
ಸಂದರ್ಶಿಸಿದವರು: ಭಾರತೀದೇವಿ.ಪಿ
ಪ್ರ: ನಮ್ಮ ಸುತ್ತಲಿನ ಪರಿಸರ ವೇಗವಾಗಿ ಬದಲಾಗುತ್ತಿದೆ. ಆದರೆ ಬೋಧನೆ ಹಾಗೂ ಕಲಿಕಾ ವಿಧಾನಗಳು ಹಳೆಯ ಮಾದರಿಯಲ್ಲೇ ಇವೆ ಎನಿಸುತ್ತಿದೆ. ಚಿಂತನೆಗೆ ಪ್ರೇರೇಪಿಸಬೇಕು, ಭಾಷಾಕಲಿಕೆ ಸಾಧ್ಯವಾಗಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಭಾಷಾಪಠ್ಯಗಳನ್ನು ವಸ್ತು ಕೇಂದ್ರಿತವಾಗಿ ನೋಡುತ್ತಿದ್ದೇವೆ. ಇವತ್ತಿನ ಕಾಲಕ್ಕೆ ತಕ್ಕಂತೆ ಬೋಧನೆ ಹಾಗೂ ಕಲಿಕಾ ವಿಧಾನಗಳನ್ನು ಹೇಗೆ ಮರುವಿನ್ಯಾಸಗೊಳಿಸಿಕೊಳ್ಳಬಹುದು?
ಉ: ನೀವು ಬೋಧನೆ ಮತ್ತು ಕಲಿಕಾ ವಿಧಾನ ಹಳೆಯ ಮಾದರಿಯಲ್ಲಿ ಇವೆ ಅಂತ ಹೇಳಿದ್ದೀರಿ. ನಮ್ಮ ಶಿಕ್ಷಣ ತತ್ವಶಾಸ್ತ್ರದಲ್ಲೇ ಬೋಧನೆ ಮತ್ತು ಕಲಿಕೆ ಇವುಗಳನ್ನು ವ್ಯಾಖ್ಯಾನ ಮಾಡುವ ರೀತಿಯಲ್ಲಿ ಮುಖ್ಯವಾಗಿ ದೋಷ ಇದೆ ಅಂತ ಕಾಣ್ತದೆ. ಯಾಕಂದ್ರೆ ಬೋಧನೆ ಅಂದ್ರೆ ಕಾರಣ, ಕಲಿಕೆ ಅನ್ನೋದು ಕಾರ್ಯ ಅಂತ ನಾವು ಗ್ರಹಿಸಿದೀವಿ. ಅವುಗಳು ಒಂದರ ಜೊತೆ ಒಂದು ಇರಬಹುದು. ಆದರೆ ಒಂದು ಇನ್ನೊಂದಕ್ಕೆ ಕಾರಣ ಆಗೋದಿಲ್ಲ. 21ನೇ ಶತಮಾನದಲ್ಲಿ ನಾವು ಇದನ್ನು ಗ್ರಹಿಸಿಲ್ಲ. ಒಂದು ಕಾಲ ಇತ್ತು, ನೂರು ವರ್ಷದ ಹಿಂದೆ, ತಿಳುವಳಿಕೆ ಮತ್ತು ತಿಳಿಯುವ ದಾರಿ ಎರಡೂ ಕೂಡಾ ಯಾರೋ ಒಬ್ಬರಲ್ಲಿ ಮಾತ್ರ ಇರ್ತಿತ್ತು. ಅವರನ್ನು ಗುರುಗಳು ಅಂತ, ತಿಳಿದವರು ಅಂತ ಕರೀತಾ ಇದ್ರು. ಆದ್ದರಿಂದ ನೀವು ತಿಳುವಳಿಕೆಯನ್ನು ಪಡೀಬೇಕಾದ್ರೆ ಮತ್ತು ತಿಳಿಯುವ ದಾರಿಯನ್ನು ಕಂಡುಕೋಬೇಕಾದ್ರೆ ನೀವು ಅವರನ್ನು ಆಶ್ರಯಿಸಬೇಕಿತ್ತು. ಆದರೆ ಇವತ್ತು ನಾವು ಶಿಕ್ಷಣವನ್ನು ರೂಪಿಸಿರತಕ್ಕಂಥ ಕ್ರಮದಲ್ಲಿ ಬೋಧನೆ ಅನ್ನುವ ಚಟುವಟಿಕೆ, ಅದು ಕಲಿಕೆಯಲ್ಲಿ ಕೊನೆಯಾಗಬೇಕಾಗಿಲ್ಲ. ಎರಡನೆಯದು, ಕಲಿಕೆ ಎಲ್ಲೆಲ್ಲಿ ನಡೀತಾ ಇರ್ತದೆ, ಅದಕ್ಕೆ ಕಾರಣವಾಗಿ ಬೋಧನೆಯೇ ಇರಬೇಕು ಅಂತಿಲ್ಲ. ಬೇರೆ ರೀತಿಯಲ್ಲೂ ಕಲಿಕೆಗಳು ಆಗ್ತಾ ಇರ್ತವೆ. ಮತ್ತು ಇವೆರಡನ್ನೂ ಸಂಪರ್ಕಿಸುವ ಮತ್ತೊಂದು ಸಂಗತಿ ಯಾವುದು ಅಂದ್ರೆ, ಅದು ಪರೀಕ್ಷೆ. ಕ್ಲಾಸ್‍ನಲ್ಲಿ ಪಾಠ ಮಾಡ್ತಾ ಇದ್ರೆ ಸ್ಟೂಡೆಂಟ್ಸ್ ಎಷ್ಟೋ ಜನ, ಇದು ಪರೀಕ್ಷೆಲಿ ಬರತ್ತಾ ಮೇಡಂ, ಅಂತ ಕೇಳ್ತಾರೆ. ಅವರು ಕಲೀತಾ ಇದಾರಾ ಅಥವಾ ಪರೀಕ್ಷೆಗೋಸ್ಕರ ಸಿದ್ಧ ಆಗ್ತಾ ಇದಾರಾ ಅನ್ನೋದು ದೊಡ್ಡ ಸಮಸ್ಯೆ. ಅಂದರೆ ಬೋಧನೆ ಮತ್ತು ಕಲಿಕೆ ಅನ್ನುವ ಎರಡು ಚಟುವಟಿಕೆಗಳನ್ನು ನಾವು ಪರೀಕ್ಷೆ ಅನ್ನುವ ಒಂದು ಚಟುವಟಿಕೆಗೆ ಕೊಂಡಿ ಹಾಕಿರುವುದರಿಂದಾಗಿ ಮತ್ತಷ್ಟು ಗೊಂದಲಗಳಾಗಿವೆ. ಇನ್‍ಫಾರ್ಮಲ್ ಆದ, ನಾನ್ ಫಾರ್ಮಲ್ ಆದ ಕಲಿಕೆಗಳಿರ್ತವೆ. ಉದಾಹರಣೆಗೆ ಬೇಕಾದಷ್ಟು ವೃತ್ತಿಗಳಿರಬಹುದು ಇವುಗಳಲ್ಲಿ ಬೋಧನೆ ಅಂತಿರುವುದಿಲ್ಲ. ಅವುಗಳನ್ನು ನೋಡುತ್ತಾ ಮಾಡುತ್ತಾ ಕಲೀತಾ ಇರ್ತಾರೆ. ಅಡುಗೆ ಮಾಡೋದನ್ನು ಅಥವಾ ವಾಹನ ರಿಪೇರಿ ಮಾಡೋದನ್ನು ಕಲಿತ ಹಾಗೆ. ಅದು ಈಗ ತುಂಬ ಹೆಚ್ಚಿದೆ. ಅದು ವಿಷುಯಲ್ ಇರಬಹುದು, ಆಡಿಯೋ ಇರಬಹುದು, ಆಡಿಯೋ ವಿಷುಯಲ್ ಇರಬಹುದು, ಇನ್ನೊಬ್ಬರನ್ನು ಅನುಕರಣೆ ಮಾಡೋದು ಇರಬಹುದು. ಇವ್ಯಾವುದನ್ನೂ ನಮ್ಮ ಶಿಕ್ಷಣ ಕ್ರಮ ಪರಿಗಣಿಸ್ತಾ ಇಲ್ಲ ಅಂತ ನನಗನ್ಸತ್ತೆ. ಮತ್ತು ಪರೀಕ್ಷೆಯ ಲಿಂಕ್ ಇಲ್ದೇ ಕಲಿಕೆ ಹೇಗಾಗಬಹುದು, ಅದರ ಸ್ವರೂಪ ಏನು ಅನ್ನೋದನ್ನು ನಾವು ಅರ್ಥಮಾಡ್ಕೊಳ್ತಾ ಇಲ್ಲ. ಇನ್ನೊಂದು ಸಮಸ್ಯೆ ಏನು ಅಂತಂದ್ರೆ, ಯಾರು ಬೋಧಿಸ್ತಾ ಇದಾರೋ ಅವರು ತಮ್ಮ ಬೋಧನೆಯ ಪರಿಣಾಮವಾಗಿ ಕಲಿಕೆ ಆಗ್ತಾ ಇದೆಯಾ ಇಲ್ವಾ ಅನ್ನೋದನ್ನು ಟೆಸ್ಟ್ ಮಾಡ್ಕೋತಾ ಇಲ್ಲ. ನಾನು ಬೋಧಿಸ್ತಾ ಇದ್ದೇನೆ. ಆದರೆ ಅದು ಕಲಿಕೆಯಲ್ಲಿ ಕೊನೆಗೊಳ್ತಾ ಇದೆಯಾ? ನಾವು ಯಾವಾಗಲೂ ವಿಚಾರಗಳನ್ನು ರವಾನೆ ಮಾಡುವ ಕಡೆಗೆ ಹೋಗ್ತಾ ಇದ್ದೇವೆಯೇ ಹೊರತು ಕಲಿಸುವ ಕಲಿಯುವ, ತಿಳಿಯುವ ದಾರಿಗಳನ್ನು ಹೇಳಿಕೊಡ್ತಾ ಇಲ್ಲ. ಇವೆಲ್ಲವನ್ನು ನಾನು ಪದವಿ ಶಿಕ್ಷಣವನ್ನು ಗಮನದಲ್ಲಿ ಇರಿಸಿಕೊಂಡು ಮಾತಾಡ್ತಾ ಇದೀನಿ. ಪದವಿ ತರಗತಿಗಳಲ್ಲಿ ಬೋಧನೆ ಮತ್ತು ಕಲಿಕೆ ನಡುವೆ ಉಂಟಾಗಿರುವ ಬಹಳ ದೊಡ್ಡ ಬಿರುಕನ್ನು ಕುರಿತು ನಾನು ಮಾತಾಡ್ತಾ ಇದ್ದೇನೆ. ಈ ಪ್ರಶ್ನೆಯನ್ನು ಎದುರಿಸದೇ ಹೋದ್ರೆ ಈ ಸಮಸ್ಯೆಯನ್ನು ಪರಿಹರಿಸೋಕೆ ಆಗಲ್ಲ. ಕಲಿಕೆ ಮತ್ತು ಬೋಧನೆಯನ್ನು ಮರುವಿನ್ಯಾಸಗೊಳಿಸಿಕೊಳ್ಳಬೇಕು ಅಂತ ಅನ್ನಿಸ್ಬೇಕು. ಇವತ್ತು ತುಂಬಾ ಜನಕ್ಕೆ ಏನನ್ಸತ್ತೆ ಅಂದ್ರೆ, ನಮಗೆ ಗೊತ್ತಿದೆ, ಪಾಠ ಮಾಡ್ತೀವಿ, ವಿದ್ಯಾರ್ಥಿಗಳಿಗೆ ಆಸಕ್ತಿ ಇಲ್ಲ ಅಂತ. ಸ್ಟೂಡೆಂಟ್ಸ್ ಸರಿಯಾಗಿ ಕ್ಲಾಸ್‍ಗೆ ಬರಲ್ಲ, ಅರ್ಥ ಮಾಡ್ಕೊಳಲ್ಲ, ಗಮನ ಇರಲ್ಲ, ಪರೀಕ್ಷೆ ದೃಷ್ಟಿಯಿಂದ ಓದ್ತಾರೆ ಅಂತ ನಾವು ಅವರನ್ನು ದೂರ್ತೀವಿ ಅಥವಾ ಪಠ್ಯವನ್ನು ದೂರ್ತೀವಿ. ಕ್ಲಾಸ್‍ನಲ್ಲಿ ಏನೋ ಒಂದು ಪ್ರಾಸೆಸ್ ಇದೆ. ಆ ಪ್ರಾಸೆಸ್‍ನ ಪರಿಣಾಮ ಏನಾಗಿದೆ, ಅದು ಕಲಿಕೆಯಲ್ಲಿ ಪರ್ಯವಸಾನ ಆಗಿದೆಯಾ ಅಥವಾ ಇಲ್ವಾ? ಒಂದು ವೇಳೆ ಕಲಿಕೆಯಲ್ಲಿ ಪರ್ಯವಸಾನ ಆಗಿದ್ರೆ ತರಗತಿಯಲ್ಲಿ ಇರೋ ಐವತ್ತು ಅರುವತ್ತು ವಿದ್ಯಾರ್ಥಿಗಳಲ್ಲಿ ಯಾವ ಪ್ರಮಾಣದಲ್ಲಿ ಪರಿಣಾಮ ಆಗಿದೆ? ಇದು ಒಬ್ಬರಿಂದ ಇನ್ನೊಬ್ಬರಿಗೆ ವ್ಯತ್ಯಾಸ ಆಗತ್ತೆ. ಮೇಷ್ಟ್ರುಗಳು ವಿದ್ಯಾರ್ಥಿಗಳಲ್ಲಿ ಯಾರು ದೃಷ್ಟಿ ಇಟ್ಟು ಕೂತಿರ್ತಾರೋ ಅವರಿಗೆ ಮಾತಾಡ್ತಾ ಇರ್ತಾರೆ. ಕಣ್ಣು ಆ ಕಡೆ ತಿರುಗಿಸಿಕೊಂಡವರನ್ನು ಅಥವಾ ತಲೆ ತಗ್ಗಿಸಿಕೊಂಡವರನ್ನು ಗಮನಿಸ್ತಾ ಇರಲ್ಲ. ಕ್ಲಾಸ್ ರೂಂನ ಪ್ರಾಗ್ಮಾಟಿಕ್ಸ್ ಟೀಚರ್ಸ್‍ಗೂ ಹೇಳಿಕೊಟ್ಟಿರಲ್ಲ. ಟೀಚರ್ಸ್ ತಮಗೆ ತಾವೇ ಅಭ್ಯಾಸ ಮಾಡ್ಕೊಂಡಿರ್ತಾರೆ. ಆಮೇಲೆ 25ನೇ ವರ್ಷದಿಂದ ಪಾಠ ಮಾಡೋಕೆ ಶುರು ಮಾಡ್ದೋರು 60ನೇ ವಯಸ್ಸಿನವರೆಗೂ ಪಾಠ ಮಾಡ್ತಾ ಇರ್ತಾರೆ. ಅವರ ಬೋಧನಾ ವಿಧಾನದಲ್ಲಿ ಗುಣಾತ್ಮಕವಾದ ವ್ಯತ್ಯಾಸ ಆಗ್ತಾ ಇರಲ್ಲ. ಅದರ ಚಾಲೆಂಜ್‍ಗಳೇನು ಅನ್ನೋದನ್ನ ನೋಡ್ತಾ ಇಲ್ಲ ನಾವು.
ಪ್ರ: ವಿದ್ಯಾರ್ಥಿಗಳನ್ನು ಯೋಚನೆಗೆ ಹಚ್ಚುವುದಕ್ಕಿಂತ ಹೆಚ್ಚಾಗಿ ಅವರ ತಲೆಗೆ ಚಿಂತನೆಗಳನ್ನು ತುಂಬುವ ಬಗೆಯಲ್ಲಿ ಪಠ್ಯಗಳು ವಿನ್ಯಾಸಗೊಳ್ಳುತ್ತಿವೆ. ಈ ಸಂದರ್ಭದಲ್ಲಿ ಪಠ್ಯಗಳನ್ನು ರೂಪಿಸುವುದು ಸವಾಲಿನ ಕೆಲಸ. ಈ ಕುರಿತು ನಿಮ್ಮ ಅಭಿಪ್ರಾಯವೇನು?
ಉ: ವಿದ್ಯಾರ್ಥಿಗಳನ್ನು ಯೋಚನೆಗೆ ಹಚ್ಚುವುದಕ್ಕಿಂತ ವಿಚಾರಗಳನ್ನು ಅವರ ತಲೆಗೆ ತುಂಬುವ ಬಗೆಯಲ್ಲಿ. ಕರೆಕ್ಟ್ ಅದು. ನಾವು ಮಾಡ್ತಾ ಇರೋದು ಅದೇನೇ. ಯೋಚನೆಗೆ ಹಚ್ಚೋದು ಅಂದ್ರೇನು? ಚಿಂತನೆಗಳನ್ನು ತುಂಬೋದು ಅಂದ್ರೆ ನನ್ನ ಪ್ರಕಾರ ಕಂಟೆಂಟ್ ಅನ್ನು ತುಂಬೋದು. ಆಗಲೇ ಹೇಳಿದ ಹಾಗೆ ಒಂದು ಕತೆಯನ್ನು ನೀವು ಪಾಠ ಮಾಡ್ತಾ ಇದ್ರೆ ಕತೆಯ ಸಾರಾಂಶ ಏನು ಅದನ್ನು ವಿದ್ಯಾರ್ಥಿಗಳಿಗೆ ತಿಳಿಸೋದು. ಬಹಳ ಹೆಚ್ಚಂದ್ರೆ ಅದು ಯಾಕೆ ಮುಖ್ಯ, ಬದುಕಿಗೂ ಅದಕ್ಕೂ ಇರೋ ಸಂಬಂಧವೇನು ಇತ್ಯಾದಿಗಳ ಬಗ್ಗೆ ತಿಳಿಸೋದು. ಆದರೆ ಯಾವುದೇ ಒಂದು ಪಠ್ಯದ ಮೂಲಕ ಒಂದು ಐಡಿಯಾಲಜಿಯನ್ನು ಇರೋ ಹಾಗೆ ರವಾನೆ ಮಾಡ್ತೀವಿ ಅಂತ ಹೇಳೋಕಾಗಲ್ಲ. ಯಾಕಂದ್ರೆ ನಿಮ್ಮ ಬೋಧನಾ ವಿಧಾನದಲ್ಲಿ ಅದನ್ನು ಪ್ರಶ್ನೆ ಮಾಡೋದನ್ನು ಕೂಡಾ ಹೇಳಿಕೊಡಬಹುದು. ಪಠ್ಯದಲ್ಲಿ ಇರೋದನ್ನು ಏಕಮುಖಿಯಾಗಿ ರವಾನೆ ಮಾಡೋದು, ಅಧ್ಯಾಪಕರು ಅದರ ಸಮರ್ಥಕರೂ ಆಗಿರಬಹುದು. ಉದಾಹರಣೆಗೆ ದೇಶಪ್ರೇಮ ಅಂತ ಇಟ್ಕೊಳ್ಳೋಣ. ಇದು ಪ್ರತಿಯೊಬ್ಬ ಪ್ರಜೆಯಲ್ಲಿ ಕಡ್ಡಾಯವಾಗಿ ಇರಬೇಕಾದ ಒಂದು ಮೌಲ್ಯ ಅಂತ ತಿಳ್ಕೊಂಡಿದೀವಿ ನಾವು. ನಾವೇನು ಮಾಡ್ತೀವಿ, ಆದ್ದರಿಂದ ದೇಶದ್ರೋಹ ಅಂತ ಇನ್ನೊಂದಿದೆ, ದೇಶಪ್ರೇಮಕ್ಕೆ ಇದು ವಿರುದ್ಧವಾದದ್ದು. ದೇಶದ್ರೋಹ ಅಂದರೇನು, ಕೇವಲ ದೇಶಪ್ರೇಮದ ಗೈರುಹಾಜರಿಯಲ್ಲ. ಮತ್ತೇನೋ ಕೆಲವು ಲಕ್ಷಣಗಳಿವೆ ಅದಕ್ಕೆ. ಆ ಲಕ್ಷಣಗಳು ಯಾವುವು ಎನ್ನುವುದಕ್ಕೆ ಅಧ್ಯಾಪಕರ ತಲೆಯೊಳಗೆ ಏನೋ ಇರಬಹುದು, ಪಠ್ಯದ ಒಳಗೆ ಅದಕ್ಕೆ ಪೂರಕವಾದ ಅಂಶಗಳೂ ಇರಬಹುದು. ಅದಕ್ಕನುಗುಣವಾಗಿ ಟೀಚರ್ಸ್ ತಮ್ಮನ್ನು ತಾವು ಪರೀಕ್ಷೆ ಮಾಡ್ಕೊಳ್ದೇನೇ ಅದನ್ನೇ ರವಾನೆ ಮಾಡ್ತಾ ಇರಬಹುದು. ನಿಜವಾಗಿ ಅದು ಪಠ್ಯದ ಸಮಸ್ಯೆಗಿಂತ ಹೆಚ್ಚಾಗಿ ಅಧ್ಯಾಪಕರ ಸಮಸ್ಯೆನೂ ಆಗಬಹುದು. ತುಂಬಾ ಜನ ಅಧ್ಯಾಪಕರು ಪಠ್ಯದ ವಿಚಾರಕ್ಕಿಂತ ಹೆಚ್ಚಾಗಿ ತಮ್ಮ ಐಡಿಯಾಲಜಿಯನ್ನು ಪಠ್ಯದ ಮುಖಾಂತರ ಹೇರ್ತಾರೆ. ಅವರೇನು ನಂಬಿರ್ತಾರೆ ಜೀವನದಲ್ಲಿ, ಅದನ್ನು ಹೇಳ್ತಾ ಇರ್ತಾರೆ. ಉದಾಹರಣೆಗೆ, ಹೆಂಗಸಿನ ಸ್ಥಾನ ಮನೆಯಲ್ಲಿ ಅನ್ನೋದು ಒಬ್ಬ ಗಂಡು ಟೀಚರ್‍ನ ಬದುಕಿನ ಒಂದು ನಂಬಿಕೆಯಾಗಿದ್ದರೆ ಪಠ್ಯದ ಒಳಗಡೆ ಅದನ್ನು ನಿರಾಕರಿಸುವ ಒಬ್ಬ ಹೆಣ್ಣು ಪಾತ್ರ ಬಂದ್ರೆ ಅವರು ಏನ್ಮಾಡ್ತಾರೆ? ಹೆಂಗಸಿನ ಪಾತ್ರವನ್ನು ಮನೆಯೊಳಗಡೆ ಅಲ್ಲ, ಹೊರಗಡೇನೂ ಇದೆ ಅಂತ ಪಠ್ಯ ಹೇಳ್ತಾ ಇರಬಹುದು. ಆದರೆ ಟೀಚರ್ ಏನ್ ಮಾಡ್ತಾರೆ, ಅವರ ನಂಬಿಕೆಗನುಗುಣವಾಗಿ ಪಠ್ಯವನ್ನು ವ್ಯಾಖ್ಯಾನ ಮಾಡ್ತಾರೆ. ಮೂಲಭೂತವಾಗಿ ಏನಾಗ್ಬೇಕಿತ್ತು, ವಿದ್ಯಾರ್ಥಿಗಳನ್ನು ಕೌಂಟರ್ ನೆರೇಟಿವ್ಸ್ ಅಥವಾ ಕೌಂಟರ್ ಅನ್ನೋದಕ್ಕಿಂತ ಜೊತೆಗೇ ಇರಬಹುದಾದ ನೆರೇಟಿವ್ಸ್ ಯಾವುವು? ಕೋಕರೆಂಟ್ ಆಗಿರುವಂಥ ನೆರೇಟಿವ್ಸ್ ಯಾವುವು? ಅನ್ನುವ ಚಿಂತನೆಗೆ ಹಚ್ಬೇಕಾಗಿತ್ತು. ಅದು ಎಲ್ಲ ಕಾಲದಲ್ಲೂ ಒಂದೇ ಇರತ್ತಾ? ಉದಾಹರಣೆಗೆ ಕರ್ನಾಟಕದ ಬಗ್ಗೆ ಇರುವ ಪ್ರೀತಿ ಮತ್ತು ಭಾರತದ ಬಗ್ಗೆ ಇರುವ ಪ್ರೀತಿ ಎರಡೂ ಒಂದೇನಾ? ಎರಡೂ ಬೇರೆ ಬೇರೆನಾ? ಕನ್ನಡದ ಬಗ್ಗೆ ನಮಗೆ ಇರುವ ವಿಶ್ವಾಸ, ತಮಿಳು ಬಗ್ಗೆ ಇರುವ ನಂಬಿಕೆ ಇವೆರಡೂ ಒಂದೇನಾ ಬೇರೆಬೇರೆನಾ? ಸುಮ್ಮನೆ ಒರಟಾದ ಉದಾಹರಣೆ ಕೊಡ್ತಾ ಇದ್ದೇನೆ. ಆದರೆ ಚಿಂತನೆಗಳನ್ನು ತುಂಬುವ ಬಗೆಯಲ್ಲಿ ಅಂದಾಗ, ಪಠ್ಯಗಳು ಮಾತ್ರ ಅಪರಾಧಿಗಳಲ್ಲ. ಪಠ್ಯಗಳು ಯಾವಾಗಲೂ ಓಪನ್ ಆಗಿರ್ತವೆ. ತರಗತಿಯಲ್ಲಿ ತೆರೆದ ಪಠ್ಯಗಳನ್ನು ಮುಚ್ಚಿದ ಪಠ್ಯಗಳನ್ನಾಗಿ ಪರಿವರ್ತಿಸುವುದು ನಡೆಯೋ ಸಾಧ್ಯತೆ ಇದೆ. ಆದರೆ ವಿದ್ಯಾರ್ಥಿಗಳಿಗೆ ಇದರ ಅರಿವಾಗೋದಿಲ್ಲ. ಆಗೋದೇ ಇಲ್ಲ ಅಂತನೂ ಹೇಳೋಕಾಗೋದಿಲ್ಲ. ಉದಾಹರಣೆಗೆ ವಿದ್ಯಾರ್ಥಿಗಳು ತರಗತಿಯಲ್ಲಿ ಪಾಠ ಕೇಳಿ, ಅಧ್ಯಾಪಕರು ಯಾವ ಮೌಲ್ಯವನ್ನು ಪ್ರತಿಪಾದಿಸಿದರು ಅದಕ್ಕೆ ತಮ್ಮ ಬದುಕಿನುದ್ದಕ್ಕೂ ಗಂಟು ಬೀಳ್ತಾರೆ ಅಂತ ಹೇಳೋಕಾಗಲ್ಲ. ಅವರು ಬದುಕಿನ ಬೇರೆ ಬೇರೆ ಮುಖಗಳಿಗೂ ತೆರ್ಕೋತಾ ಇರ್ತಾರಲ್ಲ. ಈಗ ಉದಾಹರಣೆಗೆ ಅಸಮಾನತೆ ಅಂತ ಇದೆ. ಸಮಾಜದಲ್ಲಿರುವ ಅಸಮಾನತೆಯನ್ನು ಬೇರೊಂದು ರೀತಿಯಲ್ಲಿ ಸಮರ್ಥಿಸುವ ರೀತಿಯಲ್ಲಿ ಅಧ್ಯಾಪಕರು ಹೇಳ್ತಾ ಇರಬಹುದು. ಅಥವಾ ಅಸಮಾನತೆ ಇರಬಾರದು ಅಂತ ಹೇಳ್ತಾ ಇರುವ ಅಧ್ಯಾಪಕರೂ ಕೂಡಾ ತಮಗೆ ಗೊತ್ತಿಲ್ಲದ ಹಾಗೆ ಅಸಮಾನತೆಗೆ ಪೂರಕವಾಗಿರುವ ಅಥವಾ ಅದಕ್ಕೆ ಒತ್ತಾಸೆ ಕೊಡುವ ಉದಾಹರಣೆಗಳನ್ನು ಕೊಡ್ತಾ ಇರಬಹುದು. ಸಮರ್ಥಿಸುವ ಉದಾಹರಣೆಗಳನ್ನು ಕೊಡ್ತಾ ಇರಬಹುದು. ಅಸಮಾನತೆ, ಜಾತಿಪದ್ಧತಿ, ಗಂಡು-ಹೆಣ್ಣು ವ್ಯತ್ಯಾಸ, ಅಭಿವೃದ್ಧಿಯನ್ನು ಕುರಿತ ನಂಬಿಕೆಗಳು, ಇವೆಲ್ಲವುಗಳಿಗೆ ಸಂಬಂಧಿಸಿ ಸಹನಿರೂಪಣೆಗಳನ್ನು ನಾವು ತರಗತಿಯಲ್ಲಿ ತರ್ತಾ ಇಲ್ಲ. ಆದರೆ ವಿದ್ಯಾರ್ಥಿಗಳು ಅದನ್ನು ಕಂಡುಕೊಳ್ತಾ ಇರ್ತಾರೆ, ಆ ಮಾತು ಬೇರೆ. ನಾವುನೂ ಪಾಠದ ಚೌಕಟ್ಟಿನೊಳಗೇ ನಮ್ಮ ಚಿಂತನೆಗಳನ್ನು ರೂಪಿಸಿಕೊಂಡಿದ್ದೀವಿ ಅಂತ ಹೇಳೋಕಾಗಲ್ಲ. ರೂಪಿಸಿಕೊಂಡಿಲ್ಲ ಅನ್ನೋದೂ ನಿಜ. ಆದ್ದರಿಂದ ಪಠ್ಯವನ್ನು ರೂಪಿಸೋದು ನೀವಂದಂಗೆ ಸವಾಲು ನಿಜ. ಆದರೆ ಪಠ್ಯ ಅನ್ನೋದು ಯಾವಾಗಲೂ ಪ್ರಿಟೆಕ್ಸ್ಟ್. ಅದನ್ನು ಇಟ್ಕೊಂಡು ತರಗತಿಯಲ್ಲಿ ಏನು ಮಾಡ್ತೀವಿ ನಾವು ಅನ್ನೋದು ಕೂಡಾ ಭಾಳ ಮುಖ್ಯ.
ಪ್ರ: ನಾವು ಪಠ್ಯಕ್ರಮ ರೂಪಿಸುವಾಗ ಪಠ್ಯವನ್ನಷ್ಟೆ ಗಮನದಲ್ಲಿ ಇಟ್ಕೋತಾ ಇದೀವಿ. ಆದರೆ ಬೋಧನಾ ವಿಧಾನ, ಅಂದ್ರೆ ಪೆಡಗೊಜಿ ಬಗ್ಗೆ ಹೆಚ್ಚು ಗಮನ ಹರಿಸ್ತಾ ಇಲ್ಲ…
ನಿಜ. ಪಠ್ಯಗಳನ್ನು ನೀವು ತರಗತಿಗೆ ಕೊಟ್ಟ ತಕ್ಷಣ ಏನು ಅದನ್ನ ಮಾಡಬೇಕು? ಪ್ರೀತಿ ಅನ್ನೋ ಟಾಪಿಕ್ ಅಡಿಯಲ್ಲಿ ಯಾವುದಾದ್ರೂ ಒಂದು ಪದ್ಯವನ್ನು ಕೊಟ್ಟಿದೀರಿ ಅಂದ್ಕೊಳ್ಳೋಣ. ಅದನ್ನು ಯಾವ ರೀತಿ ಪಾಠ ಮಾಡಬೇಕು? ಯಾವ ರೀತಿ ಅದನ್ನು ಅರ್ಥ ಮಾಡ್ಕೋಬೇಕು? ಅನ್ನೋದನ್ನು ನೋಡ್ಬೇಕು. ಯಾಕಂದ್ರೆ ನೂರಾರು ಜನ ಅಧ್ಯಾಪಕರಿರ್ತಾರೆ. ಅವರೆಲ್ಲರನ್ನೂ ಓರಿಯೆಂಟ್ ಮಾಡದೇ ಇದ್ರೆ ಕೊನೆಪಕ್ಷ ಒಂದು ದಿಕ್ಕಿಗೆ ಅವರನ್ನು ತಗೊಂಡು ಹೋಗದೇ ಇದ್ರೆ ಅವರು ಇಂಡಿವಿಜುಯಲಿಸ್ಟಿಕ್ ಆಗಿ ತಮಗೆ ಬೇಕಾದ ಹಾಗೆ ಪಾಠ ಮಾಡ್ತಾ ಹೋಗ್ತಾರೆ. ಉದಾಹರಣೆಗೆ, ನಾವು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಠ್ಯದ ಕೊನೆಯಲ್ಲಿ ಯಾವುದೇ ಪದ್ಯದ ಕರ್ತೃ ಯಾರು ಅನ್ನೋದನ್ನು ವಿದ್ಯಾರ್ಥಿಗಳಿಗೆ ಹೇಳ್ಬೇಕಾಗಿಲ್ಲ ಅಂತ ತೀರ್ಮಾನ ಮಾಡಿದ್ವಿ ನಾವು. ಅದೇ ರೀತಿ ಪಠ್ಯಗಳನ್ನು ಸಿದ್ಧಪಡಿಸಿದ್ವಿ ಕೂಡಾ. ಇದಕ್ಕೆ ಬಹಳ ದೊಡ್ಡ ವಿರೋಧ ಬಂದಿದ್ದು ಅಧ್ಯಾಪಕರಿಂದ. ಯಾಕೆ ನಾವು ಕರ್ತೃನ ತೆಗೀಬೇಕು ಅಂತ ಹೇಳಿದ್ವಿ? ಪಠ್ಯ ಅನ್ನೋದು ತನಗೆ ತಾನೇ ಒಂದು ಸ್ವತಂತ್ರವಾದ ಸಂಭವ. ಅದು ಬಿಲ್ಲಿನಿಂದ ಹೊರಟ ಬಾಣ. ಬಾಣ ಹೊರಟ ಮೇಲೆ ಬಿಲ್ಲಿಗೂ ಅದಕ್ಕೂ ಸಂಬಂಧ ಇಲ್ಲ. ಹಾಡುಗಾರ ಹಾಡ್ತಾ ಇದಾನೆ ಅಂದ್ರೆ ಹಾಡಿದ ಹಾಡು ನನ್ನ ಸ್ವತ್ತು. ಯಾರು ಹಾಡಿದ್ರು, ಯಾವಾಗ ಹಾಡಿದ್ರು ಅನ್ನೋದು ನಮಗೆ ಅಷ್ಟು ಮುಖ್ಯ ಅಲ್ಲ ಅನ್ನುವ ರೀತಿಯಲ್ಲಿ ಪಠ್ಯವನ್ನು ನಾವು ರೂಪಿಸಿದ್ದು. ಅಂದ್ರೆ ಒಂದು ವಿಚಾರಕ್ಕೂನೂ ವಿಚಾರವನ್ನು ಮಂಡಿಸುವವರಿಗೂನೂ ಬಿಡಿಸಲಾರದ ಸಂಬಂಧ ಇದೆ ಅನ್ನುವ ಒಂದು ತಿಳುವಳಿಕೆ ಇದೆಯಲ್ಲ, ಅದನ್ನು ಒಡೀಬೇಕು ಅನ್ನೋ ಕಾರಣಕ್ಕೋಸ್ಕರ ಮಾಡಿದ್ದು. ದೊಡ್ಡ ಸಮಸ್ಯೆ ಇರೋದು ಪಠ್ಯಕ್ಕಿಂತ ಹೆಚ್ಚಾಗಿ ಮನಸ್ಥಿತಿಗಳದ್ದೇ. ಅವರನ್ನು ನಾವು ಓರಿಯೆಂಟ್ ಮಾಡದೇ ಇದ್ರೆ ಏನು ಪಠ್ಯ ಕೊಟ್ರೂನೂ ಕೊನೆಗೆ ಅದು ಎಲ್ಲಿಗೆ ಹೋಗಬೇಕೋ ಅಲ್ಲಿಗೇ ಹೋಗತ್ತೆ. ಪಠ್ಯಗಳನ್ನು ರೂಪಿಸಬಹುದು, ರೂಪಿಸಿದ ಮೇಲೆ ರಿಗರಸ್ ಆಗಿ ಒಂದು ಮಾರ್ಗದರ್ಶನ ಪುಸ್ತಕವನ್ನು ಪಠ್ಯಪುಸ್ತಕದ ಜೊತೆಗೆ ಸಿದ್ಧಪಡಿಸಬೇಕು. ಅಧ್ಯಾಪಕರು ಆ ಪಠ್ಯ ಇಟ್ಟುಕೊಂಡು ಏನು ಮಾಡಬೇಕು ಅಥವಾ ಏನು ಮಾಡಬಾರದು ಇವೆರಡನ್ನೂ ಹೇಳುವ ಒಂದು ಮ್ಯಾನ್ಯುವಲ್ ಅನ್ನು ಸಿದ್ಧಪಡಿಸಲೇಬೇಕು. ವಿದ್ಯಾರ್ಥಿಗಳಿಗಲ್ಲ ಅದು, ಅದು ಅಧ್ಯಾಪಕರಿಗೆ ಮಾತ್ರ.
ತರಗತಿ ಒಳಗೆ ನಾವೇ ಸಾರ್ವಭೌಮರು, ನಮ್ಮ ನಿಯಮಗಳು ಮಾತ್ರ ಇಲ್ಲಿ ಅಪ್ಲೈ ಆಗ್ತದೆ ಅನ್ನುವ ಮನೋಭಾವ ಎಲ್ಲರಲ್ಲಿ ಅಲ್ದೇ ಇದ್ರೂ ತುಂಬಾ ಜನ ಅಧ್ಯಾಪಕರಲ್ಲಿ ಇದೆ. ಇದನ್ನು ಸ್ವಲ್ಪಮಟ್ಟಿಗೆ ಬದಲಾಯಿಸಬೇಕು ಅಂತ ಕಾಣ್ಸತ್ತೆ. ನಾವು ಅವರಿಗೆ ಹೇಳಬೇಕಾಗಿದ್ದು ಇದು ನಿಜವಾಗಿ, ನಿಮ್ಮ ಸ್ವಾತಂತ್ರ್ಯದ ಹರಣ ಅಲ್ಲ, ನಿಮಗೆ ಕಲ್ಪಿಸಿರುವ ಸ್ವಾತಂತ್ರ್ಯ, ಪಠ್ಯದ ಆಚೆ ಈಚೆಗೆ ಹೋಗುವುದಕ್ಕೆ ಅಧ್ಯಾಪಕರಿಗೆ ಒದಗಿಸಿಕೊಟ್ಟ ಅವಕಾಶ ಅನ್ನುವುದನ್ನು ತೋರಿಸಿಕೊಡಬೇಕು. ಪಠ್ಯ ಎಲ್ಲೆಲ್ಲಿ ಮುಚ್ಕೊಳ್ತದೋ ತೆರ್ಕೊಳ್ಳಿಕ್ಕೆ ದಾರಿಗಳನ್ನು ಹುಡುಕಬೇಕು. ಅದಕ್ಕೆ ಪೂರಕಪಠ್ಯ, ಉಪಪಠ್ಯ ಹೀಗೆ ಯಾವ ಪದಗಳನ್ನು ಬೇಕಾದ್ರೂ ಬಳಸಿಕೊಳ್ಳೋಣ.
ಪ್ರ: ನಿಮ್ಮ ಇತ್ತೀಚೆಗಿನ ಪುಸ್ತಕ ‘ನುಡಿಗಳ ಅಳಿವು: ಬೇರೆ ದಿಕ್ಕಿನ ನೋಟ’ ಭಾಷೆ ಮತ್ತು ಬದುಕುಗಳ ನಡುವಣ ಸಂಬಂಧವನ್ನು ಬಿಡಿಸಿಟ್ಟಿದೆ. ಈ ಹಿನ್ನೆಲೆಯಲ್ಲಿ ಬದಲಾಗುತ್ತಿರುವ ಭಾಷೆ, ಮಾಧ್ಯಮಗಳ ಆಯ್ಕೆಯ ಪ್ರಶ್ನೆಯನ್ನು ಹೇಗೆ ಗ್ರಹಿಸಬೇಕು?
ಉ: ಇಲ್ಲಿ ಆತಂಕಗಳು ಬಹಳ ಇವೆ. ಭಾಷೆಯನ್ನು ಕಲಿಯುವುದು, ಭಾಷೆಯ ಮೂಲಕ ಕಲಿಯುವುದು ಇವೆರಡನ್ನೂ ನಾವು ಬೇರೆಬೇರೆಯಾಗಿಡಬೇಕು. ಯಾವ ಭಾಷೆ ಕಲೀಬೇಕು, ಎಷ್ಟು ಭಾಷೆ ಕಲೀಬೇಕು ಇವುಗಳ ಬಗ್ಗೆ ಒಂದು ರೀತಿಯ ಆಲೋಚನಾ ಕ್ರಮ ಇದೆ. ಅದರ ಅಗತ್ಯ ಏನು, ಆದ್ಯತೆ ಏನು, ಇವುಗಳನ್ನೆಲ್ಲ ಚರ್ಚೆ ಮಾಡಬಹುದು. ಉದಾಹರಣೆಗೆ ಕರ್ನಾಟಕದಲ್ಲಿ ಹುಟ್ಟಿ ಬೆಳೆದಿರುವ ಮಗು ಇಂಗ್ಲಿಷ್ ಅನ್ನೋ ಹಿಂದಿಯನ್ನೋ ಜಾಪನೀಸ್ ಅನ್ನೋ ಅಥವಾ ಇನ್ನೊಂದು ಭಾರತದ ಭಾಷೆಯನ್ನೋ ತಮಿಳನ್ನೋ ಅಥವಾ ಕೆಲವು ಶಾಸ್ತ್ರೀಯ ಭಾಷೆಗಳನ್ನೋ ಯಾಕೆ ಕಲೀಬೇಕು? ಎಷ್ಟು ಕಲೀಬೇಕು? ಇವುಗಳ ಉಪಯುಕ್ತತೆ ಏನು? ಹೇಗೆ ಕಲಿಸ್ಬೇಕು ಇತ್ಯಾದಿಗಳ ಬಗ್ಗೆ ಎಲ್ಲ ಚರ್ಚೆಗಳಿವೆ. ಇದಕ್ಕಿಂತ ಹೆಚ್ಚಾಗಿ ನಮ್ಮ ಮುಖ್ಯ ಸಮಸ್ಯೆ ಇರೋದು ಯಾವ ಭಾಷೆಯ ಮೂಲಕ ಕಲೀಬೇಕು ಅಂತ. ಯಾಕಂದ್ರೆ ಮಾಧ್ಯಮದ ಸಮಸ್ಯೆ ಬಂದಿದೆಯಲ್ಲ, ಕನ್ನಡವನ್ನು ಕಡ್ಡಾಯವಾಗಿ ಪ್ರತಿಯೊಬ್ಬರೂ ಕಲೀಬೇಕೋ ಬೇಡ್ವೋ ಈ ಚರ್ಚೆ ಇದೆ. ನಾನು ಆ ಪ್ರಶ್ನೆಗೆ ಮುಂದೆ ಬರ್ತೀನಿ. ಮಾಧ್ಯಮದ ಪ್ರಶ್ನೆ ಬಂದಾಗ ಬಹಳ ದೊಡ್ಡ ಚರ್ಚೆ ಇರೋದು ಕನ್ನಡ ಮಾಧ್ಯಮ ಅಥವಾ ಇಂಗ್ಲಿಷ್ ಮಾಧ್ಯಮ. ಇಂಗ್ಲಿಷ್ ಮಾಧ್ಯಮ, ಕನ್ನಡ ಮಾಧ್ಯಮಗಳನ್ನು ವಿರೋಧಿಸುವವರು, ಸಮರ್ಥಿಸುವವರು ತಮ್ಮ ಸಮರ್ಥನೆಗಾಗಲೀ ವಿರೋಧಕ್ಕಾಗಲೀ ಏನು ತರ್ಕಗಳನ್ನು ಮಂಡಿಸ್ತಾ ಇದಾರೋ ಆ ತರ್ಕಗಳನ್ನು ಈಗ ಬದಲಾಯಿಸ್ಕೋಬೇಕಾಗಿದೆ. ಮಾತೃಭಾಷೆ ಅನ್ನೋ ಪದವನ್ನು ಬಳಸೋದಕ್ಕೆ ಹಿಂಜರಿಕೆ ಇದೆ ನನಗೆ. ಮಾತೃಭಾಷೆ ಅನ್ನೋ ಪರಿಕಲ್ಪನೆನೇ ಇಲ್ಲ ಈಗ. ಭಾಷಾಶಾಸ್ತ್ರದ ವಿದ್ಯಾರ್ಥಿಯಾಗಿ ಮಾತೃಭಾಷೆ ಅನ್ನೋ ಪರಿಕಲ್ಪನೆ ಇಲ್ಲ ಈಗ. ಮಾತೃಗಳೇ ಇಲ್ಲದ ಕೋಟ್ಯಂತರ ಜನರು ಇರ್ಬೇಕಾದ್ರೆ ಮಾತೃಭಾಷೆ ಎಲ್ಲಿರ್ತದೆ? ಅನಾಥ ಮಕ್ಕಳಿಗೆ ಮಾತೆಯೇ ಇಲ್ಲದಿರುವಾಗ ಮಾತೃಭಾಷೆ ಇನ್ನೆಲ್ಲಿ? ಮಾತೃಭಾಷೆಯ ಮುಖಾಂತರ ಕಲಿತರೆ ಗ್ರಹಿಕೆ ಸುಲಭ ಆಗತ್ತೆ, ಅನ್ಯಭಾಷೆಯ ಮುಖಾಂತರ ಕಲಿತರೆ ಗ್ರಹಿಕೆ ಸರಿಯಾಗಿ ಆಗೋದಿಲ್ಲ ಅನ್ನುವ ಒಂದು ನಂಬಿಕೆ ಬಹಳ ಗಾಢವಾಗಿದೆ. ಅದಕ್ಕೆ ಸಮರ್ಥನೆಯಾಗಿ ರವೀಂದ್ರನಾಥ ಟಾಗೋರ್ ಹೇಳಿದ್ದು, ಮಹಾತ್ಮಾ ಗಾಂಧಿ ಹೇಳಿದ್ದು, ಯುನೆಸ್ಕೋ ಏನು ಹೇಳತ್ತೆ ಇತ್ಯಾದಿಗಳ ಬಗ್ಗೆ ಚರ್ಚೆ ಮಾಡ್ತೀವಿ. ಆದರೆ ಇವತ್ತಿನವರೆಗೂ ಕೂಡಾ ಇದನ್ನು ನಿರ್ದಿಷ್ಟವಾಗಿ ಪ್ರಾಯೋಗಿಕವಾಗಿ ಸಮರ್ಥಿಸುವಂತಹ ಒಂದು ಸಿದ್ಧಾಂತ ಇಲ್ಲ. ಗ್ರಹಿಕೆ ಅಂದ್ರೆ ಏನು, ಮಾಹಿತಿಯ ಗ್ರಹಿಕೆಯೋ ಅಥವಾ ವಿಧಾನದ ಗ್ರಹಿಕೆಯೋ? ಮಾಹಿತಿಯ ಗ್ರಹಿಕೆಗೆ ತನ್ನ ಸ್ವಂತ ಭಾಷೆ ಬೇಕಾ? ವಿಧಾನದ ಗ್ರಹಿಕೆಗೆ ಭಾಷೆನೇ ಬೇಡ್ವಾ? ಇವೆಲ್ಲವನ್ನೂ ಕೂಡಾ ನಾವು ಸೂಕ್ತವಾಗಿ ಪರೀಕ್ಷೆ ಮಾಡಿ ನೋಡಿಲ್ಲ. ಏಕೆಂದರೆ ಎಜುಕೇಷನ್ ಸೈಕಾಲಜಿ ಒಳಗಡೆ ಗ್ರಹಿಕೆ ಅನ್ನುವ ಮಾತನ್ನು ಅರ್ಥ ಮಾಡ್ಕೊಳ್ಳೋದು ಹೇಗೆ? ಏನನ್ನು ಗ್ರಹಿಸ್ತಾ ಇದೇವೆ? ನಮ್ಮ ಕಣ್ಣಿನ ಮುಖಾಂತರ, ಕಿವಿಯ ಮುಖಾಂತರ? ಹೀಗೆ ತೆಗೆದುಕೊಳ್ಳುವಾಗ ಮಾಹಿತಿ ತಗೋತಾ ಇದೀವಾ? ನಾಲೆಜ್ ಅನ್ನು ತಗೋತಾ ಇದೀವಾ? ವಿಸ್ಡಮ್ ಅನ್ನು ತಗೋತಾ ಇದೀವಾ? ಯಾವುದು ಸಂಭವಿಸ್ತಾ ಇದೆ? ಆ ಸಂಭವಿಸುವುದಕ್ಕೂ ಭಾಷೆಗೂ ಏನಾದ್ರೂ ಸಂಬಂಧ ಇದೆಯಾ? ಅನ್ನೋದನ್ನು ಎಜುಕೇಶನಲ್ ಸೈಕಾಲಜಿಸ್ಟ್ಸ್ ಅರ್ಥ ಮಾಡ್ಕೊಂಡಿದಾರೆ. ಅದನ್ನು ಎಜುಕೇಷನಲ್ ಫೀಲ್ಡ್ ಗೆ ನಾವು ಇನ್ನೂ ಕೂಡಾ ತಕೊಂಡು ಬಂದಿಲ್ಲ. ಆಮೇಲೆ ಯುರೋಪಿನಲ್ಲಿ ಎಷ್ಟೋ ದೇಶಗಳು ಏಕಭಾಷಿಕವಾಗಿವೆ. ಅವುಗಳು ಹೋಮೋಜೀನಿಯಸ್ ಆದ ಕಮ್ಯುನಿಟಿಗಳು. ಅಲ್ಲಿನ ಸಮಸ್ಯೆಗಳು ಬೇರೆ. ಅದನ್ನು ಒಂದು ಬಹುಭಾಷಿಕ ಪರಿಸರಕ್ಕೆ ಅನ್ವಯಿಸೋಕೆ ಆಗಲ್ಲ. ಉದಾಹರಣೆಗೆ, ಲಂಬಾಣಿ ಮಗುವನ್ನು ತಗೊಳ್ಳಿ. ಲಂಬಾಣಿ ಮಗು ತರಗತಿಗೆ ಬಂದಾಗ ನಾವು ಪ್ರಾಕ್ಟಿಕಲ್ ಆಗಿ ಏನು ಮಾಡ್ತಾ ಇದೀವಿ, ಕನ್ನಡ ಮಾಧ್ಯಮದ ಮುಖಾಂತರ ಕಲಿಸ್ಬೇಕು ಅಂತ ಹೇಳ್ತಾ ಇದೀವಿ. ಅಥವಾ ಆ ಮಗು ಆರ್ಥಿಕವಾಗಿ ಮೇಲುಸ್ತರದಲ್ಲಿದ್ರೆ ತಂದೆ ತಾಯಿಗಳು ಮಗುವನ್ನು ಇಂಗ್ಲಿಷ್ ಮೀಡಿಯಂಗೆ ಹಾಕ್ತಾರೆ. ಆ ಮಗುವಿನ ಲಂಬಾಣಿ ಭಾಷೆ ಎಲ್ಲೂ ಪಿಕ್ಚರ್‍ಗೆ ಬರ್ತಾ ಇಲ್ಲ. ಮಗುವಿಕೆ ಕಲಿಕೆ ಅನ್ನೋದು ಇಂಗ್ಲಿಷ್‍ನಲ್ಲಿ ಆಗ್ತಾ ಇದೆಯೋ, ಕನ್ನಡದಲ್ಲಿ ಆಗ್ತಾ ಇದೆಯೋ? ಅಥವಾ ನಮಗೇ ಗೊತ್ತಿಲ್ಲದೇನೇ ಇವೆರಡನ್ನೂ ಹೊರತುಪಡಿಸಿ ಲಂಬಾಣಿಯ ಗ್ರಹಿಕೆಯ ವಿಧಾನವನ್ನು ಅದು ಬಳಸ್ತಾ ಇದೆಯಾ? ಅಂದರೆ ಇನ್‍ಹೆರೆಂಟ್ ಆಗಿ ಆಂತರಿಕವಾದ ರಚನೆಯಲ್ಲಿ ಲಂಬಾಣಿ ಜೀವಂತವಾಗಿದೆಯಾ? ಗೊತ್ತಿಲ್ಲ ನಮಗೆ. ಉದಾಹರಣೆಗೆ ಕನ್ನಡವನ್ನೇ ತಗೊಳ್ಳೋಣ, ಒಳನುಡಿಗಳನ್ನು ತಗೊಳ್ಳೋಣ. ಚಾಮರಾಜನಗರದಲ್ಲಿರುವ ಒಳನುಡಿ ಬೀದರ್‍ನ ಒಳನುಡಿ ಬೇರೆ ಬೇರೆ. ಕನ್ನಡ ಮಾಧ್ಯಮದ ಮುಖಾಂತರ ಪಾಠ ಮಾಡಬೇಕಾದಾಗ ಅವರ ಗ್ರಹಿಕೆಯನ್ನು ಅವರ ಒಳನುಡಿ ಏನಾದ್ರೂ ಪ್ರಭಾವಿಸ್ತಾ ಇದೆಯಾ? ನಾನು ಈ ಪ್ರಶ್ನೆಯನ್ನು ಯಾಕೆ ಜಟಿಲಗೊಳಿಸ್ತಾ ಇದೀನಿ ಅಂತಂದ್ರೆ ನಾವು ಸಾರಾಸಗಟಾದ ಅಭಿಪ್ರಾಯಗಳ ಮೇಲಿದೀವಿ. ವಾಸ್ತವವಾಗಿ ಗ್ರಹಿಕೆಗೂ ಭಾಷೆಗೂ ಸಂಬಂಧ ಇದ್ರೆ ಆ ಸಂಬಂಧದ ಸ್ವರೂಪ ಏನು? ಅನ್ನೋದನ್ನು ನಾವಿನ್ನೂ ಕೂಡಾ ಸರಿಯಾಗಿ ವಿಶ್ಲೇಷಿಸಿ ನೋಡಿಲ್ಲ. ಅಂದ್ರೆ ನಮ್ಮ ಭಾಷೆಯ ಅಳಿವು ಉಳಿವಿನ ಪ್ರಶ್ನೆಯನ್ನು ಮುಂದಿಟ್ಟು ಆತಂಕ ವ್ಯಕ್ತಪಡಿಸ್ತಾ ಮಾತಾಡ್ತೀವಿ. ಇಂಗ್ಲಿಷ್ ಮುಖಾಂತರ ಕಲಿತವರು ನಮ್ಮ ಕನ್ನಡ ಸಮಾಜ, ಸಂಸ್ಕøತಿಯಿಂದ ದೂರ ಆಗ್ತಾರೆ ಅಂತ ಇನ್ನೊಂದು ವಿಚಾರವನ್ನು ತಗೊಂಡು ಬರ್ತೀವಿ. ಇದಕ್ಕೆ ಒರಟಾದ ಉದಾಹರಣೆಗಳನ್ನು ಕೊಡ್ತಾರೆ. ಚಿಕ್ಕಪ್ಪ, ಚಿಕ್ಕಮ್ಮ ಅತ್ತೆ, ಮಾವ ಅನ್ನೋದೆಲ್ಲ ಇಲ್ಲ, ಅಂಕಲ್ ಆಂಟಿ ಅಂತಾರೆ. ಪಾಪಾ, ಡ್ಯಾಡಿ ಅಂತಾರೆ. ಕನ್ನಡದ ಮುಖಾಂತರ ಕಲಿತ ಮಕ್ಕಳು ಸಂಸ್ಕøತಿಗೆ ನಿಕಟವಾಗಿ ಉಳೀತಾರೆ ಅಂತ. ಇದು ನಿಜಾನಾ? ಗೊತ್ತಿಲ್ಲ. ಇಂಗ್ಲಿಷ್ ಮೀಡಿಯಂನಲ್ಲಿ ಕಲಿತವರು ಕನ್ನಡ ಸಂಸ್ಕøತಿಯಿಂದ ದೂರ ಉಳಿದಿದ್ದಾರೆ ಅನ್ನೋದನ್ನಾಗಲೀ ಕನ್ನಡ ಮಾಧ್ಯಮದಲ್ಲಿ ಕಲಿತವರು ಕನ್ನಡ ಸಂಸ್ಕøತಿಯ ಪೋಷಕರಾಗಿರ್ತಾರೆ ಅನ್ನೋದನ್ನಾಗಲೀ, ಪೋಷಕರಾಗಿದ್ರೆ ಯಾವ ಬಗೆಯ ಕನ್ನಡ ಸಂಸ್ಕøತಿಯ ಪೋಷಣೆ ಮಾಡ್ತಾ ಇದಾರೆ, ಇವ್ಯಾವುದನ್ನೂ ಕೂಡಾ ನಾವು ನೋಡಿಲ್ಲ. ಸಾರಾಸಗಟಾದ ಅಭಿಪ್ರಾಯವನ್ನು ಹೇಳ್ತಾ ಇದ್ದೇವೆ. ಆದ್ದರಿಂದ ಕಲಿಕೆಯ ಮಾಧ್ಯಮ ಯಾವುದಾಗಬೇಕು ಅಂತ ಅನ್ನುವಾಗ ಅದಕ್ಕೆ ಒಂದು ವ್ಯವಸ್ಥಿತವಾದ ಚಿಂತನಾ ಕ್ರಮದ ಮುಖಾಂತರ ನಾವು ಯೋಚನೆ ಮಾಡಿಲ್ಲ ಅಂತನೇ ನನ್ನ ಅಭಿಪ್ರಾಯ. ಹೀಗೆ ಮಾಡಿಲ್ಲ ಅಂದ ತಕ್ಷಣ ನಿರ್ಣಯ ತಗೊಳ್ಳೋದನ್ನು ಮುಂದಕ್ಕೆ ಹಾಕಬಹುದೇ? ನಮ್ಮ ಭಾಷಾ ಯೋಜನೆಯಲ್ಲಿ, ಭಾಷಾ ನೀತಿಯಲ್ಲಿ ಒಂದು ನಿರ್ಣಯ ಬೇಕಲ್ಲ. ಏನೂ ಮಾಡದೇ ಸುಮ್ನೆ ಇದ್ದುಬಿಡೋಣ್ವಾ? ಇಲ್ಲಿ ಮೂರನೆಯ ಒಂದು ವಿಷಯ, ಸಂವಿಧಾನ. ಇವರು ಗ್ರಹಿಕೆಯ ವಿಧಾನವನ್ನು ಕುರಿತು ಯೋಚನೆ ಮಾಡಬೇಕು ಅಂತಾ ಇದ್ರೆ ಅವರು ಹಕ್ಕುಗಳನ್ನು ಕುರಿತು ಮಾತಾಡ್ತಾ ಇದಾರೆ. 2008ನೇ ಇಸವಿಯ ಸುಪ್ರೀಂ ಕೋರ್ಟ್ ತೀರ್ಮಾನದಲ್ಲಿ ಅವರು ಏನು ಹೇಳಿದ್ರು? ಯಾವ ವಿಷಯ ಕಲೀಬೇಕು, ಯಾವ ಮಾಧ್ಯಮದಲ್ಲಿ ಕಲೀಬೇಕು ಅನ್ನೋದು ಪೋಷಕರ ಆಯ್ಕೆ. ಸ್ಟೇಟ್‍ನ ಆಯ್ಕೆ ಅಲ್ಲ. ಈ ಚರ್ಚೆ ಈಗ ಪೂರ್ತಿ ಹೊರಟು ಹೋಗಿ ಸಂವಿಧಾನದಲ್ಲೇ ದೊರಕಿಸಿಕೊಟ್ಟಿರುವ ಹಕ್ಕುಗಳ ಪ್ರಶ್ನೆ ಆಯ್ತು. ಇಷ್ಟೆಲ್ಲದರ ನಡುವೆ ಈ ಗೊಂದಲ ಸೇರ್ಕೊಂಡಿದೆ. ಅದರಿಂದಾಗಿ ದೊಡ್ಡ ದೊಡ್ಡ ಸಮುದಾಯಗಳಿಗೆ ಈ ಪ್ರಶ್ನೆ ಒಂಥರ, ಚಿಕ್ಕ ಚಿಕ್ಕ ಭಾಷಾ ಸಮುದಾಯಗಳಿಗೆ ಇನ್ನೊಂದು ಸಮಸ್ಯೆ. ಉದಾಹರಣೆಗೆ ತುಳು ಮಾತಾಡ್ತಾ ಇರುವವರು ಇರಬಹುದು, ಕೊರಗ ಮಾತಾಡ್ತಾ ಇರುವವರು ಇರಬಹುದು, ಲಂಬಾಣಿ ಮಾತನಾಡುವವರು ಇರಬಹುದು. ಇವರ ಸಮಸ್ಯೆ ಒಂದು. ಇವರೆಲ್ಲ ಕೊನೆಪಕ್ಷ ಭೌಗೋಳಿಕವಾಗಿ ಒಂದು ಸೀಮಿತ ವಲಯದಲ್ಲಿ ಇರುವವರು. ಆದರೆ ಗೊಂಡಿಯಂಥ ಭಾಷೆಯನ್ನು ತಗೊಳ್ಳೋಣ. ಅದನ್ನು ಮಾತನಾಡುವವರು ಐದು ರಾಜ್ಯಗಳಲ್ಲಿ ಹರಡಿಕೊಂಡಿದ್ದಾರೆ. ಅವರು ಕೊಂಕಣಿ ಮಾತನಾಡುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇದಾರೆ. ಆದರೆ ಕೊಂಕಣಿಗೆ 22 ಭಾಷೆಗಳಲ್ಲಿ ಜಾಗ ಇದೆ. ಆದರೆ ಇದಕ್ಕೆ ಶಾಲಾ ಶಿಕ್ಷಣದಲ್ಲಿ ಜಾಗ ಇಲ್ಲ. ಸಂತಾಲಿ, ಬೋಡೋ, ಡೋಗ್ರಿ, ಮೈಥಿಲಿ ಜಾಗ ಪಡ್ಕೊಂಡಿವೆ ಈಗಾಗ್ಲೇ. ಅವುಗಳ ಸಮಸ್ಯೆ ಒಂದು. ಜಾಗ ಪಡ್ಕೊಳ್ದೇ ಇರುವ ಭಾಷೆಗಳ ಸಮಸ್ಯೆ ಒಂದು. ಹಾಗಿಲ್ದೇನೇ ಚಿಕ್ಕ ಚಿಕ್ಕ ಪಾಕೆಟ್‍ಗಳಲ್ಲಿ ಉಳ್ಕೊಂಡಿರುವ ಕುರುಖ್, ಮಾಲ್ತೊ, ಪೆಂಗೊ ಅಥವಾ ತುಳು, ಕೊಡವ, ಕೊರಗ, ಇರುಳ ಇಂಥ ನುಡಿಗಳ ಸಮಸ್ಯೆ ಬೇರೆ. ಇವುಗಳನ್ನೆಲ್ಲ ನಾವು ಶಿಕ್ಷಣದ ಅಥವಾ ಕಲಿಕೆಯ ವ್ಯಾಪ್ತಿಯಲ್ಲಿ ತರಬೇಕೇ? ತಂದ್ರೆ ಹೇಗೆ ತರಬೇಕು? ತರಬೇಕಾದ ಒತ್ತಾಯಗಳನ್ನು ಯಾರು ಮಾಡಬೇಕು? ಅದನ್ನು ಹೇಗೆ ನಿರ್ವಹಿಸಬೇಕು? ಅದು ಮಾಧ್ಯಮವಾಗಬೇಕೇ, ಕಲಿಕೆಯ ಭಾಷೆಯಾಗಬೇಕೇ? ಕರ್ನಾಟಕದಲ್ಲಿ ಕೆಲವು ಶಾಲೆಗಳಲ್ಲಿ ಕೊಂಕಣಿಯನ್ನು ಒಂದು ನುಡಿಯನ್ನಾಗಿ ಕಲಿಸಲಾಗುತ್ತದೆ. ಆದರೆ ಈ ರಾಜ್ಯದಲ್ಲಿ ಕೊಂಕಣಿಯನ್ನು ಮಾಧ್ಯಮ ಮಾಡಬೇಕು ಅಂತ ಯಾರೂ ಕೇಳ್ತಾ ಇಲ್ಲ. ಒಂದು ವೇಳೆ ತುಳುವನ್ನು ಶಾಲೆಯಲ್ಲಿ ಕಲಿಸುವ ವ್ಯವಸ್ಥೆ ಮಾಡ್ತೀವಿ ಅಂತ ಇಟ್ಕೊಳ್ಳೋಣ, ಕೆಲವು ವರ್ಷಗಳಲ್ಲಿ ತುಳುವನ್ನು ಮಾಧ್ಯಮವಾಗಿ ಪರಿವರ್ತಿಸಬೇಕೇ? ದಕ್ಷಿಣ ಕನ್ನಡದಲ್ಲಿ ಇರುವ ವಿದ್ಯಾರ್ಥಿಗಳು ಬಹುಮಟ್ಟಿಗೆ ಕನ್ನಡವನ್ನು ಮನೆಮಾತಾಗಿ ಹೊಂದಿರುವವರಿಗಿಂತ ಹೆಚ್ಚಾಗಿ ಹೊಂದಿಲ್ದೇ ಇರೋರೇ ಜಾಸ್ತಿ ಜನ ಇದ್ದಾರೆ. ಆದರೆ ಶೈಕ್ಷಣಿಕವಾಗಿ ಯಾಕೆ ಅವರು ಹೆಚ್ಚು ಸಾಧನೆ ಮಾಡ್ತಾರೆ? ಕೊನೆಪಕ್ಷ ನಮಗಿರುವ ಪರೀಕ್ಷಾ ಪದ್ಧತಿಯಲ್ಲಿ ಅವರು ಹೆಚ್ಚು ಪ್ರಮಾಣದಲ್ಲಿ ಎಸ್‍ಎಸ್‍ಎಲ್‍ಸಿ ಮುಂತಾದ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದ್ತಾರೆ. ಅದನ್ನು ಅವರ ಬುದ್ಧಿವಂತಿಕೆಗೆ ಅಟ್ರಿಬ್ಯೂಟ್ ಮಾಡಬೇಕಾ ಅಥವಾ ಅವರ ಶ್ರಮಕ್ಕೆ ಅಟ್ರಿಬ್ಯೂಟ್ ಮಾಡಬೇಕಾ? ಅಥವಾ ಯಾವ ಭಾಷೆಯಲ್ಲಿ ಕಲಿತರೂ ಪರವಾಗಿಲ್ಲ, ಕಲಿಯೋದಕ್ಕೆ ಸಾಧ್ಯ ಇದೆ, ಅನ್ನೋದಕ್ಕೆ ಅಟ್ರಿಬ್ಯೂಟ್ ಮಾಡ್ಬೇಕಾ? ಗೊತ್ತಿಲ್ಲ ನಮಗೆ. ಅವರು ಕನ್ನಡದಲ್ಲಿ ಕಲೀತಾ ಇದಾರೆ ಅಥವಾ ಇಂಗ್ಲಿಷ್‍ನಲ್ಲಿ ಕಲೀತಾ ಇದಾರೆ. ಮಾಧ್ಯಮ ಯಾವುದು ಇರಬೇಕು ಅನ್ನೋದರ ಬಗ್ಗೆ ತೀರ್ಮಾನ ಮಾಡೋದಕ್ಕೆ ನಾವು ಮೂಲಭೂತವಾಗಿ ಏನು ತಿಳ್ಕೊಂಡಿದ್ದೀವಿ, ಕಲಿಕೆಗೂ ಗ್ರಹಿಕೆಗೂ ಭಾಷೆಗೂ ಒಂದು ಬಿಡಿಸಲಾರದ ನಂಟು ಇದೆ ಅಂತ. ಆದ್ರೆ ನಮ್ಮತ್ರ ಇರೋ ಪುರಾವೆಗಳು ಅದನ್ನು ಒಪ್ತಾ ಇಲ್ಲ. ಯುನೆಸ್ಕೋ 1954ರಲ್ಲಿ ಕಲೋನಿಯಲ್ ಆಡಳಿತದಿಂದ ಹೊರಬಂದ ರಾಷ್ಟ್ರಗಳ ಬಗೆಗೆ ಒಂದು ನಿರ್ಣಯವನ್ನು ಮಾಡಿದೆ. ಅದನ್ನು ನೀವು ಓದಿದ್ರೆ ಅವರು ಕಲೋನಿಯಲ್ ಆಡಳಿತದಿಂದ ಹೊರಬಂದ ರಾಷ್ಟ್ರಗಳಲ್ಲಿ ಕಲಿಕೆಯ ಮಾಧ್ಯಮ ಯಾವುದಾಗಿರ್ಬೇಕು, ಇದರ ಬಗ್ಗೆ ಮಾತಾಡ್ತಾ ‘ವರ್ನಾಕ್ಯುಲರ್’ ಎಂಬ ಪದ ಬಳಸ್ತಾರೆ. ಮಾತೃಭಾಷೆ ಎಂಬ ಪದ ಬಳಸಲ್ಲ. ಅದು ಆಫ್ರಿಕಾಕ್ಕೆ ಒಂದು ಅರ್ಥ ಕೊಡತ್ತೆ, ಭಾರತಕ್ಕೆ ಒಂದು ಅರ್ಥ ಕೊಡತ್ತೆ. ಪಾಕಿಸ್ತಾನಕ್ಕೆ ಬೇರೆ ಅರ್ಥ ಕೊಡತ್ತೆ. ಬರ್ಮಾಗೆ ಬೇರೇನೋ ಅರ್ಥ ಕೊಡತ್ತೆ. ಶ್ರೀಲಂಕಾಕ್ಕೆ ಬೇರೆ ಅರ್ಥ ಕೊಡತ್ತೆ. ಆಮೇಲೆ ಪೂರ್ವ ಏಷಿಯಾದ ರಾಷ್ಟ್ರಗಳಾದ ಇಂಡೋನೇಷಿಯಾ. ಮಲಯಾ, ಕೊರಿಯಾ, ಜಪಾನ್, ಚೈನಾಗಳಲ್ಲಿ ನಮ್ಮ ರೀತಿಯ ಕೊಲೋನಿಯಲ್ ಆಳ್ವಿಕೆಯಲ್ಲಿ ಇರಲಿಲ್ಲ. ಹಾಂಕಾಂಗ್ ಅನ್ನು ಬ್ರಿಟಿಷರು ವಶಪಡಿಸಿಕೊಂಡಿರೋದನ್ನು ಬಿಟ್ರೆ ಪೂರ್ವ ಚೈನಾವನ್ನು ಜಪಾನೀಯರು ವಶಪಡಿಸಿಕೊಂಡ ಉದಾಹರಣೆಗಳಿವೆ ಹೊರತು ಅವರು ಯುರೋಪಿನ ಆಳ್ವಿಕೆಗೆ ಒಳಗಾಗಿರಲಿಲ್ಲ. ಅಲ್ಲಿ ಏನಾಗ್ತಾ ಇದೆ, ನಮಗೆ ಗೊತ್ತಿಲ್ಲ. ಇವುಗಳನ್ನು ಅಧ್ಯಯನ ಮಾಡದೆ ಸಾರಾಸಗಟಾದ ತಿಳುವಳಿಕೆಗಳಲ್ಲಿ ಮಾತಾಡ್ತಾ ಇದೀವಿ ಅಂತ ಕಾಣ್ಸತ್ತೆ.
ಇನ್ನೊಂದು ಏನು ಅಂತಂದ್ರೆ, ನಾನು ಹತ್ತು ಹದಿನೈದು ವರ್ಷಗಳ ಹಿಂದೆ ಭಾಷೆ ಮತ್ತು ಅದರ ಅಸ್ತಿತ್ವವನ್ನು ಕುರಿತು ಯೋಚನೆ ಮಾಡ್ತಾ ಇದ್ದ ರೀತಿಗೂ ಈಗ ಯೋಚನೆ ಮಾಡ್ತಾ ಇರೋ ರೀತಿಗೂ ಸ್ವಲ್ಪ ವ್ಯತ್ಯಾಸ ಆಗಿದೆ. ಯಾವ ಸಮಾಜದಲ್ಲಿ ನಾವಿದೀವೋ ಆ ಸಮಾಜದ ಸ್ಥಿತಿಗತಿಗಳನ್ನು ಅರ್ಥಮಾಡ್ಕೊಂಡ ಹೊರತು ನಾವು ಕೇವಲ ಭಾಷೆಯ ಬಗ್ಗೆ ಮಾತಾಡೋಕಾಗಲ್ಲ, ಮಾತಾಡಬಾರದು ಅಂತ ನನ್ನ ಅಭಿಪ್ರಾಯ. ‘ನುಡಿಗಳ ಅಳಿವು ಬೇರೆ ದಿಕ್ಕಿನ ನೋಟ’ ಪುಸ್ತಕದಲ್ಲಿ ನಾನು ಪ್ರಪೋಸ್ ಮಾಡಿರುವ ಚೌಕಟ್ಟೇ ಇದು. ಸಮಾಜದ ಸ್ಥಿತಿಗತಿಗಳನ್ನು ಅವಲಂಬಿಸಿ ಅದರ ಬೆಳವಣಿಗೆಯನ್ನು, ಅದರ ಕೊರತೆಗಳನ್ನು ಗಮನಿಸಿ ನಾವು ಭಾಷೆಯ ಕುರಿತು ಮಾತಾಡ್ಬೇಕು. ಹೀಗಾಗಿ, ಭಾಷೆಯನ್ನು ಅಭಿವೃದ್ಧಿಗೊಳಿಸೋದು ಅಂತಂದ್ರೆ ಅದು ಸಮಾಜವನ್ನು ಅಭಿವೃದ್ಧಿಗೊಳಿಸೋದರ ಜೊತೆಗಿರ್ಬೇಕು. ತನಗೆ ತಾನೇ ಕನ್ನಡವನ್ನು ಅಭಿವೃದ್ಧಿಗೊಳಿಸಬೇಕು ಅನ್ನೋದಕ್ಕೆ ಅರ್ಥ ಇಲ್ಲ. ಕನ್ನಡವನ್ನು ಮಾತನಾಡುವ ಸಮಾಜವನ್ನು ನೀವು ಅಭಿವೃದ್ಧಿಗೊಳಿಸ್ದೇ ಇದ್ರೆ, ರಾಜಕೀಯವಾಗಿ ಕನ್ನಡ ಮಾತಾಡುವ ಸಮಾಜಕ್ಕೆ ಬಲ ಸಿಕ್ಕದೇ ಹೋದರೆ, ಕನ್ನಡದ ಅಭಿವೃದ್ಧಿ ಅನ್ನೋದಕ್ಕೆ ಅರ್ಥ ಇಲ್ಲ. ಆ ತರ ಏನಾದ್ರೂ ಮಾಡಿದ್ರೆ ವ್ಯರ್ಥ ಆಗತ್ತೆ. ಆದ್ದರಿಂದ ಇವೆರಡೂ ಜೊತೆಜೊತೆಯಾಗೇ ಹೋಗಬೇಕು ಅನ್ನೋದು ನನಗೆ ಈಗ ಅನ್ನಿಸ್ತಾ ಇರೋ ಅಭಿಪ್ರಾಯ. ಉದಾಹರಣೆಗೆ ಇವತ್ತು ಒಕ್ಕೂಟ ರಚನೆಯ ಒಳಗಡೆ ಕನ್ನಡದಂಥ ಭಾಷೆಗಳಿಗೆ ಏನಾಗ್ತಾ ಇದೆ, ಅದು ಹೇಗೆ ನಮ್ಮ ಬಗೆಗೆ ನಾವು ಯೋಚನೆ ಮಾಡೋದಕ್ಕೆ ಇರುವ ಅವಕಾಶವನ್ನು ಕಿತ್ಕೊಂಡು ನಮ್ಮ ಪರವಾಗಿ ಬೇರೆಯವರು ಯೋಚನೆ ಮಾಡೋದಕ್ಕೆ ಅವಕಾಶಗಳನ್ನು ಕಲ್ಪಿಸ್ತಾ ಇದೆ, ಇವೆಲ್ಲವನ್ನೂ ನಾವು ಕಳೆದ ಹತ್ತು ವರ್ಷಗಳಲ್ಲಿ ನೋಡ್ತಾ ಇದ್ದೀವಿ. ಕನ್ನಡ ಸಮಾಜದ ಅಸ್ತಿತ್ವ, ಅಸ್ಮಿತೆ, ಅದರ ಸ್ವಾಯತ್ತತೆ ಇದನ್ನು ಯೋಚನೆ ಮಾಡ್ತಾನೇ ಕನ್ನಡದ ಬೆಳವಣಿಗೆ ಕುರಿತು ಮಾತಾಡ್ಬೇಕಾಗ್ತದೆ. ಇದು ಇರುವ ಸ್ಥಿತಿಯಲ್ಲೇ ಇದ್ದು, ಇದು ತನ್ನ ಹಕ್ಕುಗಳನ್ನು ಕಳ್ಕೊಂಡು ಅಸಮಾನತೆಯನ್ನು ಉಳಿಸ್ಕೊಂಡು ಬಿರುಕುಗಳು ಇರುವ ಸಮಾಜದೊಳಗೆ ಆಲಂಕಾರಿಕವಾಗಿ ನೀವು ಕನ್ನಡವನ್ನು ಶೃಂಗಾರ ಮಾಡೋಕಾಗಲ್ಲ.
ಪ್ರ: ಇಂದಿಗೂ ನಮ್ಮಲ್ಲಿ ಭಾಷಾಬೋಧನೆ ಸಂಸ್ಕøತ ವ್ಯಾಕರಣಗಳ ನೆರಳಿನಲ್ಲಿಯೇ ಇದೆ. ನಿಜವಾದ ಅರ್ಥದಲ್ಲಿ ಕನ್ನಡ ವ್ಯಾಕರಣವನ್ನು ಉನ್ನತ ಶಿಕ್ಷಣದಲ್ಲಿಯೂ ನಾವು ತರಲು ಸಾಧ್ಯವಾಗಿಲ್ಲ. ಬದಲಾವಣೆಗೆ ತೆರೆದುಕೊಳ್ಳಲು ಸಿದ್ಧವಿರದ ಮನಸ್ಥಿತಿ ನಮ್ಮ ಮಧ್ಯೆ ಇದೆ. ಹೀಗಿರುವಾಗ ಈಗ ಆಗುತ್ತಿರುವ ಕನ್ನಡದ ಕಲಿಕೆ ಮಿತಿಗಳಿಂದ ಕೂಡಿದ್ದು ಎನಿಸುವುದಿಲ್ಲವೇ?
ಉ: ಇದನ್ನು ನಿರ್ಧರಿಸುವ ಜನಗಳಿದ್ದಾರಲ್ಲ ಅವರು ಸಮಾಜದ ಮೇಲ್ಜಾತಿಯವರು ಮತ್ತು ಅಧಿಕಾರಗಳನ್ನು ಹೊಂದಿರುವವರು. ಅಧಿಕಾರ ಮತ್ತು ಸವಲತ್ತುಗಳನ್ನು ಬೇರೆಯವರೊಂದಿಗೆ ಹಂಚ್ಕೊಳ್ಳೋಕೆ, ಬಿಟ್ಕೊಡೋಕೆ ಇಷ್ಟ ಇಲ್ಲದೇ ಇರುವಂಥವರು. ಅವರು ಅದಕ್ಕೋಸ್ಕರ ಮಹಾಪ್ರಾಣಗಳನ್ನು ಬಳಸಿ ಕನ್ನಡವನ್ನು ಬರೆಯುವ ಸವಲತ್ತನ್ನು ಮಹಾಪ್ರಾಣಗಳನ್ನು ಬಿಟ್ಟು ಬರೆಯುವ ಸವಲತ್ತಾಗಿ ಬದಲಾಯಿಸೋಕೆ ಇಷ್ಟ ಪಡಲ್ಲ. ಯಾಕೆ ಸಂಸ್ಕøತ ವ್ಯಾಕರಣ? ಸಂಸ್ಕøತ ವ್ಯಾಕರಣ ಒಂದು ರಕ್ಷಣೆಯನ್ನು ಕೊಟ್ಟಿದೆ. ಅವರು ತಾವು ಬೇರೆ ಅಂತ ತೋರಿಸ್ಕೊಳ್ಳೋಕೆ ಅವಕಾಶವನ್ನು ಕೊಟ್ಟಿದೆ. ಇತರರನ್ನು ಹೊರಗಿಡೋಕೆ ಅವಕಾಶ ಮಾಡ್ಕೊಟ್ಟಿದೆ. ಭಾಷೆ, ವ್ಯಾಕರಣಗಳ ಬಗ್ಗೆ ಪ್ರೀತಿ ಇದೆ ಅಂತಲ್ಲ, ಅದು ಅವರಿಗೆ ದೊರಕಿಸಿಕೊಟ್ಟಿರುವ ಸೌಲಭ್ಯದ ಬಗೆಗೆ ಪ್ರೀತಿ ಇದೆ. ಹಿಂದಿನ ಕಾಲದಲ್ಲಿ ವೇದಗಳನ್ನು, ಉಪನಿಷತ್ತುಗಳನ್ನು ಬೇರೆಯವರಿಗೆ ಹೇಳ್ಕೊಡೋದಿಲ್ಲ ಅಂದಿದ್ದು ಇದೇ ಕಾರಣಕ್ಕೆ ತಾನೇ? ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, ಕನ್ನಡ ವ್ಯಾಕರಣವನ್ನು ಕುರಿತು ಮಾತಾಡೋಕೆ ಶುರು ಮಾಡಿದಾರೆ ಅಂತಂದ್ರೆ ಆಗ ನಿಮ್ಮ ಕೋಟೆಯಲ್ಲಿ ಬಿರುಕು ಬಿಟ್ಟ ಹಾಗೆ ಆಯ್ತು. ಇದು ಭಾಷೆಗೆ ಮಾತ್ರ ಸಂಬಂಧಪಟ್ಟಿದ್ದಲ್ಲ; ಅಧಿಕಾರ, ಸವಲತ್ತಿಗೆ ಸಂಬಂಧಪಟ್ಟ ಪ್ರಶ್ನೆ. ರಾಜಕೀಯ ಹಕ್ಕುಗಳಿಗೆ ಸಂಬಂಧಪಟ್ಟ ಪ್ರಶ್ನೆ. ರಾಜಕೀಯ ವ್ಯವಸ್ಥೆಯಲ್ಲಿ ಇವತ್ತು ಯಾರು ಅಧಿಕಾರವನ್ನು ಹಂಚ್ಕೋತಾ ಇದಾರೆ, ಯಾರು ಅಧಿಕಾರದ ಬೇರೆ ಬೇರೆ ಸ್ಥಾನಗಳಲ್ಲಿ ಇದಾರೆ, ಬ್ಯೂರೋಕ್ರಸಿಯಲ್ಲಿ ಯಾರು ಯಾರು ಇರ್ತಾರೆ, ಅವರು ಸಾಮಾನ್ಯ ಜನತೆಯ ಜೊತೆಗೆ ಈ ಅಧಿಕಾರವನ್ನು ಹಂಚ್ಕೊಳ್ಳೋಕೆ ಸಿದ್ಧ ಇಲ್ಲ. ಭಾಷೆಗೆ ಸಂಬಂಧಪಟ್ಟ ಶುದ್ಧತೆಯ ಪ್ರಶ್ನೆಯಲ್ಲಿ, ಮಡಿವಂತಿಕೆಯ ಪ್ರಶ್ನೆಯಲ್ಲಿ ಅದರ ಬಿಂಬವನ್ನು ನೋಡಬಹುದು. ನಿಜವಾಗಿ, ಮೂಲ ಇರೋದು ಇಲ್ಲಿ, ಸಮಾಜದಲ್ಲಿ.
ಪ್ರ: ಇಂದು ಕನ್ನಡದಂತಹ ಪ್ರಾದೇಶಿಕ ಭಾಷೆಗಳ ಸ್ಥಿತಿ ಬಿಕ್ಕಟ್ಟಿನಲ್ಲಿದೆ. ಭಾಷಾ ನೀತಿಯನ್ನು ರೂಪಿಸಲಾಗಿಲ್ಲ. ಇದರ ಮಧ್ಯೆ ಜಾರಿಗೊಂಡ ಹೊಸ ಶಿಕ್ಷಣ ನೀತಿ ಕುರಿತು ಗೊಂದಲಗಳಿವೆ. ಜೊತೆಗೆ, ಮಾಧ್ಯಮವನ್ನು ಮಕ್ಕಳ ಆಯ್ಕೆಯ ಪ್ರಶ್ನೆಯನ್ನಾಗಿ ಮಾಡಲಾಗಿದೆ. ಇಂತಹ ಬಿಕ್ಕಟ್ಟಿನ ಮಧ್ಯೆ ಕನ್ನಡದ ಇರವಿನ ಪ್ರಶ್ನೆಯನ್ನು ನೀವು ಹೇಗೆ ನೋಡುತ್ತೀರಿ?
ಉ: ದೊಡ್ಡ ಗೊಂದಲ ಇದೆ. ಭಾಷಾನೀತಿ ಮತ್ತು ಭಾಷಾ ಯೋಜನೆಗಳ ಬಗ್ಗೆ ನಾವು ಮಾತಾಡದೇ ಇರೋದೇ ಒಳ್ಳೇದು. ಯಾಕಂದ್ರೆ ಇದನ್ನು ಯಾರು ಮಾಡ್ಬೇಕು, ರಾಜಕೀಯ ತಜ್ಞರು ಮಾಡ್ಬೇಕಾ? ಆಡಳಿತ ತಜ್ಞರು ಮಾಡಬೇಕಾ? ಸಮಾಜಶಾಸ್ತ್ರಜ್ಞರು ಮಾಡ್ಬೇಕಾ? ಭಾಷಾಶಾಸ್ತ್ರಜ್ಞರು ಮಾಡ್ಬೇಕಾ? ಅಥವಾ ಇವರೆಲ್ಲರೂ ಒಟ್ಟಿಗೇ ಕೂತ್ಕೊಂಡು ಮಾಡ್ಬೇಕಾ? ಎಪ್ಪತ್ತು ವರ್ಷಗಳಲ್ಲಿ ಇದರ ಬಗೆಗೆ ಯಾವ ತೀರ್ಮಾನನೂ ಆಗಿಲ್ಲ. ಅರಾಜಕತೆ ಇದೆ. ತಾತ್ಪೂರ್ವಿಕವಾಗಿ, ಆಯಾ ಹೊತ್ತಿಗೆ ಏನು ಬೇಕು ಮತ್ತು ಎದುರಾದ ಸಮಸ್ಯೆಗಳನ್ನು ಆಗ ಪರಿಹರಿಸಿಕೊಳ್ಳೋದಿಕ್ಕೆ ಏನು ಬೇಕು? ಅದನ್ನು ಮಾಡುತ್ತಿದ್ದೇವೆ. ಕೊಠಾರಿ ಕಮಿಷನ್ ತ್ರಿಭಾಷಾ ಸೂತ್ರವನ್ನು ಹೇಳಿದಾಗ ಅದು ಹೆಚ್ಚಾಗಿ ದಕ್ಷಿಣದ ರಾಜ್ಯಗಳನ್ನು ಗಮನಿಸಿ ಮಾತಾಡ್ತಾ ಇತ್ತು. ಯಾಕಂದ್ರೆ ಹಿಂದಿಯನ್ನು ಕಲಿಯುವುದಕ್ಕೆ ಅವರು ಒಂದು ಅವಕಾಶವನ್ನು ಕಲ್ಪಿಸ್ತಿದ್ರು. ಅವರು ಇಂಗ್ಲಿಷ್ ಅನ್ನು ಕಲೀತಾರೆ ಅನ್ನೋದು ಗೊತ್ತಿತ್ತು. ಸ್ವಂತ ಭಾಷೆಯಾದ ಕನ್ನಡ, ತಮಿಳು, ತೆಲುಗು ಮಲಯಾಳಂ ಅನ್ನು ಕಲೀತಾರೆ ಅನ್ನೋದು ಗೊತ್ತಿತ್ತು. ಹಿಂದಿಗೆ ಒಂದು ಅವಕಾಶವನ್ನು ಕಲ್ಪಿಸಿದರು. ಆದರೆ ಅದನ್ನು ಉತ್ತರದ ಹಿಂದಿ ಭಾಷೆಯನ್ನು ಆಡುವ ಪ್ರದೇಶಗಳಿಗೆ ಅನ್ವಯಿಸುವಾಗ ದಕ್ಷಿಣದ ಒಂದು ಭಾಷೆಯನ್ನು ಕಲೀಬೇಕು ಅಂತ ಹೇಳಿದ್ರು. ನಾನು 64ನೇ ಇಸವಿಯ ವಿಚಾರ ಮಾತಾಡ್ತಾ ಇದೀನಿ. ಅದಾಗಿ ಹೆಚ್ಚು ಕಡಿಮೆ 60ವರ್ಷ ಆಗ್ತಾ ಬಂತು. ಜಾರಿ ತರೋಕೇ ಆಗಿಲ್ಲ ನಾವು. ಆವಾಗ್ಲೇ ಬಹುಭಾಷೆಗಳಲ್ಲಿ ದ್ವಿಭಾಷೆ ಅಂತ ಕುವೆಂಪು ಹೇಳಿದ್ರು. ತ್ರಿಭಾಷಾ ಸೂತ್ರ ಬೇಡ ಅಂದ್ರು. ಯಾರೂ ಅದನ್ನು ಗಮನಿಸ್ಲಿಲ್ಲ, ಕರ್ನಾಟಕದಲ್ಲೂ ಗಮನಿಸ್ಲಿಲ್ಲ, ಇಡೀ ರಾಷ್ಟ್ರದಲ್ಲೂ ಅದನ್ನು ಸೀರಿಯಸ್ ಆಗಿ ತಗೊಳ್ಳಿಲ್ಲ. ನಾವು ಭಾಷಾನೀತಿಗೆ ಸಂಬಂಧಿಸಿ ದೂರಗಾಮಿಯಾದ ಒಂದು ಪ್ಲಾನಿಂಗ್ ಅನ್ನು ಅಥವಾ ಪಾಲಿಸಿಯನ್ನು ರೂಪಿಸುವುದಕ್ಕೆ ಸಾಧ್ಯನೇ ಆಗಿಲ್ಲ. ಬಹುಭಾಷಿಕ ರಾಷ್ಟ್ರ, ಭಾಷೆಗಳು ಅಳಿದುಹೋಗ್ತಾ ಇವೆ, ಒಂದು ಭಾಷೆ ಇನ್ನೊಂದು ಭಾಷೆಯ ಜೊತೆಗೆ ಅಧಿಕಾರದ ಸಂಬಂಧವನ್ನು ಹೊಂದಿದೆ, ಇವುಗಳ ಬಗ್ಗೆ ಎಲ್ಲ ಹೇಳ್ತೀವಿ ನಾವು. ಆದರೆ ಅದರ ನಿವಾರಣೆ ಹೇಗೆ ಅಂದಾಗ ಭಾಷೆಗಳ ಬಗ್ಗೆ ಮಾತ್ರ ಯೋಚನೆ ಮಾಡೋಕಾಗತ್ತಾ? ಆಗಲೇ ಹೇಳಿದ ಹಾಗೆ, ಸಾಮಾಜಿಕ ಅಭಿವೃದ್ಧಿಯ ನೀತಿಯ ಜೊತೆಗೆ ಭಾಷಾನೀತಿಯೂ ಕೂಡಾ ತಳುಕು ಹಾಕ್ಕೊಂಡಿದೆ. ಭಾಷೆಗಳಿಗೆ ಸಮಾನ ಸ್ಥಾನಮಾನ ಕೊಡಬೇಕು ಅಂದ್ರೆ ಸಮಾಜದಲ್ಲಿರುವ ಪ್ರತಿಯೊಂದು ಗುಂಪಿಗೂ ಕೂಡಾ ಪ್ರತಿಯೊಂದು ಘಟಕಕ್ಕೂ ಕೂಡಾ ಪ್ರತಿಯೊಂದು ವ್ಯಕ್ತಿಗೂ ಕೂಡಾ ಸಮಾನ ಸ್ಥಾನಮಾನಗಳು, ಸಮಾನ ಅವಕಾಶಗಳು, ಸಮಾನ ಸಾಮಥ್ರ್ಯಗಳು ದೊರಕುವ ಹಾಗೆ ನೋಡ್ಕೋಬೇಕು. ಆವಾಗ ಭಾಷಾನೀತಿಗೊಂದು ಅರ್ಥ ಬರ್ತದೆ. ಅದುಬಿಟ್ಟು ಭಾಷಾನೀತಿಯನ್ನೇ ಪ್ರತ್ಯೇಕವಾಗಿ ಮಾಡೋಕೆ ಹೋದ್ರಿ ಅಂತಂದ್ರೆ ತೇಪೆ ಹಾಕಿದ ಹಾಗಾಗತ್ತೆ. ಭಾಷಾ ಯೋಜನೆಗಳು ಜಾರಿ ಆದಮೇಲೆ ಅದು ಕಲಿಕೆಯ ಹಂತದಲ್ಲಿ ಅಥವಾ ಆಡಳಿತದ ಹಂತದಲ್ಲಿ ಅಥವಾ ವಾಣಿಜ್ಯದ ಹಂತದಲ್ಲಿ ವ್ಯವಹಾರದ ಹಂತದಲ್ಲಿ ನ್ಯಾಯಾಂಗದಲ್ಲಿ ಎಲ್ಲಿ ಅದಕ್ಕೆ ಯಾವ ಯಾವ ಸ್ಥಾನಮಾನ ಕೊಡ್ಬೇಕು ಇವುಗಳ ಬಗ್ಗೆ ನಮಗೆ ಒಂದು ಅರಾಜಕತೆ ಕಾಣ್ಸತ್ತೆ ಹೊರತು ವಾಸ್ತವವಾಗಿ ಅವುಗಳನ್ನು ಜಾರಿ ಕೊಡಬೇಕಾದಾಗ ಇರಬೇಕಾದ ಟೂಲ್ಸ್‍ಗಳಾಗಲೀ ಅಥವಾ ಅದಕ್ಕೆ ಬೇಕಾದ ಒಂದು ರಾಜಕೀಯವಾದ ದೃಢ ನಿರ್ಧಾರವಾಗಲೀ ಇಲ್ಲ ಅಂತ ನನಗನಿಸ್ತಾ ಇದೆ. ಅದರಿಂದ ಅದು ಹೊಸ ಶಿಕ್ಷಣ ನೀತಿಯಲ್ಲೂ ಕೂಡಾ ನಾನು ಓದ್ಕೊಂಡಿರೋ ಪ್ರಕಾರ ಅದು ಹಾಗೇ ಮುಂದುವರೆದಿದೆ. ದೇಶೀಯ ಅಥವಾ ಪ್ರಾದೇಶಿಕ ಭಾಷೆಗಳಿಗೆ ನಾವು ಅವಕಾಶವನ್ನು ಕಲ್ಪಿಸ್ತೀವಿ ಅಂತಾರೆ. ಒಂದು ಸಣ್ಣ ಉದಾಹರಣೆ ಕೊಡ್ತೀನಿ, ಈಚೆಗೆ ಕೇಂದ್ರ ಸರ್ಕಾರದಿಂದ ಒಂದು ಹೇಳಿಕೆ ಬರ್ತಾ ಇದೆ, ಇಂಜಿನಿಯರಿಂಗ್ ಮತ್ತು ಮೆಡಿಕಲ್ ಶಿಕ್ಷಣವನ್ನು ನಾವು ಪ್ರಾದೇಶಿಕ ಭಾಷೆಗಳಲ್ಲಿ ಕೊಡ್ತೀವಿ, ಮೆಟೀರಿಯಲ್ ಸಿದ್ಧಪಡಿಸ್ತಾ ಇದೀವಿ, ಐದು ಭಾಷೆಗಳಲ್ಲಿ ಪಠ್ಯ ಸಾಮಗ್ರಿ ಸಿದ್ಧಪಡಿಸಿದೀವಿ ಅಂತ ಹೇಳ್ತಾ ಇದ್ದಾರೆ. ಕೆಲವು ಕಡೆ ಹನ್ನೊಂದು ಭಾಷೆ ಅಂತ ಹೇಳ್ತಾರೆ. ಅದರಲ್ಲಿ ಕನ್ನಡ ಇಲ್ಲ, ತಮಿಳು ಇದೆ. ಮೆಡಿಕಲ್ ಓದುವ ವಿದ್ಯಾರ್ಥಿ, ಇಂಜಿನಿಯರಿಂಗ್ ಓದುವ ವಿದ್ಯಾರ್ಥಿ ಇವತ್ತು ತನ್ನ ಆಯ್ಕೆಯ ಭಾಷೆಯಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಅನ್ನು ಕಲಿಯಬಹುದು. ಇದು ಎಲ್ಲರೂ ಸಂತೋಷ ಪಡಬೇಕಾದ ವಿಚಾರ. 70ವರ್ಷಗಳಿಂದ ನಾವು ಮಾಡೋಕಾಗಿಲ್ಲ ಇದನ್ನು. ಆದರೆ ವಾಸ್ತವದಲ್ಲಿ ಏನಾಗತ್ತೆ, ನೀವು ಶಿಕ್ಷಣವನ್ನು ಈಗಾಗಲೇ ಎರಡು ಚಾನೆಲ್‍ಗಳಲ್ಲಿ ಒಡೆದುಬಿಟ್ಟಿದೀರಿ. ಒಂದು ಸರ್ಕಾರದ ಹಿಡಿತದಲ್ಲಿರುವ ಶಿಕ್ಷಣ, ಇನ್ನೊಂದು ಸರ್ಕಾರದ ಹಿಡಿತದಲ್ಲಿ ಇರುವ ಖಾಸಗಿ ಶಿಕ್ಷಣ. ಈಗ ಯಾರು ಪ್ರಾದೇಶಿಕ ಭಾಷೆಗಳಲ್ಲಿ ಕಲಿಸೋದಕ್ಕೆ ಮುಂದಾಗ್ತಾರೆ, ನಿಮ್ ಊಹೆಗೆ ಬಿಟ್ಟದ್ದು. ಸರ್ಕಾರಿ ಕಾಲೇಜುಗಳಲ್ಲಿ ಕಲಿಸ್ತಾರೆ. ಖಾಸಗಿ ಕಾಲೇಜಲ್ಲಿ ಇಲ್ಲ. ಇದರ ಪರಿಣಾಮ ಏನಾಗತ್ತೆ? ಈ ಕಾಲೇಜುಗಳಲ್ಲಿ ಕಲಿತವರಿಗೆ ಅವಕಾಶಗಳು ಕಡಿಮೆ ಆಗ್ತಾ ಹೋಗ್ತವೆ. ಖಾಸಗಿಯವರಿಗೆ ಅವಕಾಶಗಳು ತೆರೆದುಕೊಳ್ತಾ ಹೋಗ್ತವೆ. ಅವರು ಪಡ್ಕೊಂಡ ತಿಳುವಳಿಕೆಯ ಸ್ವರೂಪದ ಬಗ್ಗೆ ಮಾತಾಡ್ತಾ ಇಲ್ಲ. ಇಂಗ್ಲಿಷ್‍ನಲ್ಲಿ ಕಲಿತ ಡಾಕ್ಟರ್ ಆಗಲೀ, ಕನ್ನಡದಲ್ಲಿ ಕಲಿತ ಡಾಕ್ಟರ್ ಆಗಲೀ ಬುದ್ಧಿವಂತಿಕೆಯ ದೃಷ್ಟಿಯಿಂದ ಸಮಾನರಾಗೇ ಇರಬಹುದು. ಆದರೆ ಅವರ ಸಾಮಥ್ರ್ಯಗಳು ಮತ್ತು ಅವಕಾಶ ಮ್ಯಾಪ್ ಆಗೋ ವಿಚಾರ ಬಂದಾಗ ಖಂಡಿತವಾಗಿಯೂ ಕನ್ನಡದಲ್ಲಿ ಕಲಿತವರಿಗೆ ಅವಕಾಶಗಳು ಕಡಿಮೆ ಇವೆ. ಸಾಮಾಜಿಕವಾದ ವಿಘಟನೆಯನ್ನು ನೀವು ಉಳಿಸಿಕೊಂಡು ಭಾಷಿಕವಾಗಿ ಹೆಚ್ಚು ಹೆಚ್ಚು ಸಾಮಥ್ರ್ಯವನ್ನು, ಹೆಚ್ಚು ಹೆಚ್ಚು ಅವಕಾಶಗಳನ್ನು ಕಲ್ಪಿಸ್ತೀರಿ ಅನ್ನೋದು ಒಂದು ತಲೆಕೆಳಗಾದ ಯೋಜನೆ ಅನ್ನೋದು ನನ್ನ ಅಭಿಪ್ರಾಯ. ಹೊಸ ಶಿಕ್ಷಣ ನೀತಿ, ತಾನು ಹೇಳುವಾಗ ಬಹುಭಾಷಿಕ ಸನ್ನಿವೇಶವನ್ನು ಗೌರವಿಸ್ತೀವಿ, ಅಂತ ಹೇಳಿದ್ರೂ ಅದನ್ನು ನಿರ್ವಹಿಸ್ತೀವಿ ಅಂತ ಹೇಳ್ತಾ ಇಲ್ಲ. ಬಹುತ್ವವನ್ನು ಗುರುತಿಸೋದು ಒಂದು, ಬಹುತ್ವವನ್ನು ಮ್ಯಾನೇಜ್ ಮಾಡೋದು ಇನ್ನೊಂದು. ಇದನ್ನು ಮ್ಯಾನೇಜ್ ಮಾಡೋದಕ್ಕೆ ನಿಮ್ಮ ಹತ್ರ ಪರಿಕರಗಳು ಏನಿವೆ? ಇದು ಇಲ್ಲ ಈಗ. ಇದು ನನ್ನ ಗ್ರಹಿಕೆ. ಭಾಷಾ ಮಾಧ್ಯಮ ಮತ್ತು ಭಾಷೆಯ ಕಲಿಕೆ ಇವುಗಳಿಗೆ ಸಂಬಂಧಪಟ್ಟ ಹಾಗೆ ಇರುವ ಗೊಂದಲಗಳು ಇನ್ನಷ್ಟು ಗಾಢವಾಗ್ತವೆ ಹೊರತು ನನ್ನ ಅಭಿಪ್ರಾಯದಲ್ಲಿ ಪರಿಹಾರ ಆಗೋದಿಲ್ಲ. ಇವೆಲ್ಲವೂ ಕೂಡಾ ಮತ್ತೆ ಎಲ್ಲಿಗೆ ಹೋಗ್ತವೆ ಅಂತಂದ್ರೆ ಶೈಕ್ಷಣಿಕ ತತ್ವಶಾಸ್ತ್ರದ ಚೌಕಟ್ಟಿನ ಹೊತಾಗಿ ಸಾಂವಿಧಾನಿಕ ಚೌಕಟ್ಟಿನಲ್ಲಿ ಹಕ್ಕುಗಳ ಪ್ರಶ್ನೆಗೆ ಬರತ್ತೆ. ಕರ್ನಾಟಕ ಹೈಕೋರ್ಟಿನಲ್ಲಿ ಪದವಿ ತರಗತಿಗಳಲ್ಲಿ ಕನ್ನಡವನ್ನು ಕಡ್ಡಾಯ ಮಾಡಿರೋದರ ವಿರುದ್ಧವಾಗಿ ಒಂದು ಪಿಟಿಷನ್ ಹಾಕಿದ್ದಾರೆ. ಅಕ್ಸೆಪ್ಟ್ ಆಗಿ ಸರ್ಕಾರಕ್ಕೆ ಅವರು ಕನ್ನಡ ಕಡ್ಡಾಯಗೊಳಿಸಿ ಹೊರಡಿಸಿದ ಆದೇಶವನ್ನು ಮರುಪರಿಶೀಲಿಸಲು ತಿಳಿಸಿದ್ದಾರೆ. ಇದರ ಉಪಯೋಗವನ್ನು ಕನ್ನಡ ಕಲಿಯೋಕೆ ಸಾಧ್ಯ ಇಲ್ದೇ ಇರೋ ವಿದ್ಯಾರ್ಥಿಗಳು ಮಾತ್ರ ಪಡ್ಕೋತಾರೆ ಅಂತ ಹೇಳೋಕಾಗೋದಿಲ್ಲ. ಸಂಸ್ಕøತ ಮತ್ತು ಇಂಗ್ಲಿಷ್ ಅನ್ನು ತಗೊಂಡು ಹತ್ತನೇ ತರಗತಿಯನ್ನು ಪಾಸ್ ಮಾಡೋ ಎಷ್ಟೋ ವಿದ್ಯಾರ್ಥಿಗಳನ್ನು ನೋಡಿದೀವಿ ನಾವು. ಆದ್ದರಿಂದ ಇದು ಶೈಕ್ಷಣಿಕ ಪ್ರಶ್ನೆ ಆಗೋದಕ್ಕಿಂತ ಹೆಚ್ಚಾಗಿ ಸಾಂವಿಧಾನಿಕ ಹಕ್ಕುಗಳ ಪ್ರಶ್ನೆಯಾಗಿ ಪರಿವರ್ತನೆಯಾಗಿ ಈ ಗೊಂದಲಗಳು ಮತ್ತಷ್ಟು ಮುಂದುವರಿಯುತ್ತವೆ ಅಂತಲೇ ನನ್ನ ಅಭಿಪ್ರಾಯ.
ಪ್ರ: ‘ಕನ್ನಡಿಗಳು ಸಾಕು’ ಎನ್ನುವುದರ ಮೂಲಕ ಚೌಕಟ್ಟುಗಳಿಂದ ಬಿಡಿಸಿಕೊಳ್ಳುವ ಹಾದಿಯಲ್ಲಿ ಸಾಗಬೇಕು ಎಂದು ನೀವು ಹೇಳುತ್ತಾ ಬಂದವರು. ಇದರ ಭಾಗವಾಗಿ ‘ಕರ್ನಾಟಕ ಅಧ್ಯಯನ’ ಎಂಬ ಅಧ್ಯಯನ ಕಮ್ಮಟಗಳನ್ನು ಆಯೋಜಿಸುತ್ತಿದ್ದಿರಿ. ಅದು ನಮ್ಮಂತಹವರಿಗೆ ಸಿದ್ಧ ಮಾದರಿಯಾಚೆಗೆ ನೋಡಲು ಪ್ರೇರೇಪಣೆ ಕೊಡುತ್ತಿತ್ತು. ಇಂದು ನಮ್ಮ ಸಂಶೋಧನೆಗಳು ಈ ಮಾದರಿಯಿಂದ ಒಂದಿಷ್ಟಾದರೂ ಬಿಡಿಸಿಕೊಂಡಂತೆ ನಿಮಗೆ ಅನಿಸುತ್ತದೆಯೇ?
ಉ: ಕರ್ನಾಟಕ ಅಧ್ಯಯನ ಅಂತ ಮಾಡ್ತಾ ಇದ್ವಿ. ಯಾಕೆ ಅದಕ್ಕೆ ತುಂಬಾ ಜನ ವಿರೋಧ ವ್ಯಕ್ತಪಡಿಸ್ತಾ ಇದ್ರು ಅಂತ ಇವತ್ತಿಗೂ ಅರ್ಥ ಆಗಿಲ್ಲ. ವಿಶೇಷವಾಗಿ ದಲಿತ ಗೆಳೆಯರು ವಿರೋಧ ವ್ಯಕ್ತಪಡಿಸಿದರು. ಕರ್ನಾಟಕ ಅಧ್ಯಯನ ಅಂತನ್ನೋದು ಕರ್ನಾಟಕದಲ್ಲಿ ಹೆಚ್ಚು ಸವಲತ್ತುಗಳನ್ನು ಪಡೆದವರ ದೃಷ್ಟಿಯಿಂದ ಇರುವ ದೃಷ್ಟಿಕೋನವೇ ಹೊರತು ದಲಿತರನ್ನು ಒಳಗೊಳ್ಳೋದಿಲ್ಲ ಇದು ಅನ್ನುವುದು ಅವರ ಅಭಿಪ್ರಾಯ. ಇರಬಹುದು, ಇದು ಒಂದು ಆತಂಕ. ದಲಿತರಿಗೆ ಇವತ್ತು ಕರ್ನಾಟಕದ ಒಳಗಡೆ ಒಂದು ನೆಟ್‍ವರ್ಕ್‍ಗಿಂತ ಹೆಚ್ಚಾಗಿ ಚಂದ್ರಭಾನ್‍ಪ್ರಸಾದ್ ಮುಂತಾದವರು ಹೇಳುವ ಪ್ರಕಾರ ಅವರಿಗೆ ಅಖಿಲಭಾರತ ಮಟ್ಟದ ನೆಟ್‍ವರ್ಕ್ ಅಗತ್ಯ. ಯಾಕಂದ್ರೆ ಕನ್ನಡವನ್ನು ಬಿಟ್ಟುಕೊಡಬೇಕು ಅವ್ರು. ಇಂಗ್ಲಿಷ್ ಕಡೆಗೆ ಹೋಗ್ಬೇಕು ಅವ್ರು. ಅದಕ್ಕೋಸ್ಕರ ಇಂಗ್ಲಿಷ್ ರಾಣಿ, ಇಂಗ್ಲಿಷ್ ದೇವತೆ ಅಂತ ಕಾಂಚ ಐಲಯ್ಯ, ಚಂದ್ರಭಾನ್ ಇವರೆಲ್ಲ ಹೇಳ್ತಾ ಇದಾರೆ, ದಲಿತರು ಕೂಡಾ ಅದರ ಪರವಾಗಿದಾರೆ. ಆ ಕಾರಣದಿಂದಾಗಿಯೇ ಕರ್ನಾಟಕ ಅಧ್ಯಯನ ಅಂತನ್ನೋದು ದಲಿತರನ್ನು ಒಂದು ರೀತಿಯಲ್ಲಿ ಕನ್ನಡಕ್ಕೆ ಕಟ್ಟಿಹಾಕುವ ಒಂದು ಪ್ರಯತ್ನ ಅಂತ ಅನಿಸಿ ಬಹುಶಃ ವಿರೋಧ ಬಂತು ಅಂತ ನಾನು ಗ್ರಹಿಸಿದೀನಿ. ಅದರ ಹಿಂದೆ ಅಂತಹ ಅಭಿಪ್ರಾಯ ಇರಲಿಲ್ಲ. ಆದರೆ ಗ್ರಹಿಸಿದ್ದು ಆ ತರ ಆಯ್ತು. ಆದ್ದರಿಂದಾಗಿ ತುಂಬಾ ಜನ ಆ ಚೌಕಟ್ಟಿಂದ ಹೊರಬಂದ್ರು. ಮುಖ್ಯವಾಗಿ, ಇದನ್ನು ಬೇರೆ ರೀತಿ ಗ್ರಹಿಸಬೇಕು. ಅಧ್ಯಯನಕ್ಕೆ ಏನು ಸಿದ್ಧ ಮಾದರಿ ಇದೆ, ಆ ಮಾದರಿಯನ್ನು ಬಿಟ್ಟುಕೊಡೋದಕ್ಕೆ, ಹೊಸ ದಾರಿಯನ್ನು ಹುಡುಕೋ ಅವಕಾಶ ಇದೆ ಅನ್ನೋದಷ್ಟನ್ನೇ ತಗೋಬಹುದು, ತಗೋಬೇಕು ಅಂತ ನನಗನ್ಸತ್ತೆ. ಉದಾಹರಣೆಗೆ, ಕನ್ನಡ ಸಮಾಜವನ್ನು ಅಧ್ಯಯನ ಮಾಡ್ತಾ ಇರುವವರು ಕನ್ನಡ ಚರಿತ್ರೆಯನ್ನು ಅಧ್ಯಯನ ಮಾಡುವವರು ಈ ದಿಕ್ಕಿನಲ್ಲಿ ಯೋಚಿಸಬೇಕು. ಸಿದ್ಧ ಮಾದರಿ ಅಂದ್ರೇನು? ಅಖಿಲಭಾರತ ಮಟ್ಟದ ಚರಿತ್ರೆಯ ಮಾದರಿಯನ್ನು ಕರ್ನಾಟಕದ ಚರಿತ್ರೆಯ ಮಾದರಿಯನ್ನಾಗಿ ಪರಿವರ್ತಿಸುವುದು. ಅಥವಾ ಜಾಗತಿಕ ಚರಿತ್ರೆಯ ಮಾದರಿಯನ್ನು ಕರ್ನಾಟಕದ ಚರಿತ್ರೆಯ ಮಾದರಿಯನ್ನಾಗಿ ಬದಲಾಯಿಸಿಕೊಳ್ಳೋದು. ಅದೇ ಇವತ್ತು ಮಕ್ಕಳು ಅನುಸರಿಸ್ತಾ ಇರೋದು. ಅದನ್ನು ಒಡೆಯೋದಕ್ಕೆ ಸಾಧ್ಯ ಇದೆ. ಕನ್ನಡ ಚರಿತ್ರೆ ಅಥವಾ ಕರ್ನಾಟಕದ ಚರಿತ್ರೆಯನ್ನು ಕನ್ನಡ ನಾಡಿನ ಮೂಲಕವೇ ಗ್ರಹಿಸೋದು, ಕನ್ನಡ ಸಮಾಜದ ಮುಖಾಂತರ ಬೇಕಾಗಿರುವ ಪರಿಹಾರವನ್ನು, ಪರಿಕರಗಳನ್ನು ರೂಪಿಸೋದು. ಇದನ್ನು ನಾವು ವಿದ್ಯಾರ್ಥಿಗಳಲ್ಲಿ ಬೆಳೆಸೋದಕ್ಕೆ ಸಾಧ್ಯ ಇದೆ. ಆದರೆ ಆ ಕಡೆಗೆ ನಮ್ಮ ಸಂಶೋಧನೆ ಹೋಗಿಲ್ಲ ಇದುವರೆಗೆ. ಸ್ವೀಕೃತ ಮಾದರಿಗಳು, ಯುರೋಪ್‍ನಲ್ಲಿ, ಅಮೆರಿಕದಲ್ಲಿ ಸಿದ್ಧ ಆಗ್ತವೆ. ಮತ್ತೆ ಇಲ್ಲಿ ಅವುಗಳನ್ನೇ ನಾವು ನಕಲು ಮಾಡ್ತಾ ಇರ್ತೀವಿ. ಉದಾಹರಣೆಗೆ, ಲಿಖಿತ ದಾಖಲೆಗೆ ಮತ್ತು ಮೌಖಿಕ ದಾಖಲೆಗೆ ಇರಬಹುದಾದ ಸಂಬಂಧವನ್ನು ನೋಡೋಣ. ಸಿದ್ಧ ಮಾದರಿ ಏನು ಹೇಳ್ತಾ ಇರತ್ತೆ ಅಂತಂದ್ರೆ, ಲಿಖಿತ ದಾಖಲೆ ಹೆಚ್ಚು ಅಧಿಕೃತವಾದುದು. ಬಾಯ್ದೆರೆಯ ಮಾಹಿತಿ ಎನ್ನುವುದು ಅದಕ್ಕೆ ಪೂರಕವಾಗಬಹುದೇ ಹೊರತು ಅದು ಒಂದು ಪ್ರಮುಖ ಪುರಾವೆ ಆಗೋದಿಲ್ಲ ಅಂತ. ಇದು ಇವತ್ತಿನ ಜಾಗತಿಕವಾದ ಸಿದ್ಧವಾಗಿರುವ ಮಾದರಿ. ಇದನ್ನು ಒಡೆಯೋಕೆ ಸಾಧ್ಯವಿಲ್ಲವೇ? ಒಡೆದ್ರೆ ಹೇಗೆ ಒಡೀಬೇಕು? ಇದರ ಕಡೆಗೆ ಯೋಚನೆ ಮಾಡ್ತಾ ಇಲ್ಲ ನಾವು. ಯಾವುದೇ ಕಾಲದ ಚರಿತ್ರೆ ಇರಬಹುದು. ಉದಾಹರಣೆಗೆ, ವಿಜಯನಗರ ಸಾಮ್ರಾಜ್ಯದ ಚರಿತ್ರೆಯನ್ನು ಅಧ್ಯಯನ ಮಾಡುವವರೆಲ್ಲರೂ ಕೂಡಾ ಭಾರತದ ಅಧ್ಯಯನಕಾರರೂ ಮತ್ತು ಹೊರಗಿನಿಂದ ಬಂದು ಅಧ್ಯಯನ ಮಾಡಿದ ಬರ್ನ್‍ಸ್ಟೈನ್ ಮುಂತಾದವರೂ ಕೂಡಾ ವಿಜಯನಗರ ಕೇಂದ್ರಿತವಾಗಿಯೇ ನೋಡ್ತಾ ಇದ್ದಾರೆ, ಹಂಪಿಯನ್ನು ಕೇಂದ್ರ ಮಾಡ್ಕೊಂಡು ನೋಡ್ತಾ ಇದ್ದಾರೆ. ಮತ್ತು ಸಾಳ್ವ ಅರಸರುಗಳು, ತುಳುವ ಅರಸರುಗಳು ಮತ್ತು ಅದಕ್ಕಿಂತ ಹಿಂದೆ ಬಂದ ಪ್ರೌಢದೇವರಾಯ ಇವರನ್ನು ಕೇಂದ್ರ ಮಾಡ್ಕೊಂಡಿರುವ ದಾಖಲೆಗಳು ಬೇಕಾದಷ್ಟು ಸಿಗ್ತವೆ. ಶಾಸನ, ಪ್ರವಾಸಿಗಳ ಬರವಣಿಗೆಯಲ್ಲಿ ದಾಖಲೆಗಳಿವೆ. ಇವುಗಳನ್ನು ಆಧರಿಸಿ ನಾವು ಇಂದು ಚರಿತ್ರೆಯನ್ನು ಕಟ್ತಾ ಇದ್ದೇವೆ. ನಾವು ಕನ್ನಡ ವಿಶ್ವವಿದ್ಯಾಲಯಕ್ಕೆÉ ಹೋದಾಗ ಡಾ.ಪುರುಷೋತ್ತಮ ಬಿಳಿಮಲೆಯವರು ಒಂದು ಪ್ರಾಜೆಕ್ಟ್ ತಗೊಂಡ್ರು, ಹಂಪಿ ಜಾನಪದ ಅಂತ. ಹಂಪಿ ಜಾನಪದದಲ್ಲಿ ಅವರು ಸಂಗ್ರಹಿಸಿದ ಯಾವುದೇ ಸಾಮಗ್ರಿಯಲ್ಲೂ ಕೃಷ್ಣದೇವರಾಯನ ಉಲ್ಲೇಖವೇ ಇಲ್ಲ. ಯಾವ ರಾಜರ ಉಲ್ಲೇಖವೂ ಇಲ್ಲ. ಅಲ್ಲಿ ಉಲ್ಲೇಖ ಇರೋದೆಲ್ಲ ಕುಮಾರರಾಮಂದು, ಕಂಪಿಲ ರಾಯಂದು. ಕಂಪಿಲಿ ಸಾಮ್ರಾಜ್ಯದ ಉಲ್ಲೇಖ ಇದೆ ಅಷ್ಟೆ. ಆನೆಗೊಂದಿ ಬರ್ತದೆ ಅಷ್ಟೆ. ಅಂದ್ರೆ ಜನಮಾನಸದಲ್ಲಿ ಉಳಿದಿರುವ ವಿಜಯನಗರ ಮತ್ತು ಜನಮಾನಸಕ್ಕಾಗಿ ನಾವು ಕಟ್ಕೊಡ್ತಾ ಇರುವ ವಿಜಯನಗರ ಎರಡೂ ಬೇರೆ ಬೇರೆ. ಇವತ್ತು ಕೂಡಾ ಚರಿತ್ರೆಕಾರರು ಈ ದಾಖಲೆಗಳನ್ನು ಅವಲಂಬಿಸಿ ಕಟ್ಟುವ ಚರಿತ್ರೆಯಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಕುರಿತು ಮಾತಾಡ್ತಾರೆ. ಆದರೆ ಜನ ವಿಜಯನಗರ ಸಾಮ್ರಾಜ್ಯದ ಬಗ್ಗೆ ಮಾತಾಡೋದಿಲ್ಲ. ಅವರು ಹಂಪಿ ಬಗ್ಗೆ ಮಾತಾಡ್ತಾರೆ, ಕುಮಾರ ರಾಮನ ಬಗ್ಗೆ ಮಾತಾಡ್ತಾರೆ. ಕೃಷ್ಣದೇವರಾಯನ ಬಗ್ಗೆ ಮಾತಾಡೋದಿಲ್ಲ. ಯಾಕೆ? ಯಾಕೆ ಮಾತಾಡೋದಿಲ್ಲ ಅನ್ನೋದಕ್ಕಿಂತ ಹೆಚ್ಚಾಗಿ ನಾವು ಯಾಕೆ ಇದನ್ನು ಗ್ರಹಿಸ್ತಾ ಇಲ್ಲ? ಯಾರ ನೆನಪುಗಳನ್ನು ಆಧರಿಸಿ ನಾವು ಚರಿತ್ರೆಯನ್ನು ಕಟ್ತಾ ಇದೇವೆ? ಕರ್ನಾಟಕ ಅಧ್ಯಯನ ಅಂತ ನಾವು ಹೇಳ್ತಾ ಇದ್ದಾಗ ನಮ್ಮ ತಲೆಯೊಳಗಡೆ ಇದ್ದದ್ದು, ನಾವು ಪ್ರೊಪೋಸ್ ಮಾಡ್ತಾ ಇದ್ದದ್ದು ಇದು. ಈ ರೀತಿ ಒಡೆಯುವಿಕೆಯನ್ನು ಈ ಭಿನ್ನ ಗ್ರಹಿಕೆಗಳನ್ನು ನೋಡೋಕೆ ಪ್ರಯತ್ನಪಡ್ತಾ ಇದ್ದೇವೆ. ಸಮಾಜ, ಚರಿತ್ರೆ, ಆರ್ಥಿಕತೆ, ಪ್ರಗತಿ ಯಾವುದೇ ಇರಬಹುದು. ಪ್ರತಿಯೊಂದನ್ನೂ ಕೂಡಾ ಒಳಗಡೆಯಿಂದನೇ ನೋಡ್ಬೇಕು. ಆದ್ರೆ ಇವತ್ತಿನವರೆಗೂ ಯಾವುದೇ ವಿಶ್ವವಿದ್ಯಾಲಯದಲ್ಲಾಗಲೀ ಪೂರ್ಣ ಪ್ರಮಾಣದಲ್ಲಿ ಬಿಡಿಸ್ಕೊಂಡಿದೀವಿ ಅಂತ ನನಗನಿಸ್ತಾ ಇಲ್ಲ. ಅಲ್ಲಿ ಇಲ್ಲಿ ಪ್ರಯತ್ನಗಳು ನಡೆದಿಲ್ಲ ಅಂತ ನಾನು ಹೇಳ್ತಾ ಇಲ್ಲ.
ಪ್ರ: ಧ್ರುವೀಕರಣಗೊಂಡ ವಾತಾವರಣದಲ್ಲಿ ಇನ್ನಷ್ಟು ಹೆಚ್ಚು ನಾವು ಸಿದ್ಧಮಾದರಿಗಳಿಗೆ ಜೋತುಬೀಳುವಂತಾಗಿದೆ ಅಲ್ವಾ?
ಉ: ನಿಜ ಅದು. ಬದಲಾದ ಪರಿಸ್ಥಿತಿ ಕಂಫರ್ಟ್ ಜೋóನ್‍ನಲ್ಲಿ ಇದ್ದವರನ್ನು ಮತ್ತಷ್ಟು ಇಲ್ಲೇ ಇರಿ ಅಂತ ಒತ್ತಾಯಿಸ್ತಿದೆ ಅಂತ ಕಾಣತ್ತೆ. ಅದು ಗೊತ್ತಾಗದೇ ಮಾಡೋದು ಒಂದು ಕಡೆ ಆದ್ರೆ ಗೊತ್ತಿದ್ರೂ ತಪ್ಪು ಮಾಡೋದು ಇನ್ನೊಂದು. ತಾನು ಹಿಡಿದ ಮೊಲಕ್ಕೆ ಮೂರು ಕೋಡು ಅನ್ನೋ ಹಾಗೆ. ತುಂಬಾ ವಾದಗಳು ಆ ತರ ಇರ್ತವೆ. ನಮ್ಮ ಸಮಾಜದಲ್ಲಿ ಉಂಟಾಗಿರುವ ಧ್ರುವೀಕರಣ ಏನಿದೆ, ಅದರ ಪರಿಣಾಮವೇ ಇರಬಹುದು. ಆದರೆ ಎಲ್ಲೋ ಒಂದು ಕಡೆಗೆ ಚಡಪಡಿಕೆ ಇದ್ದೇ ಇರಬೇಕು. ಸಮಾಜ ಜೀವಂತವಾದ ಸಾವಯವ ರಚನೆ ಅಂತ ನೀವು ಹೇಳೋದಾದ್ರೆ ಇದರದೇ ಆದ ಒಂದು ಚೈತನ್ಯ ಇದೆ ಅಂತ ಅನ್ನೋದಾದ್ರೆ ಚಡಪಡಿಕೆ ಇರಲೇಬೇಕು ಅಂತ ಕಾಣ್ಸತ್ತೆ. ಅದ್ಯಾವಾಗ ಚಡಪಡಿಕೆ, ಮಿಡಿತ ದೊಡ್ಡದಾಗ್ತದೋ ಹೇಳೋಕಾಗಲ್ಲ. ಅದು ಸತ್ತುಹೋಗಿದೆ ಅಂತ ನನಗನಿಸ್ತಾ ಇಲ್ಲ. ಬಹಳ ಮೀಕ್ ಆಗಿದೆ ಅಂತ ಅನ್ಸತ್ತೆ ಅಷ್ಟೇನೇ. ಅದಕ್ಕೆ ಇವತ್ತಿನ ರಾಜಕೀಯ ವ್ಯವಸ್ಥೆನೂ ಕಾರಣ ಇರಬಹುದು. ಅದಕ್ಕೆ ಪ್ರತಿಭಟನೆ, ಇತ್ಯಾದಿಗಳೆಲ್ಲ ಒಂದು ರೀತಿಯಲ್ಲಿ ಸಾಂಕೇತಿಕವಾಗಿ ಇರ್ತವೆ, ತೋರಿಕೆಯಾಗಿ ಇರ್ತವೆ. ಆದರೆ ಈ ಸಮಾಜ ಸತ್ತುಹೋಗಿದೆಯೇ ಅಂತಂದ್ರೆ ನಾನು ಹಾಗೆ ಹೇಳೋದಿಲ್ಲ. ಎಲ್ಲೋ ಒಂದು ಕಡೆ ಮಿಡಿತ ಇರಬಹುದು. ಇಲ್ಲದಿದ್ರೆ ಸಮಾಜ ಸತ್ತುಹೋಗ್ತದೆ. ಸಮಾಜದ ಜೀವಂತಿಕೆ ಅನ್ನೋದು ಇದ್ದೇ ಇರಬೇಕು. ಅದು ಮತ್ತೆ ದನಿ ಪಡೆಯುತ್ತಾ? ಅದು ಪಡೆಯೋದಕ್ಕೆ ಬೇಕಾಗಿರುವ ಕಾಲಕ್ಕಾಗಲೀ ಸಂದರ್ಭಕ್ಕಾಗಲೀ ಪ್ರಯತ್ನ ಪಡಬೇಕು ಮತ್ತು ಕಾದು ನೋಡ್ಬೇಕು ಅನ್ಸತ್ತೆ.
ಪ್ರ: ಇತ್ತೀಚಿನ ಬರಹಗಳು ಸಾಮಾಜಿಕ ಜಾಲತಾಣಗಳ ಮೂಲಕ ವೇಗವಾಗಿ ತಲುಪುತ್ತಿವೆ. ಇಲ್ಲಿ ಒಂದು ಬಗೆಯ ಧಾವಂತ ಇದೆ. ಜೊತೆಗೆ ಹಲವು ಪ್ರಾದೇಶಿಕ ಭಾಷಾ ವೈವಿಧ್ಯಗಳೂ ಇಲ್ಲಿ ಜಾಗಪಡೆಯುತ್ತಿವೆ. ಈ ಬಗೆಯ ಅಭಿವ್ಯಕ್ತಿಕ್ರಮಗಳನ್ನು ನೋಡುವಾಗ ನಿಮಗೇನನಿಸುತ್ತದೆ?
ಉ: ನಾನು ಸಾಮಾಜಿಕ ಜಾಲತಾಣಗಳಿಂದ ಹೊರಗೆ ಇದೀನಿ. ಸಾಮಾಜಿಕ ಜಾಲತಾಣಗಳಲ್ಲಿ ಏನಾಗ್ತಿದೆ ಅನ್ನುವುದರ ಫಸ್ಟ್ ಹ್ಯಾಂಡ್ ಇನ್‍ಫಾರ್ಮೇಷನ್ ನನಗಿಲ್ಲ. ಉದಾಹರಣೆಗೆ, ಅಲ್ಲಿ ಬರೆಯುವ ಕವಿತೆಗಳ ಬಗ್ಗೆ ಇರಬಹುದು, ಚರ್ಚೆಗಳ ಬಗ್ಗೆ ಇರಬಹುದು, ಅಭಿಪ್ರಾಯಗಳ ವಿನಿಮಯದ ಬಗ್ಗೆ ಇರಬಹುದು. ಇದರ ಬಗ್ಗೆ ನನಗೆ ತಿಳುವಳಿಕೆ ಬಹಳ ಕಡಿಮೆ. ಧಾವಂತ, ಡ್ಯುರೇಬಿಲಿಟಿ ಇತ್ಯಾದಿಗಳ ಬಗ್ಗೆ ಕಾಮೆಂಟ್ ಮಾಡೋಕಾಗಲ್ಲ. ಆದರೆ, ಪ್ರಶ್ನೆಯ ಎರಡನೇ ಭಾಗದಲ್ಲಿರುವ ಪ್ರಾದೇಶಿಕ ಭಾಷಾ ವೈವಿಧ್ಯಗಳು ಜಾಗ ಪಡೀತಾ ಇವೆ ಅನ್ನೋದು ಆಸಕ್ತಿದಾಯಕ ವಿಷಯ. ಜಾಗತಿಕವಾದ ಫಿನೋಮೆನಾ ಇದು. ಭಾಷಿಕ ಸಮುದಾಯಗಳು ತಮ್ಮ ಚಹರೆಯನ್ನು ಉಳಿಸಿಕೊಳ್ಳೋದಕ್ಕೆ ಅವು ಡಿಜಿಟೈಸ್ ಆಗುವಂಥದ್ದು ಅಂದ್ರೆ ಈ ರೀತಿಯ ಮಾಧ್ಯಮಗಳಲ್ಲಿ ತಮ್ಮ ಚಹರೆಯನ್ನು ಕಾಯ್ದುಕೊಳ್ಳುವಂಥದ್ದನ್ನು ಒಂದು ತಂತ್ರವಾಗಿ ಬಳಸ್ತಾ ಇವೆ. ಆಫ್ರಿಕಾದ ಸಮುದಾಯಗಳ ಬಹುಭಾಷೆಗಳನ್ನು ಆಡುವ ಜನರು ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಸಾಮಾಜಿಕವಾಗಿ ಅವರಿಗೆ ಸ್ಥಾನಮಾನಗಳಿಲ್ಲ. ಭಾರತದಲ್ಲಿ ನೂರಾರು ಸಮುದಾಯಗಳಿವೆ. ಉದಾಹರಣೆಗೆ, ಕೊರಗರಿದ್ದಾರೆ. ಅವರಿಗೆ ಲಾಂಗ್ವೇಜ್ ಮೈಂಟೆನೇನ್ಸ್ ಕೂಡಾ ಸಾಧ್ಯ ಇಲ್ದೇ ಇರಬಹುದು. ಎರಡು ಪೀಳಿಗೆಗಳಲ್ಲಿ ಕೊರಗರು ತಮ್ಮ ಲಾಂಗ್ವೇಜ್ ಮೈಂಟೈನ್ ಮಾಡ್ಕೋತಾರಾ ಇಲ್ವಾ ಗೊತ್ತಿಲ್ಲ. ಜನಾರೋಗ್ಯದ ದೃಷ್ಟಿಯಿಂದ ಅವರ ಜನಸಂಖ್ಯೆ ಕಡಿಮೆ ಆಗ್ತಾ ಹೋಗಬಹುದು. ಅವರಿಗಿರುವ ಸಾಮಾಜಿಕವಾದ ಚಲನಶೀಲತೆ, ಶಿಕ್ಷಣದ ಮುಖಾಂತರ ದೊರೆಯುವ ಚಲನಶೀಲತೆ ಕಡಿಮೆ ಆಗಬಹುದು. ಒಂದು ವೇಳೆ ಶಿಕ್ಷಣ ಪಡೆದವರೂ ಕೂಡಾ ಕೊರಗ ನುಡಿಯನ್ನು ತಾವು ಉಳಿಸಿಕೊಳ್ಳದೇ ಇರಬಹುದು. ಇವೆಲ್ಲ ಕಾರಣಗಳಿಂದಾಗಿ ಆ ಭಾಷೆ ನಿಧಾನವಾಗಿ ಖಿಲವಾಗಬಹುದು. ಈ ತರದ ಭಾಷೆಗಳನ್ನು ಉಳಿಸಿಕೊಳ್ಳೋದಕ್ಕೆ ಜಗತ್ತಿನ ಬೇರೆ ಬೇರೆ ಭಾಷಿಕ ಸಮುದಾಯಗಳು ಏನು ಮಾಡ್ತಿದಾವೆ ಅಂತಂದ್ರೆ ಅವುಗಳನ್ನು ಡಿಜಿಟೈಸ್ ಮಾಡ್ತಾ ಇದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವುಗಳು ತಮ್ಮ ಅಸ್ತಿತ್ವ ಜೀವಂತಿಕೆಯನ್ನು ಅವು ಉಳಿಸಿಕೊಂಡಿರ್ತವೆ ಅಂತ. ಈ ಪ್ರಯತ್ನ ಜಾಗತಿಕ ಮಟ್ಟದಲ್ಲಿ ಭಾಳ ನಡೀತಾ ಇದೆ. ಮುಖ್ಯವಾಗಿ ಆಫ್ರಿಕನ್ ಭಾಷೆಗಳ ಬಗ್ಗೆ. ಕನ್ನಡದಲ್ಲಿ ಒಳನುಡಿಗಳಿಗೆ ಸಂಬಂಧಿಸಿ ಜಾಸ್ತಿ ನಡೀತಾ ಇದೆ. ಉದಾಹರಣೆಗೆ, ಕುಂದಾಪ್ರ ಕನ್ನಡ. ಆದರೆ ಒಂದು ಸಣ್ಣ ಸಮಸ್ಯೆ ಏನಾಗ್ತಾ ಇದೆ ಅಂತಂದ್ರೆ ಬಹುಮಟ್ಟಿಗೆ ಅವರು ಅದನ್ನು ಹಾಸ್ಯಕ್ಕೆ ಮಾತ್ರ ಬಳಸ್ತಾ ಇದ್ದಾರೆ. ಅವುಗಳಿಗಿಂದ ದೊಡ್ಡ ರೀತಿಯಲ್ಲಿ ಅವುಗಳನ್ನು ಬಳಸೋಕೆ ಪ್ರಯತ್ನ ಪಡ್ತಾ ಇಲ್ಲ. ಕೆಲವು ಹಾಸ್ಯ ಚಾನಲ್‍ಗಳಲ್ಲೂ ಇವು ಬರ್ತವೆ. ಈ ಮಿತಿಯನ್ನು ಅವರು ಮೀರೋಕೆ ಸಾಧ್ಯ ಆದಾಗ ಡಿಜಿಟಲ್ ಜಗತ್ತಿನಲ್ಲಿ ಅವುಗಳ ಅಸ್ತಿತ್ವ ಸ್ವಲ್ಪ ದೊಡ್ಡದಾಗಬಹುದು ಅಂತ ಕಾಣತ್ತೆ. ಆ ಭಾಷೆಯಲ್ಲಿ, ಒಳನುಡಿಯಲ್ಲಿ, ಯಾವುದಾದರೊಂದು ವಿಷಯದ ಕುರಿತು ಮಾತಾಡೋದು, ಬೇರೆ ವಿಚಾರಗಳನ್ನು ಕುರಿತು ಚರ್ಚೆ ಮಾಡುವುದು ಈ ದಿಕ್ಕಿನಲ್ಲಿ ಯೋಚಿಸಬೇಕು. ಆಫ್ರಿಕನ್ ಭಾಷೆಗಳಲ್ಲಿ ಇದನ್ನು ಮಾಡ್ತಾ ಇದಾರೆ. ಭಾರತದಲ್ಲಿ ಯಾರಾದ್ರೂ ಮಾಡ್ತಾ ಇರಬಹುದು. ಕರ್ನಾಟಕದಲ್ಲಿ ಯಾರೂ ಮಾಡ್ತಾ ಇಲ್ಲ. ಕರ್ನಾಟಕದಲ್ಲಿ ಪ್ರಾದೇಶಿಕ ಭಾಷಾವೈವಿಧ್ಯಗಳನ್ನು ಬಳಸ್ತಾ ಇದಾರೆ, ಆದರೆ ಸೀಮಿತವಾಗಿದೆ. ಆ ಒಳನುಡಿಯನ್ನು ನುಡಿಯದೇ ಇದ್ದವರು ಅವರ ಸಂತೋಷಕ್ಕಾಗಿ ಬಳಸ್ತಾ ಇದಾರೆ ಅನ್ಸತ್ತೆ.
