ಸಂಸ್ಕೃತ ವಿಶ್ವವಿದ್ಯಾಲಯ ಬೇಕೇ?

 

ಜನರಿಗೆ ಬೇಕಾದುದನ್ನು ಒದಗಿಸಲು ಮುಂದಾಗದ ಮತ್ತು ಅವರಿಗೆ ಬೇಡದುದನ್ನು ಒತ್ತಾಯದಿಂದ ಹೇರಲು ಯಾವ ಮುಜುಗರವೂ ಇರದ ಸರಕಾರಗಳು ಆಳ್ವಿಕೆ ನಡೆಸುತ್ತಿರುವಾಗ ಸಂಸ್ಕೃತ ವಿಶ್ವವಿದ್ಯಾಲಯ ಬೇಕೋ ಬೇಡವೋ ಎಂಬ ಮಾತುಕತೆಯೆಲ್ಲ ಹೊತ್ತುಹೋಗದವರ ಚಟವಾಗಿ ತೋರಿದರೆ ಅಚ್ಚರಿಯೇನಿಲ್ಲ. ಇದು ಕೈಚೆಲ್ಲಿ ಕುಳಿತು ಆಡುತ್ತಿರುವ ಮಾತಲ್ಲ. ದುಡ್ಡು ಮತ್ತು ಕೂರಲು ಜಾಗ ಕೊಟ್ಟರೆ ಏನು ಬೆಳವಣಿಗೆಯನ್ನಾದರೂ ಮಾಡಬಹುದೆಂಬ ನಂಬಿಕೆಯನ್ನು ಸರಕಾರ ಹರಡುತ್ತಿದ್ದರೆ ಅದನ್ನು ಒಪ್ಪಿಕೊಂಡು ಮುನ್ನುಗ್ಗಲು ಅರಿತವರೂ ಮುಂದಾಗುತ್ತಿರುವಾಗ ಯಾರದೇನು ಮಾತು?

ಈಗಿನ ಮಾತಿಗೆ ಬರೋಣ. ಕನ್ನಡದ ಬೆಳವಣಿಗೆಗೆ ಅಡ್ಡಿಯಾಗದಂತೆ ಸಂಸ್ಕೃತ ವಿಶ್ವವಿದ್ಯಾಲಯವನ್ನು ಕಟ್ಟಬೇಕೆಂದು ಸರಕಾರಕ್ಕೆ ಕಿವಿ ಮಾತು ಹೇಳಲಾಗಿದೆ. ಸಂಸ್ಕೃತದ ಓದು ಕನ್ನಡಕ್ಕೆ ಹೇಗೆ ನೆರವಾಗಬಲ್ಲುದೆಂದು ಗುರುತಿಸುವಾಗ ಹೇಳಿರುವುದೇನು? ಸಂಸ್ಕೃತ ತುಂಬ ಹಳೆಯ ನುಡಿಯಾಗಿದೆ; ಅದರ ನೆರಳಲ್ಲಿ ಕನ್ನಡದಂತಹ ನುಡಿಗಳು ಬಾಳಿಬದುಕುತ್ತಿವೆ ಎಂದು ತಾನೆ? ಜೊತೆಗೆ ಸಂಸ್ಕೃತದಲ್ಲಿ ಅರಿವಿನ ನೆಲೆಗಳು ಹೆಚ್ಚಾಗಿರುವುದರಿಂದ ಅವೆಲ್ಲವನ್ನು ಪಡೆದು ನಮ್ಮ ನಾಳೆಗಳನ್ನು ಕಟ್ಟಿಕೊಳ್ಳಬೇಕೆಂದು ಕೂಡ ಹೇಳಲಾಗಿದೆ. ಮೊದಲ ಮಾತನ್ನು ನೋಡೋಣ. ಸಂಸ್ಕೃತ ಮತ್ತು ಕನ್ನಡಗಳ ನಂಟನ್ನು ಕೆಲವರು ಇನ್ನೂ ತಾಯಿಬೇರು ಮತ್ತು ಕೊಂಬೆಯ ನಂಟಿಗೆ ಹೋಲಿಸುತ್ತಿದ್ದಾರೆ. ಕನ್ನಡದಲ್ಲಿ ಹೆಚ್ಚು ಸಂಸ್ಕೃತ ನುಡಿಯ ಪದಗಳು ಬಂದು ಸೇರಿಕೊಂಡಿವೆ. ಅವುಗಳನ್ನು ಬಳಸಿಕೊಂಡು ಕನ್ನಡ ಕವಿಗಳು ತಮ್ಮ ಕೃತಿಗಳನ್ನು ಕಟ್ಟಿದ್ದಾರೆ ಎಂದ ಮಾತ್ರಕ್ಕೆ ಕನ್ನಡವು ಸಂಸ್ಕೃತವನ್ನು ಬಿಟ್ಟರೆ ಬಡ ನುಡಿಯಾಗುತ್ತದೆಂದು ತಿಳಿಯುವುದು ಸರಿಯಲ್ಲ. ಅಲ್ಲದೆ ಸಂಸ್ಕೃತ ನುಡಿಯ ಕಟ್ಟೋಣವನ್ನು ಅರಿಯದಿದ್ದರೆ, ಅದರ ಕಟ್ಟುಕಟ್ಟಲೆಗಳನ್ನು ತಿಳಿದುಕೊಳ್ಳದಿದ್ದರೆ ಕನ್ನಡ ನುಡಿಯನ್ನು ಬಳಸುವುದು, ಅದರ ಕಟ್ಟೋಣವನ್ನು ತಿಳಿಯುವುದಕ್ಕೆ ಆಗುವುದಿಲ್ಲ ಎನ್ನುವ ಮಾತಿನಲ್ಲೂ ಹುರುಳಿಲ್ಲ. ಹಾಗೆ ನೋಡಿದರೆ ಸಂಸ್ಕೃತದ ಎಷ್ಟೋ ಪದಗಳನ್ನು ಕನ್ನಡ ಬಳಸುತ್ತಿದ್ದರೂ ಅವುಗಳ ತಿರುಳನ್ನು ತನಗೆ ಬೇಕೆನಿಸುವ ಹಾಗೆ ಬದಲಿಸಿಕೊಂಡಿದೆ. ಕನ್ನಡಿಗರು ಹೊಸ ರಚನೆಗಳನ್ನು ಕಟ್ಟಿದ್ದಾರೆ. ನುಡಿಗಳ ನಡುವೆ ನಡೆಯುವ ಈ ಬಗೆಯ ನಡೆಗಳನ್ನು ನೋಡಿಯೂ ಕನ್ನಡವನ್ನು ‘ಸರಿಯಾಗಿ’ ಬಳಸಲು ಸಂಸ್ಕೃತದ ನೆರವು ಬೇಕೇಬೇಕು ಎಂದು ಹೇಳುವುದು, ಅದನ್ನೇ ನಂಬುವುದು , ಬೇರೆಯವರು ನಂಬಬೇಕೆಂದು ಬಯಸುವುದು ನಗೆಯುಕ್ಕಿಸುತ್ತದೆ.

ಕನ್ನಡಕ್ಕೆ ಅದರದೇ ಆದ ಕಟ್ಟು ಕಟ್ಟಲೆಗಳಿವೆ; ಅದಕ್ಕೂ ಸಂಸ್ಕೃತವೆಂಬ ನುಡಿಗೂ ಆ ನೆಲೆಯಲ್ಲಿ ನಂಟು ಇಲ್ಲ ಎಂದು ಹೇಳುತ್ತಿರುವ ಶಂಕರ ಭಟ್ ಅವರ ನಿಲುವನ್ನು ಒಪ್ಪದೇ ಇರುವವರು ನುಡಿಯ ಕಟ್ಟುಕಟ್ಟಲೆಗಳಲ್ಲಿ ಎರಡು ಬಗೆಗಳಿರುತ್ತವೆ ಎನ್ನುವುದನ್ನು ಮರೆಯುತ್ತಾರೆ. ಒಂದು ಬಗೆಯವು ಹೆಚ್ಚಾಗಿ ಎಲ್ಲ ನುಡಿಗಳಿಗೂ ಸಲ್ಲುವಂತಹವು. ಒಂದು ಬಗೆಯವು ಆಯಾ ನುಡಿಗೇ ಸಲ್ಲುವಂತಹವು. ಮೊದಲನೆಯ ಬಗೆಯವನ್ನು ಹಿಡಿದು ಅವೇ ಕನ್ನಡ ಮತ್ತು ಸಂಸ್ಕೃತಗಳ ಬಿಡಿಸಲಾಗದ ನಂಟನ್ನು ತೋರುತ್ತಿವೆ ಎಂದು ಹೇಳುವುದು ಎಷ್ಟು ಸರಿ? ಅಂದರೆ ಹೇಳಬೇಕಾದ್ದಿಷ್ಟೆ: ಒಂದು ನುಡಿಯಾಗಿ ಸಂಸ್ಕೃತವನ್ನು ಕಲಿಯಬೇಕೆಂದು ಹೇಳುವುದು ಒಂದು ಮಾತು. ಆದರೆ ಅದಿಲ್ಲದೆ ಕನ್ನಡಕ್ಕೆ ನೆಲೆಯೇ ಇಲ್ಲವೆಂದು ಹೇಳುವುದು ಇನ್ನೊಂದು ಮಾತು. ಎರಡನೆಯದನ್ನು ಒಪ್ಪಲಾಗದು. ಹಾಗೆ ನೋಡಿದರೆ ಮುಂದೆ ಕನ್ನಡವನ್ನು ಬಲವಾಗಿ ಕಟ್ಟ ಬೇಕೆನ್ನುವವರು ಬೇರೆ ನುಡಿಗಳ ಮೊರೆ ಹೋಗುವುದನ್ನು ತಪ್ಪಿಸದ ಹೊರತು ಬೇರೆ ದಾರಿಯೇ ಇಲ್ಲವೆಂದು ತೋರಿಸಿಕೊಡುತ್ತಿದ್ದಾರೆ. ಜನರ ನುಡಿಯಾಗಿ ಕನ್ನಡ ಉಳಿದು ಬೆಳೆಯಲು ಅದು ತನ್ನ ದಿಟ್ಟದಾರಿಯನ್ನು ತಾನೇ ಕಂಡುಕೊಳ್ಳಬೇಕಾಗಿದೆ. ಕನ್ನಡದ ಬೆಳವಣಿಗೆಗೆ ಅಡ್ಡಿಯಾಗದಂತೆ ಸಂಸ್ಕೃತವನ್ನು ಬೆಂಬಲಿಸಬೇಕೆನ್ನುವುದು ಹಾಗಾಗಿ ನೆರವೇರುವ ಗುರಿಯಾಗಿ ಕಾಣುವುದಿಲ್ಲ.

ಇನ್ನು ಸಂಸ್ಕೃತದಲ್ಲಿ ಇರುವ ತಿಳುವಳಿಕೆ ಎಲ್ಲರಿಗೂ ದೊರಕುವಂತಾಗಲು ಆ ನುಡಿಗೆ ಬೆಂಬಲ ದೊರಕಬೇಕೆನ್ನುವುದು ಇನ್ನೊಂದು ಮಾತು. ತಿಳುವಳಿಕೆ ಎನ್ನುವುದು ನುಡಿಯಲ್ಲಿ ಇರುವುದೇ ಹೊರತು ಅದು ಆ ನುಡಿಗಷ್ಟೇ ಸೇರಿದ್ದಲ್ಲ. ಆದರೆ ನುಡಿಯರಿಗರು ಆ ತಿಳುವಳಿಕೆಯೆಲ್ಲ, ಆ ನುಡಿಗೆ ಮತ್ತು ಆ ನುಡಿಯನ್ನು ಬಲ್ಲವರಿಗೆ ಮಾತ್ರ ಸಿಗುವಂತಾಗಲಿ ಎಂದು ಹುನ್ನಾರಗಳನ್ನು ಮಾಡಬಹುದು. ಅದು ನಿಡುಗಾಲ ನಿಲ್ಲವುದಿಲ್ಲ. ಅರಿವು ಎಲ್ಲರಿಗೂ ದೊರಕಬೇಕೆನ್ನುವುದು ಇಂದಿನ ನಡವಳಿಕೆ, ಸಂಸ್ಕೃತದಲ್ಲಿ ಇದೆಯೆನ್ನಲಾದ ತಿಳುವಳಿಕೆ ಹೀಗೆ ಈಗಾಗಲೇ ಜನರ ನುಡಿಯಲ್ಲಿ ದೊರಕುವಂತೆ ಮಾಡಲು ನೂರಾರು ವರುಷಗಳಿಂದ ಬಲ್ಲವರು ಕೆಲಸ ಮಾಡುತ್ತಲೇ ಇದ್ದಾರೆ. ಆ ತಿಳಿವಳಿಕೆಗೆ ದಿನದಿನದ ಬದುಕಿನೊಡನೆ ಹೆಣೆದುಕೊಳ್ಳುವ ಕಸುವಿದ್ದರೆ ಅದು ಬಳಕೆಗೆ ಬಂದಿದೆ. ಇಂತಹ ತಿಳುವಳಿಕೆ ಜನರಲ್ಲೂ ಇದೆ. ಅವರ ನುಡಿಗಳಲ್ಲೂ ಅದು ದೊರಕುತ್ತದೆ. ಬರಹಕ್ಕೆ ಇಳಿಯದ ಇಂತಹ ತಿಳುವಳಿಕೆ ಜನರ ಬದುಕಿನ ನೆಲೆಯೇ ಆಗಿದೆ. ಹಾಗಿಲ್ಲದಿದ್ದಲ್ಲಿ ನಾವು ತಿನ್ನುವ ದವಸಗಳನ್ನೆಲ್ಲ ಬೆಳೆಯುವವರು, ಬಗೆಬಗೆಯ ಹತ್ಯಾರುಗಳನ್ನು ಮಾಡುವವರು ಏನು ಮಾಡಬೇಕಿತ್ತು? ಅವರಲ್ಲೂ ಅವರದ್ದೇ ಆದ ತಿಳುವಳಿಕೆ ಇದೆ. ಅದು ಹೊತ್ತಗೆಗಳಲ್ಲಿ ನೆಲೆಯಾಗಲಿಲ್ಲ. ಹಾಗೆ ನೋಡಿದರೆ ನಡೆಯಿಲ್ಲದ ಮತ್ತು ನಡೆ ಕಳೆದುಕೊಂಡ ತಿಳುವಳಿಕೆಗಳು ಹೆಚ್ಚಾಗಿ ಹೊತ್ತಗೆ ಸೇರುತ್ತವೆಯೋ ಏನೋ. ಆದ್ದರಿಂದ ಸಂಸ್ಕೃತದಲ್ಲಿ ಇರುವ ತಿಳುವಳಿಕೆ ಮೇಲುಮಟ್ಟದ್ದು, ಜನರಲ್ಲಿ ಇರುವ ತಿಳುವಳಿಕೆ ಕೆಳಮಟ್ಟದ್ದು ಎಂದು ಹೇಳಬಹುದೇ? ಮಾತಿಗೆ ಹೇಳುವುದಾದರೆ ಸಂಸ್ಕೃತದಲ್ಲಿ ಬರೆದಿಟ್ಟ ಹತ್ತಾರು ನಂಜು ತೆಗೆಯುವ ತಿಳುವಳಿಕೆ ಹೊತ್ತಗೆಗಳಿಗೆ ಜನರಲ್ಲಿದ್ದ ತಿಳುವಳಿಕೆಯೇ ಬೇರು ಅಲ್ಲವೇ?

ಹಾಗಿಲ್ಲದೆ ಇನ್ನೂ ಹಲವು ಬಗೆಯ ತಿಳುವಳಿಕೆಗಳು ಸಂಸ್ಕೃತ ನುಡಿಯ ಇವೆ. ಆ ನುಡಿಯಲ್ಲಿ ಬರೆದಿಟ್ಟ ನೂರಾರು ಹೊತ್ತಗೆಗಳನ್ನು ಕಳೆದ ನೂರಾರು ವರುಷಗಳಿಂದ ಕನ್ನಡಕ್ಕೆ ನುಡಿಮಾರಿಸಿ ತರುವ ಕೆಲಸವನ್ನು ಮಾಡುತ್ತಲೇ ಬರಲಾಗಿದೆ. ಈ ತಿಳುವಳಿಕೆಗಳಿಗೆ ಬೆಳೆಯುವ ನೆಲೆಗಳಿಲ್ಲ. ಆ ತಿಳುವಳಿಕೆಗಳನ್ನು ಯುರೋಪಿನ ನುಡಿಗಳಲ್ಲಿ ದೊರೆಯುವ ತಿಳುವಳಿಕೆಗಳ ಎದುರಿನಲ್ಲಿ ಇರಿಸಿ ನೋಡುವ, ತೂಗಿ ನೋಡುವ ಕೆಲಸವನ್ನು ಮಾಡುತ್ತಲೇ ಬರಲಾಗಿದೆ. ಆದರೆ ಇಂದಿಗೂ ಆ ಅರಿವನ್ನು, ಬೆಳೆಸುವ ನೆಲೆಗಳನ್ನು ಕಂಡುಕೊಳ್ಳಲು ಆಗಿಲ್ಲ. ಆರ್ಯಭಟ, ವರಾಹಮಿಹಿರ ಮುಂತಾದವರು ನೆಲೆಗೊಳಿಸಿದ ಆಕಾಶಕಾಯಗಳ ನಡೆಗಣಿತದ ಅರಿವು ಇವೆಲ್ಲವೂ ಅಂದು ಇದ್ದುದಕ್ಕಿಂತ ಇಷ್ಟಾದರೂ ಮುಂದೆ ಹೋಗಿದೆಯೇ? ನಮ್ಮಲ್ಲಿ ಮೇರೆ ಇಲ್ಲದಷ್ಟು ತಿಳಿವು ಇತ್ತೆಂದು ಹೆಮ್ಮೆ ಪಟ್ಟರೆ ಸಾಕೆ? ಅದು ಇಂದಿಗೂ ಹೊಸ ಸವಾಲುಗಳನ್ನು ಎದುರಿಸಿ ಬೆಳೆಯಬೇಕಲ್ಲವೇ? ಹೀಗಾಗದೆ ಇದೆಲ್ಲವೂ ನಿಂತ ನೀರಾಗಿ ಏಳೆಂಟು ನೂರು ವರುಷಗಳು ಕಳೆದಿವೆ. ಏಕೆ ಹೀಗಾಯ್ತು ಎಂದು ಕೇಳಿಕೊಳ್ಳಬೇಕಿದೆ. ಅರಿವನ್ನು ನುಡಿಯ ಚೌಕಟ್ಟಿನಲ್ಲಿ ಇರಿಸಿದ್ದರಿಂದ ಹೀಗಾಗಿರಬಹುದಲ್ಲವೇ? ಈ ನಿಟ್ಟಿನಲ್ಲಿ ಏನಾಗಬೇಕಿದೆ ಎಂದು ನೋಡಿಕೊಳ್ಳಲು ಈಗ ಕಟ್ಟಲು ಮುಂದಾಗಿರುವ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಆಗುವುದೇ? ದಿಟವಾಗಿಯೂ ಆಗದು. ಏಕೆಂದರೆ ಎಲ್ಲ ತಿಳಿವಿನ ವಲಯಗಳಿಂದ ಹೊರಗಿದ್ದು ನುಡಿಯ ನೆಲೆಯಿಂದಷ್ಟೇ ನೋಡಹೊರಟರೆ ಆಗ ನಮಗೆ ಸಿಗುವುದು ನೂರಾರು ನಡೆ ಕಳೆದುಕೊಂಡ ಹೊತ್ತಗೆಗಳು ಮಾತ್ರ. ಅವು ಈಗಾಗಲೇ ನಮ್ಮ ಲೈಬ್ರರಿಗಳಲ್ಲಿ ತುಂಬಿಕೊಂಡಿವೆಯಲ್ಲವೇ?

ಹಾಗಿದ್ದರೆ ಏನು ಮಾಡಬಹುದು? ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಬೇರೆಬೇರೆ ತಿಳಿವಿನ ವಲಯಗಳು ಹಲವರು ಹೇಳುವಂತೆ ಬೆಲೆಕಟ್ಟಲಾಗಿದಿರುವ ಹಾಗೂ ಸಂಸ್ಕೃತ ನುಡಿಯಲ್ಲಷ್ಟೇ ದೊರಕುವುದೆಂದು ತಿಳಿಯಲಾಗಿರುವ ಅರಿವನ್ನು ಇಂದಿನ ಹೊಸ ತಿಳಿವಿನೊಡನೆ ಎದುರುಬದುರಾಗಿಸುವುದು ಒಂದು ದಾರಿ. ಆಗ ಮಾತ್ರ ತಲೆಮಾರುಗಳಿಂದ ನಿಂತಿರುವ ಅರಿವಿಗೆ ಹೊಸ ನಡೆ ದೊರಕಲು ನೆರವಾಗಬಹುದು. ಹೀಗಲ್ಲದೆ ಸಂಸ್ಕೃತ ವಿಶ್ವವಿದ್ಯಾಲಯವನ್ನು (ಇಲ್ಲವೇ ಪ್ರಾಚ್ಯ ಭಾಷಾ ವಿಶ್ವವಿದ್ಯಾಲಯವನ್ನು) ಈಗ ಚಾಲ್ತಿಯಲ್ಲಿರುವ ಚೌಕಟ್ಟಿನಲ್ಲಿ ಕಟ್ಟಹೊರಟರೆ ಆಗ ಈಗ ಎಲ್ಲ ತಿಳಿವಿಗೂ ಕಟ್ಟಿಕೊಂಡಿರುವ ಕೋಟೆ ಇನ್ನಷ್ಟು ಬಲವಾಗುತ್ತದೆ. ತಿಳಿವು ಮತ್ತೆ ಇನ್ನಷ್ಟು ಕೊಳೆಯಲು ನೆರವಾದಂತಾಗುತ್ತದೆ. ಇದು ಕಟುವಾಗಿ ತೋರುವ ಮಾತಾದರೂ ದಿಟ. ಇಲ್ಲಿ ಓದು ಬರಹಗಳಲ್ಲಿ ತೊಡಗುವ ನುಡಿಯರಿಗರು, ತಿಳಿವಿಗರು ಕನ್ನಡ ನಾಡುನುಡಿಯಾಚೆಗಿನ ಲೋಕಕ್ಕೆ ಬೇಕಾಗುವ ಮಾಹಿತಿಗಳನ್ನು ಅಗೆದು ತೆಗೆದು ಕೊಡುವವರಾಗುತ್ತಾರೆ. ಅವರಿಗೆ ಇನ್ನಿಲ್ಲದ ಮನ್ನಣೆಗಳು ದೊರಕಲೂಬಹುದು. ಆದರೆ ಕನ್ನಡ ನಾಡುನುಡಿಗಳಿಗೆ ಏನಾದರೂ ನೆರವಾದೀತೆ? ಸಂಸ್ಕೃತ ವಿಶ್ವವಿದ್ಯಾಲಯ ಕನ್ನಡ ಬೆಳವಣಿಗೆಗೆ ಅಡ್ಡಿಯಾಗದಂತೆ ಇರಬೇಕು ಎನ್ನುವ ಮಾತಿಗೆ ಎರಡು ಬಗೆಯ ತಿರುಳಿವೆ. ಕನ್ನಡದ ಬೆಳವಣಿಗೆಗೆ ನೆರವಾಗುವಂತೆ ಸಂಸ್ಕೃತದ ತಿಳಿವನ್ನು ಬಳಸುವುದು ಎನ್ನುವುದು ಒಂದು ತಿರುಳು, ಹೀಗಲ್ಲದೆ ಕನ್ನಡದ ನಂಟನ್ನೇ ಹೊಂದದೇ ಕೋಟೆ ಕಟ್ಟಿಕೊಂಡು ಸಂಸ್ಕೃತ ಓದು ಬರಹಗಳು ಮಾಹಿತಿಗಳಾಗಿ ಬದಲಾಯಿಸುವುದು ಎಂದೂ ತಿಳಿಯಬಹುದಾಗಿದೆ.

ಆಗ ಕನ್ನಡದ ತಂಟೆಗೆ ಬಾರದೇ ಸಂಸ್ಕೃತದ ಓದನ್ನು ಮುಂದುವರೆಸುವುದು ಎಂದಾಗುತ್ತದೆ. ಎರಡನೆಯ ತಿರುಳು ನಿಜವಾಗುವುದಾದರೆ ಆಗ ಕನ್ನಡ ನಾಡಿನಲ್ಲಿ ಸಂಸ್ಕೃತ ವಿಶ್ವವಿದ್ಯಾಲಯವನ್ನು ಕಟ್ಟುವುದೇಕೆ ಎಂದು ಕೇಳಬೇಕಾಗುತ್ತದೆ. ಮೊದಲಲ್ಲಿ ಹೇಳಿದಂತೆ ಜನರಿಗೆ ಬೇಡದುದನ್ನು ಹೇರಲು ಮುಜುಗರ ಪಡದ ಸರಕಾರಗಳ ಎದುರು ಈ ಎಲ್ಲ ಮಾತುಗಳಿಗೆ ಏನೂ ಬೆಲೆಯಿಲ್ಲ. ಹಲವು ಬಿಳಿಯಾನೆಗಳನ್ನು ಸಾಕುವುದು ತನ್ನ ಹೊಣೆ ಎಂದು ತಿಳಿದಿರುವ ಸರಕಾರ ಇದನ್ನೂ ಮಾಡಲು ಮುಂದಾಗುತ್ತದೆ. ದಿನ ಕಳೆದಂತೆ ಬೇರುಬಿಟ್ಟು ಬೆಳೆದರೂ ಕಸುವು ಕಳೆದುಕೊಂಡ ಎಲ್ಲ ಅರಿವಿನ ತಾಣಗಳಂತೆ ಇದೂ ಕೂಡ ಗುಟುಕು ಉಸಿರೆಳೆಯುತ್ತ ಸಾಗುವುದನ್ನು ನೋಡುವುದು ತಪ್ಪಿದ್ದಲ್ಲ.

ಸೆಲೆ : ಕೆ. ವಿ. ನಾರಾಯಣ ಅವರ ಸಮಗ್ರ ‘ತೊಂಡು ಮೇವು’ – ಕಂತೆ ೬

3 comments to “ಸಂಸ್ಕೃತ ವಿಶ್ವವಿದ್ಯಾಲಯ ಬೇಕೇ?”
  1. If bjp had mentioned in its manifesto that it will do all these things 🥵🥵🥵🥵🥵🥵 it would have got zero seats in 2018 assembly elections 🤔

  2. ಕನ್ನಡಿಗರಿಗೆ ಕನ್ನಡವೇ ಬೇಡವಾಗುತ್ತಿದೆ, ಇನ್ನೂ ಕನ್ನಡ ವಿಶ್ವವಿದ್ಯಾಲಯ ಯಾವ ಪುರುಷಾರ್ಥಕ್ಕೆ ?

    ಆದರೆ ಸಂ‌ಸ್ಕೃತ ಓದಿದವರಿಗೆ ಸಂಸ್ಕೃತ ಬೇಡವಾಗಿಲ್ಲ, ಸಂಸ್ಕೃತ ವಿಶ್ವವಿದ್ಯಾಲಯ ಬೇರೆ ರಾಜ್ಯ ಮಾಡಿಕೊಂಡು ಅಜ್ಞಾನದ ಗೂಡಾಗಿರುವ ಕರ್ನಾಟಕಕ್ಕೆ ಬೇಡವಾಗಿದ್ದರೂ ಭಾರತಕ್ಕೆ ಬೇಕು. ಅಜ್ಞಾನಿಗಳು ಎಷ್ಟು ಕೋಟಿ ಇದ್ದರೂ, ಎಷ್ಟು ತೆರಿಗೆ ಕಟ್ಟಿದರೂ ಅವರ ಮಾತಿಗೆ ಎಂದೂ ಬೆಲೆ ಇಲ್ಲ.

    21 ನೇ ಶತಮಾನದಲ್ಲೂ ಶಿಕ್ಷಣದ ನಾಗಾಲೋಟದ ದಿನಗಳಲ್ಲೂ ಯಾವುದು ಬೇಕು ಯಾವುದು ಬೇಡ ಎನ್ನುವ ಜ್ಞಾನವೇ ಇಲ್ಲದಿರುವ ಬಗ್ಗೆ ಕನಿಷ್ಠ ಯಾವ ಕನ್ನಡಿಗೂ ಇರಬೇಕಾದ ನಾಚಿಕೆಯೇ ಇಲ್ಲ, ಭಾರತದ ಜ್ಞಾನದ ಗಣಿಯ ಬಗ್ಗೆ ನಾಚಿಕೆಯ ಹೆಗ್ಗಿಲ್ಲದೆ ವಿರೋಧದ ಮಾತು ಉದುರಿಸುವುದು ಬೇರೆ. ಥೂ ಇವರ ಜನ್ನಕ್ಕೆ ???? Shameless….

ಪ್ರತಿಕ್ರಿಯಿಸಿ