ಮೊಗಳ್ಳಿಯವರ ’ಅಲ್ಲಿ ಯಾರೂ ಇಲ್ಲ’ ಕೃತಿಗೆ ಒಂದು ಕಿರು ಪ್ರವೇಶ

ಕನ್ನಡದ ಪ್ರತಿಭಾವಂತ ಸೃಜನಶೀಲ ಲೇಖಕ ಮೊಗಳ್ಳಿ ಗಣೇಶ್ ಕೆಲವು ದಿನಗಳ ಹಿಂದೆ ನಮ್ಮನ್ನಗಲಿದರು. ’ಅಲ್ಲಿ ಯಾರೂ ಇಲ್ಲ’ ಮೊಗಳ್ಳಿ ಗಣೇಶ್ ಅವರೇ ಕರೆದುಕೊಂಡಂತೆ ಗಪದ್ಯ ಕಾದಂಬರಿ. ಈ ಕೃತಿಗಾಗಿ ಹಿರಿಯ ಕವಿ ಎಚ್.ಎಸ್ ಶಿವಪ್ರಕಾಶ್ ಬರೆದ ಕಿರು ಪ್ರವೇಶಿಕೆ ಇಲ್ಲಿದೆ.

ಮೊಗಳ್ಳಿಯವರ ‘ಅಲ್ಲಿ ಯಾರೂ ಇಲ್ಲ’ ಕೃತಿಗೆ ಒಂದೆರಡು ಮಾತುಗಳನ್ನು ಬರೆದುಕೊಡಲು ಬಹಳ ಸಂತೋಷದಿಂದ ಒಪ್ಪಿಕೊಂಡಾಗ ಅದು ಇಷ್ಟು ಕಷ್ಟದ ಕೆಲಸವೆಂಬ ಅಂದಾಜು ನನಗಿರಲಿಲ್ಲ. ಎಪ್ಪತ್ತರ ಹೊಸ್ತಿಲಲ್ಲಿ ನನಗೆ ಅರ್ಥವಾಗದಿರುವ ವಿಷಯಗಳು ಲೆಕ್ಕಕ್ಕೆ ಸಿಗದಷ್ಟು. ಆದರೆ ಒಂದಂತೂ ಚೆನ್ನಾಗಿ ಗೊತ್ತಾಗಿದೆ. ಕಡಿಮೆ ದರ್ಜೆಯ ಕೃತಿಗಳ ಬಗ್ಗೆ ದಂಡಿ ದಂಡಿ ಬರೆಸಬಹುದು, ಭಾಷಣ ಬಿಗಿಯ ಬಹುದು.ಆದರೆ ಬೆಲೆಗಟ್ಟಲಾಗದ ಕೃತಿಗಳ ಬಗ್ಗೆ ಬರೆಯುವುದಾಗಲೀ ಭಾಷಣ ಹೊಡೆಯುವುದಾಗಲಿ ಬಹಳ ಬಹಳ ಕಷ್ಟ.

‘ಅಲ್ಲಿ ಯಾರೂ ಇಲ್ಲ’ ಕೃತಿ ನಾನು ಓದಿ ಹನಿಹನಿಯಾಗಿ ಆಸ್ವಾದಿಸಲು ಅನುವು ಮಾಡಿಕೊಡುತ್ತಿರುವುದರಿಂದ ಅದೊಂದು ಬೆಲೆಗಟ್ಟಲಾಗದ ಅಗ್ಗಳ ಕೃತಿ. ಇಂಥ ಸೃಜನ ಬರವಣಿಗೆಯ ಕೃತಿಗಳು ಮಾತು ಬಲ್ಲ ಜಾಣ್ಮೆಗಾಗಲಿ ತರ್ಕದ ತಾರ್ಕಣೆಗಾಗಲಿ ಸಿಗುವುದಿಲ್ಲ. ಯಾಕಂದರೆ ಮಾತಿನ ಸೀಮೆಯೊಳಗಿದ್ದೂ ಸೀಮೆಸೀಮೆಗಳ ದಾಟುವ ಮಿಕ್ಕಿಮೀರಿ ಹೋಗುವ ಸತುವು ಮಹತ್ಕೃತಿಗಳಲ್ಲಿ ಹಾಸು ಹೊಕ್ಕಾಗಿರುತ್ತವೆ. ಇಂಥ ಅಪರೂಪದ ಕೃತಿಯಾಗಿದೆ ಮೊಗಳ್ಳಿ ಅವರ ಹಲವು ದಶಕಗಳ ಕಾವ್ಯ ಸಾಧನೆಯ ಪರಿಪಕ್ವ ಫಲವಾಗಿರುವ ಈ ಕೃತಿರತುನ.

ಕನ್ನಡದ ಮಾತ್ರವಲ್ಲ ಬಹುತೇಕ ಭಾಷೆಗಳ ಸಮಕಾಲಿನ ಬರಹಗಳು ಬಹುಮಟ್ಟಿಗೆ ಏನನ್ನೋ ಸಾಧಿಸವು ಏನನ್ನೋ ಸ್ಥಾಪಿಸಲು ಸರ್ಕಸ್ಸು ಮಾಡುತ್ತಿರುತ್ತವೆ. ಬಾಳಿನಾಸೆಗೆ ಹಾಲನೆರೆಸುವ ಬದಲು ಸುಣ್ಣದ ನೀರೆರೆಯುತ್ತವೆ.ಚಿತ್ರಗುಪ್ತನ ಪಟ್ಟಿಯಲ್ಲಿ ಈಗಾಗಲೇ ದಾಖಲಾಗಿರುವ ಆ ಅವಸಾನವನ್ನ ಸೃಜನತೆಯ ಅಣಕಗಳನ್ನು ಅವುಗಳ ಪಾಡಿಗೆ ಬಿಡೋಣ. ಅವುಗಳಿಗೆ ಅದೆಷ್ಟು ಹಾರತುರಾಯಿಗಳು, ವಾಲಗ, ಡೋಲು, ಸನ್ಮಾನ, ಬಹುಮಾನ, ಪದ, ಪದವಿ ಏಸು ಸಿಕ್ಕಿದರೂ ಹೆಣದ ಅಲಂಕಾರದ ಹಾಗೆ, ಮೆರವಣಿಗೆಯ ಹಾಗೆ.

ಮೊಗಳ್ಳಿ ಕೃತಿಗೆ ವಾಪಸಾಗೋಣ.

ಕೃತಿಯ ಹೆಸರು ‘ ಅಲ್ಲಿ ಯಾರೂ ಇಲ್ಲ’ . ಆದರೆ ಅಲ್ಲಿ ಎಲ್ಲರೂ ಇದ್ದಾರೆ. ಇದಕ್ಕೊಂದು ಕಥಾ ವಸ್ತುವಿಲ್ಲ. ಯಾಕೆಂದರೆ ಇದು ಹಲ ಕಥನಗಳ ಒಡಲಲಿ ಅಡಗಿಸಿಕೊಂಡ ಬೃಹತ್ಕತೆಯಾಗಿದೆ. ಇಲ್ಲಿ ಹಿಂದು-ಇಂದು-ಮುಂದುಗಳು ನಾವು ಈ ಕೃತಿಯನ್ನು ಸವಿಯುವ ಇಂದಿನಲ್ಲಿ, ಈಗಿನಲ್ಲಿ ಮಿಂಚಿನಂತೆ ಮಿಂಚಿ, ಗಾಳಿಯಂತೆ ಬೀಸಿ, ಪರಿಮಳದಂತೆ ಸೂಸಿ, ತಾಯ ಕರಸ್ಪರ್ಶದಂತೆ ಮೈದಡವಿ, ಮನದಡವಿ ಮರೆಯಾಗಿ ಮರುಮರುಳಿ ಮರುಳುತಲೇ ಇರುತವೆ. ಇಲ್ಲಿನ ಕಾಲ ಸಾಮ್ರಾಜ್ಯಗಳ, ಕ್ರಾಂತಿ ಪ್ರತಿಕ್ರಾಂತಿಗಳ ಏಳು ಬೀಳುಗಳ ಥರ್ಮೋಡೈಮಾಮಿಕ್ಸಿನ ಎರಡನೆ ನಿಯಮದ ನೇರಗೆರೆಯ ಕಾಲವಲ್ಲ. ಸಾಸಗಳ ಚಲವೆಯ, ಗುಂಡಿಗೆಯ ಡವಡವದ, ಕೂಡುಬಿರಿವುಗಳಂತೆ ಇಂದ್ರಿಯಗಳಿಗೆ ನೇರ ತಾಕುವ ಸೋಕುವ ಅನುಭವದ ಕಾಲ.

ಮೊಗಳ್ಳಿ ಇದಕ್ಕೆ ಗಪದ್ಯಕಾವ್ಯವೆಂದು ಉಪಶೀರ್ಷಿಕೆ ಕೊಟ್ಟಿದ್ದಾರೆ. ಆದರೆ ಇಲ್ಲಿರುವುದು ಮಹಾಕಾವ್ಯದ ಅಭಿವ್ಯಕ್ತಿ ಪ್ರಕಾರ. ಯಾವ ಹೆಸರಿಟ್ಟರೂ ಹಸನಾದುದು ಹಸನೇ ಆಗಿರುತ್ತದೆ, ಅಲ್ಲವಾ?

ಮಹಾಕಾವ್ಯ ಬರೆಯುವ ದೊಂಬರಾಟವನ್ನು ಬಹಳ ಮಂದಿ ವಾಚಾರಚನಾಕಾರರು ಮಾಡಿದ್ದಾರೆ. ಕುವೆಂಪು ಅವರ ಹೊರತು ಆ ದಿಶೆಯಲ್ಲಿ ಪೂರ್ತಿ ಗೆದ್ದವರು ನನಗಾರೂ ನೆನಪಾಗುತ್ತಿಲ್ಲ. ಹಾಂ ಮರೆತೆ. ಇನ್ನೊಬ್ಬ ಜ್ಞಾನಪೀಠಿ ಕಂಬಾರರೂ ಈ ಪ್ರಯತ್ನವನ್ನು ಒಂದಲ್ಲ ಎರಡುಬಾರಿ ಮಾಡಿ ಅರ್ಧಂಬರ್ಧ ಗೆದ್ದಿದಾರೆ. ಆದರೆ ಪೂರ್ಣತೆಯ ಫಲ ಅವರಿಗೆ ದೊರಕಿಲ್ಲ.
ಕುವೆಂಪು ನಂತರ ಅದೇ ಮಟ್ಟದ ಯಶಸ್ಸನ್ನು ಕುವೆಂಪು ಅವರಿಗಿಂಥ ಬೇರೆಯದೇ ಥರ ಮೊಗಳ್ಳಿ ಸಾಧಿಸಿದ್ದಾರೆ.
ಅದು ಹೇಗೆ?
ಮಹಾಕಾವ್ಯದಲ್ಲಿ ಮಖ್ಯವಾಗಿ ಎರಡು ಬಗೆಗಳು. ಕುವೆಂಪು ಅವರ ರಾಮಾಯಣದರ್ಶನ, ರಾಮಾಯಣ, ಮಹಾಭಾರತ, ಸಿಲಪ್ಪದಿಗಾರಂಗಳ ಹಾಗೆ ಏಕಕಥಾಸೂತ್ರದಲ್ಲಿ ಬಂದಿಸಲ್ಪಟ್ಟ ರಚನೆಗಳು. ಇದಕ್ಕೆ ಭಿನ್ನವಾದ ಇನ್ನೊಂದು ಮಹಾಕಾವ್ಯ ಮಾದರಿಯಲ್ಲಿ ಏಕಕಥಾಸೂತ್ರವಿರುವುದಿಲ್ಲ. ಅವುಗಳಲ್ಲಿರುವ ಹೊಂದಿಕೆ-ಬಂದಿಕೆಗಳು ಏಕೋಭಾವದ ಸೂತ್ರದಲ್ಲಿ ಕಟ್ಟಿದ ಹಲರತ್ನ ಮಾಲಿಕೆಗಳ ಥರ. ಈ ಪ್ರಕಾರಕ್ಕೆ ಓವಿಜನ ಮೆಟಮಾರ್ಫಸಿಸ್ , ರೂಮಿಯ ಮಸ್ನವಿ, ಸಾದಿಯ ಗುಲಿಸ್ತಾ ಉದಾಹರಣೆಗಳು.
ಅಪರೂಪವಾದ ಈ ಮಹಾಕಾವ್ಯ ಬಂಧ ಮೊಗಳ್ಳಿಯವರ ಈ ಕೃತಿ ಮೂಲಕ ಮೊದಲಬಾರಿ ಕನ್ನಡಕ್ಕೆ ಕಾಲಿಟ್ಟಿದೆ.
ಈ ಕೃತಿಯ ನಿರಂತರತೆಯು ಇನ್ನೊಂದು ಬಗೆಯಲ್ಲಿ ಅಭೂತಪೂರ್ವ. ಹೆಸರೇ ಸೂಚಿಸುವ ಹಾಗೆ ಬುದ್ದನ ಅನಿಂತರತಾವಾದ, ಅನಾತ್ಮವಾದ ಈ ಕೃತಿಯ ಹುರುಳಾಗಿದೆ, ತಿರುಳಾಗಿದೆ.
ಇಲ್ಲಿರುವ ಕಥಾನಾಯಕ ಸರ್ವಾಂತರ್ಗತನಾದ ಆತ್ಮನಲ್ಲ. ಹಾಗೆ ನೋಡಿದರೆ ಅವನಿಗೆ ಹಲವು ಜೀವಗಳಿವೆ. ಆ ಜೀವಗಳು ಯಾರಾದರೂ ಆಗಬಹುದು, ಯಾವ ರೂಪವನ್ನಾದರೂ ತಳೆಯಬಹುದು. ಒಂದೊಂದು ಪದ್ಯದಲ್ಲೂ ಹೊಸ ಪಾತ್ರವಾಗಿ ಹೊಸ ದನಿಯಾಗಿ, ಹೊಸನಿಯಾಗಿ ಮಾತಿನ ಮೈತಳೆದು ತನ್ನ ಹೇಳುಹೇಳುತ್ತಾ ಮೌನವಾಗಿಬಿಡುತ್ತವೆ. ನಮ್ಮ ಆತ್ಮವಾದೀ ಕುತೂಹಲಗಳನ್ನು ಗಮನಿಸದೆ ಕತೆ ಇನ್ನೊಬ್ಬನ ದನಿಯಲ್ಲಿ ಇನ್ನೊಂದು ಅಪೂರ್ಣ ಕತೆ ಹೇಳತೊಡಗಿ ನಮ್ಮನ್ನು ಇನ್ನೊಂದು ಮಾಂಚಿವ ತೋಳಿನಿಂದ ಸೆಳೆದುಕೊಳ್ಳುತ್ದೆ.
ಆತ್ಮದ ನಿರಂತರತೆಯಿರದ ಬೇರೆ ಸ್ಥಾಯಿಗಳಿಲ್ಲವೆ? ನಿರಂತರತೆಗಳಿಲ್ಲವೆ? ಸಾರೂ ಇಲ್ಲದಲ್ಲು ಸಾರೋ ಒಬ್ಬ ಇಲ್ಲವೆ?
ಬುದ್ದನ ಸೂತ್ರವೊಂದು ನೆನಪಾಗುತಾ ಇದೆ. ಒಮ್ಮೆ ಶಿಷ್ಯರು ಕೇಳುತ್ತಾರೆ: ‘ಭಂತೆ, ಪ್ರಪಂಚ ಅನಾತ್ಮವಾದರೆ ಪುನರ್ಜನ್ಮಿಸುವವರಾರು?’
ಆಗ ಬುದ್ದ: ‘ ಬಿಕ್ಕುಗಳೆ,ವರ್ಷಗಳ ಹಿಂದೆ ನೀವೇನಾಗಿದ್ದೀರಿ ಇವತ್ತೂ ಅದೇ ಆಗಿದೀರ? ಸದಾ ನೀರು ಬದಲಾಗುತಿರುವ ನದಿ ಅದೇನಾ ಬೇರೆಬೇರೆನಾ? ಸದಾ ಉರಿದು ಹೋಗುತಿರುವ ದೀಪದ ಜ್ವಾಲೆ ಸದಾ ಅದೇನಾ ಬೇರೆಬೇರೆನಾ?’
ಬಿಕ್ಕುಗಳಿಗೆ ಉತ್ತರ ತೋಚುವುದಿಲ್ಲ. ಆಗ ಲೋಕಗುರು ಹೇಳುತ್ತಾನೆ: ‘ಅದು ಅದೆಯೂ ಹೌದು, ಅದು ಅದೆಯೂ ಅಲ್ಲ’( ನ ಚ ಸೋ ನಚ ಅನ್ನೋ)
ಇದನ್ನೇ ಈ ಕೃತಿಯ ಯಾರೂ ಅಲ್ಲದ ಎಲ್ಲಾ ಆಗುಆಗುಆಗುತಿರುವ ವ್ಯಕ್ತಿಯಲ್ಲದ ಕೇವಲ ಕ್ರೀ ಆಗಿರುವ ಕಥಾನಾಯಕ.
ಹೀಗೆ ಅನಾತ್ಮವಾದವನ್ನು ನಾನೆಂಬುದರ ನಿರಸನವನ್ನು ಹಲಭಾವ, ಹಲ ರಸಗಳ ಬಹುಮಗ್ಗುಲಿನ ಕೃತಿಯಾಗಿಸಿರುವ ಮೊಗಳ್ಳಿ ಕನ್ನಡದಲ್ಲಿ ಅನನ್ಯರು. ಇತರ ಭಾಷೆಗಳಲ್ಲಿ? ಬಲ್ಲವರು ಹೇಳಬೇಕು।

ಈ ಚಮತ್ಕೃತಿಯನ್ನು ಓದುವ ಕ್ರಮ ಯಾವುದು? ನನ್ನ ಪ್ರಕಾರ ಮೇಲುಮನದ ಏಕರೂಪಿ ಕಾಲನ ಕಟ್ಟಳೆಯ ಹೊರಗಿರುವ ಈ ಕೃತಿ ಪಠನೀಯ ಅನ್ನುವದಕ್ಕಿಂತಾ ಆಸ್ವಾದನೀಯ. ದಿನ ಪತ್ರಿಕೆಗಳ ಮಾದರಿಯ ಮೊದಲು ನಡು ಕೊನೆಯ ಬರವಣಿಗೆಗಳನ್ನು ಮೊದಲಿಂದ ತುದಿ ವರೆಗೆ ಓದುವ ರೀತಿ ಈ ಕೃತಿಗೆ ಶತ್ರು. ಇದನ್ನೂ ಎಲ್ಲಿಂದ ಬೇಕಾದರೂ ಸುರು ಮಾಡಿ ಎಲ್ಲಿ ಬೇಕಾದರೂ ನಿಲ್ಲಿಸಿ ಮತ್ತೆಲ್ಲಿಂದಲಾದರೂ ಸುರು ಮಾಡಬಹುದು.

ಕವಿತೆಗೆ ವಸ್ತು ಇರುವುದಿಲ್ಲ. ಇದ್ದರೂ ಒಂದು ನೆಪ ‘ ಅಂತ ಕೀರಂ ಹೇಳುತ್ತಿದ್ದರು. ಈ ಮಾತನ್ನು ಇಂದಿನ ಬಹಳ ಕವಿಗಳು ಮರೆತು ಕವಿತೆ ಮೂಲಕ ವಸ್ತುವೊಂದರ ಸುತ್ತಾ ಕತೆ ಅಥವಾ ಪ್ರಬಂಧ ಹೊಸಮಯತೊಡಗುತಾರೆ.
ವಸ್ತುಕೇಂದ್ರಿತ ಬರವಣಿಗೆಯ ಉಸಿರುಗಟ್ಟಿಸುವ ಕಟ್ಟುಗಳಿಂದ ಮೊಗಳ್ಳಿ ಈ ಕೃತಿಯಲ್ಲಿ ಸಹೃದಯರ ಮನಗಳನ್ನು ಹಿಗ್ಗಿಸುವ ಸ್ವತಂತ್ರಗೊಳಿಸುವ ಅಪರೂಪದ ಪ್ರಯತ್ನ ಮಾಡಿರುವುದರಿಂದ ಇಲ್ಲಿ ಕೃತಿ, ಕೃತಿಕಾರ, ಓದುಗ ಎಲ್ಲರನ್ನೂ ಮುಕ್ತಗೊಳಿಸಿದ್ಗಾರೆ.

ಈ ಕೃತಿಯನ್ನು ರಸವತ್ತಾಗಿಸಿರುವ ಮತ್ತೊಂದು ಗುಣ ಎಲ್ಲ ಗೃಹೀತಗಳನ್ನೂ ಒಳಗೊಂಡು ಯಾವುದಕ್ಕೂ ಸೀಮಿತವಾಗದೆ ಪ್ರತಿಭೆಯ ಸ್ವಾತಂತ್ರ್ಯಶಕ್ತಿಯನ್ನು ಸದಾ ಕಾಪಾಡಿಕೊಂಡಿರುವುದು. ಅನಿತ್ಯತೆಯೇ ನಿತ್ಯವೆಂದ ಬುದ್ದಗುರುವಿನ ದರ್ಶನವನ್ನೂ ದಾಟಿ ಇನ್ನೊಂದು ಕಡೆ ಹೋಗುತ್ತದೆ ಇಲ್ಲಿನ ಸೃಜನಪ್ರವಾಹ. ಅನಿತ್ಯತೆಗೆ ಬುಧ್ಧ ಗುರು ಸೂಚಿಸಿದ ಮದ್ದು ನಿರ್ವಾಣದ ನೇತಿ ಮಾರ್ಗ. ಇದನ್ನು ವೈಚಾರಿಕವಾಗಿ ಮೊಗಳ್ಳಿ ವಿರೋಧಿಸಿಲ್ಲ. ಆದರೆ ಅನಿತ್ಯತೆಯ ಲೋಕ ಮೊಗಳ್ಳಿಯವರಿಗೆ ಕೇವಲ ದುಕ್ಕವಲ್ಲ. ಆ ದುಕ್ಕದ ನಡುವಿನ ಪ್ರಯೋಗಶೀಲತೆಯ ಉತ್ಸಾಹದ ನಡುವೆಯೂ ಸುಲಿದ ಬಾಳೆಯ ಹಣ್ಣಿನ ಹಾಗೆ ಎಲ್ಲರಿಗೂ ದಕ್ತುವ ಹಾಗಿದೆ. ನಗೆಯನ್ನೂ ಮತ್ತೆ ಮತ್ತೆ ಅನುಭವಿಸುವಂತೆ ಮಾಡುತ್ತದೆ. ಇಲ್ಲಿ ಹೆಣ್ಣಾಗಲೀ ಮಣ್ಣಾಗಲೀ ನಿಸರ್ಗದ ಅಸ್ಥಿರ ಸಮೃದ್ಧಿಯಾಗಲಿ ಕೇವಲ ಅಳಲಿನ ಮೂಲಗಳಾಗಿರದೆ ಸುಖದ ಒರತೆಗಳೂ ಆಗಿವೆ.

ಜಪಾನಿನ ಇಸ್ಸಾ ಕವಿಯ ಹಾಯಿಕು ನೆನಪಾಗುತ್ತದೆ:
ಅಕ್ಕಯ್ಯ ನೀ ನೋಡೆ ಅಣ್ಣಯ್ಯ ನೋಡೋ
ಚಿಕ್ಕ ಚಿಕ್ಕ ಹೂವುಗಳ। ನೋಡಿರಿ
ದುಕ್ಕತುಂಬಿದ ಲೋಕದಲ್ಲಿ!

ಇಲ್ಲಿಯೂ ಇದೆ ಕುವೆಂಪು ಹೇಳುವ ಪೂರ್ಣದೃಷ್ಟಿ. ಆದರೆ ಕುವೆಂಪು ಅವರಲ್ಲಿರುವುದು ಸರ್ವಾತ್ಮವಾದೀ ದರ್ಶನ. ತಾತ್ವಿಕವಾಗಿ ಅವರು ವೇದಾಂತ ಮತ್ತು ಅರವಿಂದ ದರ್ಶನಗಳಿಂದ ಹೀರಿಕೊಂಡದ್ದು. ಆದರೆ ಮೊಗಳ್ಳಿಯವರ ನನಗೆ ಕಾಣುವ ದಾರ್ಶನಿಕ ಭಿತ್ತಿ ಪ್ರಧಾನವಾಗಿ ಮಹಾಯಾನ ಬೌದ್ದದ ಸರ್ವಾಸ್ತಿವಾದಕ್ಕೆ ಸಮೀಪ.

ಇಲ್ಲಿನ ನಿರೂಪಣೆಯ ಭಾಷೆ ಅತ್ಯಂತ ನನ್ನಂಥ ಪಾಮರ ಓದುಗರಿಗೆ ಪ್ರಯೋಗಶೀಲ. ಕನ್ನಡದ ಕೆಲವು ಬಹುಪ್ರಶಂಸಿತ ಕೃತಿಗಳಲ್ಲಿ ನನ್ನಂಥ ಪಾಮರ ಓದುಗರಿಗೆ ಅರ್ಥಮಾಡಿಕೊಳ್ಳುವುದೇ ಬಲುಕಠಿಣವಾಗಿ ಆಸ್ವಾದನೆ ಆಗುವುದಿಲ್ಲ. ಮೊಗಳ್ಳಿ ಅವರ ಭಾಷೆ ತನ್ನ ಪ್ರಯೋಗಶೀಲತೆಯ ನಡುವೆಯೂ ಸುಲಿದ ಬಾಳೆ ಹಣ್ಣಿನಂಥ ಸರ್ವಜ್ಞನ ಥರದ ಸರಳತೆಯನ್ನು ಕಾದುಕೊಂಡಿದೆ.

ಸಂಸಾರವೇ ನಿರ್ವಾಣವಾಗುವ ಹಠಾತ್ ಬೋಧಿಯನ್ನು ಜಪಾನಿನ ಮಹಾಕವಿಗಳು ಪುಟಾಣಿ ಕವಿತೆಗಳಲ್ಲಿ ಹಿಡಿದಿಟ್ಟಿದ್ದರೆ ಮೊಗಳ್ಳಿ ಅ ಬಗೆಯ ಚಮತ್ಕಾರಗಳ ಒಂದು ಮಹಾನ್ ಮಾಲೆಯನ್ನು ಈ ಕೃತಿಯಲ್ಲಿ ನೀಡಿದಾರೆ. ಈ ಕಲಾಕೃತಿ ಗೊತ್ತಾಗಿಯೋ ಗೊತ್ತಿಲ್ಲದೆಯೋ ಬೌದ್ದದರ್ಶನದೊಡನೆ ನಡೆಸಿರುವ ಸೃಜನಾತ್ಮಕ ಸಂವಾದವಾಗಿದೆ.
ಹೋಲಿಕೆಗಳೇ ಇರದಷ್ಟು ಅಪೂರ್ವವಾಗಿರುವ ಈ ಕೃತಿಯ ಬಗ್ಗೆ ಹೇಳಬೇಕಾದುದು ಅನಂತವಾಗಿದೆ. ಸದ್ಯ ನಾನು ಕೃತಿಯ ಇತರ ಆಯಾಮಗಳನ್ನು ಆಸ್ವಾದ ಮಾಡುವ ರಸಾನುಭವ ಪರ್ಯತ್ಸುಖವನ್ನು ಸಹೃದಯ ಓದುಗರಿಗೂ ವಿವರಿಸುವ ಗುರುತರ ಜವಾಬುದಾರಿಯನ್ನು ವಾಕ್ಚತುರ ವಿಮರ್ಶಕ ವರೇಣ್ಯರಿಗೂ ವರ್ಗಾಯಿಸುತ್ತಾ ವಿರಮಿಸುತ್ತಿದ್ದೇನೆ.

ಮೊಗಳ್ಳಿಯವರ ಮೇರುಕೃತಿಗೆ ಅದನ್ನು ನಿರ್ಮಿಸಿದ ಚಮತ್ಕಾರೀ ಪ್ರತಿಭೆಗೆ ಇದು ನನ್ನ ಕಿರುಪ್ರವೇಶಿಕೆ ಮತ್ತು
ನನ್ನ ದಂಡವತ್ ನಮನ. ಜೊತೆಗೆ ಇದನ್ನು ಬರೆಸಿಕೊಂಡದ್ದಕ್ಕೆ ಅನಂತಾನಂತ ವಂದನೆಗಳು.

ಪ್ರತಿಕ್ರಿಯಿಸಿ