ನನ್ನ ಬಾಲ್ಯದ ದಿನಗಳ, ಮೇಕೆ ರಕ್ತದ ಫ್ರೈ ಮತ್ತು ಇತರ ದಲಿತ ಅಡುಗೆಗಳು

ಭಾರತದ ಪ್ರಾದೇಶಿಕ ಆಹಾರಗಳ ಸಾಲಿನಲ್ಲಿ ರಕ್ತದ ಫ್ರೈ ಎಲ್ಲಿ ಸ್ಥಾನ ಪಡೆದಿದೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಲೇಖಕ ವಿನಯ ಕುಮಾರ್ ಇಲ್ಲಿ ಪ್ರಯತ್ನಿಸಿದ್ದಾರೆ.

ನನ್ನ ತಾಯಿ 27 ವರ್ಷಗಳಿಂದ (ಮೇಕೆಯ ) ರಕ್ತದ ಫ್ರೈ ತಯಾರಿಸಿಲ್ಲ .ಅದು ಅವಳ ಮೆಚ್ಚಿನ ಅಡುಗೆಯೇನಲ್ಲ . ಆದರೆ ಅವಳು ಅದನ್ನು ತನ್ನ ಅಜ್ಜಿಯೊಂದಿಗೆ ತಯಾರಿಸಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾಳೆ ಮತ್ತು ಹೇಗೆ ಮಾಡುವುದು ಎಂದು ನನಗೆ ಕಲಿಸುವುದಾಗಿ ಭರವಸೆ ನೀಡಿದ್ದಾಳೆ. ರಕ್ತವನ್ನು ಸಂಗ್ರಹಿಸಲು ಐದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಹಸಿವು, ಬಡತನ ಮತ್ತು ನಿರಂತರ ಕಡೆಗಣನೆಯಿಂದ ಹುಟ್ಟಿದ ದಲಿತರ ಆಹಾರ ಅಥವಾ ಪಾಕವಿಧಾನವನ್ನು ಒಂದು ಕಾಫಿ ಟೇಬಲ್ ಪುಸ್ತಕವಾಗಿ ಮರುರೂಪಿಸುವುದು ನಮ್ಮ ಹೋರಾಟಗಳಿಗೆ ಅಪಚಾರ ಮಾಡಿದಂತಾಗಬಹುದು. ನಮ್ಮ ಆಹಾರ ಸಂಸ್ಕೃತಿ, ಕೇವಲ ದಲಿತರ ನೆನಪಿನಲ್ಲಿ ಉಳಿದುಕೊಂಡಿದೆ. ದಲಿತ ಸಮುದಾಯಗಳ ಆಹಾರವು, ಅಡುಗೆ ಪುಸ್ತಕ(Cook book)ಗಳಲ್ಲಿ ಎಂದಿಗೂ ಕಾಣಿಸಿಕೊಂಡಿಲ್ಲ; ನಾವು ಎಂದಿಗೂ ನಮ್ಮದೇ ಆದ ಅಡುಗೆ ಪುಸ್ತಕವನ್ನೂ ಕೂಡ ಹೊಂದಿರಲಿಲ್ಲ . ಮಿಲಿಟರಿ ಹೋಟೆಲ್ ಮೆನುಗಳಲ್ಲಿ ಅಥವಾ ‘ಗೌಡ್ರು ಮನೆ’ಗಳಲ್ಲಿ ತುಪ್ಪದಲ್ಲಿ ಮುಳುಗಿದ ರಾಗಿ ಮುದ್ದೆಯನ್ನು ನೀವು ಕಾಣಬಹುದು. ಆದರೆ ನನ್ನ ತಾಯಿ ಮತ್ತು ಅವಳ ಒಡಹುಟ್ಟಿದವರು ಬೆಳಗಿನ ಉಪಾಹಾರದಿಂದ ಉಳಿದ ಮದ್ದೆಯನ್ನು ಶಾಲೆಗೆ ಮಧ್ಯಾಹ್ನದ ಊಟವಾಗಿ ಕಟ್ಟಿ ಒಯ್ದಾಗ , ಅವರು ತಮ್ಮ ಸಹಪಾಠಿಗಳಿಂದ ಮತ್ತು ಶಾಲೆಯ ಮೈದಾನದಿಂದ ದೂರದಲ್ಲಿ, ಉಳಿದವರು ನೋಡಿಯಾರು ಎಂಬ ಭಯದಲ್ಲಿ ಅವಸರದಲ್ಲಿ ತಿನ್ನುತ್ತಿದ್ದರು. ನಮ್ಮ ಅಸ್ತಿತ್ವ ಮತ್ತು ನಮ್ಮ ಜೀವನದ ಅನುಭವಗಳು, ನಮ್ಮ ನಿರೂಪಣೆ ಮತ್ತು ಆತ್ಮಚರಿತ್ರೆಗಳು ಪ್ರತಿರೋಧದ ರೂಪಗಳಾಗಿವೆ. ನಮ್ಮ ಆಹಾರ ಪದ್ಧತಿಯೂ ಒಂದು ಪ್ರತಿಭಟನೆಯೇ .

ರಕ್ತದ ಫ್ರೈ ಎಂಬ ಭಕ್ಷ್ಯ, ಒಂದು ಮೆನು, ಪಾಕಪದ್ಧತಿ, ಅಡುಗೆಪುಸ್ತಕ ಅಥವಾ ಭಾರತದಲ್ಲಿ ಆಹಾರದ ತಿಳುವಳಿಕೆಗೆ ಎಲ್ಲಿ ಅಥವಾ ಹೇಗೆ ಹೊಂದಿಕೊಳ್ಳುತ್ತದೆ?
ಈ ಪ್ರಶ್ನೆಗೆ ಉತ್ತರವು, ಭಾರತದಲ್ಲಿ ದಲಿತರು ಎಲ್ಲಿ ಕಾಣಬಹುದು ಎಂಬುದನ್ನು ಗಮನಿಸಿದರೆ ತಿಳಿಯಬಹುದು : ಕಟ್ಟ ಕಡೆಯಲ್ಲಿ. ಮಿಲಿಟರಿ ಹೋಟೆಲ್‌ಗಳು, ವೈನ್ ಶಾಪ್‌ಗಳ ಸುತ್ತಲಿನ ಮಾಂಸದ ಅಂಗಡಿಗಳು ಮತ್ತು ದಲಿತರ ನೆರೆಹೊರೆಗಳಲ್ಲಿನ ಬಾರ್‌ಗಳು ಇದನ್ನು ಹೆಚ್ಚಾಗಿ ತಯಾರಿಸುತ್ತವೆ. ಆದರೆ ನಮ್ಮ ಬಡತನವನ್ನು ಮರೆಮಾಚುವ ಪ್ರಯತ್ನದಲ್ಲಿ ಮತ್ತು ಜನರು ಗೋಮಾಂಸ ಅಥವಾ ಒಣ ಮೀನುಗಳನ್ನು ಬೇಯಿಸಲು ಏಕೆ ಹಿಂಜರಿಯುತ್ತಾರೆಯೋ ಅಂತಹುದೇ ಇತರೆ ಕಾರಣಗಳಿಂದಾಗಿ ರಕ್ತದ ಫ್ರೈ ನಿಧಾನವಾಗಿ ನಮ್ಮ ಅಡುಗೆಮನೆಯಿಂದ ಮರೆಯಾಯಿತು. ಆದರೆ ಸಮುದಾಯ ಪ್ರಜ್ಞೆಯು ಈ ಖಾದ್ಯವನ್ನು ಹಿಡಿದಿಟ್ಟುಕೊಂಡಿದೆ. ಸಣ್ಣ ಜಾಗಗಳಲ್ಲಿ, ಸಮಾಜದ ಅಂಚಿನಲ್ಲಿ ನಾವು ನಮ್ಮ ಸಂಪ್ರದಾಯವನ್ನು ಉಳಿಸಿಕೊಂಡಿದ್ದೇವೆ.

ನಾನು ಸಾಕಷ್ಟು ಸಮಯವನ್ನು ಮನೆಯೊಳಗೇ ಕಳೆದಿದ್ದೇನೆ, ಅಡುಗೆಮನೆಯ ಬಾಗಿಲ ಬಳಿ ಸುಳಿದಾಡುತ್ತಾ ಬೆಳೆದಿದ್ದೇನೆ. ಇಲ್ಲಿಯೇ ನಾನು ನನ್ನ ಕುಟುಂಬದ ಎಲ್ಲ ಮಹಿಳೆಯರೊಂದಿಗೆ ಸಂಬಂಧವನ್ನು ಬೆಳೆಸಿಕೊಂಡೆ; ತರಕಾರಿಗಳ ಸಿಪ್ಪೆ ತೆಗೆಯುತ್ತಾ, ಪಾತ್ರೆ ತೊಳೆಯುತ್ತ ಅಥವಾ ಅಡುಗೆಮನೆಯ ಕಟ್ಟೆಯಲ್ಲಿ ಕುಳಿತು ಮಾತಾಡುತ್ತಾ ಹೀಗೆ. ಅಡುಗೆ ಮನೆ, ಸಂಬಂಧಗಳನ್ನು ಕಟ್ಟಲು ಮತ್ತು ಕಥೆಗಳನ್ನು ಹೇಳಲು ಉತ್ತಮ ಜಾಗ. ನನ್ನ ಕುಟುಂಬವು ಕೂಡ,ಆಹಾ! ಹೇಳಲು ಬಹಳಷ್ಟು ಕಥೆಗಳನ್ನು ಹೊಂದಿತ್ತು . ಹಗರಣಗಳಿಂದ ಹಿಡಿದು ಸಣ್ಣ ಪಲಾಯನಗಳವರೆಗೆ, ಅಡಿಗೆ ಮನೆಯು ಯಾವಾಗಲೂ ಕಥೆಗಳ ಗದ್ದಲದಿಂದ ಕೂಡಿರುತ್ತಿತ್ತು, ವಿಶೇಷವಾಗಿ ಮೂರು ಅಥವಾ ಹೆಚ್ಚು ಜನರು ಒಟ್ಟಿಗೆ ಅಡುಗೆ ಮಾಡುವಾಗ.

“ಸರಳ, ಸಹ್ಯ ಬೇಳೆ ಸಾರು ಮಾಡಲು ಸ್ವಲ್ಪ ಪ್ರೀತಿ ಮತ್ತು ಶ್ರಮ ಬೇಕು, ಅಷ್ಟೇ” ಎಂದು ನನ್ನ ಸ್ನೇಹಿತೆ ಶಾಲಿನಿ ವಿದ್ಯಾರ್ಥಿ ಮೆಸ್‌ನಲ್ಲಿನ ಆಹಾರದ ಬಗ್ಗೆ ಹೇಳಿದರು. ಹೈದರಾಬಾದ್ ವಿಶ್ವವಿದ್ಯಾನಿಲಯದ ನನ್ನ ಆತ್ಮೀಯ ಸ್ನೇಹಿತರಲ್ಲಿ ಶಾಲಿನಿ ಒಬ್ಬರು. ಅವಳು ಹೇಳಿದ್ದು ನಿಜ ; ನಾವಿಬ್ಬರೂ ಹಣದ ಕೊರತೆಯಿರುವ ಕೆಳಮಧ್ಯಮ ವರ್ಗದ ಮನೆಗಳಲ್ಲಿ ಬೆಳೆದ ದಲಿತ ಮಕ್ಕಳು. ನಾನು ಬಾಲ್ಯದಲ್ಲಿ ಎಂದಿಗೂ ಹಸಿವಿನಿಂದ ಬಳಲಿದ್ದಿಲ್ಲ, ಮತ್ತು ಪರಿಸ್ಥಿತಿ ಕೆಟ್ಟದ್ದಾಗಿದ್ದ ಸಮಯದಲ್ಲೂ ಸಹ, ನಾವು ಯಾವಾಗಲೂ ಸಂಭಾಳಿಸುತ್ತಿದ್ದೆವು. ಮನೆಯಲ್ಲಿ ಅನ್ನ ಮತ್ತು ಬೇಳೆ ಸಾರು (ಎಣ್ಣೆ ತುಂಬಾ ದುಬಾರಿಯಾದ ಕಾರಣ,ಒಗ್ಗರಣೆ ಇಲ್ಲದೆಯೇ ) ತಿನ್ನುತ್ತಿದ್ದೆವು ಮತ್ತು ತುರ್ತು ಸಂದರ್ಭಕ್ಕಾಗಿ – ಸಾಮಾನ್ಯವಾಗಿ ಅನಿರೀಕ್ಷಿತ ಅತಿಥಿಗಳಿಗಾಗಿ – ನಾವು ಗೋಲ್ಡ್ ವಿನ್ನರ್ ಸನ್‌ಫ್ಲವರ್ ಅಡುಗೆ ಎಣ್ಣೆಯ ಕೊನೆಯ ಪ್ಯಾಕೆಟ್ ಅನ್ನು ಉಳಿಸಬೇಕಾಗಿತ್ತು . ನಿಜಕ್ಕೂ ಬಡವರಾಗಿರುವುದಕ್ಕಿಂತ ಕೆಟ್ಟದೆಂದರೆ ನೀವು ಬಡವರು ಎಂದು ಬೇರೊಬ್ಬರು ಕಂಡುಹಿಡಿಯುವುದು.

ಆದರೆ ನಾವು ನಮ್ಮ ಬಡತನದೊಂದಿಗೆ ಆರಂಭದಲ್ಲಿಯೇ ಶಾಂತಿಯನ್ನು ಕಂಡುಕೊಂಡಿದ್ದೆವು. ನಂಗೆ ತುಂಬಾ ಹಸಿವಾಗುತ್ತಿದ್ದರಿಂದ ನಾನು ತಿನ್ನುವ ವಸ್ತುಗಳಿಗಾಗಿ ಅಡುಗೆಮನೆಯಲ್ಲಿ ಹತಾಶನಾಗಿ ಸುತ್ತಾಡುತ್ತಿದ್ದೆ. ಬೆಳೆಯುತ್ತಿರುವಾಗಲೇ , ನಾನು ಮನೆಯಲ್ಲಿ ವಯಸ್ಕರಷ್ಟೇ ತಿನ್ನುತ್ತಿದ್ದೆ. ಆಗಾಗ್ಗೆ, ನಾನು ಹಳೆಯ ಶಾವಿಗೆಯ ಪ್ಯಾಕೆಟ್ (ವರ್ಮಿಸೆಲ್ಲಿ) ಅಥವಾ MTR ವಾಂಗಿಬಾತ್/ಬಿಸಿಬೇಳೆಬಾತ್ ಮಸಾಲಾ ಅಥವಾ ರವಾ ಇಡ್ಲಿ ಮಿಶ್ರಣದಂತಹ ರೆಡಿ-ಟು-ಈಟ್ ಉಪಹಾರಗಳೊಂದಿಗೆ ಸರಿದೂಗಿಸುತ್ತಿದ್ದೆ . ನನ್ನ ಆಹಾರದ ನೆನಪುಗಳು ಯಾವಾಗಲೂ ಸಂತೋಷ ಅಥವಾ ಉತ್ಸಾಹ ತರುವಂತಿರಲಿಲ್ಲ. ವಾಸ್ತವವಾಗಿ ಆಹಾರದ ಬಗ್ಗೆ ನನ್ನ ಬಾಲ್ಯದ ಅತ್ಯಂತ ಗಾಢ ನೆನಪೆಂದರೆ ಸನ್‌ಡ್ರಾಪ್ ಅಡುಗೆ ಎಣ್ಣೆಯ ಜಾಹೀರಾತಿನಲ್ಲಿ ತೋರಿಸುವ ಆಹಾರವನ್ನು ತಿನ್ನಬೇಕೆಂಬ ಹಂಬಲ, ಏಕೆಂದರೆ ಅದು ನಾನು ಎಂದಿಗೂ ನೋಡದ ಅಥವಾ ತಿನ್ನದ ಆಹಾರವಾಗಿತ್ತು.

ಆಹಾರದ ಕುರಿತ ನೆನಪುಗಳು ಯಾವಾಗಲೂ ಪ್ರೀತಿ, ಕಾಳಜಿ ಅಥವಾ ಬೆಚ್ಚನೆಯ ಭಾವನೆಗಳನ್ನು ಹೊತ್ತು ತರುವುದಿಲ್ಲ ,ಕೆಲವೊಮ್ಮೆ ಅವು ಕಟುವಾದ ಸತ್ಯಗಳನ್ನು ಜ್ಞಾಪಿಸುತ್ತವೆ . ಗೋಮಾಂಸದ ಕುರಿತ ಚರ್ಚೆಗಳು ನಮಗೆ ಅದನ್ನು ತೋರಿಸಿ ಕೊಟ್ಟಿತು. ಹಾಗೂ ಆಹಾರಕ್ಕೆ ಅಂಟಿಸಲಾದ ಕಳಂಕಗಳೂ ಇವೆ – ಈ ವಿಷಯಕ್ಕೆ ಆಹಾರದ ಕುರಿತ ಬರವಣಿಗೆಯಲ್ಲಿ ಆಸ್ಪದವೇ ಇಲ್ಲ . ಗೋಮಾಂಸವನ್ನು ನಿಷೇಧಿಸುವವರೆಗೂ ಯಾರೂ ಅದರ ಬಗ್ಗೆ ಮಾತನಾಡಲು ಬಯಸಲಿಲ್ಲ; ಇಂದು ಚರ್ಚಿಸುವ ರೀತಿಯಲ್ಲಂತೂ ಖಂಡಿತ ಮಾತಾಡಲಿಲ್ಲ . ಅಲ್ಲಿಯವರೆಗೂ ಅನೇಕ ಜನರು ಗೋಮಾಂಸದ ರುಚಿಯನ್ನು ಸಹ ನೋಡಿರಲಿಲ್ಲ. ಗೋಮಾಂಸ-ಸಂಬಂಧಿತ ಹಿಂಸಾಚಾರ ಮತ್ತು ಥಳಿತದ ಭಯದ ಜೊತೆಗೆ ,ಗೋಮಾಂಸ ನಿಷೇಧವು ನಮಗೆ ಅದನ್ನು ಇನ್ನೂ ದುಬಾರಿ ಮಾಡಿತು . ಲೆಕ್ಕವಿಲ್ಲದಷ್ಟು ವರದಿಗಳು, ಪ್ರತಿಕ್ರಿಯೆಗಳು , ಸಂಪಾದಕೀಯಗಳು, ಮಾನವಶಾಸ್ತ್ರೀಯ ಅಧ್ಯಯನಗಳು ಮತ್ತು ಶೈಕ್ಷಣಿಕ ಪ್ರವಚನಗಳ ಹೊರತಾಗಿಯೂ, ಗೋಮಾಂಸದ ಮೂಲವನ್ನು ಗುರುತಿಸುವಲ್ಲಿ ಭಾರತವು ಇನ್ನೂ ತೊಂದರೆಯನ್ನು ಎದುರಿಸುತ್ತಿದೆ ಎನಿಸುತ್ತಿದೆ : ಸರಳವಾಗಿ ಹೇಳುವುದಾದರೆ, ಶವಗಳ ರೂಪದಲ್ಲಿ ಗೋಮಾಂಸವು ಅನೇಕ ದಲಿತ ಸಮುದಾಯಗಳಿಗೆ ಲಭ್ಯವಿತ್ತು, ಆದ್ದರಿಂದ ಸೇವಿಸಲಾಗುತ್ತಿತ್ತು. ಮೃತದೇಹವನ್ನು- ಹಣ ಪಡೆಯದೆಯೇ – ವಿಲೇವಾರಿ ಮಾಡುವುದು ಅವರ ‘ಜಾತಿಯ ಕೆಲಸ’ವಾಗಿತ್ತು. ಆದ್ದರಿಂದ ಈ ಮೃತದೇಹವೇ ಕೆಲಸದ ಶುಲ್ಕವಾಯಿತು .

ದಬ್ಬಾಳಿಕೆ, ಭೌಗೋಳಿಕತೆ, ಸ್ಥಳೀಯ ಜಾತಿಯ ಸಸ್ಯಗಳು, ಪ್ರಾಣಿಗಳು ಮತ್ತು ಜಾತಿ ಶ್ರೇಣಿಗಳು ದಲಿತ, ಬಹುಜನ ಮತ್ತು ಆದಿವಾಸಿ ಸಮುದಾಯಗಳ ಆಹಾರ ಸಂಸ್ಕೃತಿಯ ಮೇಲೆ ಆಳವಾಗಿ ಪ್ರಭಾವ ಬೀರಿವೆ, ಸಾಮಾಜಿಕ ವಿಜ್ಞಾನಿಗಳು ಇನ್ನೂ ನಕ್ಷೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ನನ್ನ ತಾಯಿ ರಕ್ತದ ಫ್ರೈಯನ್ನು ಬಡ ಕುಟುಂಬಗಳು ಮಾಂಸವನ್ನು ಖರೀದಿಸಲು ಸಾಧ್ಯವಾಗದಿದ್ದಾಗ ತಯಾರಿಸುತ್ತಿದ್ದ ಭಕ್ಷ್ಯವೆಂದು ವಿವರಿಸಿದರು. ಇದು ಹೆಪ್ಪುಗಟ್ಟಿದ ಮೇಕೆ ರಕ್ತದಿಂದ ಮಾಡಲ್ಪಡುವ, ಸ್ಥಳೀಯ ಖಾದ್ಯವಾಗಿದೆ ಮತ್ತು ಇದನ್ನು ಹೆಚ್ಚಾಗಿ ಕರ್ನಾಟಕದ ಮಿಲಿಟರಿ ಹೋಟೆಲ್‌ಗಳಲ್ಲಿ ಕಾಣಬಹುದು . ಮಿಲಿಟರಿ ಹೋಟೆಲ್‌ಗಳಿಗೂ ತಮ್ಮದೇ ಆದ(ಅರ್ಹ) ಕಥೆಗಳಿವೆ, ಆದರೆ ಸಂಕ್ಷಿಪ್ತವಾಗಿ ಹೇಳಬೇಕೆಂದರೆ , ಅವು ಬ್ರಾಹ್ಮಣರ ಪಟ್ಟಣವಾಗಿದ್ದ ಬೆಂಗಳೂರಿನಂತ ಪಟ್ಟಣಗಳಲ್ಲಿ ಬೇರೆಡೆ ಮಾಂಸವನ್ನು ಹುಡುಕಲು ಸಾಧ್ಯವಾಗದ ಸೇನಾ ಸಿಬ್ಬಂದಿಗೆ ಮಾಂಸದಡುಗೆ ಕೊರತೆ ನೀಗಿಸಲು ಹುಟ್ಟಿದ ಅಗ್ಗದ ಹೋಟೆಲುಗಳು . ರಕ್ತದ ಫ್ರೈ ಸರಳ ಮತ್ತು ಸುಲಭವಾಗಿ ಮಾಡಬಹುದಾದ ಅಡುಗೆ ಆದರೆ ಅಷ್ಟೇ ಸುಲಭವಾಗಿ ಅಡುಗೆಯನ್ನು ಕೆಡಿಸಲೂಬಹುದು.

ಇದನ್ನು ಮಾಡುವಲ್ಲಿ ಕಷ್ಟದ ಭಾಗವೆಂದರೆ ರಕ್ತವನ್ನು ಸಂಗ್ರಹಿಸುವುದು . ಮಾಂಸದಂಗಡಿಯವರು ಈಗೀಗ ತಮ್ಮ ಅಂಗಡಿಗಳಲ್ಲಿ ರಕ್ತವನ್ನು ಇಟ್ಟುಕೊಳ್ಳುವುದಿಲ್ಲ, ಆದ್ದರಿಂದ ನಿಮಗೆ ಬೇಕಾದಲ್ಲಿ ಅದನ್ನು ಪಡೆಯಲು ಅವರಿಗೆ ಕೆಲವು ದಿನಗಳ ಮುಂಚೆಯೇ ತಿಳಿಸಬೇಕಿರುತ್ತದೆ. ರಕ್ತವು ಕೆಂಪು ಬಣ್ಣದಲ್ಲಿಯೇ ಇರುತ್ತದೆ , ಆದರೂ ನೀವು ಇನ್ನೂ ಮೂರು ಬಾರಿ ತೊಳೆಯಬೇಕು. ರಕ್ತವನ್ನು ಬೇಯಿಸಲು ನನ್ನ ತಾಯಿಯ ಸಲಹೆಯೆಂದರೆ ಅದನ್ನು ಹುರಿಯುವ ಮೊದಲು ಕುದಿಯುವ ನೀರಿನಲ್ಲಿ ಬಿಡುವುದು.

ರಕ್ತದ ಫ್ರೈ ಪೌಷ್ಟಿಕಾಂಶಗಳನ್ನು ಹೊಂದಿದೆಯೇ? ಹೌದು. ಐಸ್‌ಲ್ಯಾಂಡ್‌ನ ಆಹಾರ ಲೇಬಲ್ ಪ್ರಕಾರ, ದಲಿತರಷ್ಟೇ ಕುರಿಮರಿ ರಕ್ತವನ್ನು ಬೇಯಿಸಿ ತಿನ್ನುವುದಿಲ್ಲ. ರಕ್ತವನ್ನು ಬಳಸುವ ಇತರ ‘ಜನಾಂಗೀಯ’ ಪಾಕಪದ್ಧತಿಗಳ ಬಗ್ಗೆಯೂ ನೀವು ಓದಬಹುದು, ಪ್ರಾಣಿಗಳ ರಕ್ತವನ್ನು ಫ್ರೆಂಚ್ ಶೈಲಿಯ ಅಡುಗೆಗಳಲ್ಲಿ ಸಾಸ್ ಗಳನ್ನು ದಪ್ಪ ಮಾಡಲು( Thickening agent ) ಬಳಸುವ ಪದ್ದತಿಯಿದೆ. 100 ಗ್ರಾಂ ಮೇಕೆಯ ರಕ್ತವು 17.4 ಗ್ರಾಂ ಪ್ರೋಟೀನ್ ಅಂಶವನ್ನು ಮತ್ತು 0.4 ಗ್ರಾಂ ಕೊಬ್ಬನ್ನು ಹೊಂದಿರುತ್ತದೆ. 100 ಗ್ರಾಂ ಕುರಿಮರಿ ಮಾಂಸವು 25 ಗ್ರಾಂ ಪ್ರೋಟೀನ್ ಮತ್ತು 20 ಗ್ರಾಂ ಕೊಬ್ಬನ್ನು ಹೊಂದಿರುತ್ತದೆ ಮತ್ತು 100 ಗ್ರಾಂ ಕೋಳಿ ಮಾಂಸವು 30 ಗ್ರಾಂ ಪ್ರೋಟೀನ್ ಮತ್ತು 14 ಗ್ರಾಂ ಕೊಬ್ಬನ್ನು ಹೊಂದಿರುತ್ತದೆ.

ಇಲಿ ಮಾಂಸವನ್ನು ಎಂದೂ ತಿನ್ನದ, ಬೇಯಿಸದ ಅಥವಾ ಬೇಟೆಯಾಡದ ನನ್ನ ಚಿಕ್ಕ ಸೋದರಸಂಬಂಧಿ, ಇಲಿಯನ್ನು ಕೊಲ್ಲಲು ನೀವು ಶಂಖವನ್ನು ಊದಬೇಕು ಮತ್ತು ಹೊಗೆಯಾಡಿಸಬೇಕು ಎಂದು ಕುಟುಂಬದ ಸಭೆಯೊಂದರಲ್ಲಿ ಅಧಿಕೃತವಾಗಿ ಘೋಷಿಸಿದರು. ಕನ್ನಡದಲ್ಲಿ ಶಂಖ ಮತ್ತು ಹೊಗೆ, ಸಾವಿಗೆ ರೂಪಕವಾಗಿರುವುದರಿಂದ ಹಿರಿಯರೆಲ್ಲರೂ ನಕ್ಕು ಬಿಟ್ಟರು. ಇಲಿಗಳು ಭತ್ತದ ಗದ್ದೆಗಳಿಂದ ಧಾನ್ಯವನ್ನು ಕದ್ದು ಬಿಲಗಳಲ್ಲಿ ಸಂಗ್ರಹಿಸಿಡುತ್ತವೆ. ಆದರೆ ಮುಂದಿನ ಬೆಳೆಗಾಗಿ ಹೊಲಗಳನ್ನು ಖಾಲಿ ಮಾಡುವಾಗ ಇಲಿಗಳು ಸಿಕ್ಕುಬಿದ್ದು ಆ ರಾತ್ರಿ ಭೋಜನವಾಗಿ ಅಥವಾ ಮರುದಿನ ಊಟವಾಗಿ ಕೊನೆಗೊಳ್ಳುತ್ತವೆ . ಚಿಕನ್‌ನಂತೆಯೇ ಇಲಿಗಳನ್ನು ಸ್ವಚ್ಛಗೊಳಿಸಿ ಚರ್ಮ ಸುಲಿಯಲಾಗುತ್ತದೆ , ನಂತರ ತೆರೆದ ಉರಿಯಲ್ಲಿ ಸುಡಲಾಗುತ್ತದೆ ಅಥವಾ ಮಿಶ್ರ ತರಕಾರಿ ಮತ್ತು ದಾಲ್ ಸಾಂಬಾರ್‌ಗಾಗಿ ಸಣ್ಣ ತುಂಡುಗಳಾಗಿ ಕತ್ತರಿಸಲಾಗುತ್ತದೆ.

ನಮ್ಮ ಅನೇಕ ಸಾಂಸ್ಕೃತಿಕ ಆಚರಣೆಗಳು ಮತ್ತು ಆಧ್ಯಾತ್ಮಿಕ ನಂಬಿಕೆಗಳು, ಕಥೆಗಳು, ಹಾಡುಗಳು, ಸಂಗೀತ ಮತ್ತು ಸಾಹಿತ್ಯದ ನಮ್ಮ ಮೌಖಿಕ ಸಂಪ್ರದಾಯದ ಹೆಚ್ಚಿನವು ಮರೆಯಾಗಿವೆ. ಆದರೆ ದಲಿತ ಸಾಹಿತ್ಯವು ಒಂದು ಪ್ರಕಾರವಾಗಿ ಮತ್ತು ಸಾಹಿತ್ಯಿಕ ಚಳುವಳಿಯಾಗಿ, ಜಾತಿ ವ್ಯವಸ್ಥೆ ಮತ್ತು ನಮ್ಮನ್ನು ದೂರ ಇಟ್ಟ ಹಾಗೂ ನಮ್ಮ ಜೀವನ ಅನುಭವಗಳನ್ನು ನಿರಾಕರಿಸಿದ ಜನರನ್ನು ವಿರೋಧಿಸುತ್ತ
ಸಂಘರ್ಷದಿಂದ ಹೊರಹೊಮ್ಮಿತು, ; ಅದು ಅವರನ್ನು ಖಂಡಿಸುತ್ತಾ ನಮ್ಮ ಇತಿಹಾಸಗಳನ್ನು ಗುರುತಿಸಿತು. ನಮ್ಮ ಆಹಾರವು ಎಂದೂ ಭಾರತದ ‘ಮುಖ್ಯವಾಹಿನಿಯ’ ಸಂಸ್ಕೃತಿಯ ಭಾಗವಾಗದೇ ಉಳಿಯಬಹುದು, ಆದರೆ ಅದು ನಾವು ಯಾರೆಂಬುದರ ಒಂದು ಭಾಗವಾಗಿದೆ ಮತ್ತು ಭಾರತ ಏನು ಎಂಬುದರ ಭಾಗವಾಗಿದೆ.

ಪಾಕ ವಿಧಾನ : (ಮೇಕೆಯ) ರಕ್ತದ ಫ್ರೈ
ರಕ್ತದ ಫ್ರೈಯನ್ನು ಅನ್ನ ಮತ್ತು ಪಲ್ಯ , ಅಥವಾ ರಾಗಿ ಮುದ್ದೆಯೊಂದಿಗೆ ತೋರನ್ ನಂತೆ ಸವಿಯಬಹುದು. ಚಪಾತಿಯೊಂದಿಗೆ ಕೂಡ ತಿನ್ನಬಹುದು. ಇದು ದಲಿತ ಸಮುದಾಯಗಳು ಮಾಂಸವು ಕೈಗೆಟುಕಲಾಗದ ಐಷಾರಾಮಿಯಾದ ಕೊರತೆಯನ್ನು ಸರಿದೂಗಿಸಲು ಸಿದ್ಧಪಡಿಸಿದ ಅಡುಗೆ.

ಬೇಕಾದ ಪದಾರ್ಥಗಳು
250 ಗ್ರಾಂ ಮೇಕೆ ರಕ್ತ
1 ದೊಡ್ಡ (ಅಥವಾ 2 ಮಧ್ಯಮ ಗಾತ್ರದ) ಈರುಳ್ಳಿ
1/2 ಗೊಂಚಲು ಕೊತ್ತಂಬರಿ ಎಲೆಗಳು
1/2 ಗೊಂಚಲು ಪುದೀನ ಎಲೆಗಳು
5-10 ಬೆಳ್ಳುಳ್ಳಿ ಲವಂಗ (ಅಥವಾ ನೀವು ಇಷ್ಟಪಟ್ಟರೆ ಹೆಚ್ಚು)
50 ಗ್ರಾಂ ಶುಂಠಿ
ಎಣ್ಣೆ, ಹುರಿಯಲು
1 ಮಧ್ಯಮ ಗಾತ್ರದ ಟೊಮೆಟೊ
2-3 ಹಸಿರು ಮೆಣಸಿನಕಾಯಿಗಳು
ಕೆಂಪು ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು
ಕೊತ್ತಂಬರಿ ಪುಡಿ, ರುಚಿಗೆ ತಕ್ಕಷ್ಟು
ಅರಿಶಿನ, ರುಚಿಗೆ ತಕ್ಕಷ್ಟು
ಗರಂ ಮಸಾಲಾ (ನಾವು ಶಕ್ತಿ ಮಸಾಲಾ ಅಥವಾ ಚಿಕನ್ ಮಸಾಲವನ್ನು ಬಳಸುತ್ತೇವೆ )
ಉಪ್ಪು, ರುಚಿಗೆ

ವಿಧಾನ
ರಕ್ತವನ್ನು ತೊಳೆಯಿರಿ, ನಂತರ ಕುದಿಯುವ ನೀರಿನಲ್ಲಿ ಒಂದೆರಡು ನಿಮಿಷ ಬೇಯಿಸಿ. ಪನೀರ್, ಟೋಫು ಅಥವಾ ಖೀಮಾವನ್ನು ಬೇಯಿಸಿದಂತೆಯೇ ರಕ್ತವನ್ನು ಬೇಯಿಸಬೇಕು . ನಿಮಗೆ ಖೀಮಾ/ಎಗ್ ಭುರ್ಜಿ ಯಂತೆ ಬೇಕಾದಲ್ಲಿ ಕೈಯಲ್ಲಿ ಪುಡಿಮಾಡಬಹುದು ಅಥವಾ ನೀರಿನಿಂದ ತೆಗೆದ ನಂತರ ಪನೀರ್ ಅಥವಾ ಟೋಫುವನ್ನು ಕತ್ತರಿಸಿದಂತೆ ತುಂಡು ಮಾಡಬಹುದು .
ಯಾವುದೇ ಮಾಂಸದಡುಗೆ ಮಾಡುವಂತೆ , ಭಾರವಾದ ತಳವಿರುವ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ.
ಈರುಳ್ಳಿ ಸೇರಿಸಿ ಮತ್ತು ಕಂದು ಬಣ್ಣ ಬರುವವರೆಗೆ ಹುರಿಯಿರಿ. ಮೆಣಸಿನಕಾಯಿ, ಟೊಮೆಟೊ ಸೇರಿಸಿ. (ನನ್ನ ಮುತ್ತಜ್ಜಿ ಈ ಸಮಯದಲ್ಲಿ ಸಬ್ಬಸಿಗೆ ಸೇರಿಸುತ್ತಿದ್ದರು, ನೀವು ಕೂಡ ಮಾಡಬಹುದು.)
ಈಗ ಪುದೀನ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಬೇಕು.
ಈಗ ನೀವು ಉಪ್ಪು, ಅರಿಶಿನ, ಮೆಣಸಿನ ಪುಡಿ, ಗರಂ ಮಸಾಲಾ ಸೇರಿಸಿ. ಚೆನ್ನಾಗಿ ಕಲೆಸಿ .
ಕೊನೆಯಲ್ಲಿ ರಕ್ತವನ್ನು ಸೇರಿಸಿ
ಚೆನ್ನಾಗಿ ಮಿಶ್ರಣ ಮಾಡಿ, ನಂತರ ಬಾಣಲೆಯನ್ನು ಮುಚ್ಚಿ ಮತ್ತು 5 ನಿಮಿಷ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ.
ಒಲೆಯಿಂದ ತೆಗೆದು ಬಿಸಿಯಾಗಿ ಬಡಿಸಿ.

ಕೃಪೆ : goya.in


ಅನುವಾದ : ರಂಜಿತಾ ಜಿ. ಎಚ್
ಕೃಷಿ, ತಂತ್ರಜ್ಞಾನ ಹಾಗೂ ಸಮಕಾಲೀನ ವಿಷಯಗಳಿಗೆ ಸ್ಪಂದಿಸುವ ಉತ್ಸಾಹಿ. ಫಿಂಲ್ಯಾನ್ಡ್ ನಲ್ಲಿ ವಾಸ. ಸದ್ಯ ಋತುಮಾನದ ಸಂಪಾದನೆಯಲ್ಲಿ ನೆರವಾಗುತ್ತಿದ್ದಾರೆ ಕೂಡ.

One comment to “ನನ್ನ ಬಾಲ್ಯದ ದಿನಗಳ, ಮೇಕೆ ರಕ್ತದ ಫ್ರೈ ಮತ್ತು ಇತರ ದಲಿತ ಅಡುಗೆಗಳು”

ಪ್ರತಿಕ್ರಿಯಿಸಿ