ಸಂತಸದಿಂದಿರಲು.. : ಒರ್ಹಾನ್ ಪಾಮುಕ್ ಪ್ರಬಂಧ

ಸಂತೋಷವಾಗಿರುವುದು ಅಸಹ್ಯ ಪಡಬೇಕಾದ ವಿಷಯವೇ ? ಎನ್ನುವದರ ಬಗೆಗೆ ಹಿಂದೆ ಬಹಳ ಸಲ ಯೋಚಿಸಿದಿದ್ದೇನೆ. ಮತ್ತು ಈಗಂತೂ ಹೆಚ್ಚಿನ ಸಮಯ ಈ ಬಗೆಗೇ ಯೋಚಿಸುತ್ತಿರುತ್ತೇನೆ. ಹಿಂದೆ ಬಹಳ ಸಲ, ಈ ಜಗತ್ತಿನಲ್ಲಿ ಖುಷಿಯಾಗಿರುವವರು ಒಂದೋ ಮೂರ್ಖರು ಅಥವಾ ಕ್ರೂರಿಗಳು ಎಂದು ಹೇಳಿದ್ದ ನೆನಪಿದೆ , ಆದರೆ ಕಾಲ ಕಳೆದ ಹಾಗೆ ನನಗೆ ಅನ್ನಿಸೋದು , ಸಂತೋಷವಾಗಿರುವುದು ಅಂತಹ ಕೆಡುಕಿನ ವಿಷಯವಲ್ಲ ಮತ್ತು ಸಂತೋಷವಾಗಿರಿವುದು ಬುದ್ಧಿವಂತಿಕೆಯ ವಿಷಯ ಕೂಡ, ಎಂದು.

ನಾನು ನನ್ನ ನಾಲ್ಕು ವರ್ಷದ ಮಗಳ, ರೂಯಾ , ಜತೆ ಸಮುದ್ರ ತೀರಕ್ಕೆ ಹೋದಾಗ , ಈ ಪ್ರಪಂಚದಲ್ಲೆ ಅತ್ಯಂತ ಸಂತೋಷದಿಂದಿರುವ ಮನುಷ್ಯ. ಈ ಪ್ರಪಂಚದಲ್ಲೇ ಅತ್ಯಂತ ಸಂತೋಷದಿಂದಿರುವ ಮನುಷ್ಯನಿಗೆ ಅತ್ಯಂತ ಜರೂರಾಗಿ ಬೇಕಾದದ್ದೇನು ? ಖಂಡಿತ , ಹೀಗೆ ಸದಾ ಕಾಲ ಪ್ರಪಂಚದ ಅತೀ ಸಂತೋಷದಿಂದಿರುವ ಮನುಷ್ಯನಾಗೇ ಇರಬೇಕು ಅನ್ನುವುದು. ಹಾಗಾಗಿ ಪ್ರತೀ ಬಾರಿ ಈ ಸಂತೋಷಕ್ಕೆ ಕಾರಣವಾದದನ್ನೇ ಪ್ರತೀಬಾರಿ ಪುನರಾವರ್ತಿಸ ಬೇಕು ಎಂದು ಅವನಿಗೆ ಗೊತ್ತು. ಹಾಗಾಗೇ ನಾವೇಲ್ಲರೂ , ಪದೇ ಪದೇ ಅವೇ ಸಂಗತಿಗಳನ್ನ ಪುನರಾವರ್ತಿಸುತ್ತೇವೆ.

೧. ಮೊದಲು ಅವಳಿಗೆ ಹೇಳುತ್ತೇನೆ : ಈವತ್ತು ಸಮುದ್ರ ತೀರಕ್ಕೆ , ಇಂತಿಂತ ಸಮಯಕ್ಕೆ ಹೋಗೋಣ. ಆಗ ರೂಯಾ ಆ ಸಮಯವನ್ನು ಈ ಕ್ಷಣಕ್ಕೆ ಹತ್ತಿರಕ್ಕೆ ಎಳೆದುಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಆದರೆ ಸಮಯದ ಕಲ್ಪನೆಯೇ ಸ್ವಲ್ಪ ಗೊಂದಲಕಾರಿ. ಹಾಗಾಗಿ ರೂಯಾ ಇದ್ದಕಿದ್ದ ಹಾಗೆ ನನ್ನ ಬಳಿ ಬಂದು , ” ಇನ್ನೂ ಟೈಮ್ ಆಗ್ಲಿಲ್ವಾ ?”

“ಇಲ್ಲ.”

“ಐದು ನಿಮಿಷ ಆದ್ಮೇಲಾ ?”

“ಇಲ್ಲ , ಇನ್ನ ಎರಡೂವರೆಗಂಟೆ ಆದ್ಮೇಲೆ .”

ಐದು ನಿಮಿಷದ ನಂತರ , ಮತ್ತೆ ತನ್ನೆಲ್ಲ ಮುಗ್ದತೆಯೊಂದಿಗೆ ಮತ್ತೆ ಬಂದು ,

“ಅಪ್ಪ , ನಾವು ಇವತ್ತು ಸಮುದ್ರ ತೀರಕ್ಕೆ ಹೋಗ್ತಾ ಇದೀವ ?” ಅಥವಾ ಇನ್ನೊಂದೊಷ್ಟು ಹೊತ್ತಿನ ನಂತರ , ನನ್ನನ್ನು ಯಾಮಾರಿಸುವ ದನಿಯಲ್ಲಿ , “ಸರಿ ನಡಿ ಹೊರಡೋಣ ?” ಎಂದು ರೂಯಾ ಕೇಳ್ತಾಳೆ

೨. ಎಷ್ಟೇ ಕಾದರೂ ಆ ಸಮಯ ಬರುತ್ತಲೇ ಇಲ್ಲ ಅನ್ನಿಸಿದರೂ , ಕೊನೆಗೊಮ್ಮೆ ಆ ಘಳಿಗೆ ಬಂದೇ ಬರುತ್ತೆ . ರೂಯಾ ಈಗ ಈಜುಡಿಗೆ ಧರಿಸಿ ,ತನ್ನ ಚಕ್ರದ ಮಕ್ಕಳ ಗಾಡಿಯಲ್ಲಿ ಕೂತಿದ್ದಾಳೆ. ಆ ಗಾಡಿಯೊಳಗೆ ಅವಳ ಟವೆಲ್ , ಇನ್ನೊಂದೆರಡು ಈಜುಡಿಗೆ , ಮತ್ತು ಅವಳ ಮಕ್ಕಳ ಬ್ಯಾಗ್. ಆ ಬ್ಯಾಗ್ ಅನ್ನು ಅವಳ ಮಡಿಲಿಗೆ ಹಾಕಿ , ಆ ಸಣ್ಣ ಗಾಡಿಯನ್ನು ಎಂದಿನಂತೆ ಸಮುದ್ರದ ಕಡೆಗೆ ತಳ್ಳುತ್ತಾ ಹೊರಡುತ್ತೇನೆ.

೩. ಆ ಕಲ್ಲುಗಳನ್ನು ಜೋಡಿಸಿ ಸಿದ್ದ ಮಾಡಿದ ಹಾದಿಯಲ್ಲಿ ಕೆಳಗೆ ಸಾಗತೊಡಗಿದ ಹಾಗೆ , ರೂಯಾ ‘ಆಆಅಹ್” ಎಂದು ಸದ್ದು ಮಾಡುತ್ತಾಳೆ. ಆ ಕಲ್ಲುಗಳ ಮೇಲೆ ಚಕ್ರ ಉರುಳಿ ಗಾಡಿ ಅಲ್ಲಾಡಿದಾಗ ಆ ಸದ್ದು ಆಆಅಹ್-ಆಆಅಹ್ ಎಂದಾಗುತ್ತದೆ. ಆ ಕಲ್ಲುಗಳು ರೂಯಾಳನ್ನು ಹಾಡುಗಾರ್ತಿಯಾಗಿಸಿವೆ! ಆ ಹಾಡು ಕೇಳಿ , ನಮ್ಮಿಬ್ಬರಿಗೂ ನಗು.

೪. ಸಮುದ್ರದ ತೀರದ ಕಡೆ ಸಾಗಿದ ಆ ಖಾಲಿ ರಸ್ತೆ. ರೂಯಾಳ ಸಣ್ಣ ಗಾಡಿಯನ್ನು ಅಲ್ಲೊಂದು ಕಡೆ ನಿಲ್ಲಿಸಿ ಸಮುದ್ರ ತೀರದ ಬಳಿಗೆ ಇಳಿದು ಹೋಗುವ ಮೆಟ್ಟಿಲುಗಳ ಬಳಿ ಹೋದ ಕೂಡಲೇ ಪ್ರತೀ ಬಾರಿ , “ದರೋಡೆಕೋರರು ಇಲ್ಲಿ ಯಾವಾಗ್ಲೂ ಬರಲ್ಲ.”

೫. ಬೇಗ ಬೇಗ ನಮ್ಮ ಸಾಮಾನುಗಳನ್ನೆಲ್ಲ ಅಲ್ಲಿದ್ದ ಕಲ್ಲಿನ ಮೇಲೆ ಇರಿಸಿ , ಈಜುಡಿಗೆಯಲ್ಲಿ , ಮೊಣಕಾಲು ಮಟ್ಟದವರೆಗಿನ ಸಮುದ್ರಕ್ಕಿಳಿಯುತ್ತೇವೆ. ನಾನು ಅವಳಿಗೆ ಹೇಳ್ತೀನಿ, “ಸಮುದ್ರ ಈಗ ಶಾಂತವಾಗಿದೆ , ಆದರೆ ಯಾವುದೇ ಕಾರಣಕ್ಕೂ ದೂರ ಹೋಗಬೇಡ. ನಾನು ಸ್ವಲ್ಪ ಹೊತ್ತು ಈಜುತ್ತೇನೆ , ಆಮೇಲೆ ನಾವಿಬ್ಬರು ಆಟ ಆಡೋಣ. ಆಯ್ತಾ?”

೬. ನಾನು , ನನ್ನೆಲ್ಲ ಯೋಚನೆಗಳನ್ನು ಹಿಂದೆ ಬಿಟ್ಟು , ಈಜಲು ಶುರುಮಾಡ್ತೀನಿ . ಈಜು ನಿಲ್ಲಿಸಿ , ತೀರದ ಕಡೆಗೆ ಹಿಂದಿರುಗಿ ರೋಯಲ್ ಕಡೆ ನೋಡುತ್ತೀನಿ , ಅವಳು ತಾನು ಧರಿಸಿದ್ದ ಈಜುಡಿಗೆಯಲ್ಲಿ ಒಂದು ಕೆಂಪು ಕಲೆಯ ಹಾಗೆ ಕಾಣುತ್ತಾಳೆ, ಅವಳನ್ನು ಎಷ್ಟು ಪ್ರೀತಿಸುತ್ತೇನೆ ಎಂದು ನಾನು ಯೋಚಿಸುತ್ತೇನೆ. ಈ ನಡುಕಡಲಿನಲ್ಲಿ ನನಗೆ ಖುಷಿಗೆ ಜೋರಾಗಿ ನಗೋಣ ಅನ್ನಿಸ್ತಾ ಇದೆ. ಆಕೆ ತೀರದಲ್ಲಿ ನೀರಲ್ಲಿ ಆಡ್ತಾ ಇದಾಳೆ.

೭. ನಾನು ಮರಳಿ ಹೋಗ್ತೀನಿ. ದಡ ತಲುಪಿದ ಮೇಲೆ : (ಅ) ಗುದ್ದಾಡುತ್ತೀವಿ; (ಆ) ನೀರು ಎರಚಾಡುತ್ತೀವಿ; (ಇ) ಸಮುದ್ರಕ್ಕೆ ಕಲ್ಲು ಎಸೀತೀವಿ; (ಈ) ಮಾತನಾಡುವ ಗುಹೆಯ ಜತೆ ಜಗಳ ಆಡ್ತೀವಿ; (ಉ) ಹೆದ್ರಬೇಡ , ಈಜಲು ಕಲಿ, ನಾನಿದ್ದೀನಿ … ಹೀಗೆ ನಮ್ಮ ಉಳಿದೆಲ್ಲ ಆಚರಣೆಗಳನ್ನು ಆಟಗಳನ್ನು ಆಡಿ ಮುಗಿದ ನಂತರ , ಮತ್ತೊಮ್ಮೆ ಆ ಆಟಗಳನ್ನು ಮತ್ತೆ ಆಡ್ತೀವಿ

೮. “ನಿನ್ನ ತುಟಿಗಳು ನೇರಳೆ ಬಣ್ಣಕ್ಕೆ ತಿರುಗಿದಾವೆ , ನೆಗಡಿ ಆಗುತ್ತೆ. ” “ಇಲ್ಲ , ನಂಗೇನು ಆಗಲ್ಲ.” “ನಿನಗೆ ನೆಗಡಿ ಆಯ್ತು , ನಡಿ ಹೊರಡೋಣ.” ಇತ್ಯಾದಿಗಳೆಲ್ಲ ಇನ್ನೊಂದಷ್ಟು ಕಾಲ ನಡೆಯುತ್ತದೆ , ಮತ್ತು ಒಂದಷ್ಟು ವಾದ ವಿವಾದಗಳಾದ ಮೇಲೆ ಕೊನೆಗೂ ನೀರಿನಿಂದ ಹೊರಗೆ ಬರುತ್ತೇವೆ ಮತ್ತು ನಾನು ರೂಯಾಳ ಮೈ ಒರೆಸುವಾಗ ಅವಳು ತನ್ನ ಈಜುಡಿಗೆ ಕಳಚುತ್ತಾಳೆ

೯. ಇದ್ದಕಿದ್ದ ಹಾಗೆ ಅವಳು ನನ್ನ ಕೈಯಿಂದ ಚಿಮ್ಮಿ , ತೀರದಗುಂಟ ಓಡುತ್ತಾ , ನಗಲು ಶುರು ಮಾಡುತ್ತಾಳೆ. ನಾನು ಮರಳಿನಲ್ಲಿ ನನ್ನ ಬರಿಗಾಲಿನಲ್ಲಿ ಓಡುತ್ತಾ ಅಂಗಾಲಿಗೆ ಕಲ್ಲು ತಾಕಿ , ಕುಂಟುತ್ತೇನೆ , ಮತ್ತು ಹಾಗೆ ಕುಂಟುವುದು ನೋಡಿ ಅವಳ ನಗೆ ಬುಗ್ಗೆ ಇನ್ನೂ ಉಕ್ಕುತ್ತದೆ. “ನೋಡು ನಾನು ಶೂ ಹಾಕೊಂಡ್ರೆ ಎರಡೇ ಸೆಕೆಂಡ್ ಹಿಡೀಬಹುದು” ಎನ್ನುತ್ತೇನೆ . ಹಾಗೆ ಅವಳನ್ನ ಹಿಡಿದಾಗ , ಅವಳು ಜೋರಾಗಿ ಕಿರುಚುತ್ತಾಳೆ.

೧೦. ಮನೆಗೆ ಮರಳುವ ಹಾದಿಯಲ್ಲಿ , ರೂಯಾಳ ಗಾಡಿ ಎಳೆಯುತ್ತಾ ಸಾಗಿದಾಗ , ನಾವಿಬ್ಬರೂ ಸುಸ್ತಾಗಿರುತ್ತೇವೆ ಆದರೆ ಖುಷಿಯಾಗಿರುತ್ತೇವೆ. ಇಬ್ಬರೂ ಬದುಕಿನ ಬಗ್ಗೆ, ಮತ್ತು ನಮ್ಮ ಬೆನ್ನ ಹಿಂದಿದ್ದ ಸಮುದ್ರದ ಬಗ್ಗೆ ಯೋಚಿಸ್ತಾ ಇದ್ದೇವೆ , ಇಬ್ಬರೂ ಆ ಬಗ್ಗೆ ಒಂದು ಸಣ್ಣ ಸದ್ದು ಮಾಡುವುದಿಲ್ಲ.

ಅನುವಾದ : ಮಂಜುನಾಥ ಚಾರ್ವಾಕ

 

ಪ್ರತಿಕ್ರಿಯಿಸಿ