ಹೆಪ್ಪುಗಟ್ಟಿದ ಆತಂಕ, ಮರುಹುಟ್ಟಿದ ಅಸ್ಮಿತೆ: ಭಾರತದ ಮುಸ್ಲಿಮರ ಬದುಕು-ಬವಣೆ

ಗಜಾಲಾ ವಾಹಬ್ ಅವರ ‘ಬಾರ್ನ್ ಎ ಮುಸ್ಲಿಮ್-ಸಮ್ ಟ್ರೂತ್ಸ್ ಅಬೌಟ್ ಇಸ್ಲಾಮ್ ಇನ್ ಇಂಡಿಯಾ’ ಪುಸ್ತಕ ವಿಮರ್ಶೆ ಇದು. ಇಂದು ಭಾರತದಲ್ಲಿನ ಅತಿ ದೊಡ್ಡ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯವಾಗಿರುವ ಮುಸಲ್ಮಾನರಾಗಿ ಬದುಕುವುದೆಂದರೆ ಏನೆಂಬುದನ್ನು ಮತ್ತು ನಿಲ್ಲದ ಪೂರ್ವಗ್ರಹಗಳಿಂದಾಗಿ ಮುಸ್ಲಿಂ ಸಮುದಾಯವು ಏಕೆ ಭಯದಿಂದ ಬದುಕುತ್ತಿದೆ ಎಂಬುದನ್ನು ಗಜಾಲಾ ವಹಾಬ್ ಇಲ್ಲಿ ವಿವರಿಸುತ್ತಾರೆ. ಭಾರತದಲ್ಲಿ ಇಸ್ಲಾಂ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಅನ್ವೇಷಿಸುತ್ತಾ , ಗಜಾಲಾ ವಾಹಬ್ ಸಾಂಸ್ಕೃತಿಕ ಸಂಕರ ಬೆಳೆಯಲು ಹೇಗೆ ಶತಮಾನಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಇನ್ನೂ ಅದು ದುರ್ಬಲವಾಗಿ ಉಳಿದುಕೊಂಡಿರಲು ಕಾರಣಗಳನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಭಾರತದ ಮುಸ್ಲಿಂ ಸಮುದಾಯ ಮತ್ತು ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಹಾನುಭೂತಿ ಮತ್ತು ಅತ್ಯುತ್ಸಾಹದಿಂದ ಸಂಶೋಧನೆ ನಡೆಸಿ ಬರೆದ ಈ ಕೃತಿಯನ್ನು ವಿಶೇಷವಾಗಿ ಈ ಧ್ರುವೀಕೃತ ಕಾಲದಲ್ಲಿ ನಾವೆಲ್ಲರೂ ಅತ್ಯಗತ್ಯವಾಗಿ ಓದಲೇಬೇಕು.

ಉತ್ತರ ಪ್ರದೇಶದ ಲಖನೌ ಜಿಲ್ಲೆಯ ಅಲ್ವಾಲ್ ಎಂಬ ಸಣ್ಣ ಊರು. ಈ ಊರಿನಲ್ಲಿ ವಾಸವಿರುವ ಪರ್ವೇಜ್ ಕುಟುಂಬ ತಮ್ಮ ಮನೆಯಂಗಳವನ್ನು ನೆರೆಮನೆಯ ಮಗಳಾದ ಪೂಜ ಎಂಬ ಹೆಣ್ಣು ಮಗಳ ಮದುವೆಗಾಗಿ ಬಿಟ್ಟುಕೊಟ್ಟರು. ಅಷ್ಟೇ ಅಲ್ಲದೆ ಅಂಗಳದಲ್ಲಿ ಮದುವೆ ಮಂಟಪ ಮತ್ತು ಅತಿಥಿಗಳಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಏರ್ಪಡಿಸಿದರು. ಪೂಜಾ ಅವರ ತಂದೆ ಕೋವಿಡ್ ನಿಂದಾಗಿ ತೀರಿಕೊಂಡಿದ್ದರು. ಪೂಜಾಳ ತಾಯಿ ಮತ್ತು ಸಂಬಂಧಿಕರಿಗೆ ಈಗಾಗಲೇ ನಿಗದಿಯಾಗಿದ್ದ ಮದುವೆಗೆ ಬಾಡಿಗೆ ಮಂಟಪವನ್ನು ಪಡೆಯಲು ಅಶಕ್ತರಾಗಿದ್ದರು. ಆಗ ಪರ್ವೇಜ್ ಕುಟುಂಬ ಜೊತೆಯಾಗಿ ನಿಂತಿತು. ಎರಡೂ ಕುಟುಂಬಗಳ ನಡುವೆಯಿರುವ ಅನ್ಯೋನತೆ ನಿನ್ನೆ ಮೊನ್ನೆಯದಲ್ಲ. ಪೂಜಾ ತಮ್ಮ ಮನೆ ಮಗಳಂತೆಯೇ ಎಂದು ತಿಳಿದಿರುವ ಪರ್ವೇಜ್ ಕುಟುಂಬ ‘ರಂಜಾನ್ ಮಾಸದಲ್ಲಿ ನಾವು ಮಾಡುತ್ತಿರುವ ಒಂದು ಒಳ್ಳೆಯ ಕೆಲಸ’ ಎಂದು ಹೆಮ್ಮೆ ಪಡುತ್ತಾರೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ.

ಜೀವನದ ಕಠಿಣ ಸಂದರ್ಭಗಳಲ್ಲಿ ಜೊತೆಯಾಗಿ ನಿಲ್ಲುವ ಅಂತರ್ಧರ್ಮೀಯರ ಅನೇಕ ಉದಾಹರಣೆಗಳು ಎಂದೆಂದಿಗೂ ನಮ್ಮ ಸಮಾಜದಲ್ಲಿವೆ. ಭಾರತದ ಸಮುದಾಯ ಪ್ರಜ್ಞೆ ಸಹಬಾಳ್ವೆಯನ್ನು ರೂಢಿಸಿಕೊಂಡಿರುವ ಇತಿಹಾಸ ನಮ್ಮ ಮುಂದಿದೆ. ಸಾಂಸ್ಥಿಕ ಧರ್ಮದ ಹಿಡಿತದಲ್ಲೇ ಜೀವನ ಸಾಗಿಸುತ್ತಿರುವ ವ್ಯಕ್ತಿಯೂ ಕೂಡ ಬದುಕುಳಿಯುವ ಅಪಾಯದ ಸಂದರ್ಭಗಳಲ್ಲಿ ಕಿವಿಗೊಡುವುದು ತನ್ನ ಅಂತರಂಗದಲ್ಲಿ ಹರಿಯುವ ಮಾನವೀಯತೆಗೆ ಮಾತ್ರ. ಇದು ಮನುಷ್ಯ ಪ್ರಾಣಿಯ ಮೂಲಭೂತವಾದ ಪ್ರವೃತ್ತಿ. ಭೂಮಿಯ ಮೇಲಿನ ಇಡೀ ಜೀವಸಂಕುಲದ ಅಸ್ತಿತ್ವ ಇದೇ ಸಹಜ ಸಹಬಾಳ್ವೆಯ ಮೇಲೆ ನಿಂತಿದೆ.

ಮಾನವ ಸಮಾಜದ ಈ ಸಹಜ ಜೈವಿಕ ಪ್ರವೃತ್ತಿಯನ್ನು ಯಶಸ್ವಿಯಾಗಿ ಹತ್ತಿಕ್ಕುವ ಸಾಮರ್ಥ್ಯವಿರುವ ಏಕೈಕ ಅಸ್ತ್ರ ಧರ್ಮ. ಉನ್ನತ ಆಲೋಚನೆಗಳ ಸಂಗ್ರಹವೆಂದು ಪರಿಗಣಿಸುವ ಯಾವುದೇ ಧರ್ಮಗ್ರಂಥವು ಮಾನವ ಸಮಾಜವನ್ನು ಗುಂಪುಗಾರಿಕೆಯ ಹಾದಿಯಲ್ಲಿ ಮುನ್ನೆಡೆಸಿರುವುದನ್ನು ಇತಿಹಾಸ ತೆರೆದಿಡುತ್ತದೆ. ಯಾವುದೇ ಸಮಾಜ ಒಂದು ಆರೋಗ್ಯಕರ ಮನಸ್ಥಿತಿಯನ್ನು ತಲುಪಲು ನಿರಂತರವಾಗಿ ಅಡ್ಡಿಯಾಗಿರುವ ವಿದ್ಯಮಾನ ಯಾವುದು? ಮನುಷ್ಯ ಸಮಾಜದ ಆರೋಗ್ಯಕ್ಕೆ ಬೇಕಾಗಿರುವ ಉದಾರ-ಉನ್ನತ ಆಲೋಚನೆಗಳು ಸಾಂಸ್ಥಿಕ ಧರ್ಮವಾಗಿ ಮಾರ್ಪಾಡಾದಾಗ ಅನುಕೂಲಕ್ಕಿಂತ ಅನಾನುಕೂಲಗಳೆ ಹೆಚ್ಚಾಗಿರುವುದನ್ನು ನಾವು ಕಾಣಬಹುದು. ಆದರೆ ಈ ವಿದ್ಯಮಾನವನ್ನು ಒಪ್ಪಿಕೊಳ್ಳುವ/ಪರೀಕ್ಷಿಸುವ ಪ್ರಾಮಾಣಿಕ ಪ್ರಯತ್ನಗಳು ಬಹಳ ಕಡಿಮೆ. ಮನುಷ್ಯ ಸಮಾಜದ ಏಳಿಗೆಗೆ ಅಡಚಣೆಯಾಗುವ ಇತರ ವಿದ್ಯಮಾನಗಳನ್ನು (ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ) ಪರೀಕ್ಷೆಗೆ ಒಳಪಡಿಸಲು ತೋರುವ ಧೈರ್ಯ, ಪ್ರಾಮಾಣಿಕತೆ ಮತ್ತು ಸಹಜತೆ, ಧಾರ್ಮಿಕ ವಿದ್ಯಮಾನದ ವಿಶ್ಲೇಷಣೆಗೆ ಅನ್ವಯವಾಗುವುದು ವಿರಳಾತಿ ವಿರಳ. ಒಳಪಟ್ಟರೂ, ಒಳಪಡಿಸಿದ ವ್ಯಕ್ತಿ ಅಥವಾ ಗುಂಪನ್ನು ಹತ್ತಿಕ್ಕುವ ಸಂದರ್ಭಗಳೇ ಹೆಚ್ಚು. ಇತಿಹಾಸದ ಪುಟಗಳಲ್ಲಿ ಇಂತಹ ಗುಂಪುಗಳು ಎಂದಿನಿಂದಲೂ ಅಂಚಿಗೆ ದೂಡಲ್ಪಟ್ಟಿವೆ.

 

ಹಲವು ಧರ್ಮೀಯರು ಹಲವು ಭಾಷಿಕರು ವಾಸಿಸುವ ಭಾರತದಲ್ಲಿ ಸಾಮರಸ್ಯವೊಂದೇ ಅಭಿವೃದ್ಧಿಯ ಅಡಿಪಾಯ. ಹಲವು ವರ್ಷಗಳ ಭಾರತದ ಇತಿಹಾಸದಲ್ಲಿ ಮುಸ್ಲಿಮ್ ಧರ್ಮೀಯರ ಕೊಡುಗೆ ಅಪಾರ. ಭಾರತ ದೇಶದ ಸಂಸ್ಕೃತಿಯನ್ನು ಸಂಗೀತ, ಭಾಷೆ, ಶಿಲ್ಪ ಕಲೆ, ನೃತ್ಯ ಕಲೆ, ಆಹಾರ ಮುಂತಾದ ಆಯಾಮಗಳಿಂದ ಸಮೃದ್ಧಿಗೊಳಿಸುವಲ್ಲಿ ಮುಸ್ಲಿಮ್ ಧರ್ಮದ ಪ್ರಭಾವ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತದೆ. ಹಿಂದೂಗಳಷ್ಟೇ ಅಲ್ಲದೆ ಈ ನಾಡಿನ ಇತರ ಧರ್ಮೀಯರ ಜೊತೆ ಇತಿಹಾಸದುದ್ದಕ್ಕೂ ಸಹಬಾಳ್ವೆಯನ್ನು ನಡೆಸುತ್ತಾ ಬಂದಿರುವ ಮುಸ್ಲಿಮ್ ಸಮುದಾಯ ಇಂದು ರಾಜಕೀಯ ಹಿತಾಸಕ್ತಿಯ ಷಡ್ಯಂತರಕ್ಕೆ ಬಲಿಯಾಗುತ್ತಿರುವುದು ವಾಸ್ತವ. ಭಾರತದಲ್ಲಿ ಮುಸ್ಲಿಮರ ಮೇಲೆ ಇಂದು ನಡೆಯುತ್ತಿರುವ ಅಮಾನುಷ ಧಾಳಿ, ಎಗ್ಗಿಲ್ಲದೆ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ, ಸಾಂಸ್ಕೃತಿಕ ದಬ್ಬಾಳಿಕೆ ಇವುಗಳ ಹಿನ್ನೆಲೆಯಲ್ಲಿ ಪ್ರಸಿದ್ಧ ಪತ್ರಕರ್ತೆಯಾದ ಘಜಾಲಾ ವಾಹಬ್ ಅವರ ‘ಬಾರ್ನ್ ಎ ಮುಸ್ಲಿಮ್’ ಪುಸ್ತಕ ನಮಗೆ ಹಿಂದೂ ಮುಸ್ಲಿಮ್ ಭಾವೈಕ್ಯತೆಯ ಅವಶ್ಯಕತೆಯನ್ನು ನಿರೂಪಿಸುತ್ತದೆ. ಅಷ್ಟೇ ಅಲ್ಲದೆ ಬಹುಮುಖಿ ಭಾರತದ ಉಳಿವಿಗೆ ಬೇಕಾದ ಎಚ್ಚರಿಕೆಯನ್ನು ನೀಡುವಲ್ಲಿ ಯಶಸ್ವಿಯಾಗುತ್ತದೆ.

2021 ರಲ್ಲಿ ಪ್ರಕಟವಾದ ಘಜಾಲ ವಾಹಬ್ ಅವರ ‘ಬಾರ್ನ್ ಎ ಮುಸ್ಲಿಮ್ – ಸಮ್ ಟ್ರೂತ್ಸ್ ಅಬೌಟ್ ಇಸ್ಲಾಮ್ ಇನ್ ಇಂಡಿಯಾ’ ಎಂಬ ಪುಸ್ತಕ ಭಾರತದ ಮುಸ್ಲಿಮರ ಬದುಕನ್ನು ಇಸ್ಲಾಮಿನ ಇತಿಹಾಸ ಮತ್ತು ಭಾರತದ ರಾಜಕೀಯ ಸ್ಥಿತ್ಯಂತರಗಳಲ್ಲಿ ಉಂಟಾದ ಸಾಮಾಜಿಕ-ಸಾಂಸ್ಕೃತಿಕ ಬದಲಾವಣೆಗಳ ಹಿನ್ನೆಲೆಯಲ್ಲಿ ಚಿತ್ರಿಸುತ್ತದೆ. ಘಜಾಲ ವಾಹಬ್ ಅವರು ಮುಸ್ಲಿಮರ ಬದುಕಿನ ವರ್ತಮಾನ ಮತ್ತು ಭವಿಷ್ಯದ ಬಗ್ಗೆ ವಸ್ತುನಿಷ್ಠವಾಗಿ ವಿಶ್ಲೇಷಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಈ ಸಮುದಾಯದ ಮುಂದಿರುವ ತಲ್ಲಣಗಳಿಗೆ ಐತಿಹಾಸಿಕ ಕಾರಣಗಳಿದ್ದರೂ ಸುಮಾರು ಹತ್ತು ವರ್ಷಗಳಲ್ಲಿ ಆಗಿರುವ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಬದಲಾವಣೆಗಳು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿವೆ ಎನ್ನುವುದು ಲೇಖಕಿಯ ಅಭಿಪ್ರಾಯವಾಗಿದೆ. ಸ್ವತಃ ಬಡತನದ ಬೇಗೆಯನ್ನು ಕಣ್ಣಾರೆ ಕಂಡು ಬೆಳೆದ ಲೇಖಕಿ ತನ್ನ ಸಮುದಾಯದ ಹೀನಾಯ ಸ್ಥಿತಿಯ ಅರಿವಿರುವವರು. ಆದರೆ ಲೇಖಕಿಯ ವಿಶ್ಲೇಷಣೆ ಕೇವಲ ಆಕೆಯ ಸ್ವಂತ ಅಭಿಪ್ರಾಯಗಳ ಮೇಲೆ ಅವಲಂಬಿತವಾಗದೆ ಹಲವು ಮುಸ್ಲಿಮ್ ಧಾರ್ಮಿಕ ಚಿಂತಕರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಇತಿಹಾಸ ತಜ್ಞರ ಜೊತೆಗಿನ ಸಂದರ್ಶನ, ಸ್ವಂತ ಅನುಭವ ಹಾಗು ಅಧ್ಯಯನದ ಫಲವಾಗಿದೆ.

ಪುಸ್ತಕವನ್ನು ಕೈಗೆತ್ತಿಕೊಂಡಾಗ ಬಿಡದಂತೆ ಓದಿಸಿಕೊಳ್ಳುವ ಪ್ರವೇಶನ ಅಧ್ಯಾಯ ಲೇಖಕಿಯ ಬಾಲ್ಯಕ್ಕೆ ಕರೆದೊಯ್ಯುತ್ತದೆ. ಲೇಖಕಿ ತಾತನ ಜೊತೆ ಕಳೆಯುವ ಕ್ಷಣಗಳನ್ನು ಅತ್ಯಂತ ಪ್ರೀತಿ ಗೌರವದೊಂದಿಗೆ ನೆನೆಯುತ್ತಾರೆ. ಆಕೆಯ ತಾತ ಇಸ್ಲಾಮ್ ಧರ್ಮದ ಅನುಯಾಯಿಯಾಗಿ ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದ ದಾನ ಮತ್ತು ಅವರು ಎಲ್ಲರಿಗೂ ಅಷ್ಟೇ ಸಹಜವಾಗಿ ಹಂಚುತ್ತಿದ್ದ ಪ್ರೀತಿ ಲೇಖಕಿಯ ವ್ಯಕ್ತಿತ್ವದ ಮೇಲೆ ಗಾಢವಾದ ಪ್ರಭಾವ ಬೀರಿವೆ. 1990ರಲ್ಲಿ ನಡೆದ ಹಿಂದೂ ಮುಸ್ಲಿಮ್ ಗಲಭೆ ಆಕೆಯ ಹದಿಹರೆಯದ ಜೀವನದಲ್ಲಿ ಘಟಿಸಿದ ಮರೆಯಲಾಗದ ಸಂದರ್ಭ. ಈ ಘಟನೆಯಿಂದ ಆಕೆ ಅನುಭವಿಸಿದ ಆತಂಕ, ದುಗುಡ, ಭಯ ಮತ್ತು ಏಕಾಂಗಿತನ ಕೊನೆಯವರೆಗೂ ಕಾಡುವ ನೆನಪಾಗಿ ಉಳಿಯುತ್ತದೆ. ಆ ಭೀಕರ ಘಟನೆಯನ್ನು ಅತ್ಯಂತ ಸಂಯಮ ಮತ್ತು ಅಷ್ಟೇ ಅಂತಃಕರಣದಿಂದ ನಿಭಾಯಿಸುವ ಆಕೆಯ ಕುಟುಂಬದ ಸದಸ್ಯರು ನಮಗೆ ಆಪ್ತವಾಗುತ್ತಾರೆ. ಮುಸ್ಲಿಮ್ ಸಮುದಾಯದವರು ಈ ದೇಶದ ಭಾಗವಲ್ಲವೆಂಬುದನ್ನು ಹಿಂಸೆಯ ಮೂಲಕ ಎಚ್ಚರಿಸುವ ಸಮಾಜವನ್ನು ಕಣ್ಣೆದುರಿಗೆ ಕಂಡ ಲೇಖಕಿಗೆ ಮೊಟ್ಟ ಮೊದಲ ಬಾರಿ ಈ ದೇಶದಲ್ಲಿ ನಾನೊಬ್ಬ ಅಪರಚಿತಳೂ, ತಿರಸ್ಕರಿಸಲ್ಪಟ್ಟ ವ್ಯಕ್ತಿಯೆಂಬ ಅನುಭವವುಂಟಾಗುತ್ತದೆ. ಹದಿಹರೆಯದ ವಯಸ್ಸಿನ ಈಗ ತಾನೆ ಕಾಲೇಜು ಸೇರಿದ್ದ ಲೇಖಕಿಗೆ ಇದು ಅತ್ಯಂತ ನೋವಿನ ಸನ್ನಿವೇಶವಾಗುತ್ತದೆ.

1990ರ ಕೋಮುಗಲಭೆಯ ನಂತರ ತನ್ನ ಕುಟುಂಬದ ಚಿಕ್ಕಪ್ಪಂದಿರು ಮುಸ್ಲಿಮ್ ಮೂಲಭೂತವಾದಕ್ಕೆ ಹೇಗೆ ಹತ್ತಿರವಾಗತೊಡಗಿದರು ಎಂಬುದನ್ನು ಲೇಖಕಿ ಬಹಳ ಸೂಕ್ಷ್ಮವಾಗಿ ವಿವರಿಸುತ್ತಾರೆ. ಸಮಾಜದ ಧಾರ್ಮಿಕ ಅಸಹಿಷ್ಣುತೆ ಹುಟ್ಟಿಸಿದ ದ್ವೇಷ, ಹಿಂಸೆ, ಅತ್ಯಾಚಾರ ಮತ್ತು ತಿರಸ್ಕಾರ ಮುಸ್ಲಿಮ್ ಸಮುದಾಯದವರನ್ನು ಮುಸ್ಲಿಮ್ ಮೂಲಭೂತವಾದದ ಕಡೆಗೆ ತಳ್ಳಿತು ಎಂಬುದನ್ನು ಲೇಖಕಿ ಆಕೆಯ ಚಿಕ್ಕಪ್ಪಂದಿರು ಮತ್ತು ಅವರ ಮಕ್ಕಳ ಜೀವನದ ಉದಾಹರಣೆಯ ಮೂಲಕ ವಿವರಿಸುತ್ತಾರೆ. ತನ್ನದೇ ಕುಟುಂಬದ ಸದಸ್ಯರಲ್ಲಾದ ಬದಲಾವಣೆಗಳನ್ನು ಗಮನಿಸುವ ಲೇಖಕಿ ಮುಸ್ಲಿಮ್ ಮೂಲಭೂತವಾದದ ಪ್ರಚಾರಕರನ್ನೂ ನಿರ್ದಾಕ್ಷಿಣ್ಯವಾಗಿ ದೂರುತ್ತಾರೆ. ಆಕೆಯ ತಂದೆ ಮಿಕ್ಕೆಲ್ಲಾ ಸಹೋದರರಿಗಿಂತ ಉನ್ನತ ಮಟ್ಟದಲ್ಲಿದ್ದ ವ್ಯಕ್ತಿ. ಹಾಗೆಯೇ ಆಧುನಿಕ ಶಿಕ್ಷಣವನ್ನು ಪೆÇ್ರೀತ್ಸಾಹಿಸುವ ಮತ್ತು ವೈಚಾರಿಕ ಜೀವನವನ್ನು ಅನುಸರಿಸುತ್ತಿದ್ದ ವ್ಯಕ್ತಿ. ಸಮಾಜದ ಪ್ರಮುಖ ವ್ಯಕ್ತಿಗಳೊಡನೆ ಅವರು ಹೊಂದಿದ್ದ ಸ್ನೇಹ ಮತ್ತು ವ್ಯಾಪಾರ ಸಂಬಂಧ; ಅವರು ತಮ್ಮ ಮನೆಯಲ್ಲಿ ಏರ್ಪಡಿಸುತ್ತಿದ್ದ ಸಂಗೀತ ಸಂಜೆಗಳ ವಿವರಗಳು ಧರ್ಮದ ಛಾಯೆಯಿಂದಾಚೆಗೆ ಅಸ್ತಿತ್ವ ಪಡೆದಿದ್ದ ಕಲೆ-ಸಂಸ್ಕೃತಿ, ವೈಚಾರಿಕ ಜೀವನಶೈಲಿಯ ಉದಾಹರಣೆಯಾಗಿ ನಮಗೆ ಸಿಗುತ್ತವೆ. 1990ರ ಹಿಂದು-ಮುಸ್ಲಿಮ್ ಗಲಭೆಯ ನಂತರ ಲೇಖಕಿಯ ತಂದೆಯ ಸ್ನೇಹ ಸಂಬಂಧಗಳಲ್ಲಾಗುವ ಬದಲಾವಣೆಗಳು ಧರ್ಮಾಂಧತೆಯ ಪರಿಣಾಮಗಳನ್ನು ಮನಮುಟ್ಟಿಸುತ್ತವೆ.

ಲೇಖಕಿಯು ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಮುಸ್ಲಿಮ್ ಹುಡುಗಿಯರು ಅನುಭವಿಸುತ್ತಿದ್ದ ಪರಕೀಯತೆಯನ್ನು ವಿವರಿಸುತ್ತಾರೆ. ಸ್ವಾತಂತ್ರಾ ನಂತರದಲ್ಲಿ ನಡೆದ ನಿರಂತರ ಕೋಮು ಸಾಮರಸ್ಯದ ಹೋರಾಟಗಳು, ಸಂವಿಧಾನದ ರಕ್ಷಣೆಯಲ್ಲಿದ್ದ ಶಿಕ್ಷಣ ಕ್ಷೇತ್ರದ ಸುಧಾರಣೆಗಳು, ಮುಸ್ಲಿಮ್ ಹೆಣ್ಣು ಮಕ್ಕಳು ಆಧುನಿಕ ಶಿಕ್ಷಣಕ್ಕೆ ತೆರೆದುಕೊಳ್ಳುವಲ್ಲಿ ನಿಧಾನವಾಗಿಯಾದರೂ ಸಹಾಯ ಮಾಡಿವೆ. ಆಧುನಿಕ ಶಿಕ್ಷಣದ ಪ್ರಭಾವದಿಂದ ನಿಧಾನವಾಗಿ ಮುಸ್ಲಿಮ್ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದೆ. ಶಾಲಾ ಕಾಲೇಜುಗಳಲ್ಲಿ ಇಂದು ಹೆಚ್ಚು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಮುಸ್ಲಿಮ್ ಹೆಣ್ಣು ಮಕ್ಕಳು ತಮ್ಮ ಅಸ್ತಿತ್ವವನ್ನು ಶಿಕ್ಷಣದ ಮೂಲಕ ಪಡೆಯಲು ಹಾತೊರೆಯುತ್ತಿದ್ದಾರೆ. ಆಧುನಿಕ ಶಿಕ್ಷಣ ಇಸ್ಲಾಮಿನ ಮದ್ರಸಾ ಶಿಕ್ಷಣದ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಲು ಹೆಣ್ಣುಮಕ್ಕಳಿಗಿರುವ ಏಕೈಕ ಅಸ್ತ್ರ. ಇದನ್ನು ಪಡೆಯಲು ಮುಸ್ಲಿಮ್ ಹೆಣ್ಣು ಮಕ್ಕಳು ತಮ್ಮ ಸಮುದಾಯದ ಧಾರ್ಮಿಕ ಗುರುಗಳ ಪ್ರಭಾವದಿಂದ ಬಿಡಿಸಿಕೊಳ್ಳಬೇಕಾಗುತ್ತದೆ. ಪಿತೃಪ್ರಧಾನ ಕುಟುಂಬದ ಬಂಧನಗಳಿಂದ ಬಿಡಿಸಿಕೊಳ್ಳಲು ಅಗತ್ಯವಾಗಿ ಬೇಕಾಗುವ ಆಧುನಿಕ ಶಿಕ್ಷಣ ಮುಸ್ಲಿಮ್ ಮಹಿಳೆಗೆ ಆರ್ಥಿಕ ಸ್ವಾತಂತ್ರ್ಯ ನೀಡುತ್ತದೆ. ಈಗಿನ ಉದ್ಯೋಗ ಮಾರುಕಟ್ಟೆಗೆ ಬೇಕಾಗುವ ಶಿಕ್ಷಣ ಪಡೆಯಲು ಆಧುನಿಕ ಶಿಕ್ಷಣ ನೀಡುವ ಶಾಲಾ ಕಾಲೇಜುಗಳಿಗೆ ಪ್ರವೇಶ ಪಡೆಯಲೇ ಬೇಕು. ಈ ನಿಟ್ಟಿನಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳ ಹೋರಾಟ ಹಲವು ರಾಜಿಗಳಿಗೆ ಒಳಪಡಬೇಕಾಗುತ್ತದೆ. ಇದರಲ್ಲಿ ಮುಸ್ಲಿಮ್ ವಸ್ತ್ರ ಸಂಹಿತೆ ಕೂಡ ಒಂದು. ಮಹಿಳೆಯರಿಗೆ ಎಲ್ಲಾ ಧರ್ಮಗಳಿಗಿಂತಲೂ ಅತ್ಯಂತ ಕಠಿಣ ಮತ್ತು ಉಸಿರುಗಟ್ಟಿಸುವ ವಸ್ತ್ರ ಸಂಹಿತೆ ಮತ್ತು ಕಟ್ಟುಪಾಡುಗಳು ಇರುವುದೇ ಇಸ್ಲಾಮ್ ಧರ್ಮದಲ್ಲಿ. ಇದರಿಂದ ಬಿಡುಗಡೆ ಪಡೆದಿರುವ ಹಲವು ಕಲಿತ ಮುಸ್ಲಿಮ್ ಮಹಿಳೆಯರು ಮುಸ್ಲಿಮ್ ಸಮುದಾಯದಲ್ಲಿ ಸ್ತ್ರೀ ಆಧುನಿಕತೆಗೆ ದಾರಿದೀಪವಾಗಿದ್ದಾರೆ. ಇಂಥವರಲ್ಲಿ ಲೇಖಕಿಯೂ ಕೂಡ ಮಾದರಿಯಾಗಿ ನಿಲ್ಲುತ್ತಾರೆ. ಕಳೆದ ದಶಕದಲ್ಲಿ ಹೆಚ್ಚು ಮುನ್ನೆಲೆಗೆ ಬಂದಿರುವ ಕಲಿಕೆಯ ಸ್ಥಳಗಳಲ್ಲಿ ಹಿಂದುಯೇತರ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಪರಕೀಯತೆ ಮತ್ತು ಇದರಿಂದ ಮತ್ತೆ ಬಿಗಿಗೊಳ್ಳುತ್ತಿರುವ ಮುಸ್ಲಿಮ್ ಸ್ತ್ರೀ ವಸ್ತ್ರ ಸಂಹಿತೆಯ ಪರಿಣಾಮಗಳ ಬಗ್ಗೆ ಲೇಖಕಿ ವಿವರಿಸುತ್ತಾರೆ.

ಆದರೂ ಆಧುನಿಕ ಶಿಕ್ಷಣವನ್ನು ಒಪ್ಪಿಕೊಳ್ಳದ ಮುಸ್ಲಿಮ್ ಧರ್ಮಾಂಧರ ಬಗ್ಗೆ ಲೇಖಕಿ ವಿವರಗಳನ್ನು ಕೊಡುತ್ತಾರೆ. ಧಾರ್ಮಿಕ ಶಿಕ್ಷಣವನ್ನು ಮದ್ರಾಸಗಳಲ್ಲಿ ನೀಡುವ ಬಗೆ, ಆಧುನಿಕ ಶಿಕ್ಷಣ ಪಡೆಯುತ್ತಿರುವ ಮುಸ್ಲಿಮ್ ಯುವಜನತೆಗೆ ಸಂಜೆ ಧಾರ್ಮಿಕ ಪಾಠಶಾಲೆಗಳ ಮೂಲಕ ಧರ್ಮವನ್ನು ಭೋದಿಸುವ ಕ್ರಮಗಳು ಮತ್ತು ಈ ಶಾಲೆಗಳನ್ನು ನಡೆಸಲು ಅವರಿಗೆ ದೊರೆಯುವ ಆರ್ಥಿಕ ನೆರವುಗಳ ಬಗ್ಗೆಯೂ ಲೇಖಕಿ ವಿವರಿಸುತ್ತಾರೆ. ಮುಸ್ಲಿಮ್ ಸಮುದಾಯ ನಡೆಸುತ್ತಿರುವ ಪ್ರಪಂಚದ ಅತಿ ದೊಡ್ಡ ಸೆಮಿನರಿ ದರುಲ್ ಉಲೂಮ್ ದಿಯೋಬಂದ್. ಈ ಸೆಮಿನರಿಯ ಮುಖ್ಯಸ್ಥರನ್ನು ಸಂದರ್ಶಿಸಿ ಅವರ ಮಾತುಗಳ ಮೂಲಕ ಇಸ್ಲಾಮ್ ಧಾರ್ಮಿಕ ಶಿಕ್ಷಣದ ಧ್ಯೇಯೋದ್ದೇಶಗಳು ಮತ್ತು ಗುರಿಗಳನ್ನು ತಿಳಿಯಪಡಿಸುತ್ತಾರೆ.

ಆದರೆ, ಲೇಖಕಿ ಇಸ್ಲಾಮ್ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಎಚ್ಚರಿಕೆಯಿಂದ ಮುಂದಿಡುತ್ತಾರೆ. ತೀಕ್ಷ್ಣವಾಗಿ ಟೀಕೆಗೆ ಒಳಪಡಿಸದಿದ್ದರೂ ಲೇಖಕಿ ಈ ರೀತಿಯ ಧಾರ್ಮಿಕ ಶಿಕ್ಷಣದ ಪ್ರಸರಣದ ಉದ್ದೇಶಗಳ ಬಗ್ಗೆ ಓದುಗರು ಯೋಚಿಸುವಂತೆ ಮಾಡುತ್ತಾರೆ. ವಿಸ್ತೃತವಾದ ಸಂದರ್ಶನಗಳ ಮೂಲಕ ವಿಷಯಗಳನ್ನು ಮುನ್ನೆಲೆಗೆ ತರುವ ಲೇಖಕಿ ನಿಜ ಜೀವನದ ಪಾತ್ರಧಾರಿಗಳ ಮೂಲಕವೇ ವಾಸ್ತವ ಚಿತ್ರಣಗಳನ್ನು ಕಟ್ಟಿಕೊಡುತ್ತಾರೆ. ಓದುಗರ ವಿವೇಚನೆಯನ್ನು ಬಡಿದೆಬ್ಬಿಸುವ ಬರವಣಿಗೆಯ ಮೂಲಕ ಓದುಗರೇ ವಿಷಯದ ಬಗ್ಗೆ ಪ್ರಶ್ನಿಸುವಂತೆ ನಿರೂಪಿಸುತ್ತಾರೆ. 2014ರ ನಂತರದ ಭಾರತದ ಧಾರ್ಮಿಕ ಅಸಹಿಷ್ಣುತೆಯ ವಾತಾವರಣ ಮತ್ತು ಇದರ ಸೃಷ್ಟಿಯಲ್ಲಿ ಪ್ರಧಾನಿ ಮೋದಿಯವರ ಕೇಂದ್ರ ಸರ್ಕಾರದ ಪಾತ್ರದಾರಿಕೆಯ ಬಗ್ಗೆ ನಿರ್ದಾಕ್ಷಿಣ್ಯವಾಗಿ ತಮ್ಮ ಅಭಿಪ್ರಾಯವನ್ನು ಲೇಖಕಿ ಪ್ರಸ್ತುತ ಪಡಿಸುತ್ತಾರೆ. ಪುಸ್ತಕದುದ್ದಕ್ಕೂ ಈ ಅಂಶ ಪ್ರತ್ಯಕ್ಷಗೊಳ್ಳುತ್ತದೆ. ಭಾರತದಲ್ಲಿ ಹರಡುತ್ತಿರುವ ಧಾರ್ಮಿಕ ಅಸಹಿಷ್ಣುತೆ ಇಸ್ಲಾಮ್ ಮೂಲಭೂತವಾದವನ್ನು ಹೇಗೆ ಬಲಪಡಿಸುತ್ತಿದೆ ಎಂಬುದನ್ನು ಲೇಖಕಿ ನಿರೂಪಿಸುತ್ತಾರೆ. ಮುಸ್ಲಿಮ್ ಸಮುದಾಯದ ಶೈಕ್ಷಣಿಕ ಮಟ್ಟದ ಅಂಕಿ ಅಂಶಗಳನ್ನು ಲೇಖಕಿ ಕರಾರುವಕ್ಕಾಗಿ ನಮ್ಮ ಮುಂದಿಡುತ್ತಾರೆ. ಇಸ್ಲಾಮ್ ಧಾರ್ಮಿಕ ಮೂಲಭೂತವಾದ ಆಧುನಿಕ ಶಿಕ್ಷಣದಿಂದ ತನ್ನ ಸಮುದಾಯದ ಯುವಜನತೆಯನ್ನು ದಿಕ್ಕುತಪ್ಪಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಇದರ ಪರಿಣಾಮವಾಗಿ ಮುಸ್ಲಿಮ್ ಸಮುದಾಯದ ಉದ್ಯೋಗ ಅವಕಾಶಗಳ ಬಗ್ಗೆ ವಿವರಗಳನ್ನು ಪುಸ್ತಕದುದ್ದಕ್ಕೂ ನಾವು ಕಾಣಬಹುದು.

ಇದರಿಂದ ಸ್ಪಷ್ಟವಾಗುವ ಅಂಶವೆಂದರೆ ಧಾರ್ಮಿಕ ಮೂಲಭೂತವಾದದ ಪರಿಕಲ್ಪನೆಗಳು (ಯಾವುದೇ ಧರ್ಮವಿರಲಿ) ಅಸಹಿಷ್ಣುತೆಯ ವಾತಾವರಣಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ. ಜಾತ್ಯಾತೀತ ಸಮಾಜಕ್ಕೆ ಎಂದಿಗೂ ವಿರುದ್ಧವಾಗಿ ನೆಲೆಯೂರಲು ಯತ್ನಿಸುವ ಧಾರ್ಮಿಕ ಮೂಲಭೂತವಾದ ಇಂತಹ ವಾತಾವರಣದಲ್ಲಿ ಪೆÇೀಷಣೆ ಪಡೆಯುತ್ತದೆ. ಹಿಂದೂ ಮೂಲಭೂತವಾದ ಪ್ರಾಬಲ್ಯಕ್ಕೆ ಬಂದಷ್ಟೂ ಮುಸ್ಲಿಮ್ ಮೂಲಭೂತವಾದ ಗಟ್ಟಿಗೊಳ್ಳತೊಡಗುತ್ತದೆ. ಇದಕ್ಕೆ ಹಲವು ಉದಾಹರಣೆಗಳನ್ನು ಲೇಖಕಿ ಪುಸ್ತಕದಲ್ಲಿ ನೀಡುತ್ತಾರೆ. ‘ಇಸ್ಲಾಮ್, ತಬ್ಲೀಘ್ ಮತ್ತು ಜಮಾತ್’ ಎನ್ನುವ ಅಧ್ಯಾಯದಲ್ಲಿ ಆಧುನಿಕ ಭಾರತದ ಮುಸ್ಲಿಮರು ಅತಿಹೆಚ್ಚು ಸಂಖ್ಯೆಯಲ್ಲಿ (200 ಮಿಲಿಯನ್) ಇತ್ತೀಚೆಗೆ ಜಾಕೀರ್ ನಾಯಕ್ ಎನ್ನುವ ದಕ್ಷಣ ಏಷಿಯಾ ಇಸ್ಲಾಮಿನ ವಿಷಯ ತಜ್ಞ ಮತ್ತು ಪ್ರವಚನಕಾರನ ಟಿವಿ ಚಾನಲ್ ಹಾಗು ಯೂಟ್ಯೂಬ್ ಚಾನಲ್‍ನ ಚಂದಾದಾರರಾಗಿರುವುದನ್ನು ಪ್ರಸ್ತಾಪಿಸುತ್ತಾರೆ. ಆತನ ಪ್ರವಚನಗಳು ಮುಸ್ಲಿಮ್ ಮೂಲಭೂತವಾದದತ್ತ ಶಿಕ್ಷಿತ ಯುವಮುಸ್ಲಿಮರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವುದು ಸ್ಪಷ್ಟವಾಗಿದೆ. ಆಧುನಿಕ ವಸ್ತ್ರಗಳಲ್ಲಿ ಕಾಣಿಸಿಕೊಳ್ಳುವ ಜಾಕಿರ್ ನಾಯಕ್ ಪಾಂಡಿತ್ಯಪೂರ್ಣ ಇಂಗ್ಲೀಷ್ ಭಾಶೆಯನ್ನು ಬಳಸಿದರೂ ಆತನ ಸಂದೇಶ ಮುಸ್ಲಿಮ್ ಮೂಲಭೂತವಾದವೇ ಅಗಿರುತ್ತದೆ (ಈ ರೀತಿಯ ಪ್ರಖ್ಯಾತಿ ಪಡೆದಿರುವ ಇನ್ನೊಬ್ಬ ಯೋಗ ಗುರು ಮತ್ತು ಆಧ್ಯಾತ್ಮ ಗುರು ಎಂದು ಗುರುತಿಸಿಕೊಳ್ಳುವ ಸದ್ಗುರುವನ್ನು ಇಲ್ಲಿ ನೆನೆಯಬಹುದು). ‘ಇಸ್ಲಾಮ್ ಧರ್ಮವೊಂದೇ ಅತಿ ಶ್ರೇಷ್ಟ ಮತ್ತು ಅಂತಿಮ ಸತ್ಯ’ ಎಂಬ ಆತನ ಮಾತುಗಳು ಭಾರತದ ಅಸಹಿಷ್ಣುತೆಯ ವಾತಾವರಣದಲ್ಲಿ ಬೆಂದು ಆತ್ಮವಿಶ್ವಾಸವನ್ನು ಕಳೆದುಕೊಂಡ ಭಾರತೀಯ ಮುಸ್ಲಿಮರಿಗೆ ಆಹ್ಲಾದಕರವಾಗಿ ತೋರುತ್ತವೆ. ‘ಭಾರತೀಯ’ ಎಂಬ ಅಸ್ಮಿತೆಯನ್ನು ಪಡೆಯಲು ಪ್ರಾಮಾಣಿಕ ಅರ್ಹತೆಯಿದ್ದರೂ, ಸಂವಿಧಾನ ಸಮಾನ ಹಕ್ಕುಗಳನ್ನು ನೀಡಿದ್ದರೂ ಭಾರತೀಯ ಸಮಾಜ ಮುಸ್ಲಿಮರನ್ನು ಪರಕೀಯರಂತೆ ನೋಡುವಾಗ, ಮುಸ್ಲಿಮರಿಗೆ ಕಾಡುವ ಅನಾಥ ಪ್ರಜ್ಞೆಗೆ ಇಸ್ಲಾಮ್ ಮೂಲಭೂತವಾದ ಗಾಳ ಹಾಕುತ್ತದೆ (ಇದು ಎಲ್ಲಾ ಧಾರ್ಮಿಕ ಮೂಲಭೂತವಾದಕ್ಕೂ ಅನ್ವಯಿಸುತ್ತದೆ).

ಇಸ್ಲಾಮ್ ಮೂಲಭೂತವಾದ ಕಳೆದುಹೋದ ಅಸ್ಮಿತೆಯನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಕಟ್ಟಿಕೊಡುವ ಆಶಾಕಿರಣದಂತೆ ಮುಸ್ಲಿಮರಿಗೆ ಕಾಣತೊಡಗುತ್ತದೆ. ಹಾಗೆಯೇ, 1920ರಲ್ಲಿ ಸ್ಥಾಪಿತವಾದ ತಬ್ಲೀಗಿ ಜಮಾತ್ ಕಳೆದ ದಶಕದಲ್ಲಿ ಲೆಕ್ಕಕ್ಕೆ ಸಿಗದಷ್ಟು ಸಂಖ್ಯೆಯ ಸದಸ್ಯರನ್ನು ಒಳಗೊಂಡ ಸಂಸ್ಥೆಯಾಗಿ ರೂಪುಗೊಂಡಿದೆ ಎಂದು ಲೇಖಕಿ ತಿಳಿಸುತ್ತಾರೆ. ಆರ್ ಎಸ್ ಎಸ್ ಸಂಸ್ಥೆ ಮತ್ತು ತಬ್ಲೀಘಿ ಜಮಾತ್ ಸಂಸ್ಥೆಗೂ ಇರುವ ಹಲವು ಸಾಮ್ಯತೆಗಳನ್ನು ಲೇಖಕಿ ಗುರುತಿಸುತ್ತಾರೆ. ಅಂತೆಯೇ ಜಮಾತ್-ಇ-ಇಸ್ಲಾಮಿ ಸಂಸ್ಥೆಯ ಬಗ್ಗೆ ವಿವರಣೆಗಳನ್ನು ನೀಡುವ ಲೇಖಕಿ ಕಳೆದ ದಶಕದಲ್ಲಿ ಈ ಸಂಸ್ಥೆಯು ಬಲಗೊಂಡಿರುವ ಪುರಾವೆಗಳನ್ನು ಒದಗಿಸುತ್ತಾರೆ. 1941ರಲ್ಲಿ ಸಯದ್ ಅಬ್ದುಲ್ ಆಲಾ ಮೌದುದಿ ನಮ್ಮ ದೇಶದ ಮುಸ್ಲಿಮರ ಸಾಮಾಜಿಕ-ರಾಜಕೀಯ ಚಳುವಳಿಯ ಭಾಗವಾಗಿ ಜಮಾತ್-ಇ-ಎಸ್ಲಾಮಿ ಸ್ಥಾಪಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಜಿನ್ಹಾ ಪ್ರಸ್ತಾಪಿಸಿದ ಪ್ರತ್ಯೇಕ ಮುಸ್ಲಿಮ್ ದೇಶದ ಪರವಾಗಿದ್ದ ಮೌದುದಿ, ನಿಜವಾದ ಮುಸ್ಲಿಮ್ ದೇಶ ಕಟ್ಟಲು ಜಿನ್ಹಾ ಪ್ರಾಮಾಣಿಕ ಮುಸ್ಲಿಮ್ ಅಲ್ಲವೆಂದು ಅಭಿಪ್ರಾಯ ಪಟ್ಟಿದ್ದರು. ಕಟ್ಟಾ ಇಸ್ಲಾಮ್ ಪ್ರತಿಪಾದಕನಾಗಿದ್ದ ಮೌದುದಿ ಭಾರತ-ಪಾಕಿಸ್ತಾನ ವಿಭಜನೆಯ ನಂತರ ಪಾಕಿಸ್ತಾನದಲ್ಲಿ ಉಳಿದು ಅಲ್ಲಿನ ಇಸ್ಲಾಮ್ ಮೂಲಭೂತವಾದವನ್ನು ಬೆಳಸಿ ಗಟ್ಟಿಯಾಗಿ ಬೇರೂರಲು ಕಾರಣಕರ್ತನಾದರು. ಅಲ್ಲಿನ ಅಲ್ಪಸಂಖ್ಯಾತ ‘ಅಹ್ಮದೀ’ಯರು ನಿಜವಾದ ಮುಸ್ಲಿಮರಲ್ಲವೆಂದು ಘೋಷಿಸಲು ಪಾಕಿಸ್ತಾನ ಸರ್ಕಾರದಿಂದ ಒತ್ತಡ ತರಿಸಿದರು. ಇಂದಿಗೂ ಅವರ ಮೇಲೆ ನಿರಂತರ ಹಿಂಸಾತ್ಮಕ ದಾಳಿ ನಡೆಯುತ್ತಿರಲು ಮೌದುದಿಯ ಪಾತ್ರ ಮುಖ್ಯವಾಗಿದೆಯೆಂದು ಲೇಖಕಿ ವಿವರಿಸುತ್ತಾರೆ. ಮೌದುದಿಯ ವಿಚಾರಗಳು ಪಾಕಿಸ್ತಾನದಲ್ಲಿ ಬೇರೂರಿರುವ ಅತ್ಯಂತ ಕಠಿಣ ಧಾರ್ಮಿಕ ಕಾನೂನುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಚ್ಯುತಿಗೆ ಕಾರಣವಾಗಿವೆ ಎಂದು ಲೇಖಕಿ ವಿವರಿಸುತ್ತಾರೆ. ಇಂದಿದೂ ಭಾರತದಲ್ಲಿ ಜಮಾತ್-ಇ-ಇಸ್ಲಾಮ್ ತನ್ನ ಪ್ರಭಾವವನ್ನು ಹೊಂದಿರುವುದರ ಹಿಂದೆ ಮೌದುದಿ ಇಸ್ಲಾಮನ್ನು ಅದರ ಅತ್ಯಂತ ಮೂಲಭೂತವಾದ ಪರಿಕಲ್ಪನೆಯ ಪರಿಪಾಲನೆಗೆ ಒತ್ತು ಕೊಟ್ಟಿದ್ದರ ಪರಿಣಾಮವೋ ಅಥವಾ ಆತನ ಸ್ವಂತ ವಿಚಾರಗಳೋ ಎಂಬುದನ್ನು ಲೇಖಕಿ ವಿಶ್ಲೇಷಿಸುವುದಿಲ್ಲ.

ಇಸ್ಲಾಮ್ ಮೂಲಭೂತವಾದದ ‘ಅಂತಿಮ ಸತ್ಯ’ವನ್ನು ಬಲವಂತವಾಗಿ ಹೇರಲು ರಾಜಕೀಯ ಚಳುವಳಿಗಳನ್ನು ಕಟ್ಟುವ ಜಮಾತ್ – ಇ-ಇಸ್ಲಾಮ್ ಮತ್ತು ಹಿಂದೂ ಮೂಲಭೂತವಾದವನ್ನು ಹೇರುವ ಆರ್ ಎಸ್ ಎಸ್, ಈ ಎರಡೂ ಸಂಸ್ಥೆಗಳನ್ನು ಭಾರತ ಸರ್ಕಾರ 1992ರಲ್ಲಿ ನಿಷೇದಿಸಿದ್ದನ್ನು ವಾಹಬ್ ಉಲ್ಲೇಖಿಸುತ್ತಾರೆ. ಇಂತಹ ಸಂಸ್ಥೆಗಳು ಸಮಾಜದ ಎಲ್ಲಾ ವರ್ಗ, ಸಮುದಾಯಗಳ ಏಳಿಗೆಗೆ ಎಷ್ಟು ಅಪಾಯಕಾರಿ ಎಂಬುದನ್ನು ಅಂಕಿ ಅಂಶಗಳ ಸಮೇತ ಬಿಚ್ಚಿಡುತ್ತಾರೆ. ಮೂಲಭೂತವಾದದಿಂದ ಆಗುತ್ತಿರುವ ಮಾನವ ಹಕ್ಕುಗಳ ಚ್ಯುತಿ ಮತ್ತು ಅನಾಹುತಗಳನ್ನು ಇಸ್ಲಾಮ್ ಆಳ್ವಿಕೆಯ ದೇಶಗಳ ಮಾನವ ಅಭಿವೃದ್ಧಿ ಸೂಚ್ಯಾಂಕಗಳಲ್ಲಿ ಪ್ರತ್ಯಕ್ಷವಾಗಿ ಕಾಣಬಹುದು. ಇದು ಒಂದು ಧರ್ಮ ಎಂಬ ಪರಿಕಲ್ಪನೆಯು ತನ್ನ ಆಧ್ಯಾತ್ಮಿಕ-ಆಂತರಿಕ- ಸಾಮಾಜಿಕ ಮಿತಿಗಳನ್ನು ಕಳೆದುಕೊಂಡು ಸರ್ವಾಧಿಕಾರಿಯಾದಾಗ ಕಂಡುಕೊಳ್ಳಬಹುದಾದ ಫಲಿತಾಂಶ. ನಿರಂತರ ಕಲಹ, ಹಿಂಸೆ, ನಿರುದ್ಯೋಗ, ಸಮಾಜದ ಆರ್ಥಿಕ-ಸಾಮಾಜಿಕ-ಬೌದ್ಧಿಕ ದಾರಿದ್ರ್ಯ, ಬಡತನ: ಇವು ಇದರ ಒಡನಾಡಿಗಳು. ಇತ್ತೀಚೆಗೆ ನಮ್ಮ ದೇಶದ ಹಲವು ಮಾನವ ಅಭಿವೃದ್ಧಿ ಸೂಚ್ಯಾಂಕಗಳನ್ನು ಗಮನಿಸಿದಾಗ ಈ ವಿದ್ಯಮಾನಗಳು ಭಾರತದ ಭಾಗವಾಗಿ ಬಹುಕಾಲವೇ ಕಳೆದಿದೆ ಎಂಬುದು ಅರಿವಿಗೆ ಬರುತ್ತದೆ.

ಇಸ್ಲಾಮ್ ಧರ್ಮವನ್ನು ಬಲ ಪಡಿಸಲು ರಾಜಕೀಯ ಸಾಂಘಿಕ ಶಕ್ತಿಯನ್ನು ಮೌದುದಿ ಬಳಸಿಕೊಂಡಿರುವ ವಿಚಾರಗಳನ್ನು ಲೇಖಕಿ ವಿವರಿಸುತ್ತಾರೆ. ಈ ವಿವರಗಳನ್ನು ಓದುವಾಗ ಸೂಕ್ಷ್ಮ ಓದುಗರಿಗೆ ಆರ್ ಎಸ್ ಎಸ್ ಸಂಸ್ಥೆಯು ಬಳಸುತ್ತಿರುವ ‘ಏಕ ರಾಷ್ಟ್ರ, ಏಕ ಭಾಷೆ, ಏಕ ಧರ್ಮ’ ಪರಿಕಲ್ಪನೆಯ ಅನುಷ್ಟಾನವನ್ನು ನೆನೆಪಿಸಿಕೊಳ್ಳದೆ ಇರಲಾಗದು. ಮೌದುದಿ ಭಾರತದ ಎಲ್ಲಾ ಪ್ರಾಂತ್ಯದ ಮುಸ್ಲಿಮರಿಗೆ ಉರ್ದು ಭಾಷೆ ಅಂತಿಮಗೊಳಿಸಿದ. ದೇಶದ ಎಲ್ಲಾ ಮೂಲೆಯಲ್ಲಿರುವ ಮುಸ್ಲಿಮರೆಲ್ಲರೂ ಪ್ರಾಂತ್ಯದ ವೈವಿದ್ಯತೆಯನ್ನು ಅಂತ್ಯಗೊಳಿಸಿ ಒಂದೇ ರೀತಿಯ ಉಡುಗೆ, ಒಂದೇ ಭಾಷೆ ಎಂಬುದು ಜಮತ್-ಇ-ಇಸ್ಲಾಮ್ ಸಂಸ್ಥೆಯ ಆಶಯ. ಅದರಂತೆಯೆ ಯಶಸ್ಸನ್ನು ಕೂಡ ಕಂಡಿದೆ. ಹಿಂದು ಮೂಲಭೂತವಾದ ಬಲಗೊಳ್ಳುವುದರ ಸ್ವರೂಪವೂ ಇದೇ ಆಗಿದೆ. ನಾವು ಕಳೆದ ದಶಕದಿಂದ ಕಾಣುತ್ತಿರುವ ಹಿಂದಿ ಹೇರಿಕೆ, ಪ್ರತಿ ವರ್ಷವೂ ಸೆಪ್ಟೆಂಬರ್ ತಿಂಗಳ 14ರಂದು ಆಚರಿಸಲ್ಪಡುವ ‘ಹಿಂದೀ ದಿವಸ್’, ಕೇಂದ್ರಾಡಳಿತ ಉದ್ಯಮ ಮತ್ತು ಕಛೇರಿಗಳಲ್ಲಿ ಕಡ್ಡಾಯವಾಗಿ ಹಿಂದಿ ಬಳಕೆ, ದೇಶೀಯ ಭಾಷೆಗಳಿಗೆ ಆಸ್ಪದವಿಲ್ಲದಂತೆ ಮಾಡಿರುವುದು ಹಿಂದು ಧರ್ಮದ ಮೂಲಭೂತವಾದವನ್ನು ಬಲಪಡಿಸಲು ಉಪಯೋಗಿಸುವ ತಂತ್ರಗಾರಿಕೆಯಾಗಿದೆ. ದೇಶೀಯ ಭಾಷೆಗಳು ಕೇವಲ ಸಂವಹನ ಸಾಧನಗಳಷ್ಟೇ ಆಗಿರದೆ, ನಮ್ಮ ಪರಂಪರೆ-ಸಾಂಸ್ಕೃತಿಕ ಬದುಕಿನ ಗುರುತುಗಳಾಗಿರುತ್ತವೆ. ಇವು ತಲೆಮಾರುಗಳಿಂದ ಹರಿದು ನಮ್ಮನ್ನು ರೂಪಿಸಿರುತ್ತವೆ. ಪ್ರಾಂತ್ಯಾವಾರು ವೈವಿಧ್ಯತೆಯನ್ನು ಹತ್ತಿಕ್ಕಿ ಏಕ ಸಂಸ್ಕೃತಿಯನ್ನು ಬಿತ್ತುವ ಹುನ್ನಾರಗಳು ಕೋಮುವಾದಿಗಳ ಹಾದಿಯಾಗಿರುತ್ತದೆ. ಇದರಲ್ಲಿ ಶ್ರೇಷ್ಟತೆಯ ವ್ಯಸನವು ಒಂದು ಮನೋವ್ಯಾಧಿಯಾಗಿ ಇಡೀ ಸಮಾಜದ ಆರೋಗ್ಯವನ್ನು ಹಾಳುಗೆಡವಲು ಹವಣಿಸುತ್ತದೆ. ಇದರ ಮುಂದುವರೆದ ಭಾಗವಾಗಿ ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ನಡೆಸುತ್ತಿರುವ ತಪ್ಪುಗಳನ್ನು ನಾವು ಗಮನಿಸಬಹುದು. ಬೆಳೆಯುವ ಮಕ್ಕಳ ಮನಸ್ಸಿನಲ್ಲಿ ಜಾತಿ-ಧರ್ಮಗಳೆಂಬ ಸಂಕುಚಿತ ಮನೋಭಾವವನ್ನು ಬಿತ್ತುವುದರ ಮೂಲಕ ತನ್ನ ಶ್ರೇಷ್ಟತೆಯನ್ನು ಕಾಪಾಡಿಕೊಳ್ಳುವ ಪುರೋಹಿತಶಾಹಿ ವರ್ಗದ ಹುನ್ನಾರಗಳಿಗೆ ನಾವು ಬಲಿಯಾಗಬಾರದು. ವಾಹಬ್ ಅವರ ಪುಸ್ತಕ ಇಸ್ಲಾಮ್ ಮೂಲಭೂತವಾದದ ಅನಾಹುತಗಳ ಬಗ್ಗೆ ಎಚ್ಚರಿಸುವ ಕೆಲಸವಷ್ಟೇ ಮಾಡದೆ, ಮೂಲಭೂತವಾದದ ಹಲವು ತಂತ್ರಗಾರಿಕೆಗಳನ್ನು ನಮ್ಮ ಮುಂದಿಡುತ್ತದೆ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಹುನ್ನಾರಗಳಿಗೂ ಅನ್ವಯಿಸುತ್ತದೆ.

ಇಂತಹ ಧಾರ್ಮಿಕ ಮೂಲಭೂತವಾದಿ ಸಂಸ್ಥೆಗಳ ವಿವರಗಳನ್ನು ಕೊಡುವ ವಾಹಬ್ ಅವರು ಆಧುನಿಕತೆಯನ್ನು ನಿರಾಕರಿಸದ ಜಮಾತ್-ಇ-ಇಸ್ಲಾಮ್ ಸಂಸ್ಥೆಯಲ್ಲಿ ಬಹುಪಾಲು ಎಲ್ಲರೂ ವಿದ್ಯಾವಂತರೇ ಎಂಬುದನ್ನು ಗುರುತಿಸುತ್ತಾರೆ. ಆದರೆ ಈ ಆಧುನಿಕತೆ ಇಸ್ಲಾಮ್ ಮೂಲಭೂತವಾದದ ಜೊತೆ ಮಿಲನಗೊಂಡ ಅಪಾಯಕಾರಿ ವಿದ್ಯಮಾನ. ಈ ಆಧುನಿಕತೆಗೆ ತಂತ್ರಜ್ಞಾನದ ಸ್ನೇಹವಿದೆಯೇ ಹೊರತು ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಕೋನದ ಅರಿವಿಲ್ಲ. ಅಮೇರಿಕಾದ ಚಿಂತಕ ಸ್ಯಾಮ್ ಹ್ಯಾರಿಸ್ ಹೇಳುವಂತೆ ‘ಅಭಿವೃದ್ಧಿಶೀಲ ದೇಶಗಳಲ್ಲಿ ಧಾರ್ಮಿಕ ಮೂಲಭೂತವಾದ ಬಡತನ ಮತ್ತು ಅವಿದ್ಯಾವಂತ ಸಮಾಜದ ಲಕ್ಷಣವಾಗಿ ಈಗ ಉಳಿದಿಲ್ಲ. ಇಸ್ಲಾಮ್ ಮೂಲಭೂತವಾದ ತನ್ನ 7ನೇ ಶತಮಾನದ ವಿಚಾರಗಳನ್ನು ಹೇರಲು ಇಪ್ಪತ್ತೊಂದನೆ ಶತಮಾನದ ತಂತ್ರಜ್ಞಾನ ಬಳಸಿಕೊಳ್ಳುತ್ತಿದೆ’. ಈ ಮಾತನ್ನು ಎಲ್ಲಾ ಧರ್ಮಗಳ ಮೂಲಭೂತವಾದಗಳಿಗೂ ಅನ್ವಯಿಸಬಹುದಾಗಿದೆ. ಲೇಖಕಿಯು ನೇರವಾಗಿ ಈ ವಿಚಾರಗಳನ್ನು ಹೇಳದೆಯೂ ತಮ್ಮ ಸಂದರ್ಶನ, ಸಂವಾದಗಳ ಮೂಲಕ ಈ ವಿಷಯಗಳನ್ನು ಮುನ್ನೆಲೆಗೆ ತರುತ್ತಾರೆ. ಇಸ್ಲಾಮ್ ಧರ್ಮದಲ್ಲಿರುವ ಹಲವು ಪಂಗಡಗಳು ಹೇಗೆ ತಮ್ಮ ವೈವಿಧ್ಯತೆಯನ್ನು ಕಳೆದುಕೊಂಡಿವೆ ಎಂಬುದನ್ನು ವಿವರಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಜಮಾತ್ ಮತ್ತು ತಬ್ಲೀಗಿ ಸಂಸ್ಥೆಯ ಪಾತ್ರಗಳ ಬಗ್ಗೆ ಬರೆಯುತ್ತಾರೆ. ಆದರೆ, ಇಸ್ಲಾಮ್ ಧರ್ಮದ ಮೂಲದಲ್ಲಿರುವ ‘ಅಂತಿಮ ಸತ್ಯದ’ ಯತಾವಥ್ ಪ್ರತಿಪಾದನೆಯಿಂದ ಆಗುವ ಅನಾಹುತಗಳನ್ನು ಲೇಖಕಿ ವಿಶ್ಲೇಷಿಸುವುದಿಲ್ಲ. ಈ ರೀತಿಯ ವಿಶ್ಲೇಷಣೆ ಯಾವುದೇ ಸಾಂಘಿಕ ಧರ್ಮದ ಪರಿಕಲ್ಪನೆಯನ್ನೇ ಪ್ರಶ್ನಿಸುವೆಡೆಗೆ ನಮ್ಮನ್ನು ಕೊಂಡ್ಯೊಯ್ಯುವುದರಿಂದ ಈ ಪಥದಲ್ಲಿ ವಿಚಾರ ಮಾಡುವವರ ಸಂಖ್ಯೆ ಕಡಿಮೆ. ಸಾಮಾಜಿಕ ಮನಸ್ಸಿನ ಮೇಲೆ ಸಾಂಘಿಕ ಧರ್ಮದ ಹಿಡಿತ ಆ ಮಟ್ಟದಲ್ಲಿರುತ್ತದೆ. ಕಳೆದ ದಶಕದಲ್ಲಿ ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ನಡೆದ ಸರಣಿ ಮುಕ್ತ ಚಿಂತಕರ ಹತ್ಯೆಗಳನ್ನು ನಾವು ಇಲ್ಲಿ ನೆನೆಯಬಹುದು. ಈ ಚಿಂತಕರು ಧರ್ಮ ಗ್ರಂಥಗಳಲ್ಲಿನ ಅವೈಚಾರಿಕ ಅವೈಜ್ಞಾನಿಕ ಮೌಲ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸಿದ್ದರು ಎಂಬುದನ್ನು ಗಮನಿಸಬೇಕು.

Ghazala Wahabಪುಸ್ತಕದುದ್ದಕ್ಕೂ ಧಾರ್ಮಿಕ ಸಂಸ್ಥೆಗಳು ತಮ್ಮ ಪ್ರವಚನಗಳ ಮೂಲಕ ಸ್ಥಳೀಯ ಸಮುದಾಯಗಳಲ್ಲಿ ಇಸ್ಲಾಮ್ ಧರ್ಮ ಪ್ರಚಾರವನ್ನು ಕೈಗೊಳ್ಳುವ ಬಗೆಗಳನ್ನು ಲೇಖಕಿ ಪ್ರಸ್ತುತ ಪಡಿಸುತ್ತಾರೆ. ಒಂದು ವಿಚಾರ ಪದೇ ಪದೇ ಕಿವಿಗೆ ಬಿದ್ದಾಗ, ಮತ್ತು ಅಂತಹದ್ದೇ ವಿಚಾರಗಳನ್ನು ನಮ್ಮ ಆತ್ಮೀಯ ವಲಯದವರೆಲ್ಲರೂ ಹಂಚಿಕೊಳ್ಳತೊಡಗಿದಾಗ ಆ ವಿಚಾರವು ಸತ್ಯವೆಂಬಂತೆ ಮನುಷ್ಯನ ಮೆದುಳು ಭ್ರಮಿಸುತ್ತದೆ. ಇದನ್ನು ‘ಇಲ್ಲೂಸರಿ ಟ್ರೂತ್ ಎಫೆಕ್ಟ್’ ಎಂದು ಮನೋವಿಜ್ಞಾನ ವಿಶ್ಲೇಷಿಸುತ್ತದೆ. ಈ ವಿದ್ಯಮಾನವನ್ನು ನಾವು ಇಂದಿನ ಆಧುನಿಕ ಸಾಮೂಹಿಕ ಮಾಧ್ಯಮಗಳ ಹಾವಳಿಯಿಂದ ದಿನದ ಕ್ಷಣ ಕ್ಷಣಗಳಲ್ಲೂ ಅನುಭವಿಸುತ್ತಿದ್ದೇವೆ. ಯಾವುದು ಸತ್ಯ, ಯಾವುದು ಮಿತ್ಯ ಎಂಬುದನ್ನು ಕಂಡುಹಿಡಿಯಲಾರದ ಸಂದಿಘ್ನ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಸಮಾಜ ಧರ್ಮದ ಹಿಡಿತಕ್ಕೆ ಸುಲಭದಲ್ಲಿ ಸಿಗುವ ಸರಕಾಗಿದೆ. ಈ ವಿದ್ಯಮಾನವನ್ನು ಈ ಪುಸ್ತಕದಲ್ಲಿ ಲೇಖಕಿಯು ನಿರೂಪಿಸಿದ್ದಾರೆ ಎನ್ನಬಹುದು. ಇದು ಇನ್ನಿತರ ಧರ್ಮಗಳ ಪಥಗಳಿಗೂ ಅನ್ವಯಿಸುತ್ತದೆ.

ಇಸ್ಲಾಮ್ ಧರ್ಮಕ್ಕೆ ಅಂಟಿರುವ ಕಳಂಕಗಳಲ್ಲಿ ಮುಖ್ಯವಾದದ್ದು ಉಗ್ರವಾದ ಎಂದು ಗುರುತಿಸುವ ಲೇಖಕಿ ಈ ಕಳಂಕಕ್ಕೆ ಮುಖ್ಯ ಕಾರಣ ಸೌದಿ ಅರೇಬಿಯಾ ಎಂದು ಪ್ರತಿಪಾದಿಸುತ್ತಾರೆ. ಮೊದಲನೆ ಮಹಾ ಯುದ್ಧದ ನಂತರ ಪತನಗೊಂಡ ಒಟೊಮನ್ ಕ್ಯಾಲಿಫಾಟ್ ಸೌದಿ ಅರೇಬಿಯಾದ ಅಧಿಕಾರವನ್ನು ಹೆಚ್ಚಿಸುತ್ತದೆ. ಮೆಕ್ಕಾ ಮತ್ತು ಮದೀನ ಪವಿತ್ರ ಸ್ಥಳಗಳ ಅಧಿಕಾರ ಹೊಂದಿರುವ ಸೌದಿ ಅರೇಬಿಯಾ ಮೊದಲು ಯುನೈಟೆಡ್ ಕಿಂಗ್ಡಮ್ ನಂತರ ಅಮೇರಿಕಾ ದೇಶದ ಸಹಾಯದಿಂದ ತನ್ನ ಸಾರ್ವಭೌಮತ್ವವನ್ನು ಬಲಪಡಿಸಿಕೊಂಡು ಇಸ್ಲಾಮ್ ಧರ್ಮದ ಕೇಂದ್ರ ಸ್ಥಳವಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ (ಪೆಟ್ರೋಲಿಯಮ್ ಉತ್ಪನ್ನಗಳ ಕಾರಣದಿಂದ). ಮುಸ್ಲಿಮ್ ಸಮುದಾಯದ ಮೆಕ್ಕಾ ಮದೀನ ಪುಣ್ಯ ಸ್ಥಳಗಳ ಜೊತೆಗಿರುವ ಭಾವನಾತ್ಮಕ ಸಂಬಂಧವನ್ನು ದುರುಪಯೋಗ ಪಡಿಸಿಕೊಳ್ಳುವ ಸೌದಿ ಅರೇಬಿಯಾ ಲಕ್ಷಾಂತರ ಮುಸ್ಲಿಮರನ್ನು ಉಗ್ರವಾದಿಗಳಾಗುವಂತೆ ಪ್ರೇರಿಪಿಸಿರುವ ಆಪಾದನೆಯನ್ನು ಹೊರಿಸಿಕೊಂಡಿದೆ. ಪ್ರಪಂಚದ ಮುಸ್ಲಿಮರ ಮೇಲೆ ಸೌದಿ ಅರೇಬಿಯ ಹೊಂದಿರುವ ಅಧಿಕಾರವು ಬದಲಾಗಬೇಕು ಎಂದು ಲೇಖಕಿ ಅಭಿಪ್ರಾಯಪಡುತ್ತಾರೆ.

ಇಸ್ಲಾಮ್ ಮೂಲಭೂತವಾದದಿಂದ ಅತಿ ಹೆಚ್ಚು ಅಪಾಯಕ್ಕೆ ಒಳಗಾಗಿರುವವರು ಮುಸ್ಲಿಮರೇ ಎಂದು ಲೇಖಕರು ಹೇಳುತ್ತಾರೆ. ಇಸ್ಲಾಮ್ ಧರ್ಮವು ಜನಿಸಿದಾಗಿನಿಂದ ಇಂದಿನವರೆಗೆ ಧರ್ಮ ಗ್ರಂಥದ ಅರ್ಥೈಸುವಿಕೆಯಲ್ಲಿ ನಿರಂತರ ಚರ್ಚೆಗಳು ಮತ್ತು ಭಿನ್ನಾಭಿಪ್ರಾಯಗಳು ಆಗುತ್ತಲೇ ಇವೆ ಎಂದು ಗುರುತಿಸುವ ಲೇಖಕಿ ಇಸ್ಲಾಮ್ ಧರ್ಮದ ಇತ್ತೀಚಿನ ತೀವ್ರವಾದದ ಬಗ್ಗೆ ಆಂತಕ ವ್ಯಕ್ತಪಡಿಸುತ್ತಾರೆ. ತಮ್ಮ ಅಭಿಪ್ರಾಯವನ್ನು ಪುಷ್ಟೀಕರಿಸಲು ಪೆÇ್ರ. ಇಶಾಕ್ ಅವರ ಮಾತುಗಳನ್ನು ಉಲ್ಲೇಖಿಸುತ್ತಾರೆ. ಅವರ ಮಾತುಗಳು: ‘While religion is absolute, its understanding can vary. It will cause no harm if Islamic thought is revisited’. ಇದನ್ನು ಮುಂದುವರೆಸಿ ಲೇಖಕಿ, ‘ಇಸ್ಲಾಮ್ ಧರ್ಮದ ಉದ್ದೇಶವು ಮನುಕುಲವನ್ನು ಉದ್ಧಾರ ಮಾಡುವುದು. ಹಾಗಾಗಿ ಇದು ಬದಲಾಗುವ ಕಾಲಘಟ್ಟಕ್ಕೆ ತಕ್ಕಂತೆ ಸುಧಾರಣೆಗೊಳ್ಳಬೇಕು’ ಎನ್ನುತ್ತಾರೆ. ಲೇಖಕಿಯ ಉದ್ದೇಶ ಅತ್ಯಂತ ಮುಖ್ಯವಾದದ್ದು ಮತ್ತು ಪ್ರಾಮಾಣಿಕವಾದದ್ದು. ಆದರೆ, ಅವರು ಉಲ್ಲೇಖಿಸಿರುವ ಮಾತುಗಳಲ್ಲಿರುವ ವೈರುದ್ಯವನ್ನು ಗುರುತಿಸಲು ತಪ್ಪಿರುವುದು ಕಾಣುತ್ತದೆ. ಯಾವುದೇ ಧರ್ಮದ ಸುಧಾರಣೆ ಎಂದರೆ ಏನು? ಧರ್ಮವು ‘ಅಂತಿಮ’ವಾದರೆ ಅದು ಸುಧಾರಣೆಗೆ ತೆರೆದುಕೊಳ್ಳುವ ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತದೆಯೆ? ಕಾಲಕಾಲಕ್ಕೆ ಸುಧಾರಣೆಗೊಂಡಿರುವ ಧರ್ಮಗಳ ಉದಾಹರಣೆಗಳನ್ನು ನಾವು ಪರಿಶೀಲಿಸಿದಾಗ, ಸುಧಾರಣೆಗೊಳ್ಳುವುದು ಆ ಧರ್ಮದ ಮೂಲ ಸ್ವರೂಪವಲ್ಲ. ಬದಲಾಗಿ ಸುಧಾರಣೆಯಾಗಿರುವುದು ಮನುಷ್ಯನ ಬೌದ್ಧಿಕ ಮತ್ತು ಭಾವನಾತ್ಮಕ ವಿಕಸನದಿಂದ ಕಂಡುಕೊಂಡಿರುವ ನೈತಿಕ ಮೌಲ್ಯಗಳಲ್ಲಿ.

ಮನುಷ್ಯ ಕುಲದ ವಿಕಾಸಕ್ಕೆ ಈಗ 200,000 ವರ್ಷಗಳ ಇತಿಹಾಸವಿದೆ! ಧರ್ಮಗಳ ಉದಯಕ್ಕೆ ಎಷ್ಟು ವರ್ಷಗಳ ಇತಿಹಾಸವಿದೆ? ಮಾನವೀಯ ಮತ್ತು ಜೀವಪರ ನಿಲುವುಗಳು ನಮ್ಮ ವೈಜ್ಞಾನಿಕ ಮತ್ತು ವೈಚಾರಿಕ ತಳಹದಿಯ ಮೇಲೆ ವಿಕಾಸ ಹೊಂದುತ್ತಿರುವ ನೈತಿಕ ಮೌಲ್ಯಗಳ ಮೇಲೆ ಅವಲಂಬಿಸಿವೆ. ಈ ವಿಕಾಸಕ್ಕೆ ಸಾಂಸ್ಥಿಕ ರೂಪದ ಧರ್ಮದ ಕೊಡುಗೆ ಬಹಳ ಕಡಿಮೆಯೆಂದೇ ನಾವು ಅರಿಯಬಹುದಾಗಿದೆ. ಆದ್ದರಿಂದಲೇ ಸುಧಾರಣೆಗೊಳ್ಳದ ಮೂಲಸ್ವರೂಪಕ್ಕೆ ಜೋತು ಬಿದ್ದಿರುವ ಸಾಂಸ್ಥಿಕ ಧರ್ಮ ಸಮಾಜವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯಲು ಇಂದಿಗೂ ಅಡ್ಡಿಯಾಗಿ ನಿಂತಿರುವುದನ್ನು ಅರಿಯಬಹುದು. ಸುಧಾರಣೆಗೊಂಡಿರುವುದು ನಮ್ಮ ವೈಚಾರಿಕ ತಳಹದಿಯ ಬುದ್ಧಿಮತ್ತೆ ಮತ್ತು ನೈತಿಕತೆ. ಧರ್ಮ ಗ್ರಂಥಗಳು ಸಾವಿರ ವರ್ಷಗಳ ಹಿಂದೆ ಬರೆದಿರುವ ಮೌಲ್ಯಗಳನ್ನೇ ಅಂತಿಮವೆನ್ನುತ್ತವೆ. ಪ್ರಜಾಪ್ರಭುತ್ವ ಉಳಿಯಲು, ಜಾತ್ಯಾತೀತ ಜೀವಪರ ಸೌಹಾರ್ದ ಬದುಕು ಅರಳಲು ಸುಧಾರಣೆಗೆ ಮುಕ್ತವಾಗಿರುವ ನಮ್ಮ ಸಂವಿಧಾನದಿಂದ ಸಾಧ್ಯವಾಗಿದೆ. ಈ ರೀತಿಯ ಬೌದ್ಧಿಕ ವಿಕಸನದಿಂದ ನಾವು ಧರ್ಮ ಗ್ರಂಥಗಳನ್ನು ಅರ್ಥೈಸಿಕೊಳ್ಳುವಲ್ಲಿ ಕೂಡ ಸುಧಾರಣೆ ಹೊಂದಿದ್ದೇವೆ. ಅದರ ಅರ್ಥ ಧರ್ಮ ಗ್ರಂಥಗಳು ಸುಧಾರಣೆಗೊಂಡಿವೆ ಎಂದಲ್ಲ. ಧರ್ಮಗ್ರಂಥಗಳಲ್ಲಿ ಯಾವ ಮೌಲ್ಯಗಳು ನಮಗೆ ಸಾರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುತ್ತವೆಯೋ ಅದಷ್ಟನ್ನು ಮಾತ್ರ ಎತ್ತಿಹಿಡಿದು ಈ ಕಾಲಕ್ಕೆ ಸೂಕ್ತವಲ್ಲದ್ದನ್ನು ತಿರಸ್ಕರಿಸಿದ್ದೇವೆ ಇಲ್ಲವೇ ನಿರ್ಲಕ್ಷಿಸಿದ್ದೇವೆ. ತಿರಸ್ಕರಿಸಿರುವುದಕ್ಕಿಂತ ನಿರ್ಲಕ್ಷಿಸಿರುವುದೇ ಹೆಚ್ಚು. ಆದ್ದರಿಂದ ಅವುಗಳ ಅರ್ಥವಿಲ್ಲದ ಪತನಗೊಂಡಿರುವ ನೈತಿಕ ಮೌಲ್ಯಗಳು ನಮಗೆ ಕಾಣದಿರಬಹುದು. ಆದರೆ ಮೂಲಭೂತವಾದಿಗಳು ಧರ್ಮ ಗ್ರಂಥಗಳ ಈ ನಿರ್ಲಕ್ಷಗೊಂಡ ಅವೈಜ್ಞಾನಿಕ ಮೌಲ್ಯಗಳನ್ನು ಚಾಚುತಪ್ಪದೆ ಪ್ರತಿಪಾದಿಸುತ್ತಾರೆ. ಇದನ್ನು ಸಮಾಜವು ಬೇರ್ಪಡಿಸಿ ನೋಡುವುದರಿಂದ ಉಗ್ರವಾದಿಗಳು ಮಾತ್ರ ಧರ್ಮವನ್ನು ಹಾಳುಗೆಡುವುತ್ತಿದ್ದಾರೆ ಎಂಬಂತೆ ಕಾಣುತ್ತದೆ. ಇದರಲ್ಲಿ ನಮ್ಮಂತಹ ಸಾಮಾನ್ಯ ಜನರು ಧರ್ಮ ಗ್ರಂಥಗಳಲ್ಲಿನ ಅಪಾಯಕಾರಿ ಮೌಲ್ಯಗಳ ಬಗ್ಗೆ ತಮ್ಮ ನಿರ್ಲಕ್ಷದ ಮೂಲಕ ಪರೋಕ್ಷವಾಗಿ ಉಗ್ರವಾದಕ್ಕೆ ಎಡೆಮಾಡಿಕೊಟ್ಟಿರುವುದನ್ನು ಗ್ರಹಿಸಲು ಸೋಲುತ್ತೇವೆ. ಸಂವಿಧಾನ ಮತ್ತು ಕಾನೂನಿನ ರಕ್ಷಣೆಯಲ್ಲಿ ಸಮಾಜವು ಅಭಿವೃದ್ಧಿಯ ಹಾದಿ ಹಿಡಿದಿದೆಯೇ ಹೊರತು ಧರ್ಮ ಗ್ರಂಥಗಳ ರಕ್ಷಣೆಯಲ್ಲಿ ಅಲ್ಲ.

‘ಇನ್ಸೆಕ್ಯೂರಿಟೀಸ್ ಆಫ್ ಮುಸ್ಲಿಮ್ಸ್ ಇನ್ ಇಂಡಿಯಾ’ ಎನ್ನುವ ಅಧ್ಯಾಯದಲ್ಲಿ ಭಾರತೀಯ ಮುಸ್ಲಿಮರ ಇತಿಹಾಸವನ್ನು ಸ್ವಾತಂತ್ರ್ಯಪೂರ್ವ ಕಾಲದಿಂದಲೂ ನಮ್ಮ ಮುಂದಿಡುವ ವಾಹಬ್ ಅವರು ಭಾರತೀಯ ಮುಸ್ಲಿಮರ ಅಭದ್ರತೆಗಳಿಗೆ ಕಾರಣಗಳನ್ನು ವಿಶ್ಲೇಷಿಸಿದ್ದಾರೆ. ಈ ವಿಶ್ಲೇಷಣೆಗೆ ಅಗತ್ಯ ಮಾಹಿತಿ, ಅಂಕಿ ಅಂಶ ಮತ್ತು ಇತಿಹಾಸಕಾರರ ಸಂಶೋಧನೆಗಳ ಆಕರಗಳನ್ನು ಒದಗಿಸುತ್ತಾರೆ. ಇದಕ್ಕೆ ಪುಸ್ತಕದ ಮೊದಲ ಅಧ್ಯಾಯ ‘ಮುಸ್ಲಿಮ್ಸ್ ಇನ್ ಇನ್ಡಿಪೆಂಡೆಂಟ್ ಇಂಡಿಯಾ’ ವಸ್ತುನಿಷ್ಟವಾದ ಆಕರವನ್ನು ಒದಗಿಸುತ್ತದೆ. ಭಾರತೀಯ ಇಸ್ಲಾಮಿನ ಇತಿಹಾಸದುದ್ದಕ್ಕೂ ಹಿಂದೂ ಧರ್ಮದ ಮೂಲಭೂತವಾದದ ಬೆಳವಣಿಗೆ ನಮಗೆ ಕಾಣಸಿಗುತ್ತದೆ. ಈ ವಿಚಾರವಾಗಿ ಸ್ವಾತಂತ್ರ ಸಂಗ್ರಾಮದ ಕಾಲದಿಂದಲೂ ಭಾರತೀಯ ಮುಸ್ಲಿಮರನ್ನು ಬಗ್ಗು ಬಡೆದ ಬ್ರಿಟಿಶರು ಮತ್ತು ಇದರಿಂದ ಕುಗ್ಗಿದ ಭಾರತೀಯ ಮುಸ್ಲಿಮ್ ಆಳ್ವಿಕೆ ಬಗ್ಗೆ ಬರೆಯುತ್ತಾರೆ. ಇದರ ಉಪಯೋಗ ಪಡೆದ ಹಿಂದೂ ಸಂಘಟನೆಗಳ ಬಗ್ಗೆ ವಿವರಗಳಿವೆ. ಕೇಶವ್ ಬಲಿರಾಮ್ ಹೆಡಗೇವಾರ್ 1925ರಲ್ಲಿ ಹುಟ್ಟುಹಾಕಿದ ಆರ್ ಎಸ್ ಎಸ್ ಮುಂದೆ ಮಾಧವ್ ಸದಾಶಿವ್ ಗೋಲ್ವಾಲ್ಕರ್ ನಾಯಕತ್ವದಲ್ಲಿ ದೊಡ್ಡ ಶಕ್ತಿಯಾಗಿ ವಿಸ್ತರಿಸಿಕೊಂಡ ಬಗೆಯನ್ನು ಇತಿಹಾಸಕಾರರ ಆಕರಗಳ ಮೂಲಕ ಪ್ರಸ್ತುತ ಪಡಿಸುತ್ತಾರೆ. ಆರ್ ಎಸ್ ಎಸ್ ಸಂಸ್ಥೆಗೆ ಭಾರತೀಯ ಮುಸ್ಲಿಮರು ತಮ್ಮ ಸ್ವಾರ್ಥ ಸಾಧನೆಗೆ ಬಳಕೆಯಾದ ಸಮುದಾಯ. ಹಿಂದೂ ಮೂಲಭೂತವಾದವನ್ನು ಬಹುಸಂಸ್ಕೃತಿಯ ನಮ್ಮ ದೇಶದಲ್ಲಿ ಹೇರಲು ಅತ್ಯಗತ್ಯವಾಗಿ ಬೇಕಿದ್ದ ವಸ್ತುವಾಗಿ ಮುಸ್ಲಿಮರನ್ನು ಬಳಸಿಕೊಳ್ಳಲಾಯಿತು. ಮುಸ್ಲಿಮರು ಎಂದಿಗೂ ಭಾರತೀಯರಾಗಲು ಸಾಧ್ಯವಿಲ್ಲವೆಂಬ ಆಲೋಚನೆಯನ್ನು ಜನಮಾನಸದಲ್ಲಿ ಬಿತ್ತಿದ ಆರ್ ಎಸ್ ಎಸ್ ಸಂಸ್ಥೆ ತನ್ನ ಸನಾತನ ಧರ್ಮವನ್ನು ಸಾಂಸ್ಥಿಕಗೊಳಿಸಿಕೊಂಡಿತು. ಹೆಡಗೇವಾರ್ ಸಾಂಸ್ಕೃತಿಕ ಹೇರಿಕೆಯಷ್ಟೇ ಅಲ್ಲದೆ, ಈ ಹೇರಿಕೆಯನ್ನು ಬೌತಿಕವಾಗಿ ಹೇರಲು ಸಾಧ್ಯವಾಗುವಂತೆ ತನ್ನ ಸದಸ್ಯರುಗಳಿಗೆ ಸೈನ್ಯದ ರೀತಿಯಲ್ಲಿ ತರಬೇತಿ ನೀಡುವಲ್ಲಿ ಯಶಸ್ವಿಯಾದರು. ಇದರಿಂದ ಹಿಂದೂಗಳೂ ಶಕ್ತಿಶಾಲಿಗಳು ಮತ್ತು ತಮ್ಮ ಪೂರ್ವಜರ ಶೂರತ್ವವನ್ನು ಮತ್ತೆ ಮರುಕಳಿಸಲು ಹಿಂದುಗಳೆಲ್ಲ ಒಂದಾಗಬೇಕು ಎನ್ನುವ ಭ್ರಮೆಯನ್ನು ಬಿತ್ತಿತು. ಈ ಸಂಸ್ಥೆಯ ಬೆಳವಣಿಗೆಗೆ ಭಾರತೀಯ ಮುಸ್ಲಿಮರನ್ನು ಶತ್ರುಗಳೆಂಬಂತೆ ಬಿಂಬಿಸಲಾಯಿತು. ಈ ನಿರೂಪಣೆಯನ್ನು ಕ್ರಮೇಣವಾಗಿ ಬಳಸಿಕೊಂಡ ಹಲವು ಪ್ರಕರಣಗಳನ್ನು ನಮ್ಮ ದೇಶದ ರಾಜಕೀಯ ಬೆಳವಣಿಗೆಗಳು, ಸಂಘ ಪರಿವಾರದ ರಾಜಕೀಯ ಪಕ್ಷ ಬೆಳೆದ ರೀತಿ (ಗುಜರಾತ್ ನರಮೇಧ), ಕೇಂದ್ರ ಸರ್ಕಾರದ ಅಧಿಕಾರ ಚುಕ್ಕಾಣಿ ಹಿಡಿದ ಬಿಜೆಪಿ ಪಕ್ಷದ ಪ್ರಮುಖ ನಾಯಕರುಗಳು ಹಾಗೂ 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದವರೆಗೆ ಲೇಖಕಿ ಈ ಅಧ್ಯಾಯದಲ್ಲಿ ಉಲ್ಲೇಖಿಸುತ್ತಾರೆ.

ಹಾಗೆಯೇ ಭಾರತೀಯ ಮುಸ್ಲಿಮರ ಪರಂಪರೆ ಮತ್ತು ಮತಾಂತರಗೊಂಡ ಲಕ್ಷಾಂತರ ಭಾರತೀಯರು ಇಂದು ಮುಸ್ಲಿಮರಾಗಿ ಗುರುತಿಸಿಕೊಂಡಿರುವ ಇತಿಹಾಸವನ್ನು ವಾಹಬ್ ಅವರು ತಮ್ಮ ‘ದಿ ಸ್ಟೊರಿ ಆಫ್ ಇಂಡಿಯನ್ ಇಸ್ಲಾಮ್’, ‘ಒನ್ ಫೇತ್, ಮೆನೀ ಸೆಕ್ಟ್ಸ್’ ಮತ್ತು ‘ಮೈನಾರಿಟಿ ಪಾಲಿಟಿಕ್ಸ್’ ಎಂಬ ಅಧ್ಯಾಯಗಳಲ್ಲಿ ವಿವರಿಸುತ್ತಾರೆ. ‘ಮೈನಾರಿಟಿ ಪಾಲಿಟಿಕ್ಸ್’ ಅಧ್ಯಾಯವು ಭಾರತೀಯ ಮುಸ್ಲಿಮರ ಈಗಿನ ವಾಸ್ತವ ಬದುಕಿನ ಬವಣೆಗಳು ಮತ್ತು ಸವಾಲುಗಳನ್ನು ಅರ್ಥಪೂರ್ಣವಾಗಿ ಬಿಚ್ಚಿಡುತ್ತದೆ. ಈ ಅಧ್ಯಾಯವನ್ನು ಹಿಂದಿನ ಅಧ್ಯಾಯಗಳು ವಿವರಿಸುವ ಭಾರತೀಯ ಇಸ್ಲಾಮಿನ ಇತಿಹಾಸದ ಅರಿವಿನಲ್ಲಿ ತಿಳಿಯುವುದರಿಂದ ಓದುಗರಿಗೆ ಸಾಂಸ್ಕೃತಿಕ-ಸಾಮಾಜಿಕ ವಿದ್ಯಮಾನಗಳನ್ನು ಅರ್ಥೈಸಿಕೊಳ್ಳುವ ಸೂಕ್ಷ್ಮತೆಯನ್ನು ತಂದುಕೊಡುತ್ತದೆ. ವಾಹಬ್ ಅವರು ಭಾರತೀಯ ಮುಸ್ಲಿಮ್ ಸಮುದಾಯದಲ್ಲಿರುವ ವರ್ಗ ಮತ್ತು ಜಾತಿ ವ್ಯವಸ್ಥೆಯ ಬಗ್ಗೆ ತಿಳಿಸುತ್ತಾರೆ. ಭಾರತೀಯ ಹಿಂದೂ ಸಮಾಜದ ಅತ್ಯಂತ ಅನಿಷ್ಟ ಪದ್ಧತಿಯಾದ ಜಾತಿ ಪದ್ಧತಿ, ಅಸ್ಕೃಶ್ಯತೆ ಮತ್ತು ಅಸಮಾನತೆಯಿಂದ ಮುಕ್ತಿ ಪಡೆಯಲು ಮುಸ್ಲಿಮ್ ಧರ್ಮಕ್ಕೆ ಮತಾತಂತರಗೊಂಡ ಲಕ್ಷಾಂತರ ಭಾರತೀಯರು ಬಹುಪಾಲು ಬಡತನದ ಬೇಗೆಯನ್ನು ಅನುಭವಿಸುತ್ತಿದ್ದ ಕೆಳಜಾತಿಯವರೇ ಆಗಿದ್ದರು. ಮತಾಂತರಗೊಂಡಮೇಲೂ ಜಾತಿ ಪದ್ಧತಿಯ ಅನಿಷ್ಟ ಗುರುತಿನಿಂದ ಸಂಪೂರ್ಣವಾಗಿ ಹೊರಬರಲಾಗದ ಮುಸ್ಲಿಮರು ಹಲವು ತಲೆಮಾರುಗಳು ಕಳೆದರೂ ಮುಸ್ಲಿಮ್ ಸಮುದಾಯದಲ್ಲಿ ಸಮಾನತೆಯನ್ನು ಪಡೆಯಲು ಸೋತಿದ್ದಾರೆ. ಇವತ್ತಿನ ಭಾರತದಲ್ಲಿ ನೋಟ್ ಬ್ಯಾನ್ ಮತ್ತು ಜಿ ಎಸ್ ಟಿ ಮುಂತಾದ ಆರ್ಥಿಕ ಸಂಕಷ್ಟದ ಜೊತೆಗೆ ಹಿಂದೂ ಕೋಮುವಾದದ ದಬ್ಬಾಳಿಕೆಯಿಂದ ಅಂಚಿಗೆ ದೂಡಲ್ಪಟ್ಟಿರುವ ಈ ಕೆಳ ಸ್ಥರದ ಮುಸ್ಲಿಮರ ಬವಣೆಗಳನ್ನು ನಮ್ಮ ಮುಂದಿಡುತ್ತಾರೆ. ಈ ವರ್ಗದ ಭಾರತೀಯ ಮುಸ್ಲಿಮರು ತಮ್ಮ ಮೂಲ ಧರ್ಮಕ್ಕೂ ಮರಳಲಾಗದೆ ಮುಸ್ಲಿಮ್ ಧರ್ಮದ ಗುರುತಿನಿಂದ ಬಿಡಿಸಿಕೊಳ್ಳಲೂ ಆಗದ ಅತಂತ್ರ ಪರಿಸ್ಥಿತಿಗೆ ದೂಡಲ್ಪಟ್ಟಿದ್ದಾರೆ.

ಬದಲಾದ ಭಾರತದ ಆರ್ಥಿಕ ನೀತಿಗಳು ಮತ್ತು ಧಾರ್ಮಿಕ ಅಸಹಿಷ್ಣುತೆಯಿಂದ ಕಳೆದುಕೊಳ್ಳುತ್ತಿರುವ ಉದ್ಯೋಗವಕಾಶಗಳು ಮತ್ತು ತಮ್ಮ ಸಣ್ಣ ಪುಟ್ಟ ಸ್ವ ಉದ್ದಿಮೆಗಳನ್ನು ಕೂಡ ಕಳೆದುಕೊಂಡಿರುವ ಈ ಕೆಳ ವರ್ಗದ ಮುಸ್ಲಿಮರ ಬವಣೆಗಳನ್ನು ವಿವರಿಸುತ್ತಾರೆ. ಮುಸ್ಲಿಮ್ ಹೆಸರಿನಿಂದಲೇ ಅಸ್ಪೃಶ್ಯತೆಗೆ ಒಳಗಾಗುವ ಭಾರತೀಯ ಮುಸ್ಲಿಮರು ತಮ್ಮ ಇಸ್ಲಾಮ್ ಅಸ್ಮಿತೆಯನ್ನು ತೆರೆದಿಡುವ ತಮ್ಮ ಹೆಸರುಗಳನ್ನೇ ಬದಲಿಸಿಕೊಂಡು ‘ಚೋಟು, ಬಾಬು, ಮುನ್ನಾ’ ಈ ರೀತಿಯ ಧರ್ಮ ಸೂಚಕವಲ್ಲದ ಹೆಸರಿನಿಂದ ಗುರುತಿಸಿಕೊಳ್ಳುತ್ತಾರೆ. ಮುಸ್ಲಿಮ್ ಸೂಚಕ ಹೆಸರಿನಿಂದಲೇ ಕೆಲಸ ಕಳೆದುಕೊಳ್ಳುವ ಭಯದಲ್ಲಿ ನಿತ್ಯ ಜೀವನ ದೂಡುತ್ತಿದ್ದಾರೆ. ದೊಡ್ಡ ನಗರಗಳಲ್ಲಿ ಸಣ್ಣ ಪುಟ್ಟ ವ್ಯಾಪಾರ, ರಿಪೇರಿ ಕೆಲಸ ಇಂಥವುಗಳನ್ನು ಮಾಡಿ ಜೀವನ ಸಾಗಿಸುತ್ತಿರುವ ಇಂಥ ಹಲವು ವ್ಯಕ್ತಿಗಳನ್ನು ಸಂದರ್ಶಿಸಿ ಅವರ ಮಾತುಗಳ ಮೂಲಕ ಈ ಸಮಾಜದಲ್ಲಿ ಒಬ್ಬ ಅನ್ಯ ಧರ್ಮೀಯ ವ್ಯಕ್ತಿಯ ದಿನನಿತ್ಯದ ಜೀವನದ ಸಂಕಷ್ಟಗಳನ್ನು ತೆರೆದಿಡುತ್ತಾರೆ. ಬಡತನದ ಬೇಗೆಯಲ್ಲಿ ಬೇಯುವವರಿಗೆ ಮೂಲಭೂತ ಸೌಕರ್ಯಗಳ ಚಿಂತೆಯ ಜೊತೆಗೆ ಧಾರ್ಮಿಕ ಅಸಹಿಷ್ಣುತೆಯ ದ್ವೇಷವನ್ನು ಸಹಿಸುವ ಸಂಕಷ್ಟಗಳು ಅಪಾರ. ಇವರ ಮಾತುಗಳಿಗೆ ಪೂರಕವಾಗಿ ನಮ್ಮ ದೇಶದ ಮುಸ್ಲಿಮರ ಶೈಕ್ಷಣಿಕ ಮಟ್ಟ, ಉದ್ಯೋಗವಕಾಶಗಳು ಮತ್ತು ಸಾಮಾಜಿಕ ಆರ್ಥಿಕ ಮಟ್ಟಗಳ ಸಮೀಕ್ಷೆಯ ಸರ್ಕಾರಿ ಅಂಕಿ ಅಂಶಗಳನ್ನು ನಮ್ಮ ಮುಂದಿಡುತ್ತಾರೆ.

ಭಾರತದ ಮುಸ್ಲಿಮರ ಈ ಪರಿಸ್ಥಿತಿಗಳಿಗೆ ಕಾರಣಗಳನ್ನು ಹೆಕ್ಕಿ ತೆಗೆಯುವ ವಾಹಬ್ ಅವರು ತಮ್ಮ ಸಮುದಾಯದ ವರ್ಗ-ಜಾತಿ ಸಂಘರ್ಷಗಳು ಮತ್ತು ಮುಸ್ಲಿಮ್ ಸಮುದಾಯದ ಪುರೋಹಿತಶಾಹಿ ವರ್ಗದ ಕುತಂತ್ರಗಳನ್ನು ಬಿಚ್ಚಿಡುತ್ತಾರೆ. ಲೇಖಕಿಯು ಯಾವುದೇ ಮುಲಾಜಿಲ್ಲದೆ ಇಸ್ಲಾಮಿನ ಧರ್ಮಗುರುಗಳ ವಿಮರ್ಶೆಯನ್ನು ಇತಿಹಾಸ ಮತ್ತು ಅಂಕಿ ಅಂಶಗಳ ನೆರವಿನಿಂದ ಮಾಡುತ್ತಾರೆ. ಸ್ವಾತಂತ್ರ ಪೂರ್ವದ, ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭ ಮತ್ತು ಸ್ವಾತಂತ್ರ್ಯಾ ನಂತರ ಮುಸ್ಲಿಮ್ ಸಮುದಾಯದ ಪುರೋಹಿತಶಾಹಿ ಮತ್ತು ಮೇಲ್ಜಾತಿ ವರ್ಗಗಳು ನಮ್ಮ ದೇಶ ಕಟ್ಟುವಿಕೆಯಲ್ಲಿ ವಹಿಸಿದ ಪಾತ್ರದ ಬಗ್ಗೆ ಬರೆಯುತ್ತಾರೆ. ವಾಹಬ್ ಅವರು ಇಸ್ಲಾಮ್ ಪುರೋಹಿತಶಾಹಿ ಮತ್ತು ಮೇಲ್ಜಾತಿ ವರ್ಗಗಳು ಈ ಮೂರೂ ಸಂದರ್ಭಗಳಲ್ಲಿ ತನ್ನ ಸ್ವಾರ್ಥ ಸಾಧನೆಯೊಂದನ್ನು ಬಿಟ್ಟು ಮತ್ತೇನನ್ನೂ ಮಾಡಲಿಲ್ಲವೆಂಬುದನ್ನು ಹೇಳುತ್ತಾರೆ. ಮುಸ್ಲಿಮ್ ಸಮುದಾಯದ ಈಗಿನ ಪರಕೀಯತೆಗೆ ಮುಸ್ಲಿಮ್ ಸಮುದಾಯದ ಕೊಡುಗೆ ಮತ್ತು ಪಾತ್ರವನ್ನು ಲೇಖಕಿ ವಿವರಿಸುತ್ತಾರೆ. ಸರ್ ಸಯದ್ ಅವರು ಪ್ರಾರಂಭಿಸಿದ ಅಲಿಘರ್ ಮುಸ್ಲಿಮ್ ಯುನಿವರ್ಸಿಟಿ (ಎ ಎಮ್ ಯು) ಶಿಕ್ಷಣ ಸಂಸ್ಥೆ ಮುಂದೆ ಬೆಳೆದು ಭಾರತದೆಲ್ಲೆಡೆ ಆಧುನಿಕ ಶಿಕ್ಷಣವನ್ನು ಪಸರಿಸಬೇಕು ಎನ್ನುವ ಉದ್ದಾತ್ತವಾದ ಆಶಯದೊಂದಿಗೆ ಶುರುವಾಗುವ ಮೊಹಮದ್ದನ್ ಎಜುಕೇಶನಲ್ ಕಾನ್ಫೆರೆನ್ಸ್ 1901 ರಲ್ಲಿ ಸರ್ ಸಯದ್ ಅವರ ಮರಣದ ನಂತರ ತನ್ನ ಆಶಯಗಳನ್ನು ಕಳೆದುಕೊಂಡು ರಾಜಕೀಯ ಹಿತಾಸಕ್ತಿಗೆ ಹೊರಳುತ್ತದೆ. ಸರ್ ಸಯದ್ ಅವರು ಅತ್ಯಂತ ಉನ್ನತ ಶ್ರೇಣಿಯ ಮತ್ತು ಶ್ರೀಮಂತ ಶುರಾಫಾ ಮುಸ್ಲಿಮ್ ವರ್ಗಕ್ಕೆ ಸೇರಿದವರಾಗಿದ್ದರು. ಆದರೆ ಅವರ ಮರಣಾ ನಂತರ ಶೈಕ್ಷಿಣಿಕ ಆಶಯಗಳನ್ನು ಇದೇ ವರ್ಗ ಮುಂದುವರೆಸದೆ ಆಲ್ ಇಂಡಿಯಾ ಮುಸ್ಲಿಮ್ ಲೀಗ್ ಎನ್ನುವ ರಾಜಕೀಯ ಸಂಘಟನೆಯನ್ನು ಹುಟ್ಟುಹಾಕುತ್ತದೆ. ಇದೇ ಉನ್ನತ ವರ್ಗದ ಶ್ರೀಮಂತ ಮುಸ್ಲಿಮರು ಬ್ರಿಟಿಷರ ಜೊತೆ ಕೈಜೋಡಿಸಿ ತಮ್ಮ ಸ್ಥಾನ ಮಾನಕ್ಕೆ ಯಾವುದೇ ಹಾನಿಯಾಗದ ರೀತಿಯಲ್ಲಿ ಬಾಳು ನಡೆಸುತ್ತಾರೆ. ಭಾರತದ ಸ್ವಾತಂತ್ರ ಹೋರಾಟಗಳ ಜೊತೆ ಎಂದಿಗೂ ಗುರುತಿಸಿಕೊಳ್ಳದ ಈ ಸಂಸ್ಥೆಯ ಶ್ರೀಮಂತ ವರ್ಗ ಮತ್ತು ಉಲೆಮಾಗಳು ಅವರವರ ಹಿತಾಸಕ್ತಿಗಳಿಗಾಗಿ ಮಾತ್ರ ಕೆಲಸ ಮಾಡಿರುತ್ತಾರೆ. ಸ್ವಾತಂತ್ರ ಚಳುವಳಿಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಜೊತೆ ಇವರು ವಹಿಸಿದ ಹುಸಿ ಪಾತ್ರದ ಬಗ್ಗೆ ವಿವರಿಸುತ್ತಾರೆ. ಭಾರತದ ಜನ ಭೀಕರ ಜಲಿಯನ್ ವಾಲಾಬಾಗಿನ ದುರಂತದ ನೋವನ್ನು ಅನುಭವಿಸುತ್ತಿದ್ದರೆ ಇಸ್ಲಾಮ್ ಧರ್ಮದ ಕ್ಯಾಲಿಫಾಟನ್ನು ಬಲಪಡಿಸುವುದು ಉಲೆಮಾಗಳ ಚಿಂತೆಯಾಗಿರುತ್ತದೆ [ಇದೇ ಸಮಯದಲ್ಲಿ ಕ್ಯಾಲಿಫಾಟನ್ನು ರದ್ದುಗೊಳಿಸುವ (1923) ಕೆಮಾಲ್ ಅತಾತುರ್ಕ್ ಟರ್ಕಿ ದೇಶವನ್ನು ಜಾತ್ಯಾತೀತ ಮತ್ತು ಆಧುನಿಕತೆಗೆ ಹೊರಳಿಸುವ ಪ್ರಯತ್ನದಲ್ಲಿರುತ್ತಾರೆ]. ಹಾಗೆಯೇ ತಮ್ಮ ಉನ್ನತ ಸ್ಥಾನಮಾನಗಳಿಗೆ ಚ್ಯುತಿ ಬರದ ರೀತಿಯಲ್ಲಿ ವರ್ತಿಸಿದ ಶ್ರೀಮಂತ ವರ್ಗಗಳಿಗೆ ಅವರ ಸ್ವಾರ್ಥಸಾಧನೆಯೇ ಮುಖ್ಯವಾಗಿರುತ್ತು ಎಂಬ ವಿವರಗಳನ್ನು ನೀಡುತ್ತಾರೆ. ಭಾರತದ ಹಿತಾಸಕ್ತಿಗಾಗಿ ರಾಜಕೀಯದಲ್ಲಿ ಪ್ರಾಮಾಣಿಕತೆಯಿಂದ ಪಾಲ್ಗೊಂಡ ಕೆಲವೇ ಕೆಲವು ಮುಸ್ಲಿಮರು (ಅಬುಲ್ ಕಲಾಮ್ ಆeóÁದ್, ಎಮ್. ಎ. ಅನ್ಸಾರಿ, ಅಬ್ಬಾಸ್ ತ್ಯಾಬ್ಜಿ, ಮುಂತಾದವರು) ಮುಸ್ಲಿಮ್ ಸಮುದಾಯದ ಕಣ್ಣಿಗೆ ಗೌಣವಾಗುತ್ತಾರೆ ಎಂದು ಪ್ರತಿಪಾದಿಸುತ್ತಾರೆ. ಈಗಿನ ಕಾಲಘಟ್ಟದವರೆಗಿನ ಇತಿಹಾಸವನ್ನು ವಿವರವಾಗಿ ತಿಳಿಯಲು ಈ ಅಧ್ಯಾಯಗಳು ಬಹಳ ಸಹಕಾರಿಯಾಗುತ್ತವೆ. ಇಂದಿನ ಭಾರತದ ಕೋಮು ವಾತಾವರಣವನ್ನು ಅರ್ಥಮಾಡಿಕೊಳ್ಳುವ ಅಂತಃಕರಣದ ಮನಸ್ಸನ್ನು ಬೆಳೆಸಿಕೊಳ್ಳಲು ಈ ಅಧ್ಯಾಯಗಳು ಸಹಾಯ ಮಾಡುತ್ತವೆ. ಸಂಶೋಧನೆಯ ಆಧಾರಗಳ ಮೇಲೆ ವಸ್ತುನಿಷ್ಟವಾಗಿ ನಿರೂಪಣೆಗೆ ಒಳಪಟ್ಟಿರುವ ಈ ಅಧ್ಯಾಯಗಳು ಭಾರತೀಯರೆಲ್ಲರೂ ತಿಳಿಯಲೇ ಬೇಕಾದ ಇತಿಹಾಸದ ಪಾಠಗಳಾಗಿವೆ.

ಇಂದು ತನ್ನ ಹಲವು ಹಿಂದೂ ಸಂಘಟನೆಗಳ ಮೂಲಕ ಲಕ್ಷಾಂತರ ಕಾಲಾಳುಗಳನ್ನು ಒಳಗೊಂಡಿರುವ ಆರ್ ಎಸ್ ಎಸ್ ಸಂಘಟನೆಯು ಭಾರತೀಯ ಮುಸ್ಲಿಮರನ್ನು ಇಂದೆಂದಿಗೂ ಕಾಣದ ರೀತಿಯಲ್ಲಿ ಪರಕೀಯಗೊಳಿಸುವಲ್ಲಿ ಯಶಸ್ವಿಯಾಗಿದೆ. ಜಮಾತ್-ಇ-ಇಸ್ಲಾಮ್ ಮತ್ತು ತಬ್ಲೀಗಿ ಸಂಘಟನೆಗಳಿಗೂ ಆರ್ ಎಸ್ ಎಸ್ ಗೂ ಯಾವ ವ್ಯತ್ಯಾಸವೂ ಇಲ್ಲದಿರುವುದು ಲೇಖಕಿಯ ವಿಸ್ತೃತವಾದ ವಿಷಯ ವಿಶ್ಲೇಷಣೆ ನಮಗೆ ತೆರೆದಿಡುತ್ತದೆ. ಈ ಪುಸ್ತಕದಲ್ಲಿ ಲೇಖಕಿಯು ಮುಸ್ಲಿಮ್ ಸಂಘಟನೆಗಳ ಬಗ್ಗೆ ಮಾಡಿರುವ ವಿಶ್ಲೇಷಣೆ ಎಲ್ಲಾ ಧರ್ಮಕ್ಕೂ ಅನ್ವಯಿಸುತ್ತದೆ. ಈ ಪುಸ್ತಕವನ್ನು ಓದಿ ಮುಗಿಸಿದಾಗ ನಾವು ಅರಿಯಬೇಕಾದ ಮುಖ್ಯ ಅಂಶವೇ ಇದಾಗುತ್ತದೆ.

ಬಿಜೆಪಿ ಪಕ್ಷದ ಬಹುಮತದಲ್ಲಿ ನಡೆಯುತ್ತಿರುವ ಭಾರತ ಸರ್ಕಾರವು ಸಿಎ ಎ ಮತ್ತು ಎನ್ ಆರ್ ಸಿ ಕಾಯ್ದೆಗಳನ್ನು ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ನಡೆದ ಘಟನಾವಳಿಗಳನ್ನು ಉಲ್ಲೇಖಿಸುವ ಲೇಖಕಿ ಮುಸ್ಲಿಮ್ ಯುವ ಸಮುದಾಯ, ಶಿಕ್ಷಿತ ಮುಸ್ಲಿಮ್ ಮಹಿಳಾ ವಿದ್ಯಾರ್ಥಿಗಳು ತೋರಿದ ಧೈರ್ಯ, ಪ್ರಾಮಾಣಿಕತೆ ಅನನ್ಯವಾದದ್ದು ಎಂದು ತೋರಿಸುತ್ತಾರೆ. ಪ್ರಮುಖವಾಗಿ ಶಾಹಿನ್ ಬಾಗ್ ಪ್ರತಿಭಟನೆ ಮುಸ್ಲಿಮ್ ಮಹಿಳೆಯರ ಸಹಿಷ್ಣುತೆ, ಭಾರತ ದೇಶದ ಮೇಲಿನ ಪ್ರೀತಿ-ವಿಶ್ವಾಸ, ತಾಳ್ಮೆ ಮತ್ತು ಅವರ ಹೋರಾಟದ ಸ್ಥಿರತೆಯ ಬಗೆಗಿನ ಲೇಖಕಿಯ ವಿವರಗಳು ಭಾರತೀಯ ಮುಸ್ಲಿಮ್ ಮಹಿಳೆಯರ ವಿಶಿಷ್ಟವಾದ ಅಭಿವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ನಮ್ಮ ಕಣ್ಮುಂದೆ ಮೂಡಿಸುತ್ತವೆ. ಇದು ನಮ್ಮ ಅಕ್ಕತಂಗಿಯರದ್ದೇ ಹೋರಾಟ ಎಂಬ ಭಾವನೆಯನ್ನು ಓದುಗರಲ್ಲಿ ತರುತ್ತಾರೆ. ಮನುಷ್ಯರಲ್ಲಿ ಸಹಜವಾಗಿರುವ ಈ ಸುಪ್ತ ಜೀವಪರ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಲೇಖಕಿಯ ಪ್ರಾಮಾಣಿಕ ಅಭಿವ್ಯಕ್ತಿ ಯಶಸ್ವಿಯಾಗಿದೆ.

ಕಳೆದ ವಾರ ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಸಂಘಟನೆಯಾದ ಮೊಹಾನಗರ್ ಸರ್ಬೊಜನೀನ್ ಪೂಜಾ ಕಮಿಟಿಯ ಅಧ್ಯಕ್ಷ ಮೋನಿಂದ್ರ ಕುಮಾರ್ ನಾಥ್ ಭಾರತದ ಪತ್ರಕರ್ತರೊಡನೆ ಸಿ ಎ ಎ ಕಾಯ್ದೆಯ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ: ‘ನಾವು ಬಾಂಗ್ಲಾದೇಶದ ಹಿಂದೂಗಳು. ಬಾಂಗ್ಲಾ ನಮ್ಮ ನಾಡು. ಈ ನಮ್ಮ ನಾಡನ್ನು ಬಿಟ್ಟು ನಾವು ನೆರೆಯ ದೇಶವಾದ ಭಾರತಕ್ಕೆ ಬಂದು ನೆಲಸಲು ಬಯಸುವುದಿಲ್ಲ. ಇದು ನಮ್ಮ ನೆಲ, ನಾವು ಇಲ್ಲಿಯೇ ಬದುಕಲು ಬಯಸುತ್ತೇವೆ. ಭಾರತ ದೇಶದ ಸಿ ಎ ಎ ನಮಗೆ ಒಪ್ಪಿಗೆಯಿಲ್ಲ. ನಮ್ಮ ನಾಡಿನಲ್ಲಿ ನಮಗಿರುವ ಸವಾಲುಗಳನ್ನು ನಾವು ಇಲ್ಲಿಯೇ ಬಗೆಹರಿಸಿಕೊಳ್ಳಲು ಬಯಸುತ್ತೇವೆ’ ಎಂದು ಹೇಳಿರುವ ಅವರ ಹೇಳಿಕೆಗಳು ಧರ್ಮದ ಆಧಾರದಲ್ಲಿ ದೇಶದ ಗಡಿಯನ್ನು ಬರೆಯುವ ಹುಸಿ ಪರಿಕಲ್ಪನೆಯನ್ನು ಒಡೆದುಹಾಕುತ್ತವೆ. ನಮ್ಮ ಸರ್ಕಾರದ ಸಿ ಎ ಎ ಕಾಯ್ದೆಯ ಪೆÇಳ್ಳುತನವನ್ನು ತೋರುತ್ತದೆ. ಜನರು ವಾಸಿಸುವ ಜಾಗ, ಆ ಜಾಗದ ಸಂಸ್ಕೃತಿ, ಜಲ, ಭಾಷೆ, ಉಡುಪು, ಆಹಾರ ಅವರ ಅಸ್ಮಿತೆಯನ್ನು ರೂಪಿಸಿರುತ್ತದೆ. ತನ್ನದೇ ಆದ ವಿಶಿಷ್ಟ ಅಸ್ಮಿತೆಯನ್ನು ಹೊಂದಿರುವ ಹಲವು ಸಂಸ್ಕೃತಿಗಳ ಪಂಗಡಗಳು ಜೀವಿಸುತ್ತಿರುವ ಭಾರತ ದೇಶದಲ್ಲಿ ‘ಒಂದು ಧರ್ಮ, ಒಂದು ಭಾಷೆ’ ಎನ್ನುವ ಸಿದ್ಧಾಂತ ಏನನ್ನು ಸೂಚಿಸುತ್ತದೆ? ಇದು ಖಂಡಿತ ನಮ್ಮ ದೇಶವಾಸಿಗಳ ಕೂಗಂತೂ ಅಲ್ಲ ಎಂದಲ್ಲವೇ?

ಮಹಿಳೆಯರ ಬಗ್ಗೆ ಪ್ರತ್ಯೇಕ ಅಧ್ಯಾಯವಿದ್ದರೂ ವಾಹಬ್ ಅವರ ಪುಸ್ತಕದುದ್ದಕ್ಕೂ ಮಹಿಳೆಯರ ವಿಷಯಗಳ ವಿಶ್ಲೇಷಣೆಗಳು ಹಾದುಹೋಗುವುದನ್ನು ನಾವು ಕಾಣಬಹುದು. ಮುಸ್ಲಿಮ್ ಮಹಿಳೆಯರ ಬಗ್ಗೆ ಒಂದು ಅಧ್ಯಾಯವನ್ನು ಮೀಸಲಿಟ್ಟಿರುವ ವಾಹಬ್ ಅವರು ಇಸ್ಲಾಮ್ ಧರ್ಮವು ಮಹಿಳೆಯನ್ನು ನೋಡುವ ರೀತಿಯನ್ನು ವಿಶ್ಲೇಷಿಸುತ್ತಾರೆ. ಮಹಿಳೆಯರು ಯಾವ ರೀತಿ ಬದುಕಬೇಕು, ಯಾವ ವಸ್ತ್ರ ತೊಡಬೇಕು, ಎಷ್ಟು ನಗಬೇಕು, ಯಾವಾಗ ಮನೆಯಿಂದ ಆಚೆ ಕಾಲಿಡಬೇಕು, ಯಾವಾಗ ಸ್ನಾನ ಮಾಡಬೇಕು, ಯಾವಾಗ ಮಲಗಬೇಕು, ಹೀಗೆ ಅವಳ ಆಚಾರ ವಿಚಾರಗಳೆಲ್ಲವನ್ನು ಬರೆದಿಟ್ಟಿರುವ ಇಸ್ಲಾಮ್ ಧರ್ಮದ ಕೈಪಿಡಿಗಳನ್ನು ಉಲ್ಲೇಖಿಸುತ್ತಾರೆ. ದಾರುಲ್ ಉಲೂಮ್ ದಿಯೋಬಂದ್‍ನ ಸಂಸ್ಥಾಪಕರಲ್ಲಿ ಒಬ್ಬರಾದ ಮೌಲಾನಾ ಅಶ್ರಫ್ ಅಲಿ ತನ್ವಿ ಅವರು ಬರೆದಿರುವ ಬಾಹಿಶ್ತಿ ಜೇವಾರ್ ಎಂಬ ಪುಸ್ತಕದಲ್ಲಿ ‘ಮಹಿಳೆಯರ ಬುದ್ಧಿಶಕ್ತಿ ಸಹಜವಾಗಿಯೇ ಮಂದವಾಗಿರುವ ಕಾರಣ ಆಕೆಗೆ ಶಿಕ್ಷಣದ ಅವಶ್ಯಕತೆಯಿಲ್ಲ’ ಎಂದು ಹೇಳುತ್ತಾರೆ. ಈ ಪುಸ್ತಕವು ಮುಸ್ಲಿಮ್ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಜೀವನ ಕ್ರಮಗಳನ್ನು ಭೋದಿಸುತ್ತದೆ. ಇಲ್ಲಿ ವಯ್ಯಕ್ತಿಕ ಸ್ವತಂತ್ರ ಚಿಂತನೆಗೆ ಆಸ್ಪದವಿಲ್ಲ. ಮಾರ್ಗದರ್ಶಿಯನ್ನು ಯತಾವತ್ಥಾಗಿ ಪಾಲಿಸುವುದಷ್ಟೇ ಅನುಯಾಯಿಗಳ ಕರ್ತವ್ಯ.

ಮುಸ್ಲಿಮ್ ಮಹಿಳೆಯರ ವಸ್ತ್ರಸಂಹಿತೆಯ ಉಗಮದ ಬಗ್ಗೆ ವಾಹಬ್ ಅವರು ಇಸ್ಲಾಮ್ ಚರಿತ್ರೆಯಲ್ಲಿ ಹಾದುಹೋಗುವ ಕೆಲವು ಕತೆಗಳನ್ನು ಉಲ್ಲೇಖಿತ್ತಾರೆ. ಈ ಕತೆಗಳ ಆಧಾರದ ಮೇಲೆ ಮುಸ್ಲಿಮ್ ಮಹಿಳೆಗೆ ಹಿಜಾಬ್ ಧರಿಸುವ ಮಾರ್ಗಸೂಚಿಯನ್ನು ನೀಡಿರುವುದರ ಸಮರ್ಥನೆಯನ್ನು ಧರ್ಮಚಿಂತಕರು ಮಾಡುತ್ತಾರೆ ಎಂದು ವಿವರಿಸುತ್ತಾರೆ. ಮುಸ್ಲಿಮ್ ಮಹಿಳೆಯ ರಕ್ಷಣೆಯ ಹೆಸರಿನಲ್ಲಿ ಹಿಜಾಬ್ ಧರಿಸಲೇಬೇಕೆನ್ನುವ ಸಮರ್ಥನೆ, ಹಿಜಾಬ್ ಧರಿಸದ ಹೆಣ್ಣು ಲೈಂಗಿಕ ಚಟುವಟಿಕೆಗಳಿಗೆ ಆಹ್ವಾನ ಕೊಟ್ಟಂತೆ ಎಂಬ ಪುರುಷರ ದೃಷ್ಟಿಕೋನ, ಇವೆಲ್ಲವುದರ ಬೂಟಾಟಿಕೆಯನ್ನು ವಿವರಿಸುತ್ತಾರೆ. ಮೂಲ ಇಸ್ಲಾಮ್ ಸಂದೇಶಗಳನ್ನು ಕೊಟ್ಟ ಪೆÇ್ರಫೆಟ್ ಮೊಹಮದರು ಮಹಿಳೆ ಹಿಜಾಬ್ ಧರಿಸಬೇಕೆಂದು ಪ್ರತ್ಯೇಕವಾಗಿ ಎಲ್ಲಿಯೂ ಉಲ್ಲೇಖ ಮಾಡಿಲ್ಲ ಎಂಬುದನ್ನು ಖುರಾನಿನ ಅಧ್ಯಾಯ 33, ಪಂಕ್ತಿ 35 ಮತ್ತು ಪಂಕ್ತಿ 26ರನ್ನು ಉಲ್ಲೇಖಿಸುತ್ತಾರೆ. ಈ ಪಂಕ್ತಿಗಳು ಪುರುಷರು ಮತ್ತು ಮಹಿಳೆಯರು ನ್ಯಾಯಸಮ್ಮತವಾಗಿ ಬದುಕುವ ರೀತಿಯನ್ನು ಹೇಳುತ್ತವೆ. ಇದಾದ ನಂತರದ ಟ್ರೆಂಚ್ ಯುದ್ಧಕ್ಕೂ ಮುಂಚೆ ಉಚ್ಚರಿಸಲಾದ ಪಂಕ್ತಿಗಳು ಪ್ರತ್ಯೇಕವಾಗಿ ಪುರುಷ ಮತ್ತು ಮಹಿಳೆಗಾಗಿ ಇವೆ. ಮಹಿಳೆಯರಿಗಾಗಿ ಇರುವ ಪಂಕ್ತಿಯಲ್ಲಿ ಮಹಿಳೆಯರು ತಮ್ಮ ಅಲಂಕಾರಕ್ಕೆ ಆಸ್ಪದ ಕೊಡದ ರೀತಿಯಲ್ಲಿ ತಮ್ಮ ಬಾಹ್ಯ ಸೊಗಸನ್ನು ಆದಷ್ಟು ಹೊರ ಪ್ರಪಂಚಕ್ಕೆ ತೋರದಿರುವಂತೆ ಸೂಚನೆಗಳ ವಿವರಗಳನ್ನು ಕೊಡುತ್ತದೆ. ಇದನ್ನು ವಿಶ್ಲೇಷಿಸುವ ವಾಹಬ್ ಅವರು ಹಿಜಾಬ್ ಎನ್ನುವ ಪದವನ್ನೇ ಖುರಾನ್ ಎಲ್ಲಿಯೂ ಬಳಸಿಲ್ಲವೆಂದು ಹೇಳುತ್ತಾರೆ. ಖುರಾನ್ ಮುಸ್ಲಿಮರನ್ನು, ಪುರುಷ ಮಹಿಳೆ ಇಬ್ಬರನ್ನೂ ಒಳಗೊಂಡಂತೆ, ನೈತಿಕವಾದ ಬದುಕು ಮಾಡಲು ಸೂಚಿಸುತ್ತದೆ. ಮಹಿಳೆಯರು ಪರದೆಯನ್ನು ಬಳಸಬೇಕು ಮತ್ತು ಮನೆಯಲ್ಲಿಯೇ ಇರಬೆಕು ಎನ್ನುವ ಪಂಕ್ತಿ ಖುರಾನಿನಲ್ಲಿ ಇರುವುದಾದರೂ ಇದನ್ನು ಹೇಳಲಾದ ಕಾಲಘಟ್ಟದ ಸನ್ನಿವೇಶಗಳನ್ನು ಪರಿಗಣಿಸಬೇಕು ಎಂದು ವಾಹಬ್ ಅವರು ಪ್ರತಿಪಾದಿಸುತ್ತಾರೆ. ಟ್ರೆಂಚ್ ಯುದ್ಧದ ಸಮಯದಲ್ಲಿ ಪೆÇಫೆಟ್ ಮೊಹಮ್ಮದರ ಹೆಂಡತಿಯರ ರಕ್ಷಣೆಯ ದೃಷ್ಟಿಯಿಂದ ಹೇಳಲಾಗಿರುವ ಪಂಕ್ತಿಯೆಂದು ಗುರುತಿಸಲಾದ ಈ ಸಾಲುಗಳನ್ನು ಈಗಿನ ಕಾಲಕ್ಕೆ ಅನುಸರಿಸುವುದು ಸಮಂಜಸವೆಲ್ಲವೆಂದು ಲೇಖಕಿ ಖುರಾನನ್ನು ಸಮರ್ಥಿಸಿಕೊಳ್ಳುತ್ತಾರೆ. ಮಹಿಳೆಯರು ಪರದೆಯನ್ನು ಬಳಸಿ ದೇಹವನ್ನು ಬಟ್ಟೆಯಿಂದ ಮುಚ್ಚಿದ ಮಾತ್ರಕ್ಕೆ ಪುರುಷರಲ್ಲಿನ ಕಾಮನೆಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಹಾಗೆಯೇ ಹಿಜಾಬ್ ಧರಿಸಿದ ಮಹಿಳೆ ಮಾತ್ರ ಸಭ್ಯ ಹಾಗು ನೈತಿಕ ಬದುಕು ಬಾಳುತ್ತಿದ್ದಾಳೆ ಎಂದಲ್ಲ ಎಂದು ಬಹಳ ಸ್ಪಷ್ಟವಾದ ನಿಲುವನ್ನು ವಾಹಬ್ ಅವರು ತೋರುತ್ತಾರೆ. ಹಾಗೆಯೇ ಮುಸ್ಲಿಮ್ ಮಹಿಳೆಯರ ವಾಸ್ತವದ ಬದುಕಿನ ಹೋರಾಟಗಳ ಅರಿವಿರುವ ವಾಹಬ್ ಅವರು ಮುಸ್ಲಿಮ್ ಮಹಿಳೆಯರು ತಮ್ಮ ಸ್ವಾತಂತ್ರ್ಯಕ್ಕಾಗಿ ಶಿಕ್ಷಣ ಪಡೆಯಲು ಮನೆಯಿಂದ ಕಾಲಿಡಲು ಅನುಕೂಲವಾದರೆ ಹಿಜಾಬ್ ಧರಿಸುವುದು ಅವರ ಆಯ್ಕೆಗೆ ಮತ್ತು ಸನ್ನಿವೇಶಗಳಿಗೆ ಬಿಟ್ಟಿದ್ದು ಎನ್ನುತ್ತಾರೆ. ಆ ದೃಷ್ಟಿಯಿಂದ ಮಾತ್ರ ಹಿಜಾಮ್ ಅಥವಾ ಬುರ್ಖಾ ಧರಿಸುವುದು ಮಹಿಳೆಯ ಆಯ್ಕೆಗೆ ಬಿಡಬೇಕು ಎಂದು ಪ್ರತಿಪಾದಿಸುತ್ತಾರೆ.

ಮುಸ್ಲಿಮ್ ಸಮುದಾಯಗಳಾದ ಯೆಮೆನ್ ಪ್ರದೇಶದ ಸುನ್ನಿ ಮುಸ್ಲಿಮರು ಮತ್ತು ಶಿಯಾ ಮುಸ್ಲಿಮರ ಬೊಹ್ರಾ ಪಂಗಡಗಳಲ್ಲಿ ಮಾತ್ರ ಕಾಣಬರುವ ಸ್ತ್ರೀ ಜನನಾಂಗದ ಊನಗೊಳಿಸುವಿಕೆಯ ಆಚರಣೆಯ ಬಗ್ಗೆ ಖುರಾನಿನಲ್ಲಿ ಉಲ್ಲೇಖವಿದೆಯೇ ಎಂದು ಲೇಖಕಿ ವಿಶ್ಲೇಷಿಸುತ್ತಾರೆ. ಪುರುಷರ ಸುನ್ನತಿಯನ್ನು ಖುರಾನ್ ಕಡ್ಡಾಯಗೊಳಿಸಿದೆಯೇ ಹೊರತು ಮಹಿಳೆಯ ಸುನ್ನತಿಗೆ ಸಮ್ಮತಿ ಸೂಚಿಸಿದ್ದರೂ ಕಡ್ಡಾಯಗೊಳಿಸಿಲ್ಲ ಎಂದು ವಿವರಿಸುವ ಪ್ರಯತ್ನಪಡುತ್ತಾರೆ. ಜನನಾಂಗ ಛ್ಚೇದನಕ್ಕೆ ಒಳಪಟ್ಟ ಬೊಹ್ರಾ ಸಮುದಾಯದ ಮರಿಯಾ ತಾಹರ್ ಅವರ ಸಂದರ್ಶನದ ಭಾಗಗಳು ಮತ್ತು ಅದರ ವಿರುದ್ಧದ ಮಹಿಳೆಯರ ಹೋರಾಟದ ತುಣುಕುಗಳನ್ನು ಇಲ್ಲಿ ಓದಬಹುದು. ವಾಹಬ್ ಅವರ ವೈಚಾರಿಕ ಮನಸ್ಸು ಈ ಎಲ್ಲಾ ಅವೈಜ್ಞಾನಿಕ ಮತ್ತು ಅಮಾನವೀಯ ಆಚರಣೆಗಳ ವಿರುದ್ಧ ಪುಸ್ತಕದುದ್ದಕ್ಕೂ ಸೆಣಸಾಡುವುದನ್ನು ನಾವು ಗಮನಿಸಬಹುದು. ಮುಸ್ಲಿಮ್ ಮಹಿಳೆಯರಿಗಾಗಿ ಮಿಡಿಯುವ ವಾಹಬ್ ಅವರು ಅತ್ಯಂತ ಧೈರ್ಯದಿಂದ ಖುರಾನಿನ ಪಂಕ್ತಿಗಳನ್ನು ಎಳೆ ಎಳೆಯಾಗಿ ವಿಶ್ಲೇಷಿಸುತ್ತಾ ಹೋಗುತ್ತಾರೆ. ಈ ಪಂಕ್ತಿಗಳನ್ನು ತಮಗೆ ಬೇಕಾದ್ದ ರೀತಿಯಲ್ಲಿ ಅರ್ಥೈಸುವ ಧರ್ಮಗುರುಗಳ ದೆಸೆಯಿಂದ ಬೆಂದಿರುವ ಮುಸ್ಲಿಮ್ ಮಹಿಳೆಯರ ಬವಣೆಗಳನ್ನು ಬಿಚ್ಚಿಡುತ್ತಾರೆ. ಮುಸ್ಲಿಮ್‍ರಲ್ಲಿ ಕಾಣುವ ತಿರ್ವಳಿ ತಲಾಕ್, ಹಲಾಲ್ ಮತ್ತು ಬಹುಪತ್ನಿತ್ವದ ಕರಾಳ ಮುಖಗಳನ್ನು ವಿವರಿಸಿದ್ದಾರೆ. ಈ ಸಾಮಾಜಿಕ ಕಳಂಕಗಳು ಖುರಾನಿನಿಂದ ಪ್ರೇರಿತವಾಗಿಲ್ಲ ಎಂದೇ ವಾಹಬ್ ಪ್ರತಿಪಾದಿಸುತ್ತಾರೆ. ಮುಸ್ಲಿಮ್ ಮಹಿಳೆಯ ಅವನತಿಗೆ ಮುಖ್ಯ ಕಾರಣ ಅತಿ ಹೆಚ್ಚು ನಂಬುವ ಅವಳದೇ ಕುಟುಂಬದ ಪುರುಷರಾಗಿರುತ್ತಾರೆ ಎಂದು ವಿಷಾದ ವ್ಯಕ್ತ ಪಡಿಸುತ್ತಾರೆ. ಆಕೆಯ ಈ ಪರಿಸ್ಥಿತಿಗೆ ಪಿತೃಪ್ರಧಾನ ಮನಸ್ಥಿತಿಯ ಇಸ್ಲಾಮ್ ಧರ್ಮಗುರುಗಳ ಪಾತ್ರವನ್ನು ಪ್ರಾಮಾಣಿಕವಾಗಿ ವಿವರಿಸುತ್ತಾರೆ.

ಮೂಲ ಖುರಾನ್ ಮತ್ತು ಪೆÇ್ರಫೆಟ್ ಮೊಹಮದರಿಗೆ ಇಸ್ಲಾಮ್-ಪೂರ್ವ ಅರೇಬಿಯಾ ಮಹಿಳೆಯರ ಪರಿಸ್ಥಿತಿಗಳನ್ನು ಸುಧಾರಿಸುವ ಉದ್ದೇಶವಿತ್ತು ಎಂದು ಲೇಖಕಿ ತಿಳಿಸುತ್ತಾರೆ. ಪ್ರೊಫೆಟ್ ಮೊಹಮ್ಮದ್ ಅವರ ಮೊದಲ ಪತ್ನಿ ಖದೀಜಾ ಬಗ್ಗೆ ಬರೆಯುತ್ತಾರೆ. ಇಸ್ಲಾಮ್-ಪೂರ್ವ ಕಾಲದಲ್ಲಿ ದಾಖಲಾಗಿರುವ ಏಕೈಕ ಸ್ವತಂತ್ರ ಮಹಿಳೆ ಖದೀಜಾ ಎಂದು ಉಲ್ಲೇಖಿಸುತ್ತಾರೆ. ಖದೀಜಾ ತನ್ನ ತಂದೆಯಿಂದ ಬಳುವಳಿಯಾಗಿ ಬಂದ ದೊಡ್ಡ ಉದ್ಯಮವನ್ನು ನಿಭಾಯಿಸುತ್ತಿದ್ದ ಆ ಕಾಲದ ಅತ್ಯಂತ ಶ್ರೀಮಂತ ವ್ಯಕ್ತಿ. ಆಕೆಯ ಉದ್ಯಮದಲ್ಲಿ ಸಹಾಯ ಮಾಡುತ್ತಿದ್ದ ಮೊಹಮ್ಮದರನ್ನು ಖದೀಜಾ ಮದುವೆಯಾದ ಮೇಲೆ ಆಕೆಯ ಶ್ರೀಮಂತಿಕೆ ಅಲ್ಲಾಹುವಿನ ಸಂದೇಶಗಳನ್ನು ಜಗತ್ತಿಗೆ ಹರಡಲು ಸಹಾಯವಾಯಿತು. ಹಾಗಾಗಿಯೆ ಖದೀಜಾ ಅವರನ್ನು ಇಸ್ಲಾಮ್ ಧರ್ಮದ ಎಲ್ಲಾ ಅನುಯಾಯಿಗಳ ತಾಯಿ ಎಂದೇ ಪರಿಗಣಿಸಲಾಗಿದೆ ಎಂದು ವಾಹಬ್ ಅವರು ಚರಿತ್ರೆಯನ್ನು ವಿವರಿಸುತ್ತಾರೆ. ಮೊಹಮ್ಮದರು ಅಲ್ಲಾಹುವಿನ ಸಂದೇಶಗಳನ್ನು ಪ್ರಸರಿಸುವ ಸನ್ನಿವೇಶದಲ್ಲಿ ಎದುರಾಗುವ ಅರಬ್ ಮೂಲನಿವಾಸಿಗಳ ಶತ್ರುತ್ವವನ್ನು ನಿಭಾಯಿಸಲು ಕೂಡ ಖದೀಜಾ ಮುಖ್ಯ ಪಾತ್ರ ವಹಿಸುತ್ತಾರೆ. ಇಂಥ ಸ್ವತಂತ್ರ ವ್ಯಕ್ತಿತ್ವದ ಖದೀಜಾ ಮೊಹಮ್ಮದರ ಸಹವರ್ತಿಯಾಗಿದ್ದುದು ಮೊಹಮ್ಮದರು ಮಹಿಳೆಯರನ್ನು ಗೌವದಿಂದ ಕಾಣುತ್ತಿದ್ದರು ಎಂಬುದನ್ನು ಪ್ರತಿಪಾದಿಸುತ್ತದೆ ಎಂದು ವಾಹಬ್ ತಿಳಿಸುತ್ತಾರೆ. ಹೀಗೆ ಖದೀಜಾ ಅವರನ್ನು ಪ್ರಸ್ತಾಪಿಸುವ ವಾಹಬ್ ಅವರು ಇಸ್ಲಾಮ್ ಧರ್ಮದ ಸಂದೇಶಗಳನ್ನು ಬರೆದಿಡುವ ಕಾಲಕ್ಕೆ ಮೊಹಮ್ಮದರ ಅಲಾಹುವಿನ ಪ್ರಸರಣೆಯಾಗಿ ಶತಮಾನವೇ ಕಳೆದಿತ್ತು ಎಂದು ದಾಖಲೆಗಳನ್ನು ಉಲ್ಲೇಖಿಸುತ್ತಾರೆ. ಹಾಗಾಗಿ ಮಹಿಳೆಯರ ಬಗ್ಗೆ ಪೆÇ್ರಫೆಟ್ ಮೊಹಮ್ಮದರು ಏನು ಹೇಳಿದ್ದರು ಎಂಬುದರ ಖಚಿತವಾದ ಪುರಾವೆ ಇಲ್ಲ. ಆದರೆ ಹದೀತ್ ನಲ್ಲಿ ವ್ಯಕ್ತವಾಗುವ ಕೆಲವು ಪಂಕ್ತಿಗಳನ್ನು ಈಗಿನ ಉಲೇಮಾಗಳು (ಇಸ್ಲಾಮ್ ಧರ್ಮಶಾಸ್ತ್ರಜ್ಞರು) ತಮಗೆ ತೋಚಿದ ಹಾಗೆ ಅರ್ಥೈಸುವುದನ್ನು ಹಲವು ಸಂಗತಿಗಳ ಮೂಲಕ ವಿವರಿಸುತ್ತಾರೆ.

ಮುಸ್ಲಿಮ್ ಮಹಿಳೆ ಮತ್ತು ಇಸ್ಲಾಮ್ ಬಗೆಗಿನ ಅಧ್ಯಯನಕ್ಕಾಗಿಯಷ್ಟೇ ಅಲ್ಲದೆ, ಭಾರತೀಯರಾಗಿ ನಾವು ಈ ಅಧ್ಯಾಯವನ್ನು ಓದಲೇಬೇಕಾಗಿದೆ. ಬಹು ಧರ್ಮೀಯರು ವಾಸಿಸುವ ನಮ್ಮ ಸಮಾಜದಲ್ಲಿ ಒಬ್ಬ ಪ್ರಜ್ಞಾವಂತ ಪ್ರಜೆಯಾಗಲು ಮತ್ತು ಸಾಮಾಜಿಕ – ರಾಜಕೀಯ ತಿರುವುಗಳಲ್ಲಿ ಭಾಗಿಯಾಗಲು ಭಿನ್ನ ಸಂಸ್ಕೃತಿಯ ಅರಿವಿರಬೇಕಾಗುತ್ತದೆ. ಈ ಅರಿವು ಅಂತಃಕರಣವನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತದೆ. ಇದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ಉಲ್ಬಣಗೊಂಡಿದ್ದ ಮುಸ್ಲಿಮ್ ಹೆಣ್ಣು ಮಕ್ಕಳ ಹಿಜಾಬ್ ವಿವಾದ. ಈ ವಿವಾದವನ್ನು ಅಗತ್ಯಕ್ಕಿಂತ ಹೆಚ್ಚು ಪ್ರಚಾರಗೊಳಿಸಿ ಮುಸ್ಲಿಮ್ ಹೆಣ್ಣು ಮಕ್ಕಳ ಶಿಕ್ಷಣದ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವಲ್ಲಿ ನಾವು ಸಹಕಾರಿಯಾಗಿದ್ದರೆ ಅದಕ್ಕೆ ಇತರ ಸಹಜೀವಿಗಳಲ್ಲಿರುವ ಭಿನ್ನತೆಯನ್ನು ಮತ್ತು ಇತರ ಧರ್ಮೀಯರ ಆಚರಣೆಗಳನ್ನು ವಸ್ತುನಿಷ್ಟವಾಗಿ ಅರ್ಥಮಾಡಿಕೊಳ್ಳದಿರುವ ನಮ್ಮ ಅಸೂಕ್ಷ್ಮತೆಯನ್ನು ತೋರಿಸುತ್ತದೆ. ಹಿಜಾಬ್ ಧರಿಸುವಿಕೆ ಸಾರಸಗಟಾಗಿ ಪ್ರಗತಿಯ ವಿರೋಧಿ ಎಂದು ಪ್ರತಿಪಾದಿಸುವ ಸನ್ನಿವೇಶದಲ್ಲಿ ನಾವಿಲ್ಲವೆಂಬುದೇ ವಿಷಾದನೀಯ. ಇದನ್ನು ಗ್ರಹಿಸಲು ಮುಸ್ಲಿಮ್ ಧರ್ಮದ ಇತಿಹಾಸ ಮತ್ತು ಅದರಲ್ಲಿ ಅತಿ ಹೆಚ್ಚು ಶೋಷಣೆಗೊಳಾಗಿರುವ ಮುಸ್ಲಿಮ್ ಮಹಿಳೆಯ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿರಬೇಕಾಗುತ್ತದೆ. ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಮುಸ್ಲಿಮ್ ಮಹಿಳೆಯ ವಸ್ತ್ರ ಸಂಹಿತೆ ಬಿಗಿಗೊಳ್ಳುತ್ತಿರುವುದನ್ನು ಲೇಖಕಿ ಕೂಡ ಗುರುತಿಸುತ್ತಾರೆ. ಹಾಗಾಗಿ ಮೊದಲು ಮುಸ್ಲಿಮ್ ಮಹಿಳೆಯರು ಹೇಗಾದರೂ ಮನೆಯಿಂದ ಹೊರಗೆ ಕಾಲಿಟ್ಟು ಶಾಲೆಗೆ ಸೇರುವ ಉದ್ದೇಶ ಮುಖ್ಯವಾಗುತ್ತದೆ. ಆಧುನಿಕ ಶಿಕ್ಷಣದ ಮೂಲಕ ಮುಂದೆ ಇದೇ ಮುಸ್ಲಿಮ್ ಮಹಿಳೆಯರು ತಮ್ಮ ವಸ್ತ್ರಗಳ ಆಯ್ಕೆಯ ಸ್ವಾತಂತ್ರ್ಯವನ್ನು ಪಡೆದುಕೊಳ್ಳುತ್ತಾರೆ ಎನ್ನುವ ಆಶಯ ಹಿಜಾಬ್ ಪರವಾದ ಪ್ರಗತಿಪರರ ನಿಲುವಾಗಿದೆ. ಆದರೆ ಅತ್ಯುನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಲವು ಮುಸ್ಲಿಮ್ ಮಹಿಳೆಯರೂ ಕೂಡ ಹಿಜಾಬ್ ಮತ್ತು ಬುರ್ಖಾವನ್ನು ತಮ್ಮ ಧರ್ಮ ಪಾಲನೆಯ ಕರ್ತವ್ಯವೆಂದು ಧರಿಸುವುದು ಕಳೆದ ದಶಕಗಳಲ್ಲಿ ಹೆಚ್ಚಾಗಿ ಕಾಣಬಹುದು. ಧಾರ್ಮಿಕ ಮೂಲಭೂತವಾದಕ್ಕೆ ವಿದ್ಯೆಯ ಕಣ್ಣಿಗೂ ಪೆÇರೆ ಹೊದಿಸುವ ಶಕ್ತಿಯಿದೆ. ಆದ್ದರಿಂದ ವೈಚಾರಿಕ ಶಿಕ್ಷಣದ ಅಗತ್ಯತೆಯನ್ನು ನಮ್ಮ ಶಿಕ್ಷಣ ವ್ಯವಸ್ಥೆ ಪೂರೈಸಲೇ ಬೇಕಾಗಿದೆ. ಕಳೆದ ಎರಡು ದಶಕಗಳಲ್ಲಿ ವೈಚಾರಿಕತೆಯ ಅವನತಿಯನ್ನು ನಾವು ಎಲ್ಲಾ ಕ್ಷೇತ್ರಗಳಲ್ಲಿಯೂ ಗಮನಿಸಬಹುದಾಗಿದೆ. ಇದಕ್ಕೆ 2008ರಲ್ಲಿ ನಾಗರಿಕತೆಗೆ ಕಾಲಿಟ್ಟ ಸ್ಮಾರ್ಟ್ ಫೆÇೀನ್ ತಂತ್ರಜ್ಞಾನದ ಕೊಡುಗೆ ಅತಿ ಹೆಚ್ಚು ಎಂದು ಚಿಂತಕರು ಮತ್ತು ವಿಜ್ಞಾನಿಗಳು ಗುರುತಿಸುತ್ತಾರೆ. ಈ ವಿದ್ಯಮಾನವನ್ನು ನೇರವಾಗಿ ವಿಶ್ಲೇಷಿಸದಿದ್ದರೂ ಆಧುನಿಕ ತಂತ್ರಜ್ಞಾನ ಮತ್ತು ಸಮೂಹ ಮಾಧ್ಯಮದ ಬಳಕೆಯ ವಿಸ್ತಾರ ಸ್ಮಾರ್ಟ್ ಫೆÇೀನ್ ಸಾಧನದ ಮೂಲಕ ಊಹೆಗೂ ನಿಲುಕಲಾರದಷ್ಟು ಬೆಳೆದಿರುವುದನ್ನು ವಾಹಬ್ ಗುರುತಿಸುತ್ತಾರೆ.

ಕೊನೆಯ ಅಧ್ಯಾಯವಾದ ‘ದಿ ಚೇಂಜಿಂಗ್ ಫೇಸ್ ಆಫ್ ಮುಸ್ಲಿಮ್ಸ್ ಇನ್ ಇಂಡಿಯಾ’ದಲ್ಲಿ ಮುಸ್ಲಿಮ್ ಸಮುದಾಯದ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಯ ಅವಶ್ಯಕತೆಯನ್ನು ಎತ್ತಿಹಿಡಿಯುವ ವಾಹಬ್ ಅವರು ಬಹಳ ಎಚ್ಚರಿಕೆಯಿಂದ ತಮ್ಮ ಅಭಿಪ್ರಾಯಗಳನ್ನು ನಮ್ಮ ಮುಂದಿಡುತ್ತಾರೆ. ವಾಹಬ್ ಅವರು ತಮ್ಮ ಪುಸ್ತಕದ ಮುಕ್ತಾಯದ ಮಾತುಗಳಲ್ಲಿ ಭಾರತೀಯ ಮುಸ್ಲಿಮ್ ಸಮುದಾಯದ ಈಗಿನ ಸಾಮಾಜಿಕ- ಆರ್ಥಿಕ- ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸುತ್ತಾರೆ. ಈ ಎಲ್ಲಾ ಆಯಾಮಗಳಲ್ಲಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಲೇಖಕಿ ಮುಸ್ಲಿಮ್ ಸಮುದಾಯದ ಸುಧಾರಣೆಗಿರುವ ಮಾರ್ಗಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ನಮ್ಮ ಮುಂದಿಡುತ್ತಾರೆ. ‘ಧರ್ಮ’ ಎಂಬ ಪರಿಕಲ್ಪನೆಯನ್ನು ಪ್ರಶ್ನಿಸದೆ, ‘ಧರ್ಮ’ದ ಪರಿಕಲ್ಪನೆಯನ್ನು ಸಂಪೂರ್ಣವಾಗಿ ಒಪ್ಪಿರುವ ವಾಹಬ್ ಅವರು ಸುಧಾರಣೆಗಳನ್ನು ಮುಂದಿಡುತ್ತಾರೆ. ಈ ಸುಧಾರಣೆಗಳು ಹೀಗಿವೆ: ಭಾರತೀಯ ಮುಸ್ಲಿಮರ ಸೋಚನೀಯ ಸ್ಥಿತಿಯನ್ನು ಸುಧಾರಿಸಲು ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳು; ಮುಸ್ಲಿಮ್ ಸಮುದಾಯ ಆಧುನಿಕ ಶಿಕ್ಷಣದ ಪ್ರಸರಣದಲ್ಲಿ ಕೈಜೋಡಿಸುವುದು ಮತ್ತು ಮುಸ್ಲಿಮ್ ಜಗತ್ತು ಸೌದಿ ಅರೆಬೀಯಾದ ಹಿಡಿತದಿಂದ ಬಿಡಿಸಿಕೊಳ್ಳುವುದು.

ಸ್ವಾತಂತ್ರಾ ನಂತರದ ಭಾರತದ ಎಲ್ಲಾ ಸರ್ಕಾರಗಳ ಮುಸ್ಲಿಮ್ ಸಮುದಾಯದ ಮೇಲಿನ ಧೋರಣೆಗಳನ್ನು ಪುಸ್ತಕದುದ್ದಕ್ಕೂ ಲೇಖಕಿ ವಿಶ್ಲೇಷಿಸಿದ್ದಾರೆ. ಲೇಖಕಿಯು ಮುಸ್ಲಿಮ್ ಸಮುದಾಯಕ್ಕೆ ಪ್ರತ್ಯೇಕವಾದ ಸರ್ಕಾರದ ಯೋಜನೆಗಳ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಾರೆ. 2006ರಲ್ಲಿ ಸಚಾರ್ ಕಮಿಟಿ ವರದಿಯ ಆಧಾರದಲ್ಲಿ ಭಾರತ ಸರ್ಕಾರವು ಮಿನಿಸ್ಟ್ರಿ ಆಫ್ ಮೈನಾರಿಟಿ ಅಫೇರ್ಸ್ ಪ್ರಾರಂಭಿಸಿತು. ಆದರೆ ಈ ಸಚಿವಾಲಯ ಭಾರತದ ಎಲ್ಲಾ ಅಲ್ಪಸಂಖ್ಯಾತರ ಹಿತವನ್ನು ಕಾಯಬೇಕಾದ್ದರಿಂದ ಮುಸ್ಲಿಮರ ವಿಶಿಷ್ಟವಾದ ಸಮಸ್ಯೆಗಳಿಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ ಎಂದು ಲೇಖಕಿ ಹೇಳುತ್ತಾರೆ. ಭಾರತ ಸರ್ಕಾರದ ಬಹುಪಾಲು ಸುಧಾರಣಾ ಯೋಜನೆಗಳ ಫಲವನ್ನು ಮುಸ್ಲಿಮ್ ಸಮುದಾಯ ಬಳಸಿಕೊಳ್ಳುತ್ತಿಲ್ಲ ಎಂದು ಹೇಳುವ ಲೇಖಕಿ ಇದಕ್ಕೆ ಮುಖ್ಯ ಕಾರಣಗಳಾಗಿ ಸಮುದಾಯದಲ್ಲಿರುವ ದಾರಿದ್ರ್ಯ ಮತ್ತು ಅನಕ್ಷರತೆಯನ್ನು ವಿವರಿಸುತ್ತಾರೆ. ಹಾಗಾಗಿ ಮುಸ್ಲಿಮ್ ಸಮುದಾಯವನ್ನು, ಅದರಲ್ಲೂ ಮುಖ್ಯವಾಗಿ ಯುವಜನರನ್ನು ಸುಧಾರಣೆ ಮಾಡಲು ಸರ್ಕಾರ ಬಹು ಆಯಾಮಗಳ ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದು ಲೇಖಕಿ ಸೂಚಿಸುತ್ತಾರೆ.

ಮುಸ್ಲಿಮ್ ಸಮುದಾಯದ ಸುಧಾರಣೆಗೆ ಆಧುನಿಕ ಶಿಕ್ಷಣ ಬಹುಮುಖ್ಯ ದಾರಿ ಎಂದು ಲೇಖಕಿ ಅಭಿಪ್ರಾಯ ಪಡುತ್ತಾರೆ. ಸರ್ಕಾರದ ಸಹಾಯವನ್ನು ಮಾತ್ರ ಅವಲಂಬಿತವಾಗದೆ ಮುಸ್ಲಿಮ್ ಸಮುದಾಯ ತನ್ನ ವರ್ಗಕ್ಕೆ ಶಿಕ್ಷಣದ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಹೊರಬೇಕು ಎನ್ನುತ್ತಾರೆ. ಈ ನಿಟ್ಟಿನಲ್ಲಿ ವಾಹಬ್ ಅವರು ಜûಕತ್ ರೂಪದಲ್ಲಿ ಪ್ರತಿ ವರ್ಷವೂ ಮದ್ರಾಸಗಳಿಗೆ ನೀಡುವ ದಾನದಿಂದ ಮದ್ರಾಸ ಮತ್ತು ಮುಸ್ಲಿಮ್ ಧಾರ್ಮಿಕ ಸಂಸ್ಥೆಗಳು ಆಧುನಿಕ ಶಿಕ್ಷಣದ ಶಾಲಾ ಕಾಲೇಜುಗಳನ್ನು ತೆರೆಯಬೇಕು ಎಂದು ಆಶಿಸುತ್ತಾರೆ. ಹಾಗೆಯೇ ವಕ್ಫ್ ಸುಪರ್ತಿಯಲ್ಲಿರುವ ಖಾಲಿ ಜಾಗಗಳಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆದು ಸ್ಮಾರ್ಟ್ ತಂತ್ರಜ್ಞಾನದ ಜೊತೆ ಉತ್ತಮ ಶಿಕ್ಷಣವನ್ನು ಮುಸ್ಲಿಮ್ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಅಭಿಪ್ರಾಯಪಡುತ್ತಾರೆ. ಉನ್ನತ ವರ್ಗದ ಮುಸ್ಲಿಮರು ಅವರದೇ ಸಮುದಾಯದ ಅನಕ್ಷರಸ್ಥ ಮುಸ್ಲಿಮರನ್ನು ವಿದ್ಯಾವಂತರನ್ನಾಗಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎನ್ನುತ್ತಾರೆ. ಮುಸ್ಲಿಮ್ ಸಮುದಾಯ ಒಗ್ಗಟ್ಟಿನಿಂದ ಸರ್ಕಾರೇತರ ಸಂಸ್ಥೆಗಳನ್ನು ಶಿಕ್ಷಣದ ಉದ್ದೇಶಕ್ಕಾಗಿಯೇ ಕಟ್ಟಬೇಕು ಎನ್ನುತ್ತಾರೆ. ವಿಫೆÇ್ರ ಮತ್ತು ಹಮ್ದರ್ದ್ ಸಂಸ್ಥೆಗಳನ್ನು ಉಲ್ಲೇಖಿಸುವ ಲೇಖಕಿ ಅಜೀಮ್ ಪ್ರೇಮ್ ಜಿ ಅವರು ಮಾಡುವ ಅಪಾರ ದಾನವನ್ನು ಪ್ರಸ್ತಾಪಿಸುತ್ತಾರೆ. ಆದರೆ ಇವರು ಮುಸ್ಲಿಮ್ ಸಮುದಾಯಕ್ಕೆ ಪ್ರತ್ಯೇಕವಾದ ಜವಾಬ್ದಾರಿಯನ್ನು ತೋರಿಲ್ಲ ಎನ್ನುತ್ತಾರೆ. ಅಜೀಮ್ ಪ್ರೇಮ್ ಜಿ ಅವರ ಸಂಸ್ಥೆಯ ವಿದ್ಯಾ ಸಂಸ್ಥೆಗಳು ಅಥವಾ ಅವರ ಕಂಪನಿಯ ಚಾರಿಟಿ ಕೆಲಸಗಳು ಧರ್ಮಾತೀತವಾಗಿವೆ ಎನ್ನುತ್ತಾರೆ.
ಇಲ್ಲಿ ಲೇಖಕಿಯ ಉದ್ದೇಶಗಳು ಪ್ರಾಮಾಣಿಕವಾಗಿದ್ದರೂ ಅವರು ಬಯಸುವ ಸುಧಾರಣೆಗಳು ದ್ವಂದ್ವದಿಂದ ಕೂಡಿರುವ ಹಾಗೆ ಕಾಣುತ್ತವೆ. ಆಧುನಿಕ ಶಿಕ್ಷಣವನ್ನು ಬಹಿಷ್ಕರಿಸುವ ಇಸ್ಲಾಮ್ ಸಂಘಟನೆಗಳು ಮತ್ತು ಮದ್ರಾಸಗಳಿಂದ ಈ ಸುಧಾರಣೆಗಳನ್ನು ಬಯಸುವುದು ವೈಚಾರಿಕ ಪ್ರಜ್ಞೆಯಲ್ಲಿನ ದ್ವಂದ್ವವಾಗಿ ಕಾಣುತ್ತವೆ. ಮದ್ರಾಸದ ಮೌಲ್ವಿಗಳು, ಇಮಾಮ್‍ಗಳನ್ನು ಸಮರ್ಥಿಸಿಕೊಳ್ಳುವ ಲೇಖಕಿಯ ಸಲಹೆಗಳು ಖುರಾನ್ ಪಂಕ್ತಿಗಳನ್ನು ತಮಗಿಷ್ಟ ಬಂದಂತೆ ಅರ್ಥೈಸುವ ಮೂಲಕ ಮುಸ್ಲಿಮ್ ಸಮುದಾಯದಲ್ಲಿ ಮೂಡಿಸುತ್ತಿರುವ ಅನಾಹುತಗಳ ಬಗ್ಗೆ ಲೇಖಕಿಯದೇ ವಿಶ್ಲೇಷಣೆಗಳನ್ನು ಗೌಣವಾಗಿಸುತ್ತವೆ. ವಿಶೇಷವಾಗಿ ಮಹಿಳೆ ಖುರಾನ್ ಶಿಕ್ಷಣದ ಹೊರತು ಬೇರಾವ ಶಿಕ್ಷಣಕ್ಕೂ ಅರ್ಹಳಲ್ಲ ಎಂದು ಬಹಿಷ್ಕರಿಸುವ ಮದ್ರಾಸಗಳಿಂದ ಈ ಸುಧಾರಣೆಗಳನ್ನು ಬಯಸುವುದು ಎಷ್ಟು ಸಮಂಜಸ ಎನ್ನಿಸುತ್ತದೆ. ಮದ್ರಾಸಾಗಳಲ್ಲೇ ಸುಧಾರಣೆಗಳನ್ನು ಅಪೇಕ್ಷಿಸಬೇಕಾದರೆ ‘ಧರ್ಮ’ದ ಅಫೀಮಿನಿಂದ ಆಚೆ ಬಂದು ತನ್ನನ್ನು ಹೊಸ ಆಲೋಚನೆಗಳಿಗೆ ಒಡ್ಡಿಕೊಳ್ಳುವ ಸಾಮರ್ಥ್ಯವನ್ನು ಇಸ್ಲಾಮ್ ತೋರಿಸಬೇಕಾಗುತ್ತದೆ. ಈ ಆಶಯವನ್ನೇ ಲೇಖಕಿ ಹೊಂದಿದ್ದಾರೆ ಎಂದೆನಿಸುತ್ತದೆ. ಈ ಆಶಯ ಫಲ ಹೊಂದುವುದಕ್ಕೆ ಧರ್ಮಾತೀತ ಮಾನವೀಯ ಮೌಲ್ಯಗಳ ಮೂಲಕ ಜೀವನಶೈಲಿಯನ್ನು ರೂಪಿಸಿಕೊಳ್ಳುವ ಸಾಧ್ಯತೆಯನ್ನು ಒಪ್ಪಬೇಕಾಗುತ್ತದೆ. ಸಾಂಸ್ಥಿಕ ಧರ್ಮದ ಅನಿವಾರ್ಯತೆಯನ್ನು ತಿರಸ್ಕರಿಸುವ ಸಾಹಸವನ್ನು ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಸುಧಾರಣೆಯ ಮಾತುಗಳು ಕೇವಲ ಮೇಲ್ಪದರದ ಬದಲಾವಣೆಗಳನ್ನು ತಂದು ಆಂತರ್ಯದಲ್ಲಿ ಅದೇ ಮೂಲಭೂತವಾದವನ್ನು ಉಸಿರಾಡುವ ಸಮಾಜ ಸೃಷ್ಟಿಯಾಗುತ್ತದೆ. ನಾವು ಈಗ ಜೀವಿಸುತ್ತಿರುವ ಜಗತ್ತಿನ ಹಾಗೆ. ಈ ಮಾತುಗಳು ಎಲ್ಲಾ ಸಾಂಸ್ಥಿಕ ಧರ್ಮಗಳಿಗೂ ಅನ್ವಯಿಸುತ್ತವೆ.
ಮುಸ್ಲಿಮ್ ಜಗತ್ತು ಸೌದಿ ಅರೇಬಿಯಾದ ಪ್ರಭಾವದಿಂದ ಆಚೆ ಬರಬೇಕು ಎಂದು ವಾಹಬ್ ಅವರು ಹೇಳುತ್ತಾರೆ. ಸೌದಿಯ ನಾಯಕತ್ವಕ್ಕೆ ಪರ್ಯಾಯವಾಗಿ ಭಾರತ ಮತ್ತು ಇಂಡೋನೇಷಿಯ ಪ್ರಾಂತ್ಯಗಳ ನಾಯಕತ್ವವನ್ನು ವಾಹಬ್ ಅವರು ಸೂಚಿಸುತ್ತಾರೆ. ಮುಸ್ಲಿಮರ ಪವಿತ್ರ ಸ್ಥಳಗಳ ಆಯವ್ಯಯ ಮತ್ತು ವ್ಯಹಾರಗಳನ್ನು ನಿರ್ದೇಶಿಸಲು ಒಂದು ಅಂತರಾಷ್ಟ್ರೀಯ ಮುಸ್ಲಿಮ್ ಒಕ್ಕೂಟ ಏರ್ಪಡಬೇಕು ಎಂದು ಸಲಹೆ ನೀಡುತ್ತಾರೆ. ಸೌದಿ ಅರೇಬಿಯಾ ಮುಸ್ಲಿಮ್ ಉಗ್ರವಾದಿಗಳನ್ನು ಸೃಷ್ಟಿಸಲು ಕಾರಣರಾದರು. ಇದರಿಂದ ಮುಸ್ಲಿಮರು ಉಗ್ರವಾದಿಗಳು ಎಂಬ ಪಟ್ಟ ಧರಿಸಬೇಕಾಯಿತು ಎಂದು ವಾಹಬ್ ತಿಳಿಸುತ್ತಾರೆ. ಆದರೆ ಸೌದಿ ಅರೇಬಿಯಾದ ರಾಜರುಗಳು ಪೆÇೀಷಣೆಕೊಟ್ಟು ಬೆಳೆಸಿದ್ದ ಪುರೋಹಿತಶಾಹಿ ವರ್ಗದ ಪಾತ್ರದ ಬಗ್ಗೆ ವಾಹಬ್ ಅವರು ವಿಚಾರ ಮಾಡುವುದಿಲ್ಲ. ಸೌದಿ ರಾಜರ ಪುರೋಹಿತಶಾಹಿ ಎಷ್ಟು ಪ್ರಬಲವಾಗಿ ಬೆಳೆಯಿತೆಂದರೆ ಕೊನೆಗೆ ಸೌದಿ ರಾಜರ ನಿರ್ಧಾರಗಳೆಲ್ಲವೂ ಈ ಧರ್ಮಗುರುಗಳ ಒಪ್ಪಿಗೆಯಿಲ್ಲದೆ ಚಲಾವಣೆಗೆ ಬರುತ್ತಿರಲಿಲ್ಲ. ಇದರಿಂದ ಅತಿ ಹೆಚ್ಚು ಶಕ್ತಿ ಪಡೆದ ‘ಧರ್ಮದ ಪೆÇೀಲೀಸ್‍ಗಿರಿ’ ಸೌದಿ ಜನರ ದಿನ ನಿತ್ಯದ ಜೀವನವನ್ನು ಭೀಕರಗೊಳಿಸಿತ್ತು ಎಂದು ಪತ್ರಕರ್ತ ಗ್ರೀಯಾಮ್ ವುಡ್ ತಮ್ಮ ಸೌದಿಯ ಈಗಿನ ಆಡಳಿತ ಅಧಿಕಾರಿಗಳ ಜೊತೆಗಿನ ಸಂದರ್ಶನಗಳ ಮೂಲಕ ತಿಳಿಸುತ್ತಾರೆ. ಸೌದಿಯ ಈಗಿನ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಈ ಪುರೋಹಿತಶಾಹಿ ವರ್ಗವನ್ನು ಅಶಕ್ತಗೊಳಿಸಿ ಸೌದಿ ಎಂಬ ಮುಸ್ಲಿಮ್ ದೇಶವನ್ನು ಆಧುನಿಕತೆಗೆ ಪರಿಚಯಿಸುವ ಕೆಲಸದಲ್ಲಿ (ವಿಷನ್ 2030) ತೊಡಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸೌದಿಯ ‘ವಹಾಬಿಸಮ್’ ಅನ್ನು ಹತ್ತಿಕ್ಕಲು ಸಹಕಾರಿಯಾಗಿದೆ ಎಂದು ಮೇಲ್ನೋಟಕ್ಕೆ ಕಾಣಸಿಗುತ್ತದೆ ಎಂದು ಪಶ್ಚಿಮದ ಇಸ್ಲಾಮ್ ತಜ್ಞರು ಅಭಿಪ್ರಾಯಪಡುತ್ತಾರೆ. ಈ ಬದಲಾವಣೆಗಳ ಹಿನ್ನೆಲೆಯಲ್ಲಿ ವಾಹಬ್ ಅವರು ಒಂದು ಸ್ಥೂಲ ಚಿತ್ರಣವನ್ನು ತಲುಪಿಲ್ಲವೆಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಏಕೆಂದರೆ, ಸೌದಿಯ ನಾಯಕತ್ವಕ್ಕೆ ಪರ್ಯಾಯವಾಗಿ ವಾಹಬ್ ಅವರು ಸೂಚಿಸುವ ಅಂತರಾಷ್ಟ್ರೀಯ ಸಂಸ್ಥೆಯಾಗಲಿ ಅಥವಾ ಸೌದಿ ಬದಲು ಮತ್ತೊಂದು ಪ್ರಾಂತ್ಯದ ನಾಯಕತ್ವ ಬದಲಾವಣೆ ಈಗಿನ ಮುಸ್ಲಿಮ್ ಜಗತ್ತಿನ ವಾಸ್ತವತೆಗೆ ಬಹು ದೂರವಾದ ಪರಿಕಲ್ಪನೆಯಾಗಿ ಕಾಣುತ್ತದೆ. ವಾಹಬ್ ಅವರು ಆಶಿಸುವಂತೆ ಈ ರೀತಿಯ ಸಂಸ್ಥೆಯ ಜನನಕ್ಕೆ ಈಗಿರುವ ಪ್ರಪಂಚದ ಮುಸ್ಲಿಮ್ ರಾಷ್ಟ್ರಗಳ ಅತ್ಯಂತ ಮುಕ್ತ ಮನಸ್ಸಿನ, ಬೌದ್ಧಿಕ ಪಕ್ವತೆಯ, ನೈತಿಕ ಮೌಲ್ಯಗಳಿಗೆ ಗೌರವ ಕೊಡುವ ಮನಸ್ಸುಗಳು ಒಂದಾಗಬೇಕಾಗುತ್ತದೆ. ಈ ಒಗ್ಗೂಡುವಿಕೆ ಈಗಿನ ಮುಸ್ಲಿಮ್ ಆಳ್ವಿಕೆಗಳಲ್ಲಿ ಊಹಿಸಲೂ ಆಗದಷ್ಟು ದೂರವಿರುವ ಪರಿಕಲ್ಪನೆ. ಆಧುನಿಕತೆಗೆ ತೆರೆದುಕೊಳ್ಳಲು ನಾವು ಸಿದ್ಧ ಎಂದು ಹೇಳಿಕೊಳ್ಳುವ ಈಗಿನ ಸೌದಿ ರಾಜಕುಮಾರ ಕೂಡ ತನ್ನ ಆಳ್ವಿಕೆಯ ವಿರುದ್ಧ ಒಂದು ಸಣ್ಣ ಆಲೋಚನೆಯುಳ್ಳವರನ್ನೂ ಕೂಡ ಸೆರೆಮನೆಗೆ ಕಳಿಸುವ ಕ್ರಮದಲ್ಲಿ ನಂಬಿಕೆಯುಳ್ಳವರು. ಹಾಗಾಗಿ ಕೇವಲ ಧಾರ್ಮಿಕ ಸರ್ವಾಧಿಕಾರವಷ್ಟೇ ಅಲ್ಲದೆ ವ್ಯಕ್ತಿಗತ ಸರ್ವಾಧಿಕಾರದ ಹವ್ಯಾಸದಿಂದಲೂ ಮುಸ್ಲಿಮ್ ರಾಷ್ಟ್ರಗಳು ಮೊದಲು ಬಿಡಿಸಿಕೊಳ್ಳಬೇಕಾಗಿದೆ. ಆದರೆ ವಾಹಬ್ ಅವರ ಸಲಹೆಗಳು ಒಂದು ಉನ್ನತ ಉದ್ದೇಶವಿರುವ ಆಶಯ. ಇಂತಹ ಆಶಯಗಳೇ ಮುಂದೆ ವ್ಯಕ್ತಿ ಸ್ವಾತಂತ್ರ್ಯವನ್ನು ಪೆÇೀಷಿಸುವ ಪ್ರಜಾಪ್ರಭುತ್ವ ವ್ಯವಸ್ಥೆಗಳಿಗೆ ದಾರಿ ಮಾಡಿಕೊಡಬಹುದು.

ವಾಹಬ್ ಅವರು ಪ್ರತಿಪಾದಿಸುವಂತೆ ಭಾರತ ದೇಶ ಮುಸ್ಲಿಮರಿಗೆ ಎಂದಿಗೂ ಶಾಂತಿಯ ನಾಡು. ಭಾರತೀಯ ಮುಸ್ಲಿಮರ ವಿಶಿಷ್ಟವಾದ ಬೌದ್ಧಿಕ ಸೃಜನಶೀಲತೆ ಮುಸ್ಲಿಮ್ ಜಗತ್ತಿಗೆ ಮಾದರಿ ನಾಯಕತ್ವ ನೀಡಬಲ್ಲದು. ಈ ಸೃಜನಶೀಲತೆ ಪ್ರಜಾಪ್ರಭುತ್ವದ ವಾತಾವರಣದಲ್ಲಿ ಅರಳಿದ ಕುಸುಮ. ಇದಕ್ಕೆ ಪೂರಕವಾಗಿ ಭಾರತ ದೇಶದ ಪ್ರಜೆಗಳಾದ ನಾವೆಲ್ಲರೂ ಧರ್ಮಗಳ ನಡುವಿನ ಸಂವಾದಕ್ಕೆ ಅವಕಾಶಗಳನ್ನು ಒದಗಿಸಬೇಕು. ಸಂವಾದದ ಮೂಲಕ ನಮಗೆ ತಿಳಿಯುವ ವಿಷಯಗಳು ಅಪಾರ. ಬಹುತ್ವವನ್ನು ಸಂಭ್ರಮಿಸುವ, ಸಹಜ ಮಾನವೀಯ ಸಂಬಂಧಗಳ ಪ್ರೀತಿ ವಿಶ್ವಾಸಗಳಲ್ಲಿ ಬೆರೆತು ಹೋಗಿದ್ದ ‘ಭಾರತೀಯತೆ’ ಎಂಬ ಅಸ್ಮಿತೆ ಇಂದು ‘ರಾಷ್ಟೀಯತೆ’ ಎಂಬ ಸಂಕುಚಿತ ಸಿದ್ಧಾಂತಕ್ಕೆ ಬಲಿಯಾಗುತ್ತಿದೆ. ರಾಷ್ಟ್ರೀಯತೆಯೆಂದರೆ ಏಕ ಸಂಸ್ಕೃತಿಯನ್ನು ಬಲವಂತವಾಗಿ ಒಪ್ಪಿಕೊಳ್ಳುವ ಮನಸ್ಥಿತಿಯನ್ನಾಗಿಸಿರುವ ಕಾಲದಲ್ಲಿ ನಾವಿದ್ದೇವೆ. ಇತರ ಧರ್ಮೀಯರ ಜೊತೆಗೆ ಸಹಬಾಳ್ವೆ ಮಾಡುವ ದಿಕ್ಕಿನತ್ತ ನಡೆಯುತ್ತಿದ್ದ ಭಾರತದ ಮನಸ್ಸಿಗೆ ಇತ್ತೀಚೆಗಿನ ಅಪಾಯಕಾರಿ ಬದಲಾವಣೆಗಳನ್ನು ಹಿಮ್ಮೆಟ್ಟುವ ಶಕ್ತಿ ಇದೆ. ವಾಹಬ್ ಅವರ ಈ ಪುಸ್ತಕ ಈಗಿನ ಕಾಲಘಟ್ಟದಲ್ಲಿ ಅತ್ಯಂತ ಅನಿವಾರ್ಯವಾಗಿ ಬೇಕಾದ ಸಹಜ ಕುತೂಹಲ, ಪ್ರೀತಿ ಮತ್ತು ಅಂತಃಕರಣವನ್ನು ಬಡಿದೆಬ್ಬಿಸುವ ಕೆಲಸವನ್ನು ಮಾಡುತ್ತದೆ. ಭಾರತೀಯ ಮುಸ್ಲಿಮರ ಬವಣೆಗಳನ್ನು ತಿಳಿದುಕೊಳ್ಳುವ ಮನಸ್ಸು ಮತ್ತು ಆ ಮೂಲಕ ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ಅದು ರಾಜಕೀಯ ತಿರುವುಗಳಲ್ಲಿ ಭಾಗೀದಾರರಾಗುವುದು, ಸಾಂಸ್ಕೃತಿಕ ದಬ್ಬಾಳಿಕೆಯನ್ನು ತಿರಸ್ಕರಿಸುವುದು, ಬಹುತ್ವಕ್ಕೆ ಅಪಾಯಾಕಾರಿಯಾದ ಧರ್ಮಾಂಧತೆಯನ್ನು ತಿರಸ್ಕರಿಸುವುದು, ಶಿಕ್ಷಣದಲ್ಲಿ ವೈಚಾರಿಕತೆಯ ಸ್ಪರ್ಶ ನೀಡುವುದು, ವ್ಯಾವಹಾರಿಕ ಜೀವನವಷ್ಟೇ ಮಾಡದೆ ಸಹಬಾಳ್ವೆಯ ಸೌಹಾರ್ದಯುತ ಸಮಾಜವನ್ನು ಕಟ್ಟುವಲ್ಲಿ ಕೈಜೋಡಿಸುವುದು ಇವೆಲ್ಲಾ ಭಾರತೀಯ ಪ್ರಜೆಯ ಜವಾಬ್ದಾರಿಗಳಾಗಿವೆ. ಈ ಜವಾಬ್ದಾರಿಗಳನ್ನು ನೆನಪಿಸುವಂತ ಕೆಲಸವನ್ನು ವಾಹಬ್ ಅವರ ಪುಸ್ತಕ ಅತ್ಯಂತ ಸಮರ್ಥವಾಗಿ ಮಾಡುತ್ತದೆ.

ಅಲ್ಲದೆ ಗಜಾಲಾ ವಾಹಬ್ ಒಬ್ಬ ಮುಸ್ಲಿಮ್ ಮಹಿಳೆಯಾಗಿ ಗುರುತಿಸಿಕೊಂಡು ತನ್ನದೇ ಸಮುದಾಯದ ಬಗ್ಗೆ ಅತ್ಯಂತ ಸಂಯಮ, ಅಂತಃಕರಣ ಮತ್ತು ವೈಚಾರಿಕತೆಯಿಂದ ನೈಜ ಕಾಳಜಿಯ ಈ ಅಮೂಲ್ಯವಾದ ಪುಸ್ತಕವನ್ನು ಬರೆದಿರುವುದು ಅವರು ನಿರ್ವಹಿಸಿರುವ ಗುರುತರ ಜವಾಬ್ದಾರಿಯನ್ನು ತೋರಿಸುತ್ತದೆ. ಹಾಗೆಯೇ ಮುಸ್ಲಿಮ್ ಮಹಿಳೆಯರಿಗಷ್ಟೇ ಅಲ್ಲದೆ ಪ್ರತಿಯೊಬ್ಬ ಮಹಿಳೆಗೂ ವೈಚಾರಿಕ ಸಾಮರ್ಥ್ಯವುಳ್ಳ ಮಾದರಿ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಒಬ್ಬ ಕಲಿತ ಮಹಿಳೆ ವೈಚಾರಿಕ ಮತ್ತು ಮಾನವೀಯ ಪ್ರಜ್ಞೆಯೊಂದಿಗೆ ಸೃಷ್ಟಿಸಬಹುದಾದ ಅಧ್ಯಯನಶೀಲ ಬರವಣಿಗೆಗೂ ಮಾದರಿಯಾಗುತ್ತಾರೆ.

– ಡಾ. ಸುಶಿ ಕಾಡನಕುಪ್ಪೆ

ಪಿ.ಎಸ್.: ಇದು ಈ ಪುಸ್ತಕದ ಸಂಕ್ಷಿಪ್ತ ವಿಮರ್ಶೆ. ಪುಸ್ತಕ ಎತ್ತಿರುವ ಹಲವು ಗಂಭೀರ ವಿಷಗಳ ಬಗ್ಗೆ ತಿಳಿಯಲು ಪುಸ್ತಕವನ್ನು ಅಧ್ಯಯನಶೀಲ ಓದಿಗೆ ಒಡ್ಡಿಕೊಳ್ಳಬೇಕಾಗುತ್ತದೆ.

ಆಕರ ಪುಸ್ತಕಗಳು/ಉಲ್ಲೇಖಗಳು

  1. Adolphs, R. D. Tranel, and A. R. Damasio. ‘The Human Amygdala in Social Judgement’. Nature 393 (June 4, 1998): 470-74.
  2. Harris, Sam. The End of Faith: Religion, Terror, and the Future of Reason. Simon & Schuster UK Ltd. The Free Press Publishing. 2006
  3. Harris, Sam. Nawaz Maajid. Islam and The Future of Tolerance: A Dialogue. Harvard University Press. 2015
  4. Dreyfuss, Emily (February 11, 2017). “Want to Make a Lie Seem True? Say It Again. And Again. And Again”. Wired. Archivedfrom the original on 6 May 2021. Retrieved 31 October 2017.
  5. (Hasher, Lynn; Goldstein, David; Toppino, Thomas (1977). “Frequency and the conference of referential validity”(PDF). Journal of Verbal Learning and Verbal Behavior16 (1): 107–112. doi:1016/S0022-5371(77)80012-1. Archived from the original on 2016-05-15.).
  6. Graeme Wood. What ISIS Really Wants – The Atlantic 2015
  7. Graeme Wood Inside the Palace With Mohammed bin Salman – The Atlantic 2022

 

2 comments to “ಹೆಪ್ಪುಗಟ್ಟಿದ ಆತಂಕ, ಮರುಹುಟ್ಟಿದ ಅಸ್ಮಿತೆ: ಭಾರತದ ಮುಸ್ಲಿಮರ ಬದುಕು-ಬವಣೆ”
  1. ಈ ಬರೆಹವನ್ನು ಡಾಬಸ್ ಪೇಟೆ ವಾಯ್ಸ್ ಕನ್ನಡ ಮಾಸಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿ ನೀಡಬೇಕೆಂದು ವಿನಂತಿ

ಪ್ರತಿಕ್ರಿಯಿಸಿ