ಸಂಗೀತಕ್ಕೆ ಸಂಬಂಧಿಸಿದ ಗಂಭೀರ ಬರಹಗಳು ಹಾಗೂ ಚಿಂತನೆಗಳನ್ನು ಕನ್ನಡಕ್ಕೆ ತರುತ್ತಿರುವ ಮೈಸೂರಿನ ರಾಗಮಾಲ ಪ್ರಕಾಶನ ಟಿ ಎಂ ಕೃಷ್ಣ ಅವರು ಸಂಗೀತವನ್ನು ಕುರಿತಂತೆ ಬರೆದ ಲೇಖನ ಸಂಗ್ರಹದ ಕನ್ನಡಾನುವಾದವನ್ನು “ಸಹ ಸ್ಪಂದನ” ಎಂಬ ಹೆಸರಿನಲ್ಲಿ ಪ್ರಕಟಿಸಿದೆ . ಕಳೆದ ಏಪ್ರಿಲ್ 6 ರಂದು ಮೈಸೂರಿನಲ್ಲಿ ನಡೆದ ಈ ಕೃತಿಯನ್ನು ಬಿಡುಗಡೆ ಮಾಡಿದ ಸಂಗೀತ ಪ್ರೇಮಿ, ನಿವೃತ್ತ ಐಎಎಸ್ ಅಧಿಕಾರಿಗಳಾದ ಶ್ರೀ ಎಸ್ ಕೃಷ್ಣಕುಮಾರ್ ಅವರು ಇಂತಹ ಬರಹಗಳ ಉಪಯುಕ್ತತೆಯನ್ನು ಕುರಿತು ಆಡಿದ ಮಾತುಗಳು ಮತ್ತು ಅದರ ಬರಹ ರೂಪ ಇಲ್ಲಿವೆ. ಋತುಮಾನಕ್ಕೆ ಇದನ್ನು ಒದಗಿಸಿದ ಟಿ.ಎಸ್ ವೇಣುಗೋಪಾಲ್ ಮತ್ತು ಶೈಲಜ ದಂಪತಿಗಳಿಗೆ ಧನ್ಯವಾದಗಳು .
ಟಿ.ಎಂ. ಕೃಷ್ಣ ಒಬ್ಬ ಸಾಧಾರಣ ವ್ಯಕ್ತಿಯಲ್ಲ. ಕೃಷ್ಣ ಅವರನ್ನು ಒಬ್ಬ ಸಂಗೀತಗಾರ ಅಥವಾ ಒಬ್ಬ ಗಾಯಕ ಅಂದರೆ ಅವರ ಬಹುಮುಖತ್ವಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಅವರು ತಾವು ಪ್ರದರ್ಶಕರಲ್ಲ ಎಂದು ಒಂದೆಡೆ ಹೇಳಿಕೊಂಡಿದ್ದಾರೆ. ಹಾಗಾದರೆ ಅವರನ್ನು ಹೇಗೆ ಅರ್ಥಮಾಡಿಕೊಳ್ಳುವುದು? ನಮ್ಮಲ್ಲಿ ಹಿಂದಿನಿಂದಲೂ ಸಾರ್ವಜನಿಕ ಅಥವಾ ಸಾಮುದಾಯಿಕ ಬುದ್ದಿಜೀವಿ ಎನ್ನಬಹುದಾದ ಸಂಪ್ರದಾಯ ಒಂದಿದೆ. ಸಾರ್ವಜನಿಕ ಬುದ್ದಿಜೀವಿ ಅನ್ನುವುದಕ್ಕೆ ಒಂದು ಸಿದ್ಧವ್ಯಾಖ್ಯೆ ಇಲ್ಲ. ಅದಕ್ಕೆ ಹಲವಾರು ವ್ಯಾಖ್ಯೆಗಳು ಸಾಧ್ಯ. ಅವುಗಳಲ್ಲಿ ನನಗೆ ಸೂಕ್ತ ಅನ್ನಿಸಿದ್ದು ಅಲನ್ ಲೈಟ್ಮನ್ ನೀಡಿರುವ ವ್ಯಾಖ್ಯೆ. ಅವರು ಸಾರ್ವಜನಿಕ ಬುದ್ದಿಜೀವಿಯ ಪಾತ್ರವನ್ನು ಕುರಿತು ಇತ್ತೀಚೆಗೆ ಒಂದು ಲೇಖನವನ್ನು ಬರೆದಿದ್ದಾರೆ. ಅವರೇ ಹೇಳುವಂತೆ ಸಾರ್ವಜನಿಕ ಬುದ್ದಿಜೀವಿ ಅನ್ನುವುದು ಇತ್ತೀಚಿನ ಪರಿಕಲ್ಪನೆಯಲ್ಲ. ರಾಲ್ಫ್ ಎಮರ್ಸನ್ 150 ವರ್ಷಗಳ ಹಿಂದೆ ಈ ಬಗ್ಗೆ ಮಾತನಾಡಿದ್ದ. ಅವನು ‘ಒಬ್ಬ ವ್ಯಕ್ತಿಯ’ ಪರಿಕಲ್ಪನೆಯನ್ನು ಮುಂದಿಡುತ್ತಾನೆ. ಒಬ್ಬ ವ್ಯಕ್ತಿ ಡಾಕ್ಟರ್, ಲಾಯರ್, ಇಂಜಿನಿಯರ್, ಸಂಗೀತಗಾರ ಏನೇ ಆಗಿದ್ದಿರಬಹುದು. ಆದರೆ ಅವನ ಚಿಂತನೆ, ಗ್ರಹಿಕೆ ಅವನ ವೃತ್ತಿಯನ್ನು ಮೀರಿರುತ್ತದೆ. ಈ ಒಬ್ಬ ಪರಿಪೂರ್ಣ ಮನುಷ್ಯ, ಮಾನವನ ಎಲ್ಲಾ ಸಾಧ್ಯತೆಗಳನ್ನು ಒಳಗೊಂಡಿರುತ್ತಾನೆ. ಇಂತಹ ‘ಒಬ್ಬ ವ್ಯಕ್ತಿಯ’ ಪರಿಕಲ್ಪನೆಯನ್ನು ರಾಲ್ಫ್ ಎಮರ್ಸನ್ 1837ರಲ್ಲೇ ಮುಂದಿಟ್ಟಿದ್ದ. ಈ ಪರಿಕಲ್ಪನೆಗೆ ರಾಜಕೀಯ ಆಯಾಮವನ್ನು ಇತ್ತೀಚೆಗೆ ಎಡ್ವರ್ಡ್ ಸಯೀದ್ ನೀಡಿದ. ಒಬ್ಬ ಸಾರ್ವಜನಿಕ ವ್ಯಕ್ತಿ ತನ್ನ ಕ್ಷೇತ್ರದ ವಿಷಯಕ್ಕೆ ಅಥವಾ ತನ್ನನ್ನು ಕಾಡುತ್ತಿರುವ ವಿಷಯಕ್ಕೆ ಮಾತ್ರ ತನ್ನನ್ನು ಸೀಮಿತಗೊಳಿಸಿಕೊಳ್ಳದೆ ಇಡೀ ಸಮಾಜವನ್ನು ಮಾನವಕುಲವನ್ನು ಗಮನದಲ್ಲಿಟ್ಟುಕೊಂಡು ಬರೆಯಬೇಕು, ಮಾತನಾಡಬೇಕು ಎನ್ನುವುದು ಸಯೀದ್ ಅವರ ಅಭಿಪ್ರಾಯವಾಗಿತ್ತು.
ಸಾರ್ವಜನಿಕ ವ್ಯಕ್ತಿ ತನ್ನ ಕೆಲಸವನ್ನು ಕೇವಲ ಚಿಂತನೆಗೆ ಮಿತಿಗೊಳಿಸಿಕೊಳ್ಳದೆ ಕ್ರಿಯೆಯಲ್ಲೂ ತೊಡಗಿಕೊಳ್ಳಬೇಕು ಎಂದು ಎಮರ್ಸನ್ ಅಭಿಪ್ರಾಯಪಡುತ್ತಾನೆ. ಇದನ್ನೆಲ್ಲಾ ಅವನು ಮಾಡುವುದು ಒಂದು ಸಮಾಜಕ್ಕೆ ತನಗಿರುವ ಇರುವ ಬದ್ಧತೆಗಾಗಿ ಅಲ್ಲ. ಅವನು ಸ್ವತಃ ತನಗೇ ಇರುವ ಹೊಣೆಗಾರಿಕೆಯಿಂದಾಗಿ (ಅಬ್ಲಿಕೇಷನ್). ಇದು ಕೃಷ್ಣ ಅವರ ವಿಷಯದಲ್ಲಿ ಬಹು ಮುಖ್ಯವಾಗುತ್ತದೆ. ಕೃಷ್ಣ ಅವರಿಗೆ ಸಂಬಂಧಿಸಿದಂತೆ ಹಲವು ವಿವಾದಗಳು ಇವೆ. ಅವರ ಬರವಣಿಗೆಗಳ ಪರಿಚಯವಿರುವ ನಮಗೆ ಈ ಎಲ್ಲಾ ವಿವಾದಗಳು ಗೊತ್ತಿರುವುದೆ. ಸಾಮಾನ್ಯವಾಗಿ ಅವರ ಬಗ್ಗೆ ಕೇಳುವ ಪ್ರಶ್ನೆಯೆಂದರೆ ಇವೆಲ್ಲಾ ಇವರಿಗೆ ಯಾಕೆ ಬೇಕು, ಬರೀ ಸಂಗೀತ ಹಾಡಿಕೊಂಡಿದ್ದರೆ ಸಾಲದೇ? ಇವೆಲ್ಲಾ ಯಾಕೆ ಬರೆಯಬೇಕು? ಇಲ್ಲಿ ಗಮನಿಸಬೇಕಾದ ಅಂಶ ಅಂದರೆ ಅಲನ್ ಲೈಟ್ಮನ್ ಹೇಳುವಂತೆ ಇವರೆಲ್ಲಾ ಸಮಾಜಕ್ಕಾಗಿ ಬರೆಯುತ್ತಿಲ್ಲ. ಇಲ್ಲಿ ಸಮಾಜ ಅಂದರೆ ಅದರಲ್ಲಿ ರಸಿಕರು, ಪತ್ರಿಕೆ, ದಿ ಹಿಂದೂ ಪತ್ರಿಕೆಯ ಸಾಮಾನ್ಯ ಓದುಗರು ಎಲ್ಲಾ ಸೇರಿಕೊಳ್ಳುತ್ತಾರೆ. ಇವರಿಗೆ ತಮ್ಮಷ್ಟಕ್ಕೇ ಒಂದು ಹೊಣೆಗಾರಿಕೆ ಇದೆ. ಅದಕ್ಕಾಗಿ ತಮಗೆ ಸರಿ ಅನ್ನಿಸಿದ್ದನ್ನು ಬರೆಯುತ್ತಾರೆ ಹಾಗೂ ಆ ಬಗ್ಗೆ ಮಾತನಾಡುತ್ತಾರೆ. ಈ ದೃಷ್ಟಿಯಿಂದ ಟಿ ಎಂ ಕೃಷ್ಣ ಅವರನ್ನು ಸಾರ್ವಜನಿಕ ಬುದ್ದಿಜೀವಿ ಅಂತ ಕರೆಯುವುದು ಹೆಚ್ಚು ಸೂಕ್ತ. ಅಲನ್ ಲೈಟ್ಮನ್ ಸಾರ್ವಜನಿಕೆ ಬುದ್ದಿಜೀವಿಯ ಪಾತ್ರವನ್ನು ವಿವರಿಸುತ್ತಾ ಮೂರು ಹಂತದ ಸಾಮುದಾಯಿಕ ಬುದ್ದಿಜೀವಿಗಳನ್ನು ಗುರುತಿಸುತ್ತಾರೆ.
1. ಮೊದಲ ಹಂತದ ಸಾರ್ವಜನಿಕ ಬುದ್ದಿಜೀವಿಗಳು. ತಮ್ಮ ವಿಷಯದಲ್ಲಿ ಪರಿಣತರು. ಅವರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಮಾತನಾಡುತ್ತಾ ಬರೆಯುತ್ತಾ ಹೋಗುತ್ತಾರೆ. ಇಂತಹ ಕೆಲವರು ನಮ್ಮ ಸುತ್ತಮುತ್ತ, ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಇತರೆಡೆಗಳಲ್ಲಿ ಇದ್ದಾರೆ.
2. ಎರಡನೆಯ ಹಂತದ ಸಾರ್ವಜನಿಕ ಬುದ್ದಿಜೀವಿಗಳು ಸ್ವಲ್ಪ ವಿಸ್ತರಿಸಿಕೊಳ್ಳುತ್ತಾರೆ. ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾರೆ ಜೊತೆಗೆ ಅಲ್ಲಿಂದ ಮುಂದುವರೆದು ಅದು ಸಮಾಜದ ಮೇಲೆ ಮಾಡುವ ಪರಿಣಾಮದ ಬಗ್ಗೆಯೂ ಮಾತನಾಡುತ್ತಾರೆ. ಅವರೊಬ್ಬರು ಅರ್ಥಶಾಸ್ತ್ರಜ್ಞರಿದ್ದಿರಬಹುದು ಅವರು ಕೇವಲ ಮಾನಿಟರಿ ಪಾಲಿಸಿ ಅಥವಾ ಫಿಸ್ಕಲ್ ಪಾಲಿಸಿಯ ಬಗ್ಗೆ ಮಾತನಾಡದೆ ಹಣದುಬ್ಬರದ ಬಗ್ಗೆಯೋ, ಒಬ್ಬ ಗೃಹಿಣಿಯ ಮೇಲೆ ಅದು ಬೀರಬಹುದಾದ ಪರಿಣಾಮದ ಬಗ್ಗೆಯೋ ಮಾತನಾಡುತ್ತಾರೆ. ಇಂತಹವರು ಸಂಗೀತ, ಸಾಹಿತ್ಯ ಎಲ್ಲಾ ಕ್ಷೇತ್ರದಲ್ಲೂ ಇರುತ್ತಾರೆ.
3. ಇನ್ನೂ ಮೂರನೆಯ ಹಂತ. ಇದರಲ್ಲಿ ಸಂಬಂಧಪಟ್ಟವರು ತಮ್ಮ ಕ್ಷೇತ್ರದಲ್ಲಿ ಹೆಸರು ಮಾಡಿರುತ್ತಾರೆ. ಅವರಿಗೊಂದು ಸ್ಥಾನಮಾನ ಸಿಕ್ಕಿರುತ್ತದೆ. ಜನಪ್ರಿಯರಾಗಿರುತ್ತಾರೆ. ಬೇರೆ ಕ್ಷೇತ್ರಗಳಿಗೆ ಸಂಬಂದಿಸಿದಂತೆಯೂ ಜನ ಅವರ ಅಭಿಪ್ರಾಯವನ್ನು ಕೇಳುತ್ತಾರೆ. ಉದಾಹರಣೆಗೆ ಐನ್ಸ್ಟೈನ್ ಅವರನ್ನು ಜನ ರಾಜಕೀಯ ಪರಿಸ್ಥಿತಿ, ಶಿಕ್ಷಣ, ಧರ್ಮ ಇತ್ಯಾದಿ ಬೇರೆ ಬೇರೆ ವಿಷಯಗಳ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ. ನಾವು ಅವರು ಗಾಂಧೀಜಿ ಮುಂತಾದ ವಿಷಯಗಳ ಬಗ್ಗೆ ಮಾತನಾಡಿರುವುದನ್ನು ಕೇಳಿದ್ದೇವೆ. ಅವರು ರಾಜಕೀಯ ಚಳುವಳಿಗೆ ಸಂಬಂಧಿಸಿದಂತೆ ಪರಿಣತರೇನು ಅಲ್ಲ. ಆದರೆ ಅವರು ಸಾರ್ವಜನಿಕ ಬುದ್ದಿಜೀವಿಯಾಗಿರುವುದರಿಂದ ಅವರ ಅಭಿಪ್ರಾಯ ಕೇಳುತ್ತಾರೆ. ಐನ್ಸ್ಟೈನ್ ಅ ಕುರಿತು ಮಾತನ್ನೂ ಆಡಿದ್ದಾರೆ.
ನಾನು ಮುಂದುವರೆದು ಕೃಷ್ಣ ಅವರನ್ನು ಇನ್ನೂ ಒಂದು ಹೆಚ್ಚಿನ ಮಟ್ಟದಲ್ಲಿ – ಅಂತಹದೊಂದಕ್ಕೆ ಅವಕಾಶವಿದ್ದರೆ- ಅಂದರೆ ನಾಲ್ಕನೇ ಹಂತದಲ್ಲಿ ಇಡಲು ಬಯಸುತ್ತೇನೆ. ಕೃಷ್ಣ ಅವರನ್ನು ಅಭಿಪ್ರಾಯ ಕೇಳುವುದೂ ಬೇಕಿಲ್ಲ. ಅವರೇ ಸ್ವಂತ ಪ್ರೇರಣೆಯಿಂದ ಅಭಿವ್ಯಕ್ತಿಸುತ್ತಾರೆ. ಅಲನ್ ಲೈಟ್ಮನ್ ಹೇಳುವಂತಹ ಮೂರು ಹಂತಗಳನ್ನು ಮೀರಿಕೊಂಡ ಸ್ವಪ್ರೇರಣೆಯಿಂದ ಪ್ರತಿಕ್ರಿಯಿಸಬಲ್ಲ ನಾಲ್ಕನೇ ಹಂತದ ಸಾರ್ವಜನಿಕ ಬುದ್ದಿಜೀವಿ ವರ್ಗ ಸಾಧ್ಯವಾಗಬೇಕು. ಕೃಷ್ಣ ಅವರನ್ನು ಈ ನಾಲ್ಕನೇ ಹಂತದ ಸಾಮುದಾಯಿಕ ಬುದ್ಧಿಜೀವಿ ಎಂದು ಕರೆಯುವುದು ಹೆಚ್ಚು ಸಮಂಜಸವೆನಿಸುತ್ತದೆ. ಅವರು ತಮ್ಮನ್ನು ಕಾಡಿದ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಯಾರ ಆಹ್ವಾನವೂ ಇಲ್ಲದೆ ಸ್ವಪ್ರೇರಣೆಯಿಂದ ಪ್ರತಿಕ್ರಿಯಿಸಿದ್ದಾರೆ. ಹಲವು ಲೇಖನಗಳನ್ನು ಬರೆದಿದ್ದಾರೆ. ಸಹಸ್ಪಂದನದಲ್ಲಿ ಅವರ ಹಲವು ಪ್ರಮುಖ ಲೇಖನಗಳ ಅನುವಾದವಿದೆ. ಅವೆಲ್ಲವೂ ಸಂಗೀತಕ್ಕೆ ಸಂಬಂಧಿಸಿದ ಲೇಖನಗಳು ಮಾತ್ರ. ಆದರೆ ಕೃಷ್ಣ ಅವರು ಇತರ ವಿಷಯಗಳ ಬಗ್ಗೆಯೂ ಬರೆದಿದ್ದಾರೆ. 2013ರಲ್ಲಿ ಭಾರತಕ್ಕೆ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಗಿಂತ ಉತ್ತಮ ಪ್ರಧಾನಿ ಬೇಕು ಎಂದು ಬರೆದಿದ್ದರು. ಇತ್ತೀಚೆಗೆ ಅಂದರೆ ಒಂದು ವರ್ಷವಾದ ಮೇಲೆ ಎಕಾನಮಿಸ್ಟ್ ಪತ್ರಿಕೆ ಕೂಡ ಅದೇ ಅಭಿಪ್ರಾಯವನ್ನು ಪ್ರತಿಧ್ವನಿಸಿದೆ. ಕೃಷ್ಣ ಅವರು ಸ್ವತಃ ಪತ್ರಿಕೋದ್ಯಮಿಯಲ್ಲ ಹಾಗೂ ರಾಜಕೀಯ ಚಿಂತಕರೂ ಅಲ್ಲ ಹಾಗಿದ್ದಾಗ್ಯೂ ಇಂತಹ ಒಂದು ಅಭಿಪ್ರಾಯವನ್ನು ಮುಂದಿಡುವುದು ಅವರಿಗೆ ಸಾಧ್ಯವಾಗಿತ್ತು.
ಒಟ್ಟಾರೆಯಾಗಿ ಸಾರ್ವಜನಿಕ ಬುದ್ದಿಜೀವಿ ಸಂಪ್ರದಾಯ ಬೆಳೆಯಬೇಕು. ಅದಕ್ಕೆ ಹೆಚ್ಚಿನ ಅವಕಾಶ ಸಿಗಬೇಕು. ಮೈಸೂರು ಇಂತಹ ಒಂದು ಸಾರ್ವಜನಿಕ ಬೌದ್ಧಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಬಲ್ಲ ವಿಶಿಷ್ಟ ಸ್ಥಳ. ಇಂದು ಸಾರ್ವಜನಿಕವಾಗಿ ಚಚರ್ಿಸಬೇಕಾದ ಹಲವಾರು ಪ್ರಮುಖ ವಿಷಯಗಳಿವೆ. ಆದರೆ ಅವುಗಳನ್ನು ಹತ್ತಿಕ್ಕಲಾಗಿದೆ. ಯುವಜನತೆ ಈ ಸಾರ್ವಜನಿಕ ವಿಚಾರವಾದಕ್ಕೆ ತೆರೆದುಕೊಳ್ಳುವಂತಾಬೇಕು. ಇಂತಹ ಚರ್ಚೆಗಳು ಹೆಚ್ಚೆಚ್ಚು ಬೆಳೆಯಬೇಕು.
( ರಾಗಮಾಲದ ಪ್ರಕಟಣೆಗಳಿಗೆ ಸಂಪರ್ಕಿಸಿ : ಟಿ ಎಸ್ ವೇಣುಗೋಪಾಲ್, ಸಿ ಎಚ್ 73, 7ನೇ ಮುಖ್ಯ ರಸ್ತೆ, ಸರಸ್ವತಿಪುರಂ, ಫೋನ್: 9900082773. )
ಚಿತ್ರಗಳು : Bala’s Clicks , ಟಿ ಎಸ್ ವೇಣುಗೋಪಾಲ್
ನಿವೃತ್ತ ಐ ಎ ಎಸ್ ಅಧಿಕಾರಿಗಳು , ಸಂಗೀತ ಪ್ರೇಮಿ .
Beautiful !! ಕೃಷ್ಣ ಅವರನ್ನು ಕಾಯಕಯೋಗದ ಬುದ್ಧಿಜೀವಿ ಎಂದರೆ ಹೆಚ್ಚು ಸೂಕ್ತ.