ವಿಶ್ವ ರಂಗಭೂಮಿ ದಿನದ ಸಂದೇಶ – 2022

ಮಾರ್ಚ್ 27 ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ 2022 ರ ಅಂತರ್ರಾಷ್ಟ್ರೀಯ ವಿಶ್ವ ರಂಗಭೂಮಿ ದಿನದ ರಂಗಸಂದೇಶ ನೀಡುವ ಗೌರವ ಪೀಟರ್ ಸೆಲ್ಲಾರ್ಸ್ ರವರಿಗೆ ಪ್ರಾಪ್ತವಾಗಿದೆ. ಪೀಟರ್ ಸೆಲ್ಲಾರ್ಸ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿರುವ ಅಪೇರಾ ರಂಗಭೂಮಿ ಮತ್ತು ಸಾಂಸ್ಕೃತಿಕ ರಂಗೋತ್ಸವಗಳ ನಿರ್ದೇಶಕರಾಗಿ ಜಾಗತಿಕ ಹೆಸರುಗಳಿಸಿದ್ದಾರೆ. 20ನೇ ಶತಮಾನದ ಆಧುನಿಕ ರಂಗಭೂಮಿಯ ಸಮರ್ಥನೆ, ಸಮಕಾಲೀನ ಸಂಗೀತ ಸಂಯೋಜನೆ ಹಾಗೂ ಅಸಾಧಾರಣ ಶ್ರೇಣಿಯ ಸಹಯೋಗದ ಯೋಜನೆಗಳಿಗಾಗಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದಿದ್ದಾರೆ. ನಿರತನಿರಂತ ರಂಗಸಂದೇಶದ ಕನ್ನಡಾನುವಾದವನ್ನು ಹಂಚಿಕೆ ಮಾಡಿದೆ. 

ಪ್ರಿಯ ಸ್ನೇಹಿತರೇ

 ಈ ಜಗತ್ತು ದಿನದಿನವೂ ಪ್ರತಿದಿನವೂ ಒಂದೊಂದು ನಿಮಿಷವೂ ಬಗೆಬಗೆಯ ಸುದ್ದಿಗಳ ಮೂಲಕ ವರ್ತಮಾನದ ವರದಿಯಾಗುತ್ತಿರುವ ಸಂದರ್ಭದಲ್ಲಿ ನಾವು ನಮ್ಮೆಲ್ಲರ ಸರಿಯಾದ ಸ್ವರೂಪವನ್ನು ಪ್ರವೇಶಿಸಲು ಸೃಜಿಸಲು ನಾನು ತಮ್ಮೆಲ್ಲರನ್ನು ಆಹ್ವಾನಿಸುತ್ತಿದ್ದೇನೆ.

    ಸರಿಯಾದ ಸ್ವರೂಪವೆಂದರೆ ವಿಶಾಲಾರ್ಥವುಳ್ಳ ಎಪಿಕ್ ಮಹಾ ;ಕಾವ್ಯದ ಹಾಗೆ.ಎಪಿಕ್ ನ ಕಾಲಮಾನ, ಎಪಿಕ್ ನ ಬದಲಾವಣೆ ,ಎಪಿಕ್ ನ ಕುರಿತಾದ ಅರಿವಿನೆಚ್ಚರ, ಎಪಿಕ್ ನೀಡಬಲ್ಲ ಪ್ರತಿಕ್ರಿಯೆ ಹಾಗೂ ಎಪಿಕ್ ನ ಕಾಣ್ಕೆ.

ನಾವು ಮಾನವ ಇತಿಹಾಸ ಹಾದು ಬಂದ ಹಾದಿಯಲ್ಲಿ ಎಪಿಕ್ ವಿಶಾಲತೆಯ ಕಾಲಾವಧಿಯಲ್ಲಿ ಬಾಳುತ್ತಿದ್ದೇವೆ.ಮತ್ತು  ಮನುಷ್ಯ ಸಂಬಂಧಗಳಲ್ಲಿ ನಾವು ದಿನದಿನವೂ ಅನುಭವಿಸುತ್ತಿರುವ ಬದಲಾವಣೆಗಳನ್ನು ನಮ್ಮ ನಮ್ಮೊಳಗೆ ಒಬ್ಬರಿಗೊಬ್ಬರು ಹಂಚಿಕೊಳ್ಳಲು ಅರಿತುಕೊಳ್ಳಲು ಈ ಅವಧಿಯನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ.

ಅಮಾನವೀಯವಾದ  ಜಾಗತಿಕ ಬಿಕ್ಕಟ್ಟು- ಸಂಕಟಗಳು ನಮ್ಮೆಲ್ಲರ ಪರಿಮಿತಿಯನ್ನು ದಾಟಿ ಹೋಗಿದೆ.

     ನಾವೆಲ್ಲರೂ ದಿನದ 24 ಗಂಟೆಯೂ ಚಕ್ರದ ಹಾಗೆ ಸುತ್ತುತ್ತಿರುವ ವರ್ತಮಾನಗಳ ಜೊತೆ ಬದುಕುತ್ತಿಲ್ಲ. ಬದಲಾಗಿ ನಾವು ಸಮಯದ ಅಂಚಿನ ತುದಿಯಲ್ಲಿ ತೂಗಾಡುತ್ತಾ ಜೀವಿಸಲು ಪ್ರಯತ್ನಿಸುತ್ತಿದ್ದೇವೆ .

     ವರ್ತಮಾನ ಪತ್ರಿಕೆಗಳು ಸುದ್ದಿ ಮಾಧ್ಯಮಗಳು ಎಷ್ಟು ಅವ್ಯವಸ್ಥಿತವಾಗಿದೆ ಎಂದರೆ ನಾವು ಹೇಗೆ ಜೀವಿಸಬಲ್ಲೆವೋ ಅದಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ಕಾರ್ಯೋನ್ಮುಖವಾಗಿವೆ.

    ನಮ್ಮ ಜನರಾಡುವ ಭಾಷೆಗಳು ಎಲ್ಲಿವೆ?

    ನಾವು ಚಲಿಸುತ್ತಿರುವ ಚಲನೆಗಳಾದರೂ ಎಂಥವು..?

 ನಾವಿಂದು ಅನುಭವಿಸುತ್ತಿರುವ ಈ ಪಲ್ಲಟಗೊಂಡ ಹಾಗೂ ಬಿರುಕುಗೊಂಡ ಬದುಕನ್ನು ಗ್ರಹಿಸಲು ನಮಗೆ ಸುಲಭಗ್ರಾಹ್ಯವಾದ ಚಿತ್ರಿಕೆಗಳು ಯಾವುವು ? ನಮ್ಮ ಬದುಕಿನ ವಿವರಗಳನ್ನು ತಿಳಿಸುವ ಬಗೆಯಾದರೂ ಹೇಗೆ..  ?

ರಂಗಭೂಮಿ ಎಂದರೆ ನಮ್ಮ ಅನುಭವಗಳನ್ನು ಕಲಾತ್ಮಕವಾಗಿ ಹಂಚಿಕೊಳ್ಳುವ  ನೇರ ಮಾಧ್ಯಮ.

   ಇಂದು ಎಲ್ಲೆಡೆಯೂ ವ್ಯಾಪಕವಾಗಿರುವ ಪತ್ರಿಕಾ ಪ್ರಚಾರಗಳು ಅನುಕರಣೆಯೇ ಮುಖ್ಯವಾದ ಅನುಭವ ನಿರೂಪಣೆಗಳು.

 ಘನಘೋರ ಭವಿಷ್ಯ ಜ್ಞಾನಿಗಳಿಂದ ತುಂಬಿರುವ ಈ ಜಗತ್ತಿನಲ್ಲಿ ನಾವು ಅನಿಯಮಿತ ಸಂಖ್ಯೆಯಲ್ಲಿರುವ ಶುದ್ಧವಾದ ಪ್ರಾವಿತ್ರ್ಯತೆ ಹೊಂದಿರುವ ಜೀವನಾನುಭವಗಳನ್ನು ಅನಂತದ ದಾರಿಗೆ ಒಯ್ಯುವ ಬಗೆಯಾದರೂ ಹೇಗೆ?

     ಒಂದು ಶುದ್ಧ ಪರಿಸರ ಜನ್ಯ ವ್ಯವಸ್ಥೆ, ಒಂದು ಸ್ನೇಹಮಯ ವಾತಾವರಣ ಅಥವಾ ಅಪರಿಚಿತ ಆಗಸದಲ್ಲಿ ಮೂಡಿ ಬರುವ ಬೆಳಕಿನ ಗುಣಮಟ್ಟವನ್ನು ಅರಿತುಕೊಳ್ಳುವ ವಿಧಾನವೇನಾದರೂ ಇದೆಯೇ …?

     ಕಳೆದ ಎರಡು ವರ್ಷಗಳ ಕಾಲಾವಧಿಯಲ್ಲಿ ಕೋವಿಡ್-19 ಹೆಸರಿನ ಸಾಂಕ್ರಾಮಿಕವು ಮನುಷ್ಯರ

ಸಂವೇದನಗಳನ್ನೇ ಸಂಕುಚಿತ ಗೊಳಿಸಿದೆ. ಜನರ ನಡುವಣ ಮಮತೆಯ ಬಾಂಧವ್ಯದ ನವಿರು ಸಂಬಂಧಗಳನ್ನು ಸಂಪರ್ಕಗಳನ್ನು ಮುರಿದು ನಾಶಮಾಡಿದೆ.

     ಈ ದಿನಗಳಲ್ಲಿ ಯಾವ ಸಸ್ಯಗಳಿಗೆ ಯಾವ  ಬೀಜಗಳನ್ನು ನೆಟ್ಟು ನೀರುಣಿಸಬೇಕು ಮತ್ತು ಪುನಃ ಅದನ್ನು ನೆಟ್ಟು ಪೋಷಿಸಬೇಕು.  ಅವುಗಳ ಅಗತ್ಯ ಗಳಿಲ್ಲದೆ ಅತಿಯಾಗಿ ಬೆಳೆದ ಆಕ್ರಮಣಕಾರಿ ಸಸಿಗಳನ್ನು ಹೇಗೆಲ್ಲ ಕಿತ್ತು ತೆಗೆಯಬೇಕು?

 ಅಥವಾ ತೆಗೆಯಬೇಕೇ ಬೇಡವೇ…? ಎಷ್ಟೋ ಮಂದಿ ಕಾಲಮಾನದ ಅಂಚಿನ ತುದಿಗೆ ಬಂದು ತಲುಪಿದ್ದಾರೆ. ತೂಗಾಡುತ್ತಿದ್ದಾರೆ. ಹಿಂಸಾ ಸ್ವರೂಪದ ಪ್ರತಿಕ್ರಿಯೆಗಳಂತೂ ಅನಿಯಂತ್ರಿತವಾಗಿ ಭುಗಿಲೆದ್ದು ನಿಂತಿದೆ.

   ಸ್ಥಾಪಿತ ಹಿತಾಸಕ್ತಿಗಳ ವ್ಯವಸ್ಥೆಗಳೇ ನಡೆಯುತ್ತಿರುವ ಕ್ರೌರ್ಯದ ಸಂರಚನೆಗಳೇನೋ ಎಂಬಂತೆ ಬಹಿರಂಗಗೊಳ್ಳುತ್ತಿವೆ.

      ನಮ್ಮೆಲ್ಲರ ನೆನಪುಗಳ ಸುಂದರ ಹಬ್ಬ ಉತ್ಸವಾಚರಣೆಗಳು ಎಲ್ಲಿಗೆ ತಲುಪಿವೆ?

 ನಾವಿಂದು ಯಾವುದನ್ನೆಲ್ಲ ನೆನಪಿನಲ್ಲಿ ಇರಿಸಿಕೊಳ್ಳಬೇಕಾಗಿದೆ .ನಾವು ಹೊಸದಾಗಿ ಆರಂಭಿಸಬೇಕಾದ ಕ್ರಮಗಳನ್ನು ಕೈಗೊಳ್ಳಲು ಅದನ್ನು ರಿಹರ್ಸಲ್ ಮಾಡಲು ನಾವು ಈ ಹಿಂದೆ ಮಾಡಿಲ್ಲದ ಆಚರಣೆಗಳು ಏನಾದರೂ ಇದೆಯೇ ?

ಎಪಿಕ್ ರಂಗಭೂಮಿಯ ವಿಶಾಲ ನೋಟಗಳು, ಅವುಗಳ ಉದ್ದೇಶ, ಅವುಗಳ ಚೇತರಿಕೆ, ಅವುಗಳ ದುರಸ್ತಿ

ಮತ್ತು ಆರೈಕೆಗಳಿಗೆ ಹೊಸ ರಂಗಭೂಮಿಯ ಆಚರಣೆಯ ಅವಶ್ಯಕತೆ ಇದೆ.

    ನಾವಿಂದು ಮನೋಲ್ಲಾಸಕ್ಕಾಗಿ ರಂಗಭೂಮಿಯ ಕೆಲಸ ಮಾಡಬೇಕಾಗಿಲ್ಲ. ನಾವೆಲ್ಲರೂ ಒಟ್ಟಾಗಿ ಸೇರಬೇಕಾಗಿದೆ.ನಾವು ಅವಕಾಶಗಳನ್ನು, ಸ್ಥಳಾವಕಾಶಗಳನ್ನು ಹಂಚಿಕೊಳ್ಳಬೇಕಾಗಿದೆ.ಮತ್ತು ಆ ಅವಕಾಶಗಳನ್ನು ಧನಾತ್ಮಕ ಚಿಂತನೆಗಳೊಂದಿಗೆ ಅಭಿವೃದ್ಧಿಪಡಿಸಬೇಕಾಗಿದೆ.

  ನಮಗೆ ಬೇಕಾಗಿರುವುದು ಸಂರಕ್ಷಿತವಾದ ಅವಕಾಶಗಳಲ್ಲಿ ಆಳವಾದ ಆಲಿಸುವಿಕೆಯ ಅಧ್ಯಯನ ಮತ್ತು ಸಮಾನತೆಯ ಬಾಳುವಿಕೆ.

ಇದು ಸುಪ್ತ ಸೌಂದರ್ಯದಿಂದ ಹೊರಟು ಬರುವ ಬೆಳಕಿನ ಹಾಗೆ ಪ್ರಕಾಶಿಸಲ್ಪಡುತ್ತದೆ.

 ಮಾನವರು ದೇವರುಗಳು, ಸಸ್ಯಜೀವಿಗಳು, ಪ್ರಾಣಿಸಂಕುಲ, ಮಳೆಹನಿಗಳು, ಕಣ್ಣೀರು ಮತ್ತು ಪುನರುತ್ಪಾದನೆಯ ನಡುವಿನ ಸಮಾನತೆಯ ಜಾಗದ ಭೂಮಿಯಲ್ಲಿ ರಂಗಭೂಮಿ ಸೃಷ್ಟಿಯಾಗಿದೆ.

ಇದು ನಮಗೆ ಎದುರಾಗಬಹುದಾದ ಅಪಾಯ ಅದನ್ನು ಎದುರಿಸುವ ಸಹನೆಯ ಸಮಚಿತ್ತತೆ, ಬುದ್ದಿವಂತಿಕೆಯ ಪ್ರತಿಕ್ರಿಯೆ ಹಾಗೂ ತಾಳ್ಮೆಯ ಆಳವಾದ ಆಲೋಚನೆಗಳ ಮೂಲಕ ಜೀವಂತವಾಗಿರುತ್ತದೆ.

  ಗೌತಮ ಬುದ್ದನ ‘ಅವತಂಸಕ’ ಸೂತ್ರದಲ್ಲಿ ಆತ ಮಾನವ ಜೀವನದಲ್ಲಿ ಗುರುತಿಸಿದ ಹತ್ತು ಬಗೆಯ ಮಹಾನ್ ತಾಳ್ಮೆಯನ್ನು ಪಟ್ಟಿ ಮಾಡುತ್ತಾನೆ. ಎಲ್ಲವನ್ನೂ ಮರೀಚಿಕೆ ಎಂದು ಗ್ರಹಿಸಿಕೊಂಡಾಗ ತಾಳ್ಮೆಎನ್ನುವುದು ಅತ್ಯಂತ ಶಕ್ತಿಶಾಲಿ ಮಾಧ್ಯಮವಾಗಿ ರೂಪುಗೊಳ್ಳುತ್ತದೆ .

    ರಂಗಭೂಮಿ ಯಾವಾಗಲೂ ಈ ಪ್ರಪಂಚದ ಜೀವನವನ್ನು ಮರೀಚಿಕೆಯ ಹೋಲಿಕೆಯಲ್ಲಿ ಗಮನಿಸುತ್ತಿರುತ್ತದೆ. ಮನುಷ್ಯನ ಭ್ರಮೆ, ಕುರುಡುತನ ಮತ್ತು ನಿರಾಕರಣೆಯ ಮೂಲಕ ವಿಮೋಚನೆಯ ಸ್ಪಷ್ಟತೆ ಹಾಗೂ ಶಕ್ತಿಯೊಂದಿಗೆ ಕಾಣಲು ನಮಗೆ ಅನುವು ಮಾಡಿಕೊಡುತ್ತದೆ.

 ನಾವು ಏನನ್ನುನೋಡುತ್ತಿದ್ದೇವೆ ಮತ್ತು ಅದನ್ನು ನೋಡುತ್ತಿರುವ ರೀತಿಯಲ್ಲಿ ನಾವೆಷ್ಟು ನಿಖರವಾಗಿರುತ್ತೇವೆ ಎಂದರೆ ಪರ್ಯಾಯ ವಾಸ್ತವತೆಗಳ ಹೊಸ ಸಾಧ್ಯತೆಗಳು ವಿಭಿನ್ನ ವಿಧಾನಗಳು ಅದೃಶ್ಯ ಸಂಬಂಧಗಳು ಮತ್ತು ಕಾಲಾತೀತ ಸಂಪರ್ಕಗಳನ್ನು ನೋಡಲು ಮತ್ತು ಅನುಭವಿಸಲು ನಮಗೆ ಸಾಧ್ಯವಾಗುತ್ತಿಲ್ಲ.

 ಇದು ನಮ್ಮ ಮನಸ್ಸುಗಳು  ನಮ್ಮ ಸಂವೇದನೆಗಳು ಮತ್ತು ನಮ್ಮ ಗಾಢವಾದ ಉಲ್ಲಾಸಗಳಿಗಾಗಿ ಇರುವ ಸಮಯವಾಗಿದೆ.

     ನಮ್ಮ ಚರಿತ್ರೆ ಕಲಿಸಿದ ಪಾಠಗಳು ಮತ್ತು ನಮ್ಮ ಭವಿಷ್ಯದ ಬಗ್ಗೆ ಏಕಾಂಗಿಯಾಗಿ ಒಂಟಿಯಾಗಿ ಕೆಲಸ ಮಾಡಬಯಸುವ ಜನರಿಂದ ಈ ಕೆಲಸ ಸಾಧ್ಯವಿಲ್ಲ .ಇದೆಲ್ಲವೂ ನಾವು ಒಟ್ಟಾಗಿ ಮಾಡಬೇಕಾದ ಕೆಲಸ. ಈ ಕೆಲಸವನ್ನು ನಾವೆಲ್ಲರೂ ಒಟ್ಟಾಗಿ ಮಾಡಲು ರಂಗಭೂಮಿಯೇ ನಮಗೆ ನೀಡಿರುವ ಪ್ರೀತಿಯ ಆಹ್ವಾನ ಎಂದು ತಿಳಿಯಬೇಕು

ಕೃತಜ್ಞತೆಗಳು ನಿಮಗೆ

ಪೀಟರ್ ಸೆಲ್ಲಾರ್ಸ್.

ಪ್ರತಿಕ್ರಿಯಿಸಿ