ಆಹಾರದ ಮೇಲಣ ಹಲ್ಲೆ ಮತ್ತು ಹಿಂಸೆಯ ಸಂಗೋಪನೆ

ಇತ್ತೀಚಿನ ವರ್ಶಗಳಲ್ಲಿ ಜನರ ಆಹಾರದ ಆಯ್ಕೆಯ ಹಕ್ಕಿನ ಮೇಲೆ ವ್ಯಾಪಕವಾದ ದಾಳಿ ನಡೆಯುತ್ತಿದೆ. ದನ ಸಾಗಿಸಿದರು. ದನದ ಮಾಂಸ ತಿಂದರು ಎಂದು ಕೊಲ್ಲಲಾಗುತ್ತಿದೆ. ಹಾಗೆಯೇ ಮಾಂಸ ತಿಂದು ದೇವಾಲಯಕ್ಕೆ ಹೋದರು. ಇತ್ಯಾದಿ ವಿಶಯಗಳನ್ನು ಮುಂದು ಮಾಡಿ ಮಾಂಸಾಹಾರದ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ಇದು ಇಂದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇಂತಹ ದಾಳಿಗಳ ಪರಿಣಾಮದಿಂದ ಸಮಾಜದ ಮೇಲೆ ನಿಡುಗಾಲದಲ್ಲಿ ಯಾವ ಪರಿಣಾಮ ಬೀರುತ್ತದೆ? ಸಮಾಜವನ್ನು ಹೇಗೆ ಬಾಧಿಸುತ್ತದೆ? ಎಂಬ ಪ್ರಶ್ನೆಗಳು ಮುಖ್ಯವಾಗುತ್ತವೆ. ಈ ಹಿನ್ನೆಲೆಯಲ್ಲಿ ಸದ್ಯದ ಆಹಾರ ಸಂಸ್ಕøತಿಯ ಮೇಲಿನ ದಾಳಿಯನ್ನು ಕೆಲವು ಉದಾಹರಣೆಗಳ ಮೂಲಕ ವಿವರಿಸಲು ಇಲ್ಲಿ ಯತ್ನಿಸಲಾಗಿದೆ

ಒಂದು. ಬೆಂಗಳೂರಿನ ಹೊರಹೊಲಯದಲ್ಲಿರುವ ನೈಸ್ ರಸ್ತೆಯ ಬದಿ ಎಲೆಕೊಡಿಗೇನಹಳ್ಳಿ (ಸುಂಕದ ಕಟ್ಟೆ ಬಳಿ, ಮಾಗಡಿ ರಸ್ತೆ) ಎಂಬ ಊರಿದೆ. ಇದು ಈಗ ನಗರದ ಹೊಟ್ಟೆಯೊಳಕ್ಕೆ ಸೇರಿಕೊಂಡಿದೆ. ಈ ಊರ ಹೊರಗಣ ದಿನ್ನೆಯಲ್ಲಿ ಮದನಘಟ್ಟಮ್ಮ ಎಂಬ ದೇವಿಯ ದೇವಾಲಯವಿದೆ. ಈ ದೇವಾಲಯವನ್ನು ಕಟ್ಟಿಸಿಕೊಟ್ಟದ್ದು ನೈಸ್ ಕಂಪನಿಯ ಮಾಲೀಕ ಅಶೋಕ್ ಖೇಣಿ. ನೈಸ್ ರಸ್ತೆ ಮಾಡುವಾಗ ಹಳ್ಳಿಯ ಜನ ರಸ್ತೆಯನ್ನು ವಿರೋಧಿಸಿದರು. ಅವರನ್ನು ಸಮಾಧಾನಗೊಳಿಸಲು ಖೇಣಿ ದೇವಾಲಯ ಕಟ್ಟಿಸಿಕೊಡುವ ಮಾತುಕೊಟ್ಟರು. ಅದರಂತೆ ಕಟ್ಟಿಸಿಕೊಟ್ಟಿದ್ದಾರೆ. ಈ ದೇವಾಲಯವನ್ನು ಕಟ್ಟಿಸಿಕೊಡುವ ಮೊದಲು ಅದು ಹುಲ್ಲಿನ ಹೊದಿಕೆ ಹೊಂದಿದ್ದ ಗುಡಿಯಾಗಿತ್ತು. ಹುತ್ತವೇ ದೇವರು. ಗಾಳಿ ಮಳೆಗೆ ಅದು ಆಗಾಗ್ಗೆ ಬಿದ್ದು ಹೋಗುತ್ತಿತ್ತು. ಅದನ್ನು ಕಟ್ಟಿಸಿಕೊಡುವ ಮಾತುಕೊಟ್ಟ ನಂತರ ಜನರು ರಸ್ತೆ ಮಾಡಲು ಅವಕಾಶ ಕೊಟ್ಟರು. ಈಗ ರಸ್ತೆಯೂ ಆಗಿದೆ. ದೊಡ್ಡ ದೇವಾಲಯವು ನಿರ್ಮಾಣವಾಗಿದೆ. ಪ್ರತಿ ವರ್ಶ ದೊಡ್ಡ ಜಾತ್ರೆಯೂ ನಡೆಯುತ್ತದೆ.

ಇಲ್ಲಿನ ವಿಶಯವೆಂದರೆ ದೇವಾಲಯ ನಿರ್ಮಾಣವಾಗುವ ಮೊದಲು ದೇವಸ್ಥಾನದ ಪೂಜಾರಿ ಗೊಲ್ಲರ ಜಾತಿಗೆ ಸೇರಿದ ವ್ಯಕ್ತಿಯಾಗಿದ್ದ. ಗುಡಿ ಗೊಲ್ಲರ ಶ್ರದ್ದಾಕೇಂದ್ರವಾಗಿತ್ತು. ದೇವಾಲಯವನ್ನು ಮರು ಕಟ್ಟಿಸಿದ ನಂತರ ಗೊಲ್ಲರ ಜಾತಿ ಪೂಜಾರಿಯನ್ನು ತೆಗೆದು ಹಾಕಿ ಓರ್ವ ಬ್ರಾಹ್ಮಣನನ್ನು ಪುರೋಹಿತನನ್ನಾಗಿ ನೇಮಿಸಲಾಗಿದೆ. ಯಾಕೆಂದರೆ ಶೂದ್ರರು ಮಡಿ ಮಾಡುವುದಿಲ್ಲ. ಸಂಸ್ಕøತದ ಮಂತ್ರಗಳು ಬರುವುದಿಲ್ಲ. ದೇವಾಲಯದ ಪಾವಿತ್ರ್ಯತೆ ಕಾಪಾಡುವುದಿಲ್ಲ. ಇಲ್ಲಿ ಮಾಂಸಾಹಾರ, ಬಲಿ ಇತ್ಯಾದಿ ಮಾಡಿ ದೇವಾಲಯದ ಪರಿಸರವನ್ನು ಕೆಡಿಸುತ್ತಾರೆ ಇತ್ಯಾದಿ ನೆಪ ನೀಡಿ ಗೊಲ್ಲರ ಪುರೋಹಿತನ ಬದಲು ಬ್ರಾಹ್ಮಣ ಪುರೋಹಿತನನ್ನು ನೇಮಿಸಲಾಗಿದೆ. ಅಂದರೆ ದೇವಸ್ಥಾನದ ಪುರೋಹಿತನನ್ನು ಬದಲಿಸಲು ಮುಖ್ಯ ಕಾರಣವೇ ಮಾಂಸಾಹಾರ ಮತ್ತು ಬಲಿ ಆಚರಣೆಯ ಪದ್ದತಿ. ಮದನಘಟ್ಟಮ್ಮ ದೇವಾಲಯದಲ್ಲಿ ಈ ಮೊದಲು ಬಲಿ ಪದ್ದತಿ ಇತ್ತು. ಗುಡಿಯ ಮುಂದೆಯೇ ಬಲಿ ನೀಡಲಾಗುತ್ತಿತ್ತು. ಈಗ ಅದನ್ನು ನಿಲ್ಲಿಸಿ ಅದನ್ನು ದೂರ ತಳ್ಳಲಾಗಿದೆ. ದೇವಾಲಯದ ಸುತ್ತ ಬಲಿ ಮತ್ತು ಮಾಂಸಾಹಾರವನ್ನು ಮಾಡದಂತೆ ತಡೆಯಲಾಗಿದೆ. ಯಾಕೆಂದರೆ ಅದು ಅದು ಹೊಲಸು. ಅದನ್ನು ಗುಡಿಯ ಬಳಿ ಮಾಡಬಾರದು ಎಂಬ ಅಪಕಲ್ಪನೆಯಿಂದ. ಮಾಂಸಾಹಾರದ ಬಗೆಗೆ ಸಮಾಜದಲ್ಲಿ ಹುಟ್ಟಿಸಿರುವ ಕೀಳರಿಮೆಯಿಂದ ಶೂದ್ರ ಸಮುದಾಯಗಳು ತಮಗೆ ತಾವೇ ಇಂತಹ ನಿಶೇಧಗಳನ್ನು ಹೇರಿಕೊಳ್ಳುತ್ತಿವೆ ಮತ್ತು ದೇವಾಲಯಗಳನ್ನು ಪುರೋಹಿತಶಾಹಿಗೆ ಒಪ್ಪಿಸುತ್ತಿವೆ ಎಂಬುದಕ್ಕೆ ಇದು ಒಂದು ಎತ್ತುಗೆ ಅಶ್ಟೇ. ಇಂತಹ ಎಶ್ಟೋ ಉದಾಹರಣೆಗಳನ್ನು ನೀಡಬಹುದಾಗಿದೆ.
ದೇವಾಲಯವನ್ನು ಬ್ರಾಹ್ಮಣ ಪುರೋಹಿತಶಾಹಿಗೆ ಹೀಗೆ ಒಪ್ಪಿಸುತ್ತ ಹೋದಂತೆ ದೇವಾಯಲದ ಮೇಲಣ ಹಿಡಿತ ಶೂದ್ರರ ಕೈಯಿಂದ ಬ್ರಾಹ್ಮಣರ ಕೈ ಹೋಗುತ್ತದೆ. ಇಂದು ದೇವಾಲಯ ಎನ್ನುವುದು ಬರೀ ಶ್ರದ್ಧಾಕೇಂದ್ರ ಮಾತ್ರವಲ್ಲ. ಅದೊಂದು ಆಸ್ತಿ. ಅದರ ಸುತ್ತ ಆರ್ಥಿಕ ವಹಿವಾಟು ನಡೆಯುತ್ತವೆ. ಈ ವಹಿವಾಟಿನ ಮೇಲೆ ಪುರೋಹಿತರ ಹಿಡಿತ ಹೆಚ್ಚಾಗುತ್ತದೆ. ಕಾಲ ಕಳೆದಂತೆ ಅವರಿಗೆ ಅದರ ಮೇಲೆ ವಂಶಪಾರಂಪರ್ಯ ಹಕ್ಕು ಸೃಶ್ಟಿಯಾಗುತ್ತದೆ. ಅಂದರೆ ಕೀಳರಿಮೆಯಿಂದ ಬ್ರಾಹ್ಮಣರÀನ್ನು ಪುರೋಹಿತರನ್ನಾಗಿ ಮಾಡಿದ ಕಾರಣ ಶೂದ್ರರು ನಿಧಾನವಾಗಿ ತಮ್ಮ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಅಶ್ಟು ಮಾತ್ರವಲ್ಲದೆ ಮೊದಲು ಗರ್ಭಗುಡಿಯಿಂದ ಹೊರ ದಬ್ಬಿಸಿಕೊಳ್ಳುತ್ತಾರೆ. ನಂತರ ನಿಧಾನವಾಗಿ ದೇವಾಲಯದಿಂದಲೇ ದೂರ ಸರಿಯಬೇಕಾಗುತ್ತದೆ. ತಮ್ಮ ದೇವಾಲಯವನ್ನು ಪುರೋಹಿತಶಾಹಿಗೆ ಒಪ್ಪಿಸಿ ಅವರ ಎದುರು ನಡು ಬಗ್ಗಿಸಿ ನಿಲ್ಲಬೇಕಾಗುತ್ತದೆ. ಈಗಾಗಲೇ ನಿಲ್ಲಲಾಗುತ್ತಿದೆ. ಅಂದರೆ ಮಾಂಸಾಹಾರ ಮತ್ತು ಅದನ್ನು ಒಳಗೊಂಡ ಆಚರಣಾ ಪದ್ದತಿಯನ್ನು ಹೊಲಸು ಕೀಳು ಎಂದು ಪ್ರಚಾರ ಮಾಡಿ ತಳಸಮುದಾಯಗಳನ್ನು ಮಾನಸಿಕವಾಗಿ ಸೋಲಿಸಿದರೆ ನಂತರ ಜನರೇ ಹೇಗೆ ಭೌತಿಕವಾಗಿ ಸೋಲುತ್ತಾರೆ ಎಂಬುದಕ್ಕೂ ಇದು ಎತ್ತುಗೆ. ಮಾಂಸಾಹಾರದ ಮೇಲೆ ದಾಳಿ ಮಾಡುತ್ತ ಜನರನ್ನು ಮಾನಸಿಕವಾಗಿ ಸೋಲಿಸುತ್ತಲೇ ಬರಲಾಗುತ್ತಿದೆ. ಅದು ಮುಂದುವರಿದ ಕಾರಣಕ್ಕಾಗಿ ಶೂದ್ರರಲ್ಲಿ ಮನೆಗಳ ಗೃಹಪ್ರವೇಶಕ್ಕೆ ಮಾಂಸಾಹಾರ ಮಾಡುತ್ತಿದ್ದವರು ಈಗ ಅದನ್ನು ನಿಶೇಧಿಸಿಕೊಂಡಿದ್ದಾರೆ. ಹಲವರು ಮದುವೆಗಳಿಂದಲೂ ಹೊರಗಿಡುತ್ತಿದ್ದಾರೆ. ಹಾಗೆ ಹೊರಗಿಡಲು ಕಾರಣವೇ ಅದು ಅಶುದ್ಧ ಹೊಲಸು ಎಂಬುದೇ ಕಾರಣವಾಗಿದೆ. ಇತ್ತೀಚೆಗೆ ಮಾಧ್ಯಮಗಳಲ್ಲಿ ಇದರ ಬಗೆಗೆ ವ್ಯಾಪಕ ಪ್ರಚಾರವಾಗುತ್ತಿರುವುದರಿಂದ ಜನರು ಸಹಜವಾಗಿಯೇ ಅವುಗಳಿಂದ ಪ್ರಭಾವಿತರಾಗಿ ಕೀಳರಿಮೆಗೆ ಒಳಗಾಗಿ ಮಾಂಸಾಹಾರದ ಬಗೆಗೆ ಮುಕ್ತವಾಗಿ ಮಾತಾಡುವುದನ್ನೇ ನಿಲ್ಲಿಸುತ್ತಿದ್ದಾರೆ. ಮಾಂಸಾಹಾರದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಪರಿಣಾಮವಾಗಿಯೇ ಇಂತಹ ಸನ್ನಿವೇಶ ಸೃಶ್ಟಿಯಾಗಿದೆ.

ಎರಡು. ಈಚೆಗೆ ಹುಬ್ಬಳ್ಳಿಯ ಕೋರ್ಟ್‍ನಲ್ಲಿ ಒಂದು ಪ್ರಕರಣ ದಾಖಲಾಯಿತು. ಒಂದು ಸಂಜೆ ಪೋಲಿಸರು ಒಬ್ಬ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಆತನ ಮೇಲೆ ಹೊರಿಸಿದ್ದ ಆರೋಪ ಆತ ಅಕ್ರಮವಾಗಿ ದನ ಸಾಗಿಸುತ್ತಿದ್ದ ಎಂದು. ರಾಜ್ಯದಲ್ಲಿರುವ ಜಾನುವಾರು ಹತ್ಯೆ ತಡೆ ಮತ್ತು ರಕ್ಶಣೆಯ ಕಾಯ್ದೆಯ ಅವಕಾಶವನ್ನು ಬಳಸಿ ಆತನ ಮೇಲೆ ಜಾಮೀನುರಹಿತವಾದ ಮೊಕದ್ದಮೆ ಹೂಡಲಾಗಿತ್ತು. ಬಂಧನವಾಗುವವರೆಗೂ ಆ ವ್ಯಕ್ತಿ ನಿರಪರಾಧಿಯಾಗಿದ್ದ. ಬಂಧನವಾದ ಕೂಡಲೇ ಆತ ಆರೋಪಿ. ನಂತರ ಅಪರಾಧಿಯಾಗಿ ಶಿಕ್ಶೆಯೂ ಆಗಬಹುದು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ದನ ಖರೀದಿಸಿ ಸಾಗಾಟ ಮಾಡುವ ಕೆಲಸವನ್ನು ಕಳೆದ ಇಪ್ಪತ್ತು ವರ್ಶಗಳಿಂದಲೂ ಆತ ಮಾಡುತ್ತಿದ್ದ. ಅದು ಅವನ ವೃತ್ತಿಯಾಗಿತ್ತು. ಅವನು ಅನಕ್ಶರಸ್ತ. ಕಡು ಬಡವ. ಜಾನುವಾರು ಹತ್ಯೆ ತಡೆ ಕಾಯ್ದೆ ಜಾರಿಗೆ ಬಂದ ನಂತರ ಅದನ್ನು ಮುಕ್ತವಾಗಿ ಮಾಡುವಂತಿರಲಿಲ್ಲ. ಹಾಗಾಗಿ ಪೋಲಿಸರು, ಗೋರಕ್ಶಕರ ಗಮನಕ್ಕೆ ಬಾರದ ಹಾಗೆ ದನ ಸಾಗಿಸುವ ಕೆಲಸ ಮಾಡುತ್ತಿದ್ದರು. ಮಾಹಿತಿದಾರರು ನೀಡಿದ ಮಾಹಿತಿ ಆಧರಿಸಿ ಆತನನ್ನು ಬಂಧಿಸಲಾಗಿದೆ. ಈಗ ಆತ ಖೈದಿ. ಇನ್ನು ಆತ ಹೊರಬರಲು ಅದೆಶ್ಟು ಕಶ್ಟಪಡಬೇಕೋ ತಿಳಿಯದು. ವಕೀಲರನ್ನಿಟ್ಟುಕೊಂಡು ನ್ಯಾಯಪಡೆಯುವುದು ಕಶ್ಟದ ಹಾದಿ. ಈ ನಡುವೆ ಆತನ ಬದುಕು ಕುಟುಂಬದ ಸ್ಥಿತಿಯ ಪಾಡು ಊಹೆಗೆ ನಿಲುಕದು. ಆತ ಇಂತಹ ಇಕ್ಕಟ್ಟಿಗೆ ಸಿಲುಕಲು ಕಾರಣ ಮಾಂಸಾಹಾರದ ಮೇಲಣ ಕಾನೂನುಬದ್ಧ ದಾಳಿ. ಮಾಂಸಾಹಾರವನ್ನು ರಾಜಕೀಯ ಅಜೆಂಡಾ ಆಗಿಸಿದ ಪರಿಣಾಮವಿದು. ಸಮಾಜದ ಮೇಲೆ ದಬ್ಬಾಳಿಕೆ ನಡೆಸಲು ಕೆಲವರು ಸರ್ಕಾರದ ಮೇಲೆ ಒತ್ತಡ ಹೇರಿ ಕಾಯ್ದೆ ಜಾರಿಗೆ ತರಲು ಯತ್ನಿಸಿದ್ದು ಇದಕ್ಕೆ ಕಾರಣ. ಅದರಲ್ಲಿಯೂ ದನವನ್ನು ‘ಪವಿತ್ರ’ವೆಂದು ಪ್ರಚಾರ ಮಾಡಿ ಜನರ ಭಾವನೆಗಳನ್ನು ಕೆರಳಿಸಿ ದನ ತಿನ್ನುವವರನ್ನು ಸಮಾಜವಿರೋಧಿಗಳು, ದೇಶದ್ರೋಹಿಗಳು ಹಿಂದೂ ವಿರೋಧಿಗಳು ಎಂದು ಬಿಂಬಿಸಿ ಮಾಂಸಾಹಾರ ಸೇವಿಸುವವರನ್ನು ಅಪರಾಧಿಗಳನ್ನಾಗಿಸಲಾಗುತ್ತಿದೆ. ಆ ಮೂಲಕ ಒಂದಿಡೀ ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸಲಾಗುತ್ತಿದೆ. ಅಂದರೆ ಇಲ್ಲಿ ವ್ಯವಸ್ಥಿತವಾಗಿ ಆರೋಪಿಗಳು ಮತ್ತು ಅಪರಾಧಿಗಳನ್ನು ವ್ಯವಸ್ಥೆಯೇ ಉತ್ಪಾದಿಸುತ್ತಿದೆ. ಆ ಮೂಲಕ ಒಂದು ಸಮುದಾಯದ ಆರ್ಥಿಕ ಮತ್ತು ದುಡಿಮೆಯ ಮೂಲವನ್ನೇ ನಾಶಪಡಿಸಲಾಗುತ್ತಿದೆ. ಆ ಮೂಲಕ ಜನರ ಅನ್ನಕ್ಕೆ ಕನ್ನ ಹಾಕಲಾಗುತ್ತಿದೆ. ಇದಕ್ಕೆ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಅವರನ್ನೇ ಆಯುಧಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ.

ಮೂರು. ಇತ್ತೀಚೆಗೆ ಮಾಂಸ ತಿಂದು ದೇವಾಲಯಕ್ಕೆ ಹೋಗುವುದನ್ನು ದೊಡ್ಡ ಅಪರಾಧ ಎಂಬಂತೆ ಬಿಂಬಿಸಲಾಗುತ್ತಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವಾಲಯಕ್ಕೆ ಹೋದ ಪ್ರಸಂಗವನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಯಿತು. ಈ ಪ್ರಕರಣದ ಮೂಲಕ ಮಾಂಸಾಹಾರ ತಿನ್ನುವ ಶೂದ್ರ ದಲಿತ ಆದಿವಾಸಿ ಸಮುದಾಯಗಳ ವಿರುದ್ಧ, ಮಾಂಸಾಹಾರ ಸೇವಿಸದ ಬ್ರಾಹ್ಮಣರು, ಲಿಂಗಾಯತರು ಮತ್ತು ಜೈನರನ್ನು ಎತ್ತಿ ಕಟ್ಟಲಾಯಿತು. ಮಾಂಸ ತಿಂದು ದೇವಾಲಯಗಳಿಗೆ ಹೋಗುವುದು ಬಹೊದೊಡ್ಡ ಅಪರಾಧ ಎಂಬಂತೆ ಬಿಂಬಿಸಲಾಯಿತು. ಈ ಅಪಪ್ರಚಾರ ಒಟ್ಟು ಶೂದ್ರ ಮತ್ತು ದಲಿತ ಸಮುದಾಯಗಳ ಆಹಾರ ಸಂಸ್ಕøತಿ ಮತ್ತು ಆಚರಣಾ ಪದ್ದತಿಯ ಮೇಲೆ ನಡೆಸಿದ ತೀವ್ರ ದಾಳಿ. ಯಾಕೆಂದರೆ ತಳಸಮುದಾಯಗಳಲ್ಲಿ ಮಾಂಸಾಹಾರ ದೇವರ ಪೂಜೆಗಳಲ್ಲಿ ನಿಶಿದ್ಧವಲ್ಲ. ಊರ ಜಾತ್ರೆಗಳಲ್ಲಿ, ಹರಕೆಗಳಲ್ಲಿ, ಮುಡಿ ತೆಗೆಸುವುದು, ಗೃಹಪ್ರವೇಶ ಮುಂತಾದ ಸಮಾರಂಭಗಳಲ್ಲಿ ಮಾಂಸಾಹಾರವನ್ನೇ ಮಾಡಲಾಗುತ್ತದೆ. ಪಿತೃಪಕ್ಶದ ಪೂಜೆಯಲ್ಲಿಯೂ ಮಾಂಸಾಹಾರವನ್ನೇ ಮಾಡಲಾಗುತ್ತದೆ. ಮೈಸೂರು ಭಾಗದಲ್ಲಿ ಪ್ರಸಿದ್ದವಾಗಿರುವ ಮಂಟೇಸ್ವಾಮಿ ಜಾತ್ರೆಯಲ್ಲಿ ಮಾಂಸಾಹಾರವೇ ಪ್ರಧಾನ ಆಹಾರ. ಅಂದರೆ ದಲಿತ ಶೂದ್ರ ಆದಿವಾಸಿಗಳನ್ನು ಒಳಗೊಂಡ ಬಹುಸಂಖ್ಯಾತ ಜನಸಮುದಾಯಳಲ್ಲಿ ಮಾಂಸಾಹಾರ ಅವರ ದೈವ ಕಾರ್ಯಗಳ ಭಾಗ. ಅಲ್ಲಿ ಅದು ನಿಶಿದ್ಧವಲ್ಲ. ಆದರೆ ಈಚೆಗೆ ಈ ಆಚರಣೆಗಳ ಆಹಾರ ಪದ್ದತಿಯ ಮೇಲೆ ತೀವ್ರ ದಾಳಿ ನಡೆಯುತ್ತಿದೆ. ಆ ಮೂಲಕ ಈ ಸಮುದಾಯಗಳನ್ನು ಇನ್ನಶ್ಟು ಕೀಳುಗಳೆವ ಮಾಂಸಾಹಾರವನ್ನು ದೈವ ಕಾರ್ಯಗಳಿಂದ ಹೊರಗಿಡುವಂತೆ ಒತ್ತಾಯಿಸಲಾಗುತ್ತಿದೆ. ಇಂತಹ ಒತ್ತಡಗಳಿಗೆ ಸಿಕ್ಕಿದ ಕೆಲವರು ಈಗಾಗಲೇ ಇದಕ್ಕೆ ನಿಶೇಧವನ್ನು ಹೇರಿಕೊಳ್ಳುತ್ತಲೂ ಇದ್ದಾರೆ. ಮಾಂಸಾಹಾರ ಮತ್ತು ದೈವಾಚಾರಣೆಗಳು ತಳಸಮುದಾಯಗಳಲ್ಲಿ ಒಂದರೊಳಗೊಂದು ಬೆರೆತುಕೊಂಡಿವೆ. ಈಗ ಅದನ್ನು ಬೇರ್ಪಡಿಸುವ ವ್ಯವಸ್ಥಿತ ಹುನ್ನಾರ ನಡೆದಿದೆ.

ನಾಲ್ಕು. ನಾನು ಕರಾವಳಿಯ ಪುಟ್ಟ ಪಟ್ಟಣವಾದ ಹೊನ್ನಾವರದಲ್ಲಿ ಕೆಲಸ ಮಾಡುತ್ತ ಅಲ್ಲಿ ವಾಸವಾಗಿದ್ದೇನೆ. ಅಲ್ಲಿ ಗಾಳಿಯಲ್ಲಿ ಬೆಳಕಿನಲ್ಲಿ ದ್ವೇಶದ ಕಿಡಿಗಳು ರವಾನೆಯಾಗುತ್ತವೆ. ದನ ಸಾಗಿಸುವ ಯಾವುದೇ ವಾಹನಗಳು ರಸ್ತೆ ಮೇಲೆ ಕಂಡರೂ ಆ ಸುದ್ದಿಯನ್ನು ಕೂಡಲೇ ಪೋಲೀಸು ಠಾಣೆಗಳಿಗೆ ಮುಟ್ಟಿಸಲಾಗುತ್ತದೆ. ಗೋರಕ್ಶಣೆ ಗುತ್ತಿಗೆ ಪಡೆದ ಜನರ ಗುಂಪುಗಳಿಗೆ ಸುದ್ದಿ ಮುಟ್ಟಿಸಲಾಗುತ್ತದೆ. ಇದನ್ನು ಇಲ್ಲಿನ ವ್ಯಾಪಾರಿಗಳು, ಆಟೋ ಚಾಲಕರು ಮಾಡುತ್ತಾರೆ. ಇವರು ಸದಾ ಒಂದು ಕಣ್ಣನ್ನು ರಸ್ತೆಯ ಮೇಲೆ ಮೇಲೆ ಇಟ್ಟಿರುತ್ತಾರೆ. ಅವರು ಕೂಡಲೇ ಸಂಬಂಧಿಸಿದವರಿಗೆ ಸುದ್ದಿ ಮುಟ್ಟಿಸುತ್ತಾರೆ. ಹೀಗೆ ಮಾಡುವವರೆಲ್ಲರೂ ಮೀನು ತಿನ್ನುವವರು, ಕೋಳಿ ತಿನ್ನುವ ಶೂದ್ರರಾಗಿರುತ್ತಾರೆ. ಇವರು ದನ ಸಾಗಿಸುವವರ ವಿರುದ್ಧ ದೂರು ನೀಡುತ್ತಾರೆ. ಅಗತ್ಯವಿದ್ದಾಗ ದಾಳಿಯ ನೇತೃತ್ವವನ್ನು ತಾವೇ ವಹಿಸುತ್ತಾರೆ. ಯಾಕೆಂದರೆ ಅವರಿಗೆ ದನ ಸಾಗಿಸುವವರು ಮತ್ತು ದನದ ಮಾಂಸ ತಿನ್ನುವವರು ತಮ್ಮ ಧರ್ಮ ವಿರೋಧಿಗಳು ಎಂದು ಅವರೊಳಗೆ ದ್ವೇಶದ ಬೀಜ ಬಿತ್ತಲಾಗಿದೆ. ಹಾಗಾಗಿಯೇ ಅವರು ಹಿಂಸೆಯ ಅಸ್ತ್ರಗಳಂತೆಯೂ ಕೆಲಸ ಮಾಡುತ್ತಾರೆ. ಅಂದರೆ ಇಲ್ಲಿ ಶೂದ್ರರು ಮುಸ್ಮೀಮರ ವಿರುದ್ದ ಸದಾ ದ್ವೇಶದ ಹಗೆ ಸಾಧಿಸುವುದು ಎದ್ದು ಕಾಣಿಸುತ್ತದೆ. ಹಗೆ ಸಾಧಿಸುವ ಹಾಗೆ ಶೂದ್ರ ಸಮುದಾಯದ ಜನರ ಮನಸ್ಸನ್ನು ವಿಶಮಯಗೊಳಿಸಲಾಗಿದೆ. ಅಶ್ಟರ ಮಟ್ಟಿಗೆ ಅಲ್ಪಸಂಖ್ಯಾತರು ಮತ್ತು ತಳಸಮುದಾಯಗಳ ನಡುವೆ ದ್ವೇಶದ ಗೋಡೆ ಕಟ್ಟಲಾಗಿದೆ. ಇಲ್ಲಿ ಸಂಶಯ ಅನುಮಾನದ ಕಿಡಿಗಳ ಮೇಲೆ ಸದಾ ದ್ವೇಶದ ಗಾಳಿ ಬೀಸುತ್ತಲೇ ಇರುತ್ತದೆ. ಅದು ಯಾವಾಗ ಬೇಕೋ ಆಗ ಸ್ಪೋಟಿಸಬಹುದು. ದ್ವೇಶದ ಒಲೆ ಸದಾ ಉರಿಯುವಂತೆ ನೋಡಿಕೊಳ್ಳಲಾಗುತ್ತಿದೆ. ದ್ವೇಶದ ಜ್ವಾಲಾಮುಖಿಯನ್ನು ಸಜ್ಜುಗೊಳಿಸಿ ಸದಾ ಜೀವಂತವಾಗಿಡಲಾಗುತ್ತಿದೆ. ಅಂದರೆ ನಮ್ಮ ಸಮಾಜದಲ್ಲಿ ದ್ವೇಶದ ಕಿಚ್ಚು ಯಾವುದೇ ಕ್ಶಣದಲ್ಲಿ ಸ್ಪೋಟಿಸುವ ಸಾಧ್ಯತೆ ಇರುತ್ತದೆ. ಹಾಗೆ ಸ್ಪೋಟಿಸಲು ಸಾಧ್ಯವಾಗುವಂತೆ ಇಲ್ಲಿ ಮನಸ್ಸುಗಳನ್ನು ತಿದ್ದಲಾಗಿದೆ. ಹಾಗಾಗಿಯೇ ಅತ್ಯಂತ ಕ್ಶುಲ್ಲಕ ಸಂಗತಿಗಳಿಗೂ ಕೋಮು ಗಲಭೆಗಳು ಸ್ಪೋಟಗೊಳ್ಳುತ್ತವೆ.

ಈ ನಾಲ್ಕು ಎತ್ತುಗೆಗಳನ್ನು ಗಮನಿಸಿದರೆ ದಲಿತರು, ಅಲ್ಪಸಂಖ್ಯಾತರ ವಿರುದ್ಧ ಶೂದ್ರರನ್ನು, ಶೂದ್ರರ ವಿರುದ್ದ ಲಿಂಗಾಯತರು, ಬ್ರಾಹ್ಮಣ ಮತ್ತು ಜೈನರನ್ನು ಎತ್ತಿಕಟ್ಟಿರುವುದು ಕಾಣಿಸುತ್ತದೆ. ಅಂದರೆ ಸಮಾಜದ ವಿವಿಧ ಸಮುದಾಯಗಳ ನಡುವೆ ಆಹಾರ ಪದ್ದತಿಯನ್ನೇ ಬಳಸಿಕೊಂಡು ದ್ವೇಶವನ್ನು ಬಿತ್ತಿ ಜನರನ್ನು ವಿಭಜಿಸಿರುವುದು ಎದ್ದು ಕಾಣಿಸುತ್ತದೆ. ದ್ವೇಶದ ಕುಲುಮೆಗೆ ತಿದಿಯೊತ್ತುತ್ತಲೇ ಹಿಂಸೆಯ ಕೃಶಿ ನಡೆಸಲಾಗುತ್ತದೆ. ಇದರ ಭಾಗವಾಗಿಯೇ ಹಲಾಲ್ ಮತ್ತು ಜಟ್ಕಾ ಮಾಂಸಗಳ ವಿವಾದ ಹುಟ್ಟಿ ಹಾಕಿದ್ದು. ಅದನ್ನು ಸಂಘರ್ಶದ ಆತ್ಯಂತಿಕ ಮಟ್ಟಕ್ಕೆ ಕೊಂಡೊಯ್ದದ್ದು. ಆದರೆ ಜನರು ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ರೈತರು ಬೆಳೆ ಸಂಗೋಪನೆ ಮಾಡಿದಂತೆ, ಪಶುಪಾಲಕರು ಪಶುಸಂಗೋಪನೆ ಮಾಡಿದಂತೆ ಈ ದೇಶದ ಸನಾತನವಾದಿಗಳು ಹಿಂಸೆಯ ಸಂಸ್ಕøತಿಯನ್ನು ಸಂಗೋಪನೆ ಮಾಡುತ್ತಿದ್ದಾರೆ. ಆ ಮೂಲಕ ಹಿಂಸಾ ವಿನೋಧ ಅನುಭವಿಸಲಾಗುತ್ತದೆ. ಹಾಗಾಗಿ ಒಂದಿಲ್ಲೊಂದು ನೆಪ ತೆಗೆದು ಆಹಾರದ ಮೇಲೆ ನಿರಂತರ ದಾಳಿ ಮಾಡಲಾಗುತ್ತಿದೆ. ವಿವಿಧ ಕಾರಣಗಳನ್ನು ಮುಂದುಮಾಡಿ ಸಮುದಾಯಗಳ ನಡುವೆ ದ್ವೇಶ ಬಿತ್ತಿ ಬೆಳೆದರೆ ಹಿಂಸೆಯು ಸಮಾಜದ ನಿತ್ಯದ ವಿದ್ಯಮಾನವಾಗಿ ಬಿಡುತ್ತದೆ. ದ್ವೇಶದಿಂದ ಕಿಚ್ಚು ಹೊತ್ತಿ ಉರಿಯುತ್ತಿದ್ದರೆ ಈ ನಾಡು ಎಂದಾದರು ‘ಸರ್ವ ಜನಾಂಗದ ಶಾಂತಿ ತೋಟ’ವಾಗಿ ನಿರ್ಮಾಣವಾಗಲು ಸಾಧ್ಯವೇ? ಹಿಂಸಾ ಸಂಸ್ಕøತಿಯ ಸಂಗೋಪನೆಯನ್ನು ಒಂದು ವ್ಯವಸ್ಥೆಯೇ ಮಾಡುವುದನ್ನು ನೆನೆದರೆ ಭಯಾನಕದ ಚಿತ್ರಗಳು ಕಣ್ಣೆದುರು ಬಂದು ನಿಲ್ಲುತ್ತವೆ. ಅದನ್ನು ಊಹಿಸಿಕೊಳ್ಳುವುದೇ ಭೀಭತ್ಸಕರವಾಗಿರುತ್ತದೆ. ಕ್ಶುಲ್ಲಕ ಕಾರಣಗಳಿಗಾಗಿ ಸಮುದಾಯಗಳು ಅಂತಃಕಲಹದಲ್ಲಿ ತೊಡಗಿದರೆ ಅದಕ್ಕೆ ಎಂದಾದರೆ ಕೊನೆ ಇರುತ್ತದೆಯೇ? ಇದು ನಿಡುಗಾಲದಲ್ಲಿ ದೇಶವನ್ನು ಅಂತರ್ ಯುದ್ಧಕ್ಕೆ ತಳ್ಳುವುದಿಲ್ಲ ಎಂದು ಹೇಳಲಾದೀತೇ? ದೇಶವನ್ನು ಅಂತರ್ ಯುದ್ಧಕ್ಕೆ ತಳ್ಳಲೆಂದೆ ಇಲ್ಲಿ ಒಂದಿಲ್ಲೊಂದು ನೆಪ ತೆಗೆದು ದ್ವೇಶವನ್ನು ಬೆಳೆಸಲಾಗುತ್ತಿದೆ ಎನ್ನಿಸುತ್ತದೆ.

ಯಾಕೆ ಇಂತಹ ಹಿಂಸಾ ಸಂಸ್ಕøತಿಯನ್ನು ಸಂಗೋಪನೆ ಮಾಡಲಾಗುತ್ತಿದೆ? ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ. ಮುಖ್ಯವಾಗಿ ಈ ಹಿಂಸಾ ಸಂಸ್ಕøತಿಯನ್ನು ಬೆಳೆಸುತ್ತಿರುವುದು ಸನಾತನ ಪುರೋಹಿತಶಾಹಿಗಳು. ಈ ಸನಾತನಿಗಳು ವರ್ಣವ್ಯವಸ್ಥೆಯನ್ನು ಹುಟ್ಟಿ ಹಾಕಿದ ಲಾಗಾಯ್ತಿನಿಂದಲೂ ಶ್ರೇಶ್ಟತೆಯ ವ್ಯಸನದಲ್ಲಿ ಮುಳುಗಿದ್ದಾರೆ. ಸಮಾಜದಲ್ಲಿ ತಾವು ಎಲ್ಲರಿಗಿಂತಲೂ ಶ್ರೇಶ್ಟ ಎಂದು ಭಾವಿಸಿಕೊಳ್ಳಬೇಕು. ಇಡೀ ಸಮಾಜದ ಮೇಲೆ ತಮ್ಮದೇ ಯಜಮಾನಿಕೆ ಇರಬೇಕು. ಇಲ್ಲಿನ ಜನರು ತಗ್ಗ ಬಗ್ಗಿ ಗುಲಾಮರಾಗಿ ಬಾಳಬೇಕು. ದೇಶದ ಸಂಪತ್ತು ತಮ್ಮ ನಿಯಂತ್ರಣದಲ್ಲಿಯೇ ಇರಬೇಕೆಂದು ಭಾವಿಸುತ್ತಾರೆ. ಹಾಗಾಗಿ ಎಲ್ಲದರಲ್ಲಿಯೂ ಶ್ರೇಶ್ಟತೆಯನ್ನು ಹುಡುಕುತ್ತಾರೆ ಮತ್ತು ತಾವು ಶ್ರೇಶ್ಟರು ಎಂದು ಬಿಂಬಿಸಿಕೊಳ್ಳಲು ವಿವಿಧ ದಾರಿಗಳನ್ನು ಹುಡುಕುತ್ತಾರೆ. ಇದಕ್ಕೆ ದೇವರು, ಧರ್ಮ, ಸಂಸ್ಕøತ ಭಾಶೆ, ವೇದಗಳು, ಉಪನಿಶತ್ತುಗಳು, ಗೀತೆ, ಪ್ರತಿಭೆ ಮತ್ತು ತಾವು ಮಾಡುವ ವೃತ್ತಿ ಎಲ್ಲವನ್ನು ಶ್ರೇಶ್ಟವೆಂದು ಬಿಂಬಿಸಿಕೊಳ್ಳುತ್ತಾರೆ. ಅವುಗಳ ಸಾಲಿಗೆ ತಮ್ಮ ಆಹಾರ ಕ್ರಮವನ್ನು ಸೇರಿಸಿಕೊಂಡಿದ್ದಾರೆ. ತಮ್ಮ ಆಹಾರ ಸಾತ್ವಿಕವಾದುದು. ಶುದ್ಧವಾದುದು ಎಂದು ಮುಂಚಿನಿಂದಲೂ ಬಿಂಬಿಸಿಕೊಂಡು ಬಂದಿದ್ದಾರೆ. ಇಂತಹ ಶ್ರೇಶ್ಟತೆಯ ವ್ಯಸನದ ವಿರುದ್ಧವಾಗಿಯೇ ಕನಕ ‘ರಾಮಧಾನ್ಯ ಚರಿತೆ’ ಎಂಬ ಕಾವ್ಯವನ್ನು ಬರೆದು ಪ್ರತಿಭಟಿಸಿದ್ದು. ಈಗ ಅದಕ್ಕೆ ತೀವ್ರ ಸಂಘರ್ಶದ ರೂಪ ನೀಡಿದ್ದಾರೆ ಅಶ್ಟೇ. ಒಟ್ಟು ತಮ್ಮನ್ನು ತಾವು ಶ್ರೇಶ್ಟವೆಂದು ಬಿಂಬಿಸಿಕೊಳ್ಳುತ್ತ ಉಳಿದವರನ್ನು ಕೀಳುಮಟ್ಟಕ್ಕೆ ತಳ್ಳುವ ಪ್ರಯತ್ನ ಮಾಡಲಾಗುತ್ತದೆ. ವೈದಿಕಶಾಹಿಯ ಈ ಬಲೆಗೆ ಸಿಕ್ಕಿದ ಶರಣರು ಕೂಡ ಮಾಂಸಾಹಾರದ ವಿರುದ್ಧ ತೀವ್ರ ದಾಳಿ ನಡೆಸಿದರು. ಇದು ಕೂಡ ಸಮಾಜದಲ್ಲಿ ಮಾಂಸಾಹಾರದ ಬಗೆಗೆ ಕೀಳರಿಮೆ ಉಂಟಾಗಲು ಕಾರಣವಾಗಿದೆ. ಮಾಂಸಾಹಾರದ ವಿರುದ್ಧದ ಹೋರಾಟದಲ್ಲಿ ಇಂದು ಲಿಂಗಾಯತರೇ ಮುಂಚೂಣಿಯಲ್ಲಿರುವುದನ್ನು ಗಮನಿಸಿದರೆ ಇದು ಸ್ಪಶ್ಟವಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ಕೊಡುವುದನ್ನು ಹೆಚ್ಚು ವಿರೋಧಿಸಿದ್ದು ಲಿಂಗಾಯತ ಮಠಗಳು. ಈ ಮಠಗಳು ವೈದಿಕಶಾಹಿ ಹೆಣೆದ ಬಲೆಯಲ್ಲಿ ಬಿದ್ದು ಒದ್ದಾಡುತ್ತಿವೆ. ಅಂದರೆ ಮೊದಲಿನಿಂದಲೂ ಮಾಂಸಾಹಾರದ ಮೇಲೆ ನಮ್ಮ ಸಮಾಜದಲ್ಲಿ ದಾಳಿ ಮಾಡುತ್ತಲೇ ಬರಲಾಗುತ್ತಿದೆ. ಈಗ ಇನ್ನಶ್ಟು ತೀವ್ರ ಸಂಘರ್ಶದ ರೂಪ ಪಡೆದು ಬೆಳೆದಿದೆ. ಹಿಂಸೆ ಅದರ ಉತ್ಪನ್ನವಾಗಿದೆ. ಇಂತಹ ಹಿಂಸಾ ಸಂಗೋಪನೆಯ ಹಾದಿಯಲ್ಲಿ ಸನಾತನವಾದಿಗಳು ಯಾರನ್ನು ಬೇಕಾದರೂ ಕೊಂದು ತಮ್ಮ ಶ್ರೇಶ್ಟತೆಯನ್ನು ಸಾಧಿಸುವ ಕೆಲಸ ಮಾಡುತ್ತಾರೆ ಎಂಬುದೇ ಇಲ್ಲಿ ಗಮನಿಸಬೇಕಾದ ವಿಚಾರ.

ಹೀಗೆ ಹಿಂಸೆಯ ಸಂಗೋಪನೆಯಲ್ಲಿ ತೊಡಗಿದ ಸನಾತನವಾದಿಗಳಿಗೆ ಒಂದು ಸಣ್ಣ ಪಾಪಪ್ರಜ್ಞೆಯಾಗಲಿ ನಾಚಿಕೆಯಾಗಲಿ ಇರುವುದಿಲ್ಲ ಎಂಬುದು ಆತಂಕಕಾರಿ ವಿಚಾರ. ಅವರು ತಮ್ಮ ಸ್ವಾರ್ಥಕ್ಕೆ ಯಾರನ್ನು ಬೇಕಾದರೂ ಬಲಿಕೊಡುತ್ತಾರೆ. ತಾವು ಎಂದೂ ಮುನ್ನೆಲೆಯಲ್ಲಿ ಕಾಣಿಸಿಕೊಳ್ಳದೆ ತೆರೆಮರೆಯಲ್ಲಿಯೇ ಇದ್ದು ಗುದ್ದಾಟಕ್ಕೆ ತಳಸಮುದಾಯಗಳನ್ನು ಕಾಲಾಳುಗಳನ್ನಾಗಿ ಬಳಸಿಕೊಂಡು ಅವರನ್ನು ಬಲಿಗೊಟ್ಟು ತಮ್ಮ ಯಜಮಾನಿಕೆಯನ್ನು ಸ್ಥಾಪಿಸುತ್ತಾರೆ. ಸಮಾಜದಲ್ಲಿ ಬ್ರಾಹ್ಮಿನಿಕಲ್ ಮೌಲ್ಯಗಳು ಮುಂಚೂಣಿಗೆ ಬರುವಂತೆ ನೋಡಿಕೊಂಡು ಆ ಮೂಲಕ ಸಮಾಜವನ್ನು ಆಳಲಾಗುತ್ತದೆ. ಮೊದಲಿನಿಂದಲೂ ಇದು ಹೀಗೆಯೇ ನಡೆದುಕೊಂಡು ಬಂದಿತ್ತು. ಸ್ವಾತಂತ್ರ್ಯ ನಂತರ ಈ ಏಳು ದಶಕಗಳಲ್ಲಿ ಸಾಕಶ್ಟು ಸುಧಾರಣೆಯಾಗಿ ವೈದಿಕಶಾಹಿಯ ಬುಡಕ್ಕೆ ಬೆಂಕಿ ಬಿದ್ದು ಸುಡುತ್ತಿತ್ತು. ಆ ಬೆಂಕಿಯನ್ನು ನಂದಿಸಿಕೊಳ್ಳುವುದಕ್ಕಾಗಿಯೇ ಮತೀಯ ರಾಜಕಾರಣವನ್ನು ಮುಂಚೂಣಿಗೆ ತಂದು ಸಮಾಜವನ್ನು ವಿಭಜಿಸಿ ಅದು ಮತ್ತೆ ವರ್ಣಾಶ್ರಮ ವ್ಯವಸ್ಥೆಯ ಕೂಪದಲ್ಲಿಯೇ ಬಿದ್ದಿರುವಂತೆ ಮಾಡಲಾಗುತ್ತಿದೆ. ಮೌಢ್ಯಗಳ ಗಂಜಲದ ಗುಂಡಿಗಳಲ್ಲಿ ಜನರು ಮಿಂದೇಳುವಂತೆ ಮಾಡುತ್ತಿದೆ.

ಅಲ್ಲದೆ ಈ ಸನಾತನವಾದಿಗಳು ಈಗ ಹಿಂದೂತ್ವವಾದಿ ರಾಶ್ಟ್ರೀಯತೆಯ ಸಿದ್ದಾಂತವನ್ನು ಮುಂದು ಮಾಡಿದ್ದಾರೆ. ಹೀಗೆ ಮಾಡುತ್ತ ಹಿಂದೂತ್ವವಾದಿ ರಾಶ್ಟ್ರವು ಬಹುತ್ವ ಆಹಾರ ಪದ್ದತಿ ಇರುವ ರಾಶ್ಟ್ರವೆಂದು ಬಿಂಬಿಸದೆ ಅದನ್ನು ಕೇವಲ ಸಸ್ಯಾಹಾರಿ ‘ಸಾತ್ವಿಕ ಆಹಾರ’ ಪದ್ದತಿ ಇರುವ ದೇಶವೆಂದು ಬಿಂಬಿಸಬೇಕಾಗಿದೆ. ಹಾಗೆ ಬಿಂಬಿಸಿದರೆ ಮಾತ್ರವೇ ಅದರ ಬ್ರಾಹ್ಮಿನಿಕಲ್ ವ್ಯಾಲ್ಯೂಗಳನ್ನು ಮುಂದೆ ತರಲು ಸಾಧ್ಯ. ಮತ್ತು ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮ ಯಜಮಾನಿಕೆ ಉಳಿಸಿಕೊಳ್ಳಲು ಸಾಧ್ಯ. ಹಾಗಾಗಿಯೇ ಆಹಾರದ ಪದ್ದತಿಗಳ ನಡುವೆ ಸಂಘರ್ಶವನ್ನು ಸೃಶ್ಟಿಸಿ ಮಾಂಸಾಹಾರ ಪದ್ದತಿಯವರನ್ನು ಮುಖ್ಯವಾಹಿನಿಯಿಂದ ಹೊರಕ್ಕೆ ತಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಎಲ್ಲರನ್ನು ಒಳಗೊಳ್ಳುವುದಕ್ಕೆ ಬದಲಾಗಿ ಸಾಧ್ಯವಾದಶ್ಟು ಜನರನ್ನು ಸಮಾಜದ ಮುಖ್ಯವಾಹಿನಿಯಿಂದ ಹೊರಕ್ಕೆ ತಳ್ಳುವ ಇಲ್ಲವೇ ಅವರನ್ನು ಕೀಳರಿಮೆಗೆ ತಳ್ಳಿ ತುಳಿಯುವ ಕೆಲಸ ಮಾಡಲಾಗುತ್ತಿದೆ. ಈ ದೇಶವನ್ನು ಹಿಂದೂ ರಾಶ್ಟ್ರವೆಂದು ಸಾರಬೇಕಾದರೆ ಅದಕ್ಕೆ ಪೂರಕವಾಗಿ ಈ ದೇಶವನ್ನು ಸಸ್ಯಾಹಾರ ಪ್ರಧಾನ ದೇಶವೆಂದು ಬಿಂಬಿಸಬೇಕಾಗಿರುತ್ತದೆ. ಆಗ ಮಾತ್ರವೇ ಬ್ರಾಹ್ಮಿನಿಕಲ್ ಮೌಲ್ಯಗಳಿಗೆ ಮತ್ತಶ್ಟು ಅಧಿಕೃತತೆ ಪ್ರಾಪ್ತವಾಗುವುದು. ಇಲ್ಲವಾದರೆ ವಿವಿಧ ಅಸ್ಮಿತೆಗಳು ಬ್ರಾಹ್ಮಣ್ಯವನ್ನು ಪ್ರಶ್ನಿಸುತ್ತಲೇ ಇರುತ್ತವೆ. ಆದ್ದರಿಂದಲೇ ಶೂದ್ರ ಮತ್ತು ದಲಿತ ಸಮುದಾಯಗಳಲ್ಲಿ ಮಾಂಸಾಹಾರದ ಬಗೆಗೆ ಕೀಳರಿಮೆ ಹೆಚ್ಚಾಗುವಂತೆ ಮಾಡಿ ಮಾಂಸಾಹಾರವನ್ನು ನಿಶೇಧಿಸುವ ಹಂತಕ್ಕೆ ಕೊಂಡೊಯ್ಯಲಾಗುತ್ತಿವೆ. ಸದ್ಯ ದನದ ಮಾಂಸದ ಆಹಾರ ಸೇವನೆ ನಿಶೇಧಿಸಲಾಗಿದೆ. ದೇವಾಲಯಗಳಿಂದ ಎಲ್ಲ ಬಗೆಯ ಮಾಂಸಾಹಾರವನ್ನು ನಿಶೇಧಿಸಲಾಗುತ್ತಿದೆ. ಮುಂದೆ ಎಲ್ಲ ಪ್ರಾಣಿ ಪಕ್ಶಿಗಳ ಮಾಂಸವನ್ನು ನಿಶೇಧಿಸುವುದಿಲ್ಲ ಎಂದು ಹೇಳಲಾದೀತೆ? ಮತೀಯವಾದಿಗಳ ಸಿದ್ದಾಂತವನ್ನು ಕುರುಡಾಗಿ ಬೆಂಬಲಿಸುವ ಭಕ್ತ ತಲೆಗಳ ಸಂಖ್ಯೆ ಹೆಚ್ಚಾದರೆ ನಿಶೇದಿಸುವ ದಿನಗಳು ದೂರವೇನಿಲ್ಲ. ಈ ದೇಶದಲ್ಲಿನ ತಳಸಮುದಾಯಗಳ ಜನರು ತಮಗೆ ಬೇಕಾದ ಆಹಾರವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನೂ ಕಳೆದುಕೊಳ್ಳುವ ಹಂತಕ್ಕೆ ಬಂದು ಮುಟ್ಟುತ್ತಿದ್ದಾರೆ. ಅಂದರೆ ಆಹಾರದ ಫ್ಯಾಸಿಸಂ ಇಂದು ನಿಚ್ಚಳವಾಗಿ ಮುಂಚೂಣಿಗೆ ಬಂದಿದೆ. ಇದರಿಂದ ಇತರೆ ಬಹುತ್ವಗಳು ಹಲ್ಲೆಗೆ ಒಳಗಾದಂತೆ ಆಹಾರದ ಬಹುತ್ವವೂ ಹಲ್ಲೆಗೆ ಒಳಗಾಗುತ್ತಿದೆ. ಆ ಮೂಲಕ ಭಾರತೀಯರ ದೇಹ ಮತ್ತು ಮನಸ್ಸುಗಳು ಹಿಂಸೆಗೆ ಬಲಿಯಾಗುತ್ತಿವೆ. ಹೀಗೆ ಹಿಂಸೆಗೆ ಬಲಿಯಾದ ಕೆಲವರು ಇಂದು ಹಿಂಸೆಯನ್ನು ಸಂಭ್ರಮಿಸುತ್ತಾರೆ. ಯುದ್ಧಗಳನ್ನು ವೈಭವೀಕರಿಸುತ್ತಾರೆ. ಕೆಲವರ ಸಾವುಗಳನ್ನು ಕಂಡು ಉಲ್ಲಾಸಗೊಳ್ಳುತ್ತಾರೆ. ಇದನು ಸಮರ್ಥಿಸಿಕೊಳ್ಳಲು ತಮ್ಮ ವಿಕೃತ ವಾದಗಳನ್ನು ಕಟ್ಟಿಕೊಂಡಿರುತ್ತಾರೆ. ಧರ್ಮದ ನಶೆಯಲ್ಲಿ ಜನರು ಹಿಂಸಾರತಿಗಳಾಗುತ್ತಿರುವುದನ್ನು ಇದು ಎತ್ತಿ ತೋರಿಸುತ್ತದೆ.

ಒಟ್ಟಾರೆ ಇದನ್ನು ಗಮನಿಸಿದರೆ ಹಿಂಸೆಯನ್ನು ಸಮಾದಲ್ಲಿ ಹೇಗೆಲ್ಲಾ ಸಂಗೋಪಿಸಲಾಗುತ್ತಿದೆ. ಇದಕ್ಕೆ ಆಹಾರದ ರಾಜಕಾರಣವನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದು ಸ್ಪಶ್ಟವಾಗುತ್ತದೆ. ಇದು ಕೇವಲ ಆಹಾರದ ಪ್ರಶ್ನೆ ಮಾತ್ರವಲ್ಲ. ಇದು ಜನರ ಕಸುಬಿನ ಉದ್ಯೋಗದ ಪ್ರಶ್ನೆ. ಮಾಂಸಾಹಾರ ಸೇವಿಸುವ ಸಮುದಾಯಗಳು ಪಶುಪಾಲನೆಯಲ್ಲಿ ತೊಡಗಿರುತ್ತವೆ. ಅದು ಅವುಗಳ ವೃತ್ತಿಯಾಗಿರುತ್ತದೆ. ಮಾಂಸಾಹಾರವನ್ನೇ ನಿಶೇಧಿಸಿದರೆ ಪಶುಪಾಲನೆಯ ವೃತ್ತಿಯೇ ನಾಶವಾಗಿ ಜನರು ನಿರುದ್ಯೋಗಿಗಳಾಗುತ್ತಾರೆ. ಮಾಂಸದ ವ್ಯಾಪಾರಿಗಳು ಉದ್ಯೋಗ ಕಳೆದುಕೊಳ್ಳುತ್ತಾರೆ. ಜನರು ಪೌಶ್ಟಿಕ ಆಹಾರದಿಂದ ವಂಚನೆಗೆ ಒಳಗಾಗುತ್ತಾರೆ. ಜನರ ಆರ್ಥಿಕ ಬದುಕಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹೀಗೆ ತಳಸಮುದಾಯಗಳ ಬದುಕಿನ ಬುನಾದಿಯನ್ನು ಧ್ವಂಸಗೊಳಿಸುವುದೇ ಇಲ್ಲಿನ ಉದ್ದೇಶವೂ ಆಗಿರುತ್ತದೆ. ಇದನ್ನು ಯೋಚಿಸುತ್ತಾ ಹೋದಂತೆ ಭವಿಶ್ಯ ಅತ್ಯಂತ ಕರಾಳ ಎನ್ನಿಸುತ್ತದೆ.

ಕೊನೆಯಲ್ಲಿ ಒಂದು ಮಾತನ್ನು ಪ್ರಸ್ತಾಪಿಸುತ್ತ ಈ ಟಿಪ್ಪಣಿಯನ್ನು ಕೊನೆಗೊಳಿಸಬಹುದು. ಈ ದೇಶದ ಜನಪ್ರಿಯ ಮಹಾಕಾವ್ಯಗಳಾಗಿರುವ ರಾಮಾಯಣ ಮತ್ತು ಮಹಾಭಾರತಗಳೇ ಹಿಂಸೆಯನ್ನು ಪ್ರಚೋದಿಸುವ ಕಾವ್ಯಗಳಾಗಿವೆ. ಭಗವದ್ಗೀತೆ ಹಿಂಸೆಯನ್ನು ಸಿದ್ಧಾಂತೀಕರಿಸಿ ಅದನ್ನು ಸಮರ್ಥಿಸುತ್ತದೆ. ಆದರೆ ಕನ್ನಡದ ಯಾವುದೇ ಜನಪದ ಮಹಾಕಾವ್ಯಗಳು ಹಿಂಸೆಯನ್ನು ಸಿದ್ಧಾಂತೀಕರಿಸಿ ಅದನ್ನು ಸಮರ್ಥಿಸುವುದಿಲ್ಲ. ಅಂದರೆ ಮಾಂಸಾಹಾರ ತಿನ್ನುವ ಸಮುದಾಯಗಳು ಕಟ್ಟಿ ಹಾಡುವ ಜನಪದ ಮಹಾಕಾವ್ಯಗಳಲ್ಲಿ ಹಿಂಸೆಯನ್ನು ಸಿದ್ದಾಂತೀಕರಿಸಿ ಸಮರ್ಥಿಸುವುದಿಲ್ಲ. ಆದರೆ ಸದಾ ಸಾತ್ವಿಕತೆ, ಯೋಗ, ಧ್ಯಾನ, ತಪ್ಪಸ್ಸು, ಸಸ್ಯಾಹಾರ ವೈದಿಕ ಸಾಹಿತ್ಯ ಸಮರ್ಥಿಸುವ ಜನರು ಹಿಂಸೆಯನ್ನು ಸಿದ್ದಾಂತೀಕರಿಸಿ ಅದನ್ನು ಸಮರ್ಥಿಸುತ್ತಾರೆ. ಹಿಂಸೆಯ ರಾಜಕಾರಣಕ್ಕೆ ಜನಗಳನ್ನು ದಾಳಗಳನ್ನಾಗಿ ಬಳಸಿಕೊಳ್ಳುತ್ತಾರೆ. ಕುರುಕ್ಶೇತ್ರ ಕದನದಲ್ಲಿ ಶಸ್ತ್ರ ತ್ಯಜಿಸಿದ ಅರ್ಜುನನ ಮೇಲೆ ಕೃಶ್ಣ ಪ್ರಭಾವ ಬೀರುವ ಪ್ರಸಂಗವನ್ನು ನೆನೆದರೆ ಇದು ಇನ್ನಶ್ಟು ಸ್ಪಶ್ಟವಾಗುತ್ತದೆ. ಅರ್ಜುನನೊಳಗಿದ್ದ ಮನುಶ್ಯನನ್ನು ಕೊಂದಿದ್ದು ಯಾರು? ಹಾಗಾಗಿ ಹಿಂಸೆಯ ರಾಜಕಾರಣಕ್ಕೆ ಮೇಲ್ನೋಟದಲ್ಲಿ ಕಾಣುವ ಅಂಶಗಳಿಗಿಂತ ಅಗೋಚರವಾಗಿರುವ ಸಂಗತಿಗಳು ಹೆಚ್ಚು. ಜನಾಂಗ ಶ್ರೇಶ್ಟತೆಯ ವ್ಯಸನಕ್ಕೆ ಬಿದ್ದ ಜನ ದೇಶದ ಬಹುಸಂಖ್ಯಾತ ಜನರನ್ನು ಹೇಗೆಲ್ಲಾ ಬಲಿಕೊಡುತ್ತಾರೆ ಎಂಬುದಕ್ಕೆ ಇದಕ್ಕಿಂತ ಎತ್ತುಗೆ ಬೇರೆನೂ ಬೇಕು. ಹಾಗಾಗಿ ಮಾಂಸಾಹಾರದ ಮೇಲಿನ ದೌರ್ಜನ್ಯ ಮತ್ತು ರಾಜಕಾರಣಗಳನ್ನು ಸನಾತನ ವೈದಿಕಶಾಹಿ ರಾಜಕಾರಣದ ಮಹಾಕಥನದ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳುವುದು ಹೆಚ್ಚು ಅಗತ್ಯವಿದೆ.

#ಜನಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ವಿಚಾರ ಗಳ ಬರೆಹ ರೂಪ

One comment to “ಆಹಾರದ ಮೇಲಣ ಹಲ್ಲೆ ಮತ್ತು ಹಿಂಸೆಯ ಸಂಗೋಪನೆ”
  1. ಅರ್ಥವಿಲ್ಲದ ತರ್ಕ. ತಮ್ಮ ಅನಿಸಿಕೆಗಳನ್ನು ಶ್ರೀಯುತರು ಹೇಳಿದ್ದಾರೆ. ಅವರು ಎತ್ತುವ ಅನೇಕ ಪ್ರಶ್ನೆಗಳಿಗೆ ಭಿನ್ನ ನೆಲೆಯಲ್ಲಿ ಉತ್ತರಗಳು ಇವೆ.
    ಪೂರ್ವಾಗ್ರಹ ಬಿಟ್ಟು ಕುವೆಂಪು ಅವರ ಮಾನವತೆ ನೆಲೆಯಲ್ಲಿ ನೋಡಿದಾಗ, ಬಿಚ್ಚಿಕೊಳ್ಳುವ ಬಗೆ ಬೇರೆ ಆಗುತ್ತದೆ.
    ರಾಜಕೀಯ ಬಿಟ್ಟು ಮನುಷ್ಯ ನೆಲೆಯಲ್ಲಿ ನೋಡಿದಾಗ ಅರ್ಥ ಮಾಡಿಕೊಳ್ಳುವುದು ಸುಲಭ

ಪ್ರತಿಕ್ರಿಯಿಸಿ