ಋತುಮಾನ ೭ ವರ್ಷಗಳು – ಆದಿಮ ಲಿವಿಂಗ್ ಟೈಮ್ಸ್ ಡಿಜಿಟಲೀಕರಣ

ಅಕ್ಟೊಬರ್ ೨೦೧೧ ರಲ್ಲಿ ಕೋಟಿಗಾನಹಳ್ಳಿ ರಾಮಯ್ಯನವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ಆದಿಮ ಲಿವಿಂಗ್ ಟೈಮ್ಸ್ ‘ ಕೇವಲ ಮಾಸಪತ್ರಿಕೆಯಾಗಿರಲಿಲ್ಲ. ಅದರ ಟ್ಯಾಗ್ ಲೈನ್ ‘ತಪ್ಪು ಚಿಕ್ಕದು ಮಾಡಿ, ತೆಪ್ಪ ದೊಡ್ಡದು ಮಾಡಿ’ ಎಲ್ಲವನ್ನೂ ಹೇಳುತ್ತದೆ.

ಎಲ್ಲರನ್ನೂ ಒಳಗೊಳ್ಳುತ್ತಾ, ಯಾವುದೇ ಆಧಾರವಿಲ್ಲದೆ ತನ್ನ ಗುರುತ್ವ ಆಧರಿಸಿ ತೇಲುವ ತೆಪ್ಪದ ಚಲನಶೀಲತೆಯ ರೀತಿ ನಾವು ಸಹ ಮಾತನಾಡಬೇಕಿರುವುದು ನಮ್ಮ ಕಾಲದ ಲಿವಿಂಗ್ ಕುರಿತು. ಇಲ್ಲಿ ಲಿವಿಂಗ್ ಅಂದರೆ ಅಂಬೇಡ್ಕರ್ ಹೇಳಿದಂತೆ ‘ ಆತ್ಮ ಘನತೆಯನ್ನು ಮರಳಿ ಪಡೆಯುವುದು’. ಇದನ್ನು ಬಲವಾಗಿ ನಂಬಿದ್ದ ರಾಮಯ್ಯನವರ ಸಾಂಸ್ಕೃತಿಕ ಚಿಂತನೆಯ ಮೂಸೆಯಲ್ಲಿ ಅರಳಿದ ಪತ್ರಿಕೆ ವಂಚಿತ ಸಮುದಾಯಗಳ ಕಥನ ರೂಪಿಸಲು ಪ್ರಯತ್ನಿಸಿತು. ದಲಿತರ ಸಾಂಸ್ಕೃತಿಕ ಬದುಕಿನ ಸೌಂದರ್ಯ ಮೀಮಾಂಸೆಯನ್ನು ಮರು ಕಟ್ಟುವುದು ಸಹ ಇದರ ಭಾಗವಾಗಿತ್ತು. ಜೊತೆಗೆ ನಮ್ಮ ರಾಜ್ಯಕ್ಕೊಂದು ನಿಜದ ‘ವ್ಯಾಸಂಗಕ್ರಮ’ (ಪೆಡಗಾಜಿ) ದ ಅಗತ್ಯವನ್ನು ಮನಗಂಡಿದ್ದ ಪತ್ರಿಕೆಯ ಸಂಪಾದಕೀಯ ಬಳಗವು ಈ ಹಿನ್ನೆಲೆಯಲ್ಲಿ ಸಂಶೋಧನೆ, ಅಧ್ಯಯನಕ್ಕೆ ಒತ್ತು ಕೊಡುವುದು ಮುಖ್ಯ ಆದ್ಯತೆಯಾಗಿತ್ತು. ಸಿನಿಮಾ ಕುರಿತು ಹೊಸ ಅರಿವು ಮೂಡಿಸುವುದರ ಬಗ್ಗೆ ನಿರಂತರ ಚರ್ಚೆಗಳಾಗುತ್ತಿದ್ದವು.

ರಾಮಯ್ಯನವರು ಮೊದಲ ಸಂಚಿಕೆಯ ಸಂಪಾದಕೀಯದಲ್ಲಿ ಹೇಳಿರುವಂತೆ, ನಾವು ಇಡುವ ಪ್ರತಿ ಹೆಜ್ಜೆಯಡಿಯ ಮಣ್ಣಲ್ಲಿರಬಹುದಾದ ಮೊಳೆವ ಬೀಜಗಳೂ, ಹುಲ್ಲುಗರಿಕೆ, ಬಗ್ಗಿದರೂ ಬಾಗದ ಬಿದಿರ ವಿಕಾಸದ ಬೆರಗನ್ನ… ಬಂಡೆಯ ಬಿರುಕಿನ ಪಯಣದ ಸುಖದು:ಖಗಳನ್ನ ಕಟ್ಟಿಕೊಡುವ ಆಶಯದಿಂದ ಹೊರಬಂದ ಈ ಪತ್ರಿಕೆಯ ನಮಗೆ ಸಿಕ್ಕಿದಷ್ಟು ಪ್ರತಿಗಳನ್ನು ಇಲ್ಲಿ ಡಿಜಿಟಲೀಕರಣ ಮಾಡಿದ್ದೇವೆ. ನೋಡಲು ಈ ಕೊಂಡಿಯನ್ನು ಬಳಸಿ (https://ruthumana.com/sanchaya). ಇದನ್ನು ಸಾಧ್ಯವಾಗಿಸಿದ್ದು #ServantsOfKnowledge (https://archive.org/details/ServantsOfKnowledge) ಯೋಜನೆ. ಈ ಯೋಜನೆಗೆ ‘ಆದಿಮ ಲಿವಿಂಗ್ ಟೈಮ್ಸ್ ‘ ಪ್ರತಿಗಳನ್ನು ನಮಗೆ ಒದಗಿಸಿದ ಸಿ. ಜಿ. ಲಕ್ಮೀಪತಿಯವರಿಗೆ, ನೆರವಿತ್ತ ವಿ. ಎಲ್, ಎಲ್ ನರಸಿಂಹಮೂರ್ತಿಯವರಿಗೆ ಋತುಮಾನ ಆಭಾರಿ. ಆದಿಮ ಲಿವಿಂಗ್ ಟೈಮ್ಸ್ ನ ಬಿಟ್ಟು ಹೋದ ಸಂಚಿಕೆಗಳು ಯಾರ ಬಳಿಯಾದರೂ ಇದ್ದರೆ ನಮಗೆ ಅಗತ್ಯವಾಗಿ ತಿಳಿಸಿ.

ಅಂದ ಹಾಗೆ ಋತುಮಾನ ಶುರುವಾಗಿ ಏಳು ವರ್ಷಗಳು ಸಂದವು. ಜೀವನದ ಏರಿಳಿತಗಳ ಮಧ್ಯೆ ನಮ್ಮ ಕೈಲಾದಷ್ಟು ನಾಡು, ನುಡಿಗಾಗಿ ಈ ಮೂಲಕ ಶ್ರಮಿಸಿದ್ದೇವೆ. ಹೀಗೆ ಇನ್ನಷ್ಟು ಕಾಲ ಮುಂದುವರೆಸುವ ಹಂಬಲ ನಮ್ಮದು. ಋತುಮಾನದ ಮೊಬೈಲ್ ಆ್ಯಪ್ ನಿಮ್ಮ ಫೋನಿನಲ್ಲಿ ಹಾಕಿಕೊಳ್ಳಿ. ನಾವು ನಿಮ್ಮನ್ನು ತಲುಪುವುದು ನಮಗೆ ಇನ್ನಷ್ಟು ಸಲಭವಾಗುತ್ತದೆ. ಹಾರೈಕೆಗಳಿರಲಿ.

Download RUTHUMANA App here :

** Android *** : https://play.google.com/store/apps/details?id=ruthumana.app
** iphone ** : https://apps.apple.com/in/app/ruthumana/id1493346225


ನಿಮ್ಮ ಯಾವುದೇ ಕೃತಿಗಳನ್ನು ಕಾಪಿರೈಟ್ ಮುಕ್ತವಾಗಿ ಡಿಜಿಟಲೀಕರಿಸಬೇಕೆಂದಿದ್ದರೆ ಋತುಮಾನ ಅಥವಾ ಸಂಚಯವನ್ನ([email protected] / [email protected] ) ಸಂಪರ್ಕಿಸಿ. ಅದನ್ನೂ ಕೂಡ ಡಿಜಿಟಲೀಕರಿಸಿ ಮೂಲ ಪ್ರತಿಯನ್ನು ಸುರಕ್ಷಿತವಾಗಿ ಹಿಂದಿರುಗಿಸುತ್ತೇವೆ. ಸಂಚಯ ಹಾಗೂ #ServantsOfKnowledge ಮೂಲಕ ಸಾಧ್ಯವಾಗುತ್ತಿರುವ ಇತರೆ ಡಿಜಿಟಲೀಕರಣ ಕಾರ್ಯಗಳ ಬಗ್ಗೆ ತಿಳಿಯಲು ಈ ಕೊಂಡಿಯನ್ನ ಬಳಸಿ. (https://sanchaya.org/project/kannada-digitization-project)

ಪ್ರತಿಕ್ರಿಯಿಸಿ