ನಾವು ತೆಹ್ರಾನ್ ನ ದಕ್ಷಿಣ ಭಾಗದ ಹೊರವಲಯವೊಂದರಲ್ಲಿದ್ದ ಬಡಜನರು ವಾಸಿಸುವ ಪ್ರದೇಶವೊಂದರಲ್ಲಿ ಪ್ರಯಾಣಮಾಡುತ್ತಿದ್ದೆವು. ಕಿಟಕಿಯ ಮೂಲಕ ರಸ್ತೆಯುದ್ದಕ್ಕೂ ಇದ್ದ ಸೈಕಲ್ ಮತ್ತು ಕಾರುಗಳ ರಿಪೇರಿ ಮಾಡುವ ಅಂಗಡಿಗಳ ಸಾಲುಗಳು ನೋಡುತ್ತಾ ಸಾಗಿದ್ದೆವು. ಶುಕ್ರವಾರವಾದದ್ದರಿಂದ ಎಲ್ಲ ಅಂಗಡಿಮುಂಗಟ್ಟುಗಳು ಮುಚ್ಚಿದ್ದರು. ರಸ್ತೆಗಳು, ಫ಼ುಟ್ ಪಾತಿನ ರಸ್ತೆಗಳು ಕೊನೆಗೆ ಕಾಫ಼ಿ ಅಂಗಡಿಗಳು ಸಹ ಖಾಲಿ ಹೊಡೆಯುತ್ತಿದ್ದವು. ಅಷ್ಟರಲ್ಲಿ ನಾವು ತೆಹ್ರಾನ್ ನಗರದ ಎಲ್ಲೆಡೆ ಕಾಣಸಿಗುತ್ತಿದ್ದ ವೃತ್ತಾಕಾರದ ಶೈಲಿಯಲ್ಲಿ ನಿರ್ಮಾಣವಾಗಿದ್ದ ನಿರ್ಜನವಾಗಿದ್ದ ಚೌಕವೊಂದರ ಟ್ರಾಫ಼ಿಕ್ ಸಿಗ್ನಲ್ ಒಂದರ ಬಳಿ ತಲುಪಿದೆವು. ನಮ್ಮ ಬಲಭಾಗದಲ್ಲಿದ್ದ ರಸ್ತೆಗೆ ಪ್ರವೇಶಿಸ ಬೇಕೆಂದರೆ, ನಾವು ಎಡಕ್ಕೆ ತಿರುಗಿ ಇಡೀ ವೃತ್ತವನ್ನು ಬಳಸಿ ಬರಬೇಕಿತ್ತು.
ನಮ್ಮ ಚಾಲಕ ಸುಮ್ಮನೆ ಬಲಕ್ಕೆ ತಿರುಗಿಸುವ ಯೋಚನೆಯಲ್ಲಿದ್ದಾನೆ ಅನ್ನುವುದು ಅವನನ್ನು ನೋಡಿದ ಕೂಡಲೇ ನನ್ನ ಅರಿವಿಗೆ ಬಂತು. ಆತ ತನ್ನೆರಡೂ ಕಡೆ ಯಾವುದಾದರೂ ವಾಹನ ಬರುತ್ತಿವೆಯಾ ಎಂದು ಎಚ್ಚರಿಕೆಯಿಂದ ನೋಡುತ್ತಿದ್ದ: ಆತ ಈಗ ಕಾನೂನು ಪಾಲನೆ ಮಾಡಬೇಕಾ, ಅಥವ ತನ್ನ ಬದುಕುವ ಬುದ್ದಿ ಬಳಸಿ, ತನ್ನ ಬದುಕಿನಲ್ಲಿ ಅಚಾನಕ್ಕಾಗಿ ಸಮಸ್ಯೆಗಳು ಎದುರಾದಾಗೆಲ್ಲ ಮಾಡಿರುವ ಹಾಗೆ, ಸುಲಭದ ದಾರಿ ಹುಡುಕಿಕೊಳ್ಳ ಬೇಕಾ?
ನನಗೆ, ನನ್ನ ಯೌವ್ವನದ ದಿನಗಳಲ್ಲಿ ಇಸ್ತಾಂಬುಲ್ ನ ರಸ್ತೆಗಳಲ್ಲಿ ಕಾರು ಚಲಾಯಿಸುತ್ತಿದ್ದಾಗ ಎದುರಿಸಿದ್ದ ದ್ವಂದ್ವಗಳ ನೆನಪಾಯಿತು. ನಗರದ ಮುಖ್ಯರಸ್ತೆಗಳಲ್ಲಿ ಕಾರು ಚಲಾಯಿಸುವಾಗ ನಾನೊಬ್ಬ ಮಾದರಿ ಕಾರು ಚಾಲಕ (ಪತ್ರಕರ್ತರ ಪ್ರಕಾರ “ಟ್ರಾಫಿಕ್ ಅರಾಜಕತೆ”), ಆದರೆ ನಾನು ಚಲಾಯಿಸುತ್ತಿದ್ದ ನಮ್ಮ ಅಪ್ಪನ ಕಾರನ್ನು ಕಲ್ಲುಹಾಸಿನ ಸಣ್ಣ ರಸ್ತೆಗಳ ಕಡೆಗೆ ತಿರುಗಿಸಿದ ಕೂಡಲೆ ಎಲ್ಲಾ ಕಾನೂನುಗಳನ್ನು ಕಡೆಗಣಿಸಿ ಮನಸಿಗೆ ಬಂದಂತೆ ಕಾರು ಚಲಾಯಿಸುತಿದ್ದೆ. ಕಣ್ಣಳತೆಯ ದೂರದಲ್ಲೆಲ್ಲೂ ಬೇರೆಯಾವುದೇ ವಾಹನವಿಲ್ಲದಾಗ ‘ಬಲ ತಿರುವು ನಿಷೇಧ’ ಎನ್ನುವ ಫಲಕವನ್ನು ಮನ್ನಿಸಿ ನಿಯಮ ಪಾಲನೆ ಮಾಡುವುದು, ಮಧ್ಯರಾತ್ರಿಯ ಹೊತ್ತು ನಿರ್ಜನವಾಗಿದ್ದ ಟ್ರಾಫಿಕ್ ಸಿಗ್ನಲ್ ಹಸಿರು ಬಣ್ಣಕ್ಕೆ ತಿರುಗುವವರೆಗೆ ಕಾಯುವುದು, ನನ್ನಂತಹ ಬುದ್ದಿವಂತ ವಾಸ್ತವವಾದಿಯನ್ನು ಗಣನೆಗೆ ತೆಗೆದುಕೊಳ್ಳದ ಅಧಿಕಾರಿಗಳ ಮುಂದೆ ಸೋಲೊಪ್ಪಿಕೊಂಡದ್ದಕ್ಕೆ ಸಮ. ಆಗೆಲ್ಲಾ ಕಾನೂನಿನ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವವರ ಬಗೆಗೆ ನಮಗೆ ಯಾವುದೇ ಗೌರವ ಇರಲಿಲ್ಲ. ತಲೆಯಲ್ಲಿ ಸ್ವಲ್ಪವೂ ಬುದ್ದಿಯಿಲ್ಲದ, ಕಲ್ಪನೆಗಳಿಲ್ಲದ, ವ್ಯಕ್ತಿತ್ವವಿಲ್ಲದವರು ಮಾಡುವ ಕೆಲಸ ಎನ್ನುವುದು ನಮ್ಮ ಅಭಿಪ್ರಾಯವಾಗಿತ್ತು. ಹೀಗೆ ಖಾಲಿ ಇದ್ದ ಸಿಗ್ನಲ್ ನಲ್ಲಿ ಸುಮ್ಮನೆ ಕೂರಲು ನೀವು ಸಿದ್ದರಾಗಿದ್ದೀರಾದರೆ, ಬಹುಷ ನೀವು ಟೂತ್ ಪೇಸ್ಟ್ ಟ್ಯೂಬಿನ ತಳಭಾಗದವನ್ನೂ ಒತ್ತಿ ಅಳಿದುಳಿದ ಭಾಗವನ್ನೂ ಬಳಸುವ, ಮಾತ್ರೆಗಳ ಮೇಲಿದ್ದ ನಿರ್ದೇಶನಗಳನ್ನೆಲ್ಲ ಓದದೆ ಮಾತ್ರೆ ಸೇವಿಸದಂತಹ ವ್ಯಕ್ತಿಯಾಗಿರುತ್ತೀರಿ. ಈ ಬಗೆಯ ಬದುಕು ಸಾಗಿಸುತ್ತಿರುವವರ ಮೇಲಿನ ನಮಗಿದ್ದ ತಿರಸ್ಕಾರವನ್ನು ೬೦ರ ದಶಕದ ಪಶ್ಚಿಮದ ದೇಶಗಳ ಯಾವುದೋ ಮ್ಯಾಗ್ಜೈನ್ ಒಂದು ಕಾರ್ಟೂನ್ ಹಿಡಿದಿಟ್ಟಿದ್ದರ ನೆನಪಿದೆ: ಒಬ್ಬ ಒಂಟಿ ಸವಾರ ಟ್ರಾಫಿಕ್ ಸಿಗ್ನಲ್ ಒಂದು ಹಸಿರು ಬಣ್ಣಕ್ಕೆ ತಿರುಗವುದನ್ನೇ ಕಾಯುತ್ತಾ ಅಮೇರಿಕಾದ ಮರುಭೂಮಿಯೊಂದರ ನಟ್ಟನಡುವಿನಲ್ಲಿ ನಿಂತಿರುವ ಚಿತ್ರ.
ಈಗ ಹಿಂತಿರುಗಿ ನೋಡಿ ೧೯೫೦ ರಿಂದ ೧೯೮೦ರ ವರೆಗಿನ ಇಸ್ತಾಂಬುಲ್ ನ ಬಗೆಗೆ ಯೋಚಿಸಿದರೆ, ಈ ರಸ್ತೆ ನಿಯಮಗಳ ಬಗೆಗಿನ ತಿರಸ್ಕಾರ ಕೇವಲ ಅರಾಜಕತೆಯೆಡೆಗಿನ ನಮ್ಮ ತುಡಿತವಷ್ಟೇ ಆಗಿರಲಿಲ್ಲವೇನೋ ಎನಿಸುತ್ತದೆ. ಬದಲಾಗಿ, ಅದೊಂದು ಸೂಕ್ಷ್ಮ ಸ್ವರೂಪದ ಪಶ್ಚಿಮ-ವಿರೋಧಿ ರಾಷ್ಟ್ರವಾದಿ ನಡೆ: ನಾವು ನಮ್ಮ ನಮ್ಮವರ ಜತೆಯಲ್ಲಿದ್ದಾಗ, ಯಾವುದೇ ಬಗೆಯ ಅಪರಿಚಿತರ ಅನುಪಸ್ಥಿತಿಯಲ್ಲಿ, ನಮ್ಮ ಹಳೆಯ ರೀತಿ ರಿವಾಜಗಳು ಮರುಕಳಿಸಿ, ನಮ್ಮ ಹಳೆಯ ವರಸೆಗಳನ್ನು ಶುರುಮಾಡಿಕೊಳ್ಳುತಿದ್ದೆವು. ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ, ಕೆಟ್ಟುಹೋದ ಜರ್ಮನ್ ರೇಡಿಯೋ ಒಂದನ್ನು ಮುಷ್ಟಿಯಲ್ಲಿ ಗುದ್ದಿ ಮತ್ತೆ ಸದ್ದು ಹೊರಡಿಸುವಂತಹ ಸಣ್ಣ ಕೆಲಸ ಎಂತವನಿಗೂ ಹೆಮ್ಮೆಯ ಸಂಗತಿ ಎನಿಸುತಿತ್ತು. ಇಂತಹ ಸಣ್ಣ ಸಣ್ಣ ಸಂಗತಿಗಳು ನಮ್ಮನ್ನು, ತಂತ್ರಜ್ಞಾನ ಮತ್ತು ಆಚಾರಗಳ ಗೌರವಾದಾರಗಳಿಂದ ಮುಳುಗಿದ್ದ ಪಾಶ್ಚಾತ್ಯರಿಂದ ಭಿನ್ನರನ್ನಾಗಿಸುತಿತ್ತು, ಮತ್ತು ನಾವು ಭೌತಿಕ ಜಗತ್ತಿಗೆ ಎಷ್ಟು ಹತ್ತಿರವಿದ್ದೆವು ಮತ್ತು ಬದುಕುವ ಜಾಣ್ಮೆ ಎಷ್ಟಿತ್ತು ಎನ್ನುವುದನ್ನು ನೆನಪಿಸುತಿತ್ತು.
ಆದರೆ ಈಗ ತೆಹರಾನ್ ನ ರಸ್ತೆಯ ಸಿಗ್ನಲ್ ಒಂದರ ತುದಿಯಲ್ಲಿ ಕುಳಿತಿರುವ ನಾನು, ನ್ಯಾಯಪಾಲನೆ ಮತ್ತು ವಾಸ್ತವದ ನಡುವೆ ಓಲಾಡುತ್ತಿರುವ, ಇಷ್ಟರಲ್ಲಾಗಲೆ ನನಗೆ ಚೆನ್ನಾಗಿ ಪರಿಚಿತನಾಗಿರುವ, ಈ ಮನುಷ್ಯ ಖಂಡಿತವಾಗಿಯೂ ಯಾವುದೇ ರಾಷ್ಟ್ರವಾದಿ ಸಂದೇಶ ಹೊರಡಿಸುವ ಬಗ್ಗೆ ಯೋಚಿಸುತ್ತಿಲ್ಲ ಎಂದು ಖಂಡಿತ ಹೇಳಬಲ್ಲೆ. ಅವನ ಮುಂದಿರುವ ಸಮಸ್ಯೆ ಅದಕ್ಕಿಂತ ಸರಳವಾದದ್ದು: ನಾವು ಈಗಾಗಲೇ ತಡವಾಗಿ ಹೊರಟಿದ್ದರಿಂದ ಈ ವೃತ್ತವನ್ನು ಬಳಸಿ ಬರುವುದು ವಾಸ್ತವದಲ್ಲಿ ಸಮಯವ್ಯರ್ಥ, ಆದರೆ ಆತ ಸಾಕಷ್ಟು ಚಡಪಡಿಸುತ್ತಾ ಆ ಚೌಕಕ್ಕೆ ಸೇರುತ್ತಿದ್ದ ಎಲ್ಲ ರಸ್ತೆಗಳ ಕಡೆಗೆ ತನ್ನ ನೋಟ ಹರಿಸುತಿದ್ದ, ಯಾಕೆಂದರೆ ಅಕಸ್ಮಾತ್ ದುಡುಕಿ ಮುನ್ನುಗ್ಗುವ ನಿರ್ಧಾರಕ್ಕೆ ಬಂದರೆ ಇನ್ಯಾವುದಾದರೂ ಕಾರಿಗೆ ಡಿಕ್ಕಿ ಹೊಡೆಸುವ ಸಾಧ್ಯತೆ ಇತ್ತು.
ಮೊನ್ನೆ ತಾನೆ, ನಾವು ತೆಹರಾನಿನ ರಸ್ತೆಯ ‘ಅರಾಜಕತೆ’ಯಲ್ಲಿ ಸಿಲುಕಿ ತೆವಳುತ್ತಾ ಸಾಗುತ್ತಾ, ಒಂದಾದ ಮೇಲೆ ಒಂದು ವಾಹನಗಳ ದಟ್ಟಣೆಯ ಗೋಜಲಿನಲ್ಲಿ ಸಿಲುಕಿಕೊಂಡಾಗ, ಆತ ತೆಹರಾನ್ ನಲ್ಲಿ ಯಾರೂ ನಿಯಮಗಳಿಗೆ ಬೆಲೆ ಕೊಡುವುದಿಲ್ಲ ಎಂದು ದೂರಿದ್ದ. ಆತ ಅದನ್ನು ತಮಾಷೆಯ ಹಾಗೆ ಹೇಳಿದ, ಒಪ್ಪೋಣ, ಆದರೂ ಇಡೀ ದಿನ ನಾವು ಒಂದರ ಹಿಂದೆ ಒಂದು ಆಮೆ ವೇಗದಲ್ಲಿ ಸಾಗುತ್ತಿರವ ವಾಹನ ದಟ್ಟಣೆಯಲ್ಲಿ ಸಿಲುಕಿ, ನಮ್ಮ ಎದುರಿಗಿದ್ದ ಮುಕ್ಕಾದ ಸ್ಥಳೀಯ ಪೇಯ್ ಕಾನ್* ಕಾರಿನ ಬಂಪರ್ಗಳನ್ನು ನೋಡುತ್ತಾ, ಕಾರಿನ ಚಾಲಕರು ಒಬ್ಬರಿಗೊಬ್ಬರು ಬೈಗುಳದ ಮಳೆ ಸುರಿಸುತ್ತಾ ಇರುವುದನ್ನು ನೋಡುತ್ತಾ, ನಾವಿಬ್ಬರೂ, ಇದನ್ನೆಲ್ಲ ಮೀರಿದ ರಸ್ತೆಯ ಕಾನೂನುಗಳನ್ನು ಪಾಲಿಸುವ ಆಧುನಿಕರ ಹಾಗೆ ವ್ಯಂಗ್ಯದ ನಗೆ ಬೀರಿದ್ದೆವು. ಆದರೆ, ಇವಾಗ ಕಾಣುತ್ತಿರುವ ನನ್ನ ಚಾಲಕನ ನಗುವಿನಲ್ಲಿ, ಈ ನಿಯಮಬಾಹಿರ ತಿರುವನ್ನು ತೆಗೆದುಕೊಳ್ಳಬೇಕೊ ಬೇಡವೋ ಎನ್ನುವ ಒಂದು ಬಗೆಯ ಆತಂಕ ನೆಲೆಸಿರುವುದು ನನಗೆ ಅರಿವಾಗುತಿತ್ತು.
ಇಷ್ಟೇ ತೀವ್ರವಾದ ಆತಂಕದಲ್ಲಿ, ಇಸ್ತಾಂಬುಲ್ ನ ರಸ್ತೆಗಳ ಟ್ರಾಫಿಕ್ ನಲ್ಲಿ ಪರದಾಡುತ್ತಾ, ಇದೇ ಒಂಟಿತನ ಅನುಭವಿಸಿದ್ದರ ನೆನಪಾಯಿತು. ರಸ್ತೆ ಸಂಚಾರಿ ನಿಯಮಗಳ ಅನುಕೂಲ ಮತ್ತು ಸುರಕ್ಷತೆಯನ್ನು ಗಾಳಿಗೆ ತೂರಿ ಹೋಗುವ ನಿರ್ಧಾರ ತೆಗೆದುಕೊಳ್ಳುವ ಅಂಚಿನಲ್ಲಿದ್ದ ನಮ್ಮ ಚಾಲಕನಿಗೆ, ಆ ನಿರ್ಧಾರವನ್ನು ತಾನು ಏಕಾಂಗಿಯಾಗಿ ತೆಗೆದುಕೊಳ್ಳಬೇಕು ಎನ್ನುವುದು ಸ್ಪಷ್ಟವಾಗಿ ತಿಳಿದಿದೆ. ತನ್ನ ಮುಂದಿರುವ ಸಾಧ್ಯಾಸಾಧ್ಯತೆಗಳನ್ನು ಸಾಧ್ಯವಾದಷ್ಟು ಶೀಘ್ರವಾಗಿ ಪರಿಶೀಲಿಸಿ, ತನ್ನ ಮುಂದಿದ್ದ ಆಯ್ಕೆಗಳನ್ನು ಗಣನೆಗೆ ತೆಗೆದುಕೊಂಡು, ಆ ಸ್ಥಳದಲ್ಲೇ ಆ ಕ್ಷಣವೇ ತನ್ನ ನಿರ್ಧಾರದ ಪರಿಣಾಮ ತನ್ನ ಜೀವಕ್ಕೇ ಕುತ್ತಾಗಬಹುದು, ಜತೆಗೆ ಇತರರ ಜೀವದ ಜವಾಬ್ದಾರಿಯನ್ನೂ ತನ್ನ ಕೈಗೆ ತೆಗೆದುಕೊಳ್ಳುತಿದ್ದೇನೆ ಎಂದು ಅರಿತು ನಿರ್ಧಾರ ತೆಗೆದುಕೊಳ್ಳಬೇಕಿತ್ತು.
ನಮ್ಮ ಚಾಲಕ, ಸಂಚಾರಿ ನಿಯಮಗಳನ್ನು ಮುರಿಯುವುದರ ಮೂಲಕ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುತಿದ್ದಾನೆ, ತನ್ಮೂಲಕ ಒಂಟಿನವನ್ನು ತನ್ನ ಮೇಲೆ ಹೇರಿಕೊಳ್ಳುತಿದ್ದಾನೆ ಎಂದು ನೀವು ವಾದಿಸಬಹುದು. ಅಕಸ್ಮಾತ್ ಆತ ಈ ಸ್ವತಂತ್ರ ಆಯ್ಕೆ ಮಾಡಿಕೊಳ್ಳದಿದ್ದರೂ, ಈ ನಗರ ಮತ್ತು ಇಲ್ಲಿನ ಚಾಲಕರ ಬಗ್ಗೆ ಆತನಿಗೆ ಚೆನ್ನಾಗಿ ಅರಿವಿಗೆ ಬಂದಿದ್ದೇನೆಂದರೆ, ಈ ನಗರದಲ್ಲಿ ಚಾಲಕನಾಗಿರುವವರೆಗೂ ತಾನು ಒಂಟಿಯಾಗಿಯೇ ಇರಬೇಕಾಗುತ್ತದೆ ಎನ್ನುವುದು. ಯಾಕೆಂದರೆ ಆತ ನಿಯಮಪಾಲನೆ ಮಾಡಲು ನಿರ್ಧರಿಸಿದರೂ, ಉಳಿದವರು – ನಿಮ್ಮಂತ ಬದುಕು ಬುದ್ದಿಯ ಜನರು- ಅವನನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ತೆಹರಾನ್ ನ ಕೇಂದ್ರ ಭಾಗದ ಹೊರತಾಗಿ ಬೇರೆಲ್ಲೆಡೆ, ಪ್ರತೀ ಚಾಲಕನೂ ಕೇವಲ ಟ್ರಾಫಿಕ್ ಸಿಗ್ನಲ್ ಮೇಲೆ ಮತ್ತು ನಿಯಮಗಳ ಮೇಲೆ ಮಾತ್ರ ಗಮನವಿರಿಸದೆ ಇವುಗಳನ್ನೆಲ್ಲ ಕಡೆಗಣಿಸಿ ಎಲ್ಲಿಂದಾದರೂ ಬರಬಹುದಾದ ಚಾಲಕರ ಮೇಲೂ ಗಮನವಿರಿಸಬೇಕಿತ್ತು. ಪಾಶ್ಚಾತ್ಯ ದೇಶದ ಚಾಲಕರು ತಮ್ಮ ರಸ್ತೆಯ ಲೇನ್ ಅನ್ನು ಧೈರ್ಯವಾಗಿ ಬದಲಾಯಿಸಿ ಉಳಿದವರು ಕಾನೂನು ಪಾಲನೆ ಮಾಡುತ್ತಾರೆ ಎನ್ನುವ ಭರವಸೆಯೊಂದಿಗೆ ಹಾಡು ಕೇಳುತ್ತಾ, ತನ್ನ ಮನಸನ್ನು ಹರಿಯಬಿಟ್ಟು ವಾಹನ ಚಲಾಯಿಸಬಹುದು. ತೆಹರಾನಿನ ಚಾಲಕ ಇದಕ್ಕಿಂತ ಬೇರೆ ಬಗೆಯ ಸ್ವಾತಂತ್ರವನ್ನು ಅನುಭವಿಸುತ್ತಾನೆ, ಆದರೆ ಅದು ಅವನಿಗೆ ಯಾವುದೇ ಬಗೆಯ ನೆಮ್ಮದಿ ತಂದುಕೊಡುವುದಿಲ್ಲ.
ನಾನು ತೆಹರಾನಿಗೆ ಭೇಟಿ ನೀಡಿದಾಗ, ಈ ಚಾಲಕರು ತಮ್ಮ ವೈಯಕ್ತಿಕ ಸ್ವಾತಂತ್ರವನ್ನು ಉಳಿಸಿಕೊಳ್ಳುವ ಸಲುವಾಗಿ ತಮ್ಮ ಅಸಾಧ್ಯ ಸಿಟ್ಟಿನಿಂದ ಹುಟ್ಟಿದ ಜಾಣ್ಮೆಯಿಂತ ತಮ್ಮ ಮೈಮೇಲೆ ಎಳೆದುಕೊಂಡಿರುವ ಅವ್ಯವಸ್ಥೆ ಮತ್ತು ಅನಾಹುತಗಳನ್ನು ಗಮನಿಸಿದಾಗ ಅನಿಸಿದ್ದೇನೆಂದರೆ, ಈ ಸಣ್ಣ ಸಣ್ಣ ಕಾನೂನುಬಾಹಿರ ವೈಯಕ್ತಿಕ ಆಯ್ಕೆಗಳು ಅಧಿಕಾರದಲ್ಲಿರುವವರು ಈ ನಗರದ ದೈನಂದಿನ ಜೀವನದ ಉಳಿದೆಲ್ಲಾ ಆಯ್ಕೆಗಳ ಮೇಲೆ ಹೇರಿರುವ ಧಾರ್ಮಿಕ ನಿಯಮಗಳಿಗೆ ಎದುರಾಗಿ ನಿಂತಿದ್ದಾವೆ ಎನ್ನುವುದು. ಇದೆಲ್ಲವೂ, ಕೊನೆಗೂ, ನೀಡಲು ಬಯಸುವ ಸಂದೇಶವೇನೆಂದರೆ, ಸಾರ್ವಜನಿಕ ಬದುಕಿನಲ್ಲಿರುವ ಎಲ್ಲರೂ ಮತ್ತು ರಸ್ತೆಗಳಲ್ಲಿ ಓಡಾಡುತ್ತಿರುವ ಪ್ರತಿಯೊಬ್ಬರೂ ಇಸ್ಲಾಮಿಕ್ ಸರ್ವಾಧಿಕಾರ ಹೇರ ಬಯಸುವ ಮಹಿಳೆಯರ ಮೇಲಿನ ನಿರ್ಬಂಧಗಳು, ಪುಸ್ತಕಗಳ ಮೇಲಿನ ಸೆನ್ಸಾರ್ಗಳು, ತನ್ನ ಸೆರೆಮನೆಗಳನ್ನು ಭರ್ತಿಯಿಡುವುದು ಮತ್ತು ನಗರದ ಉದ್ದಕ್ಕೂ ಗೋಡೆಗಳ ತುಂಬೆಲ್ಲ ತಮ್ಮ ದೇಶ ಮತ್ತು ಧರ್ಮಕ್ಕಾಗಿ ಪ್ರಾಣ ಬಲಿದಾನ ನೀಡಿದವರ ಬೃಹದಾಕಾರದ ಚಿತ್ರಗಳನ್ನು ಅಂಟಿಸಿರುವವದನ್ನೆಲ್ಲ ಅನುಮೋದಿಸುತ್ತಾರೆ ಎನ್ನುವುದನ್ನು ತೋರಿಸಲು. ವಿಚಿತ್ರವೆಂದರೆ, ಈ ನಗರದ ಹುಚ್ಚು ಟ್ರಾಫಿಕ್ ನ ವಿರುದ್ದ ಸೆಣೆಸಾಡುತ್ತಾ, ಸಂಚಾರಿ ನಿಯಮಗಳನ್ನು ಮೀರುವ ಚಾಲಕರ ವಿರುದ್ದ ಹೋರಾಡುತ್ತಿರುವಾಗ, ಧರ್ಮದ ಅಸ್ತಿತ್ವ ನಿಮಗೆ ಬಹಳ ಸ್ಪಷ್ಚವಾಗಿ ಅರಿವಿಗೆ ಬರುತ್ತದೆ. ಇಲ್ಲಿ ಆಢಳಿತ ನಡೆಸಿತ್ತಿರುವವರು, ಒಂದು ಕಡೆ, ಪವಿತ್ರ ಗ್ರಂಥದಲ್ಲಿ ಬರೆದಿರುವ ಕಟ್ಟುನಿಟ್ಟಿನ ನಿಯಮಗಳಿಗೆ ಎಲ್ಲರೂ ತಲೆಬಾಗಲೇ ಬೇಕು ಎನ್ನುತ್ತಾ, ನಿರ್ದಾಕ್ಷಿಣ್ಯವಾಗಿ ರಾಷ್ಟ್ರದ ಐಕ್ಯತೆಯ ಹೆಸರಿನಲ್ಲಿ ನಿಯಮ ಮೀರಿದವರನ್ನು ಬಂಧಿಸುತಿದ್ದರೆ ಇನ್ನೊಂದೆಡೆ ಈ ಚಾಲಕರು, ಸರ್ಕಾರ ನಮ್ಮನ್ನು ಗಮನಿಸುತ್ತಿದೆ ಎನ್ನುವ ಅರಿವಿದ್ದರೂ, ಸಂಚಾರ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ, ಉಳಿದವರೂ ತಮ್ಮಂತೆಯೇ ನಡೆದುಕೊಳ್ಳಲು ಪ್ರೇರೇಪಿಸುತ್ತಿದ್ದಾರೆ. ಈ ರಸ್ತೆಗಳನ್ನು ಅವರು ತಮ್ಮ ವೈಯಕ್ತಿಕ ಸ್ವಾತಂತ್ರದ ಮಿತಿಯನ್ನು ಪರೀಕ್ಷಿಸಲು ಬಳಸಿಕೊಳ್ಳುತ್ತಾ, ತಮ್ಮ ಕಲ್ಪನೆಯನ್ನು ಹರಿಯಬಿಟ್ಟು, ತಮ್ಮ ಚಾಲೂಕಿತನವನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಇರಾನಿನ ಶರಿಯಾ ಕಾನೂನಿನಡಿ ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಮಾರುಕಟ್ಟೆಗಳಲ್ಲಿ, ತೀವ್ರವಾಗಿ ಹದ್ದುಬಸ್ತಿಗೆ ಒಳಗಾಗಿರುವ ಬುದ್ದಿಜೀವಿಗಳು ಮತ್ತು ಕಲಾವಿದರಲ್ಲೂ ನಾನು ಇದೇ ಬಗೆಯ ವೈರುದ್ಯಗಳ ಪ್ರತಿಫಲನವನ್ನು ಗಮನಿಸಿದ್ದೇನೆ. ಹಿಟ್ಲರನ ಜರ್ಮನಿಯಲ್ಲೋ, ಅಥವಾ ಸ್ಟಾಲಿನನ ರಷ್ಯಾದಲ್ಲೊ ನಾವಿಲ್ಲ ಎಂದು ತೋರಿಸಲು ನನ್ನ ಬಳಿ ಅವರು ನಾವು ಯಾವ ವಿಷಯವನ್ನಾದರೂ ಚರ್ಚಿಸುತ್ತೇವೆ, ಯಾವ ಧಿರಿಸನ್ನಾದರೂ ತೊಡುತ್ತೇವೆ, ಮತ್ತು ಅನಧಿಕೃತ ಮದ್ಯವನ್ನು ತಮ್ಮ ಮನೆಗಳಲ್ಲಿ ಮನಸೋ ಇಚ್ಛೆ ಕುಡಿಯುತ್ತೇವೆ ಎನ್ನುವ ಅವರ ಪ್ಯಯತ್ನವನ್ನು ನಾನು ಮನಸಾರೆ ಅಭಿನಂಧಿಸುತ್ತೇನೆ.
ಲೊಲಿಟಾ ಕಾದಂಬರಿಯ ಕೊನೆಯ ಪುಟಗಳಲ್ಲಿ, ಕ್ವಿಲ್ಟಿಯನ್ನು ಕೊಂದ ನಂತರ ಹಂಬರ್ಟ್, ಅಪರಾಧ ನಡೆದ ಸ್ಥಳದಿಂದ, ಈಗಾಗಲೆ ಓದುಗರಿಗೆ ಚಿರಪರಿಚಿತವಾದ, ಕಾರಿನಲ್ಲಿ ದೂರ ಹೋಗುತ್ತಿರುವಾಗ ಇದ್ದಕ್ಕಿದ್ದ ಹಾಗೆ ರಸ್ತೆಯ ಬಲಭಾಗಕ್ಕೆ* ತನ್ನ ಕಾರನ್ನು ತಿರುಗಿಸುತ್ತಾನೆ. ಈ ಕ್ರಿಯೆಯನ್ನು ಪ್ರತಿರೋಧದ ಪ್ರತಿಮೆಯಾಗಿ ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆಗೆ ಹೆದರಿ, ಓದುಗರನ್ನು ಎಚ್ಚರಿಸುತ್ತಾನೆ. ಒಂದು ಸಣ್ಣ ಮಗುವನ್ನು ಮೋಹಿಸಿ ಆನಂತರ ಕೊಲೆ ಮಾಡಿ ಈಗಾಗಲೆ ಮನುಕುಲದ ಮುರಿಯಬಾರದಾದ ಕಾನೂನನ್ನು ಮುರಿಯುವ ಘೋರ ಅಪರಾದವನ್ನು ಮಾಡಿದ್ದಾನೆ. ಹಂಬರ್ಟನ ಈ ಕಥೆ ಮತ್ತು ಕಾದಂಬರಿಯ ಮೇಧಾವಿತನ ಇಲ್ಲಿ ಅಡಗಿದೆ: ಕಾದಂಬರಿಯ ಮೊದಲ ಪುಟದಿಂದಲೇ ಮುಖ್ಯ ಪಾತ್ರಕ್ಕಷ್ಟೇ ಸೀಮಿತವಾದ ಅಪರಾಧಿ ಭಾವವನ್ನು ನಾವು ಅನುಭವಿಸುತ್ತೇವೆ.
ಅರೆಘಳಿಗೆ ಈ ಅನಿಶ್ಚತೆಯ ಧಾಳಿಗೆ ತೆಹರಾನ್ ನಗರದ ಹೊರಭಾಗದಲ್ಲಿ ಸಿಲುಕಿದ ನಮ್ಮ ಚಾಲಕ ಮಿತ್ರ ಕೊನೆಗೂ ಅಡ್ಡ ದಾರಿ ಹಿಡಿದು— ರಸ್ತೆಯ ಬಲಭಾಗಕ್ಕೆ ಹೋಗಿ, ಯಾವುದೇ ಅಪಘಾತಕ್ಕೆ ಸಿಲುಕದೆ, ನಾನು ಇಸ್ತಾಂಬುಲ್ ನಲ್ಲಿ ಯೌವನದ ದಿನಗಳಲ್ಲಿ ಲೆಕ್ಕವಿರದಷ್ಟು ಸಮಯ ಮಾಡಿದ ಹಾಗೆಯೇ— ಕಾನೂನು ಮುರಿದಾಗಲಷ್ಟೇ ಸಿಗುವ ಉದ್ವೇಗದ ಕ್ಷಣಗಳನ್ನು ಅನುಭವಿಸಿ ಅಲ್ಲಿಂದ ವೇಗವಾಗಿ ಸಾಗುತ್ತಾ, ಒಬ್ಬರನ್ನೊಬ್ಬರು ನೋಡಿ ನಕ್ಕೆವು. ಇಲ್ಲಿ ದು:ಖದ ವಿಷಯವೆಂದರೆ, ಹೀಗೆ ಕಾನೂನನ್ನು ಮೀರಬಹುದಾದ ಒಂದೇ ಒಂದು ಸಂಧರ್ಭ ನಾವು ಕಾರು ಚಲಾಯಿಸುವಾಗ ಮಾತ್ರ ಸಾಧ್ಯ ಮತ್ತು ನಾವು ಮುರಿದ ಕಾನೂನು ಕೊನೆಗೂ ಕೇವಲ ಟ್ರಾಫಿಕ್ ಅಲ್ಲದೇ ಮತ್ಯಾವುದರ ಮೇಲೂ ಪರಿಣಾಮ ಬೀರುವುದಿಲ್ಲ ಎನ್ನುವುದು.
ಅನುವಾದ : ಮಂಜುನಾಥ ಚಾರ್ವಾಕ
ಫೆರಿಟ್ ಓರ್ಹಾನ್ ಪಾಮುಕ್ (ಜನನ 7 ಜೂನ್ 1952) ಒಬ್ಬ ಟರ್ಕಿಶ್ ಕಾದಂಬರಿಕಾರ, ಚಿತ್ರಕಥೆಗಾರ, ಶಿಕ್ಷಣತಜ್ಞ. 2006 ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಟರ್ಕಿಯ ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರು. ‘ದ ಬ್ಲ್ಯಾಕ್ ಬುಕ್’ ,’ಮೈ ನೇಮ್ ಈಸ್ ರೆಡ್’,’ಸ್ನೋ’ ಇವು ಪಾಮುಕ್ ಬರೆದ ಕೆಲವು ಕಾದಂಬರಿಗಳ ಇಂಗ್ಲೀಷ್ ಅನುವಾದಗಳು.