ಋತುಮಾನ ಆಂಡ್ರಾಯ್ಡ್ ಆ್ಯಪ್ ಈಗ ಲಭ್ಯ. ಈ ಲಿಂಕ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ
ಆಗ ಒಂದು ಘಟನೆ ನಾಗೇಂದ್ರನನ್ನು ಈ ಮುಖಾಮುಖಿಗೆ ಸಂಪೂರ್ಣವಾಗಿ ಸಜ್ಜುಮಾಡಿತು. ಅದೇನಾಯಿತೆಂದರೆ ಕಂಪೆನಿಯವರು ಈ ಸಲದ ಬೋನಸ್ ಸೆಲೆಬ್ರೇಶನನ್ನು, ತನ್ನ ನೌಕರರಿಗೆ ಸ್ಪೈಡರ್ ಮಾಲ್ ಅಲ್ಲಿ, ಪ್ರತಿಷ್ಠಿತ ಸ್ಕಾಚ್ ವಿಸ್ಕಿಯೊಂದರ ಮಾಲಕರು ಹಮ್ಮಿಕೊಂಡಿದ್ದ ‘ಲಿಟರರಿ ಫೆಸ್ಟ್’ ಒಂದರ ಪಾಸ್ಗಳನ್ನು ಕೊಡುವುದರ ಮೂಲಕ ಆಚರಿಸಿತ್ತು. ಎಲ್ಲಾ ಫೆಸ್ಟ್ಗಳಂತೆಯೇ ಈ ಫೆಸ್ಟ್ ನಡೆದದ್ದು ವೀಕೆಂಡ್ನಲ್ಲಿಯೇ. ದೊಡ್ಡ-ದೊಡ್ಡ ಸಾಹಿತಿಗಳು, ಇಂಗ್ಲೀಷಿನಲ್ಲಿಯೂ ಛಾಪು ಮೂಡಿಸಿ ಮಾಲ್ ಗೆ ಬರುವವರಿಗೆ ಚಿರಪರಿಚಿತರಾಗಿದ್ದ ಬರಹಗಾರರು, ಮಾರ್ಕ್ಸಿಷ್ಟ್ , ಸೋಶಿಯಲಿಸ್ಟ್ ತತ್ತ್ವಗಳ ಮೇಲೆ ನವ್ಯೋತ್ತರ ಧಾಟಿಯಲ್ಲಿ ಕವಿತೆ ಬರೆದು ಕೀರ್ತಿವಂತರಾಗಿದ್ದ ಯುವ ಕವಿಗಳು, ಲಿಟ್ರರಿ ಥಿಯರಿಗಳೆನೆಲ್ಲಾ ರಸಾಯನ ಮಾಡಿ ಕುಡಿದು ರಿಟೈರ್ಡ್ ಆಗಿದ್ದ ಪ್ರಾಧ್ಯಾಪಕರೂ, ಮುಂತಾದ ದೊಡ್ಡ ಮನುಷ್ಯರೆಲ್ಲಾ ಅಲ್ಲಿದ್ದರು. ಆಗಾಗ ಅಡ್ಡಾಡುತ್ತಾ ಲೆಗ್ ಪೀಸ್, ಫಿಂಗರ್ ಚಿಪ್ಸ್ ಮೆಲುಕುತ್ತಾ, ಸಾಹಿತ್ಯ ಪ್ರಕಾರಗಳ ಕುರಿತು ಬಹಳ ಸೌಮ್ಯವಾಗಿ ಭಾಷಣ ಹೊಡೆಯುತ್ತಾ ಪೆಗ್ಗನ ಮೇಲೊಂದು ಪೆಗ್ಗನ್ನು ಹಾಕುತ್ತಿದ್ದರು. ಅಲ್ಲಿಗೆ ನಾಗೇಂದ್ರ ಜತೆ ಅನಾಮಿಕ ಬಂದಿದ್ದಳು. ಅವಳ ಇನ್ಫ್ಲುಯೆನ್ಸ್ ಬಳಸಿ, ತಾನಂದು ತೆಗೆದಿದ್ದ ‘ಕಲಾತ್ಮಕ’ ಚಿತ್ರಗಳನ್ನು ಇಲ್ಲಿದ್ದ ಎನ್.ಆರ್.ಐ. ಡಯಾಸ್ಪೋರ ಸಾಹಿತಿಗಳೇನಾದರೂ ಇಷ್ಟಪಟ್ಟು, ತಮ್ಮ ಮುಂದಿನ ಕಾವ್ಯ ಸಂಕಲನಕ್ಕೋ ಅಥವಾ ಪ್ರಯೋಗಾತ್ಮಕ ಕಥಾ ಗುಚ್ಛಗಳ ಮುಖಪುಟಕ್ಕೋ ಚಿತ್ರಗಳಾಗಿ ಬಳಸಿದರೆ, ತನಗೆ ಒಂಚೂರು ಹೆಸರು ಆಗುತ್ತದೆ ದುಡ್ಡು ಸಿಗುತ್ತದೆ, ಎನ್ನುವ ತನ್ನ ಆ ಹಳೆಯ ರೂಪುರೇಶೆಯನ್ನೇ ಅಲ್ಲಿದ್ದ ಅತಿಥಿಗಳಿಗೆ ತಕ್ಕಂತೆ ಅಲ್ಪ ಸ್ವಲ್ಪ ತಿದ್ದಿ, ಆತ ಅವಳನ್ನು ಅಲ್ಲಿಗೆ ಎಳೆದುಕೊಂಡು ಬಂದದ್ದು.
ಈಗ ಪಾರ್ಟಿಯಲ್ಲಿ ಔತಣದ ಸಮಯ. ಅಲ್ಲಲ್ಲಿ ಬುರುಡೆ ದೀಪಗಳಿಂದ ಬೆಳಕು ಚೆಲ್ಲುತಿತ್ತು. ಸಂಭಾವಿತರೆಲ್ಲ ಕುಡಿದ ಅಮಲಲ್ಲಿ ಸಾಹಿತಿಗಳ ಜತೆ ಸಲುಗೆಯಿಂದಿದ್ದರು. ಇನ್ನು ಸಾಹಿತಿಗಳೂ ಅಷ್ಟೇ ಟೈಟಾಗಿದ್ದರಿಂದ ಸಂಭಾವಿತರ ಹೆಗಲಿಗೆ ಹೆಗಲು ಕೊಟ್ಟು ಕೇಕೆ ಹಾಕಿ ನಗುತ್ತಿದ್ದರು. ಅಷ್ಟೊತ್ತು ಅನಾಮಿಕಳನ್ನು ಯುವ ಕವಿಗಳು, ಎನ್.ಆರ್.ಐ. ಕವಿ, ಡೈಯಸ್ಪೋರ ಕವಿಗಳಿಗೆಲ್ಲಾ ತನ್ನನ್ನು ಪರಿಚಯಿಸುವಂತೆ ಗೋಗರೆದು ಸುಸ್ತಾಗಿದ್ದ ನಾಗೇಂದ್ರ ಆ ಪಾರ್ಟಿಯಲ್ಲಿ ಒಬ್ಬಂಟಿಗನಾಗಿ ಊಟಕ್ಕೆ ಕೂತರೆ, ತನ್ನನ್ನು ಅಲ್ಲಿಗೆ ‘ಉಣ್ಣಲು ಬಂದ ಖದೀಮ’ ಎಂದು ಓಡಿಸಿ ಬಿಡುತ್ತಾರೆ ಎಂದು ಹೆದರಿ, ಅವಳ ಪಕ್ಕದಲ್ಲೇ ಕೂತು ಕರಿದ ಅನ್ನವನ್ನು ಜಗಿಯುತ್ತಿದ್ದ. ಆಕೆಯಂತೂ ಬಂದಾಗಿನಿಂದ ತನ್ನ ಕೌನ್ಸಿಲಿಂಗ್ ಕ್ಲಿನಿಕ್ಕನ್ನು ಪ್ರಮೋಟ್ ಮಾಡಲು ಎಲ್ಲಿಲ್ಲದ ಕಸರತ್ತು ನಡೆಸಿದ್ದಳು. ಗಣ್ಯರು, ಪ್ರಮುಖರು, ಉದ್ಯಮಿಗಳ ಬಳಿ ಅವರು ಸ್ಥಾಪಿಸಿದ ಶಾಲಾ-ಕಾಲೇಜುಗಳಲ್ಲಿ ಕೌನ್ಸಲಿಂಗ್ ಸೆಂಟರ್ನ್ನು ಪರಿಚಯಿಸಿ, ಗ್ರಾಂಟ್ಸ್ ಒದಗಿಸುವಂತೆ ಲಾಬಿ ನಡೆಸುತ್ತಿದ್ದಳು. ಅವರೆಲ್ಲರೂ ಇವಳ ಬಾಬ್ಕಟ್ ಕೂದಲ ಶೈಲಿ, ಕೆಂಪು-ಕೆಂಪು ಕೆನ್ನೆ ಮತ್ತು ಕಾಂತಿವರ್ಧಕ ಮೆತ್ತಿಕೊಂಡ ಬಿಳಿಯ ಚರ್ಮ, ಚಟ-ಪಟನೆ ಮಾತನಾಡುವ ಕಲೆ, ಮತ್ತು ಚೂರು ಕುಳ್ಳಗಿದ್ದ ಆಕೆಯ ದೇಹಸಿರಿಯನ್ನು ನೋಡಿ ಇವಳು ನಿಜಕ್ಕೂ ಕಾಲೇಜು ಹುಡುಗಿಯೇ ಅಥವಾ ಆಂಟಿಯೇ ಎಂಬ ಜಿಜ್ಞಾಸೆಯಲ್ಲಿ ಮುಳುಗಿ, ಅವಳು ಹೇಳಿದಕ್ಕೆಲ್ಲಾ ತಲೆ ಕುಣಿಸಿ, ಲೆಗ್ ಪೀಸ್ ಕಡಿಯುತ್ತಿದ್ದರು.
ಆಗ ಅಚಾನಕ್ಕಾಗಿ, ಸ್ವಲ್ಪ ಜಾಸ್ತಿಯೇ ಕುಡಿದಿದ್ದ ಪ್ರಮುಖರೊಬ್ಬರು ಒಳ್ಳೇ ಹುಕ್ಕಿಯಲ್ಲಿ ಬರೆಯುವಾಗ ಪದಗಳು, ಓದುಗನ ಮನಸ್ಸಿನಲ್ಲಿ ಮೂಡಿಸುವ ಭಾವನೆಗಳ ಪ್ರತಿಬಿಂಬಿಸ್ಬೇಕು…ಇಲ್ಲಾಂದೆ ಅದು ಬರವಣಿಗೇನೇ ಅಲ್ಲ… ಎಂದು ಬೆಂಚು ಕುಟ್ಟಿದರು. ಬಹುಶಃ ಅವರೂ ಮತ್ತೊಬ್ಬರೂ ಗಹನವಾದ ಸಾಹಿತ್ಯದ ಚರ್ಚೆಯಲ್ಲಿ ಪಾಲ್ಗೊಂಡಿದ್ದಿರಬೇಕು. ಈಗ ಅವರ ಏರಿದ ಧ್ವನಿ ಎಲ್ಲರ ಗಮನ ಸೆಳೆದು, ಕೂತಿದ್ದವರೆಲ್ಲಾ ಬರವಣಿಗೆ ಹೇಗಿರಬೇಕು ಎಂದು ಹರಟೆ ಹೊಡೆಯುತ್ತಾ, ವೈಟರ್ಸ್ ಹತ್ತಿರ ತಮ್ಮ ಗ್ಲಾಸ್ಗಳನ್ನು ರೀಫೀಲ್ ಮಾಡಲು ಹೇಳಿದರು. ನಾಗೇಂದ್ರನ ತಲೆ ಸಿಡಿಯುತ್ತಿತ್ತು. ಹೆಂಡದ ವಾಸನೆ ಅವನ ನರಮಂಡಲವನ್ನೇ ಹಿಂಡಿಬಿಟ್ಟಿತ್ತು. ಕುಡಿಯಲು ಎಷ್ಟೋ ಸಾರಿ ಪ್ರಯತ್ನಿಸಿ ಆತ ಕಕ್ಕಿದ್ದರಿಂದ ಇಂದು ಅವನು ಆ ಸಾಹಸಕ್ಕೆ ಕೈಹಾಕಿರಲಿಲ್ಲ. ಆದರೆ ಈ ಪದ ಮತ್ತು ಭಾವನೆಗಳ ಸಂಬಂಧದ ಮಾತು ಮಾತ್ರ ಅವನಿಗೆ ತನ್ನ ಟಿಗರ್ಲೇಡಿ, ಕಾಮ ಪ್ರಚೋದಿಸಲು ಬಳಸಬೇಕಾದ ಪದಗಳ ಬಗ್ಗೆ ಕೊಟ್ಟ ಲೆಕ್ಚರನ್ನು ನೆನಪಿಸಿತು. ಆ ನೆನಪಿನ ಜತೆಯೇ ತನ್ನ ಮಾಮೂಲು ಕೆಲಸದ ನೆನಪಾಗಿ, ಬಾಯಿ ಜೊಲ್ಲು, ಪಶುಕಾಮ, ಚಂದ್ರನಾಡಿ, ಗುದದ್ವಾರ, ಹೊಡೆದು ಕಾಮಿಸುವಾಟ – ಇವೆಲ್ಲವನ್ನೂ ತೆರೆಯ ಮೇಲೆ ಶಬ್ದಗಳ ಹಂಗಿಗೆ ಕಟ್ಟು ಬಿದ್ದು ಅನಾಮಧೇಯ ಗಂಡಸರ ಜತೆ ಆಡಿದ್ದು ಜ್ಞಾಪಕಕ್ಕೆ ಬಂದು ಅಸ್ವಸ್ತನಾದ. ಅವನ ಕಣ್ಣು ಉರಿಯುತ್ತಿತ್ತು. ಎದೆ ಹೊಡೆದುಕೊಳ್ಳುತಿತ್ತು. ಅಮೂರ್ತ ಆತಂಕ ಮೈಮುರಿದು ಎದ್ದಿತು. ಅಲ್ಲಿದ್ದ ಇಂಗ್ಲೀಷಿನಲ್ಲಿ ಪ್ರಖ್ಯಾತರಾಗಿದ್ದ ಹಿರಿಯ ಸಾಹಿತಿಯೊಬ್ಬರು ಸ್ಪಷ್ಟವಾಗಿ, ಈ ನಮ್ಮ ಸಂಸನ್ನೇ ನೋಡಿ ಕಾಫ್ಕನ ಕತೆಯಲ್ಲೂ ಬರುತ್ತಾನೆ ಹಾಗೇ ನಮ್ಮದೇ ಮಣ್ಣಲ್ಲಿ ಹುಟ್ಟಿ ಅದೂ ಕಾಫ್ಕನ ಪಾತ್ರದ ಥರನೇ ಹುಟ್ಟಿ ಇದ್ದಕ್ಕಿದ್ದಂತೆನೇ ಸಾಯ್ತಾನೇ, ಗಾಂಧೀ A linen thread binds us all, ಅಂತ ಹೇಳಿದ್ದು ಎಷ್ಟು ನಿಜ ಅಲ್ಲ… ಎಂದು ತಮ್ಮ ಗ್ಲಾಸ್ ಖಾಲಿ ಮಾಡಿದರು. ಆಗ ದುಬಾರಿ ಜುಬ್ಬ ತೊಟ್ಟ ಇನ್ನೊಬ್ಬರು See Gandhi coined the term linen because the word that Blake used was silk…actually those were originally the words of Blake ಆಮೇಲೆ ಸಂಸ ಅಂದಾಗ ಜ್ಞಾಪಕಕ್ಕೆ ಬಂತು, ಈ ಕಾಫ್ಕನ Metamorphosi, Ovid’Metamorphosis ಇದಿಯಲ್ಲಾ ಒಂಥರಾ ಅದರ New Testment. ಆ Ovid ಬಿಡಿ ಮಹಾ ರಸಿಕ. Art Of Loveನ ಎಷ್ಟು ಮಜವಾಗಿ ಚಿತ್ರಿಸ್ತಾನೆ. ಆ ಪುಣ್ಯಾತ್ಮ… ಎಂದು ಉಳಿದಿದ್ದ ಹೆಂಡವನ್ನು ಒಂದೇ ಏಟಿಗೆ ಮುಗಿಸಲು ಹೋಗಿ ಆಗದೇ, ಕ್ಕೆ…ಕ್ಕೆ…ಕ್ಕೆ… ಎಂದು ಕೆಮ್ಮಿದರು. ತುಂಬಾ ದಡೂತಿ ಆಗಿದ್ದ ಅವರ ಹೊಟ್ಟೆಯನ್ನು ಅಲುಗಿಸಿ, ಸರಿಪಡಿಸಿಕೊಂಡು ಬುಸ್ಸು… ಬುಸ್ಸು… ಎಂದು ಏದುಸಿರು ಬಿಟ್ಟರು, ತಮ್ಮ ನೀಳವಾದ ಶ್ವೇತ ಕೇಶರಾಶಿಯನ್ನು ತಾವೇ ನೇವರಿಸುತ್ತಾ. “Art Of Love”ಎಂದಾಗ ಎಚ್ಚರಳಾದ ಅನಾಮಿಕ, ಇದೇ ಸಮಯ ಎಂದು ನಾಗೇಂದ್ರ ತೆಗೆದಿದ್ದ ಚಿತ್ರಗಳನ್ನೆಲ್ಲಾ ಹತ್ತಿರವೇ ಇದ್ದ ಆ ವ್ಯಕ್ತಿಗೆ ಕೊಟ್ಟು Look at these these photographs ನಾನೇ ಇದರ ಮಾಡೆಲ್… ತುಂಬಾ Psychological insight ಇದೆ ಇದರಲ್ಲಿ. art of love Making is quite subtly captured here ನಾನೇ ಡೈರೆಕ್ಟ್ ಮಾಡಿದ್ದು ಈ ಐಡಿಯಾಗಳನ್ನ ನನ್ನ ಫೋಟೋಗ್ರಾಫ್ಸ್ ನಾಗೇಂದ್ರನಿಗೆ…ಎಂದು, ಅರ್ಧ ಗೋಬಿ ಮಂಚೂರಿ ನುಂಗಿದಳು, ಇಷ್ಟೊತ್ತು ಇವರ ಚರ್ಚೆಯಲ್ಲಿ ತಾನೂ ಗಾಢವಾಗಿ ಭಾಗವಹಿಸಿದ್ದಳೆಂಬಂತೆ. ಇವಳೊಬ್ಬಳು ತಮ್ಮ ಡಿನ್ನರ್ ಟೇಬಲ್ಗೆ ಹೇಗೆ ತೂರಿಕೊಂಡು ಬಂದಳು ಎಂದು ಹಲವು ಸಂಭಾವಿತ ಸಾಹಿತಿಗಳಿಗೆ ಅರ್ಥವಾಗದೇ ಇದ್ದರೂ, ಅವಳ ಮನಸ್ಸನ್ನು ಚಿವುಟ ಬಾರದೆಂದು ಸುಮ್ಮನಿದ್ದರು. ಒಂದೆರೆಡು ನಿಮಿಷ ಆ ಫೋಟೋಗಳನ್ನು ನೋಡಿದ ಆ ದಢೂತಿ ಹೊಟ್ಟೆ, “Profound” ಎಂದು ನಿಟ್ಟುಸಿರು ಬಿಟ್ಟು ಅದನ್ನು ತಮ್ಮ ಪಕ್ಕದಲ್ಲಿದ್ದ ಆ ಹಿರಿಯ ಸಾಹಿತಿಗೆ ತೋರಿಸಿದರು. ಅವರು ತಮ್ಮ ಬೂದು ಬಣ್ಣದ ಗಡ್ಡ ಕೆರೆದುಕೊಂಡು ಒಂದೊಂದೇ ಚಿತ್ರಗಳನ್ನು ಕೂಲಂಕುಷವಾಗಿ ಗಮನಿಸುತ್ತಾ, ಎಣ್ಣೆ ಹೊಡೆದರು. ನಾಗೇಂದ್ರನಿಗೆ ಏಕೋ ಹೇಳಲಾಗದ ನಡುಕ ಶುರುವಾಯಿತು. ತಾನು ಯಾತಕ್ಕಾದರೂ ಇಲ್ಲಿಗೆ ಬಂದೆನೋ ಎಂದು ತಲೆ ಚಚ್ಚಿಕೊಳ್ಳ ಬೇಕೆನಿಸಿತು. ಇವಳ ಈ ರೀತಿ ಪೀಠಿಕೆ ಕೊಟ್ಟು ತನ್ನ ಫೋಟೋಗಳನ್ನು ಅವರಿಗೆ ಪರಿಚಯಿಸಿದ್ದು ಅವನ ತಲೆಬೇನೆಯನ್ನು ಏರಿಸಿತು. ಇದೇ ತಾನೇ ನನಗೂ ಬೇಕಾದದ್ದು… ಎಂದು ಎಷ್ಟು ಅಂದುಕೊಂಡರೂ ಒಳಮನಸ್ಸು, ಅವಮಾನದಲ್ಲಿ ತತ್ತರಿಸುವುದನ್ನು ನಿಲ್ಲಿಸಲಿಲ್ಲ. ಏಕೆ ಈ ವಿರೋಧಭಾಸ ಭಾವನೆಗಳು ಎಂದು ತನ್ನ ಮನಸ್ಸನ್ನು ಹತೋಟಿಗೆ ತಂದು ತಾಳ್ಮೆಯಲ್ಲಿ ತನ್ನ ಕಾರ್ಯ ಸಿದ್ಧಿಗೆ ಕಾಯಲು ಯತ್ನಿಸಿದ, ಸಾಧ್ಯವಾಗಲಿಲ್ಲ. ತಡೆಯಲಾಗದ ಮುಜುಗರದಲ್ಲಿ ಆರೋಗ್ಯ ತುಂಬಿದ ಆ ಪ್ರಮುಖ ಸಾಹಿತಿಯ ಮುಖ ನೋಡಿದ. ಈ ಮನುಷ್ಯ ನನ್ನನ್ನು ಸಮಾಧಾನಪಡಿಸಲು ಈ ಫೋಟೋದ ಮೇಲೊಂದು ಕಾಮೆಂಟ್ ಹೊಡೆಯದಿದ್ದರೆ ಸಾಕು… ಎಂದುಕೊಂಡ. ಮೂತ್ರಪಿಂಡದಿಂದ ಒತ್ತರಿಸಿಕೊಂಡು ಉಚ್ಚೆ ಬೇರೇ ಆಚೆಗೆ ಆಸ್ಪೋಟಿಸಲು ಸಜ್ಜಾಗಿದ್ದರಿಂದ ಪ್ರತಿಕ್ಷಣ ಕಿಬ್ಬೊಟ್ಟೆಯೊಳಗೆ ಯಾವುದೋ ಉರುಗವೊಂದು ಹಿಂಡಿದಂತೆ ನಾಗೇಂದ್ರನಿಗೆ ಭ್ರಮೆಯಾಗುತಿತ್ತು, ಆದರೆ ಎದ್ದು ಹೋಗಲು ಈ ಅವ್ಯಕ್ತ ಭೀತಿ ಬಿಡುತ್ತಿರಲಿಲ್ಲ .ಹೊಟ್ಟೆ ‘ವಳ-ವಳಯೇಯ್’ ಎಂದು ಪಿಸುಗುಡುತ್ತಿತ್ತು. ಒಮ್ಮೆ ಇಲ್ಲಿಂದ ಕಾಲ್ಕಿತ್ತರೆ ಸಾಕಪ್ಪ, ಇನ್ನೇನು ಬೇಡ… ಎಂದು ಕೊಂಡ. ಆದರೆ ಈಗಿನ ಕಾಲಕ್ಕೆ ತಕ್ಕಂತಹಾ ಶರ್ಟ್ ಹಾಕಿದ್ದ, ಹೊಳೆಯುವ ಕಣ್ಣುಗಳಲ್ಲಿ ವಶೀಕರಣ ಶಕ್ತಿಯಿದ್ದಂತಿದ್ದ ಆ ಭರ್ಜರಿ ಮುದುಕ, ಪ್ರತಿಕ್ರಿಯೆ ನೀಡುವುದು ತನ್ನ ಹಕ್ಕು ಎನ್ನುವಂತೆ ಬಾಯಿ ತೆಗೆದ.
ನೀವಾ ತೆಗೆದಿದ್ದು…ಎಂದು ನಾಗೇಂದ್ರನತ್ತ ದೃಷ್ಟಿ ಹಾಯಿಸಿ, “Very subtle… Shadows ಜಾಸ್ತಿ ಇದೆ, ಬಟ್ ಕತ್ತಲಗವಿ ನಡುವೆ ನಿಂತಿರೋ ಕರೀ ಹೆಣ್ಣಿನ ಹಾಗೇ ಕಾಣೋ ಈ Photo really sexual intercourse pleasure ಇದೆಯಲ್ಲಾ ಅದರ pleasureನೆಲ್ಲ ತುಂಬಾ ಡೀಪ್ ಆಗಿ ಹಿಡಿದಿಟ್ಟಿದೆ. ಸ್ಟಿಲ್ Ovidನ ನೀವೇನಾದ್ರೂ ಓದಿದ್ರೆ, ನೀವಿನ್ನೂ ಗಾಢವಾಗಿ ಇನ್ವಾಲ್ಯೂವ್ ಆಗ್ತಿದ್ರಿ ಅನ್ಸುತ್ತೆ ಈ ಆರ್ಟ್ ಅಲ್ಲಿ…
ನಾಗೇಂದ್ರನೊಳಗೆ ಅಷ್ಟೊತ್ತು ವೇದನೆಯ ರೂಪದಲ್ಲಿ ಬೆಳೆಯುತ್ತಿದ್ದ ಆ ಅದೃಶ್ಯ ಪ್ರಾಣಿ ಬೋನು ಕಿತ್ತು ಬಂದೇ ಬಿಟ್ಟಿತ್ತು, Ovidನ ಯಾಕ್ ಓದ್ಬೇಕು, ಸೋ ಕಾಲ್ಡ್ sexual pleasureನ ಕಲಿಯಕ್ಕೆ. ದಿನಾ ನೋಡ್ತೀನಲ್ಲ! ಅದೂ ಗೋಡೆಯಷ್ಟು ದೊಡ್ಡ ಸ್ಕ್ರೀನಲ್ಲಿ ಮೆಷೀನ್ಗಳ ಥರ ಜನ ಕೇಯ್ತಾ ಇರ್ತಾರೆ. ಅದರಲ್ಲಿ ಯಾವ ಆರ್ಟೂ ಇಲ್ಲ ಸ್ವಾಮೀ… ಜೋರ್ಜೋರಾಗಿ ಅರುಚ್ಕೋತ್ತಾರೆ, passed out act ಅದು… ಈ ಫೋಟೋನೂ ಅಷ್ಟೇ passed out ಆಗಿದೆ. ಏನ್ ಆರ್ಟಿಸ್ಟ್ ಆಗಕ್ಕೆ ಅಂತ ತೆಗೆದಿಲ್ಲ ನಾನು! ಬದ್ಕಕ್ಕೆ, ಜೀವಂತ ಇರಕ್ಕೆ ದುಡ್ಡು ಮಾಡ್ಬೇಕಲ್ಲ ಅದಕ್ಕೆ ತೆಗ್ದೆ. ಈ ಓವಿಡ್,ಡೇವಿಡ್ ಯಾರೂ ಬೇಡ… ಎಂದು ಎದ್ದು ನಿಂತ ಓಡಲು ಅಣಿಯಾದ. ಎಲ್ಲರೂ ದಿಗ್ಭ್ರಮೆಯಲ್ಲಿ ಒಂದು ನಿಮಿಷ ಮುಗುಮ್ಮಾದರು. ಎಲ್ಲರಕ್ಕಿಂತ ಮುಂಚೆ ಸಾವರಿಸಿಕೊಂಡ ದಢೂತಿ ಹೊಟ್ಟೆ ಒಳ್ಳೇ ಜೋಕ್ ಕಟ್ ಮಾಡ್ತಾನೆ ಈ ಪುಣ್ಯಾತ್ಮ, ಬೈದ್ರೆ ಮಹಾ ವೇದಾಂತಿ ತಾನಾಗ್ತೀನಿ ಅಂತ ನಂಬಿರೋ ಈ Frustrated Soul ಯಾರು? ಎಂದು ನಕ್ಕರು. ಆಗ ಎಲ್ಲರೂ ‘ಹೋ… ಹೋ…’ ಎಂದು ನಕ್ಕು ಮತ್ತೆ ತಮ್ಮ-ತಮ್ಮ ವಿಚಾರ ಸರಣಿಗಳನ್ನು ಮುಂದುವರೆಸಿದರು, ನಾಗೇಂದ್ರನನ್ನು ಕಡೆಗಣಿಸಿ.
ಆಘಾತದಲ್ಲಿದ್ದ ಅನಾಮಿಕ ಅನಾಮತ್ತಾಗಿ, ನಾಗೇಂದ್ರ ಕಿಬ್ಬೊಟ್ಟೆಗೆ ಗುಟ್ಟಾಗಿ ಬಲಹಾಕಿ ಗುದ್ದಿ, “Asshole… ಅವ್ರು ಯಾರು ಅಂತ ಗೊತ್ತ. ನೀನ್ ವರ್ಕ್ ಮಾಡಿದ್ದ NAKBA ಸಾಫ್ಟ್ವೇರ್ ಕಂಪನಿ ಪ್ರೆಸಿಡೆಂಟ್, ಅಗಸ್ತ್ಯ ” ಎಂದು ಉಸುರಿ ಆ ಸ್ಫುರದ್ರೂಪಿ ಮುದುಕನನ್ನು ನೋಡಿ ಪೆದ್ದು ಪೆದ್ದಾಗಿ ನಕ್ಕಳು. ಆಗ ನಾಗೇಂದ್ರನಿಗೆ ಅಂಟಿಕೊಂಡಿದ್ದ ಸೈತಾನ ಮರೆಯಾಗಿದ್ದ. ಕೈ-ಕೈ ಹಿಸುಕಿಕೊಂಡು “Forgive… I work for you… a very obedient worker ನನ್ನಿಂದ ಒಂದು ವಾರದಲ್ಲಿ ಕಂಪೆನಿಗೆ customers five percent ಜಾಸ್ತಿ ಆಗಿದ್ದಾರೆ. In fact ಇವತ್ತು pass ಸಿಕ್ಕಿದ್ದು ನನ್ಗೆ, as a result of the bonus which I earned… after talking… I mean,,, cybering… with many men… sir Please! ನನ್ಗೆ ಈ ಜಾಬ್ ತುಂಬಾ ಕಲಸ್ತು, ಪ್ಲೀಸ್… ಎಂದು ಯಾವುದನ್ನು ಹೇಗೆ ನಿಖರವಾಗಿ ವಿವರಿಸಬೇಕೆಂದು ಅರಿಯದೆ ಕೈಯಲ್ಲಿ ಮುದುಡಿದ್ದ ತನ್ನ ಪಾಸ್ಗಳನ್ನು ತೋರಿಸಿದ. ಪರಿಸ್ಥಿತಿಗೆ ಒಗ್ಗುವ ಮಾತನ್ನು ರುಚಿಕಟ್ಟಾಗಿ ಆ ಮುದುಕ ಆಡಿದಂತೆ ಆಡುವ ತಾಕತ್ತಿಲ್ಲವಲ್ಲ ಎಂದು ಕುಗ್ಗಿಹೋದ. ಆಗ ನಿಟ್ಟುಸಿರು ಬಿಟ್ಟ ಅಗಸ್ತ್ಯ, “ What cyber…? What company…? ಯಾಕೆ Justification ಕೋಡ್ತೀರ ಎಲ್ಲದಕ್ಕೂ? why you torment yourself so much when nobody asked you to suffer… just enjoy the party” ಎಂದು ಎದ್ದ. ಮಿಕ್ಕವರ್ಯಾರು ನಾಗೇಂದ್ರನ ಅಸ್ತಿತ್ವವನ್ನು ಈಗ ಅಪ್ಪಿತಪ್ಪಿಯೂ ಗಮನಿಸುತ್ತಿರಲಿಲ್ಲ.
ಅರೆಗತ್ತಲಿನ ಆ ಪಾರ್ಟಿ ಹಾಗೇ ಸಮಾಪ್ತಿಯಾಗುತಿತ್ತು. ಮಾಣಿಗಳೆಲ್ಲಾ ಟೈ ಕಳಚಿ ಅಲ್ಲಲ್ಲಿಕೂತು ಉಣ್ಣುತ್ತಿದ್ದರು. ಕೆಲ ಗಣ್ಯರು ಬಾಲ್ಕನಿಯಲ್ಲಿ ನಿಂತು ಸಿಗರೇಟು ಸೇದುತ್ತಿದ್ದರು. ಪಾರ್ಟಿಯ ದೀಪಗಳೆಲ್ಲಾ ಅಲ್ಲಲ್ಲಿ ಮಬ್ಬಾಗುತಿತ್ತು. ರಾತ್ರಿ ಒಂದೂವರೆಯಾಗಿತ್ತು. ಹೆಚ್ಚೂ ಕಡಿಮೆ ಇವತ್ತು ಇಪ್ಪತ್ತೈದು ಗಂಟೆ ದುಡಿದಿದ್ದರಿಂದ ನಾಗೇಂದ್ರನ ಮನಸ್ಸಿಗೆ ಜಡವಾಗಿತ್ತು. ಅವನೆದುರು ಆಗುತ್ತಿರುವುದೆಲ್ಲಾ, ಸ್ಫುಟವಾಗಿಯೇ ಅರಿವಾಗುತ್ತಿದ್ದರೂ, ಆ ಘಟನಾವಳಿಗಳ ಜತೆ ಥಳಕು ಹಾಕಲು ತೀರ ಬೇಕಾಗಿದ್ದ ದೇಹವೇ ಅವನ ಸಾಥ್ ಬಿಟ್ಟಂತಿತ್ತು. ನಿರಾಕರ ಆತ್ಮದ ಹಾಗೇ ಹೊರಗೆ ತೇಲಿದ. ಯಾವ ಸೂಚನೆ ಕೊಡದೆ ಅವನ ಫೋನ್ ಬೊಬ್ಬೆ ಹೊಡೆಯಿತು, ರಪರಪ್ಪಾರಪರಪರಪ್ಪ ಎಂದು ಬೆಚ್ಚಿ ಫೋನ್ ಎತ್ತಿದ, ಇನ್ನೂ ಪಾರ್ಟಿ ಯಲ್ಲೇ ಇದ್ದ ಅನಾಮಿಕ ಫೋನಿನ ಆ ಬದಿಯಿಂದ, ಶೇಮ್ಲೆಸ್ ಕ್ರೀಚರ್ ನಿನ್ಗ್ ನಾನ್ ಅಂದ್ರೆ ಜೆಲಸ್, ಸೋ ನಿನ್ನ Cowardly Attitudeನ ಹೀಗೆ ನಾಯಿ ಥರ ಬೊಗ್ಳಿ ತೋರಿಸ್ತಿಯಾ, ಎಲ್ಲೂ ನಿನ್ನ ಪುಂಗಿ ನಡೀದೇ ಇದ್ದಾಗ ಮತ್ತೆ ನನ್ನ ಮನೆ ಬಾಗ್ಲಿಗೆ ಬರ್ತೀಯ … This time never come back to me clinging like an orphan kid…bastered…” ಅಷ್ಟೇ, ಅವಳಿನ್ನೂ ಏನೇನೋ ಹೇಳುತ್ತಿದ್ದಳು, ಆದರೆ ತನ್ನ ಉನ್ಮಾದ ಮನಃಸ್ಥಿತಿಯ ಎರಡು ತುತ್ತ ತುದಿಗಳನ್ನು ಕೇವಲ ಐದು ನಿಮಿಷಗಳ ಅವಧಿಯಲ್ಲಿ ಅನುಭವಿಸಿ ಸುಸ್ತಾಗಿದ್ದ, ನಾಗೇಂದ್ರ ಈಗ ಈ ಅಶರೀರವಾಣಿಯ ಶಾಪದ ಪ್ರವಾಹವನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿರಲ್ಲಿಲ್ಲ. ಹಾಗೇ ನಡೆದ. ತನ್ನ ಹೃದಯದಲ್ಲಿ ಕೋಪವೆಂಬುದೇ ಜಡ್ಡುಗಟ್ಟಿ ಸತ್ತು ಬಿಟ್ಟಿದೆ ಎನಿಸಿತು. ಹಿಂದೆಯೆಲ್ಲ ಕೋಪ ಬಂದಾಗ ಕಡೇ ಪಕ್ಷ ತನ್ನ ಮುಷ್ಠಿಯಲ್ಲಿ ನೆಲವನ್ನು ದಬದಬನೇ ಗುದ್ದಿಯಾದರೂ ಆ ರೋಷವನ್ನು ಆರಿಸುತ್ತಿದ್ದ. ಆದರೆ ಈಗ ಆ ಗಾಢ ಜೀವಂತ ಭಾವನೆಯೇ ಅಸು ನೀಗಿದ ಹಾಗೆ ನಿರ್ಜೀವವಾಗಿ ಮೊಸಳೆ ಮಲಗಿದಂತೆ ಮನದ ಮರದ ಮೊನೆಯಡಿಯಲ್ಲಿ ಮಲಗಿತ್ತು. ದೂರದಲ್ಲೆಲ್ಲೋ ಶಂಖೋದ್ಗಾರದಂತೆ ನಾಯಿಗಳು ಬೊಗಳುತಿದ್ದವು.
ಇದಾದ ಎರಡು ದಿನಗಳಲ್ಲಿ ಈತ ಆ ಈಡಿಪಸ್ ಮಹಾಶಯ ಕಳುಹಿಸಿದ ಮೆಸೇಜನ್ನು ಓದಿ ಆದದ್ದಾಗಲೀ ಇವನನ್ನು ಭೇಟಿಯಾಗೇ ಆಗುತ್ತೇನೆ ಎಂದು ಎದ್ದ, ಈ ಭೇಟಿಯಿಂದಲೇ ಇವನ ತಳಮಳಗಳೆಲ್ಲವೂ ಮಾಯವಾಗುತ್ತದೆ ಎನ್ನುವಂತೆ! ವಾಮನ ಪುರದಲ್ಲಿ ಈ ಈಡಿಪಸ್ ಕೋಟೆಯಿದ್ದದು, ಈ ಪೇಟೆಯ ಆಚೆ… ಸುಮಾರು ನಲವತ್ತು ಮೈಲಿಯಾಚೆ… ಹುಡುಕಿದರೆ ಮೂಲೆಗಳಲ್ಲಿ ಅಲ್ಲಿ ಇಲ್ಲಿ ಕತ್ತೆತ್ತುತ್ತಿದ್ದ ಹೆಂಚಿನ ಮನೆಗಳ ಕುಗ್ರಾಮವದು. ಕಾರಲ್ಲಿ ಡಾಂಬರು ರಸ್ತೆ ಅಳಿಸುವ ತನಕ ಸಾಗಿ, ಬಳಿಕ ಈ ಅದೃಷ್ಯ ಮಾನವನ ಬಿಲಕ್ಕೆ ದಾರಿ ತೋರಿಸುವ ಆತನೇ, ಕಳುಹಿಸಿದ್ದ ನಕ್ಷೆಯನ್ನೇ ದಿಕ್ಸೂಚಿಯಾಗಿಟ್ಟುಕೊಂಡು ಹೋಗಬೇಕೆಂದು ಲೆಕ್ಕ ಹಾಕಿದ ನಾಗೇಂದ್ರ.
3
ಹೆರಾಯಿನ್ ಮೂಸಿದ್ದ ದೇವರಾಯ ರೊಯ್ಯ್,ರೊಯ್ಯ್ ಎಂದು ಸೂಲು ಬಿಡುತ್ತಾ ಅದೇ ಮೇಜಿನ ಮೇಲೆ ತಲೆಯಿಟ್ಟು ಮಲಗಿದ್ದ. ಅವನ ಬಂಗಲೆಯ ಆ ವಿಶಾಲವಾದ ಕೋಣೆಯನ್ನು ಧೂಳಿನ ಮಹಾ ಪೊರೆಯೊಂದು ಆವರಿಸಿತ್ತು. ನೆಲದ ಮೇಲೆಲ್ಲಾ ಬರೀ ಪುಸ್ತಕಗಳು, ಹಳೆಯ ಪತ್ರಿಕೆಗಳ ಹಾಳೆಗಳು, ಇವನೇ ಬರೆದು ಮುದ್ದೆ ಮಾಡಿ ಎಸೆದಿದ್ದ ಕಾಗದಗಳು ಹೇಗೆಹೇಗೋ ಹರಡಿ, ಆಗಾಗ ಗಾಳಿ ಬೀಸಿದಾಗಲೆಲ್ಲಾ ಸಮುದ್ರದ ಅಲೆಗಳಂತೆ ಉಷ್ಶ್ಃ ಎಂದು ಸೀಟು ಓದುತ್ತಾ ಅಲ್ಲಲ್ಲೇ ಒದ್ದಾಡಿ, ತೇಲುತ್ತಿದ್ದವು. ಕಪ್ಪು ಬಣ್ಣಕ್ಕೆ ತಿರುಗಿದ್ದ ಅಗಲವಾಗಿದ್ದ ಗೋಡೆಯ ಮೇಲೆ ವಿಕ್ಟೋರಿಯನ್ ಕಾಲದ ದೃಶ್ಯಗಳನ್ನು ನೆನೆಪಿಸುವ ವರ್ಣಪಟಗಳು, ಡಾಲಿಯ ಭಯಂಕರ ಕಲ್ಪನೆಯಿಂದ ಕಲೆಯಲ್ಲೇ ಜೀವ ತಳೆದ ಹೆಣ್ಣಿನ ಮಾಗಿದ ದೇಹದ ಚಿತ್ರಗಳು ಈ ಯದ್ವಾತದ್ವ ಸುಪ್ತಲೋಕವನ್ನು ನಿಶ್ಯಬ್ಧವಾಗಿ ದಿಟ್ಟಿಸುತ್ತಿದ್ದಂತಿತ್ತು. ಗವಾಕ್ಷದ ಬಳಿ ನಿಂತರೆ ಸಾಕು ದೈತ್ಯ ಹಸಿರು ಪೆನ್ಸಿಲಿನಲ್ಲಿ ಬರೆದಂತಿದ್ದ ಪಚ್ಚೆ ತೋಟವನ್ನು 360ಡಿಗ್ರಿ ಕೋನದಲ್ಲಿ ವೀಕ್ಷಿಸಬಹುದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲಿದ್ದ ತೆಂಗು ಮತ್ತು ಮಾವಿನ ಮರಗಳಿಗೆ ಎಂತಹುದೋ ರೋಗ ತಗುಲಿ, ಎಲೆಗಳೆಲ್ಲಾ, ಗ್ರಹಣ ಹಿಡಿದಂತೆ ಕ್ರಮೇಣ ಬೂದು ಮಿಶ್ರಿತ ಕಂದು ಬಣ್ಣಕ್ಕೆ ತಿರುಗಿದ್ದವು, ಹಾಗೇ ಸಮಯ ಹೋದಂತೆ ಮುಕ್ಕಾಲು ಪಾಲು ಸಸ್ಯ ಸಂಕುಲವೆಲ್ಲಾ ಮಾತಾಡಿಕೊಂಡು ಬಣ್ಣ ಹಚ್ಚಿದ್ದಂತೆ ಈ ರಂಗಲ್ಲೇ ಮಿನುಗುತ್ತಿದ್ದವು. ಅದಕ್ಕೆ ಆ ಕಿಟಕಿಯ ಮೂಲಕ ಅತ್ತ ನೋಡಿದರೆ, ರಾಕ್ಷಸ ಗಾತ್ರದ ಮಂಡಲದ ಹಾವೊಂದು ಮಣ್ಣಿನ ಮಧ್ಯೆ ಸುರುಟಿ ಪವಡಿಸಿದಂತಹ ಚಿತ್ರ ಕಾಣುತಿತ್ತು. ಅಲ್ಲೇ ಪಕ್ಕದಲ್ಲೇ ಇದ್ದ ಗುಂಡಾದ ಟೀಪಾಯಿಯ ಮೇಲೆ ಅಮೃತ ಶಿಲೆಯಲ್ಲಿ ಕಡೆದಿದ್ದ ಬುದ್ಧನಿದ್ದ, ಸದಾ ಅವನ ಕಣ್ಣುಗಳು ಈ ಮಹಾ ಮಂಡಲದ ಹಾವಿನ ಚಲನೆಯನ್ನೇ ಬಿಟ್ಟೂ ಬಿಡದೆ ನೋಡುತ್ತಿದ್ದವು.
ದೇವರಾಯ ಕರೆಘಂಟೆ ಕಿರುಚಿತು. ಅಬ್ಬಾ… ಎಂದು ತಡವರಿಸಿ ಎದ್ದ, ಹೊರಗೆ ನೋಡಿದ. ಅಲ್ಲಿ ಕೆದರಿದ ಕೂದಲಲ್ಲಿ ಸಾಧಾರಣ ಎತ್ತರದ ವ್ಯಕ್ತಿ ನಿಂತಿದ್ದ. ದೇವರಾಯ ಹಾಗೇ ಇನ್ನೊಂದು ಮೂಲೆಯಲ್ಲಿದ್ದ ಕಿಟಕಿಯ ಕಡೆಗೆ ಓಡಿ ಮತ್ತೆ ಗೇಟಿನ ಬಳಿಯಿದ್ದ ಮನುಷ್ಯನನ್ನು ಪರಿಶೀಲಿಸಿದ. ತುಸು ಜಾಸ್ತಿಯೇ ಬೆಳೆದಿದ್ದ ಕೂದಲು ಅವನ ಹಣೆಯನ್ನು ಪೊದೆಯಂತೆ ಮುಚ್ಚಿತ್ತು. ಕಪ್ಪು ಬಣ್ಣದ ಮಸಿಯನ್ನು ಬಳಿದುಕೊಂಡಂತೆ, ಕಣ್ಣಿನ ಕೆಳಗೆ ಕಪ್ಪು ವರ್ತಲುಗಳು ಹಬ್ಬುತ್ತಿದ್ದವು. ಬಿಸಿಲಲ್ಲಿ ಸುತ್ತಿದ್ದಕ್ಕೇ ಏನೋ ಚರ್ಮವೆಲ್ಲಾ ಅತಿಯಾಗಿಯೇ ಕೆಂಪಾಗಿತ್ತು. ಅವನ ತುಟಿಗಳು ಪುಟ್ಟದಾಗಿ ಬರೆದಂತಿದ್ದವು. ಸಿಗರೇಟಿನ ಧೂಮಲೀಲೆಯಿಂದ ಆ ರಕ್ತ ರಂಗಿನ ಅಚ್ಚನ್ನು ಅಳಿಸಿ ಬೂದು ಪ್ರಭೆ ಮೂಡುತ್ತಿತ್ತು. ಆದರೆ ಅವನ ಕಣ್ಣುಗಳು ಎರಡು ವಜ್ರಗಳಂತೆ ಧಗಧಗನೆ ಉರಿಯುವುದನ್ನು, ಭಸ್ಮವಾಗುವಷ್ಟು ಬಿಸಿಯಿದ್ದ ಬಿಸಿಲಿನ ಝಳವೂ ಮರೆಮಾಚಲಾಗಲಿಲ್ಲ. ಅವನನ್ನು ಕಣ್ಣಲ್ಲೇ ಹೀರಿಕೊಳ್ಳುವಂತೆ ಮೇಲಿನ ದೇವರಾಯ ನೋಡುತ್ತಲೇ ಇದ್ದ.
ಬಂದ ವ್ಯಕ್ತಿ ತನ್ನನ್ನು ತಾನು ನಾಗೇಂದ್ರನೆಂದು ಪರಿಚಯಿಸಿಕೊಂಡು, ದೇವರಾಯನ ಅಂತಃಪುರದೊಳಗೆ ಅಡಿಯಿಟ್ಟು, “See Sir… we are… I mean I am representing a firm… I have received a request, sent by you, I am here to discuss the terms and conditions …” ಎಂದು ಅರ್ಧ ಗುಮಾನಿ ಅರ್ಧ ನಿರಾಸಕ್ತಿಯಲ್ಲಿ ಹೇಳುತ್ತಿದ್ದಾಗಲೇ ಅವನೆದುರು ಬೀಟೆಯಲ್ಲಿ ಸಿದ್ಧಪಡಿಸಿದ್ದ ದೊಡ್ಡದಾದ ಕುರ್ಚಿಯ ಮೇಲೆ ಅಷ್ಟೊತ್ತು ಮೌನವಾಗಿ ಕೂತಿದ್ದ ದೇವರಾಯ “I know the truth… so don’t brag on… ಸುಳ್ಳು ಹೇಳ್ಬೇಡ… ಎಂದ.
ಚೂರು ಕಸಿವಿಸಿಯಾದರೂ, ಸಾವರಿಸಿಕೊಂಡ ನಾಗೇಂದ್ರ, ಹೇಗೆ ಗೊತ್ತಾಯಿತು ನಿಮಗೆ…
Wait, wait you you hacked our system and its just impossible…”
“true… it is but unless you have a highly advanced devices…” ಆ ಮಾತನ್ನು ಪೂರ್ಣಗೊಳಿಸಿದ ದೇವರಾಯ ಆ ದಿನದ ಬಿಸಿಲು ಆಚೆ ದಟ್ಟವಾಗುತ್ತಿತ್ತು. ಗಾಳಿಯೂ ಜೋರಾಗಿ ಬೀಸುತ್ತಿತ್ತು. ಮೌನವಾಗಿದ್ದ ನಾಗೇಂದ್ರನಿಗೆ ದೇವರಾಯನ ಈ ದೊಡ್ಡ ಕೋಣೆಯಲ್ಲಿ ಕೂರುವುದು ಏಕೋ ಹಿತವೆನಿಸಿತ್ತು. ಈ ವಿಚಿತ್ರ ಸಮಾಧಾನದ ಜತೆಗೆ ಗಾಯಗೊಂಡಿದ್ದ ಸಂತನಂತೆ, ತನ್ನೆದುರು ಕೂತಿದ್ದ ಈ ಅಪರೂಪದ ಅಸಂಗತ ಮುದುಕನ ಸಾನಿಧ್ಯವೇ ಅವನನ್ನು ಅರ್ಥಕ್ಕೆ ನಿಲುಕದ ಕ್ರಿಯೆಗೆ ಅಣಿಗೊಳಿಸುತ್ತಿತ್ತು.
“ನಮ್ಮ ಸಿಸ್ಟಮ್ ಹ್ಯಾಕ್ ಮಾಡಕ್ಕೆ ನಿಮಗೆ ಆಗುತ್ತೆ ಅಂದ್ರೆ You must have powerful connections with those big guys.. who got access to such impeccable devices…” ಎಂದು ಹೇಳಿ ಆಚೆ ಬಿರುಸಾಗಿ ಬೀಸುತ್ತಿದ್ದ ಗಾಳಿ ದೂರದ ಆಗಸದಿಂದ ಹೊತ್ತು ತರುತ್ತಿದ್ದ ಕಪ್ಪು ಮೋಡಗಳನ್ನು ನೋಡಿದ.
ಲುಕ್, ತುಂಬಾ ಯೋಚಿಸ್ಬೇಡ; ನಿನ್ಜೊತೆ ಹತ್ತು ನಿಮಿಷ ಚಾಟ್ ಮಾಡ್ದಾಗ್ಲೇ ಗೊತ್ತಾಯ್ತು, ನೀನು ಹುಡುಗ ಅಂತ, ಬಟ್ ನಿನ್ನ ಐಡೀಯಾಸ್ಗಳಲ್ಲಿರೋ ಟ್ವಿಸ್ಟೆಡ್ ಆಕಾರ ನನ್ಗೆ ಇಷ್ಟಾಯ್ತು.
“ White owl speaks ವೆಬ್ಸೈಟ್ಗೆ ಲಾಗ್ ಇನ್ ಆಗೋವ್ರೆಲ್ಲಾ ಟ್ವಿಸ್ಟೆಡ್ ಸೋಲ್ಸ್ ತಾನೇ…” ನಾಗೇಂದ್ರ ಹಾಗೇ ಗೋಡೆಗೆ ಒರಗಿದ. ಕಪ್ಪು ಮೋಡಗಳ ರಾಡಿ ಸಂಜೆಯ ಮುಗಿಲನ್ನು ಕಲಸಿತ್ತು.
ಯಸ್ ನಾನು ವಕ್ರ, ಅದಕ್ಕೆ ನಿಮ್ಮ ಸೈಟ್ಗೆ ಬಂದೆ. ಹುಡ್ಗೀರ ಜತೆ ಚಕ್ಕಂದ ಆಡಕ್ಕೆ ಬಂದಿದ್ದೆ. ಆದ್ರೆ ವಯಸ್ಸಾದಾಗ ಒಂದು ಸನ್ನಿ ಬರುತ್ತೆ. ಯಾರ್ ಜತೆ ಏನಾದ್ರೂ ಮಾತಾಡ್ತಾನೆ ಇರ್ಬೇಕು, ಯಾವ ಥರಾ ಕನ್ಕೆಷನ್ ಇಲ್ದೇ ಇದ್ರು ವಟಗುಟ್ಟ್ಬೇಕು ಎಲ್ಲಾನು , ಅನ್ಸೋ ಘಟ್ಟ. ನಾನ್ ಆ ಸ್ಥಿತಿ ತಲುಪ್ತೀನಿ ಅಂತ ಊಹೆ ಕೂಡ ಮಾಡಿರ್ಲಿಲ್ಲ ! ಅವನ ಬಿಳಿಯ ಕೆನ್ನೆಯ ಸುಕ್ಕು ಇನ್ನೂ ಸ್ಪಷ್ಟವಾಗಿ ಹೊಳೆಯಿತು. ಎಳೆದಂತಿದ್ದ ಹಣೆಯಲ್ಲಿ ನೆರಿಗೆಗಳು ಮೂಡಿದವು.
ಬಿಳಿ ಗೂಬೆ ನನ್ಗೆ ತುಂಬಾ ಹತ್ತಿರ, ಫಸ್ಟ್ ಟೈಮ್ ಗಾಂಜಾ ಸೇದಿ ಟೆರೇಸಲ್ಲಿ ಅಡ್ಡಾಡುವಾಗ ಸಡನ್ನ್ ಆಗಿ ಅಲ್ಲಿದ್ದ ತೆಂಗಿನಮರದಿಂದ ಹಾರಿ ಹೋಗಿತ್ತು! ನಾನು ಅದೇ ಕೊಕ್ಕರೆ ಇರ್ಬೇಕು ಅಂತ ಅಂದ್ಕೊಂಡು, ಡಿವೈನ್ ಇಂಟರ್ವೆಂಶನ್ ಅಂದ್ರೆ ಇದೇ ಅಂತ ಕಲ್ಪಿಸ್ಕೊಂಡೆ, ಅದಾದ್ ಮೇಲೆ ಇನ್ನೊಂದ್ ಸಲ ನನ್ನ ಫ್ರೆಂಡ್ ಹೇಳ್ದ ಅದ್ ಗೂಬೆ, ಕೊಕ್ಕರೆ ಅಲ್ಲ ಅಂತ, ಅಲ್ಲಿಗೇ ಈ ದಿವ್ಯ ಲೀಲೆಯ ಪ್ರತಿಮೆಗಳ ಒಡೆದು ಹೋಯಿತು. ಎಂದು ಈ ಮಾತನ್ನು ತಾನಿಷ್ಟು ಕರಾರುವಕ್ಕಾಗಿ ಒಂದು ಮರೆತಿದ್ದ ನೆನಪನ್ನು ಚಿತ್ರಿಸಿದೆನಲ್ಲಾ ಎಂದು ಖುಷಿಯಾದ ನಾಗೇಂದ್ರ. ಆದರೆ ಇವನ ಹರುಷ ಚಿತ್ತವನ್ನು ಕಣ್ಣಲ್ಲೇ ಚಿಂದಿ ಉಡಾಯಿಸುವಂತೆ ಗೋಡೆಯ ಪಟದಲ್ಲಿದ್ದ ವಿಕ್ಟೋರಿಯನ್ ಲೇಡಿಯ ದೃಷ್ಟಿ ಇವನನ್ನು ಲೇವಡಿ ಮಾಡುತಿತ್ತು.
“ನನಗೆ ವೈಟ್ ಓಲ್ ಅಂದ್ರೆ ಮಹಾಪಾಪಿಯೊಬ್ಬ ಒದ್ದಾಡಿ ಸಾಯ್ತಾ ಇರೋವಾಗ ಅವ್ನ ತಬ್ಬಿ, ‘ನೀನ್ ಸತ್ತ ಕೂಡ್ಲೇ ಈ ಅಗೋನಿ ಮಾಯ ಆಗುತ್ತೇ… ಹೆದ್ರೆಕೋ ಬೇಡ, ಸತ್ಮೇಲೆ ಯಾವ ಲೋಕಕ್ಕೋ ನೀನು ಹೋಗಲ್ಲ, ಯಾವ ದೇವ್ರೂ ಪಶ್ನೆ ಮಾಡಿ ಮತ್ತೆ ಮತ್ತೆ ನಿನ್ಗೆ ಚಿತ್ರಹಿಂಸೆ ಕೊಡಲ್ಲ’ ಹೀಗಂತ ತಲೆ ಸವರ್ತಾ ಸಮಾಧಾನ ಹೇಳೋ ಹಣ್ಣುಹಣ್ಣು ಮುದುಕ ನೆನೆಪಾಗ್ತಾನೆ… Of course ಅಂತಾ ಮುದ್ಕ ಇದ್ದಾನೋ ಇಲ್ವೋ, ಬಟ್ ನನ್ಗೆ ಅದೇ ನೆನೆಪಾಗೋದು…” ಎಂದು ಇನ್ನೇನೋ ಹೇಳಬೇಕೆಂದುಕೊಂಡು ಸುಮ್ಮನೆ ನಕ್ಕ ದೇವರಾಯ, ತನ್ನ ಅಡ್ಡಾದಿಡ್ಡಿ ಬಿಳಿ ಗಡ್ಡವನ್ನು ಕೆರೆದುಕೊಳ್ಳುತ್ತಾ. ಸುಡುವ ಗಾಳಿ ಈಗ ಮಣ್ಣಿನ ಕಂಪಿನ ಜೊತೆ ಮಿಂದು ತಂಪಾಗಿ ಒಳಗೆ ನುಸುಳಿತ್ತು. ಇದ್ದಕ್ಕಿದ್ದಂತೆಯೇ ನಾಗೇಂದ್ರನನ್ನು ಆಪ್ತವಾಗಿ ನೋಡಿ, ತುಂಬಾ ಸುಸ್ತಾಗಿದ್ಯಾ… ಎಂದು, ತನ್ನೆದುರು ಚೆಲ್ಲಿದ್ದ ವಸ್ತುಗಳ ಕೊಂಪೆಯ ಮಧ್ಯೆಯಿಂದ ಕೇಕಿದ್ದ ತಟ್ಟೆಯನ್ನು ನಾಗೇಂದ್ರನತ್ತ ತಳ್ಳಿದ. ನಾಗೇಂದ್ರ ತನ್ನ ಬಿಗಿಯನ್ನು ಸಡಿಲಸದೆ, ಸುಸ್ತಾಗೋದೊಂದನ್ನ ಬಿಟ್ಟು ಪ್ರಾಮಾಣಿಕವಾಗಿ ಮನುಷ್ಯ ಇನ್ನೇನು ತಾನೇ ಮಾಡಬಲ್ಲ? ಎಂದು ಮೈಮುರಿದು ಪಕ್ಕವೇ ಇದ್ದ ಪುಸ್ತಕದ ಕಪಾಟಿನ ಬಳಿ ನಡೆದು, ಕೈಗೆ ಸಿಕ್ಕ ಪುಸ್ತಕವನ್ನು ಎತ್ತಿಕೊಂಡು ಸುಮ್ಮನೇ ನೋಡಿದ. ನಂತರ ಕೇಕ್ ಕಡಿದ. ಸ್ವಾರಸಕರವಾಗಿತ್ತದು. ಎರಡೇ ಬಾಯಲ್ಲಿ ಆ ತುಂಡನ್ನು ಮಾಯ ಮಾಡಿದ. ಆಗ ದೇವರಾಯ ಡ್ರಾಯರ್ ಎಳೆದು ಗಾಂಜಾದ ಜಾಯಿಂಟೊಂದನ್ನು ತೆಗೆದು ಬಾಯಲ್ಲಿಟ್ಟು ಹೊತ್ತಿಸಿ, ದೀರ್ಘವಾಗಿ ಎಳೆದುಕೊಂಡು ಬರೋಬ್ಬರಿ ಒಂದು ನಿಮಿಷ, ಅದರ ಧೂಮವನ್ನು ಶ್ವಾಸಕೋಶದಾಳದಲ್ಲಿ ಇರಿಸಿ, ಬಿಡಿ-ಬಿಡಿಯಾಗಿ ತುಂತುರು ಮಳೆಯಂತೆ ಹೊಗೆಯನ್ನು ಹೊರಗೆ ಚೆಲ್ಲಿದ. ಅವನ ಮುಖವೀಗ ಕೆಂಪಾಗಿತ್ತು. ನೋಡು ಅಲ್ಲಿ ಹಾರ್ತಿರೋದು ನನ್ನ ಜೀವ! ಎಂದುಜೋರಾಗಿ ಕೆಮ್ಮಿದ. ಆ ಕೆಮ್ಮು ನಿಲ್ಲದೆ ಕೊನೆಗೆ ನಾಗೇಂದ್ರನೇ ಓಡಿ ಹೋಗಿ ಲೋಟದಲ್ಲಿ ನೀರು ತರಬೇಕಾಯಿತು. ನೀರು ಕುಡಿಯುತ್ತಾ ಇನ್ನೂ ಜೋರಾಗಿ ‘ಝಯ್, ಝಯ್,’ ಎಂದು ಸೂಲು ಬಿಡುತ್ತಲೇ ಆತ, ನೀನು ಗಾಂಜಾ ಚೆನ್ನಾಗಿ ಸೇದ್ತೀಯಾ ಅನ್ಸುತ್ತೆ, ಅದೇ ನಾನ್ ಕರೆದ್ ತಕ್ಷಣ ಹಿಂದೆ-ಮುಂದೆ ಯೋಚಿಸ್ದೇ,ನನ್ನ ಹುಡುಕ್ಕೊಂಡು ಬಂದೇ ಬಿಟ್ಟೆ… ಈ ಭಂಗಿ ಹೊಡೆಯುವರೆಲ್ಲಾ ಹಾಗೇ, ತೀರಾ ಇಂಪಲ್ಸಿವ್ , ಹ್ಯಾಮ್ಲೆಟ್ ಥರ! ನೀನ್ ಅವತ್ತು ರೋಲ್ಪ್ಲೇ ಸೈಬರ್ ಮಾಡ್ತಾ ಮಾಡ್ತಾ ಸಡನ್ ಆಗಿ ಹ್ಯಾಮ್ಲೆಟ್ ಒಬ್ಬ ಡ್ರಗ್ ಅಡಿಕ್ಟ್ ಅಂತ ಏನಕ್ಕೋ ಹೇಳಿದ್ಯಲ್ಲಾ ಆಗ್ಲೇ ನನ್ಗೆ ಡೌಟ್ ಶುರು ಆಗಿದ್ದು, ನೀನು ನನ್ನ ಯಂಗರ್ ವರ್ಷನ್ ಅಂತ, ನೀನು ನನ್ದೇ ಸ್ಪೀಶೀಸ್ ಅನ್ಸುತ್ತು…
ತನ್ನೊಳಗೆ ಇಷ್ಟೊತ್ತು ಮಲಗಿದ್ದ ಮೊಸಳೆ ಈಗ ಎದ್ದೇಳುತ್ತಿರುವಂತೆ ಅನಿಸಿ, ಹೆಚ್ಚು-ಕಮ್ಮಿ ದೇವರಾಯನದೇ ಚಹರೆಯಲ್ಲಿ ನಾಗೇಂದ್ರ, ಹಾಗಾದರೆ ಅದಕ್ಕೇ ನಿನ್ನ ಪ್ರಭೇದದವರೆನ್ನೆಲ್ಲಾ ಒಟ್ಟಿಗೇ ಕಲೆ ಹಾಕಕ್ಕೆ ನನ್ನ ಹ್ಯಾಕ್ ಮಾಡಿದ್ದ? ಇಸ್ರೇಲಲ್ಲಿ ಇರೋ ಪವರ್ಫುಲ್ ಜ್ಯೂಗಳು ಅಲ್ಲಿ-ಇಲ್ಲಿ ಚದುರಿ ಹೋಗಿರೋ ಪರದೇಶಿ ಜ್ಯೂಗಳನ್ನ ಆಯ್ತಾ ಇದ್ದಾರಲ್ಲಾ ಹಾಗೆ… ಎಂದು ಉಸುರಿದ, ಅಲ್ಲಿ ಗಾಳಿಯಲ್ಲಿ ತೆವಳುತ್ತಿದ್ದ ಆ ಭಂಗಿಯ ಉಂಡೆ ಉಂಡೆ ಮೋಡಗಳ ಉಸಿರಾಡಿಯೇ ತನ್ನಲ್ಲಿ ಈ ವಿಪರೀತ ಅರಿವು ಹುಟ್ಟಿರುವುದು ಎಂಬ ಅರಿವಿಲ್ಲದೆಯೇ.
“ಅದೇ,ಅದೇ, ಬೋಳಿಮಗನೇ ಈಗ ಬಂದೆ ಪಕ್ಕಾ ಮುದ್ದೆಗೆ…!” ಎಂದ ದೇವರಾಯ ವಿಲಕ್ಷಣವಾಗಿ ನಕ್ಕು ಹಾಗೆಲ್ಲಾ ಎಕ್ಸ್ಪ್ಲೇನೇಶನ್ ಯಾಕೆ ಕೊಡ್ಬೇಕು ಈ ಭೇಟಿಗೆ? ಸಾವು ತನ್ನ ಬಳಗವನ್ನ ನಿಧಾನಕ್ಕೆ ಒಟ್ಟು ಮಾಡುತ್ತೆ ತಾನೇ ಯಾವುದೇ ಎಕ್ಸ್‌ಪ್ಲನೇಶನ್ ಇಲ್ದೇ ಹಾಗೇ ಅನ್ಕೋ ನಮ್ಮ ಈ ಯುನಿಯನ್! ಈ ಸಾವು ನೋಡು ನಿಜಕ್ಕೂ socialismನ ಅಪ್ಪ! real gentleman! ಎಷ್ಟು beautiful ಆಗಿ ಎಲ್ಲರನ್ನೂ ಒಟ್ಟಿಗೆ ಒಗ್ಗಟ್ಟಾಗಿ ಕಲೆ ಹಾಕುತ್ತೆ ಇದು ಮೈ ಗಾಡ್! ಸಾವಿನ ಜತೆ ಅಷ್ಟೆಲ್ಲಾ ಗುದ್ದಾಡಿ ultimate ಆಗಿ ಸಾವನ್ನೇ ವಿಧಿಯಿಲ್ಲದೆ ಮನುಷ್ಯ ತಬ್ಕೊಳೊವಾಗ ಒಂದು ರೀತಿ surrender ಆಗ್ತಾನೆ, ತನಗೆ ತಿಳಿದೇ ಇರೋ entityಗೆ… ಆ surrender ಇದಿಯಲ್ಲಾ ವಾಹ್! ಅದೇ immaculate love… … ಏನೇ ಪಾಪ ಒಬ್ಬ ಮನುಷ್ಯ ಮಾಡಿರ್ಲಿ, ಸಾವು ಬಂದು ಅವನ ತಟ್ಟಿದ ಆ ಕ್ಷಣ, ಆ ಪಾಪವೆಲ್ಲಾ ನಾಶ ಆಗಿ, literally ಮಾಯ ಆಗಿಬಿಡ್ತವೆ. salvation ಇದೆಯಲ್ಲಾ ಅದೇ ನಮ್ಮೆಲ್ಲರ ಸಹಜ ಸ್ಥಿತಿ. In the end ಆ ಮೋಕ್ಷನೇ ನಮ್ಗೆ ರೆಕ್ಕೆ ಕಟ್ಟಿ ನಾವ್ ಮರ್ತಿರೋ ಆ ಆನಂದನ ನಮ್ಗೆ ಪರಿಚಯಿಸೋ ದೇವತೆ. ಯಾವ infernoನೂ ಇಲ್ಲ, ಸಾವೇ ಎಲ್ಲರನ್ನು ಸುಖವಾಗಿಡೋದು. ಈ Judgement day ಮಣ್ಣು, ಮಸಿ ಎಲ್ಲಾ ಸುಳ್ಳು…! ಎಂದು ಕಡೇ ತುಂಡು ಗಾಂಜವನ್ನು ಪೂರ್ತಿಯಾಗಿ ಹೀರಿ, ಕಡೆಗೆ ಥೂ… ಬರೀ ಬೂದಿ ರುಚಿ ಎಂದು ಮುಖ ಕಿವಚಿ, ಆ ತುಂಡನ್ನು ಕೆಳಗೆಸೆದ. ಅಷ್ಟೊತ್ತಿಗಾಗಲೇ ಅಲ್ಲೇ ಬುಟ್ಟಿಯಲ್ಲಿದ್ದ ಕಿತ್ತಳೆ, ಮತ್ತು ದಾಳಿಂಬೆ ಹಣ್ಣುಗಳ ಸಿಪ್ಪೆ ಸುಲಿದು ನುಂಗಿದ್ದ ದೇವರಾಯ ತುಟಿಯೆಲ್ಲಾ ರಕ್ತಸಿಕ್ತವಾದಂತಿತ್ತು. ನಾಗೇಂದ್ರ ಈಗ ಅವನ ಪೊತ್ತ ಅಚ್ಚ ಬಿಳಿ ಗಿಡ್ಡ ಮೀಸೆಗಳ ಗಮನಿಸಿದ, ಮತ್ತೆ ಅವನಿಗೆ ಕತ್ತಲಲ್ಲಿ ದಿಢೀರನೆ ಹಾರಿದ್ದ ಬಿಳಿ ಗೂಬೆ ನೆನೆಪಾಯಿತು. ಹಾಗಾಗಿದ್ದೆ ತಡ ಅವನಿಗೆ ದೆವ್ವ ಮೆಟ್ಟಿಕೊಂಡಂತಾಗಿ, “ದಿನ ದಿನ judgement day ಸಂಭವಿಸುತ್ತೆ ಸ್ವಾಮಿ!ಎಲ್ಲಿದೀರಾ ನೀವು! ಸತ್ತಮೇಲೆ ಒಂದು ದಿನ ಕಟ್ಕಟೆಲೀ ನಿಲ್ಸಿ ನಿಲ್ಸಿ,final judgement day ಅಂತ report ಬರ್ದು ಎಸ್ದ ಹಾಗಲ್ಲ ಅದು. ಇದ್ದ-ಬದ್ದ ಶಕ್ತಿನೆಲ್ಲಾ ಬಳಸಿ ಭಾವನೆಗಳನ್ನು ಪಳಗಿಸಿ, ಒಂದು State of mind gain ಮಾಡ್ತಿದ್ದ ಹಾಗೇ, ಇನ್ನೂ ನೂರು ತಳಮಳಗಳು ತಲೆ ಎತ್ತುತ್ತೆ, ಮಹಾ ಕಾಳಿಂಗ ಸರ್ಪದ ಥರ. ಇವುಗಳನ್ನೆಲ್ಲಾ ನಿಯಂತ್ರಣದಲ್ಲಿಟ್ಕೊಂಡೇ ಗುದ್ದಾಡಿ, ಏಟು ತಿನ್ನುತ್ತಾ ನೋವು ಅನುಭವಿಸ್ತೀವಲ್ಲ ಅದೇ judgments, consequences, ಮತ್ತೆ ಆ ನೋವು it is constant! ನನ್ನ ಪ್ರಕಾರ ಆ ನೋವೇ ‘ಪ್ರಾಣ’ ಅಥವಾ ‘ಜೀವ’ ಒಂದೇ ಉಸಿರಲ್ಲಿ ಈ ಜೀವನ ಕತ್ತರಿಸ್ಕೊಂಡು ಸತ್ತು ಹೋಗೋಣ ಅಂತ ಎಷ್ಟೊ ಸಲ ಯೋಚಿಸಿದ್ದೆ, ಕೆಲವು ಸಲ ಮೋಜಲ್ಲಿ, ಇನ್ ಕೆಲವು ಸಲ dead serious ಆಗಿ, ಆಗ ನೀವೇನೋ ಅಂದ್ರಲ್ಲ ‘death the kind gentleman’ ಆ ಜಂಟಲ್ಮ್ಯಾನೇ ನನ್ಗೇ ಆರಾಮ ಕೋಟ್ಟೇ ಕೊಡ್ತಾನೇ ಅನ್ನೋ ಸಮಾಧಾನ ಇರೋದು, ಆದ್ರೆ immediate ಆಗಿ ಬಡ್ಡಿ ಮಗನ್ನ್, (ಈಗಾಗಲೇ ದೇವರಾಯ ಇನ್ನೊಂದು ಗಾಂಜಾ ಜಾಯಿಂಟನ್ನು ನಾಗೇಂದ್ರನಿಗೆ ಹತ್ತಿಸಿ ಕೊಟ್ಟೂ ಆಗಿತ್ತು. ನಾಗೇಂದ್ರ ಭೊಸಭಸನೇ ಎರಡೆರಡು ದೊಡ್ಡ ಧಮ್ ಹೊಡೆದು ಆಗಿತ್ತು, ಅರಿವೇ ಇಲ್ಲದೇ ಅಲ್ಲಿದ್ದ ಕಲ್ಲಂಗಡಿಯನ್ನು ಕೆಟ್ಟದಾಗಿ ಕತ್ತರಿಸಿ ಅದರ ಒಂದೆರೆಡು ತುಂಡುಗಳನ್ನು ಮುಕ್ಕಿದ್ದರಿಂದ ನಾಗೇಂದ್ರನ ಮುಸುಡಿಯು ಗುಲಾಬಿಕೆಂಪು ಬಣ್ಣದಲ್ಲಿತ್ತು) ಒಂದು ಯೋಚ್ನೆ ಬರುತ್ತೆ, ‘ಸೂಳೆ ಮಗ್ನೆ ನೀನ್ ನೆಗೆದು ಬೀಳ್ತೀಯಾ, ಆಗ ನೀನ್ ಅಂದ್ಕಂಡಗೇ ನಿನ್ನ ಆತ್ಮ ದೇವ ಲೋಕಕ್ಕೋ, ವೈಕುಂಠಕ್ಕೆ ಹೋಗ್ದೇ, ನಿನ್ನಕ್ಕಿಂತ ಜಡವಾಗಿ ನೀನು ಸತ್ತಿರೋ ಜಗದಲ್ಲೇ ಮೊಳೆ ಹೊಡ್ಕಂಡು ಬಿದ್ದಿಲ್ರಿ (ಈಗ ಅವನು ಮುಷ್ಠಿಯನ್ನೇ ಸುತ್ತಿಗೆಯನ್ನಾಗಿಸಿ ಮೇಜು ಗುದ್ದುತ್ತಿದ್ದ, ಆ ರಭಸಕ್ಕೆ ಆ ಟೇಬಲ್ನ ಮೇಲೆದ್ದ ಹರುಕುಮುರುಕುಗಳ ಗುಡ್ಡೆಯಡಿಯಲ್ಲಿ ಪವಡಿಸಿದ್ದ ದೇವರಾಯನ ಪಿಸ್ತೂಲು ಚಿಮ್ಮಿ ಕೆಳಗೆ ಬಿತ್ತು, ದೇವರಾಯ ಅದನ್ನು ಎತ್ತಿಕೊಂಡು, ತನ್ನ ತೊಡೆ ಮೇಲೆ ಇರಿಸಿದ, ನಾಗೇಂದ್ರನಿಗೆ ಇದರ ಪರಿವೆಯೇ ಇರಲಿಲ್ಲ) ಎಲ್ಲರೂ ನಿನ್ನ ಡೆಡ್ ಬಾಡಿ ನೋಡ್ತಾ ಅಳದೋ, ಶಾಕ್ ಆಗೋದೋ, ಉಗಿಯೋದೋ, ಎದೆ-ಎದೆ ಬಡಿಕೊಳ್ಳೋದೋ ಅಥವಾ ಇಗ್ನೋರ್ ಮಾಡಿ ‘ಪಾಪ-ಏನೋ ತುಂಬಾ ಹಾರಾಡ್ತಾ ಬದ್ಕಿದ್ದ, ಈಗ ನೋಡಿ ಕೇವಲವಾಗಿ ಸತ್ತ ನಾಯಿ! ಥೂ ಇವ್ನ ಜನ್ಮಕಿಸ್ಟು! ಮೊದ್ಲೇ ನಮ್ಗೆನಿತ್ತು, ಈ ಬೇವರ್ಸಿಗೆ ಈ ಜೀವನ ಲಾಯಕ್ಕಲ್ಲಂತಾ, ಹಂಗೇ ಆತ್ಮಹತ್ಯೆ ಮಾಡ್ಕೊಂಡು ಸತ್ತಿದ್ದಾನೆ, ಅಬ್ನಾರ್ಮಲ್ ಬಾಸ್ಟರ್ಡ್’ ಅಂತ ಮಾನ ತೆಗೆತಿರಿರ್ತಾರೆ. ಆಗ ಇನ್ಯಾರೋ, ‘ರೀ ಆ ಮನೆ ಹುಡುಗ ಹೋಗ್ ಬಿಟ್ಟಾರೀ! ಸಾಯೋ ವಯಸ್ಸೇನ್ರೀ ಅದೂ! ತುಂಬಾ ಒಳ್ಳೆಯವನ್ರೀ! ನಾವ್ಯಾರು ಅವನ್ಗೆ ಕರೆಕ್ಟ್ ಆಗಿ ಗೌರವ ಕೊಡ್ಲೇ ಇಲ್ಲ ರೀ! ಒಂದು ಎನ್ಕರೇಜ್ಮೆಂಟೋ ಅಥವಾ ಪ್ರಶಸ್ತಿ ಫಲಕ ಶಾಲುನೋ, ಸಿಕ್ಕಿದ್ರೇ ಖುಷಿಲೀ ಹಲ್ಕಿರೀತ ಆ ಶೀಲ್ಡ್ ನ ಶೋಕೇಸಲ್ಲಿಟ್ಟು ಬದುಕ್ತಿದ್ನೋ ಏನೋ! ಅಯ್ಯೋ!ಈಗ ಆತ್ಮಹತ್ಯೆ ಮಾಡ್ಕೊಂಡ್ ಬಿಟ್ಟನಲ್ಲ. ಛೆ…!ಛೆ…! ಎಂಥಾ ಕೆಲ್ಸ ಆಯ್ತು…’ಎಂದು ಕನಿಕರ ತೋರಿಸುತ್ತಿರುತ್ತಾರೆ. ಹೀಗೆ ಥರ-ಥರದ ಲೆಕ್ಕವಿಲ್ಲದಷ್ಟು possibilities ಇರೋ after death ಸನ್ನಿವೇಶಗಳನ್ನ ಈ ನಿನ್ನ ಭಿಕನಾಸಿ ಆತ್ಮ ಹಾಗೇ ಸುಮ್ಮನೇ ನೋಡ್ತಾ, ಆ terrible territory ಇಂದ ತಪ್ಪಿಸಿಕೊಳ್ಳೋಕು ಆಗ್ದೇ, ಕಣ್ಣು-ಕಿವಿ ಮುಚ್ಚಕ್ಕೂ ಆಗ್ದೇ, ಎಲ್ಲಿ ಅವಿತುಕೊಳ್ಳೋಕು ಆಗ್ದೇ, ‘ನನ್ನಿಷ್ಟ ನಾನ್ ಸತ್ತೆ, ಸೂಳೆ ಮಕ್ಳ! ನೀವು ಸಾಯಕ್ಕೂ ಮುಂಚೇನೇ ಸತ್ತೆ ಬೇವರ್ಸಿಗಳಾ ! ” ಅಂತ ಕೂಗಕ್ಕೂ ಆಗ್ದೇ ನಿಷ್ಕ್ರಿಯವಾಗಿ ಬಿದ್ದು, ‘ಅಯ್ಯೋ ದೇಹದೊಳಗಿದ್ರೆ ಈ ಪರಿಸ್ಥಿತಿ ಬರ್ತಿಲಿಲ್ಲ’ ಅಂತ ವಕ್ರವಾಗಿ ಒದ್ದಾಡೋದಿಕ್ಕಿಂತ ಬದಕೋದೇ ಎಷ್ಟೋ ವಾಸಿ ಅನ್ನಿಸಿ ಸುಮ್ಮನಾಗ್ತೀನಿ, ನಿಜಕ್ಕೂ ನನ್ನ ಉಳಿಸಿರೋದು ಈ ರೊಮ್ಯಾಂಟಿಕ್ ಊಹೆ ಒಂದೇ ಅನ್ಸುತ್ತೆ… ಗಂಟಲು ಬಿಗಿದಂತಾಗಿ ಸುಮ್ಮನಾದ.
ದೇವರಾಯನಿಗಾಗಿ ತಂದಿಟ್ಟಿದ್ದ ಚೊಂಬಲ್ಲಿದ್ದ ನೀರನ್ನು ಒಂದೇ ಗುಕ್ಕಿಗೆ ಖಾಲಿ ಮಾಡಿದ. ದೇವರಾಯನ ಕಣ್ಣು ಕ್ರೂರಮೃಗದಂತೆ ಮಿನುಗುತ್ತಾ ನಾಗೇಂದ್ರನ ದೇಹದ ಇಂಚು-ಇಂಚನ್ನು ಪರಿಶೀಲಿಸುತ್ತಿರುವಂತಿತ್ತು. ಒಂದು ಸೊಳ್ಳೆ ಗುಂಯ್ಗುಟ್ಟುತ್ತಾ ನಾಗೇಂದ್ರನ ಕಿವಿಯ ಸುತ್ತಾ ತಿರುಗುತ್ತಿತ್ತು. ಕೆರಳಿದ್ದ ನರಗಳನ್ನು ಇನ್ನೂ ಉತ್ತೇಜಿಸಲು ಒಂದು ಚಿಟಿಕೆ ಹೆರಾಯಿನ ಮೂಸಿದ ದೇವರಾಯ,” ನೀನು ಆತ್ಮಕ್ಕೂ ದೇಹದ ಕಟ್ಟುಪಾಡುಗಳನ್ನೇ ಹೇರಿ ಚಿತ್ರಹಿಂಸೆ ಕೊಟ್ಟುಕೊಳ್ತಾ ಇದ್ಯಾ… ಈ ಮಿಸ್ಕನ್ಸೆಪ್ಷನಿಂದಾನೇ ಜನಾ ಬದುಕಲ್ಲಿ ಖುಷಿ ಪಡಕ್ಕೆ ಆಗ್ದೇ ಸೋಲೋದು. As a matter of fact this discordance between body and soul is in a way a subtext within the novel I am writing, soul is innocent …” ಎಂದು ತೊಡೇ ಮೇಲಿದ್ದ 44ಮ್ಯಾಗ್ನಂ ಪಿಸ್ತೋಲನ್ನು ಗುಪ್ತವಾಗಿ ನೇವರಿಸಿದ. ನಾಗೇಂದ್ರನ ಜಾಯಿಂಟ್ ನಂದಿ ಹೋಗಿತ್ತು. ಅದನ್ನು ಮತ್ತೊಮ್ಮೆ ಹಚ್ಚಿದ. ಆಗ ಅದು ಭುಗ್ಗನೆ ಹೊತ್ತಿಕೊಂಡು, ನಂತರ ನಾಗೇಂದ್ರ ‘ಉಫ್…ಉಫ್…’ ಎಂದು ಊದಿ ಆರಿಸಿದ. ಒಂದೆರಡು ನಿಮಿಷ ಅಲ್ಲಿ ಮೌನ ಮತ್ತು ಚಟ-ಚಟನೆ ಗಾಂಜಾ ಎಲೆಗಳು ಉರಿಯುವ ಮಾತ್ರ ಜೀವಂತವಾಗಿತ್ತು. ಯಾವ ಮುನ್ಸೂಚನೆಯೂ ಇಲ್ಲದೆ ಕೋಣೆ ಮಬ್ಬಾಯಿತು, ಆಚೆ ಕಡೆ ಲುಪ್ತವಾಗಿ ಮೇಘಗಳು ಮೇಳೈಸುತ್ತಿದ್ದವು.
“ಈ ಥರ ಸಾವಿರ ಮಾತ್ ಹೇಳ್ಬಹುದು ಸರ್, ಆದ್ರೆ ಏನ್ ಮಾಡ್ಲಿ ನನ್ನ ಮನೇಲಿ ಸಾಯದೇ ಬದುಕಿರೋ ಪಿಶಾಚಿಗಳು ಈ ಮಾತ್ ಕೇಳಲ್ಲ. ದಿನಾ ಗಲಾಟೆ, ಹಾಳಾಗೋಗ್ಲಿ ಅಂತ ನಾನೇ ಕಣ್ಮರೆಯಾಗೋಣ ಅಂದ್ರೆ ನಮ್ಮಮ್ಮ ಬೇಡ್ಕೋತಾರೆ, ‘ನೀನಿಲ್ದೇ ನಾವೆಲ್ಲಾ ಉಳಿಯಲ್ಲ, ಒಂದ್ ಬೇರೆ ಮನೆ ಮಾಡಿಕೊಡು, ನಿನ್ನ ಅಕ್ಕನಗೆ ಒಂದ್ ಕೆಲ್ಸ ಹುಡುಕಿಕೊಡು…’ ಅಂತ. ಆ ಚಿಕ್ಕಪ್ಪ ನೋಡಿದ್ರೆ ‘ಇಪ್ಪತ್ತೈದು ಲಕ್ಷ ಕೊಡ್ತೀನಿ, ನಿನ್ನ ‘ಫ್ಯಾಮಿಲಿ ‘ ಗಂಟುಮೂಟೆ ಕಟ್ಸು ಇದ್ ನಮ್ ಮನೆ’ ಅಂತಾರೆ. ಹಾಗಂತ ದುಡ್ಡ ಕೇಳಿದ್ರೆ, ‘ಈ ಮನೇನ ನೀನೆ ಮಾರ್ಸು , ಆಮೇಲೆ ದುಡ್ಡು’ ಅಂತಾರೆ. ಆ ಹಳೆ ಕೊಂಪೆನ ಯಾರೂ ಖರೀದಿ ಮಾಡಲ್ಲ. ನನ್ನ ಜೀವ ತಿನ್ನೋ ಈ parasites! ಇವೆಲ್ಲಾ destroy ಆದ್ರೆ ನನ್ನ original ಜೀವನ್ನ ಅಳ್ತೆ ಮಾಡ್ಬಹುದೇನೋ, ಅದು ನೀವು ಹೇಳಿದ್ದ terms ಅಲ್ಲಿ. ಇಲ್ಲಾಂದ್ರೇ ಮದುಮೆಯಾಗದೋ… ಆತ್ಮಹತ್ಯೆನೋ ಅಥವಾ banking exams guide ತಗೊಂಡ್ prepare ಆಗೋದೋ,ಇಂತಹ ಏನೋ ಒಂದು desperate attempt ಮಾಡ್ಬೇಕು ನಾನು ಅಷ್ಟೇ… ಕಡೆಯ ಪಫ್ ಅನ್ನು ಮುಗಿಸಿ ಭಂಗಿ ತುಂಡನ್ನು ಬಿಸಾಡಿದ ನಾಗೇಂದ್ರ. ಆಕಾಶದಲ್ಲಿ ಆಗ ಕೂಡಿದ್ದ ಮೋಡಗಳು ಮಳೆಯಾಗಿ ಕರಗದೇ ಹಾಗೇ ಜಡವಾಗಿದ್ದವು. ಆ ಕೆಂಚು ಬೂದು ಬಣ್ಣದ ತೋಟವು ಒಮ್ಮೆ ಸುಮ್ಮನೆ ಜುಯ್ಯ್ ಎಂದು ಬೀಸಿದಾಗ, ಮಹಾ ಮಂಡಲದ ಹಾವೊಂದು ಮಗ್ಗುಲು ಬದಲಿದಂತಾಯಿತು. ಇದರತ್ತ ದೃಷ್ಟಿ ನೆಟ್ಟಿದ್ದ ಆ ಭೋಧಿಸತ್ವದ ಕಣ್ಗಳ ಮೇಲೆ ಹಠಾತ್ತಾಗಿ ಗಗನದಲ್ಲಿ ಗುನುಗಿದ ಮಿಂಚಿನ ಕಡ್ಡಿಯೊಂದು ಪ್ರಜ್ವಲಿಸಿ ಮಾಯವಾಯಿತು.
“ನಾಗೇಂದ್ರ, ನೀನೊಬ್ಬ ಬಡವ, ಮತ್ತೆ ನಿನ್ಗೂ ಅದೇ ಬೇಕು ಸೋ ನೀನು ನಿನ್ನ ಕಕ್ಷೆ ಬದಲಿಸದೆ ಅದೇ ಸ್ಥಿತಿಯಲ್ಲಿದ್ದೀಯ”. ದೇವರಾಯ ನಗುತ್ತ ಹೇಳಿದನು, ತನ್ನೆರೆಡು ಕಾಲುಗಳನ್ನು ಮೇಜಿನ ಮೇಲೆ ಅಡ್ಡ ಹಾಕಿ, ಆರಾಮ ಭಂಗಿಯಲ್ಲಿ ಆಕಳಿಸುತ್ತಾ. “ಇನ್ನೊಂದು, ನೀನು ಆ horrible web ಒಳಗೆ ಇಷ್ಟಪಟ್ಟೇ ಬಿದ್ದಿದ್ದೀಯಾ ಅಷ್ಟೇ ಮತ್ತೇನು ಅಲ್ಲ. ದುಡ್ಡಿಗೆ ಇರೋ ಶಕ್ತಿ ನಿನ್ಗೆ ಚೆನ್ನಾಗಿ ಗೊತ್ತಿದೆ. ನೀನು, ಅದರ ಹತ್ತಿರ ಹೋದ್ರೆ ನಿನ್ನ ಎಲ್ಲಾ ಈ ಕ್ಷುಲ್ಲಕ ಭಯಗಳು ನಾಶವಾಗಿ ಆರಾಮಕ್ಕೆ ನೀನು ಫ್ರಾನ್ಸ್ ಅಲ್ಲೋ, ಪ್ರಾಗ್ ಅಲ್ಲೋ ಕೂತು ಚಿಲ್ಡ್ ಬೀಯರ್ ಕುಡಿತಾ, ಬದುಕಿನ indifference nature celebrate ಮಾಡೇ ಮಾಡ್ತೀಯ. ಹಾಗಿದ್ದೂ ನೀನ್ ದುಡ್ಡಿನ ಮಜನ ದೂರ ಇಡ್ತೀಯ ಯಾಕೆ ಗೊತ್ತಾ, ಈ meaningless anxiety ನಿನ್ಗೆ ಇಷ್ಟ, ಈ hollow fears ಗೆ ನೀನು ಎಷ್ಟು ಒಗ್ಗಿ ಹೋಗಿದ್ಯಾ ಅಂದ್ರೆ, ಸುಖವಾಗಿ ಜೀವನ ನಡೆಸಕ್ಕೆ ನಿನ್ಗೆ ಭಯ, ಮನುಷ್ಯನ life ಇಡೀ ನೀನ್ ಈಗ ಹೇಳಿದ ಥರದ ಚೀಪ್ ಜಂಜಾಟಗಳು ತುಂಬಿಕೊಂಡಿದ್ರೇ ಆಗ ಅದೇ ದೊಡ್ಡ ಸಮಾಧಾನ ಅವನ್ಗೇ! ಯಾಕಂದ್ರೆ ಅವ್ನು ದಿನಾ ದಿನಾ ತನ್ನ ಬದುಕನ್ನೇ ದೂರುತ್ತಾ, ತನಗ್ಗೊತ್ತಿಲ್ಲದಂಗೆ ನೆಮ್ಮದಿಯಾಗಿರ್ಬಹುದಲ್ಲ! ದೇವ್ರ ಮೇಲೆ ಭಾರ ಹಾಕೋ ಹಾಗೇ ಈ pile of bullshitting mortal uncertainties ಮೇಲೆ ಭಾರ ಹಾಕಿ, ಜನ ಬದುಕ್ತಾರೆ. ನಿಜಕ್ಕೂ ಮನುಷ್ಯರನ್ನ ಹೆದ್ರಸೋದು, ಆನಂದ ಮಾತ್ರ , ಯಾಕ್ಹೇಳು… ಅದನ್ನ ತಡ್ಕಳೋ ಶಕ್ತಿ ಇಲ್ಲಿ ಅವ್ರಿಗೆ…
ನಾಗೇಂದ್ರನಿಗೆ ಅಪರೂಪಕ್ಕೆ ಆಗುವಂತೆ ಶುದ್ಧ ಆನಂದದ ಪ್ರವಾಹವು ನರ-ನರಗಳೆಲ್ಲಾ ಸಂಚರಿಸುತ್ತಿರುವ ಅನುಭವವಾಯಿತು. ಇದಕ್ಕೆ ಆತ ಆಗಷ್ಟೇ ಪೂರ್ತಿಯಾಗಿ ಸೇದಿದ್ದ ಜಾಯಿಂಟ್ ಕೂಡ ಒಂದು ಕಾರಣವೇನೋ. ದೇವರಾಯನ ಮಾತುಗಳು ಸ್ಫುಟವಾಗಿ ಅವನ ಮನಸ್ಸಿನ ಪದರಗಳೊಳಗೆ ಜೀರ್ಣವಾಗುತ್ತಿದ್ದವು. ಭಯ ಇದೆ ನನ್ನೊಳಗೆ, ಆದ್ರೆ… ಎಂದವನೇ ಮತ್ತೆ ಸುಮ್ಮನಾದ. ಇಲ್ಲಿಯ ತನಕ ಆ ಪರಿಸರದಲ್ಲೇ ಐಕ್ಯವಾಗಿದ್ದ ತರಂಗವೊಂದು ಸತ್ತಿರುವಂತೆ ಭಾಸವಾಯಿತು. ಏನದು ಎಂದು ತಿಳಿಯದೇ ದೇವರಾಯನನ್ನು ನೋಡಿದ. ಭಂಗಿಯ ದೆಸೆಯಿಂದ ಆಲೋಚನೆಯನ್ನು ಶಬ್ಧಗಳ ರೂಪದಲ್ಲಿ ಮಂಡಿಸಲು ಆತ ಹರ ಸಾಹಸ ಪಡಬೇಕಾಯಿತು. ಇದನ್ನು ಅರಿತವನಂತೆ ಮುಗಳ್ನಕ್ಕ ದೇವರಾಯ, “ಪವರ್ ಇಲ್ಲ ಸೋ ನನ್ನ antique fan off ಆಗಿದೆ, ಆದ್ರೆ ಈ silence ಮಾತ್ರ natural ambience…get used to this…”ಎಂದು ಮತ್ತೊಮ್ಮೆ ಆಕಳಿಸಿ ತನ್ನ ಬಿಳಿಚಿಕೊಂಡಿದ್ದ ಪಾದವನ್ನು ಆಡಿಸಿದ. ನಾಗೇಂದ್ರನ ದೃಷ್ಟಿಗೆ ಅದು ಮುದಿ ಬಿಳಿಯ ಉಡದಂತೆ ಗೋಚರಿಸಿತು, ಒಮ್ಮೆ ಮೇಲೆ ನೋಡಿ ಮೌನಿಯಾದ, … ಆದ್ರೆ ಆನಂದವಾಗಿರಕ್ಕೆ ಬಿಡದೇ ಇರೋ ಭಯ ಅಲ್ಲ ಅದು ಅನ್ಸುತ್ತೆ. ಈ ಭಾವನೆ, ಅವತ್ತಿಂದ ನನ್ನೊಳಗೆ ಒಂದು ಪ್ರಾಣಿ ಥರ ಬೆಳಿತಾ ಇದೆ, ಒಂದು ದಿನ ಇದರ ಚರ್ಮ ಹಿಗ್ಗಿ-ಹಿಗ್ಗಿ ನಾನೇ ನನ್ಗೆ ಸಂಬಂಧಿಸದೇ ಇರೋ ವ್ಯಕ್ತಿ ಆಗಿಬಿಡ್ತೀನಿ, ಅನ್ಸುತ್ತೆ… ಎಂದು ತನ್ನ ಮಿದುಳಿನ ಮೂಲೆ-ಮೂಲೆಯಲ್ಲೊ ಚದುರಿ, ಜಾರಿ ಪೇರಿ ಕೀಳುತ್ತಿದ್ದ ಯೋಚನೆಗಳನ್ನು ಗಹನವಾದ ಏಕಾಗ್ರತೆಯಲ್ಲಿ ಹಿಡಿದು, ವಾಕ್ಯವಾಗಿ ಹೆಣೆದು ಹೇಳಿ, ಧೀರ್ಘವಾಗಿ ಶ್ವಾಸ ಎಳೆದ.
ಮುಂದುವರೆಯುವುದು ….
ಕತೆಯ ಮೊದಲ ಭಾಗ ಇಲ್ಲಿದೆ
ಮಂಗಳೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಗೌತಮ್ ಸದ್ಯ ಸ್ಟಾನ್ಲೆ ಕುಬ್ರಿಕ್ ಮೇಲೆ ಪಿ ಎಚ್ ಡಿ ಮಾಡುತ್ತಿದ್ದಾರೆ. ಗ್ರೀಕ್ ದುರಂತ ಕಥನ ಮತ್ತು ಅಸಂಗತ ಸಾಹಿತ್ಯ ಇವರ ಆಸಕ್ತಿಯ ವಿಷಯಗಳು
Good luck Gautham you have prosperous future.
thank you dear sir for reading it