ಗುಲ್ಜಾರ್ ಹುಟ್ಟುಹಬ್ಬಕ್ಕೆ ಮೂರು ಕವಿತೆಗಳು …

GulzarDraw

ತನ್ನ ಐದು ದಶಕಗಳ ವೃತ್ತಿ ಜೀವನದಲ್ಲಿ ಜನಪ್ರಿಯ ಹಿಂದಿ ಚಲನಚಿತ್ರ ಸಂಗೀತಕ್ಕೆ ಕಾವ್ಯದ ಸಂವೇದನೆಯನ್ನು ಒದಗಿಸಿಕೊಟ್ಟ  ಸಾಹಿತಿ ಗುಲ್ಜಾರ್  ನಿಜ ನಾಮ “ಸಂಪೂರಣ್ ಸಿಂಗ್ ಕಾಲ್ರಾ”. ಗೀತೆ ರಚನೆಕಾರ , ಚಿತ್ರ ಸಾಹಿತಿ , ನಿರ್ದೇಶಕನಾಗಿ ತಮ್ಮನ್ನು ತೊಡಗಿಸಿಕೊಂಡ  ಗುಲ್ಜಾರ್  ಸಾಹಿತ್ಯ ಮತ್ತು ಸಿನೆಮಾವನ್ನು ಬೆಸೆದ ಪರಂಪರೆಯಲ್ಲಿ ಪ್ರಮುಖ ಹೆಸರು . 

೧೯೬೩ರಲ್ಲಿ ಬಿಡುಗಡೆಯಾದ ಬಿಮಲ್ ರಾಯ್ ಅವರ ಬಂದಿನಿ ಚಿತ್ರಕ್ಕೆ ಬರೆದ ‘ಮೊರ ಗೋರ ಆಂಗ್ ಲೈ ಲೆ ‘  ಹಾಡಿನ ಸಾಹಿತ್ಯದಿಂದ ಆರಂಭಗೊಂಡು  ಆಸ್ಕರ್ ವಿಜೇತ ಸ್ಲಮ್ ಡ್ಯಾಗ್ ಮಿಲೇನಿಯರ್ ನ ‘ ಜೈ ಹೊ’ ತನಕ ,ಎಪ್ಪತ್ತು ದಾಟಿದ ಬಳಿಕವೂ ‘ದಿಲ್ ತೋ ಬಚ್ಚಾ ಹೈ ಜೀ’ , ‘ಕಜ್‌ರಾರೇ ಕಜ್‌ರಾರೇ’  , ‘ಬೀಡಿ ಜಲೈಲೆ’  ಹೀಗೆ ತಾರುಣ್ಯವನ್ನು ನೆನಪಿಸುತ್ತಲೇ ಬರೆಯುತ್ತಿರುವ ಗುಲ್ಜಾರ್   ಇವತ್ತಿಗೂ ಕೈಯೊಳಗಿನ ಲೇಖನಿ ಕೆಳಗಿಟ್ಟಿಲ್ಲ. 

ಇಂದು ಗುಲ್ಜಾರ್ ಎಂಬತ್ತೆರಡನೇ ಹುಟ್ಟುಹಬ್ಬ . ಸಂವರ್ತ ‘ಸಾಹಿಲ್’ ಈ ವಿಶೇಷ ದಿನಕ್ಕೆ ಗುಲ್ಜಾರರ ಮೂರು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ . 

divderspa

tutibicchida ondತುಟಿ ಬಿಚ್ಚದ ಒಂದು ಗಾಯದಂತಿದೆ
ಈ ಬದುಕೇ ಒಂದು ಕಾವ್ಯದಂತಿದೆ.

ರಕ್ತ ತೊಟ್ಟಿಕ್ಕಿದರೆ ಗಾಯ ಎಂದೆನಿಸುತ್ತದೆ,
ಇಲ್ಲವಾದಲ್ಲಿ ಪ್ರತಿ ತರಚು ಗಾಯನದಂತಿದೆ.

ಗೆಳೆಯರ ನಡುವೆ ನಾ ತೀರಾ ಒಬ್ಬಂಟಿ,
ಒಂಟಿನಂತವೇ ಗೆಳೆಯರ ಬಳಗದಂತಿದೆ.

ನನ್ನ ಪ್ರತಿ ಹೆಜ್ಜೆಯೂ ನನ್ನ ನೆರಳ ಮೇಲೆ,
ಕಾಲ ಹುಣ್ಣಿಗೆ ಸ್ವಲ್ಪ ಆರಾಮವಾದಂತಿದೆ.

ಚಂದ್ರನ ಹಣೆ ಮುಟ್ಟಿ ನೋಡಿ ಒಮ್ಮೆ,
ಈ ರಾತ್ರಿಗೆ ಚಳಿ-ಜ್ವರ ಹಿಡಿದಂತಿದೆ.

ಬದುಕಿರಲೇ ಬೇಕೆಂಬ ಅಪ್ಪಣೆ ಪಾಲಿಸುವಾಗ,
ಕ್ಷಣ ಕ್ಷಣ ಸಾಯುವುದು ಕಡ್ಡಾಯ ಎಂಬಂತಿದೆ.


chandra nanya

 

 

ಚಂದ್ರನ ನಾಣ್ಯವನ್ನು
ಆಕಾಶಕ್ಕೆ ಚಿಮ್ಮಿಸಿದ್ದೇನೆ ನೋಡು
ಇನ್ನೇನು ಮರಳುತ್ತದೆ,
ಹಿಡಿ!
ಹೆಡ್ಸ್ ಬಿದ್ದರೆ
ನೀನು ಮರಳಿ ಬರುತ್ತೀಯ
ಟೈಲ್ಸ್ ಆದರೆ
ನಾನು ಕಾಯುತ್ತೇನೆ ನಿನಗಾಗಿ
ಏಕೆಂದರೆ
ತೆರಳಿದ್ದೆಲ್ಲಾ ಕೊನೆಗೊಮ್ಮೆ ಮರಳುತ್ತದೆ.
ಗುರ್ತ್ವಾಕರ್ಷಣೆಯ ನಿಯಮವದು: ಪ್ರೀತಿಯಲ್ಲಿ.

 


hejje-01

ಹಗೂರ
ಹೆಜ್ಜೆ ಹಾಕು.
ಇನ್ನೂ

ಗೂ

ಮತ್ತೂ
ನಿ
ಧಾ
ನ.

ನೋಡು, ಎಚ್ಚರದಿಂದ ಕಾಲಿಡು
ಹೆಜ್ಜೆ ಸಪ್ಪಳ ಸದ್ದು ಮಾಡದಿರಲಿ ಜೋರು
ಗಾಜಿನ ಕನಸುಗಳು ಒಂಟಿತನದ ಮೇಲೆ ಹರಡಿವೆ
ಕನಸುಗಳು ಒಡೆಯದಿರಲಿ, ಎಚ್ಚರಗೊಳ್ಳದಿರಲಿ

 

ಎಚ್ಚರಗೊಂಡರೆ
ಕನಸು
ಇಲ್ಲವಾಗುವುದು.


ಗುಲ್ಜಾರ್ ಚಿತ್ರ   : ಶರೀಫ್ ಸಾಲೆತ್ತೂರ್
ಕವನ ಚಿತ್ರಗಳು : ಮಹಂತೇಶ್  ದೊಡ್ಡಮನಿ

ಪ್ರತಿಕ್ರಿಯಿಸಿ