ವರ್ಷ ಸಂಪುಟ ಮುನ್ನುಡಿ – ವರ್ಷ ಭೈರವ

ಋತುಮಾನದ ವರ್ಷ ಸಂಪುಟಕ್ಕೆ ಮುನ್ನುಡಿಯಾಗಿ ಸಿಕ್ಕಿದ್ದು ಕುವೆಂಪುರವರ ಈ ಪದ್ಯ. ಹಿರಿಯರಾದ ಎ‌ಚ್ ಎಸ್ ರಾಘವೇಂದ್ರ ರಾವ್ ನಮಗಾಗಿ ಇದನ್ನ ಓದಿದ್ದಾರೆ. ಸುಮಾರು ನೂರು ವರುಷದ ಹಿಂದಿನ ಈ ಪದ್ಯದಲ್ಲಿ ಮಳೆಯ ರುದ್ರ ನರ್ತನವನ್ನು ಕುವೆಂಪು ಪದಗಳಲ್ಲಿ ಹಿಡಿದಿಟ್ಟ ರೀತಿ ಅನನ್ಯ.

k3
ಕದ್ದಿಂಗಳು: ಕಗ್ಗತ್ತಲು
ಕಾರ್ಗಾಲದ ರಾತ್ರಿ.
ಸಿಡಿಲ್ಮಿಂ‌ಚಿಗೆ ನಡುಗುತ್ತಿದೆ
ಪರ್ವತ ವನಧಾತ್ರಿ.
ತುದಿಯಿಲ್ಲದೆ ಮೊದಲಿಲ್ಲದೆ
ಹಿಡಿದಂಬರವನು ತಬ್ಬಿದೆ
ಕಾದಂಬಿನಿ ರಾಶಿ;
ನಿರ್ದಯ ಕಠಿಣಾಘಾತದಿ
ಕುಂಭಿನಿಯನು ಅಪ್ಪಳಿಸಿದೆ
ಘೀಳಿಟ್ಟುರೆ ಭೋರೆನ್ನುತೆ
ಬಿರುಗಾಳಿಯು ಬೀಸಿ !

 

ಹೊಂಬಳ್ಳಿಯು ಹೊಮ್ಮಿದವೊಲು
ಥಳ್ಳೆನೆ ಮುಗಿಲಂಚು,
ಇರುಳಲಿ ಹಗಲಿಣುಕಿದವೊಲು
ಹಾವ್ನಾಲಗೆ ಮಿಂಚು
ನೆಕ್ಕುತಲಿದೆ ಕತ್ತಲೆಯನು;
ಕುಕ್ಕುತಲಿದೆ ಬುವಿಗಣ್ಣನು
ಮಿಂಚಕ್ಕಿಯ ಚಂಚು!
ಆಕಾಶವೆ ನೀರಾಯ್ತೆನೆ
ಸುರಿಯುತ್ತಿದೆ ಭೋರ್ಭೋರನೆ
ಮುಂಗಾರ್ಮಳೆ ಧಾರೆ;
ಲಯ ಭೀಷಣ ಮಳೆ ಭೈರವ
ಮೈದೋರಲು ಮರೆಯಾಗಿವೆ
ಭಯದಲಿ ಶಶಿ ತಾರೆ!

Kuvempu1

ಚಿತ್ರ : Kamat’s Potpourri


ಲಯ ರುದ್ರನ ಜಯ ಡಿಂಡಿಮ
ಘನ ವಜ್ರದ ರಾವ;
ಭವ ವಿಪ್ಲವಕರ ಭೈರವ
ವರ ತಾಂಡವ ಭಾವ !
ದಿಗ್ದಿಕ್ಕಿಗೆ ಅದೋ ಹೊಕ್ಕಿದೆ
ಕಾರ್ಮುಗಿಲಿನ ಕೇಶ !
ಸಿಡಿಲ್ಮಿಂಚಲು ಹೊಮ್ಮುತ್ತಿದೆ
ಮಳೆ ಭೈರವ ರೋಷ !
ಮಳೆಯೆಂಬುದು ಬರಿ ಸುಳ್ಳಿದು !
ಮಳೆಯಲ್ಲುದು! ಮಳೆಯಲ್ಲಿದು!
ಪ್ರಲಯದ ಆವೇಶ!

 

  • ಕುವೆಂಪು 

 

 

 

 

[ ವನ ಧಾತ್ರಿ – ಅರಣ್ಯ ಭೂಮಿ ; ಕದ್ದಿಂಗಳು – ಕಪ್ಪು ಚಂದ್ರ ; ಕಾರ್ಗಾಲ – ಮಳೆಗಾಲ ; ಕಾದಂಬಿನಿ -ಮೋಡ ; ಕುಂಭಿನಿ – ಭೂಮಿ ; ಚಂಚು – ಕೊಕ್ಕು ; ವಜ್ರದ ರಾವ – ಸಿಡಿಲಿನ ಶಬ್ದ ]

One comment to “ವರ್ಷ ಸಂಪುಟ ಮುನ್ನುಡಿ – ವರ್ಷ ಭೈರವ”

ಪ್ರತಿಕ್ರಿಯಿಸಿ