ರಕ್ತ ಮತ್ತು ಜೇನುಹುಳುಗಳ ಮೊಟ್ಟೆ: ಕಡೆಗಣಿಸಲ್ಪಟ್ಟ ಸಮುದಾಯದವರ ಪಾಕ ವಿಧಾನಗಳು

ಅಧಿಕಾರವನ್ನು ಉಳಿಸಿಕೊಳ್ಳಲು ಆಹಾರವನ್ನು  ಗುರಾಣಿಯಾಗಿ ಬಳಸಲಾದ ಭಾರತ ದೇಶದಲ್ಲಿ ದಲಿತ ಪಾಕವಿಧಾನಗಳು ಜಾತಿ ದಬ್ಬಾಳಿಕೆಯ, ಕ್ರೌರ್ಯದ ಕಥೆಯನ್ನು ಹೇಳುತ್ತಿವೆ. ರಾಧಿಕಾ ಅಯ್ಯಂಗಾರ್  ಅವರು ದಲಿತರ ಪಾಕ  ವಿಧಾನಗಳನ್ನು ಅವಲೋಕನ ಮಾಡಿ ಲಕುಟಿ (Lakuti) ಮತ್ತು ಮುಟ್ಕೆ (Mutke)  ಯಂತಹ ಪಾಕವಿಧಾನಗಳ ಹಿಂದಿನ ಜಾಣ್ಮೆಯ ಬಗ್ಗೆ ಬರೆಯುತ್ತಾರೆ.


  ಮಹಾರಾಷ್ಟ್ರದ ಖಮ್‌ಗಾಂವ್‌ನಲ್ಲಿ ಬೆಳೆದ ಶಾಹು ಪಟೋಲೆ, ಕಟುಕನ ಕಸಾಯಿ ಅಂಗಡಿ ಮುಂದೆ ಖಾಲಿ ಪಾತ್ರೆ ಹಿಡಿದು ನಿಲ್ಲುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಮೇಕೆಯ ಬಿಸಿರಕ್ತಕ್ಕೋಸ್ಕರ ಅವರು ಅಲ್ಲಿ ಕಾಯುತ್ತಿದ್ದರಂತೆ! “ಯಾವಾಗ ನಾವು ಇಲ್ಲಿ ಸೇರಬೇಕು ಎಂದು ಕಟುಕನಲ್ಲಿ ಕೇಳುತ್ತಿದ್ದೆವು. ಮೇಕೆಯನ್ನು ಕಡಿದ ತಕ್ಷಣ ಅದರ ಬಿಸಿಯಾದ ರಕ್ತವನ್ನು ಹಣ ಕೊಟ್ಟು ಕೊಂಡುಕೊಳ್ಳುತ್ತಿದ್ದೆವು!” ಎಂದು ಮಾಜಿ ಪತ್ರಕರ್ತ, ಪ್ರಸ್ತುತ ನಾಗಾಲ್ಯಾಂಡ್ ನಲ್ಲಿ ವಾಸಿಸುತ್ತಿರುವ ಶಾಹು ಪಟೋಲೆ ಹೇಳುತ್ತಾರೆ.

   ಅವರ ಕುಟುಂಬವು ಮಾಂಗ್ ಎಂಬ ಸಮುದಾಯಕ್ಕೆ ಸೇರಿದೆ. ಮಾಂಗ್ ಸಮುದಾಯದವರು ಆ ಪ್ರಾಂತ್ಯದ ಪಾಕವಾದ ಲಕುಟಿಯನ್ನು ತಯಾರಿಸಲು ರಕ್ತವನ್ನು  ಬಳಸುತ್ತಾರೆ. “ಮೊದಲನೆಯದಾಗಿ ರಕ್ತವನ್ನು ಸಣ್ಣ ಉರಿಯಲ್ಲಿ ಕುದಿಸಲಾಗುತ್ತದೆ. ಹೆಚ್ಚಿನ ಬೆಂಕಿಯಲ್ಲಿ ಕುದಿಸಿದರೆ ಕೆಳಭಾಗದಲ್ಲಿ ಅಡಿ ಹಿಡಿಯುತ್ತದೆ. ನಂತರ ನಾವು ಅದಕ್ಕೆ ಉಪ್ಪು ಸೇರಿಸುತ್ತೇವೆ” ಎಂದು ಪಟೋಲೆ ವಿವರಿಸುತ್ತಾರೆ. ಈ ಪ್ರಕ್ರಿಯೆಯನ್ನು ವಿವರಿಸುತ್ತಾ ಅವರು: “ಆ ದ್ರವ ಪದಾರ್ಥವು ಮಹಾಗನಿಯ ಬಣ್ಣವನ್ನು ಪಡೆಯುತ್ತದೆ. ಹಾಗೂ ಅದು ಘನೀಕರಿಸುತ್ತದೆ. ಒಂದು ರೀತಿಯಲ್ಲಿ ಕ್ಯಾಡ್ ಬರಿ ಚಾಕಲೇಟ್ ನಂತೆ” ಎಂದು ಹೇಳುತ್ತಾರೆ.

  ಘನ ರೂಪಕ್ಕೆ ತಿರುಗಿದ ರಕ್ತವನ್ನು ಒಲೆಯಿಂದ ತೆಗೆದು ಸ್ವಲ್ಪ ಸಮಯದ ವಿರಾಮಕ್ಕಾಗಿ  ಇಡಲಾಗುತ್ತದೆ.  ನಂತರ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಲಾಗುತ್ತದೆ. ಆಳವಾದ ಪಾತ್ರೆಯಲ್ಲಿ ದಪ್ಪನಾದ ಘನ ರೂಪದ ತುಂಡುಗಳು, ಕತ್ತರಿಸಿದ ಈರುಳ್ಳಿ,  ಹುಡಿ ಮಾಡಿದ ಮೆಣಸು ಮತ್ತು ತಾಜಾ ಕೊತಂಬರಿ ಸೊಪ್ಪು ಹಾಗೂ ಮನೆಯಲ್ಲಿ ಮಾಡಿದ ಮಸಾಲೆಯಾದ ಯೆಸೂರ್‌ನೊಂದಿಗೆ ಮಿಶ್ರಣಗೊಳಿಸಲಾಗುತ್ತದೆ. ಯೆಸೂರ್ ಮಾಂಗ್ ಸಮುದಾಯದವರ ಮನೆಯಲ್ಲಿ ಸಾಮಾನ್ಯವಾಗಿ ಕಾಣುವ ಒಂದು ಮಸಾಲೆ.  ಇದು 14-20 ವಿವಿಧ ಮಸಾಲೆ ಪದಾರ್ಥಗಳ  ಮಿಶ್ರಣ. ಇವುಗಳಲ್ಲಿ ಕಪ್ಪು ಕಲ್ಲಿನ ಹೂವು, ಲವಂಗದ ಎಲೆಗಳು, ಒಣ ನೀರುಳ್ಳಿ, ಬೇವು, ಲವಂಗ, ಒಣಕೊಬ್ಬರಿ, ಕೊತ್ತಂಬರಿ ಮತ್ತು ಗಸಗಸೆಗಳು ಸೇರಿವೆ.

 ಹಿಂದೂ ಸಮಾಜದಿಂದ ಹೊರಗಿರುವ ದಲಿತರು (ದಮನಿತರು, ತುಳಿತಕ್ಕೊಳಗಾದವರು ಎಂಬರ್ಥದಲ್ಲಿ) ತಲೆತಲಾಂತರಗಳಿಂದ ತಾರತಮ್ಯಕ್ಕೆ ಒಳಗಾಗಿ ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ . ಶೌಚಾಲಯ, ಚರಂಡಿ ಶುಚಿಗೊಳಿಸುವುದು, ಗುಡಿಸುವುದು, ಶವಗಳನ್ನು ಸುಡುತ್ತಿದ್ದ ಇವರನ್ನು ಶತಮಾನಗಳಿಂದ ತಮ್ಮ ಕೆಲಸಗಳ ಕಾರಣಕ್ಕಾಗಿ ಅಸ್ಪೃಶ್ಯರಂದೇ ಪರಿಗಣಿಸಲಾಗುತ್ತಿತ್ತು. ದಲಿತರಿಗೆ ನೀರು, ಭೂಮಿ ಮತ್ತು ಆಹಾರದ ಹಕ್ಕುಗಳು ಸೇರಿದಂತೆ ಯಾವುದೇ ಸೌಲಭ್ಯಗಳು ಇರಲಿಲ್ಲ. ಅಂತರ್ಜಾತಿ ವಿವಾಹ ನಿಷೇಧ ಮತ್ತು ಅಸ್ಪೃಶ್ಯತೆಯನ್ನು ಪಾಲಿಸುವುದರ ಮೂಲಕ ಮಾತ್ರವಲ್ಲದೆ ಆಹಾರದ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಜಾತಿ ಶ್ರೇಣಿ ವ್ಯವಸ್ಥೆಯನ್ನು ಸವರ್ಣೀಯ ಮೇಲ್ಜಾತಿಯವರು ಜಾರಿಗೊಳಿಸುತ್ತಾರೆ.

   ಮೇಲ್ಜಾತಿಯವರು ಒಂದು ಪ್ರಾಣಿಯನ್ನು ವಧಿಸಿದಾಗ ಅವರು ಎಸೆಯುವ ಚರ್ಮ, ಕರುಳು, ಕಿವಿ, ನಾಲಿಗೆ, ಪಾದಗಳು, ರಕ್ತ ಮುಂತಾದ ಭಾಗಗಳು ದಲಿತರಿಗೆ ಸಿಗುತ್ತಿದ್ದವು. ಇವುಗಳನ್ನು ಬಳಸಿ ಅವರು ಒಳ್ಳೆಯ ಪಾಕ ಮಾಡಿದರು. ‘ಫಾಶಿ’ ಎಂಬ ಒಂದು ಅಮೂಲ್ಯ ಪಾಕವನ್ನು  ಮೇಕೆ ಮತ್ತು ಎತ್ತಿನ ಎಪಿಗ್ಲಾಟಿಸ್ (epiglottis) ಅನ್ನು ಬಳಸಿ ಮಾಡಲಾಗುತ್ತದೆ.ರೆಫ್ರಿಜರೇಟಗಳು ಇಲ್ಲದಿರುವುದರಿಂದ ಇಲ್ಲಿ ವ್ಯರ್ಥವಾಗುವ ಪ್ರಶ್ನೆಯೇ ಇಲ್ಲ. ಬಳಸದೆ ಉಳಿದವುಗಳನ್ನು ಉದ್ದವಾಗಿ ಕತ್ತರಿಸಿ ಅನೇಕ ದಿನಗಳವರೆಗೆ ಬಿಸಿಲಿನಲ್ಲಿ ಒಣಗಲು ಇಡಲಾಗುತ್ತಿತ್ತು. ಬಿಸಿಲಿನಲ್ಲಿ ಒಣಗಿದ ಈ ಮಾಂಸಗಳನ್ನು ಮಡಕೆಗಳಲ್ಲಿ ಕೆಲವೊಮ್ಮೆ ಕಾಗದ ಹೊದಿಕೆಗಳಲ್ಲಿ ತುಂಬಾ ದಿನಗಳ ಕಾಲ ಸಂಗ್ರಹಿಸಲಾಗುತ್ತದೆ.  ಕರಿದಾಗ ಅವು ತೆಳುವಾಗಿ ಪ್ರೊಟೀನ್ ಯುಕ್ತ ‘ಚನ್ಯ’ ಆಗಿ ಬದಲಾವಣೆ ಹೊಂದುತ್ತದೆ.

   ಈ ಭಕ್ಷ್ಯವಸ್ತುಗಳ ತಯಾರಿಕೆಯಲ್ಲಿನ  ಚತುರತೆ ನಮ್ಮ ಅಸ್ತಿತ್ವದ ಮೇಲೆ ನಿಂತಿದೆ. ಇವುಗಳನ್ನು  ನಾವು ಎಣ್ಣೆ ಇಲ್ಲದೆ ತಯಾರಿಸುತ್ತೇವೆ. ಯಾಕೆಂದರೆ ಎಣ್ಣೆಯನ್ನು ಕೊಳ್ಳುವ ಶಕ್ತಿ ನಮಗಿರಲಿಲ್ಲ ಎಂದು ಪಟೋಲೆ ಹೇಳುತ್ತಾರೆ. ಎಣ್ಣೆಯ ಬದಲಾಗಿ ಹಂದಿ ಮತ್ತು ದನದ ಕೊಬ್ಬುಗಳನ್ನು ಬಳಸಲಾಗುತ್ತಿತ್ತು.

ಯೆಸೂರ್ ಮಸಾಲೆ ತಯಾರಿಸಲು ಈರುಳ್ಳಿ ಹುರಿಯುತ್ತಿರುವುದು

      ಭಾರತೀಯ ಪಾಕ ವ್ಯವಸ್ಥೆಯಲ್ಲಿ ದಲಿತರ ಆಹಾರ ಪದ್ಧತಿಗಳನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿದೆ. ಅವರ ಆಹಾರದ ಇತಿಹಾಸ ಮತ್ತು ಸಂಪ್ರದಾಯವನ್ನು ತಿಳಿಸುವ ದಾಖಲೆಗಳು ತೀರಾ ಕಡಿಮೆ. “ನಾನು ಚಿಕ್ಕವನಿದ್ದಾಗ  ದಿನಪತ್ರಿಕೆಗಳು ಮತ್ತು ಅಡುಗೆ ಕಾರ್ಯಕ್ರಮಗಳಲ್ಲಿ ವಿವಿಧ ಆಹಾರಗಳು ಮತ್ತು ಪಾಕವಿಧಾನಗಳನ್ನು ಒಳಗೊಂಡಿದ್ದನ್ನು ನೋಡಿರುವೆ. ಆದರೆ ಈ ವೇದಿಕೆಗಳಲ್ಲಿ ನಮ್ಮ ಆಹಾರ ಪದ್ಧತಿಗಳು ಅದೃಶ್ಯವಾಗಿದ್ದವು. ದಲಿತರ ಆಹಾರದ ಬಗ್ಗೆ ಸುದ್ದಿಯೇ ಇರಲಿಲ್ಲ” ಎಂದು ಪಟೋಲೆ ಹೇಳುತ್ತಾರೆ. 2018ರಲ್ಲಿ ಅವರು  ‘ಅನ್ನಾ ಹೆ ಅಪೂರ್ಣ ಬ್ರಹ್ಮ’ ( Anna He Apoorna Brahma -ನಮ್ಮ ತಟ್ಟೆಯು ಎಂದಿಗೂ ಅಪೂರ್ಣವೇ  ಎಂದರ್ಥ ) ಎಂಬ  ಪುಸ್ತಕ ಬರೆದರು . ಅದರಲ್ಲಿ 1950 ರಿಂದ 1972 ರ ನಡುವಿನ ಮಹಾರಾಷ್ಟ್ರದ ಮಹರ್ ಮತ್ತು ಮಾಂಗ್ ಎಂಬ ಎರಡು ದಲಿತ ಸಮುದಾಯದ ಪಾಕಶಾಲೆಯ ಅಭಿರುಚಿಯನ್ನು ವಿವರಿಸಿದ್ದಾರೆ . ಮಹರ್ ಸಮುದಾಯವು ಶವಗಳನ್ನು ತಿನ್ನುವ ಮಾಂಗ್ ಸಮುದಾಯಕ್ಕಿಂತ ಭಿನ್ನವಾಗಿದೆ.

     ಅಂಕಿ ಅಂಶಗಳ ಪ್ರಕಾರ ಭಾರತದ ಜನಸಂಖ್ಯೆಯ ಶೇ. 16.6  ದಲಿತರಿದ್ದಾರೆ. ಇತ್ತೀಚೆಗೆ  ಪಾಶ್ಚಿಮಾತ್ಯ ರೆಸ್ಟೋರೆಂಟ್ ಸಂಸ್ಕೃತಿಯಿಂದ ಪ್ರಭಾವಿತಗೊಂಡು ಕಾಡಿನಲ್ಲಿ ಸಿಗುವ ಆಹಾರ ಹುಡುಕುವ ಪ್ರಕ್ರಿಯೆಯು ಹೆಚ್ಚಾಗಿದ್ದು ,ಇದು  ವಾಸ್ತವವಾಗಿ ಅಸಂಖ್ಯಾತ ದಲಿತ ಕುಟುಂಬಗಳಿಗೆ ತಮ್ಮ ಉಳಿವಿಗಾಗಿನ ಪ್ರಮುಖ ಆಹಾರದ ಮೂಲವಾಗಿತ್ತು. 

    ಜೇನಿನ ಮೊಟ್ಟೆಯಲ್ಲಿ ತಮ್ಮ ತಾಯಿ ಒಂದು ಅಡುಗೆ ಮಾಡುತ್ತಿದ್ದರು ಎಂದು ಪಟೋಲೆ ವಿವರಿಸುತ್ತಾರೆ:  “ಮೊಹೊಲ್ ಚಿ ಪೊಲಿ (Mohol Chi Poli) ಎಂಬ ಹೆಸರಿನ ಪಾಕವನ್ನು ಮೆಣಸಿನಕಾಯಿ ಮತ್ತು ಈರುಳ್ಳಿಯೊಂದಿಗೆ ಬೇಯಿಸುವ ಮೂಲಕ ಮಾಡಲಾಗುತ್ತದೆ. ಅದರ ರುಚಿಯು ಬೇಯಿಸಿದ ಮೊಟ್ಟೆಯ ಬಿಳಿಯಂತೆ ಇರುತ್ತದೆ. ಅದನ್ನು ಬಿಸಿ ಇರುವಾಗಲೇ ಸೇವಿಸಬೇಕು. ಇಲ್ಲದಿದ್ದರೆ ಅದು ನಾಲಿಗೆಯಲ್ಲಿ ಅಂಟಿಕೊಳ್ಳುತ್ತದೆ” ಎಂದು ಇಂದಿಗೂ ತನ್ನ ಮನೆಯಲ್ಲಿ ಇದನ್ನು ತಯಾರಿಸುವ ಪಟೋಲೆ ಹೇಳುತ್ತಾರೆ.

   ದಲಿತರ ಆಹಾರ ಪದ್ಧತಿಗ ಒಂದೇ ತೆರನಾಗಿ ಇರುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಸಂಪನ್ಮೂಲಗಳ ಲಭ್ಯತೆ ಆಧಾರದ ಮೇಲೆ ಪ್ರದೇಶಗಳಿಂದ ಪ್ರದೇಶಗಳಿಗೆ ಅವರ ಪಾಕ ಪದ್ದತಿ ಬದಲಾಗುತ್ತಲೇ ಇರುತ್ತವೆ.

   ಉತ್ತರ ಪ್ರದೇಶದ ವಾರಣಾಸಿಯಲ್ಲಿ ಶವ ಸುಡುವ ಡೋಮ್ ಸಮುದಾಯಕ್ಕೆ ಸೇರಿದ ಯೋಗಿ ಚೌಧುರಿಯವರು ತಮ್ಮ ಆಹಾರವನ್ನು ಸ್ಮಶಾನದಿಂದ ಸಂಗ್ರಹಿಸಲಾದ ಕಟ್ಟಿಗೆಯಿಂದ ಬೇಯಿಸಲಾಗುತ್ತದೆ ಎಂದು ಹೇಳುತ್ತಾರೆ. ನಮಗೆ ಅಡುಗೆ ಅನಿಲ ಅಥವಾ ಸೌದೆಗಳನ್ನು ದುಡ್ಡು ಕೊಟ್ಟು ಕೊಳ್ಳುವ ಶಕ್ತಿ ಇಲ್ಲ. ಆದ್ದರಿಂದ ನಾವು ಚಿತಾಭಸ್ಮದಿಂದ ಬಾಕಿ ಉಳಿದ ಕಟ್ಟಿಗೆಗಳನ್ನು ಮನೆಗೆ ಒಯ್ಯುತ್ತೇವೆ ಎಂದು ವಿವರಿಸುತ್ತಾರೆ. ಬಟ್ಟಿ ಚೋಖಾ (Batti Chokha) ಎಂಬುದು ಅವರ ಸಮುದಾಯದ ಜನಪ್ರಿಯ ಖಾದ್ಯವಾಗಿದೆ. “ಬದನೆಯಕಾಯಿ, ಟೊಮೆಟೊ, ಆಲೂಗಡ್ಡೆ ಗಳಂತಹ ತರಕಾರಿಗಳನ್ನು ಕೆಂಡದಲ್ಲಿ ಹುರಿದು ಚೋಖಾವನ್ನು ತಯಾರಿಸುತ್ತೇವೆ. ಯಾವುದೇ ಪಾತ್ರೆಗಳನ್ನು ಬಳಸುವುದಿಲ್ಲ. ಕೇವಲ ಒಬ್ಬನ  ಪರಿಶ್ರಮ ಮಾತ್ರ.  ಹುರಿದ ತರಕಾರಿಗಳನ್ನು ಕೆಂಡದಿಂದ ತೆಗೆದ ನಂತರ ಅದರ ಹೊರಪದರವನ್ನು ಎಚ್ಚರಿಕೆಯಿಂದ ಕಳುಚುತ್ತೇವೆ. ಇದಕ್ಕೆ ಉಪ್ಪು ನೀರು ಚಿಮುಕಿಸುತ್ತೇವೆ ಹಾಗೂ ಸಾಸಿವೆ ಎಣ್ಣೆಯನ್ನು ಸಿಂಪಡಿಸಲಾಗುತ್ತದೆ. ನಾವು ಯಾವುದೇ ಮಸಾಲೆ ಸೇರಿಸುವುದಿಲ್ಲ ಎಂದು ಚೌಧುರಿ ಅವರು ಹೇಳುತ್ತಾರೆ.

    ತೆಲಂಗಾಣದ ಮೇದಕ್‌ನ ಜಹೀರಬಾದಿನ ದಲಿತ ರೈತ ಮಹಿಳೆಯರು ಜೋಳ ಮತ್ತು ಗೊಂಗುರ (ಸೊಪ್ಪಿನ ದಾಸವಾಳವಾದ ಭಾಗ ) ವನ್ನು ಬೆರೆಸಿ ಹಿಟ್ಟು ತಯಾರಿಸಿ ಚಪ್ಪಟೆ ರೊಟ್ಟಿಗಳನ್ನು ತಯಾರಿಸುತ್ತಾರೆ. ಜೊತೆಗೆ ಅವರು ಗೊಂಗುರ, ಪಾಯಲಕು, ಸಣ್ಣ ವಯೇಲಿಗಳ ಹಸಿರು ಚೂಪು ಎಲೆಗಳನ್ನು ಅಗಲವಾದ ಬಾಯಿಯ ಪಾತ್ರದಲ್ಲಿ ಸಂಗ್ರಹಿಸಿ, ಉಪ್ಪು, ಕೆಂಪು ಮೆಣಸು, ಚಚ್ಚಿದ ಶುಂಠಿಯನ್ನು ಹಾಕಿ ಕಲಸುತ್ತಾರೆ. ಕೆಲವೊಮ್ಮೆ ಮಸೂರ ಬೇಳೆಯನ್ನು  ಬಳಸುತ್ತಾರೆ. ಅವರ ಆಹಾರವು ಬೇರು, ಹೂವು , ರಾಗಿ ಮತ್ತು ಗೆಡ್ಡೆಗಳ ಮೇಲೆ ಅವಲಂಬಿತವಾಗಿದೆ. ತೊಗಟೆಗಳನ್ನು ಕೂಡ ಅವರು ಋತುವಿಗೆ ತಕ್ಕಂತೆ ಸೇವಿಸುತ್ತಾರೆ. ಏಕೆಂದರೆ ತರಕಾರಿಗಳು ದಿನನಿತ್ಯ ದುಬಾರಿಯಾಗುತ್ತಲೇ ಇದೆ.

   ನೀವು ಕೇರಳದತ್ತ ನೋಡುವುದಾದರೆ ಆ ರಾಜ್ಯಕ್ಕೆ ಅದರದ್ದೇ ಆದ ಚರಿತ್ರೆಗಳಿವೆ. “ಇಲ್ಲಿನ ಜಾತಿ ಪದ್ಧತಿಯು ಭಾರತದ ಇತರ ಭಾಗಗಳಿಗಿಂತ ವಿಭಿನ್ನ” ಎಂದು ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ವಿನಿಲ್ ಬೇಬಿ ಪೌಲ್ ಹೇಳುತ್ತಾರೆ. ಭಾಷಾವಾರು ಜಾತಿ ಶ್ರೇಣಿಕರಣ ವ್ಯವಸ್ಥೆ ಜಾರಿಯಲ್ಲಿದ್ದ ಬ್ರಿಟಿಷ್ ಕೇರಳದ ದಲಿತರ ಬಗ್ಗೆ ಅವರು ಆಳವಾದ ಸಂಶೋಧನೆ ನಡೆಸಿದ್ದರು. ಅಲ್ಲಿನ ದಲಿತರು  ‘ಞಾನ್’  (ನಾನು) ಎಂದು ಹೇಳುವ ಹಾಗಿರಲಿಲ್ಲ. ಬದಲಾಗಿ ‘ಅಡಿಯನ್’ (ಗುಲಾಮ) ಅಥವಾ ‘ಅಡಿಯಂಗಲ್’  (ನಿಮ್ಮ ಪಾದದಡಿಯಲ್ಲಿ ಇರುವವ) ಇಂತಹ ಪದಗಳನ್ನು ಬಳಸಬೇಕಾಗಿತ್ತು. ಅವರು ಊಟವನ್ನು ‘ಚೋರ್’ ಎಂದು ಹೇಳುವಂತಿಲ್ಲ. ಬದಲಾಗಿ ‘ಕರಿಕಡಿ'(ಇದ್ದಿಲು ಅಕ್ಕಿ) ಎಂದೇ ಹೇಳಬೇಕಾಗಿತ್ತು ಎಂದು ಪೌಲ್ ಹೇಳುತ್ತಾರೆ. ಪುಲಿಚಟನ್ ಎಂಬ ಪದದ ಬದಲಾಗಿ ಉಪ್ಪು ಎಂದು ಹೇಳಿದರೆ ಅವರನ್ನು ಹಿಂಸೆಗೆ ಗುರಿಪಡಿಸಲಾಗುತ್ತಿತ್ತು, ಕೆಲವೊಮ್ಮೆ ಸಾಯಿಸುತ್ತಿದ್ದರು ಎಂದು ಅವರು ಹೇಳುತ್ತಾರೆ.

  ಉತ್ತರ ಬಿಹಾರದಲ್ಲಿ ಇರುವ ಮುಸಾಹರ್ (Musahar) ಸಮುದಾಯಕ್ಕೆ ಅವರು ದಂಶಕಗಳನ್ನು ತಿನ್ನುವ ಕಾರಣದಿಂದ ಆ ಹೆಸರು ಬಂದಿತ್ತು.  ಭೋಜಪುರಿ ಭಾಷೆಯಲ್ಲಿ ಮುಸಹರ್ ಎಂದರೆ ಹೆಗ್ಗಣ ತಿನ್ನುವವ ಅಥವಾ ಹೆಗ್ಗಣ ಬೇಟೆಯಾಡುವವ ಎಂದರ್ಥ. (Musa  ಎಂದರೆ ಹೆಗ್ಗಣ Hera ಎಂದರೆ ಬೇಟೆಯಾಡುವ ಎಂದರ್ಥ).

   ದಲಿತ ಸಾಹಿತ್ಯವು ಅವರ ಆಹಾರ ಬಗೆಗಿನ ಉಲ್ಲೇಖಗಳನ್ನು ಸ್ಪಷ್ಟವಾಗಿ ದಾಖಲಿಸಿದೆ. ವಸಂತ ಮೂನ್ ಅವರ Growing up in Untouchable India: A Dalit Biography (2000) ಎಂಬ ಕೃತಿಯಲ್ಲಿ ಅವರ ಸಮುದಾಯದ ವಿಶಿಷ್ಟ ಖಾದ್ಯ ‘ಮಂಡೆ’ ಎಂದು ಕರೆಯಲಾಗುವ ತೆಳುವಾದ ಚಪಾತಿಯ ಬಗ್ಗೆ ವಿವರಿಸುತ್ತಾರೆ.  ‘ಮಂಡೆ’ಗಳನ್ನು ಸಾಂಪ್ರದಾಯಿಕವಾಗಿ ತಯಾರಿಸಲಾದ ದುಂಡನೆಯ ಮಣ್ಣಿನ ಮಡಿಕೆಗಳ ಮೇಲೆ ತಯಾರಿಸುತ್ತಾರೆ. ಚಿಕನ್ ಮಸಾಲ ಮತ್ತು ಮಟನ್  ಕರಿಯೊಂದಿಗೆ ಅದನ್ನು ಸೇವಿಸುತ್ತಾರೆ.

  ಮೂನ್ ಬರೆಯುತ್ತಾರೆ:  ಹಿಟ್ಟನ್ನು ಸರಿಯಾಗಿ ಕಲಸದಿದ್ದರೆ  ಅದು ಒಡೆಯುತ್ತದೆ. ಉಪ್ಪು ಹೆಚ್ಚು ಅಥವಾ ಕಡಿಮೆ ಆದಲ್ಲಿ ಹಿಟ್ಟಿನ ಸ್ಥಿರತೆ ಸರಿಯಾಗಿರುವುದಿಲ್ಲ. ಎಲ್ಲವೂ ಸರಿಯಾಗಿದ್ದರೆ ಮಾತ್ರ ಗಾಳಿಪಟದಂತೆ ತೆಳುವಾದ, ಪಾರದರ್ಶಕ ಚಪಾತಿ ತಯಾರಾಗುತ್ತದೆ. ಹೌರಾ ಗೋಧಿಯನ್ನು ಇದಕ್ಕೆ ಬಳಸುತ್ತಾರೆ. ಮಂಡೆಯನ್ನು ತಯಾರಿಸುವ ವಿಧಾನ ತಾಯಿಯಿಂದ ಮಗಳಿಗೆ ತಲುಪಿತು. ಮಂಡೆಯನ್ನು ಚೆನ್ನಾಗಿ ತಯಾರಿಸಿದರೆ ಕಣ್ಣು ಮುಂದೆ ಅದನ್ನು ಹಿಡಿದರೆ ಅದರಾಚೆ ಇರುವುದನ್ನು ನೋಡಬಹುದು ಎಂದು ಹೇಳಲಾಗುತ್ತದೆ. ಮಂಡೆಯು ಮಹಾರ್ ಸಮುದಾಯದವರ ಸಾಂಪ್ರದಾಯಿಕ ಕಲೆ ಎಂದು ಮೂನ್  ತಮ್ಮ ಆತ್ಮಕಥೆಯಲ್ಲಿ ಬರೆಯುತ್ತಾರೆ. ಇದೊಂದು ಹೆಮ್ಮೆ ಎಂದು ಅವರು ಹೇಳುತ್ತಾರೆ.

   ಮೂನ್ ರ ಮಂಡೆಯ ಕುರಿತಾದ ಹೆಮ್ಮೆಯು ಶರಣ್ ಕುಮಾರ್ ಲಿಂಬಾಳೆಯವರು ಮಹಾರಾಷ್ಟ್ರದ ಖಾದ್ಯವಾದ ‘ಭಕ್ರಿ’ಯನ್ನು ಸಂಭ್ರಮಿಸುವ ರೀತಿಗೆ  ತಾಳೆಯಾಗುತ್ತದೆ.  ಗೋಧಿಗಿಂತ ಅಗ್ಗವಾದ  ರಾಗಿಹುಡಿ ಮೂಲಕ ತಯಾರಿಸಲಾಗುವ ಅಡುಗೆ ಇದು. ಇದನ್ನು ಬೆರೆಸಿ ಹಿಟ್ಟು ಮಾಡುವಾಗ ಅಷ್ಟೇ ಪರಿಶ್ರಮ ಬೇಕು. ಭಕ್ರಿಯು ಮನುಷ್ಯನಂತೆ ವಿಶಾಲವಾಗಿದೆ ಎಂದು ಶರಣ್ ಕುಮಾರ್ ಲಿಂಬಾಳೆ ತಮ್ಮ The Outcaste(2003) ನಲ್ಲಿ ಬರೆಯುತ್ತಾರೆ. ತುಂಬಾ ಕಠಿಣವಾದ ಈ ರೊಟ್ಟಿಯು ಅನೇಕರ ಹೊಟ್ಟೆ ತಣಿಸಿದ ಒಂದು ಅಡುಗೆ. “ಹಸಿವು ಮನುಷ್ಯನಿಗಿಂತ ದೊಡ್ಡದು. ನಮ್ಮ ಅಂಗೈಗಿಂತ ಅದು ದೊಡ್ಡದಲ್ಲ ಅಂತ ಅನಿಸಬಹುದು. ಆದರೆ ಅದು ಜಗತ್ತನ್ನೇ ನುಂಗಬಹುದು”.

   ಇತರರ ಎಂಜಲು ತಿನ್ನುವುದು ಕೂಡ ದಲಿತರ ಜೀವನದ ಅವಿಭಾಜ್ಯ ಅಂಗವಾಗಿತ್ತು. ವಾಸ್ತವದಲ್ಲಿ ಚುಹ್ರಾ (Chuhra) ಸಮುದಾಯದ ನಡುವೆ ಅದನ್ನು ಅಮೂಲ್ಯ ಎಂದು ಪರಿಗಣಿಸಲಾಗಿತ್ತು. ಓಂ ಪ್ರಕಾಶ್ ವಾಲ್ಮೀಕಿ ಅವರ ಆತ್ಮ ಚರಿತ್ರೆ JOOTHAN: An untouchable’s Life (1997)  ನಲ್ಲಿ ಮೇಲ್ಜಾತಿಯವರ ವಿವಾಹ ಮಂಟಪದ ಹೊರಗೆ ದಲಿತರು ಹೇಗೆ ತಾಳ್ಮೆಯಿಂದ ಕಾಯುತ್ತಿದ್ದರು ಎಂಬ ಬಗ್ಗೆ ಸಾಕ್ಷ್ಯವನ್ನು ಒದಗಿಸುತ್ತಾರೆ. “ಅತಿಥಿಗಳು ತಿಂದುಳಿದ ಪಟ್ಟಲ್ ಗಳನ್ನು ಅವರು ನಮ್ರತೆಯಿಂದ ಸ್ವೀಕರಿಸುತ್ತಿದ್ದರು. ತಿಂದು ಉಳಿದ  ಪೂರಿ, ಸಿಹಿ ತಿಂಡಿಗಳು, ತರಕಾರಿಗಳು ದಲಿತರನ್ನು ಸಂತೋಷಪಡಿಸುತ್ತಿದ್ದವು ಎಂದು ವಾಲ್ಮೀಕಿ ಬರೆಯುತ್ತಾರೆ. ಚುಹ್ರಾ ಸಮುದಾಯದವರು ಪಟ್ಟಲ್‌ಗಳನ್ನು ದೊಡ್ಡ ಬುಟ್ಟಿಗಳಲ್ಲಿ ಮನೆಗೆ ಒಯ್ಯುತ್ತಿದ್ದರು.

   ಕುಟುಂಬಕ್ಕೆ ಅವುಗಳನ್ನು ತಿನ್ನಲು ಸಾಧ್ಯವಾಗದಿದ್ದರೆ ದಿವಸಗಳ ಕಾಲ ಹಗ್ಗದ ಹಾಸಿಗೆ ಮೇಲೆ ಒಣಗಲು ಇಡುತ್ತಿದ್ದರು. ಈ ಒಣಪೂರಿಗಳು ಕಠಿಣ ಮಳೆಯ ಸಮಯದಲ್ಲಿ ಬಹಳ ಪ್ರಯೋಜನಕಾರಿ ಆಗಿರುತ್ತಿತ್ತು ಎಂದು ವಾಲ್ಮೀಕಿಯವರು Joothanನಲ್ಲಿ ಬರೆಯುತ್ತಾರೆ. “ನಾವು ಅವುಗಳನ್ನು ನೀರಿನಲ್ಲಿ ನೆನೆಸಿಟ್ಟು ನಂತರ ಬೇಯಿಸುವೆವು.  ಬೇಯಿಸಿದ ಪೂರಿಯು ರುಚಿಕರವಾಗಿರುತ್ತಿತ್ತು. ಉಪ್ಪು ಮತ್ತು ಮೆಣಸು ಹಾಕಿ ಮೆಲ್ಲುತ್ತಿದ್ದೆವು. ಕೆಲವೊಮ್ಮೆ ಬೆಲ್ಲದೊಂದಿಗೆ ಮಿಶ್ರಣ ಮಾಡಿ ಗಂಜಿ ಮಾಡಿ ಕುಡಿಯುತ್ತಿದ್ದೆವು ಹಾಗೂ ಇದೊಂದು ಆನಂದಕರ ಅನುಭವ”.

  ಈ ಕಟು ನಿರೂಪಣೆಗಳು ಜಾತಿ ದಬ್ಬಾಳಿಕೆ ಮತ್ತು ಅಸ್ತಿತ್ವದ ನಡುವಿನ ಸಂಕೀರ್ಣ ಸಂಬಂಧವನ್ನು ವಿವರಿಸುತ್ತದೆ. “ನನ್ನ ಪುಸ್ತಕದಲ್ಲಿರುವ ನನ್ನ ಕಥೆಗಳು ನಮ್ಮ ಮಕ್ಕಳಿಗೆ ಅರ್ಥವಾಗುತ್ತಿಲ್ಲ” ಎಂದು ಪಟೋಲೆ ಹೇಳುತ್ತಾರೆ. “ಅವರು ಅದನ್ನು ಓದಿದ್ದಾರೆ.  ಆದರೆ ನನ್ನ ಹಿಂದಿನ ಬದುಕನ್ನು ಅವರು ನಂಬಲು ಸಾಧ್ಯವಿಲ್ಲ. ನಾನು ಪುಸ್ತಕವನ್ನು ಬರೆಯುವಾಗ ನನ್ನ ಸಮುದಾಯದವರಿಂದಲೇ ವಿರೋಧ ಎದುರಿಸಿದ್ದೆ. ಇಂತಹ ಪುಸ್ತಕಗಳನ್ನು ಏಕೆ ಪ್ರಕಟಿಸಬೇಕು? ಎಂದು ಅವರು ಕೇಳುತ್ತಿದ್ದರು. ಅವರು ಅವುಗಳನ್ನು ಬಚ್ಚಿಡಲು ಯತ್ನಿಸುತ್ತಿದ್ದರು. ಆದರೆ ನಾನು ಅದನ್ನೇ ಆಯ್ಕೆ ಮಾಡಿದೆ. ಯಾಕೆಂದರೆ ನಾವು ನಾಚಿಕೆ ಪಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ನಾವು ಎಂದಿಗೂ ಬ್ರಾಹ್ಮಣರಾಗಲು ಸಾಧ್ಯವಿಲ್ಲ,ಆದ್ದರಿಂದ ನಾವು ಯಾರೆಂಬುದನ್ನು ಒಪ್ಪಿಕೊಳ್ಳಬೇಕು ಮತ್ತು ಸ್ವೀಕರಿಸಬೇಕು ” ಎಂದು ಅವರು ಹೇಳುತ್ತಾರೆ.

ಲೇಖಕಿಯ ಟಿಪ್ಪಣಿ : ರಾಜ್ಯಶ್ರೀ ಗೂಡಿ ಅವರ ಕಲೆಯು ಈ ಸಾಹಿತ್ಯವನ್ನು ಮತ್ತಷ್ಟು ಅನ್ವೇಷಿಸಲು ನನಗೆ ಸಹಾಯ ಮಾಡಿದೆ ಎಂದು ನಾನು ಇಲ್ಲಿ ಉಲ್ಲೇಖಿಸಲು  ಬಯಸುತ್ತೇನೆ.

ಕೃಪೆ : Goya.in


ಅನುವಾದ : ಮುಹಮ್ಮದ್ ಶಮೀರ್ ಪೆರುವಾಜೆ ಮುಹಮ್ಮದ್ ಶಮೀರ್ ಪೆರುವಾಜೆ, ಕ್ವೆಸ್ಟ್ ಫೌಂಡೇಶನ್‌ ಬೆಂಗಳೂರು ಇದರ ಸ್ಕೂಲ್ ಆಫ್ ಇಂಟಿಗ್ರೇಟೆಡ್‌ ಸ್ಟಡೀಸ್‌ನಲ್ಲಿ ಶಿಕ್ಷಕ. ಮೂಲತಃ ಸುಳ್ಯತಾಲೂಕಿನ ಪೆರುವಾಜೆ ಗ್ರಾಮ. ಬೆಂಗಳೂರಿನಲ್ಲಿ ಪದವಿ ಶಿಕ್ಷಣ. ಪ್ರಸ್ತುತ History ಯಲ್ಲಿ MA ವ್ಯಾಸಂಗ. ಅರೆಬಿಕ್ ಮತ್ತು ಉರ್ದು ಭಾಷೆಯಲ್ಲಿಯೂ ಪದವಿ. ಸಾಹಿತ್ಯ, ಇತಿಹಾಸ, ಸೂಫಿಸಂ, ರಾಜಕೀಯ, ಕ್ರಿಕೆಟ್, ಫುಟ್ಬಾಲ್, travelling ನಲ್ಲಿ ಆಸಕ್ತಿ. ಅರೆಬಿಕ್, ಉರ್ದು, ಇಂಗ್ಲಿಷ್ ಮಲಯಾಳಂ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುವ ಹವ್ಯಾಸ. ಸದ್ಯ Thijori.in ನಲ್ಲಿ ಸಹಸಂಪಾದಕರು.

ಪ್ರತಿಕ್ರಿಯಿಸಿ