಕೃತಗೊಳಿಸದೇ, ಕಪ್ಪುಬಿಳುಪಾಗದೇ ರಾಜಕೀಯ ಸ್ಪಂದನವನ್ನು ಸಾಹಿತ್ಯ ಕೃತಿಯೊಂದರಲ್ಲಿ ಹಿಡಿಯುವ ಜಟಿಲತೆಯೇ ಅದರ ಆಕರ್ಷಣೆಯೂ ಸವಾಲೂ ಆಗಿದೆ. ನನ್ನ ದೃಷ್ಟಿಯಲ್ಲಿ ಪರೋಕ್ಷತೆ ಸಾಹಿತ್ಯದ ಮೂಲಗುಣಗಳಲ್ಲಿ ಒಂದು. ಸೃಜನಶೀಲ ಸಾಹಿತ್ಯ Overt ಆಗಿರಬಾರದು. ಅದೇ ರೀತಿ ಆಕ್ಟಿವಿಸ್ಟ್ ಆದವರು ಪರೋಕ್ಷವಾಗಿರಬಾರದು, Overt ಆಗಿರಬೇಕು. ಅವರು ರೂಪಕ ಭಾಷೆಯಲ್ಲಿ ಮಾತನಾಡಬಾರದು. ಸೃಜನಶೀಲ ಸಾಹಿತ್ಯಕ್ಕೆ ತಕ್ಷಣವು ಒಂದು ಟ್ರಿಗರ್ ಅಷ್ಟೇ. ಅದು ಅದರಾಚೆಗೆ ಹೋಗಿ ಮನುಷ್ಯನನ್ನು ಅರಿಯಲು ಪ್ರಯತ್ನಿಸುತ್ತದೆ. ಆದ್ದರಿಂದಲೇ ಯಾವುದೇ ತತ್ವ ಅಥವಾ ಪಂಥಕ್ಕೆ ಗಂಟುಬಿದ್ದ ಲೇಖಕ ಒಮ್ಮುಖವಾದ ಪಾತ್ರಗಳನ್ನು ಸೃಷ್ಟಿಸುತ್ತಾನೆ/ಳೆ. ಯಾಕೆಂದರೆ ನಮ್ಮ ಜೀವನವು ಯಾವ ರಾಜಕೀಯ ವ್ಯಾಖ್ಯೆಯನ್ನೂ ಪಾಲಿಸಿ ನಡೆಯುವುದಿಲ್ಲ.

ಧ್ರುವೀಕರಣವೆನ್ನುವುದು ಈವತ್ತಿನ ಕಾಲದ ಅತ್ಯಂತ ಅಪಾಯಕಾರಿ ಸಂಗತಿಯಾಗಿ ಬೆಳೆದಿದೆ. ಇದು ಎಲ್ಲ ಕಾಲದಲ್ಲೂ ಶಕ್ತಿಕೇಂದ್ರಗಳು ಉರುಳಿಸಿದ ದಾಳವೇ ಆದರೂ ಇಂದಿನ ಸಂವಹನದ ಸಲಕರಣೆಗಳು ಇದನ್ನು ಆತಂಕಕಾರಿ ಮಟ್ಟಕ್ಕೆ ಬೆಳೆಸಿವೆ. ರಾಜಕೀಯ ಪಕ್ಷಗಳು ಮಾತ್ರವಲ್ಲ ಪ್ರತಿಯೊಂದು ಸಮುದಾಯವೂ ಪ್ರತೀ ವಿಚಾರಧಾರೆಯವರೂ ಪ್ರತಿ ಸಣ್ಣ ಗುಂಪೂ ಕೂಡ ಯಾವುದೋ ಹುನ್ನಾರ ಅವರ ವಿರುದ್ಧ ನಡೆಯುತ್ತಿದೆಯೆಂಬ ಭಯವನ್ನು ತಮ್ಮ ಬೆಂಬಲಿಗರಲ್ಲಿ ಬಿತ್ತಿ, ಅವರನ್ನು ಧ್ರುವೀಕರಿಸಿ, ತಮ್ಮ ಅಂಕೆಯಲ್ಲಿ ಹಿಡಿದಿಡಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಗುಂಪುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕನ್ನಡದ ಯುವ ಮನಸ್ಸುಗಳನ್ನು ಧ್ರುವೀಕರಿಸಲು ನಡೆಸುವ ಪ್ರಯತ್ನಗಳನ್ನು ನೋಡಿದರೆ ಅಸಹ್ಯವಾಗುತ್ತದೆ. ಅಪ್ರಸ್ತುತರಾಗುವ ಭಯದಿಂದ ನರಳುವ ಈ ಪುಡಿ ನೇತಾರರು ತಮ್ಮ ಅಂಕೆಯಿಂದ ಬೆಂಬಲಿಗರು ತಪ್ಪಿಸಿಕೊಂಡು ಹೋಗದಿರಲೆಂದು ದಿನಕ್ಕೊಂದು ಹೊಸ ಆಟ ಹೂಡಿ ಅವರಲ್ಲಿ ಅಭದ್ರತೆಯನ್ನು ಸೂಕ್ಷ್ಮವಾಗಿ ಬಿತ್ತುತ್ತ ತಮ್ಮ ವಿಚಾರಗಳಲ್ಲೇ ಅದಕ್ಕೆ ಪರಿಹಾರವಿದೆಯೆಂದು ಬಿಂಬಿಸುತ್ತಾರೆ. ಈ ನಿರಂತರ ಕೂಗಾಟದಲ್ಲಿ ತಮ್ಮ ದನಿ ಕೇಳಿಸಬೇಕಾದರೆ ಕ್ರಮೇಣ ಇನ್ನೂ ಇನ್ನೂ ದೊಡ್ಡದಾಗಿ ಕೂಗುವ ಅಗತ್ಯವಿರುವುದರಿಂದ ನಿತ್ಯವೂ ಹೊಸ ಮೂರ್ತಿಗಳ ಭಂಜನೆ ನಡೆಸಬೇಕಾಗುತ್ತದೆ. ವಿತಂಡವಾದದ ಸಾಮರ್ಥ್ಯವು ಅಗಾಧವಾದುದು.

ಇಂದು ನಮ್ಮ ದೇಶಕ್ಕೆ ಹೊಸದೊಂದು ರಾಜಕೀಯ ಚಿಂತನೆಯ ಅಗತ್ಯವಿದೆ. ಈಗ ಇದು ತೀರಾ ದೂರದ ಮಾತೆಂದು ಅನಿಸಿದರೂ, ಮುಂಬರುವ ದಿನಗಳಲ್ಲಿ ಪರಿಸರವಾದವು (ವಿಶಾಲವಾದ ಅರ್ಥದಲ್ಲಿ) ನಮ್ಮೆಲ್ಲರ ಕಾಳಜಿಯ ಕೇಂದ್ರವಾಗಬಲ್ಲದು. ಯಾಕೆಂದರೆ ಜಾತಿ ಧರ್ಮ ತತ್ವಗಳನ್ನು ಮೀರಿ ಅದು ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಲಿದೆ. ಇಂದು ದೇಶದಲ್ಲಿ ನಡೆಯುತ್ತಿರುವ ಅಭೂತಪೂರ್ವವಾದ ರೈತ ಚಳುವಳಿಯು ಅದರ ಬೀಜವಾಗುವ ಎಲ್ಲ ಸಾಧ್ಯತೆಗಳನ್ನು ಒಳಗೊಂಡಿದೆ. ಸಂಘಟನೆಯ ಅವರ ಚಾಕಚಕ್ಯತೆಯನ್ನು ನೋಡಿದರೆ ಆ ಮೂಲಕ ಹೊಸ ರಾಜಕೀಯ ಚಿಂತನೆಯ ಉದಯವಾಗಬಹುದು ಅನಿಸುತ್ತದೆ. ನಾನು ಅಧಿಕಾರಗ್ರಹಣದ ಮಾತಾಡುತ್ತಿಲ್ಲ. ತಳಮಟ್ಟದಲ್ಲಿ ಅಭಿಪ್ರಾಯ ರೂಪಿಸುವ ಅವರ ಸತತ ಪ್ರಯತ್ನಗಳು ಮತ್ತು ಅವರ ತಾಳಿಕೆಯ ಗುಣವನ್ನು ಕಂಡರೆ ಈ ರೈತಮೂಲ ಚಿಂತನೆ ಹೊಸ ಆಯಾಮಗಳನ್ನು ಪಡೆದು ದೀರ್ಘಾವಧಿ ಉಳಿಯುವ ಲಕ್ಷಣಗಳು ಕಾಣುತ್ತಿವೆ. ಈ ಚಳುವಳಿಯು ಇಂದಿನ ರಾಜಕೀಯವನ್ನು ಮತ್ತು ಅದರ ಬೆಂಬಲಿಗರನ್ನು ಹೊಸ ದೃಷ್ಟಿಯಿಂದ ನೋಡಲು ಒತ್ತಾಯಿಸುತ್ತಿದೆ. ಇಂದು ಪರಿಸರನಾಶೀ ಉದ್ದಿಮೆಗಳು ಜಗತ್ತಿನಾದ್ಯಂತ ಬಲಪಂಥೀಯ ರಾಜಕೀಯ ಪಕ್ಷಗಳಿಗೆ ಧಾರಾಳ ಧನಸಹಾಯ ಮಾಡುತ್ತಿವೆಯೆಂಬುದನ್ನು ಗಮನಿಸಬೇಕು.

ಚಿತ್ರಗಳು : ಸಂದೀಪ್ ಕುಮಾರ್

4 comments to ““ಪರೋಕ್ಷತೆ ಸಾಹಿತ್ಯದ ಮೂಲಗುಣಗಳಲ್ಲಿ ಒಂದು” : ವಿವೇಕ ಶಾನಭಾಗ ಸಂದರ್ಶನ”
  1. ವಿಮರ್ಶೆಯೆಂಬುದು ಇಷ್ಟಾನಿಷ್ಟಗಳ ಪಟ್ಟಿಯಾಗುವ ಅಪಾಯದಲ್ಲಿದೆ..
    ವಿವೇಕ ಹೇಳಿದ ಮಾತು ತುಂಬ ಪ್ರಸ್ತುತವಾದದ್ದು.

    • ಅಲಂಕಾರಿಕ ಬರವಣಿಗೆಯ ಮೋಹದ ಕುರಿತು ನೀಡಿದ ‘ಬಾಸಿಂಗ ನಮ್ಮ ಬಳಿ ಇದೆಯೆಂಬ ಮಾತ್ರಕ್ಕೆ ಹೊತ್ತುಗೊತ್ತಿಲ್ಲದೇ ಅದನ್ನು ಧರಿಸಿ ಓಡಾಡಬಹುದೇ?’ ಎಂಬುದೇ ಒಂದು ಅತ್ಯಂತ ಸೃಜನಶೀಲವಾದ ಉಪಮೆ..

ಪ್ರತಿಕ್ರಿಯಿಸಿ