ಋತುಮಾನದ ಐದನೇ ಪುಸ್ತಕವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಕೆ. ವಿ. ನಾರಾಯಣ ಮಾಡಿರುವ ಜೀನ್ ಪಾಲ್ ಸಾರ್ತೃ ಅವರ ‘A Plea for Intellectuals’ ಎಂಬ ಬರಹದ ಕನ್ನಡ ನಿರೂಪಣೆ “ಬುದ್ದಿಜೀವಿ ಬಿಕ್ಕಟ್ಟುಗಳು”
ಸಾರ್ತೃ ಅವರ ಈ ಬರಹ ಮೊದಲು ಉಪನ್ಯಾಸದ ರೂಪದಲ್ಲಿ ಇದ್ದುದು ಅನಂತರ ಬರಹ ರೂಪಕ್ಕೆ ಬಂತು. ಈ ಕನ್ನಡ ರೂಪವು ಮೂಲ ಬರಹವನ್ನು ಅದು ಇರುವಂತೆಯೇ ಅನುವಾದಿಸುವ ಹಾದಿಯನ್ನು ಹಿಡಿದಿಲ್ಲ. ಕನ್ನಡ ನುಡಿಯನ್ನು ಆಡುವವನೊಬ್ಬ ಅದನ್ನು ಓದಿದಾಗ ಏನು ಅವನ ಗ್ರಹಿಕೆಗೆ ಬಂತೋ ಆ ತಿಳಿವನ್ನು ಕನ್ನಡ ಓದುಗರಿಗಾಗಿ ನಿರೂಪಿಸುವ ಕೆಲಸವನ್ನು ಇಲ್ಲಿ ಮಾಡಲಾಗಿದೆ.
ಸರಿಸುಮಾರು ಐದೂವರೆ ದಶಕಗಳ ಹಿಂದೆ ನಮ್ಮ ಕಾಲದ ಇಬ್ಬರು ಚಿಂತಕರು ಬುದ್ಧಿಜೀವಿಗಳಿಗೆ ಕೆಲವು ಮಾತುಗಳನ್ನು ಹೇಳುವ ಬರಹಗಳನ್ನು, ಒಂದೆರಡು ವರುಶಗಳ ಅಂತರದಲ್ಲಿ ಮಂಡಿಸಿದರು. ಮೊದಲನೆಯದು ಫ್ರಾನ್ಸ್ ನ ಚಿಂತಕ ಜೀನ್ ಪಾಲ್ ಸಾರ್ತೃ ಬರೆದದ್ದು. A Plea for Intellectuals ಎಂಬ ತಲೆಬರೆಹದ ಈ ಲೇಖನ ಜಪಾನಿನಲ್ಲಿ ಅವರು ನೀಡಿದ ಉಪನ್ಯಾಸ ಬರಹ ರೂಪ (Sartre, Jean Paul (1976) ’ A Plea for Intellectuals’ in Between Existentialism and Marxism). ಎರಡನೆಯದು ಅಮೆರಿಕಾದ ನೋಮ್ ಚಾಮ್ಸ್ಕಿ ‘The Responsibility of the Intellectuals’ ಎಂಬ ಶೀರ್ಷಿಕೆಯ ಉಪನ್ಯಾಸವನ್ನು ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಂಘವೊಂದರಲ್ಲಿ ನೀಡಿದ್ದರು. ಚಾಮ್ಸ್ಕಿಯವರು ಬುದ್ಧಿಜೀವಿಗಳು ಸಮಾಜದಲ್ಲಿ ಇರುತ್ತಾರೆ ಎಂಬ ನಿಲುವು ಹೊಂದಿರುವವರು. ಸಾರ್ತೃ ಬುದ್ಧಿಜೀವಿಗಳು ಸಮಾಜದ ಗತಿಶೀಲತೆಯಲ್ಲಿ ಆಗುತ್ತಾರೆ; ರೂಪುಗೊಳ್ಳುತ್ತಾರೆ ಎನ್ನುವ ನಿಲುವಿನವರು. ಎಲ್ಲ ಬಗೆಯ ಸಾಮಾಜಿಕ, ಅರ್ಥಿಕ ಸವಲತ್ತುಗಳನ್ನು ಪಡೆದವರು ಬುದ್ಧಿಜೀವಿಗಳಾಗಿದ್ದುಕೊಂಡು ತಮ್ಮ ಹೊಣೆಯನ್ನು ನಿರ್ವಹಿಸಬೇಕು ಎಂಬದು ಚಾಮ್ಸ್ಕಿಅವರ ನಿಲುವು. ಸಾರ್ತೃ ಅವರು ವಿವರಿಸುವಂತೆ ಬುದ್ಧಿಜೀವಿಗಳು ತಮಗೆ ತಾವೇ ಸಿದ್ಧವಾಗಿ ಬಿಡುವುದಿಲ್ಲ. ತಾವೇ ಆರೋಪಿಸಿಕೊಂಡು ಬುದ್ಧಿಜೀವಿಗಳಾಗುವುದೂ ಕೂಡ ಸಾಧ್ಯವಿಲ್ಲ. ಈ ಆಗುವಿಕೆಗೆ ಕಾರಣಗಳು ಸಾಮಾಜಿಕ ನೆಲೆಯಲ್ಲಿವೆ.
ಬುದ್ಧಿಜೀವಿಗಳು ಎಂಬುವವರು ‘ಸತ್ಯವನ್ನು ಅಧಿಕಾರದ ಮುಖಕ್ಕೆ ರಾಚುವಂತೆ ಹೇಳಬೇಕು’ ಎಂಬ ಮಾತನ್ನು ಕೇಳಿದ್ದೇವೆ. ಈ ದಿನಮಾನಗಳಲ್ಲಿ ಹೀಗೆ ‘ಸತ್ಯ’ವನ್ನು ವಿವರಿಸಿ ಹೇಳುವ, ವಿಶ್ಲೇಷಿಸುವ ಕೆಲಸವನ್ನು ಬುದ್ಧಿಜೀವಿಗಳೆಂಬುವವರು ಮಾಡುತ್ತಲೇ ಇದ್ದಾರೆ. ಆದರೆ ಸಾರ್ತೃ ಅವರು ಈ ಬರಹದಲ್ಲಿ ವಿವರಿಸುವ ಬಿಕ್ಕಟ್ಟನ್ನು ಬುದ್ಧಿಜೀವಿಗಳೆಂದು ಪರಿಗಣಿತರಾಗಿರುವವರು ಈ ಕಾಲದಲ್ಲಿ ಅನುಭವಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಮಾತ್ರ ಈಗ ತಿಳಿದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಜಗತ್ತನ್ನು ಬದಲಿಸಬೇಕೆಂಬ ಮಾತನ್ನು ಹೇಳುವವರು ತಮ್ಮಲ್ಲೂ ಆ ಬಗೆಯ ಬದಲಾವಣೆ ಸಂಭವಿಸಬೇಕಾಗಿದೆ ಎಂಬ ಅರಿವಿಗೆ ತೆರೆದುಕೊಳ್ಳುವ ಅಗತ್ಯವಿದೆ. ಹಾಗಾಗಿ ಬುದ್ಧಿಜೀವಿಗಳನ್ನು ನಾವು ಗ್ರಹಿಸುತ್ತಿರುವ ರೀತಿಯಲ್ಲೇ ಮೂಲಭೂತ ಬದಲಾವಣೆಯ ಅಗತ್ಯವಿದೆ. ಕೆ. ವಿ. ನಾರಾಯಣ ಅವರೇ ಹೇಳುವಂತೆ ಅವರ ಗೆಳೆಯರಿಗಿಂತ ಹೆಚ್ಚಾಗಿ ಎಳೆಯರನ್ನು ಉದ್ದೇಶಿಸಿಯೇ ಈ ಕ್ಲಿಷ್ಟವಾದ ಸುಧೀರ್ಘ ಪ್ರಬಂಧವನ್ನು ಸರಳವಾಗಿ ಕನ್ನಡದಲ್ಲಿ ನಿರೂಪಿಸಲಾಗಿದೆ. ಕನ್ನಡ ಬೌದ್ಧಿಕ ಲೋಕದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಮತ್ತು ಈ ಕುರಿತು ಆಸಕ್ತಿ ಇರುವ ಎಲ್ಲರಿಗೂ ಈ ಪುಸ್ತಕ ನೆರವಾಗಬಲ್ಲದು ಎನ್ನುವುದು ಋತುಮಾನದ ಆಶಯ.
ಈ ಕೃತಿಯು ಮುದ್ರಿತ ಪುಸ್ತಕ, ಇ ಪುಸ್ತಕ, ಕೇಳು ಪುಸ್ತಕ ವಾಗಿ ನಿಮಗೆ ಈಗ ಲಭ್ಯವಿದೆ.
೧೪೦ ಪುಟಗಳ ಮುದ್ರಿತ ಹೊತ್ತಗೆಯ ಬೆಲೆ ೧೦೦ ರೂ(Paperback)/೨೦೦ ರೂ(Hardbound). ಋತುಮಾನ ಸ್ಟೋರ್ ಮಿಂದಾಣದ ಈ ಕೆಳಗಿನ ಕೊಂಡಿಯಲ್ಲಿ ನೀವು ಈಗ ಖರೀದಿಸಬಹುದು . ಋತುಮಾನ ಆ್ಯಪ್ ನಲ್ಲಿ ಇ ಪುಸ್ತಕ, ಕೇಳು ಪುಸ್ತಕ ಕೂಡ ೧೦೦ ರೂಗೆ ನಿಮಗೆ ಸಿಗುತ್ತದೆ. ಪುಸ್ತಕವು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ನಾಡಿನ ಎಲ್ಲಾ ಪುಸ್ತಕ ಮಳಿಗೆಗಳಲ್ಲಿ ದೊರಕಲಿದೆ.
Paperback : https://bit.ly/3QMzh81
Hardbound : https://bit.ly/3zV4S0v
ಮುಕ್ತಜ್ಞಾನ ಪ್ರಸರಣದಲ್ಲಿ ನಂಬಿಕೆ ಇಟ್ಟು ಈ ಕೃತಿಯನ್ನು ಕಾಪಿಲೆಫ್ಟ್ ಮಾಡಲಾಗಿದೆ. ಅಂದರೆ ಈ ಕೃತಿ ಹಕ್ಕುಗಳಿಂದ ಮುಕ್ತವಾಗಿದೆ. ಮುಂದಿನ ದಿನಗಳಲ್ಲಿ ಯಾರು ಬೇಕಾದರೂ ಇದನ್ನು ಸ್ವತಂತ್ರವಾಗಿ ಪ್ರಕಟಿಸಬಹುದು.