ಕ್ರತಿ:ಗಾಂಧಿ ಹೋದರು:ನಮಗೀಗ ದಿಕ್ಕು ತೋರುವವರು ಯಾರು
ಹಿಂದಿ ಮೂಲ:ಅನಾಮಧೇಯ
ಸಂಪಾದನೆ ಮತ್ತು ಇಂಗ್ಲಿಷ್ ಅನುವಾದ:ಗೋಪಾಲಕ್ರಷ್ಣ ಗಾಂಧಿ ಮತ್ತು ರೂಪರ್ಟ್ ಸ್ನೆಲ್
ಕನ್ನಡಕ್ಕೆ:ಚಂದ್ರಶೇಖರ ತಾಳ್ಯ
ಪ್ರ:ಸಿರಿವರ ಪ್ರಕಾಶನ,ಬೆಂಗಳೂರು
ಪುಟಗಳು:೧೪೦
ಬೆಲೆ:ರೂ ೧೦೦
ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಮಹಾತ್ಮಾ ಗಾಂಧಿಯವರ ಮೊಮ್ಮಗ ಗೋಪಾಲಕ್ರಷ್ಣ ಗಾಂಧಿ ಅವರು,ಗಾಂಧಿ ಹತ್ಯೆಯಾದ ನಂತರ ಗಾಂಧಿ ಅವರ ಅನುಯಾಯಿಗಳೆಲ್ಲ ಸೇವಾ ಗ್ರಾಮದಲ್ಲಿ ಸಭೆ ಸೇರಿ ನಡೆಸಿದ ಸಂವಾದಗಳ ಲಿಖಿತ ಹಿಂದಿ ಭಾಷಾ ದಾಖಲೆಯನ್ನು ಪತ್ತೆ ಮಾಡಿ ೫೫ ವರ್ಷಗಳ ನಂತರ ಸಂಪಾದಿಸಿ,ರೂಪರ್ಟ್ ಸ್ನೆಲ್ ಅವರೊಂದಿಗೆ ಅನುವಾದಿಸಿ ಇಂಗ್ಲಿಷ್ ನಲ್ಲಿ ಪ್ರಕಟಿಸಿದರು.ಈ ಕ್ರತಿಯನ್ನು ‘ಗಾಂಧಿ ಹೋದರು:ನಮಗೀಗ ದಿಕ್ಕು ತೋರುವವರು ಯಾರು’ಎಂಬ ಹೆಸರಿನಲ್ಲಿ ಚಂದ್ರಶೇಖರ ತಾಳ್ಯ ಕನ್ನಡಕ್ಕೆ ಅನುವಾದಿಸಿದ್ದಾರೆ.೧೯೪೮ರ ಫೆಬ್ರವರಿ೨ರಂದು ಗಾಂಧಿ ನಡೆಸಲು ಉದ್ದೇಶಿಸಿದ್ದ ಈ ಸಂವಾದವು ಗಾಂಧಿ ಹತ್ಯೆಯ ಕಾರಣದಿಂದ ಮುಂದೂಡಲ್ಪಟ್ಟು,೧೯೪೮ರ ಮಾರ್ಚ್ ನಲ್ಲಿ ೫ ದಿನಗಳ ಕಾಲ ಈ ಗೋಷ್ಠಿಯು ನಡೆಯುತ್ತದೆ.ಶ್ರೀಮನ್ನಾರಾಯಣ ಅಗರವಾಲ್,ಬಿ.ಬಿ.ಅಮ್ತುಸ್ಸಲಾಮ್,ಆಶಾ
“ದ್ವೇಷದ ಹಾದಿಯಲ್ಲಿ ಬಂದ ಆ ಮೂರು ಬುಲೆಟ್ ಗಳನ್ನು ಗಾಂಧಿ ತಡೆದು ನಿಲ್ಲಿಸಿದರು” ಎಂಬ,ಗಾಂಧಿಯವರ ದಾರ್ಶನಿಕ ಮೊಮ್ಮಗ ರಾಮಚಂದ್ರ ಗಾಂಧಿಯವರು ಗಾಂಧಿ ಹತ್ಯೆಯನ್ನು ನಿರೂಪಿಸಿದ ಮಾತುಗಳಿಂದ ಪ್ರಾರಂಭವಾಗುವ ಕ್ರತಿಯಲ್ಲಿ ಎಲ್ಲಿಯೂ ಗಾಂಧಿ ಅಸ್ತಿತ್ವ ಇಲ್ಲ.ಆದರೆ ಇಡೀ ಕ್ರತಿಯ ಚಾಲನಾ ಶಕ್ತಿಯಾಗಿ ಇರುವುದು ಗಾಂಧಿಯೇ.ಇಲ್ಲಿನ ಸಂವಾದಗಳು ೧೯೪೮ರ ಘಟನಾವಳಿಗಳ ಹಿನ್ನೆಲೆಯಲ್ಲಿದೆ.ಆದರೆ ಸಂವಾದದ ತಾತ್ವಿಕತೆ ಕಾಲಮಾನದ ಎಲ್ಲೆಯನ್ನು ಮೀರಿ ಪ್ರಸ್ತುತತೆಯನ್ನು ಪಡೆಯುತ್ತದೆ.ಉದಾಹರಣೆಗೆ ೧೯೪೮ರಲ್ಲಿ ಪ್ಯಾರೇಲಾಲ್,”ಕಾಂಗ್ರೆಸ್ಸಿಗಿರುವ ದೊಡ್ಡ ಸಾಮರ್ಥ್ಯ ಎಂದರೆ ಅದರ ನೈತಿಕತೆ”ಎನ್ನುತ್ತಾರೆ.೧೯೪೮ಕ್ಕೆ ಗಂಭೀರವಾಗಿದ್ದ ಈ ಮಾತು ಇಂದು ಭಾರತದ ಬಹುದೊಡ್ಡ ರಾಷ್ಟ್ರೀಯ ಜೋಕ್ ಆಗಿ ಕೇಳಿಸಲೂ ಬಹುದು.ಆದರೆ ನೈತಿಕ ಶಕ್ತಿಯ ಕುಸಿತವೇ ಸರ್ವನಾಶದ ಬೀಜ ಎಂಬುದು ಸಾರ್ವಕಾಲಿಕ ಸತ್ಯ.ಪ್ರೌಢದೇವರಾಯನ ಕಾಲಕ್ಕೆ ನೈತಿಕ ಶಕ್ತಿಯಿಂದ ಸದ್ರಢವಾಗಿದ್ದ ವಿಜಯನಗರ ಸಾಮ್ರಾಜ್ಯ,ಕ್ರಷ್ಣದೇವರಾಯನ ಕಾಲಕ್ಕೆ ನೈತಿಕತೆಯ ಕುಸಿತಕ್ಕೆ ಸಿಲುಕಿ,ಹೇಗೆ ಹಾಳು ಹಂಪೆಯಾಯಿತು ಎಂಬುದು ಇತಿಹಾಸ.ಕಾಂಗ್ರೆಸ್ ರಾಜಕೀಯ ಅಧಿಕಾರದಿಂದ ದೂರವಿದ್ದು ನೈತಿಕತೆಯನ್ನು ಅಭಿವ್ರದ್ಧಿಪಡಿಸುವ ಲೋಕಸೇವಾ ಸಂಘಟನೆ ಆಗಬೇಕು ಎಂಬ ಗಾಂಧಿಯ ಮಾತನ್ನು ಉಲ್ಲೇಖಿಸುವ ಪ್ಯಾರೇಲಾಲ್ ಅವರ ಮಾತುಗಳಲ್ಲಿ ಗಾಂಧಿ ಯಾವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯಾನಂತರದಲ್ಲಿ ಕಾಂಗ್ರೆಸ್ ನ ಪಾತ್ರವನ್ನು ಕಲ್ಪಿಸಿಕೊಂಡಿದ್ದರು ಎಂಬುದು ಇಂದಿನ ತಲೆಮಾರಿಗೆ ಸ್ಪಷ್ಟವಾಗಿ ಮನವರಿಕೆ ಆಗುತ್ತದೆ.
ಮನಷ್ಯ ತನ್ನ ಅಸ್ತಿತ್ವಕ್ಕೆ ಸಂಚಕಾರ ಬಂದಾಗ ಹೇಗೆ ವರ್ತಿಸುತ್ತಾನೆ ಎಂಬುದಕ್ಕೆ ಪ್ಯಾರೇಲಾಲ್ ಅವರ ವಿಶ್ಲೇಷಣೆ ಸಾರ್ವಕಾಲಿಕ.ಮತೀಯ ಆಧಾರದಲ್ಲಿ ದೇಶ ವಿಭಜನೆ ಆಗುತ್ತದೆ.ಮತ ಧರ್ಮವೇ ಅಂದಿನ ಸಮಾಜದ ನಿಯಂತ್ರಕವಾದಂತೆಯೇ ನಾವು ಇತಿಹಾಸವನ್ನು ಅರ್ಥ ಮಾಡಿಕೊಂಡಿದ್ದೇವೆ.ಆದರೆ ಪಾಕಿಸ್ತಾನದಿಂದ ಬಂದ ಹಿಂದೂಗಳು ನಿರಾಶ್ರಿತರಾಗಿ ಕೊನೆಗೆ ದೆಹಲಿಯಲ್ಲಿರುವ ಹಿಂದೂಗಳ ಮೇಲೆಯೇ ಆಕ್ರಮಣ ಶುರು ಮಾಡುತ್ತಾರೆ.ದೆಹಲಿಯ ಹಿಂದೂಗಳು ಪಾಕಿಸ್ತಾನದಿಂದ ಬಂದ ಹಿಂದೂಗಳಿಗಿಂತ,ತಮ್ಮೊಂದಿಗಿದ್ದ ಮುಸ್ಲಿಮರೇ ಎಷ್ಟೋ ವಾಸಿ ಎಂಬ ತೀರ್ಮಾನಕ್ಕೆ ಬಂದ ಸಂಗತಿಯನ್ನು ಪ್ಯಾರೇಲಾಲ್ ವಿವರಿಸುತ್ತಾರೆ.ವೈಯಕ್ತಿಕ ಹಿತದ ಪ್ರಶ್ನೆ ಉಳಿದೆಲ್ಲ ಪ್ರಶ್ನೆಗಳನ್ನು ಬದಿಗೆ ಸರಿಸಿ ಹೇಗೆ ಮಾನವ ವರ್ತನೆಯನ್ನು ರೂಪಿಸುತ್ತದೆ ಎಂಬ ಈ ಅಂಶ ಸಾರ್ವಕಾಲಿಕವಾಗಿದೆ.
೧೯೪೮ರಲ್ಲಿ ಪ್ಯಾರೇಲಾಲ್,”ಕಾಂಗ್ರೆಸ್ಸಿಗಿರುವ ದೊಡ್ಡ ಸಾಮರ್ಥ್ಯ ಎಂದರೆ ಅದರ ನೈತಿಕತೆ”ಎನ್ನುತ್ತಾರೆ.೧೯೪೮ಕ್ಕೆ ಗಂಭೀರವಾಗಿದ್ದ ಈ ಮಾತು ಇಂದು ಭಾರತದ ಬಹುದೊಡ್ಡ ರಾಷ್ಟ್ರೀಯ ಜೋಕ್ ಆಗಿ ಕೇಳಿಸಲೂ ಬಹುದು.ಆದರೆ ನೈತಿಕ ಶಕ್ತಿಯ ಕುಸಿತವೇ ಸರ್ವನಾಶದ ಬೀಜ ಎಂಬುದು ಸಾರ್ವಕಾಲಿಕ ಸತ್ಯ.
ಸಂವಾದ ನಡೆಸುವ ಎಲ್ಲರೂ ಹಂತ ಹಂತವಾಗಿ ಆಚಾರ್ಯ ವಿನೋಬಾ ಅವರನ್ನೇ ತಮ್ಮನ್ನು ಮುನ್ನಡೆಸುವ ನಾಯಕನಾಗಿ ಸ್ವೀಕರಿಸುತ್ತಾ ಹೋಗುವುದು,ವಿನೋಬಾ ತನ್ನನ್ನು ತಾನು ಕಂಡುಕೊಳ್ಳುವುದು ಸರಿಯಾದ ನಾಯಕತ್ವ ಎಂದರೆ ಏನು ಎಂಬುದನ್ನು ನಮಗೆ ಅರ್ಥ ಮಾಡಿಸುತ್ತದೆ.ಗಾಂಧಿಗಿಂತ ವಿನೋಬಾ ನಮಗೆ ನೈತಿಕ ಶಕ್ತಿ ಇದ್ದ ಹತ್ತಿರದ ನಾಯಕ.ವಿನೋಬ ಗಾಂಧಿಯಷ್ಟು ಸಂಕೀರ್ಣ ಅಲ್ಲದಿರುವುದರಿಂದ ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಸುಲಭ.ಸಂವಾದದಲ್ಲಿ ಎಲ್ಲರೂ ಗಾಂಧಿಗೆ ಸಮಾನವಾಗಿ ಯಾರೂ ಬರಲಾರರು ಎನ್ನುತ್ತಾರೆ.ಈ ಮಾತುಗಳು ಗಾಂಧಿ ನಾಯಕತ್ವದ ಶಕ್ತಿಯ ಮಟ್ಟವನ್ನು ಅರ್ಥ ಮಾಡಿಸುವುದಿಲ್ಲ.ಆದರೆ ವಿನೋಬಾ,”ನಾನು ಗಾಂಧೀಜಿಯವರಿಗೆ ತುಂಬಾ ಹತ್ತಿರದವನಾದರೂ ನಾನು ಕೇವಲ ಅವರಿಂದ ಸಾಕಲ್ಪಟ್ಟ ಒಂದು ಪ್ರಾಣಿ”ಎನ್ನುತ್ತಾರೆ.ಇದನ್ನು ಅವರು ಭಾವುಕರಾಗಿ ಹೇಳುವುದಿಲ್ಲ.ವೈಚಾರಿಕ ಭಾಷೆಯಲ್ಲೆ ಹೇಳುತ್ತಾರೆ.ಇಂದು ನಾವು ವಿನೋಬಾ ಅವರ ನೈತಿಕತೆಯ ಮಟ್ಟದಲ್ಲೆ ಯಾವ ನಾಯಕನನ್ನೂ ಊಹಿಸಿಕೊಳ್ಳಲು ಸಾಧ್ಯವಿಲ್ಲ.ಅಂತಹ ವಿನೋಬಾ ಅವರಿಗೆ ತಾನು ಗಾಂಧಿ ಸಾಕಿದ ಪ್ರಾಣಿ ಎನಿಸಬೇಕಾದರೆ ಗಾಂಧಿಯ ನಾಯಕತ್ವ ಯಾವ ಮಟ್ಟದ್ದಿರಬಹುದೆಂಬ ಸಣ್ಣ ಕಲ್ಪನೆಯಂತೂ ಸಿಗುತ್ತದೆ.
ಸಂವಾದದಲ್ಲಿ ಭಾಗವಹಿಸುವ ಅಂದಿನ ಪ್ರಧಾನ ಮಂತ್ರಿ ನೆಹರೂ,ಬೇರೆ ಸಂದರ್ಭಗಳಲ್ಲಿ ಹೇಳದೆ ಇರುವ ಹೊಸ ಸಂಗತಿಯನ್ನು ಹೇಳಿದಂತೆ ಭಾಸವಾಗುವುದಿಲ್ಲ.ಸ್ವತಂತ್ರ ಭಾರತದಲ್ಲಿ ಗಾಂಧಿ ಬದುಕಿದ್ದ ೫ ತಿಂಗಳುಗಳಲ್ಲಿಯೂ ಅವರು ಪದೇ ಪದೇ ಗಾಂಧಿಯ ಬಳಿ ಹೋಗಿ ಕೇಳುವುದು,”ನಾನು ಅಸಹಾಯಕ.ನಾನೇನು ಮಾಡಲಿ?”ಎಂಬುದನ್ನೇ.ಇಲ್ಲಿನ ಸಂವಾದದಲ್ಲೂ ಅವರ ಮೂಲಭೂತ ಸಿದ್ಧಾಂತ ನಾನೇನು ಮಾಡಲಿ ಎಂಬುದೇ ಆಗಿರುವಂತಿದೆ.ಅಥವಾ ಅವರು ನಿಜವಾಗಿಯೂ ಏನನ್ನೂ ಮಾಡಲಾರದ ಸ್ಥಿತಿಯಲ್ಲೇ ಇದ್ದರೋ ಏನೊ.
ಒಬ್ಬ ದೊಡ್ಡ ಅಥವಾ ದೊಡ್ಡ ಎನಿಸಿಕೊಂಡ ನಾಯಕರು ಸತ್ತಾಗ ಯಾರನ್ನೊ ಕೊಲ್ಲುವುದು,ಆತ್ಮಹತ್ಯೆ ಮಾಡಿಕೊಳ್ಳುವುದು,ಊರನ್ನು ಪುಡಿಗಟ್ಟುವುದು ನಡೆಯುತ್ತಿರುವ ಈ ಸಂದರ್ಭದಲ್ಲಿ,ಒಬ್ಬ ದೊಡ್ಡ ನಾಯಕ ಸತ್ತಾಗ ಆತನ ಅನುಯಾಯಿಗಳ ವರ್ತನೆ ಏನಿರಬೇಕೆಂದು ಕಲಿಸುವ ಕ್ರತಿ ಇದು.ಜೊತೆಗೆ,ಒಬ್ಬ ದೊಡ್ಡ ನಾಯಕ ತನ್ನ ಅನುಯಾಯಿಗಳನ್ನು ಯಾವ ರೀತಿ ಬೆಳೆಯಿಸಬೇಕೆಂಬುದನ್ನೂ ಈ ಕ್ರತಿ ಹೇಳುತ್ತದೆ.ಇಂತಹ ಒಳ್ಳೆಯ ಕ್ರತಿಯನ್ನು ಕನ್ನಡಕ್ಕೆ ತಂದದ್ದಕ್ಕಾಗಿ ಚಂದ್ರಶೇಖರ ತಾಳ್ಯ ಅವರಿಗೆ ನಾವು ಕ್ರತಜ್ಞರಾಗಬೇಕಾಗುತ್ತದೆ.
ಈ ಸಂವಾದದ ಪರಿಣಾಮವಾಗಿ ಅಧಿಕಾರ ರಾಜಕೀಯದಿಂದ ದೂರ ನಿಂತ ‘ಸರ್ವ ಸೇವಾ ಸಂಘ’ದ ಸ್ಥಾಪನೆ ಆಗುತ್ತದೆ.ದೇಶ ವಿಭಜನೆಯ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಕೆಲಸ ಮಾಡುತ್ತದೆ.ದೇಶೀಯ ಸಂಸ್ಥಾನಗಳ ವಿಲೀನಕ್ಕೆ ಪ್ರೇರಣೆಯಾಗುತ್ತದೆ.ಕೋಮು ಗಲಭೆಯ ಶಮನದಲ್ಲಿ ತೊಡಗುತ್ತದೆ.ಭೂದಾನ ಚಳವಳಿಯಲ್ಲಿ ೪.೨ಮಿಲಿಯನ್ ಎಕರೆ ಭೂಮಿಯನ್ನು ಪಡೆದು ಭೂರಹಿತರಿಗೆ ಹಂಚಿಕೆ ಮಾಡುತ್ತದೆ.ರಾಜಕೀಯವು ಅಧಿಕಾರದ ಅನೈತಿಕ ಅಟ್ಟಹಾಸವನ್ನೂ ಮಡುತ್ತಿರುವುದರಲ್ಲೂ,ಸಮಾಜವು ಆರ್ಥಿಕತೆಯ ಅನೈತಿಕತೆಯ ಅಟ್ಟಹಾಸದಲ್ಲಿ ನಲುಗಿರುವ ಇಂದಿನ ದಿನದಲ್ಲೂ,ಸರ್ವ ಸೇವಾ ಸಂಘವು ರಾಷ್ಟ್ರದ ಗಮನ ಸೆಳೆಯುವುದರಲ್ಲಿ ಸೊರಗಿದೆಯೇ ಹೊರತು ಸತ್ತಿಲ್ಲ.ಮಹಾರಾಷ್ಟ್ರದ ವಾರ್ಧಾ ದಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಅದು ಇಂದಿಗೂ ಸೇವಾ ಕಾರ್ಯದಲ್ಲಿ ನಿರತವಾಗಿದೆ.ಏಕೆಂದರೆ ಇಂದಿಗೂ ಅದರ ಡ್ರೈವಿಂಗ್ ಫೋರ್ಸ್ ಮಹಾತ್ಮಾ ಗಾಂಧಿಯೇ.
ವೃತ್ತಿಯಲ್ಲಿ ಪ್ರೌಢ ಶಾಲಾ ಶಿಕ್ಷಕರು . ಅತ್ಯುತ್ತಮ ಸಂಘಟಕರೂ ಆಗಿರುವ ಚೊಕ್ಕಾಡಿಯವರು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ವೈಚಾರಿಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ . ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ .